ಪವಿತ್ರ ಖುರ್‌ಆನ್ ಮತ್ತು ಸಾವಿರದ ಒಂದು ರಾತ್ರಿಗಳು ಎಂಬೆರಡು ಕೃತಿಗಳನ್ನು ಬಿಟ್ಟರೆ ಅರೇಬಿಕ್ ಭಾಷೆಯಿಂದ ಇತರ ಭಾಷೆಗಳಿಗೆ ಅತ್ಯಂತ ಹೆಚ್ಚು ಅನುವಾದಿಸಲ್ಪಟ್ಟ ಕೃತಿ ಹಯ್ಯ್ ಬಿನ್ ಯಖ್ಲಾನ್ ಎನ್ನಬಹುದು. ಫಿಲಾಸಫಸ್ ಆಟೋಡಿಡಾಕ್ಟಸ್ ಎಂದು ಲ್ಯಾಟಿನ್ ಭಾಷೆಯಲ್ಲಿ ವಿಖ್ಯಾತಿ ಪಡೆದಿರುವ ಈ ಕೃತಿ ಮೊದಲ ಅರೇಬಿಕ್ ಕಾದಂಬರಿ ಕೂಡಾ ಹೌದು. ಹನ್ನೆರಡನೆಯ ಶತಮಾನದಲ್ಲಿ ಗ್ರ್ಯಾನಡಾದಲ್ಲಿ ನೆಲೆಸಿ ವಿಜ್ಞಾನ, ತತ್ತ್ವಶಾಸ್ತ್ರ, ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅಬೂ ಬಝಾರ್ ಎಂದು ಪಾಶ್ಚಾತ್ಯರು ಕರೆಯುವ ಅಬೂಬಕರ್ ಇಬ್ನ್ ತುಫೈಲ್ ಈ ಕೃತಿಯ ಗ್ರಂಥಕರ್ತರ ಹೆಸರು.
ಅವರ ಪೂರ್ಣ ಹೆಸರು ಅಬೂಬಕರ್ ಮುಹಮ್ಮದ್ ಬಿನ್ ಅಬ್ದುಲ್ ಮಲಿಕ್ ಬಿನ್ ತುಫೈಲ್. ಅವರು 1110ರ ಸುಮಾರಿಗೆ ಮುರಾಬಿತ್ವೂನ್ (ಮೊರಾವಿಡ್ಸ್) ಆಳ್ವಿಕೆಯಲ್ಲಿದ್ದ ಗ್ರ್ಯಾನಡಾದ ಈಶಾನ್ಯ ಭಾಗದಲ್ಲಿ ಗ್ವಾಡಿಕ್ಸ್ ಎಂದು ಈಗ ಪ್ರಸಿದ್ಧಿ ಪಡೆದ ನಗರದ ಬಳಿ ಜನಿಸಿದರು. ಐಬೇರಿಯನ್ ಉಪಖಂಡದ ಪ್ರಮುಖ ಬೌದ್ಧಿಕ ಕೇಂದ್ರಗಳಾದ ಸೆವಿಲ್ಲೆ ಮತ್ತು ಕೋರ್ಡೋಬಾದಲ್ಲಿ ಅವರು ಅಧ್ಯಯನ ಪೂರ್ಣಗೊಳಿಸಿದರು ಎಂದು ಹೇಳಲಾಗುತ್ತದೆ. ಸ್ಪೇನ್‌ನಲ್ಲಿ ಅವರು ವೈದ್ಯಕೀಯ ಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಭೌತಶಾಸ್ತ್ರ ಮತ್ತು ಇತರ ನೈಸರ್ಗಿಕ ವಿಜ್ಞಾನದ ಜೊತೆಗೆ ಕಾವ್ಯ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿದರು. ವೈದ್ಯನಾಗಿ ಗ್ರ್ಯಾನಡಾದಲ್ಲಿ ಅಲ್ಪ ಕಾಲ ಸೇವೆ ಸಲ್ಲಿಸಿದ ನಂತರ ಅಂದಿನ ಆಡಳಿತಗಾರ ಅಬೂ ಯಾಕೂಬ್ ಯೂಸುಫ್ ಅವರ ಮುಖ್ಯ ಸಲಹೆಗಾರ ಮತ್ತು ಅರಮನೆಯ ವೈದ್ಯರಾಗಿಯೂ ಸೇವೆ ಸಲ್ಲಿಸಿದರು.
ಯವನ ತತ್ವಶಾಸ್ತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದ ಖಲೀಫನ ಸಮ್ಮುಖ ಇಬ್ನ್ ತುಫೈಲ್ ಮತ್ತು ವಯಸ್ಸಿನಲ್ಲಿ ಸಣ್ಣವರಾಗಿದ್ದ ಇಬ್ನ್ ರುಶ್ದ್, ಅರಿಸ್ಟಾಟಲ್ ಮತ್ತು ಪ್ಲೇಟೋನ ವೀಕ್ಷಣೆಯ ಸಿದ್ಧಾಂತಗಳನ್ನು ಚರ್ಚಿಸುತ್ತಿದ್ದರು. ಅರಿಸ್ಟಾಟಲ್ ಗ್ರಂಥಗಳಿಗೆ ಸುಲಭ ಗ್ರಾಹ್ಯವಾದ ವಿವರಣೆಗಳನ್ನು ನೀಡುವಲ್ಲಿ ಇಬ್ನ್ ರುಶ್ದ್ ಅವರ ಯಶಸ್ಸಿಗೆ ಕಾರಣ ಇಂತಹ ಚರ್ಚೆಗಳಾಗಿತ್ತು. ಹಯ್ಯ್ ಬಿನ್ ಯಖ್ಲಾನ್ ಯುರೋಪಿಯನ್ ಜ್ಞಾನಪರ್ವಕ್ಕೆ ಚಾಲನೆ ನೀಡಿದ ಪ್ರಮುಖ ಗ್ರಂಥ ಎನಿಸಿದ್ದು ಇಂಗ್ಲಿಷ್‌ನ ಮೊದಲ ಕಾದಂಬರಿ ರಾಬಿನ್ಸನ್ ಕ್ರೂಸೋ ಸಹಿತ ಅನೇಕ ತಾತ್ವಿಕ ಕೃತಿಗಳು, ಅನೇಕ ಕಾದಂಬರಿಗಳು ಮತ್ತು ಕ್ರಾಂತಿಕಾರಿ ಪರಿಕಲ್ಪನೆಗಳಿಗೆ ಸ್ಫೂರ್ತಿ ನೀಡಿದೆ.
ಮುಸ್ಲಿಂ ಸ್ಪೇನ್‌ನ ಟೊಲಿಡೋ ನಗರದ ಆರ್ಚ್ ಬಿಷಪ್ ರೇಮಂಡ್ ಅಧೀನದಲ್ಲಿ ಅನುವಾದ ಕೇಂದ್ರವೊಂದು ಕಾರ್ಯನಿರ್ವಹಿಸುತ್ತಿತ್ತು. ಇದರ ಮುಖ್ಯಸ್ಥರಾಗಿದ್ದ ಯಹೂದಿ ಚಿಂತಕರನ್ನು ಆಕರ್ಷಿಸಿದ ಪರಿಣಾಮ ಹಯ್ಯ್ ಇಬ್ನ್ ಯಖ್ಲಾನ್ ಗ್ರಂಥ ಮೈಮೋನೈಡ್ಸ್ ಅವರ ಪ್ರಸಿದ್ಧ ಪುಸ್ತಕ ’ಗೈಡ್ ಆಫ್ ದಿ ಪರ್ಪ್ಲೆಕ್ಸ್ʼ ಗೂ ಪ್ರೇರಕ ಎನಿಸಿದೆ..
ಮೈಮೋನೈಡ್ಸ್ ನಂತರ ಸಂಪೂರ್ಣವಾಗಿ ನನೆಗುದಿಗೆ ಬಿದ್ದಿದ್ದ ಕೃತಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಅರಬಿ ಭಾಷಾ ಪ್ರಾಧ್ಯಾಪಕ ಎಡ್ವರ್ಡ್ ಪೊಕ್ಕೋಕ್‌ರವರ ಕಣ್ಣಿಗೆ ಬಿತ್ತು. ಹೀಗೆ 1653ರಲ್ಲಿ ಅಲೆಪ್ಪೊದಲ್ಲಿನ ಅಂಗಡಿಯಲ್ಲಿ ಅವರು ಹಸ್ತಪ್ರತಿಯನ್ನು ಕಂಡುಹಿಡಿಯುವ ಮೂಲಕ ಈ ಕೃತಿಯ ಎರಡನೆಯ ಯಾನ ಪ್ರಾರಂಭವಾಯಿತು. ಪೊಕ್ಕೋಕ್ ಜೂನಿಯರ್ 1671ರಲ್ಲಿ ಪ್ರಕಟಿಸಿದ ಇದರ ಅನುವಾದ ಯುರೋಪಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.
ಜಾನ್ ಲಾಕ್‌ರನ್ನು ಹೆಚ್ಚು ಆಕರ್ಷಿಸಿದ ಈ ಕೃತಿ ಅವರು ಮುಂದಿಟ್ಟ ಟಬುಲ ರಾಸ (Tabula rasa) ಎಂಬ ಹೊಸ ಪರಿಕಲ್ಪನೆಗೂ ದಾರಿ ಮಾಡಿಕೊಟ್ಟಿತು. ಲಂಡನ್‌ನಲ್ಲಿ ನಡೆದ ಹಯ್ಯ್ ಬಿನ್ ಯಖ್ಲಾನ್ ಬಗೆಗಿನ ಚರ್ಚೆಯನ್ನು ಲಾಕ್ ಬಹಳ ಭಾವಪರವಶರಾಗಿ ಸ್ಮರಿಸಿದ್ದಾರೆ. ಪ್ರಸ್ತುತ ಚರ್ಚೆಯ ನಂತರ ಪ್ರಮುಖ ತತ್ವಜ್ಞಾನಿ ಸ್ಪಿನೋಜಾರವರು ಈ ಕೃತಿಯನ್ನು ಡಚ್ ಭಾಷೆಗೆ ಭಾಷಾಂತರಿಸಬೇಕೆಂದು ಅಪೇಕ್ಷಿಸಿದ್ದರು. ಲೀಬ್ನಿಝ್‌ರವರು ಇದನ್ನು ಜರ್ಮನ್ ಭಾಷೆಗೆ ಭಾಷಾಂತರಿಸಬೇಕೆಂದೂ ಆಗ್ರಹ ವ್ಯಕ್ತಪಡಿಸಿದ್ದರು. ನಂತರ, ಡೇನಿಯಲ್ ಡಿಫೊರವರ ಚಟುವಟಿಕೆಗಳ ಪರಿಣಾಮ ಈ ಕೃತಿ ತತ್ವಶಾಸ್ತ್ರದ ಗೋಪುರದಿಂದ ಕೆಳಗಿಳಿದು ಜನಪ್ರಿಯ ಸಾಹಿತ್ಯವಾಗಿ ಎಲ್ಲರನ್ನು ತಲುಪಿತು. ಈ ಶ್ರೇಷ್ಠ ಕೃತಿಯ ಪಡಿಯಚ್ಚುಗಳನ್ನು ರುಡ್ಯಾರ್ಡ್ ಕಿಪ್ಲಿಂಗ್‌ನ ಜಂಗಲ್ ಬುಕ್, ಎಡ್ಗರ್ ರೈಸ್‌ಬರೋ ಅವರ ಟಾರ್ಜನ್ ಸರಣಿ ಹಾಗೂ 2001ರಲ್ಲಿ ಬಿಡುಗಡೆಯಾದ ಯಾನ್ ಮಾರ್ಟೆಲ್‌ನ ಲೈಫ್ ಆಫ್ ಪೈನಲ್ಲೂ ಕಾಣಬಹುದು.
ಕೃತಿ ಪರಿಚಯ:
ಜಾಗೃತನ ಮಗ ಚೈತನ್ಯ ಎಂದಾಗಿದೆ ಹಯ್ಯ್ ಬಿನ್ ಯಖ್ಲಾನ್ ಎಂಬುದರ ಅರ್ಥ. ಇರವಿನ ರಹಸ್ಯಗಳನ್ನು ಅತೀವ ಜಾಗರೂಕತೆಯಿಂದ ಹುಡುಕಾಡುತ್ತಾ ಪರಿಸರದ ಹಾಗೂ ಸುತ್ತಮುತ್ತಲಿನ ವಿದ್ಯಮಾನಗಳನ್ನು ಒರೆಗೆ ಹಚ್ಚುತ್ತಾ ಒಂದು ಮಾನವಾತ್ಮ ಕರಗತಗೊಳಿಸುವ ಪದಗಳಿಗೆ ನಿಲುಕದ ಚೈತನ್ಯವನ್ನು ಕೃತಿಯ ಹೆಸರು ಪ್ರತಿಧ್ವನಿಸುತ್ತದೆ. ಇಬ್ನ್ ತುಫೈಲ್‌ರವರ ಈ ಕೃತಿಯನ್ನು ಇಸ್ಲಾಮಿನಲ್ಲಿನ ಒಂದು ವಿಶಿಷ್ಟ ಸೂಫಿ ಚಿಂತನಾಧಾರೆಯ ಹಾದಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಕೃತಿಯ ಹೆಸರು ಸ್ಪಷ್ಟವಾಗಿ ವಿವರಿಸುತ್ತದೆ. ಈ ಕೃತಿಯ ಪೂರ್ಣ ನಾಮ ಹಯ್ಯ್ ಬಿನ್ ಯಖ್ಲಾನ್ ಫೀ ಅಸ್ರಾರಿ ಹಿಕ್ಮತಿಲ್ ಮಶ್ರಿಖಿಯ್ಯ ಎಂದಾಗಿದ್ದು ಖ್ಯಾತ ಸೂಫಿ ಚಿಂತಕ ಶಿಹಾಬುದ್ದೀನ್ ಸುಹ್ರವರ್ದಿ (1153- 1191) ಅವರು ಸಂಪನ್ನಗೊಳಿಸಿದ ಹಿಕ್ಮತುಲ್ ಇಶ್ರಾಕ್‌ನ ಗುಪ್ತ ರಹಸ್ಯಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಮಾಡಿದೆ. ದೈವಿಕ ಜ್ಞಾನದ ಪ್ರತೀಕವಾದ ದಿವ್ಯ ತೇಜಸ್ಸು ಅರಿಸ್ಟಾಟಲ್, ಪ್ಲೇಟೋರಲ್ಲಿ ಮಾತ್ರವಲ್ಲ ಇಮಾಮ್ ಗಝ್ಝಾಲಿ, ಶಿಹಾಬುದ್ದೀನ್ ಸುಹ್ರವರ್ದಿ, ಇಮಾಮ್ ರಾಝಿ ಮತ್ತು ಮುಲ್ಲಾ ಸದ್ರಾರಂತಹ ಮುಸ್ಲಿಂ ದಾರ್ಶನಿಕರ ಗ್ರಂಥಗಳಲ್ಲೂ ಕಾಣಬಹುದು.
ಇಬ್ನ್ ತುಫೈಲ್ ಅವರ ಈ ಕಾದಂಬರಿ ಇಬ್ನ್ ಸೀನಾ ರವರ ಆತ್ಮಚರಿತ್ರೆ ಅಡಕವಾಗಿರುವ ಕಾದಂಬರಿಗಳಾದ ರಿಸಾಲಾತುತ್ವೈರ್ ಮತ್ತು ಸಲಮನ್ ವ ಅಬ್ಸಲ್‌ನಿಂದ ಸ್ಫೂರ್ತಿ ಪಡೆದಿದೆ ಎನ್ನುವುದು ಬಹಳ ಸ್ಪಷ್ಟ. ಸುಹ್ರವರ್ದಿಯವರು ಬರದಿರುವ ರಿಸಾಲತ್ ಫಿ ಹಯ್ಯ್ ಇಬ್ನ್ ಯಖ್ಲಾನ್ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದ ಖಿಸ್ಸತುಲ್ ಗುರ್ಬಾ ಅಲ್ ಗರ್ಬಿಯ್ಯ ಎಂಬ ಗ್ರಂಥ ಈ ಕಾದಂಬರಿಯ ಆಧ್ಯಾತ್ಮಿಕ ಆಯಾಮಗಳ ಹಿಂದಿನ ಪ್ರೇರಕ ಶಕ್ತಿ.
ಹುಡುಕಾಟ- ಅನ್ವೇಷಣೆಗಳ ತರುವಾಯ ದೊರಕುವ ಬೌದ್ಧಿಕ ಬೆಳವಣಿಗೆ ಮತ್ತು ತರ್ಕಬದ್ಧ ಧ್ಯಾನದಿಂದ ಸಿಗುವ ಆಧ್ಯಾತ್ಮಿಕ ಪ್ರಬುದ್ಧತೆ ಶುದ್ಧ ಮನಸ್ಸನ್ನು ಪ್ರಪಂಚದ ಅನಾದಿಯಾದ ಒಂದು ಮೂಲದ ಕಡೆಗೆ ಕೊಂಡೊಯ್ಯುತ್ತದೆ ಎನ್ನುವುದು ಈ ಇಬ್ನ್ ತುಫೈಲ್ ಕೃತಿಯ ಮೂಲ ತತ್ವ. ರಾಬಿನ್ಸನ್ ಕ್ರೂಸೋನ ಹಾಗೆ ಇತರ ಮನುಷ್ಯರೊಂದಿಗೆ ಯಾವುದೇ ಸಂಪರ್ಕವಿಲ್ಲದೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಹಯ್ಯ್‌ಗೆ ಮನುಷ್ಯ ಭಾಷೆ ಗೊತ್ತಿರಲಿಲ್ಲ ಎನ್ನುವುದು ಗಮನಾರ್ಹ. ಭಾಷೆಯೆ ಇರವಿನ ಬೀಡು ಎಂದು ಹೇಳಿದ ಮಾರ್ಟಿನ್ ಹೈಡೆಗರ್‌ರವರ ದೃಷ್ಟಿಕೋನಕ್ಕೆ ವಿಭಿನ್ನವಾಗಿ ಹಯ್ಯ್‌ನ ಇರವಿನ ಹುಡುಕಾಟ ಸಾಗಿದೆ.
ಹಯ್ಯ್ ಎನ್ನುವ ತಾತ್ವಿಕ ಕಥಾಪಾತ್ರ ದೈವಿಕತೆಯ ಸೃಜನಾತ್ಮಕ ವೈಶಿಷ್ಟ್ಯತೆಯ ಸಂಪೂರ್ಣತೆಯೆಂದೂ ದೈವಿಕ ಚೈತನ್ಯದ ವಾಹಕವೆಂದೂ ಸೂಫಿಗಳು ಮಂಡಿಸುವ Perfect intellect (ಪರಿಪೂರ್ಣ ಬುದ್ಧಿ)ಯನ್ನು ಚಿತ್ರೀಕರಿಸುತ್ತದೆ. ಅಲ್ಲಾಹನ ವಿಶೇಷಣಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಹಯ್ಯ್ ಪರಿಕಲ್ಪನೆ ಅವನ ತೊಂಬತ್ತೊಂಬತ್ತು ಹೆಸರುಗಳಲ್ಲೊಂದು. ಆಯತುಲ್ ಕುರ್ಸಿಯಲ್ಲಿ ಅಲ್ಲಾಹನನ್ನು ಹಯ್ಯ್ ಎಂದು ಪರಿಚಯಿಸಲಾಗಿದೆ. ಅದೇ ಸೂಕ್ತದಲ್ಲಿ ಹೇಳಲಾಗುವ ‘ನಿದ್ರೆಯು ಅವನನ್ನು ಅಧೀನಗೊಳಿಸುವುದಿಲ್ಲ’ ಎಂಬುದರ ಸಾರವಾಗಿದೆ ಯಖ್ಲಾನ್. ಪರಮಾತ್ಮನೊಂದಿಗೆ ಮಾನವ ಆತ್ಮವನ್ನು ಸಂಯೋಜಿಸುವ ವಿವಿಧ ಹಂತಗಳನ್ನು ಸೂಫಿ ಭಾಷೆಯಲ್ಲಿ ಹಯ್ಯ್ ಇಬ್ನ್ ಯಖ್ಲಾನ್ ವಿವರಿಸುತ್ತದೆ.
ವಿಷಯ ಮತ್ತು ರಚನೆ:
ತನ್ನನ್ನು ಪ್ರಭಾವಿಸಿದ ಅಲ್ ಫಾರಾಬಿ, ಇಬ್ನ್ ಸೀನಾ, ಇಬ್ನ್ ಬಾಜಾ ಮತ್ತು ಇಮಾಂ ಗಝ್ಝಾಲಿ ಅವರಂತಹ ತತ್ವಜ್ಞಾನಿಗಳನ್ನು ಮುನ್ನುಡಿಯಲ್ಲಿ ಉಲ್ಲೇಖಿಸುವ ಮೂಲಕ ಕೃತಿಯ ಆರಂಭದಲ್ಲೇ ಭದ್ರವಾದ ತಾತ್ವಿಕ ಬುನಾದಿ ಹಾಕಿದ್ದಾರೆ ಇಬ್ನು ತುಫೈಲ್. ಇವರುಗಳು ಧಾರ್ಮಿಕ ಅನುಭವ ಮತ್ತು ತರ್ಕಬದ್ಧ ಚಿಂತನೆಯ ನಡುವೆ ಸಮತೋಲನ ಸ್ಥಾಪಿಸಲು ಬಹಳ ಪ್ರಯತ್ನಪಟ್ಟ ದಾರ್ಶನಿಕ ವ್ಯಕ್ತಿಗಳೆಂದು ಇಬ್ನು ತುಫೈಲ್ ಪರಿಚಯಿಸಿದ್ದಾರೆ. ಇಬ್ನ್ ತುಫೈಲ್ ಅವರ ಉತ್ತರಾಧಿಕಾರಿಯಾಗಿ ಬಂದ ಇಬ್ನ್ ರುಶ್ದ್ ಅವರ ‘ಫಸ್ಲುಲ್ ಮಖಾಲ್ ಫೀ ಮಾ ಬೈನಲ್ ಹಿಕ್ಮತಿ ವಶ್ಶರೀಅತಿ ಮಿನಲ್ ಇತ್ತಿಸಾಲ್’ (ಧರ್ಮ ಮತ್ತು ತತ್ವಶಾಸ್ತ್ರದ ನಡುವಿನ ಸಂಯೋಜನೆ) ಎನ್ನುವ ಗ್ರಂಥ ಜನ್ಮತಾಳಿರುವುದು ಕೂಡಾ ಇದೇ ಪಾತಳಿಯಲ್ಲಿ. ಇಮಾಂ ಗಝ್ಝಾಲಿಯವರ ಫಲ್ಸಫ (ಗ್ರೀಕ್ ತತ್ವಜ್ಞಾನ) ವಿರೋಧಿ ನಿಲುವುಗಳನ್ನು ಇಬ್ನ್ ತುಫೈಲ್ ಟೀಕೆ ಮಾಡಿದ್ದು ಇಬ್ನ್ ರುಶ್ದ್ ಮೇಲೆ ಪ್ರಭಾವ ಬೀರಿತ್ತು.
ಈ ತಾತ್ವಿಕ ಮುನ್ನುಡಿಯ ತರುವಾಯ ಹಿಂದೂ ಮಹಾಸಾಗರದಲ್ಲಿನ ಭೂಮಧ್ಯ ರೇಖೆಗೆ ಹತ್ತಿರವಿರುವ ಸಮಶೀತೋಷ್ಣ ಹವಾಮಾನವಿರುವ ನಿರ್ಜನ ದ್ವೀಪವೊಂದರಲ್ಲಿ ಹಯ್ಯ್ ಆಗಮಿಸುವ ದೃಶ್ಯದ ಆಖ್ಯಾನ ಬರುತ್ತದೆ. ಕಥಾನಾಯಕ ಹಯ್ಯ್‌ನ ಜನ್ಮದ ಬಗ್ಗೆ ಎರಡು ಅಭಿಪ್ರಾಯಗಳನ್ನು ಮಂಡಿಸಲಾಗಿದೆ. ಮೊದಲ ಅಭಿಪ್ರಾಯದ ಪ್ರಕಾರ, ಮನುಷ್ಯನ ಹಸ್ತಕ್ಷೇಪವಿಲ್ಲದೆ ಸ್ವಯಂಪ್ರೇರಿತವಾಗಿ ನೀರನ್ನು ಸೇರಿದ ಜೇಡಿಮಣ್ಣಿನೊಳಕ್ಕೆ ದೇವಸನ್ನಿಧಿಯಿಂದ ನಿರಂತರವಾಗಿ ಪ್ರವಹಿಸುತ್ತಿದ್ದ ಆತ್ಮದ ಪ್ರವೇಶ ನಡೆಯುವುದರೊಂದಿಗೆ ಹಯ್ಯ್ ಜನ್ಮ ತಾಳುತ್ತಾನೆ. ನಂತರ ಆ ಮಣ್ಣು ಮಾಂಸ ಪಿಂಡವಾಗಿ ಪರಿವರ್ತನೆಯಾಗಿ ಮನುಷ್ಯ ಭ್ರೂಣದ ರೂಪವನ್ನು ಪಡೆದುಕೊಳ್ಳುತ್ತದೆ. ಕೊನೆಗೆ ಅದು ಪೂರ್ಣ ಬೆಳವಣಿಗೆ ದಾಖಲಿಸಿದ ಮಗುವಾಗಿ ರೂಪಾಂತರಗೊಳ್ಳುತ್ತದೆ.
ಎರಡನೇ ಅಭಿಪ್ರಾಯದ ಪ್ರಕಾರ ಪ್ರವಾದಿ ಮೂಸಾ ಅಲೈಹಿಸ್ಸಲಾಮರ ಜನನವನ್ನು ಹೋಲುವ ಘಟನೆಗಳು ಹಯ್ಯನ್ನು ನಿರ್ಜನ ದ್ವೀಪಕ್ಕೆ ಕರೆದೊಯ್ಯುತ್ತದೆ. ಆ ಪ್ರಕಾರ ಒಂದು ಊರಿನ ಕ್ರೂರ ಆಡಳಿತಗಾರನೊಬ್ಬನಿಗೆ ಬಹಳ ಸುಂದರಿಯಾದ ಸಹೋದರಿ ಇದ್ದಳು. ಅವಳನ್ನು ಮದುವೆಯಾಗಲು ಆತ ಯಾರನ್ನೂ ಬಿಡುತ್ತಿರಲಿಲ್ಲ. ಯಖ್ಲಾನ್ ಎಂಬ ನೆರೆಯ ದೇಶದ ರಾಜಕುಮಾರನೊಂದಿಗೆ ಗುಪ್ತವಾಗಿ ವಿವಾಹವಾದ ಸಹೋದರಿಗೆ ಶೀಘ್ರದಲ್ಲೇ ಒಂದು ಮಗು ಜನಿಸಿತು. ಅಣ್ಣನಿಗೆ ತಿಳಿಯದಂತೆ ರಾತ್ರಿಯಿಡೀ ಅತ್ಯಂತ ರಹಸ್ಯವಾಗಿ ಮಗುವನ್ನು ಒಂದು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ಹರಿಯಲು ಬಿಡುವುದು ಮಾತ್ರ ಅವರ ಮುಂದಿರುವ ಏಕ ದಾರಿಯಾಗಿತ್ತು. ಕೊನೆಗೆ ಹಯ್ಯನ್ನು ಹೊತ್ತ ಆ ಪೆಟ್ಟಿಗೆಯು ಒಂದು ನಿರ್ಜನ ದ್ವೀಪವನ್ನು ಸೇರಿತು.
ಮುನ್ನುಡಿಯ ನಂತರದ ಮುಖ್ಯ ಭಾಗವನ್ನು ಏಳು ವರ್ಷಗಳಾಗಿ ವಿಂಗಡಿಸಿ ವಿವಿಧ ಹಂತಗಳಲ್ಲಿ ಹಯ್ಯ್‌ನ ಜೀವನದಲ್ಲಿ ಸಂಭವಿಸಿದ ಬದಲಾವಣೆಯ ಬಗ್ಗೆ ವ್ಯವಸ್ಥಿತವಾಗಿ ಚರ್ಚಿಸಲಾಗಿದೆ. ಸೂಫಿ ಚಿಂತನೆಯಲ್ಲಿ ಮಾನವ ಆತ್ಮದ ವಿಕಾಸವನ್ನು ಏಳು ಹಂತಗಳಾಗಿ ವಿಂಗಡಿಸಲಾಗಿದೆ. ಅಹ್ಮದ್ ಗಝ್ಝಾಲಿಯವರ ರಿಸಾಲತು ತ್ವೈರ್‌ನಲ್ಲಿ ಸತ್ಯವನ್ನು ಹುಡುಕುತ್ತಾ ಸಪ್ತ ಸಾಗರದಾಚೆ ಹೋದ ಹಕ್ಕಿಯೊಂದರ ರೂಪಕವನ್ನು ಕಾಣಬಹುದು. ಹಯ್ಯ್ ಇಬ್ನ್ ಯಖ್ಲಾನ್ ಜೀವನವನ್ನು ಸಹ ಇದೇ ರೀತಿ ಸಪ್ತ ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತ ಆರಂಭವಾಗುವುದು ಹಸಿವಿನಿಂದ ಅಳುತ್ತಿದ್ದ ಹಯ್ಯನ್ನು ಇದು ತನ್ನ ಕಳೆದುಹೋದ ಮಗು ಎಂದು ಭಾವಿಸಿದ ಜಿಂಕೆಯೊಂದು ಪೆಟ್ಟಿಗೆಯಿಂದ ತೆಗೆದು ಶುಶ್ರೂಷೆ ಮಾಡುವುದರೊಂದಿಗೆ. ಏಳನೇ ವಯಸ್ಸಿನಲ್ಲಿ ತಾನು ಅಲ್ಲಿರುವ ಇತರ ಜೀವಿಗಳಿಗಿಂತ ಭಿನ್ನ ಎಂದು ಹಯ್ಯ್ ಮನಗಾಣುತ್ತಿದ್ದು ಅಲ್ಲಿಗೆ ಮೊದಲ ಹಂತ ಮುಗಿಯುತ್ತದೆ. ಏತನ್ಮಧ್ಯೆ, ಸಂತೋಷ, ಸ್ನೇಹ, ದುಃಖ, ನಾಚಿಕೆ ಮತ್ತು ಸಂಕೋಚದಂತಹ ಮೂಲಭೂತ ಭಾವನೆಗಳನ್ನು ಅನುಭವಿಸಲು ಆರಂಭಿಸಿದ ಮಗು ಇತರ ಹಿಂಸಾತ್ಮಕ ಪ್ರಾಣಿಗಳ ಹಿಂಸೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು, ಆಹಾರಕ್ಕಾಗಿ ಬೇಟೆಯಾಡಲು ಮತ್ತು ಮೀನು ಹಿಡಿಯಲು ಕಲಿತುಕೊಳ್ಳುತ್ತದೆ.
ಮುಂದಿನ ಹಂತವು ಇಪ್ಪತ್ತೊಂದನೇ ವಯಸ್ಸಿನ ತನಕದ ಹಯ್ಯ್‌ನ ಜೀವನದ ಕುರಿತಾಗಿದ್ದು ಎರಡು ಸಪ್ತಾಬ್ಧಗಳು ಸೇರಿದ ಹದಿನಾಲ್ಕು ವರ್ಷ ಕಾಲಾವಧಿಯ ಕಥೆ ಇದರಲ್ಲಿ ಮೂಡಿಬಂದಿದೆ. ಈ ಅವಧಿಯಲ್ಲಿ ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ತನ್ನ ನಗ್ನತೆ ಮತ್ತು ಬಲಹೀನತೆಯ ಬಗ್ಗೆ ಹಯ್ಯ್ ವಿಪರೀತ ಚಿಂತಿತನಾಗುತ್ತಾನೆ. ಮರದ ಎಲೆಗಳು ಮತ್ತು ಪಕ್ಷಿಗಳ ಚರ್ಮವನ್ನು ಬಳಸಿ ಅವನು ತನ್ನ ನಗ್ನತೆಯನ್ನು ಮರೆಮಾಚಲು ಶ್ರಮಿಸುತ್ತಾನೆ. ಎರಡು ಕಾಲು ಮತ್ತು ಕೈಗಳಿಂದ ನಡೆಯುವುದನ್ನು ರೂಢಿ ಮಾಡಿಕೊಂಡಿದ್ದ ಹಯ್ಯ್ ನೇರ ನಿಂತು ಎರಡು ಕಾಲಲ್ಲಿ ನಡೆಯಲು ಅಭ್ಯಾಸ ಮಾಡತೊಡಗುತ್ತಾನೆ. ಈ ಹಂತದಲ್ಲಿ ಹಯ್ಯ್‌ನ ಬೌದ್ಧಿಕ ಬೆಳವಣಿಗೆಯೂ ಪ್ರಾರಂಭವಾಗುತ್ತದೆ. ವೀಕ್ಷಣೆ-ಪರೀಕ್ಷೆಗಳಿಂದ ಹಾಗೂ ಸೂಕ್ಷ್ಮ ಬುದ್ಧಿಯ ಮೂಲಕ ತನ್ನ ಸುತ್ತಲಿನ ಪ್ರಪಂಚವನ್ನು ಆತ ಅಧ್ಯಯನ ಮಾಡತೊಡಗುತ್ತಾನೆ.
ಪ್ರಕೃತಿಯ ವಸ್ತುಗಳನ್ನು ತನ್ನ ಉದ್ದೇಶ, ಅಗತ್ಯಗಳಿಗೆ ಅನುಸಾರ ಬದಲಾಯಿಸಲು ಹಾಗೂ ಹೊಸತರಲ್ಲಿ ತನ್ನನ್ನು ಬೆರಗುಗೊಳಿಸಿದ್ದ ಬೆಂಕಿಯನ್ನು ನಿಯಂತ್ರಿಸಲು ಆತ ಕಲಿಯುತ್ತಾನೆ. ತಾಯಿಯಾದ ಜಿಂಕೆ ತೀರಿಕೊಂಡಾಗ ತೀವ್ರ ದುಃಖಿತನಾಗಿ ತನ್ನ ತಾಯಿಯ ಸಾವಿಗೆ ಕಾರಣ ತಿಳಿಯಲು ಅವಳ ಕಣ್ಣು, ಮೂಗು, ಕಿವಿಗಳನ್ನು ಪರೀಕ್ಷೆಗೆ ಒಳಪಡಿಸುತ್ತಾನೆ. ಆದರೆ, ಫಲಿತಾಂಶ ಮಾತ್ರ ನಿರಾಶಾದಾಯಕವಾಗಿತ್ತು. ಕೊನೆಗೆ ಸಮಸ್ಯೆಗೆ ಕಾರಣ ದೇಹದ ಬಾಹ್ಯ ಅಂಗಗಳಿಗುಂಟಾದ ಹಾನಿಯಲ್ಲವೆಂದೂ, ಬದಲಾಗಿ ದೇಹದೊಳಗೆ ಎಲ್ಲೋ ಏನೋ ಸಮಸ್ಯೆಯಿದೆ ಎಂಬ ನಿಗಮಕ್ಕೆ ಬರುತ್ತಾನೆ. ಕಲ್ಲುಗಳನ್ನು ಚೂಪು ಮಾಡಿ ದೇಹವನ್ನು ಮುರಿಯಲು ಪ್ರಾರಂಭಿಸುತ್ತಾನೆ. ಜಿಂಕೆಯ ದೇಹವನ್ನು ಸೀಳಿದಾಗ ಅದರ ಮಧ್ಯದಲ್ಲಿ ಅದರ ಹೃದಯವನ್ನು ಕಂಡಾಗ ಆತ ತುಂಬಾ ಆಶ್ಚರ್ಯಪಡುತ್ತಾನೆ.
ಹೃದಯವನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಿದ ಬಳಿಕ ಅದರೊಳಗೆ ಏನೋ ಸಮಸ್ಯೆ ನಡೆದಿರಬೇಕು ಎಂಬ ನಿರ್ಧಾರಕ್ಕೆ ಬರುತ್ತಾನೆ. ಅದರೊಳಗೆ ಕಂಡುಬಂದ ಎರಡು ಕೋಣೆಗಳ ಪೈಕಿ ಒಂದು ರಕ್ತದಿಂದ ತುಂಬಿರುವುದನ್ನು ಹಾಗೂ ಇನ್ನೊಂದು ಖಾಲಿಯಾಗಿರುವುದನ್ನು ಗಮನಿಸುತ್ತಾನೆ. ಖಾಲಿ ಇರುವ ಕೋಣೆಯಿಂದ ಏನೋ ಹೊರಟು ಹೋಗಿರುವುದೇ ಮರಣಕ್ಕೆ ಕಾರಣ ಎಂದು ಅರ್ಥ ಮಾಡಿಕೊಳ್ಳುತ್ತಾನೆ. ತಾಯಿಯ ಪ್ರಾಣಪಕ್ಷಿ ಹೊರಟು ಹೋದ ನಂತರ ಮತ್ತೆ ಈ ನಿರ್ಜೀವ ದೇಹದಿಂದ ಏನು ಪ್ರಯೋಜನ? ಹಯ್ಯ್‌ನ ಮನಸ್ಸು ಆಲೋಚನೆಗೆ ಹತ್ತಿಕೊಳ್ಳುತ್ತದೆ. ಹಾಗಾಗಿ ಸಾವಿನ ನಂತರವೂ ಬದುಕಬಲ್ಲ ಅಭೌತಿಕ ಶಕ್ತಿಯ ಬಗೆಗಿನ ಚಿಂತನೆಗಳು ಅವನನ್ನು ಅತಿಯಾಗಿ ಕಾಡತೊಡಗುತ್ತದೆ. ತಾಯಿಯ ಮರಣ ಭೌತಿಕ ಜೀವನ ನಶ್ವರ ಹಾಗೂ ಆತ್ಮವು ಶಾಶ್ವತ ಎನ್ನುವ ಗ್ರಹಿಕೆಯನ್ನು ಅವನಿಗೆ ನೀಡುತ್ತದೆ. ನಂತರ ತಾಯಿಯ ಹೃದಯದಿಂದ ಕಣ್ಮರೆಯಾದ ನಿಗೂಢ ವಸ್ತು ಇತರ ಪ್ರಾಣಿಗಳ ಹೃದಯದಲ್ಲಿ ಕೂಡಾ ಇದೆಯೇ ಎಂದು ಪರಿಶೋಧಿಸಲು ಜೀವಂತ ಪ್ರಾಣಿಯನ್ನು ಕಟ್ಟಿ ಹಾಕಿ ಅದರ ಹೃದಯವನ್ನು ಸೀಳಿ ತಪಾಸಣೆ ಮಾಡುವ ಹಯ್ಯನ್ನು ಕೂಡಾ ನಮಗೆ ಕಾದಂಬರಿಯಲ್ಲಿ ಕಾಣಬಹುದು. ಅವುಗಳ ಹೃದಯದ ಎಡ ಕೋಣೆಯಲ್ಲಿ ಆವಿ ಅಥವಾ ಬಿಳಿ ಮೋಡದಂತಹ ವಸ್ತುವನ್ನು ಕಂಡ ಹಯ್ಯ್ ಅದನ್ನು ಮುಟ್ಟಿ ನೋಡುತ್ತಾನೆ. ಅಸಹನೀಯ ಬಿಸಿ ತಾಳಲಾರದೆ ತನ್ನ ಕೈಯನ್ನು ಹಿಂದೆಳೆದದ್ದೇ ತಡ ಪ್ರಾಣಿ ತಕ್ಷಣವೇ ಸತ್ತು ಹೋಗುತ್ತದೆ. ಹೃದಯದ ಎಡ ಕೋಣೆಯಲ್ಲಿರುವ ಬೆಚ್ಚಗಿನ ಆವಿ ಜೀವ ನೆಲೆಸಲು ಹಾಗೂ ಬದುಕಲು ಸಹಾಯ ಮಾಡುತ್ತದೆ ಎಂಬ ವಾಸ್ತವ ಆಗ ಅವನಿಗೆ ಮನವರಿಕೆಯಾಗುತ್ತದೆ.
ಈ ಆಸಕ್ತಿದಾಯಕ ಅರಿವು ಜೀವಿಗಳ ಆಂತರಿಕ ರಚನೆ ಮತ್ತು ನರಮಂಡಲದ ಬಗ್ಗೆ ಆಳವಾಗಿ ಪರಿಶೀಲಿಸಲು ಅವನಿಗೆ ಪ್ರೇರಣೆ ನೀಡುತ್ತದೆ. ಈ ಅವಧಿಯಲ್ಲಿ ಆತ ಪ್ರಾಣಿಗಳ ಚರ್ಮದಿಂದ ಬಟ್ಟೆ ಮತ್ತು ಬೂಟು-ಚಪ್ಪಲಿಗಳನ್ನು ತಯಾರಿಸಲು ಕಲಿಯುತ್ತಾನೆ. ಅಲ್ಲದೆ, ಗುಬ್ಬಚ್ಚಿಯ ಗೂಡನ್ನು ವೀಕ್ಷಿಸುವ ಮೂಲಕ, ನಿರ್ಮಾಣ ಕಲೆಯನ್ನು ಕರಗತ ಮಾಡಿಕೊಂಡು ಸ್ವತಃ ಒಂದು ಸಣ್ಣ ಉಗ್ರಾಣವನ್ನೂ ಮತ್ತು ಅಡುಗೆ ಕೋಣೆಯನ್ನೂ ನಿರ್ಮಿಸುತ್ತಾನೆ. ಪ್ರಾಣಿ-ಪಕ್ಷಿಗಳನ್ನು ಪಳಗಿಸುವುದರಲ್ಲಿಯೂ ಪರಿಣತಿ ಪಡೆಯುತ್ತಾನೆ. ಇಂತಹ ಸಂಶೋಧನೆಗಳಲ್ಲಿ ಮುಳುಗಿದ್ದ ಆತ ಇಪ್ಪತ್ತೊಂದನೇ ವಯಸ್ಸು ತಲುಪುವಾಗ ಪ್ರಾಣಿಗಳ ಅಂಗರಚನೆಯ ಬಗ್ಗೆ ನಿಖರವಾಗಿ ತಿಳಿಯುವಲ್ಲಿ ಯಶಸ್ವಿಯಾಗಿದ್ದ.
28 ವರ್ಷ ವಯಸ್ಸಿನವರೆಗಿನ ಹಯ್ಯ್‌ನ ಜೀವನದ ಕತೆಯೆ ಮುಂದಿನ ಹಂತ. ಈ ವಯಸ್ಸಿನಲ್ಲಿ ಹಯ್ಯ್ ಜೀವಿಗಳ ನಡುವಿನ ಸಜಾತೀಯತೆ ಮತ್ತು ವಿಜಾತೀಯತೆ, ಏಕತೆ ಮತ್ತು ಬಹುತ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದನ್ನು ಕಾಣಬಹುದು. ವ್ಯತ್ಯಾಸಗಳ ಆಧಾರದ ಮೇಲೆ ಪ್ರಾಣಿಗಳನ್ನು ವಿವಿಧ ವರ್ಗಗಳಾಗಿ ವರ್ಗೀಕರಿಸಿದಾಗ, ಅವುಗಳಲ್ಲಿ ಸಾಮಾನ್ಯವಾಗಿ ಮೂರು ಮೂಲಭೂತ ಗುಣಲಕ್ಷಣಗಳು ಇರುವುದನ್ನು ಪತ್ತೆಹಚ್ಚಲು ಆತನಿಗೆ ಸಾಧ್ಯವಾಯಿತು. ಅ ಮೂರು ಗುಣಲಕ್ಷಣಗಳು: ಇಂದ್ರಿಯ (ದೃಷ್ಟಿ, ವಾಸನೆ, ರುಚಿ, ಸ್ಪರ್ಶ ಮತ್ತು ಶ್ರವಣ) ಗ್ರಹಿಕೆ, ಆಹಾರ ಮತ್ತು ಸ್ವತಂತ್ರ ಚಲನೆ. ಸಸ್ಯಗಳ ವೀಕ್ಷಣೆಯಿಂದ ಸ್ವತಂತ್ರ ಚಲನೆಯನ್ನು ಹೊರತುಪಡಿಸಿ ಉಳಿದೆರಡು ಮೂಲಭೂತ ಗುಣಲಕ್ಷಣಗಳು ಅವುಗಳಲ್ಲಿವೆ ಎನ್ನುವುದನ್ನೂ ಆತ ಮನಗಾಣುತ್ತಾನೆ. ನಿರ್ಜೀವ ವಸ್ತುಗಳಲ್ಲಿ ಈ ಗುಣಲಕ್ಷಣಗಳು ಇಲ್ಲ ಎನ್ನುವುದೂ ಆತನಿಗೆ ತಿಳಿಯುತ್ತದೆ. ಉದ್ದ, ಅಗಲ ಮತ್ತು ಆಳ ಎಂಬ ಮೂರು ಗುಣಲಕ್ಷಣಗಳು ಮಾತ್ರ ಅವುಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದು.
ಮಾತ್ರವಲ್ಲ ಈ ಮೂರು ಗುಣಲಕ್ಷಣಗಳು ಎಲ್ಲಾ ಚರಾಚರಗಳಲ್ಲೂ ಇವೆ ಎಂದು ಆತನಿಗೆ ಗೊತ್ತಾಗುತ್ತದೆ. ಪ್ರಕೃತಿಯ ಬಗೆಗಿನ ಈ ಹುಡುಕಾಟದಿಂದ ಇರವು ಒಂದೇ ಆಗಿದ್ದು ಬಹುತ್ವ ಅದರ ಅಭಿವ್ಯಕ್ತಿಯಾಗಿರುತ್ತದೆ ಎಂಬ ಅರಿವನ್ನು ಪಡೆಯಲು ಅವನಿಗೆ ಸಾಧ್ಯವಾಯಿತು. ಮುಂದುವರೆದು ಮತ್ತಷ್ಟು ಅವಲೋಕನ ಮಾಡಿದಾಗ ಅವನು ತನ್ನ ಸುತ್ತಲಿನ ಎಲ್ಲವನ್ನೂ ಸಂಯೋಜಿಸುವ ಇನ್ನೊಂದು ವಿಷಯವನ್ನು ಕಂಡುಕೊಂಡನು. ಅವು ರೂಪ ಅಥವಾ ಆಕಾರ.
ರೂಪ ಅಥವಾ ಆಕಾರಗಳ(forms) ಬಗೆಗಿನ ಅರಿವು ಆಧ್ಯಾತ್ಮಿಕ ಕ್ಷೇತ್ರಕ್ಕೆ ಆತನ ಮೊದಲ ಹೆಜ್ಜೆಯಾಗಿತ್ತು. ಈ ಹಂತದಲ್ಲಿ ಪರಿಸರ ಅಧ್ಯಯನದಿಂದ ಪ್ರತಿಯೊಂದು ಘಟನೆಯ ಹಿಂದೆ ಒಂದು ಕಾರಣ ಇದೆ ಎನ್ನುವ ಕಾರ್ಯಕಾರಣದ ಮರ್ಮವನ್ನೂ ಆತ ಗ್ರಹಿಸಿಕೊಂಡಿದ್ದ. ನಂತರ ಆಕಾಶ ಲೋಕದ ಗೋಳಗಳು ಮತ್ತು ಸೂರ್ಯ-ಚಂದ್ರಗಳನ್ನು ಗಮನಿಸಿದ ಕಥಾ ನಾಯಕ ಹಯ್ಯ್ ಅವೆಲ್ಲವೂ ತಂತಮ್ಮ ಕಕ್ಷೆಗಳಲ್ಲಿ ನಿರಂತರವಾಗಿ ಚಲಿಸುತ್ತಿದೆ ಎನ್ನುವ ವಾಸ್ತವವನ್ನು ಅರಿತುಕೊಳ್ಳುತ್ತಾನೆ. ಅದರೊಂದಿಗೆ ಅವನ ಮನಸ್ಸು ದಾರ್ಶನಿಕ ಚಿಂತನೆಗಳ ಅಲೆಗಳೆದ್ದು ಪ್ರಕ್ಷುಬ್ಧಗೊಳ್ಳುತ್ತದೆ. ಆಕಾಶದಲ್ಲಿರುವ ಗೋಳಗಳು ಮತ್ತು ತಾರೆಗಳು ರೂಪುಗೊಳ್ಳುವುದು ಬೆಳಕಿನಿಂದಾದರೆ ಆ ಬೆಳಕನ್ನು ನೀಡುವ ಮೂಲ ಜ್ಯೋತಿಯ ಪ್ರಭೆಯು ಅದೆಷ್ಟು ತೀವ್ರವಾಗಿರಬಹುದೆಂದು ಆತ ಊಹಿಸುತ್ತಾನೆ. ಸರ್ವ ಜೀವ ಜಾಲಗಳ ಮೂಲ ಅದುವೆ ಆಗಿರಬಹುದೆನ್ನುವ ನಿಗಮಕ್ಕೆ ಆತ ಬರುತ್ತಾನೆ
ನಂತರದ ಭಾಗದಲ್ಲಿರುವುದು 28ರಿಂದ 35ರ ತನಕದ ವಯಸ್ಸಿನ ಹಯ್ಯಿನ ವೃತ್ತಾಂತ. ಪ್ರಪಂಚ ಮತ್ತು ನಕ್ಷತ್ರಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಹಯ್ಯ್‌ಗೆ ಅವುಗಳ ಮಿತಿಯನ್ನು (finitude) ಬಗ್ಗೆ ಅರಿವಾಗುತ್ತದೆ. ಬಹುತ್ವ ಹಾಗೂ ವೈವಿಧ್ಯತೆಯಾಚೆಗೆ ಏಕತ್ವದ ಬಿಂದುವಿನಲ್ಲಿ ಅವುಗಳನ್ನು ಪೋಣಿಸಲು ಹಯ್ಯ್ ಪ್ರಯತ್ನಿಸುತ್ತಾನೆ. ಈ ಮಹಾ ವಿಸ್ಮಯದ ಹಿಂದೆ ಕೆಲಸ ಮಾಡುತ್ತಿರುವ ಸೃಷ್ಟಿಕರ್ತನು ಪರಿಮಿತಿಯ ಗಡಿಗಳಿಗೆ ಸೀಮಿತವಾಗಿಲ್ಲ ಎಂದು ಅವನಿಗೆ ನಂತರ ಅರ್ಥವಾಗುತ್ತದೆ. ಈ ಹಂತದಲ್ಲಿ ಆಕಾಶಕಾಯಗಳ ಗೋಳಾಕಾರ (spherical), ನಕ್ಷತ್ರಗಳು ಮತ್ತು ಗ್ರಹಗಳ ಚಲನೆಯ ವೃತ್ತಾಕಾರದ (circular) ಬಗ್ಗೆ ಆತ ತಿಳಿದುಕೊಳ್ಳುತ್ತಾನೆ. ನಕ್ಷತ್ರಗಳ ಬಗೆಗಿನ ಆಳ ಜ್ಞಾನವನ್ನು ಪಡೆದ ನಂತರ ಅವನ ಮನಸ್ಸು ಪ್ರಪಂಚದ ಶಾಶ್ವತತೆಯ (eternity) ಬಗ್ಗೆ ಗಂಭೀರ ಚಿಂತನೆಗಳತ್ತ ವಾಲುತ್ತದೆ. ಪ್ರಪಂಚವು ಒಂದು ನಿರ್ದಿಷ್ಟ ಸಮಯದಲ್ಲಿ ಶೂನ್ಯತೆಯಿಂದ ಸೃಷ್ಟಿಯಾಯಿತೇ (created in time) ಅಥವಾ ಪ್ರಾರಂಭ ಅಥವಾ ಅಂತ್ಯವಿಲ್ಲದೆ ಶಾಶ್ವತವಾಗಿ ನೆಲೆಗೊಳ್ಳಲಿದೆಯೇ ಎಂಬ ಸಂದೇಹವನ್ನು ಪರಿಹರಿಸಲು ಅವನು ತೀವ್ರ ಹೆಣಗಾಡಿದನು. ಎರಡೂ ದೃಷ್ಟಿಕೋನಗಳ ಬಗೆಗಿನ ಪರ- ವಿರೋಧ ವಾದಗಳೊಂದಿಗೆ ಆಸಕ್ತಿದಾಯಕ ಚರ್ಚೆಯಲ್ಲಿ ತೊಡಗಿಕೊಂಡ ಅವನು ಅಂತಿಮವಾಗಿ ಅಲಿಪ್ತ ನೀತಿಯನ್ನು (ಎರಡೂ ಕಡೆಗೆ ಸೇರದಿರುವುದು) ಸ್ವೀಕರಿಸಿದನು. ಪ್ರಪಂಚದ ಶಾಶ್ವತತೆಯ ಬಗೆಗಿನ ಚರ್ಚೆಗೂ ಈ ಬ್ರಹ್ಮಾಂಡದ ಸೃಷ್ಟಿಕರ್ತನ ಮೇಲಿನ ವಿಶ್ವಾಸಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬ ತೀರ್ಮಾನಕ್ಕೆ ಅವನು ಬರುತ್ತಾನೆ.
ನಂತರ, ಸೃಷ್ಟಿ ವಿಶ್ವದ ವಿಸ್ಮಯದತ್ತ ತನ್ನ ಕಣ್ಣುಗಳನ್ನು ತೆರೆದ ಹಯ್ಯ್ ಸೂಕ್ಷ್ಮ ಜೀವಿಗಳ ಸೃಷ್ಟಿಯಲ್ಲಿನ ಸಮಗ್ರ ಜ್ಞಾನಿಯ ಸ್ಪರ್ಶವನ್ನು ಕಂಡು ಬೆರಗುಗೊಳ್ಳುತ್ತಾನೆ. ಈ ಸೃಜನ ವಸಂತದ ತಾಳ ಸಂಯೋಜನೆಗೆ ಮಾರುಹೋದ ಹಯ್ಯ್‌ನ ಮನದಲ್ಲಿ ಸೃಷ್ಟಿಕರ್ತನೊಂದಿಗಿನ ಉತ್ಕಟ ಪ್ರೀತಿ ಅನುರಾಗ ಉಕ್ಕಿ ಹರಿಯುತ್ತದೆ. ಪ್ರಪಂಚವು ನಶ್ವರವೆಂದೂ, ಸೃಷ್ಟಿಕರ್ತನು ಅಜರಾಮರನೆಂದೂ ಅರಿತುಕೊಳ್ಳುವುದರೊಂದಿಗೆ ಈ ಹಂತವು ಕೊನೆಗೊಳ್ಳುತ್ತದೆ.
50 ವರ್ಷ ವಯಸ್ಸಿನವರೆಗಿನ ಐದನೇ ಹಂತದಲ್ಲಿ ಮೂರು ರೀತಿಯ ಔನ್ನತ್ಯಗಳು ಹಯ್ಯ್‌ನ ಜೀವನದಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ ದೃಗ್ಗೋಚರವಲ್ಲದ ನೈಜ ಅಸ್ತಿತ್ವದ ಬಗ್ಗೆ ತಿಳಿದುಕೊಂಡು ಭೌತಿಕ ಲೋಕದ ಜುಜುಬಿ ಆಲೋಚನೆಗಳಿಂದ ನಿರ್ಗಮಿಸುತ್ತಾನೆ. ಅಪ್ರತಿಮವಾದ ಸೌಂದರ್ಯದ ಅತೀಂದ್ರಿಯ ದರ್ಶನದಲ್ಲಿ ಲೀನವಾಗುವ ಆತನಿಗೆ ತನ್ನ ಭೌತಿಕ ಅವಶ್ಯಕತೆಗಳು ಈ ಆಪ್ಯಾಯಮಾನ ಆನಂದಕ್ಕೆ ಅಡ್ಡಿಯಾಗಬಹುದೇ ಎನ್ನುವ ಕಳವಳಕ್ಕೆ ಈಡಾಗುತ್ತಾನೆ. ದಿವ್ಯ ಸೌಂದರ್ಯದ ಅನುಭವ ಯಾವುದೇ ಅಡೆತಡೆಯಿಲ್ಲದೆ ಸಿಗುತ್ತಿರಬೇಕೆಂದು ಬಗೆದ ಹಯ್ಯ್ ಅದರ ಮೇಲೆ ಸಂಪೂರ್ಣವಾಗಿ ಗಮನ ಹರಿಸುತ್ತಾನೆ. ದೀರ್ಘ ಆಲೋಚನೆಯ ನಂತರ, ಪ್ರಾಣಿಗಳಿಗೆ ಅಂತಹಾ ಒಂದು ಅಸ್ತಿತ್ವದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದುದರಿಂದ, ಅವುಗಳ ಜತೆಗಿನ ಜೀವನ ಆ ದಿವ್ಯ ಅನುಭವದಿಂದ ದೂರವಿಡಲಿದೆ ಎಂದು ಅರಿತುಕೊಳ್ಳುತ್ತಾನೆ. ಆಮೇಲೆ, ಗ್ರಹ-ತಾರೆಗಳನ್ನು ವೀಕ್ಷಿಸುವ ಹಯ್ಯ್ ದಿವ್ಯ ಸೌಂದರ್ಯದ ಬಗೆಗಿನ ಸ್ವೋಪಜ್ಞತೆ ಸ್ವಯಂ ಅವುಗಳ ಚಲನೆಗೆ ಚುರುಕಾಗಿಸಿದೆ ಹಾಗೂ ಒಂದು ಮಾರ್ಗದಲ್ಲಿ ನೆಲೆಗೊಳ್ಳಿಸಿದೆ ಎಂದು ಬಗೆಯುತ್ತಾನೆ. ಹೀಗಾಗಿ, ತನ್ನ ಜೀವನವನ್ನೂ ಒಂದು ನಿಗದಿತ ಹಾದಿಯಲ್ಲಿ ಸಾಗಿಸಬೇಕೆಂದು ಬಯಸುವ ಹಯ್ಯ್ ವಿಭಿನ್ನ ವಿಧಿವಿಧಾನಗಳು ಒಳಗೊಂಡಿರುವ ನೈತಿಕತೆಯ ಹಾದಿಯಲ್ಲಿರುವ ಜೀವನಕ್ರಮವೊಂದನ್ನು ರೂಪಿಸುತ್ತಾನೆ. ಅನೂಹ್ಯ ಸೌಂದರ್ಯದ ಒಡೆಯನ ಆ ವಿಶೇಷ ಶಕ್ತಿಯನ್ನು ನಮ್ರತೆಯೊಂದಿಗೆ ಆರಾಧನೆ ಮಾಡುವುದು ಹಯ್ಯ್‌ನ ಜೀವನದ ಒಂದು ಭಾಗವಾಗಿ ಮಾರ್ಪಡುತ್ತದೆ.
ದಿವ್ಯ ಆತ್ಮದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗುವಷ್ಟರ ಮಟ್ಟಿಗೆ ಧ್ಯಾನಾತ್ಮಕತೆಯನ್ನು ಹಯ್ಯ್ ಈ ವಯಸ್ಸಿನ ಮೂರನೇ ಹಂತದಲ್ಲಿ ಹಯ್ಯ್ ಪಡೆಯುತ್ತಿದ್ದು ಇದು ಅವನ ಆಧ್ಯಾತ್ಮಿಕ ಅನ್ವೇಷಣೆಗಳ ಒಂದು ಪರಾಕಾಷ್ಠೆ ಕೂಡಾ ಹೌದು. ಆಧ್ಯಾತ್ಮಿಕ ಜಾಗೃತಿಯ ಈ ಹಂತದಲ್ಲಿ ಸೃಷ್ಟಿಕರ್ತನ ಹಿತಗಳ ಕಡೆಗೆ ಆತ್ಮದ ಮೂಲಕ ನಿಶಾಯಾನ ನಡೆಸುತ್ತಾನೆ ಹಯ್ಯ್. ಧ್ಯಾನದ ಈ ಹಂತಗಳನ್ನು ಜಯಿಸುವ ಮೂಲಕ ಅವನಿಗೆ ಇಹದ ಎಲ್ಲಾ ಭ್ರಮೆಗಳನ್ನು ಬದಿಗಿಟ್ಟು ಸಂಪೂರ್ಣವಾಗಿ ಸೃಷ್ಟಿಕರ್ತನ ಸನ್ನಿಧಿಗೆ ಪ್ರವೇಶಿಸಲು ಸಾಧ್ಯವಾಗುತ್ತದೆ. ಕೊನೆಗೆ ಜ್ಞಾನದ ಉತ್ತುಂಗದಲ್ಲಿ ದೇವದರ್ಶನ ಭಾಗ್ಯವು ಅವನನ್ನು ಬಂದು ಸೇರುವುದರೊಂದಿಗೆ ಈ ಹಂತವು ಕೊನೆಗೊಳ್ಳುತ್ತದೆ.
ಆರನೇ ಅಥವಾ ಅಂತಿಮ ಹಂತದಲ್ಲಿ ಇಂದ್ರಿಯಗಳನ್ನು ಮೀರಿದ ದರ್ಶನಗಳನ್ನು ಪಡೆದ ಹಯ್ಯ್ ದೈವ ಧ್ಯಾನದಿಂದ ಒಂದು ಕ್ಷಣವೂ ದೂರ ನಿಲ್ಲದೆ ಎಲ್ಲಾ ಸಮಯದಲ್ಲೂ ಧ್ಯಾನ-ಆರಾಧನೆಯಲ್ಲೇ ಸಮಯ ಕಳೆಯುತ್ತಾನೆ. ತನ್ನ ಉಳಿದ ಜೀವನವನ್ನು ಇಹದ ಇನಿತು ಛಾಯೆ ಕೂಡಾ ಸ್ಪರ್ಶಿಸದ ಹಾಗೆ ಸಂಪೂರ್ಣತೆಯ ಔನ್ನತ್ಯದಲ್ಲಿ ಕಳೆಯುವುದರೊಂದಿಗೆ ಈ ಹಂತವು ಕೊನೆಗೊಳ್ಳುತ್ತದೆ. ಆದರೆ ಹಯ್ಯ್ ಜೀವನದಲ್ಲಿ ನಡೆದ ಮಹತ್ವಪೂರ್ಣ ತಿರುವು ನೆರೆಯ ದ್ವೀಪದಿಂದ ಬಂದ ‘ಅಬ್ಸಲ್’ನನ್ನು ಭೇಟಿಯಾಗುವುದರೊಂದಿಗೆ ಪ್ರಾರಂಭವಾಗುತ್ತದೆ. ಇಬ್ನ್ ತುಫೈಲ್ ಮುಂದೆ ಹಯ್ಯ್- ಅಬ್ಸಲ್ ಭೇಟಿಯನ್ನು ವಿವರಿಸುತ್ತಾರೆ.
ಹಯ್ಯ್‌ನ ದ್ವೀಪದ ಸಮೀಪ ಇದ್ದ ಜನರ ವಾಸ್ತವ್ಯ ಇರುವ ದ್ವೀಪವೊಂದರಲ್ಲಿ ಒಂದು ಪ್ರವಾದಿಯ ಅನುಯಾಯಿಗಳಾದ ಧಾರ್ಮಿಕ ವಿಶ್ವಾಸಿಗಳು ಆಗಮಿಸುತ್ತಾರೆ. ಅವರ ಜೀವನ ಶೈಲಿಯಿಂದ ಅವರು ಜನರನ್ನು ಧರ್ಮದತ್ತ ಆಕರ್ಷಿಸುತ್ತಾರೆ. ಅವರಲ್ಲಿ ಒಳ್ಳೆಯ ಇಬ್ಬರು ಸ್ನೇಹಿತರಿದ್ದರು. ಅಬ್ಸಲ್ ಮತ್ತು ಸಲಮನ್. ಇಬ್ಬರೂ ಧರ್ಮದ ಆಚಾರ-ವಿಚಾರಗಳನ್ನು ಸರಿಯಾಗಿ ಪಾಲಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಧಾರ್ಮಿಕ ಗ್ರಂಥಗಳಲ್ಲಿನ ಸುಲಭ ಗ್ರಾಹ್ಯವಲ್ಲದ ಪರಾಮರ್ಶೆಗಳನ್ನು ಹೇಗೆ ಓದಬೇಕು ಎಂಬ ವಿಷಯದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು. ಅಂತಹಾ ಉಲ್ಲೇಖಗಳನ್ನು ಅವುಗಳ ಭಾಷಾರ್ಥ ಪ್ರಕಾರವೇ ಅರ್ಥೈಸಬೇಕು ಎಂದು ಸಲಮನ್ ವಾದಿಸುತ್ತಿದ್ದ. ಆದರೆ, ಅಬ್ಸಲ್ ಅವುಗಳಿಗೆ ರೂಪಕಾತ್ಮಕ (ಮಜಾಝ್) ನೆಲೆಯಲ್ಲಿ ವ್ಯಾಖ್ಯಾನಗಳನ್ನು ನೀಡಬೇಕೆಂದು ವಾದಿಸುತ್ತಿದ್ದ. ಈ ಭಿನ್ನಾಭಿಪ್ರಾಯದ ಕಾರಣ ಅವರು ಇಬ್ಬರು ಬೇರೆಯಾದರು. ಸಲಮನನ ಒಲವು ಸಮಾಜದೊಂದಿಗೆ ಬೆರೆತು ಜೀವಿಸುದವುದರ ಕಡೆಗಿತ್ತು. ಏಕಾಂಗಿ ಜೀವನ ಅಬ್ಸಲ್‌ನ ಆಯ್ಕೆಯಾಗಿತ್ತು.
ಏಕಾಂತ ವಾಸವನ್ನು ಬಯಸುತ್ತಾ ಕೊನೆಗೆ ಅಬ್ಸಲ್ ಹಯ್ಯ್ ವಾಸ ಮಾಡುತ್ತಿದ್ದ ಕಡೆಗೆ ತಲುಪುತ್ತಾನೆ. ವಾರಕ್ಕೊಮ್ಮೆ ಮಾತ್ರ ಆಹಾರ ಸೇವಿಸುತ್ತಿದ್ದ ಹಯ್ಯ್ ಆಹಾರವನ್ನು ಹುಡುಕುತ್ತಾ ಅಬ್ಸಲ್ ಬಿಡಾರಹೂಡಿದ್ದ ಜೋಪಡಿಯ ಬಳಿ ಬಂದು ತಲುಪುತ್ತಾನೆ. ಆ ಅದ್ಭುತ ಜೀವಿಯನ್ನು ನೋಡಿ ಆಶ್ಚರ್ಯಚಕಿತನಾದ ಹಯ್ಯ್ ಅವನ ಕಡೆಗೆ ತೆರಳುತ್ತಾನೆ. ತನ್ನ ಏಕಾಂತಕ್ಕೆ ಎಲ್ಲಿ ಅಡ್ಡಿಯಾಯಿತೊ ಎನ್ನುವ ಭಯದಿಂದ ಅಬ್ಸಲ್ ಅಲ್ಲಿಂದ ಓಡಿಹೋಗುತ್ತಾನೆ. ಆದರೆ ಹಯ್ಯ್ ಅವನನ್ನು ಬೆಂಬತ್ತಿ ಹಿಡಿಯುತ್ತಾನೆ. ಏನೂ ತೊಂದರೆ ಕೊಡದೆ ಅಬ್ಸಲ್‌ನನ್ನು ದೂರದಿಂದ ವೀಕ್ಷಿಸಲು ಶುರು ಮಾಡುತ್ತಾನೆ ಹಯ್ಯ್. ಮನುಷ್ಯ ಭಾಷೆಯ ಪರಿಜ್ಞಾನವಿಲ್ಲದ ಹಯ್ಯ್‌ಗೆ ಅಬ್ಸಲ್ ಭಾಷೆ ಕಲಿಸುತ್ತಾನೆ. ಅವರ ಮಧ್ಯೆ ಪ್ರಪಂಚದ ರಹಸ್ಯಗಳ ಬಗ್ಗೆ ಅನೇಕ ತಾತ್ವಿಕ ಚರ್ಚೆಗಳು ನಡೆಯುತ್ತವೆ. ಈ ಚರ್ಚೆಯ ಮೂಲಕ ಅಬ್ಸಲ್ ಒಂದು ಸತ್ಯವನ್ನು ಗ್ರಹಿಸುತ್ತಾನೆ.
ಅಲ್ಲಾಹನು ದಿವ್ಯ ಸಂದೇಶಗಳ ಮೂಲಕ ನೀಡಿದ ಧಾರ್ಮಿಕ ಸತ್ಯಗಳನ್ನು ಹಯ್ಯ್ ಬುದ್ಧಿಯಿಂದ ಚಿಂತಿಸಿ ಕಂಡುಕೊಂಡಿದ್ದಾನೆ. ಅಬ್ಸಲ್‌ನ ದ್ವೀಪ ಮತ್ತು ಅದರ ನಿವಾಸಿಗಳ ಧರ್ಮ ನಿಷ್ಠೆಯ ಬಗ್ಗೆ ಕೇಳಿ ತಿಳಿದ ಹಯ್ಯ್ ಅವರನ್ನು ಕಾಣುವ ಇಂಗಿತ ವ್ಯಕ್ತಪಡಿಸಿದ. ದಿಕ್ಕು ತಪ್ಪಿ ಅಲ್ಲಿ ತಲುಪಿದ್ದ ಒಂದು ಸಣ್ಣ ಹಡಗಿನಲ್ಲಿ ಇಬ್ಬರೂ ಅಬ್ಸಲ್‌ನ ದ್ವೀಪವನ್ನು ತಲುಪಿದರು. ದೇವರ ಅತೀವ ಸಾಮೀಪ್ಯವನ್ನು ಪಡೆದ ಮಹಾನ್ ಚೇತನ ಎಂದು ಹಯ್ಯ್‌ನನ್ನು ಅಬ್ಸಲ್ ಜನರಿಗೆ ಪರಿಚಯಪಡಿಸಿದಾಗ ಹಯ್ಯ್‌ನ ಉಪದೇಶಗಳನ್ನು ಆಲಿಸಲು ತಂಡೋಪತಂಡವಾಗಿ ಅಲ್ಲಿನ ಜನರು ಬಂದು ಸೇರುತ್ತಾರೆ. ಅಬ್ಸಲ್‌ನ ಸ್ನೇಹಿತ ಸಲಮನ್ ಆಗ ಅಲ್ಲಿನ ಆಡಳಿತಗಾರನಾಗಿದ್ದ. ಸಲಮನ್ ಮತ್ತು ಅವನ ಜನರು ಮೊದಮೊದಲು ಹಯ್ಯ್‌ನ ಉಪದೇಶಗಳನ್ನು ಗಮನವಿಟ್ಟು ಕೇಳುವ ಮೂಲಕ ಆತ್ಮ ಸಂಸ್ಕರಣೆಗೊಳಿಸಿ ಸಂತೃಪ್ತರಾಗುತ್ತಿದ್ದರು. ದೇವರ ಗುಣಗಳ ಬಗೆಗಿನ ಸೂಕ್ತಗಳನ್ನು ಭಾಷಾರ್ಥ ಪ್ರಕಾರವೇ ಓದಬೇಕೆನ್ನುವುದು ಅಬ್ಸಲ್‌ನ ಊರಿನ ಜನರ ವಾದವಾಗಿತ್ತು. ಉದಾಹರಣೆಗೆ ‘ಯದುಲ್ಲಾಹಿ ಫೌಕ ಅಯಿದೀಹಿಮ್’ ಎನ್ನುವ ರೂಪಕಾತ್ಮಕ ಪ್ರಯೋಗವನ್ನು ಅಬ್ಸಲ್ ನ ಊರಿನವರು ದೇವರಿಗೆ ಕೈ ಇದೆ ಎಂದು ಅರ್ಥ ಮಾಡಿದ್ದರು. ಇದನ್ನು ವಿರೋಧಿಸಿದ ಹಯ್ಯ್ ನಮಗೆ ಸುಪರಿಚಿತವಾದ ಭಾಷೆಯಲ್ಲಿ ದೇವನ ಗುಣಗಳನ್ನು ಅರ್ಥ ಮಾಡುವುದು ಸರಿಯಲ್ಲ ಎನ್ನುತ್ತಾನೆ. ಅದನ್ನು ಅರ್ಥ ಮಾಡಬೇಕಾದ ರೀತಿ ಬೇರೆಯೇ ಎಂದು ಹಯ್ಯ್ ತಿಳಿ ಹೇಳಿದಾಗ ಅಲ್ಲಿನ ಜನರು ಅವನಿಂದ ಕ್ರಮೇಣ ದೂರವಾಗತೊಡಗಿದರು. ಯಾರೇ ಬಂದು ಹೇಳಿದರೂ ತಲೆತಲಾಂತರಗಳಿಂದ ಪಾಲಿಸಿಕೊಂಡು ಬಂದಿರುವ ದಾರಿಯನ್ನು ಬದಲಾಯಿಸಲು ಸಿದ್ಧರಲ್ಲದ ಜನರ ಸ್ವಭಾವ ನೋಡಿ ಹಯ್ಯ್ ತೀವ್ರವಾಗಿ ನೊಂದುಕೊಂಡನು. ಕೊನೆಗೆ, ಹಯ್ಯ್ ಮತ್ತು ಅಬ್ಸಲ್ ಒಲ್ಲದ ಮನಸ್ಸಿನಿಂದ ಪುನಃ ಏಕಾಂತ ವಾಸಕ್ಕೆ ಹಯ್ಯ್‌ನ ದ್ವೀಪದ ಕಡೆಗೆ ಹಿಂದಿರುಗುತ್ತಾರೆ. ಅಲ್ಲಿ ತಲುಪಿ ಮರಣದ ತನಕ ಆರಾಧನೆಯಲ್ಲೇ ಕಾಲ ಕಳೆಯುತ್ತಾರೆ.
ಪ್ರಭಾವ
ಹಯ್ಯ್ ಬಿನ್ ಯಕ್ಲಾನ್ ಅವರ ಜೀವನ ಶೈಲಿ ಹಾಗೂ ವ್ಯಕ್ತಿತ್ವದಿಂದ ಆಕರ್ಷಿತರಾದ ಅನೇಕ ಚಿಂತಕರಲ್ಲಿ ಇಬ್ನ್ ರುಶ್ದ್ ಪ್ರಮುಖರು. ಅವರ ಗ್ರಂಥಗಳಾದ ತಹಾಫುತುಲ್ ತಹಾಫುತ್ ಮತ್ತು ಫಸ್ಲುಲ್ ಮಖಾಲ್ ಮುಂತಾದ ಗ್ರಂಥಗಳಲ್ಲಿ ಮೂಡಿ ಬಂದಿರುವ ಅವರ ದೃಷ್ಟಿಕೋನಗಳು ಇದಕ್ಕೆ ಸಾಕ್ಷಿ. ಇದರ ಜೊತೆಗೆ ಇಬ್ನು ರುಶ್ದ್ ಹಯ್ಯ್ ಇಬ್ನ್ ಯಖ್ಲಾನ್ ಬಗ್ಗೆ ಒಂದು ವಿವರಣಾ ಗ್ರಂಥವನ್ನು ಕೂಡಾ ರಚಿಸಿದ್ದಾರೆ. ಪ್ರಖ್ಯಾತ ಪರ್ಷಿಯನ್ ಕವಿ ನೂರುದ್ದೀನ್ ಜಾಮಿ ಎಂಬ ಹೆಸರಿನ ಜಾಮಿ ಹಯ್ಯ್ ಜೀವನದಿಂದ ಆಕರ್ಷಿತರಾದ ಮತ್ತೊಬ್ಬ ಮೇಧಾವಿ. ‘ಸಲಮನ್ ಮತ್ತು ಅಬ್ಸಲ್’ ಎಂಬ ತನ್ನ ಸೂಫಿ ಕವಿತೆಯ ಮೂಲಕ ಈಯೆರಡು ಕಥಾ ಪಾತ್ರಗಳನ್ನು ಜಾಮಿ ಅಜರಾಮರಗೊಳಿಸಿದ್ದಾನೆ. ಹಯ್ಯ್ ಇಬ್ನ್ ಯಕ್ಲಾನ್ ಬಗ್ಗೆ ವಿಮರ್ಶೆಯನ್ನು ಬರೆದಿರುವ ಅಲಾವುದ್ದೀನ್ ಬಿನ್ ನಫೀಸ್ ಬರೆದ ‘ಅರ್ರಿಸಾಲತುಲ್ ಕಾಮಿಲಿಯ್ಯಾ ಫಿ ಸ್ಸೀರತಿ ನ್ನಬವಿಯ್ಯಾಹ್’ ಎನ್ನುವ ಪ್ರತಿಕಥೆ ಮತ್ತು ಹಯ್ಯ್‌ನ ಕತೆ ಏಕಭಾವವನ್ನೆ ಸ್ಫುರಿಸುತ್ತದೆ. ನಿರ್ಜನ ದ್ವೀಪದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡು ಒಂದು ಅನ್ವೇಷಣೆ ಮಾಡುತ್ತಾ ಜೀವಿಸಿ ಕೊನೆಗೆ ದೇವ ದರ್ಶನ ಪಡೆಯುವ ಕಥಾತಂತು ಈ ಕೃತಿಯಲ್ಲಿಯೂ ಕಾಣಬಹುದು.
ಇಬ್ನ್ ತುಫೈಲ್ ಬರೆದಿರುವ ಹಯ್ಯ್‌ನ ಕತೆ ಯುರೋಪಿನ ಪ್ರಸಿದ್ಧ ಬುದ್ಧಿಜೀವಿಗಳ ರಸಾಸ್ವಾದವಾಗಿ ಒಂದು ಕಾಲದಲ್ಲಿ ಮಾರ್ಪಟ್ಟಿತ್ತು. ಆಲ್ಬರ್ಟ್ ಮ್ಯಾಗ್ನಸ್, ಸೈಂಟ್ ಥಾಮಸ್ ಅಕ್ವಿನಾಸ್, ವೋಲ್ಟೇರ್, ರೂಸೋ ಮತ್ತು ದಿದರೋ ಮುಂತಾದ ಐತಿಹಾಸಿಕ ಪ್ರತಿಭೆಗಳ ಮೆಚ್ಚುಗೆ ಪಡೆದಿತ್ತು. ಪ್ರಸಿದ್ಧ ಜರ್ಮನ್ ಚಿಂತಕ ಎಫ್ರೇಮ್ ಲೆಸ್ಸಿಂಗ್ ನ ಕೃತಿ ‘ಜ್ಞಾನಿಯಾದ ನಥಾನ್(ನಥಾನ್ ದಿ ವೈಸ್) ಎಂಬ ಕೃತಿ ಕೂಡ ಹಯ್ಯ್‌ಗೆ ಋಣಿಯಾಗಿತ್ತು. ರಾಬಿನ್ಸನ್ ಕ್ರೂಸೋ, ಜಂಗಲ್ ಬುಕ್, ಟಾರ್ಜನ್ ಮತ್ತು ಲೈಫ್ ಆಫ್ ಪೈ ಮುಂತಾದ ಕಾದಂಬರಿಗಳು ರಚಿತವಾಗುವುದರ ಹಿಂದಿನ ಎಲ್ಲಾ ಶ್ರೇಯಸ್ಸು ಹಯ್ಯ್‌ಗೆ ಲಭಿಸುತ್ತದೆ ಎಂದು ಆಧುನಿಕ ಸಂಶೋಧನಾ ಅಧ್ಯಯನಗಳು ಸಾಬೀತುಪಡಿಸುತ್ತದೆ.
ಧಾರ್ಮಿಕತೆ ಮತ್ತು ವೈಚಾರಿಕತೆಯ ನಡುವೆ ಸೂಕ್ಷ್ಮಾರ್ಥದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬ ಸತ್ಯವನ್ನು ಈ ಕಾದಂಬರಿ ಧೈರ್ಯಪೂರ್ವಕ ಘೋಷಿಸಿದೆ. ಅದೇ ವೇಳೆ, ಮತಾಂಧತೆ ಮತ್ತು ಧಾರ್ಮಿಕತೆಯ ನಡುವೆ ಬೇರ್ಪಡಿಸಲಾಗದ ಅಂತರವಿದೆ ಎನ್ನುವುದನ್ನು ತಿಳಿಸಿದೆ. ಏಕತ್ವದಲ್ಲಿ ವಿಲೀನವಾದ ಬಹುತ್ವವನ್ನು ಮತ್ತು ಬಹುತ್ವ ಅಭಿವ್ಯಕ್ತಿಸುವ ಏಕತ್ವವನ್ನು ದರ್ಶಿಸುವ ಮೂಲಕ ಹಲವಾರು ವಿಶೇಷತೆಗಳು-ವೈವಿಧ್ಯತೆಗಳು ತುಂಬಿ ನಿಂತಿರುವ ಈ ಜಗತ್ತಿನಲ್ಲಿ ಐಕ್ಯತೆಯ ಸ್ವಚ್ಛತೆಯನ್ನು ಪಡಿಮೂಡಿಸುವುದೇ ಪ್ರಬುದ್ಧತೆ ಎನ್ನುವ ಸಂದೇಶವನ್ನು ಹಯ್ಯ್ ಇಬ್ನ್ ಯಖ್ಲಾನ್ ನೀಡಿದ್ದಾನೆ.
ಕನ್ನಡಕ್ಕೆ: ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಗದಗ
ಕೃಪೆ: ತೆಳಿಚ್ಚಂ ಮಲಯಾಳಂ ಪತ್ರಿಕೆ