ಕಳೆದುಹೋದ ಸುಗಂಧದ ಸ್ಮೃತಿಯಲ್ಲಿ

ನನ್ನ ಬಾಲ್ಯದಲ್ಲಿ ಮೊಯಿನ್ ಕುಟ್ಟಿ ವೈದರ ಪಡಪ್ಪಾಟುಗಳನ್ನು ಹಾಡುತ್ತಿದ್ದ ಮುಸ್ಲಿಮ್ ವಿದ್ವಾಂಸರೊಬ್ಬರು ಸುಳ್ಯದಲ್ಲಿರುವ ನಮ್ಮ ಮನೆಗೆ ಬರುತ್ತಿದ್ದರು. ಪಾರಂಪರಿಕ ಸಮರಕಲೆಯಲ್ಲಿ ನಿಪುಣರಾಗಿದ್ದ ಅವರು, ತಮ್ಮ ಮನಮೋಹಕ ಕಂಠದಿಂದಾಗಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಕಣ್ಣೂರು ಜಿಲ್ಲೆಯವರಾದ ಅವರೊಂದಿಗೆ ಅದೇ ಊರಿನವರಾಗಿದ್ದ ನನ್ನ ತಂದೆಗೆ ನಿಕಟ ಸಂಪರ್ಕವಿತ್ತು. ಆದ್ದರಿಂದಲೇ, ಆದೂರು ಆಟು ತಂಙಳ್ ವರ್ಷಂಪ್ರತಿ ಆಯೋಜಿಸುತ್ತಿದ್ದ ತಮ್ಮ ಕುಟುಂಬದ ಉರೂಸ್‌ನಲ್ಲಿ ಪಡಪ್ಪಾಟು ಪ್ರದರ್ಶನ ನೀಡಲು ಬಂದಾಗ ಅವರು ನಮ್ಮ ಪುಟ್ಟ ಮನೆಯಲ್ಲಿ ತಂಗುತ್ತಿದ್ದರು. ಅವರ ಆಗಮನದಿಂದಲೇ ಮಕ್ಕಳಾಗಿದ್ದ ನಮ್ಮಲ್ಲಿ ಉರೂಸಿನ ಸಂಭ್ರಮ ಮೂಡುತ್ತಿತ್ತು. ಮನೆಯಿಂದ ಎರಡು ಗಂಟೆಗಳ ಪ್ರಯಾಣವಿರುವ ಆದೂರಿಗೆ ತೆರಳುವ ಮೊದಲು ಬಹಳ ದಿನಗಳ ಕಾಲ ನಮ್ಮ ಮನೆಯಲ್ಲಿ ಇರುತ್ತಿದ್ದರು. ಕಾರ್ಯಕ್ರಮ ಮುಗಿದ ನಂತರವೂ ಅವರು ಮತ್ತೆ ನಮ್ಮ ಮನೆಗೆ ಬಂದು ಕೆಲ ದಿನಗಳ ಕಾಲ ಇದ್ದು ಹೋಗುತ್ತಿದ್ದರು. ನಾವು ಅವರನ್ನು ಹಾಡುವಂತೆ ದುಂಬಾಲು ಬಿದ್ದರೆ ಕೊಂಚವೂ ನಿರಾಕರಿಸದೆ ಆವೇಶದಿಂದ ಹಾಡುತ್ತಿದ್ದರು. ಪೈಗಂಬರರ ಚಿಕ್ಕಪ್ಪ ಹಝ್ರತ್ ಹಂಝ ಅವರ ಕುರಿತಾದ ಪಡಪ್ಪಾಟಿನ ಸಾಲುಗಳನ್ನು ಅವರ ಸುಮಧುರ ಗಾಯನದಲ್ಲಿ ಕೇಳಿಸಿಕೊಂಡು ನಾವು ಅವರ ಹುಚ್ಚು ಅಭಿಮಾನಿಗಳಾಗಿಬಿಡುತ್ತಿದ್ದೆವು. ಹತ್ತು ದಿನಗಳ ಕಾಲ ನಡೆಯುವ ಅವರ ಪ್ರದರ್ಶನ ಜನರ ಮನಸೂರೆಗೊಳಿಸಿದೆಯೆಂದೂ ಆದೂರು ತಂಙಳರಿಗೆ ಬಹಳಷ್ಟು ಮೆಚ್ಚುಗೆಯಾಗಿದೆಯೆಂದೂ ನನ್ನ ತಂದೆ‌ ಹೇಳುತ್ತಿದ್ದರು. ಅವರು ಇನ್ನಷ್ಟು ಹಾಡಬೇಕಿತ್ತು ಎಂಬುವುದು ಅವರ ಮೇಲೆ ಜನರಿಗಿದ್ದ ಏಕೈಕ ತಕರಾರಾಗಿತ್ತು.

ಅವರು ಭೇಟಿ‌ ನೀಡಿದಾಗಲೆಲ್ಲ ಸಣ್ಣ ಅತ್ತರಿನ‌ ಸೀಸೆಯೊಂದನ್ನು ತರುತ್ತಿದ್ದರು. ನಾನು ಹಿಂದೆಂದೂ ಅನುಭವಿಸಿರದಂತಹ ತೀವ್ರವಾದ ವಿಶಿಷ್ಟ ಪರಿಮಳವನ್ನು ಅದು ಸೂಸುತ್ತಿತ್ತು. ಅವರು ಹಜ್ ಸಮಯದಲ್ಲಿ ಬಹಳಷ್ಟು ಖರ್ಚು ಮಾಡಿ ಖರೀದಿಸಿದ್ದ ಅಂಬರ್ ಅತ್ತರ್ ಅದಾಗಿತ್ತು. ಅದು ಕ‌ಅ್‌ಬಾ ಅಥವಾ ಹಜರುಲ್ ಅಸ್ವದ್‌ಗೆ ಸಂಬಂಧಿಸಿದ್ದೆಂದು ಅವರು ವಿವರಿಸಿದ್ದರು. ನನಗೆ ಆ ವಿವರಗಳು ಈಗ ನಿಖರವಾಗಿ ನೆನಪಿಲ್ಲ. ಮೀನಿನಿಂದ ತಯಾರಿಸಲಾಗುವ ಅಂಬರ್ ಸುಗಂಧ ದ್ರವ್ಯಗಳಲ್ಲಿ ಬಳಸುವ ಅಪರೂಪದ ಪದಾರ್ಥಗಳಲ್ಲಿ ಒಂದೆಂದೂ ಹೇಳುತ್ತಿದ್ದರು. ಅವರಿಂದಲೇ ‘ಊದ್’ ಎಂಬ ಪದವನ್ನು ಮೊದಲ ಬಾರಿ ಕೇಳಿಸಿಕೊಂಡಿದ್ದೆ. ನಾನು ಆ ಸಮಯದಲ್ಲಿ ಮೂರು ಅಥವಾ ನಾಲ್ಕನೇ ತರಗತಿಯಲ್ಲಿದ್ದಿರಬೇಕು. ಆದರೂ, ನನ್ನ ಮನಸ್ಸಿನಲ್ಲಿ ಇನ್ನೂ ಅದರ ಸುವಾಸನೆ ಗಾಢವಾಗಿ ಉಳಿದುಕೊಂಡಿದೆ. ಈಗಲೂ ಅದು ನನ್ನ ಕಣ್ಣೆದುರು ಬೆರಗು ಮೂಡಿಸುವಷ್ಟು ಸ್ಪಷ್ಟವಾಗಿ ನಿಂತಿದೆ. ಒಂದು ದಿನ ಅವರು ಕಣ್ಣೂರಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ನನ್ನ ತಂದೆ, ತಾಯಿ, ಕಿರಿಯ ಸಹೋದರ ಮತ್ತು ನನ್ನನ್ನು ಕರೆದರು. ನಮಗೆ ಅಚ್ಚರಿಯಾಗುವಂತೆ ಅವರು ಆ ಅತ್ತರ್‌ನ ಸೀಸೆಯನ್ನು ನಮ್ಮ ಕೈಯಲ್ಲಿಟ್ಟರು. ಅದು ತನ್ನ ಸ್ವಂತ ಕುಟುಂಬಕ್ಕಿಂತಲೂ ಹೆಚ್ಚು ಪ್ರಿಯವಾದದ್ದಾಗಿದ್ದರೂ, ಅದನ್ನು ನಮಗೆ ಕೊಡಲೇಬೇಕೆನ್ನಿಸಿತು ಎಂದರು. ಯಾರೊಂದಿಗೂ ಅದನ್ನು ಹಂಚಿಕೊಳ್ಳಬೇಡಿ ನಿಮ್ಮ ಸ್ವಂತ ಬಳಕೆಗಾಗಿ ಮಾತ್ರ ಇಟ್ಟುಕೊಳ್ಳಿ ಎಂದು ವಿದಾಯ ಹೇಳಿ ಹೊರಟಿದ್ದರು.

ಅಂದಿನಿಂದ ನನಗೆ ಸ್ವರ್ಗ ಸದೃಶ ಸುಖ. ಪ್ರತಿದಿನ ಆ ಅತ್ತರನ್ನು ಹಚ್ಚದೇ ಹೊರಗೆ ಹೋಗುತ್ತಿರಲಿಲ್ಲ. ಶಾಲಾ‌ ಸಮವಸ್ತ್ರ ಸೇರಿದಂತೆ ನನ್ನಲ್ಲಿದ್ದ ಎಲ್ಲ ಬಟ್ಟೆಬರೆಗಳಲ್ಲಿ ಅದರ ಪರಿಮಳ ಆವರಿಸಿಕೊಂಡಿತ್ತು. ಅತ್ತರ್ ಗಾಢವೂ ಸಾಂದ್ರವೂ ಆಗಿದ್ದರಿಂದ ನನ್ನ ಕೆಲವು ಬಿಳಿ ವಸ್ತ್ರಗಳ ಮೇಲೂ ಅದರ ಕಲೆಗಳು ಎದ್ದು ಕಾಣುತ್ತಿದ್ದವು. ಆ ದಿನಗಳಲ್ಲಿ ಅತ್ತರ್ ಸಿಗಬೇಕಿದ್ದರೆ ‌ಯಾರಾದರೂ ಹಜ್‌ ಯಾತ್ರೆಯಿಂದ ಮರಳಿ ಬರಬೇಕಾಗುತ್ತಿತ್ತು. ಕೆಲವರು ಗಲ್ಫ್‌ನಿಂದ ಮರಳುವಾಗ ತರುತ್ತಿದ್ದರು ಇಲ್ಲವೇ ಬೇರೆಯವರೊಂದಿಗೆ ಕಳುಹಿಸಿಕೊಡುತ್ತಿದ್ದರು. ನಾವು ಅತ್ತರನ್ನು ಅತಿಯಾಗಿ ಬಳಸುವುದರಿಂದ ಬೇಗನೆ ಖಾಲಿಯಾಗುತ್ತಿತ್ತು. ಆ ಸೀಸೆ ಬಹಳ ಕಾಲದವರೆಗೂ ನಮ್ಮ ಬಳಿಯಿರುತ್ತಿತ್ತು. ಒಮ್ಮೆ ನಾನು ಅದನ್ನು ಹಚ್ಚಿಕೊಳ್ಳುತ್ತಿದ್ದಾಗ ಸ್ವಲ್ಪ ನೆಲದ ಮೇಲೆ ಚೆಲ್ಲಿಬಿಟ್ಟಿತು. ಕ್ಷಣಾರ್ಧದಲ್ಲೇ ಇಡೀ ಮನೆಗೆ ಆ ಸುಗಂಧ ವ್ಯಾಪಿಸಿತ್ತು. ಗೋಡೆಗಳು ಸ್ವತಃ ಅದನ್ನು ಉಸಿರಾಡತೊಡಗಿದ್ದವು. ಸಣ್ಣ ಪ್ರಾಯದಲ್ಲಿ ಆ ಅತ್ತರ್ ಅಥವಾ ಸಾಮಾನ್ಯವಾಗಿ ಯಾವುದೇ ಅತ್ತರ್‌ಗಳ ಮೌಲ್ಯವನ್ನು ನಾನು ಅರ್ಥಮಾಡಿಕೊಂಡಿರಲಿಲ್ಲ. ಮನೆಯಲ್ಲಿ ಅನೇಕ ಬಗೆಯ ಅತ್ತರ್‌ ಮತ್ತು ಸುಗಂಧ ದ್ರವ್ಯಗಳನ್ನು ನೋಡುತ್ತಿದ್ದೆ. ಅವುಗಳನ್ನು ತಂದೆ ಖರೀದಿಸುತ್ತಿದ್ದರು ಇನ್ನು ಕೆಲವು ಗಲ್ಫ್‌ನಿಂದ ಬರುವ ನಮ್ಮ ಸಂಬಂಧಿಕರು ಉಡುಗೊರೆಯಾಗಿ ತರುತ್ತಿದ್ದರು. ನನ್ನ ತಲೆಮಾರಿನ ಬಹುತೇಕರಿಗೆ ಮಾತ್ರವಲ್ಲ ಹಿಂದಿನವರಿಗೂ ಸುಗಂಧ ದ್ರವ್ಯ ಮತ್ತು ಅತ್ತರ್‌ನ ನೆನಪು ಗಲ್ಫ್ ಮತ್ತು ಹಜ್‌ನ ಜೊತೆ ಆಳವಾಗಿ ಬೆಸೆದುಕೊಂಡಿದೆ. ಜನ್ನತುಲ್ ಫಿರ್ದೌಸ್, ಮಜ್ಮುಅ, ಮಲ್ಲಿಗೆ ಅತ್ತರ್‌ಗಳು ಮತ್ತು ಬ್ರೂಟ್ ನನಗೆ ನೆನಪಿರುವ ಆರಂಭಿಕ ಸುಗಂಧ ದ್ರವ್ಯಗಳಲ್ಲಿ ಸೇರಿಕೊಂಡಿವೆ. ಪ್ರತಿಯೊಂದೂ ತನ್ನದೇ ಆದ ಒಂದು ಪುಟ್ಟ ಜಗತ್ತನ್ನು ಹೊತ್ತುಕೊಂಡಿವೆ.

ನಾನು ಹಚ್ಚುವ ಸುಗಂಧದಿಂದ ತಲೆನೋವು ಬರುತ್ತದೆಯೆಂದು ಕೆಲವು ಸಹಪಾಠಿಗಳು ತಕರಾರು ಎಬ್ಬಿಸಿದರು‌. ಈಗ ಯೋಚಿಸಿದರೆ, ಅದು ಅಂಬರ್‌ನಿಂದ ಆಗಿರಲಿಕ್ಕಿಲ್ಲ; ಮನೆಯಲ್ಲಿದ್ದ ಮಲ್ಲಿಗೆಯದ್ದೋ ಅಥವಾ ಬೇರೆ ಯಾವುದೋ ಹೂವಿನ ಅತ್ತರ್‌ನಿಂದ ಆಗಿರಬಹುದೆಂದು ಅನ್ನಿಸುತ್ತದೆ. ಆದರೂ, ಕ್ರಮೇಣ ನಾನು ಆ ಹವ್ಯಾಸವನ್ನು ತ್ಯಜಿಸಿದೆ. ಮತ್ತೆ ಯಾವಾಗಿನಿಂದ ಅತ್ತರ್ ಬಳಸತೊಡಗಿದೆಯೆಂದು ಖಚಿತವಾಗಿ ನೆನಪಿಲ್ಲ. ನನ್ನ ಪದವಿಪೂರ್ವ ಕಾಲೇಜಿನ ದಿನಗಳಲ್ಲಿ ನಾನು ಕ್ಯಾಲಿಕಟ್‌ಗೆ ಆಗ್ಗಾಗ್ಗೆ ಭೇಟಿ ನೀಡುತ್ತಿದ್ದೆ. ವಿಶೇಷವಾಗಿ, ಮರ್ಕಝ್ ಕಾಂಪ್ಲೆಕ್ಸ್‌‌ನಲ್ಲಿ ಅಡ್ಡಾಡುತ್ತಿದ್ದೆ. ಆ ಕಾಂಪ್ಲೆಕ್ಸ್‌ನಲ್ಲಿ ಅರಬ್ಬರಿಗೆ ಅತ್ತರ್ ಮತ್ತು ಅಗರ್‌ವುಡ್ ಮಾರಾಟ ಮಾಡುವ ಹೆಸರುವಾಸಿಯಾದ ಹಲವಾರು ಅಂಗಡಿಗಳಿದ್ದವು. ನಾನು ಅಲ್ಲಿಗೆ ಹೋದಾಗಲೆಲ್ಲ ಅರಬ್ಬರು ಆ ಅಂಗಡಿಗಳ ಒಳ- ಹೊರಗೆ ಓಡಾಡುವುದನ್ನು ನೋಡುತ್ತಿದ್ದೆ. ಆದರೆ, ನಾನು ಯಾವುದೇ ಅತ್ತರ್‌ಗಳನ್ನು ಖರೀದಿಸಿದ್ದಾಗಿ ನೆನಪಿಲ್ಲ. ಬದಲಾಗಿ, ನಾನು ಪುಸ್ತಕಗಳ ರಾಶಿಯನ್ನೆ ಹೊತ್ತು ಹಿಂತಿರುಗುತ್ತಿದ್ದೆ. ಯಾಕೆಂದರೆ, ಆ ಪ್ರದೇಶ ಪುಸ್ತಕಗಳ ಅಂಗಡಿಗಳಿಂದ ಕಿಕ್ಕಿರಿದಿತ್ತು ಮತ್ತು ಪುಸ್ತಕಗಳೂ ನನಗೆ ಬೇರೆ ಬಗೆಯ ಪರಿಮಳವಾಗಿದ್ದವು- ಅದರ ಕಾಗದ, ಶಾಯಿ, ಧೂಳು..

ವರ್ಷಗಳ ತರುವಾಯ, ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ಅತ್ತರ್‌ಗಳ ಮೇಲಿನ ಆಸಕ್ತಿ ಮತ್ತೆ ಗರಿಗೆದರಿಕೊಂಡಿತು. ಸಹಪಾಠಿ ಫಸೀಹ್ ಅಹ್ಮದ್‌ಗೆ ಸುಗಂಧ ದ್ರವ್ಯಗಳ ಬಗ್ಗೆ ಅತೀವ ಒಲವಿತ್ತು. ‌ಗೋಲ್ಕೊಂಡ ಕೋಟೆಯ ಅನೌಪಚಾರಿಕ ಪ್ರವಾಸಿ ಮಾರ್ಗದರ್ಶಿಗಳ ಬಗ್ಗೆ ನಮ್ಮ ಸ್ನಾತಕೋತ್ತರ ಪ್ರಬಂಧದ ಸಲುವಾಗಿ ಕೆಲಸ ಮಾಡುವ ಸಂದರ್ಭದಲ್ಲಿ ನಾವು ನಗರದ ಅತ್ತರ್ ಅಂಗಡಿಗಳನ್ನು ಅನ್ವೇಷಿಸುತ್ತಿದ್ದೆವು. ವಿವಿಧ ಪರಿಮಳಗಳನ್ನು ಮಾದರಿಯಾಗಿ ತೆಗೆದುಕೊಂಡು ಖರೀದಿಸುತ್ತಿದ್ದೆವು. ಕಸ್ತೂರಿಯ ಘಮದ, ಗಾಢವಾದ ಸುಗಂಧ ದ್ರವ್ಯಗಳತ್ತ ನಾವು ಆಕರ್ಷಿತರಾದೆವು. ಕೇವಲ ಚರ್ಮವನ್ನು ಸ್ಪರ್ಶಿಸಿ ಮರೆಯಾಗದೆ ದೇಹದ ನೆನಪಿನಲ್ಲಿ ನೆಲೆಯೂರುವ ಪರಿಮಳಗಳವು. ಹೀಗೆ ಅತ್ತರ್ ಮತ್ತು ಸುಗಂಧಗಳ ಲೋಕದಲ್ಲಿ ಸಂಚರಿಸುತ್ತಿರುವಾಗ ಅಯಾಚಿತವಾಗಿ ನನಗೊಂದು ಅತ್ತರ್ ಉಡುಗೊರೆ ದೊರೆಯಿತು.

ನಮ್ಮ ಹಿರಿಯರಲ್ಲಿ ಒಬ್ಬರಾದ ನುಐಮಾನ್ ಅವರ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದಾಗಲೆಲ್ಲ ಕೊಂಬಿನ ಆಕಾರದ ಲೋಹದ ಅತ್ತರಿನ ಸೀಸೆ ನನ್ನ ಕಣ್ಣಿಗೆ ಬೀಳುತಿತ್ತು. ಒಂದು ದಿನ ಅವರು ನನ್ನನ್ನು ಊಟಕ್ಕೆ ಆಹ್ವಾನಿಸಿದರು. ಸುದೀರ್ಘ ಮಾತುಕತೆ, ಸ್ವಾದಿಷ್ಠ ಭೋಜನದ ನಂತರ ನಾನು ಹೊರಡಲು ಸಿದ್ಧನಾಗುತ್ತಿದ್ದಾಗ ಅವರು ಮತ್ತೆ ನನ್ನನ್ನು ಒಳಗೆ ಕರೆದು ಆ ಸೀಸೆಯನ್ನು ಉಡುಗೊರೆಯಾಗಿ ನೀಡಿದರು. ನಾನು ಅದನ್ನು ನಿಯಮಿತವಾಗಿ ಬಳಸುತ್ತಿದ್ದೆ. ಹಗುರ ಪರಿಮಳವನ್ನು ಅದು ಹೊಂದಿತ್ತು. ಕಾಲಾಂತರದಲ್ಲಿ ಪ್ರತಿದಿನ ಅದನ್ನು ಹಚ್ಚುತ್ತಿದ್ದರೂ ಅದರ ಪರಿಮಳ ನನ್ನ ಗಮನಕ್ಕೆ ಬರುತ್ತಿರಲಿಲ್ಲ. ನಂತರ ಒಂದು ದಿನ ನನ್ನ ಸಹಪಾಠಿ ಸಾಯಿ ನನ್ನ ಹಾಸ್ಟೆಲ್ ಕೋಣೆಗೆ ಭೇಟಿ ನೀಡಿ ಸೀಸೆಯ ವಾಸನೆಯನ್ನು ಆಘ್ರಾಣಿಸಿ “ಒಹ್ ಇದು ನಿಮ್ಮ ದಿನನಿತ್ಯದ ಸುವಾಸನೆ” ಎಂದಾಗ ನಾನು ದಿಗ್ಭ್ರಮೆಗೊಂಡೆ. ಜನರು ನನ್ನನ್ನು ನಿರ್ದಿಷ್ಟ ಸುಗಂಧದೊಂದಿಗೆ ಗುರುತಿಸುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಆದಾದ ನಂತರ, ಸೀಸೆಯಲ್ಲಿ ಉಳಿಯುತ್ತಿದ್ದ ಸ್ವಲ್ಪ ಅತ್ತರನ್ನು ಕಾಪಿಟ್ಟುಕೊಳ್ಳತೊಡಗಿದೆ. ಕೆಲವು ಸ್ನೇಹಿತರು ನನ್ನನ್ನು ಅಕ್ಕರೆಯಿಂದ ‘ಅತ್ತರ್ ಪರಿಮಳದ ವ್ಯಕ್ತಿ’ ಎಂದು ಸಂಬೋಧಿಸುತ್ತಿದ್ದರು. ಆದರೆ, ಕೆಲವರು ಅದರಲ್ಲೂ ಮೈಗ್ರೇನ್‌ನಿಂದ ಬಳಲುತ್ತಿದ್ದವರಿಗೆ ಆ ಪರಿಮಳ ಇಷ್ಟವಾಗುತ್ತಿರಲಿಲ್ಲ.

ನಾನು ಬಹಳಷ್ಟು ಅತ್ತರ್‌ಗಳನ್ನು ಖರೀದಿಸುತ್ತಿದ್ದರೂ ನನ್ನ ಬಾಲ್ಯದ ಆ ಅಂಬರ್ ಮಾತ್ರ ಉತ್ತರಿಸದ ಕರೆಯಂತೆ ನೆನಪಿನಲ್ಲಿ ಉಳಿಯಿತು. ಅಲ್ಲಿಂದ ಮುಂದೆ ಕಳೆದುಹೋದ ಆ ಸುಗಂಧದ ಹುಡುಕಾಟ ಅಕ್ಷರಶಃ ಪ್ರಾರಂಭವಾಯಿತು. ನನ್ನ ಬಾಲ್ಯದ ಪರಿಮಳವನ್ನು ಮತ್ತೆ ಪಡೆಯಬೇಕೆಂಬ ಆಸೆಯಲ್ಲಿ ಅಂಬರ್ ಎಂದು ಕರೆಯಲಾಗುತ್ತಿದ್ದ ಹಲವಾರು ಅತ್ತರ್‌ಗಳನ್ನು ಖರೀದಿಸಿದರೂ ಅವು ಯಾವುವೂ ಆ ಪರಿಮಳಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಬಣ್ಣಗಳಲ್ಲಿ ಏನಾದರೂ ಸುಳಿವು ಇರಬಹುದೆಂದು ಭಾವಿಸಿ ಗಾಢ ಬಣ್ಣದ ಅತ್ತರ್‌ಗಳನ್ನು‌ ಖರೀದಿಸುತ್ತಿದ್ದೆ. ಪರಿಮಳ ಬಣ್ಣದೊಳಗೆ ಅಡಗಿರಬಹುದೆಂದೂ ಅನ್ನಿಸುತ್ತಿತ್ತು. ನಾನು ಅತ್ತರ್‌ಗಳನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿದ್ದೆ. ಪ್ರತಿಯಾಗಿ ನಾನೂ ಅವುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೆ. ಆದರೆ, ನಾನು ಹುಡುಕುತ್ತಿದ್ದ ಪರಿಮಳ ನನ್ನಿಂದ ದೂರ ಸರಿಯುತ್ತಿತ್ತು. ಮೂಗಿನ ಸ್ಪರ್ಶಕ್ಕೆ ನಿಲುಕದಷ್ಟು ದೂರ ಸರಿದು ಅರ್ಧ ಮಾತ್ರ ನೆನಪಿನಲ್ಲಿ ಉಳಿದು ಇನ್ನರ್ಧ ಕಳೆದುಹೋಗಿತ್ತು.

ಮುಸ್ಲಿಮ್ ಬದುಕಿನಲ್ಲಿ ಅತ್ತರ್‌ ಮತ್ತು ಸುಗಂಧದ ಸ್ಥಾನವು ಎಲ್ಲರಿಗೂ ತಿಳಿದಿರುವ ಸಂಗತಿ. ಮುಸ್ಲಿಮ್ ಇತಿಹಾಸ ಮತ್ತು ಕೀರ್ತನಾ ಸಾಹಿತ್ಯದಲ್ಲಿ ಪೈಗಂಬರ್ ಮುಹಮ್ಮದ್ ಅವರ ಸುಗಂಧದ ಬಗೆಗಿನ ಅನೇಕ ವಿವರಗಳು ಕಾಣಸಿಗುತ್ತವೆ. ಅತ್ಯುತ್ತಮ ಸುಗಂಧಭರಿತ ವ್ಯಕ್ತಿಯಾಗಿ ಅವರನ್ನು ಸ್ಮರಿಸಲಾಗುತ್ತದೆ. ಪೈಗಂಬರರು ಸ್ವತಃ ಸುಗಂಧವನ್ನು ಇಷ್ಟಪಡುತ್ತಿದ್ದರು ಮತ್ತು ತಾವು ಇಷ್ಟಪಡುವ ವಸ್ತುಗಳ ಸಾಲಿನಲ್ಲಿ ಅದನ್ನೂ ಸೇರಿಸುತ್ತಿದ್ದರು. ಸೀರಃ ಚರಿತ್ರಕಾರರು ಅವರ ಪರಿಮಳವನ್ನು‌ ಕಸ್ತೂರಿ ಮತ್ತು ಅಂಬರ್ ಮಿಶ್ರಣವನ್ನು ಹೋಲುತ್ತಿತ್ತೆಂದು ವಿವರಿಸಿದ್ದಾರೆ. ಈ ಕಾರಣಕ್ಕಾಗಿ ಅಂಬರ್ ಸುದೀರ್ಘ ಮತ್ತು ಅರ್ಥಪೂರ್ಣ ಇತಿಹಾಸವನ್ನು ಹೊಂದಿದೆ. ಯಾರಾದರೂ ನಮಗೆ ಸುಗಂಧವನ್ನು ಉಡುಗೊರೆಯಾಗಿ ನೀಡಿದರೆ, ನಾವು ಅದನ್ನು ಎಂದಿಗೂ ನಿರಾಕರಿಸಬಾರದೆಂದು ಸ್ನೇಹಿತರು ಆಗ್ಗಾಗ್ಗೆ ಹೇಳುತ್ತಿದ್ದರು. ಸುಗಂಧವನ್ನು ತಿರಸ್ಕರಿಸುವ ಪರಿಪಾಠವಿಲ್ಲದಿರುವುದರಿಂದ ಇಂದಿಗೂ ಮುಸ್ಲಿಮರಲ್ಲಿ ಅದೊಂದು ಅತ್ಯುತ್ತಮ ಉಡುಗೊರೆ. ಕೆಲವು ಪೂರ್ವಿಕ ವಿದ್ವಾಂಸರು ಸುಗಂಧ ಎಷ್ಟೇ ದುಬಾರಿ ಬೆಲೆಯದ್ದಾದರೂ ಅದನ್ನು ಖರೀದಿಸುವುದು ದುಂದುಗಾರಿಕೆಯಲ್ಲವೆಂದು ಪ್ರತಿಪಾದಿಸಿದ್ದಾರೆ. ನನ್ನ ಜೀವನದಲ್ಲಿ ಬರಕತನ್ನು ತರಬಹುದೆಂದು ಭಾವಿಸಿ ಹಣದ ಕೊರತೆಯಿದ್ದರೂ ಅತ್ತರ್‌ಗಳನ್ನು ಖರೀದಿಸುತ್ತೇನೆ. ನಾನು ಕೆಲಸಕ್ಕೆ ಸೇರಿದ ನಂತರ ಪಿಎಚ್‌ಡಿ ಆರಂಭಿಸಿದಾಗ ಆತ್ತರ್‌ಗಳ ಹುಡುಕಾಟ ಇನ್ನಷ್ಟು ಗಂಭೀರವಾಯಿತು. ಆರಂಭದಲ್ಲಿ ಈ‌ ಅನ್ವೇಷಣೆಗೆ ಖರ್ಚು ಮಾಡಲು ನನ್ನ ಬಳಿ‌ ಸ್ವಲ್ಪ ಹಣವಿತ್ತು. ಕನೌಜ್, ಬಾಂಬೆ, ಗುಜರಾತ್, ಕ್ಯಾಲಿಕಟ್ ಮತ್ತು ನನ್ನ ಕೈಗೆಟಕುವ ಇತರ ಸ್ಥಳಗಳಿಂದಲೂ ಅತ್ತರ್‌ಗಳನ್ನು ತರಿಸಿಕೊಂಡೆ. ಲೆಕ್ಕವಿಲ್ಲದಷ್ಟು ಅಂಬರ್ ಅತ್ತರ್‌, ಕಿಸ್ವತುಲ್ ಕ‌ಅ್‌ಬಾದ ಹಲವು ಬಗೆಯ ಅತ್ತರ್‌ಗಳನ್ನು ಪ್ರಯತ್ನಿಸಿದೆ. ಅವುಗಳಲ್ಲಿ ಯಾವುದಾದರೊಂದು ಅತ್ತರ್ ನೆನಪಿನಲ್ಲಿ ನಿದ್ರಿಸುತ್ತಿರುವ ಬಾಲ್ಯದ ಸುಗಂಧವನ್ನು ಹೇಗಾದರೂ ಎಚ್ಚರಿಸಬಹುದೆಂದು ನಂಬಿದ್ದೆ. ಆದರೆ ಹಾಗೆ ಆಗಲಿಲ್ಲ.

ಕೆಲವು ಸ್ನೇಹಿತರು ತಮ್ಮ ಜೇಬಿನಲ್ಲಿ ಅತ್ತರ್ ಇಟ್ಟುಕೊಳ್ಳುತ್ತಿದ್ದರು. ನಾವು ಭೇಟಿಯಾದಾಗಲೆಲ್ಲ ನನಗೆ ಸ್ವಲ್ಪ ಅತ್ತರನ್ನು ಉಡುಗೊರೆಯಾಗಿ ನೀಡುತ್ತಿದ್ದರು. ನನ್ನ ಅಣ್ಣನಂತಿರುವ ಸ್ನೇಹಿತ ಹಫೀಝ್ ಕೆ.ಟಿ ಅಂತಹವರಲ್ಲಿ ಒಬ್ಬರು. ಸ್ನಾತಕೋತ್ತರ ಪದವಿಯ ನಂತರ ಕ್ಯಾಲಿಕಟ್‌ನಲ್ಲಿ ಕೆಲಸಕ್ಕಾಗಿ ಒಂದು ವರ್ಷ‌ ಕಳೆದಿದ್ದೆ. ಆ‌‌ ಅವಧಿಯಲ್ಲಿ ನನ್ನ ಮಿತ ಬಜೆ‌ಟ್‌ನೊಳಗಡೆ ಅನೇಕ ಅತ್ತರ್ ಸೀಸೆಗಳನ್ನು ಖರೀದಿಸುತ್ತಿದ್ದೆ. ಅತ್ತರ್ ಅಂಗಡಿ ಕಣ್ಣಿಗೆ ಬಿದ್ದರೆ ಅಂಗಡಿಯ ಮೇಲಿನ ಪ್ರೀತಿಯ ಪ್ರತೀಕವಾಗಿ ಒಂದು ಸಣ್ಣ ಅತ್ತ‌ರ್‌ನ ಸೀಸೆಯನ್ನು ಖರೀದಿಸುತ್ತಿದ್ದೆ‌. ಜನರು ಒಳಬಂದು ತುಸು ಸುಗಂಧವನ್ನು ಪಡೆದು ಸಂತೋಷದಿಂದ ಹೊರಡುವಂತಹ ಸಣ್ಣ ಅತ್ತರ್ ಅಂಗಡಿಯನ್ನು ಇಟ್ಟುಕೊಳ್ಳುವುದು ತನ್ನ ಕನಸೆಂದು ಸ್ನೇಹಿತ ಸಲೀಮ್ ಯೂನುಸ್ ಹೇಳುತ್ತಿದ್ದರು. ಅಂತಹ ಆಸಕ್ತಿಗಳನ್ನು ಹಂಚಿಕೊಳ್ಳುವ ಯಾರನ್ನಾದರೂ ನಾವು ಭೇಟಿಯಾದಾಗಲೆಲ್ಲ ಒಂದು ವಿಶಿಷ್ಟ ಸ್ನೇಹ ಮೂಡುತ್ತದೆ. ಅವು ಕೇವಲ ಮಾತುಗಳಲ್ಲಿ ಹುಟ್ಟಿಕೊಳ್ಳುವ ಆತ್ಮೀಯತೆಯಲ್ಲ; ಹಂಚಿಕೊಂಡ ಪರಿಮಳ, ಅಭಿರುಚಿ, ಬಯಕೆಗಳಿಂದ ರೂಪು ಪಡೆಯುವ ಅನನ್ಯ ಬಂಧ.

ಪಿಎಚ್‌ಡಿ ಮಾಡಲು ಪ್ರಾರಂಭಿಸಿದಾಗ ಅತ್ತರ್‌ಗಳ ಕುರಿತ ನನ್ನ ಆಸಕ್ತಿ ಇನ್ನಷ್ಟು ಗಂಭೀರವಾಯಿತು. ನನ್ನೊಂದಿಗೆ ಪಿಎಚ್‌ಡಿ‌ಗೆ ಸೇರಿಕೊಂಡಿದ್ದ ಆಇಶಾ ಮುಅಲ್ಲ ಸುಗಂಧಗಳ ಬಗ್ಗೆ ಅಸಾಮಾನ್ಯ ಜ್ಞಾನ ಹೊಂದಿದ್ದರು. ನಾನು ಇದುವರೆಗೆ ಹೊಂದಿದ್ದ ಅತ್ಯುತ್ತಮ ಅತ್ತರ್‌ಗಳಲ್ಲಿ ಕೆಲವು ಅತ್ತ‌ರ್‌ಗಳನ್ನು ಅವರು ಉಡುಗೊರೆಯಾಗಿ ನೀಡಿದ್ದರು. ಅವುಗಳಲ್ಲಿ ಕುಂದೂರಿನ ಅತ್ತರ್ ಕೂಡ ಇತ್ತು. ಅದು ಇಂದಿಗೂ ನನ್ನ ನೆಚ್ಚಿನ ಅತ್ತರ್‌ಗಳಲ್ಲಿ ಒಂದು. ಉತ್ತಮ ಗುಣಮಟ್ಟದ ಊದ್ ಮತ್ತು ಇತರ ಸುಗಂಧ ದ್ರವ್ಯಗಳನ್ನು ಗುರುತಿಸುವ ಮತ್ತು ಆನಂದಿಸುವ ವಿಶೇಷ ಸಾಮರ್ಥ್ಯ ಆಕೆಗಿತ್ತು. ನನ್ನ ಬಾಲ್ಯದ ಅಂಬರ್‌ನ ಕತೆಯನ್ನು ಅವಳಿಗೆ ಹೇಳಿದಾಗ, ಅದು ಶತಮಾನಗಳಿಂದ ಕನೌಜ್‌ನಲ್ಲಿ ಭಟ್ಟಿ ಇಳಿಸಿದ ಸುಪ್ರಸಿದ್ಧ ಶಮಾಮತುಲ್ ಅಂಬರ್‌ನ ಒಂದು ವಿಧವಾಗಿರಬಹುದೆಂದಳು.

ಇತ್ತೀಚೆಗೆ ಆನ್‌ಲೈನ್‌ನಲ್ಲಿ ವಿವಿಧ ಅತ್ತ‌ರ್‌ಗಳನ್ನು ಬ್ರೌಸ್ ಮಾಡುವಾಗ, ಬಾಂಗ್ಲಾದೇಶದ ಅಂಗಡಿಯೊಂದರಲ್ಲಿ ಮಾರಾಟವಾಗುವ ಅಂಬರನ್ನು ನೋಡಿ ದಂಗಾದೆ. ನಾನದನ್ನು ಭಾರತದಲ್ಲಿ ಹುಡುಕಿದೆ. ಆದರೆ ಎಲ್ಲೂ ಸಿಗಲಿಲ್ಲ. ಪವಾಡಕ್ಕಾಗಿ ಆಶಿಸುತ್ತಾ, ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಬಾಂಗ್ಲಾದೇಶದ ಸ್ನೇಹಿತನನ್ನು ಸಂಪರ್ಕಿಸಿದೆ‌. ನಾವು ಮಲೇಶ್ಯಾದಲ್ಲಿ ನಡೆದ ಸಮ್ಮೇಳನದಲ್ಲಿ ಭೇಟಿಯಾಗಿದ್ದೆವು. ಅಲ್ಲಿ ಒಂದೇ ಕೊಠಡಿಯನ್ನು ಹಂಚಿಕೊಂಡಿದ್ದೆವು. ಅವನಿಗೆ ಲಿಂಕ್ ಕಳುಹಿಸಿ ಅದನ್ನು ಪಡೆಯಲು ಸಹಾಯ ಮಾಡಬಹುದೆ ಎಂದು ಕೇಳಿದೆ. ಮರುದಿನವೇ, ಅವನು ಈಗಾಗಲೇ ನನಗಾಗಿ ಖರೀದಿಸಿದ್ದ ಸೀಸೆಯ ಫೋಟೊ ಕಳುಹಿಸಿದ. ನಾನು ಅವನನ್ನು ‌ಭೇಟಿಯಾದಾಗ‌ ಕೊನೆಗೂ ಅದು ನನಗೆ ಸಿಗುತ್ತದೆಂದುಕೊಂಡಿದ್ದೆ. ಅವನು ನೀಡಲಿದ್ದ ಸುಗಂಧ ನಾನು ಹುಡುಕುತ್ತಿದ್ದ ಸುಗಂಧವಾಗಿರಬಹುದೆ ಎಂಬ ಅಲೋಚನೆಯು ಬಂದಿತ್ತು . ಅದಲ್ಲದಿದ್ದರೂ‌ ಹೆಚ್ಚಿನ ಅತ್ತರ್‌ಗಳು‌ ನನ್ನನ್ನು‌ ನಿರಾಶೆಗೊಳಿಸಿದಂತೆ ಅದು ನಿರಾಶೆಗೊಳಿಸುವುದಿಲ್ಲವೆಂದು ಖಚಿತವಿತ್ತು.‌ ಆ ಸುಗಂಧ ಎಲ್ಲೋ ಇರಬಹುದು.‌ ಬಹುಶಃ ಗಲ್ಫ್ ದೇಶಗಳಲ್ಲಿ‌ ಇರಬಹುದೆಂದು ನಾನು ಇಂದಿಗೂ ನಂಬಿದ್ದೇನೆ. ಆಗ್ಗಾಗ್ಗೆ ಪ್ರಸಿದ್ಧ ಅತ್ತರ್‌ ಮಳಿಗೆಗಳಿಂದ ಇದೇ ರೀತಿಯ ಹೆಸರಿನ ಸುಗಂಧ ದ್ರವ್ಯಗಳನ್ನು ನೋಡುತ್ತೇನೆ. ನನ್ನ ಪ್ರತಿಯೊಂದು ಅನ್ವೇಷಣೆಯು ನನ್ನಲ್ಲಿ ನೆಲೆಸಿರುವ ಭರವಸೆಯನ್ನು ಮತ್ತೆ ಪುನಶ್ಚೇತನಗೊಳಿಸುತ್ತದೆ.

ವಿಷಾದಕರ ಸಂಗತಿಯೆಂದರೆ ಆ ಅಮೂಲ್ಯ ಉಡುಗೊರೆಯನ್ನು ನೀಡಿದ ವ್ಯಕ್ತಿಯೊಂದಿಗಿನ ಸಂಪರ್ಕವನ್ನು ನಾನು ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆ. ನಾವು ಅವರನ್ನು ಅಬ್ದುಲ್ ಕರೀಮ್ ಮೌಲಾನಾ ಎಂದು ತಿಳಿದಿದ್ದೆವು. ಆದರೆ ಅವರು ಇನ್ನೂ ಜೀವಂತವಾಗಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಅವರು ಎಲ್ಲೋ ಆಟೋ ಓಡಿಸುತ್ತಿದ್ದಾರೆಂದು ಯಾರೋ ಒಬ್ಬರಿಂದ ನನ್ನ ತಂದೆ ತಿಳಿದಿದ್ದರು. ಅದರಾಚೆಗೆ ಯಾವುದೇ ಮಾಹಿತಿ ಇಲ್ಲ. ಅವರೊಂದಿಗಿನ ಸಂಪರ್ಕವು ಕಡಿತಗೊಂಡರೂ ಆ ಪರಿಮಳ ಮತ್ತು ಅದನ್ನು ಕಳೆದುಕೊಂಡ ನೋವು ಮಾತ್ರ ಇನ್ನೂ ಕಾಡುತ್ತಿದೆ.

ವಾಸನೆಯ ನೆನಪು ಒಂದು ಅದ್ಭುತ ಸಾಮರ್ಥ್ಯ. ವಾಸನೆಯೇ ನಾವು ಜಗತ್ತನ್ನು ಗ್ರಹಿಸಲು ಬಳಸುವ ಮೊದಲ ಇಂದ್ರಿಯ ಎಂದು ಒಮ್ಮೆ ಸ್ನೇಹಿತ ಮಶ್ಕೂರ್ ಹೇಳಿದ್ದ. ಮಗು ತನ್ನ ತಾಯಿಯನ್ನು ವಾಸನೆಯ ಮೂಲಕ ಗುರುತಿಸುವ ಉದಾಹರಣೆಯನ್ನು ನೀಡಿದ್ದ. ನಾವೆಲ್ಲರೂ ‌ಜನ, ಘಟನೆ, ನೆನಪುಗಳನ್ನು ವಾಸನೆಯ ಮೂಲಕ ಗುರುತಿಸಿಕೊಳ್ಳುತ್ತೇವೆ. ಅದು ಪರಿಮಳ, ಬೆವರು, ಆಹಾರ ಅಥವಾ ನಿರ್ದಿಷ್ಟ ಸ್ಥಳಗಳ ವಾಸನೆಯಾಗಿರಬಹುದು. ಕೆಲವು ವಾಸನೆಗಳು ಸಂತೋಷವನ್ನು ಆಹ್ವಾನಿಸುತ್ತವೆ; ಇನ್ನು ಕೆಲವು ದುಃಖ ಅಥವಾ ಶಾಂತ ವಿಷಣ್ಣತೆಯನ್ನು ಹೊತ್ತು ತರುತ್ತವೆ.

ಇಂದಿಗೂ ನನ್ನನ್ನು ತುಸು ವಿಷಣ್ಣನನ್ನಾಗಿಸುವ ಎರಡು ವಾಸನೆಗಳಿವೆ. ಮೊದಲನೆಯದು ಶುಂಠಿಯ ವಾಸನೆ. ನನ್ನ ಬಾಲ್ಯದಲ್ಲಿ, ಶುಂಠಿ ಕೊಯ್ಲಿನ ಕಾಲದಲ್ಲಿ ನನಗೆ ಟೈಫಾಯಿಡ್ ಜ್ವರ ಬಾಧಿಸಿತ್ತು. ಆಗ ನಮ್ಮ ಮನೆಯಲ್ಲೆಲ್ಲ ಶುಂಠಿಯನ್ನು ಶೇಖರಿಸಿಡಲಾಗುತ್ತಿತ್ತು. ಇಂದಿಗೂ, ಆ ವಾಸನೆ ಅಚ್ಚರಿಯಾಗುವಂತೆ ನನ್ನನ್ನು ಆ ದಿನಗಳಿಗೆ ಅನಾಮತ್ತಾಗಿ ಹಿಂದಿರುಗಿಸುತ್ತದೆ. ಎರಡನೆಯ ನೆನಪು ಕೋವಿಡ್ ದಿನಗಳದ್ದು. ಐಸೋಲೇಶನ್ ಸಮಯದಲ್ಲಿ, ನಾನು ನನ್ನ ಕೋಣೆಯಲ್ಲಿ ಹಲವಾರು ದಿನಗಳನ್ನು ಏಕಾಂಗಿಯಾಗಿ ಕಳೆದಿದ್ದೇನೆ. ಆ ಕೋಣೆಯಲ್ಲಿ ಒಂದು ವಿಶಿಷ್ಟ ವಾಸನೆಯಿತ್ತು. ಕೆಲವೊಮ್ಮೆ ಅದನ್ನು ನೆನಪಿಸಿಕೊಂಡಾಗ ತುಸು ಹೊತ್ತು ಮೌನವಾಗಿರುತ್ತೇನೆ. ಆ ಕೋಣೆಯೇ ದೇಹವನ್ನು ಪ್ರವೇಶಿಸಿದಂತೆ ಭಾಸವಾಗುತ್ತದೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪುಸ್ತಕ ಪರಿಚಯ ಕಾರ್ಯಕ್ರಮವೊಂದಕ್ಕೆ ಉತ್ತಮ ಗುಣಮಟ್ಟದ ಅಸ್ಸಾಮಿ ಊದ್ ಹಚ್ಚಿಕೊಂಡು ಹೋಗಿದ್ದೆ. ಅದೊಂದು ನಿರ್ದಿಷ್ಟ ವಲಯದ ಸುಗಂಧಪ್ರಿಯರು ಮೆಚ್ಚುವಂತಹ ಭಾರತೀಯ ಊದ್. ಕಾರ್ಯಕ್ರಮದ ಸಂದರ್ಭದಲ್ಲಿ ಒಬ್ಬ ಸ್ನೇಹಿತ ನನ್ನ ಕುರ್ಚಿಯ ಹಿಂದೆ ನಿಂತಿದ್ದರು. ನಂತರ ಅವರು ನನಗೆ ಸಂದೇಶವೊಂದನ್ನು ಕಳುಹಿಸಿದರು. ನನ್ನ ಹತ್ತಿರ ಬಂದಾಗ ನನ್ನ ಪರಿಮಳ ಅವರಿಗೆ ಒಬ್ಬ ಜೀವಂತ ಸೂಫಿ ವಿದ್ವಾಂಸರ ಪರಿಮಳವನ್ನು ಹೋಲುತ್ತದೆಂದು ಬರೆದಿದ್ದರು. ಅಂತಹ ಹೋಲಿಕೆ ಆ ಸೂಫಿ ವಿದ್ವಾಂಸರ ಬಗ್ಗೆ ತೋರಬೇಕಾದ ಗೌರವಕ್ಕೆ ಸ್ವಲ್ಪ ಧಕ್ಕೆಯಾಗಿರಬಹುದೇನೋ ಎಂಬ ಭಾವವೂ ಆ ಕ್ಷಣ ನನ್ನನ್ನು ಕಾಡಿತು. ಆದರೂ, ಆ ಮೆಚ್ಚುಗೆಯ ಮಾತು ಮತ್ತು ನಾನು ಹಚ್ಚಿಕೊಂಡಿದ್ದ ಊದ್‌ನ ಗುಣಮಟ್ಟದಿಂದ ಸಂತೋಷಪಟ್ಟೆ.

ಅತ್ತರ್‌ಗಳನ್ನು ಮೆಚ್ಚುವ ಅನೇಕ ಸ್ನೇಹಿತರಿದ್ದಾರೆ. ಸುಗಂಧದ ಮೂಲಕವೇ ನಮ್ಮ ನಡುವೆ ಒಂದು ವಿಶಿಷ್ಟವಾದ ಬಾಂಧವ್ಯ ಬೆಳೆದಿದೆ. ಆದರೂ, ನಾನು ಇನ್ನೂ ಆ ಅತ್ತರ್‌ನ ಹುಡುಕಾಟದಲ್ಲಿದ್ದೇನೆ. ಅಬ್ದುಲ್ ಕರೀಮ್ ಮೌಲಾನ ಅವರನ್ನು ಮತ್ತೊಮ್ಮೆ ಭೇಟಿಯಾಗುವ ಅವಕಾಶ ನನಗೆ ಸಿಕ್ಕರೆ, ನಾನು ಅವರನ್ನು ಕೇಳುವ ಮೊದಲ ಪ್ರಶ್ನೆಯೇ ಹಲವು ವರ್ಷಗಳ ಹಿಂದೆ ಅವರು ನಮಗೆ ಉಡುಗೊರೆಯಾಗಿ ನೀಡಿದ್ದ ಆ ಸುಗಂಧದ ಬಗ್ಗೆ. ಕೆಲವೊಮ್ಮೆ ರಾತ್ರಿಗಳಲ್ಲಿ ಅದರ ಪರಿಮಳ ಹೇಗಿರಬಹುದೆಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಅದರ ನೆನಪು ಇನ್ನೂ ನನ್ನೊಳಗೇ ಬೇರೂರಿದೆ. ನಾನು ಅದನ್ನು ಮರೆತಿದ್ದೇನೆ ಎಂದು ನನಗೆ ಅನ್ನಿಸುವುದಿಲ್ಲ. ಇಂದಿಗೂ ಅನೇಕ ಸುಗಂಧಗಳನ್ನು ಕಂಡಾಗ, ‘ಇದು ಅದಲ್ಲ’ ಎಂದು ಧೈರ್ಯದಿಂದ ಹೇಳಬಲ್ಲೆ. ಆದರೂ, ಒಂದು ದಿನ ಆ ಸುಗಂಧ ಮತ್ತೆ ನನ್ನ ಕೈ ಸೇರುತ್ತದೆ ಎಂಬ ಭರವಸೆಯನ್ನು ನಾನು ಇನ್ನೂ ಕಳೆದುಕೊಂಡಿಲ್ಲ. ನನ್ನ ತಾಯಿಗೂ ಬಹಳ ಪ್ರಿಯವಾಗಿದ್ದ ಆ ಅಂಬರ್ ಅತ್ತರ್‌ನ್ನು ಕಂಡುಹಿಡಿದು, ಅದನ್ನು ಅವರಿಗೆ ಉಡುಗೊರೆಯಾಗಿ ನೀಡಿ ಅಚ್ಚರಿಗೊಳಿಸಬೇಕು ಎಂಬುದು ನನ್ನ ಆಸೆ.

– ಮುಹಮ್ಮದ್ ಅಲಿ ಜೌಹರ್
ಕನ್ನಡಕ್ಕೆ: ಮುಹಮ್ಮದ್ ಝೈನುದ್ದೀನ್



ಮುಹಮ್ಮದ್ ಅಲೀ ಜೌಹರ್ ಅವರು ಶಿವನಾಡರ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಡಾಕ್ಟರೇಟ್ ಸಂಶೋಧನಾ ವಿದ್ಯಾರ್ಥಿ. ಇವರು ಮಲಯಾಳಂನ ‘ತಿಬಾಕ್’ (tibaq.in) ಹಾಗೂ ಕನ್ನಡದ ‘ತಿಜೋರಿ’ (thijori.in) ಎಂಬ ಎರಡು ವೆಬ್ ಪೋರ್ಟಲ್‌ಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧರ್ಮದ ಸಮಾಜಶಾಸ್ತ್ರ‌ ಮತ್ತು ಥಿಯಾಲಜಿ ಇವರ ಆಸಕ್ತಿಯ ಕ್ಷೇತ್ರ.

Leave a Reply

*