ಇಸ್ಲಾಮಿಕ್ ದತ್ತಿ ಚಟುವಟಿಕೆಗಳ ಪ್ರಾಥಮಿಕ ಘಟ್ಟವು ಐತಿಹಾಸಿಕ ಹಿಜ್ರಾದ ಬಳಿಕ ಆರಂಭಗೊಂಡು ಅಬ್ಬಾಸಿಯ್ಯಾ ಆಡಳಿತಾವಧಿಯ ಆರಂಭಿಕ ವೇಳೆಯಲ್ಲಿ ಕೊನೆಗೊಳ್ಳುತ್ತದೆ. ಈ ಸಮಾಜಮುಖಿ ಸಂಸ್ಥೆಗಳು ಖುರ್ಆನ್ ಮತ್ತು ಪ್ರವಾದಿ ವಚನಗಳ ಆಧಾರದ ಮೇಲೆ ರೂಪುಪಡೆಯಿತು.
ಇಸ್ಲಾಮಿಕ್ ಇತಿಹಾಸದಲ್ಲಿ ವಕ್ಫ್ ವ್ಯವಸ್ಥೆಯು ಸಾಮಾನ್ಯ ಮುಸಲ್ಮಾನರ ಜೀವನದೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಹೊರತಾಗಿಯೂ, ವಕ್ಫ್ ಎಂಬ ಪರಿಕಲ್ಪನೆಯು ಖುರ್‌ಆನ್ ಮತ್ತು ಹದೀಸ್ ದಾಖಲೆಗಳಲ್ಲಿ ಎಲ್ಲಿಯೂ ಉಲ್ಲೇಖಿಸಲ್ಪಟ್ಟಿಲ್ಲ ಎನ್ನುವುದು ಆಶ್ಚರ್ಯಕರ ಸಂಗತಿ. ಮೂರನೆಯ ಶತಮಾನದ ಮಧ್ಯಭಾಗದಲ್ಲಿ ಕೆಲವು ಸಮಾಜಮುಖಿ ಚಟುವಟಿಕೆಗಳನ್ನು ವಕ್ಫ್ ಎಂಬ ಹೆಸರಿನಲ್ಲಿ ಸಮುದಾಯವು ವ್ಯಾಪಕವಾಗಿ ಬಳಸಲು ಪ್ರಾರಂಭಿಸಿತು. ಕೆಲವು ಖುರ್‌ಆನ್ ವ್ಯಾಖ್ಯಾನಕಾರರು ಖುರ್‌ಆನ್ ಪದಪ್ರಯೋಗಗಳ ಒಳಾರ್ಥಗಳಲ್ಲಿ ವಕ್ಫ್ ಅನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ.
“ನೀವು ಕಾಳಜಿವಹಿಸುವ ಸಂಪತ್ತಿನಲ್ಲಿ ನೀವು ಖರ್ಚು ಮಾಡದ ಹೊರತು ಯಾರೂ ಸಂಪೂರ್ಣವಾಗಿ ಧರ್ಮನಿಷ್ಠರಾಗುವುದಿಲ್ಲ” ಎಂಬ ಪೈಗಂಬರರ ಪ್ರವಚನವನ್ನು ಆಲಿಸಿದ ನಂತರ ಅವರ ಅನುಚರರ ಪೈಕಿ ಪ್ರಮುಖರಾಗಿದ್ದ ಅಬೂತಲ್ಹಾರವರು ತಾನು ಅತ್ಯಂತ ಪ್ರೀತಿಯಿಂದ ಪೋಷಿಸುತ್ತಿದ್ದ ಮದೀನಾದ ವಿಶಾಲ ಖರ್ಜೂರದ ತೋಟವನ್ನು ಬಡವರಿಗೆ ದಾನ ಮಾಡಿದರು. ಆರುನೂರಕ್ಕೂ ಹೆಚ್ಚು ಮರಗಳು ದಟ್ಟವಾಗಿ ಬೆಳೆದು ಉತ್ತಮ ಫಸಲು ನೀಡುತ್ತಿದ್ದ ತೋಟವನ್ನು ದಾನ ಮಾಡುವ ಮೂಲಕ ಅವರ ಆತ್ಯಂತಿಕ ಗುರಿ ನೈಜಭಕ್ತಿ ಮತ್ತು ಪರಲೋಕ ಯಶಸ್ಸು ಎಂಬುದನ್ನು ದೃಢೀಕರಿಸಿದರು. ಈ ಪುಣ್ಯ ಕಾರ್ಯವನ್ನು ಮಾಡಿ ಮನೆತಲುಪಿದಾಗ ತಾನು ಈಗಷ್ಟೇ ದಾನ ಮಾಡಿ ಬಂದ ತೋಟದಲ್ಲಿ ತನ್ನ ಹೆಂಡತಿ ಮತ್ತು ಮಗು ವಿಶ್ರಾಂತಿ ಪಡೆಯುತ್ತಿರುವುದನ್ನು ಕಂಡರು. ತಕ್ಷಣ ಅಬೂತಲ್ಹಾ ನಡೆದ ವಿಷಯವನ್ನು ವಿವರಿಸಿದರು. ತೋಟವನ್ನು ಯಾರ ಹೆಸರಿನಲ್ಲಿ ದಾನ ನೀಡಿದಿರಿ ಎಂಬ ಪತ್ನಿಯ ಪ್ರಶ್ನೆಗೆ ‘ನಮ್ಮ ಹೆಸರಿನಲ್ಲಿ’ ಎಂದು ಅಬೂತಲ್ಹಾ ಉತ್ತರಿಸಿದರು. ನಮ್ಮ ಮಧ್ಯೆ ಇರುವ ಬಡವರಿಗೆ ನಾವೇನು ಮಾಡಬಲ್ಲೆವು ಎಂದು ನಾನು ಸದಾ ಚಿಂತಿತಳಾಗಿದ್ದೆ. ಅಲ್ಲಾಹನು ನಿಮ್ಮ ಈ ಸತ್ಕರ್ಮವನ್ನು ಸ್ವೀಕರಿಸಲಿ ಎಂದು ಹಾರೈಸುತ್ತಾ ಆ ದಂಪತಿಗಳು ತೋಟದಿಂದ ಹೊರ ನಡೆದರು.
ಇತಿಹಾಸಕಾರರು ಈ ಐತಿಹಾಸಿಕ ಘಟನೆಯನ್ನು ಉಲ್ಲೇಖಿಸುತ್ತಾ ಇದು ಇಸ್ಲಾಮಿಕ್ ಇತಿಹಾಸದಲ್ಲಿ ನಡೆದ ಮೊದಲ ವಕ್ಫ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರವಾದಿವರ್ಯರ ಚರ್ಯೆಗಳನ್ನು ಗಮನಿಸಿದಾಗ ನಮಗೆ ವಕ್ಫ್ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗುತ್ತದೆ. ಇಹಲೋಕದಲ್ಲಿ ಮೂರು ವಿಚಾರಗಳನ್ನು ಬಾಕಿಯುಳಿಸಿ ಪೈಗಂಬರರು ಪರಲೋಕ ಯಾತ್ರೆಯಾದರು. ಹೇಸರಗತ್ತೆ, ಆಯುಧ ಮತ್ತು ದತ್ತಿ ಸೇವೆಗಳಿಗಾಗಿ ಮೀಸಲಿಟ್ಟ ಭೂಮಿ. ಪ್ರವಾದಿವರ್ಯರು ಇಸ್ಲಾಮಿಕ್ ದತ್ತಿ ಚಟುವಟಿಕೆಗಳ ವಿಧಾನಗಳನ್ನು ಉಮರ್ ಬಿನ್ ಖತ್ತಾಬರಿಗೆ ಕಲಿಸಿಕೊಟ್ಟರು. ತದನಂತರ ಪ್ರವಾದೀ ಅನುಚರರು ಪ್ರಸ್ತುತ ಕಲಿಸಿಕೊಟ್ಟ ವಿಧಾನದ ಆಧಾರದಲ್ಲಿ ವಕ್ಫ್ ಕರ್ಮವನ್ನು ಮಾದರಿಯಾಗಿಟ್ಟುಕೊಂಡರು. ಇಮಾಮ್ ಮಾಲಿಕ್ ಪೈಗಂಬರರ ಈ ಬೋಧನೆಯನ್ನು ‘ಅಹ್ಬಾಸ್’ ಎಂದು ಪರಿಚಯಿಸುತ್ತಾರೆ. ಉಮರ್ ಬಿನ್ ಖತ್ತಾಬರು ಪ್ರವಾದೀ ಸನ್ನಿಧಿಗೆ ಬಂದು ಕೇಳಿದರು; “ನನಗೆ ಖೈಬರ್‌ನಲ್ಲಿ ಒಂದಿಷ್ಟು ಭೂಮಿ ಇದೆ. ಅದು ನನಗೆ ಅತ್ಯಂತ ಪ್ರಿಯವಾದ ಭೂಮಿ. ಓ ಪ್ರವಾದಿಯರೇ, ನೀವು ನನಗೆ ನಿರ್ದೇಶಿಸಿರಿ, ನಾನು ಏನು ಮಾಡಬೇಕೆಂದು.”
“ನೀವು ಬಯಸಿದರೆ, ಅದರ ಬಂಡವಾಳವನ್ನು ಹೊರತುಪಡಿಸಿ ಲಾಭವನ್ನು ಸಾಮಾಜಿಕ ಕಲ್ಯಾಣ ಚಟುವಟಿಕೆಗಳಿಗಾಗಿ ವಿತರಣೆ ಮಾಡಿರಿ” ಪೈಗಂಬರರು ಪ್ರತ್ಯುತ್ತರಿಸಿದರು. ಬಳಿಕ ಉಮರ್ ರವರು ಖೈಬರ್ ಭೂಮಿಯಿಂದ ಪಡೆದ ಆದಾಯವನ್ನು ಬಡವರು, ಸಂಬಂಧಿಕರು, ಪ್ರಯಾಣಿಕರು, ಅತಿಥಿಗಳು, ಗುಲಾಮರ ವಿಮೋಚನೆ ಮತ್ತು ಮಿಲಿಟರಿ ಕಲ್ಯಾಣಕ್ಕಾಗಿ ವಿನಿಯೋಗಿಸಲಾರಂಭಿಸಿದರು ಎಂದು ಇಬ್ನ್ ಉಮರ್ ಉಲ್ಲೇಖಿಸಿದ್ದಾಗಿ ಕಾಣಬಹುದು.
ಈ ಮೇಲೆ ಉಲ್ಲೇಖಿಸಿದ ಐತಿಹಾಸಿಕ ಘಟನೆಗಳು ಪ್ರವಾದೀ ಅನುಚರರು ವಕ್ಫ್‌ನೊಂದಿಗೆ ಯಾವ ರೀತಿ ಸಂಬಂಧ ಹೊಂದಿದ್ದರು ಎಂಬುದನ್ನು ವಿವರಿಸುತ್ತದೆ. ತಮಗೆ ಅತ್ಯಂತ ಪ್ರಿಯವಾದ ಸಂಪತ್ತುಗಳಾಗಿದ್ದರೂ ಅವರು ಅದನ್ನು ದಾನ ಮಾಡಲು ತೋರಿದ ಉತ್ಸಾಹ ಖುರ್‌ಆನ್ ಮತ್ತು ಪ್ರವಾದೀ ವಚನಗಳು ಅವರ ಜೀವನವನ್ನು ಎಷ್ಟರ ಮಟ್ಟಿಗೆ ಸ್ವಾಧೀನಪಡಿಸಿದೆ ಎಂಬುವುದಕ್ಕಿರುವ ಉತ್ತಮ ನಿದರ್ಶನ.
ಇಲ್ಲಿ ಉಮರರಿಗೆ ಪೈಗಂಬರರು ನೀಡಿದ ಆಜ್ಞೆಯು, ನಮ್ಮ ಆಸ್ತಿಯು ಸಂಪೂರ್ಣವಾಗಿ ವಾರೀಸುದಾರರಿಗೆ ತಲುಪಿಸಲಿರುವ ಅಥವಾ ಮಾರಾಟ ಮಾಡುಲಿಕ್ಕಿರುವ ವಸ್ತುವಲ್ಲ ಬದಲಾಗಿ, ಅದು ನಮ್ಮ ಸುತ್ತಲು ವಾಸಿಸುತ್ತಿರುವ ಜನರಿಗೂ ಸೇರಿದ್ದಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇಸ್ಲಾಮಿಕ್ ಮಾನವಸೇವಾ ಪ್ರಕ್ರಿಯೆಗಳ ಎರಡು ಪ್ರಮುಖ ಅಂಶಗಳನ್ನು ಈ ಹದೀಸಿನಲ್ಲಿ ಉಲ್ಲೇಖಿಸಿದ ಘಟನೆ ಒತ್ತಿಹೇಳುತ್ತದೆ. ಬಂಡವಾಳವನ್ನು ತೆಗೆದಿಟ್ಟು ಆದಾಯವನ್ನು ಬಡವರ ಮಧ್ಯೆ ಹಂಚುವುದಾಗಿದೆ ಒಂದನೇ ದೃಷ್ಟಿಕೋನ. ವಕ್ಫ್ ಕರ್ಮದ ಸ್ವರೂಪಕ್ಕೆ ಸಂಬಂಧಿಸಿದ್ದಾಗಿದೆ ಮತ್ತೊಂದು. ಕಾನೂನಾತ್ಮಕವಾಗಿ ಮತ್ತು ವ್ಯಾವಹಾರಿಕವಾಗಿ ವ್ಯಾಪಾರ ಸರಕಿನಿಂದ ಮುಕ್ತವಾಗಿರುವುದು, ಪರೋಪಕಾರ ಸೇವೆಗಳಿಗೆ ಮಾತ್ರ ನಿಶ್ಚಯಿಸಲ್ಪಡುವುದು ಮುಂತಾದವುಗಳು ಗಮನಿಸಬೇಕಾದ ವಿಷಯಗಳು.
ಉಮರ್ ತನ್ನ ಮಗಳು ಹಫ್ಸಾಳನ್ನು ಕಾವಲುಗಾರಳನ್ನಾಗಿ ನೇಮಿಸಿದ್ದು ಒಂದು ಉದಾಹರಣೆಯಾಗಿದೆ. ಭಿಕ್ಷುಕರು, ನಿರ್ಗತಿಕರು ಮತ್ತು ಬಡ ಸಂಬಂಧಿಕರ ರಕ್ಷಣೆಯನ್ನು ವಹಿಸಿಕೊಂಡವರು ಇಳುವರಿಯನ್ನು ಅವರಿಗಾಗಿ ಖರ್ಚು ಮಾಡಬೇಕು. ಇಲ್ಲಿ ಸಂರಕ್ಷಕನ ಕೆಲಸಕ್ಕಿರುವ ವೇತನವನ್ನು ವಕ್ಫ್ ಮಾಡುವವರು ಪಾವತಿಸುವರು. ಇಲ್ಲದಿದ್ದರೆ, ಸಂರಕ್ಷಕನು ಆಡಳಿತಾಧಿಕಾರಿಯನ್ನು ಸಂಪರ್ಕಿಸಲು ಅವಕಾಶಗಳಿವೆ.
ಸಮಾಜಮುಖಿ ಚಳುವಳಿಗಳ ಆರಂಭಿಕ ಹಂತದ ನಂತರ ಮಸೀದಿ, ಗ್ರಂಥಾಲಯಗಳು ಸೇರಿ ಮದರಸಾಗಳು ಮತ್ತು ಅರೇಬಿಕ್ ಕಾಲೇಜುಗಳ ಹೆಸರಿನಲ್ಲಿ ವಕ್ಫ್ ಅಭಿವೃದ್ಧಿ ಹೊಂದಿತು. ಬೈತುಲ್-ಹಿಕ್ಮಾದ ನಂತರ, ಈ ಹಂತದ ವಕ್ಫ್ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಫಾತಿಮೀ ಖಲೀಫ ಅಲ್ – ಮುಯಿಸ್ ಕೈರೋ ಪಟ್ಟಣದಲ್ಲಿ ನಿರ್ಮಿಸಿದ ಅಲ್ – ಅಝ್ಹರ್ ಮಸೀದಿ ಮತ್ತು ಮದ್ರಸಾ (969/1562) ಒಳಪಟ್ಟಿದೆ. ಪ್ರವಾದೀ ಕುಟುಂಬಿಕರಾದ ಫಾತಿಮಾ ಅಲ್ – ಫಿಹ್ರಿಯಾ ಎಂಬ ಓರ್ವ ಮಹಿಳೆಯ ನೇತೃತ್ವದಲ್ಲಿ ನಿರ್ಮಿಸಲಾದ ಮೊರೊಕ್ಕೊದ ಫೆಝ್ ನಗರದಲ್ಲಿರುವ ಅಲ್-ಕರವಿಯ್ಯಿನ್ ವಿಶ್ವವಿದ್ಯಾನಿಲಯ ಮತ್ತು ಮಸೀದಿ (859/1455), ಅವರ ಸಹೋದರಿ ಮರಿಯಂ ಅಲ್-ಫಿಹ್ರಿಯಾ ನಿರ್ಮಿಸಿದ ಅಂದಲೂಸ್ ಮಸೀದಿ, ಬಗ್ದಾದಿನಲ್ಲಿ ನಿಜಾಮ್ ಅಲ್-ಮುಲ್ಕ್ ನೇತೃತ್ವದಲ್ಲಿ ಸ್ಥಾಪಿಸಲಾದ ನಿಝಾಮಿಯ್ಯಾ ಮದರಸ (1065/1654) ಮುಂತಾದವುಗಳು ವಕ್ಫ್ ಜಮೀನಿನ ಜಾಗತಿಕ ಕೊಡುಗೆಗಳಾಗಿವೆ.
ಇಂತಹಾ ಧಾರ್ಮಿಕ ಕೇಂದ್ರಗಳು ಮುಸ್ಲಿಂ ಸಾಕ್ಷರ ಸಮಾಜವನ್ನು ನಿರ್ಮಿಸಿ, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ತತ್ವ ಮತ್ತು ಸಿದ್ಧಾಂತಗಳ ಅತ್ಯಂತ ಸೃಜನಶೀಲ ವಿನಿಮಯವನ್ನು ನಡೆಸಲು ಸಹಕಾರಿಯಾಯಿತು. ಇದು ಮುಸಲ್ಮಾನರಿಗೆ ಶೈಕ್ಷಣಿಕ ಬಲವನ್ನು ನೀಡುವುದರೊಂದಿಗೆ ಸಮೃದ್ಧ ದಿನಗಳನ್ನು ಆಶೀರ್ವದಿಸಿತು. ಆಡಳಿತಗಾರರ ಮತ್ತು ಪ್ರಜೆಗಳ ಸ್ವಹಿತಾಸಕ್ತಿಯಿಂದ ನಡೆದ ಇಂತಹ ಮಹಾದಾನಗಳು ವಿವಿಧ ರೀತಿಯ ವಕ್ಫ್‌ಗಳತ್ತ ಜನರನ್ನು ಪ್ರೇರೇಪಿಸಿ, ವಕ್ಫ್ ಆಚರಣೆಗಳಿಗೆ ಹೊಸ ಆಯಾಮವನ್ನು ನೀಡಿತು. ಮುಸ್ಲಿಂ ಸ್ತ್ರೀ-ಶಿಕ್ಷಣದ ಪ್ರಗತಿಗೆ ಚಾಲಕ ಶಕ್ತಿಯಾಗುವಲ್ಲಿ ಮಾತ್ರವಲ್ಲದೆ, ಶಿಲುಬೆಯುದ್ಧ, ಮಂಗೋಲಿಯನ್ ಆಕ್ರಮಣದ ನಂತರದ ಸಮಾಜವನ್ನು ಪುನರುಜ್ಜೀವನಗೊಳಿಸುವಲ್ಲಿ ಈ ವಕ್ಫ್ ದಾನಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಸೂಫೀ ಕೇಂದ್ರಗಳು, (ಝಾವಿಯಾ/ತಕಿಯಾ/ಖಾನ್’ಕಾಹ್) ಪ್ರಯಾಣಿಕರ ವಸತಿಗೃಹಗಳು, ಸಾರ್ವಜನಿಕ ಶೌಚಾಲಯಗಳು, ಮಹಿಳಾ ಕಲ್ಯಾಣ ಕೇಂದ್ರಗಳು, ದರ್ಗಾ ಸಂರಕ್ಷಣೆ, ಆಸ್ಪತ್ರೆಗಳು, ಪಶುವೈದ್ಯಕೀಯ ಸೇವೆಗಳು, ಪ್ರವಾಸೀ ವಿಶ್ರಾಂತಿ ಕೊಠಡಿಗಳು, ಗ್ರಂಥಾಲಯಗಳು, ಸಾರ್ವಜನಿಕ ನಲ್ಲಿಗಳು, ಅನಾಥಾಶ್ರಮಗಳು, ಸ್ಮಶಾನಗಳು, ಸಣ್ಣ ಮಕ್ಕಳಿಗೆ ಖುರ್ಆನಿನ ಪ್ರಾಥಮಿಕ ಜ್ಞಾನವನ್ನು ಕಲಿಸುವ ಮಸೀದಿಗಳ ಪಕ್ಕದಲ್ಲೇ ನಿರ್ಮಿಸಲಾದ ಪ್ರಾಥಮಿಕ ಶೈಕ್ಷಣಿಕ ಕೇಂದ್ರಗಳು, ದತ್ತಿ ಉದ್ದೇಶಗಳಿಗಾಗಿ ವಿಶೇಷವಾಗಿ ನಿರ್ಮಿಸಲಾದ ಸಾಂತ್ವನ ಕೇಂದ್ರಗಳು (ಗುಲಾಮರನ್ನು ಮುಕ್ತಗೊಳಿಸುವುದು, ಬಡವರಿಗೆ ಆಹಾರ ನೀಡುವುದು, ಸಾಲಗಳನ್ನು ತೀರಿಸುವುದು, ಹಬ್ಬದ ಉಡುಗೊರೆಗಳ ವಿತರಣೆ, ಮರಣೋತ್ತರ ಕರ್ಮ ನಿರ್ವಹಣೆ) ಇತ್ಯಾದಿಗಳು ವಕ್ಫ್‌ಗಳು ಹೆಚ್ಚು ಸಕ್ರಿಯವಾಗಿದ್ದ ವೇಳೆಯ ಪ್ರಮುಖ ಕೊಡುಗೆಗಳು.
ತಮ್ಮ ಡಮಾಸ್ಕಸ್ ಕಡೆಗಿನ ಪ್ರಯಾಣದ ಮಧ್ಯೆ ಕಂಡ ವಕ್ಫ್ ಕೇಂದ್ರಗಳ ಸವಿಶೇಷತೆಗಳನ್ನು ಇಬ್ನ್ ಬತೂತ ಈ ರೀತಿ ವಿವರಿಸುತ್ತಾರೆ; ‘ಬೃಹತ್ ವೆಚ್ಚದಲ್ಲಿ ನಿರ್ಮಿಸಿದ ಹಲವು ವಕ್ಫ್ ಕೇಂದ್ರಗಳನ್ನು ನಾನು ಕಂಡೆ. ವಿದೇಶೀ ಯಾತ್ರಿಕರಿಗೆ ಸೇವೆ ಒದಗಿಸುವ ಕೇಂದ್ರಗಳಾಗಿ ಅವು ಕಾರ್ಯನಿರ್ವಹಿಸುತ್ತಿದ್ದವು. ಮಹಿಳಾ ವಿವಾಹ ಕಲ್ಯಾಣ ಕೇಂದ್ರಗಳು, ಜೈಲಿನಲ್ಲಿ ಸೆರೆಯಾದವರ ಬಿಡುಗಡೆಗೆ ಕ್ರಮ, ನಗರದಲ್ಲಿ ರಸ್ತೆ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುವ ಸಮಿತಿಗಳು ಹೀಗೆ ವಿವಿಧ ರೀತಿಯ ವಕ್ಫ್ ಕೇಂದ್ರಗಳಿವೆ. ಡಮಾಸ್ಕಸ್‌ನಲ್ಲಿ ಪಾದಚಾರಿಗಳಿಗೆ ವಿಶೇಷ ರಸ್ತೆಗಳಿರಲಿಲ್ಲ. ಚಲಿಸುವ ವಾಹನಗಳ ಎಡೆಯಲ್ಲಿ ನಡೆಯುವುದೊಂದೇ ದಾರಿ. ಒಂದು ದಿನ ನಾನು ಡಮಾಸ್ಕಸ್‌ನ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಗುಲಾಮ ಹುಡುಗನ ಕೈಯಿಂದ ಚೈನೀಸ್ ನಿರ್ಮಿತ ಮಣ್ಣಿನ ಮಡಿಕೆ ಬಿದ್ದು ಒಡೆಯುವುದನ್ನು ಕಂಡೆ. ತಕ್ಷಣವೇ ಅವನ ಸುತ್ತಲೂ ಜನರು ಜಮಾಯಿಸಿದರು. ಗುಂಪಿನಲ್ಲೊಬ್ಬರು ಹೇಳಿದರು; ‘ಆ ಮುರಿದ ತುಂಡುಗಳನ್ನು ತೆಗೆದುಕೊಂಡು ವಕ್ಫ್ ಆಸ್ತಿ ನೋಡಿಕೊಳ್ಳುವ ವ್ಯಕ್ತಿಯ ಬಳಿಗೆ ಹೋಗೋಣ. ಹಾಗೆ ಪರಿಪಾಲಕನ ಬಳಿ ಹೋದಾಗ ಹರಿದ ದಾಖಲೆ ಪತ್ರ ಪಡೆದು ಬದಲಿಸಿ ಕೊಟ್ಟು ಕಳಿಸಿದರು.’
ಫಲಾನುಭವಿಗಳನ್ನು ಪರಿಗಣಿಸುವಾಗ ಎರಡು ರೀತಿಯ ವಕ್ಫ್ ವ್ಯವಸ್ಥೆಗಳು ಅಸ್ತಿತ್ವದಲ್ಲಿತ್ತು. ಸಾರ್ವಜನಿಕ ವಕ್ಫ್‌ಗಳು ಮತ್ತು ಖಾಸಗಿ ವಕ್ಫ್‌ಗಳು. ಒಪ್ಪಂದದ ಸಮಯದಲ್ಲಿ ಸಾರ್ವಜನಿಕ ವಕ್ಫ್ ಸಾರ್ವಜನಿಕರನ್ನು ಒಳಗೊಂಡಿದ್ದರೆ, ಖಾಸಗಿ ವಕ್ಫ್‌ಗಳು ಬಡವರು, ಅನಾಥರು ಮತ್ತು ಸಮಾಜದ ಒಂದು ವರ್ಗದ ಮೇಲೆ ಕೇಂದ್ರೀಕೃತವಾಗಿತ್ತು. ವಕ್ಫ್ ಫಲಾನುಭವಿಗಳು ಸಾಮಾನ್ಯವಾಗಿ ಸಮಾಜದ ಕೆಳಸ್ತರದಲ್ಲಿ ಉಳ್ಳವರಾಗಿದ್ದರೂ, ವಕ್ಫ್‌ನ ರಚನೆಯು ಶ್ರೀಮಂತರನ್ನು ಒಳಗೊಳ್ಳುವಷ್ಟು ವಿಶಾಲವಾಗಿತ್ತು. ಹೀಗಾಗಿ, ಪ್ರಯಾಣಿಕರಿಗಾಗಿ ವಕ್ಫ್ ಮೂಲಕ ನಿರ್ಮಿಸಲಾದ ವಿಶ್ರಾಂತಿ ಕೊಠಡಿಗಳಲ್ಲಿ ಶ್ರೀಮಂತ ಮತ್ತು ಬಡ ಪ್ರಯಾಣಿಕರು ಒಂದೇ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ವಕ್ಫ್ ಆಸ್ತಿಯ ಅನುಕೂಲ ಪಡೆಯುವ ನಿಟ್ಟಿನಲ್ಲಿ ಇಲ್ಲಿ ಕಡುಬಡತನ ಅನುಭವಿಸುವವರು ಮತ್ತು ಸಂಪತ್ತನ್ನು ಅತಿಯಾಗಿ ಸಂಗ್ರಹಿಸಿ ಜೀವಿಸುವವರು ಯಾರೂ ಇಲ್ಲ. ಎಲ್ಲರೂ ವಕ್ಫ್ ದಾನಿಗಳು ಮತ್ತು ಸ್ವೀಕರಿಸುವವರು ಎಂಬ ರಚನೆಯ ಒಳಗೆ ಸೇರುತ್ತಾರೆ.
ಅರೇಬಿಕ್ ಅಕ್ಷರಮಾಲೆಯ ‘ವಾವ್’ ಅಕ್ಷರವು ಈ ಸಾರಾಂಶವನ್ನು ತಿಳಿಸುತ್ತದೆ. ಮೂರು ವಾವ್‌ಗಳನ್ನು ಇಲ್ಲಿ ಆಲಂಕಾರಿಕವಾಗಿ ಪರಿಚಯಿಸಲಾಗುವುದು. ಮೊದಲನೆಯದು ‘ವಲ್ಲಾಹಿ’ (ಈ ವಕ್ಫ್ ಅಲ್ಲಾಹನ ನಾಮದಲ್ಲಾಗಿದೆ) ಎಂಬುವುದನ್ನೂ, ಎರಡನೆಯದು ‘ವಲಿಯ್ಯ್’ (ನಿರ್ವಾಹಕ ಮತ್ತು ಅವನ ಮೇಲಿನ ನಂಬಿಕೆ) ಎಂಬುದನ್ನು ಉಲ್ಲೇಖಿಸಿದರೆ, ಮೂರನೆಯದು ‘ವಕ್ಫ್’ ಎಂಬ ದಾನಧರ್ಮ ಕಾರ್ಯವನ್ನೇ ಸೂಚಿಸುತ್ತದೆ.
ಅರೇಬಿಕ್’ ಲಿಪಿಯಲ್ಲಿ ಸಾಮಾನ್ಯವಾಗಿ ‘ವಾವ್’ ಎಂಬ ಅಕ್ಷರವನ್ನು ಎರಡು ರೀತಿಯಲ್ಲಿ ಬರೆಯಲಾಗುತ್ತದೆ. ಒಂದು ಅಕ್ಷರದ ಕೊನೆಯನ್ನು ಕೆಳಗಡೆ ಎಳೆದು ಬರೆಯುವುದು, ಅಕ್ಷರದ ತುದಿಯು ವಕ್ರವಾಗಿ ಅಕ್ಷರವನ್ನು ನೇರವಾಗಿ ಸಂಧಿಸುವ ರೀತಿ ಮತ್ತೊಂದು. ಇಲ್ಲಿ ವಕ್ಫ್ ಮೂಲಕ ಆಸ್ತಿಯನ್ನು ಇನ್ನೊಬ್ಬರಿಗೆ ನೀಡಿ ನಮ್ಮ ಮಾಲೀಕತ್ವವನ್ನು ಬಿಟ್ಟುಕೊಡುವುದು ಮೊದಲ ವಿಧಾನವಾದರೆ, ವಕ್ಫ್ ಮೂಲಕ ಇನ್ನೊಬ್ಬರಿಂದ ಆಸ್ತಿಯನ್ನು ಪಡೆಯುವುದು ಎರಡನೆಯ ವಿಧಾನ. ವಕ್ಫ್ ಎಂಬ ಸಮಾಜಮುಖಿ ಚಟುವಟಿಕೆಯು ಸೃಷ್ಟಿಕರ್ತ, ಜನರು, ಸಂಪತ್ತು ಮತ್ತು ಕಲ್ಯಾಣ ಇವುಗಳ ಮಧ್ಯೆ ಪರಸ್ಪರ ಸಂಬಂಧಗಳನ್ನು ಹೆಣೆದುಕೊಂಡಿದ್ದು, ಸಮುದಾಯದಲ್ಲಿ ಜವಾಬ್ದಾರಿಯುತ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ ಮತ್ತು ಜಗತ್ತನ್ನು ಹೇಗೆ ಉತ್ತಮ ಸ್ಥಳವನ್ನಾಗಿ ಮಾಡಬೇಕೆಂದು ಮುಸಲ್ಮಾನರಿಗೆ ಕಲಿಸಿ ಕೊಡುತ್ತದೆ. ಈ ಅವಧಿಯಲ್ಲಿ ದತ್ತಿ ಚಟುವಟಿಕೆಗಳು ಅದರ ಉತ್ತುಂಗವನ್ನು ತಲುಪಿ, ನಂತರ ಒಟ್ಟೋಮನ್ ಸಾಮ್ರಾಜ್ಯದ ದ್ವಿತೀಯಾರ್ಧದಲ್ಲಿ ವಿವಾದಾತ್ಮಕ ರೀತಿಯಲ್ಲಿ ಎಲ್ಲಾ ಭೂಮಿಗಳು ನಗದು ರೂಪ ಪಡೆದವು.
20 ನೆಯ ಶತಮಾನವು ಕೆಲವು ಅಪಾಯಕಾರಿ ದುರಂತಗಳ ಕಾಲವಾಗಿತ್ತು. ಎರಡು ಜಾಗತಿಕ ಮಹಾಸಮರಗಳು, ಮಹಾ ಆರ್ಥಿಕ ಕುಸಿತ (1929-1934), ಶೀತಲ ಸಮರ (1947-1991), ಗಲ್ಫ್ ವಾರ್ (1990-1991) ಮತ್ತು ಬೋಸ್ನಿಯನ್ ನರಮೇಧ (1992-1995) ದಂತಹ ದುರಂತಗಳ ಮೂಲಕ ಲಕ್ಷಾಂತರ ಸಾವು-ನೋವುಗಳಿಗೆ ಈ ಶತಮಾನ ಸಾಕ್ಷಿಯಾಯಿತಲ್ಲದೆ ಇದು ಸಮಾಜದಲ್ಲಿ ಮಾನಸಿಕ ಆಘಾತವನ್ನು ಸೃಷ್ಟಿಸಿತು. ಈ ಆಘಾತವು ಮುಸಲ್ಮಾನರನ್ನು ಇನ್ನೂ ಆಳವಾಗಿ ಘಾಸಿಗೊಳಿಸಿತು. ಸಮಾಜದ ಇಂತಹಾ ಜನರಿಗೆ ಆಸರೆಯಾಗುವುದಾಗಿತ್ತು ಇಸ್ಲಾಮಿಕ್ ದತ್ತಿ ಸೇವೆಗಳ ಮೂಲ ಉದ್ದೇಶ. ಆ ನಿಟ್ಟಿನಲ್ಲಿ ದತ್ತಿ ಸಂಸ್ಥೆಗಳು ಸಮಾಜದ ಧಾರ್ಮಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಶ್ರಮಿಸಿದೆ.
ಇಸ್ಲಾಮಿಕ್ ಸಂಸ್ಕೃತಿಯನ್ನು ಹೆಚ್ಚು ಸೊಗಸಾಗಿ ಮತ್ತು ಸಾರ್ವತ್ರಿಕವಾಗಿ ಬದಲಾಯಿಸಿದ್ದು ಈ ರೀತಿಯ ದಾನ – ಧರ್ಮಗಳ ಸಾಂತ್ವನ ಸಮೂಹಗಳಾಗಿವೆ. ಇಂತಹಾ ಪರಸ್ಪರ ಬೆರೆತು ಜೀವಿಸುವ ಪ್ರಕ್ರಿಯೆಯಲ್ಲಿ ವಕ್ಫ್ ಸಂಸ್ಥೆಯ ಪಾತ್ರ ಅಪಾರ. ಇತರರ ಕಲ್ಯಾಣಕ್ಕಾಗಿ ತಾವು ತಮಗೆ ಪ್ರಿಯವಾದುದನ್ನು ನೀಡುವಾಗ, ಕೇವಲ ನೀನು ಮತ್ತು ನಾನು ಮಾತ್ರವಲ್ಲ ಅಕ್ಷರಶಃ ಈ ಪ್ರಪಂಚವೇ ಪವಿತ್ರಗೊಳ್ಳುತ್ತದೆ.
ಮಲಬಾರ್ ಪ್ರದೇಶಕ್ಕೆ ಹಳರಮೀ ಸಯ್ಯಿದರುಗಳ ವಲಸೆಯು ಹಿಂದೂ ಮಹಾಸಾಗರದ ಇನ್ನಿತರ ಕರಾವಳಿ ಪ್ರದೇಶಗಳಲ್ಲಿ ಘಟಿಸಿದ ಹಾಗೆ ಮಲಬಾರ್ ಮುಸ್ಲಿಮರ ಜೀವನ ಮತ್ತು ಸಂಸ್ಕೃತಿಯಲ್ಲಿ ಮಹತ್ತರವಾದ ಬದಲಾವಣೆಗಳನ್ನುಂಟು ಮಾಡಿತು. ಪ್ರಮುಖವಾಗಿ ಅವರ ವಲಸೆಯು ಕೇರಳದ ಉತ್ತರದಿಂದ ಹಿಡಿದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡ ಮಲಬಾರ್ ಪ್ರದೇಶಕ್ಕಾಗಿತ್ತು. ಅಲ್ಲಿನ ಆಡಳಿತಗಾರರು ಮಧ್ಯಪ್ರಾಚ್ಯದಿಂದ ವಲಸೆ ಬಂದವರೊಂದಿಗೆ ಬಹಳ ಸೌಹಾರ್ದಯುತವಾಗಿ ವರ್ತಿಸುತ್ತಿದ್ದರು. ಸಾಮೂದಿರಿ (ಕಲ್ಲಿಕೋಟೆಯ ದೊರೆಗಳು) ಮತ್ತು ವೆಲ್ಲತಿರಿ ರಾಜ ಮನೆತನ (ವಳ್ಳುವನಾಡಿನ ಆಡಳಿತಗಾರರು) ಮತ್ತು ಉತ್ತರ ಮಲಬಾರಿನ ಕೋಲತಿರಿ ವಂಶಸ್ಥರು ಸ್ವತಃ ತಮ್ಮ ದೇಶಗಳಲ್ಲಿ ವಿದೇಶಿ ವ್ಯಾಪಾರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ವಿಶೇಷವಾಗಿ ಅರಬ್ ದೇಶಗಳಿಂದ ಬಂದವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದರು. ಸಮಾನತೆ ಮತ್ತು ನ್ಯಾಯ ಇವೆರಡೂ ಸಾಮೂದಿರಿ ದೊರೆಗಳ ಆಳ್ವಿಕೆಯ ಮುಖ ಮುದ್ರೆಯಾಗಿತ್ತು.
ಅವರು ತಮ್ಮ ಪ್ರಜೆಗಳಿಗೆ ನೀಡುತ್ತಿದ್ದ ವ್ಯಕ್ತಿ ಮತ್ತು ಆಸ್ತಿಯ ಸಂಪೂರ್ಣ ಭದ್ರತಾ ವ್ಯವಸ್ಥೆಯು ಅರಬ್ಬರ ಪ್ರಾಬಲ್ಯ ಹೊಂದಿರುವ ಅನೇಕ ವ್ಯಾಪಾರೀ ಸಮುದಾಯಗಳು ಕ್ಯಾಲಿಕಟ್‌ಗೆ ಆಕರ್ಷಿತರಾಗಲು ಕಾರಣವಾಯಿತು. ಪೋರ್ಚುಗೀಸ್ ಬರಹಗಾರ ಬಾರ್ಬೊಸಾ ಹೇಳಿದಂತೆ, “ರಾಜನು ಪ್ರತಿಯೊಬ್ಬರಿಗೂ (ಮೂರಿಶ್ ವ್ಯಾಪಾರಿಗೆ) ಒಬ್ಬ ನಾಯರನ್ನು ಕಾವಲು ಹಾಗೂ ಸೇವೆ ಮಾಡಲು, ಒಬ್ಬ ಚೆಟ್ಟಿ ಬರಹಗಾರನನ್ನು ಲೆಕ್ಕಪರಿಶೋಧನೆ ಹಾಗೂ ಆಸ್ತಿಯನ್ನು ನೋಡಿಕೊಳ್ಳಲು ಮತ್ತು ವ್ಯಾಪಾರಕ್ಕಾಗಿ ದಲ್ಲಾಳಿಯನ್ನು ನೇಮಿಸಿ ಕೊಟ್ಟನು.” ಇದು ಸಾಮೂದಿರಿ ದೊರೆಗಳ ನಡುವೆ ಸ್ನೇಹವನ್ನು ಬೆಳೆಸಿತು. ಎಷ್ಟರಮಟ್ಟಿಗೆ ಅರಬ್ಬರೊಂದಿಗಿನ ಸ್ನೇಹ ಗಾಢವಾಯಿತು ಎಂದರೆ ಒಂಬತ್ತನೇ ಶತಮಾನದಲ್ಲಿ ಸಾಮೂದಿರಿ ವಂಶಸ್ಥರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು ಮತ್ತು ಕಅಬಾಕ್ಕೆ ಖಿಲ್’ಅವನ್ನು ನೀಡಿದರು ಎಂದು ಹೇಳಲಾಗುತ್ತದೆ.
ಸೂಫಿಸಂ ಜಾಗತಿಕವಾಗಿ ವ್ಯಾಪಿಸತೊಡಗಿದಾಗ ಅನೇಕ ಹಳರಮೀ ಸೂಫಿಗಳು ಮತ್ತು ಅರಬ್ ವ್ಯಾಪಾರಸ್ಥರು ಇಲ್ಲಿಗೆ ವಲಸೆ ಬಂದು ತಮ್ಮ ಧರ್ಮಶಾಲೆಗಳನ್ನು ನಿರ್ಮಿಸಿದರು. “ಸೂಫಿಗಳು ಹಾಗೂ ಅರಬ್ ಮುಸ್ಲಿಮರು ವಾಸಿಸಲು ಕಲ್ಲಿಕೋಟೆಯಲ್ಲಿ ವಿಶೇಷ ಭವನಗಳನ್ನು ನಿರ್ಮಿಸಲಾಯಿತು” ಎಂದು ಇಬ್ನ್ ಬತೂತ ಉಲ್ಲೇಖಿಸುತ್ತಾರೆ. ಪರ್ಷಿಯಾದ ಶೀರಾಝಿನ ಶೈಖ್ ಒಬ್ಬರು ಅಬೂ ಇಸ್ಹಾಕ್ ಗಝರೂನಿ ಎಂಬ ಹೆಸರಿನಲ್ಲಿ ಸೂಫಿ ಭವನವನ್ನು ನಿರ್ಮಿಸಿ ಶೈಖ್ ಶಿಹಾಬುದ್ದೀನ್ ಗಝರೂನಿಯನ್ನು ಮುಖ್ಯಸ್ಥರಾಗಿ ನೇಮಿಸಿದರು ಹಾಗೂ ‘ಗಝರೂನಿಯ್ಯಾ’ ಎಂಬ ಸೂಫಿ ಪಂಗಡವನ್ನು ಅವರ ಹೆಸರಿನಲ್ಲಿ ಪ್ರಾರಂಭಿಸಿದರು. ಭಾರತ ಮತ್ತು ಚೀನಾಕ್ಕೆ ಸಮುದ್ರಯಾನದಲ್ಲಿನ ಅಪಾಯಗಳ ವಿರುದ್ಧ ರಕ್ಷಣೆ ಅವರ ಪ್ರಮುಖ ಕೊಡುಗೆಗಳು ಎಂದು ನಂಬಲಾಗಿದೆ. ಚೀನಾದ ಝೈತುನ್‌ನಲ್ಲಿ ಅವರ ಹೆಸರಿನಲ್ಲಿ ಒಂದು ಧಾರ್ಮಿಕ ಕ್ಷೇತ್ರ ನಿರ್ಮಿಸಲಾಗಿದೆ.
ಬಾ ಅಲವಿಗಳು ಭಾರತಕ್ಕೆ :
ಬಾ-ಅಲವಿ ಹಳರಮೌತಿನ ಸಯ್ಯದ್ ವಂಶಸ್ಥರ ಪೈಕಿ ಪ್ರಮುಖ ಕುಟುಂಬ. ಸಾಮೂದಿರಿಗಳು ಮುಸ್ಲಿಮರೊಂದಿಗೆ ಬೆಳೆಸಿದ ಸಂಬಂಧದ ಫಲವಾಗಿ ಹಳರಮೌತಿನ ಶ್ರೇಷ್ಠ ಪ್ರವಾದೀ ವಂಶಸ್ಥರಾದ ಬಾ-ಅಲವಿ ಕುಟುಂಬದ ಶೈಖ್ ಸಯ್ಯದ್ ಜಿಫ್ರಿಯವರು 1746 ರಲ್ಲಿ ಕ್ಯಾಲಿಕಟ್‌ಗೆ ಬಂದು ನೆಲೆಸಿದರು. ಅವರನ್ನು ಮುಹ್ಯದ್ದೀನ್ ಬಿ, ಕ್ಯಾಲಿಕಟ್‌ನ ಖಾಝಿ ಅಬ್ದುಸ್ಸಲಾಂ ಮತ್ತು ಸಾಮೂದಿರಿ ದೊರೆ ಮಾನವವಿಕ್ರಮನ್ ಮುಂತಾದವರು ಸ್ವಾಗತಿಸಿದರು. ರಾಜನು ಕ್ಯಾಲಿಕಟ್‌ನಲ್ಲಿ ನೆಲೆಸಲು ಶೈಖ್‌ಗೆ ವಿನಂತಿಸಿದನು ಮತ್ತು ಅವರಿಗೆ ಕಲ್ಲೈನದಿಯ ದಡದಲ್ಲಿ ತೆಂಗಿನ ತೋಪು ಹಾಗೂ ಕುಟ್ಟಿಚಿರಾದ ಬಳಿ ಜಮೀನು ಮತ್ತು ಮನೆಯನ್ನು ನೀಡಿದನು. ಜೊತೆಗೆ ರಾಜ್ಯದ ಎಲ್ಲಾ ರೀತಿಯ ತೆರಿಗೆಗಳಿಂದ ವಿನಾಯಿತಿಯನ್ನು ನೀಡಿ ವಿಶೇಷ ಸ್ಥಾನಮಾನ ಘೋಷಿಸಿ ಗೌರವಿಸಿದನು. ಶೈಖ್ ಜಿಫ್ರಿ ತಮ್ಮ ಸಹೋದರ ಹಸನ್ ಜಿಫ್ರಿರವರ ಜೊತೆ 1754 ರಲ್ಲಿ ಕ್ಯಾಲಿಕಟ್ ತಲುಪಿದರು. ನಂತರ ಅವರು ತಿರೂರಙಾಡಿ ಬಳಿ ನೆಲೆಸಿದರು. ಜಿಫ್ರಿ ಮತ್ತು ಇತರ ಬಾ-ಅಲವಿ ಸಯ್ಯಿದ್ ಕುಟುಂಬಗಳಿಂದ ಹೆಚ್ಚಿನ ಸದಸ್ಯರು ಮಲಬಾರಿಗೆ ವಲಸೆ ಬಂದು ವಿವಿಧ ಭಾಗಗಳಲ್ಲಿ ನೆಲೆಸಿದರು. ಕೊಯಿಲಾಂಡಿ ಹಳರಮೌತ್ ಸಯ್ಯಿದ್ ಕುಟುಂಬಗಳ ಕೇಂದ್ರವಾಯಿತು. ಕೊಯಿಲಾಂಡಿ, ಪಂತಲಾಯನಿ, ಕಡಲುಂಡಿ, ಪೊನ್ನಾನಿ, ಮಲಪ್ಪುರಂ, ಪರಪ್ಪನಂಗಾಡಿ, ತಿರೂರಂಗಾಡಿ, ಚಾಲಿಯಮ್, ಕುಟ್ಟಾಯಿ, ಚಾವಕ್ಕಾಡ್, ಕಣ್ಣೂರು, ವಲಪಟ್ಟಣಂ, ಕಪ್ಪಾಡ್ ಮತ್ತು ಕೊಚ್ಚಿ ಬಾ-ಅಲವಿ ಸಯ್ಯಿದರ ಪ್ರಮುಖ ಕೇಂದ್ರಗಳಾದವು. ಈ ಎಲ್ಲಾ ಸ್ಥಳಗಳಲ್ಲಿ ಅವರು ಸೂಫೀ ಕೇಂದ್ರಗಳನ್ನು ಪ್ರಾರಂಭಿಸಿದರು ಮತ್ತು ಸಾಮಾನ್ಯ ಜನರಿಗೆ ಆಧ್ಯಾತ್ಮಿಕ ನೆರಳನ್ನು ನೀಡುವ ಮೂಲಕ ಸೇವೆ ಸಲ್ಲಿಸಿದರು.
ಮಲಬಾರಿನಲ್ಲಿ ಅವರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳನ್ನು ಗುಣಪಡಿಸಲು ಆಧ್ಯಾತ್ಮಿಕತೆಯ ಒಂದು ಶಾಖೆಯಾದ ಇಲ್ಮ್ ಅಲ್-ರೂಹಾನಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆಯನ್ನು (ಅಲ್ ರುಕ್’ಯಾ ಅಥವಾ ಸಿಮಿಯಾ) ಪ್ರಯೋಗ ಮಾಡುತ್ತಾರೆ. ಇದು ಅವರ ಕುಟುಂಬದ ಸದಸ್ಯರ ಮಧ್ಯೆ ಹಸ್ತಾಂತರಗೊಳ್ಳುವ ಒಂದು ರೀತಿಯ ರಹಸ್ಯ ಜ್ಞಾನವಾಗಿತ್ತು. ಆಧ್ಯಾತ್ಮಿಕ ಚಿಕಿತ್ಸೆಯನ್ನು ಅಭ್ಯಾಸ ಮಾಡಲು ಒಬ್ಬರು ಹಿರಿಯರು ಅಥವಾ ಮಾರ್ಗದರ್ಶಿ (ಮುರ್ಷಿದ್) ಯಿಂದ ಸಮ್ಮತಿಯನ್ನು (ಇಜಾಝ) ಪಡೆಯಬೇಕು. ಸಾಧಕರು ಧರ್ಮದ ನಿಯಮಗಳಿಗೆ ಬದ್ಧರಾಗಿರಬೇಕು ಮತ್ತು ದುಶ್ಚಟಗಳಿಂದ ದೂರವಿರಬೇಕು. ಸಾಮಾನ್ಯ ಜನರು ಮಾನಸಿಕ ಒತ್ತಡ ಮತ್ತು ಚಿಂತೆಗಳು ಅಥವಾ ದೈಹಿಕ ಸಮಸ್ಯೆಗಳಿಂದ ತಮ್ಮನ್ನು ಮುಕ್ತಿಗೊಳಿಸಲು ಈ ಸೂಫಿಗಳನ್ನು ಭೇಟಿ ಮಾಡುತ್ತಿದ್ದರು. ಕೆಲವು ಖುರ್ ಆನ್ ಸೂಕ್ತಗಳನ್ನು ಅಥವಾ ದೈವ ನಾಮಗಳನ್ನು(ಅಸ್ಮಾ) ಪಠಿಸಿದ ನಂತರ ಸೂಫಿಗಳು ಅವರಿಗೆ ಕೆಲವು ಎಲೆಗಳ ಮೇಲೆ ದೈವಸ್ಮರಣೆಯ ಜಪಗಳನ್ನು ಪಠಿಸಿ ಕಳುಹಿಸುತ್ತಿದ್ದರು. ಈ ಮಾರ್ಗವನ್ನು ಹೆಚ್ಚಾಗಿ ಬಾ-ಅಲವಿಗಳು ಅನುಸರಿಸುತ್ತಿದ್ದರು. ಶ್ಲೋಕಗಳನ್ನು ಪಠಿಸಿದ ನಂತರ ರೋಗಿಗಳಿಗೆ ಕುಡಿಯಲು ನೀರನ್ನು ಸಹ ಒದಗಿಸಲಾಗುತ್ತಿತ್ತು. ಕೆಲವೊಮ್ಮೆ ಖುರ್ಆನ್ ಸೂಕ್ತಗಳನ್ನು ತಟ್ಟೆಗಳ ಮೇಲೆ ಅಥವಾ ಎಲೆಗಳ ಮೇಲೆ, ವಿಶೇಷವಾಗಿ ಹಲಸಿನ ಹಣ್ಣಿನ ಮರದ ಎಲೆಯ ಮೇಲೆ ಕಪ್ಪು ಶಾಯಿಯಿಂದ ಬರೆದು ರೋಗಿಗಳಿಗೆ ನೀರಿನಲ್ಲಿ ಅದ್ದಿ ಕುಡಿಯಲು ಹೇಳುತ್ತಿದ್ದರು. ಕೆಲವು ಸೂಫಿಗಳು ದುಶ್ಚಟಗಳನ್ನು ಹೋಗಲಾಡಿಸಲು ರೋಗಿಗಳ ತಲೆಯ ಮೇಲೆ ಖುರ್ಆನ್ ಸೂಕ್ತಗಳನ್ನು ಪಠಿಸುತ್ತಿದ್ದರು. ಕುರ್ಆನಿನ ಕೆಲವು ಅಧ್ಯಾಯಗಳನ್ನು ಪಠಿಸುವಂತೆ ರೋಗಿಗಳಿಗೆ ಸೂಚಿಸುತ್ತಿದ್ದರು . ಹೆಚ್ಚಾಗಿ ಸೂರ ಯಾಸಿನ್ ಮತ್ತು ಆಯತುಲ್ ಕುರ್ಸಿಯ್ ಎಂಬ ಕುರ್‌ಆನ್ ಸೂಕ್ತವನ್ನು ರೋಗಿಗಳಿಗೆ ಓದಲು ನೀಡುತ್ತಿದ್ದರು.
ಕುರ್‌ಆನಿನಿಂದ ಆಯ್ದ ಪ್ರಾರ್ಥನೆಗಳು ಮತ್ತು ಸೂಕ್ತಗಳನ್ನು ವಿವಿಧ ಅಗತ್ಯಗಳನ್ನು ಪೂರೈಸಲು ಬೇಕಾಗಿ ಪುನರಾವರ್ತಿಸಿ ಓದಲು ಸೂಚಿಸುತ್ತಿದ್ದರು. ಕೆಲವೊಮ್ಮೆ ಸೂಕ್ತಗಳು ಅಥವಾ ಮಂತ್ರಗಳನ್ನು ಜಿಂಕ್ ಪ್ಲೇಟ್ ಕಾಗದದ ಮೇಲೆ ಬರೆದು, ಅದನ್ನು ಅಲ್ಯೂಮಿನಿಯಂ ಅಥವಾ ತಾಮ್ರದ ತಾಯತಗಳನ್ನಾಗಿ ಮಾಡಿ ರೋಗಿಗಳ ಕುತ್ತಿಗೆಗೆ ಅಥವಾ ಸೊಂಟದ ಮೇಲೆ ಕಟ್ಟಲು ಹೇಳುತ್ತಿದ್ದರು. ವಿವಿಧ ರೀತಿಯ ಚೌಕಾಕಾರಗಳನ್ನು ಕಾಗದಗಳಲ್ಲಿ ಅಥವಾ ಲೋಹದ ಫಲಕಗಳಲ್ಲಿ ಚಿತ್ರಿಸಿ, ಕೆಲವು ಅರೇಬಿಕ್ ವರ್ಣಮಾಲೆಗಳನ್ನು ಅದರ ಮಧ್ಯ ಭಾಗ ಅಥವಾ ಬದಿಯಲ್ಲಿ ಬರೆದು ದೆವ್ವವನ್ನು ಓಡಿಸಲು ಅಥವಾ ಬಯಕೆಗಳನ್ನು ಈಡೇರಿಸಲು ನಿರ್ದಿಷ್ಟ ಸ್ಥಳಗಳಲ್ಲಿ ಇರಿಸುತ್ತಿದ್ದರು. ಅರೇಬಿಕ್ ಅಕ್ಷರಗಳ ಆಧಾರದ ಮೇಲೆ ಸಂಖ್ಯಾ ಪದ್ಧತಿಯ ಲೆಕ್ಕಾಚಾರವನ್ನು (ಅಬ್’ಜದ್) ಅನುಸರಿಸಲಾಗುತ್ತಿತ್ತು. ‘ಪಾಲ್ ಕಣಕ್ಕ್’ ಅಥವಾ ‘ಕುರ್ರತ್ ಅಲ್-ಅನ್ಬಿಯಾ’ ಅಥವಾ ‘ಮಶಿನೋಟಂ’ ಎಂಬ ವಿಭಿನ್ನ ಲೆಕ್ಕಾಚಾರಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಬಾ-ಅಲವಿಗಳು ತಮ್ಮ ದೈವಿಕ ಶಕ್ತಿಯು ಪ್ರವಾದಿ ಮುಹಮ್ಮದರ ಕೊಡುಗೆಯಾಗಿದೆ, ಆ ಮೂಲಕ ತಮ್ಮ ಶೈಖರ ಮೂಲಕ ಶಿಷ್ಯಂದಿರಿಗೆ ವರ್ಗಾವಣೆಯಾಗುತ್ತಾ ಈ ಪ್ರಕ್ರಿಯೆ ಅಂತ್ಯದಿನದವರೆಗೆ ಮುಂದುವರಿಯುತ್ತದೆ ಎಂದು ಬಲವಾಗಿ ನಂಬುತ್ತಾರೆ. ಅವರು ಶೈಖ್ ಮುಹ್ಯದ್ದೀನ್, ಶೈಖ್ ರಿಫಾಯೀ, ನಫೀಸತ್ ಅಲ್ ಮಿಸ್ರೀ ಮತ್ತು ಅಬುಲ್ ಹಸನ್ ಅಲ್ ಶಾದುಲಿಯಂತಹ ಪ್ರಸಿದ್ಧ ಸೂಫಿಗಳ ಹೆಸರಿನಲ್ಲಿ ತಮ್ಮ ಸೂಫೀ ಸಿದ್ಧಾಂತಗಳನ್ನು ಸುತ್ತಮುತ್ತಲ ಉದ್ದಗಲಕ್ಕೂ ಹರಡಲು ಬೇಕಾಗಿ ಧರ್ಮಶಾಲೆಗಳನ್ನು (ರಿಬಾತ್ ಅಥವಾ ತಕಿಯಾ) ಪ್ರಾರಂಭಿಸಿದರು. ದುಷ್ಟತನಗಳಿಂದ ಮುಕ್ತಿಗಾಗಿ ಹಾಗೂ ಜೀವನದಲ್ಲಿ ಸಮೃದ್ಧಿಗಾಗಿ ‘ಮೌಲಿದ್’ ಎಂಬ ಕಾವ್ಯಾತ್ಮಕ ಸಂಕಲನವನ್ನು ಅಥವಾ ‘ಮಾಲಾ’ ಎಂದು ಕರೆಯಲ್ಪಡುವ ಸ್ಥಳೀಯ ಉಪಭಾಷೆಯಲ್ಲಿ ಬರೆದ ಸೂಫಿಗಳ ಹೊಗಳಿಕೆಗಳನ್ನು ಪ್ರತೀ ಮನೆಗಳಲ್ಲಿ ಪಠಿಸಲು ಅವರು ಮುಸಲ್ಮಾನರಿಗೆ ಸೂಚಿಸುತ್ತಿದ್ದರು. ಮಗ್ರಿಬ್ ಪ್ರಾರ್ಥನೆಯ ನಂತರ ಅಥವಾ ರಾತ್ರಿಯ ಇಶಾ ಪ್ರಾರ್ಥನೆಯ ನಂತರ ವಿಶೇಷವಾಗಿ ಪಠಿಸಲು ಅಲವಿ ಸೂಫಿಗಳು ಹದ್ದಾದ್ ರಾತೀಬ್ ಎಂಬ ದೈವಸ್ಮರಣೆಯ ಮಾಲಿಕೆಯನ್ನು ಪರಿಚಯಿಸಿದರು. ಈ ಆಚರಣೆಗಳು ಇಂದಿಗೂ ಮಲಬಾರಿನಲ್ಲಿ ಚಾಲ್ತಿಯಲ್ಲಿದೆ.
ಮಂಬುರಂ ಮಖಾಂ
ದರ್ಗಾ ಝಿಯಾರತ್ (ಸಂದರ್ಶನ) ಬಾ-ಅಲವಿ ಸಯ್ಯಿದರುಗಳ ಆಧ್ಯಾತ್ಮಿಕ ಆಚರಣೆಗಳಲ್ಲಿ ಆಳವಾಗಿ ಬೇರೂರಿದೆ. ಅವರು ತಮ್ಮ ಸೂಫಿ ಗುರುಗಳು ಮತ್ತು ಉಲಮಾಗಳ ಮೇಲೆ ಗೋರಿಗಳನ್ನು ನಿರ್ಮಿಸಿದರು ಮತ್ತು ಅವರನ್ನು ಸಂದರ್ಶಿಸಿ ಆಶೀರ್ವಾದ ಪಡೆಯುತ್ತಿದ್ದರು. ಮುಸ್ಲಿಮರು ಸಾಮಾನ್ಯವಾಗಿ ದರ್ಗಾಗಳಿಗೆ ಭೇಟಿ ನೀಡುತ್ತಾರೆ ಮತ್ತು ಅವರಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಬೇಕಾಗಿ ಗೋರಿಗಳಿಗೆ ಹರಕೆಗಳನ್ನು ಅರ್ಪಣೆ ಮಾಡುತ್ತಾರೆ. ದರ್ಗಾಗಳಿಗೆ ಭೇಟಿ ನೀಡುವ ಪ್ರತಿಜ್ಞೆ ಅಥವಾ ಬಯಕೆಗಳನ್ನು ಈಡೇರಿಸಲು ಅವರಿಗೆ ಕಾಣಿಕೆಗಳನ್ನು ನೀಡುವುದು ಮಾಪಿಳ್ಳ ಮುಸ್ಲಿಮರಲ್ಲಿನ ಸಾಮಾನ್ಯ ಸಂಪ್ರದಾಯವಾಗಿದೆ. ಸೂಫಿಗಳು ಸಾಮಾನ್ಯ ಜನರ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಸೂಫಿ ಮಝಾರಗಳು ಭರವಸೆ ಮತ್ತು ಆಶ್ರಯ ಕೇಂದ್ರವಾಯಿತು. ಧಾರಾಳ ಮಳೆಗಾಗಿ, ಮಿಡತೆ ನಿವಾರಣೆಗಾಗಿ, ಉತ್ತಮ ಫಸಲು ಪಡೆಯಲು, ವ್ಯಾಪಾರದಲ್ಲಿ ಲಾಭ ಪಡೆಯಲು ಜನರು ಸೂಫಿ ಸಂತರ ಹೆಸರಿನಲ್ಲಿ ಕಾಣಿಕೆಗಳನ್ನು ನೀಡಿ ಅವರ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಲ್ಲಾಹನ ಸಂತರು ಜೀವಂತವಾಗಿರುವಾಗ ಮತ್ತು ಮರಣ ಹೊಂದಿದ ನಂತರವೂ ಜನರ ದುಃಖಗಳಿಗೆ ಮಿಡಿಯುವರು ಎಂಬುದು ಬಲವಾದ ನಂಬಿಕೆ. ಆದ್ದರಿಂದ ಮಝಾರಗಳಿಗೆ ಭೇಟಿ ನೀಡುವುದರಿಂದ ಜನರಿಗೆ ಪ್ರಯೋಜನವಾಗುತ್ತಿತ್ತು. ಮಲಬಾರಿನಲ್ಲಿ ಬಾ-ಅಲವಿ ಸಯ್ಯಿದರುಗಳ ಪೈಕಿ ಹಲವರ ಗೋರಿಗಳನ್ನು ನಿರ್ಮಿಸಲಾಗಿದೆ. ಕಲ್ಲಿಕೋಟೆಯಲ್ಲಿರುವ ಶೈಖ್ ಜಿಫ್ರಿ ಮತ್ತು ಮಂಬುರಮಿನಲ್ಲಿರುವ ಸಯ್ಯಿದ್ ಅಲವಿಯವರ ಗೋರಿಗಳು ಹೆಸರುವಾಸಿಯಾಗಿದೆ. ಗೋರಿಗಳನ್ನು ದೀಪಗಳು ಮತ್ತು ಹಸಿರು ರೇಷ್ಮೆ ಬಟ್ಟೆಗಳಿಂದ ಅಲಂಕರಿಸಲಾಗುತ್ತಿತ್ತು. ಕೆಲವೊಮ್ಮೆ ಎಣ್ಣೆಯನ್ನು ಕಂಚಿನ ದೀಪದಲ್ಲಿ ಪವಿತ್ರವೆಂದು ಇರಿಸಿ ಹಗಲು ರಾತ್ರಿ ದೀಪವನ್ನು ಬೆಳಗಿಸಲಾಗುತ್ತದೆ. ಜನರು ದೀಪದಿಂದ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಗೌರವಾರ್ಥವಾಗಿ ತಮ್ಮ ತಲೆ ಮತ್ತು ಶರೀರಕ್ಕೆ ಹಚ್ಚುತ್ತಾರೆ. ಮಂಬುರಮ್ ಮಝಾರದಲ್ಲಿ ದರ್ಗಾ ಪಾಲಕರು ತಮ್ಮೊಂದಿಗೆ ಒಂದು ತುಂಡು ಹಸಿರು ಬಟ್ಟೆಯನ್ನು ಸಂದರ್ಶಕರ ತಲೆಯ ಮೇಲೆ ಬೀಸಲು ಇಟ್ಟುಕೊಳ್ಳುತ್ತಾರೆ. ಅವರ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸುವ ಸಂಕೇತವಾಗಿ ಅದನ್ನು ಬೀಸಲಾಗುತ್ತದೆ.
ಮಂಬುರಮ್ ಮಝಾರದಲ್ಲಿ ಸಾಪ್ತಾಹಿಕ ಪ್ರಾರ್ಥನಾ ಸಭೆಗಳು (ಸ್ವಲಾತ್) ನಡೆಯುತ್ತಿತ್ತು. ಪ್ರತೀ ಗುರುವಾರ ಸಂಜೆ ಪ್ರಾರ್ಥನೆಯ ನಂತರ ಭಕ್ತರು ಅಲ್ಲಿ ಸೇರಿ ಖುರ್ಆನಿನ ಅಧ್ಯಾಯಗಳು, ಮೂರು ಬಾರಿ ಸೂರಾ ಯಾಸೀನ್ ಮತ್ತು ತಹ್ಲೀಲ್ (ಕಲಿಮಾ) ಪಠಿಸುತ್ತಾರೆ. ಕೊನೆಗೆ ನಾಯಕತ್ವ ನೀಡಿದವರು ಸಯ್ಯಿದ್ ಅಲವಿ ತಂಙಳರ ಮಧ್ಯಸ್ಥಿಕೆಯಲ್ಲಿ ಕೈ ಎತ್ತಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ. ಅರೇಬಿಕ್ ತಿಂಗಳ ಮೊಹರ್ರಮಿನ ಮೊದಲ ಏಳು ದಿನಗಳಲ್ಲಿ ನಡೆಯುವ ವಾರ್ಷಿಕ ಸಮಾರಂಭದಲ್ಲಿ ಜನರು ದರ್ಗಾಕ್ಕೆ ಬಂದು ಸೇರುತ್ತಾರೆ. ಮೊದಲ ದಿನ ಧ್ವಜಾರೋಹಣ ಮಾಡಲಾಗುತ್ತದೆ ಮತ್ತು ಪ್ರತೀ ದಿನ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಮತ್ತು ಸಯ್ಯಿದ್ ಅಲವಿ ಅವರ ಹೆಸರಿನಲ್ಲಿ ಮೌಲಿದ್ ಪಠಿಸಲಾಗುತ್ತದೆ. ವಾರ್ಷಿಕ ಸಮಾರಂಭದಲ್ಲಿ ಮಲಬಾರಿನ ಎಲ್ಲಾ ಭಾಗಗಳ ಜನರು ಭಾಗವಹಿಸುತ್ತಾರೆ. ಕೊನೆಗೆ ನೆರೆದವರಿಗೆ ಆಹಾರವನ್ನು ವಿತರಿಸಲಾಗುತ್ತದೆ. ಮಝಾರಕ್ಕೆ ಭೇಟಿ ನೀಡುವ ಜನರು ಗೋರಿಯ ಬಳಿ ತಮ್ಮ ಪ್ರಾರ್ಥನೆಗಳನ್ನು ಮಾಡುತ್ತಾರೆ ಮತ್ತು ಗೌರವದ ಸಂಕೇತವಾಗಿ ಅವರು ಗೋರಿಗಳ ಮೇಲಿನ ಹಸಿರು ಚಾದರವನ್ನು ಚುಂಬಿಸುತ್ತಾರೆ. ಆ ಪ್ರದೇಶದ ಮುಸ್ಲಿಮೇತರರು ಸಹ ದರ್ಗಾಕ್ಕೆ ಭೇಟಿ ನೀಡುತ್ತಾರೆ ಮತ್ತು ತಮ್ಮ ಅಗತ್ಯಗಳನ್ನು ಪೂರೈಸಲು ಕಾಣಿಕೆಗಳನ್ನು ನೀಡುತ್ತಾರೆ.
ಕಲ್ಲಿಕೋಟೆಯ ಜಿಫ್ರಿ ಮನೆಯಲ್ಲಿ ವಾರ್ಷಿಕ ಸಮಾರಂಭವು ‘ದುಲ್ ಕಅದ್’ ತಿಂಗಳ ಎಂಟರಿಂದ ಹತ್ತರವರೆಗೆ ನಡೆಯುತ್ತದೆ. ಈ ದಿನಗಳಲ್ಲಿ ಖುರ್‌ಆನ್ ಸಂಪೂರ್ಣವಾಗಿ (ಖತ್ಮುಲ್ ಖುರ್‌ಆನ್) ಪಠಿಸಲಾಗುತ್ತದೆ. ಜಅಫರ್ ಬಿನ್-ಹಸನ್ ಅಲ್-ಬರ್ಝಾಂಜಿ ಬರೆದ ಮೌಲಿದ್ ಸಹ ಪಠಿಸಲಾಗುತ್ತದೆ. ಕೊನೆಯಲ್ಲಿ ಎಲ್ಲರಿಗೂ ಆಹಾರವನ್ನು ವಿತರಿಸಲಾಗುತ್ತದೆ. ಹೆಚ್ಚಾಗಿ ಜಿಫ್ರಿ ದರ್ಗಾಗಳಲ್ಲಿ ವಾರ್ಷಿಕ ಆಚರಣೆಗಳನ್ನು ಬಾ-ಅಲವಿ ಸಯ್ಯಿದರ ಕುಟುಂಬಸ್ಥರು ನಡೆಸುತ್ತಾರೆ. ಬಾ-ಅಲವಿಗಳಿಂದ ಉಲಮಾಗಳು ಮತ್ತು ಹೆಚ್ಚಿನ ಸಂಖ್ಯೆಯ ಸಾಮಾನ್ಯ ಜನರು ಶಿಷ್ಯತ್ವವನ್ನು ಸ್ವೀಕರಿಸಿದ್ದರು.
ಸೂಫಿಗಳು ಮತ್ತು ಅವರ ಮಝಾರಗಳು (ಸಮಾಧಿಗಳು) ಮಲಬಾರಿನಲ್ಲಿ ಸಾಮಾಜಿಕ ಸುಧಾರಣೆಗಳು ಮತ್ತು ಧಾರ್ಮಿಕ ಸೌಹಾರ್ದತೆಯಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದೆ. ಜನರಲ್ಲಿ, ವಿಶೇಷವಾಗಿ ಕೆಳವರ್ಗದವರಲ್ಲಿ ಇಸ್ಲಾಮಿಕ್ ಆದರ್ಶಗಳ ಪ್ರಚಾರದ ಮೂಲಕ ಅವರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಹದಿನಾರನೇ ಶತಮಾನದ ಪೋರ್ಚುಗೀಸ್ ಬರಹಗಾರ ಗಾಸ್ಪರ್ ಕೊರಿಯಾ ವರದಿ ಮಾಡುತ್ತಾರೆ, “ಮೂರ್ಸ್ (ಕೆಳವರ್ಗದವರು) ಅವರು ಇಷ್ಟಪಟ್ಟಲ್ಲಿಗೆ ಹೋಗಬಹುದು ಮತ್ತು ಅವರು ಇಷ್ಟಪಟ್ಟಂತೆ ತಿನ್ನಬಹುದು. ಅವರು ಮೂರ್ಸ್ ಗಳಿಗೆ ಬಟ್ಟೆ ಮತ್ತು ನಿಲುವಂಗಿಯನ್ನು ನೀಡಿದರು. ಇಸ್ಲಾಮಿಗೆ ಮತಾಂತರಗೊಳ್ಳುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರಕುತ್ತದೆ ಮತ್ತು ಕೀಳರಿಮೆ ಹಾಗೂ ತಾರತಮ್ಯಗಳನ್ನು ಅದು ಹೋಗಲಾಡಿಸುತ್ತದೆ ಎಂದು ಕೆಳಜಾತಿಗಳು ಅರಿತುಕೊಂಡಾಗ, ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಲಾರಂಭಿಸಿದರು.” ‘ಸಿ.ಎ ಇನ್ನೆಸ್’ ಹೇಳುತ್ತಾರೆ : “ಚೇರುಮಾನ್‌ಗಳು, ಜೀತದಾಳು ವರ್ಗ ಹಾಗೂ ತಿಯ್ಯಾನ್ ವರ್ಗದವರ ಮತಾಂತರಗೊಳ್ಳುವ ಸಂಖ್ಯೆಯು ಕಾಲಕಾಲಕ್ಕೆ ಅಧಿಕಗೊಂಡಾಗ ಇತರೆ ಜಾತಿಯ ಮುಂದೆ ಇಸ್ಲಾಮಿನ ಗೌರವ ಹೆಚ್ಚಿತು.”
1748 ರಲ್ಲಿ ಹಳರಮೌತಿನ ಶೈಖ್ ಜಿಫ್ರಿ ಕಲ್ಲಿಕೋಟೆಗೆ ಆಗಮಿಸುವುದರೊಂದಿಗೆ ಮಲಬಾರಿನಲ್ಲಿ ಬಾ-ಅಲವಿಗಳು ತಮ್ಮ ಪ್ರಾಬಲ್ಯವನ್ನು ಹೊಂದಿದರು. ಈ ಪ್ರದೇಶದಲ್ಲಿ ಬಾ-ಅಲವಿ ತ್ವರೀಖವನ್ನು (ಪಂಗಡ) ಪರಿಚಯಿಸಿದವರು ಶೈಖ್ ಜಿಫ್ರಿ. ಅದೇ ಸಮಯದಲ್ಲಿ ಸಯ್ಯಿದ್ ಅಬ್ದುಲ್ ರೆಹಮಾನ್ ಹೈದ್ರೂಸ್ 1751 ರಲ್ಲಿ ಮಲಬಾರಿಗೆ ವಲಸೆ ಬಂದು ಪೊನ್ನಾನಿಯಲ್ಲಿ ನೆಲೆಸಿದರು. ಅವರು ಬಾ-ಅಲವಿ ತ್ವರೀಕವನ್ನು ಪಸರಿಸಲು ಅಲ್ಪ ವ್ಯತಿರಿಕ್ತ ಶೈಲಿಯನ್ನು ಅಳವಡಿಸಿದರು. ಅವರ ಮಾರ್ಗವು ಖಾದಿರಿ ತ್ವರೀಕಾದ ಕುಬ್ರವಿಯ್ಯ ಶೈಲಿಗೆ ಹೆಚ್ಚು ಹತ್ತಿರವಾಗಿತ್ತು. ಜಿಫ್ರಿ ಮತ್ತು ಹೈದ್ರೂಸ್ ಎರಡೂ ವಂಶಸ್ಥರು ಸಾಮಾನ್ಯ ಜನರ ಮೇಲೆ, ವಿಶೇಷವಾಗಿ ಕರಾವಳಿಯ ಮೀನುಗಾರರ ಮೇಲೆ ಹೆಚ್ಚಿನ ಆಧ್ಯಾತ್ಮಿಕ ಪ್ರಭಾವ ಬೀರಿದರು. ಮೇಲ್ಜಾತಿಗಳಿಂದ ನಿರ್ಲಕ್ಷಿಸಲ್ಪಟ್ಟ ಈ ಜನರು ಸೈಯ್ಯದ್‌ಗಳನ್ನು ಸಂರಕ್ಷಕರಾಗಿ ಕಂಡುಕೊಂಡರು ಮತ್ತು ಇದು ಹೆಚ್ಚಿನ ಸಂಖ್ಯೆಯ ಮೀನುಗಾರ ಸಮುದಾಯ ಇಸ್ಲಾಮಿಗೆ ಪರಿವರ್ತನೆ ಹೊಂದಲು ಕಾರಣವಾಯಿತು. ಅಬ್ದುರಹ್ಮಾನ್ ಹೈದ್ರೂಸ್ ಅವರ ಉತ್ತರಾಧಿಕಾರಿಗಳಾಗಿ ವಲಿಯ ತಂಙಳ್ ಆಧ್ಯಾತ್ಮಿಕ ನಾಯಕರಾಗಿ ಮುಂದುವರೆದರು.
ಮಂಬುರಂ ಸಯ್ಯಿದ್ ಅಲವೀ:
ಶೈಖ್ ಜಿಫ್ರಿ ಅವರ ಸೋದರಳಿಯ ಸಯ್ಯಿದ್ ಅಲವಿ (1844) ಅವರು ತಮ್ಮ ಕೇಂದ್ರವನ್ನು ತಿರೂರಂಗಾಡಿ ಬಳಿಯ ಮಂಬುರಮಿನಲ್ಲಿ ಸ್ಥಾಪಿಸಿದರು. ಸಯ್ಯಿದ್ ಅಲವಿಯವರ ಜನಪ್ರಿಯತೆಯು ಎಷ್ಟರಮಟ್ಟಿಗೆ ಹೆಚ್ಚಾಯಿತು ಎಂದರೆ ಅವರನ್ನು ಅವರ ಸಮಕಾಲೀನರು ಕುತುಬುಝಮಾನ್ (ಯುಗಪುರುಷ) ಎಂದು ಗೌರವಿಸಿದರು. ಆ ಕಾಲದ ಪ್ರಸಿದ್ಧ ಉಲಮಾಗಳು ಮತ್ತು ಸೂಫಿಗಳು ಅವರ ಆಧ್ಯಾತ್ಮಿಕ ಶಿಷ್ಯರಾದರು. ಸಂಕಷ್ಟದ ಸಮಯದಲ್ಲಿ ಮಾಪಿಳ್ಳರಿಗೆ ನಾಯಕತ್ವವನ್ನು ನೀಡಿದರು. ಮರಣಾನಂತರ ಅವರ ಮಗ ಸಯ್ಯಿದ್ ಪಝಲ್ (1901) ಅವರ ತಂದೆಯ ಆಧ್ಯಾತ್ಮಿಕ ಸೇವೆಯನ್ನು ಮುಂದುವರೆಸಿದರು ಮತ್ತು ಸುಧಾರಣೆಯ ಯುಗವನ್ನು ಪ್ರಾರಂಭಿಸಿದರು. ಬಾ-ಅಲವಿಗಳೊಂದಿಗೆ ಪೊನ್ನಾನಿಯ ಮಖ್ದೂಂಗಳು ಮತ್ತು ಮಲಬಾರಿನ ಹೆಸರಾಂತ ಉಲಮಾಗಳಾದ ವೆಳಿಯಂಕೋಡ್ ಉಮರ್ ಖಾಝಿ ಮತ್ತು ಪರಪ್ಪನಂಗಾಡಿಯ ಔಕೋಯ ಮುಸ್ಲಿಯಾರ್, ಸಯ್ಯಿದ್ ಅಲವಿ ಮತ್ತು ಅವರ ಪುತ್ರನ ಸುಧಾರಣಾ ಪ್ರಯತ್ನಕ್ಕೆ ಸಕ್ರಿಯವಾಗಿ ಸಹಾಯ ಮಾಡಿದರು. ದಕ್ಷಿಣ ಮಲಬಾರ್‌ನಲ್ಲಿ ಹಲವಾರು ಮಸೀದಿಗಳನ್ನು ಅವರ ಆಜ್ಞೆಯ ಮೇರೆಗೆ ನಿರ್ಮಿಸಲಾಯಿತು.
ಹತ್ತೊಂಬತ್ತನೇ ಶತಮಾನದಲ್ಲಿ ಬಾ-ಅಲವಿ ಪಥಕ್ಕೆ ಸಂಬಂಧಪಟ್ಟ ಧಾರ್ಮಿಕ ಆಚರಣೆಗಳು ಮತ್ತು ಭಕ್ತಿಗೀತೆಗಳು ಮಾಪಿಳ್ಳರಲ್ಲಿ ಸಾಮಾನ್ಯವಾದವು. ಅಬ್ದುಲ್ಲಾ ಅಲವಿ ಅಲ್-ಹದ್ದಾದ್ ವಿರಚಿತ ಹದ್ದಾದ್ ರಾತೀಬು ಮತ್ತು ಕುತುಬಿಯ್ಯತ್ ಅವುಗಳ ಪೈಕಿ ಪ್ರಮುಖವಾದುದು. ಬಾ-ಅಲವಿಗಳ ಸಂಪ್ರದಾಯವಾಗಿರುವುದರಿಂದ ಹದ್ದಾದ್ ರಾತೀಬ್ ಮಾಪಿಳ್ಳ ಮುಸ್ಲಿಮರಲ್ಲಿ ವ್ಯಾಪಕವಾಗಿ ರೂಢಿಯಾಯಿತು. ಮಾಲಾ ಮತ್ತು ಮೌಲಿದ್ ಪಠಣಗಳಂತಹ ಆಚರಣೆಗಳು ಸಮುದಾಯಕ್ಕೆ ಏಕತೆಯ ಭಾವನೆಯನ್ನು ಒದಗಿಸಿದವು. ‘ನೇರ್ಚ’ ಮುಂತಾದ ಮಾಪಿಳ್ಳ ಸಮಾರಂಭಗಳು ಸಹ ಸಮುದಾಯಕ್ಕೆ ಒಗ್ಗಟ್ಟನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ನೇರ್ಚಾಗಳನ್ನು ಸಾಮಾನ್ಯವಾಗಿ ಸೂಫಿಗಳು ಮತ್ತು ಔಲಿಯಾ ಹುತಾತ್ಮರನ್ನು (ಶುಹದಾಗಳ) ಸ್ಮರಿಸಲು ನಡೆಸಲಾಗುತ್ತಿತ್ತು. ಸ್ಮರಣಾರ್ಥವು ಸ್ಥಳೀಯ ಹುತಾತ್ಮರನ್ನು ಮಾತ್ರವಲ್ಲದೆ ಬದ್ರ್ ಮತ್ತು ಕರ್ಬಲಾದಲ್ಲಿ ನಡೆದಂತಹ ಇಸ್ಲಾಮಿಕ್ ಯುದ್ಧಗಳಲ್ಲಿ ಹುತಾತ್ಮರಾದವರನ್ನು ಸಹ ಒಳಗೊಂಡಿತ್ತು.
ಸೂಫೀ ತತ್ತ್ವಗಳ ಆಕರ್ಷಣೆಯು ಮಲಬಾರಿನಲ್ಲಿ ಮತಾಂತರ ಹೆಚ್ಚಳಕ್ಕೆ ಕಾರಣವಾಯಿತು. ಆದರೆ ಏಕಾಏಕಿ ಮತಾಂತರಕ್ಕೆ ಯಾವುದೇ ರೀತಿಯ ಪ್ರೋತ್ಸಾಹ ನೀಡಲ್ಪಟ್ಟಿಲ್ಲ. ಅನೇಕ ಹಿಂದೂ ಹಿಡುವಳಿದಾರರು ಜಾತಿ ದೌರ್ಜನ್ಯದಿಂದ ಮುಕ್ತರಾಗಲು ಇಸ್ಲಾಮಿನಲ್ಲಿ ಆಶ್ರಯ ಪಡೆದರು. ಇಸ್ಲಾಮಿಗೆ ಮತಾಂತರಗೊಂಡ ನಂತರ ಅವರು ತಮ್ಮ ಬಂಡಾಯದಲ್ಲಿ ಮಾಪಿಳ್ಳರೊಂದಿಗೆ ಸೇರಿಕೊಂಡರು. ಹೊಸ ಮತಾಂತರಗಳು ಯಾವಾಗಲೂ ಮಾಪಿಳ್ಳ ರೈತರ ಬಂಡಾಯಗಳ ಬೆನ್ನೆಲುಬಾಗಿದ್ದವು. ತಂಙಳ್‌ಗಳ ವ್ಯಕ್ತಿತ್ವ ಮತ್ತು ಆಧ್ಯಾತ್ಮಿಕ ಜ್ಞಾನವು ಆಶೀರ್ವಾದಕ್ಕಾಗಿ ಅವರನ್ನು ಸಂಪರ್ಕಿಸಿದ ಅನೇಕ ಹಿಂದೂಗಳ ಹೃದಯವನ್ನು ಗೆದ್ದಿತು ಮತ್ತು ಅನೇಕರು ಇಸ್ಲಾಂ ಧರ್ಮವನ್ನು ಅವರ ಸನ್ನಿಧಿಗಳಲ್ಲಿ ಸ್ವೀಕರಿಸಿದರು. ಮತಾಂತರಗಳಿಂದಾಗಿ ಸಮುದಾಯದ ಬಲವು ಹೆಚ್ಚಾಗುವುದರೊಂದಿಗೆ ಇದು ಬಂಡಾಯಗಳಿಗೆ ಸಾಕಷ್ಟು ಮಾನವ ಶಕ್ತಿಯನ್ನು ಒದಗಿಸಿತು.
ಇಪ್ಪತ್ತು ವರ್ಷಗಳ ಹಿಂದೆ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಹೆಚ್. ಬಾಬರ್ ಅವರು ಮತಾಂತರವನ್ನು ಸಂಪೂರ್ಣವಾಗಿ ಕಾನೂನುಬಾಹಿರಗೊಳಿಸುವುದು ಉತ್ತಮ ಎಂದು ಸೂಚಿಸಲು ಪ್ರೇರೇಪಿಸಿದ ಹಿಂದಿರುವ ಸಬಬುಗಳಲ್ಲಿ ಇದೂ ಒಂದಾಗಿದೆ. ಆದರೆ ಸರ್ಕಾರ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ವಿರೋಧಾಭಾಸವೆಂದರೆ, ಆರಂಭಿಕ ವರ್ಷಗಳಲ್ಲಿ ಹಿಂದೂಗಳ ಮತ್ತು ಕೆಳಜಾತಿಯ ಹಿಡುವಳಿದಾರರ ಮತಾಂತರಕ್ಕೆ ಯಾವುದೇ ಗಂಭೀರ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ. ಅನೇಕ ಉಲಮಾಗಳು ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಅದು ಇಂದಿಗೂ ಧರ್ಮ ಮತ್ತು ತತ್ವಶಾಸ್ತ್ರದ ಕ್ಷೇತ್ರದಲ್ಲಿ ಮಾಪಿಳ್ಳ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತದೆ. ಸಯ್ಯಿದ್ ಫಝಲ್ ಮತ್ತು ಅವರ ಸಮಕಾಲೀನರಾದ ಉಮರ್ ಖಾಝಿ, ಮರಕ್ಕರಕತ್ ಔಕೋಯ ಮುಸ್ಲಿಯಾರ್ ಮತ್ತು ಸಯ್ಯಿದ್ ಫಕ್ರುದ್ದೀನ್ ಅವರು ಈ ಅವಧಿಯ ಪ್ರಸಿದ್ಧ ಲೇಖಕರು. ಸಯ್ಯದ್ ಫಝಲ್ ಅವರು ಹತ್ತು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.
ಮಲಬಾರಿನಲ್ಲಿ ಶೈಖ್ ಜಿಫ್ರಿ ಮತ್ತು ಅವರ ಅನುಯಾಯಿಗಳು ಕಲ್ಲಿಕೋಟೆಯ ಬಳಿಯ ಕೊಂಡೊಟ್ಟಿಯಲ್ಲಿ ನೆಲೆಸಿದ್ದ ಫಕೀರ್ ಎಂದು ಕರೆಯಲ್ಪಡುವ ಮುಹಮ್ಮದ್ ಷಾ ಬೋಧಿಸಿದ ಸೂಫಿ ಆಶಯವನ್ನು ಎದುರಿಸಬೇಕಾಯಿತು. ಮುಹಮ್ಮದ್ ಷಾ ಹಳರಮಿ ಆಗಿರಲಿಲ್ಲ ಮತ್ತು ಅವರ ಪೂರ್ವಜರು ಪರ್ಷಿಯಾಕ್ಕೆ ಸೇರಿದವರು. ಟಿಪ್ಪು ಸುಲ್ತಾನ್ ಮಲಬಾರನ್ನು ವಶಪಡಿಸಿಕೊಂಡಾಗ ಕೆಲವು ಮುಸ್ಲಿಂ ವಿದ್ವಾಂಸರು ಫಕೀರ್ ಮತ್ತು ಅವರ ಉತ್ತರಾಧಿಕಾರಿಯ ಧರ್ಮದ್ರೋಹಿ ನಂಬಿಕೆಗಳ ಬಗ್ಗೆ ದೂರು ನೀಡಿದರು. ಅಲ್ಲಿ ಸುಲ್ತಾನನು ಅವರನ್ನು ತನ್ನ ಸನ್ನಿಧಿಗೆ ಕರೆತಂದು ಫಕೀರನೊಂದಿಗೆ ಮುಸ್ಲಿಂ ವಿದ್ವಾಂಸರಿಂದ ತನಿಖೆ ನಡೆಸಿದರು. ಫಕೀರ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿ ತಾನು ನೈಜ ನಂಬಿಕೆಯಲ್ಲಿ ಇದ್ದೇನೆ ಎಂದು ಪ್ರತಿಪಾದಿಸಿದನು ಮತ್ತು ತಾನು ಸೂಫಿಸಮಿನ ಖಾದಿರಿ ಕ್ರಮವನ್ನು ಅನುಸರಿಸಿದವನು ಎಂದು ಹೇಳಿ ಸುಲ್ತಾನನ ಮುಂದೆ ಒಂದು ಕವಿತೆಯನ್ನು ಓದಿದನು. ಅದು ಈ ಕೆಳಗಿನ ಸಾರವನ್ನು ಹೊಂದಿದೆ: “ಇಸ್ಲಾಂ ನನ್ನ ಧರ್ಮ, ಮುಹಮ್ಮದ್ ನನ್ನ ಪ್ರವಾದಿ, ಖುರ್‌ಆನ್ ನನ್ನ ಮಾರ್ಗದರ್ಶಕ ಮತ್ತು ಕರಮ್ ಅಲೀ ನನ್ನ ಶೈಖ್. ನಾನು ಶೈಖ್ ಮುಯಿನುದ್ದೀನ್ ಚಿಶ್ತಿ ಮತ್ತು ಅಬ್ದುಲ್ ಖಾದಿರ್ ಜೀಲಾನಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡವನು.” ಟಿಪ್ಪು ಸುಲ್ತಾನ್ ಫೆರೋಕ್‌ನಲ್ಲಿ ತನ್ನ ಪ್ರಧಾನ ಕಛೇರಿಯನ್ನು ನಿರ್ಮಿಸುತ್ತಿದ್ದಾಗ ಅಲ್ಲಿ ಸೂಫಿಗಳು ಮತ್ತು ಉಲಮಾಗಳನ್ನು ಆಹ್ವಾನಿಸಿದ ಮತ್ತು ತನ್ನ ಹೊಸ ಯೋಜನೆಗಳ ಯಶಸ್ಸಿಗಾಗಿ ಪ್ರಾರ್ಥಿಸಲು ವಿನಂತಿಸಿದರು. ಅವರು ಮುಹಮ್ಮದ್ ಷಾನನ್ನು ಇನಾಂದಾರನನ್ನಾಗಿ ಮಾಡಿದರು ಮತ್ತು ಅವನಿಗೆ ತೆರಿಗೆ ಮುಕ್ತವಾಗಿ ಭೂಮಿಯನ್ನು ನೀಡಿದರು. ಫಕೀರನ ಬ್ರಿಟೀಷರೊಂದಿಗಿನ ನಂಟು ಮತ್ತು ಶಿಯಾ ಆಚರಣೆಗಳು ಬಹುಪಾಲು ಉಲಮಾಗಳಲ್ಲಿ ದ್ವೇಷವನ್ನು ಉಂಟುಮಾಡಿತು. ಆದ್ದರಿಂದ, ಅವರು ಫಕೀರ್ ಮತ್ತು ಅವನ ಶಿಷ್ಯಂದಿರನ್ನು ಧರ್ಮದ್ರೋಹಿಗಳೆಂದು ಪ್ರಚಾರ ಪಡಿಸಿದರು.
ಹಲವಾರು ಮಾಪಿಳ್ಳಾಗಳು ಜಿಫ್ರಿಯವರ ಆದೇಶದ ಮೇರೆಗೆ ಅವರ ಸಂದೇಶವನ್ನು ಉತ್ತರದಿಂದ ದಕ್ಷಿಣ ಮಲಬಾರಿಗೆ ಹರಡಿದರು. ಅವರ ಮುರೀದರುಗಳಲ್ಲಿ ಪ್ರಖ್ಯಾತ ಉಲಮಾಗಳು ಮತ್ತು ಸಯ್ಯಿದ್‌ಗಳಿದ್ದರು. ಅವರು ಮಲಬಾರಿನ ಪೊನ್ನಾನಿಯ ಮುಸ್ಲಿಂ ವಿದ್ವಾಂಸರಾದ ಮಖ್ದೂಮ್‌ಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಜಿಫ್ರಿಗಳಂತೆ ಮಖ್ದೂಮ್‌ಗಳು ಸಹ ದಕ್ಷಿಣ ಅರೇಬಿಯಾದಿಂದ ವಲಸೆ ಬಂದವರು. ಇದಲ್ಲದೆ ‘ಅಬ್ದುರಹ್ಮಾನ್ ಹೈದ್ರೂಸ್’ ಅವರ ಶಿಷ್ಯ ಸಂಬಂಧಿ ಮತ್ತು ಹಳರಮೌತಿನ ಸ್ಥಳೀಯರು ಮಖ್ದೂಮ್‌ಗಳ ಕುಟುಂಬದಿಂದ ವಿವಾಹವಾಗುವ ಮೂಲಕ ಮಾಪಿಳ್ಳರ ಜೊತೆ ಹೆಚ್ಚಿನ ನಂಟು ಬೆಳೆಸಿದರು. ಪೊನ್ನಾನಿಯಲ್ಲಿ ಅಧ್ಯಯನ ಮಾಡಿದ ಮಖ್ದೂಮ್‌ಗಳು ಮತ್ತು ಉಲಮಾಗಳು ಸಯ್ಯಿದ್ ಜಿಫ್ರಿಯನ್ನು ತಮ್ಮ ಆಧ್ಯಾತ್ಮಿಕ ನಾಯಕನನ್ನಾಗಿ ಸ್ವೀಕರಿಸಿದರು. ಮಾಪಿಳ್ಳಗಳ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿದ್ದ ಪೊನ್ನಾನಿಯ ಉಲಮಾಗಳ ಮೂಲಕ ಜಿಫ್ರಿಯವರ ಸಂದೇಶವು ಮಲಬಾರಿನ ಮೂಲೆ ಮೂಲೆಗಳನ್ನು ತಲುಪಿತು.
ಸಯ್ಯಿದ್ ಜಿಫ್ರಿಯವರ ಸೂಫೀ ಮಾರ್ಗವನ್ನು ಮಲಬಾರಿನಲ್ಲಿ ಅವರ ಸೋದರಳಿಯ ಸಯ್ಯಿದ್ ಅಲವಿ ಅವರು ಜನಪ್ರಿಯಗೊಳಿಸಿದರು. ಜಿಫ್ರಿ ಅವರು ಹಲವಾರು ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕನ್ಝ್-ಅಲ್ ಬರಾಹಿನ್, ಕೌಕಬ್-ಅಲ್ ದುರ್ರಿಯಾ, ಅಲ್ ನತೀಜ ಮತ್ತು ಅಲ್ ಕುರ್ಬತ್ ವಲ್ ಅಸ್ರಾರ್ ಪ್ರಮುಖವಾಗಿವೆ. 1807 ರಲ್ಲಿ (ದುಲ್-ಕಅದ್ ಎಂಟು) ತಮ್ಮ ಎಂಬತ್ತಮೂರನೆಯ ವಯಸ್ಸಿನಲ್ಲಿ ಶೈಖ್ ಜಿಫ್ರಿ ನಿಧನ ಹೊಂದಿದರು. ನಂತರ ಅವರನ್ನು ಮಲಿಯಕ್ಕಲ್ ಮನೆಯ ಬಳಿ ಸಮಾಧಿ ಮಾಡಲಾಯಿತು. ಶೈಖ್ ಜಿಫ್ರಿಯವರು ಒಮ್ಮೆ ಕೊಂಡೊಟ್ಟಿಯಲ್ಲಿನ ಫಕೀರನನ್ನು ಭೇಟಿಯಾಗುತ್ತಾರೆ. ಸತತ ಅನ್ವೇಷಣೆಯ ಬಳಿಕ ಅವನೊಬ್ಬ ಶಿಯಾ ಪಂಗಡಕ್ಕೆ ಸೇರಿದವನು ಎಂದು ದೃಢಪಡಿಸಿಕೊಂಡರು. ಆದರೆ, ಅವನು ತನಗೆ ಶಿಯಾ ಪಂಗಡದೊಂದಿಗೆ ಯಾವದೇ ಸಂಬಂಧ ಇಲ್ಲವೆಂದು ಕಟುವಾಗಿ ನಿರಾಕರಿಸಿದನು. ಸ್ವತಃ ಶಾಫಿ ಸುನ್ನಿ ಎಂದು ಹೇಳಿಕೊಂಡನು. ತನ್ನ ಕನ್ಝ್-ಅಲ್ ಬರಾಹಿನ್ ನಲ್ಲಿ ಶೈಖ್ ಜಿಫ್ರಿ ‘ಮುಹಮ್ಮದ್ ಷಾ’ನನ್ನು ಹುಸಿ-ಸೂಫಿ ಎಂದು ಘೋಷಿಸುತ್ತಾರೆ. “ತಪ್ಪು ದಾರಿಯಲ್ಲಿ ಚಲಿಸುವ ಮತ್ತು ಇತರರನ್ನು ದಾರಿ ತಪ್ಪಿಸುವ, ನಮಾಝ್ ಮತ್ತು ಹಜ್ಜನ್ನು ನಿರುತ್ಸಾಹಗೊಳಿಸುವ, ಜನರು ದೈವಸ್ಮರಣೆ ಮಾಡುವುದನ್ನು ತಡೆಯುವ ಮತ್ತು ಪುರುಷರನ್ನು ಮುಕ್ತವಾಗಿ ಮಹಿಳೆಯರೊಂದಿಗೆ ಬೆರೆಯುವುದನ್ನು ಅನುಮತಿಸುವ” ಮುಂತಾದ ಅವನ ಅಧಾರ್ಮಿಕ ಮತ್ತು ಧರ್ಮದ್ರೋಹಿ ಚಟುವಟಿಕೆಗಳನ್ನು ಜಿಫ್ರಿ ಎತ್ತಿ ತೋರಿಸಿದರು.
ಔದಿಲಿಚ್ಚಿ ಮುಸ್ಲಿಯಾರ್ ಎಂದು ಪ್ರಸಿದ್ಧರಾದ ಖಾಜಿ ಅಬ್ದುಲ್ ಅಝೀಝ್ ಶೈಖ್ ಜಿಫ್ರಿಯನ್ನು ಟೀಕಿಸಿ ಫಕೀರನನ್ನು ಸಮರ್ತಿಸಿದರು. ಖ್ಯಾತ ಮುಸ್ಲಿಂ ನ್ಯಾಯಶಾಸ್ತ್ರಜ್ಞರಾದ ಇಮಾಮ್ ಶಾಫಿ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಅಬ್ದುಲ್ ಅಝೀರವರು ಕರ್ಮಶಾಸ್ತ್ರದ ವ್ಯಾಪ್ತಿಯಿಂದ ಹೊರಗೆ ಚಲಿಸುವ ಸೂಫಿಗಳ ಕ್ರಮಗಳು ಮತ್ತು ವಿಧಾನಗಳೊಂದಿಗೆ ದೇವತಾಶಾಸ್ತ್ರಜ್ಞರಿಗೆ (theologian) ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ ಶೈಖ್ ಜಿಫ್ರಿಯವರು ಅಬ್ದುಲ್ ಅಝೀಝ್ ರವರ ಹೇಳಿಕೆಗಳಲ್ಲಿನ ಪ್ರಮಾದಗಳು ಮತ್ತು ದೋಷಗಳನ್ನು ಹೊರತಂದು ಫಕೀರ್ ಅಳವಡಿಸಿಕೊಂಡ ವಿಧಾನಗಳು ಇಸ್ಲಾಮ್ ಮತ್ತು ಸೂಫಿಗಳು ಸೇರಿದಂತೆ ಎಲ್ಲಾ ಮುಸ್ಲಿಮರು ಹೊಂದಿರುವ ಶರೀಅತ್ತಿಗೆ ವಿರುದ್ಧವಾಗಿವೆ ಎಂದು ಪ್ರತಿಪಾದಿಸಿದರು. ಶೈಖ್ ಜಿಫ್ರಿಯವರು ಫಕೀರ್ ಮತ್ತು ಅವನ ಅನುಯಾಯಿಗಳ ಇಸ್ಲಾಮಿಕ್ ಆಚರಣೆಗಳನ್ನು ಈ ರೀತಿ ವರ್ಣಿಸುತ್ತಾರೆ:
“ಓಹ್, ಹಶಿಶ್ ಅನ್ನು ಧೂಮಪಾನ ಮಾಡುವ ಜನರು, ಯಾವಾಗಲೂ ದೇವರ ಮನೆಯನ್ನು ನಿರ್ಲಕ್ಷಿಸುತ್ತಾರೆ, ಪ್ರಾರ್ಥನೆ ಮತ್ತು ಉಪವಾಸವನ್ನು ತ್ಯಜಿಸಿ, ದೇವರು ಕಡ್ಡಾಯಗೊಳಿಸಿದ್ದನ್ನು ತಿರಸ್ಕರಿಸಿ, ಮಾತುಕತೆಗಳಲ್ಲಿ ಮತ್ತು ಕಾರ್ಯಗಳಲ್ಲಿ ಅವರು ಮಿತಿಗಳನ್ನು ಮೀರುತ್ತಾರೆ ಮತ್ತು ಜನರಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತಾರೆ. ಕೊನೆಗೆ ಅವರು ಶೈತಾನನನ್ನು ಅಪ್ಪಿಕೊಳ್ಳುತ್ತಾರೆ. ಧರ್ಮದ್ರೋಹಿ ಫಕೀರ್ ಅನ್ನು ಅನುಸರಿಸದಿರಿ ಅವನು ಜನರನ್ನು ದಾರಿ ತಪ್ಪಿಸುತ್ತಿದ್ದಾನೆ. ಅವರು ತಮ್ಮ ತಪ್ಪುಗಳಿಗಾಗಿ ಪಶ್ಚಾತ್ತಾಪ ಪಡದಿದ್ದರೆ ದೊಡ್ಡ ವಿನಾಶವನ್ನು ಕಾಣುವರು” ಎಂದು ಎಚ್ಚರಿಸಿದರು.
ಶೈಖ್ ಜಿಫ್ರಿಯವರು ಖುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್ (ಸ.ಅ) ರ ಸಂಪ್ರದಾಯವನ್ನು ನಿರ್ಲಕ್ಷಿಸಿದಕ್ಕಾಗಿ ಪ್ರಮುಖ ಖಾಜಿಯನ್ನು ಸಹ ಟೀಕಿಸುತ್ತಾರೆ. ಮುಹಮ್ಮದ್ ಷಾ ಮತ್ತು ಅವನ ಸೂಫಿ ಪದ್ಧತಿಗಳ ವಿರುದ್ಧ ತೀರ್ಪು ನೀಡಿದ ಉಲಮಾಗಳು ಇತರ ಆಚರಣೆಗಳೊಂದಿಗೆಅವನು ಶಿಯಾ ಪದ್ಧತಿಗಳನ್ನು ಅನುಸರಿಸಿದವನು ಎಂದು ಎತ್ತಿ ತೋರಿಸಿದರು.
ಮಂಬುರಮಿನ ಸಯ್ಯಿದ್ ಅಲವಿ ಯವರು ಷಾ ರನ್ನು ಬೋಹ್ರಾ ಪಂಗಡಕ್ಕೆ ಸೇರಿದ ಶಿಯಾ ಎಂದು ಚಿತ್ರಿಸಿದ್ದಾರೆ. ಅವರು ಹೇಳುತ್ತಾರೆ: “ಪಠಾಣರಲ್ಲಿ ಸುನ್ನಿಗಳಿಗೆ ಸೇರಿದ ನಾಲ್ಕು ಗುಂಪುಗಳಿವೆ; ಶೇಖ್‌ಗಳು, ಸಯ್ಯಿದರುಗಳು, ಮೊಘಲರು ಮತ್ತು ಪಠಾಣರು. ಕೊಂಡೊಟ್ಟಿ ಫಕೀರ್ ಈ ಯಾವುದೇ ಗುಂಪುಗಳಿಗೆ ಸೇರಿದವನಲ್ಲ, ಆದರೆ ಅವನು ರಾಫಿಳೀ ಎಂಬ ತೀವ್ರವಾದ ಧರ್ಮದ್ರೋಹಿ ಶಿಯಾ ಗುಂಪಿನ ಅಡಿಯಲ್ಲಿ ಬರುವ ಬೋಹ್ರಾ ಪಂಗಡಕ್ಕೆ ಸೇರಿದವನು” ಎಂದು ಫಕೀರನನ್ನು ರಾಫಿಳಿ ಮತ್ತು ಬೋಹ್ರಾ ಪಂಥದ ಶಿಯಾ ಎಂದು ಕರೆದರು. ಮಂಬುರಮಿನ ಸಯ್ಯಿದ್ ಅಲವಿ ಉಲ್ಲೇಖಿಸುತ್ತಾರೆ “ಪ್ರವಾದಿ ಮುಹಮ್ಮದ್ ಮತ್ತು ಅವರ ಮೂವರು ಖಲೀಫರಾದ – ಅಬೂಬಕ್ಕರ್, ಉಮರ್ ಮತ್ತು ಉಸ್ಮಾನ್ ಅವರ ಮಾದರಿಗಳನ್ನು ತಯಾರಿಸುವ ಪದ್ಧತಿಗಳು ಶಿಯಾಗಳೆಡೆಯಲ್ಲಿ ಹೇಗಿತ್ತೆಂದರೆ, ನಾಲ್ಕು ಕುಳಿಯನ್ನು ತಯಾರಿಸಲಾಗುತ್ತದೆ ಮತ್ತು ಅವುಗಳಲ್ಲಿ ಜೇನುತುಪ್ಪವನ್ನು ಸುರಿಸಲಾಗುತ್ತದೆ. ಇನ್ನಿತರ ಸ್ವಹಾಬಿಗಳು ಅಲೀಯಿಂದ ಪ್ರವಾದಿತ್ವವನ್ನು ಕಸಿದುಕೊಂಡರು ಎಂದು ಭಾವಿಸಿ ನಂತರ ಅವರು ಅದನ್ನು ಒಡೆದು ಪ್ರವಾದಿ ಮತ್ತು ಖಲೀಫರ ರಕ್ತವನ್ನು ಹೀರುವಂತೆ ಜೇನುತುಪ್ಪವನ್ನು ಹೀರುತ್ತಾರೆ.” ಪ್ರಮುಖ ರಾಫಿಳಿಗಳಾದ ಸಬ್ಬಾಹ್, ಇಬ್ನ್ ಸಮಾ, ಮುಗೀರಾ ಬಿ , ಸೈದ್ ಮತ್ತು ಅಬೀ ಖತ್ತಾಬ್ ಅಲ್ ಅಸದಿ ಶೈಖನ ಮುಂದೆ ಸಾಷ್ಟಾಂಗ ನಮಸ್ಕಾರವನ್ನು ಮಾಡಲು ಶಿಫಾರಸ್ಸು ಮಾಡಿದರು.
ಫಕೀರ್ ವಿರುದ್ಧ ಬಾ ಅಲವಿಗಳು , ಮಕ್ದೂಮ್ ಗಳು ಮತ್ತು ಮಲಬಾರಿನ ಉಲಮಾಗಳ ಜಂಟಿ ಟೀಕೆಗಳು ಅವನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು. ಆದರೂ, ಹೆಚ್ಚಿನ ಸಂದರ್ಭಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ಅವನಿಗೆ ಸಹಾಯ ನೀಡಿದರು. ನಂತರ ಫಕೀರನ ಉತ್ತರಾಧಿಕಾರಿಗಳು ಮಕ್ದೂಮ್‌ಗಳ ಅಡಿಯಲ್ಲಿ ಉಲಮಾಗಳೊಂದಿಗೆ ರಾಜಿ ಮಾಡಿಕೊಂಡು ಸರ್ವ ಇಸ್ಲಾಮೇತರ ಆಚರಣೆಗಳ ಖಾನ್’ಕಾಹನ್ನು ತೆರವುಗೊಳಿಸಿದರು. ಆ ಮೂಲಕ ಮಲಬಾರಿನ ಧಾರ್ಮಿಕ ಕ್ಷೇತ್ರದಲ್ಲಿ ಹಳರಮಿಗಳ ಪ್ರಾಬಲ್ಯವು ಹೆಚ್ಚಾಯಿತು. ಮಲಬಾರಿನ ಧಾರ್ಮಿಕ ವಿಚಾರಗಳಲ್ಲಿ ಬಾ-ಅಲವಿ ಸಂಪ್ರದಾಯವನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಹೆಚ್ಚಾಗಿ ಸಯ್ಯಿದ್ ಸಮುದಾಯವು ಧಾರ್ಮಿಕ-ರಾಜಕೀಯ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಮಧ್ಯ ಏಷ್ಯಾದ ಬುಖಾರ ಪ್ರದೇಶದಿಂದ ಬಂದ ಬುಖಾರಿ ಮನೆತನದವರು ಬಾ-ಅಲವಿಗಳ ಮಾರ್ಗವನ್ನು ಅನುಸರಿಸುತ್ತಾರೆ ಹಾಗೂ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಈ ಸಯ್ಯಿದರುಗಳ ಹಿಡಿತವು ಇನ್ನೂ ದೃಢವಾಗಿ ಉಳಿದಿದೆ.
ಇಂಗ್ಲಿಷ್ ಮೂಲ: ಡಾ. ಹುಸೈನ್ ರಂಡತ್ತಾನಿ ಕನ್ನಡಕ್ಕೆ: ತಂಶೀರ್ ಉಳ್ಳಾಲ್
ಪವಿತ್ರ ಖುರ್‌ಆನ್ ಮತ್ತು ಸಾವಿರದ ಒಂದು ರಾತ್ರಿಗಳು ಎಂಬೆರಡು ಕೃತಿಗಳನ್ನು ಬಿಟ್ಟರೆ ಅರೇಬಿಕ್ ಭಾಷೆಯಿಂದ ಇತರ ಭಾಷೆಗಳಿಗೆ ಅತ್ಯಂತ ಹೆಚ್ಚು ಅನುವಾದಿಸಲ್ಪಟ್ಟ ಕೃತಿ ಹಯ್ಯ್ ಬಿನ್ ಯಖ್ಲಾನ್ ಎನ್ನಬಹುದು. ಫಿಲಾಸಫಸ್ ಆಟೋಡಿಡಾಕ್ಟಸ್ ಎಂದು ಲ್ಯಾಟಿನ್ ಭಾಷೆಯಲ್ಲಿ ವಿಖ್ಯಾತಿ ಪಡೆದಿರುವ ಈ ಕೃತಿ ಮೊದಲ ಅರೇಬಿಕ್ ಕಾದಂಬರಿ ಕೂಡಾ ಹೌದು. ಹನ್ನೆರಡನೆಯ ಶತಮಾನದಲ್ಲಿ ಗ್ರ್ಯಾನಡಾದಲ್ಲಿ ನೆಲೆಸಿ ವಿಜ್ಞಾನ, ತತ್ತ್ವಶಾಸ್ತ್ರ, ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅಬೂ ಬಝಾರ್ ಎಂದು ಪಾಶ್ಚಾತ್ಯರು ಕರೆಯುವ ಅಬೂಬಕರ್ ಇಬ್ನ್ ತುಫೈಲ್ ಈ ಕೃತಿಯ ಗ್ರಂಥಕರ್ತರ ಹೆಸರು.
ಅವರ ಪೂರ್ಣ ಹೆಸರು ಅಬೂಬಕರ್ ಮುಹಮ್ಮದ್ ಬಿನ್ ಅಬ್ದುಲ್ ಮಲಿಕ್ ಬಿನ್ ತುಫೈಲ್. ಅವರು 1110ರ ಸುಮಾರಿಗೆ ಮುರಾಬಿತ್ವೂನ್ (ಮೊರಾವಿಡ್ಸ್) ಆಳ್ವಿಕೆಯಲ್ಲಿದ್ದ ಗ್ರ್ಯಾನಡಾದ ಈಶಾನ್ಯ ಭಾಗದಲ್ಲಿ ಗ್ವಾಡಿಕ್ಸ್ ಎಂದು ಈಗ ಪ್ರಸಿದ್ಧಿ ಪಡೆದ ನಗರದ ಬಳಿ ಜನಿಸಿದರು. ಐಬೇರಿಯನ್ ಉಪಖಂಡದ ಪ್ರಮುಖ ಬೌದ್ಧಿಕ ಕೇಂದ್ರಗಳಾದ ಸೆವಿಲ್ಲೆ ಮತ್ತು ಕೋರ್ಡೋಬಾದಲ್ಲಿ ಅವರು ಅಧ್ಯಯನ ಪೂರ್ಣಗೊಳಿಸಿದರು ಎಂದು ಹೇಳಲಾಗುತ್ತದೆ. ಸ್ಪೇನ್‌ನಲ್ಲಿ ಅವರು ವೈದ್ಯಕೀಯ ಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಭೌತಶಾಸ್ತ್ರ ಮತ್ತು ಇತರ ನೈಸರ್ಗಿಕ ವಿಜ್ಞಾನದ ಜೊತೆಗೆ ಕಾವ್ಯ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿದರು. ವೈದ್ಯನಾಗಿ ಗ್ರ್ಯಾನಡಾದಲ್ಲಿ ಅಲ್ಪ ಕಾಲ ಸೇವೆ ಸಲ್ಲಿಸಿದ ನಂತರ ಅಂದಿನ ಆಡಳಿತಗಾರ ಅಬೂ ಯಾಕೂಬ್ ಯೂಸುಫ್ ಅವರ ಮುಖ್ಯ ಸಲಹೆಗಾರ ಮತ್ತು ಅರಮನೆಯ ವೈದ್ಯರಾಗಿಯೂ ಸೇವೆ ಸಲ್ಲಿಸಿದರು.
ಯವನ ತತ್ವಶಾಸ್ತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದ ಖಲೀಫನ ಸಮ್ಮುಖ ಇಬ್ನ್ ತುಫೈಲ್ ಮತ್ತು ವಯಸ್ಸಿನಲ್ಲಿ ಸಣ್ಣವರಾಗಿದ್ದ ಇಬ್ನ್ ರುಶ್ದ್, ಅರಿಸ್ಟಾಟಲ್ ಮತ್ತು ಪ್ಲೇಟೋನ ವೀಕ್ಷಣೆಯ ಸಿದ್ಧಾಂತಗಳನ್ನು ಚರ್ಚಿಸುತ್ತಿದ್ದರು. ಅರಿಸ್ಟಾಟಲ್ ಗ್ರಂಥಗಳಿಗೆ ಸುಲಭ ಗ್ರಾಹ್ಯವಾದ ವಿವರಣೆಗಳನ್ನು ನೀಡುವಲ್ಲಿ ಇಬ್ನ್ ರುಶ್ದ್ ಅವರ ಯಶಸ್ಸಿಗೆ ಕಾರಣ ಇಂತಹ ಚರ್ಚೆಗಳಾಗಿತ್ತು. ಹಯ್ಯ್ ಬಿನ್ ಯಖ್ಲಾನ್ ಯುರೋಪಿಯನ್ ಜ್ಞಾನಪರ್ವಕ್ಕೆ ಚಾಲನೆ ನೀಡಿದ ಪ್ರಮುಖ ಗ್ರಂಥ ಎನಿಸಿದ್ದು ಇಂಗ್ಲಿಷ್‌ನ ಮೊದಲ ಕಾದಂಬರಿ ರಾಬಿನ್ಸನ್ ಕ್ರೂಸೋ ಸಹಿತ ಅನೇಕ ತಾತ್ವಿಕ ಕೃತಿಗಳು, ಅನೇಕ ಕಾದಂಬರಿಗಳು ಮತ್ತು ಕ್ರಾಂತಿಕಾರಿ ಪರಿಕಲ್ಪನೆಗಳಿಗೆ ಸ್ಫೂರ್ತಿ ನೀಡಿದೆ.
ಮುಸ್ಲಿಂ ಸ್ಪೇನ್‌ನ ಟೊಲಿಡೋ ನಗರದ ಆರ್ಚ್ ಬಿಷಪ್ ರೇಮಂಡ್ ಅಧೀನದಲ್ಲಿ ಅನುವಾದ ಕೇಂದ್ರವೊಂದು ಕಾರ್ಯನಿರ್ವಹಿಸುತ್ತಿತ್ತು. ಇದರ ಮುಖ್ಯಸ್ಥರಾಗಿದ್ದ ಯಹೂದಿ ಚಿಂತಕರನ್ನು ಆಕರ್ಷಿಸಿದ ಪರಿಣಾಮ ಹಯ್ಯ್ ಇಬ್ನ್ ಯಖ್ಲಾನ್ ಗ್ರಂಥ ಮೈಮೋನೈಡ್ಸ್ ಅವರ ಪ್ರಸಿದ್ಧ ಪುಸ್ತಕ ’ಗೈಡ್ ಆಫ್ ದಿ ಪರ್ಪ್ಲೆಕ್ಸ್ʼ ಗೂ ಪ್ರೇರಕ ಎನಿಸಿದೆ..
ಮೈಮೋನೈಡ್ಸ್ ನಂತರ ಸಂಪೂರ್ಣವಾಗಿ ನನೆಗುದಿಗೆ ಬಿದ್ದಿದ್ದ ಕೃತಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಅರಬಿ ಭಾಷಾ ಪ್ರಾಧ್ಯಾಪಕ ಎಡ್ವರ್ಡ್ ಪೊಕ್ಕೋಕ್‌ರವರ ಕಣ್ಣಿಗೆ ಬಿತ್ತು. ಹೀಗೆ 1653ರಲ್ಲಿ ಅಲೆಪ್ಪೊದಲ್ಲಿನ ಅಂಗಡಿಯಲ್ಲಿ ಅವರು ಹಸ್ತಪ್ರತಿಯನ್ನು ಕಂಡುಹಿಡಿಯುವ ಮೂಲಕ ಈ ಕೃತಿಯ ಎರಡನೆಯ ಯಾನ ಪ್ರಾರಂಭವಾಯಿತು. ಪೊಕ್ಕೋಕ್ ಜೂನಿಯರ್ 1671ರಲ್ಲಿ ಪ್ರಕಟಿಸಿದ ಇದರ ಅನುವಾದ ಯುರೋಪಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.
ಜಾನ್ ಲಾಕ್‌ರನ್ನು ಹೆಚ್ಚು ಆಕರ್ಷಿಸಿದ ಈ ಕೃತಿ ಅವರು ಮುಂದಿಟ್ಟ ಟಬುಲ ರಾಸ (Tabula rasa) ಎಂಬ ಹೊಸ ಪರಿಕಲ್ಪನೆಗೂ ದಾರಿ ಮಾಡಿಕೊಟ್ಟಿತು. ಲಂಡನ್‌ನಲ್ಲಿ ನಡೆದ ಹಯ್ಯ್ ಬಿನ್ ಯಖ್ಲಾನ್ ಬಗೆಗಿನ ಚರ್ಚೆಯನ್ನು ಲಾಕ್ ಬಹಳ ಭಾವಪರವಶರಾಗಿ ಸ್ಮರಿಸಿದ್ದಾರೆ. ಪ್ರಸ್ತುತ ಚರ್ಚೆಯ ನಂತರ ಪ್ರಮುಖ ತತ್ವಜ್ಞಾನಿ ಸ್ಪಿನೋಜಾರವರು ಈ ಕೃತಿಯನ್ನು ಡಚ್ ಭಾಷೆಗೆ ಭಾಷಾಂತರಿಸಬೇಕೆಂದು ಅಪೇಕ್ಷಿಸಿದ್ದರು. ಲೀಬ್ನಿಝ್‌ರವರು ಇದನ್ನು ಜರ್ಮನ್ ಭಾಷೆಗೆ ಭಾಷಾಂತರಿಸಬೇಕೆಂದೂ ಆಗ್ರಹ ವ್ಯಕ್ತಪಡಿಸಿದ್ದರು. ನಂತರ, ಡೇನಿಯಲ್ ಡಿಫೊರವರ ಚಟುವಟಿಕೆಗಳ ಪರಿಣಾಮ ಈ ಕೃತಿ ತತ್ವಶಾಸ್ತ್ರದ ಗೋಪುರದಿಂದ ಕೆಳಗಿಳಿದು ಜನಪ್ರಿಯ ಸಾಹಿತ್ಯವಾಗಿ ಎಲ್ಲರನ್ನು ತಲುಪಿತು. ಈ ಶ್ರೇಷ್ಠ ಕೃತಿಯ ಪಡಿಯಚ್ಚುಗಳನ್ನು ರುಡ್ಯಾರ್ಡ್ ಕಿಪ್ಲಿಂಗ್‌ನ ಜಂಗಲ್ ಬುಕ್, ಎಡ್ಗರ್ ರೈಸ್‌ಬರೋ ಅವರ ಟಾರ್ಜನ್ ಸರಣಿ ಹಾಗೂ 2001ರಲ್ಲಿ ಬಿಡುಗಡೆಯಾದ ಯಾನ್ ಮಾರ್ಟೆಲ್‌ನ ಲೈಫ್ ಆಫ್ ಪೈನಲ್ಲೂ ಕಾಣಬಹುದು.
ಕೃತಿ ಪರಿಚಯ:
ಜಾಗೃತನ ಮಗ ಚೈತನ್ಯ ಎಂದಾಗಿದೆ ಹಯ್ಯ್ ಬಿನ್ ಯಖ್ಲಾನ್ ಎಂಬುದರ ಅರ್ಥ. ಇರವಿನ ರಹಸ್ಯಗಳನ್ನು ಅತೀವ ಜಾಗರೂಕತೆಯಿಂದ ಹುಡುಕಾಡುತ್ತಾ ಪರಿಸರದ ಹಾಗೂ ಸುತ್ತಮುತ್ತಲಿನ ವಿದ್ಯಮಾನಗಳನ್ನು ಒರೆಗೆ ಹಚ್ಚುತ್ತಾ ಒಂದು ಮಾನವಾತ್ಮ ಕರಗತಗೊಳಿಸುವ ಪದಗಳಿಗೆ ನಿಲುಕದ ಚೈತನ್ಯವನ್ನು ಕೃತಿಯ ಹೆಸರು ಪ್ರತಿಧ್ವನಿಸುತ್ತದೆ. ಇಬ್ನ್ ತುಫೈಲ್‌ರವರ ಈ ಕೃತಿಯನ್ನು ಇಸ್ಲಾಮಿನಲ್ಲಿನ ಒಂದು ವಿಶಿಷ್ಟ ಸೂಫಿ ಚಿಂತನಾಧಾರೆಯ ಹಾದಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕೃತಿಯ ಹೆಸರು ಸ್ಪಷ್ಟವಾಗಿ ವಿವರಿಸುತ್ತದೆ. ಈ ಕೃತಿಯ ಪೂರ್ಣ ನಾಮ ಹಯ್ಯ್ ಬಿನ್ ಯಖ್ಲಾನ್ ಫೀ ಅಸ್ರಾರಿ ಹಿಕ್ಮತಿಲ್ ಮಶ್ರಿಖಿಯ್ಯ ಎಂದಾಗಿದ್ದು ಖ್ಯಾತ ಸೂಫಿ ಚಿಂತಕ ಶಿಹಾಬುದ್ದೀನ್ ಸುಹ್ರವರ್ದಿ (1153- 1191) ಅವರು ಸಂಪನ್ನಗೊಳಿಸಿದ ಹಿಕ್ಮತುಲ್ ಇಶ್ರಾಕ್‌ನ ಗುಪ್ತ ರಹಸ್ಯಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಮಾಡಿದೆ. ದೈವಿಕ ಜ್ಞಾನದ ಪ್ರತೀಕವಾದ ದಿವ್ಯ ತೇಜಸ್ಸು ಅರಿಸ್ಟಾಟಲ್, ಪ್ಲೇಟೋರಲ್ಲಿ ಮಾತ್ರವಲ್ಲ ಇಮಾಮ್ ಗಝ್ಝಾಲಿ, ಶಿಹಾಬುದ್ದೀನ್ ಸುಹ್ರವರ್ದಿ, ಇಮಾಮ್ ರಾಝಿ ಮತ್ತು ಮುಲ್ಲಾ ಸದ್ರಾರಂತಹ ಮುಸ್ಲಿಂ ದಾರ್ಶನಿಕರ ಗ್ರಂಥಗಳಲ್ಲೂ ಕಾಣಬಹುದು.
ಇಬ್ನ್ ತುಫೈಲ್ ಅವರ ಈ ಕಾದಂಬರಿ ಇಬ್ನ್ ಸೀನಾ ರವರ ಆತ್ಮಚರಿತ್ರೆ ಅಡಕವಾಗಿರುವ ಕಾದಂಬರಿಗಳಾದ ರಿಸಾಲಾತುತ್ವೈರ್ ಮತ್ತು ಸಲಮನ್ ವ ಅಬ್ಸಲ್‌ನಿಂದ ಸ್ಫೂರ್ತಿ ಪಡೆದಿದೆ ಎನ್ನುವುದು ಬಹಳ ಸ್ಪಷ್ಟ. ಸುಹ್ರವರ್ದಿಯವರು ಬರದಿರುವ ರಿಸಾಲತ್ ಫಿ ಹಯ್ಯ್ ಇಬ್ನ್ ಯಖ್ಲಾನ್ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದ ಖಿಸ್ಸತುಲ್ ಗುರ್ಬಾ ಅಲ್ ಗರ್ಬಿಯ್ಯ ಎಂಬ ಗ್ರಂಥ ಈ ಕಾದಂಬರಿಯ ಆಧ್ಯಾತ್ಮಿಕ ಆಯಾಮಗಳ ಹಿಂದಿನ ಪ್ರೇರಕ ಶಕ್ತಿ.
ಹುಡುಕಾಟ- ಅನ್ವೇಷಣೆಗಳ ತರುವಾಯ ದೊರಕುವ ಬೌದ್ಧಿಕ ಬೆಳವಣಿಗೆ ಮತ್ತು ತರ್ಕಬದ್ಧ ಧ್ಯಾನದಿಂದ ಸಿಗುವ ಆಧ್ಯಾತ್ಮಿಕ ಪ್ರಬುದ್ಧತೆ ಶುದ್ಧ ಮನಸ್ಸನ್ನು ಪ್ರಪಂಚದ ಅನಾದಿಯಾದ ಒಂದು ಮೂಲದ ಕಡೆಗೆ ಕೊಂಡೊಯ್ಯುತ್ತದೆ ಎನ್ನುವುದು ಈ ಇಬ್ನ್ ತುಫೈಲ್ ಕೃತಿಯ ಮೂಲ ತತ್ವ. ರಾಬಿನ್ಸನ್ ಕ್ರೂಸೋನ ಹಾಗೆ ಇತರ ಮನುಷ್ಯರೊಂದಿಗೆ ಯಾವುದೇ ಸಂಪರ್ಕವಿಲ್ಲದೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಹಯ್ಯ್‌ಗೆ ಮನುಷ್ಯ ಭಾಷೆ ಗೊತ್ತಿರಲಿಲ್ಲ ಎನ್ನುವುದು ಗಮನಾರ್ಹ. ಭಾಷೆಯೆ ಇರವಿನ ಬೀಡು ಎಂದು ಹೇಳಿದ ಮಾರ್ಟಿನ್ ಹೈಡೆಗರ್‌ರವರ ದೃಷ್ಟಿಕೋನಕ್ಕೆ ವಿಭಿನ್ನವಾಗಿ ಹಯ್ಯ್‌ನ ಇರವಿನ ಹುಡುಕಾಟ ಸಾಗಿದೆ.
ಹಯ್ಯ್ ಎನ್ನುವ ತಾತ್ವಿಕ ಕಥಾಪಾತ್ರ ದೈವಿಕತೆಯ ಸೃಜನಾತ್ಮಕ ವೈಶಿಷ್ಟ್ಯತೆಯ ಸಂಪೂರ್ಣತೆಯೆಂದೂ ದೈವಿಕ ಚೈತನ್ಯದ ವಾಹಕವೆಂದೂ ಸೂಫಿಗಳು ಮಂಡಿಸುವ Perfect intellect (ಪರಿಪೂರ್ಣ ಬುದ್ಧಿ)ಯನ್ನು ಚಿತ್ರೀಕರಿಸುತ್ತದೆ. ಅಲ್ಲಾಹನ ವಿಶೇಷಣಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಹಯ್ಯ್ ಪರಿಕಲ್ಪನೆ ಅವನ ತೊಂಬತ್ತೊಂಬತ್ತು ಹೆಸರುಗಳಲ್ಲೊಂದು. ಆಯತುಲ್ ಕುರ್ಸಿಯಲ್ಲಿ ಅಲ್ಲಾಹನನ್ನು ಹಯ್ಯ್ ಎಂದು ಪರಿಚಯಿಸಲಾಗಿದೆ. ಅದೇ ಸೂಕ್ತದಲ್ಲಿ ಹೇಳಲಾಗುವ ‘ನಿದ್ರೆಯು ಅವನನ್ನು ಅಧೀನಗೊಳಿಸುವುದಿಲ್ಲ’ ಎಂಬುದರ ಸಾರವಾಗಿದೆ ಯಖ್ಲಾನ್. ಪರಮಾತ್ಮನೊಂದಿಗೆ ಮಾನವ ಆತ್ಮವನ್ನು ಸಂಯೋಜಿಸುವ ವಿವಿಧ ಹಂತಗಳನ್ನು ಸೂಫಿ ಭಾಷೆಯಲ್ಲಿ ಹಯ್ಯ್ ಇಬ್ನ್ ಯಖ್ಲಾನ್ ವಿವರಿಸುತ್ತದೆ.
ವಿಷಯ ಮತ್ತು ರಚನೆ:
ತನ್ನನ್ನು ಪ್ರಭಾವಿಸಿದ ಅಲ್ ಫಾರಾಬಿ, ಇಬ್ನ್ ಸೀನಾ, ಇಬ್ನ್ ಬಾಜಾ ಮತ್ತು ಇಮಾಂ ಗಝ್ಝಾಲಿ ಅವರಂತಹ ತತ್ವಜ್ಞಾನಿಗಳನ್ನು ಮುನ್ನುಡಿಯಲ್ಲಿ ಉಲ್ಲೇಖಿಸುವ ಮೂಲಕ ಕೃತಿಯ ಆರಂಭದಲ್ಲೇ ಭದ್ರವಾದ ತಾತ್ವಿಕ ಬುನಾದಿ ಹಾಕಿದ್ದಾರೆ ಇಬ್ನು ತುಫೈಲ್. ಇವರುಗಳು ಧಾರ್ಮಿಕ ಅನುಭವ ಮತ್ತು ತರ್ಕಬದ್ಧ ಚಿಂತನೆಯ ನಡುವೆ ಸಮತೋಲನ ಸ್ಥಾಪಿಸಲು ಬಹಳ ಪ್ರಯತ್ನಪಟ್ಟ ದಾರ್ಶನಿಕ ವ್ಯಕ್ತಿಗಳೆಂದು ಇಬ್ನು ತುಫೈಲ್ ಪರಿಚಯಿಸಿದ್ದಾರೆ. ಇಬ್ನ್ ತುಫೈಲ್ ಅವರ ಉತ್ತರಾಧಿಕಾರಿಯಾಗಿ ಬಂದ ಇಬ್ನ್ ರುಶ್ದ್ ಅವರ ‘ಫಸ್ಲುಲ್ ಮಖಾಲ್ ಫೀ ಮಾ ಬೈನಲ್ ಹಿಕ್ಮತಿ ವಶ್ಶರೀಅತಿ ಮಿನಲ್ ಇತ್ತಿಸಾಲ್’ (ಧರ್ಮ ಮತ್ತು ತತ್ವಶಾಸ್ತ್ರದ ನಡುವಿನ ಸಂಯೋಜನೆ) ಎನ್ನುವ ಗ್ರಂಥ ಜನ್ಮತಾಳಿರುವುದು ಕೂಡಾ ಇದೇ ಪಾತಳಿಯಲ್ಲಿ. ಇಮಾಂ ಗಝ್ಝಾಲಿಯವರ ಫಲ್ಸಫ (ಗ್ರೀಕ್ ತತ್ವಜ್ಞಾನ) ವಿರೋಧಿ ನಿಲುವುಗಳನ್ನು ಇಬ್ನ್ ತುಫೈಲ್ ಟೀಕೆ ಮಾಡಿದ್ದು ಇಬ್ನ್ ರುಶ್ದ್ ಮೇಲೆ ಪ್ರಭಾವ ಬೀರಿತ್ತು.
ಈ ತಾತ್ವಿಕ ಮುನ್ನುಡಿಯ ತರುವಾಯ ಹಿಂದೂ ಮಹಾಸಾಗರದಲ್ಲಿನ ಭೂಮಧ್ಯ ರೇಖೆಗೆ ಹತ್ತಿರವಿರುವ ಸಮಶೀತೋಷ್ಣ ಹವಾಮಾನವಿರುವ ನಿರ್ಜನ ದ್ವೀಪವೊಂದರಲ್ಲಿ ಹಯ್ಯ್ ಆಗಮಿಸುವ ದೃಶ್ಯದ ಆಖ್ಯಾನ ಬರುತ್ತದೆ. ಕಥಾನಾಯಕ ಹಯ್ಯ್‌ನ ಜನ್ಮದ ಬಗ್ಗೆ ಎರಡು ಅಭಿಪ್ರಾಯಗಳನ್ನು ಮಂಡಿಸಲಾಗಿದೆ. ಮೊದಲ ಅಭಿಪ್ರಾಯದ ಪ್ರಕಾರ, ಮನುಷ್ಯನ ಹಸ್ತಕ್ಷೇಪವಿಲ್ಲದೆ ಸ್ವಯಂಪ್ರೇರಿತವಾಗಿ ನೀರನ್ನು ಸೇರಿದ ಜೇಡಿಮಣ್ಣಿನೊಳಕ್ಕೆ ದೇವಸನ್ನಿಧಿಯಿಂದ ನಿರಂತರವಾಗಿ ಪ್ರವಹಿಸುತ್ತಿದ್ದ ಆತ್ಮದ ಪ್ರವೇಶ ನಡೆಯುವುದರೊಂದಿಗೆ ಹಯ್ಯ್ ಜನ್ಮ ತಾಳುತ್ತಾನೆ. ನಂತರ ಆ ಮಣ್ಣು ಮಾಂಸ ಪಿಂಡವಾಗಿ ಪರಿವರ್ತನೆಯಾಗಿ ಮನುಷ್ಯ ಭ್ರೂಣದ ರೂಪವನ್ನು ಪಡೆದುಕೊಳ್ಳುತ್ತದೆ. ಕೊನೆಗೆ ಅದು ಪೂರ್ಣ ಬೆಳವಣಿಗೆ ದಾಖಲಿಸಿದ ಮಗುವಾಗಿ ರೂಪಾಂತರಗೊಳ್ಳುತ್ತದೆ.
ಎರಡನೇ ಅಭಿಪ್ರಾಯದ ಪ್ರಕಾರ ಪ್ರವಾದಿ ಮೂಸಾ ಅಲೈಹಿಸ್ಸಲಾಮರ ಜನನವನ್ನು ಹೋಲುವ ಘಟನೆಗಳು ಹಯ್ಯನ್ನು ನಿರ್ಜನ ದ್ವೀಪಕ್ಕೆ ಕರೆದೊಯ್ಯುತ್ತದೆ. ಆ ಪ್ರಕಾರ ಒಂದು ಊರಿನ ಕ್ರೂರ ಆಡಳಿತಗಾರನೊಬ್ಬನಿಗೆ ಬಹಳ ಸುಂದರಿಯಾದ ಸಹೋದರಿ ಇದ್ದಳು. ಅವಳನ್ನು ಮದುವೆಯಾಗಲು ಆತ ಯಾರನ್ನೂ ಬಿಡುತ್ತಿರಲಿಲ್ಲ. ಯಖ್ಲಾನ್ ಎಂಬ ನೆರೆಯ ದೇಶದ ರಾಜಕುಮಾರನೊಂದಿಗೆ ಗುಪ್ತವಾಗಿ ವಿವಾಹವಾದ ಸಹೋದರಿಗೆ ಶೀಘ್ರದಲ್ಲೇ ಒಂದು ಮಗು ಜನಿಸಿತು. ಅಣ್ಣನಿಗೆ ತಿಳಿಯದಂತೆ ರಾತ್ರಿಯಿಡೀ ಅತ್ಯಂತ ರಹಸ್ಯವಾಗಿ ಮಗುವನ್ನು ಒಂದು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ಹರಿಯಲು ಬಿಡುವುದು ಮಾತ್ರ ಅವರ ಮುಂದಿರುವ ಏಕ ದಾರಿಯಾಗಿತ್ತು. ಕೊನೆಗೆ ಹಯ್ಯನ್ನು ಹೊತ್ತ ಆ ಪೆಟ್ಟಿಗೆಯು ಒಂದು ನಿರ್ಜನ ದ್ವೀಪವನ್ನು ಸೇರಿತು.
ಮುನ್ನುಡಿಯ ನಂತರದ ಮುಖ್ಯ ಭಾಗವನ್ನು ಏಳು ವರ್ಷಗಳಾಗಿ ವಿಂಗಡಿಸಿ ವಿವಿಧ ಹಂತಗಳಲ್ಲಿ ಹಯ್ಯ್‌ನ ಜೀವನದಲ್ಲಿ ಸಂಭವಿಸಿದ ಬದಲಾವಣೆಯ ಬಗ್ಗೆ ವ್ಯವಸ್ಥಿತವಾಗಿ ಚರ್ಚಿಸಲಾಗಿದೆ. ಸೂಫಿ ಚಿಂತನೆಯಲ್ಲಿ ಮಾನವ ಆತ್ಮದ ವಿಕಾಸವನ್ನು ಏಳು ಹಂತಗಳಾಗಿ ವಿಂಗಡಿಸಲಾಗಿದೆ. ಅಹ್ಮದ್ ಗಝ್ಝಾಲಿಯವರ ರಿಸಾಲತು ತ್ವೈರ್‌ನಲ್ಲಿ ಸತ್ಯವನ್ನು ಹುಡುಕುತ್ತಾ ಸಪ್ತ ಸಾಗರದಾಚೆ ಹೋದ ಹಕ್ಕಿಯೊಂದರ ರೂಪಕವನ್ನು ಕಾಣಬಹುದು. ಹಯ್ಯ್ ಇಬ್ನ್ ಯಖ್ಲಾನ್ ಜೀವನವನ್ನು ಸಹ ಇದೇ ರೀತಿ ಸಪ್ತ ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತ ಆರಂಭವಾಗುವುದು ಹಸಿವಿನಿಂದ ಅಳುತ್ತಿದ್ದ ಹಯ್ಯನ್ನು ಇದು ತನ್ನ ಕಳೆದುಹೋದ ಮಗು ಎಂದು ಭಾವಿಸಿದ ಜಿಂಕೆಯೊಂದು ಪೆಟ್ಟಿಗೆಯಿಂದ ತೆಗೆದು ಶುಶ್ರೂಷೆ ಮಾಡುವುದರೊಂದಿಗೆ. ಏಳನೇ ವಯಸ್ಸಿನಲ್ಲಿ ತಾನು ಅಲ್ಲಿರುವ ಇತರ ಜೀವಿಗಳಿಗಿಂತ ಭಿನ್ನ ಎಂದು ಹಯ್ಯ್ ಮನಗಾಣುತ್ತಿದ್ದು ಅಲ್ಲಿಗೆ ಮೊದಲ ಹಂತ ಮುಗಿಯುತ್ತದೆ. ಏತನ್ಮಧ್ಯೆ, ಸಂತೋಷ, ಸ್ನೇಹ, ದುಃಖ, ನಾಚಿಕೆ ಮತ್ತು ಸಂಕೋಚದಂತಹ ಮೂಲಭೂತ ಭಾವನೆಗಳನ್ನು ಅನುಭವಿಸಲು ಆರಂಭಿಸಿದ ಮಗು ಇತರ ಹಿಂಸಾತ್ಮಕ ಪ್ರಾಣಿಗಳ ಹಿಂಸೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು, ಆಹಾರಕ್ಕಾಗಿ ಬೇಟೆಯಾಡಲು ಮತ್ತು ಮೀನು ಹಿಡಿಯಲು ಕಲಿತುಕೊಳ್ಳುತ್ತದೆ.
ಮುಂದಿನ ಹಂತವು ಇಪ್ಪತ್ತೊಂದನೇ ವಯಸ್ಸಿನ ತನಕದ ಹಯ್ಯ್‌ನ ಜೀವನದ ಕುರಿತಾಗಿದ್ದು ಎರಡು ಸಪ್ತಾಬ್ಧಗಳು ಸೇರಿದ ಹದಿನಾಲ್ಕು ವರ್ಷ ಕಾಲಾವಧಿಯ ಕಥೆ ಇದರಲ್ಲಿ ಮೂಡಿಬಂದಿದೆ. ಈ ಅವಧಿಯಲ್ಲಿ ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ತನ್ನ ನಗ್ನತೆ ಮತ್ತು ಬಲಹೀನತೆಯ ಬಗ್ಗೆ ಹಯ್ಯ್ ವಿಪರೀತ ಚಿಂತಿತನಾಗುತ್ತಾನೆ. ಮರದ ಎಲೆಗಳು ಮತ್ತು ಪಕ್ಷಿಗಳ ಚರ್ಮವನ್ನು ಬಳಸಿ ಅವನು ತನ್ನ ನಗ್ನತೆಯನ್ನು ಮರೆಮಾಚಲು ಶ್ರಮಿಸುತ್ತಾನೆ. ಎರಡು ಕಾಲು ಮತ್ತು ಕೈಗಳಿಂದ ನಡೆಯುವುದನ್ನು ರೂಢಿ ಮಾಡಿಕೊಂಡಿದ್ದ ಹಯ್ಯ್ ನೇರ ನಿಂತು ಎರಡು ಕಾಲಲ್ಲಿ ನಡೆಯಲು ಅಭ್ಯಾಸ ಮಾಡತೊಡಗುತ್ತಾನೆ. ಈ ಹಂತದಲ್ಲಿ ಹಯ್ಯ್‌ನ ಬೌದ್ಧಿಕ ಬೆಳವಣಿಗೆಯೂ ಪ್ರಾರಂಭವಾಗುತ್ತದೆ. ವೀಕ್ಷಣೆ-ಪರೀಕ್ಷೆಗಳಿಂದ ಹಾಗೂ ಸೂಕ್ಷ್ಮ ಬುದ್ಧಿಯ ಮೂಲಕ ತನ್ನ ಸುತ್ತಲಿನ ಪ್ರಪಂಚವನ್ನು ಆತ ಅಧ್ಯಯನ ಮಾಡತೊಡಗುತ್ತಾನೆ.
ಪ್ರಕೃತಿಯ ವಸ್ತುಗಳನ್ನು ತನ್ನ ಉದ್ದೇಶ, ಅಗತ್ಯಗಳಿಗೆ ಅನುಸಾರ ಬದಲಾಯಿಸಲು ಹಾಗೂ ಹೊಸತರಲ್ಲಿ ತನ್ನನ್ನು ಬೆರಗುಗೊಳಿಸಿದ್ದ ಬೆಂಕಿಯನ್ನು ನಿಯಂತ್ರಿಸಲು ಆತ ಕಲಿಯುತ್ತಾನೆ. ತಾಯಿಯಾದ ಜಿಂಕೆ ತೀರಿಕೊಂಡಾಗ ತೀವ್ರ ದುಃಖಿತನಾಗಿ ತನ್ನ ತಾಯಿಯ ಸಾವಿಗೆ ಕಾರಣ ತಿಳಿಯಲು ಅವಳ ಕಣ್ಣು, ಮೂಗು, ಕಿವಿಗಳನ್ನು ಪರೀಕ್ಷೆಗೆ ಒಳಪಡಿಸುತ್ತಾನೆ. ಆದರೆ, ಫಲಿತಾಂಶ ಮಾತ್ರ ನಿರಾಶಾದಾಯಕವಾಗಿತ್ತು. ಕೊನೆಗೆ ಸಮಸ್ಯೆಗೆ ಕಾರಣ ದೇಹದ ಬಾಹ್ಯ ಅಂಗಗಳಿಗುಂಟಾದ ಹಾನಿಯಲ್ಲವೆಂದೂ, ಬದಲಾಗಿ ದೇಹದೊಳಗೆ ಎಲ್ಲೋ ಏನೋ ಸಮಸ್ಯೆಯಿದೆ ಎಂಬ ನಿಗಮಕ್ಕೆ ಬರುತ್ತಾನೆ. ಕಲ್ಲುಗಳನ್ನು ಚೂಪು ಮಾಡಿ ದೇಹವನ್ನು ಮುರಿಯಲು ಪ್ರಾರಂಭಿಸುತ್ತಾನೆ. ಜಿಂಕೆಯ ದೇಹವನ್ನು ಸೀಳಿದಾಗ ಅದರ ಮಧ್ಯದಲ್ಲಿ ಅದರ ಹೃದಯವನ್ನು ಕಂಡಾಗ ಆತ ತುಂಬಾ ಆಶ್ಚರ್ಯಪಡುತ್ತಾನೆ.
ಹೃದಯವನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಿದ ಬಳಿಕ ಅದರೊಳಗೆ ಏನೋ ಸಮಸ್ಯೆ ನಡೆದಿರಬೇಕು ಎಂಬ ನಿರ್ಧಾರಕ್ಕೆ ಬರುತ್ತಾನೆ. ಅದರೊಳಗೆ ಕಂಡುಬಂದ ಎರಡು ಕೋಣೆಗಳ ಪೈಕಿ ಒಂದು ರಕ್ತದಿಂದ ತುಂಬಿರುವುದನ್ನು ಹಾಗೂ ಇನ್ನೊಂದು ಖಾಲಿಯಾಗಿರುವುದನ್ನು ಗಮನಿಸುತ್ತಾನೆ. ಖಾಲಿ ಇರುವ ಕೋಣೆಯಿಂದ ಏನೋ ಹೊರಟು ಹೋಗಿರುವುದೇ ಮರಣಕ್ಕೆ ಕಾರಣ ಎಂದು ಅರ್ಥ ಮಾಡಿಕೊಳ್ಳುತ್ತಾನೆ. ತಾಯಿಯ ಪ್ರಾಣಪಕ್ಷಿ ಹೊರಟು ಹೋದ ನಂತರ ಮತ್ತೆ ಈ ನಿರ್ಜೀವ ದೇಹದಿಂದ ಏನು ಪ್ರಯೋಜನ? ಹಯ್ಯ್‌ನ ಮನಸ್ಸು ಆಲೋಚನೆಗೆ ಹತ್ತಿಕೊಳ್ಳುತ್ತದೆ. ಹಾಗಾಗಿ ಸಾವಿನ ನಂತರವೂ ಬದುಕಬಲ್ಲ ಅಭೌತಿಕ ಶಕ್ತಿಯ ಬಗೆಗಿನ ಚಿಂತನೆಗಳು ಅವನನ್ನು ಅತಿಯಾಗಿ ಕಾಡತೊಡಗುತ್ತದೆ. ತಾಯಿಯ ಮರಣ ಭೌತಿಕ ಜೀವನ ನಶ್ವರ ಹಾಗೂ ಆತ್ಮವು ಶಾಶ್ವತ ಎನ್ನುವ ಗ್ರಹಿಕೆಯನ್ನು ಅವನಿಗೆ ನೀಡುತ್ತದೆ. ನಂತರ ತಾಯಿಯ ಹೃದಯದಿಂದ ಕಣ್ಮರೆಯಾದ ನಿಗೂಢ ವಸ್ತು ಇತರ ಪ್ರಾಣಿಗಳ ಹೃದಯದಲ್ಲಿ ಕೂಡಾ ಇದೆಯೇ ಎಂದು ಪರಿಶೋಧಿಸಲು ಜೀವಂತ ಪ್ರಾಣಿಯನ್ನು ಕಟ್ಟಿ ಹಾಕಿ ಅದರ ಹೃದಯವನ್ನು ಸೀಳಿ ತಪಾಸಣೆ ಮಾಡುವ ಹಯ್ಯನ್ನು ಕೂಡಾ ನಮಗೆ ಕಾದಂಬರಿಯಲ್ಲಿ ಕಾಣಬಹುದು. ಅವುಗಳ ಹೃದಯದ ಎಡ ಕೋಣೆಯಲ್ಲಿ ಆವಿ ಅಥವಾ ಬಿಳಿ ಮೋಡದಂತಹ ವಸ್ತುವನ್ನು ಕಂಡ ಹಯ್ಯ್ ಅದನ್ನು ಮುಟ್ಟಿ ನೋಡುತ್ತಾನೆ. ಅಸಹನೀಯ ಬಿಸಿ ತಾಳಲಾರದೆ ತನ್ನ ಕೈಯನ್ನು ಹಿಂದೆಳೆದದ್ದೇ ತಡ ಪ್ರಾಣಿ ತಕ್ಷಣವೇ ಸತ್ತು ಹೋಗುತ್ತದೆ. ಹೃದಯದ ಎಡ ಕೋಣೆಯಲ್ಲಿರುವ ಬೆಚ್ಚಗಿನ ಆವಿ ಜೀವ ನೆಲೆಸಲು ಹಾಗೂ ಬದುಕಲು ಸಹಾಯ ಮಾಡುತ್ತದೆ ಎಂಬ ವಾಸ್ತವ ಆಗ ಅವನಿಗೆ ಮನವರಿಕೆಯಾಗುತ್ತದೆ.
ಈ ಆಸಕ್ತಿದಾಯಕ ಅರಿವು ಜೀವಿಗಳ ಆಂತರಿಕ ರಚನೆ ಮತ್ತು ನರಮಂಡಲದ ಬಗ್ಗೆ ಆಳವಾಗಿ ಪರಿಶೀಲಿಸಲು ಅವನಿಗೆ ಪ್ರೇರಣೆ ನೀಡುತ್ತದೆ. ಈ ಅವಧಿಯಲ್ಲಿ ಆತ ಪ್ರಾಣಿಗಳ ಚರ್ಮದಿಂದ ಬಟ್ಟೆ ಮತ್ತು ಬೂಟು-ಚಪ್ಪಲಿಗಳನ್ನು ತಯಾರಿಸಲು ಕಲಿಯುತ್ತಾನೆ. ಅಲ್ಲದೆ, ಗುಬ್ಬಚ್ಚಿಯ ಗೂಡನ್ನು ವೀಕ್ಷಿಸುವ ಮೂಲಕ, ನಿರ್ಮಾಣ ಕಲೆಯನ್ನು ಕರಗತ ಮಾಡಿಕೊಂಡು ಸ್ವತಃ ಒಂದು ಸಣ್ಣ ಉಗ್ರಾಣವನ್ನೂ ಮತ್ತು ಅಡುಗೆ ಕೋಣೆಯನ್ನೂ ನಿರ್ಮಿಸುತ್ತಾನೆ. ಪ್ರಾಣಿ-ಪಕ್ಷಿಗಳನ್ನು ಪಳಗಿಸುವುದರಲ್ಲಿಯೂ ಪರಿಣತಿ ಪಡೆಯುತ್ತಾನೆ. ಇಂತಹ ಸಂಶೋಧನೆಗಳಲ್ಲಿ ಮುಳುಗಿದ್ದ ಆತ ಇಪ್ಪತ್ತೊಂದನೇ ವಯಸ್ಸು ತಲುಪುವಾಗ ಪ್ರಾಣಿಗಳ ಅಂಗರಚನೆಯ ಬಗ್ಗೆ ನಿಖರವಾಗಿ ತಿಳಿಯುವಲ್ಲಿ ಯಶಸ್ವಿಯಾಗಿದ್ದ.
28 ವರ್ಷ ವಯಸ್ಸಿನವರೆಗಿನ ಹಯ್ಯ್‌ನ ಜೀವನದ ಕತೆಯೆ ಮುಂದಿನ ಹಂತ. ಈ ವಯಸ್ಸಿನಲ್ಲಿ ಹಯ್ಯ್ ಜೀವಿಗಳ ನಡುವಿನ ಸಜಾತೀಯತೆ ಮತ್ತು ವಿಜಾತೀಯತೆ, ಏಕತೆ ಮತ್ತು ಬಹುತ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದನ್ನು ಕಾಣಬಹುದು. ವ್ಯತ್ಯಾಸಗಳ ಆಧಾರದ ಮೇಲೆ ಪ್ರಾಣಿಗಳನ್ನು ವಿವಿಧ ವರ್ಗಗಳಾಗಿ ವರ್ಗೀಕರಿಸಿದಾಗ, ಅವುಗಳಲ್ಲಿ ಸಾಮಾನ್ಯವಾಗಿ ಮೂರು ಮೂಲಭೂತ ಗುಣಲಕ್ಷಣಗಳು ಇರುವುದನ್ನು ಪತ್ತೆಹಚ್ಚಲು ಆತನಿಗೆ ಸಾಧ್ಯವಾಯಿತು. ಅ ಮೂರು ಗುಣಲಕ್ಷಣಗಳು: ಇಂದ್ರಿಯ (ದೃಷ್ಟಿ, ವಾಸನೆ, ರುಚಿ, ಸ್ಪರ್ಶ ಮತ್ತು ಶ್ರವಣ) ಗ್ರಹಿಕೆ, ಆಹಾರ ಮತ್ತು ಸ್ವತಂತ್ರ ಚಲನೆ. ಸಸ್ಯಗಳ ವೀಕ್ಷಣೆಯಿಂದ ಸ್ವತಂತ್ರ ಚಲನೆಯನ್ನು ಹೊರತುಪಡಿಸಿ ಉಳಿದೆರಡು ಮೂಲಭೂತ ಗುಣಲಕ್ಷಣಗಳು ಅವುಗಳಲ್ಲಿವೆ ಎನ್ನುವುದನ್ನೂ ಆತ ಮನಗಾಣುತ್ತಾನೆ. ನಿರ್ಜೀವ ವಸ್ತುಗಳಲ್ಲಿ ಈ ಗುಣಲಕ್ಷಣಗಳು ಇಲ್ಲ ಎನ್ನುವುದೂ ಆತನಿಗೆ ತಿಳಿಯುತ್ತದೆ. ಉದ್ದ, ಅಗಲ ಮತ್ತು ಆಳ ಎಂಬ ಮೂರು ಗುಣಲಕ್ಷಣಗಳು ಮಾತ್ರ ಅವುಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದು.
ಮಾತ್ರವಲ್ಲ ಈ ಮೂರು ಗುಣಲಕ್ಷಣಗಳು ಎಲ್ಲಾ ಚರಾಚರಗಳಲ್ಲೂ ಇವೆ ಎಂದು ಆತನಿಗೆ ಗೊತ್ತಾಗುತ್ತದೆ. ಪ್ರಕೃತಿಯ ಬಗೆಗಿನ ಈ ಹುಡುಕಾಟದಿಂದ ಇರವು ಒಂದೇ ಆಗಿದ್ದು ಬಹುತ್ವ ಅದರ ಅಭಿವ್ಯಕ್ತಿಯಾಗಿರುತ್ತದೆ ಎಂಬ ಅರಿವನ್ನು ಪಡೆಯಲು ಅವನಿಗೆ ಸಾಧ್ಯವಾಯಿತು. ಮುಂದುವರೆದು ಮತ್ತಷ್ಟು ಅವಲೋಕನ ಮಾಡಿದಾಗ ಅವನು ತನ್ನ ಸುತ್ತಲಿನ ಎಲ್ಲವನ್ನೂ ಸಂಯೋಜಿಸುವ ಇನ್ನೊಂದು ವಿಷಯವನ್ನು ಕಂಡುಕೊಂಡನು. ಅವು ರೂಪ ಅಥವಾ ಆಕಾರ.
ರೂಪ ಅಥವಾ ಆಕಾರಗಳ(forms) ಬಗೆಗಿನ ಅರಿವು ಆಧ್ಯಾತ್ಮಿಕ ಕ್ಷೇತ್ರಕ್ಕೆ ಆತನ ಮೊದಲ ಹೆಜ್ಜೆಯಾಗಿತ್ತು. ಈ ಹಂತದಲ್ಲಿ ಪರಿಸರ ಅಧ್ಯಯನದಿಂದ ಪ್ರತಿಯೊಂದು ಘಟನೆಯ ಹಿಂದೆ ಒಂದು ಕಾರಣ ಇದೆ ಎನ್ನುವ ಕಾರ್ಯಕಾರಣದ ಮರ್ಮವನ್ನೂ ಆತ ಗ್ರಹಿಸಿಕೊಂಡಿದ್ದ. ನಂತರ ಆಕಾಶ ಲೋಕದ ಗೋಳಗಳು ಮತ್ತು ಸೂರ್ಯ-ಚಂದ್ರಗಳನ್ನು ಗಮನಿಸಿದ ಕಥಾ ನಾಯಕ ಹಯ್ಯ್ ಅವೆಲ್ಲವೂ ತಂತಮ್ಮ ಕಕ್ಷೆಗಳಲ್ಲಿ ನಿರಂತರವಾಗಿ ಚಲಿಸುತ್ತಿದೆ ಎನ್ನುವ ವಾಸ್ತವವನ್ನು ಅರಿತುಕೊಳ್ಳುತ್ತಾನೆ. ಅದರೊಂದಿಗೆ ಅವನ ಮನಸ್ಸು ದಾರ್ಶನಿಕ ಚಿಂತನೆಗಳ ಅಲೆಗಳೆದ್ದು ಪ್ರಕ್ಷುಬ್ಧಗೊಳ್ಳುತ್ತದೆ. ಆಕಾಶದಲ್ಲಿರುವ ಗೋಳಗಳು ಮತ್ತು ತಾರೆಗಳು ರೂಪುಗೊಳ್ಳುವುದು ಬೆಳಕಿನಿಂದಾದರೆ ಆ ಬೆಳಕನ್ನು ನೀಡುವ ಮೂಲ ಜ್ಯೋತಿಯ ಪ್ರಭೆಯು ಅದೆಷ್ಟು ತೀವ್ರವಾಗಿರಬಹುದೆಂದು ಆತ ಊಹಿಸುತ್ತಾನೆ. ಸರ್ವ ಜೀವ ಜಾಲಗಳ ಮೂಲ ಅದುವೆ ಆಗಿರಬಹುದೆನ್ನುವ ನಿಗಮಕ್ಕೆ ಆತ ಬರುತ್ತಾನೆ
ನಂತರದ ಭಾಗದಲ್ಲಿರುವುದು 28ರಿಂದ 35ರ ತನಕದ ವಯಸ್ಸಿನ ಹಯ್ಯಿನ ವೃತ್ತಾಂತ. ಪ್ರಪಂಚ ಮತ್ತು ನಕ್ಷತ್ರಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಹಯ್ಯ್‌ಗೆ ಅವುಗಳ ಮಿತಿಯನ್ನು (finitude) ಬಗ್ಗೆ ಅರಿವಾಗುತ್ತದೆ. ಬಹುತ್ವ ಹಾಗೂ ವೈವಿಧ್ಯತೆಯಾಚೆಗೆ ಏಕತ್ವದ ಬಿಂದುವಿನಲ್ಲಿ ಅವುಗಳನ್ನು ಪೋಣಿಸಲು ಹಯ್ಯ್ ಪ್ರಯತ್ನಿಸುತ್ತಾನೆ. ಈ ಮಹಾ ವಿಸ್ಮಯದ ಹಿಂದೆ ಕೆಲಸ ಮಾಡುತ್ತಿರುವ ಸೃಷ್ಟಿಕರ್ತನು ಪರಿಮಿತಿಯ ಗಡಿಗಳಿಗೆ ಸೀಮಿತವಾಗಿಲ್ಲ ಎಂದು ಅವನಿಗೆ ನಂತರ ಅರ್ಥವಾಗುತ್ತದೆ. ಈ ಹಂತದಲ್ಲಿ ಆಕಾಶಕಾಯಗಳ ಗೋಳಾಕಾರ (spherical), ನಕ್ಷತ್ರಗಳು ಮತ್ತು ಗ್ರಹಗಳ ಚಲನೆಯ ವೃತ್ತಾಕಾರದ (circular) ಬಗ್ಗೆ ಆತ ತಿಳಿದುಕೊಳ್ಳುತ್ತಾನೆ. ನಕ್ಷತ್ರಗಳ ಬಗೆಗಿನ ಆಳ ಜ್ಞಾನವನ್ನು ಪಡೆದ ನಂತರ ಅವನ ಮನಸ್ಸು ಪ್ರಪಂಚದ ಶಾಶ್ವತತೆಯ (eternity) ಬಗ್ಗೆ ಗಂಭೀರ ಚಿಂತನೆಗಳತ್ತ ವಾಲುತ್ತದೆ. ಪ್ರಪಂಚವು ಒಂದು ನಿರ್ದಿಷ್ಟ ಸಮಯದಲ್ಲಿ ಶೂನ್ಯತೆಯಿಂದ ಸೃಷ್ಟಿಯಾಯಿತೇ (created in time) ಅಥವಾ ಪ್ರಾರಂಭ ಅಥವಾ ಅಂತ್ಯವಿಲ್ಲದೆ ಶಾಶ್ವತವಾಗಿ ನೆಲೆಗೊಳ್ಳಲಿದೆಯೇ ಎಂಬ ಸಂದೇಹವನ್ನು ಪರಿಹರಿಸಲು ಅವನು ತೀವ್ರ ಹೆಣಗಾಡಿದನು. ಎರಡೂ ದೃಷ್ಟಿಕೋನಗಳ ಬಗೆಗಿನ ಪರ- ವಿರೋಧ ವಾದಗಳೊಂದಿಗೆ ಆಸಕ್ತಿದಾಯಕ ಚರ್ಚೆಯಲ್ಲಿ ತೊಡಗಿಕೊಂಡ ಅವನು ಅಂತಿಮವಾಗಿ ಅಲಿಪ್ತ ನೀತಿಯನ್ನು (ಎರಡೂ ಕಡೆಗೆ ಸೇರದಿರುವುದು) ಸ್ವೀಕರಿಸಿದನು. ಪ್ರಪಂಚದ ಶಾಶ್ವತತೆಯ ಬಗೆಗಿನ ಚರ್ಚೆಗೂ ಈ ಬ್ರಹ್ಮಾಂಡದ ಸೃಷ್ಟಿಕರ್ತನ ಮೇಲಿನ ವಿಶ್ವಾಸಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬ ತೀರ್ಮಾನಕ್ಕೆ ಅವನು ಬರುತ್ತಾನೆ.
ನಂತರ, ಸೃಷ್ಟಿ ವಿಶ್ವದ ವಿಸ್ಮಯದತ್ತ ತನ್ನ ಕಣ್ಣುಗಳನ್ನು ತೆರೆದ ಹಯ್ಯ್ ಸೂಕ್ಷ್ಮ ಜೀವಿಗಳ ಸೃಷ್ಟಿಯಲ್ಲಿನ ಸಮಗ್ರ ಜ್ಞಾನಿಯ ಸ್ಪರ್ಶವನ್ನು ಕಂಡು ಬೆರಗುಗೊಳ್ಳುತ್ತಾನೆ. ಈ ಸೃಜನ ವಸಂತದ ತಾಳ ಸಂಯೋಜನೆಗೆ ಮಾರುಹೋದ ಹಯ್ಯ್‌ನ ಮನದಲ್ಲಿ ಸೃಷ್ಟಿಕರ್ತನೊಂದಿಗಿನ ಉತ್ಕಟ ಪ್ರೀತಿ ಅನುರಾಗ ಉಕ್ಕಿ ಹರಿಯುತ್ತದೆ. ಪ್ರಪಂಚವು ನಶ್ವರವೆಂದೂ, ಸೃಷ್ಟಿಕರ್ತನು ಅಜರಾಮರನೆಂದೂ ಅರಿತುಕೊಳ್ಳುವುದರೊಂದಿಗೆ ಈ ಹಂತವು ಕೊನೆಗೊಳ್ಳುತ್ತದೆ.
50 ವರ್ಷ ವಯಸ್ಸಿನವರೆಗಿನ ಐದನೇ ಹಂತದಲ್ಲಿ ಮೂರು ರೀತಿಯ ಔನ್ನತ್ಯಗಳು ಹಯ್ಯ್‌ನ ಜೀವನದಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ ದೃಗ್ಗೋಚರವಲ್ಲದ ನೈಜ ಅಸ್ತಿತ್ವದ ಬಗ್ಗೆ ತಿಳಿದುಕೊಂಡು ಭೌತಿಕ ಲೋಕದ ಜುಜುಬಿ ಆಲೋಚನೆಗಳಿಂದ ನಿರ್ಗಮಿಸುತ್ತಾನೆ. ಅಪ್ರತಿಮವಾದ ಸೌಂದರ್ಯದ ಅತೀಂದ್ರಿಯ ದರ್ಶನದಲ್ಲಿ ಲೀನವಾಗುವ ಆತನಿಗೆ ತನ್ನ ಭೌತಿಕ ಅವಶ್ಯಕತೆಗಳು ಈ ಆಪ್ಯಾಯಮಾನ ಆನಂದಕ್ಕೆ ಅಡ್ಡಿಯಾಗಬಹುದೇ ಎನ್ನುವ ಕಳವಳಕ್ಕೆ ಈಡಾಗುತ್ತಾನೆ. ದಿವ್ಯ ಸೌಂದರ್ಯದ ಅನುಭವ ಯಾವುದೇ ಅಡೆತಡೆಯಿಲ್ಲದೆ ಸಿಗುತ್ತಿರಬೇಕೆಂದು ಬಗೆದ ಹಯ್ಯ್ ಅದರ ಮೇಲೆ ಸಂಪೂರ್ಣವಾಗಿ ಗಮನ ಹರಿಸುತ್ತಾನೆ. ದೀರ್ಘ ಆಲೋಚನೆಯ ನಂತರ, ಪ್ರಾಣಿಗಳಿಗೆ ಅಂತಹಾ ಒಂದು ಅಸ್ತಿತ್ವದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದುದರಿಂದ, ಅವುಗಳ ಜತೆಗಿನ ಜೀವನ ಆ ದಿವ್ಯ ಅನುಭವದಿಂದ ದೂರವಿಡಲಿದೆ ಎಂದು ಅರಿತುಕೊಳ್ಳುತ್ತಾನೆ. ಆಮೇಲೆ, ಗ್ರಹ-ತಾರೆಗಳನ್ನು ವೀಕ್ಷಿಸುವ ಹಯ್ಯ್ ದಿವ್ಯ ಸೌಂದರ್ಯದ ಬಗೆಗಿನ ಸ್ವೋಪಜ್ಞತೆ ಸ್ವಯಂ ಅವುಗಳ ಚಲನೆಗೆ ಚುರುಕಾಗಿಸಿದೆ ಹಾಗೂ ಒಂದು ಮಾರ್ಗದಲ್ಲಿ ನೆಲೆಗೊಳ್ಳಿಸಿದೆ ಎಂದು ಬಗೆಯುತ್ತಾನೆ. ಹೀಗಾಗಿ, ತನ್ನ ಜೀವನವನ್ನೂ ಒಂದು ನಿಗದಿತ ಹಾದಿಯಲ್ಲಿ ಸಾಗಿಸಬೇಕೆಂದು ಬಯಸುವ ಹಯ್ಯ್ ವಿಭಿನ್ನ ವಿಧಿವಿಧಾನಗಳು ಒಳಗೊಂಡಿರುವ ನೈತಿಕತೆಯ ಹಾದಿಯಲ್ಲಿರುವ ಜೀವನಕ್ರಮವೊಂದನ್ನು ರೂಪಿಸುತ್ತಾನೆ. ಅನೂಹ್ಯ ಸೌಂದರ್ಯದ ಒಡೆಯನ ಆ ವಿಶೇಷ ಶಕ್ತಿಯನ್ನು ನಮ್ರತೆಯೊಂದಿಗೆ ಆರಾಧನೆ ಮಾಡುವುದು ಹಯ್ಯ್‌ನ ಜೀವನದ ಒಂದು ಭಾಗವಾಗಿ ಮಾರ್ಪಡುತ್ತದೆ.
ದಿವ್ಯ ಆತ್ಮದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗುವಷ್ಟರ ಮಟ್ಟಿಗೆ ಧ್ಯಾನಾತ್ಮಕತೆಯನ್ನು ಹಯ್ಯ್ ಈ ವಯಸ್ಸಿನ ಮೂರನೇ ಹಂತದಲ್ಲಿ ಹಯ್ಯ್ ಪಡೆಯುತ್ತಿದ್ದು ಇದು ಅವನ ಆಧ್ಯಾತ್ಮಿಕ ಅನ್ವೇಷಣೆಗಳ ಒಂದು ಪರಾಕಾಷ್ಠೆ ಕೂಡಾ ಹೌದು. ಆಧ್ಯಾತ್ಮಿಕ ಜಾಗೃತಿಯ ಈ ಹಂತದಲ್ಲಿ ಸೃಷ್ಟಿಕರ್ತನ ಹಿತಗಳ ಕಡೆಗೆ ಆತ್ಮದ ಮೂಲಕ ನಿಶಾಯಾನ ನಡೆಸುತ್ತಾನೆ ಹಯ್ಯ್. ಧ್ಯಾನದ ಈ ಹಂತಗಳನ್ನು ಜಯಿಸುವ ಮೂಲಕ ಅವನಿಗೆ ಇಹದ ಎಲ್ಲಾ ಭ್ರಮೆಗಳನ್ನು ಬದಿಗಿಟ್ಟು ಸಂಪೂರ್ಣವಾಗಿ ಸೃಷ್ಟಿಕರ್ತನ ಸನ್ನಿಧಿಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಕೊನೆಗೆ ಜ್ಞಾನದ ಉತ್ತುಂಗದಲ್ಲಿ ದೇವದರ್ಶನ ಭಾಗ್ಯವು ಅವನನ್ನು ಬಂದು ಸೇರುವುದರೊಂದಿಗೆ ಈ ಹಂತವು ಕೊನೆಗೊಳ್ಳುತ್ತದೆ.
ಆರನೇ ಅಥವಾ ಅಂತಿಮ ಹಂತದಲ್ಲಿ ಇಂದ್ರಿಯಗಳನ್ನು ಮೀರಿದ ದರ್ಶನಗಳನ್ನು ಪಡೆದ ಹಯ್ಯ್ ದೈವ ಧ್ಯಾನದಿಂದ ಒಂದು ಕ್ಷಣವೂ ದೂರ ನಿಲ್ಲದೆ ಎಲ್ಲಾ ಸಮಯದಲ್ಲೂ ಧ್ಯಾನ-ಆರಾಧನೆಯಲ್ಲೇ ಸಮಯ ಕಳೆಯುತ್ತಾನೆ. ತನ್ನ ಉಳಿದ ಜೀವನವನ್ನು ಇಹದ ಇನಿತು ಛಾಯೆ ಕೂಡಾ ಸ್ಪರ್ಶಿಸದ ಹಾಗೆ ಸಂಪೂರ್ಣತೆಯ ಔನ್ನತ್ಯದಲ್ಲಿ ಕಳೆಯುವುದರೊಂದಿಗೆ ಈ ಹಂತವು ಕೊನೆಗೊಳ್ಳುತ್ತದೆ. ಆದರೆ ಹಯ್ಯ್ ಜೀವನದಲ್ಲಿ ನಡೆದ ಮಹತ್ವಪೂರ್ಣ ತಿರುವು ನೆರೆಯ ದ್ವೀಪದಿಂದ ಬಂದ ‘ಅಬ್ಸಲ್’ನನ್ನು ಭೇಟಿಯಾಗುವುದರೊಂದಿಗೆ ಪ್ರಾರಂಭವಾಗುತ್ತದೆ. ಇಬ್ನ್ ತುಫೈಲ್ ಮುಂದೆ ಹಯ್ಯ್- ಅಬ್ಸಲ್ ಭೇಟಿಯನ್ನು ವಿವರಿಸುತ್ತಾರೆ.
ಹಯ್ಯ್‌ನ ದ್ವೀಪದ ಸಮೀಪ ಇದ್ದ ಜನರ ವಾಸ್ತವ್ಯ ಇರುವ ದ್ವೀಪವೊಂದರಲ್ಲಿ ಒಂದು ಪ್ರವಾದಿಯ ಅನುಯಾಯಿಗಳಾದ ಧಾರ್ಮಿಕ ವಿಶ್ವಾಸಿಗಳು ಆಗಮಿಸುತ್ತಾರೆ. ಅವರ ಜೀವನ ಶೈಲಿಯಿಂದ ಅವರು ಜನರನ್ನು ಧರ್ಮದತ್ತ ಆಕರ್ಷಿಸುತ್ತಾರೆ. ಅವರಲ್ಲಿ ಒಳ್ಳೆಯ ಇಬ್ಬರು ಸ್ನೇಹಿತರಿದ್ದರು. ಅಬ್ಸಲ್ ಮತ್ತು ಸಲಮನ್. ಇಬ್ಬರೂ ಧರ್ಮದ ಆಚಾರ-ವಿಚಾರಗಳನ್ನು ಸರಿಯಾಗಿ ಪಾಲಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಧಾರ್ಮಿಕ ಗ್ರಂಥಗಳಲ್ಲಿನ ಸುಲಭ ಗ್ರಾಹ್ಯವಲ್ಲದ ಪರಾಮರ್ಶೆಗಳನ್ನು ಹೇಗೆ ಓದಬೇಕು ಎಂಬ ವಿಷಯದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು. ಅಂತಹಾ ಉಲ್ಲೇಖಗಳನ್ನು ಅವುಗಳ ಭಾಷಾರ್ಥ ಪ್ರಕಾರವೇ ಅರ್ಥೈಸಬೇಕು ಎಂದು ಸಲಮನ್ ವಾದಿಸುತ್ತಿದ್ದ. ಆದರೆ, ಅಬ್ಸಲ್ ಅವುಗಳಿಗೆ ರೂಪಕಾತ್ಮಕ (ಮಜಾಝ್) ನೆಲೆಯಲ್ಲಿ ವ್ಯಾಖ್ಯಾನಗಳನ್ನು ನೀಡಬೇಕೆಂದು ವಾದಿಸುತ್ತಿದ್ದ. ಈ ಭಿನ್ನಾಭಿಪ್ರಾಯದ ಕಾರಣ ಅವರು ಇಬ್ಬರು ಬೇರೆಯಾದರು. ಸಲಮನನ ಒಲವು ಸಮಾಜದೊಂದಿಗೆ ಬೆರೆತು ಜೀವಿಸುದವುದರ ಕಡೆಗಿತ್ತು. ಏಕಾಂಗಿ ಜೀವನ ಅಬ್ಸಲ್‌ನ ಆಯ್ಕೆಯಾಗಿತ್ತು.
ಏಕಾಂತ ವಾಸವನ್ನು ಬಯಸುತ್ತಾ ಕೊನೆಗೆ ಅಬ್ಸಲ್ ಹಯ್ಯ್ ವಾಸ ಮಾಡುತ್ತಿದ್ದ ಕಡೆಗೆ ತಲುಪುತ್ತಾನೆ. ವಾರಕ್ಕೊಮ್ಮೆ ಮಾತ್ರ ಆಹಾರ ಸೇವಿಸುತ್ತಿದ್ದ ಹಯ್ಯ್ ಆಹಾರವನ್ನು ಹುಡುಕುತ್ತಾ ಅಬ್ಸಲ್ ಬಿಡಾರಹೂಡಿದ್ದ ಜೋಪಡಿಯ ಬಳಿ ಬಂದು ತಲುಪುತ್ತಾನೆ. ಆ ಅದ್ಭುತ ಜೀವಿಯನ್ನು ನೋಡಿ ಆಶ್ಚರ್ಯಚಕಿತನಾದ ಹಯ್ಯ್ ಅವನ ಕಡೆಗೆ ತೆರಳುತ್ತಾನೆ. ತನ್ನ ಏಕಾಂತಕ್ಕೆ ಎಲ್ಲಿ ಅಡ್ಡಿಯಾಯಿತೊ ಎನ್ನುವ ಭಯದಿಂದ ಅಬ್ಸಲ್ ಅಲ್ಲಿಂದ ಓಡಿಹೋಗುತ್ತಾನೆ. ಆದರೆ ಹಯ್ಯ್ ಅವನನ್ನು ಬೆಂಬತ್ತಿ ಹಿಡಿಯುತ್ತಾನೆ. ಏನೂ ತೊಂದರೆ ಕೊಡದೆ ಅಬ್ಸಲ್‌ನನ್ನು ದೂರದಿಂದ ವೀಕ್ಷಿಸಲು ಶುರು ಮಾಡುತ್ತಾನೆ ಹಯ್ಯ್. ಮನುಷ್ಯ ಭಾಷೆಯ ಪರಿಜ್ಞಾನವಿಲ್ಲದ ಹಯ್ಯ್‌ಗೆ ಅಬ್ಸಲ್ ಭಾಷೆ ಕಲಿಸುತ್ತಾನೆ. ಅವರ ಮಧ್ಯೆ ಪ್ರಪಂಚದ ರಹಸ್ಯಗಳ ಬಗ್ಗೆ ಅನೇಕ ತಾತ್ವಿಕ ಚರ್ಚೆಗಳು ನಡೆಯುತ್ತವೆ. ಈ ಚರ್ಚೆಯ ಮೂಲಕ ಅಬ್ಸಲ್ ಒಂದು ಸತ್ಯವನ್ನು ಗ್ರಹಿಸುತ್ತಾನೆ.
ಅಲ್ಲಾಹನು ದಿವ್ಯ ಸಂದೇಶಗಳ ಮೂಲಕ ನೀಡಿದ ಧಾರ್ಮಿಕ ಸತ್ಯಗಳನ್ನು ಹಯ್ಯ್ ಬುದ್ಧಿಯಿಂದ ಚಿಂತಿಸಿ ಕಂಡುಕೊಂಡಿದ್ದಾನೆ. ಅಬ್ಸಲ್‌ನ ದ್ವೀಪ ಮತ್ತು ಅದರ ನಿವಾಸಿಗಳ ಧರ್ಮ ನಿಷ್ಠೆಯ ಬಗ್ಗೆ ಕೇಳಿ ತಿಳಿದ ಹಯ್ಯ್ ಅವರನ್ನು ಕಾಣುವ ಇಂಗಿತ ವ್ಯಕ್ತಪಡಿಸಿದ. ದಿಕ್ಕು ತಪ್ಪಿ ಅಲ್ಲಿ ತಲುಪಿದ್ದ ಒಂದು ಸಣ್ಣ ಹಡಗಿನಲ್ಲಿ ಇಬ್ಬರೂ ಅಬ್ಸಲ್‌ನ ದ್ವೀಪವನ್ನು ತಲುಪಿದರು. ದೇವರ ಅತೀವ ಸಾಮೀಪ್ಯವನ್ನು ಪಡೆದ ಮಹಾನ್ ಚೇತನ ಎಂದು ಹಯ್ಯ್‌ನನ್ನು ಅಬ್ಸಲ್ ಜನರಿಗೆ ಪರಿಚಯಪಡಿಸಿದಾಗ ಹಯ್ಯ್‌ನ ಉಪದೇಶಗಳನ್ನು ಆಲಿಸಲು ತಂಡೋಪತಂಡವಾಗಿ ಅಲ್ಲಿನ ಜನರು ಬಂದು ಸೇರುತ್ತಾರೆ. ಅಬ್ಸಲ್‌ನ ಸ್ನೇಹಿತ ಸಲಮನ್ ಆಗ ಅಲ್ಲಿನ ಆಡಳಿತಗಾರನಾಗಿದ್ದ. ಸಲಮನ್ ಮತ್ತು ಅವನ ಜನರು ಮೊದಮೊದಲು ಹಯ್ಯ್‌ನ ಉಪದೇಶಗಳನ್ನು ಗಮನವಿಟ್ಟು ಕೇಳುವ ಮೂಲಕ ಆತ್ಮ ಸಂಸ್ಕರಣೆಗೊಳಿಸಿ ಸಂತೃಪ್ತರಾಗುತ್ತಿದ್ದರು. ದೇವರ ಗುಣಗಳ ಬಗೆಗಿನ ಸೂಕ್ತಗಳನ್ನು ಭಾಷಾರ್ಥ ಪ್ರಕಾರವೇ ಓದಬೇಕೆನ್ನುವುದು ಅಬ್ಸಲ್‌ನ ಊರಿನ ಜನರ ವಾದವಾಗಿತ್ತು. ಉದಾಹರಣೆಗೆ ‘ಯದುಲ್ಲಾಹಿ ಫೌಕ ಅಯಿದೀಹಿಮ್’ ಎನ್ನುವ ರೂಪಕಾತ್ಮಕ ಪ್ರಯೋಗವನ್ನು ಅಬ್ಸಲ್ ನ ಊರಿನವರು ದೇವರಿಗೆ ಕೈ ಇದೆ ಎಂದು ಅರ್ಥ ಮಾಡಿದ್ದರು. ಇದನ್ನು ವಿರೋಧಿಸಿದ ಹಯ್ಯ್ ನಮಗೆ ಸುಪರಿಚಿತವಾದ ಭಾಷೆಯಲ್ಲಿ ದೇವನ ಗುಣಗಳನ್ನು ಅರ್ಥ ಮಾಡುವುದು ಸರಿಯಲ್ಲ ಎನ್ನುತ್ತಾನೆ. ಅದನ್ನು ಅರ್ಥ ಮಾಡಬೇಕಾದ ರೀತಿ ಬೇರೆಯೇ ಎಂದು ಹಯ್ಯ್ ತಿಳಿ ಹೇಳಿದಾಗ ಅಲ್ಲಿನ ಜನರು ಅವನಿಂದ ಕ್ರಮೇಣ ದೂರವಾಗತೊಡಗಿದರು. ಯಾರೇ ಬಂದು ಹೇಳಿದರೂ ತಲೆತಲಾಂತರಗಳಿಂದ ಪಾಲಿಸಿಕೊಂಡು ಬಂದಿರುವ ದಾರಿಯನ್ನು ಬದಲಾಯಿಸಲು ಸಿದ್ಧರಲ್ಲದ ಜನರ ಸ್ವಭಾವ ನೋಡಿ ಹಯ್ಯ್ ತೀವ್ರವಾಗಿ ನೊಂದುಕೊಂಡನು. ಕೊನೆಗೆ, ಹಯ್ಯ್ ಮತ್ತು ಅಬ್ಸಲ್ ಒಲ್ಲದ ಮನಸ್ಸಿನಿಂದ ಪುನಃ ಏಕಾಂತ ವಾಸಕ್ಕೆ ಹಯ್ಯ್‌ನ ದ್ವೀಪದ ಕಡೆಗೆ ಹಿಂದಿರುಗುತ್ತಾರೆ. ಅಲ್ಲಿ ತಲುಪಿ ಮರಣದ ತನಕ ಆರಾಧನೆಯಲ್ಲೇ ಕಾಲ ಕಳೆಯುತ್ತಾರೆ.
ಪ್ರಭಾವ
ಹಯ್ಯ್ ಬಿನ್ ಯಕ್ಲಾನ್ ಅವರ ಜೀವನ ಶೈಲಿ ಹಾಗೂ ವ್ಯಕ್ತಿತ್ವದಿಂದ ಆಕರ್ಷಿತರಾದ ಅನೇಕ ಚಿಂತಕರಲ್ಲಿ ಇಬ್ನ್ ರುಶ್ದ್ ಪ್ರಮುಖರು. ಅವರ ಗ್ರಂಥಗಳಾದ ತಹಾಫುತುಲ್ ತಹಾಫುತ್ ಮತ್ತು ಫಸ್ಲುಲ್ ಮಖಾಲ್ ಮುಂತಾದ ಗ್ರಂಥಗಳಲ್ಲಿ ಮೂಡಿ ಬಂದಿರುವ ಅವರ ದೃಷ್ಟಿಕೋನಗಳು ಇದಕ್ಕೆ ಸಾಕ್ಷಿ. ಇದರ ಜೊತೆಗೆ ಇಬ್ನು ರುಶ್ದ್ ಹಯ್ಯ್ ಇಬ್ನ್ ಯಖ್ಲಾನ್ ಬಗ್ಗೆ ಒಂದು ವಿವರಣಾ ಗ್ರಂಥವನ್ನು ಕೂಡಾ ರಚಿಸಿದ್ದಾರೆ. ಪ್ರಖ್ಯಾತ ಪರ್ಷಿಯನ್ ಕವಿ ನೂರುದ್ದೀನ್ ಜಾಮಿ ಎಂಬ ಹೆಸರಿನ ಜಾಮಿ ಹಯ್ಯ್ ಜೀವನದಿಂದ ಆಕರ್ಷಿತರಾದ ಮತ್ತೊಬ್ಬ ಮೇಧಾವಿ. ‘ಸಲಮನ್ ಮತ್ತು ಅಬ್ಸಲ್’ ಎಂಬ ತನ್ನ ಸೂಫಿ ಕವಿತೆಯ ಮೂಲಕ ಈಯೆರಡು ಕಥಾ ಪಾತ್ರಗಳನ್ನು ಜಾಮಿ ಅಜರಾಮರಗೊಳಿಸಿದ್ದಾನೆ. ಹಯ್ಯ್ ಇಬ್ನ್ ಯಕ್ಲಾನ್ ಬಗ್ಗೆ ವಿಮರ್ಶೆಯನ್ನು ಬರೆದಿರುವ ಅಲಾವುದ್ದೀನ್ ಬಿನ್ ನಫೀಸ್ ಬರೆದ ‘ಅರ್ರಿಸಾಲತುಲ್ ಕಾಮಿಲಿಯ್ಯಾ ಫಿ ಸ್ಸೀರತಿ ನ್ನಬವಿಯ್ಯಾಹ್’ ಎನ್ನುವ ಪ್ರತಿಕಥೆ ಮತ್ತು ಹಯ್ಯ್‌ನ ಕತೆ ಏಕಭಾವವನ್ನೆ ಸ್ಫುರಿಸುತ್ತದೆ. ನಿರ್ಜನ ದ್ವೀಪದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡು ಒಂದು ಅನ್ವೇಷಣೆ ಮಾಡುತ್ತಾ ಜೀವಿಸಿ ಕೊನೆಗೆ ದೇವ ದರ್ಶನ ಪಡೆಯುವ ಕಥಾತಂತು ಈ ಕೃತಿಯಲ್ಲಿಯೂ ಕಾಣಬಹುದು.
ಇಬ್ನ್ ತುಫೈಲ್ ಬರೆದಿರುವ ಹಯ್ಯ್‌ನ ಕತೆ ಯುರೋಪಿನ ಪ್ರಸಿದ್ಧ ಬುದ್ಧಿಜೀವಿಗಳ ರಸಾಸ್ವಾದವಾಗಿ ಒಂದು ಕಾಲದಲ್ಲಿ ಮಾರ್ಪಟ್ಟಿತ್ತು. ಆಲ್ಬರ್ಟ್ ಮ್ಯಾಗ್ನಸ್, ಸೈಂಟ್ ಥಾಮಸ್ ಅಕ್ವಿನಾಸ್, ವೋಲ್ಟೇರ್, ರೂಸೋ ಮತ್ತು ದಿದರೋ ಮುಂತಾದ ಐತಿಹಾಸಿಕ ಪ್ರತಿಭೆಗಳ ಮೆಚ್ಚುಗೆ ಪಡೆದಿತ್ತು. ಪ್ರಸಿದ್ಧ ಜರ್ಮನ್ ಚಿಂತಕ ಎಫ್ರೇಮ್ ಲೆಸ್ಸಿಂಗ್ ನ ಕೃತಿ ‘ಜ್ಞಾನಿಯಾದ ನಥಾನ್(ನಥಾನ್ ದಿ ವೈಸ್) ಎಂಬ ಕೃತಿ ಕೂಡ ಹಯ್ಯ್‌ಗೆ ಋಣಿಯಾಗಿತ್ತು. ರಾಬಿನ್ಸನ್ ಕ್ರೂಸೋ, ಜಂಗಲ್ ಬುಕ್, ಟಾರ್ಜನ್ ಮತ್ತು ಲೈಫ್ ಆಫ್ ಪೈ ಮುಂತಾದ ಕಾದಂಬರಿಗಳು ರಚಿತವಾಗುವುದರ ಹಿಂದಿನ ಎಲ್ಲಾ ಶ್ರೇಯಸ್ಸು ಹಯ್ಯ್‌ಗೆ ಲಭಿಸುತ್ತದೆ ಎಂದು ಆಧುನಿಕ ಸಂಶೋಧನಾ ಅಧ್ಯಯನಗಳು ಸಾಬೀತುಪಡಿಸುತ್ತದೆ.
ಧಾರ್ಮಿಕತೆ ಮತ್ತು ವೈಚಾರಿಕತೆಯ ನಡುವೆ ಸೂಕ್ಷ್ಮಾರ್ಥದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬ ಸತ್ಯವನ್ನು ಈ ಕಾದಂಬರಿ ಧೈರ್ಯಪೂರ್ವಕ ಘೋಷಿಸಿದೆ. ಅದೇ ವೇಳೆ, ಮತಾಂಧತೆ ಮತ್ತು ಧಾರ್ಮಿಕತೆಯ ನಡುವೆ ಬೇರ್ಪಡಿಸಲಾಗದ ಅಂತರವಿದೆ ಎನ್ನುವುದನ್ನು ತಿಳಿಸಿದೆ. ಏಕತ್ವದಲ್ಲಿ ವಿಲೀನವಾದ ಬಹುತ್ವವನ್ನು ಮತ್ತು ಬಹುತ್ವ ಅಭಿವ್ಯಕ್ತಿಸುವ ಏಕತ್ವವನ್ನು ದರ್ಶಿಸುವ ಮೂಲಕ ಹಲವಾರು ವಿಶೇಷತೆಗಳು-ವೈವಿಧ್ಯತೆಗಳು ತುಂಬಿ ನಿಂತಿರುವ ಈ ಜಗತ್ತಿನಲ್ಲಿ ಐಕ್ಯತೆಯ ಸ್ವಚ್ಛತೆಯನ್ನು ಪಡಿಮೂಡಿಸುವುದೇ ಪ್ರಬುದ್ಧತೆ ಎನ್ನುವ ಸಂದೇಶವನ್ನು ಹಯ್ಯ್ ಇಬ್ನ್ ಯಖ್ಲಾನ್ ನೀಡಿದ್ದಾನೆ.
ಕನ್ನಡಕ್ಕೆ: ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಗದಗ ಕೃಪೆ: ತೆಳಿಚ್ಚಂ ಮಲಯಾಳಂ ಪತ್ರಿಕೆ
ಹಜ್ಜ್ ಒಬ್ಬ ಮುಸಲ್ಮಾನನ ಆಂತರ್ಯ ಪರಿವರ್ತನೆಗಿರುವ ಪ್ರಕ್ರಿಯೆಗಳಲ್ಲೊಂದು. ಬದುಕಿನಲ್ಲಿ ಘಟಿಸಿ ಹೋದ ಅನಿಷ್ಟಗಳ ಬಗ್ಗೆ ಪಶ್ಚಾತ್ತಾಪಿಸಿ ಬದುಕಿಗೆ ಹೊಸದೊಂದು ಹುರುಪನ್ನು ತರುವ ಅಪೂರ್ವ ಮಹೂರ್ತ. ಅಸಮಾನತೆಯ ಹರಿತ ಬೇಲಿಯಾಚೆಗೆ ಪರಸ್ಪರ ಸಾಹೋದರ್ಯತೆ, ಅರ್ಥೈಸುವಿಕೆಯ ಜಾಗತಿಕ ಸಂಗಮ. ದೈವಿಕ ಆಹ್ವಾನಕ್ಕೆ ಉತ್ತರಿಸಲು ಭಾಗ್ಯ ಪಡೆದ ವಿಶ್ವಾಸಿಯ ಆನಂದಮಯ ನಿಮಿಷಗಳು.
ಪೈಗಂಬರರ ಇಸ್ಲಾಮಿಕ್ ಪ್ರೊಪಗೇಷನ್ ನ ಅದೆಷ್ಟೋ ವರ್ಷಗಳ ಮುಂಚೆಯೇ ಅರೇಬಿಯಾದಲ್ಲಿ ಹಜ್ಜ್ ಆಚರಣೆಯಲ್ಲಿತ್ತು. ಪೈಗಂಬರ ನಿರ್ದೇಶಾನುಸಾರ ಪವಿತ್ರ ಹಜ್ಜ್ ಕರ್ಮ ಜಾರಿಗೊಳ್ಳುವುದು AD 628 ರ ನಂತರದಲ್ಲಾಗಿದೆ. ಮಕ್ಕಾ ಜನತೆಯೊಂದಿಗಿನ ಒಪ್ಪಂದದ ನಂತರ ಸುಧೀರ್ಘ ವರ್ಷಗಳ ಕಾಲ ಮುಂದುವರೆದ ಸಂಘರ್ಷದ ಕೊನೆಯಲ್ಲಿ ಪೈಗಂಬರರು, ಅನುಯಾಯಿಗಳು ಪವಿತ್ರ ಹಜ್ಜ್ ಗೆ ಅನುಮತಿ ಪಡೆದ ವರ್ಷ ಅದಾಗಿದೆ. ಮುಂದಿನ ವರ್ಷವೇ ಮುಸ್ಲಿಂ ಸೇನೆ ಮಕ್ಕಾವನ್ನು ತನ್ನ ಸ್ವಾಧೀನಕ್ಕೆ ಪಡೆದು ಸಮೀಪದಲ್ಲಿದ್ದ ಎಲ್ಲಾ ವಿಗ್ರಹಗಳನ್ನೂ ನಿರ್ಮೂಲಗೊಳಿಸಿತು. ಮಕ್ಕಾದ ಬಹುದೈವಾರಾಧನೆ ಅಂತ್ಯ ಕಾಣುವುದರೊಂದಿಗೆ ಏಕದೈವಾರಾಧನೆಯ ಪರ್ವದ ಪ್ರಾರಂಭವಾಗಿತ್ತದು.
ಹದೀಸುಗಳ ಮೂಲಕ ದೊರಕಿದ ಪ್ರವಾದಿಯವರ ಅನುಭವಗಳನ್ನು ಪ್ರಾರಂಭಿಕ ಹಜ್ಜ್ ಗಳ ವಿವರಣೆಗಳಾಗಿ ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಪೈಗಂಬರರ ಪ್ರವಾದಿತ್ವ ಹಾಗೂ ಇಸ್ಲಾಮಿನ ಸಂಪೂರ್ಣತೆಯನ್ನು ಸಾರಿ ಹೇಳಿದ ‘ಹಜ್ಜತುಲ್ ವಿದಾಅ’ ಬಹುಮುಖ್ಯವಾದುದು. ಇಸ್ಲಾಮಿನ ವಾಂಶಿಕ ಸಮಾನತೆಯ ಮೇಲೆ ಬೆಳಕು ಚೆಲ್ಲಿದ ಪೈಗಂಬರರ ಐತಿಹಾಸಿಕ ಭಾಷಣ ಪ್ರಸ್ತುತ ಘಳಿಗೆಯಲ್ಲಾಗಿದೆ. ಸರ್ವ ಮನುಷ್ಯ ಸಂಕುಲವೂ ಆದಂ-ಹವ್ವಾರ ಸಂತತಿಗಳು. ಅರಬನು ಅರೇಬಿಯೇತರನಿಗಿಂತಲೂ, ಅರಬಿಯೇತರ ಅರಬನಿಗಿಂತಲೂ ಶ್ರೇಷ್ಠನಲ್ಲ. ಬಿಳಿಯ ಕರಿಯನಿಗಿಂತ ಉನ್ನತನೋ, ಕರಿಯ ಬಿಳಿಯನಿಗಿಂತಲೂ ನೀಚನೋ ಅಲ್ಲ. ಶ್ರದ್ಧೆ, ಭಯ ಭಕ್ತಿ ಮಾತ್ರವೇ ಶ್ರೇಷ್ಠತೆಯ ಮಾನದಂಡ. 1964 ರಲ್ಲಿ ಹಜ್ಜ್ ಯಾತ್ರೆಯ ವೇಳೆ ಸಾಹೋದರ್ಯತೆಯ ಬಗ್ಗೆ ಮಾಲ್ಕಂ ಎಕ್ಸ್ ರವರು ನೀಡಿದ ವಿವರಣೆ ಗಮನಾರ್ಹವಾಗಿದೆ.
ಕಳೆದ ಶತಮಾನಗಳ ವಿವಿಧ ಘಟ್ಟಗಳಲ್ಲಿ ನಿರ್ವಹಿಸಲ್ಪಟ್ಟ ವಿಭಿನ್ನ ಅನುಭವಗಳುಳ್ಳ ಹಜ್ಜ್ ಗಳ ಸನ್ನಿವೇಶಗಳನ್ನಾಗಿದೆ ಇಲ್ಲಿ ಪರಾಮರ್ಶಿಸುವುದು. ಕಳೆದ ವಿವಿಧ ಕಾಲಗಳ ಸಾಮಾಜಿಕ, ಸಾಂಸ್ಕೃತಿಕ ವೈಭವಗಳನ್ನು ಮನಗಾಣಲು, ಹಜ್ಜ್ ಯಾತ್ರೆಯ ವಿವಿಧ ಆಚಾರಗಳನ್ನು ತಿಳಿಯಲು ಈ ಅನುಭವಗಳು ಸಹಾಯಕವಾಗುವುದು.
ಇಬ್ನು ಜುಬೈರ್- 1184
ಹಜ್ಜ್ ನ ಬಗೆಗಿನ ಆರಂಭಿಕ ವಿವರಣೆಗಳಲ್ಲಿ ಒಂದಾಗಿದೆ ಇಬ್ನು ಜುಬೈರ್ ಬರೆದಿರುವ ಅನುಭವ ಕಥನ. ಫಾತಿಮೀ ಖಿಲಾಫತಿನ ಅವನತಿ ಹಾಗೂ ಸುಲ್ತಾನ್ ಸ್ವಲಾಹುದ್ದೀನರ ಅಧೀನದ ಐಕ್ಯ ಮುಸ್ಲಿಮ್ ಸಾಮ್ರಾಜ್ಯ ಸ್ಥಾಪಿತಗೊಳ್ಳುವ ಅವಧಿಯ ಮಧ್ಯೆ, ಮಧ್ಯಪ್ರಾಚ್ಯವನ್ನು ಪ್ರಕ್ಷುಬ್ಧ ವಾತಾವರಣದಲ್ಲಿ ಗುರುತಿಸಲ್ಪಡುವ ಕಾಲಾವಧಿಯಲ್ಲಾಗಿತ್ತು.
A 13th-century depiction of an Iraqi caravan on its way to Mecca for the Hajj (National Library of France)
ಇಬ್ನು ಜುಬೈರ್ ರನ್ನು ತನ್ನ ಯಜಮಾನ ಮದ್ಯ ಕುಡಿಯುವಂತೆ ಒತ್ತಾಯಿಸಿದ ಕಾರಣಕ್ಕೆ ಅದರ ಪಾಪಮುಕ್ತಿಗಾಗಿ 1183 ರಲ್ಲಿ ಮುಸಲ್ಮಾನರ ಪವಿತ್ರ ಸ್ಥಳಗಳಾದ ಮಕ್ಕಾ, ಮದೀನಾ ಕಡೆಗೆ ಹೊರಟರು ಎಂಬ ಮಾತಿದೆ. 1184 ರ (ಹಿಜ್ರಾ 579) ಹಜ್ಜ್ ನ ಕುರಿತ ಸಮಗ್ರ, ನಿಷ್ಪಕ್ಷವಾದ ವಿವರಣೆಯನ್ನು ಇಬ್ನ್ ಜುಬೈರ್ ನೀಡಿದ್ದಾರೆ. ಅಂದಿನ ಕಾಲದ ಹಜ್ಜಿನ ಕುರಿತ ಅನುಭವ ಇಬ್ನು ಜುಬೈರ್ ರವರ ಕೌತುಕ, ಮನೋಜ್ಞ ವಿವರಣೆಯ ಮೂಲಕ ಆಧುನಿಕ ಓದುಗರಿಗೆ ಅರಿತುಕೊಳ್ಳಬಹುದು. ಉದಾಹರಣೆಗೆ, ಬನೂ ಶುಅಬಾ ಮನೆತನದ ಕ್ರೂರತೆಯ ಬಗ್ಗೆ ಎಚ್ಚರಿಸುತ್ತಾರೆ. ಆಂತರಿಕ ನೈರ್ಮಲ್ಯವನ್ನು ಲಕ್ಷ್ಯವಿರಿಸಿ ಮಾತ್ರ ಅರಫಾದ ಕಡೆ ಹೊರಟ ತೀರ್ಥಯಾತ್ರಿಕರನ್ನು ಸಹಿತ ಅವರು ಅಪಹರಿಸಿದ್ದರು.
ಅವರ ಈ ತೀರ್ಥಯಾತ್ರೆಯ ವೇಳೆ ನಡೆದ ಒಂದು ತಮಾಷೆಯ ಘಟನೆಯಿದೆ. ಮಕ್ಕಾದ ಕಪ್ಪು ಜನಾಂಗದ ಜನರು ಹಾಗೂ ಇರಾಖಿನ ತುರ್ಕಿಷ್ ಯಾತ್ರಾರ್ಥಿಗಳ ನಡುವೆ ಘರ್ಷಣೆ ಉಂಟಾಗುತ್ತದೆ. ಆ ವೇಳೆ ಕೆಲವರು ಇರಿತಕ್ಕೊಳಗಾದರು. ಇಬ್ನ್ ಜುಬೈರ್ ಬರೆಯುತ್ತಾರೆ:’ಅವರು ಆಯುಧಗಳನ್ನು ಹೊರತೆಗೆದರು, ಬಿಲ್ಲಿಗೆ ಬಾಣವನ್ನಿಟ್ಟರು, ಚಾಟಿ ಬೀಸತೊಡಗಿದರು, ವ್ಯಾಪಾರಿಗಳ ಕೆಲವು ದುಬಾರಿ ವಸ್ತುಗಳನ್ನು ಕೊಳ್ಳೆ ಹೊಡೆಯಲಾಯಿತು’.
ಇಬ್ನ್ ಬತೂತ- 1325
ಇಬ್ನ್ ಜುಬೈರ್ ರವರ ಬಳಿಕ ಹಜ್ಜಾನುಭವದ ಸಂಪನ್ನ ವಿವರಣೆಯನ್ನು ನೀಡಿರುವುದು ಎರಡು ಶತಮಾನಗಳ ನಂತರ ಇಬ್ನ್ ಬತೂತರವರಾಗಿದ್ದರು. ಇಬ್ನ್ ಬತೂತರವರು ಮೊರೊಕ್ಕನ್ ಕಾನೂನುತಜ್ಞರೂ, ಮಧ್ಯಕಾಲ ಜಗತ್ತಿನ ಖ್ಯಾತ ಸಂಚಾರಿಯೂ ಕೂಡಾ ಹೌದು. 1304 ರಲ್ಲಿ ಹುಟ್ಟಿದ ಈ ಅತುಲ್ಯ ಪ್ರತಿಭೆ ತನ್ನ ಹುಟ್ಟೂರು ಮೊರೊಕ್ಕೊದಿಂದ ಆಫ್ರಿಕಾ, ಮಧ್ಯಪ್ರಾಚ್ಯ, ದಕ್ಷಿಣೇಷ್ಯಾ, ಚೀನಾ ಸೇರಿದಂತೆ ಹಲವು ಕಡೆಗಳಲ್ಲಿ ಸಂಚರಿಸಿದರು. ತನ್ನ 21 ನೆಯ ವಯಸ್ಸಿನಲ್ಲಿ ತವರೂರು ಬಿಟ್ಟು ಸಾಹಸಮಯವಾದ ಪವಿತ್ರ ಹಜ್ಜ್ ಯಾತ್ರೆಗೆ ಹೊರಡುವ ಮೂಲಕ ಒಂದು ಸಾಹಸಮಯ ಐತಿಹಾಸಿಕ ಯಾತ್ರೆಗೆ ಪ್ರಾರಂಭವಿತ್ತರು. ಸುಮಾರು ಇಪ್ಪತ್ತೈದು ವರ್ಷಗಳ ನಂತರವಾಗಿತ್ತು ತನ್ನ ಹುಟ್ಟೂರಿಗೆ ಇಬ್ನ್ ಬತೂತ ಮರಳುವುದು.
A 19th-century copy of Ibn Battuta’s “Ar-Rihla” (Osama Amin/Wikimedia)
ಇಬ್ನ್ ಬತೂತರವರ ಮಾಸ್ಟರ್ ಪೀಸ್ ಕೃತಿ ‘ಅರ್ರಿಹ್ಲಾ’ ದಲ್ಲಿ ಹಜ್ಜ್ ನ ವಿವಿಧ ಕರ್ಮಗಳ ಬಗ್ಗೆ ವಿವರಣೆಯಿದೆ. ಪಿಶಾಚಿಗೆ ಕಲ್ಲೆಸೆಯುವುದು, ಮೃಗಬಲಿಯ ಬಗ್ಗೆಯೂ ವಿವರಣೆ ನೀಡುತ್ತಾರೆ. ಇಬ್ನ್ ಜುಬೈರ್ ರವರಂತೆಯೇ ಇಬ್ನ್ ಬತೂತರವರೂ ಕೂಡಾ ಹಜ್ಜ್ ನ ಕರ್ಮಗಳ ಜೊತೆಗೆ ವಿವಿಧ ವೈಯಕ್ತಿಕ ಅನುಭವಗಳೊಂದಿಗೆ ಸಾಗುವರು. ಕಅಬಾ ಮೊದಲನೇ ಬಾರಿ ಕಂಡ ಕೌತುಕತೆಯೂ, ಆಶ್ಚರ್ಯವೂ ಕಾಣಬಹುದು. ಕಅಬಾಲಯದ ಬಾಹ್ಯ ಸೌಂದರ್ಯದ ಕುರಿತು ಇಬ್ನ್ ಬತೂತ ಆವೇಶಭರಿತರಾಗಿ ವಿವರಿಸುವುದು ಹೀಗೆ: “ಸೌಂದರ್ಯಯುತ ಮೇಲುಹೊದಿಕೆಗಳ ಮೂಲಕ ಕಣ್ಮನ ಸೆಳೆಯುವ ವಧುವನ್ನು ವೈಭವಪೂರಿತ ಆಸನದಲ್ಲಿ ಇರಿಸಲಾಗಿದೆ”
ಎವ್ಲಿಯಾ ಚೆಲೆಬಿ- 1672
ಹದಿನೇಳನೆಯ ಶತಮಾನದಲ್ಲಿ ಅನಟೋಲಿಯ, ಕೊಕಸಡ್, ಯೂರೋಪ್ ನ ಪೂರ್ವ ಭಾಗ ಮತ್ತು ಮಧ್ಯಪ್ರಾಚ್ಯದ ಹಲವು ಪ್ರದೇಶಗಳಲ್ಲಿ ಪ್ರಯಾಣ ಬೆಳೆಸಿದ ತುರ್ಕಿಷ್ ಸಂಚಾರಿಯಾಗಿದ್ದರು ಎವ್ಲಿಯಾ ಚೆಲೆಬಿ. ಪೈಗಂಬರರ ಸ್ವಪ್ನದರ್ಶನವು ಅವರ ಯಾತ್ರಾ ಬದುಕಿಗೆ ಬುನಾದಿ ಹಾಕುತು. ಯುವಕರಾಗಿದ್ದ ಎವ್ಲಿಯಾ ಚೆಲೆಬಿ ಕನಸಿನ ಮೂಲಕ ಪೈಗಂಬರರನ್ನು ಒಂದು ಮಸೀದಿಯಲ್ಲಿ ಭೇಟಿ ಮಾಡುತ್ತಾರೆ. ಪ್ರತಿಫಲದ ದಿನದ ಮಧ್ಯಸ್ಥಿಕೆ (ಶಫಾಅತ್) ಗೆ ಅಪೇಕ್ಷಿಸದೆ ಸುದೀರ್ಘ ಸಂಚಾರಕ್ಕೆ ಅನುಮತಿ ನೀಡುವಂತೆ ಬೇಡಿಕೆಯಿಟ್ಟರು. ಪೈಗಂಬರರ ಸಮ್ಮತಿಯಾನುಸಾರ ವಿಶಾಲವಾದ ಒಟ್ಟೋಮನ್ ಸಾಮ್ರಾಜ್ಯ ಮತ್ತು ಸಮೀಪ ಪ್ರದೇಶಗಳಲ್ಲಿ ದಶಕಗಳ ವರೆಗೆ ಪ್ರಯಾಣವನ್ನು ಅವರು ನಡೆಸಿದರು. ಚೆಲೆಬಿಯು ತನ್ನ ಸಂಚಾರಗಳನ್ನು ‘ಸೆಯಾಹೆತ್ ನಾಮಾ’ (ದಿ ಬುಕ್ ಆಫ್ ಟ್ರಾವೆಲ್ಸ್) ಎಂಬ ತನ್ನ ಕೃತಿಯಲ್ಲಿ ಉಲ್ಲೇಖಿಸುತ್ತಾರೆ.
ಅನಟೋಲಿಯನ್ ಮೂಲಕ ಜೆರುಸಲೇಮ್ ಗೆ ತೆರಳಿದ ಚೆಲೆಬಿ ತನ್ನ ಪವಿತ್ರ ಹಜ್ಜ್ ಯಾತ್ರೆಗಾಗಿ ಸಿರಿಯಾದ ಕಾರವಾನ್ ನ ಜೊತೆಯಾದರು. ಒಬ್ಬ ತುರ್ಕಿಷ್ ಪ್ರಜೆ ಎಂಬ ನಿಟ್ಟಿನಲ್ಲಿ ಚಲೆಬಿಗೆ ಹಿರಿಯ ಒಟ್ಟೋಮನ್ ಅಧಿಕಾರಿಗಳ, ಪ್ರಾದೇಶಿಕ ಮನೆತನಗಳ ನೇತಾರರ ಬಳಿಯೂ ವಿಶೇಷ ಗಣನೆಯಿತ್ತು. ಮರುಭೂಮಿಯ ಮೂಲಕ ಸಂಚರಿಸುವ ತೀರ್ಥಯಾತ್ರಿಕರನ್ನು ಲಕ್ಷ್ಯವಿರಿಸಿದ ಕೊಳ್ಳೆಗೋರರೂ ಸಾಮಾನ್ಯವಾಗಿದ್ದರು. ಅವರನ್ನು ತಡೆಯಲು ಬೇಕಾದ ಸರ್ವಾಯುಧ ಸನ್ನದ್ಧ ಸಂಘದೊಂದಿಗಾಗಿತ್ತು ಚೆಲೆಬಿಯ ಪ್ರಯಾಣ.
ಮಕ್ಕಾ ತಲುಪಿದ ಒಟ್ಟೋಮನ್ ಸಂಚಾರಿ ಪವಿತ್ರ ನಗರಿಯ ಜನತೆ, ಅವರ ರೂಢಿಗಳ ಬಗ್ಗೆ ನಿಷ್ಪಕ್ಷ ವಿವರಣೆಯನ್ನು ನೀಡುತ್ತಾರೆ. ಮಕ್ಕ ಜನತೆಯಲ್ಲಿ ಹಲವರು ಕರಿಯ ವರ್ಣಧಾರಿಗಳಾಗಿದ್ದರು. ಮಧುರ ಮಾತುಗಾರಿಕೆ ಅವರ ವಿಶೇಷತೆ ಕೂಡಾ. ವೃತ್ತಾಕಾರದ ಮುಖವುಳ್ಳ ಮುಗ್ದರಾದ ಹಾಸಿಂ ವಂಶಜರು ಕೂಡಾ ಅಲ್ಲಿದ್ದಾರೆ. ಅರಬರು ಅಧಿಕವಾಗಿ ವ್ಯಾಪಾರಾವಲಂಬಿತರು ಎಂದು ಚೆಲೆಬಿ ಉಲ್ಲೇಖಿಸುತ್ತಾರೆ.
ಪವಿತ್ರ ಹಜ್ಜ್ ನ ಕುರಿತಾದ ಚೆಲೆಬಿಯ ವಿವರಣೆಗಳಲ್ಲಿ ಈ ತೀರ್ಥಯಾತ್ರೆಯ ವಾಣಿಜ್ಯ ಘಟಕಗಳ ಕುರಿತ ಚರ್ಚೆ ಗಮನಾರ್ಹ. ಡಮಸ್ಕಸ್ ಯಾತ್ರಿಕನೊಬ್ಬ ತನ್ನ ಯಾತ್ರಾಸುಗಮಕ್ಕಾಗಿ 50,000 ಒಂಟೆಗಳನ್ನು ಖರೀದಿಸಿದ ಬಗ್ಗೆ ಚೆಲೆಬಿ ಆಶ್ಚರ್ಯದಿಂದ ವಿವರಿಸುತ್ತಾರೆ. ‘ಅರಬರು ಸಂಪನ್ನರಾಗಿದ್ದರು. ವರ್ಷಕ್ಕೊಮ್ಮೆ ತಮ್ಮ ಪತ್ನಿ, ಮಕ್ಕಳೊಡನೆ ದುಬಾರಿ ವಸ್ತುಗಳನ್ನು ಖರೀದಿಸಲು ತೆರಳುವರು’ ಎಂದು ತನ್ನ ಅನುಭವವನ್ನು ಚೆಲೆಬಿ ಬರೆಯುತ್ತಾರೆ.
ರಿಚರ್ಡ್ ಬರ್ಟನ್ – 1853
ಬ್ರಿಟಿಷ್ ಸಾಹಸಿಕನಾದ ರಿಚರ್ಡ್ ಬರ್ಟನ್ ಇಸ್ಲಾಮಿಕ್ ಸಂಪ್ರದಾಯಗಳಿಗೆ ಅತಿಯಾಗಿ ಆಕರ್ಷಿತರಾಗಿದ್ದರು. ಇವರು ಒಬ್ಬ ಮುಸಲ್ಮಾನನೋ, ತೀರ್ಥಯಾತ್ರೆ ಬಯಸಿ ಹೊರಟವರೋ ಅಲ್ಲ. ಭಾರತದ ಒಬ್ಬ ಬ್ರಿಟಿಷ್ ಪೇದೆಯಾಗಿದ್ದ ಬರ್ಟನ್ ಅರಬಿಕ್, ಪೇರ್ಶ್ಯನ್, ಪಾಷ್ತೋ ಸೇರಿ ಡಜನ್ಗಟ್ಟಲೆ ಭಾಷೆಗಳಲ್ಲಿ ಅತೀವ ಪ್ರಾವೀಣ್ಯರಾಗಿದ್ದರು. ಅರೇಬ್ಯನ್ ನೈಟ್ಸ್, ಕಾಮಸೂತ್ರ ದಂತಹ ಕೃತಿಗಳ ಅನುವಾದಕ ಕೂಡಾ ಹೌದು. ಹಜ್ಜ್ ನ ನೇರ ಅನುಭವವನ್ನು ಪಡೆಯಲು ಪಾಷ್ತೂನ್ ಮನೆತನದ ವೇಷ ಧರಿಸಿ ಮದೀನಾದಿಂದ ಮಕ್ಕಾದ ಕಡೆಗೆ ಹೊರಟು ನಿಂತ ಒಂದು ಯಾತ್ರಾರ್ಥಿಗಳ ಕಾರವಾನಿನ ಜೊತೆಯಾದರು.
ಹಜ್ಜ್ ನ ಅನುಭವಗಳನ್ನು ಖುದ್ದಾಗಿ ವಿವರಿಸಿದ ಬೆರಳೆಣಿಕೆಯಷ್ಟಿರುವ ಮುಸ್ಲಿಮೇತರರಲ್ಲಿ ಇವರು ಕೂಡಾ ಒಬ್ಬರಾಗಿದ್ದರು. ‘ಮೊದಲನೆಯದಾಗಿ ನಾನು ಹರಂ ಪ್ರದಕ್ಷಿಣೆಗೈದೆನು. ಮರುದಿನ ಬೆಳ್ಳಂಬೆಳಿಗ್ಗೆಯೇ ಪಾವನ ಭವನದ ಕಡೆ ಹೊರಟೆವು. ನಂತರ ಮಕ್ಕಾದ ಪರಿಶುದ್ಧ ಬಾವಿ ಝಂಝಂ, ಪವಿತ್ರ ‘ಹಜರುಲ್ ಅಸ್ವದ್’ನ್ನು ತನ್ನ ಜೊತೆಗಿರಿಸಿದ ಕಅಬಾವನ್ನು ದರ್ಶಿಸುವ ಸೌಭಾಗ್ಯ ನನ್ನದಾಯಿತು. ಅವರು ಅಲ್ಲಿ ಪರಸ್ಪರ ಒಗ್ಗಟ್ಟಿನ, ಏಕತೆಯ ಮಂತ್ರಗಳನ್ನು ಪಠಿಸುತ್ತಾ ಸೃಷ್ಟಿಕರ್ತನೊಂದಿಗೆ ಪ್ರಾರ್ಥಿಸುತ್ತಿದ್ದರು’.
ಮುಹಮ್ಮದ್ ಅಸದ್- 1930
ಪವಿತ್ರ ಹಜ್ಜ್ ನಿರ್ವಹಿಸಲು ಉತ್ಸಾಹಿತರಾದ ಐರೋಪ್ಯರೆಲ್ಲರೂ ಓರಿಯಂಟಲಿಸ್ಟ್ ಗಳಾಗಿರಲಿಲ್ಲ. ಮುಸಲ್ಮಾನರೂ ಅವರಲ್ಲಿದ್ದರು. ಅವರಲ್ಲಿ ಪ್ರಮುಖರಾಗಿದ್ದರು ಬರಹಗಾರ, ಪತ್ರಕರ್ತರಾಗಿದ್ದ ಮುಹಮ್ಮದ್ ಅಸದ್. ತನ್ನ ಆತ್ಮಕಥನ ‘ದಿ ರೋಡ್ ಟು ಮಕ್ಕಾ’ ಎಂಬ ಕೃತಿಯಲ್ಲಿ ಹಜ್ಜ್ ನ ಸೌಂದರ್ಯವನ್ನು ಅಸದ್ ಮನೋಜ್ಞವಾಗಿ ವಿವರಿಸುತ್ತಾರೆ.
1900 ರಲ್ಲಿ ಉಕ್ರೇನಿಯನ್ ನಗರವಾದ ಎಲ್ವಿವ್ ನಲ್ಲಿ ಅವರು ಜನಿಸಿದರು. 1920 ರ ಪ್ರಾರಂಭದಲ್ಲಿ ಬ್ರಿಟಿಷ್ ಮ್ಯಾನ್ಡೇಟ್ ಫಾರ್ ಪ್ಯಾಲೆಸ್ತೀನ್ ಗೆ ವಸತಿಯನ್ನು ಬದಲಾಯಿಸುವ ಮೂಲಕ ಅರಬೀ ಭಾಷೆ ಹಾಗೂ ಸಂಸ್ಕಾರಕ್ಕೆ ತ್ವರಿತ ಆಕರ್ಷಣೆಯನ್ನು ಹೊಂದಿದರು. 26 ನೆಯ ವಯಸ್ಸಿನಲ್ಲಿ ಇಸ್ಲಾಮ್ ಸ್ವೀಕರಿಸಿ 1924 ರಲ್ಲಿ ಪವಿತ್ರ ಮಕ್ಕಾ, ಮದೀನಾ ನಗರಗಳನ್ನು ಹೊಂದಿರುವ ಸೌದಿ ಅರೇಬಿಯಾಕ್ಕೆ ವಲಸೆ ಹೊರಟರು. ಸೌದಿ ಅರೇಬಿಯಾದ ಸ್ಥಾಪಕರಾದ ಅಬ್ದುಲ್ ಅಝೀಝ್ ನ ವಿಶ್ವಾಸ ಗಿಟ್ಟಿಸಿದ ಅಸದ್ ಸುಲ್ತಾನ್ ಅಬ್ದುಲ್ ಅಝೀಝ್ ರ ರಾಜಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.
ಈ ಕಾಲಾವಧಿಯಲ್ಲಿ ಅಸದ್ ಐದು ಬಾರಿ ಹಜ್ಜ್ ನಿರ್ವಹಿಸಿದರು. ಒಬ್ಬ ಆಸ್ಟ್ರಿಯನ್ ಯುವಕ ಆಳವಾಗಿ ಪ್ರಭಾವಿತಗೊಂಡ ಮನೋಹರ ಘಳಿಗೆ. ಸತ್ಯ ವಿಶ್ವಾಸಿಗಳು ಏಳು ಬಾರಿ ನಡೆಸುವ ಪ್ರದಕ್ಷಿಣೆಯನ್ನು ವಿವರಿಸುತ್ತಾ ಅಸದ್ ಬರೆಯುತ್ತಾರೆ: “ಕಅಬಾ ಏಕದೈವತ್ವ ಸಿದ್ಧಾಂತದ ಪ್ರತೀಕ. ಅದರ ಸುತ್ತಲಿರುವ ವಿಶ್ವಾಸಿಯ ಶಾರೀರಿಕಚಲನೆ, ಚಿಂತನೆಗಳು, ನಾವು ನಿರ್ವಹಿಸುವ ಆರಾಧನೆಗಳೆಲ್ಲವೂ ಸೃಷ್ಟಿಕರ್ತ ಕೇಂದ್ರೀಕೃತವಾಗಿದೆ ಎನ್ನುವುದನ್ನು ಸೂಚಿಸುವ ಆವಿಷ್ಕಾರಗಳಾಗಿವೆ”.
ಪವಿತ್ರ ಸ್ಥಳಕ್ಕೆ ಆಫ್ರಿಕಾ, ಮಧ್ಯಪ್ರಾಚ್ಯ, ಭಾರತದಂತಹ ರಾಷ್ಟ್ರಗಳಿಂದ ತಲುಪಿದ ವಿವಿಧ ಸ್ವಭಾವಗಳ ಮುಸಲ್ಮಾನರ ಜೊತೆ ಬೆರೆತ ಅಸದ್ ಆ ವೇಳೆಗಳಲ್ಲಿ ಪಡೆದ ಸೂಕ್ಷ್ಮ ಹಾಗೂ ಅಪೂರ್ವ ಅನುಭವಗಳನ್ನು ಹೃದ್ಯವಾಗಿ ವಿವರಿಸುತ್ತಾರೆ: “ನಾನು ಮತ್ತೆ ಮತ್ತೆ ನಡೆದೆ. ಸಮಯಗಳು ಕಳೆದು ಹೋದವು. ತುಚ್ಛವಾಗಿ ಮನಸ್ಸಿನಾಳಲಿದ್ದ ಹಲವು ನನ್ನನ್ನು ಅರಿಯದೆ ಬಿಟ್ಟಗಳತೊಡಗಿದವು. ನಾನು ಆ ವರ್ತುಲಪ್ರವಾಹದ ಭಾಗವಾಗಿ ಬಿಟ್ಟಿದ್ದೆನು. ಇದಾಗಿದೆ ಜಗದ ಕೇಂದ್ರ”. ಪಾಕಿಸ್ತಾನದ ರಾಜತಾಂತ್ರಿಕನಾಗಿ ಸೇವೆಗೈದ ಅಸದ್ 1992 ರಲ್ಲಿ ಸ್ಪೈನಿನ ಗ್ರಾನಡಾದಲ್ಲಿ ದೇಹಾಂತರಾದರು.
ಮಾಲ್ಕಂ ಎಕ್ಸ್- 1964
1964ರ ಮಾಲ್ಕಂ ಎಕ್ಸ್ ನ ಯಾತ್ರಾನುಭವ ಹಜ್ಜ್ ನ ಕುರಿತಾದ ಖ್ಯಾತ ವಿವರಣೆಗಳಲ್ಲಿ ಒಂದಾಗಿದೆ. ಒಂದು ಧಾರ್ಮಿಕ ಶಿಷ್ಟಾಚಾರ ಹೇಗೆ ಒಬ್ಬ ವ್ಯಕ್ತಿಯ ಪರಿವರ್ತನೆಯಲ್ಲಿ ಮುಖ್ಯ ಪಾತ್ರ ವಹಿಸಬಲ್ಲದು ಎಂದು ಭೋದಿಸುವ ವಿವರಣೆಗಳವು. ಬ್ಲೇಕ್ ನ್ಯಾಷನಲಿಸ್ಟ್ ಆಗಿದ್ದ ಮಾಲ್ಕಂ ನೇಷನ್ ಆಫ್ ಇಸ್ಲಾಮ್ (NIO) ಇದರ ಮುಖ್ಯ ಪ್ರತಿನಿಧಿಯಾಗಿದ್ದರು. ಇದರಿಂದ ದೂರ ಸರಿದಂತೆ ತೀವ್ರ ಏಕಾಂತತೆ, ಜೀವ ಬೆದರಿಕೆಗಳನ್ನು ಎದುರಿಸಬೇಕಾಗಿ ಬಂತು. ಪವಿತ್ರ ಹಜ್ಜ್ ಯಾತ್ರೆಯವರೆಗೆ ಎನ್.ಐ.ಒ ಪ್ರತಿನಿಧಿಯಾಗಿದ್ದ ಮಾಲ್ಕಂ ಆಫ್ರಿಕನ್-ಅಮೆರಿಕಾ ಜನತೆಯ ಮೇಲಿನ ಹಿಂಸೆಯನ್ನು ಕಟುವಾಗಿ ಟೀಕಿಸಿದ್ದರು. ಆದರೆ ತನ್ನ ಹಜ್ಜ್ ಪ್ರಯಾಣದ ವೇಳೆಯಾಗಿದೆ ವಂಶೀಯತೆಗೆ ಸಂಬಂಧಿಸಿದ ಇಸ್ಲಾಮಿನ ನಿಲುವನ್ನು ಅವರು ಮನನ ಮಾಡುವುದು.
Malcolm X meeting the future king of Saudi Arabia, Prince Faisal, in 1964 (Black Panther Magazine)
ಇಹ್ರಾಮ್ ನ ವೇಳೆ ವರ್ಣ, ಪಂಗಡ, ವಂಶಗಳ ನಡುವಿನ ವ್ಯತ್ಯಾಸ ಮರೆಯಾಗುವುದನ್ನು ಅವರು ಮನಗಂಡರು. ಅವರು ಪೂರ್ವ ಪೀಡಿತರಾಗಿದ್ದ ದೃಷ್ಟಿಕೋನಗಳಲ್ಲಿ ಬದಲಾವಣೆ ಬರಲು ಈ ನಿಮಿಷಗಳು ಹೇತುವಾದವು. ಈ ಅನುಭವದ ನಂತರ ತನ್ನ ಸ್ನೇಹಿತನಿಗೆ ಬರೆದ ಪತ್ರದಲ್ಲಿ ಬಿಳಿಯರಾದ ತನ್ನದೇ ಧರ್ಮದ ವಿಶ್ವಾಸಿಗಳ ಕುರಿತು ಅವರು ಬರೆಯುತ್ತಾರೆ: “ಅಲ್ಲಾಹನ ಏಕತ್ವದ ಕುರಿತಾದ ಅವರ ನಂಬಿಕೆ ‘ಬಿಳಿಯ’ ಎಂಬ ತನ್ನ ಗತ್ತನ್ನು ಇಲ್ಲವಾಗಿಸುತ್ತದೆ. ಅದು ಸಾಮಾನ್ಯವಾಗಿಯೇ ಸಹವರ್ಣೀಯರ ಜೊತೆಗಿನ ನಡವಳಿಕೆ, ಮನೋಭಾವದಲ್ಲೂ ಬದಲಾವಣೆ ತರುತ್ತದೆ. ಅವರ ಅಲ್ಲಾಹನ ಬಗೆಗಿನ ಅಪಾರ ನಂಬಿಕೆ ಅವರನ್ನು ಅಮೆರಿಕನ್ ಬಿಳಿಯರಿಂದ ವಿಭಿನ್ನಗೊಳಿಸುತ್ತದೆ. ಅವರ ಬಾಹ್ಯ ಶಾರೀರಿಕ ಸೌಂದರ್ಯವೆಂದೂ ಅವರ ಜೊತೆಗಿನ ಒಡನಾಟಕ್ಕೆ ಕುತ್ತನ್ನು ತರುತ್ತಿರಲಿಲ್ಲ.
1965 ನ ಫೆಬ್ರುವರಿ ತಿಂಗಳಲ್ಲಿ ಮರಣ ಹೊಂದುವ ವರೆಗೂ ಮಾಲ್ಕಂ ಎಕ್ಸ್ ರವರು ವೈಟ್ ಮಾಲ್ಕೋಮಾ ರವರ ತೀವ್ರ ವಿರೋಧಿಯಾಗಿದ್ದರು. ಹಾಗಿದ್ದರೂ ಅವರು ಹಜ್ಜ್ ನ ವೇಳೆ ಪಡೆದ ವಾಂಶಿಕಸಮತ್ವ, ಸಾಮಾಜಿಕ ಒಗ್ಗಟ್ಟಿನ ಉನ್ನತವಾದ ಅನುಭವಗಳು ಅವರ ಬದುಕಿನಾದ್ಯಂತ ಪ್ರಕಾಶಿತಗೊಂಡಿತ್ತು.
ಇಸ್ತಾಂಬುಲಿನ ಜಗಮಗಿಸುವ ಅನುಭವಗಳಲ್ಲಿ ಲೀನವಾಗಿ ಮಲಬಾರಿನ ಜ್ಞಾನ ಗರಿಮೆಯನ್ನು ನೆನಪಿಸೋಣ. ಮಲಬಾರ್ ಎಂಬ ಅನುಗ್ರಹೀತ ಪ್ರದೇಶದ ವರ್ಣರಂಜಿತ ಚಿತ್ರವು ತುರ್ಕಿಯಲ್ಲಿನ ಜ್ಞಾನಾಸಕ್ತರ ಕಣ್ಣಲ್ಲಿ ಯಾವ ರೀತಿ ಮೂಡಿ ಬಂದಿದೆ ಎನ್ನುವುದನ್ನು ವಿವರಿಸುವ ಶ್ರಮ ಇಲ್ಲಿದೆ.
‘ವೆಲ್ ಕಮ್ ಟು ದಿ ಮೀಟಿಂಗ್ ಪಾಯಿಂಟ್ ಆಫ್ ದಿ ವರ್ಲ್ಡ್’ (ವಿಶ್ವ ಸಂಗಮ ಬಿಂದುವಿಗೆ ಸ್ವಾಗತ) ಇದು ಇಸ್ತಾಂಬುಲಿನ ವಿಮಾನ ನಿಲ್ದಾಣಗಳಲ್ಲಿ ಮತ್ತು ಇತರೆ ಕಡೆಗಳಲ್ಲಿ ನಮ್ಮನ್ನು ಸ್ವಾಗತಿಸುವ ಜಾಹೀರಾತು ವಾಕ್ಯಗಳಲ್ಲೊಂದು. ಮೊದಲ ಬಾರಿ ಇದನ್ನು ಕೇಳಿದಾಗ ಹಲವು ಆಲೋಚನೆಗಳು ಮನಸ್ಸಿನಲ್ಲಿ ಹಾದು ಹೋಗಿತ್ತು. ಜಗತ್ತಿನ ಎಲ್ಲ ದಿಕ್ಕುಗಳ ಜನರು ಬಂದು ಸೇರುವ ಮಹಾ ನಗರ. ಈ ನಗರಕ್ಕೆ ಅಪರಿಚಿತ ಎನಿಸಿರುವ ದೇಶದ ಒಂದು ಮೂಲೆಯಲ್ಲಿರುವ ತೀರ ಪ್ರದೇಶದಿಂದ ಬಂದ ನನ್ನನ್ನು ಯಾರು ಗುರುತಿಸಿಯಾರು ಎನ್ನುವ ಗೊಂದಲದ ಭಾವ ಮೂಡಿತ್ತು. ಅಲ್ಲಿ ತಲುಪಿದ ಹೊಸತರಲ್ಲಿ ಈ ಅಪರಿಚಿತತೆ ನನ್ನನ್ನು ಬಹುವಾಗಿ ಕಾಡಿತು. ಸಂಪೂರ್ಣವಾಗಿ ಭಿನ್ನವಾದ ಭಾಷೆ, ಸಂಸ್ಕೃತಿ, ಆಚರಣೆ, ಚಿಹ್ನೆ, ಶಿಷ್ಟಾಚಾರಗಳು; ಎಲ್ಲವೂ ಭಿನ್ನ ಭಿನ್ನ. ಭಾರತದ ಹಲವಾರು ಬೃಹತ್ ನಗರಗಳಲ್ಲಿ ಹಲವು ಅಗತ್ಯಗಳಿಗಾಗಿ ಹೃಸ್ವ ಮತ್ತು ದೀರ್ಘ ಕಾಲಾವಧಿ ತಂಗಿದ್ದರೂ ದೇಶದ ಹೊರಗೆ ಇದೇ ಮೊದಲು. ಆದ್ದರಿಂದ, ಈ ಅಪರಿಚಿತತೆಯನ್ನು ಅದರ ಪೂರ್ಣ ಭೀಕರತೆಯೊಂದಿಗೆ ಅನುಭವಿಸಬೇಕಾಯಿತು.
ಏನೇ ಇರಲಿ, ಕೆಲವು ತಿಂಗಳ ಕಾಲದ ಇಸ್ತಾಂಬುಲ್ ವಾಸದಲ್ಲಿನ ಆಲೋಚನೆಗಳ ಮೊತ್ತವು ಹೆಚ್ಚು ದುಃಖಗಳು ಮತ್ತು ಅಲ್ಪ ಆನಂದಗಳು ಮಾತ್ರ. ಅವುಗಳು ವರ್ತಮಾನದ ಅಥವಾ ಭವಿಷ್ಯದ ಕುರಿತಾಗಿರಲಿಲ್ಲ. ಬದಲಾಗಿ ನಮ್ಮ ಭೂತಕಾಲದ ಹಾಗೂ ಪರಂಪರೆಯ ಕುರಿತಾಗಿತ್ತು. ಸಂಪೂರ್ಣ ವ್ಯಕ್ತಿಗತವಾಗಿರುವ, ಅಲ್ಲಲ್ಲಿ ಚೆಲ್ಲಿರುವ ಅನುಭವಗಳ ಪುಟ್ಟ ವಿವರಣೆ ಇಲ್ಲಿದೆ.
ಯೂನಿವರ್ಸಿಟಿಗಳಲ್ಲಿ, ಪಟ್ಟಣದಲ್ಲಿ, ಮಸೀದಿಗಳಲ್ಲಿ ಭೇಟಿಯಾಗುವ ಹಲವಾರು ಜನರು ನಾನು ಭಾರತದಿಂದ ಎಂದು ತಿಳಿಯುವಾಗ ಶಾರುಖ್ ಖಾನ್, ಬಾಲಿವುಡ್, ಗೋ-ಪೂಜೆ, ಸಾಮೂಹಿಕ ಹತ್ಯೆ ಮುಂತಾದವುಗಳ ಕುರಿತು ಪ್ರಶ್ನಿಸುತ್ತಿದ್ದರು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಅವರ ಹಿಂದಿ ಭಾಷೆಯ ಪ್ರಾವೀಣ್ಯತೆಯನ್ನು ನಮ್ಮ ಮುಂದೆ ಪ್ರದರ್ಶಿಸಲು ಬರುತ್ತಾರೆ. ನಾನು ಭಾರತದ ದಕ್ಷಿಣ ಭಾಗದವನಾಗಿದ್ದು ಈ ರೀತಿಯ ಯಾವುದೂ ಅಲ್ಲಿಲ್ಲವೆಂದು ಹೇಳಿ ಅರ್ಥೈಸಿ ಕೊಡಲು ತುಂಬಾ ಸಮಯ ಹಿಡಿಯುತ್ತದೆ. ಕ್ರಮೇಣ ದಕ್ಷಿಣ ಭಾರತದಿಂದ, ಕೇರಳದಿಂದ, ಮಲಬಾರಿನಿಂದ ಎಂದೆಲ್ಲಾ ಹೇಳಿ ಪರಿಚಯಪಡಿಸಲು ಆರಭಿಸಿದೆ. ಅಚ್ಚರಿ ಏನೆಂದರೆ, ಇಸ್ಲಾಮಿಕ್ ಇತಿಹಾಸ ಸಣ್ಣ ಮಟ್ಟಿಗೆ ತಿಳಿದಿರುವ ಎಲ್ಲರಿಗೂ ಭಾರತ, ಕೇರಳ ಗೊತ್ತಾಗದಿದ್ದರೂ ಮಲಬಾರ್ ಗೊತ್ತಾಗುತ್ತಿತ್ತು. ಒಂದು ವೈಜ್ಞಾನಿಕ ಕೇಂದ್ರದ ಮತ್ತು ಪುಣ್ಯ ಭೂಮಿಯ ಕುರಿತು ಕೇಳುವ ಕುತೂಹಲದೊಂದಿಗೆ ಅವರೆಲ್ಲ ನನ್ನ ಮಾತುಗಳಿಗೆ ಕಿವಿಯಾಗುತ್ತಾರೆ.
ಇಸ್ತಾಂಬುಲಿನ ಹೃದಯ ಭಾಗವಾದ ಫಾತಿಹಿನಲ್ಲಿ ಫತ್ಹುಲ್ ಮುಈನ್ ದರ್ಸ್ ನಡೆಯುತ್ತದೆ ಎಂದರಿತಾಗ ಒಮ್ಮೆ ಅಲ್ಲಿಗೆ ತೆರಳಿದೆ. ಭಾನುವಾರದ ಫಜರ್ ನಮಾಝ್ ಮುಗಿದ ತಕ್ಷಣ ತರಗತಿ ಆರಂಭವಾಗುತ್ತಿತ್ತು. ಯೂನಿವರ್ಸಿಟಿಯಿಂದ ಬೆಳಿಗ್ಗೆ ಎದ್ದು ತೆರಳುವುದು ಕಷ್ಟಸಾಧ್ಯ. ಆದ್ದರಿಂದ ಮುಂಚಿನ ದಿನವೇ ಅಲ್ಲಿಗೆ ಸಮೀಪ ವಾಸ್ತವ್ಯವಿದ್ದ ಸ್ನೇಹಿತನ ಫ್ಲಾಟಿಗೆ ಹೋಗಿ ತಂಗಿದೆ. ಸ್ನೇಹಿತ ಮುಹಮ್ಮದ್ ಹುದವಿ ಕೂಡಾ ಜೊತೆಗಿದ್ದರು. ಇಆನತು ತ್ತಾಲಿಬೀನ್ ಎಂಬ ವ್ಯಾಖ್ಯಾನ ಗ್ರಂಥದ ಜೊತೆಗೆ ಪ್ರತಿಯೊಂದು ಪದವನ್ನು ಕೂಡಾ ವಿವರಿಸುತ್ತಾ ಸಾಗುತ್ತಿದ್ದ ಮನೋಹರವಾದ ತರಗತಿ. ಶತಮಾನಗಳ ಹಿಂದೆ ನಮ್ಮ ಮಲಬಾರಿನಲ್ಲಿ ವಿರಚಿತಗೊಂಡು ಪ್ರಪಂಚದತ್ಯಾಂತ ಗುರುತಿಸಲ್ಪಟ್ಟಿರುವ ಕೃತಿ ಫತ್ಹುಲ್ ಮುಈನ್. ಸೆಕ್ಯುಲರೀಕರಣ ಮತ್ತು ಆಧುನೀಕರಣವೆಲ್ಲಾ ಗರಿಷ್ಠಮಟ್ಟದ ಪರಿಣಾಮ ಬೀರಿರುವ ಇಸ್ತಾಂಬುಲಿನ ಜನನಿಬಿಡ ರಸ್ತೆಗಳ ನಡುವಿನ ಒಂದು ಮಸೀದಿಯಲ್ಲಿ ನಮ್ಮ ಫತ್ಹುಲ್ ಮುಈನ್ ದರ್ಸ್ ನಡೆಯುತ್ತಿರುವುದು ನೋಡಿದಾಗ ಅದ್ಭುತ ಎನಿಸಿತು.
ಆ ತರಗತಿಯಲ್ಲಿ ವಿದ್ಯಾರ್ಥಿಗಳಾಗಿ ಪಾಕಿಸ್ತಾನಿಗಳು, ಅರಬಿಗಳು ಮತ್ತು ತುರ್ಕಿಗಳೆಲ್ಲಾ ಇದ್ದರು. ತರಗತಿಯ ಬಳಿಕ ಶೈಖರೊಂದಿಗೆ ಅಲ್ಪಕಾಲ ಮಾತನಾಡಿದೆ. ಮಲಬಾರಿನಿಂದ ಎಂದರಿತಾಗ ‘ನಹ್ನು ತಲಾಮೀಝಿಕುಮ್’ “ನಾವೆಲ್ಲರೂ ನಿಮ್ಮ ವಿದ್ಯಾರ್ಥಿಗಳು” ಎಂದು ನಮ್ಮೂರಿನೊಂದಿಗಿರುವ ಗೌರವ ಭಾವವನ್ನು ಪ್ರಕಟಿಸಿದರು. ಭಾರತ ಮತ್ತು ಮಲಬಾರಿನ ಕುರಿತಾಗಿ ಅನೇಕ ವಿಚಾರಗಳನ್ನು ಕೇಳಿ ತಿಳಿದುಕೊಂಡರು.
ಡಾ. ಯಾಸಿರ್ ಕುರೇಶಿಯವರು ಶೈಖ್ ಅಬ್ದುಲ್ ಹಕೀಂ ಮುರಾದರ ಯುಕೆಯಲ್ಲಿರುವ ಕೇಂಬ್ರಿಜ್ ಮುಸ್ಲಿಂ ಕಾಲೇಜಿನ ಪ್ರಾಧ್ಯಾಪಕರಲ್ಲೊಬ್ಬರು. ಶೈಖ್ ರಮಳಾನ್ ಅಲ್ ಬೂತ್ವಿಯವರ ಶಿಷ್ಯರಾದ ಇವರು ಲಂಡನ್ ಯೂನಿವರ್ಸಿಟಿ, ಕೆಂಬ್ರಿಜ್ ಯೂನಿವರ್ಸಿಟಿ ಮುಂತಾದೆಡೆ ವಿದ್ಯಾರ್ಜಿಸಿದ್ದಾರೆ. ಇಸ್ತಾಂಬುಲಿನಲ್ಲಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಮಲಬಾರಿನವನು ಎಂದು ತಿಳಿದಾಗ ನಮ್ಮ ಊರಿನ ಕುರಿತು, ಇಲ್ಲಿನ ವಿದ್ವಾಂಸರ ಕುರಿತು ಹಾಗೂ ಅವರ ಗ್ರಂಥಗಳ ಬಗ್ಗೆಯೂ ಹೆಚ್ಚಿನ ಉತ್ಸುಕತೆಯಿಂದ ಮಾತನಾಡಿದರು. ಶೈಖ್ ಅಬೂಬಕ್ಕರ್ ಅಹ್ಮದ್ ಮತ್ತು ಶೈಖ್ ಅಬ್ದುಲ್ ಬಸ್ವೀರ್ ಸಖಾಫಿಯವರು ತಮ್ಮ ಗ್ರಂಥಗಳ ಮೂಲಕ ಅವರಿಗೆ ಸುಪರಿಚಿತರು. “ವಿಶೇಷವಾಗಿ ಇಲ್ಮುಲ್ ಮಂತ್ವಿಕ್ (ತರ್ಕ ಶಾಸ್ತ್ರ) ಮತ್ತು ಖವಾಇದುಲ್ ಫಿಕ್ಹಿನಲ್ಲಿ (ಕರ್ಮಶಾಸ್ತ್ರೀಯ ತತ್ವಗಳು) ಶೈಖ್ ಅಬ್ದುಲ್ ಬಸ್ವೀರರ ಗ್ರಂಥಗಳು ನನ್ನನ್ನು ಚಕಿತಗೊಳಿಸಿತ್ತು. ನನಗೆ ತುಂಬಾ ಸಹಾಯಕವಾದ ಗ್ರಂಥಗಳವು”,ಎಂದು ಅವರು ಉದ್ಗರಿಸಿದರು. ಇವರ ಅಧೀನದಲ್ಲಿ ಕೆಲಕಾಲ ಕಲಿಯಲು ಅವಕಾಶ ಸಿಕ್ಕಿತ್ತು ಎನ್ನುವ ಸಂತೋಷವನ್ನು ಅವರಲ್ಲಿ ಹಂಚಿಕೊಳ್ಳುವಾಗ ನನ್ನ ಕಣ್ಣಾಲಿಗಳು ಒದ್ದೆಯಾಗಿದ್ದವು. “ನಿಮ್ಮ ಊರಿನ ಆ ಉದ್ಧಾಮ ವಿದ್ವಾಂಸರೊಂದಿಗೆ ನನಗಾಗಿ ಪ್ರಾರ್ಥಿಸಲು ಕೋರುವುದು ಹಾಗೂ ನನ್ನ ಪೆನ್ ಮತ್ತು ನೋಟ್‌ಪ್ಯಾಡ್ ನೊಂದಿಗೆ ಅವರನ್ನು ಭೇಟಿಯಾಗಿ ಅವರಿಂದ ಜ್ಞಾನ ಗಳಿಸುವುದು ನನ್ನ ಬಹು ಕಾಲದ ಬಯಕೆಗಳಲ್ಲೊಂದು” ಅವರ ಪ್ರತಿಕ್ರಿಯೆ ಹೀಗಿತ್ತು. ಅವರು ತಮ್ಮ ತರಗತಿಯಲ್ಲೊಮ್ಮೆ ಪ್ರವಾದಿಗಳು ಪಾಪ ಸುರಕ್ಷಿತರು ಎಂಬ ನಮ್ಮ ವಿಶ್ವಾಸವನ್ನು ಇಮಾಮ್ ರಾಝಿಯವರ ಖುರ್‌ಆನ್ ವ್ಯಾಖ್ಯಾನವನ್ನು ಉಲ್ಲೇಖಿಸಿಕೊಂಡು ವಿವರಿಸುತ್ತಿದ್ದರು. ಮಾತಿನ ಮಧ್ಯೆ ನೀವು ಇಮಾಮ್ ರಾಝಿಯ ಕುರಿತು ಹೇಳುವುದನ್ನು ಕೇಳಿದಾಗ ನನಗೆ ಶೈಖ್ ಅಬೂಬಕ್ಕರ್‌ರವರ ಹದೀಸ್ ತರಗತಿ ನೆನಪಿಗೆ ಬಂತು ಎಂದು ಹೇಳಿದೆ. ಆ ಮಹಾನ್ ನಮಗೆ ಅವರ ಮದದುಗಳನ್ನು (ಆಧ್ಯಾತ್ಮಿಕ ಸಹಾಯಗಳು) ಕಳುಹಿಸಿ ಕೊಡುತ್ತಿರುವುದರಿಂದಲೇ ಇದೆಲ್ಲಾ ಹೇಳಲು ಸಾಧ್ಯವಾಗುತ್ತಿರುವುದು ಎಂದಾಗಿತ್ತು ಅವರ ಗೌರವಪೂರ್ವಕವಾದ ಉತ್ತರ!
ಪಶ್ಚಿಮ ತುರ್ಕಿಯಿಂದ ವರ್ಷಗಳ ಹಿಂದೆ ಇಸ್ತಾಂಬುಲಿಗೆ ಬಂದು ವಾಸ್ತವ್ಯ ಮಾಡಿರುವ ವ್ಯಕ್ತಿಯಾಗಿದ್ದರೆ ಹಸನ್ ಸೋನ್ಮಾಸ್. ಪ್ರಸಿದ್ಧ ಸೂಫಿಗಳು ಹಾಗೂ ಗ್ರಂಥಕರ್ತರಾಗಿರುವ ಶೈಖ್ ನೂಹ್ ಹಾಮೀಮ್ ಕೆಲ್ಲರ್ ಬಳಿ ವಿದ್ಯಾರ್ಜನೆ ಮಾಡಿರುವ ಇವರು ವಿದ್ವಾಂಸರೂ ಹೌದು. ಗ್ರಾಫಿಕ್ ಡಿಸೈನರ್ ವೃತ್ತಿಯಲ್ಲಿರುವ ಇವರು ವಿದ್ವಾಂಸರ ಮತ್ತು ವಿದ್ಯಾರ್ಥಿಗಳ ಸೇವೆಗೈಯುವುದರಲ್ಲಿ ಅತೀವ ಆಸಕ್ತರು. ಮಲಬಾರಿನ ಬಗ್ಗೆ ಹಾಗೂ ಮಾನ್ಸೂನ್ ಗಾಳಿಯ ದಿಕ್ಕಿನಲ್ಲಿ ಹಾಯಿ ದೋಣಿಯ ಮೂಲಕ ಇಸ್ಲಾಮ್, ತಸವ್ವುಫ್, ಫಿಕ್ಹ್ ಮುಂತಾದವುಗಳು ಸಮುದ್ರ ದಾಟಿ ಮಲಬಾರಿಗೆ ಬಂದಿರುವುದರ ಬಗ್ಗೆ ಅವರು ಕುತೂಹಲದಿಂದ ಮಾತನಾಡುತ್ತಾ ಇರುತ್ತಾರೆ. ಅನೇಕರಿಗೆ ಇದನ್ನು ಉತ್ಸಾಹದಿಂದ ವಿವರಿಸಿ ಕೊಡುತ್ತಾರೆ. ಒಮ್ಮೊಮ್ಮೆ ಮಲಬಾರ್ ಮತ್ತು ಅಲ್ಲಿನ ಸೂಫಿಗಳನ್ನು ಭೇಟಿಯಾಗಬೇಕೆಂಬ ಆಸೆಯನ್ನು ಕೂಡಾ ಹಂಚಿಕೊಳ್ಳುತ್ತಾರೆ.
ತುರ್ಕಿಯ ಪ್ರಸಿದ್ಧ ಸಮಾಜ ವಿಜ್ಞಾನಿ, ಲೇಖಕ, ಹಾಗೂ ಅಧ್ಯಾಪಕರಾಗಿದ್ದಾರೆ ಡಾ. ರಜಬ್ ಶೆನ್ ತುರ್ಕ್. “ಮಲಬಾರ್ ಜ್ಞಾನದ ಬೃಹತ್ ಪಟ್ಟಣವಾಗಿದ್ದು ಅಲ್ಲಾಹನ ಪ್ರೀತಿಗೆ ಪಾತ್ರರಾದ ಜನರು ಬದುಕುವ ಪ್ರದೇಶ” ಎಂದು ಒಮ್ಮೆ ತಮ್ಮ ತರಗತಿಯಲ್ಲಿ ಹೇಳಿದರು. ನಂತರ ನೆರೆದ ಜನಸ್ತೋಮದ ಮಧ್ಯೆ ನನ್ನ ಕಡೆಗೆ ಕೈ ಸನ್ನೆ ಮಾಡುತ್ತಾ ಈ ವಿದ್ಯಾರ್ಥಿ ಅಲ್ಲಿಂದ ಬಂದವನು ಎಂದು ಅವರು ಪರಿಚಯಪಡಿಸಿದಾಗ ನಿಜಕ್ಕೂ ನನಗೆ ನನ್ನನ್ನೇ ನೆನೆದು ದುಃಖವಾಗಿತ್ತು.
ಬೆಲ್ಜಿಯಂನ ಅಕಾಡಮಿಷ್ಯನ್ ಹಾಗೂ ಗ್ರಂಥಕಾರರಾಗಿದ್ದಾರೆ ಗ್ರೆಗೊರಿ ವ್ಯಾಂಡಮ್. ಶೈಖುಲ್ ಅಕ್ಬರ್ ಇಬ್ನು ಅರಬಿಯ ಕುರಿತ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಮಲಬಾರ್ ಮತ್ತು ಅಲ್ಲಿನ ವಿದ್ವಾಂಸ ಪರಂಪರೆಯ ಕುರಿತು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಮಲಬಾರಿನ ಇಬ್ನು ಅರಬಿ ಎಂದು ಪ್ರಸಿದ್ದಿ ಪಡೆದಿರುವ ಶೈಖ್ ಅಬ್ದುರಹ್ಮಾನ್ ಅಲ್ ನಕ್ಷಬಂದಿ ತಾನೂರರ ಹಾಗೂ ಅವರ ಬರಹಗಳ ಕುರಿತು ಮಾತನಾಡಿದಾಗ ‘ಮಲಬಾರ್ ಮತ್ತೆ ಮತ್ತೆ ನನ್ನನ್ನು ಚಕಿತಗೊಳಿಸುತ್ತಿದೆ, ಈ ರೀತಿಯ ವಿದ್ವಾಂಸರನ್ನು, ಅವರ ಕೃತಿಗಳನ್ನು ಬೆಳಕಿಗೆ ತರಲು ನೀವು ಉತ್ಸುಕರಾಗಬೇಕೆಂದು’ ಅವರು ವಿನಂತಿಸಿದರು. ವಿವಿಧ ಯೂರೋಪಿಯನ್ ದೇಶಗಳಿಂದ, ಇಂಗ್ಲೆಂಡ್‌ನಿಂದ ಹಾಗೂ ಇತರ ಅರಬ್ ಜಗತ್ತಿನಿಂದ ಧಾರ್ಮಿಕ ವಿದ್ಯೆ ಕರಗತಮಾಡುವ ಏಕೈಕ ಗುರಿಯೊಂದಿಗೆ ಇಲ್ಲಿ ಬಂದು ವಾಸ್ತವ್ಯ ಹೂಡಿರುವ ಹಲವು ಸ್ನೇಹಿತರಿದ್ದಾರೆ. ಮಲಬಾರ್ ಶೈಲಿಯ ಶೈಕ್ಷಣಿಕ ವ್ಯವಸ್ಥೆಗಳು ತಮ್ಮ ಕಡೆ ಇಲ್ಲ ಎಂದು ಹೇಳಿಕೊಂಡು ಅವರೆಲ್ಲಾ ದುಃಖ ತೋಡಿಕೊಳ್ಳುತ್ತಾರೆ. ಮಲಬಾರಿನ ವಾತಾವರಣದಲ್ಲಿ ಬೆಳೆದಿರುವುದರಿಂದ ನಿಮಗೆ ಬಾಲ್ಯದಿಂದಲೇ ಜ್ಞಾನದ ಓರಗೆಯಲ್ಲಿ ಬದುಕಲು ಸಾಧ್ಯವಾಯಿತು. ಇದರ ಪ್ರಾಮುಖ್ಯತೆಯನ್ನು ತಿಳಿಯಲು ನಮಗೆ ಇಷ್ಟು ವಯಸ್ಸು ದಾಟಿ ಬರಬೇಕಾಯಿತು ಎಂದೆಲ್ಲಾ ಬಹಳ ಆಸೆಯಿಂದ ಮಾತಾಡುತ್ತಾರೆ ಆ ಗೆಳೆಯರು.
ರಾಜಕೀಯ, ಐತಿಹಾಸಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ದಾಖಲಿಸಿರುವ ಬೇರೆ ಪ್ರದೇಶಗಳಿಗಿಂತ ಧಾರ್ಮಿಕ ಶಿಕ್ಷಣ ಹಾಗೂ ಆಧ್ಯಾತ್ಮಿಕತೆ ತುಂಬಿರುವ ವಾತಾವರಣ ಮತ್ತು ಸ್ವಾತಂತ್ರ್ಯದ ಬದುಕು ನಮ್ಮ ಊರಲ್ಲಿದೆ ಎನ್ನುವ ವಿಚಾರವನ್ನು ಇಂತಹ ಸಂದರ್ಭಗಳು ಚೆನ್ನಾಗಿ ಮನದಟ್ಟು ಮಾಡಿ ಕೊಡುತ್ತವೆ. ಆರುನೂರು ವರ್ಷಗಳ ಕಾಲ ಯೂರೋಪ್, ಮಧ್ಯ ಏಷ್ಯಾ, ಆಫ್ರಿಕಾ ಮುಂತಾದ ಕಡೆ ಆಡಳಿತ ನಡೆಸಿದ ಉಸ್ಮಾನಿಯಾ ಸಾಮ್ರಾಜ್ಯದ ರಾಜಧಾನಿಯಲ್ಲಿದ್ದುಕೊಂಡು ಭೂಗೋಳದ ವಿವಿಧ ದಿಕ್ಕುಗಳಿಂದ ಬಂದು ತಲುಪಿದ ಜನರಲ್ಲಿ ಬೆರೆತುಕೊಂಡು ಈ ಲೇಖನ ಬರೆಯುತ್ತಾ ಇದ್ದೇನೆ! ನಮ್ಮ ಪರಂಪರೆ, ಸನ್ನಿವೇಶಗಳೆಲ್ಲವೂ ಅತೀ ಸುಂದರ ಹಾಗೂ ಅಮೂಲ್ಯವಾದದ್ದು ಎನ್ನುವ ವಿಚಾರ ಪೂರ್ಣವಾಗಿ ಮನವರಿಕೆಯಾಗಲು ಕೆಲವೊಮ್ಮೆ ಹೀಗೆ ಹೊರಗೆ ನಿಂತುಕೊಂಡು ವೀಕ್ಷಿಸುವವನು ಹೇಳಬೇಕಾಗುತ್ತದೆ. ಇವುಗಳನ್ನು ಕೇಳುವಾಗ ಈ ಪರಂಪರೆಯನ್ನು ಪ್ರತಿನಿಧಿಸಲು ನಾವು ಅರ್ಹರೇ ಎಂಬ ಪ್ರಶ್ನೆ ಒಳಗೆ ಮಂತ್ರಿಸುತ್ತಿರುತ್ತದೆ. ನಮಗೆ ಲಭಿಸಿದ ಮಹಾನುಗ್ರಹಗಳನ್ನು ಸದ್ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲವಲ್ಲಾ ಎಂದು ದುಃಖವಾಗುತ್ತದೆ. ಅದೇ ವೇಳೆ, ಇದರ ಭಾಗವಾಗಿದ್ದೇವಲ್ಲಾ ಎಂದು ಚಿಂತಿಸುವಾಗ ಬಹಳ ಸಂತೋಷವೂ ಆಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ,ಇಸ್ತಾಂಬುಲ್ ನಂತಹ ಜಾಗತಿಕ ನಗರಗಳಲ್ಲಿ ಮಲಬಾರಿಯಾಗುವುದರ ಹಿನ್ನೆಲೆಯಲ್ಲಿ ಈ ದುಃಖ ಮತ್ತು ಆನಂದಗಳೇ ಆವರಿಸಿಕೊಂಡಿವೆ. ಜಗತ್ತಿನಲ್ಲಿರುವ ಇಂತದೇ ಬೇರೆ ನಗರಗಳಲ್ಲಿ ಬದುಕುತ್ತಿರುವ ಎಲ್ಲಾ ಮಲಬಾರಿಗಳಿಗೂ ಇದೇ ಅನುಭವ ಆಗುತ್ತಾ ಇರಬಹುದು. ಒಬ್ಬ ಮಲಬಾರಿ ಆಗುವುದರ ದುಃಖಗಳು ಮತ್ತು ಸಂತೋಷಗಳು ಅನುಭವಿಸದ ಅನಿವಾಸಿಗಳು ಇರಬಹುದೇ ಎನ್ನುವುದು ನಿಜಕ್ಕೂ ಸಂಶಯಾರ್ಹ!
ಕಾಶ್ಮೀರದ ಸುಗಂಧ ಹಾಗೂ ಸೌಂದರ್ಯವನ್ನು ಅರಸುತ್ತಾ ಅಲ್ಲಿನ ಮಂಜು ಮುಸುಕಿದ ಹಾದಿಗಳಲ್ಲಿ ಜನರ ನಡುವೆ ವಿಹರಿಸಿದ ಅನುಭವ ಕಥೆಯಿದು.
ಕಾಶ್ಮೀರದಲ್ಲಿನ ನನ್ನ ಸಂಚಾರವು ಲೋಕಲ್ ಗಾಡಿಗಳಲ್ಲಿ ಸಾಗಿತ್ತು. ಎಲ್ಲಿಗೆ ಹೋದರೂ ಅಲ್ಲಿನ ಪ್ರಾದೇಶಿಕ ಸಂಚಾರ ಮಾರ್ಗವನ್ನು ಅರಿತುಕೊಳ್ಳುವುದು ನನ್ನ ಒಂದು ವಾಡಿಕೆ. ಇದರಿಂದ ಎರಡು ಲಾಭಗಳಿವೆ. ಯಾತ್ರಾ ವೆಚ್ಚವನ್ನು ಕಡಿತಗೊಳಿಸಬಹುದು ಎನ್ನುವುದು ಒಂದು ಉಪಕಾರವಾದರೆ, ಆ ಊರಿನ ಸಾಮಾನ್ಯ ಜನರ ಮಾತು, ಸಂಸ್ಕೃತಿ, ಒಡನಾಟ, ರೀತಿ-ರಿವಾಜುಗಳ ಕುರಿತಾಗಿ ಅರಿತುಕೊಳ್ಳಬಹುದೆನ್ನುವುದು ಎರಡನೆಯದ್ದು. ಸಾಮಾನ್ಯವಾಗಿ ಸಂಚಾರಕ್ಕೆ ದೀರ್ಘ ದಿನಗಳ ಬಿಡುವು ಬೇಕು. ಮೂರು ನಾಲ್ಕು ದಿನದ ಪ್ರಯಾಣದ ಯೋಜನೆಯೊಂದಿಗೆ ಹೊರಟರೆ ಇವೆಲ್ಲಾ ನಡೆಯದು. ಟ್ಯಾಕ್ಸಿ ಕಾರ್ ಹಿಡಿದು ಕೃತಕ ಸಿಂಗಾರಗಳಿಂದ ಅಲಂಕೃತವಾಗಿರುವ ನಗರಗಳಿಗೆ ಹತ್ತಿ ಇಳಿದರೆ ತೃಪ್ತಿಯಾಯಿತೆಂದು ಹೇಳಬಹುದು. ಆದರೆ ಯಾವಾಗಲೂ ನನ್ನ ಯಾತ್ರೆಗಳಲ್ಲಿ ಆದ್ಯತೆಯಿರುವುದು ಹೆಚ್ಚು ಐಷಾರಾಮಿಯಲ್ಲದ ನಗರಗಳಿಗೆ ಮತ್ತು ಹಳ್ಳಿಗಳಿಗೆ.
2022ರ ಮೇ ಎರಡನೇ ವಾರ ಮುಂಜಾನೆ ಶ್ರೀನಗರದ ಲೋಕಲ್ ಟ್ಯಾಕ್ಸಿ ಸ್ಟಾಂಡಿಗೆ ತಲುಪಿದೆ. ತಣ್ಣಗೆ ಮಳೆ ಮತ್ತು ಮಂಜು ಒಟ್ಟಾಗಿ ಸುರಿಯುತ್ತಿತ್ತು. ಕಾಶ್ಮೀರದ ಹಚ್ಚಹಸಿರಿನ ಸೊಬಗು ಸ್ಪಷ್ಟವಾಗಿ ಗೋಚರಿಸುವುದು ಪ್ರಕಾಶಮಯ ಹಗಲಿನಲ್ಲೇ. ಮನದಲ್ಲಿ ಒಂದು ರೀತಿಯ ಮೋಡ ಆವರಿಸಿದ ಅನುಭವ! ಸಂಚಾರಿ ಉತ್ಸಾಹಿ ಆಗಿರಬೇಕು ತಾನೇ? ಮಳೆಯನ್ನು ಅನುಭವಿಸುವುದರ ಕಡೆಗೆ ಮನಸ್ಸನ್ನು ಒಗ್ಗಿಸಿಕೊಂಡೆ. ಅತ್ಯಧಿಕ ಚಳಿಯಿರುವ ಪ್ರಭಾತದಲ್ಲಿ ಮಂಜುಗಡ್ಡೆಯಿಂದ ಉದುರುವ ನೀರಿನ ಹನಿಗಳು ಸ್ಪರ್ಶಿಸುವಾಗ ಸಿಗುವ ಅನುಭೂತಿ ಆಗ ಅರಿವಿಗೆ ಬಂತು.
ಪ್ರಮುಖವಾಗಿ ಕ್ವಾಲಿಸ್, ಇನೋವಾ ಗಾಡಿಗಳಲ್ಲಿ ದೂರದ ದಿಕ್ಕುಗಳಿಗಿರುವ ಸಂಚಾರವನ್ನು ಮಾಡಲಾಗುತ್ತದೆ. 15 ಕಿಲೋಮೀಟರ್ ಕಡಿಮೆ ದೂರವಿರುವ ಸ್ಥಳಗಳಿಗೆ ಮಿನಿ ಬಸ್ಸುಗಳು ಲಭ್ಯವಿರುತ್ತವೆ. ಶ್ರೀನಗರದಿಂದ ಬಾರಮುಲ್ಲವರೆಗಿನ ರಸ್ತೆಗೆ ಅಭಿಮುಖವಾಗಿರುವ ದಾರಿಗಳಲ್ಲಿ ಬಸ್ಸುಗಳು ಲಭ್ಯವಿರುತ್ತವೆ. ಮಿನಿ ಬಸ್ಸುಗಳು ಮೆಲ್ಲನೆ ಆಗಾಗ ನಿಲ್ಲಿಸುತ್ತಾ ಸಂಚರಿಸುತ್ತಿರುತ್ತವೆ. ಅದರ ಒಳಗೆ ಹತ್ತಿದಾಗ ಕಿಟಕಿ ಬದಿಯ ಜಾಗ ಸಿಗದಿದ್ದರೆ ಉಸಿರಾಟಕ್ಕೆ ತೊಂದರೆಯಾಗುವ ಅನುಭವವಾಗುತ್ತದೆ. ಕಾಶ್ಮೀರದಲ್ಲಿ ನಾನು ಬಸ್ ಪ್ರಯಾಣವನ್ನು ಗರಿಷ್ಠ ಮಟ್ಟದಲ್ಲಿ ಕಡಿಮೆ ಮಾಡುತ್ತೇನೆ. ಶೇರ್ ಟ್ಯಾಕ್ಸಿಗಳಲ್ಲಿ ಬಾಡಿಗೆ ಸ್ವಲ್ಪ ಹೆಚ್ಚಿದ್ದರೂ ವೇಗವಾಗಿ ತಲುಪಬಹುದು. ನಾವು ಹತ್ತಿದ ನಗರದಿಂದ ಟ್ಯಾಕ್ಸಿ ಒಮ್ಮೆ ಹೊರಟರೆ ಮತ್ತೆ ಜನರನ್ನು ಹತ್ತಿಸಲು ಮತ್ತು ಇಳಿಸಲಿಕ್ಕಲ್ಲದೆ ಬೇರೆಲ್ಲಿಯೂ ನಿಲ್ಲಿಸುವುದಿಲ್ಲ.
ಶಿರಾರ್ ಶರೀಫಿನ ಕಡೆಗಾಗಿತ್ತು ನಮ್ಮ ಪ್ರಯಾಣ. ಬಾದ್ಗಾಂ ಜಿಲ್ಲೆಯಲ್ಲಿರುವ ಆ ಸಣ್ಣ ಜಾಗ ಕಾಶ್ಮೀರದ ಅತ್ಯಂತ ಪ್ರಮುಖ ಸೂಫಿ ಪ್ರದೇಶಗಳಲ್ಲೊಂದು. ಶ್ರೀನಗರದಿಂದ ಅಲ್ಲಿಗೆ ಸಾರಿಗೆ ಸೇವೆ ಇಲ್ಲ ಎಂದು ಒಬ್ಬ ಡ್ರೈವರ್ ಹೇಳಿದ್ದ. ಇಕ್ಬಾಲ್ ಪಾರ್ಕಿನಲ್ಲಿ ಶೇರ್ ಟ್ಯಾಕ್ಸಿ ಲಭ್ಯವಿದೆ ಎಂದು ಗೊತ್ತಿದ್ದರಿಂದ ಮಿನಿ ಬಸ್ಸಿನಲ್ಲಿ ಹೊರಟೆ. ಇಕ್ಬಾಲ್ ಪಾರ್ಕ್ ಶ್ರೀನಗರ ಪಟ್ಟಣದ ಮಧ್ಯೆಯಿರುವ ಉದ್ಯಾನವನಗಳಲ್ಲೊಂದು. ಕಾಶ್ಮೀರದ ಹಿರಿ-ಕಿರಿ ನಗರಗಳಲ್ಲೆಲ್ಲಾ ಸುಂದರವಾಗಿ ಜೋಡಿಸಲ್ಪಟ್ಟ ಸಣ್ಣ ಸಣ್ಣ ಪಾರ್ಕುಗಳನ್ನು ಕಾಣಬಹುದು. ಪ್ರಮುಖವಾಗಿ ಇವೆಲ್ಲವೂ ಅಲ್ಲಿನ ಜನರಿಗಾಗಿ ನಿರ್ಮಿಸಲ್ಪಟ್ಟಿದ್ದವು. ತಮ್ಮ ಕುಟುಂಬಗಳೊಂದಿಗೆ ಕುಶಲೋಪರಿ ನಡೆಸುತ್ತಾ ಕಾಶ್ಮೀರಿಗಳು ಮಳೆ ಇಲ್ಲದ ದಿನಗಳಲ್ಲಿ ಇಲ್ಲಿ ಒಂದುಗೂಡುತ್ತಾರೆ. ಅತಿ ಶೀತಾವಸ್ಥೆ ಬದಲಾಗಿದ್ದರೂ ಸಾಮಾನ್ಯ ಶೈತ್ಯವನ್ನು ಮೇ ತಿಂಗಳಲ್ಲಿ ಕಾಣಬಹುದು. ಬೆಚ್ಚಗಿನ ಸೂರ್ಯ ಶಾಖದೊಂದಿಗೆ ಹಚ್ಚ ಹಸಿರು ಹುಲ್ಲುಗಾವಲಿನಲ್ಲಿ ಮಲಗುವುದು ತುಂಬಾ ಹಾಯೆನಿಸುತ್ತದೆ. ಅಲ್ಲಿಗೆ ತಲುಪುವಾಗ ಮಳೆ ನಿಂತಿತ್ತು. ಒಂದು ಮರದ ಕೆಳಗೆ ಕುಳಿತೆ. ಆ ಸುಂದರ ದೃಶ್ಯ ಹಬ್ಬದಲ್ಲಿ ಮುಳುಗಿದೆ. ಅಲ್ಲಾಮಾ ಇಕ್ಬಾಲರ ಹೆಸರಿನ ಪಾರ್ಕ್ ಕಾಶ್ಮೀರವನ್ನು ತುಂಬಾ ಪ್ರೀತಿಸುವ ಅವರ ಮಹಾನ್ ಕಾವ್ಯಗಳನ್ನು ನೆನಪಿಸಿತು.
“ನನ್ನ ದೇಹವು ಕಾಶ್ಮೀರದ ಮಣ್ಣಲ್ಲಿ ಉದಿಸಿತು ಹೃದಯವು ಹಿಜಾಝಿನಲ್ಲಿದೆ ನನ್ನ ಕವಿತೆಗಳನು ಶಿರಾಝಿಗೆ ಅರ್ಪಿಸಿರುವೆ”
ಚಹಾ ಸವಿದೆ. ದೇಹದ ಶೀತ ತಕ್ಕ ಮಟ್ಟಿಗೆ ಸಡಿಲವಾಯಿತು. ಪಾರ್ಕಿನ ಹೊರಗಿನ ಒಂದು ದಿಕ್ಕಿನಲ್ಲಿ ಎರಡು-ಮೂರು ಟ್ಯಾಕ್ಸಿ ಗಾಡಿಗಳು ನಿಂತಿತ್ತು. ಶಿರಾರ್ ಷರೀಫಿಗೆ ಎಂದಾಗ ಎದುರಿನ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಡ್ರೈವರ್ ಕೇಳಿಕೊಂಡ. ಇಲ್ಲಿ ಕೂತುಕೊಂಡು ದೃಶ್ಯ ವೈಭವಗಳನ್ನು ಆಸ್ವಾದಿಸಬಹುದು. ಹೊರ ರಾಜ್ಯದವರೆಂದರಿತರೆ ಕಾಶ್ಮೀರಿಗಳು ಅತ್ಯಂತ ಪ್ರೀತಿಪೂರ್ವಕವಾಗಿ ಒಡನಾಡುತ್ತಾರೆ. ಅವರಷ್ಟು ಅತಿಥಿ ಸತ್ಕಾರ ಗುಣ ಇರುವವರು ಬಹುಶಃ ಭೂಮಿಯಲ್ಲಿ ಬಹಳ ಕಡಿಮೆ ಇರಬೇಕು. ಹೊಸ ಮುಖಗಳನ್ನು ಕಂಡರೆ ಕುಶಲೋಪರಿ ನಡೆಸುತ್ತಾರೆ. ತಮ್ಮ ಮನೆಗೆ ಆಮಂತ್ರಿಸುತ್ತಾರೆ. ಅಗತ್ಯ ಸಹಾಯಗಳನ್ನು ಒದಗಿಸುತ್ತಾರೆ. ಆ ಆತಿಥ್ಯಗಳು ತೋರ್ಪಡಿಕೆಯ ಅಂಶವಿರುವುದಿಲ್ಲ. ಅವರ ಸಂಸ್ಕೃತಿಯೇ ಹಾಗೆ. ಲವಲೇಶವೂ ಕೃತಕತೆ ಇಲ್ಲದೆ ಜನರನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಗುಣ ಅವರಿಗೆ ರಕ್ತದಲ್ಲಿ ಬಂದಿದೆ.
ವಾಹನ ಹೊರಡಲಾರಂಭಿಸಿತು. ಜೊತೆಗಿರುವವರೆಲ್ಲರೂ ಕಾಶ್ಮೀರಿಗಳು. ಕಾಶ್ಮೀರಿ ಭಾಷೆಯಲ್ಲಿ ಅವರು ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾರೆ. ಅನೇಕರಿಗೆ ಉರ್ದು ತಿಳಿದಿದೆಯಾದರೂ ಸ್ವಂತದವರೊಂದಿಗೆ ಸಂಭಾಷಣೆಯಲ್ಲಿ ಅವರು ಕಾಶ್ಮೀರಿಯನ್ನೇ ಬಳಸುತ್ತಾರೆ. ಕಾಶ್ಮೀರಿ ಭಾಷೆ ಕಲಿಯಬೇಕೆಂಬ ಆಸೆ ಆಗ ತಾನೇ ನನ್ನೊಳಗೆ ತೀವ್ರವಾಗತೊಡಗಿತು. ಕಾವ್ಯಾತ್ಮಕ ಭಾಷೆಯದು. ಹಲವು ಗ್ರಾಮಗಳಲ್ಲಿ ಕಾಶ್ಮೀರಿ ಭಾಷೆಯಲ್ಲಿ ಬರೆಯಲಾದ ಭಕ್ತಿ ಗೀತೆಗಳನ್ನು ಮಸೀದಿಗಳಲ್ಲಿ ಕೇಳಿಸಿಕೊಳ್ಳುತ್ತಿದ್ದೆ. ಒಂದೇ ಒಂದು ಪದವು ತಿಳಿದಿಲ್ಲವಾದರೂ ಅವುಗಳನ್ನು ಕಿವಿಗೆ ಇಳಿಸಿಕೊಳ್ಳುವಾಗ, ಅದರ ಸಂಗೀತ ನಿರ್ಭರತೆಯನ್ನು ಅನುಭವಿಸುವಾಗ ನಮ್ಮ ಸಹಜ ಭಾವಗಳು ಕೆಲವು ಸಮಯಕ್ಕೆ ನಿಶ್ಚಲವಾಗುತ್ತವೆ.
ಐದು ಮಿಲಿಯನ್ ಜನರು ಆಡುವ ಕಾಶ್ಮೀರಿ ಭಾಷೆ 2008ರಿಂದ ಕಾಶ್ಮೀರಿ ಶಾಲೆಗಳಲ್ಲಿ ಕಡ್ಡಾಯ ವಿಷಯವಾಗಿ ಪ್ರಾಬಲ್ಯಕ್ಕೆ ಬಂದಿದೆ. ವಿದೇಶಿ ಭಾಷೆಯ ನುಸುಳುಕೋರತನದ ಮಧ್ಯೆ ಹೊಸ ತಲೆಮಾರು ತಮ್ಮ ಸ್ವಭಾಷೆಯ ಬಗ್ಗೆ ಅಜ್ಞರಾಗಬಾರದೆಂಬ ಪ್ರಜ್ಞೆ ಇಲ್ಲಿನ ಜನರಿಗೆ ಮತ್ತು ಆಳುವ ವರ್ಗಕ್ಕಿದೆ. ಇಂಡೋ ಆರ್ಯನ್, ಸಂಸ್ಕೃತ ಭಾಷೆಗಳು ಕಾಶ್ಮೀರಿ ಭಾಷೆಯ ಮೂಲ ಎಂದು ಅಂದಾಜಿಸಲಾಗಿದೆ. ನಂತರ ಪರ್ಷಿಯನ್ ಭಾಷೆಯ ಭಾರೀ ಪ್ರಭಾವ ಅದರ ಮೇಲೆ ಬಿತ್ತು. ಜತೆಗೆ ಭಾರತೀಯ ಭಾಷೆಗಳಲ್ಲಿನ ವಿಶಿಷ್ಟ ಸ್ವರ ಸಮೂಹ ಕಾಶ್ಮೀರಿ ಭಾಷೆಗಳಿಗೂ ಬಂತು. ಕ್ರಮೇಣ ವಿವಿಧ ರಾಗಗಳಲ್ಲಿ ಆಡಲು ಮತ್ತು ಬರೆಯಲು ಸಾಧ್ಯವಿರುವ ಭಾಷೆಯಾಗಿ ಬದಲಾಯಿತು.
ಶ್ರೀನಗರ ಪಟ್ಟಣದ ಗಡಿ ದಾಟಿದಂತೆ ಪ್ರಕೃತಿಯ ಚಿತ್ರಣ ಬದಲಾಗತೊಡಗಿತು. ಕಾಶ್ಮೀರದ ಎಲ್ಲಾ ಭಾಗಗಳಲ್ಲೂ ಪ್ರಯಾಣಿಸಿರುವ ನನಗೆ ಅಲ್ಲಿನ ಪ್ರಕೃತಿಯ ವೈವಿಧ್ಯತೆ ನನ್ನನ್ನು ಚಕಿತಗೊಳಿಸಿದೆ. ಪ್ರದೇಶಗಳು ಬದಲಾದಂತೆ ಮರಗಳಾಗಲಿ, ಭೂಮಿಯ ಮೇಲ್ಮೈಯಾಗಲಿ ಎಲ್ಲವೂ ಭಿನ್ನ ಭಿನ್ನವಾಗಿವೆ. ಭೂವೈವಿಧ್ಯದ ಬೆರಗು ತುಂಬಿರುವ ದಾರಿಗಳಲ್ಲಿ ಗಾಡಿ ವೇಗವಾಗಿ ಸಂಚರಿಸುತ್ತಿತ್ತು. ಶ್ರೀನಗರದಲ್ಲಿರುವ ಸೈನಿಕ ಉಪಸ್ಥಿತಿ ಮುಂದಿನ ಯಾತ್ರೆಯಲ್ಲಿ ಗೋಚರಿಸಲಿಲ್ಲ. ಕೆಲವು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮಿಲಿಟರಿ ಕ್ಯಾಂಪ್‌ಗಳಿವೆ. ‘ಚದುರ’ ಎಂಬ ಸಣ್ಣ ಪಟ್ಟಣಕ್ಕೆ ತಲುಪಿದೆನು. ಗುಂಡಿನ ದಾಳಿಯ ವಾರ್ತೆಗಳು ಇಲ್ಲಿಂದ ಸಾಮಾನ್ಯವಾಗಿ ಕೇಳಿ ಬರುತ್ತಿರುತ್ತವೆ. ಆದರೆ, ಅಂದು ಜನರೆಲ್ಲರೂ ತುಂಬು ಉತ್ಸಾಹದಿಂದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವ್ಯಾಪಾರ ಕೇಂದ್ರಗಳಲ್ಲಿ ನಿಬಿಡತೆ ಹೆಚ್ಚಾಗುತ್ತಿದೆ. ಶಾಲೆಗಳಿಗೆ ಹೋಗುವ ಮಕ್ಕಳು ಗುಂಪಾಗಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ.
ಅಲ್ಲಿಂದ ಶಿರಾರ್ ಶರೀಫಿನವರೆಗಿನ ದಾರಿ ಏರಿಳಿತಗಳಿಂದ ಕೂಡಿದೆ. ಸಮತಲದಿಂದ ಭೂಮಿಯ ಮೇಲ್ಮೈ ಪರ್ವತಕ್ಕೆ ಹೋಗುತ್ತಿದ್ದಂತೆ ಚೆಂದದ ದೃಶ್ಯಗಳನ್ನು ಕಾಣಲು ಸಾಧ್ಯವಾಯಿತು. ಮಧ್ಯೆ ಡಿಗ್ರಿ ಕಾಲೇಜೊಂದಿದೆ. ಗಾಡಿಯಲ್ಲಿನ ಸ್ಥಳಾವಕಾಶಕ್ಕೆ ತಕ್ಕಂತೆ ಎರಡು ಮೂರು ವಿದ್ಯಾರ್ಥಿಗಳು ಅಲ್ಲಿಂದ ಹತ್ತಿದರು. ಒಬ್ಬ ವಿದ್ಯಾರ್ಥಿ ನನ್ನ ಹತ್ತಿರ ಕುಳಿತ. ನಾನು ಇಂಗ್ಲೀಷಿನಲ್ಲಿ ಮಾತನಾಡಲಾರಂಭಿಸಿದಾಗ ತುಂಬಾ ಪ್ರಸನ್ನನಾಗಿ ಅವನು ಸಂಭಾಷಣೆಯಲ್ಲಿ ಜೊತೆ ಸೇರಿದ. ಹೆಸರು ಜಮಾಲ್. ಬಿಕಾಂ ಕಲಿಯುತ್ತಿದ್ದಾನೆ. ಆ ಪ್ರದೇಶದ ಮಕ್ಕಳೆಲ್ಲರೂ ಉನ್ನತ ಶಿಕ್ಷಣಕ್ಕೆ ಆಶ್ರಯಿಸಿರುವ ಮುಖ್ಯ ಸಂಸ್ಥೆಯದು. ಅವನು ಕೇರಳದ ಕುರಿತು ಕೇಳಿದ. ಮಲಯಾಳಿಯೋರ್ವನನ್ನು ಮೊತ್ತ ಮೊದಲ ಬಾರಿಗೆ ಅವನು ಭೇಟಿಯಾಗಿದ್ದ. ಕೇರಳದ ದೃಶ್ಯ ಸೌಂದರ್ಯವನ್ನು ಇನ್ಸ್ಟಾಗ್ರಾಮಿನಲ್ಲಿ ನೋಡಿದ್ದೆ ಎಂದು ಅವನು ಹೇಳಿದ. ಗಾಡಿ ಶಿರಾರ್ ಶರೀಫಿಗೆ ತಲುಪಿತು. 80 ರೂಪಾಯಿ ಚಾರ್ಜ್ ಆಗಿತ್ತು.
ಅಲ್ಲಿ ಇಳಿದಾಗ, ನನ್ನ ಆಲೋಚನೆಗಳು ನಾನು ಮೊದಲು ತೆರಳಲು ಯೋಚಿಸಿದ್ದ ಸೂಫಿವರ್ಯರ ಕಡೆಗೆ ಹೊರಳಿತು. ಶಿರಾರ್ ಶರೀಫ್ ಕಾಶ್ಮೀರಿ ಭಾಷೆಯ ಮಹಾಕವಿಯೂ ಸೂಫಿವರ್ಯರೂ ಆಗಿರುವ ಶೈಖ್ ನೂರುದ್ದೀನ್ ನೂರಾನಿಯ ಅಂತ್ಯ ವಿಶ್ರಾಂತಿ ಕೇಂದ್ರ. ಆಲಂದಾರೇ ಕಾಶ್ಮೀರ್ (ಕಾಶ್ಮೀರಿನ ಪತಾಕೆ ವಾಹಕರು), ಶೈಖುಲ್ ಆಲಂ (ಲೋಕ ಗುರು) ಮುಂತಾದ ಬಿರುದುಗಳಿಂದ ಮಹಾನುಭಾವರು ಪ್ರಸಿದ್ಧರಾಗಿದ್ದಾರೆ. ಪ್ರತಿಭಾನ್ವಿತ ಸೂಫಿ ತಾತ್ವಿಕ ಕವಿ ಎಂಬ ನೆಲೆಯಲ್ಲಿ ವಿಖ್ಯಾತರು ಕೂಡಾ. ಶೈಖ್ ನೂರುದ್ದೀನ್ ದರ್ಗಾಕ್ಕೆ ಪಟ್ಟಣದಿಂದ ಕೇವಲ 200 ಮೀಟರ್ ದೂರವಿದೆ. ಅಲ್ಲಿಂದ ದರ್ಗಾ ಶರೀಫ್ ಮತ್ತು ಹತ್ತಿರದಲ್ಲಿರುವ ಭವ್ಯ ಮಸೀದಿಯ ದೃಶ್ಯ ಕಾಣಬಹುದು. ಅದನ್ನು ನೋಡಿದಾಗಲೇ ತಕ್ಷಣ ಅಲ್ಲಿಗೆ ತಲುಪಿ ಬಿಡಬೇಕೆಂದು ಮೋಡಿ ಮಾಡುವ ವಿನ್ಯಾಸದ ಬೃಹತ್ ಸೌಧಗಳು. ಶಿರಾರ್ ಶರೀಫ್ ಪುರಾತನ ನಗರಗಳೊಂದಿಗೆ ಎಲ್ಲಾ ರೀತಿಗಳಲ್ಲೂ ಹೋಲುತ್ತದೆ. ಮರದ ದಿಮ್ಮಿಗಳನ್ನು ಹೇರಳವಾಗಿ ಬಳಸಿ ಶತಮಾನಗಳ ಹಿಂದೆ ನಿರ್ಮಿಸಲಾದ ಸಣ್ಣ ಕಟ್ಟಡಗಳು. ಅದರೊಳಗಿನ ಸಣ್ಣ ವಿಸ್ತಾರದ ಕೋಣೆಗಳಲ್ಲಿ ವಿವಿಧ ರೀತಿಯ ವ್ಯಾಪಾರಗಳನ್ನು ಕಾಣಬಹುದಿತ್ತು.
ಇಳಿ ವಯಸ್ಸಿನ ವ್ಯಾಪಾರಿಗಳ ಅಭಿವ್ಯಕ್ತಿಗಳಲ್ಲಿ ಹಳೆತನ ತುಂಬಿ ತುಳುಕುತ್ತಿದೆ. ಒಂದಿನಿತೂ ಕೃತಕತೆ ಇಲ್ಲದ ಒಡನಾಟ. ಆಧುನಿಕತೆಯ ಗದ್ದಲಗಳಿಲ್ಲದ ಹ್ಯಾಟ್ರಿಕ್ ನಗರಕ್ಕೆ ಸ್ವಪ್ನದಲ್ಲಿ ತಲುಪಿದಂತೆ ತೋಚಿತು. ನನಗೆ ಈ ಅನುಭವ ಬಹಳ ಖುಷಿ ಕೊಟ್ಟಿತ್ತು.
ಬೆಳಿಗ್ಗೆ ಚಹಾ ಕುಡಿದು ಹೊರಟಿದ್ದರಿಂದ ಹಸಿವು ತೀವ್ರವಾಗಿತ್ತು. ಆದರೂ ಮೊದಲು ದರ್ಗಾಕ್ಕೆ ತೆರಳುವಂತೆ ಒಳ ಮನಸ್ಸು ಒತ್ತಾಯಿಸುತ್ತಿತ್ತು. ನಡೆಯಲಾರಂಭಿಸಿದ್ದೇ ತಡ ಭಾರೀ ಗಾಳಿ ಬೀಸತೊಡಗಿತು. ನಡೆದರೆ ಹಿಂದೆ ತಳ್ಳುತ್ತಿರುವಂತೆ ಭಾಸವಾಗುವ ಧೂಳುಗಾಳಿ. ಮಳೆನಾಡಿನ ಗ್ರಾಮಗಳಲ್ಲಿ ಬದುಕಿದ್ದರಿಂದ ಹಲವು ರೀತಿಯ ಗಾಳಿಗಳು ಪರಿಚಯವಿತ್ತಾದರೂ ಈ ಧೂಳುಗಾಳಿಯ ಅನುಭವ ಇದೇ ಮೊದಲು. ದಾರಿಹೋಕರು ಕ್ಷಣ ಮಾತ್ರದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಾರ್ಯಾಚರಿಸುತ್ತಿರುವ ಅಂಗಡಿಗಳಿಗೆ ಪ್ರವೇಶಿಸಿಸುತ್ತಿದ್ದಾರೆ. ವಾಹನಗಳು ನಿಧಾನವಾಗಿ ದಾರಿ ಬದಿಗೆ ಸರಿಯುತ್ತಿವೆ. ನಾನು ಮೊದಲು ನೋಡಿದ್ದ ಕಟ್ಟಡದ ಮೊದಲನೇ ಮಹಡಿಗೆ ಹತ್ತಿ ನಿಂತೆ. ಆ ಗಾಳಿಮಳೆ ಸುಮಾರು ನಾಲ್ಕು ನಿಮಿಷಗಳ ಕಾಲ ಮುಂದುವರಿಯಿತು. ಮೆಲ್ಲನೆ ಪ್ರಕೃತಿ ಶಾಂತವಾಯಿತು. ಮಳೆ ನಿಂತಿತು. ನಾನು ದರ್ಗಾದ ಕಡೆಗೆ ನಡೆದೆ.
ಕಾಶ್ಮೀರದ ದರ್ಗಾಗಳ ವಾಸ್ತು ಕಲೆ ವಿಭಿನ್ನ ಮತ್ತು ಆಕರ್ಷಣೀಯ. ಮೇಲ್ಛಾವಣಿಯ ಮಧ್ಯಭಾಗದಲ್ಲಿ ಎತ್ತರದಲ್ಲಿ ನಿರ್ಮಿಸಲ್ಪಟ್ಟ ಮಿನಾರದಂತೆ ಹೋಲುವ ಸ್ತೂಪಗಳು. ಅದು ಹಂತ ಹಂತಗಳಲ್ಲಾಗಿ ನಿರ್ಮಾಣಗೊಂಡಿವೆ. ತುತ್ತ ತುದಿಯಲ್ಲಿ ಕಡಿಮೆ ಭಾರ ಮತ್ತು ಕೆಳಗೆ ಬಂದಂತೆ ತೂಕ ಹೆಚ್ಚಾಗುತ್ತಾ ಹೋಗುವ ಹಾಗೆ ಭಾಸವಾಗುವ ನಿರ್ಮಾಣ ಕೌಶಲ್ಯ. ಮೇಲ್ಛಾವಣಿ ಮತ್ತು ಮೂರೋ ನಾಲ್ಕೋ ಅಂತಸ್ತುಗಳು. ಕೆಳಗಿನ ಭಾಗಕ್ಕೆ ಓರೆಯಾಗಿ ಕಾಣುವಂತೆ ಮೇಲ್ಛಾವಣಿ ನಿರ್ಮಿಸಿರುವುದು ಹಿಮ ಬೀಳುವಾಗ ಬೇಗನೆ ಭೂಮಿ ಸೇರಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ ಅದರ ಮೇಲೆ ಹಿಮ ಬಿದ್ದು ಬಿದ್ದು ಭಾರವೆನಿಸುತ್ತದೆ. ಕಾಶ್ಮೀರದ ಪ್ರಸಿದ್ಧ ದರ್ಗಾ ಎನಿಸಿರುವ ಶಿರಾರ್ ಶರೀಫಿನ ನಿರ್ಮಾಣವೂ ಇದಕ್ಕಿಂತ ಭಿನ್ನವಾಗಿರಲಿಲ್ಲ.
ನಾಲ್ಕು ದಿಕ್ಕುಗಳಿಂದಲೂ ಒಂದೇ ತರಹ ಇರುವ ಹಾಗೆ ವೃತ್ತಾಕೃತಿಯಲ್ಲಿ ದರ್ಗಾದ ನಿರ್ಮಾಣ ಮೂಡಿ ಬಂದಿದೆ. ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂಗಸ್ನಾನ ಮಾಡಿ ಅದರೊಳಗೆ ಪ್ರವೇಶಿಸಿದೆ. ಕಾಶ್ಮೀರ ಯಾತ್ರೆಯ ಉದ್ದೇಶಗಳಲ್ಲೊಂದು ನೆರವೇರಿತು. ಸೃಷ್ಟಿಕರ್ತನಿಗೆ ಸ್ತುತಿ ಸ್ತೋತ್ರಗಳು. ಕಾಶ್ಮೀರಿಗಳ ಭಕ್ತಿಯು ಅತಿ ತೀವ್ರವಾಗಿತ್ತು. ಮಸೀದಿಯಲ್ಲಿ ಇಲಾಹನೊಂದಿಗೆ ಆರಾಧನೆಯಲ್ಲಿ ಏರ್ಪಡುವಾಗ ಬೇರೆಲ್ಲವನ್ನು ಮರೆತು ಧ್ಯಾನ ನಿರತರಾಗುವ ಕಾಶ್ಮೀರಿಗಳನ್ನು ಕಾಣಬಹುದು. ಮನಸ್ಸಿಗೆ ಸಕೀನತ್ (ಶಾಂತಿ) ಹುಡುಕಿ ಬಂದಿರುವ ಇವರು ಕೂತಲ್ಲೇ ಎಲ್ಲವನ್ನೂ ಮರೆತು ಇಲಾಹನೆಡೆಗೆ ಕೈಯೆತ್ತುತ್ತಾರೆ. ಈ ದೃಶ್ಯಗಳು ನಮ್ಮನ್ನು ಆಧ್ಯಾತ್ಮಿಕತೆಯ ಪ್ರಶಾಂತತೆಗೆ ತಲುಪಿಸುತ್ತದೆ. ಅವರಲ್ಲೊಬ್ಬರಾಗಿ ಪ್ರಾರ್ಥಿಸುವಾಗ ಹೃದಯದಾಳದಲ್ಲಿ ಭಕ್ತಿ ತುಂಬಿ ಬರುತ್ತದೆ.
ನಾನು ದರ್ಗಾದಲ್ಲಿ ತುಂಬಾ ಹೊತ್ತು ಕಳೆದೆ. ಖುರ್‌ಆನ್ ಪಾರಾಯಣ ಮಾಡಿದೆ. ಎರಡು ಅಂತಸ್ತುಗಳಿವೆ. ಮೇಲೆ ಹತ್ತಿದಾಗ ಅಲ್ಲಿ ಯಾರೂ ಇರಲಿಲ್ಲ. ಪುರಾತನ ಪಟ್ಟಣವನ್ನು ನೆನಪಿಸಿದೆ. ಅಲ್ಲಿನ ಅನುಗ್ರಹೀತ ಜನರ ಕುರಿತು ಆಲೋಚಿಸಿದೆ. ‘ಸೂಫಿ ನಗರಗಳು’ ಆಧುನಿಕ ಕಾಲದ ಆರಬ್ ಮುಸ್ಲಿಂ ಫಿಕ್ಷನ್‌ಗಳಲ್ಲಿ ಹಾಗೂ ಸೃಜನಶೀಲ ನಾನ್ ಫಿಕ್ಷನಿನಲ್ಲಿನ ಪ್ರಮುಖ ಪರಿಕಲ್ಪನೆಗಳಲ್ಲೊಂದು. ಪ್ರಕಾಶದಂತಿರುವ ಜನರು ಬದುಕುವ ತಾಣಗಳು. ಜ್ಞಾನಿಗಳ ಪರಂಪರೆಯನ್ನು ಹೊಂದಿರುವ ಸ್ಥಳಗಳು. ಪ್ರಕಾಶ ಹಬ್ಬುವ ಜೀವನದಲ್ಲಿ ದಿನ ನಿತ್ಯ ತೊಡಗಿಸಿಕೊಂಡವರು. ಸ್ವರ್ಗ ನಿರೀಕ್ಷೆಯೊಂದಿಗೆ ಕೂತಿರುವ ವೃದ್ಧರ ಹೂದೋಟಗಳು. ಗೋಚರ ಮತ್ತು ಅಗೋಚರ ಸೂಫಿಗಳು. ಅವು ಇಲಾಹಿ ಚಿಂತನೆಗೆ ಚೈತನ್ಯ ತುಂಬಿಸಲು ಹೇತುವಾಗುತ್ತವೆ. ಶಿರಾರ್ ಶರೀಫ್ ಆಶ್ಚರ್ಯಗೊಳಿಸುವ ನಗರ. ಅಲ್ಲಿಗೆ ತೆರಳಿದಾಗ ನಿಮ್ಮನ್ನು ನೀವು ಮರೆಯದಿದ್ದರೆ ಅದ್ಭುತ.
ಅಲ್ಲಾಮ ಇಕ್ಬಾಲ್ ಹೇಳಿದ ಭೂಮಿಯ ಸ್ವರ್ಗಕ್ಕೆ ತೆರಳಲು ಬಯಸುವ ದಕ್ಷಿಣ ಭಾರತೀಯರೇ, ನೀವು ಶಿರಾರ್ ಶರೀಫಿಗೆ ತಲುಪಿಲ್ಲ. ಕನಿಷ್ಠ ಅದರ ಕುರಿತು ಕೇಳಿಯೂ ಇಲ್ಲ. ಹಿಮದ ಗುಡ್ಡಗಳಲ್ಲಿ ಕುಳಿತಿರುವ ಪಟಗಳು ಮಾತ್ರವೇ ನಿಮ್ಮ ಗುರಿ ಎನಿಸಿದೆ. ನಿಮ್ಮ ಪ್ರಯಾಣವು ಅರ್ಧದಷ್ಟೂ ಸಫಲವಾಗಿಲ್ಲ. ಶಿರಾರ್ ಶರೀಫ್ ದರ್ಶಿಸದವರು ಕಾಶ್ಮೀರೀ ಸಂಸ್ಕೃತಿಯ ಸೊಬಗನ್ನರಿತಿಲ್ಲ. ಅಲ್ಲಿನ ನಿಶಬ್ದದ ಗಂಭೀರತೆಯನ್ನರಿತಿಲ್ಲ.
ಅರಬಿ, ಪರ್ಷಿಯನ್, ಅರ್ಮಾಯಿಕ್, ಗ್ರೀಕ್ ಭಾಷೆಗಳಲ್ಲಿ ಅತೀವ ಪಾಂಡಿತ್ಯವುಳ್ಳ ರೋಸೆಂಟಲ್ ರವರ ‘Knowledge Triumphant: The Concept of Knowledge in Medieval Islam’ ಎಂಬ ಕೃತಿಯ ಕುರಿತು ಕಿರು ಅವಲೋಕನ.
ಆಧುನಿಕ ಕಾಲದ ಪ್ರಸಿದ್ಧ ಇತಿಹಾಸಕಾರ ‘ಅರ್ನಾಲ್ಡ್ ಟಾಯ್ನ್ ಬಿ’ (1889-1975) ನಾಗರಿಕತೆಗಳ ಬೆಳವಣಿಗೆ ಮತ್ತು ಅಳಿವು ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿದವರಲ್ಲಿ ಪ್ರಮುಖರು. ಅವರ ಹನ್ನೆರಡು ಸಂಪುಟಗಳಿರುವ ‘ಎ ಸ್ಟಡಿ ಆಫ್ ಹಿಸ್ಟರಿ’ ಎಂಬ ಕೃತಿಯು ಗಮನಾರ್ಹವಾದುದು. ಮುಖ್ಯವಾಗಿ ಸರಿಸುಮಾರು ಹದಿನೇಳು ನಾಗರಿಕತೆಗಳ ಬಗ್ಗೆ ಅವರು ಸ್ಥೂಲ ಅಧ್ಯಯನ ನಡೆಸಿದ್ದಾರೆ. ಸಾಮಾನ್ಯವಾಗಿ ಇತಿಹಾಸದ ಅಧ್ಯಯನವು ತನ್ನದೇ ಆದ ವಿಧಾನವನ್ನು ಹೊಂದಿದೆ. ಪ್ರಾದೇಶಿಕ ಇತಿಹಾಸದಿಂದ ಹಿಡಿದು ಜಾಗತಿಕ ಇತಿಹಾಸದವರೆಗೆ ಈ ವ್ಯಾಪ್ತಿಯಲ್ಲಿ ಸೇರುತ್ತದೆ. ‘ಜಾಗತಿಕ ಇತಿಹಾಸ’ ವು (universal history) ಪ್ರಮುಖವಾಗಿ ಜಾಗತಿಕ ಪ್ರಸಕ್ತತೆಯನ್ನು ಹೊಂದಿರುವ ಇತಿಹಾಸಗಳು ಹಾಗೂ ಅದರ ನಿಯಮಾವಳಿಗಳನ್ನು ಹೊಂದಿದೆ.
ಟಾಯ್ನ್ ಬಿ ತನ್ನ ಅಧ್ಯಯನದಲ್ಲಿ ಕಾಲವಾಗಿ ಹೋದ ಇತಿಹಾಸಕಾರರನ್ನು ಸ್ಮರಿಸುವ ವೇಳೆ ಟ್ಯುನೀಷಿಯನ್ ತತ್ವಚಿಂತಕ ಹಾಗೂ ಇತಿಹಾಸಕಾರ ‘ಇಬ್ನ್ ಖಲ್ದೂನ್’ ರನ್ನು ಗೌರವಯುತವಾಗಿ ಉಲ್ಲೇಖಿಸುತ್ತಾ ‘ಅವರು ಅಪೂರ್ವ ಇತಿಹಾಸಕಾರರಲ್ಲೊಬ್ಬರು’ ಎಂದು ಬಣ್ಣಿಸುತ್ತಾರೆ. ಇತಿಹಾಸದ ಕ್ಷೇತ್ರದಲ್ಲಿ ಇಬ್ನ್ ಖಲ್ದೂನರು ನೀಡಿರುವ ಕೊಡುಗೆಗಳನ್ನು ಸ್ಮರಿಸುತ್ತಾರೆ.
ಐನೂರರಷ್ಟು ಪುಟಗಳಿರುವ ಪ್ರಸಿದ್ಧ ಇತಿಹಾಸ ಕೃತಿ ‘ಕಿತಾಬುಲ್ ಇಬರ್’ ಗೆ ಮುನ್ನುಡಿಯಾಗಿ ಬರೆದ ಇಬ್ನ್ ಖಲ್ದೂನರ ಜಗತ್ಪ್ರಸಿದ್ಧ ‘ಮುಖದ್ದಿಮ’ ರಚನೆ 1377ರಲ್ಲಿ ಪೂರ್ಣಗೊಂಡಿತ್ತು. ಇತಿಹಾಸದಾಚೆಗೆ ಇತರ ವಲಯಗಳಿಗೂ ವ್ಯಾಪಿಸಿರುವ ‘ಮುಖದ್ದಿಮ’, ಐರೋಪ್ಯ ಭಾಷೆಗಳಿಗೆ ತರ್ಜುಮೆಗೊಂಡದ್ದು ಹದಿನೆಂಟನೆಯ ಶತಮಾನದಲ್ಲಿ. ಬಂದ ಹಲವು ಅನುವಾದಗಳು ಭಾಗಶಃ ಮಾತ್ರವಾಗಿತ್ತು. ಕೆಲ ಭಾಗಗಳನ್ನು ನಿಕಲ್ಸನ್ ಅನುವಾದಗೊಳಿಸಿದ್ದರು. ಅವುಗಳ ಪೈಕಿ ಫ್ರಾನ್ಸ್ ರೋಸೆಂಟಲ್ (1914-2003) ರವರ ಇಂಗ್ಲಿಷ್ ಅನುವಾದವು ಗಮನಾರ್ಹವಾದದ್ದು. ಮೊತ್ತ ಮೊದಲ ಸಂಪೂರ್ಣ ಅನುವಾದ ಕೃತಿಯಿದು. ಪ್ರಿಂಸ್ಟನ್ ಯುನಿವರ್ಸಿಟಿ ಪ್ರೆಸ್ ಇದನ್ನು 1958ರಲ್ಲಿ ಮೂರು ಸಂಪುಟಗಳಲ್ಲಿ ಪ್ರಕಟಿಸಿತು. ಅಮೆರಿಕಾದ ಯೇಲ್ ವಿಶ್ವವಿದ್ಯಾಲಯದಲ್ಲಿ ಸೆಮಿಟಿಕ್ ಭಾಷಾಶಾಸ್ತ್ರಜ್ಞರಾಗಿದ್ದರು ರೋಸೆಂಟಲ್. ಜರ್ಮನ್ ಯಹೂದಿಯಾಗಿದ್ದ ರೋಸೆಂಟಲ್, ಹಿಟ್ಲರನ ಕಾಲದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹಲವು ದೇಶಗಳಲ್ಲಿ ಬದುಕು ಸವೆಸಿ ಕೊನೆಗೆ ಅಮೇರಿಕಾದಲ್ಲಿ ವಾಸ್ತವ್ಯ ಹೂಡಿದರು. ಅರೇಬಿಕ್, ಪರ್ಷಿಯನ್, ಅರ್ಮಾಯಿಕ್, ಗ್ರೀಕ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯವುಳ್ಳ ರೋಸೆಂಟಲ್‌ರವರ ಪ್ರಸಿದ್ಧ ಕೃತಿಯಾಗಿದೆ ‘ನಾಲೆಜ್ ಟ್ರಯಂಫಂಟ್: ದಿ ಕಾನ್ಸೆಪ್ಟ್ ಆಫ್ ನಾಲೆಜ್ ಇನ್ ಮಿಡೀವಲ್ ಇಸ್ಲಾಂ’. ಈ ಕೃತಿಯ ಮುನ್ನುಡಿಯಲ್ಲಿ ರೋಸೆಂಟಲ್ ರವರು ಬರೆಯುತ್ತಾರೆ: ‘Arabic ilm is fairly well rendered by our ‘Knowledge’. However, knowledge falls short of expressing all the Factual and Emotional contents of Ilm. For ilm is one of those concepts that have dominated Islam and given Muslim Civilization its distinctive shape and complexion’. ನಾಲ್ಕು ನೂರು ಪುಟಗಳಿರುವ ಈ ಕೃತಿಯಲ್ಲಿ ಅವರು ‘ಜ್ಞಾನಕ್ಕೆ ಇಸ್ಲಾಮಿಕ್ ನಾಗರಿಕತೆಗಳಲ್ಲಿ ಲಭಿಸಿದ ಮನ್ನಣೆಯ ಹಾಗೆ ಉಳಿದ ಯಾವ ನಾಗರಿಕತೆಯಲ್ಲೂ ದೊರಕಿಲ್ಲ’ ಎಂದು ಅಭಿಪ್ರಾಯಪಡುತ್ತಾರೆ.
ಫೆಲಸ್ತೀನ್, ಈಜಿಪ್ಟ್, ಉತ್ತರ ಆಫ್ರಿಕಾಗಳಲ್ಲಿ ದೊರಕಿದ ಪ್ರಾಚೀನ ಟಿಪ್ಪಣಿಗಳನ್ನು ಆಧರಿಸಿದ ಅಧ್ಯಯನಕ್ಕೆ 1935ರಲ್ಲಿ ರೋಸೆಂಟಲ್ ಅವರು ಡಾಕ್ಟರೇಟ್ ಪದವಿ ಪಡೆದುಕೊಂಡರು. ಹಳೆಯ ಹಸ್ತಪ್ರತಿಗಳನ್ನು ಅವರು ಪರಿಶೀಲಿಸಿದಷ್ಟು ಬಹುಶಃ ಬೇರೆ ಯಾವ ಇತಿಹಾಸಕಾರನೂ ಪರಿಶೀಲಿಸಿರಲಾರ.
ರೋಸೆಂಟಲ್ ಅವರ ಮತ್ತೊಂದು ಆಕರ್ಷಣೀಯ ಕೃತಿ ‘ಹ್ಯೂಮರ್ ಇನ್ ಅರ್ಲೀ ಇಸ್ಲಾಂ’. ಇಸ್ಲಾಮ್ ಇತರ ವಿಷಯದಲ್ಲಿರುವಂತೆ ಹಾಸ್ಯದಲ್ಲೂ ಮಧ್ಯಮ ಮಾರ್ಗವನ್ನು ಅನುಸರಿಸುತ್ತದೆ. ಅಟ್ಟಹಾಸ ಹಾಗೂ ಗಹಗಹಿಸಿ ನಗುವುದಕ್ಕಿಂತ ಮುಗುಳುನಗೆಯೇ ಉತ್ತಮ ಎನ್ನುವುದು ಇಸ್ಲಾಮಿನ ನಿಲುವು. ಈ ಕೃತಿ ಇವೆಲ್ಲದರ ದಾಖಲೆಗಳನ್ನು ಉಲ್ಲೇಖಿಸುವ ಚಿಂತನೀಯ ವಿಶ್ಲೇಷಣೆ.
‘ವ್ಯಕ್ತಿಗೋ ಅಥವಾ ಸಮೂಹಕ್ಕೋ ಹೆಚ್ಚಿನ ಪ್ರಾಧಾನ್ಯತೆ’ ಎನ್ನುವುದು ಸಮಾಜಶಾಸ್ತ್ರದ ಮುಖ್ಯ ತಾರ್ಕಿಕ ಪ್ರಶ್ನೆಗಳಲ್ಲೊಂದು. ಸಿಗ್ಮಂಡ್ ಫ್ರಾಯ್ಡ್ ವ್ಯಕ್ತಿಗೆ ಹೆಚ್ಚಿನ ಮಹತ್ವ ಕಲ್ಪಿಸಿದರೆ ಕಾರ್ಲ್ ಮಾರ್ಕ್ಸ್ ಸಮೂಹಕ್ಕೆ ಮಹತ್ವ ಕಲ್ಪಿಸಿದರು. ಈ ಚರ್ಚೆಗೆ ಇತ್ಯರ್ಥ ನೀಡಲು ಬಯಸಿದವರು ಎರಿಕ್ ಫಾರ್ಮ್. ಅವರ Beyond Marx and Freud ಎಂಬ ಕೃತಿ ಗಮನಾರ್ಹ. ಇಲ್ಲಿಯೂ ಖುರ್‌ಆನಿನ ನಿಲುವು ಕಾಲೋಚಿತ. ವ್ಯಕ್ತಿಯ ಮಹತ್ವವನ್ನು ಕಡೆಗಣಿಸದೆ ಸಮೂಹದ ಪ್ರಾಧಾನ್ಯತೆಯನ್ನು ಇಸ್ಲಾಮ್ ಎತ್ತಿಹಿಡಿಯುತ್ತದೆ. ಈ ವಿಷಯಗಳನ್ನು ಚರ್ಚಿಸುವ ಪ್ರೊ. ರೋಸೆಂಟಲ್ ಅವರ ಮಹಾಗ್ರಂಥವಾಗಿದೆ ‘ಮ್ಯಾನ್ ವರ್ಸಸ್ ಸೊಸೈಟಿ ಇನ್ ಮಿಡಿವೆಲ್ ಇಸ್ಲಾಂ’. ಹಾಗೆಯೇ ‘ದಿ ಕ್ಲಾಸಿಕಲ್ ಹೆರಿಟೇಜ್ ಇನ್ ಇಸ್ಲಾಂ’ ಮತ್ತು ‘ಎ ಹಿಸ್ಟರಿ ಆಫ್ ಮುಸ್ಲಿಂ ಹಿಸ್ಟೋರಿಗ್ರಫಿ’ ಎಂಬ ಎರಡು ಕೃತಿಗಳೂ ಗಮನಾರ್ಹವಾದುದು.
ಶಿಥಿಲಗೊಳ್ಳುತ್ತಿದ್ದ ಮೊಘಲ್ ಸಾಮ್ರಾಜ್ಯದ ಅರಮನೆಗಳು. ಜಾಮಿಯಾ ಮಸೀದಿಯ ಪ್ರೌಢ ಗುಂಬಝಿನ ಆಚೆಗೆ ಮುಳುಗುವ ಸೂರ್ಯನ ಕೆಂಪು ಕಿರಣಗಳು ಹರಡಿದ್ದವು. ಹಳೆ ದೆಹಲಿಯ ಆಕಾಶದಲ್ಲಿ ಸಂಜೆಯ ಪ್ರಾರ್ಥನೆಯ ಕರೆ ಮೊಳಗಿದವು. ತಿರುವು ಮುರುವು ಹಾದಿಗಳಲ್ಲಿ ಹಾರನ್ ಮೊಳಗಿಸುತ್ತ ಸೈಕಲ್ ರಿಕ್ಷಾಗಳ ಶಬ್ದವು ಜನನಿಬಿಡವಾದ ಚಾಂದಿನಿ ಚೌಕಿನುದ್ದಕ್ಕೂ ಶಬ್ದಮಯಗೊಳಿಸುತ್ತಿತ್ತು.
ಸಮೀಪದ ಶಾಜಹನಾಬಾದಿನ ವ್ಯಾಪಾರಗಳು ಸೂರ್ಯಾಸ್ತದೊಂದಿಗೆ ಜೀವ ತುಂಬುತ್ತಿತ್ತು. ಮೊಘಲ್ ದೊರೆ ಶಾಜಹಾನನ ಆಡಳಿತ ಅವಧಿಯಲ್ಲಿ 1648 ರಲ್ಲಿ ನಿರ್ಮಿಸಲ್ಪಟ್ಟ ಗೋಡೆಗಳಿಂದ ಆವೃತವಾದ ಸ್ಥಳವಾಗಿದೆ ಇದು. ಶಬ್ದ ಕೋಲಾಹಲಗಳಿಂದ ಮಗ್ನರಾಗಿರುವ ಜನರ ನೋಟ ಒಲೆಯಿಂದ ಉಬ್ಬಿ ಬರುವ ತಿನಿಸುಗಳ ಸೌಂದರ್ಯಕ್ಕೆ ತಿರುಗುತ್ತಿದೆ. ಇಂಡಿಯನ್ ಮಸಾಲ ಚಹಾದ ಘಮಲು ಮೆಲ್ಲನೆ ದಾರಿಯನ್ನು ಆಕ್ರಮಿಸುತ್ತಿದೆ. ತಮ್ಮ ದಿನದ ಪಾಲಿನ ಕಾಯುವಿಕೆಯಲ್ಲಿರುವ ದೆಹಲಿಗರು ಜೇನುನೊಣಗಳ ಹಿಂಡಿನಂತೆ ಚಹಾದ ಅಂಗಡಿಗಳಿಗೆ ಮುತ್ತಿಕ್ಕುತ್ತಿದ್ದಾರೆ. ಮಾನಸಿಕ ಸ್ವಾಸ್ಥ್ಯಕ್ಕಾಗಿ ದೂರ ದಿಕ್ಕುಗಳಿಂದ ಬರುವವರು ಈ ಗುಂಪಿನಲ್ಲಿದ್ದಾರೆ.
ಭಾರತದಾದ್ಯಂತ ಹರಡಿದ ದೇಶಿಯರ ಹುಚ್ಚಾಗಿದೆ ಚಹಾ. ಭಾರತವೆಂಬ ಪರ್ಯಾಯ ದ್ವೀಪದಲ್ಲಿ ಚಹಾ ಇಷ್ಟೊಂದು ಜನಪ್ರಿಯತೆ ಗಳಿಸಿ ಎರಡು ಶತಮಾನ ಪೂರ್ತಿಗೊಂಡಿಲ್ಲ. ಚಹಾಗೆ ಈ ರೀತಿಯ ಜನಪ್ರಿಯತೆ ಗಳಿಸಿ ಕೊಟ್ಟಿದ್ದು ಬ್ರಿಟಿಷರ ಆಡಳಿತ. ಆದರೆ ಬ್ರಿಟಿಷರ ಆಗಮನಕ್ಕೂ ಅದರ ಮೂಲಕ ರೂಪಿತವಾದ ಚಹಾ ಎಂಬ ಹುಚ್ಚಿಗೂ ಮುಂಚಿತವಾಗಿ ಭಾರತೀಯರಿಗೆ ತುಂಬಾ ಪ್ರಿಯವಾದ ಪಾನೀಯ ಕಾಫಿಯಾಗಿತ್ತು. ಭಾರತೀಯ ಕಾಫಿ ಪರಂಪರೆಗೆ ಕುತೂಹಲಕಾರಿ ಸಾಂಸ್ಕೃತಿಕ ವಿನಿಮಯ ಮತ್ತು ಇತಿಹಾಸವಿದೆ.
ಸೂಫಿಗಳು ಮತ್ತು ವ್ಯಾಪಾರಿಗಳು
ಆಫ್ರಿಕಾದ ಕೊಂಬು (Horn of Africa) ಎಂಬ ಹೆಸರಿನಲ್ಲಿ ಪ್ರಸಿದ್ಧವಾದ ರಾಷ್ಟ್ರಗಳಿಂದ 15ನೇ ಶತಮಾನದಲ್ಲಿ ಕಾಫಿಯು ಯಮನಿಗೆ ತಲುಪಿತು. ನಂತರ ಉತ್ತರದಿಂದ ಪೂರ್ವ ಭಾಗಗಳಿಗೂ ಅಲ್ಲಿಂದ ಹದಿನಾರನೇ ಶತಮಾನದಲ್ಲಿ ಯುರೋಪಿಗೂ ವ್ಯಾಪಿಸಿತು. ಯುರೋಪಿನ ನಂತರ ಪೂರ್ವಕ್ಕೆ ವ್ಯಾಪಿಸಿ ಭಾರತಕ್ಕೂ, ಅಲ್ಲಿ ಪ್ರಭಾವಿಗಳಾಗಿದ್ದ ಮೊಘಲರು ಕಾಫಿಯನ್ನು ತಮ್ಮ ಇಷ್ಟ ಪಾನೀಯವಾಗಿ ಸ್ವೀಕರಿಸಿದರು. ಮೊಘಲ್ ದೊರೆ ಜಹಂಗೀರನಿಗೆ ಶಿರಾಸ್ ಮದ್ಯದೊಂದಿಗೆ ಆಸಕ್ತಿ ಇತ್ತು. ಆದರೆ ಅವನ ಆಸ್ಥಾನದ ಹಿಂದೂ ಮುಸ್ಲಿಂ ಪ್ರಭುಗಳೆಲ್ಲರೂ ಕಾಫಿಯಲ್ಲೇ ಮಗ್ನರಾದರು.
ಜಹಂಗೀರನ ಆಸ್ಥಾನದ ಇಂಗ್ಲಿಷ್ ರಾಯಭಾರದ ಸೈನಿಕ ಪಾದ್ರಿಯಾಗಿದ್ದ ಎಡ್ವರ್ಡ್ ಟೆರ್ರಿ, ನ್ಯಾಯಾಲಯದ ಆಳುಗಳು ಅಂದಿನ ಕಾಫಿಯ ಹೊಸ ಗುಣಗಳಲ್ಲಿ ಆಕರ್ಷಿತರಾಗಿದ್ದರು ಎಂದು ಉಲ್ಲೇಖಿಸಲ್ಪಟ್ಟಿದೆ. ಅದು ಆತ್ಮವನ್ನು ಪ್ರಚೋದಿಸುತ್ತದೆ, ದಹನ ಕ್ರಿಯೆಗೆ ಸಹಾಯಕವಾಗಿದೆ, ರಕ್ತ ಪರಿಚಲನಕ್ಕೆ ನೆರವಾಗುತ್ತದೆ ಎಂದು ಅವರು ನಂಬಿದ್ದರು. ಮೊಘಲ್ ಸಾಮ್ರಾಜ್ಯದೊಂದಿಗೆ ಗಟ್ಟಿಯಾದ ವ್ಯಾಪಾರ ಸಂಬಂಧ ಹೊಂದಿದ್ದ ಅರಬ್, ತುರ್ಕಿ ವ್ಯಾಪಾರಸ್ಥರು ಭಾರತಕ್ಕೆ ಕಾಫಿ ಬೀಜಗಳನ್ನು ಪರಿಚಯಿಸಿದರು. ಅವರು ಕಾಫಿಯಲ್ಲದೆ ರೇಷ್ಮೆ, ಹೊಗೆ ಸೊಪ್ಪು, ಹತ್ತಿ, ಸುಗಂಧದ್ರವ್ಯಗಳು, ವಜ್ರದ ಕಲ್ಲುಗಳು ಮುಂತಾದ ಹಲವು ವಸ್ತುಗಳನ್ನು ಪರ್ಶಿಯಾ, ತುರ್ಕಿ ಮುಂತಾದ ಕಡೆಗಳಿಂದ ಹೊತ್ತು ತಂದರು. ಈ ವಸ್ತುಗಳು ಬಂಗಾಳದ ಪೂರ್ವ ಪ್ರದೇಶ ಸೇರಿದಂತೆ ಭಾರತದ ಮೂಲೆ ಮೂಲೆಗಳಿಗೆ ತಲುಪಿದವು. ಜಹಂಗೀರನ ಮಗ ಶಹಜಾನನ ಆಡಳಿತ ಅವಧಿಯಲ್ಲಿ (1628-1658) ಕಾಫಿಯು ಭಾರತೀಯರ ಪ್ರಿಯ ಪಾನೀಯವಾಗಿ ಬದಲಾಯಿತು.
ಕಾಫಿಯು ಆರೋಗ್ಯಕರ ಪಾನೀಯವಾಗಿಯೂ ಸಾಮಾಜಿಕ ಚಲನೆಯ ಸೂಚಕವಾಗಿಯೂ ದೆಹಲಿಯ ಉನ್ನತ ಮಟ್ಟದ ಸಾಮಾಜಿಕ ಬದುಕಿನ ಅವಿಭಾಜ್ಯ ಘಟಕವಾಗಿಯೂ ಗುರುತಿಸಿಕೊಂಡಿತು. ಟೆರ್ರಿಯಂತೆ ಆ ಕಾಲದಲ್ಲಿ ಭಾರತವನ್ನು ಸಂದರ್ಶಿಸಿದ ಮತ್ತೊಬ್ಬ ಯುರೋಪಿಯನ್ ಜರ್ಮನ್ ಸಾಹಸಿ ಯಾತ್ರಿಕನಾಗಿದ್ದಾನೆ ಜೋಹಾನ್ ಅಲ್ ಬೆಕ್ವಡ್ರಿ ಮಂಡಲ್ ಸ್ಲೇ. ಪೂರ್ವ ಪರ್ಶಿಯಾದಿಂದ ಭಾರತೀಯ ನಗರಗಳಾದ ಸೂರತ್, ಅಹಮದಾಬಾದ್, ಆಗ್ರಾ, ಲಾಹೋರ್ ಮುಂತಾದ ಕಡೆಗಳಲ್ಲಿ ಕೈಗೊಂಡ ಯಾತ್ರೆಗಳ ಕುರಿತು ‘The voyages and travels of J. Albert de Mandelslo’ ಎಂಬ ಶೀರ್ಷಿಕೆಯಡಿಯಲ್ಲಿ ಸ್ಮರಣ ಸಂಚಿಕೆಯನ್ನು ಬರೆದಿದ್ದಾರೆ. ಉಷ್ಣ ಪ್ರತಿರೋಧಕ್ಕಾಗಿ ಮತ್ತು ಸ್ವಯಂ ತಂಪಾಗಿಸಲು ಕಹ್ವಾ (ಕಾಫಿ) ಸೇವಿಸುತ್ತಿದ್ದರು ಎಂದು ಈ ಸ್ಮರಣ ಸಂಚಿಕೆಯಲ್ಲಿ ವಿವರಿಸಿದ್ದಾರೆ. Travels in the mogal empire (1656-1668) ಎಂಬ ಕೃತಿಯಲ್ಲಿ ಫ್ರಾಂಕೋಯಿಸ್ ಬೆರ್ನಿಯರ್ ಎಂಬ ಫ್ರೆಂಚ್ ವೈದ್ಯನು ತುರ್ಕಿಯಿಂದ ಆಮದು ಮಾಡಿದ ಕಾಫಿಯ ಕುರಿತು ಉಲ್ಲೇಖಿಸಿದ್ದಾರೆ.
ಉಷ್ಣ ಪ್ರತಿರೋಧ ಮತ್ತು ಕಾಫಿಯ ಸಾಮಾಜಿಕ ಪ್ರತಿಬಿಂಬದ ಹೊರತಾಗಿಯೂ ಭಾರತದಲ್ಲಿ ಸೂಫಿ ಸಂತರು ಧರ್ಮಾಚರಣೆಯ ಸಲುವಾಗಿ ಕಾಫಿ ಬೀಜವನ್ನು ಉಪಯೋಗಿಸುತ್ತಿದ್ದರು. ಮಿಡ್ಲ್ ಈಸ್ಟ್ ಮತ್ತು ಮಧ್ಯೆಶಿಯಾದ ಸೂಫಿಗಳ ರೀತಿಯಲ್ಲಿ ಭಾರತದ ಸೂಫಿಗಳು ‘ದಿಕ್ರ್’ ಎಂದು ಕರೆಯಲ್ಪಡುವ ತಮ್ಮ ರಾತ್ರಿಯ ದೀರ್ಘ ಸಮಯದ ಭಕ್ತಿಯುತವಾದ ಆಚರಣೆಗಳ ಮುಂಚಿತವಾಗಿ ಕಾಫಿ ಸೇವಿಸುತ್ತಿದ್ದರು. 1670ರಲ್ಲಿ ಮಕ್ಕಾದಿಂದ ಹಿಂದಿರುಗುವ ವೇಳೆ ಬಾಬಾ ಬುಡನ್ ಎಂಬ ಸೂಫಿಯೊಬ್ಬರು ತನ್ನ ವಸ್ತ್ರದ ಮಡಚುಗಳಡೆಯಲ್ಲಿ ಏಳು ಕಾಫಿ ಬೀಜಗಳನ್ನು ತಂದು ಚಿಕ್ಕಮಗಳೂರಿನಲ್ಲಿ ಭಾರತದ ಕಾಫಿ ಕೃಷಿಗೆ ಬೀಜ ಬಿತ್ತಿದರು ಎಂಬ ಐತಿಹ್ಯವಿದೆ. ಈ ಚರಿತ್ರೆ ಕೆಲವೊಮ್ಮೆ ಸರಿ ಎನಿಸಿಕೊಳ್ಳಬಹುದು. ಸರಿ ಏನೇ ಇದ್ದರೂ ಇವತ್ತಿನ ಕರ್ನಾಟಕದಲ್ಲಿ ಬಾಬಾಬುಡನ್ ಗಿರಿ ಎಂಬ ಹೆಸರಿನಲ್ಲಿ ಒಂದು ಪರ್ವತವಿದೆ. ಅದು ಇವತ್ತಿಗೂ ಭಾರತದ ಪ್ರಮುಖ ಕಾಫಿ ಉತ್ಪಾದನಾ ಕೇಂದ್ರವಾಗಿ ಮುಂದುವರಿಯುತ್ತಿದೆ. ಅಲ್ಲಿ ಪ್ರಸ್ತುತ ಸೂಫಿ ಸಂತರಿಗೆ ಅರ್ಪಿಸಲಾದ ಆರಾಧನಾ ಕೇಂದ್ರವನ್ನು ಕಾಣಬಹುದು. ಸರ್ಕಾರದ ಅಧೀನದ ಭಾರತೀಯ ಕಾಫಿ ಬೋರ್ಡ್ ವಿವರಿಸಿದ ಇತಿಹಾಸದ ಮತ್ತೊಂದು ವಿವರಣೆಯಲ್ಲಿ ಅವರು ಯಮನಿನ ‘ಮೋಚ್’ ಎಂಬಲ್ಲಿಗೆ ತೆರಳಿ ಕಾಫಿಯ ಆಮದು ಪ್ರಕ್ರಿಯೆಯಲ್ಲಿ ಕಠಿಣ ನಿಯಮಗಳಿದ್ದುದ್ದರಿಂದ ನಾಜೂಕಾಗಿ ಕಾಫಿ ಬೀಜವನ್ನು ಸಾಗಿಸಿದರು ಎಂದು ಹೇಳಲಾಗುತ್ತದೆ.
ಅನುಭೋಗ ಸಂಸ್ಕೃತಿ
ಹದಿನಾರನೇ ಶತಮಾನದಿಂದ ಪಶ್ಚಿಮದ ಇಸ್ಲಾಮಿಕ್ ಸಾಮ್ರಾಜ್ಯಗಳಲ್ಲಿ, ಪ್ರಮುಖವಾಗಿ ಡಮಸ್ಕಸ್, ಅಲಪ್ಪೋ, ಕೈರೋ, ಇಸ್ತಾಂಬುಲ್ ಮುಂತಾದ ಕಡೆಗಳಲ್ಲಿ ಹುಟ್ಟು ಪಡೆದ ಕೆಫೆ ಕಲ್ಚರ್ (ಲಘು ಭೋಜನ ಶಾಲೆ) ಭಾರತದಲ್ಲಿಯೂ ವ್ಯಾಪಿಸಿತು. ಬೆಳೆದು ಬಂದ ಕೆಫೆ ಸಂಸ್ಕೃತಿಯ ಪ್ರತಿಬಿಂಬಗಳು ಶಜಹನಾಬಾದಿನ ಕಹ್ವಾ ಖಾನ (ಕಾಫಿ ಹೌಸ್) ಗಳಲ್ಲಿ ಪ್ರಕಟವಾಗುತ್ತಿತ್ತು.
ಸ್ಪೆಲ್ಲಿಂಗ್ ದಿ ಬೀನ್ಸ್: ದಿ ಇಸ್ಲಾಮಿಕ್ ಹಿಸ್ಟರಿ ಆಫ್ ಕಾಫಿ ಎಂಬ ತನ್ನ ಪ್ರಬಂಧದಲ್ಲಿ, ಆಹಾರ/ಭಕ್ಷ್ಯ ಇತಿಹಾಸಕಾರ್ತಿಯಾದ ನೇಹ ವೆರ್ಮಾನಿ ದೆಹಲಿಯ ಅರಬ್ ಸೆರಾಯಿ ‘sticky streat coffee ತಯಾರಿಸುವುದರಲ್ಲಿ ಖ್ಯಾತಿ ಪಡೆದಿದ್ದರು’ ಎಂದು ವಿವರಿಸುವುದನ್ನು ಕಾಣಬಹುದು. ಮೊಘಲ್ ರಾಜನಾದ ಹುಮಾಯೂನನ ಪುತ್ರಿ ಹಾಮಿದ್ ಭಾನುರವರ ಮೇಲ್ನೋಟದಲ್ಲಿ 1560ರಲ್ಲಿ ಸೇರಾಯಿ ನಿರ್ಮಾಣ ಕಾಮಗಾರಿ ಪೂರ್ತಿಗೊಂಡಿತು. ಯುನೆಸ್ಕೋ ಪಾರಂಪರಿಕ ತಾಣವಾದ ಹುಮಾಯೂನ್ ಟೊಂಬ್ ಇದರ ವಿಶಾಲವಾದ ಪ್ರಾಂಗಣದ ಒಳಗೆ ಇದು ಇಂದಿಗೂ ನೆಲೆಗೊಂಡಿದೆ. ಮಕ್ಕಾದ ತೀರ್ಥಯಾತ್ರೆಗೆ ರಾಜಮನೆತನ ಅವಲಂಬಿಸಿದ್ದ ಅರಬಿ ಧಾರ್ಮಿಕ ವಿದ್ವಾಂಸರು ಇದನ್ನು ಛತ್ರವಾಗಿ ಉಪಯೋಗಿಸಿದ್ದರೆಂದು, ಮೊಘಲ್ ಮನೆತನಕ್ಕಾಗಿ ಕಾರ್ಯ ಪ್ರವೃತ್ತರಾಗಿದ್ದ ಕರಕೌಶಲ್ಯ ಪರಿಣಿತರು ತಂಗಲು ಇದನ್ನು ಬಳಸಿದ್ದರೆಂದು ಇತಿಹಾಸಕಾರರು ಹೇಳುತ್ತಾರೆ.
ಇತಿಹಾಸಕಾರ ಸ್ಟೀಫನ್ ಬ್ಲೈಕ್ 1991 ರಲ್ಲಿ ಬರೆದ “Shahjahanabad: The sovereign city in mughal india 1639-1673” ಎಂಬ ಗ್ರಂಥದಲ್ಲಿ,ಕಾಫಿ ಹೌಸುಗಳಲ್ಲಿನ ಕವಿಗಳ, ಕಥೆಗಾರರ, ವಾಗ್ಮಿಗಳ, ಆತ್ಮಗೌರವ ತುಂಬಿದವರ ಸಂಗಮ ಭೂಮಿ ಎಂದು ವಿವರಿಸುತ್ತಾರೆ. ಈ ಕಾಫಿ ಹೌಸುಗಳು ಎಷ್ಟರ ಮಟ್ಟಿಗೆ ಶಕ್ತಿಯುತವಾಗಿತ್ತು ಎಂದು ಅಲ್ಲಿ ಚಾಲ್ತಿಯಲ್ಲಿದ್ದ ಕವನ ವಾಚನಗಳು, ಕಥೆ ಹೇಳುವಿಕೆಗಳು, ಸಂವಾದ ಮುಂತಾದವುಗಳ ಕುರಿತು, ಗಂಟೆಘಟ್ಟಲೆ ನಡೆಯುತ್ತಿದ್ದ ಬೋರ್ಡ್ ಗೇಮ್(ಮಣೆ ಆಟ)ಗಳ ಕುರಿತು, ಈ ಚಟುವಟಿಕೆಗಳು ಗೋಡೆಗಳಿಂದ ಆವೃತವಾದ ಈ ನಗರವನ್ನು ಸಾಂಸ್ಕೃತಿಕ ಬದುಕಿನಿಂದ ಹೇಗೆ ಪ್ರಭಾವಿತವಾಗಿತ್ತೆಂದು ಬ್ಲೈಕ್ ವಿವರಿಸುತ್ತಾರೆ.
ಇಸ್ಫಹಾನ್ ಮತ್ತು ಇಸ್ತಾಂಬುಲಿನ ರೀತಿಯಲ್ಲೇ ಶಾಜಹಾನಬಾದಿನಲ್ಲಿಯೂ ಕಾಫಿ ಹೌಸುಗಳು ಅನುಭೋಗ ಸಂಸ್ಕೃತಿಯ ಮತ್ತು ಹೊಸ ಆಹಾರ ಪದ್ಧತಿಯ ಬೆಳವಣಿಗೆಯನ್ನು ತ್ವರಿತ ಗೊಳಿಸಿತು. ಸ್ನಾಕ್ಸ್ ವ್ಯಾಪಾರಿಗಳ ರುಚಿಕರ ತಿನಿಸುಗಳು ಮತ್ತು ನಾಲ್ವಾಯಿಗಳ ರೊಟ್ಟಿಯೂ ಹಾಲ್ವಾಯಿಗಳ ಸಿಹಿ ತಿನಿಸುಗಳ ಲಭ್ಯತೆಯೂ ಇದರೊಂದಿಗೆ ಅನುಕೂಲವಾಯಿತು. ಇದು ಹಳೆ ದೆಹಲಿಯ ಶಹಜನಬಾದಿನಲ್ಲಿ ಇಂದಿಗೂ ಅನುಭವಿಸಲು ಸಾಧ್ಯವಿರುವ ಒಂದು ಪರಂಪರೆಯಾಗಿದೆ.
ಬ್ಲೈಕರ ವಿವರಣೆಯು ಕಾಫಿ ಹೌಸಿನ ಕುರಿತಾದ ಚಿತ್ರವನ್ನು ನೀಡುತ್ತದೆಯಾದರೂ ಅದರ ಇಂಟೀರಿಯಲ್ ದೃಶ್ಯಾವಿಷ್ಕಾರದ ಬಗೆಗೆ ಏನನ್ನು ಹೇಳುವುದಿಲ್ಲ ಅದಲ್ಲದೆ ಓಟೋಮನ್-ಸಫಾವಿಡ್ ಇತಿಹಾಸಗಳಿಗಿಂತ ಭಿನ್ನವಾಗಿ ಅವುಗಳ ರಚನೆ ಹೇಗಿತ್ತು ಎಂಬುದನ್ನು ಚಿತ್ರಿಸುವ ಸಣ್ಣ ಚೀಟಿಗಳು(ಮಿನಿ ವೋಚರ್)ಅಥವಾ ಓರಿಯೆಂಟಲಿಸ್ಟ್ ಕಲಾ ಸೃಷ್ಟಿಗಳನ್ನು ಕಾಣಲು ಸಾಧ್ಯವಿಲ್ಲ.
ಮೊಘಲ್ ಕಾಫಿಯೊಂದಿಗೆ ಹೋಲುವ ಒಂದನ್ನು ಕುಡಿಯುತ್ತಿರುವುದು ಡಚ್ ಚಿತ್ರಗಾರ ರಾಮ್ರಾಂಡಿನ ಚಿತ್ರಗಳಲ್ಲಿ ಕಾಣಬಹುದು. ಆದರೆ ಲೋಟದ ಒಳಗೇನಿತ್ತು ಎಂಬುದನ್ನು ಗುರುತಿಸಲಾಗಲಿಲ್ಲ. ಅಷ್ಟೇ ಅಲ್ಲ ಅವರು ಭಾರತವನ್ನು ಸಂದರ್ಶಿಸಲಿಲ್ಲ. ಆದರೆ ಡಚ್ಚ್ ವ್ಯಾಪಾರಿಗಳು ನೆಡರ್ಲ್ಯಾಂಡಿಗೆ ಕೊಂಡೊಯ್ದ ಚಿತ್ರಗಳಿಂದ ಪ್ರಚೋದನೆಗೆ ಒಳಪಟ್ಟು ಬಿಡಿಸಿದ ಚಿತ್ರಗಳಾಗಿವೆ ಇವು.
ಟರ್ಕಿಷ್ ಕಾಫಿಯ ಮೇಲೆ ಆಣೆ ಮಾಡಿದವ
ಪ್ರಾದೇಶಿಕ ರಾಜರುಗಳು ಶಹಜನಾಬಾದಿನ ವಾತಾವರಣವನ್ನು ತಮ್ಮ ಪ್ರದೇಶಗಳಿಗೆ ನಕಲು ಮಾಡಲು ಶ್ರಮಿಸುತ್ತಿದ್ದರು ಮತ್ತು ಅಲ್ಲಿರುವ ಕೆಫೆ ಸಂಸ್ಕೃತಿಯನ್ನು ಅದೇ ರೀತಿ ಸ್ವೀಕರಿಸಿದ್ದರು. ಅವರಲ್ಲಿ ಬಂಗಾಲದ ನವಾಬನಾಗಿದ್ದ ನಾಜಿಮ್ ಅಲಿ ವರ್ದಿ ಖಾನ್ ಬಹಳ ಪ್ರಾಮುಖ್ಯತೆಯೊಂದಿಗೆ ಸ್ವೀಕರಿಸಿದನು.ಇವರು 1740 ರಿಂದ 1756ರ ಅವಧಿಯಲ್ಲಿ ಬಂಗಾಳವನ್ನಾಳಿದ ಅರಬ್ ತುರ್ಕಿ ವಂಶಸ್ಥನಾಗಿದ್ದಾರೆ. ಉತ್ಸಾಹಿ ಆಡಳಿತಗಾರನಾಗಿ ಪ್ರಸಿದ್ಧಿ ಪಡೆದಿದ್ದ ಆತನಿಗೆ ಬದುಕಿನ ಅತಿ ದೊಡ್ಡ ಎರಡು ಸಂತೋಷ ಕಾಫಿ ಮತ್ತು ಆಹಾರವಾಗಿತ್ತು. ಆ ಕಾಲದ ಪ್ರಮುಖ ಇತಿಹಾಸಕಾರ ಸಯ್ಯಿದ್ ಗುಲಾಂ ಹುಸೈನ್ ಖಾನ್ ಬರೆದ ಸೀರತುಲ್ ಮುತಅಕ್ಕಿರೀನ್ ಅಥವಾ ರಿವ್ಯೂ ಆಫ್ ಮಾಡೆಲ್ ಟೈಮ್ಸ್ ನಲ್ಲಿ ಅದ್ಭುತವಾಗಿ ವಿವರಿಸುತ್ತಾರೆ. ಖಾನ್ ಬರೆಯುತ್ತಾರೆ: ಅವರು ಯಾವಾಗಲೂ ಸೂರ್ಯೋದಯಕ್ಕಿಂತ ಎರಡು ತಾಸು ಮೊದಲು ಎದ್ದೇಳುವರು. ವಿಸರ್ಜನ ಮತ್ತು ಶೌಚ ಕಾರ್ಯದ ಬಳಿಕ ಆರಾಧನೆಗಳಲ್ಲಿ ತೊಡಗುವರು,ಸೂರ್ಯೋದಯದ ವೇಳೆ ತನ್ನ ದೈವೀ ಮಂತ್ರಗಳನ್ನು ಶ್ಲೋಕಗಳನ್ನು ಜಪಿಸುವರು, ನಂತರ ಸ್ನೇಹಿತರೊಂದಿಗೆ ಕಾಫಿ ಸೇವಿಸುವರು, ತದನಂತರ ಒಂದು ತಾಸು ಪೂರ್ಣವಾಗಿ ಸಂವಾದ ನಡೆಸುವರು, ಗದ್ಯಗಳನ್ನು ಆಲಿಸಿ, ಪದ್ಯಗಳನ್ನು ವಾಚಿಸಿ ಸ್ವಾರಸ್ಯಕರ ಕಥೆಗಳನ್ನು ಕಿವಿಗಳಿಸಿಕೊಂಡು ಸ್ವತಃ ಆನಂದಿತರಾಗುವವರು. ಈ ಬೆಳಗಿನ ದಿನಚರಿಯ ನಂತರ ನವಾಬನ ಖಾಸಗಿ ಬಾಣಸಿಗ ತಯಾರಿಸಿದ ಪರ್ಶಿಯಾದ ಭಕ್ಷ್ಯವನ್ನು ಬಡಿಸಲಾಗುವುದು. ಈ ಭಕ್ಷ್ಯಗಳು ನವಾಬನನ್ನು ಉತ್ತಮ ಅಭಿರುಚಿ ಹೊಂದಿರುವ ಆಡಂಬರಗಳನ್ನು ಮೀರಿದ ಮನುಷ್ಯನನ್ನಾಗಿ ವಿವರಿಸುತ್ತದೆ.
ಭಿನ್ನವಾದ ಆಹಾರ, ಮೋಜು ಮಿಶ್ರಿತ ಸಂವಾದ, ಪ್ರೀಮಿಯಂ ಟರ್ಕಿಶ್ ಕಾಫಿ ಮುಂತಾದವುಗಳನ್ನು ಪ್ರೋತ್ಸಾಹಿಸುವ ಖಾನ್, ಉತ್ತಮ ಗುಣಮಟ್ಟದ ಕಾಫಿ ಬೀಜಗಳನ್ನು ಹೊಂದಲು ಅಥವಾ ಸಂಗ್ರಹಿಸಲು ದೂರ ದಿಕ್ಕಿಗೆ ಯಾತ್ರೆ ಹೊರಡುತ್ತಿದ್ದರು. ಓಟೋಮನ್ ಸಾಮ್ರಾಜ್ಯದಿಂದ ಆಮದಿಸಿ ಅವುಗಳನ್ನು ತನ್ನ ರಾಜಧಾನಿಯಾದ ಮುರ್ಷಿದಾಬಾದಿಗೆ ತಂದರು. ತನ್ನ ನ್ಯಾಯಾಲಯದಲ್ಲಿ ಎಲ್ಲದರಲ್ಲೂ ಅತ್ಯುತ್ತಮವಾದುವುದೇ ಇರಬೇಕೆಂಬ ಕಡ್ಡಾಯ ಬುದ್ಧಿ ಅವರಿಗಿತ್ತು. ಕಾಫಿ ಬೀಜಗಳಲ್ಲದೆ, ಅವರ ಬಳಿ ಕಾರ್ಮಿಕರು ಮತ್ತು ಪರ್ಷಿಯ, ತುರ್ಕಿ, ಮಧೇಶ್ಯ ಮುಂತಾದ ಕಡೆಗಳಿಂದ ಹೆಸರಾಂತ ಬಾಣಸಿಗರನ್ನು ಇರಿಸಿಕೊಂಡಿದ್ದರು.
ಕಥೆಗಾರರು, ಚಿತ್ರಗಾರರು, ಕಾಫಿ ತಯಾರಕರು, ಐಸ್ ತಯಾರಕರು, ಹಕೀಮ್ಗಳು (ವೈದ್ಯರು)ಮುಂತಾದ ಭಿನ್ನವಾದ ಪ್ರೊಫೆಷನಲ್ ಗಳನ್ನು ರಾಜಮನೆತನವು ನೇಮಿಸಿತ್ತು.ಖಾನ್ ಖುದ್ದಾಗಿ ಕಹ್ವಾಚಿ ಭಾಷಿಯನ್ನು (ಕಾಫಿ ತಯಾರಿಸುವ ವ್ಯಕ್ತಿ)ಆಯ್ಕೆ ಮಾಡುತ್ತಿದ್ದರು ಮತ್ತು ತಯಾರಿಕಾ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದರು. ಈ ವಿವರಣೆಯು ಅರಮನೆಯ ಸಂಸ್ಕೃತಿ, ಸಮೃದ್ಧಿ, ಕಲೆ, ಕಾರ್ಮಿಕರೊಂದಿಗಿನ ಸಂಬಂಧ ಮುಂತಾದವುಗಳನ್ನು ಸ್ಪಷ್ಟವಾಗಿ ಬಿಡಿಸಿ ತೋರಿಸುತ್ತದೆ.
ಮೊಘಲರ ಕಾಫಿ ಸಂಸ್ಕೃತಿಯು ಕೊಲೋನಿಯಲ್ ಕಾಲಕ್ಕಿಂತಲೂ ಮುಂಚಿತವಾಗಿ ಬಂಗಾಳದಿಂದ ಅಪ್ಪ್ರತ್ಯಕ್ಷವಾದುದು ‘ಯಾವಾಗ’ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ ಸಾಧ್ಯ.ಆದರೆ ಕನಿಷ್ಠ 1757 ರವರೆಗೆ ಅದು ಚಾಲ್ತಿಯಲ್ಲಿತ್ತು. ಖಾನರ ಕಿರಿಯ ಮಗನು ಉತ್ತರಾಧಿಕಾರಿಯೂ ಆದ ಸಿರಾಜುದ್ದೌಲನಿಗೆ ತನ್ನ ತಾತನ ಪರಂಪರೆಯೊಂದಿಗೆ ಬದುಕಲು ಸಾಧ್ಯವಾಗಲಿಲ್ಲ. ಬ್ರಿಟಿಷರ ಬೆದರಿಕೆಗಳನ್ನು ಎದುರಿಸುವಾಗ ಬಂಗಾಳದ ಸಮೃದ್ಧಿಯಂತೆ ಅರಮನೆಯ ಸಂಸ್ಕೃತಿಯು ವೇಗವಾಗಿ ಇಲ್ಲವಾಯಿತು.1757ರಲ್ಲಿ ಫ್ಲಾಸಿ ಕದನದಲ್ಲಿ ಬಂಗಾಳ ಸೋತು ಈಸ್ಟ್ ಇಂಡಿಯಾ ಕಂಪನಿಯು ಈ ಪ್ರದೇಶವನ್ನು ತನ್ನ ತೆಕ್ಕೆಗೆ ಇಳಿಸಿಕೊಳ್ಳುವುದರೊಂದಿಗೆ ಕಾಫಿಯು ಜನಮಾನಸಗಳಿಂದ ಕ್ರಮೇಣ ಮಾಸಿಹೋಯಿತು.
ಚಹಾ ಕೃಷಿ ಸ್ವಾಧೀನಪಡಿಸುವಿಕೆ
ಭಾರತದಲ್ಲಿ ಬ್ರಿಟಿಷ್ ಆಡಳಿತದ ಪ್ರೈಮರಿ ಏಜೆಂಟಾಗಿದ್ದ ಈಸ್ಟ್ ಇಂಡಿಯಾ ಕಂಪನಿಯು ಪರ್ಯಾಯ ದ್ವೀಪವಾದ ಭಾರತದಲ್ಲಿ ಪ್ರಬಲವಾಗಿದ್ದ ಕಾಫಿ ಸಂಸ್ಕೃತಿಗೆ ಅಂತ್ಯ ಹಾಡಿತು. ಬ್ರಿಟಿಷರಿಗೆ ಚಹಾದೊಂದಿಗಿನ ಆಸಕ್ತಿ ಪ್ರಾರಂಭವಾಗುವುದು 17ನೇ ಶತಮಾನದ ಕೊನೆಯಲ್ಲಾಗಿತ್ತು. ಚೀನಾವು ಇದರ ಪ್ರಮುಖ ಪೂರೈಕೆದಾರನಾಗಿತ್ತು.1811 ರಿಂದ 1819 ರ ನಡುವೆ ಚೀನಾದಿಂದ ಒಟ್ಟು 72,168,541 ಪೌಂಡು ಆಮದಿನಲ್ಲಿ 70,426,244 ಪೌಂಡ್ ಚಹಾ ವ್ಯಾಪಾರಕ್ಕೆ ಸಂಬಂಧಿಸಿದ್ದಾಗಿತ್ತು ಎಂದು ಲಿಸಿ ಕೋಲಿಂಗ್ ಹಾಂ ತನ್ನ Curry: A tale of cooks and conquerors ಎಂಬ ಗ್ರಂಥದಲ್ಲಿ ಬರೆದಿದ್ದಾರೆ. ಈ ವಾಸ್ತವಗಳ ಆಧಾರದಲ್ಲಿ, ಬ್ರಿಟನ್ ಚಹಾಕ್ಕೆ ಒಂದು ಉತ್ತಮ ಸ್ಟೇಟಸ್ ನೀಡುವುದಕ್ಕೆ ಉತ್ಸುಕವಾಗಿತ್ತು ಎಂದು ಅವರು ಉಲ್ಲೇಖಿಸುತ್ತಾರೆ. ಫಲವತ್ತಾದ ಭೂಮಿ ಮತ್ತು ಸೂಕ್ತವಾದ ವಾತಾವರಣ ಹೊಂದಿರುವ ಭಾರತವಾಗಿತ್ತು ಅದಕ್ಕೆ ಅತ್ಯಂತ ಸೂಕ್ತವಾದ ಸ್ಥಳ.1834 ಫೆಬ್ರವರಿಯಲ್ಲಿ ಅಂದಿನ ಗವರ್ನರ್ ಜನರಲ್ ವಿಲಿಯಂ ಬೆಂಟಿಕನು ಈಸ್ಟ್ ಇಂಡಿಯಾ ಕಂಪೆನಿ ತನ್ನದೇ ಆದ ಚಹಾ ಉತ್ಪಾದನಾ ಯುನಿಟ್ ಸ್ಥಾಪನೆಗೆ ಭಾರತದಲ್ಲಿರುವ ಸಾಧ್ಯತೆಗಳನ್ನು ಪರಿಶೀಲಿಸಲು ಒಂದು ಆಯೋಗವನ್ನು ನೇಮಿಸಿದನು.
ಸ್ಥಳೀಯರಾದ ಭಾರತೀಯರಿಂದ ಎಲೆಗಳನ್ನು ಕೃಷಿ ಮಾಡಿಸಿ, ಫಸಲು ಕೊಯ್ಯುವ ಕಾರ್ಮಿಕರನ್ನು ಮತ್ತು ಉತ್ಪನ್ನಗಳನ್ನು ಖರೀದಿಸಲಿರುವ ಅನುಭೋಗಿಗಳನ್ನು ಅವರು ಗೊತ್ತುಪಡಿಸಿದರು. ಕಾಫಿ ಉತ್ಪಾದನೆಯನ್ನು ಚಹಾ ಕೃಷಿ ಮುಚ್ಚಿಡುವುದರೊಂದಿಗೆ ಭಾರತೀಯರ ಅಭಿರುಚಿಗಳು ಬದಲಾದವು. ಬ್ರಿಟಿಷರು ಕಾಫಿ ಹೌಸುಗಳನ್ನು ಸಂದರ್ಶಿಸುವುದರಿಂದ ಭಾರತೀಯರಿಗೆ ನಿರ್ಬಂಧ ಹೇರಿದ್ದು ಇಂಡಿಯನ್ ಕೆಫೆ ಸಂಸ್ಕೃತಿಯ ಪತನಕ್ಕೆ ಹೆಚ್ಚಿನ ವೇಗ ನೀಡಿತು. ಈ ನಿರ್ಬಂಧ ಬ್ರಿಟಿಷರಿಗೆ ಅನ್ವಯವಾಗುತ್ತಿರಲಿಲ್ಲ. ಭಾರತದಲ್ಲಿ ಕಾಫಿಯ ಪತನ ಕ್ಷಿಪ್ರಗತಿಯಲ್ಲಾಗಿತ್ತೆಂದು ವರದಿಗಳು ಅಡಿಗೆರೆಹಾಕುತ್ತದೆ.
20ನೇ ಶತಮಾನದ ಆರಂಭದಲ್ಲಿ ಕಾಫಿಯ ಜೊತೆಗಿನ ಪ್ರೀತಿ ಮತ್ತೆ ಹೆಚ್ಚಾಯಿತು. ಭಾರತೀಯ ಇತಿಹಾಸಗಾರರು ಮತ್ತು ಗ್ರಂಥ ರಚನೆಕಾರರಾದ ವೆಂಕಟಚಲಪತಿ 2006ರಲ್ಲಿ In those Days there was no coffee; writings in cultural History ಎಂಬ ಪುಸ್ತಕದಲ್ಲಿ ಬರೆಯುತ್ತಾರೆ. ಕಾಫಿ ಸೇವಿಸುವುದು ಲಘುವಾದ ದಿನಚರಿ ಮಾತ್ರವಾಗಿರಲಿಲ್ಲ. ಅದರಾಚೆಗೆ ರಾಷ್ಟ್ರೀಯ ಪರಿಕಲ್ಪನೆಯ ಹಾಗೆ ಆಧುನಿಕತೆಯ ಸಂಕೇತವಾಗಿತ್ತು. 1890 ರಲ್ಲಿ ದಕ್ಷಿಣ ಭಾರತದಲ್ಲಿದ್ದ ಕಾಫಿಯ ಬಹಿರಂಗ ಮಾತುಗಳನ್ನು ಇದೇ ಗ್ರಂಥ ವಿವರಿಸುತ್ತದೆ. ಆಯಾಸವನ್ನು ನೀಗಿಸುವ ಅಮೃತವಾಗಿದೆ ಕಾಫಿ. ಕಾಫಿಯು ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ.
ಕೊಲೋನಿಯಲ್ ನಗರವಾದ ಕಲ್ಕತ್ತಾದಲ್ಲಾಗಿದೆ ಎರಡನೇ ಘಟ್ಟದ ಕಾಫಿ ವ್ಯಾಪಕತೆಯ ಶಕ್ತಿ ಮತ್ತು ಚೈತನ್ಯ ಪ್ರಥಮವಾಗಿ ಪ್ರತಿಫಲಿಸುವುದು. ಕಲ್ಕತ್ತಾದಲ್ಲಿ 1866 ರಲ್ಲಿ ‘ಇಂಡಿಯನ್ ಕಾಫಿ ಹೌಸ್’ ಎಂಬ ಹೆಸರಿನಲ್ಲಿ ಭಾರತೀಯರ ಕಾಫಿ ಶಾಪ್ ಕಾರ್ಯಾರಂಭಿಸುತ್ತದೆ. ಭಾರತೀಯ ಕಾಫಿ ಹೌಸ್ 189೦ ರಲ್ಲಿ ಒಂದು ಸರಪಳಿಯಾಗಿ ಬದಲಾಯಿತು. ನಂತರದ ಶತಮಾನದ ಮೊದಲಾರ್ಧದೊಂದಿಗೆ 400 ಕಾಫಿ ಹೌಸುಗಳು ಈ ಸರಪಳಿಯ ಭಾಗವಾದವು. ಭಾರತದ ಕಾರ್ಮಿಕರ ಸಹಕಾರ, ಸಂಘಟನೆಗಳ ನಾಯಕತ್ವ ದಲ್ಲಿ ಭಾರತದಲ್ಲಿ ಉತ್ಪಾದಿಸಲ್ಪಟ್ಟ ಕಾಫಿಯನ್ನು ಮಾತ್ರವೇ ಲಭ್ಯವಾಗುವಂತೆ ಮಾಡಿದ್ದರು.
ಜನಾಂಗೀಯ ತಾರತಮ್ಯದ ಸುದ್ದಿಗಳಿಲ್ಲದೆ ಯಾವ ಭಾರತೀಯನೂ ಬಂದು ಸೇರಬಹುದಾದ ‘ಜನರ ಕಾಫೀ ಮನೆಗಳಾಗಿ’ ಅವು ಬದಲಾದವು. ಇವತ್ತು ಭಾರತೀಯ ಕಾಫಿ ಹೌಸ್ ಗಳ ಸುತ್ತಮುತ್ತಲು ಇತಿಹಾಸ ಪ್ರಸಿದ್ಧವಾದ ಶಾಜಹಾನಬಾದಿನ ಕಾಫಿ ಹೌಸಿನ ಪ್ರೌಢಿಯನ್ನು ನೆನಪಿಸುತ್ತದೆ. 1996 ರಲ್ಲಿ ಆರಂಭವಾಗಿ ಇಂದು 500ಕ್ಕಿಂತಲೂ ಅಧಿಕ ಔಟ್ಲೇಟ್ ಗಳಿರುವ ಬೆಂಗಳೂರು ಕೇಂದ್ರವಾಗಿ ಕಾರ್ಯಚರಿಸುವ ‘ಕಾಫಿ ಡೇ ಗ್ಲೋಬಲ್’ಈ ಸರಪಳಿಯ ಭಾಗವಾಗಿದೆ. ಆರು ವರ್ಷಗಳಿಂದೀಚೆಗೆ ಅಮೆರಿಕಾದ ‘ಸ್ಟಾರ್ ಬಕ್ಸ್’ ಭಾರತದ ಬೃಹತ್ತಾದ ನಗರ ಮಾರುಕಟ್ಟೆಗಳಿಗೆ ಪ್ರವೇಶಿಸಿ ಭಾರತದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಿಬಿಟ್ಟಿದೆ.
ಕೃಪೆ; Middle East eye ಮೂಲ: ನೀಲೋಶ್ರೀ ಬಿಶ್ವಾಸ್ ಅನುವಾದ: ಅಮ್ಮಾರ್ ನೀರಕಟ್ಟೆ
ಈ ಪ್ರಶ್ನೆಯೊಂದಿಗೆ ಅನುಸಂಧಾನ ನಡೆಸಲು ಸಹೋದ್ಯೋಗಿಗಳು ನನ್ನನ್ನು ಕೇಳಿದರೆ ನನಗೆ ಗಾಬರಿ ಆಗುತ್ತದೆ. ಇದನ್ನು ಇತ್ಯರ್ಥಪಡಿಸಲು ಸಾಧ್ಯವೇ ಎಂದು ಯೋಚಿಸಿ ಭಯ ಆವರಿಸುತ್ತದೆ. ಅದಾಗ್ಯೂ, ನನ್ನ ಜೀವನದುದ್ದಕ್ಕೂ ನಾನು ಯೋಚಿಸುತ್ತಾ ಬಂದಿರುವ ಈ ವಿಷಯದ ಬಗ್ಗೆ ಮಾತನಾಡುವುದು ನನಗಂತೂ ರೋಮಾಂಚನಕಾರಿ ಅನುಭವ ನೀಡುತ್ತದೆ. ಇದು ಭಯಂಕರ ಪ್ರಶ್ನೆಯಾಗಿದ್ದು, ಸಮರ್ಪಕವಾದ ಉತ್ತರ ನೀಡುವುದು ದೊಡ್ಡ ಸವಾಲೇ ಸರಿ. ಈ ಪ್ರಶ್ನೆಗೆ ಅಂತಿಮ ಉತ್ತರ ನೀಡಲು ನನ್ನಿಂದ ಸಾಧ್ಯವಿಲ್ಲ. ಆದರೆ ವಿಶ್ವವಿದ್ಯಾನಿಲಯ ಎಂದರೇನು ಎಂಬುದರ ಕುರಿತು ನಮಗೆ ಒಟ್ಟಾಗಿ ಯೋಚಿಸಲು ಸಾಧ್ಯವಿದೆ. ನನ್ನ ಆಲೋಚನೆಗಳನ್ನು ಮತ್ತು ಅನುಭವಗಳನ್ನು ಮೊದಲು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ವಿಶ್ವವಿದ್ಯಾಲಯ ಎಂದರೇನು ಮತ್ತು ಹೇಗಿರಬೇಕು ಎಂಬ ನನ್ನ ಭವಿಷ್ಯದ ದೃಷ್ಟಿಕೋನವನ್ನು ಸಹ ನಿಮ್ಮ ಮುಂದಿಡುತ್ತೇನೆ.
ಜಾಗತಿಕ ಸಂಶೋಧನಾ ವಿಶ್ವವಿದ್ಯಾಲಯ
ಪ್ರಪಂಚದ ವಿವಿಧ ಮೂಲೆಗಳಿಂದ ಆಗಮಿಸಿ ವಿವಿಧ ಆಸಕ್ತಿಕರ ವಿಷಯಗಳಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ವ್ಯಾಸಂಗ ನಡೆಸುತ್ತಿರುವ ಇಬ್ನ್ ಖಲ್ದೂನ್ ವಿಶ್ವವಿದ್ಯಾನಿಲಯದ (IHU) ವಿದ್ಯಾರ್ಥಿಗಳು ಮತ್ತು ನನ್ನ ನೆಚ್ಚಿನ ಸಹೋದ್ಯೋಗಿಗಳು ತುಂಬಿರುವ ಈ ಸಭೆಯಲ್ಲಿ ಮಾತನಾಡಲು ಬಹಳ ಸಂತೋಷ ಎನಿಸ್ತಿದೆ. ಅನೇಕ ವರ್ಷಗಳ ಪ್ರಯತ್ನದಿಂದ ಗಳಿಸಿದ ಅಮೂಲ್ಯವಾದ ಜ್ಞಾನ ಮತ್ತು ಅನುಭವಗಳನ್ನು ಇಬ್ನ್ ಖಲ್ದುನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ನಿಮಗೆ ಧಾರೆಯೆರೆಯುತ್ತಿದ್ದಾರೆ. ಮಾನವ ಜನಾಂಗ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಹೊಸ ಆಲೋಚನೆಗಳನ್ನು ಉತ್ಪಾದಿಸಲಿಕ್ಕಾಗಿ ಪ್ರಪಂಚದ ವಿವಿಧ ಕಡೆಯ ಗುಣಮಟ್ಟದ ಪ್ರಾಧ್ಯಾಪಕರನ್ನು ಇಲ್ಲಿ ಒಟ್ಟುಗೂಡಿಸಿದ್ದೇವೆ. ಈ ಮೇರು ಮನಸ್ಸಗಳು ಸರಿಯಾದ ಪೋಷಕತೆಯೊಂದಿಗೆ ಇನ್ನಷ್ಟು ಪುಷ್ಟಿ ಪಡೆಯಲು ಅನುವು ಮಾಡಿಕೊಡುವ ಉತ್ತಮ ವಾಸಸ್ಥಳವನ್ನೇ ಇಲ್ಲಿ ಸಂಯೋಜಿಸಿದ್ದೇವೆ. ಕಾನೂನು, ಮಾನವಿಕ ಹಾಗೂ ಸಮಾಜ ವಿಜ್ಞಾನ ಮತ್ತು ಇಸ್ಲಾಮಿಕ್ ಅಧ್ಯಯನಗಳಲ್ಲಿ ಪರಿಣತವಾದ ವಿಭಾಗಗಳಿರುವ ಟರ್ಕಿಯ ಮೊಟ್ಟಮೊದಲ ಸಂಶೋಧನಾ ವಿಶ್ವವಿದ್ಯಾಲಯವಾದ ಇಬ್ನ್ ಖಲ್ದೂನ್ ವಿಶ್ವವಿದ್ಯಾಲಯದ ಭಾಗವಾಗುವ ಮೂಲಕ “ಅಲಯನ್ಸ್ ಆಫ್ ಸಿವಿಲೈಸೇಶನ್ಸ್ ಇನ್ಸ್ಟಿಟ್ಯೂಟ್” (ಎಸಿಐ) ಸಹ ಒಂದು ಉತ್ತಮ ಸಂಸ್ಥೆಯಾಗಿ ಬೆಳೆಯುತ್ತದೆ ಎನ್ನುವ ಖಾತ್ರಿ ನನಗಿದೆ.
ಔಪಚಾರಿಕ ಶಿಕ್ಷಣದ ಜತೆಜತೆಗೆ ಸಂಶೋಧನೆಯನ್ನು ಕೂಡಾ ಪ್ರೋತ್ಸಾಹಿಸಿವುದು ನಮ್ಮ ಸಂಸ್ಥೆಯ ಉದ್ದೇಶ. ನಮ್ಮ ಸಂಸ್ಥೆಯಲ್ಲಿರುವ ಪದವಿಪೂರ್ವ ವಿದ್ಯಾರ್ಥಿಗಳ ಸಂಖ್ಯೆ ಕೇವಲ 25 ಶೇಖಡಾ ಮಾತ್ರ. ಅದೇ ವೇಳೆ 75 ಶೇಖಡಾ ವಿದ್ಯಾರ್ಥಿಗಳು ಸ್ನಾತಕೋತ್ತರ ಹಾಗೂ ಪಿಹೆಚ್ಡಿ ಮಾಡುತ್ತಿರುವವರು. ಕನಿಷ್ಠ 35 ಶೇಖಡಾ ವಿದ್ಯಾರ್ಥಿಗಳು ಪ್ರಪಂಚದ ವಿವಿಧ ಭಾಗಗಳಿಂದ ಬಂದಿರುವ ಟರ್ಕಿಶ್ ಅಲ್ಲದ ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳು.
ಇದೆಲ್ಲಾ ನಡೆಯುವುದುಂಟೇ? ನಿಮಗೇನು ಹುಚ್ಚು ಹಿಡಿದಿದೆಯಾ? ನಿಮಗಿದು ನಡೆಯುವುದೆಂಬ ಖಾತ್ರಿ ಇದೆಯಾ? ಪ್ರಪಂಚದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಕರೆತಂದು ವಿವಿಯ 35 ಶೇಖಡಾ ಭಾಗವನ್ನು ತುಂಬುವುದಾದರೂ ಹೇಗೆ? ನನ್ನ ಸಹೋದ್ಯೋಗಿಗಳು ನನ್ನನ್ನು ಛೇಡಿಸುತ್ತಿದ್ದ ಪ್ರಶ್ನೆಗಳಿವು. ಅಲಯನ್ಸ್ ಆಫ್ ಸಿವಿಲೈಸೇಶನ್ ಇನ್ಸ್ಟಿಟ್ಯೂಟ್ನ ಸಾಧನೆ ಇವೆಲ್ಲಾ ಸಾಧ್ಯ ಎಂಬುವುದಕ್ಕೆ ಸಾಕ್ಷಿ. ಸಾರ್ವತ್ರಿಕವಾದ ದಿಗ್ದರ್ಶನದೊಂದಿಗೆ ಈ ಯೋಜನೆಯ ಆರಂಭದಿಂದಲೂ ನನಗೆ ಸಹಾಯ ಮಾಡುತ್ತಿರುವ ನನ್ನ ಸಹೋದ್ಯೋಗಿಗಳ ಮೇಲೆ ನನಗೆ ಪೂರ್ಣ ನಂಬಿಕೆ ಇದೆ. ತಮ್ಮ ಕೆಲಸದಲ್ಲಿ ಉತ್ಸಾಹದ ಜತೆಗೆ ಅಪಾರ ತಜ್ಞತೆ ಇರುವ ಯುವ ಸಹೋದ್ಯೋಗಿಗಳು ಕೂಡಾ ನನ್ನ ಜತೆಗಿದ್ದಾರೆ.
ಕೆಲವರು ನನ್ನಲ್ಲಿ ಕೇಳುತ್ತಾರೆ: “ಪ್ರಪಂಚದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಕರೆತರಲು ನೀವು ಯಾವ ರೀತಿಯ ಪಿಆರ್ ಕೆಲಸ ಮಾಡುತ್ತಿದ್ದೀರಿ?” “ಏನೂ ಇಲ್ಲ”, ಎನ್ನುವುದೇ ನನ್ನ ಉತ್ತರ. ನಮ್ಮಲ್ಲಿನ ಹುದ್ದೆಗಳೇ ಸ್ವಯಂ ಪ್ರಚಾರ ಕಾರ್ಯ ನಿರ್ವಹಿಸುತ್ತಿವೆ. ಅಲಯನ್ಸ್ ಆಫ್ ಸಿವಿಲೈಸೇಶನ್ ಇನ್ಸ್ಟಿಟ್ಯೂಟ್ನಲ್ಲಿರುವ ನಮ್ಮ ವಿದ್ಯಾರ್ಥಿಗಳು ಅವರು ಪಡೆಯುತ್ತಿರುವ ಶಿಕ್ಷಣದಿಂದ ಸಂತೃಪ್ತರಾಗಿದ್ದಾರೆ. ಆದ್ದರಿಂದ ಅವರೇ ನಮ್ಮ ರಾಯಭಾರಿಗಳು. ಎದುರಿಗೆ ಸಿಕ್ಕ ಯಾರಿಗಾದರೂ ಹಣ ಪಾವತಿಸಿಕೊಂಡು ನಿಮ್ಮ ಪ್ರಯತ್ನಗಳನ್ನು ಜಗಜ್ಜಾಹೀರಾಗಿಸಲು ಸಾಧ್ಯವಿಲ್ಲ. ನಮ್ಮ ಅಲಯನ್ಸ್ ಆಫ್ ಸಿವಿಲೈಸೇಶನ್ಸ್ (ACI) ನಲ್ಲಿ ಹಾಗೂ ಈಗ IHU ನಲ್ಲೂ ಅಮೆರಿಕನ್, ರಷ್ಯನ್, ಫ್ರೆಂಚ್, ಅರಬ್, ಡಚ್ ಮತ್ತು ಜಪಾನೀಸ್ ಸಹಿತ ಬೇರೆ ಬೇರೆ ದೇಶಗಳ ರಾಯಭಾರಿಗಳು ಇಂದು ನಮ್ಮ ಸಂಸ್ಥೆಯಲ್ಲಿದ್ದಾರೆ. ಇದಕ್ಕಿಂತ ಪ್ರಬಲವಾದ ಜಾಹೀರಾತು ಬೇರೆ ಯಾವುದಿದೆ ಹೇಳಿ? ಅಲಯನ್ಸ್ ಆಫ್ ಸಿವಿಲೈಸೇಶನ್ ಇನ್ಸ್ಟಿಟ್ಯೂಟಲ್ಲಿ ನಾವು ಏನು ಮಾಡುತ್ತಿದ್ದೇವೋ ಅದರ ವಿಸ್ತೃತ ಆವೃತ್ತಿಯಾಗಿದೆ ಇಬ್ನ್ ಖಲ್ದೂನ್ ವಿಶ್ವವಿದ್ಯಾಲಯ. ಆದ್ದರಿಂದ ACI ಯಲ್ಲಿನ ಸಣ್ಣ ಪ್ರಯೋಗವನ್ನು ಜಾಗತಿಕವಾಗಿ ವಿಸ್ತರಿಸಲು ನಮಗೆ ಇದೊಂದು ಉತ್ತಮ ಅವಕಾಶ.
ಚಿಂತನೆ ಮತ್ತು ಆದರ್ಶಗಳ ವಿಶ್ವವಿದ್ಯಾಲಯ
ವಾಸ್ತವದಲ್ಲಿ ಸಂಶೋಧನಾತ್ಮಕ ವಿವಿಗಳೆ ನಿಜವಾದ ಅರ್ಥದ ವಿವಿಗಳು. ಏಕೆಂದರೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ನಡುವೆ ವ್ಯತ್ಯಾಸವಿದೆ. ಕಾಲೇಜು ಪದವಿಪೂರ್ವ ಹಂತದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತದೆ. ಆದರೆ ವಿಶ್ವವಿದ್ಯಾಲಯಗಳು ಸಂಶೋಧನೆ ಹಾಗೂ ಹೊಸ ಅರಿವಿನ ಉತ್ಪಾದನೆಯ ಕಾರ್ಯುದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತದೆ. ವಿಶ್ವವಿದ್ಯಾನಿಲಯ ಎಂದರೆ ಇದು. ಆಲೋಚನೆ ಎಂದರೇನು? ಅದು ಹೇಗೆ? ಹೊಸ ಹಾಗೂ ಸಾರ್ವತ್ರಿಕ ವಿಚಾರಗಳಿಗೆ ರೂಪು ಕೊಡುವುದು ಹೇಗೆ? ಮುಂತಾದ ಸಂಗತಿಗಳನ್ನು ಇಲ್ಲಿ ಜನರು ಅನುಭವದ ಮೂಲಕ ಕಲಿಯುತ್ತಾರೆ. ಆಲೋಚನಾ ಸಾಮರ್ಥ್ಯ ಮಾನವರನ್ನು ಇತರ ಜೀವಿಗಳಿಂದ ಪ್ರತ್ಯೇಕಿಸುತ್ತದೆ. ನಮಗೆಲ್ಲರಿಗೂ ವ್ಯವಸ್ಥಿತವಾಗಿ ಚಿಂತಿಸುವ ಸಾಮರ್ಥ್ಯ ಇದೆ. ನಿಜಕ್ಕೂ ಇದೊಂದು ದೊಡ್ಡ ಆಸ್ತಿಯೇ ಸರಿ. ಆದರೆ, ಈ ಆಸ್ತಿಯನ್ನು ಸಮರ್ಪಕವಾಗಿ ಬಳಸುವುದು ಹೇಗೆಂಬುದನ್ನು ನಾವು ಕಲಿಯಬೇಕಿದೆ. ದುರದೃಷ್ಟವಶಾತ್ ಯೋಚಿಸುವುದು ಬಹಳ ಸುಲಭ ಎಂದು ನಾವು ಭಾವಿಸುತ್ತೇವೆ. ಆದರೆ ಸಂತುಲಿತವಾದ ವ್ಯವಸ್ಥಿತ ಚಿಂತನೆಗೆ ಶಿಕ್ಷಣ ಅಥವಾ ಚಿಂತನೆಯ ಬಗೆಗಿನ ಚಿಂತನೆಯ ಅಗತ್ಯವಿದೆ. ಈ ನಿರ್ಣಾಯಕ ಪ್ರಕ್ರಿಯೆ ನಡೆಯುವ ಸಂಸ್ಥೆಗಳೆ ವಿಶ್ವವಿದ್ಯಾಲಯಗಳು.
“ಐಡಿಯಾ ಎಂದರೇನು?” ಈ ಪ್ರಶ್ನೆಯನ್ನು ನನ್ನ ವಿದ್ಯಾರ್ಥಿಗಳತ್ತ ನಾನು ಸಾಧಾರಣವಾಗಿ ಎಸೆಯುತ್ತಿರುತ್ತೇನೆ. ಅವರೇನೋ ಇದರ ಉತ್ತರ ಸರಳ ಹಾಗೂ ಎಲ್ಲರಿಗೂ ತಿಳಿದಿದೆ ಎಂಬಂತೆ ಪ್ರತಿಕ್ರಯಿಸುತ್ತಾರೆ. ಆದರೆ ಉತ್ತರಿಸಲು ಪ್ರಯತ್ನಿಸುವಾಗ ಇದು ಅಷ್ಟು ಸರಳ ಅಲ್ಲ ಎನ್ನುವುದು ಗೊತ್ತಾಗುತ್ತದೆ. ಒಂದು ಉತ್ತಮ ಐಡಿಯಾವೊಂದನ್ನು ರೂಪಿಸಿ ತನ್ನಿ ಎಂದು ಅಸೈನ್ ಮೆಂಟ್ ಕೊಟ್ಟರೆ ಇದು ಅಷ್ಟು ಸರಳವಾಗಿಲ್ಲ ಎಂದು ಅವರಿಗೆ ಅರ್ಥವಾಗುತ್ತದೆ. ಬಹುತೇಕ ವಿದ್ಯಾರ್ಥಿಗಳು ಕೂಡಾ ಇಲ್ಲಿ ವಿಫಲರಾದದ್ದು ನೋಡಿದ್ದೇನೆ. ಪಕ್ವವಾದ ಹೊಸ ಐಡಿಯಾವನ್ನು ಅಭಿವೃದ್ಧಿಪಡಿಸಲ ಸಾಧ್ಯ ಆಗಬೇಕಾದರೆ ಮೊದಲು ಐಡಿಯಾ ಎಂದರೇನು? ಅದನ್ನು ಅಭಿವೃದ್ಧಿಪಡಿಸುವುದು ಹೇಗೆಂದು ಅರ್ಥೈಸಬೇಕಾಗುತ್ತದೆ.
ಜ್ಞಾನದ ಈ ತಳಹದಿಗಳನ್ನು ಪರಿಶೀಲಿಸುವಾಗ ವಿಶ್ವವಿದ್ಯಾಲಯ ಕೇವಲ ಅಧ್ಯಯನದ ಸ್ಥಳ ಮಾತ್ರವಲ್ಲ, ಅದು ಮಾನವನನ್ನು ಪರಿಪೂರ್ಣಗೊಳಿಸುವ ಪ್ರಕ್ರಿಯೆ ಕೂಡಾ ಆಗಿರುತ್ತದೆ ಎನ್ನುವ ವಿಚಾರವನ್ನು ಮನಗಾಣಲು ಸಾಧ್ಯವಿದೆ.
ಆದರ್ಶ ಮಾನವನನ್ನು ಉತ್ಪಾದಿಸುವ ವಿಧಾನ
ಪ್ರತಿ ನಾಗರಿಕತೆ ತನ್ನದೇ ಆದ ಆದರ್ಶ ವ್ಯಕ್ತಿಯ ಪರಿಕಲ್ಪನೆಯನ್ನು ಹೊಂದಿರುತ್ತದೆ. ಅದು ಸಹಜವಾಗಿಯೇ ಇತರ ನಾಗರಿಕತೆಗಳ ಆದರ್ಶ ವ್ಯಕ್ತಿಯ ಕಲ್ಪನೆಗಿಂತ ಭಿನ್ನವಾಗಿರುತ್ತದೆ. ಇಸ್ಲಾಮಿಕ್ ನಾಗರಿಕತೆಯು” ಅಲ್-ಇನ್ಸಾನುಲ್ ಕಾಮಿಲ್” ಎಂಬ ಕಲ್ಪನೆಯನ್ನು ಹೊಂದಿದೆ. ಚೀನೀ ನಾಗರಿಕತೆಯು ಮತ್ತೊಂದು ಕಲ್ಪನೆಯನ್ನು ಹೊಂದಿದೆ, ಹಿಂದೂ ನಾಗರಿಕತೆ ಇನ್ನೊಂದನ್ನು ಹೊಂದಿದೆ, ಇತ್ಯಾದಿ. ಅದರ ಪ್ರಕಾರ, ನಾಗರಿಕತೆಗಳು ತಮ್ಮ ಆದರ್ಶ ಮಾನವರನ್ನು ಉತ್ಪಾದಿಸುವ ಸಲುವಾಗಿ ವಿಶ್ವವಿದ್ಯಾಲಯಗಳನ್ನು ಒಳಗೊಂಡಂತೆ ನಿರ್ದಿಷ್ಟ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುತ್ತವೆ. ಆದ್ದರಿಂದ, ಆದರ್ಶ ವಿಶ್ವವಿದ್ಯಾನಿಲಯದ ಪ್ರಶ್ನೆಯೊಂದಿಗೆ ಅನುಸಂಧಾನ ನಡೆಸುವಾಗ ಆದರ್ಶ ಮಾನವ ಕಲ್ಪನೆಯ ಸ್ವರೂಪವನ್ನು ನಿಕಷಕ್ಕೊಡ್ಡಬೇಕಾಗುತ್ತದೆ. ಇಲ್ಲಿ ಪ್ರತಿ ನಾಗರಿಕತೆ, ಧರ್ಮ ಅಥವಾ ಸಮುದಾಯಗಳು ಕೂಡಾ ವಿಭಿನ್ನ ಉತ್ತರಗಳನ್ನು ಕೊಡುತ್ತವೆ. ಆದರ್ಶ ವ್ಯಕ್ತಿಯ ಈ ಪರಿಕಲ್ಪನೆ ಕಾಲಾನಂತರದಲ್ಲಿ ಬದಲಾಗಲೂಬಹುದು. ಪಾಶ್ಚಾತ್ಯ ನಾಗರಿಕತೆಯ ಇತಿಹಾಸವು ಇದನ್ನು ಪ್ರತಿಬಿಂಬಿಸುತ್ತದೆ. ಪ್ರಾಚೀನ ಗ್ರೀಕ್ ನಾಗರಿಕತೆಯಲ್ಲಿನ ಆದರ್ಶ ಮಾನವನ ಕಲ್ಪನೆ ಕ್ರಿಶ್ಚಿಯನ್ ಮೇಧಾವಿತ್ವದ ಮಧ್ಯಕಾಲದ ಕಲ್ಪನೆಗೆ ಸಮನಾಗಿರಲಿಲ್ಲ. ಆಧುನೀಕರಣ ಹಾಗೂ ಸೆಕ್ಯುಲರೀಕರಣದ ಅವಧಿಯಲ್ಲಿ ಅದು ಮತ್ತೆ ಬದಲಾಯಿತು. ಈಗ ಪಶ್ಚಿಮವು ಮತ್ತೊಂದು ಬದಲಾವಣೆಯ ಹಾದಿಯಲ್ಲಿ ಆಧುನಿಕೋತ್ತರ ಯುಗವನ್ನು ಪ್ರವೇಶಿಸಿದೆ. ಆದರೆ, ಇಸ್ಲಾಮಿಕ್ ನಾಗರಿಕತೆಯ ಆದರ್ಶ ಮಾನವ ಅಥವಾ ಅಲ್ ಇನ್ಸಾನುಲ್ ಕಾಮಿಲ್ ಎನ್ನುವ ಪರಿಕಲ್ಪನೆಗೆ ಮೂಲಭೂತವಾದ ಯಾವುದೇ ಬದಲಾವಣೆಗಳು ಉಂಟಾಗಿಲ್ಲ. ಪಾಶ್ಚಿಮಾತ್ಯ ವಸಾಹತುಶಾಹಿಯ ಆಗಮನದ ಅವಧಿಯವರೆಗೆ ಇದು ಸರಾಗವಾಗಿ ಮುಂದುವರಿದಿತ್ತು. ಆದರೆ, ವಸಾಹತುಶಾಹಿ ಎಲ್ಲವನ್ನೂ ಗೋಜಲು ಗೋಜಲಾಗಿಸಿದೆ. ಈ ಗೊಂದಲ ಈಗಲೂ ಮುಂದುವರಿಯುತ್ತಿದ್ದು ಸದ್ರಿ ಗ್ರಹಿಕೆ ಇರಬೇಕಾದುದು ನಮ್ಮ ಸಂಶೋಧನೆಗೆ ಸಂಬಂಧಪಟ್ಟಂತೆ ಬಹಳ ಮುಖ್ಯ. ನನ್ನ ಅಭಿಪ್ರಾಯದಲ್ಲಿ, ವಿಶ್ವವಿದ್ಯಾನಿಲಯದ “ಇಸ್ಲಾಮಿಕ್” ಚಹರೆ ನಿಖರವಾಗಿ ಈ ವಿಚಾರಕ್ಕೆ ಸಂಬಂಧಿಸಿದೆ.
ವಿಶ್ವವಿದ್ಯಾನಿಲಯ ಇಸ್ಲಾಮಿಕ್ ನಾಗರಿಕತೆಯ ಅಲ್ ಇನ್ಸಾನುಲ್ ಕಾಮಿಲ್ ಅಥವಾ ಆದರ್ಶಪ್ರಾಯವಾದ ಮಾನವನನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದರೆ ಅದು ಇಸ್ಲಾಮಿಕ್ ಯುನಿವರ್ಸಿಟಿಯಾಗಿದೆ. ಮುಸ್ಲಿಮರ ಹಾಗೆ ಯೋಚಿಸುವುದು ಹೇಗೆ? ಇಸ್ಲಾಮಿಕ್ ಜ್ಞಾನ ಸಂಪ್ರದಾಯದ ಶಿಸ್ತಿನಲ್ಲಿ ವಿಚಾರಗಳನ್ನು ಉತ್ಪಾದಿಸುವುದು ಹೇಗೆ? ಎಂದು ಒಂದು ವಿಶ್ವವಿದ್ಯಾನಿಲಯ ಕಲಿಸುತ್ತಿದ್ದರೆ ಅದು ಇಸ್ಲಾಮಿಕ್ ವಿಶ್ವವಿದ್ಯಾನಿಲಯವಾಗಿದೆ. ಅದೇ ರೀತಿ, ವಿಶ್ವವಿದ್ಯಾನಿಲಯ ಚೀನೀ ನಾಗರಿಕತೆಯ ಆದರ್ಶ ಮಾನವನನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದರೆ, ಅದು ಚೀನೀ ವಿಶ್ವವಿದ್ಯಾಲಯವಾಗಿದೆ. ರಷ್ಯಾದ ವಿಶ್ವವಿದ್ಯಾನಿಲಯ ಅಥವಾ ಅಮೇರಿಕನ್ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಂತೆಯೂ ಇದು ನಿಜ. ಶಿಕ್ಷಣದ ಅಂತಿಮ ಉತ್ಪನ್ನ ಹೇಗಿರಬೇಕು ಎನ್ನುವುದರ ಬಗೆಗಿನ ಬಹಳ ಸ್ಪಷ್ಟವಾದ ದೃಷ್ಟಿಕೋನ ಅಮೆರಿಕ ಮತ್ತು ಫ್ರಾನ್ಸ್ ದೇಶಗಳಲ್ಲಿವೆ. ದುರದೃಷ್ಟವಶಾತ್, ಟರ್ಕಿ ಸಹಿತ ಇರುವ ಮುಸ್ಲಿಂ ಜಗತ್ತಿನಲ್ಲಿ ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ರೂಪಿಸಬೇಕಾದ ಆದರ್ಶ ವ್ಯಕ್ತಿ ಯಾರು? ಬೊಗಾಸಿಕಿ ವಿಶ್ವವಿದ್ಯಾನಿಲಯದ ಆದರ್ಶ ವ್ಯಕ್ತಿಗೂ ಗಲಾಟಸಾರ ವಿಶ್ವವಿದ್ಯಾನಿಲಯ ಅಥವಾ ಇಸ್ತಾಂಬುಲ್ ವಿಶ್ವವಿದ್ಯಾನಿಲಯದ ಆದರ್ಶ ವ್ಯಕ್ತಿಗೂ ವ್ಯತ್ಯಾಸ ಇದೆ. ಕೆಲವು ಟರ್ಕಿಶ್ ವಿಶ್ವವಿದ್ಯಾನಿಲಯಗಳು ಮನುಷ್ಯನ ಬಗೆಗಿನ ಫ್ರೆಂಚ್ ಆದರ್ಶವನ್ನು ಅಳವಡಿಸಿಕೊಂಡರೆ, ಇತರರು ಅಮೇರಿಕನ್ ಆದರ್ಶವನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಕೆಲವು ವಿಶ್ವವಿದ್ಯಾನಿಲಯಗಳು ಆದರ್ಶ ಮಾನವವನನ್ನು ರೂಪಿಸಲು ಹೇಗೆ ಶಿಕ್ಷಣ ನೀಡಬೇಕೆಂಬುದರ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನೇ ಹೊಂದಿಲ್ಲ. ತಮ್ಮ ಗುರಿ ವಿದ್ಯಾರ್ಥಿಗಳಿಗೆ ಪದವಿ ಯಾ ಡಿಪ್ಲೋಮ ನೀಡುವುದಕ್ಕೆ ಮಾತ್ರ ಸೀಮಿತ ಎಂದು ಅವರು ಭಾವಿಸಿದಂತಿದೆ.
ಪಶ್ಚಿಮಾವಲಂಬಿತ ಮುಸ್ಲಿಮ್ ಬೌದ್ಧಿಕತೆ
ನನ್ನ ಪ್ರೌಢಶಾಲಾ ಹಾಗೂ ವಿಶ್ವವಿದ್ಯಾನಿಲಯ ಕಲಿಕಾ ಸಮಯದಲ್ಲಿ ಟರ್ಕಿಯ ಶಿಕ್ಷಣ ಸಂಸ್ಥೆಗಳ ಸ್ಥಿತಿಯ ಬಗ್ಗೆ ಯಾವಾಗಲೂ ಆಳಚಿಂತನೆ ಮಾಡುತ್ತಿದ್ದೆ. ನಮ್ಮ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣವನ್ನು ನೀಡುವಲ್ಲಿ ಯಾಕೆ ವಿಫಲವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ . ಶಿಕ್ಷಣದ ಸಮಾಜಶಾಸ್ತ್ರ( sociology of education) ಕುರಿತು ಟಾಮ್ ಬಾಟಮೋರ್ ಬರೆದ “ಸಮಾಜಶಾಸ್ತ್ರ: ಸಮಸ್ಯೆಗಳು ಮತ್ತು ಸಾಹಿತ್ಯಕ್ಕೆ ಮಾರ್ಗದರ್ಶಿ” ಪುಸ್ತಕ ನನ್ನ ಕಣ್ಣು ತೆರೆಸಿತು. ಪಾಶ್ಚಿಮಾತ್ಯವಲ್ಲದ ಜಗತ್ತಿನ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಉದ್ದೇಶವನ್ನು ಹೊಂದಿಲ್ಲ. ಅವು ತಮ್ಮ ದೇಶಗಳ ಜನರನ್ನು ಆಧುನೀಕರಿಸುವ ಯಾ ಪಾಶ್ಚಿಮಾತ್ಯೀಕರಿಸುವ ಉದ್ದೇಶವನ್ನು ಮಾತ್ರ ಹೊಂದಿದೆ ಎಂದು ಅವರು ಬರೆದಿದ್ದಾರೆ. ಸಮಸ್ಯೆ ಇರುವುದು ನಮ್ಮ ಶಿಕ್ಷಣ ಸಂಸ್ಥೆಗಳಲ್ಲೇ ಎನ್ನುವುದನ್ನು ಇದರಿಂದ ಮನಗಂಡೆ. ಶೈಕ್ಷಣಿಕವಾಗಿ ಬೆಳೆಸುವ ಬದಲು ವಿದ್ಯಾರ್ಥಿ ಯುವಜನತೆಯನ್ನು ಆಧುನೀಕರಿಸಲು ಮತ್ತು ಪಾಶ್ಚಿಮಾತ್ಯೀಕರಿಸಲು ವಾಸ್ತವವಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ರೂಪುಗೊಂಡಿವೆ. ಇವು ತಮ್ಮ ಉದ್ದೇಶವನ್ನು ನೆರವೇರಿಸಿದ್ದು ಶೈಕ್ಷಣಿಕ ವೈಫಲ್ಯದ ಹೊರತಾಗಿಯೂ ವಿದ್ಯಾರ್ಥಿತ್ವದ ಪರಿಕಲ್ಪನೆ, ಸಮಾಜ ಮತ್ತು ಅದರ ರೂಢಿಗಳನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿವೆ. ಉದಾ: “ಹುಡುಗಿಯೊಬ್ಬಳು ಅನಟೋಲಿಯಾದಿಂದ ನಾಲ್ಕು ವರ್ಷಗಳ ಕಾಲ ಇಸ್ತಾಂಬುಲ್ ನಲ್ಲಿ ಅಧ್ಯಯನ ಮಾಡಿ ಆಧುನಿಕ ಪಾಶ್ಚಾತ್ಯ ಮಹಿಳೆಯಾಗಿ ಹಿಂದಿರುಗುತ್ತಾಳೆ”.
ಕೆಲವು ಪ್ರೊಫೆಸರರ್ ಗಳ ಜತೆಗೆ ಘಾನಾಗೆ ಭೇಟಿ ನೀಡಿದಾಗ ಬಾಟಮೋರ್ ಅವರ ಆಲೋಚನೆಗಳು ಸರಿ ಎನಿಸುವ ಅನುಭವ ನನಗೆ ಉಂಟಾಯಿತು. ನಾವು ಘಾನಾದ ಅತ್ಯುತ್ತಮ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಉನ್ನತ ಅಧಿಕಾರಿಯೊಬ್ಬರು “ಬ್ರಿಟಿಷರು ಘಾನ ದೇಶವನ್ನು ಬಿಟ್ಟು ಹೋದ ಸಂದರ್ಭ ಘಾನಿಯನ್ನರು ಹೇಗೆ ಬ್ರಿಟಿಷರಿಂದ ವಿಶ್ವವಿದ್ಯಾನಿಲಯವನ್ನು ವಶಪಡಿಸಿಕೊಂಡರು ಎನ್ನುವುದರ ಬಗ್ಗೆ ಒಂದು ಪ್ರಬಂಧ ಮಂಡಿಸಿದ್ದರು. ಪ್ರಬಂಧವನ್ನು ಆಲಿಸಿದ ನಂತರ ನಾನು ಕೇಳಿದೆ, “ಸರ್, ನೀವು ಆ ವಿವಿಯನ್ನು ವಶಪಡಿಸಿಕೊಂಡ ನಂತರ ಶಿಕ್ಷಣದ ತತ್ವಶಾಸ್ತ್ರ, ವಿಧಾನ ಹಾಗೂ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಿದ್ದೀರಾ?” “ಇಲ್ಲ ಇಲ್ಲ ಇಲ್ಲ!” ಎಂದು ಹೆಮ್ಮೆಯಿಂದ ಆ ಅಧಿಕಾರಿ ಹೇಳಿದರು. “ನಾವು ಏನನ್ನೂ ಬದಲಾಯಿಸಲಿಲ್ಲ, ನಾವು ಅಂದಿನ ವ್ಯವಸ್ಥೆಯನ್ನೇ ಉಳಿಸಿಕೊಂಡಿದ್ದೇವೆ.”
ಬ್ರಿಟಿಷರ ಕೆಲಸವನ್ನು ಮುಂದುವರಿಸುವ ಪ್ರಯತ್ನವನ್ನಷ್ಟೇ ಇವರು ಮಾಡಿದ್ದು. ಈಗ ಬ್ರಿಟಿಷ್ ಸರ್ಕಾರಕ್ಕೆ ಪ್ರಾಧ್ಯಾಪಕರನ್ನು ಕಳುಹಿಸುವ ಅಥವಾ ಯಾವುದೇ ಸಂಬಳವನ್ನು ಪಾವತಿಸಬೇಕಾದ ಅಗತ್ಯ ಕೂಡಾ ಇಲ್ಲ. ಎಲ್ಲವನ್ನೂ ಘಾನಿಯನ್ನರೇ ಸ್ವಯಂಪ್ರೇರಿತರಾಗಿ ನಿರ್ವಹಿಸುತ್ತಾ ಇದ್ದಾರೆ.
ನಾನು ಟರ್ಕಿಯ ವಿಶ್ವವಿದ್ಯಾಲಯಗಳಿಗೆ ಮತ್ತು ಪಾಶ್ಚಿಮಾತ್ಯೇತರ ಪ್ರಪಂಚದ ವಿವಿಧ ದೇಶಗಳಿಗೆ ಭೇಟಿ ನೀಡುವಾಗ ಅಲ್ಲಿನ ವಿದ್ಯಾರ್ಥಿಗಳೊಂದಿಗೆ “ನೀವು ಅಧ್ಯಯನ ಮಾಡುವ ರಾಜಕೀಯ ವಿಜ್ಞಾನದ ಪುಸ್ತಕಗಳಲ್ಲಿ ಟರ್ಕಿಶ್, ಅರಬ್ ಅಥವಾ ಇತರ ಯಾವುದಾದರೂ ಮುಸ್ಲಿಂ ವ್ಯಕ್ತಿಗಳ ಯಾವುದಾದರೂ ಸಿದ್ಧಾಂತಗಳಿವೆಯೇ? ಎಂದು ಕೇಳುವುದಿದೆ. ಆಗೆಲ್ಲಾ “ಇಲ್ಲ” ಎನ್ನುವ ಉತ್ತರ ವಿದ್ಯಾರ್ಥಿಗಳಿಂದ ದೊರಕುತ್ತದೆ. ಮನೋವಿಜ್ಞಾನ, ಸಮಾಜವಿಜ್ಞಾನ, ಕಾನೂನು ಹಾಗೂ ಅರ್ಥಶಾಸ್ತ್ರ ಕ್ಷೇತ್ರದಲ್ಲೂ ಇದೇ ಅವಸ್ಥೆ ಇದೆ. ಪೌರಾತ್ಯ ದೇಶಗಳ ವಿಧ್ಯಾರ್ಥಿಗಳಿಗೆ ಪಾಶ್ಚಾತ್ಯ ಕಲ್ಪನೆಗಳನ್ನು ಮತ್ತು ಸಿದ್ಧಾಂತಗಳನ್ನು ಬೋಧಿಸುವ ಕೆಲಸವನ್ನಷ್ಟೇ ಇಲ್ಲಿನ ವಿಶ್ವವಿದ್ಯಾಲಯಗಳು ನಡೆಸುತ್ತಿರುವುದು. ಯಾವುದಾದರೊಬ್ಬ ಮುಸ್ಲಿಂ ಮಂಡಿಸಿದ ಮನೋವೈಜ್ಞಾನಿಕ ಸಿದ್ಧಾಂತವನ್ನು ಕಲಿಸುವ ಮನೋವೈಜ್ಞಾನಿಕ ವಿಭಾಗ ನನ್ನ ಅರಿವಿಗೆ ಬಂದಿಲ್ಲ.
ಕೆಲವು ದಿನಗಳ ಹಿಂದೆ ಶಿಕ್ಷಣದ ವಿಷಯದಲ್ಲಿ ಪಿಎಚ್ಡಿ ಮಾಡುತ್ತಿರುವ ಓರ್ವ ವಿದ್ಯಾರ್ಥಿನಿಯನ್ನು ಭೇಟಿಯಾದಾಗ ‘ಶಿಕ್ಷಣದ ವಿಷಯದಲ್ಲಿ ಪರಿಣತರಾದ ಯಾವುದಾದರೂ ವಿದ್ವಾಂಸರ ಪರಿಚಯವಿದೆಯೇ?’ ಎಂದು ವಿಚಾರಿಸಿದೆ. ಇಲ್ಲ ಎನ್ನುವ ಉತ್ತರ ಬಂತು. ಇಸ್ತಾಂಬುಲ್ ನಲ್ಲಿ ಪಿಎಚ್ಡಿ ಮಾಡುವ, ಹಿಜಾಬ್ ಧಾರಿ, ಧಾರ್ಮಿಕ ಮಹಿಳೆ! ಆದರೆ ಮುಸ್ಲಿಂ ಶೈಕ್ಷಣಿಕ ಸಿದ್ಧಾಂತಗಳ ಬಗ್ಗೆ ಯಾವುದೇ ಅರಿವಿಲ್ಲ!! ಟರ್ಕಿಶ್ ವಿದ್ವಾಂಸರ ಪರಿಚಯವಂತೂ ಅವರಿಗಿಲ್ಲ. ನಾನು ಕೇಳಿದೆ ‘ನಿಮಗೆ ಅಲ್-ಝರ್ನೂಜಿ ಪರಿಚಯವಿದೆಯಾ?’ ಯಾರವರು ಎಂದು ಆಕೆ ಮರುಪ್ರಶ್ನಿಸಿದಳು. ಮತ್ತೆ ಕೇಳಿದೆ: “ನಿಮಗೆ ಅಲ್-ಗಝ್ಝಾಲಿ ಗೊತ್ತಾ?” “ಹೌದು, ಹೌದು, ಅವರು ಬಹಳ ಪ್ರಸಿದ್ಧ ವಿದ್ವಾಂಸ. ಎಲ್ಲರಿಗೂ ಅವರ ಪರಿಚಯವಿದೆ. ಆದರೆ ಆಕೆ ಅಲ್-ಗಝ್ಝಾಲಿಯವರ ಯಾವುದೇ ಪುಸ್ತಕ ಓದಿರಲಿಲ್ಲ. ಆದರೆ ಪಶ್ಚಿಮದಿಂದ ಆಮದು ಮಾಡಿಕೊಂಡ ಎಲ್ಲಾ ಸಿದ್ಧಾಂತಗಳನ್ನು ಆಕೆ ಅಧ್ಯಯನ ಮಾಡಿದ್ದಳು. ಟರ್ಕಿಶ್ ಮುಸ್ಲಿಂ ಆಗಿದ್ದರೂ ಆಕೆ ಯಾವುದೇ ಮುಸ್ಲಿಂ ಅಥವಾ ಟರ್ಕಿಶ್ ವಿದ್ವಾಂಸರ ಶೈಕ್ಷಣಿಕ ಸಿದ್ಧಾಂತಗಳ ಅಧ್ಯಯನ ಮಾಡಿರಲಿಲ್ಲ. ಶಿಕ್ಷಣದ ಬಗ್ಗೆ ಯಾವುದೇ ಇಸ್ಲಾಮಿಕ್ ಅಥವಾ ಟರ್ಕಿಶ್ ಅಧ್ಯಯನ ಬಂದಿಲ್ಲ ಎನ್ನುವ ಪ್ರತಿಕ್ರಿಯೆ ಅವಳಿಂದ ವ್ಯಕ್ತವಾಗಿತ್ತು.
ಈ ಪ್ರಕ್ರಿಯೆಯ ಪರಿಣಾಮವನ್ನು ನಾನು “ಸುಸ್ಥಿರ ಬೌದ್ಧಿಕ ಅವಲಂಬನೆ” (sustainable intellectual dependency) ಎಂದು ಕರೆಯಲು ಬಯಸುತ್ತೇನೆ. ಪೌರಾತ್ಯ ಜಗತ್ತಿನ ವಿಶ್ವವಿದ್ಯಾನಿಲಯಗಳ ಉದ್ದೇಶ ಇದುವೆ. ಶ್ರೇಷ್ಠ ವಿಜ್ಞಾನಿಗಳಿಗೆ ಜನ್ಮ ನೀಡುವ ಬದಲು ತಮ್ಮ ದೇಶಗಳ ವಿಧ್ಯಾರ್ಥಿಗಳನ್ನು ಬೌದ್ಧಿಕವಾಗಿ ಮತ್ತು ಶೈಕ್ಷಣಿಕವಾಗಿ ಪಶ್ಚಿಮದ ಮೇಲೆ ಅವಲಂಬಿತರಾಗುವಂತೆ ಮಾಡುವುದು ಅವುಗಳ ಕೆಲಸ. ನಾವು ಬೌದ್ಧಿಕವಾಗಿ ಮಾತ್ರವಲ್ಲ ತಂತ್ರಜ್ಞಾನ ಕ್ಷೇತ್ರದಲ್ಲೂ ಅವಲಂಬಿತರಾಗಿದ್ದೇವೆ. ನಾವೇ ಉತ್ಪಾದಿಸುವ ಬದಲು ಪಶ್ಚಿಮದಿಂದ ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳುತ್ತೇವೆ. ವಿಮಾನಗಳು, ದೂರವಾಣಿಗಳು, ಶಸ್ತ್ರಾಸ್ತ್ರಗಳು, ಸೌಂದರ್ಯವರ್ಧಕಗಳ ಸಹಿತ ಎಲ್ಲವೂ ಹೀಗೆ ಆಮದಾಗುತ್ತಿವೆ. ಹೊಸ ಆಲೋಚನೆಗಳನ್ನು ಉತ್ಪಾದಿಸಲು ನಮ್ಮಿಂದ ಸಾಧ್ಯವಿಲ್ಲವೆಂದು ಭಾವಿಸಿ ಪಾಶ್ಚಿಮಾತ್ಯ ಶಿಕ್ಷಣ ತಜ್ಞರ ಉತ್ತಮ ವಿದ್ಯಾರ್ಥಿಯಾಗಲು ಹಾಗೂ ನಮ್ಮ ದೇಶದಲ್ಲಿ ಪಾಶ್ಚಿಮಾತ್ಯ ವಿಚಾರಗಳನ್ನು ಅಳವಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇದೇ ಶೈಲಿ ಎಷ್ಟರವೆರೆಗೆ ಮುಂದುವರಿಯುತ್ತದೋ ಅಷ್ಟರವರೆಗೆ ನಮ್ಮ ವಿವಿಗಳು ನಿಜವಾದ ವಿಶ್ವವಿದ್ಯಾಲಯಗಳಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಲಿದೆ.
ಜಗತ್ತಿನ ಪ್ರಥಮ ವಿಶ್ವವಿದ್ಯಾನಿಲಯ ಮುಸ್ಲಿಮರದ್ದು
ಫಾತಿಮಾ ಅಲ್-ಫಿಹ್ರಿಯಾ ಎನ್ನುವ ಮೊರಾಕ್ಕೋ ಮುಸ್ಲಿಮ್ ಮಹಿಳೆ ಜಗತ್ತಿನ ಪ್ರಥಮ ವಿವಿಯಾಗಿರುವ ಅಲ್-ಕರವಿಯ್ಯೀನ್ ಯುನಿವರ್ಸಿಟಿಯನ್ನು 859 ರಲ್ಲಿ ಸ್ಥಾಪಿಸಿದರು. ಎರಡನೇ ವಿಶ್ವವಿದ್ಯಾನಿಲಯವಾದ ಅಲ್ -ಅಝ್ ಹರ್ 975 ರಲ್ಲಿ ಸ್ಥಾಪಿಸಲ್ಪಟ್ಟಿತು. 11 ನೇ ಶತಮಾನದಲ್ಲಿ ಜಾಮಿಅ ನಿಝಾಮಿಯಾ ಬಗ್ದಾದ್ ನಲ್ಲಿ ತಲೆಯೆತ್ತಿತು. ಪಾಶ್ಚಾತ್ಯ ರಾಷ್ಟ್ರಗಳು ವಿಶ್ವವಿದ್ಯಾನಿಲಯವನ್ನು ಒಂದು ಸಂಸ್ಥೆಯಾಗಿ ಬೆಳೆಸಲು ಪ್ರಾರಂಭಿಸಿದ್ದು ಮುಸ್ಲಿಂ ಪ್ರಪಂಚದಾದ್ಯಂತ ವಿಶ್ವವಿದ್ಯಾನಿಲಯಗಳು ಹೊರಹೊಮ್ಮಿದ ನಂತರ. ತದನಂತರ, ಶಿಕ್ಷಣದ ಈ ವ್ಯವಸ್ಥೆ ಭಿನ್ನವಾದ ಜಾಡು ಹಿಡಿಯತೊಡಗಿತು.
(ಮುಂದುವರಿಯುವುದು)
ಡಾ. ರಜಬ್ ಸೆಂತುರ್ಕ್ ಕನ್ನಡಕ್ಕೆ : ತಂಶೀರ್ ಉಳ್ಳಾಲ
Dr. Recep Şentürk
Dr. Recep Senturk is a turkish sociologist, Islamic scholar and public intellectual of Turkey. He has played major role in founding several higher education institutions in the Muslim world and also authored several works in English and Turkish. His works have been translated into several languages. He currently serves as Dean of the College of Islamic Studies at Hamad Bin Khalifah University, Qatar and President of Usul Academy. He was the founding president of Ibn Haldun University (IHU) in Istanbul (2017-2021).
ಗಂಜ್ ಎ ಸವಾಯಿ ಎನ್ನುವ ಮೊಘಲ್ ಹಡಗಿನ ಕತೆ ಹಿಂದೂ ಮಹಾಸಾಗರ ಮಾರ್ಗದ ಹಜ್ಜ್ ಪವಿತ್ರಯಾತ್ರೆಯ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ ಎನ್ನಬಹುದು. ಕ್ರಿ.ಶ. 1695ರಲ್ಲಿ ಹಜ್ಜ್ ಕರ್ಮಗಳ ಬಳಿಕ ಯಾತ್ರಿಕರು ಹಾಗೂ ಸರಕು-ಸರಂಜಾಮುಗಳನ್ನು ಹೊತ್ತುಕೊಂಡು ಸೂರತ್ಗೆ ಹೊರಟ ಗಂಜ್ ಎ ಸವಾಯಿ ಎಂಬ ಹೆಸರಿನ ಹಡಗನ್ನು ಹೆನ್ರಿ ಎವೆರಿ ನೇತೃತ್ವದ ಕಡಲ್ಗಳ್ಳರ ತಂಡ ಹಿಂದೂ ಮಹಾಸಾಗರದಲ್ಲಿ ಅಡ್ಡಗಟ್ಟಿ ಲೂಟಿ ಮಾಡಿತು. ಗಂಜ್ ಎ ಸವಾಯಿ ದುರಂತ ಇತಿಹಾಸದ ಅಧ್ಯಯನಗಳಲ್ಲಿ ಕಡೆಗಣಿಸಲ್ಪಟ್ಟಿರುವ ಕೆಂಪು ಸಮುದ್ರ ಕೇಂದ್ರಿತ ಕಡಲ್ಗಳ್ಳತನದ ಅತ್ಯಂತ ದುರದೃಷ್ಟಕರ ಅಧ್ಯಾಯ ಎನಿಸಿದೆ. ಜತೆಗೆ ದರೋಡೆಕೋರರಿಗೆ ಕೈತುಂಬಾ ಲಾಭ ಸಿಕ್ಕಿದ ದರೋಡೆಯೂ ಹೌದು. ಈ ವಿಷಯದ ಬಗ್ಗೆ ಲಭ್ಯವಿರುವ ಎಲ್ಲಾ ಅಧ್ಯಯನಗಳು ಕಡಲ್ಗಳ್ಳತನದ ಬಗೆಗಿನ ಯುರೋಪಿಯನ್ ಆಕರಗಳ ಮೇಲೆ ಅವಲಂಬಿತವಾಗಿವೆ. ಈ ಬಗ್ಗೆ ಮೊಘಲ್ ಕಪ್ತಾನ ಮುಹಮ್ಮದ್ ಇಬ್ರಾಹಿಂ ತನ್ನ ಹಡಗುಗಳ ದುಸ್ಥಿತಿಯನ್ನು ವಿವರಿಸಿ 1695ರಲ್ಲಿ ಒಂದು ಪತ್ರ ಬರೆದಿದ್ದರು. ಈ ಪತ್ರ ಮೊಘಲ್ ಸಾಮ್ರಾಜ್ಯ ಮತ್ತು ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ಹೊರಹೊಮ್ಮಿದ ಯುರೋಪಿಯನ್ ಕಡಲ್ಗಳ್ಳತನದ ಎರಡನೇ ಅಲೆಯ ನಡುವಿನ ಸಂಘರ್ಷಗಳ ದಾಖಲೆಯಾಗಿ ಪರಿಗಣಿಸಲಾಗಿದೆ. ಮುಹಮ್ಮದ್ ಇಬ್ರಾಹಿಂ ಅವರ ಪತ್ರ ಮತ್ತು ಇತರ ಆಕರಗಳು ಮೊಘಲ್ ಸಾಮ್ರಾಜ್ಯ ಹಾಗೂ ಇಸ್ಲಾಮಿನ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾ ನಡುವಿನ ಸಂಬಂಧವನ್ನು ಬೆಳಕಿಗೆ ತರುತ್ತವೆ. ಜೊತೆಗೆ ಪವಿತ್ರಯಾತ್ರೆ ಮತ್ತು ವ್ಯಾಪಾರಕ್ಕೆ ಅಡಚಣೆ ಒಡ್ಡುತ್ತಿದ್ದ ಯುರೋಪಿಯನ್ ಕಡಲ್ಗಳ್ಳತನವನ್ನು ಬಯಲಿಗೆ ತರುತ್ತವೆ.
ಮೊಘಲ್ ಕಾಲದ ಬಂದರು ನಗರವಾದ ಸೂರತನ್ನು ಕೆಂಪು ಸಮುದ್ರದೊಂದಿಗೆ ಜೋಡಿಸುತ್ತಿದ್ದ ಸಮುದ್ರಮಾರ್ಗ ವ್ಯಾಪಾರಕ್ಕಾಗಿ ಮಾತ್ರವಲ್ಲದೆ ಆ ಹಾದಿಯಲ್ಲಿ ಸಾಗುವ ಜಾಗತಿಕ ಪವಿತ್ರಯಾತ್ರೆಗಾಗಿಯೂ ಪ್ರಾಮುಖ್ಯತೆ ಗಳಿಸಿತ್ತು. ವರ್ಷಕ್ಕೊಮ್ಮೆ ಬರುವ ಹಜ್ಜ್ ಕರ್ಮ ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಮಾಡಲೇಬೇಕಾದ ಪವಿತ್ರಯಾತ್ರೆ. ಈ ಧಾರ್ಮಿಕ ಹಿನ್ನೆಲೆ ಆಧುನಿಕ ಯುಗಾರಂಭ ಕಾಲದ ಮಾನವನ ಈ ಬೃಹತ್ ವಲಸೆಯ ಹಿಂದಿನ ಪ್ರೇರಕ ಶಕ್ತಿ ಕೂಡಾ ಹೌದು.
ಯಾತ್ರಿಕರು ಉತ್ತರ ಆಫ್ರಿಕಾದ ಅಟ್ಲಾಂಟಿಕ್ ಕರಾವಳಿಯಿಂದ ಹಿಂದೂ ಮಹಾಸಾಗರದ ಕರಾವಳಿಯ ಉಷ್ಣವಲಯಕ್ಕೆ ಪ್ರಯಾಣಿಸುತ್ತಿದ್ದರು. ಒಟ್ಟೋಮನ್ ಆಡಳಿತದಲ್ಲಿದ್ದ ಮಕ್ಕಾ ಮತ್ತು ಮದೀನಾಗೆ ಭೇಟಿ ಕೊಡುವುದೆ ಅವರೆಲ್ಲರ ಯಾತ್ರೆಯ ಗುರಿ. ಅತ್ಯಂತ ಅಪಾಯಕಾರಿಯೆನಿಸಿದ ಈ ದಾರಿಯಲ್ಲಿನ ಪವಿತ್ರಯಾತ್ರೆಗಳ ಬಹುತೇಕ ದಾಖಲೆಗಳಲ್ಲಿ ಒಟ್ಟೋಮನ್ ಯಾತ್ರೆಗಳ ಸಮಾಚಾರ ಮಾತ್ರ ಕಂಡು ಬರುತ್ತಿದ್ದು ಮಕ್ಕಾದ ಕಡೆಗೆ ಮೊಘಲರು ನಡೆಸುತ್ತಿದ್ದ ಪ್ರಯಾಣದ ಸಮಾಚಾರ ಬಹಳ ವಿರಳ. ಹಿಂದೂ ಮಹಾಸಾಗರದಲ್ಲಿ ಘಟಿಸಿದ ಗಂಜ್ ಎ ಸವಾಯಿ ದರೋಡೆ ಪ್ರಕರಣ ಇದಕ್ಕೊಂದು ಉದಾಹರಣೆ.
ಗಂಜ್ ಎ ಸವಾಯಿ ದರೋಡೆ
ಕ್ರಿ.ಶ. ಆಗಸ್ಟ್ 1695ರಲ್ಲಿ ಹಜ್ಜ್ ಮುಗಿಸಿ ಸೂರತ್ಗೆ ಮರಳುತ್ತಿದ್ದ ಮೊಘಲರ ನೌಕೆ ಗಂಜ್ ಎ ಸವಾಯಿಗಾಗಿ ಕಡಲುಗಳ್ಳರ ಕನಿಷ್ಠ ಮೂರು ಹಡಗುಗಳು ಪಶ್ಚಿಮ ಹಿಂದೂ ಮಹಾಸಾಗರದ ಸೊಕೊಟ್ರಾ ದ್ವೀಪ ಮತ್ತು ಸೂರತ್ ನಡುವೆ ಹೊಂಚು ಹಾಕುತ್ತಿದ್ದವು. ಅವುಗಳ ಪೈಕಿ ಭಾರೀ ಫಿರಂಗಿಗಳನ್ನು ಹೊತ್ತ ಫ್ಯಾನ್ಸಿ ಎಂಬ ಬೃಹತ್ ಹಡಗನ್ನು ಇಂಗ್ಲಿಷ್ ನಾವಿಕ ಹೆನ್ರಿ ಮುನ್ನಡೆಸಿದ್ದ. ಮೊಘಲ್ ನೌಕಾಪಡೆಯ ಎರಡು ದೊಡ್ಡ ಹಡಗುಗಳಾದ ಫತೇಹ್ ಮುಹಮ್ಮದ್ ಮತ್ತು 80-ಫಿರಂಗಿಗಳಿರುವ ಗಂಜ್ ಎ ಸವಾಯಿಗಳನ್ನು ನೋಡಿದ ತಕ್ಷಣ ಹೆನ್ರಿ ಎರಡೂ ಹಡಗುಗಳ ಮೇಲೆ ಗುಂಡು ಹಾರಿಸಿದ. ಹಡಗುಗಳಿಂದ ಲೂಟಿಗೈದ ಎಲ್ಲಾ ಸರಕುಗಳನ್ನು ತನ್ನ ಹಡಗಿಗೆ ವರ್ಗಾಯಿಸಿದ ನಂತರ, ಹೆನ್ರಿ ಎವೆರಿ ದಾಳಿಯ ವಿವರವನ್ನು ತಿಳಿಸಲು ಧ್ವಜವನ್ನು ಹೊತ್ತುಕೊಂಡ ಗಂಜ್ ಎ ಸವಾಯಿಯನ್ನು ಸೂರತ್ನತ್ತ ಕಳುಹಿಸಿದ. ಈ ಎರಡು ಹಡಗುಗಳಿಂದ ಹೇರಳ ಸಂಪತ್ತನ್ನು ಆತ ಕೊಳ್ಳೆ ಹೊಡೆದಿದ್ದ.
ಹೆನ್ರಿ ಎವೆರಿಯ ಈ ನೌಕಾ ದಂಡಯಾತ್ರೆಯು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಹಜ್ ಹಡಗುಗಳನ್ನು ಕೇಂದ್ರೀಕರಿಸಿದ ಮೊದಲ ಅಥವಾ ಕೊನೆಯ ದಾಳಿಯಾಗಿರಲಿಲ್ಲ. ಸ್ಥಳೀಯ ಮತ್ತು ವಿದೇಶಿ ಕಡಲ್ಗಳ್ಳತನದ ಸುದೀರ್ಘ ಇತಿಹಾಸವೆ ಹಿಂದೂ ಮಹಾಸಾಗರಕ್ಕಿದೆ. ಈ ಪ್ರದೇಶದಲ್ಲಿ ನಡೆದ ಲೂಟಿಯ ಇತಿಹಾಸವು ಪೋರ್ಚುಗೀಸರ ಹಿಂದೂ ಮಹಾಸಾಗರ ಪ್ರವೇಶ ಹಾಗೂ ಒಟ್ಟೋಮನ್, ಮೊಘಲ್ ಮತ್ತು ಮಮ್ಲೂಕ್ ಪ್ರತಿದಾಳಿಗಳೊಂದಿಗೆ ನಿರಂತರವಾಗಿ ಹೆಣೆದುಕೊಂಡಿದೆ.
ಹಿಂದೂ ಮಹಾಸಾಗರ ಮಾರ್ಗದ ವಾಣಿಜ್ಯ ಇತಿಹಾಸವನ್ನು ಶೋಧಿಸುವಾಗ ಕಡಲ್ಗಳ್ಳತನದ ಕುರುಹುಗಳನ್ನು ಸಾಮಾನ್ಯ ಎಂಬಂತೆ ಕಾಣಬಹುದು. ಹಿಂದೂ ಮಹಾಸಾಗರದಲ್ಲಿ ತಮ್ಮ ಅದೃಷ್ಟವನ್ನು ಹುಡುಕುತ್ತಿದ್ದ ಕಡಲ್ಗಳ್ಳರ ಪಾಲಿಗೆ ಹದಿನೇಳನೇ ಶತಮಾನ ಸುವರ್ಣಯುಗ ಎನಿಸಿತ್ತು. ಅಂದಿನ ಹೆಚ್ಚಿನ ಕಡಲ್ಗಳ್ಳತನದ ಘಟನೆಗಳು ಮಡಗಾಸ್ಕರ್ನ ಈಶಾನ್ಯದಲ್ಲಿರುವ ಸೈಂಟ್ ಮೇರೀಸ್ ದ್ವೀಪಗಳನ್ನು ಕೇಂದ್ರೀಕರಿಸಿ ನಡೆಯುತ್ತಿದ್ದವು.
ಹಿಂದೂ ಮಹಾಸಾಗರದ ಮಾನ್ಸೂನ್ ಹವಾಮಾನವು ದೂರದ ವ್ಯಾಪಾರಗಳಿಗೆ ಅನುಕೂಲಕರವಾಗಿತ್ತು. ಆದ್ದರಿಂದ, ಪೋರ್ಚುಗೀಸ್, ಇಂಗ್ಲಿಷ್, ಡಚ್ ಮತ್ತು ಫ್ರೆಂಚ್ ಕಂಪೆನಿಗಳು ಈ ಪ್ರದೇಶಗಳಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದವು. ಈ ಮೂಲಕ ಹಿಂದೂ ಮಹಾಸಾಗರದಲ್ಲಿ ಸರಕು ಮತ್ತು ಸಂಪತ್ತಿನ ಹರಿವು ವೇಗ ಪಡೆಯಿತು. ಅದರ ಜತೆಗೆ ಕಡಲ್ಗಳ್ಳತವೂ ದಿನದಿಂದ ದಿನಕ್ಕೆ ಬೆಳೆಯತೊಡಗಿತು. ಇಂಗ್ಲಿಷ್ ವ್ಯಾಪಾರಿಗಳು ಮತ್ತು ಮೊಘಲ್ ಕಾಲದ ಹಜ್ ಯಾತ್ರಿಕರು ಇದರ ಬಲಿಪಶುಗಳಾಗಿದ್ದರು.
ಕ್ರಿ.ಶ. 1570ರಲ್ಲಿ ಸೂರತ್ ನಗರವನ್ನು ಅಕ್ಬರ್ ವಶಪಡಿಸಿಕೊಂಡರು. ತದನಂತರ ಒಂದೂವರೆ ಶತಮಾನಗಳ ಕಾಲ ಬೃಹತ್ ಮೊಘಲ್ ಸಾಮ್ರಾಜ್ಯದ ಯಾತ್ರಾರ್ಥಿ ಗುಂಪುಗಳು ಹೇರಳವಾಗಿ ಮಕ್ಕಾ ಪ್ರಯಾಣ ಬೆಳೆಸುತ್ತಿದ್ದದ್ದು ಇಲ್ಲಿಂದ. ಸೂರತ್ ವಶಪಡಿಸಿಕೊಂಡಿದ್ದರೂ ಕೆಂಪು ಸಮುದ್ರ ಮತ್ತು ಕ್ಯಾಂಬೆ ಜಲಸಂಧಿಗಳ ನಡುವಿನ ಪೋರ್ಚುಗೀಸ್ ಆಕ್ರಮಿತ ಪ್ರದೇಶಗಳಲ್ಲಿ ಮೊಘಲ್ ಆಡಳಿತವು ದಂಗೆ ಎದುರಿಸಬೇಕಿತ್ತು. ಯಾತ್ರಾರ್ಥಿಗಳ ಮತ್ತು ವ್ಯಾಪಾರಿಗಳ ರಕ್ಷಣೆಗಾಗಿ ಹೆಚ್ಚು ತಡಮಾಡದೆ ಚಕ್ರವರ್ತಿ ಅಕ್ಬರ್ ರಾಜಿಗೆ ಒಪ್ಪಿಕೊಂಡಿದ್ದರು.
ಒಟ್ಟಾರೆ, ಮೊಘಲರ ಹಜ್ಜ್ ಪವಿತ್ರಯಾತ್ರೆಗಳು ಹಿಂದೂ ಮಹಾಸಾಗರದ ಯುರೋಪಿಯನ್ ವ್ಯಾಪಾರ ಶಕ್ತಿಗಳೊಂದಿಗಿನ ಪ್ರೀತಿ- ದ್ವೇಷದ ಸಂಬಂಧಗಳ ಕಥಾನಕಗಳಾಗಿದ್ದವು. ಅಕ್ಬರನ ಜೀವನಚರಿತ್ರೆಕಾರ ಅಬುಲ್ ಫಝಲ್ ತಮ್ಮ ಐನೆ ಅಕ್ಬರಿಯಲ್ಲಿ ಹೀಗೆ ಬರೆಯುತ್ತಾರೆ: ‘ಹಜ್ಜಾಜ್ಗಳ ಪ್ರಯಾಣದ ಹಾದಿಯಲ್ಲಿ ಪೋರ್ಚುಗೀಸರು ಅಡಚಣೆಗಳಾಗಿ ಮಾರ್ಪಟ್ಟರು.’ ಮೊಘಲ್ ಸಾಮ್ರಾಜ್ಯ ಹಜ್ಜ್ಗಾಗಿ ಎರಡು ಹಡಗುಗಳನ್ನು ನಿರ್ಮಿಸಿತ್ತು. ಅವುಗಳಿಗೆ ಇಲಾಹಿ ಮತ್ತು ಸಲೀಮಿ ಎಂದು ನಾಮಕರಣ ಮಾಡಲಾಗಿತ್ತು ಎಂದು ಖ್ಯಾತ ಇತಿಹಾಸಕಾರ್ತಿ ಶೀರಿನ್ ಮುಸ್ವಿ ವಿವರಿಸುತ್ತಾರೆ.
ಮುಂಗಾರು ಮಾರುತಗಳ ದೆಸೆಯಿಂದ ಹಿಂದೂ ಮಹಾಸಾಗರದಲ್ಲಿ ನಡೆಯುತ್ತಿದ್ದ ಈ ಪವಿತ್ರಯಾತ್ರೆ ಮತ್ತು ವ್ಯಾಪಾರದ ಕಾಲಗಳು ಎಲ್ಲರ ಊಹೆಗೆ ನಿಲುಕುವಂತಿತ್ತು. ಈ ಎಲ್ಲಾ ಸಂದರ್ಭಗಳಲ್ಲಿ ಮಕ್ಕಾದಿಂದ ಹಿಂತಿರುಗುವ ಯಾತ್ರಿಕರ ಜೊತೆಯಲ್ಲಿ ಚಿನ್ನ ಮತ್ತು ಇತರ ಸರಕುಗಳು ಸಹಜವಾಗಿದ್ದವು.
ಈ ಕಾರಣಕ್ಕಾಗಿಯೇ ಹಜ್ ಯಾತ್ರೆಯನ್ನು ವ್ಯಾಪಾರಿಗಳು ಮತ್ತು ಯಾತ್ರಿಕರು ವ್ಯಾಪಾರಕ್ಕೆ ಒಂದು ಅವಕಾಶವಾಗಿ ಕಂಡರು. ಈ ಅವಕಾಶ ಕೆಂಪು ಸಮುದ್ರ ಕೇಂದ್ರಿತವಾಗಿ ನಡೆಯುತ್ತಿದ್ದ ಕಡಲ್ಗಳ್ಳತನದ ಸಾಧ್ಯತೆಯನ್ನು ಸುಲಭಗೊಳಿಸಿತು. ಗಂಜ್ ಎ ಸವಾಯಿಯ ಬಗೆಗಿನ ಅಧ್ಯಯನಗಳು ದಕ್ಷಿಣ ಏಷ್ಯಾ ಮತ್ತು ಇಸ್ಲಾಮಿಕ್ ಪ್ರಪಂಚದ ನಡುವೆ ಹಜ್ಜ್ ನಿಂದ ರೂಪುಗೊಂಡ ವ್ಯಾಪಾರ ಜಾಲಗಳ ಬಗೆಗಿನ ತಿಳುವಳಿಕೆಯ ಕ್ಷಿತಿಜವನ್ನು ವಿಸ್ತರಿಸಲಿದೆ.
ಮೊಘಲರ ಗಂಜ್ ಎ ಸವಾಯಿ ಕಥನ
ಕಫಿ ಖಾನನ ಮುಂತಕಬುಲ್ ಲುಬಾಬ್ ಗ್ರಂಥವು 1722ರ ಗಂಜ್ ಎ ಸವಾಯಿ ಆಕ್ರಮಣದ ಬಗ್ಗೆ ಬೆಳಕು ಚೆಲ್ಲಿದೆ. ಕಫಿ ಖಾನ್ ಔರಂಗಜೇಬನ ಅನಧಿಕೃತ ಇತಿಹಾಸಕಾರ. ಮುಂತಕಬುಲ್ ಲುಬಾಬ್ನಲ್ಲಿ ಗಂಜ್ ಎ ಸವಾಯಿ ಇತಿಹಾಸವನ್ನು ವಿವರಿಸಲು ಹಲವು ಪುಟಗಳನ್ನು ಮೀಸಲಿಟ್ಟಿದ್ದಾರೆ ಕಫಿ ಖಾನ್. ಮೊಘಲ್ ಸಾಮ್ರಾಜ್ಯ ಹಜ್ಜ್ಗೆ ನೀಡಿದ ಪ್ರಾಮುಖ್ಯತೆಯನ್ನು ಅವರ ಬರಹ ಸಾರಿ ಹೇಳುತ್ತದೆ. ಕಫಿ ಖಾನರ ಪ್ರಕಾರ ಗಂಜ್ ಎ ಸವಾಯಿ ಸೂರತ್ನಿಂದ ಪ್ರಯಾಣಿಸಿದ ಅತಿದೊಡ್ಡ ಹಡಗು. ಪ್ರತೀ ವರ್ಷ ಯಾತ್ರಿಕರೊಂದಿಗೆ ಇದು ಮಕ್ಕಾಗೆ ಹೊರಡುತ್ತಿತ್ತು. ಅರೇಬಿಯಾದ ಮಕ್ಕಾ ಮತ್ತು ಜಿದ್ದಾ ಬಂದರುಗಳಲ್ಲಿ ವ್ಯಾಪಾರ ಮುಗಿಸಿ ಐವತ್ತೆರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯೊಂದಿಗೆ ಗಂಜ್ ಎ ಸವಾಯಿ ಹಿಂದಿರುಗುತ್ತಿತ್ತು.
ಗಂಜ್ ಎ ಸವಾಯಿ ಲೂಟಿಯ ಬಗೆಗಿನ ಮೊಘಲರ ಕಥನವನ್ನು ಮುಂತಕಬುಲ್ ಲುಬಾಬ್ ಹೀಗೆ ವಿವರಿಸಿದೆ: ‘ಸೂರತ್ನಿಂದ ಹೊರಟು ಎಂಟು ಅಥವಾ ಒಂಬತ್ತು ದಿನಗಳ ಯಾತ್ರೆಯ ತರುವಾಯ ಒಂದು ಇಂಗ್ಲಿಷ್ ಹಡಗು ಕಾಣಿಸಿಕೊಂಡಿತು. ಕಡಲುಗಳ್ಳರ ಹಡಗು ಎಂದು ಗುರುತಿಸಿದ ತಕ್ಷಣ, ಅದರ ಮೇಲೆ ಗುಂಡಿನ ದಾಳಿ ಪ್ರಾರಂಭಿಸಿದೆವು. ಆದರೆ ದುರದೃಷ್ಟವಶಾತ್ ಹಡಗಿನ ಒಂದು ಫಿರಂಗಿ ಸ್ಫೋಟಗೊಂಡಿತು ಮತ್ತು ಅನೇಕ ಪ್ರಯಾಣಿಕರು ಪ್ರಾಣ ಕಳೆದುಕೊಂಡರು.
ತಕ್ಷಣವೇ ಕಡಲುಗಳ್ಳರ ಹಡಗು ಫ್ಯಾನ್ಸಿ ಪ್ರತಿದಾಳಿಯನ್ನು ಮುಂದುವರೆಸಿತು ಮತ್ತು ಗಂಜ್ ಎ ಸವಾಯಿಯ ಮುಖ್ಯ ಮಾಸ್ಟ್(ಹಡಗಿನ ಕಂಬ) ಅನ್ನು ನಾಶಪಡಿಸಿತು. ಸರಕು ಮತ್ತು ಸಂಪತ್ತನ್ನು ಫ್ಯಾನ್ಸಿ ಹಡಗಿಗೆ ವರ್ಗಾಯಿಸಿದರು. ಒಡವೆಗಳ ಜೊತೆಗೆ ಹಡಗಿನಲ್ಲಿದ್ದ ಪ್ರಯಾಣಿಕರನ್ನು ಕೈದಿಗಳಾಗಿ ಬಂಧಿಸಲಾಯಿತು. ಎಲ್ಲಾ ಮಹಿಳೆಯರನ್ನು ಅತ್ಯಾಚಾರಗೈದರು ಮತ್ತು ಪುರುಷರನ್ನು ತೀವ್ರ ಚಿತ್ರಹಿಂಸೆಗೆ ಒಳಪಡಿಸಿದರು. ಅನೇಕ ಮಹಿಳೆಯರು ತಮ್ಮ ಚಾರಿತ್ರ್ಯ ಕಾಪಾಡಿಕೊಳ್ಳಲು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.
ಸದರಿ ದಾಖಲೆಗಳಲ್ಲಿ ಮುಖ್ಯವಾಗಿ ಗಂಜ್ ಎ ಸವಾಯಿಗೆ ಸಂಬಂಧಿಸಿದ ಘಟನೆಗಳು ಮಾತ್ರ ಲಭ್ಯವಿದ್ದು ಕೆಲವು ದಕ್ಷಿಣ ಏಷ್ಯನ್ ಮೂಲಗಳು ಆಗಿನ ಕಾಲದ ಹಜ್ಜ್ ಹಾಗೂ ಹಡಗು ನಿರ್ಮಾಣದ ಮಾಹಿತಿಯನ್ನು ಕೂಡಾ ಒದಗಿಸುತ್ತವೆ. ಈ ದಾಖಲೆಗಳು ಈ ಘಟನೆಯ ನಂತರ ಹಳಸಿದ ಮೊಘಲ್-ಈಸ್ಟ್ ಇಂಡಿಯಾ ಕಂಪೆನಿ ಸಂಬಂಧಗಳು ಮತ್ತು ಹಜ್ಜ್ ಋತುವಿನಲ್ಲಿ ಪ್ರವರ್ಧಮಾನಕ್ಕೆ ಬಂದ ವ್ಯಾಪಾರ ಸಂಬಂಧಗಳ ಬಗ್ಗೆ ಮಾಹಿತಿ ಒದಗಿಸುತ್ತವೆ. ಕಫಿ ಖಾನನ ದಾಖಲೆಗಳ ಹೊರತಾಗಿ, ಘಟನೆಗೆ ಸಾಕ್ಷಿಯಾದ ಇಂಗ್ಲಿಷ್ ಕಡಲ್ಗಳ್ಳರ ಹೇಳಿಕೆಗಳು ಕೂಡಾ ಚಾರಿತ್ರಿಕ ಆಧಾರಗಳಾಗಿವೆ.
ದರೋಡೆಕೋರರ ತಪ್ಪೊಪ್ಪಿಗೆಗಳು:
ವರ್ಷಗಳ ನಂತರ ಸೆರೆ ಹಿಡಿಯಲ್ಪಟ್ಟಾಗ ಈ ಹಡಗಿನ ಯಾತ್ರಿಕರು ಓಲ್ಡ್ ಬೈಲಿಯಲ್ಲಿ ನೀಡಿದ ಸಾಕ್ಷ್ಯಗಳ ಪ್ರಕಾರ ಈ ಎಲ್ಲಾ ಘಟನೆಗಳು 1694ರ ಮೇ 30ರಂದು ಸ್ಪೇನ್ ಕರಾವಳಿಯಲ್ಲಿ ಆರಂಭವಾಯಿತು. ಚಾರ್ಲ್ಸ್ ದಿ ಸೆಕೆಂಡ್ ಹಡಗಿನಲ್ಲಿದ್ದ ವೇತನರಹಿತ ಕೆಲಸಗಾರರು ಹೆನ್ರಿ ಎವೆರಿ ನೇತೃತ್ವದಲ್ಲಿ ಸಂಘಟಿಸಿ ಬಂಡಾಯದ ಬಾವುಟ ಹಾರಿಸಿದರು. ವಶಪಡಿಸಿಕೊಂಡ ಹಡಗಿಗೆ ಫ್ಯಾನ್ಸಿ ಎಂದು ಮರುನಾಮಕರಣ ಮಾಡಿದರು. ಎವೆರಿಯ ನೇತೃತ್ವದಲ್ಲಿ ನಲ್ವತ್ತು ಫಿರಂಗಿಗಳೊಂದಿಗೆ ಹಡಗು ಯಾತ್ರೆ ಹೊರಟಿತು. ದಕ್ಷಿಣ ಆಫ್ರಿಕಾದ ಕರಾವಳಿಯಲ್ಲಿ ಸಣ್ಣ ಪುಟ್ಟ ಹಡಗುಗಳನ್ನು ಲೂಟಿ ಮಾಡಿದ ನಂತರ, ಅದು ಮಡಗಾಸ್ಕರ್ ಬಳಿಯ ಜೊಹಾನ್ನಾ ದ್ವೀಪ ತಲುಪಿತು. ಈ ದ್ವೀಪ ದಕ್ಷಿಣ ಏಷ್ಯಾ ವ್ಯಾಪಾರ ಮಾರ್ಗದ ಗೋದಾಮು ಎಂದು ಕರೆಯಲಾಗುವ ಸೂರತ್ ಗೆ ಹೋಗುವ ದಾರಿಯಲ್ಲಿದೆ. ಹೆನ್ರಿ ಎವೆರಿ ತನ್ನ ಸ್ವಗತಗಳನ್ನು ಜಗತ್ತಿಗೆ ಘೋಷಿಸಿಕೊಂಡದ್ದು ಇಲ್ಲಿಂದಲೇ.
ಫೆಬ್ರವರಿ 29, 1695ರಂದು, ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಹಸ್ತಾಂತರಿಸಲು ಒಂದು ಪತ್ರವನ್ನು ಅಲ್ಲಿನ ಆಡಳಿತಾಧಿಕಾರಿಗೆ ಬರೆದು ಕೊಟ್ಟು ಎವೆರಿ ತನ್ನ ಸಮುದ್ರಯಾನವನ್ನು ಮುಂದುವರಿಸಿದನು. ಅವನ ಹಡಗಿನಲ್ಲಿ 46 ಬಂದೂಕುಗಳು ಮತ್ತು 150 ಕೆಲಸಗಾರರು ಇದ್ದಾರೆಂದು ಹೇಳಿಕೊಂಡಿದ್ದ ಹೆನ್ರಿ ಇಂಗ್ಲಿಷ್ ಮತ್ತು ಡಚ್ ಹಡಗುಗಳ ಮೇಲೆ ತಾನು ದಾಳಿ ಮಾಡಲಾರೆ, ಅದು ತನ್ನ ಗುರಿಯೂ ಅಲ್ಲ ಎಂದು ವಿವರಿಸಿದ್ದ. ಐರೋಪ್ಯರ ಪ್ರಯಾಣಿಕ ಹಡಗುಗಳನ್ನು ಗುರಿ ಮಾಡಿದರೆ ತನ್ನ ಕಡಲ್ಗಳ್ಳತನಕ್ಕೆ ತೊಂದರೆ ಉಂಟಾಗುತ್ತದೆ ಎಂದು ಆತ ಭಾವಿಸಿದ್ದ. ಹೀಗೆ, ಹೆನ್ರಿ ಎವೆರಿ ಇಂಗ್ಲಿಷ್ ಹಡಗುಗಳನ್ನು ತಾನು ದಾಳಿ ಮಾಡಿದ್ದನ್ನು ಮುಚ್ಚಿಡಲು ಪ್ರಯತ್ನಿಸಿದ್ದ.
ಎವರಿಯ ಪತ್ರವು ಸೂಚಿಸುವಂತೆ, ಅವನ ಮತ್ತು ಇತರ ಕೆಲವರ ದೃಷ್ಟಿಯಲ್ಲಿ ಮುಸ್ಲಿಮ್ ಹಡಗುಗಳ ಮೇಲೆ ದಾಳಿ ಮಾಡುವುದು ಕ್ಷಮಾರ್ಹ ಅಪರಾಧವಾಗಿದೆ ಎಂದು ತಿಳಿಯಬಹುದು. ಸ್ಪೇನ್ ಕರಾವಳಿಯಿಂದ ಕೆಂಪು ಸಮುದ್ರದ ಕಡೆಗೆ ಕಡಲ್ಗಳ್ಳತನ ಉದ್ದೇಶಿಸಿ ತೆರಳಿದ ಹೆನ್ರಿಯ ಪ್ರಯಾಣದ ಹಿಂದೆ ಈ ಅಸಡ್ಡೆಯ ನಿಲುವಿಗೆ ಪಾತ್ರವಿದೆ. ಬ್ರಿಟಿಷ್ ಮತ್ತು ಡಚ್ ಹಡಗುಗಳನ್ನು ಮುಟ್ಟದೆ ಮುಸ್ಲಿಮ್ ಹಡಗುಗಳ ಮೇಲೆ ಮಾತ್ರ ಗಮನ ಹರಿಸಿದರೆ ಯಾವತ್ತಾದರೊಮ್ಮೆ ಕಳ್ಳತನ ನಿಲ್ಲಿಸಿ ಇಂಗ್ಲೆಂಡಿಗೆ ಮರಳುವಾಗ ಶಿಕ್ಷೆಯಲ್ಲಿ ವಿನಾಯಿತಿ ಪಡೆಯಬಹುದು ಎಂದು ಬಗೆದಿದ್ದರು ಹೆನ್ರಿ ಮತ್ತು ಅವನ ಸಂಗಡಿಗರು.
ಜೋಹಾನ್ನಾ ದ್ವೀಪದ ಆಡಳಿತಗಾರನ ಕೈಗೆ ಪತ್ರವನ್ನು ಒಪ್ಪಿಸಿ ಮಡಗಾಸ್ಕರ್ನ ಸೇಂಟ್ ಮೇರಿಸ್ ದ್ವೀಪಲ್ಲಿರುವ ತನ್ನ ನೆಲೆಯಿಂದ ಎವೆರಿ ನಿರ್ಗಮಿಸಿದ. ಇಂದಿನ ಸೋಮಾಲಿಲ್ಯಾಂಡ್ನಲ್ಲಿರುವ ಮೈಡ್ ನಗರವನ್ನು ಲೂಟಿಮಾಡಿದ ನಂತರ ಕೆಂಪು ಸಮುದ್ರ ತೀರದ ಮೂಲಕ ಹಾದು ಹೋಗುವ ಹಜ್ಜ್ ಯಾತ್ರಿಕ ಹಡಗುಗಳಿಗಾಗಿ ಕಾಯತೊಡಗಿದ. ಫ್ಯಾನ್ಸಿ ಜೊತೆಗೆ ಇತರ ಐದು ಹಡಗುಗಳೊಂದಿಗೆ ಅವರು ಐದು ವಾರಗಳ ಕಾಲ ಹಜ್ಜ್ ಯಾತ್ರಿಕರ ಹಡಗುಗಳಿಗಾಗಿ ಕಾದು ಕುಳಿತಿದ್ದರು. ಸಾಕ್ಷ್ಯಾಧಾರಗಳ ಪ್ರಕಾರ ಅವರು ಮೊದಲು ಗುರುತಿಸಿದ್ದು ಗನ್ಸ್ ವೇ (ಗಂಜ್ ಎ ಸವಾಯಿ)ಯನ್ನು. ಎರಡು ಗಂಟೆಗಳ ಕಾಲ ಮುಂದುವರಿದ ಕದನದ ನಂತರ ಅವರು ಅದನ್ನು ವಶಪಡಿಸಿಕೊಂಡು ಲೂಟಿ ಮಾಡಿ, ಸೂರತ್ಗೆ ವಾಪಸ್ ಕಳುಹಿಸಿದ್ದರು. ಎವೆರಿಯ ಸಿಬ್ಬಂದಿ ಮತ್ತು ಸಾಕ್ಷಿಯಾಗಿರುವ ಫಿಲಿಪ್ ಮಿಡಲ್ಟನ್ ಹಲವಾರು ವರ್ಷಗಳ ನಂತರ ಬರೆದ ಪತ್ರವು ಈ ಘಟನೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.
ಗಂಜ್ ಎ ಸವಾಯಿ ಮೇಲಿನ ದಾಳಿ ನಡೆದು ಒಂದು ವರ್ಷ ಕಳೆದ ನಂತರ ವಿಚಾರಣೆಗೂ ಮೊದಲು, ಆಗಸ್ಟ್ 1696ರಲ್ಲಿ ಬರೆದ ಹೇಳಿಕೆಯಲ್ಲಿ ಫಿಲಿಪ್ ಬರೆಯುತ್ತಾರೆ: ‘ಮಕ್ಕಾದಿಂದ ಸೂರತ್ಗೆ ಹೊರಟಿದ್ದ ಎರಡು ಶ್ರೀಮಂತ ಹಡಗುಗಳ ಮಾಹಿತಿಯನ್ನು ಪಡೆದ ನಂತರ ನಾವು ಕೆಂಪು ಸಮುದ್ರದಲ್ಲಿ ಆ ಹಡಗಿಗಾಗಿ ಕಾದುಕುಳಿತೆವು. ಹಡಗುಗಳು ಕಾಣಿಸಿಕೊಂಡ ತಕ್ಷಣ ಪ್ರಾರಂಭಿಸಿದ ದಾಳಿ ಎರಡು ಗಂಟೆಗಳ ಕಾಲ ನಡೆಯಿತು. ಹಡಗುಗಳಲ್ಲಿ 1300 ಮತ್ತು 700 ಪ್ರಯಾಣಿಕರಿದ್ದರು.’
ಮುಂದುವರಿದು, ‘ದರೋಡೆಕೋರರು ಪ್ರಯಾಣಿಕರನ್ನು ಮತ್ತು ಹಡಗನ್ನು ಎರಡು ದಿನಗಳ ಕಾಲ ಸಮುದ್ರದಲ್ಲಿ ತಮ್ಮ ಸುಪರ್ದಿಯಲ್ಲಿರಿಸಿಕೊಂಡರು. ಸಂಪತ್ತನ್ನೆಲ್ಲಾ ಲೂಟಿ ಮಾಡಿದರು. ಅವರ ಜತೆ ಮೊಘಲ್ ರಾಜ ಔರಂಗಜೇಬನಿಗೆ ಸೇರಿದ ಅನೇಕ ಅಮೂಲ್ಯವಾದ ಸಂಪತ್ತುಗಳಿದ್ದವು. ಹಡಗಿನಲ್ಲಿದ್ದ ಹಲವು ಮಂದಿ ಪ್ರಾಣ ಕಳೆದುಕೊಂಡರು. ಮಹಿಳೆಯರನ್ನು ಹಡಗಿನಲ್ಲೇ ಅತ್ಯಾಚಾರ ಮಾಡಲಾಯಿತು. ಮುಸ್ಲಿಮ್ ಮಹಿಳೆಯರು ಆಭರಣಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದರು’ ಎಂದು ಫಿಲಿಪ್ ಉಲ್ಲೇಖಿಸುತ್ತಾರೆ. ಈ ಉಲ್ಲೇಖವು ಹಡಗಿನಲ್ಲಿ ಪ್ರಯಾಣಿಸಿದ ಮಹಿಳೆಯರ ಉನ್ನತ ಜಾತಿಯ ಬಗೆಗೂ ಬೆಳಕು ಚೆಲ್ಲುತ್ತದೆ.
ಫಿಲಿಪ್ ಮಿಡಲ್ಟನ್ ಅವರ ಸಾಕ್ಷ್ಯದಿಂದ, ಹಜ್ಜ್ ನಂತರ ಬರುವ ಮೊಘಲ್ ಹಡಗುಗಳಲ್ಲಿನ ಸಂಪತ್ತಿನ ಬಗ್ಗೆ ಕಡಲ್ಗಳ್ಳರು ಮೊದಲೇ ತಿಳಿದಿದ್ದರು ಎಂದು ತಿಳಿಯಬಹುದು. ಏಕೆಂದರೆ, ಹಜ್ಜ್ ಯಾತ್ರೆಯ ನಂತರ ಯಾತ್ರಿಕರು ಮಿನಾದಲ್ಲಿನ ದೊಡ್ಡ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಹಿಂತಿರುಗುತ್ತಾರೆ ಎಂದು ಅವರಿಗೆ ತಿಳಿದಿತ್ತು. ಹಡಗುಗಳಲ್ಲಿನ ಮಾಹಿತಿಗಳನ್ನು ಗುಪ್ತಚರರ ಮೂಲಕವೂ ಕಡಲ್ಗಳ್ಳರಿಗೆ ತಿಳಿಯಬಹುದಾಗಿತ್ತು.
ಔರಂಗಜೇಬರ ಪ್ರತಿಕ್ರಿಯೆ:
ಕ್ರಿ.ಶ. 1695ರಲ್ಲಿ ಮೊಘಲ್ ಸಾಮ್ರಾಟ ಔರಂಗಜೇಬ್ ಸೂರತ್ ಬಂದರನ್ನು ಬ್ರಿಟಿಷರಿಗೆ ನಿಷೇಧಿಸಿ ಆದೇಶ ಹೊರಡಿಸಿದರು. ಆ ಆದೇಶದಲ್ಲಿ ಔರಂಗಜೇಬ್ ಹೀಗೆ ಹೇಳುತ್ತಾರೆ: ‘ಅವರು (ಬ್ರಿಟಿಷರು) ಹಡಗುಗಳನ್ನು ಮತ್ತು ಹೇರಳ ಸಂಪತ್ತನ್ನು ಲೂಟಿ ಮಾಡಿದ್ದರಿಂದ ಅವರ ಮೇಲೆ ವ್ಯಾಪಾರ ನಿಷೇಧ ಹೇರಲಾಗಿದೆ.’ ಹೀಗೆ, ಕಡಲ್ಗಳ್ಳತನವನ್ನು ನಿವಾರಿಸಿ ಹಜ್ಜ್ ಯಾತ್ರಿಕರನ್ನು ರಕ್ಷಿಸುವುದಕ್ಕಾಗಿ ಯುರೋಪಿಯನ್ ರಾಷ್ಟ್ರಗಳ ವಿರುದ್ಧ ಕ್ರಮ ಕೈಗೊಳ್ಳಲು ಔರಂಗಜೇಬ್ ಮೂಲಕ ಮೊಘಲ್ ಆಡಳಿತ ಮುಂದಾಯಿತು.
ಗಂಜ್ ಎ ಸವಾಯಿ ಮೇಲಿನ ದಾಳಿಯೇ ಔರಂಗಜೇಬರ ಕೋಪಕ್ಕೆ ಕಾರಣ ಎಂದು ನಂಬಲಾಗಿದೆ. ಫ್ಯಾನ್ಸಿಯ ಮತ್ತೊಂದು ಸಿಬ್ಬಂದಿ ಜಾನ್ ಡನ್ ಹೇಳಿದಂತೆ ಎರಡು ಗಂಟೆಗಳೊಳಗೆ ಹಡಗನ್ನು ವಶಪಡಿಸಿಕೊಂಡು ಲೂಟಿ ಮಾಡಲಾಗಿತ್ತು. ಅದರ ನಂತರ, ಉಳಿದ ಪ್ರಯಾಣಿಕರನ್ನು ಹಡಗಿನಲ್ಲೇರಿಸಿ ಹಡಗನ್ನು ಸೂರತ್ಗೆ ಕಳುಹಿಸಲಾಯಿತು. ಸೂರತ್ಗೆ ತಲುಪಿದ ಸಂತ್ರಸ್ತರಿಂದ ಪಡೆದ ಮಾಹಿತಿಗಳು ಮೊಘಲ್ ಆಡಳಿತದ ಉನ್ನತಾಧಿಕಾರ ಕೇಂದ್ರಗಳಿಗೆ ತ್ವರಿತವಾಗಿ ತಲುಪಿದವು. ಹಡಗನ್ನು ಧ್ವಂಸಗೊಳಿಸಿರುವುದು ಮಾತ್ರವಲ್ಲದೆ ಪ್ರಯಾಣಿಕರ ಮೇಲೆ ಕ್ರೂರವಾಗಿ ಅತ್ಯಾಚಾರವೆಸಗಿರುವುದು ವಿಷಯದ ಗಂಭೀರತೆಯನ್ನು ಹೆಚ್ಚಿಸಿತು. ಔರಂಗಜೇಬರು ಹಡಗುಗಳ ಲೂಟಿಯ ಹೊಣೆಗಾರಿಕೆಯನ್ನು ಹೆನ್ರಿ ಎವೆರಿ ನೇತೃತ್ವದ ಇಂಗ್ಲಿಷರ ಮೇಲೆ ಹೊರಿಸಿದರು. ಈ ಕಾರಣಕ್ಕಾಗಿಯೇ ಸೂರತ್ ಬಂದರಿನಲ್ಲಿ ಆಂಗ್ಲರಿಗೆ ನಿಷೇಧ ಹೇರಲಾಯಿತು. ಆದಾಗ್ಯೂ, ಲಭ್ಯವಿರುವ ಯಾವುದೇ ಹೇಳಿಕೆಗಳಲ್ಲಿ ಗಂಜ್ ಎ ಸವಾಯಿ ಮೇಲೆ ದಾಳಿ ಮಾಡಿದ ಹಡಗು ಇಂಗ್ಲಿಷ್ ಧ್ವಜವನ್ನು ಹಾರಿಸಿರುವುದನ್ನು ಉಲ್ಲೇಖಿಸಲಾಗಿಲ್ಲ. ಆಗ ಇಂಗ್ಲಿಷ್ ಪ್ಯೂರಿಟನ್ ಪಾದ್ರಿಯ ಮಗನಾದ ಸ್ಯಾಮ್ಯುಯೆಲ್ ಸೂರತ್ನಲ್ಲಿ ಭಾರತೀಯ ಈಸ್ಟ್ ಇಂಡಿಯಾ ಕಂಪೆನಿ ಅಧಿಕಾರಿಯಾಗಿದ್ದರು. ಈ ಘಟನೆಯ ನಂತರ ಆಗಾಗ್ಗೆ ಬಂಧನಗಳು ನಡೆದಿದ್ದು ಇದು ಕಡಲ್ಗಳ್ಳತನ ವಿರೋಧಿ ಮೊಘಲ್ ಪ್ರತಿಕ್ರಿಯೆಯ ಭಾಗವಾಗಿತ್ತು.
ಆನೆಸ್ಲಿಯವರ ದಾಖಲೆಗಳ ಪ್ರಕಾರ: ‘ಹಡಗು ಗಾಯಾಳುಗಳೊಂದಿಗೆ ಸೂರತ್ಗೆ ಮರಳಿತು. ಹಡಗಿನಲ್ಲಿದ್ದ ಎಲ್ಲಾ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗಿತ್ತು. ಲೂಟಿಯ ಆರೋಪ ಬ್ರಿಟಿಷ್ ಪ್ರತಿನಿಧಿಗಳ ಮೇಲೆ ಬಿತ್ತು.’ ಈಸ್ಟ್ ಇಂಡಿಯಾ ಕಂಪೆನಿ ಮತ್ತು ಆಂಗ್ಲರ ಮೇಲೆ ದಾಳಿಯ ಹೊಣೆಗಾರಿಕೆಯನ್ನು ಮೊಘಲ್ ಆಡಳಿತ ಹೊರಿಸಿತ್ತು ಎನ್ನುವುದನ್ನು ಆನ್ನೆಸ್ಲಿ ದಾಖಲೆಗಳು ಕೂಡಾ ಹೇಳುತ್ತವೆ. ತಮ್ಮ ದೇಶದ ನಿವಾಸಿಯಾದ ಎವೆರಿಯ ಕಡಲ್ಗಳ್ಳತನವನ್ನು ನಿಯಂತ್ರಿಸುವಲ್ಲಿ ಅವರು ವಿಫಲರಾಗಿದ್ದರು. ಹೀಗೆ ಗಂಜ್ ಎ ಸವಾಯಿ ದರೋಡೆ ಮೊಘಲ್ ಆಡಳಿತದ ಗಮನವನ್ನು ಸೆಳೆದಿತ್ತು. ಈಸ್ಟ್ ಇಂಡಿಯಾ ಕಂಪೆನಿಯ ಮೇಲೆ ಮೊಘಲರ ಹೆಚ್ಚು ಒತ್ತಡ ಇದ್ದುದರಿಂದ ಈಸ್ಟ್ ಇಂಡಿಯಾ ಕಂಪೆನಿ ಫ್ಯಾನ್ಸಿಯ ಕಾರ್ಮಿಕರನ್ನು ಬಲೆ ಹಾಕಿ ಹಿಡಿಯಿತು. ಆದರೆ ಡಕಾಯಿತರ ನಾಯಕ ಎವರಿ ಅದಾಗಲೇ ಅಮೆರಿಕಕ್ಕೆ ಪರಾರಿಯಾಗಿದ್ದ. ಅದಾಗ್ಯೂ, ಮೊಘಲರು ಮತ್ತು ಆಂಗ್ಲರ ನಡುವೆ ಭುಗಿಲೆದ್ದಿದ್ದ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಕಡಲ್ಗಳ್ಳತನದಲ್ಲಿ ಶಾಮೀಲಾಗಿದ್ದ ಆರು ನಾವಿಕರನ್ನು ಆಂಗ್ಲರು ಸೆರೆಹಿಡಿದರು. ಸೆರೆಹಿಡಿಯಲ್ಪಟ್ಟ ಆರು ಮಂದಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಆದರೆ, ಗಂಜ್ ಎ ಸವಾಯಿ ದರೋಡೆ ಬ್ರಿಟಿಷ್ ಕಾನೂನು ಪ್ರಕಾರ ಅಪರಾಧವಾಗಿರಲಿಲ್ಲ; ಚಾರ್ಲ್ಸ್ ದಿ ಸೆಕೆಂಡ್ನಲ್ಲಿ ದಂಗೆಯನ್ನು ಪ್ರಚೋದಿಸಿದ್ದಕ್ಕಾಗಿ ಮತ್ತು ಎವರಿಯ ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡಿದ್ದಕಾಗಿ ತಪ್ಪಿತಸ್ಥರೆಂದು ಘೋಷಿಸಲಾಯಿತು.
ಕಪ್ತಾನನ ಟಿಪ್ಪಣಿಗಳು:
ಗಂಜ್ ಎ ಸವಾಯಿ ಹಡಗಿನ ಕ್ಯಾಪ್ಟನ್ ಪರ್ಷಿಯನ್ ಭಾಷೆಯಲ್ಲಿ ಬರೆದ ಪತ್ರ ಬ್ರಿಟಿಷ್ ಲೈಬ್ರರಿಯಲ್ಲಿದೆ. ಆದರೆ ಈ ದಾಖಲೆಯನ್ನು ಇತಿಹಾಸಕಾರರು ನಿರ್ಲಕ್ಷಿಸಿದ್ದಾರೆ. ಈ ಪತ್ರ ಮೊಘಲ್ ಚಕ್ರವರ್ತಿ ಔರಂಗಜೇಬರು ಘಟನೆಗೆ ಹೇಗೆ ಪ್ರತಿಕ್ರಿಯೆ ನೀಡಿದ್ದರೆನ್ನುವುದನ್ನು ಸ್ಪಷ್ಟಪಡಿಸುತ್ತದೆ. ಮೊಘಲ್ ಇತಿಹಾಸಕಾರ ಕಫಿ ಖಾನ್ ಕೂಡಾ ಕಪ್ತಾನನ ಹೆಸರು ಇಬ್ರಾಹಿಂ ಖಾನ್ ಎಂದು ದೃಢಪಡಿಸಿದ್ದಾರೆ. ಹಸ್ತಪ್ರತಿಯಲ್ಲಿ ಹಡಗಿನ ಹೆಸರನ್ನು ಗಂಜ್ ಎ ಸವಾಯಿ ಹಾಗೂ ಜಹಾಝ್ ಎ ಮುಬಾರಕ್ (ಪವಿತ್ರ ಹಡಗು) ಎಂದು ಉಲ್ಲೇಖಿಸಲಾಗಿದೆ. ಮಕ್ಕಾದಿಂದ ಗಂಜ್ ಎ ಸವಾಯಿಯ ನಿರ್ಗಮನವನ್ನು ಉಲ್ಲೇಖಿಸುತ್ತಾ ತನ್ನ ಪತ್ರವನ್ನು ಪ್ರಾರಂಭಿಸುತ್ತಾರೆ ಕ್ಯಾಪ್ಟನ್ ಇಬ್ರಾಹಿಂ. ಸೋಕಾಟ್ರ ದ್ವೀಪದಿಂದ ಇಂಗ್ಲಿಷ್ ಹಡಗುಗಳ ಬಗೆಗಿನ ಮಾಹಿತಿ ಸಿಕ್ಕಿದಾಗ ಬೇರೆ ಮಾರ್ಗದಲ್ಲಿ ಯಾತ್ರೆ ಮುಂದುವರಿಸಿದ್ದೆವೆಂದು ಹೇಳಿದ್ದಾರೆ. ಅವರ ಪ್ರಕಾರ, ಗಂಜ್ ಎ ಸವಾಯಿಯ ಭದ್ರತೆಗಾಗಿ ಇನ್ನೊಂದು ಹಡಗು ಸೂರತ್ನ ಮೊಘಲ್ ಬಂದರಿನಿಂದ ಯೆಮೆನ್ನ ಮೊಕ್ಕಾ ಬಂದರಿನವರೆಗೆ ಹಿಂಬಾಲಿಸುತ್ತಿತ್ತು. ಮೊಕ್ಕಾದ ಈ ಬಂದರು ಕೆಂಪು ಸಮುದ್ರದ ಮುಖಭಾಗದಲ್ಲಿತ್ತು. ಇದನ್ನು ಇಂದು ಬಾಬುಲ್ ಮಂದಾಬ್ ಎಂದು ಕರೆಯಲಾಗುತ್ತದೆ.
ಹಡಗಿನ ಕ್ಯಾಪ್ಟನ್ ಇಬ್ರಾಹಿಂ ಅವರ ಪ್ರಕಾರ ಈ ಸ್ಥಳ ಸಂಪತ್ತಿನ ಹೆಬ್ಬಾಗಿಲು, ಆದರೆ ಹಡಗುಗಳಿಗೆ ಸ್ಮಶಾನಭೂಮಿ. ಗಂಜ್ ಎ ಸವಾಯಿ ಮತ್ತು ಜೊತೆಗಿದ್ದ ಹಡಗು (ಫತೇಹ್ ಮುಹಮ್ಮದ್) ಪರಸ್ಪರ ಭದ್ರತೆ ನೀಡುತ್ತಾ ಮುಂದುವರಿಯಲು ನಿರ್ಧರಿಸಿದವು. ಅಪಾಯಕಾರಿ ಬಾಬುಲ್ ಮಂದಾಬನ್ನು ಬಹುತೇಕ ದಾಟಿದ ನಂತರ ದರೋಡೆಕೋರ ಹಡಗುಗಳು ಗಂಜ್ ಎ ಸವಾಯಿ ಮತ್ತು ಅದರೊಂದಿಗೆ ಬಂದ ಹಡಗನ್ನು ಸುತ್ತುವರೆದು ದಾಳಿಯನ್ನು ಪ್ರಾರಂಭಿಸಿದವು. ಕ್ಯಾಪ್ಟನ್ ಮುಹಮ್ಮದ್ ಇಬ್ರಾಹಿಂ ಬರೆಯುತ್ತಾರೆ: ‘ ‘ಹಡಗಿನಲ್ಲಿದ್ದ ಹಲವು ಪ್ರಮುಖರು ಸಾವನ್ನಪ್ಪಿದರು. ನೂರ್ ಮುಹಮ್ಮದ್ ಮತ್ತವರ ಅಂಗರಕ್ಷಕರು ಹಾಗೂ ಸೈಯದ್ ಯೂಸುಫ್ ಮತ್ತು ಅವರ ಧರ್ಮಪತ್ನಿ ಮುಹಮ್ಮದ್ ಯೂಸುಫ್ ತುರಾಬಿ ಸೇರಿದಂತೆ 20 ಜನರು ಸಾವನ್ನಪ್ಪಿದರು; ಇಪ್ಪತ್ತು ಜನರು ಗಾಯಗೊಂಡರು. ಈ ಹಿಂಸಾಚಾರಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು, ನಾನೆ ಅವರನ್ನು ಬಗ್ಗುಬಡಿಯುತ್ತೇನೆಂದು ಆಗ್ರಹಿಸುತ್ತಾ ಕ್ಯಾಪ್ಟನ್ ಇಬ್ರಾಹೀಂ ತನ್ನ ಪತ್ರಕ್ಕೆ ವಿರಾಮ ಹಾಕುತ್ತಾರೆ.
ಮುಹಮ್ಮದ್ ಇಬ್ರಾಹಿಂ ನೀಡಿರುವ ದಾಖಲೆಗಳು ಆ ಸಮಯದಲ್ಲಿ ಹಿಂದೂ ಮಹಾಸಾಗರದಲ್ಲಿದ್ದ ಅತಿದೊಡ್ಡ ಹಜ್ಜ್ ಹಡಗಿನ ಸರಕು ಮತ್ತು ಪ್ರಯಾಣಿಕರ ಬಗ್ಗೆ ಮಾಹಿತಿ ನೀಡುತ್ತವೆ. ಹಡಗಿನ ಸಿಬ್ಬಂದಿಗಳ ಹೇಳಿಕೆಗಳ ಪ್ರಕಾರ, ಅಪಾರ ಆಸ್ತಿಯೊಂದಿಗೆ ಹಜ್ಜ್ ಮುಗಿಸಿ ಸೂರತ್ಗೆ ಹಿಂತಿರುಗಿದ ಗಂಜ್ ಎ ಸವಾಯಿಯ ಮೇಲೆ ದಾಳಿ ಮಾಡಲು ಅದು ಸೂಕ್ತ ಸಮಯವಾಗಿತ್ತು.
ಹಿಂದೂ ಮಹಾಸಾಗರದ ವಿದ್ವಾಂಸ ಮೈಕೆಲ್ ಪಿಯರ್ಸನ್ ಪ್ರಕಾರ, ಹಜ್ಜ್ ಯಾತ್ರಿಕರಲ್ಲಿ ಹೆಚ್ಚಿನವರು ಬಡವರಾಗಿದ್ದರು. ಬೃಹತ್ ಮೊತ್ತದ ಧನ ಖರ್ಚು ಮಾಡಿ ಹಜ್ಜ್ ಮುಗಿಸಿದ ನಂತರ ವ್ಯಾಪಾರ ಮಾಡಲು ಏನೇನೂ ಉಳಿಯುತ್ತಿರಲಿಲ್ಲ. ಆದ್ದರಿಂದಲೇ, ಅಂತರ್ ರಾಷ್ಟ್ರೀಯ ವ್ಯಾಪಾರ ಸಂಬಂಧಗಳಲ್ಲಿ ಮಕ್ಕಾ ನಗರಕ್ಕೆ ದೊಡ್ಡ ಪಾತ್ರವೇನಿಲ್ಲ. ಸಾಫಿ ಇಬ್ನ್ ವಾಲಿ ಅಲ್-ಕಝ್ವೀನಿಯ ಪ್ರಯಾಣ ಕಥನವನ್ನು ವಿಶ್ಲೇಷಿಸುತ್ತಾ ಪಿಯರ್ಸನ್ ಇದನ್ನು ಉಲ್ಲೇಖಿಸಿದ್ದಾರೆ. ಸಾಫಿ ಅವರ ವ್ಯಾಪಾರದಲ್ಲಿ ಔರಂಗಜೇಬ್ ಪುತ್ರಿ ಝೈಬುನ್ನಿಸ ಹೂಡಿಕೆ ಮಾಡಿದ್ದರು. ಸಾಫಿ ಮೊಘಲ್ ಪವಿತ್ರಯಾತ್ರಿಕರ ಮಾರ್ಗದರ್ಶಿ(guide) ಕೂಡಾ ಆಗಿದ್ದರು. ಸಾಫಿಯವರ ಗ್ರಂಥ 17ನೇ ಶತಮಾನದ ಕೊನೆಯಲ್ಲಿ ರಚಿತವಾದ ಅತ್ಯಂತ ಸುಂದರವಾದ ಕೃತಿಗಳಲ್ಲೊಂದು. ಹಜ್ಜ್ ಯಾತ್ರೆಗೆ ಬಂದು ವ್ಯಾಪಾರ ಮಾಡುವ ಪ್ರಯಾಣಿಕರ ಬಗ್ಗೆ ಅದರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸಾಫಿ.
ಸಾರಾಂಶ:
ಗಂಜ್ ಎ ಸವಾಯಿ ದಾಳಿಯ ಘಟನೆಗಳ ಸರಣಿಯ ತರುವಾಯ ಮೊಘಲ್ ಆಡಳಿತದ ಅತೀವ ಒತ್ತಡ ಇದ್ದುದರಿಂದ ಹಿಂದೂ ಮಹಾಸಾಗರದಲ್ಲಿ ಸಾಗುವ ಹಜ್ಜ್ ಹಡಗುಗಳನ್ನು ರಕ್ಷಿಸಲು ಯುರೋಪಿಯನ್ ಹಡಗುಗಳು ಮುಂದೆ ಬಂದವು. ಕ್ರಿ.ಶ. 1699ರಲ್ಲಿ, ಈಸ್ಟ್ ಇಂಡಿಯಾ ಕಂಪೆನಿಯು ಹಿಂದೂ ಮಹಾಸಾಗರದಲ್ಲಿನ ಕಡಲ್ಗಳ್ಳತನದ ವಿರುದ್ಧ ಸರ್ಕಾರದ ಬೆಂಬಲವನ್ನು ಕೋರಿ ಪತ್ರವನ್ನು ಬರೆಯಿತು. ಸಮುದ್ರದಲ್ಲಿ ದೌರ್ಜನ್ಯ ನಡೆದರೆ ಅದರ ಹೊಣೆ ನಾವು ಹೊತ್ತುಕೊಳ್ಳಬೇಕಿದ್ದು ಕಡಲ್ಗಳ್ಳತನವನ್ನು ಮಟ್ಟ ಹಾಕಬೇಕಾದ ಅಗತ್ಯ ಇದೆಯೆಂದು ಪತ್ರ ವಿವರಿಸಿತ್ತು.
ರೂಬಿ ಮಲೋನಿ ಅವರು ಹದಿನೇಳನೇ ಶತಮಾನದ ಸೂರತ್ನಲ್ಲಿನ ಕಾರ್ಖಾನೆಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಸ್ಥಳೀಯ ಸರಕುಗಳನ್ನು ಬ್ರಿಟಿಷ್ ಹಡಗುಗಳ ವ್ಯೂಹದೊಂದಿಗೆ ಸೇರಿಸಲು ಬೇಡಿದ್ದು ಕಾಣಬಹುದು. ಇದು ಕಡಲ್ಗಳ್ಳತನದಿಂದ ಅವರಿಗೆ ನೀಡಲಾಗಿದ್ದ ರಕ್ಷಣೆಯ ಭಾಗವಾಗಿತ್ತು. ಕ್ರಿ.ಶ 1698ರಲ್ಲಿ ಹೆನ್ರಿ ಎವೆರಿ ಹಡಗಿನಲ್ಲಿದ್ದ ಜಾನ್ ಎಲ್ಸ್ಟನ್ ಎಂಬ ವ್ಯಕ್ತಿಯನ್ನು ಬಂದರು ನಗರವಾದ ನ್ಯೂಜೆರ್ಸಿಯ ಪರ್ತ್ನಲ್ಲಿ ಸೆರೆಹಿಡಿಯಲಾಯಿತು. ಅವರ ಹೇಳಿಕೆಗಳು ಫಿಲಿಪ್ ಮಿಡಲ್ಟನ್ ಅವರ ಹೇಳಿಕೆಗಳೊಂದಿಗೆ ತಾಳೆಯಾಗುತ್ತಿವೆ.
ಮೊಘಲ್ ಯುಗದ ಆರಂಭಿಕ ಪವಿತ್ರಯಾತ್ರೆಗಳ ಇತಿಹಾಸದಲ್ಲಿ ಗಂಜ್ ಎ ಸವಾಯಿಯ ಕಥಾನಕ ಗಮನಾರ್ಹವಾಗಿದೆ. ಈ ದಾಖಲೆಗಳು ಹಜ್ಜ್ ಅವಧಿಯಲ್ಲಿ ಪ್ರತಿ ವರ್ಷವೂ ನಡೆಯುತಿದ್ದ ಹಿಂದೂ ಮಹಾಸಾಗರದ ವ್ಯಾಪಾರ ಮತ್ತು ಸರಕು ಸಾಗಣೆಯ ಸ್ಪಷ್ಟ ಚಿತ್ರವನ್ನು ನಮಗೆ ನೀಡುತ್ತದೆ. ಈ ಘಟನೆಗಳ ನಂತರ, ನಿಧಿಯನ್ನು ಹುಡುಕಾಡುವ ಯಾತ್ರೆಗಳು ಮತ್ತು ದರೋಡೆಗಳು ಇಂಗ್ಲಿಷ್ ಸಾಹಿತ್ಯ ಮತ್ತು ನಾಟಕಗಳಲ್ಲೂ ಕಾಣಿಸಿಕೊಂಡವು.
ಮೂಲ: ಟೇಲರ್ ಜೋಸೆಫ್ ಕ್ವಿನ್ ಕನ್ನಡಕ್ಕೆ: ಮುಹಮ್ಮದ್ ಯಾಸೀನ್ ಮಟ್ಟಂ