ನೀನು ನಾನು ಎಂಬ ವಾಸ್ತವದಿಂದ ಕೊನೆಗೆ ನೀನು ಮಾತ್ರ ಉಳಿಯಲಿರುವೆ.
ನೀನು ಮಾತ್ರ.
ಯಾತ್ರೆ ಹೊರಡುವ ಸಮಯ ಹತ್ತಿರವಾಗಿದೆ.
ಇನ್ನೇನು ಸುರಿಯಲಿರುವ ಕಾರ್ಮೋಡದಂತೆ ಈ ನೆನಪುಗಳು ಎದೆಯೊಡೆವ ವೇದನೆಯಾಗಿ ನಿಂತಿದೆ.
ಇದು ನನ್ನ ಮಿತ್ರರಿಗೆ ತಿಳಿದಿಲ್ಲ. ಅವರು ಹಿಂದಿನಂತೆಯೇ ನನ್ನ ಬಳಿ ಬರುತ್ತಾರೆ. ತಮಾಷೆ ಕಥೆಗಳನ್ನು ಹೇಳುವಂತೆ ಒತ್ತಾಯಿಸುತ್ತಾರೆ.
ಅವರಿಗಾಗಿ ಏನೇನೋ ಜೋಕುಗಳನ್ನು ಹೇಳುತ್ತೇನೆ. ಅವರೊಂದಿಗೆ ಸೇರಿ ನಗುತ್ತೇನೆ. ನನ್ನ ನಗುವಿನೊಳಗಿನ ದುಃಖದ ಮೊರೆತ ಅವರಿಗೆ ಕೇಳಿಸುವುದಿಲ್ಲ.
ನಾನಿಲ್ಲಿ ಶೂನ್ಯದಲ್ಲಿ ಲಯಿಸಲಿದ್ದೇನೆ.
ಶೂನ್ಯದಲ್ಲಿ!
ಇದು ಅಪ್ರಧಾನವಾದ ಘಟನೆ ಅಥವಾ ಅತಿ ಪ್ರಧಾನವಾದುದೋ? ಏನೋ-ಆಯಿತು-ಅದಿಲ್ಲಿ ಮುಖ್ಯವೇ? ಏನೇ ಆಗಲಿ; ಈ ಎರಡರ ನಡುವಿನ ಅನರ್ಘ್ಯ ನಿಮಿಷವೇ ನಾನು. ವರ್ತಮಾನ ಕಾಲದ ಅಂಚಿನಲ್ಲಿ ನಿಂತಿರುವ ಭೂತಕಾಲ.
ನಿನ್ನೆಗೆ ಸಂಪೂರ್ಣವಾಗಿ ಲಯಿಸಿ ಹೋಗಲಿರುವ ಇಂದು. ಯುಗಗಳು…ಮನ್ವಂತರಗಳು…ಅನಂತವಾದ…ಶಾಶ್ವತವಾದ ನಿನ್ನೆಗೆ!
ವಿದಾಯ ಹೇಳುತ್ತಿರುವೆ.
ಮುಗಿಯಿತು- ಇಲ್ಲ, ಇನ್ನೇನು ಮುಗಿಯಲಿದೆ.
ಮುಂದಿನ ಕ್ಷಣದಿಂದ ನಾನು ವಿಸ್ಮೃತಿಗೆ ಸೇರಿದ ಕೋಟ್ಯಂತರ ನಿನ್ನೆಗೆ!
ಪರಿಚಿತರಾದ ಹಲವರು ಹೊರಟು ಹೋಗಿದ್ದಾರೆ.
ಅವರು ಎಲ್ಲಿಗೆ ಹೋಗಿರಬಹುದು?
ನನಗೂ ಮೊದಲೇ ಹೋದ ಅನಂತಕೋಟಿ!
ನೆನಪುಗಳು ಅಕಾರಣ ಆರಂಭವನ್ನು ಸ್ಪರ್ಶಿಸುತ್ತಿದೆ.
ಆರಂಭ..!
ನಾನು ಅನಂತತೆಯ, ಅದ್ಭುತ ರಹಸ್ಯದ, ಅಜ್ಞಾತತೆಯ ಎಲ್ಲೆಯನ್ನು ಸೇರಿದಂತೆ! ಅದೋ ಒಂದು ಗರ್ಜನೆ, ನಾದಬ್ರಹ್ಮದ ಅನಂತವಾದ ವಿಭ್ರಮೆ!
ಗಮನಿಸುತ್ತಿದ್ದೀರಾ?
ಇಷ್ಟು ಕಾಲ ನೀನು ನನ್ನನ್ನು ಅಪಾರವಾದ ಕಾರುಣ್ಯದೊಂದಿಗೆ ಪ್ರೀತಿಸಿದೆ. ಸಹಿಸಿದೆ. ನನ್ನ ಕುರಿತು ನಿನಗೆಲ್ಲವೂ ತಿಳಿದಿದೆ. ಸೌಲಭ್ಯಾನುಸಾರ ಮುಂದೆಯೂ ಓದಬಹುದಾದ ಲಘುಗ್ರಂಥ ನಾನು!
ನೀನೀಗಲೂ ನನಗೆ ಮಹಾರಹಸ್ಯ!
ಕಾಲವಿಷ್ಟಾದರೂ ನಿನ್ನ ಕುರಿತು ಅರಿಯಲು ನನ್ನಿಂದ ಸಾಧ್ಯವಾಗಿಲ್ಲ. ಅರಿಯದೆಯೇ ನಿನ್ನನ್ನು ಪ್ರೀತಿಸಿದೆ. ಅರಿಯದೆಯೇ ನಿನ್ನನ್ನು ದ್ವೇಷಿಸಿದೆ. ತಿಳಿದೂ ನಿನ್ನನ್ನು ನೋಯಿಸಿದೆನೇ?
ಆದರೂ ಆದರೂ ನೀನು ನನ್ನ ಪ್ರೀತಿಸಿದೆ. ಸಹಿಸಿಕೊಂಡೆ. ನಿನ್ನೊಂದಿಗೆ ನಾನು ಹಲವು ರಹಸ್ಯಗಳನ್ನು ಹೇಳಿಕೊಂಡಿದ್ದೇನೆ. ನನ್ನೆಲ್ಲಾ ಪ್ರವೃತ್ತಿಗಳು ನಿನಗೆ ತಿಳಿದಿದೆ. ನನ್ನನ್ನು ನೀನು ಹಾಸ್ಯಾಸ್ಪದಗೊಳಿಸುವೆಯಾ?
ನಾನು ಹೊರಡುತ್ತಿದ್ದೇನೆ.
ನಿನ್ನನ್ನು ಪ್ರೀತಿಸುತ್ತಾ ಎಂಬುದು ತಿಳಿ.
ನೀನು ನಾನು ಪರಸ್ಪರ ಪರಿಚಯಿಸಿಕೊಂಡದ್ದು ಯಾವಾಗ? ಪರಿಚಯವಾಗಿದೆಯೇ? ನಾನು ಪ್ರಯತ್ನಿಸಿದೆ. ಕೊನೆಗೆ ಪ್ರೀತಿಸುವುದನ್ನಷ್ಟೇ ಕಲಿತೆ. ಇಲ್ಲ. ಸರಿಯಾಗಿ ಅರಿತುಕೊಂಡೇ ಇಲ್ಲ. ಅಜ್ಞಾನ. ಗಂಭೀರವಾಗಿ ಅರಿತಿಲ್ಲ.
ಬಂದಂತೆಯೇ ಒಂಟಿಯಾಗಿಯೇ ಹೋಗುತ್ತಿರುವೆ.
ಯಾತ್ರೆಯ ಸಮಯ ತೀರಾ ಹತ್ತಿರವಾಗುತ್ತಿದೆ.
ನೀನು ನಾನು ಎಂಬ ವಾಸ್ತವದಿಂದ ಕೊನೆಗೆ ನೀನು ಮಾತ್ರ ಉಳಿಯಲಿರುವೆ.
ನೀನು ಮಾತ್ರ!
– ವೈಕಂ ಮುಹಮ್ಮದ್ ಬಶೀರ್
ಕನ್ನಡ : ಸ್ವಾಲಿಹ್ ತೋಡಾರ್

ಸ್ವಾಲಿಹ್ ತೋಡಾರ್ ಅವರು ಕನ್ನಡದ ಲೇಖಕ, ಅನುವಾದಕ ಮತ್ತು ಕವಿ. ‘ಇಶಾರ’ ಪಾಕ್ಷಿಕ ಮತ್ತು ವಾರ್ತಾಭಾರತಿ ಪತ್ರಿಕೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅರುವತ್ತಕ್ಕೂ ಮಿಕ್ಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾರ್ಟಿನ್ ಲಿಂಗ್ಸ್ ಅವರ ವಿಶ್ವಪ್ರಸಿದ್ಧ ಕೃತಿ Muhammad: His Life Based on the Earliest Sources, ಡಾ. ಹುಸೈನ್ ರಂಡತ್ತಾನಿ ಅವರ ‘ಅರಿಯಪ್ಪೆಡಾತ ಇಂಡಿಯಾ’ ಮೊದಲಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ರೂಮಿ ಕತೆಗಳು’ ಅವರ ಇತ್ತೀಚೆಗೆ ಪ್ರಕಟವಾದ ಕೃತಿ. ಎಪಿ ಉಸ್ತಾದರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದು