ಅಮೀರ್ ಖುಸ್ರೋ ಕಾವ್ಯಲೋಕ

ಭಾರತದ ಕೀರ್ತಿಯನ್ನು ದೇಶ- ವಿದೇಶಗಳಲ್ಲಿ ಪಸರಿಸಿದ ಅನೇಕ ಮಹಾನುಭಾವರಿದ್ದಾರೆ. ಅಂತಹ ಮಹಾನ್ ಚೇತನರಲ್ಲಿ ದಾರ್ಶನಿಕ, ಇತಿಹಾಸಕಾರ, ಗಣಿತಜ್ಞ, ಸಂತ, ರಾಜಕೀಯ ತಜ್ಞ, ಕವಿ ಮುಂತಾದ ಹಲವು ಪ್ರತಿಭಾ ಸಂಪನ್ನ ಮಹಾಪುರುಷ ಅಮೀರ್ ಖುಸ್ರೋ (1235-1325) ಕೂಡ ಒಬ್ಬರು. ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಸಾಹಿತ್ಯ, ಇತಿಹಾಸ, ರಾಜಕೀಯ, ಧರ್ಮ, ಅಧ್ಯಾತ್ಮ, ಭಾಷಿಕತೆ ಮುಂತಾದವುಗಳ ಸಂದರ್ಭದಲ್ಲಿ ಅಮೀರ್ ಖುಸ್ರೋರವರ ಉಲ್ಲೇಖವನ್ನು ಗೌರವಪೂರ್ವಕವಾಗಿ ಮಾಡಲಾಗುತ್ತದೆ. ತಮ್ಮ ಚಟುವಟಿಕೆ ಹಾಗೂ ವೈವಿಧ್ಯಮಯ ಅಭಿರುಚಿಗಳಿಂದಾಗಿ ಅಮೀರ್ ಖುಸ್ರೋ ಒಂದು ಅಪರೂಪದ ಬಹುಮುಖ ಪ್ರತಿಭೆ. ಮಾನವೀಯತೆ ಹಾಗೂ ಸಮನ್ವತೆಯ ಧ್ಯೇಯೋದ್ದೇಶ ಸಾಧನೆಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟರು.

ಅಮೀರ್ ಖುಸ್ರೋ ಖಡೀಬೋಲಿ ಅಥವಾ ಹಿಂದುವಿ (ಹಿಂದಿ)ಯ ಪ್ರಥಮ ಕವಿ, ಉದಾರವಾದಿ ಸೂಫಿ ಚಿಂತನೆಯ ಪ್ರವರ್ತಕ, ಹಿಂದೂ-ಮುಸ್ಲಿಮ್ ಭಾವೈಕ್ಯತೆಯ ಹರಿಕಾರ, ಸಾಂಸ್ಕೃತಿಕ ಸಮನ್ವಯದ ಸೇತು ಚೇತನ, ಭಾರತೀಯ ಸಂಗೀತದ ಅನನ್ಯ ಪ್ರಯೋಗಶೀಲ, ‘ಜನನಿ- ಜನ್ಮಭೂಮಿ’ ಪರಿಕಲ್ಪನೆಯನ್ನು ಹೊಂದಿರುವ ಅದಮ್ಯ ರಾಷ್ಟ್ರಪ್ರೇಮಿ. ಭಾರತೀಯ ಇತಿಹಾಸದ 750 ವರ್ಷಗಳಲ್ಲಿ ಇಂತಹ ಇನ್ನೊಬ್ಬ ವ್ಯಕ್ತಿಯನ್ನು ಕಾಣಲಾರೆವು. ಅಮೀರ್ ಖುಸ್ರೋ ಅನೇಕ ಭಾಷೆಗಳಲ್ಲಿ ಪಂಡಿತರಾಗಿದ್ದರು ಹಾಗೂ ಬಹು ಭಾಷೆಗಳಲ್ಲಿ ಕಾವ್ಯ ರಚನೆ ಮಾಡಿರುವರು. ಆದಾಗ್ಯೂ ದೇಶ, ಭಾಷೆ, ಈ ನೆಲದ ಜನಸಾಮಾನ್ಯರ ಆಡುಮಾತು ಹಿಂದಿ (ಹಿಂದುವಿ) ಭಾಷೆಯ ಬಗ್ಗೆ ಅವರಿಗೆ ವಿಶೇಷ ಪ್ರೇಮವಿತ್ತು. ಹೀಗಾಗಿ ಫಾರ್ಸಿ ಶೈಲಿಯಲ್ಲಿ ಹಿಂದಿ ಭಾಷೆಯ ಪ್ರಯೋಗ ಮಾಡಿದ್ದು ಅತೀ ವಿಶಿಷ್ಟವಾಗಿದೆ. ಇದು ಸಮಕಾಲೀನ ಸಂದರ್ಭದಲ್ಲೂ ಭಾಷಿಕ ಸಮನ್ವಯತೆ ಸಾಧಿಸಲು ಮಹತ್ವಪೂರ್ಣ ಹೆಜ್ಜೆಯಾಗಿದೆ. ಅರಬ್ಬಿ- ಫಾರ್ಸಿಯ ಪ್ರಾಬಲ್ಯದ ಕಾಲಹಂತದಲ್ಲಿ ಹಿಂದುಸ್ತಾನದ ಭಾಷೆ ಖಡಿಬೋಲಿಯನ್ನು ಸಾಹಿತ್ಯಿಕವಾಗಿ ಸಮೃದ್ಧಗೊಳಿಸಿದ್ದು ಉಲ್ಲೇಖನೀಯವಾಗಿದೆ. ಹಿಂದಿ ಭಾಷೆಯ ಸಾಹಿತ್ಯಿಕ ಪ್ರಯೋಗಶೀಲತೆಯಿಂದಾಗಿ ಹಿಂದಿ ಭಾಷಿಕರಿಗೆ ಅಮೀರ ಖುಸ್ರೋ ಅಭಿಮಾನದ ಪುರುಷರಾಗಿದ್ದಾರೆ.

ಅಮೀರ್ ಖುಸ್ರೊ ಅವರ ಕಾವ್ಯದ ಇನ್ನೊಂದು ವಿಶಿಷ್ಟತೆ ಅವರ ಅಗಾಧ ರಾಷ್ಟ್ರಪ್ರೇಮ, ಅವರ ಸಾಹಿತ್ಯಿಕ ರಚನೆಗಳಲ್ಲಿ ದೇಶಪ್ರೇಮ, ದೇಶಭಕ್ತಿ, ಭಾರತ ಮಹಿಮೆ ಓತಪ್ರೋತವಾಗಿದೆ. ತಮ್ಮ ಕವಿತೆಗಳಲ್ಲಿ ಭಾರತದ ವೈವಿಧ್ಯತೆಯ ಮನಮೋಹಕ ವರ್ಣನೆ ಮಾಡಿದ್ದಾರೆ. ಭಾರತದ ಜ್ಞಾನ, ಭಾಷೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಿರಿಮೆಯನ್ನು ತಮ್ಮ ಕಾವ್ಯದೆಲ್ಲಡೆ ಹೃದಯಸ್ಪರ್ಶಿಯಾಗಿ ವರ್ಣಿಸಿದ್ದಾರೆ. ಹೀಗಾಗಿ ಅಮೀರ್ ಖುಸ್ರೋ ಅಪರೂಪದ ದೇಶಾಭಿಮಾನಿ ಕವಿ.

ಹದಿಮೂರನೆ ಶತಮಾನದಲ್ಲಿ, ಚೆಂಗೇಸ್ ಖಾನ್‌ನ ಆಳ್ವಿಕೆಯ ಅವಧಿಯಲ್ಲಿ, ಮೊಘಲರ ದಬ್ಬಾಳಿಕೆಯಿಂದ ಬೇಸತ್ತು, ತುರ್ಕಿಯ ಲಾಚಿನ್ ಪಂಗಡದ ಸರದಾರ ಅಮೀರ್ ಸೈಫುದ್ದೀನ್ ಮೊಹಮ್ಮದ್ ಭಾರತಕ್ಕೆ ಬಂದು, ಉತ್ತರ ಪ್ರದೇಶದ ಈಟಾ ಜಿಲ್ಲೆಯ ಪಟಿಯಾಲಿ ಎಂಬ ಸ್ಥಳದಲ್ಲಿ ನೆಲೆಸಿದರು. ಸೌಭಾಗ್ಯದಿಂದ ಸುಲ್ತಾನ್ ಶಮ್ಸುದ್ದೀನ್ ಅಲ್ತಮಷ್‌ನ ದರ್ಬಾರಿನ ಸಂಪರ್ಕವಾಗಿ ಸೈನಿಕ ಅರ್ಹತೆಯಿಂದಾಗಿ ಸರದಾರರಾಗಿ ನಿಯುಕ್ತಿಗೊಂಡರು. ಇವರು ಅಮೀರ್ ಖುಸ್ರೋವಿನ ತಂದೆ. ಇಮಾದುಲ್ ಮುಲ್ಕನ ಪುತ್ರಿಯ ಜೊತೆ ಇವರ ವಿವಾಹವಾಯಿತು. ಇವರಿಗೆ ಇಜಾದುದ್ದೀನ್ ಅಲಿಶಾಹ, ಅಬುಲ್ ಹಸನ್ (ಅಮೀರ್ ಖುಸ್ರೊ) ಮತ್ತು ಹಿಸಾಮುದ್ದೀನ್ ಕುತ್‌ಲಗ್ ಎಂಬ ಮೂವರು ಪುತ್ರರು ಜನ್ಮ ತಾಳಿದರು. ಈ ಮೂವರು ಸಹೋದರರಲ್ಲಿ ಅಮೀರ್ ಖುಸ್ರೊ ಅತೀವ ಬುದ್ಧಿಶಾಲಿಯಾಗಿದ್ದರು. ಇವರ ಜನ್ಮವು ಕ್ರಿ.ಶ.1253(ಹಿ.653)ರಲ್ಲಿ ಆಯಿತೆಂದು ತಿಳಿದುಬರುತ್ತದೆ.

ಖುಸ್ರೋರವರು ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ತಂದೆಯ ಜೊತೆ ದೆಹಲಿಗೆ ಬಂದು, ಖಾಜಿ ಅಸದುದ್ದೀನ್ ಮಹ್ಮದ್‌ರ ಶಿಷ್ಯತ್ವದಲ್ಲಿ ಶಿಕ್ಷಣ ಆರಂಭಿಸಿದರು. ತದನಂತರ ಅವರ ತಂದೆಯವರು ಉತ್ತಮ ವಿದ್ಯಾರ್ಜನೆಗಾಗಿ ಪ್ರಸಿದ್ಧ ಸೂಫಿ ಸಂತರಾದ ಹಜ್ರತ್ ಖ್ವಾಜಾ ನಿಜಾಮುದ್ದೀನ್‌ರವರ ಚರಣಾರವಿಂದದಲ್ಲಿ ಅರ್ಪಿಸಿ, ಅವರ ಶಿಷ್ಯ(ಮುರೀದ್)ನನ್ನಾಗಿ ಮಾಡಿದರು. ಏತನ್ಮದ್ಧೆ ಖುಸ್ರೋ ಅವರು ಎಂಟು ವರ್ಷದವರಿದ್ದಾಗ ಒಂದು ಯುದ್ಧದಲ್ಲಿ 85 ವರ್ಷದ ಅವರ ತಂದೆ ಸೈಫುದ್ದೀನ್ ಮಹಮ್ಮದರ ನಿಧನವಾಯಿತು. ವಿವಶಳಾದ ಅವರ ತಾಯಿಯು ತನ್ನ ತಂದೆ ಇಮಾದುಲ್ ಮುಲ್ಕ್ ಮನೆಗೆ ತೆರಳಬೇಕಾಯಿತು. 113 ವಯಸ್ಸಿನ ವಯೋವೃದ್ಧ ಇಮಾದುಲ್ ಮುಲ್ಕ್ ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿದ್ದರು. ಇವರು ಖುಸ್ರೋವಿಗೆ ಹಲವು ವಿದ್ಯೆಗಳ ಅಧ್ಯಯನಕ್ಕೆ ವ್ಯವಸ್ಥೆ ಮಾಡಿದರು. ಇವರ ಮನೆಯಭಾಷೆ ಹಿಂದಿ(ಹಿಂದುವಿ) ಆಗಿತ್ತು. ಹಿಂದಿಯ ಜೊತೆಗೆ ಸಂಸ್ಕೃತ, ಅರಬ್ಬಿ, ಫಾರ್ಸಿ, ತುರ್ಕಿ ಹಾಗೂ ಭಾರತೀಯ ಇನ್ನಿತರ ಪ್ರಾಂತೀಯ ಭಾಷೆಗಳ ಜ್ಞಾನವಿತ್ತು. ಅಮೀರ್ ಖುಸ್ರೋರವರು ತಮ್ಮ ಕೃತಿ ‘ತೊಹಫತುಲ್- ಸಗ್ರ್’ ನಲ್ಲಿ ದೇವರ ಕೃಪೆಯಿಂದ ಹನ್ನೆರಡನೆ ವಯಸ್ಸಿನಲ್ಲಿ ತಾವು ಕವಿತೆ ಮತ್ತು ರುಬಾಯಿ ರಚನೆ ಮಾಡುತ್ತಿದ್ದರೆಂದು ಹಾಗೂ ಇದನ್ನು ಕಂಡು ಅನೇಕ ವಿದ್ವಾನ್ ಗುರುಗಳು ಆಶ್ಚರ್ಯ ಪಡುತ್ತಿದ್ದಾರೆಂದು ಉಲ್ಲೇಖಿಸಿದ್ದಾರೆ. ಖುಸ್ರೋ 17 ವರ್ಷದ ಚಿಕ್ಕ ವಯಸ್ಸಿನಲ್ಲಿ ಒಬ್ಬ ಕವಿಯಾಗಿ, ಕವಿಗೋಷ್ಠಿಗಳ ಕಣ್ಮಣಿಯಾಗಿದ್ದರು. ಮಧುರ ಕಂಠದಲ್ಲಿ ಅವರ ಶೃಂಗಾರ ಕವಿತೆಗಳು ಕವಿಗೋಷ್ಠಿಯಲ್ಲಿ ಬಿರುಗಾಳಿಯನ್ನೆ ಎಬ್ಬಿಸುತ್ತಿದ್ದವು. ಶ್ರೋತೃಗಳು ಅವರ ಕವಿತಾ ಪ್ರಸ್ತುತಿಯಿಂದ ಮಂತ್ರಮುಗ್ಧರಾಗುತ್ತಿದ್ದರು. ಅವರು ಯಾರನ್ನು ನಿರ್ದಿಷ್ಟವಾಗಿ ಕಾವ್ಯ ಗುರುವಾಗಿ ಹೊಂದದೇ ಇದ್ದರೂ, ಶಮ್ಸುದ್ದೀನ್ ಖ್ವಾರಿಜಿಯವರನ್ನು ಕಾವ್ಯಗುರು ಎಂದು ಸ್ವೀಕರಿಸಿದ್ದರು. ಹೀಗಾಗಿ ತಮ್ಮ ಪ್ರಸಿದ್ಧ ಕೃತಿ ‘ಪಂಜ್ ಗಂಜ್’ನ್ನು ಖ್ವಾರಿಜಿಯವರಿಗೆ ಪರಿಷ್ಕರಣೆಗೆ ಅರ್ಪಿಸಿದ್ದರು. ನಿರ್ದಿಷ್ಟ ಕಾವ್ಯಗುರುವನ್ನು ಹೊಂದದೇ ಇದ್ದರೂ, ಖುಸ್ರೋರವರು ಗಜಲ್ ಕ್ಷೇತ್ರದಲ್ಲಿ ಸಾದಿಯವರಿಂದ, ಮಸ್ನವಿ ಕ್ಷೇತ್ರದಲ್ಲಿ ನಿಜಾಮಿಯವರಿಂದ, ಸೂಫಿ ಕಾವ್ಯಕ್ಷೇತ್ರದಲ್ಲಿ ಕಾಖಾನಿ ಹಾಗೂ ಸನಾಯಿ ಮತ್ತು ಖಸೀದಾ ಕ್ಷೇತ್ರದಲ್ಲಿ ಕಮಾಲ್ ಇಸ್ಮಾಯಿಲ್‌ರಿಂದ ಅತ್ಯಂತ ಪ್ರಭಾವಿತರಾಗಿದ್ದರು. ಖುಸ್ರೋರವರು ಏಕಕಾಲಕ್ಕೆ ಕವಿ, ಗದ್ಯಲೇಖಕ, ಕಲಾಕಾರ, ಸಂಗೀತಜ್ಞ, ಸಾಹಸಿ ಸೈನಿಕ ಹಾಗೂ ಸಂತ ಹೀಗೆ ಹಲವು ವೈಶಿಷ್ಟ್ಯಗಳ ಸಂಗಮವಾಗಿದ್ದರು. ಇಂತಹ ವಿಭಿನ್ನ ಸಾಹಿತ್ಯ ಸಿದ್ಧಿಗಳ ಕವಿ- ಲೇಖಕ ಭಾರತ ಮತ್ತು ಇರಾನ್‌ನಲ್ಲಿ ಬೇರೆ ಯಾರೂ ಆಗಿರುವುದಿಲ್ಲ.

ಜಾಮಿಯವರ ಪ್ರಕಾರ ಖುಸ್ರೋ ಅವರಿಂದ ರಚಿತವಾದ ಗ್ರಂಥಗಳ ಸಂಖ್ಯೆ ತೊಂಬತ್ತೆರಡು. ಆದರೆ ತೊಂಬತ್ತೊಂಬತ್ತು ಕಾವ್ಯಕೃತಿಗಳೇ ಲಭ್ಯವಿವೆ. ಇವರ ಕಾವ್ಯಗಳು ಶೃಂಗಾರ, ಶಾಂತ, ವೀರ ಮತ್ತು ಭಕ್ತಿ ರಸಗಳ ಸುಂದರ ಸಮ್ಮಿಲನವಾಗಿವೆ.

ಅಮೀರ್ ಖುಸ್ರೋ 1275ರಿಂದ 1325 ರವರೆಗೆ ರಾಜಕೀಯ, ಆಸ್ಥಾನಿಕ ಮತ್ತು ಸೈನಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ರಾಜಕೀಯ ವಿದ್ಯಮಾನಗಳ ಅನುಭವ ಖುಸ್ರೋ ಅವರಿಗೆ ಇದ್ದಷ್ಟು ಬೇರೆ ಯಾವ ಕವಿ- ಲೇಖಕನಿಗೂ ಇರಲಿಲ್ಲ. ಗುಲಾಮಿ ರಾಜವಂಶದ ಪತನದಿಂದ ಆರಂಭಿಸಿ, ತುಘಲಕ್ ವಂಶದ ಉಚ್ಛ್ರಾಯವನ್ನು ಕಣ್ಣಾರೆ ಕಂಡವರಾಗಿದ್ದರು. ದಿಲ್ಲಿಯ ಸಿಂಹಾಸನದಲ್ಲಿ ಹನ್ನೊಂದು ಸುಲ್ತಾನರು ಸಿಂಹಾಸನರೋಹಣಕ್ಕೆ ಸಾಕ್ಷಿಯಾಗಿದ್ದರು ಹಾಗೂ ಸ್ವಯಂ ಏಳು ಸುಲ್ತಾನರ ಆಸ್ಥಾನದಲ್ಲಿ ಸೇವಾ ನಿರತರಾಗಿದ್ದರು. ಭಾರತ ಇತಿಹಾಸದ ತುಂಬಾ ವಿಷಮ ಪರಿಸ್ಥಿತಿಯನ್ನು ಕಣ್ಣಾರೆ ಕಂಡವರಾಗಿದ್ದರು. ಆದರೂ ಅದ್ಯಾವುದು ತಿಲಮಾತ್ರವೂ ಖುಸ್ರೋ ಅವರನ್ನು ಪ್ರಭಾವಿಸಲಿಲ್ಲ. ಅವರು ರಾಜನೀತಿಯ ಕಟೆಕಟೆಯಲ್ಲಿದ್ದರೂ ಅದರಿಂದ ಅವರು ಅತೀವ ದೂರವಿದ್ದರು. ಇದರರ್ಥ ಖುಸ್ರೋ ರಾಜನೀತಿ ಅನಭಿಜ್ಞರಾಗಿದ್ದರು ಎಂಬರ್ಥವಲ್ಲ. ಅವರು ರಾಜನೀತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದರು. ಇದನ್ನು ಅವರ ಐತಿಹಾಸಿಕ ಗ್ರಂಥಗಳಿಂದ ತಿಳಿಯಬಹುದು. ಈ ಕಾಲದಲ್ಲಿ ತಮ್ಮ ವೀರತ್ವ, ಬುದ್ಧಿವಂತಿಕೆ, ಸೂಕ್ಷ್ಮ ಬುದ್ಧಿಮತ್ತೆ, ಪ್ರಾಮಾಣಿಕತೆ, ಪ್ರಸನ್ನ ಚಿತ್ತ ಹಾಗೂ ಸಾಹಿತ್ಯಿಕ ವಿಶೇಷತೆಗಳಿಂದಾಗಿ ಒಬ್ಬ ನುರಿತ ಹಾಗೂ ದಕ್ಷ ಆಸ್ಥಾನಕಾರನಾಗಿ ಹೊರಹೊಮ್ಮಿದರು.

ಅಮೀರ್ ಖುಸ್ರೊ ಮೊತ್ತಮೊದಲಿಗೆ ಸುಲ್ತಾನ್ ಬಲ್ಪನ್‌ನ ಸಹೋದರನ ಪುತ್ರ ಮಲಿಕ್ ಅಲಾವುದ್ದೀನ್ ಕಶಲಿಖಾನ್ ಉರ್ಫ್ರ ಛಜ್ಜುವಿನ ದರ್ಬಾರಿನಲ್ಲಿ ಸೇವಾನಿರತರಾದರು. ಖುಸ್ರೋ ಅವನ ಗುಣಗಾನದಲ್ಲಿ ಖಸೀದಾಗಳನ್ನು ಬರೆದರು. ಆದರೆ ಒಂದು ರಾತ್ರಿ ಬಲ್ಬನ್‌ನ ಪುತ್ರ ಬೋಗ್ರಾಖಾನ್ ಮಲಿಕ್ ಛಜ್ಜು ಮಹಫಿಲ್‌ನಲ್ಲಿ ಭಾಗವಹಿಸಿದನು. ಈ ಗೋಷ್ಠಿಯಲ್ಲಿ ಖುಸ್ರೋ ತನ್ನ ಮನೋರಮೆಯ ಕಾವ್ಯವನ್ನು ಮಧುರ ಕಂಠದಲ್ಲಿ ವಾಚನ ಮಾಡಿದ್ದರು. ಬೋಗ್ರಾಖಾನ್ ಖುಸ್ರೋವಿನ ಕಾವ್ಯದಿಂದ ಅತೀವ ಪ್ರಸನ್ನನಾಗಿ ಒಂದು ತುಂಬಿದ ಹರಿವಾಣ ಬೆಳ್ಳಿಯ ನಾಣ್ಯಗಳನ್ನು ಕಾಣಿಕೆಯಾಗಿ ನೀಡಿದ್ದನು. ಈ ವರ್ತನೆ ಕಶಲಿಖಾನ್‌ನಿಗೆ ಅಪಥ್ಯವಾಯಿತು. ಖುಸ್ರೋ ಸಾಧ್ಯವಿರುವ ಎಲ್ಲಾ ರೀತಿಯಿಂದ ಕಶಲಿಯ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅದು ನಿರರ್ಥಕವಾದಾಗ ಖುಸ್ರೋ ಅವರು ಅಲ್ಲಿಂದ ಪಲಾಯನ ಮಾಡಿ, ಬೊಗರಾಖಾನ್‌ನ ದರ್ಬಾರನ್ನು ಸೇರಿದರು. ಕೆಲವು ದಿನಗಳ ಬಳಿಕ ಬಲ್ಬನ್, ಬೋಗರಾಖಾನನ್ನು ತನ್ನ ಜೊತೆಗೆ ಲಖ್ನೋಟಿಗೆ ತೆರಳಲು ಆದೇಶಿಸಿದನು. ಬೋಗರಾ ಖಾನ್ ಖುಸ್ರೋರನ್ನು ಸಹ ಜೊತೆಯಲ್ಲಿ ಬರಲು ಸೂಚಿಸಿದನು. ಲಖ್ನೋಟಿಯ ವಿಜಯ ಪ್ರಾಪ್ತಿಯ ಬಳಿಕ ಬಲ್ಬನ್, ಬೋಗರಾ ಖಾನನನ್ನು ಲಖ್ನೋಟಿ ಮತ್ತು ಬಂಗಾಳದ ಅಧಿಕಾರಿಯಾಗಿ ನೇಮಿಸಿದನು. ಬೋಗರಾಖಾನ್‌ನು ಖುಸ್ರೋವನ್ನು ಲಖ್ನೋಟಿಯಲ್ಲಿ ತನ್ನ ಜೊತೆಯಲ್ಲಿಯೇ ಇರಿಸಿಕೊಳ್ಳಲು ಬಯಸಿದ್ದನು. ಆದರೆ ಬೊಗರಾಖಾನ್ ಮತ್ತು ಕಶರಿಖಾನ್‌ರವರ ಪರಸ್ಪರ ವೈಮನಸಿನಿಂದಾಗಿ ಖುಸ್ರೋ ಅಲ್ಲಿರಲು ಬಯಸದೇ ಸೈನ್ಯದ ಜೊತೆ ದೆಹಲಿಗೆ ಹಿಂತಿರುಗಿದನು.

ದೆಹಲಿಯಲ್ಲಿ ವಿಜಯದ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಲ್ಬನ್‌ನ ಇನ್ನೋರ್ವ ಸಹೋದರನ ಪುತ್ರ ಮುಲ್ತಾನಿನ ಆಡಳಿತಗಾರನಾಗಿದ್ದ ಸುಲ್ತಾನ್ ಮಹ್ಮದ್ ಮುಲ್ತಾನಿನಿಂದ ದೆಹಲಿಗೆ ಆಗಮಿಸಿದ್ದನು. ಅಲ್ಲಿ ಖುಸ್ರೋವಿನ ಕಾವ್ಯವಾಚನವನ್ನು ಕೇಳಿ ಅತೀವ ಪ್ರಭಾವಿತನಾಗಿ, ಖುಸ್ರೋವನ್ನು ತನ್ನ ಜೊತೆ ಮುಲ್ತಾನಿಗೆ ಕರೆದುಕೊಂಡು ಹೋಗಿ, ತನ್ನ ಆಸ್ಥಾನಿಕನಾಗಿ ಸೇರಿಸಿಕೊಂಡನು. ಆಗ ಖುಸ್ರೋ ಅವರ ವಯಸ್ಸು ಕೇವಲ ಇಪ್ಪತ್ತೆಂಟು ವರ್ಷ ಆಗಿತ್ತು.

ಸುಲ್ತಾನ್ ಮೊಹಮ್ಮದ್ ಅತ್ಯಂತ ದಕ್ಷ ಆಡಳಿತಗಾರ, ಕಾವ್ಯ- ಪ್ರೇಮಿ ಹಾಗೂ ಉದಾರ ಸ್ವಭಾವದ ವ್ಯಕ್ತಿಯಾಗಿ ಅವನು ಸುಮಾರು ಇಪ್ಪತ್ತು ಸಾವಿರ ದ್ವಿಪದಿಗಳ ಕಾವ್ಯ- ಸಂಗ್ರಹವನ್ನು ಸಹ ರಚಿಸಿದ್ದನು. ಖುಸ್ರೋ ಅವನ ಆಸ್ಥಾನದಲ್ಲಿ ಐದು ವರ್ಷ ಅತ್ಯಂತ ಸಂತಸದಿಂದ ಮತ್ತು ನೆಮ್ಮದಿಯಿಂದ ಕಳೆದರು. ಆದರೆ ಕ್ರಿ.ಶ. 1284ರಲ್ಲಿ ಮೊಘಲರು ಪಂಜಾಬಿನ ಮೇಲೆ ಆಕ್ರಮಣ ಮಾಡಿದರು. ಆದರೆ ರಾಜಕುಮಾರನು ದಿಯಾಲ್‌ಪುರದ ಈ ಯುದ್ಧದಲ್ಲಿ ಮಡಿದನು. ಖುಸ್ರೋ ಸಹ ಯುದ್ಧಭೂಮಿಯಲ್ಲಿ ರಾಜಕುಮಾರನ ಜೊತೆಗಿದ್ದನು. ಮೊಘಲರು ಖುಸ್ರೋನನ್ನು ಬಂಧಿಯಾಗಿಸಿ ಬಲಖ್ ಮತ್ತು ಹೇರಾತ್‌ಗೆ ಕರೆದೊಯ್ದರು. ಅಸಂಖ್ಯಾತ ಸಂಕಷ್ಟಗಳ ಬಳಿಕ ಎರಡು ವರ್ಷದ ತರುವಾಯ ಖುಸ್ರೋಗೆ ಇಲ್ಲಿಂದ ಬಿಡುಗಡೆ ದೊರೆಯಿತು. ಆಗ ತನ್ನ ಜನ್ಮಭೂಮಿ ಪಟಿಯಾಲಿಗೆ ಹಿಂತಿರುಗಿದರು. ಖುಸ್ರೋ ಸುಲ್ತಾನ್ ಮೊಹಮ್ಮದನ ಸ್ಮೃತಿಯಲ್ಲಿ ಕೆಲವು ಶೋಕಗೀತೆಗಳನ್ನು (ಮರ್ಸಿಯಾ) ಬರೆದರು. ಆ ಕವನಗಳನ್ನು ಗಿಯಾಸುದ್ದೀನ್ ಬಲ್ಬನ್‌ನ ಆಸ್ಥಾನದಲ್ಲಿ ಓದಿದರು. ಬಲ್ಬನ್ ಮೇಲೆ ಈ ಶೋಕಗೀತೆಗಳ ಪ್ರಭಾವ ಎಷ್ಟಾಯಿತೆಂದರೆ ಅವನು ಸತತವಾಗಿ ರೋಧಿಸಿ, ಜ್ವರದಿಂದ ಬಳಲಿ, ಕೇವಲ ಮೂರೇ ದಿನಗಳಲ್ಲಿ ಸಾವನಪ್ಪಿದನು ಎಂದು ಹೇಳಲಾಗುತ್ತದೆ.

ತದನಂತರ ಅಮೀರ್ ಖುಸ್ರೋ ಅಮೀರ್ ಅಲಿ ಮೀರ್ ಜಾಮ್‌ದಾರ ಅವರ ಜೊತೆಯಾದರು. ಹಾಗೂ ಅವರಿಗಾಗಿ ‘ಅಸ್ಪ್ನಾಮಾ’ ಕೃತಿಯನ್ನು ರಚಿಸಿದರು. ಅಮೀರ್ ಅಲಿ ಜಾಮ್‌ದಾರ್ ಅವಧ್‌ನ ಸುಬೇದಾರ್ ಆಗಿ ನಿಯುಕ್ತಿಗೊಂಡಾಗ, ಅಮೀರ್ ಖುಸ್ರೋ ಸಹ ಅವರ ಜೊತೆ ಅಲ್ಲಿಗೆ ಹೋದರು. ಎರಡು ವರ್ಷದ ಬಳಿಕ ಕ್ರಿ.ಶ. 1288ರಲ್ಲಿ ದೆಹಲಿಗೆ ವಾಪಸಾದರು. ಆಗ ಕೇಕುಬಾದ್ ಖುಸ್ರೋ ಅವರನ್ನು ತನ್ನ ದರ್ಬಾರಿಗೆ ಆಮಂತ್ರಿಸಿದರು. ಕೇಕುಬಾದ್‌ನ ಅಂತ್ಯದವರೆಗೆ ಅವರು ಅವನ ಶಾಹಿದರ್‌ಬಾರ್‌ನಲ್ಲಿಯೇ ಉಳಿದರು. ಇಲ್ಲಿ ಖುಸ್ರೋ ಅವರು ಕ್ರಿ.ಶ. 1289ರಲ್ಲಿ ‘ಕಿರಾಯೆಸ್ಸಾದೇನ್’ ಎಂಬ ಕೃತಿಯನ್ನು ಕೇವಲ ಆರು ತಿಂಗಳಲ್ಲಿ ರಚಿಸಿದರು. ಇದರಲ್ಲಿ ಖುಸ್ರೋ ಅವರು ಕೇಕುಬಾದ್ ತನ್ನ ತಂದೆ ಬೊಗರಾ ಖಾನ್‌ನನ್ನು ಭೇಟಿಯಾದ ವಿವರಗಳ ಉಲ್ಲೇಖವಿದೆ. ಕೇಕುಬಾದ್‌ನ ದರ್ಬಾರಿನಲ್ಲಿ ಖುಸ್ರೋ ಅವರಿಗೆ ‘ಮುಲ್ಕ್-ಉಶ್-ಶೋರಾ’ (ರಾಷ್ಟ್ರಕವಿ) ಎಂದು ಬಿರುದು ನೀಡಲಾಯಿತು.

ಕ್ರಿ.ಶ. 1290ರಲ್ಲಿ ಕೇಕುಬಾದ್ ಯುದ್ಧದಲ್ಲಿ ಮಡಿದನು. ಇದರಿಂದಾಗಿ ಗುಲಾಮ್ ವಂಶದ ಅಂತ್ಯವಾಯಿತು. ಬಳಿಕ 70 ವರ್ಷದ ವಯೋವೃದ್ಧ ಜಲಾಲುದ್ದೀನ್ ಖಿಲ್ಜಿ ದೆಹಲಿಯ ಸಿಂಹಾಸನರೂಢನಾದನು. ಇವನು ಸತ್ಯಪ್ರೇಮಿ ಹಾಗೂ ದರ್ವೇಶಿ ಸ್ವಭಾವದ ವ್ಯಕ್ತಿಯಾಗಿದ್ದನು. ಇವನು ಅಮೀರ್ ಖುಸ್ರೋವಿನ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಿದನು. ಖುಸ್ರೋವನ್ನು ಆಸ್ಥಾನ ಕವಿಯ ಉಪಾಧಿ ನೀಡಿ ಅವನಿಗೆ ವೇತನವನ್ನು ನಿಗದಿಪಡಿಸಿದನು. ಖುಸ್ರೋ, ಸುಲ್ತಾನ್ ಜಲಾಲುದ್ದೀನನ ವಿಜಯಗಳ ಉಲ್ಲೇಖವನ್ನು ‘ಮಿಫ್ತಾಹುಲ್ ಫುತೂಹ್’ ಎಂಬ ಮಸ್ನವಿಯಲ್ಲಿ ಮಾಡಿರುವನು. ಇದು ಅತ್ಯಂತ ಜನಪ್ರಿಯವಾಯಿತು.

ಕ್ರಿ.ಶ. 1296ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ತನ್ನ ವೃದ್ಧ ಚಿಕ್ಕಪ್ಪ ಹಾಗೂ ಮಾವ ಜಲಾಲುದ್ದೀನ್ ಖಿಲ್ಜಿಯ ಹತ್ಯೆಗೈದು, ದೆಹಲಿಯ ಸಿಂಹಾಸನವನ್ನು ಆಕ್ರಮಿಸಿದನು. ಇವನು ಅಮೀರ್ ಖುಸ್ರೋ ಬಗ್ಗೆ ಉದಾರ ಮನೋಭಾವ ಹೊಂದಿದ್ದನು. ಹೀಗಾಗಿ ಖುಸ್ರೋವಿಗೆ ‘ಖುಸ್ರೋ-ಏ-ಶೊವೂರಾ’ ಎಂಬ ಬಿರುದು ನೀಡಿ, ಒಂದು ಸಾವಿರ ವೇತನವನ್ನು ನಿಗದಿಪಡಿಸಿದನು. ಅಮೀರ್ ಖುಸ್ರೊ ಅಲ್ಲಾವುದ್ದೀನ್ ಕುರಿತು ಅನೇಕ ಕೃತಿಗಳನ್ನು ರಚಿಸಿದನು. ಇವು ಇತಿಹಾಸಕ್ಕೆ ಸಂಬಂಧ ಪಟ್ಟಿವೆ. ಇವುಗಳಲ್ಲಿ ‘ತಾರೀಖ್-ಏ-ಅಲಾಯಿ’ ಅತ್ಯಂತ ಪ್ರಸಿದ್ಧವಾಯಿತು.

ಕ್ರಿ.ಶ. 1317ರಲ್ಲಿ ಕುತುಬುದ್ದೀನ್ ಮುಬಾರಕ್ ಶಾಹ ದೆಹಲಿಯ ಸುಲ್ತಾನನಾದನು. ಕುತುಬುದ್ದೀನ್ ಮುಬಾರಕ್ ಶಾಹ, ಖುಸ್ರೋ ರಚಿಸಿದ ಖಸೀದಾಗಳನ್ನು ಕೇಳಿ ಅದೆಷ್ಟು ಪ್ರಸನ್ನನಾದನೆಂದರೆ, ಆನೆಯ ತೂಕ ಚಿನ್ನ ಮತ್ತು ರತ್ನಗಳನ್ನು ನೀಡಿದನೆಂದು ಹೇಳಲಾಗುತ್ತದೆ. ಕ್ರಿ.ಶ. 1320ರಲ್ಲಿ ಖುತುಬುದ್ದೀನ್ ಮುಬಾರಕ್ ಶಾಹನ ಮಂತ್ರಿ ಖುಸ್ರೊ ಖಾನ್‌ನು ಅವನನ್ನು ಹತ್ಯೆ ಮಾಡಿದನು. ಇದರಿಂದಾಗಿ ಖಿಲ್ಜಿ ವಂಶದ ಆಳ್ವಿಕೆ ಸಮಾಪ್ತವಾಯಿತು. ನಂತರ ಪಂಜಾಬ್‌ನಿಂದ ಬಂದ ‘ಘಾಜಿಖಾನ್ ಗಿಯಾಸುದ್ದೀನ್ ತುಘಲಕ್ ಎಂಬ ನಾಮದೊಂದಿಗೆ ದೆಹಲಿಯ ಸಿಂಹಾಸನವೇರಿದನು. ಖುಸ್ರೋರವರು ಇವನ ಬಗ್ಗೆ ‘ತುಘಲಕ್ ನಾಮಾ’ ಎಂಬ ಕೃತಿ ರಚನೆ ಮಾಡಿರುತ್ತಾರೆ. ಇದೆ ಖುಸ್ರೊರವರ ಕೊನೆಯ ಕೃತಿಯಾಗಿದೆ.

ಅಮೀರ್ ಖುಸ್ರೊರವರಿಗೆ ಗಿಯಾಸುದ್ದೀನ್ ಅಹ್ಮದ್‌ ವನುದ್ದೀನ್ ಅಹ್ಮದ್, ಯಮೀನುದ್ದೀನ್ ಮುಬಾರಕ್ ಮತ್ತು ಒಬ್ಬ ಪುತ್ರಿ ಇದ್ದರು. ಅಮೀರ್ ಖುಸ್ರೋ ಭಾಷೆ ಮತ್ತು ಸಂಸ್ಕೃತಿಯ ಅಪರೂಪದ ಸಮನ್ವಯ ಮಾಡಿದ್ದರು. ಯಾಕೆಂದರೆ ಆ ಸಮಯದಲ್ಲಿ ಭಾರತಕ್ಕೆ ಆಗಮಿಸಿದ ಮುಸಲ್ಮಾನರು ತಮ್ಮದೇ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದರು. ಭಾರತವು ಆ ಕಾಲಕ್ಕೆ ವೈವಿಧ್ಯತೆಯಲ್ಲೂ ತನ್ನದೆ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿತ್ತು. ಹೀಗಾಗಿ ಹಿಂದೂ ಮತ್ತು ಮುಸ್ಲಿಮರು ಭಿನ್ನವಾಗಿ ಕಂಡುಬರುತ್ತಿದ್ದರು. ಈ ವಿಭಿನ್ನತೆಯನ್ನು ತೊಡೆದುಹಾಕಿ, ಭಾಷಾ ಸಾಮರಸ್ಯವನ್ನು ನೆಲೆಗೊಳಿಸಲು ಖುಸ್ರೋರವರು ‘ಖಾಲಿಕ್ ಬಾರಿ’ ಎಂಬ ಕೃತಿ ರಚನೆ ಮಾಡಿದರು.

ಈ ಕೃತಿಯಲ್ಲಿ ಖುಸ್ರೊರವರು ಅರಬ್ಬಿ, ಫಾರಸಿ ಹಾಗೂ ಹಿಂದಿ ಶಬ್ದಗಳ ಪರ್ಯಾಯವನ್ನು ಶೋಧಿಸಿದರು. ಹಾಗೆಯೇ ಆಗ ಪ್ರಚಲಿತವಿದ್ದ ಹಿಂದುವಿ ಭಾಷೆಯಲ್ಲಿ ಕಾವ್ಯರಚನೆ ಆರಂಭಿಸಿದರು. ಏಕತೆ ಮತ್ತು ಸಮನ್ವಯತೆಯ ಸಾಧನೆಗೆ ಭಾಷೆ ಅತಿ ಮಹತ್ವದ ಸಾಧನವೆಂದು ಖುಸ್ರೋರವರು ನಂಬಿದ್ದರು. ಸಾಂಸ್ಕೃತಿಕ ಸಮನ್ವಯಕ್ಕಾಗಿ ಸಂಗೀತದ ಪಾತ್ರದ ಬಗ್ಗೆ ಅವರಿಗೆ ಸ್ಪಷ್ಟವಾದ ಕಲ್ಪನೆಯಿತ್ತು. ಮುಸ್ಲಿಮರು ಭಾರತಕ್ಕೆ ಬರುವ ಮೊದಲೆ ಅರಬ್ಬಿ ಮತ್ತು ಫಾರಸಿ ರಾಗಗಳ ಮಿಶ್ರಣ ಆಗಿತ್ತು. ಆದರೆ ಭಾರತಕ್ಕೆ ಮುಸ್ಲಿಮರು ಬಂದ ನಂತರ ಅದಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ದೊರೆತು, ಸಂಗೀತ ಹೊರತಾಗಿಯೂ, ವಾಸ್ತುಕಲೆ ಮತ್ತು ಲಲಿತಕಲೆಗಳಲ್ಲಿ ಸಂಕರ ಸಂಸ್ಕೃತಿ ಆರಂಭವಾಯಿತು. ಎರಡು ಸಂಸ್ಕೃತಿಗಳ ಮಿಲನದಿಂದಾಗಿ ಜ್ಞಾನ, ಭಾಷೆ, ಸಂಗೀತ ಮತ್ತೆ ಕಲೆಗಳಲ್ಲಿ ಹೊಸತನದ ಸಾಧ್ಯತೆಗಳು ಹುಟ್ಟಿ ಅವುಗಳನ್ನು ಜನಸಾಮಾನ್ಯರ ಮಟ್ಟದಲ್ಲಿ ಪ್ರಯೋಗಿಸುವುದು ಅವಶ್ಯಕವೆಂದು ಖುಸ್ರೋರವರು ಮನಗಂಡಿದ್ದರು. ಹಿಂದೂ- ಮುಸ್ಲಿಮ್ ಹೃದಯಗಳನ್ನು ಬೆಸೆಯಲು ಸೂಫಿ ಸಾಧಕರ ಪಾತ್ರವೂ ಮಹತ್ವದ್ದೆಂದು ಅವರು ನಂಬಿದ್ದರು.

ಅಮೀರ್ ಖುಸ್ರೋ ಸುಲ್ತಾನರ ಆಸ್ಥಾನಗಳ ನಿಕಟ ಸಂಕರ್ಪವಿದ್ದರೂ, ಅವರು ತಮ್ಮ ಅಧಿಕ ಸಮಯವನ್ನು ಸೂಫಿ ಖಾನ್ ಖಾ (ಸೂಫಿ ಮಠ)ಗಳಲ್ಲಿ ವ್ಯಯಿಸುತ್ತಿದ್ದರು. ಹಜ್ರತ್ ನಿಜಾಮುದ್ದೀನ್ ಔಲಿಯಾರವರು ಅಮೀರ್ ಖುಸ್ರೋರವರ ಆಧ್ಯಾತ್ಮಿಕ ಗುರುವಾಗಿದ್ದರು. ಗುರು ಮತ್ತು ಶಿಷ್ಯರ ಮಧ್ಯೆ ಅಗಾಧ ಪ್ರೇಮವಿತ್ತು. ಇಬ್ಬರೂ ಒಬ್ಬರೊಬ್ಬರನ್ನು ಅಗಲಿ ಇರಲು ಬಯಸುತ್ತಿರಲಿಲ್ಲ. ಹಜ್ರತ್ ನಿಜಾಮುದ್ದೀನ್ ಔಲಿಯಾರವರು ಖುಸ್ರೋ ಬಗ್ಗೆ ಹೇಳುವುದೇನೆಂದರೆ: “ಅಕಾಸ್ಮಾತ್ ಒಂದೇ ಗೋರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಧಫನ್ ಮಾಡುವ ಧಾರ್ಮಿಕ ಅನುಮತಿ ಇರುತ್ತಿದ್ದರೆ ಅಮೀರ್ ಖುಸ್ರೋ ಅವರನ್ನು ನನ್ನ ಗೋರಿಯಲ್ಲಿಯೇ ದಫನ್ ಮಾಡಲು ಹೇಳುತ್ತಿದ್ದೆ.” ಅವರು ಖುಸ್ರೋನನ್ನು ಅದೆಷ್ಟು ಪ್ರೇಮಿಸುತ್ತಿದ್ದರೆಂದರೆ “ಹೇ ತುರ್ಕ್, ನಾನು ಎಲ್ಲರಿಂದ ಬೇಜಾರಾಗಿದ್ದೇನೆ; ನನ್ನಿಂದಲೂ ಸಹ ಆದರೆ ನಿನ್ನಿಂದ ಎಂದೂ ಬೇಜಾರಾಗುವುದಿಲ್ಲ” ಖುಸ್ರೋವಿನ ನಡೆ ಹಾಗು ವ್ಯವಹಾರದಿಂದ ಅದೆಷ್ಟು ಸಂತುಷ್ಟರಾಗಿರುತ್ತಿದ್ದರೆಂದರೆ ಅವರನ್ನು ‘ತುರ್ಕೆ ಅಲ್ಲಾಹ್’ ಎಂದು ಕರೆಯುತ್ತಿದ್ದರು.

ಅಮೀರ್ ಖುಸ್ರೋರವರು ಸಂಸ್ಥಾನದ ನಿಕಟ ಸಂಬಂಧ ಹೊಂದಿದ್ದರು. ಅವರು ಬಡ ಜನರನ್ನು ಯಾವಾಗಲೂ ಭೇಟಿಯಾಗುತ್ತಿದ್ದರು. ತಮಗೆ ಸುಲ್ತಾನರು ಮತ್ತು ಸರದಾರರಿಂದ ದೊರೆತ ಸಂಪತ್ತನ್ನು ಬಡಬಗ್ಗರಲ್ಲಿ ಹಂಚುತ್ತಿದ್ದರು. ಧಾರ್ಮಿಕ ವ್ಯಕ್ತಿಯಾದರೂ ಧಾರ್ಮಿಕ ಕಠೋರತೆ ಇರಲಿಲ್ಲ. ನಿಜಾಮುದ್ದೀನ್ ಔಲಿಯಾರವರ ತತ್ವವಾಗಿದ್ದ ಪರಮಾತ್ಮನನ್ನು ತಲುಪಲು ಅನೇಕ ಮಾರ್ಗಗಳಿವೆ ಎಂಬ ಸಿದ್ಧಾಂತ ಅವರಿಗೆ ಅತೀವ ಪ್ರಿಯವಾಗಿತ್ತು.

ಅಮೀರ್ ಖುಸ್ರೋರವರ ಸದ್‌ವ್ಯವಹಾರ ಹಾಗೂ ವಿದ್ವತ್‌ನಿಂದಾಗಿ ಹಜ್ರತ್ ನಿಜಾಮುದ್ದೀನ್ ಔಲಿಯಾ ಅವರು ಪ್ರಸನ್ನರಾಗಿ, ಅತೀವ ಹೆಮ್ಮೆ ಪಡುತ್ತಿದ್ದರು. ಹಜ್ರತ್ ನಿಜಾಮುದ್ದೀನ್ ಔಲಿಯಾರವರು ಸುಲ್ತಾನ್ ಮತ್ತು ಸರದಾರರಿಂದ ಸದಾ ದೂರ ಇರಲು ಪ್ರಯತ್ನಿಸುತ್ತಿದ್ದರು. ಇದನ್ನು ಸುಲ್ತಾನ್ ಜಲಾಲುದ್ದೀನ್ ಖಿಲ್ಜಿ ಸಹ ಅರಿತಿದ್ದನು. ಆದರೂ ಸುಲ್ತಾನ್ ಜಲಾಲುದ್ದೀನ್ ಹಜ್ರತ್‌ರನ್ನು ಭೇಟಿಯಾಗಲು ಹಾತೊರೆಯುತ್ತಿದ್ದನು. ಸುಲ್ತಾನನು ಖುಸ್ರೋ ಅವರಿಗೆ ‘ನಾವು ಅನುಮತಿಯಿಲ್ಲದೆ ಹೋಗಿ ಅವರನ್ನು ಭೇಟಿಯಾಗೋಣ. ಈ ವಿಷಯವನ್ನು ನೀನು ಅವರಿಗೆ ತಿಳಿಸಬೇಡ’ ಎಂದು ಒಂದು ಸಲ ಆಜ್ಞಾಪಿಸಿದನು. ಖುಸ್ರೋ ಇದರಿಂದ ಸಂದಿಗ್ಧತೆಯಲ್ಲಿ ಬಿದ್ದರು. ಆದರೆ ಅಂತಿಮವಾಗಿ ಈ ಸಮಸ್ತ ವಿಷಯವನ್ನು ತಮ್ಮ ಗುರುವಿಗೆ ತಿಳಿಸಿದರು. ಇದು ಸುಲ್ತಾನನಿಗೆ ಅರಿವಾಗಿ, ಸುಲ್ತಾನನು ಖುಸ್ರೋ ಅವರ ಬಗ್ಗೆ ಅತೀವ ಅಸಂತುಷ್ಟನಾಗಿ ‘ನೀವು ನನ್ನನ್ನು ಶೇಖ ಭೇಟಿಯಿಂದ ವಂಚಿಸಿದ್ದೀರಿ’ ಎಂದು ದೂರಿದನು. ಅದಕ್ಕೆ ಖುಸ್ರೋ ಅವರು “ಸುಲ್ತಾನನು ಕ್ರೋಧಿತನಾಗಿರುವುದರಿಂದ ನನ್ನ ಶಿರಚ್ಛೇದನವಾಗಬಹುದು. ಆದರೆ ಶೇಖರು ಅಸಂತುಷ್ಟರಾದರೆ, ನನ್ನ ಧರ್ಮ ವಿಶ್ವಾಸವೇ ಹೋಗುವ ಭಯವಿದೆ” ಎಂದು ತಕ್ಷಣವೇ ಉತ್ತರಿಸಿದರು. ಇದರಿಂದ ಅವರು ಖಾನ್‌ಬಾಹ್‌ಗೆ ನೀಡುತ್ತಿದ್ದ ಮಹತ್ವದ ಅರಿವಾಗುತ್ತದೆ.

ಹಜ್ರತ್ ನಿಜಾಮುದ್ದೀನ್ ಔಲಿಯಾರವರು ನಿಧನಹೊಂದಿದಾಗ, ಅಮೀರ್ ಖುಸ್ರೊರವರು ಸುಲ್ತಾನ್ ಗಿಯಾಸುದ್ದೀನ್ ತುಘಲಕ್ ಜೊತೆ ಬಂಗಾಳಕ್ಕೆ ಹೋಗಿದ್ದರು. ತಮ್ಮ ಪೀರರ ನಿಧನ ಸುದ್ದಿ ತಿಳಿದು ಅವರು ಹುಚ್ಚನಂತಾದರು ಎಂದು ಹೇಳಲಾಗುತ್ತದೆ. ಸತತ ರೋದನ ಆಕ್ರಂದನ ಮಾಡುತ್ತಾ ಅವರು ದೆಹಲಿ ತಲುಪಿದರು ಹಾಗೂ ಈ ಕೆಳಗಿನ ದೋಹಾ ವಾಚಿಸುತ್ತಾ ಪೀರರ ಗೋರಿಯ ಮೇಲೆ ಎರಗಿದರು.

“ಗೋರಿ ಸೋಯಿ ಸೇಜ್ ಪರ್, ಮುಖ್ ಪರ್ ಡಾರೆ ಕೇಸ್
ಚಲ್ ಖುಸ್ರೊ ಘರ್ ಅಪನೆ, ರೈನ್ ಭಯಿ ಚಹುದೇಸ್”
(ಚೆಲುವೆಯು ತನ್ನ ಕೇಶವನು ಮುಖದ ಮೇಲೆ ಹರಡಿ ಮಲಗಿಹಳು
ಕತ್ತಲು ಆವರಿಸಿದೆ, ಖುಸ್ರೋ ನೀ ನಡೆ ನಿನ್ನ ಮನೆಗೆ)

ತದನಂತರ ತಾವು ಗಳಸಿದ ಸಂಪತ್ತನ್ನು ಬಡ- ಬಗ್ಗರಿಗೆ ಹಂಚಿ, ತಮ್ಮ ಗುರುವಿನ ಗೋರಿಯ ಬಳಿ ಕಪ್ಪು ಬಟ್ಟೆ ಉಟ್ಟು ಕುಳಿತುಕೊಂಡರು. ರೋದಿಸುತ್ತಾ, ಸೂರ್ಯನು ಭೂಮಿ ಅಡಿಯಲ್ಲಿ ಮರೆಯಾದನೆಂದು ನುಡಿಯುತ್ತಿದ್ದರು. ಗುರುವಿನ ನಿಧನದ ಬಳಿಕ ಆರು ತಿಂಗಳಲ್ಲಿ 18 ಶವ್ವಾಲ್ 725 ಹಿಜ್ರಾ (ಅಕ್ಟೋಬರ್ 1325 ) ನಿಧನ ಹೊಂದಿದರು. ಅವರನ್ನು ಹಜ್ರತ್ ನಿಜಾಮುದ್ದೀನ್ ಗೋರಿಯ ಪಕ್ಕದಲ್ಲೆ ದಫನ್ ಮಾಡಲಾಯಿತು. ಅವರ ನಿಧನಹೊಂದಿದ ದಿನದಂದು ಪ್ರತಿ ವರ್ಷ ಉರುಸ್ ಆಚರಿಸಲಾಗುತ್ತದೆ. ಹಿಂದೂ- ಮುಸ್ಲಿಮರು ಅತೀವ ಭಾವಭಕ್ತಿಯಿಂದ ಅವರ ಉರುಸ್‌ನಲ್ಲಿ ಪಾಲ್ಗೊಂಡು ಶ್ರದ್ಧಾ ಗೌರವಗಳನ್ನು ಅರ್ಪಿಸುತ್ತಾರೆ.

ಅಮೀರ್ ಖುಸ್ರೊ ಅವರ ಕೃತಿಗಳ ಪರಿಚಯ:

ಅಮೀರ್ ಖುಸ್ರೊ ಅವರ ತಮ್ಮ 72 ವರ್ಷದ ಜೀವಿತಾವಧಿಯಲ್ಲಿ ಸುಮಾರು 99 ಕೃತಿಗಳನ್ನು ರಚಿಸಿದ್ದಾರೆ. ಆದರೆ ಈಗ ಕೇವಲ 22 ಕೃತಿಗಳು ಲಭ್ಯವಿವೆ. ಇವುಗಳಲ್ಲಿ ಐದು ಕಾವ್ಯ ಸಂಗ್ರಹ, ಒಂಬತ್ತು ಮಸ್ನವಿಗಳು ಹಾಗೂ ಅನೇಕ ಗಜಲ್ ಸಂಗ್ರಹಗಳಾಗಿವೆ. ಇವುಗಳಲ್ಲಿ ಮೂರು ಗದ್ಯ ಕೃತಿಗಳಾಗಿವೆ. ಅವೆಂದರೆ ‘ಏಜಾಜ್-ಎ-ಮಸ್ನವಿ’, ‘ಖಜಾಯನುಲ್ ಫುತೂಹ್’ ಮತ್ತು ‘ಅಪಜಲ್- ಉಲ್- ಫವಾಯದ್’. ಹಿಂದಿಯಲ್ಲಿ ಮೂರು ಕೃತಿಗಳಿವೆ. ‘ಖಾಲಿಕ್ ಬಾರಿ’, ‘ಹಲಾತೆ-ಕನ್ಹೆಯಾ’ ಮತ್ತು ‘ನಜರಾಯೇ ಹಿಂದ್’ ಆದರೆ ಈಗ ‘ಖಾಲಿಕ್ ಬಾರಿ’ ಮಾತ್ರ ಲಭ್ಯವಿದೆ. ಇದರ ಹೊರತಾಗಿ ಹಿಂದಿ ಭಾಷೆಯಲ್ಲಿ ಅನೇಕ ದೋಹೆ, ಪಹೇರಿ (ಒಡಪುಗಳು) ಹಾಗೂ ಮುಕರಿಯಾ (ನಾಲ್ಕು ಸಾಲಿನ ಛಂದ) ಗಳನ್ನು ಖುಸ್ರೋ ರಚಿಸಿದ್ದಾರೆ.

ತೋಹಫ ತುಸ್ಸಿಗ್ರ್:
ಇದು ಹಿ.ಶ. 671ರಲ್ಲಿ ಸಂಕಲಿಸಿದ, ಅಮೀರ್ ಖುಸ್ರೋರವರ ಪ್ರಥಮ ದಿವಾನ್ ಅಂದರೆ ಕವನ ಸಂಕಲನ. ಖುಸ್ರೊ ಅವರು 13 ರಿಂದ 19 ವರ್ಷದ ವಯಸ್ಸಿನಲ್ಲಿ ಬರೆದ ಕವಿತೆಗಳಾಗಿವೆ. ಈ ಕೃತಿಯಲ್ಲಿ ಪ್ರತಿಯೊಂದು ಖಸೀದಾದ ಆರಂಭದಲ್ಲಿ ಒಂದು ಶೇರ್‌ನಲ್ಲಿ ಈ ಖಸೀದಾದ ಸಾರವನ್ನು ತಿಳಿಸಲಾಗಿದೆ. ಈ ಶೇರ್‌ಗಳನ್ನು ಒಟ್ಟಾಗಿ ಸೇರಿಸುವುದರಿಂದಲೂ ಒಂದು ಖಸೀದಾ ಆಗುತ್ತದೆ. ಇಲ್ಲಿಯ ಪ್ರಶಂಸಾ ಕಾವ್ಯಗಳು ಅಧಿಕವಾಗಿ ಸುಲ್ತಾನ್ ಗಿಯಾಸುದ್ದೀನ್ ಬಲ್ಬನ್ ಮತ್ತು ಅವನ ಹಿರಿಯ ಪುತ್ರ ಸುಲ್ತಾನ್ ನಾಸೀರುದ್ದೀನನ ಪ್ರಶಂಸೆಯಲ್ಲಿ ಬರೆಯಲಾಗಿದೆ. ತಮ್ಮ ಅಜ್ಜ ಇಮಾದುರ್ ಮುಲ್ಕ್‌ರವರ ಕುರಿತ ಮರ್ಸಿಯಾ (ಶೋಕಗೀತೆ) ಇದರಲ್ಲಿದೆ. ಈ ಗ್ರಂಥದಲ್ಲಿ ತಮ್ಮ ಉಪನಾಮವನ್ನು ‘ಸುಲ್ತಾನಿ’ ಎಂದು ಉಲ್ಲೇಖಿಸಿದ್ದಾರೆ.

ಮಸ್ತಲ್ ಹಯಾತ್:
ಇದು ಖುಸ್ರೊ ಅವರ ಎರಡನೆಯ ದೀವಾನ್ (ಕಾವ್ಯ ಸಂಗ್ರಹ) ಆಗಿದೆ. ಕ್ರಿ.ಶ. 684ರಲ್ಲಿ ರಚಿತವಾಯಿತು. ತಮ್ಮ 24 ರಿಂದ 32ನೆಯ ವಯಸ್ಸಿನಲ್ಲಿ ಬರೆದ ಕವಿತೆಗಳ ಸಂಗ್ರಹ ಇದು. ಇದರಲ್ಲಿ ಬಹುತೇಕ ಸುಲ್ತಾನ ಮೊಹಮ್ಮದ್ ಶಹೀದ್‌ರವರ ಖಸೀದಾಗಳು ಹಾಗೂ ಅವರದೇ ಮರ್ಸಿಯಾ(ಶೋಕ ಗೀತೆ) ಸಮ್ಮಿಳಿತವಾಗಿದೆ.

ಗರ್‌ತುಲ್-ಕಲಾಮ್:
ಇದು ಹಿ.ಶ. 693ರಲ್ಲಿ ರಚಿತವಾದ ಮೂರನೆಯ ದೀವಾನ್ ಆಗಿದೆ. ಇದರಲ್ಲಿ ಖುಸ್ರೋರವರು 34 ರಿಂದ ನಲವತ್ತು ವರ್ಷ ವಯಸ್ಸಿನಲ್ಲಿ ಬರೆದ ಕವನಗಳಿವೆ. ಇದರಲ್ಲಿ ಖುಸ್ರೋರವರ ಪ್ರಸಿದ್ಧ ಖಸೀದಾಗಳಾದ ‘ಜನ್ನತುಲ್ ನಜಾತ್’, ‘ಮುರಾತುಸ್ಕಾ’ ಹಾಗೂ ‘ದರಿಯಾ ಅಬ್ರಾರ್’ ಸೇರಿವೆ. ಇದು ಎಲ್ಲಾ ದೀವಾನ್‌ಗಳಲ್ಲಿ ಬೃಹತ್ ದೀವಾನ್ ಆಗಿವೆ.

ಬಕೀಯಾನ್ ಕಿಯಾ:
ಇದು ಕ್ರಿ.ಶ. 716ರಲ್ಲಿ ಬರೆದ ನಾಲ್ಕನೆಯ ದೀವಾನ್ ಆಗಿದೆ. ಇದರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಮರ್ಸಿಯಾ ಕೂಡ ಸೇರಿದೆ.

ನಿಹಾಯತುಲ್- ಕಮಾಲ್:
ಇದು ಖುಸ್ರೋ ಅವರ ಐದನೆಯ ದೀವಾನ್ ಆಗಿದೆ. ಇವರಲ್ಲಿ ಸುಲ್ತಾನ್ ಗಿಯಾಸುದ್ದೀನ್‌ನ ನಿಧನ ಹಾಗೂ ಸುಲ್ತಾನ ಮೊಹಮ್ಮದ್ ತುಘಲಕ್‌ನ ಸಿಂಹಾಸನರೋಹಣದ ಉಲ್ಲೇಖವಿದೆ. ಕುತುಬುದ್ದಿನ್ ಮುಬಾರಕ್ ಖಿಲ್ಜಿಯ ಮರ್ಸಿಯಾ(ಶೋಕ ಗೀತೆ) ಹಾಗೂ ಅವರ ಉತ್ತರಾಧಿಕಾರಿಯ ಪ್ರಶಂಸೆ ಇದೆ. ಇನ್ನು ಕೆಲವು ಖಸೀದಾಗಳು ಹಾಗೂ ತನವುಫ್‌ಗೆ ಸಂಬಂಧಿಸಿದ ಗಜಲ್‌ಗಳಿವೆ. ಇದನ್ನು ಅತೀ ಶ್ರೇಷ್ಠ ಕೃತಿ ಎಂದು ಪರಿಗಣಿಸಲಾಗುತ್ತವೆ.

ಕಿರಾನುಸ್ಸಾದೈನ್:
ಇದು ಅಮೀರ್ ಖುಸ್ರೊರವರ ಐತಿಹಾಸಿಕ ಮಸ್ನವಿ (ನೀಳ್ಗವನ) ಆಗಿದ್ದು ಹಿ.ಶ. 688ರಲ್ಲಿ ಅವಿರತ ಶ್ರಮಪಟ್ಟು ಕೇವಲ ಮೂರು ತಿಂಗಳಲ್ಲಿ ಪೂರ್ಣಗೊಳಿಸಿದರು. ಇದರ ವಿಷಯ ಶೇಕುಬಾದ್ ಮತ್ತು ಬುಗರಾಖಾನ್‌ರವರ ಪತ್ರ ವ್ಯವಹಾರ ಮತ್ತು ಒಪ್ಪಂದ ಆಗಿದ್ದು ಐತಿಹಾಸಿಕವಾಗಿ ಮಹತ್ವದ ಕೃತಿಯಾಗಿದೆ.

ಮಫ್ತಾಹುಲ್ ಫುತೂಹ್:
ಇದು ಐತಿಹಾಸಿಕ ಮಸ್ನವಿ ಆಗಿದ್ದು, ಇದರಲ್ಲಿ ಸುಲ್ತಾನ್ ಜಲಾಲುದ್ದೀನ್ ಖಿಲ್ಜಿಯ ದಿಗ್ವಿಜಯ ಹಾಗೂ ಸಫಲತೆಗಳ ವಿವರಗಳಿವೆ. ತೀರಾ ಸರಳ ಭಾಷೆಯಲ್ಲಿರುವ ಈ ಕೃತಿಯನ್ನು 690ರಲ್ಲಿ ಬರೆದು ಪೂರ್ಣಗೊಳಿಸಿದರು.

ನೂಹ್ ಸಿಪಹರ್:
ಇದು ಕೇವಲ ಐತಿಹಾಸಿಕವಾಗಿ ಅಲ್ಲದೆ ಸಾಂಸ್ಕೃತಿಕವಾಗಿ ಹಾಗೂ ಸಾಮೂಹಿಕವಾಗಿ ಮಹತ್ವದ ಮಸ್ನವಿಯಾಗಿದ್ದು ಹಿ.ಶ.718ರಲ್ಲಿ ರಚಿತವಾಯಿತು. ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು ಪ್ರತಿಯೊಂದು ಅಧ್ಯಾಯ ಒಂದು ವಿಭಿನ್ನ ಛಂಧಸ್ಸನ್ನು ಹೊಂದಿದೆ. ಇದಕ್ಕಾಗಿ ಇದರ ಶೀರ್ಷಿಕೆ ‘ನೂಹ್ ಸಿಪಹರ್’ ಎಂದರೆ ಒಂಬತ್ತು ಆಕಾಶಗಳು ಎಂದು ಇಡಲಾಗಿದೆ. ಇದರ ಒಂದು ಅಧ್ಯಾಯದಲ್ಲಿ ‘ಭಾರತ ವರ್ಷ’ದ ಮಹೋನ್ನತೆಯನ್ನು ಬಣ್ಣಿಸಲಾಗಿದೆ. ಈ ಅಧ್ಯಾಯದಲ್ಲಿ ಭಾರತವನ್ನು ಬ್ರಹ್ಮಾಂಡದ ಸ್ವರ್ಗ ಎಂದು ವರ್ಣಿಸಲಾಗಿದೆ.

ತುಘಲಕ್ ನಾಮಾ:
ಇದು ಸುಲ್ತಾನ್ ಗಿಯಾಸುದ್ದೀನ್ ತುಘಲಕ್‌ನ ಜೀವನ ಮತ್ತು ವಿಜಯಗಾಥೆಗಳನ್ನು ಒಳಗೊಂಡಿದೆ. ಇದು ಖೂಸ್ರೋ ಅವರ ಕೊನೆಯ ಮಸನವಿ ಆಗಿದ್ದು, ಇದರಲ್ಲಿ ಕೆಲವು ಅಪರೂಪದ ಚಾರಿತ್ರಿಕ ಘಟನೆಗಳ ಉಲ್ಲೇಖವಿದೆ.

ಖಮ್ಸ್-ಎ-ಖುಸ್ರೋ:
ಈ ಕೃತಿಯು ಈ ಕೆಳಗಿನ ಐದು ಮಸ್ನವಿಗಳ ಸಂಕಲನವಾಗಿದೆ. ಅವೆಂದರೆ,
1. ಮತ್‌ಉಲ್ ಅನ್ವಾರ್ 2. ಶೀರೀನ್ ಖುಸ್ರೋ 3. ಮಜ್ನೂ ವೊ ಲೈಲಾ 4. ಆಯಿನಾ- ಎ- ಸಿಕಂದರಿ 5. ಹಶ್ತ್ ಬಹಿತ್
ಈ ಮಸ್ನವಿಗಳನ್ನು ಕ್ರಮವಾಗಿ ನಿಜಾಮಿ ಅವರ ಮಖಬನಲ್ ಅನ್ವಾರ್, ಖುಸ್ರೊವೋ ಶಿಲೀಲ, ಲೈಲಾ ಮಜ್ನೂ, ಸಿಕಂದರ್ ನಾಮಾ ಮತ್ತು ಹಸ್ತ್ ಪೈಕರ ಇವುಗಳ ಪ್ರತ್ಯುತ್ತರ ಕೃತಿಗಳಾಗಿವೆ. ಇವು ಉತ್ಕೃಷ್ಟ ಮಸ್ನವಿಗಳಾಗಿವೆ.

ಏಜಾಜ್-ಎ-ಖುಸ್ರೋವಿ:
ಇದು ಗದ್ಯಕೃತಿಯಾಗಿದ್ದು ಹಿ.ಶ್.719ರಲ್ಲಿ ರಚಿತವಾಗಿದೆ. ಸಾವಿರಾರು ಅಲಂಕಾರಗಳನ್ನು ಹೊಂದಿರುವ ಈ ಕೃತಿ ಐದು ಚಿಕ್ಕ ಕೃತಿಗಳ ಸಂಕಲನವಾಗಿದೆ. ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿಯ ವಿಜಯಗಳ ವಿಸ್ತೃತ ವಿವರಗಳನ್ನು ಒಳಗೊಂಡಿರುವ ಈ ಕೃತಿ ಐತಿಹಾಸಿಕವಾಗಿ ಮಹತ್ವದ್ದಾಗಿವೆ.

ಅಫಜಲ್- ಉಲ್- ಫವಾಯದ್:
ಈ ಕೃತಿಯಲ್ಲಿ ಅಮೀರ್ ಖುಸ್ರೋರವರ ಮುರ್ಷಿದ್ ಹಜರತ್ ನಿಜಾಮುದ್ದೀನ್ ಔಲಿಯಾರವರ ಪ್ರವಚನಗಳನ್ನು ಸಂಪಾದಿಸಲಾಗಿದೆ. ಇದರ ಒಂದು ಭಾಗವನ್ನು ಖುಸ್ರೋರವರು ತಮ್ಮ ಗುರು ನಿಜಾಮುದ್ದೀನ್ ಔಲಿಯಾರವರ ಸನ್ನಿಧಿಯಲ್ಲಿ ಹಿ.ಶ.719ರಲ್ಲಿ ಪ್ರಸ್ತುತ ಪಡಿಸಿದಾಗ, ಔಲಿಯಾರವರು ಇದರ ಬಗ್ಗೆ ಅತೀವ ಮೆಚ್ಚುಗೆ ಪಡಿಸಿದರು. ಇವುಗಳಲ್ಲಿ ಆಧ್ಯಾತ್ಮಿಕ ಸಂಗತಿ, ಸಮಸ್ಯೆಗಳ ಕುರಿತು ಚರ್ಚೆ ಸಂವಾದವಿದೆ. ಇದು ಸೂಫಿ ದಾರ್ಶನಿಕತೆಯ ಮಹತ್ವದ ಕೃತಿಯಾಗಿದೆ.

ಖಜಾಯಿನತುಲ್ ಫುತೂಹ್:
ಈ ಕೃತಿಯು ಹಿ.ಶ.711ರಲ್ಲಿ ರಚಿತವಾಗಿದ್ದು, ಇದರ ಇನ್ನೊಂದು ಶೀರ್ಷಿಕೆ ‘ತಾರೀಖೆ- ಅಲಾಯಿ’ಯೂ ಆಗಿದೆ. ಈ ಕೃತಿಯು ಅಲ್ಲಾವುದ್ದೀನ್ ಖಿಲ್ಜಿಯ ಕಾಲದ ಸಮಗ್ರ ಘಟನೆಗಳ ದಾಖಲೆಯಾಗಿದ್ದು, ಅತೀವ ಪ್ರಮಾಣಿಕೃತ ಕೃತಿ ಎಂದು ಭಾವಿಸಲಾಗಿದೆ.

ಖಾಲಿಕ್‌ಬಾರಿ:
ಈ ಕೃತಿಯು ಒಂದು ಶಬ್ದಕೋಶದಂತಿದೆ. ಇದರಲ್ಲಿ ಅರಬಿ, ಫಾರತಿ, ತುರ್ಕಿ ಮತ್ತು ಹಿಂದಿ ಭಾಷೆಗಳ ಶಬ್ದಗಳ ವಿವರಣೆ ಇದೆ. ಇದು ಒಂದು ಬೃಹತ್ ಗ್ರಂಥವಾಗಿತ್ತು. ಆದರೆ ಈಗ ಕೇವಲ 215 ದ್ವಿಪದಿಗಳು ಮಾತ್ರ ಲಭ್ಯವಿವೆ. ಇದು ಮಕ್ಕಳ ಮನೋವೈಜ್ಞಾನಿಕತೆಯನ್ನು ಆಧಾರವಾಗಿಟ್ಟು ಬರೆಯಲಾಗಿದೆ. ಇದು ಹಾಸ್ಯಮಯ ಪದ್ಯರೂಪದಲ್ಲಿದ್ದು ಮಕ್ಕಳು ಸರಳವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾಗಿದೆ. ಬಾಷಿಕ ದೃಷ್ಟಿಕೋನದಿಂದ ಮಹತ್ವದ ಕೃತಿ ಅಮೀರ್ ಖುಸ್ರೋ ಅವರು ಫಾರ್ಸಿ ಭಾಷೆಗಿಂತ ಅಧಿಕವಾಗಿ ಹಿಂದಿ ಭಾಷೆಯಲ್ಲಿ ಕಾವ್ಯ ರಚನೆ ಮಾಡಿರುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಅವೆಲ್ಲವೂ ಲುಪ್ತವಾಗಿವೆ. ಈಗ ಕೇವಲ ಒಡಪುಗಳು, ದೋಹೆಗಳು ಮುಕರಿಯಾಂ ಹಾಗೂ ಕೆಲವೊಂದು ಗೀತೆಗಳು ಮಾತ್ರ ಹಿಂದಿಯಲ್ಲಿ ಲಭ್ಯವಿವೆ. ಇವು ಲಿಖಿತ ರೂಪಕ್ಕಿಂತ ಜನಸಾಮಾನ್ಯರ ಬಳಕೆಯಲ್ಲಿ ಇದ್ದು, ಕೆಲವೊಂದು ಕಾಲಾಂತರದಲ್ಲಿ ಬದಲಾವಣೆ ಹೊಂದಿದೆ.

~ ಬೋಡೆ ರಿಯಾಜ್ ಅಹ್ಮದ್


ಇಬ್ನು ಖಲ್ದೂನರ ಕೈರೋ ಬದುಕು


ಪ್ರಸಿದ್ಧ ಇತಿಹಾಸಕಾರ, ಸಮಾಜ ಶಾಸ್ತ್ರಜ್ಞ, ಕರ್ಮಶಾಸ್ತ್ರ ವಿದ್ವಾಂಸರಾದ ಇಬ್ನು ಖಲ್ದೂನ್ ತನ್ನ ಕೊನೆಯ ಇಪ್ಪತೆಂಟು ವರ್ಷಗಳನ್ನು ಕೈರೋದಲ್ಲಿ ಕಳೆದರು. ಟುನೇಶ್ಯದಲ್ಲಿ ಜನಿಸಿ ನಂತರ ಮೊರೊಕ್ಕೊ, ಸ್ಪೇನ್, ಟುನೇಶ್ಯ ಮೊದಲಾದ ಕಡೆಗಳಲ್ಲಿ ಜ್ಞಾನ, ಅಧ್ಯಯನ, ಸಂಶೋಧನೆ, ಗ್ರಂಥ ರಚನೆಯೊಂದಿಗೆ ಬದುಕು ಸವೆಸಿದ ಇಬ್ನು ಖಲ್ದೂನ್ ಯಾವ ಕಾರಣಕ್ಕಾಗಿ ಕೈರೋ(ಈಜಿಪ್ಟ್) ಗೆ ತಲುಪಿದರು, ಅಲ್ಲಿ ಏನೆಲ್ಲ ವೈಜ್ಞಾನಿಕ ಸೇವೆಗಳನ್ನು ಮಾಡಿದರು ಎನ್ನುವುದನ್ನು ವಾಲ್ಟರ್ ಜೆ ಫಿಸ್ಕಲ್ ರಚಿಸಿದ Ibn Khaldun in Egypt: His Public Functions and His Historical Research (1382-1406): A Study in Islamic Historiography ಎಂಬ ಗ್ರಂಥವು ಪರಿಚಯಿಸುತ್ತದೆ.

ಮಮ್ಲೂಕ್ ಆಡಳಿತವು ಕೈರೋ ಕೇಂದ್ರವಾಗಿಸಿ ಈಜಿಪ್ಟ್ ಆಳುತ್ತಿದ್ದ ಸಂದರ್ಭದಲ್ಲಿ ಇಬ್ನು ಖಲ್ದೂನ್ 1382ರಲ್ಲಿ ಅಲಗ್ಸಾಂಡ್ರಿಯಾ ಬಂದರು ಮೂಲಕ ಕೈರೋ ತಲುಪಿದರು. ನಂತರ ಮಮ್ಲೂಕ್ ಸುಲ್ತಾನರ ಅಧೀನದಲ್ಲಿ ಚೀಫ್ ಖಾಝಿಯಾಗಿಯೂ ಆಡಳಿತ ನಿರ್ದೇಶಕರಾಗಿಯೂ ರಾಜನೀತಿ ತಜ್ಞರಾಗಿಯೂ ಸೇವೆ ಸಲ್ಲಿಸಿದರು. ಕೃತಿಯ ಮೊದಲ ನೂರು ಪುಟಗಳಲ್ಲಿ ಆ ಕಾಲದ ಸಾಮಾಜಿಕ ಬದುಕಿನ ಸೂಕ್ಷ್ಮ ವಿವರಗಳನ್ನು ನೀಡಲಾಗಿದೆ. ಒಬ್ಬ ಇತಿಹಾಸಕಾರ, ಬರಹಗಾರ ಎಂಬ ನೆಲೆಯಲ್ಲಿ ಕೈರೋದಲ್ಲಿ ಇಬ್ನು ಖಲ್ದೂನರು ನೀಡಿದ ದಾರ್ಶನಿಕ ಕೊಡುಗೆಗಳನ್ನು ಎರಡನೇ ಭಾಗದಲ್ಲಿ ಉಲ್ಲೇಖಿಸಲಾಗಿದೆ. ಇಬ್ನು ಖಲ್ದೂನರ ಗ್ರಂಥಗಳಾದ ತಾರೀಖ್ ಇಬ್ನು ಖಲ್ದೂನ್, ಮುಖದ್ದಿಮ, ತಅ್ ರೀಫ್ ಮೊದಲಾದ ಗ್ರಂಥಗಳು ಈ ಕೃತಿಯ ಪ್ರಮುಖ ಆಕರಗಳಾಗಿವೆ. ವಿವಿಧ ಭಾಷೆಗಳಿಗೆ ಭಾಷಾಂತರಗೊಂಡ ಹಳೆಯ ಮತ್ತು ಆಧುನಿಕ ಇಬ್ನು ಖಲ್ದೂನರ ಜೀವನ ಚರಿತ್ರೆಗಳನ್ನು ಕೃತಿಯಲ್ಲಿ ಆಕರಗಳಾಗಿ ಬಳಸಿಕೊಳ್ಳಲಾಗಿದೆ.

ಇಬ್ನು ಖಲ್ದೂನರ ಪೂರ್ವಜರು ಯಮನಿನ ಹಳರಮೌತಿನಿಂದ ಮುಸ್ಲಿಮ್ ಸ್ಪೇನಿಗೆ ಎಂಟನೇ ಶತಮಾನದಲ್ಲಿ ವಾಸ್ತವ್ಯ ಬದಲಿಸಿದವರಾಗಿದ್ದರು. ಈ ಕುಟುಂಬ ವೈಜ್ಞಾನಿಕ ಸಂಶೋಧನೆಗಳಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದೆ. ಹದಿಮೂರನೇ ಶತಮಾನದ ಮೊದಲಭಾಗದಲ್ಲಿ ಬನೂ ಖಲ್ದೂನ್ ಎಂಬ ಇಬ್ನು ಖಲ್ದೂನರ ತಂದೆ ಆಫ್ರಿಕಾದ ಟುನೇಶ್ಯಕ್ಕೆ ವಾಸ್ತವ್ಯ ಬದಲಿಸಿದ್ದರು. ಅಲ್ಲಿ ಇಬ್ನು ಖಲ್ದೂನರ ಜನನವಾಯಿತು. ನಂತರ ಇವರು ಟುನೇಶ್ಯ, ಸ್ಪೇನಿನಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡರು. ಅದರ ಮುಂದುವರಿದ ಭಾಗವಾಗಿ ಮುಖದ್ದಿಮ ರಚನೆಯಾಯಿತು. ಇಬ್ನ್ ಖಲ್ದೂನರಿಗೆ ಹೇರಳ ಶತ್ರುಗಳಿದ್ದರು. ಅವರ ವರ್ಚಸ್ಸಿಗೆ ಮಸಿ ಬಳಿಯಲು ರಾಜರುಗಳ ಬಳಿ ಅವರ ಕುರಿತು ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಲಾಗುತ್ತಿತ್ತು. ವಿರೋಧಿಗಳ ಹೆಚ್ಚಳವು ಅವರನ್ನು ಈಜಿಪ್ಟಿಗೆ ತೆರಳುವಂತೆ ಮಾಡಿತು.

ನಲ್ವತ್ತು ದಿನಗಳ ಯಾತ್ರೆಯ ಬಳಿಕ ಇಬ್ನು ಖಲ್ದೂನ್ ಅಲೆಗ್ಸಾಂಡ್ರಿಯಾಗೆ ತಲುಪಿದ ಸುದ್ದಿ ಅಲ್ಲಿನ ಮಮ್ಲೂಕ್ ಸುಲ್ತಾನ್ ಝಾಹಿದ್ ಅಬೂ ಝೈದ್ ಬರ್ ಖುರ್ಖ್ ರನ್ನು ತಲುಪಿತು. ಅವರು ಇಬ್ನು ಖಲ್ದೂನರನ್ನು ಆಮಂತ್ರಿಸಿದರು. ಕೈರೋ ಕುರಿತು ತಿಳಿದುಕೊಂಡು ಬಂದ ಖಲ್ದೂನ್ ಅಲ್ಲಿನ ಕುರಿತು ಹೀಗೆ ಬರೆದರು: “ಸಂಪತ್ತು ಸಮೃದ್ಧಿ ಮೇಳೈಸಿರುವ ಈಜಿಪ್ಟಿಗೆ ತಲುಪುವುದು ಮೊರೊಕ್ಕಾದ ಹಲವು ಬಡಪಾಯಿ ಜನರ ಬಯಕೆಯಾಗಿದೆ. ನಾವು ಊಹಿಸುವ ಯಾವುದೇ ನಗರಕ್ಕಿಂತಲೂ ನಾಗರಿಕತೆಯಿಂದ ಸಂಪನ್ನವಾಗಿದೆ ಈಜಿಪ್ಟ್. ಕೈರೋಗಿಂತ ಉತ್ತಮ ಸಂಸ್ಕೃತಿ ಹೊಂದಿರುವ ನಗರ ಬೇರೊಂದಿಲ್ಲ. ಈ ನಗರವನ್ನು ಜಗತ್ತಿನ ತಾಯಿ ಎನ್ನಬಹುದು. ಇದು ಇಸ್ಲಾಮಿನ ಮಹಾ ಕೇಂದ್ರ. ಕೈರೋ ವಿಜ್ಞಾನ, ಕರಕುಶಲ ನಿರ್ಮಾಣದ ಹೃದಯದಂತಿದೆ. ಕೈರೋ ಕಾಣದವರು ಇಸ್ಲಾಮಿನ ಖ್ಯಾತಿಯನ್ನು ಬಹುಶಃ ತಿಳಿದಿರಲಿಕಿಲ್ಲ.”

ಕೈರೋಗೆ ಆಗಮಿಸಿದ ಬಳಿಕ ಮರಣದವರೆಗೂ ತನ್ನ ವಾಸಸ್ಥಾನವಾಗಿ ಅವರು ಆ ಮಹಾನಗರವನ್ನು ಆಯ್ಕೆಮಾಡಿದರು. 1387 ಸೆಪ್ಟೆಂಬರಿನಲ್ಲಿ ಹಜ್ಜಿಗಾಗಿ ಮಕ್ಕಾಗೆ, ಈಜಿಪ್ಟಿಯನ್ ಆಡಳಿತಗಾರರ ಆಸಕ್ತಿಯ ಮೇರೆಗೆ ಸಿರಿಯಾಕ್ಕೆ ರಾಜತಾಂತ್ರಿಕ ಅಗತ್ಯಕ್ಕೆ ಕೆಲವು ತಿಂಗಳುಗಳ ಕಾಲ ತೆರಳಿದ್ದನ್ನು ಹೊರತು ಪಡಿಸಿದರೆ ಅವರು ಕೈರೋ ಬಿಟ್ಟು ಹೋಗಲೇ ಇಲ್ಲ. ಟುನೇಶ್ಯದ ಆ ಕಾಲದ ಸುಲ್ತಾನರ ಬಹುದೊಡ್ಡ ಆಸೆ ಇಬ್ನು ಖಲ್ದೂನರನ್ನು ತನ್ನತ್ತ ಕರೆತರುವುದಾಗಿತ್ತು. ಹಲವು ಬಾರಿ ಅವರು ವಿನಂತಿಸಿದರೂ ಖಲ್ದೂನ್ ಪೂರಕವಾಗಿ ಪ್ರತಿಕ್ರಿಯಿಸಲಿಲ್ಲ. ಖಲ್ದೂನರ ಕುಟುಂಬ ಆಗಲೂ ಟುನೇಶ್ಯದಲ್ಲಿತ್ತು. ಅವರನ್ನು ಖಲ್ದೂನ್ ಕೈರೋಗೆ ಕರೆತರಲು ನಿರಂತರ ಶ್ರಮಿಸಿದರೂ ಖಲ್ದೂನರನ್ನು ಟುನೇಶ್ಯಾಕ್ಕೆ ಮರಳಿ ಕರೆ ತರಬೇಕೆಂದು ಬಯಸುತ್ತಿದ್ದ ಸುಲ್ತಾನನು ಅನುಮತಿ ನೀಡಲಿಲ್ಲ. ಕೊನೆಗೆ ಈಜಿಪ್ಟಿಯನ್ ಆಡಳಿತಾಧಿಕಾರಿ ಬರ್ ಖುರ್ಖ್ ಪತ್ರ ಬರೆದಾಗ ಸುಲ್ತಾನರು ಅನುಮತಿಸಿದರು. ಆದರೆ ಪತ್ನಿ ಮತ್ತು ಐದು ಮಕ್ಕಳು ಸಹಿತ ಹಲವು ಮಂದಿಯಿದ್ದ ಅಲೆಗ್ಸಾಂಡ್ರಿಯಾ ಗುರಿಯಾಗಿಸಿ ಬಂದ ಹಡಗು ಕಡಲು ಪ್ರಕ್ಷುಬ್ಧದಿಂದ ಮುಳುಗಿ ಖಲ್ದೂನ್ ಕುಟುಂಬ ಪೂರ್ಣವಾಗಿ ಇಲ್ಲವಾಯಿತು. ಈ ಮಹಾ ದುರ್ಘಟನೆ ಖಲ್ದೂರನ್ನು ಬಹುವಾಗಿ ಕಾಡಿತು. ಈ ನೋವು ಜೀವನ ಪರ್ಯಂತ ಖಲ್ದೂನರನ್ನು ಬಿಟ್ಟಿರಲಿಲ್ಲ.

ಇಬ್ನು ಖಲ್ದೂನ್ ಈಜಿಪ್ಟಿಗೆ ಬರುವುದಕ್ಕಿಂತಲೂ ಮೊದಲು ಬರಹಗಾರ, ಇತಿಹಾಸಕಾರ ಎಂಬ ನೆಲೆಯಲ್ಲಿ ಅವರಿಗಿದ್ದ ಖ್ಯಾತಿಯು ಈಜಿಪ್ಟಿನ ವಿದ್ವಾಂಸರಿಗೆ ಮತ್ತು ಅಲ್ಲಿನ ಅಧ್ಯಯನಾಸಕ್ತರಾದ ಆಡಳಿತಾಧಿಕಾರಿಗಳಿಗೆ ತಿಳಿದಿತ್ತು. ಸುಲ್ತಾನ್ ಬರ್ ಖುರ್ಖ್ ಇವರ ಜೊತೆಗಿನ ಸ್ನೇಹ ಸಂಬಂಧವನ್ನು ಮಹತ್ವದ್ದಾಗಿ ಕಂಡನು. ಯಾವ ಸಂದರ್ಭದಲ್ಲೂ ಸುಲ್ತಾನರ ಬಳಿಗೆ ತೆರಳಲು ಖಲ್ದೂನರಿಗೆ ಅನುಮತಿಯಿತ್ತು. ತನ್ನ ಊರಿನ ವಾಸ್ತವ್ಯವನ್ನು ಬಿಟ್ಟಿದ್ದರೂ ಅಲ್ಲಿನ ವಿದ್ವಾಂಸರೊಂದಿಗೆ ಆಡಳಿತಾಧಿಕಾರಿಗಳೊಂದಿಗೆ ನಿರಂತರ ಪತ್ರ ವ್ಯವಹಾರದ ಮೂಲಕ ಸಂಬಂಧವನ್ನು ಉಳಿಸಿಕೊಂಡಿದ್ದರು. ಮಗ್ರಿಬೀ(ಪಶ್ಚಿಮದ) ದೇಶಗಳೊಂದಿಗೆ ಈಜಿಪ್ಟಿಗಿರುವ ಯಾವ ರೀತಿಯ ಸಂಪರ್ಕದ ಅಗತ್ಯವಿದ್ದರೂ ಆ ಪ್ರದೇಶಗಳ ರಾಯಭಾರಿಯಾಗಿ ಗುರುತಿಸಿಕೊಂಡರು. ಹಜ್ ಯಾತ್ರೆಯಲ್ಲಿಯೂ ಒಂದು ಮಗ್ರಿಬೀ ತಂಡದೊಂದಿಗೆ ಪ್ರಯಾಣಗೈದರು.

ಇದೇ ಸಂದರ್ಭ ಖಲ್ದೂನರು ಕೈರೋದ ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಕ್ರಿಯರಾದರು. ಅಲ್ ಅಝ್ಹರಿನಲ್ಲಿ ಪ್ರಮುಖ ತರಗತಿಗಳನ್ನು ನಡೆಸಲು ಅವರನ್ನು ಆಹ್ವಾನಿಸಲಾಯಿತು. ಮಹಾ ಜ್ಞಾನಿಗಳಾದ ವಿದ್ವಾಂಸರುಗಳು ತದೇಕಚಿತ್ತದಿಂದ ಅವರ ತರಗತಿಯನ್ನು ಆಲಿಸುತ್ತಿದ್ದರು. ಸುಲ್ತಾನರ ಆಜ್ಞೆಯ ಮೇರೆಗೆ ಓಲ್ಡ್ ಕೈರೋದ ಖಾಮ್ಹಿಯ ಕಾಲೇಜಿನ ಮಾಲಿಕೀ ಕರ್ಮಶಾಸ್ತ್ರದ ಪ್ರೊಫೆಸರರಾಗಿ ನೇಮಕಗೊಂಡರು. ಇಸ್ಲಾಮಿಕ್ ಕರ್ಮಶಾಸ್ತ್ರದ ಅಧ್ಯಯನಗಳಿಗೆ ಪ್ರಾಮುಖ್ಯತೆ ನೀಡುವ ಈ ಕಾಲೇಜನ್ನು ಸುಲ್ತಾನ್ ಸ್ವಲಾಹುದ್ದೀನ್ ಅಯ್ಯೂಬ್ ನಿರ್ಮಿಸಿದ್ದರು. ತದ ನಂತರ ಖಲ್ದೂನ್ ಕೈರೋದ ಪ್ರಸಿದ್ಧವಾದ ಹಲವು ಸಂಸ್ಥೆಗಳಲ್ಲಿಯೂ ತರಗತಿ ನಡೆಸಿದರು. ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದ್ದರಿಂದ ಖಲ್ದೂನರಿಗೆ ಬಹಳಷ್ಟು ಶತ್ರುಗಳಿದ್ದರು. ಹಲವು ಬಾರಿ ಸುಲ್ತಾನ್ ಬರ್ ಖುರ್ಖ್ ಅವರಲ್ಲಿ ಇವರ ಕುರಿತಾದ ತಪ್ಪು ಕಲ್ಪನೆಯನ್ನು ಹುಟ್ಟುಹಾಕಲು ಯತ್ನಿಸಲಾಗುತ್ತಿತ್ತು. ಖಲ್ದೂನ್ ಮತ್ತು ಬರ್ ಖುರ್ಖ್ ಅವರ ಗಾಢ ಸಂಬಂಧಕ್ಕೆ ಇದರಿಂದ ಏನೂ ಧಕ್ಕೆ ಅಗಲಿಲ್ಲ.

Al Azhar University, Cairo

1384ರಲ್ಲಿ ಕೈರೋದ ಚೀಫ್ ಖಾಝಿಯಾಗಿ ಇಬ್ನು ಖಲ್ದೂನರು ನೇಮಕಗೊಂಡರು. ಈಜಿಪ್ಟಿನಲ್ಲಿ ಚೀಫ್ ಖಾಝಿ ಹುದ್ದೆ ಶುರುವಾದ ನಂತರ ಈ ಹುದ್ದೆಗೆ ಶಾಫಿಈ ಮದ್ಹಬಿನ ವಿದ್ವಾಂಸರು ಮಾತ್ರವೇ ನೇಮಕಗೊಂಡಿದ್ದರು. ಆದರೆ ಇಬ್ನು ಖಲ್ದೂನ್ ಆಳ ಅಧ್ಯಯನ ಮತ್ತು ಜ್ಞಾನ ಹೊಂದಿದ್ದರಿಂದ ಸುಲ್ತಾನ್ ಈ ಹುದ್ದೆಗೆ ಅವರನ್ನು ನೇಮಿಸಿದರು. ಈ ಹುದ್ದೆಯ ಮಹತ್ವ ಅರಿತಿದ್ದ ಅವರು ಫತ್ವಾಗಳಲ್ಲಿ ಸೂಕ್ಷ್ಮತೆ ಮತ್ತು ಶರೀಅತಿನ ಪೂರ್ಣತೆಯನ್ನು ಪಾಲಿಸಿಕೊಳ್ಳುತ್ತಿದ್ದರು. ನಿಲುವಿನೊಂದಿಗೆ ಅವರಿಗಿದ್ದ ಬದ್ಧತೆ ಹಲವರನ್ನು ಅಸ್ವಸ್ಥಗೊಳಿಸಿತು. ಈ ಕಾರಣದಿಂದಲೇ ಈ ಹುದ್ದೆಯನ್ನು ತ್ಯಜಿಸಬೇಕಾಗಿ ಬಂತು. ನಂತರದ ಹತ್ತು ವರ್ಷಗಳು ಏಕಾಂತವಾಗಿ ಕಳೆದರು ಮತ್ತು ವೈಜ್ಞಾನಿಕ ಕೊಡುಗೆಗಳನ್ನು ನೀಡಲು ಹೆಚ್ಚಿನ ಗಮನವನ್ನು ನೀಡಿದರು.

1399ರಲ್ಲಿ ಸುಲ್ತಾನ್ ಬರ್ ಖುರ್ಖ್ ನಿಧನರಾದರು. ಅವರ ಮಗ ಬರಜ್ ಅಧಿಕಾರಕ್ಕೆ ಬಂದರು. ಈ ಸಂದರ್ಭದಲ್ಲೂ ಖಾಝಿಯಾಗಿ ಖಲ್ದೂನರನ್ನು ನೇಮಿಸಿದರು. ನೂತನವಾಗಿ ನೇಮಕಗೊಂಡಿದ್ದ ಸುಲ್ತಾನರು ಅಪ್ರಾಪ್ತರಾಗಿದ್ದರು. ಆಡಳಿತಾಧಿಕಾರಿ ಎಂಬ ನೆಲೆಯಲ್ಲಿ ಸುಲ್ತಾನರ ಸರಿಯಾದ ನಿಲುವುಗಳನ್ನು ಖಲ್ದೂನರು ಒಳಗೊಳ್ಳುತ್ತಿದ್ದರು.

ಕ್ರಿ.ಶ. 1406ರಲ್ಲಿ ಇಬ್ನ್ ಖಲ್ದೂನ್ ಇಹಲೋಕ ತ್ಯಜಿಸಿದರು. ಮರಣದ ಸಂದರ್ಭ ಅವರು ಕೈರೋದ ಚೀಫ್ ಖಾಝಿಯಾಗಿದ್ದರು. ಪ್ರಮುಖ ವೈಜ್ಞಾನಿಕ ಕೊಡುಗೆಗಳನ್ನು ನೀಡಿದ ಆ ಮಹಾನುಭಾವರಿಗೆ ತಕ್ಕ ಗೌರವವನ್ನು ಕೈರೋ ಆಡಳಿತ ಕೂಟ ಮತ್ತು ಅಲ್ಲಿನ ಪ್ರಜೆಗಳು ನೀಡಿದ್ದರು. ಸೂಫಿಗಳನ್ನು ಸಮಾಧಿಗೊಳಿಸುವ ಜಾಗದಲ್ಲಿ ಖಬರ್ ಸಿದ್ಧಪಡಿಸಿದ್ದರು. ಆದರೆ ಆ ಖಬರಿನ ನಿರ್ದಿಷ್ಟ ಸ್ಥಳ ಯಾವುದೆನ್ನುವುದನ್ನು ಆಧುನಿಕ ಕಾಲದಲ್ಲಿ ತಿಳಿಯಲು ಸಾಧ್ಯವಿಲ್ಲ. ಇಬ್ನು ಖಲ್ದೂನರ ಕೊನೆಯ ಕಾಲವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಲು ಮತ್ತು ಆಗಿನ ಮುಸ್ಲಿಮ್ ಅರಬ್ ಆಫ್ರಿಕನ್ ಜಗತ್ತಿನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿಯಲು ಈ ಗ್ರಂಥ ಸಹಕಾರಿಯಾಗಲಿದೆ.

ಮೂಲ: ಎಂ. ಲುಖ್ಮಾನ್
ಕನ್ನಡಕ್ಕೆ: ಅಮ್ಮಾರ್ ನೀರಕಟ್ಟೆ

ನ್ಯೂಯಾರ್ಕ್‌ನ ರಮಝಾನ್ ವಿಶೇಷತೆ

2023ರ ಮಾರ್ಚ್ ತಿಂಗಳ ಒಂದು ಸಂಜೆ. ಅಮೇರಿಕಾದ ಮನ್ಹಾಟನ್ ನಗರದ ಒಂದು ಅಪಾರ್ಟ್‌ಮೆಂಟಿನ ಕಿಟಕಿಯ ಬಳಿ ಕುಳಿತು ಚಿಂತಾಮಗ್ನನಾಗಿದ್ದೆ. ಕಿಟಕಿಯ ಹೊರಗೆ ಕಣ್ಣು ಹಾಯಿಸಿ ಬರೆಯಬೇಕಾದ ಪ್ರಬಂಧದ ಕುರಿತು ಚಿಂತಿಸುತ್ತಿದ್ದೆ. ಹೊರಗೆ ಮಳೆಹನಿಯಂತೆ ಮಂಜು ಸಣ್ಣದಾಗಿ ಉದುರುತ್ತಿದ್ದರೂ ನ್ಯೂಯಾರ್ಕ್‌ನಲ್ಲಿ ಚಳಿಯ ತೀವ್ರತೆ ಹೆಚ್ಚಿತ್ತು. ಹಾಗಾಗಿ ಜಾಕೆಟಿನ ಮೇಲೆ ಕಂಬಳಿ ಹೊದ್ದು ಮುದುಡಿ ಕುಳಿತಿದ್ದೆ. ಒಳಗೆ ಹೀಟರ್ ಚಲಿಸುತ್ತಿದ್ದರೂ ಹೊರಗಿನ ಚಳಿ ನನ್ನನ್ನು ಅಸ್ವಸ್ಥಗೊಳಿಸಿತ್ತು.

ಮೇಜಿನ ಮೇಲಿದ್ದ ಲಿಪ್‌ಬಾಮ್ ಹಚ್ಚಿ ಮತ್ತೆ ಆಲೋಚನೆಯಲ್ಲಿ ಮಗ್ನನಾದೆ. ಆದರೂ ಪ್ರಬಂಧಕ್ಕೆ ಬೇಕಾದ ಯಾವೊಂದು ಸಂಗತಿಗಳೂ ಹೊಳೆಯುತ್ತಲೇ ಇಲ್ಲ. ತಕ್ಷಣವೇ ಎರಡು ದಿನಗಳಲ್ಲಿ ಬರಲಿರುವ ರಮಝಾನನ್ನು ನೆನಪಿಸಿದೆ. ನನ್ನ ರೂಮ್ ಅಲ್ಲೋಲ ಕಲ್ಲೋಲವಾಗಿತ್ತು. ರಮಝಾನನ್ನು ಸ್ವಾಗತಿಸಲು ಯಾವುದೇ ಸಿದ್ಧತೆ ನಡೆಸಿರಲಿಲ್ಲ. ಆಚೀಚೆ ನೋಡದೆ ತಕ್ಷಣ ಮನೆಯನ್ನು ಒಪ್ಪ ಮಾಡಲು ತೊಡಗಿದೆ. ಹೆಚ್ಚೆಂದರೆ ಒಂದೂವರೆ ಗಂಟೆ. ರೂಮ್, ಅಡುಗೆಮನೆ, ಡೈನಿಂಗ್ ಹಾಲ್ ಸೇರಿ ಪೂರ್ತಿ ಮನೆಯನ್ನು ಸ್ವಚ್ಛಗೊಳಿಸಿದೆ. ಮತ್ತೆ ರೂಮಿಗೆ ಮರಳಿ ಪ್ರಬಂಧ ಬರೆಯಲು ಕುಳಿತುಕೊಳ್ಳುತ್ತಿದ್ದಂತೆಯೇ ಬೇಕಾದ ಎಲ್ಲಾ ಸಂಗತಿಗಳು ತಲೆಯಲ್ಲಿ ಸಾಲಾಗಿ ಬಂದು ಸಹಕರಿಸತೊಡಗಿತು. ಚಿಂತನೆಗೆ ಪೂರಕವಾದ ವಾತಾವರಣವೂ ಮುಖ್ಯ ತಾನೆ.

ಕೊಲಂಬಿಯಾ ಯುನಿವರ್ಸಿಟಿಯ ಈ ಬಾರಿಯ ಸೆಮಿಸ್ಟರ್ ತುಸು ಕಷ್ಟಕರವಾಗಿತ್ತು. ಕ್ಲಾಸ್ ಬಳಿಕ ಒಂದಷ್ಟು ಓದು, ಒಂದು ವಾರದ ಮಧ್ಯೆಯೇ ಮೂರು, ನಾಲ್ಕು ಪ್ರಬಂಧ ಬರೆದು ಒಪ್ಪಿಸಬೇಕಾಗಿತ್ತು. ತರಗತಿ, ಉಪವಾಸ, ಇಫ್ತಾರ್, ತರಾವೀಹ್ ಜೊತೆಯಾಗಿ ನಿರ್ವಹಿಸುವುದೇ ಒಂದು ಸಮಸ್ಯೆಯಾಗಿ ಬಿಟ್ಟಿತ್ತು. ಅದಕ್ಕಾಗಿ ಒಂದು ಸರಿಯಾದ ಪ್ಲಾನಿಂಗ್ ಮಾಡಿಟ್ಟಿದ್ದೆ. ಕಾಲೇಜಿಗೆ ತೆರಳುವ ದಾರಿ ಮಧ್ಯೆ ಖುರ್‌ಆನ್ ಪಾರಾಯಣ, ಸಹರಿಯ ವೇಳೆ ಬರಹ, ಇನ್ನಿತರ ಬಿಡುವು ಸಮಯವನ್ನು ಓದಿಗಾಗಿ ಮೀಸಲಿಟ್ಟೆ. ಇಫ್ತಾರ್, ತರಾವೀಹ್ ಗೆ ವಿವಿಧ ಮಸೀದಿಗಳನ್ನು ಸಂದರ್ಶಿಸಬೇಕು. ಅದಕ್ಕಾಗಿ ಮಸೀದಿಗಳ ಲಿಸ್ಟ್ ಸಿದ್ಧಪಡಿಸಿದೆ. ಯುನಿವರ್ಸಿಟಿ ಮಸೀದಿ, ಚಾರಿತ್ರಿಕ ಮಸೀದಿಗಳು ಲಿಸ್ಟಿನಲ್ಲಿ ಮುಖ್ಯವಾದವು. ಅಮೇರಿಕಾದಲ್ಲಿರುವ ಹೆಚ್ಚಿನ ಮಸೀದಿಗಳು ವಿವಿಧ ಪ್ರದೇಶಗಳಿಂದ ವಲಸೆ ಬಂದು ಇಲ್ಲಿ ನೆಲೆಸಿದ ಜನರಿಂದ ನಿರ್ಮಾಣಗೊಂಡಿವೆ. ಆದ್ದರಿಂದಲೇ ಅವು ಈಜಿಪ್ಟನ್ ಮಸೀದಿ, ಕುವೈತಿ ಮಸೀದಿ ಎಂದೆಲ್ಲಾ ಗುರುತಿಸಿಕೊಂಡಿವೆ. ಇವೆಲ್ಲವನ್ನೂ ಸಂದರ್ಶಿಸಬೇಕು; ಜಗತ್ತಿನ ವಿವಿಧ ಶ್ರೀಮಂತ ಸಂಸ್ಕೃತಿಗಳನ್ನು ಅನುಭವಿಸಬೇಕು. ನ್ಯೂಯಾರ್ಕ್ ನಗರದ ಒಂದು ವೈಶಿಷ್ಟ್ಯತೆ ಇಲ್ಲಿನ ವಿಭಿನ್ನ ಸಂಸ್ಕೃತಿಗಳು. ಸಂಸ್ಕೃತಿಗಳ ಪೋಷಣೆಯು ಇಲ್ಲಿನ ಆಡಳಿತದ ಮುಖ್ಯ ಅಜೆಂಡಾಗಳಲ್ಲಿ ಇರುವುದರಿಂದ ಸಾಂಸ್ಕೃತಿಕ ವೈಭವಗಳು ಇಲ್ಲಿ ಕಂಗೊಳಿಸುತ್ತಿವೆ.

ಇಲ್ಲಿನ ಮುಸ್ಲಿಮರ ಸವಿವರ ಅಧ್ಯಯನಕ್ಕೆ ಸೂಕ್ತ ಸಮಯ ರಮಝಾನ್ ತಿಂಗಳು. ನಾನು ಲಿಸ್ಟ್ ಮಾಡಿದ ಮಸೀದಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಶುರುಮಾಡಿದೆ. ಅಮೇರಿಕಾದ ಮುಸ್ಲಿಮರ ನಡುವೆ ಸಾಮಾನ್ಯವಾಗಿರುವ ಬಂಡವಾಳಶಾಹಿತ್ವದ ಪ್ರಭಾವವನ್ನು ಇಲ್ಲಿನ ಮಸೀದಿಗಳಲ್ಲಿ ನಮಗೆ ಒಂದೇ ನೋಟದಲ್ಲಿ ಗಮನಿಸಬಹುದು. ಮನ್ಹಾಟನ್ ನ ಹೆಚ್ಚಿನ ಮಸೀದಿಗಳಲ್ಲಿ ಇಫ್ತಾರಿಗೆ ಆನ್ಲೈನ್ ರಿಜಿಸ್ಟ್ರೇಷನ್ ಮಾಡಬೇಕು. ಇಫ್ತಾರಿಗೆ ತೆರಳಲು ಬಯಸುವ ಮಸೀದಿಯ ವೆಬ್‌ಸೈಟಿನಲ್ಲಿ ಇಮೈಲ್ ರಿಜಿಸ್ಟರ್ ಗೆ ಅವಕಾಶ ನೀಡಲಾಗುತ್ತದೆ. ಆಯಾ ಮಸೀದಿಯ ಇಫ್ತಾರಿನ ಕುರಿತ ಎಲ್ಲಾ ಮಾಹಿತಿಗಳನ್ನು ನಮಗೆ ಈ ಸೈಟಿನಲ್ಲೇ ಪಡೆಯಬಹುದು. ಇನ್ನು ವಿವಿಧ ಹೊಟೇಲು, ರೆಸ್ಟೋರೆಂಟ್‌ಗಳಲ್ಲಿ ನಡೆಯುವ ಇಫ್ತಾರ್ ಸಂಗಮಗಳಿವೆ. ಕೆಲವು ಸಕ್ರಿಯ ಸಂಘಟನೆಗಳು ನಡೆಸುವ ಈ ಇಫ್ತಾರ್ ಗಳು ‘ಚಾರಿಟಿ ಇಫ್ತಾರ್ ಕೂಟ’ ವೆಂದೇ ಕರೆಯಲ್ಪಡುತ್ತವೆ. ಇಂತಹ ಇಫ್ತಾರ್ ಗಳಲ್ಲಿ ಭಾಗಿಯಾಗಲು ಬಯಸುವವರು ಸಣ್ಣ ಮೊತ್ತ ಪಾವತಿಸಿ ಆನ್ಲೈನ್ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ. ಇಫ್ತಾರ್ ನ ಖರ್ಚು ಕಳೆದು ಉಳಿಯುವ ಹಣವನ್ನು ಫ್ಯಾಲಸ್ತೀನ್, ಸುಡಾನ್, ಲೆಬನಾನ್ ನಂತಹ ರಾಷ್ಟ್ರಗಳ ಕಲ್ಯಾಣಕ್ಕಾಗಿ ತೆಗೆದಿಡುತ್ತಾರೆ. ಅಧಿಕವೂ ಇಂತಹ ಇಫ್ತಾರ್ ಸಂಗಮಗಳಲ್ಲಿ ಚಾರಿಟಿಗಾಗಿಯೇ ಪ್ರತ್ಯೇಕ ಹಣ ಸಂಗ್ರಹಗಳು ನಡೆಯುತ್ತವೆ.

ಇದು ಬಿಟ್ಟರೆ ಗೆಳೆಯರು ಸೇರಿ ನಡೆಸುವ ಇಫ್ತಾರ್ ಸಂಗಮಗಳಿವೆ. ಇವು ‘ಪೋಟ್ ಲಕ್’ ಮಾದರಿಯಲ್ಲಿ ನಡೆಯುತ್ತವೆ. ಆದ್ದರಿಂದ ಇದನ್ನು ‘ಪೋಟ್ ಲಕ್ ಇಫ್ತಾರ್’ ಎಂದೇ ಕರೆಯುತ್ತಾರೆ. ಭಾಗವಹಿಸುವ ಪ್ರತಿಯೊಬ್ಬ ವಿವಿಧ ರುಚಿಕರ ತಿನಿಸುಗಳನ್ನು ಪಾಕ ಮಾಡಿ ಅಥವಾ ಖರೀದಿಸಿ ತರುತ್ತಾರೆ. ಎಲ್ಲರೂ ಪರಸ್ಪರ ಹಂಚಿಕೊಂಡು ತಿನ್ನುವುದರಿಂದ ಇಲ್ಲೊಂದು ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಇದರ ಸಿದ್ಧತೆ ಕೂಡಾ ಇಮೇಲ್ ಮೂಲಕವೇ ನಡೆಸುತ್ತಾರೆ. ‘ಪೋಟ್ ಲಕ್’ ನಲ್ಲಿ ಭಾಗವಹಿಸುವವರ ಮಾಹಿತಿ, ಅವರು ತರಲು ಬಯಸುವ ತಿನಿಸುಗಳು, ಅಲರ್ಜಿ ಉಂಟು ಮಾಡುವ ಪದಾರ್ಥಗಳು, ಹಲಾಲ್ ಸರ್ಟಿಫಿಕೇಶನ್ (ಖರೀದಿಸಿ ತರುವುದಿದ್ದರೆ ಪ್ಯಾಕೆಟ್ ನ ಮೇಲೆ ಹಲಾಲ್ ಮುದ್ರೆ ಇರಬೇಕು, ಸಿದ್ಧಗೊಳಿಸುವವರು ಅಡುಗೆಗೆ ಬಳಸುವ ಮಾಂಸದ ದ್ಸಬಹ್ ಕೈಯಿಂದಲೋ, ಮೆಷಿನ್ ಮೂಲಕವೋ ಎಂದು ನೋಂದಾಯಿಸಬೇಕು) ತುಂಬಲು ಎಲ್ಲರಿಗೂ ಅನುಕೂಲವಾಗುವ ಗೂಗಲ್ ಶೀಟ್ ನ್ನು ವಿತರಿಸಲಾಗುತ್ತದೆ. ಸಂಘಟಕರು ಇಫ್ತಾರನ್ನು ಅವರ ಪರ್ಸನಲ್ ವಿಲ್ಲಾಗಳಲ್ಲಿ ಅಥವಾ ಪಾರ್ಕ್ ಗಳಲ್ಲಿ ನಡೆಸುತ್ತಾರೆ.

ತಿಂಗಳ ಪ್ರಾರಂಭದ ನಿರ್ಣಯ ನಮಗೆಲ್ಲಾ ಇಲ್ಲಿ ಒಂದು ತೊಡಕಾಗಿ ಬಿಟ್ಟಿದೆ. ಸೌದಿ ಅರೇಬಿಯಾದಲ್ಲಿ ಚಂದ್ರ ದರ್ಶನವಾದರೆ ಇವರು ಇಲ್ಲಿ ರಮಳಾನಿನ ಘೋಷಣೆ ಮಾಡುತ್ತಾರೆ. ಕೆಲ ಹಿಲಾಲ್ ಸಂಸ್ಥೆಗಳು, ಧಾರ್ಮಿಕ ಸಂಘಟನೆಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಅವರು ತಮ್ಮದೇ ರೀತಿಶಾಸ್ತ್ರ ಬಳಸಿ ಚಂದ್ರದರ್ಶನಗೈಯ್ಯುತ್ತಾರೆ. ಮೊದಲ ದಿನ ಪ್ಲಾನ್ ಮಾಡಿದಂತೆಯೇ ಮುಂದೆ ಸಾಗಿದೆ. ಸ್ವಲ್ಪ ಬೇಗನೆ ರೆಡಿಯಾಗಿ ಇಫ್ತಾರ್ ಗೆ ಕೊಲಂಬಿಯಾ ಯುನಿವರ್ಸಿಟಿಯ ಮಸೀದಿಗೆ ತಲುಪಿದೆ. ಯುನಿವರ್ಸಿಟಿಯ ಒಳಗೆಯೇ ಮಸೀದಿ. ವಿಭಿನ್ನ ಧರ್ಮಗಳ ಜನರಿಗೆ ತಮ್ಮ ಧಾರ್ಮಿಕ ಆಚರಣೆಗಳ ನಿರ್ವಹಣೆಗಾಗಿ ನಿರ್ಮಿಸಿದ ಕಟ್ಟಡದ ಎರಡನೇ ಅಂತಸ್ತನ್ನು ಮಸೀದಿಗಾಗಿ ಮೀಸಲಿಡಲಾಗಿದೆ.

7 ಗಂಟೆಗೆ ಮಗ್ರಿಬ್ ಆಝಾನ್ ಮೊಳಗುತ್ತದೆ. ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ಮಸೀದಿ ಇಮಾಮರ ಭೋದನೆ ಇರುತ್ತದೆ. ಆ ಬಳಿಕ ಇಫ್ತಾರ್ ಸಿದ್ಧತೆಗಳು. ನಾವು ತಲುಪಿದಾಗ ಡಾ. ಇಬಾದುರ್ರಹ್ಮಾನ್ ಮಾತನಾಡುತ್ತಿದ್ದಾರೆ. ಇವರು ಬಾಂಗ್ಲಾದೇಶಿ ವಂಶಜ. ಆತ್ಮೀಯ ಮಾತುಗಾರಿಕೆ ಮತ್ತು ಹಸನ್ಮುಖಿ ವ್ಯಕ್ತಿತ್ವ ಅವರದ್ದು. ಅವರು ಯುನಿವರ್ಸಿಟಿ ನೇಮಿಸಿದ ಚಾಪ್ಲನ್ (ಮತ ಪಂಡಿತ) ಕೂಡಾ ಹೌದು. ವಿದ್ಯಾರ್ಥಿಗಳಿಗೆ ಧಾರ್ಮಿಕ ಬೋಧನೆ ನೀಡುವುದು, ಧಾರ್ಮಿಕ ಆಚರಣೆಗಳಿಗೆ ಸಂಬಂಧಿತ ಯುನಿವರ್ಸಿಟಿಯ ನಿಯಮಗಳಿಗೆ ನಿರ್ದೇಶನ ನೀಡುವುದು ಚಾಪ್ಲನ್ ನ ಕೆಲಸ. ನೋಂದಾಯಿತ ಎಲ್ಲಾ ಧರ್ಮಗಳಿಗೂ ಚಾಪ್ಲನ್ ಗಳನ್ನು ನೇಮಿಸಲಾಗುತ್ತದೆ. ಮುಸ್ಲಿಮರ ಚಾಪ್ಲನ್ ಆಗಿ ಇವರಿದ್ದರು. ಶಾಫಿ ಮದ್ಹಬ್ ಅನುಸರಿಸುವ ಇವರು ಮಸೀದಿ ತಲುಪುವ ಇತರ ಎಲ್ಲಾ ಮದ್ಹಬಿನ, ನವೀನ ಚಿಂತನಾಧಾರೆಯ ವ್ಯಕ್ತಿಗಳೊಂದಿಗೆ ಸಮಾನವಾಗಿ ವ್ಯವಹರಿಸಬೇಕಾಗುತ್ತದೆ.

“ಇಫ್ತಾರಿಗೆ ಎಂಟು ಮಂದಿಯ ಗುಂಪಾಗಿ ಕುಳಿತುಕೊಳ್ಳಬೇಕು.” ಭಾಷಣದ ಬಳಿಕ ಇಮಾಮರು ತಿಳಿಸಿದರು. “ಸಹೋದರ ಧರ್ಮದ ಗೆಳೆಯರನ್ನು ಜೊತೆಗೆ ತಂದಿದ್ದರೆ ಅವರನ್ನು ವಿಶೇಷವಾಗಿ ಸತ್ಕರಿಸಿ. ನೀವು ಗೆಳೆತನ ಬಯಸಿದರೆ ಇದು ಅದಕ್ಕಿರುವ ಸುವರ್ಣಾವಕಾಶ. ಬಯಸುವವರು ಅಪರಿಚಿತರ ಜೊತೆಯಾಗಿ. ಇಫ್ತಾರ್ ಮುಗಿಯುವ ವೇಳೆ ಗುಂಪಿನಲ್ಲಿರುವ ಅಪರಿಚಿತರೆಲ್ಲರೂ ಪರಸ್ಪರ ಗೆಳೆಯರಾದರೆ ಈ ಸಂಗಮ ಸಾರ್ಥಕಗೊಳ್ಳುತ್ತದೆ” ಎಂದೆಲ್ಲಾ ಇಮಾಮ್ ಮೈಕಿನಲ್ಲಿ ಗುಂಪಿನ ಮಧ್ಯೆ ನಡೆಯುತ್ತಾ ಹೇಳುತ್ತಿದ್ದರು.

ನಾನು ಕುಳಿತ ಗುಂಪಿನಲ್ಲಿ ಅಮುಸ್ಲಿಮರು ಸೇರಿ ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳಿದ್ದರು. ಅವರೆಲ್ಲರೂ ಪರಸ್ಪರ ಬ್ರದರ್ ಎಂದೇ ಸಂಬೋಧಿಸುತ್ತಿದ್ದರು. ಸಂಬೋಧನೆಯ ಆಚೆಗೆ ಅವರ ಆತ್ಮೀಯತೆ ನನ್ನನ್ನು ಅಚ್ಚರಿಗೊಳಿಸಿತು. ಇಫ್ತಾರಿಗೆ ಸೆನೆಗಲ್ ರಾಷ್ಟ್ರದ ವಿಶಿಷ್ಟ ಆಹಾರಗಳನ್ನು ಸಜ್ಜುಗೊಳಿಸಿದ್ದರು. ‘ಡಿಬಿ ಲಾಂಬ್’, ‘ಕುಸ್‌‍-ಕುಸ್’, ‘ಸಾಲಡ್’ ಗಳು ವಿಶೇಷವಾಗಿ ಅಲ್ಲಿತ್ತು. ‘ಡಿಬಿ ಲಾಂಬ್’ ಎಂಬುದು ಆಡಿನ ಮಾಂಸದ ಮೇಲೆ ಸ್ಪೆಷಲ್ ಮಸಾಲ ಸೇರಿಸಿದ ಆಫ್ರಿಕನ್ ಆಹಾರ. ‘ಕುಸ್-ಕುಸ್’ ತರಕಾರಿಗಳನ್ನು ಸೇರಿಸಿ ಮಾಡುವ ಒಂದು ತರಹದ ಆಫ್ರಿಕನ್ ಪಾಸ್ತಾ. ಜರ್ಜಿರ್ ಎಲೆ, ಟೊಮೊಟೋ, ಲೆಟಸ್ ಎಲೆಗಳನ್ನು ಸೇರಿಸಿ ಮಾಡಿದ ರುಚಿಯಾದ ಸಲಾಡ್ ಜೊತೆಗಿತ್ತು.

ಮೂಲ: ಎನ್‌ ಖಲೀಲ್‌ ನೂರಾನಿ
ಅನು: ಅನ್ಸೀಫ್ ಮುಈನಿ ಮಂಚಿ


ಎನ್‌ ಖಲೀಲ್‌ ನೂರಾನಿ
Student, Columbia University

ಕಾಯಲ್ಪಟ್ಟಣದ ಜೀವಂತ ಪರಂಪರೆ

ಇದು ಚರಿತ್ರೆಯ ಹೊರೆಯನ್ನು ಹೊತ್ತುಕೊಂಡಿರುವ ಸಣ್ಣ ಪಟ್ಟಣವೆಂದು ಕಾಯಲ್‌ಪಟ್ಟಣಂ ಕಡೆಗೆ ಪಯಣ ಬೆಳೆಸುವ ಮೊದಲೇ ಸ್ನೇಹಿತರು ನನಗೆ ಎಚ್ಚರಿಕೆ ನೀಡಿದ್ದರು. ಆ ಪಟ್ಟಣದ ಕುರಿತು ನಾನು ಅದಾಗಲೇ ಓದಿಕೊಂಡಿದ್ದ ಮೊನೊಗ್ರಾಫ್‌ ಅದನ್ನೆ ಒತ್ತಿಹೇಳಿತ್ತು. ನನ್ನ ಪಯಣದ ಆರಂಭದಲ್ಲಿ ಗಮನಾರ್ಹವಾಗಿ ವಿನ್ಯಾಸಗೊಳಿಸಿದ ‌ ಪಟ್ಟಣದ ಕಿರಿದಾದ ಬೀದಿಗಳಲ್ಲಿ ಆಟೊ ನನ್ನನ್ನು ಕರೆದೊಯ್ಯುತ್ತಿದ್ದಾಗ ನನ್ನ ಡ್ರೈವರ್ ನನಗೆ ಮಹತ್ವದ ರಸ್ತೆ ಅಥವಾ ಸ್ಮಾರಕವನ್ನು ತೋರಿಸಲು ಮರೆತುಬಿಡುತ್ತಾನೋ ಎಂದು ಚಿಂತೆಯಾಗುತ್ತಿತ್ತು. ಆದರೆ ಆತ ಅದನ್ನು ಮಾಡಿರಲಿಲ್ಲ. ಎಂತಹ ಐತಿಹಾಸಿಕ ನಗರವಾದರೂ ಎಲ್ಲವನ್ನೂ ಎರಡು ದಿನಗಳಲ್ಲಿ ನೋಡಿ ಬಿಡಬಹುದು ಎಂದು ಭಾವಿಸಿದ್ದೆ. ಸ್ವಚ್ಛವಾಗಿರುವ ಪಟ್ಟಣದ ಬೀದಿಗಳನ್ನು ಅಕ್ಷರಶಃ ಒಂದೆರಡು ಗಂಟೆಗಳಲ್ಲಿ ನಡೆದು ಕ್ರಮಿಸಬಹುದು. ಪಟ್ಟಣದ ಇತಿಹಾಸವನ್ನು ಅವಲೋಕಿಸುವಾಗ ಎತ್ತರದ, ದಪ್ಪ ಮತ್ತು ದಟ್ಟವಾದ ಕಟ್ಟಡಗಳು ಮತ್ತು ಸ್ಮಾರಕಗಳನ್ನು ನನ್ನ ಮನಸ್ಸಿನಲ್ಲಿ ನಿರ್ಮಿಸಿಕೊಂಡಿದ್ದೆ. ಇಲ್ಲಿಯೂ ನನಗೆ ನಿರಾಶೆಯೇ ಕಾದಿತ್ತು. ಅತಿಯಾದ ಅಂದಾಜುಗಳು ಯಾವಾಗಲೂ ನಿರಾಸೆಯನ್ನೆ ಉಂಟುಮಾಡುತ್ತದೆ.

ನಾನಂದುಕೊಂಡದ್ದು ತಪ್ಪೆಂದು ತಿಳಿದುಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಆ ನಗರದ ವಾಣಿಜ್ಯೋದ್ಯಮಿ, ಇತಿಹಾಸಕಾರ, ವ್ಯಾಪಾರಿ, ಕಾರ್ಯಕರ್ತ, ಕಲಾವಿದರ ಅಂತೆಯೇ ಊರಿನ ಜನರ ಮಾತುಗಳನ್ನು ಹೆಚ್ಚು ಆಲಿಸಿದ ಹಾಗೆ ಆರಂಭಿಕ ಅನಿಸಿಕೆಗಳು ಎಷ್ಟು ಭಯಾನಕವಾಗಬಹುದೆನ್ನುವ ಅರಿವು ನನಗಾಯಿತು. ಆ ಚಿಕ್ಕ ಪಟ್ಟಣ ಈಗ ಸುಂದರವಾಗಿ ಪೇರಿಸಿಡಲಾದ ಗುಪ್ತ ನಿಧಿಯಂತೆ ನಳನಳಿಸತೊಡಗಿತು. ಆ ನಗರ ಪರಂಪರೆಯಿಂದ ಆವರಿಸಿಕೊಂಡು ವ್ಯಾಪಾರ, ರಕ್ಷಣೆ, ಧಾರ್ಮಿಕ ಪಾಂಡಿತ್ಯ ಮತ್ತು ಸಾಹಿತ್ಯಕ ಸಾಧನೆಗಳ ಶ್ರೀಮಂತ ಇತಿಹಾಸಗಳನ್ನು ಅಭಿವ್ಯಕ್ತಿಗೊಳಿಸುತ್ತಿರುವುದು ಮನವರಿಕೆಯಾಯಿತು. ಐದು ದಿನಗಳ ನಂತರ ಪಟ್ಟಣದಿಂದ ಮರಳುವ ವೇಳೆ ನನಗೆ ಹಿಂಜರಿಕೆ ಉಂಟಾಗಿತ್ತು. ನಗರದ ಮೂಲೆ- ಮೂಲೆಗಳಿಂದ ಮೂಡಿಬರುವ ಕುತೂಹಲಕಾರಿ ಕಥೆಗಳೊಂದಿಗೆ ಹೆಚ್ಚು ಕಾಲ ಅಲ್ಲಿ ಉಳಿದು ಆಳಕ್ಕಿಳಿಯಲು ಮನಸ್ಸು ಉತ್ಸುಕಗೊಳ್ಳುತ್ತಿತ್ತು. ಆದರೂ ನಾನು ಮತ್ತೆ ಹಿಂದಿರುಗಲಿದ್ದೇನೆ ಎನ್ನುವ ಪ್ರತಿಜ್ಞೆ ಕೈಗೊಂಡೆ.

ಕಣ್ಣುಕುಕ್ಕುವ ಈ ಮೋಡಿಯ ಲಹರಿಯಲ್ಲಿ ಮೈಮರೆತದ್ದು ನಾನೊಬ್ಬನೇ ಅಲ್ಲ. ಈ ಪಟ್ಟಣಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ಈ ಪಟ್ಟಣ ಪಡೆದಿರುವ ಪ್ರಶಂಸೆಗೆ ಕೊರತೆಯಿಲ್ಲ. ಕಾಯಲ್ ಪಟ್ಟಣ ಅಸಂಖ್ಯಾತ ಪ್ರಯಾಣಿಕರು, ವ್ಯಾಪಾರಿಗಳು, ಸೂಫಿಗಳು, ವಿದ್ವಾಂಸರು, ಸುಲ್ತಾನರು, ಗುಲಾಮರು, ಆಕ್ರಮಣಕಾರರು, ಬಂಡುಕೋರರನ್ನು ಕಂಡಿದೆ. ಮುಸ್ಲಿಮ್ ಶ್ರೀಮಂತ ಸಂಪ್ರದಾಯಗಳು, ಸೂಫಿ ಪರಂಪರೆ ಮತ್ತು ಶತಶತಮಾನಗಳ ಹಿನ್ನೆಲೆಯಿರುವ ಅರಬ್ ದೇಶಗಳ ಜೊತೆಗಿನ ಸಂಪರ್ಕಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದ ಇಸ್ಲಾಮಿಕ್ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಗೆ ಕಾಯಲ್ಪಟ್ಟಣದ ಕೊಡುಗೆ ಅಪಾರ ಮತ್ತು ಅಮೂಲ್ಯವಾಗಿದೆ. ಹಲವಾರು ಧಾರ್ಮಿಕ ವಿದ್ವಾಂಸರಿಗೆ, ಮಹಾನ್ ಆಧ್ಯಾತ್ಮಿಕ ಗುರುಗಳಿಗೆ ಹುಟ್ಟು ನೀಡಿರುವ ಈ ಪಟ್ಟಣ ಹಲವಾರು ಶತಮಾನಗಳಿಂದ ಸ್ಥಳೀಯ ಮತ್ತು ಅಂತರಾಷ್ಟ್ರೀಯ ವ್ಯಾಪಾರಿಗಳಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಿದೆ.

ಪಾಂಡ್ಯನ್ ಸಾಮ್ರಾಜ್ಯದ ಪ್ರಮುಖ ಪಟ್ಟಣವಾಗಿತ್ತು ಕಾಯಲ್. ನಂತರ ಮಅಬರ್ ಸುಲ್ತಾನರು ತುಲನಾತ್ಮಕವಾಗಿ ಕಡಿಮೆ ಕಾಲಾವಧಿಗೆ ಇಲ್ಲಿ ಆಳ್ವಿಕೆ ನಡೆಸಿದ್ದರು. ಐತಿಹಾಸಿಕ ಕಾಯಲ್ ಪಟ್ಟಣ ದೂರದ ದೇಶಗಳಿಂದ ಹಡಗುಗಳನ್ನು ಆಕರ್ಷಿಸುತ್ತಿದ್ದ ಬಂದರು ಕೂಡಾ ಹೌದು. ವಿಶ್ವ ವ್ಯಾಪಾರಿಗಳಾದ ಮಾರ್ಕೊ ಪೊಲೊ, ವಾಸಾಫ್, ರಶೀದುದ್ದೀನ್, ಬಾರ್ಬೋಸಾ, ಅಬ್ದುಲ್ ರಝ್ಝಾಕ್ ಮತ್ತು ನಿಕೊಲೊ ಡಿ ಕಾಂಟಿ ಕೋರಮಂಡಲ್ ಕರಾವಳಿಯ ಈ ತಮಿಳ್- ಇಸ್ಲಾಮಿಕ್ ಪಟ್ಟಣಕ್ಕೆ ಬಂದಿಳಿದಿದ್ದಾರೆ ಮತ್ತು ಅದರ ಕುರಿತು ವಿವರವಾಗಿ ವಿವಿಧ ಸಮಯಗಳಲ್ಲಿ ಬರೆದಿದ್ದಾರೆ. ಟಾಲೆಮಿ ಮತ್ತು ಇಬ್ನ್ ಬತೂತ ಕೂಡ ಈ ಪ್ರದೇಶಕ್ಕೆ ಭೇಟಿ ನೀಡಿದ್ದು ಪಟ್ಟಣ ಮತ್ತು ಅದರ ಆರ್ಥಿಕ ವೈಭವವನ್ನು ಶ್ಲಾಘಿಸಿದ್ದಾರೆ.

ಕಾಯಲ್‌ ಜತೆಗೆ ಕೋರಮಂಡಲ್ ಕರಾವಳಿಯು ಕೊರ್ಕೈ, ಕೀಳಕ್ಕರೈ ಮತ್ತು ನಾಗಪಟ್ಟಣಂ ನಂತಹ ಇತರ ಪ್ರತಿಷ್ಠಿತ ಬಂದರುಗಳನ್ನು ಕೂಡಾ ಹೊಂದಿತ್ತು. ಕಾಯಲ್‌ ಇತಿಹಾಸವು ಇವುಗಳ ಇತಿಹಾಸದೊಂದಿಗೆ ಬೇರ್ಪಡಿಸಲಾಗದಂತೆ ಹೆಣೆದುಕೊಂಡಿದೆ. ಅಲ್ಲದೆ, ಕೋರಮಂಡಲ್ ಕರಾವಳಿಯ ಇತರ ಬಂದರು ಪಟ್ಟಣಗಳಿಗೆ ವ್ಯಾಪಾರ ಮತ್ತು ಇತರ ಕಾರಣಗಳಿಗಾಗಿ ವಲಸೆ ಹೋದ ಮುಸ್ಲಿಮರು ಕಾಯಲ್‌ ಮೂಲದವರಾಗಿದ್ದರು.

ಅರಬ್ಬರೊಂದಿಗೆ ಪಟ್ಟಣಕ್ಕಿದ್ದ ವಾಣಿಜ್ಯ ಸಂಪರ್ಕವು ಇಸ್ಲಾಮ್ ಆಗಮನಕ್ಕೂ ಮುಂಚಿನ ಹಲವಾರು ಶತಮಾನಗಳ ಹಿಂದಿನದು. ಅಲ್ಲಿನ ಸ್ಥಳೀಯರನ್ನು ನೋಡಿದಾಗ ಅವರ ಮೈಬಣ್ಣ, ದೈಹಿಕ ಲಕ್ಷಣ ಮತ್ತು ಸಂಸ್ಕೃತಿಯಲ್ಲಿ ಅರಬ್ ವಂಶಾವಳಿಯ ವೈಶಿಷ್ಟ್ಯಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಬಹುತೇಕ ಮುಸ್ಲಿಮರು ವಾಸಿಸುವ ಪಟ್ಟಣದ ಕುಟುಂಬಗಳಾಗಿರುವ ಮರಕ್ಕಾಯರ್‌, ಲಬ್ಬೈ, ನೈನಾರ್‌ ಮತ್ತು ಮಕ್ದೂಮ್‌ಗಳಿಗೆ ಅರೇಬಿಯಾದ ದೂರದ ಪಟ್ಟಣಗಳಿಗೆ ವಿವಿಧ ಮಾರ್ಗಗಳ ಮೂಲಕ ತಲುಪುವ ವಂಶಾವಳಿ ಇದೆ. ಅದಾಗ್ಯೂ, ಅವರ ನಡುವಿನ ವ್ಯತ್ಯಾಸಗಳು ಹೊರಗಿನವರಿಗೆ ಅಷ್ಟು ಬೇಗ ಹೊಳೆಯುವುದಿಲ್ಲ. ‘ದಿ ಕನ್ಸೈಸ್ ಹಿಸ್ಟರಿ ಆಫ್ ಕಾಯಲ್ಪಟ್ನಂ’ ಎಂಬ ಹೆಸರಿನಲ್ಲಿ ಪಟ್ಟಣದ ಇತಿಹಾಸವನ್ನು ದಾಖಲಿಸಿರುವ ಪ್ರಸಿದ್ಧ ಸ್ಥಳೀಯ ಇತಿಹಾಸಕಾರ ದಿವಂಗತ ಡಾ. ಆರ್.ಎಸ್. ಅಬ್ದುಲ್ ಲತೀಫ್ ಅವರ ಪ್ರಕಾರ ಪಟ್ಟಣದಲ್ಲಿ ಅರೇಬಿಯಾ ಮೂಲದ ಮೂರು ಕಾಲನಿಗಳು ಬಂದಿವೆ. ಹಿಜಾಝ್ ನಿಂದ CE 630ರಲ್ಲಿ ಬಂದ ಕಾಲನಿ ಮೊದಲನೆಯದ್ದು. ಎರಡನೆಯ ಮತ್ತು ಮೂರನೆಯ ವಸಾಹತುಗಳು ಕ್ರಮವಾಗಿ CE 842 ಮತ್ತು CE 1284ರಲ್ಲಿ ಈಜಿಪ್ಟ್‌ನಿಂದ ಬಂದಿವೆ.

ಸ್ಥಳೀಯರ ಮಾತುಗಳು ಹಾಗೂ ಕೊಸ್ಮರೈ ದರ್ಗಾ ಬಳಿ ಕರಾವಳಿ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಕಂಡುಬಂದ ಕಲ್ಲಿನ ಶಾಸನದ ಪ್ರಕಾರ ಹಿಜರಿ ಶಕೆ 9/ ಕ್ರಿಸ್ತ ಶಕೆ 630ರಲ್ಲಿ ಇಸ್ಲಾಮ್ ಕಾಯಲ್ಪಟ್ಟಣಂ ತಲುಪಿತು. ಐವರು ಸ್ವಹಾಬಿಗಳು (ಪೈಗಂಬರರ ಅನುಯಾಯಿಗಳು) ಕಾಯಲ್ ಕಡಲತೀರದಲ್ಲಿ ಮಸ್ಜಿದ್ ‘ಅಲ್- ಇಮಾನ್’ ಅಥವಾ ‘ಕಡಲ್ಕರೈ’ ಪಲ್ಲಿ ಎನ್ನಲಾಗುವ ಮಸೀದಿಯನ್ನು ನಿರ್ಮಿಸಿದ್ದಾರೆ ಎಂದು ನಂಬಲಾಗಿದ್ದು ಇದು ಈಗ ಅಸ್ತಿತ್ವದಲ್ಲಿಲ್ಲ. ಶಾಸನದಲ್ಲಿನ ಸ್ವಹಾಬಿಗಳ ಹೆಸರುಗಳ ಪಟ್ಟಿಯಲ್ಲಿ ಖಾಲಿದ್ ಇಬ್ನ್ ಸಯೀದ್ ಇಬ್ನ್ ಅಲ್ ಆಸ್, ತಾಬಿದ್ ಇಬ್ನ್ ಕೈಸ್ ಇಬ್ನ್ ಸುಮಾಸ್, ಅಬ್ದುಲ್ಲಾ ಇಬ್ನ್ ಸಅದ್ ಇಬ್ನ್ ಅಬು ಸಾರಾ, ಅಬ್ದುಲ್ಲಾ ಇಬ್ನ್ ಅಬ್ದುಲ್ಲಾ ಇಬ್ನ್ ಉಬೈ ಮತ್ತು ಅಬ್ದುಲ್ಲಾ ಇಬ್ನ್ ಅಬ್ದುಲ್ ಅಝೀಝ್ ಇಬ್ನ್ ಉಮರ್ ಎಂಬ ಹೆಸರುಗಳಿವೆ. ಪಟ್ಟಣದ ಹೆಸರಾಂತ ಇತಿಹಾಸಕಾರರಾದ ಪ್ರೊ. ಅಬುಲ್ ಬರಕಾತ್‌ರವರು ಈ ವಿಷಯದ ಬಗ್ಗೆ ವಿಸ್ತೃತ ಸಂಶೋಧನೆ ನಡೆಸಿದ್ದು ಪಟ್ಟಣಕ್ಕೆ ಮೊದಲ ಬಾರಿ ಅರಬ್ ಆಗಮನವಾದದ್ದು ಹಿಜರಿ 9ರಲ್ಲಿ ಎಂದು ಸಾಬೀತುಪಡಿಸಿದ್ದಾರೆ. ಸ್ವಹಾಬಿಗಳ ಆಗಮನವಾದದ್ದು ಹಿಜರಿ 12ನೆಯ ವರ್ಷದಲ್ಲಿ ಎನ್ನುವ ಅಭಿಮತ ವ್ಯಕ್ತಪಡಿಸಿದ‌ ಡಾ. ಲತೀಫ್ ಕಡೆಗೆ ಬರಕಾತ್‌ ಅಭಿಪ್ರಾಯವನ್ನೇ ಅನುಮೋದಿಸಿದ್ದಾರೆ.

ಮಧ್ಯಕಾಲೀನ ಯುಗದಲ್ಲಿ ಪರ್ಶಿಯನ್- ಅರೇಬಿಕ್, ಚೈನೀಸ್, ಇಂಡಿಯನ್, ಆಗ್ನೇಯ ಏಷ್ಯನ್ ಮತ್ತು ಯುರೋಪಿಯನ್ ನಂತಹ ವಿಭಿನ್ನ ನಾಗರಿಕತೆಗಳು ಈ ಬಂದರಿನೊಂದಿಗೆ ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ಹೊಂದಿದ್ದವು. ಕೆಲವೊಮ್ಮೆ ಉದ್ವಿಗ್ನಕಾರಿ ಸ್ಪರ್ಧೆಗಳು ಕೂಡಾ ನಡೆದಿವೆ. ಮೃದು ರೇಷ್ಮೆ, ಕುದುರೆ ಮತ್ತು ಮುತ್ತು ಈ ಪಟ್ಟಣದ ಆಮದು ಅಥವಾ ರಫ್ತಿನಲ್ಲಿ ಹೆಚ್ಚು ಬೇಡಿಕೆಯಿದ್ದ ಸರಕುಗಳು. ಈ ಸರಕುಗಳು ಪ್ರಕ್ಷುಬ್ಧ ಪ್ರಯಾಣಗಳನ್ನು ಸಾಧ್ಯವಾಗಿಸಿವೆ.

ಈ ಭೂಭಾಗದ ಪಶ್ಚಿಮ ಕರಾವಳಿಗೆ ಮಲಬಾರ್ ಎನ್ನುವಂತೆ ಪೂರ್ವ ಕರಾವಳಿಯನ್ನು ಮಬಾರ್ ಎಂದು ಕರೆಯಲಾಗುತ್ತಿತ್ತು. “ಕೊರ್ಕೈ ಬಂದರು ಅತ್ಯಂತ ಹಳೆಯದು. ಕಾಯಲ್ ಅದರ ಪಕ್ಕದಲ್ಲಿಯೇ ಅಭಿವೃದ್ಧಿ ಹೊಂದಿತು. ಕಾಯಲ್ ಚೀನಾ, ಯೆಮನ್ ಅಥವಾ ಇತರ ಅರೇಬಿಯನ್ ಬಂದರುಗಳಿಂದ ಬರುವ ಹಡಗುಗಳು ಹಾದುಹೋಗುವ ಸಹಜ ಬಂದರು ಎನಿಸಿತ್ತು. ಕಾಯಲ್ಪಟ್ಟಣಂನಲ್ಲಿ ಲೋಡಿಂಗ್ ಅಥವಾ ಅನ್ಲೋಡಿಂಗ್ ಇಲ್ಲದಿದ್ದರೆ ಹಡಗುಗಳು ಶ್ರೀಲಂಕಾ ಸುತ್ತು ಹಾಕಿ ಹೋಗುತ್ತಿದ್ದವು. ಅರೇಬಿಕ್‌ನಲ್ಲಿ ಮಅಬರ್ ಎಂಬ ಪದಕ್ಕೆ ‘ಹಾದು ಹೋಗುವ ಸ್ಥಳ’ ಎನ್ನುವ ಅರ್ಥ ಇದೆ ಎಂದು ಸ್ಥಳೀಯ ಯುವ ಇತಿಹಾಸಕಾರ ಮತ್ತು ಸಂಶೋಧಕ ಮುಹಮ್ಮದ್ ಸುಲ್ತಾನ್ ಬಾಖವಿ ಹೇಳುತ್ತಾರೆ.

ಕಾಯಲ್ಪಟ್ಟಣದ ವಿಶ್ವಪೌರತ್ವದ ಬೇರುಗಳು ಪ್ರಾಚೀನ ಯುಗದಲ್ಲಿ ಹಿಜಾಝ್, ಈಜಿಪ್ಟ್ ಮತ್ತು ಗ್ರೀಸ್‌ ಕಡೆಗೆ ಚಾಚಿದ್ದು ಮಧ್ಯಯುಗದಲ್ಲಿ ಅದು ತನ್ನ ಶಾಖೆಗಳನ್ನು ಚೀನಾ, ಇಂಡೋನೇಷ್ಯಾ, ಶ್ರೀಲಂಕಾ, ಜಲಸಂಧಿ ವಸಾಹತುಗಳು, ಯುರೋಪ್ ಮತ್ತು ಅದರಾಚೆಗೂ ವಿಸ್ತರಿಸಿತು. ಕಾಯಲ್‌ಪಟ್ಟಣಂ ಬೀಚ್‌ಗೆ ತಲುಪುವ ಸೀ ಕಸ್ಟಂ ರಸ್ತೆಗೆ ಹಿಂದೆ ‘ಪಂಡಕ್ಸಲೈ’ ಅಥವಾ ‘ಗೋದಾಮಿನ ರಸ್ತೆ’ ಎಂದು ಕರೆಯಲಾಗುತ್ತಿತ್ತೆನ್ನುವ ಹಿರಿಯರ ಮಾತುಗಳು ಪಟ್ಟಣದ ವೈಭವಯುತ ಇತಿಹಾಸದ ಬೇಸರವುಕ್ಕಿಸುವ ನೆನಪುಗಳು. ಈಗ ಅಲ್ಲಿ ಒಂದೇ ಒಂದು ಗೋದಾಮನ್ನು ಗುರುತಿಸಲು ಸಾಧ್ಯವಿಲ್ಲ. ಪರಿಮಾರ್ ಮತ್ತು ಕೋಮನ್ ಬೀದಿಗಳು ಉಳಿದಿರುವ ಹಳೆಯ ಬೀದಿಗಳು.

ಮದೀನಾ, ಇರಾಕ್, ಯೆಮೆನ್ ಮತ್ತು ಈಜಿಪ್ಟ್‌ನಿಂದ ವಿದ್ವಾಂಸರು ಮತ್ತು ಸಂತರು ಕಾಯಲ್‌ಪಟ್ಟಣಂ ತಲುಪಿ ಪಟ್ಟಣಕ್ಕೆ ಶಾಶ್ವತವಾದ ಆಧ್ಯಾತ್ಮಿಕ ಹೊಳಹು ನೀಡಿದರು. ಈಗ ಅಲ್ಲಿ ಸುಮಾರು 30 ಮಸೀದಿಗಳಿವೆ ಮತ್ತು ಮಹಾನ್ ಸೂಫಿಗಳ ಹಲವಾರು ಪ್ರಸಿದ್ಧ ದರ್ಗಾಗಳಿವೆ. ಪಟ್ಟಣದಲ್ಲಿ ಕುರ್ಆನ್ ಕಂಠಪಾಠದಿಂದ ಮೊದಲಾಗಿ ಇಸ್ಲಾಮಿಕ್ ದೇವತಾಶಾಸ್ತ್ರ ಮತ್ತು ನ್ಯಾಯಶಾಸ್ತ್ರದವರೆಗೆ ಕಲಿಸುವ ವ್ಯವಸ್ಥೆಗಳಿವೆ. ಇಸ್ಲಾಮಿಕ್ ಜ್ಞಾನ ಪರಂಪರೆ ಹಾಗೂ ಆಧ್ಯಾತ್ಮಿಕತೆಗೆ ಕಾಯಲ್‌ ನೀಡಿರುವ ಕೊಡುಗೆ ಅನನ್ಯ ಮತ್ತು ಅಮೂಲ್ಯ. ಪಟ್ಟಣದ ಬಹುಸಂಖ್ಯಾತ ಮುಸ್ಲಿಮರು ಶಾಫಿ ಸುನ್ನಿ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದು ವಿಭಿನ್ನ ತ್ವರೀಕತ್ ಗಳ ಮೂಲಕ ಸೂಫಿಸಂ ಕೂಡಾ ಪಾಲಿಸುತ್ತಿದ್ದಾರೆ. ಈ ಪೈಕಿ ಖಾದಿರಿಯಾ ತ್ವರೀಕತ್ ಐತಿಹಾಸಿಕವಾಗಿ ಮೇಲುಗೈ ಸಾಧಿಸಿದೆ. ಜತೆಗೆ ಸಲಫಿ ಚಳವಳಿಗೂ ಪಟ್ಟಣದಲ್ಲಿ ಪ್ರಭಾವವಿದೆ.

ಕಾಯಲ್‌ಪಟ್ಟಿಣಂ ಸಂತರ ಪಟ್ಟಣ ಎನಿಸಿದೆ. ಪಟ್ಟಣದಲ್ಲಿ ಅಂತ್ಯ ವಿಶ್ರಮದಲ್ಲಿರುವ ಅಸಂಖ್ಯಾತ ಸೂಫಿಗಳ ಸಂಪೂರ್ಣ ಪಟ್ಟಿ ಮಾಡಿ ಮುಗಿಸುವುದು ಕಷ್ಟಸಾಧ್ಯ. ಅವರೆಲ್ಲರ ಕಂತುರಿಗಳನ್ನು (ಮರಣ ವಾರ್ಷಿಕೋತ್ಸವದ ಆಚರಣೆಗಳು) ತಪ್ಪದೆ ನಡೆಸಲಾಗುತ್ತದೆ. ಕೆಲವು ಪ್ರಮುಖ ಸಂತರ ಹೆಸರುಗಳು ಇಂತಿವೆ. ಪ್ರವಚನಗಳ ಮೂಲಕ ಸಾಮೂಹಿಕ ಮತಾಂತರ ನಡೆಸುತ್ತಿದ್ದ ಮುತ್ತು ಮಕ್ದೂಮ್ ಶಹೀದ್. ಮದೀನಾದಿಂದ ಬಂದ ‘ಖಲೀಫಾ ವಲಿಯುಲ್ಲಾ’. ಸ್ಥಳೀಯ ಸಂಪ್ರದಾಯದ ಪ್ರಕಾರ ಇವರು ಮರಳನ್ನು ಸಮುದ್ರಕ್ಕೆ ಎಸೆದು ಪೋರ್ಚುಗೀಸ್ ನೌಕಾಪಡೆ ಬಂದರಿಗೆ ಪ್ರವೇಶಿಸದಂತೆ ಅದ್ಭುತವಾಗಿ ತಡೆದು ನಿಲ್ಲಿಸಿದ್ದರು. ಮದೀನಾದಿಂದ ಬಂದ ಫಳ್ಲುಲ್ಲಾಹಿಲ್ ಮದನಿ, ಥೈಕಾ ಸಾಹಿಬ್ ಅಪ್ಪಾ , ಪ್ರಸಿದ್ಧ ಸೂಫಿ ಗ್ರಂಥ ಅಲ್ಲಫಲ್ ಅಲಿಫ್ ಬರೆದ ಉಮರ್ ವಲಿ, ಕೊಸ್ಮರೈ ಸಂತರು, ಖಲೀಫಾ ಅಪ್ಪಾ ವಲಿಯುಲ್ಲಾ, ಯೂಸುಫ್ ಅಪ್ಪಾ, ಸಾಲಾರ್ ಮರಯ್ಕಾರ್ ವಲಿಯುಲ್ಲಾ, ಪೆರಿಯ ಮುತ್ತು ವಾಪ್ಪ ವಾಲಿ, ಸ್ವರ್ಗತು ಪೊನ್ನು (ಸ್ವರ್ಗದ ಮಹಿಳೆ) ಎಂದು ಕರೆಯಲ್ಪಡುವ ಆಯಿಷಾ ವಲಿ. ಈ ಪಟ್ಟಿ ಇನ್ನೂ ಮುಂದುವರಿಯುತ್ತದೆ.

ಪ್ರಖ್ಯಾತ ವಾಸ್ತುಶಿಲ್ಪದ ಇತಿಹಾಸಕಾರ ಮೆಹರ್ದಾದ್ ಶೋಕೂಹಿ ಸಿರುಪ್ಪಳ್ಳಿ ಮತ್ತು ಮರಕ್ಯಾರ್ ಪಳ್ಳಿ ಬಳಿಯ ಗೋರಿಗಳಲ್ಲಿ ಕಂಡುಬರುವ ಉಪನಾಮಗಳನ್ನು ಅಲ್- ಖಾಹಿರಿ, ಅಲ್- ಇರಾಕಿ ಮತ್ತು ಅಲ್- ಬಕ್ಕರಿ ಎಂದು ಓದಿದ್ದಾರೆ. ಇದರಲ್ಲಿ ಅರಬ್ ವಂಶಾವಳಿಯ ಕಡೆಗೆ ಸ್ಪಷ್ಟ ಸೂಚನೆಯಿದೆ. ಆದರೆ, ನಂತರದ ಕಾಲದಲ್ಲಿ ಅನೇಕ ವಿದ್ವಾಂಸರು ಅಲ್ ಮಅಬರಿ ಎಂಬ ಉಪನಾಮವನ್ನು ಆರಿಸಿಕೊಂಡರು.

ಪೆರಿಯಾ ಖುತ್ಬಾ ಪಳ್ಳಿಯ ಸಮೀಪದಲ್ಲಿರುವ ರಾಜವೈಭವದ ಸಮಾಧಿಗಳು ಮಅಬರ್‌ ಸುಲ್ತಾನರದ್ದು ಎಂದು ಇತಿಹಾಸಕಾರ ಸುಲ್ತಾನ್‌ ಬಾಖವಿ ಹೇಳುತ್ತಾರೆ. ಮಧುರೈ ಸುಲ್ತಾನೇಟ್‌ ಎನ್ನುವ ಹೆಸರಲ್ಲಿಯೂ ಕರೆಯಲಾಗುವ ಸ್ವತಂತ್ರ ಮುಸ್ಲಿಮ್ ಸುಲ್ತಾನೇಟ್‌ ಕೋರಮಂಡಲ್ ಕರಾವಳಿಯಲ್ಲಿ 14ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂತು. ವಿಜಯನಗರ ಸಾಮ್ರಾಜ್ಯದ ದಾಳಿಯಿಂದ ಪತನಗೊಳ್ಳುವವರೆಗೆ ಬಹತೇಕ ಅರ್ಧ ಶತಮಾನಗಳ ಕಾಲ ಇದು ಆಡಳಿತ ನಡೆಸಿತ್ತು.

ಆದರೆ ಕೆಲವು ಇತಿಹಾಸಕಾರರ ಮಧ್ಯೆ ಪುರಾತನ ಮತ್ತು ಮಧ್ಯಕಾಲೀನ ಯುಗಗಳ ಯಾತ್ರಾವಿವರಣೆಗಳಲ್ಲಿ ಕಂಡುಬರುವ ಕೈಲ್ ಅಥವಾ ಕ್ವಾಇಲ್ ಅಥವಾ ಕಯಾಲ್ ಎಂದು ಉಲ್ಲೇಖಿಸಲಾದ ನಗರವು‌ ಕಾಯಲ್ಪಟ್ಟಣಂ ಅಲ್ಲ ಎನ್ನುವ ದುರದೃಷ್ಟಕರ ಚರ್ಚೆಯಿದೆ. ಇಂದಿನ ಕಾಯಲ್‌ಪಟ್ಟಣಂ ತುಲನಾತ್ಮಕವಾಗಿ ಹೊಸ ಪಟ್ಟಣವಾಗಿದ್ದು ಪ್ರಾಚೀನ ಕಯಾಲ್‌ನ ನಿಖರವಾದ ಸ್ಥಳ ಯಾವುದೆನ್ನುವ ಮಾಹಿತಿ ಕಳೆದುಹೋಗಿದೆ ಅಥವಾ ಅನಿಶ್ಚಿತ ಎನಿಸಿದೆ ಎನ್ನುವುದು ಅವರ ಅಭಿಮತ. ಪ್ರಸಿದ್ಧ ಇತಿಹಾಸಕಾರ ಡಾ. ರಾಜಾ ಮೊಹಮದ್‌ರವರು ಹಲವರ ಮೆಚ್ಚುಗೆ ಪಡೆದ ಅವರ ‘ಕೋರಮಂಡಲ್ ಮುಸ್ಲಿಮರ ಸಾಗರೇತಿಹಾಸ’ ಕೃತಿಯಲ್ಲಿ ಪೋರ್ಚುಗೀಸರು ಹಳೆಯ ಕಯಾಲನ್ನು ನಾಶಪಡಿಸಿದ್ದು ಪ್ರಸ್ತುತ ಇರುವ ಕಾಯಲ್‌ಪಟ್ಟಣಮನ್ನು ಹಳೆಯ ಕಯಾಲ್‌ಗೆ ಪ್ರತಿಸ್ಪರ್ಧೆ ನೀಡುವ ಬಂದರಾಗಿ ಅಭಿವೃದ್ಧಿಪಡಿಸಿದರು ಎಂದು ವಾದಿಸಿದ್ದಾರೆ. ಕಾಯಲ್ಪಟ್ಟಣದ ಇತಿಹಾಸಕಾರರು ಈ ಸಿದ್ಧಾಂತದ ಸತ್ಯಾಸತ್ಯತೆಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆಂದು ಹೇಳಬೇಕಿಲ್ಲ ತಾನೇ.

ಈ ಚರ್ಚೆಯನ್ನು ಅರ್ಥಮಾಡಿಕೊಳ್ಳಲು ಭೌಗೋಳಿಕ ಸ್ಥಳಗಳ ಕುರಿತ ಸೂಕ್ಷ್ಮ ಅನ್ವೇಷಣೆ ಸಹಾಯ ಮಾಡಬಲ್ಲದು. ಕಾಯಲ್ ‘ಹಿನ್ನೀರಿ’ನ ತಮಿಳು ಅನುವಾದ. ಇಲ್ಲಿ ತಾಮ್ರಪರ್ಣಿ ನದಿ ಪುನ್ನಕಯಾಲ್‌ನಲ್ಲಿ ಬಂಗಾಳ ಕೊಲ್ಲಿಯನ್ನು ಸೇರುವ ನದೀಮುಖವನ್ನು ಇದು ಸೂಚಿಸುತ್ತದೆ ಎಂದು ಹೇಳಬಹುದು. ಪ್ರಸ್ತುತ ಪಟ್ಟಣದ ವಾಯುವ್ಯಕ್ಕೆ ಕೆಲವು ಕಿಲೋಮೀಟರ್‌ಗಳ ಅಂತರದಲ್ಲಿ ಪಳಯ ಕಾಯಲ್ ಇದೆ. ಈಜಿಪ್ಟಿನ ಅರಬ್ಬರು ಇಲ್ಲಿ ನೆಲೆಸಿ ಇದನ್ನು ಕಾಹಿರ ಫತನ್‌ ಎಂದು ಕರೆದಿದ್ದು ಅದುವೆ ನಂತರ ಕಾಯಲ್ಪಟ್ಟಣಂ ಆಗಿ ರೂಪುಗೊಂಡಿತು ಎನ್ನುತ್ತದೆ ಮತ್ತೊಂದು ಶಬ್ದ ವ್ಯುತ್ಪತ್ತಿಯ ಥಿಯರಿ. ಇನ್ನೂ ಕೆಲವು ಇತಿಹಾಸಕಾರರ ಪ್ರಕಾರ ಪ್ರಾಚೀನ ಕಾಲದಲ್ಲಿ ಆ ಪ್ರದೇಶವನ್ನು ಇಡಿಯಾಗಿ ಕಾಯಲ್ ಎಂದು ಕರೆಯಲಾಗುತ್ತಿತ್ತು.

ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಅನವಶ್ಯಕ ಗೊಂದಲಕ್ಕೆ ನಾಂದಿ ಹಾಡಿದ್ದು ದಕ್ಷಿಣ ಭಾರತದ ಇತಿಹಾಸಕಾರ ಹಾಗೂ ಮದ್ರಾಸಿನ ಬಿಷಪ್‌ ಎನಿಸಿದ್ದ ರಾಬರ್ಟ್‌ ಕಾಡ್‌ವೆಲ್‌ರವರೆನ್ನುವುದನ್ನು ಸುಸ್ಪಷ್ಟವಾಗಿ ತಿಳಿಯಬಹುದು. 1890ರಲ್ಲಿ ಕಾಡ್‌ವೆಲ್‌ರವರು ಉತ್ಖನನ ಯೋಜನೆಯೊಂದನ್ನು ಹಮ್ಮಿಕೊಂಡಿದ್ದರು. ಕಾಯಲ್‌ಪಟ್ಟಣದ ಉತ್ತರಕ್ಕೆ ಐದು ಮೈಲುಗಳಷ್ಟು ದೂರದಲ್ಲಿರುವ ಒಂದು ಸ್ಥಳವನ್ನು ಅಲ್ಲಿರುವ ಕೋಟೆ ದೇವಾಲಯ, ಬಾವಿ ಮತ್ತು ಉಗ್ರಾಣಗಳ ಅವಶೇಷಗಳನ್ನು ತೋರಿಸಿ ಅದುವೆ ನಿಜವಾದ ಕಾಯಲ್‌ ಎಂದು ಗುರುತಿಸಿದರು.

ಆದರೆ ಪಟ್ಟಣದ ಅವಶೇಷಗಳ ನಡುವೆ ಯಾವುದೇ ಇಸ್ಲಾಮಿಕ್ ಅವಶೇಷಗಳು ಇದ್ದಿರುವುದಾಗಿ ಉಲ್ಲೇಖಿಸಿಲ್ಲ. ಪಟ್ಟಣದ ಅಸಂಖ್ಯಾತ ಸೂಫಿ ದರ್ಗಾಗಳನ್ನು ಮತ್ತು ಮಸೀದಿಗಳನ್ನು ಶಿಲಾಶಾಸನಗಳು ಮತ್ತು ಶಾಸನಗಳ ಜತೆಗೆ ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಪ್ರೊ. ಮೆಹರ್ದಾದ್ ಶೋಕೂಹಿಯವರು ಕಾಡ್‌ವೆಲ್ ಅವರ ಸಿದ್ಧಾಂತವನ್ನು ತಮ್ಮ ಪ್ರಮುಖ ಕೃತಿಯಾದ ‘ಮುಸ್ಲಿಮ್ ಆರ್ಕಿಟೆಕ್ಚರ್ ಆಫ್ ಸೌತ್ ಇಂಡಿಯಾ’ ದಲ್ಲಿ ಅಲ್ಲಗಳೆದಿದ್ದಾರೆ. ಮುಸ್ಲಿಮ್ ವಸಾಹತುಗಳಿಗೆ ಹೆಸರುವಾಸಿಯಾದ ನಗರಕ್ಕೆ ಸಂಬಂಧಪಟ್ಟಂತೆ ಈ ನಿಲುವು ಅಸಾಧಾರಣ ಮತ್ತು ಅಸಾಧ್ಯವಾದದ್ದು ಎಂದು ಅವರು ದೃಢವಾಗಿ ಅಭಿಪ್ರಾಯಿಸುತ್ತಾರೆ. “ಸ್ವಲ್ಪ ಮೃದುವಾಗಿ ಹೇಳಿದರೆ, ಕಾಯಲ್‌ಪಟ್ಟಣಂ ಕುರಿತ ಕಾಡ್‌ವೆಲ್‌ ವರದಿಯ ಎಲ್ಲಾ ನಿಟ್ಟಿನಲ್ಲೂ ಸರಿಯಲ್ಲದ ಮಾಹಿತಿಗಳಿಂದ ಕೂಡಿದೆ ಎನ್ನಬಹುದು” ಎನ್ನುತ್ತಾರೆ ಮೆಹರ್ದಾದ್‌ ಶೊಕೂಹಿ. ಹಳೆಯ ನಕ್ಷೆಗಳಲ್ಲಿರುವ ಕ್ವೈಲ್ ಸ್ಥಳಕ್ಕೆ ಅನುಗುಣವಾಗಿ ಪ್ರಸ್ತುತ ಪಟ್ಟಣದ ಸ್ಥಳ ಇದ್ದು ಸ್ಥಳೀಯ ಶಾಸನದಲ್ಲಿ ಹಾಗೂ 13ನೇ ಶತಮಾನದಿಂದೀಚೆಗೆ ಬಂದರಿನ ಬಗೆಗೆ ಇತಿಹಾಸಕಾರರು ಹಾಗೂ ಪ್ರಯಾಣಿಕರು ನೀಡಿರುವ ವಿವಿಧ ವರದಿಗಳಲ್ಲಿ ದಾಖಲಾಗಿರುವ ಹೆಸರು ಉಳಿದಿದೆ. ಸ್ಥಳ ಬದಲಾವಣೆಯ ಯಾವುದೇ ಸೂಚನೆಯೂ ಇಲ್ಲ. ಈ ವಿಚಾರದ ಕಡೆಗೂ ಶೊಕೂಹಿ ಗಮನ ಸೆಳೆಯುತ್ತಾರೆ.

ಮುಖ್ಯವಾಗಿ ರಾಬರ್ಟ್ ಕಾಡ್‌ವೆಲ್ ಒಮ್ಮೆಯೂ ಕಾಯಲ್ಪಟ್ಟಣಕ್ಕೆ ಭೇಟಿ ನೀಡಿಲ್ಲ ಹಾಗೂ ಪಟ್ಟಣದ ಹೊರಗೆ ತನ್ನ ಉತ್ಖನನವನ್ನು ಮಾಡಿಲ್ಲ ಎನ್ನುವುದು ಪರಿಶೀಲಿಸಲ್ಪಟ್ಟ ಸತ್ಯ. ಕ್ರಿಶ್ಚಿಯನ್ ಮಿಷನರಿಗಳು ಮತ್ತು ಪಟ್ಟಣದ ಮುಸ್ಲಿಮ್ ವಿದ್ವಾಂಸರ ನಡುವೆ ಅಂತರ್ಧರ್ಮೀಯ ಚರ್ಚೆಗಳು ನಡೆಯುತ್ತಿದ್ದರಿಂದ ಮತ್ತು ಕಾಡ್‌ವೆಲ್ ಸ್ವತಃ ಬಿಷಪ್ ಆಗಿದ್ದರಿಂದ ಪಟ್ಟಣವನ್ನು ಪ್ರವೇಶಿಸಲು ಮತ್ತು ಅವಶೇಷಗಳನ್ನು ಪರೀಕ್ಷಿಸಲು ಅನುಮತಿ ಸಿಕ್ಕಿರಲಿಲ್ಲ. “ಕಾಡ್‌ವೆಲ್‌ ಅವರು ಕಾಯಲ್ಪಟ್ಟಣವನ್ನು ಪರಿಶೀಲಿಸಿದ್ದರೆ ಮಸೀದಿಗಳ ಬದಿಯಲ್ಲಿರುವ ಸ್ಮಶಾನಗಳಲ್ಲಿನ ನುರಿತವಲ್ಲದ ಕಣ್ಣುಗಳಿಗೂ ಹೊಳೆಯುವ ಹಲವಾರು ಹಳೆಯ ಸಮಾಧಿ ಕಲ್ಲುಗಳನ್ನು ಅವರು ಮಿಸ್‌ ಮಾಡಿಕೊಳ್ಳುತ್ತಿರಲಿಲ್ಲ.” ಎಂದು ಶೋಕೂಹಿ ಚರ್ಚೆಯನ್ನು ಮುಕ್ತಾಯಗೊಳಿಸುತ್ತಾರೆ. ಡಾ.ಆರ್.ಎಸ್.ಅಬ್ದುಲ್ ಲತೀಫ್ ಅವರೂ ಈ ವಿಷಯದ ಬಗ್ಗೆ ತಮಿಳಿನಲ್ಲಿ ‘ಕಾಯಲ್ ತನ್ ಕಾಯಲ್ಪಟ್ಟಿಣಂ’ (ಕಾಯಲೇ ಕಾಯಲ್ಪಟ್ಟಿಣಂ) ಎಂಬ ಪುಸ್ತಕವನ್ನು ಬರೆದಿದ್ದಾರೆ. ಆದರೂ, ಕಾಡ್‌ವೆಲ್ ಸಿದ್ಧಾಂತವು ಅನೇಕ ಇತಿಹಾಸಕಾರರ ಮೇಲೆ ಪ್ರಭಾವ ಬೀರಿದ್ದು ಕೆಲವು ಅಧಿಕೃತ ಇತಿಹಾಸಶಾಸ್ತ್ರಗಳ ಸಮೇತ ಹಲವಾರು ದಾಖಲೆಗಳಲ್ಲಿ ಜಾಗ ಪಡೆದುಕೊಂಡಿದೆ”.

ಈ ಪ್ರದೇಶವು ಮುತ್ತು ಆಯುವಿಕೆಗೆ ಹೆಸರುವಾಸಿಯಾಗಿದ್ದರಿಂದ ಇಲ್ಲಿನ ಹೇರಳವಾದ ಸಂಪತ್ತು 16ನೇ ಶತಮಾನದ ಪೋರ್ಚುಗೀಸರ ಗಮನಸೆಳೆಯಿತು. ಆ ಹೊತ್ತಿಗೆ, ಅದಾಗಲೇ ಅವರು ಮಲಬಾರ್‌ಗೆ ಬಂದಿಳಿದಿದ್ದರು. ವ್ಯಾಪಾರ ಮತ್ತು ವ್ಯಾಪಾರಕ್ಕಾಗಿನ ಯುದ್ಧಕ್ಕೆ ಶುರುವಿಟ್ಟಿದ್ದರು. ಮನ್ನಾರ್ ಕೊಲ್ಲಿಯ ಎರಡೂ ತೀರಗಳಲ್ಲಿನ ಮುತ್ತು ವ್ಯಾಪಾರವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಪೋರ್ಚುಗೀಸರು ತಮ್ಮ ಎಂದಿನ ಶೈಲಿಯಲ್ಲಿ ಕೋರಮಂಡಲ್ ಕರಾವಳಿ ಮತ್ತು ಸಿಲೋನ್ ಮೇಲೆ ಮೂರ್ಸ್ ವಿರುದ್ಧ ವಿಧ್ವಂಸಕ ದಾಳಿಗಳನ್ನು ಪ್ರಾರಂಭಿಸಿದರು. ಇದನ್ನು ತೀವ್ರವಾಗಿ ವಿರೋಧಿಸಿದ ಕಾಯಲ್ಪಟ್ಟಣದ ಜನರಿಗೆ ಕೊಸ್ಮರೈ ದರ್ಗಾದ ಬಳಿ ವಸಾಹತುಶಾಹಿ ವಿರೋಧಿ ಯುದ್ಧಗಳನ್ನು ನಡೆಸಬೇಕಾಯಿತು. ಅಸಂಖ್ಯಾತ ಜನರು ಹುತಾತ್ಮರಾದರು. ಅನೇಕ ಮಲಬಾರಿಗಳು ಕಾಯಲ್ ಹೋರಾಟಗಾರರ ಬೆಂಬಲಕ್ಕಾಗಿ ಬಂದಿದ್ದರೆಂದು ನಂಬಲಾಗಿದೆ. ನಿರ್ಮಾಣ ಕಾರ್ಯಗಳಿಗಾಗಿ ಭೂಮಿ ಅಗೆಯುವಾಗ ಪಕ್ಕದ ಪ್ರದೇಶದ ಹಲವಾರು ಜಾಗಗಳಲ್ಲಿ ಮಾನವ ಅಸ್ಥಿಪಂಜರಗಳು ಮತ್ತು ತಲೆಬುರುಡೆಗಳು ಪತ್ತೆಯಾಗಿದ್ದವು ಎಂದು ಸ್ಥಳೀಯರು ಸಾಕ್ಷಿ ನುಡಿಯುತ್ತಾರೆ. ಪೋರ್ಚುಗೀಸ್ ವಿರೋಧಿ ಯುದ್ಧಗಳಲ್ಲಿ ಬಳಸಲಾದ ಹಳೆಯ ಖಡ್ಗವನ್ನು ಎರಟ್ಟೈಕುಲಂ ಪಳ್ಳಿಯಲ್ಲಿ (ಮಸ್ಜಿದ್ ಮೀಕಾಯಿಲ್) ಸ್ಮಾರಕವಾಗಿ ಇರಿಸಲಾಗಿದೆ. ಬೇರೆ ಮಸೀದಿಗಳಲ್ಲೂ ಅಂತಹ ಸ್ಮಾರಕಗಳು ಇವೆ. ‌

ಕಾಯಲ್ ಬಂದರು 14ನೇ ಶತಮಾನದಲ್ಲಿ ಅದರ ಉತ್ತುಂಗದಲ್ಲಿತ್ತು. ಪಾಂಡ್ಯ ರಾಜರು ಮತ್ತು ಮಅಬರ್ ಸುಲ್ತಾನರ ಅಶ್ವಸೈನ್ಯಕ್ಕಾಗಿ ಉತ್ತಮ ಗುಣಮಟ್ಟದ ಪರ್ಷಿಯನ್ ಕುದುರೆಗಳನ್ನು ದೊಡ್ಡ ಹಡಗುಗಳಲ್ಲಿ ತರುತ್ತಿದ್ದ ಅರಬ್ಬರು ಲಾಭದಾಯಕ ವ್ಯವಹಾರವನ್ನು ಕುದುರಿಸುತ್ತಿದ್ದರು. ಗುಲಾಮರು ಮತ್ತು ಕ್ರಿಮಿನಲ್ ಅಪರಾಧಿಗಳು ಪಟ್ಟಣದ ಅದೃಷ್ಟಕ್ಕೆ ಕಾರಣೀಭೂತರಾದ ಮುತ್ತು ಜಿಗಿತಗಾರರಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ನಿರ್ಮಿತ ಮರಕ್ಕಯಾರ್ ಹಡಗುಗಳು ಮಲಬಾರ್, ಗುಜರಾತ್, ಬಂಗಾಳ ಮತ್ತು ದೂರದ ವಿದೇಶಿ ಬಂದರುಗಳಿಗೆ ಪ್ರಯಾಣ ಬೆಳೆಸುತ್ತಿದ್ದವು. ಈ ಮೂಲಕ ಕಾಯಲ್‌ ನಿಜವಾದ ಅಂತರಾಷ್ಟ್ರೀಯ ಬಂದರೆನಿಸಿಕೊಂಡು ಗಮನಾರ್ಹ ಶ್ರೀಮಂತಿಕೆ ಪಡೆಯಿತು. ಮತ್ತೊಂದೆಡೆ, ಅರೇಬಿಯಾ, ಸಿಲೋನ್ ಮತ್ತು ಇತರೆಡೆಗಳಿಂದ ಆಗಮಿಸಿದ ಸಂತರು ಪಟ್ಟಣದ ಆತ್ಮವನ್ನು ಶ್ರೀಮಂತಗೊಳಿಸಿದರು. ಪರಿಣಾಮವಾಗಿ ಅಲ್ಲಿನ ಧಾರ್ಮಿಕ ಜೀವನವು ಪ್ರಶಂಸನೀಯ ಗುಣಮಟ್ಟವನ್ನು ಪಡೆದಿತ್ತು. ಪೋರ್ಚುಗೀಸರು ತಮ್ಮ ವಸಾಹತುಶಾಹಿ ಆಕ್ರಮಣವನ್ನು ಆರಂಭಿಸುವವರೆಗೂ ಇದು ಮುಂದುವರಿಯಿತು. ಅವರು ಕೋರಮಂಡಲ್ ಕರಾವಳಿಯಲ್ಲಿನ ಆರಂಭಿಕ ಮುಸ್ಲಿಮ್ ಸೆಟಲ್‌ಮೆಂಟ್‌ಗಳ ಅವನತಿಯನ್ನು ಉದ್ಘಾಟಿಸಿದರು. ಕಾಯಲ್‌ ವೈಭವ ಕ್ರಮೇಣ ಮರೆಯಾಯಿತು.

ಗತಕಾಲದ ಅಮೂಲ್ಯ ಕುರುಹುಗಳು ಪಟ್ಟಣದಾದ್ಯಂತ ಹರಡಿವೆ. ಈ ವೈಭವವನ್ನು ಗುರುತಿಸುವವರು ಯಾರೂ ಸಿಗುತ್ತಿಲ್ಲ. ನಾನು ಹಿಂದಿರುಗುವ ಹಿಂದಿನ ಸಂಜೆ ನನ್ನನ್ನು ಪಟ್ಟಣದ ಹೊರವಲಯದಲ್ಲಿ ಸುತ್ತಾಡಲು ಕರೆದೊಯ್ದ ಸಲೈ ಬಶೀರ್ ಕೊಸ್ಮರೈ ದರ್ಗಾದ ಬಳಿ ಕೂತು ಈ ಪಟ್ಟಣದಲ್ಲಿ ಇತಿಹಾಸವನ್ನು ಎಷ್ಟು ಶೋಚನೀಯವಾಗಿ ಕಡೆಗಣಿಸಲಾಗುತ್ತಿದೆ ಎಂದು ವಿವರಿಸಿದರು. “ನಮ್ಮ ಪೂರ್ವಜರು ಪೋರ್ಚುಗೀಸರ ವಿರುದ್ಧ ಹೋರಾಡಿ ಅನೇಕ ಜೀವಗಳನ್ನು ಬಲಿಕೊಟ್ಟದ್ದು ಇಲ್ಲಿಯೇ. ಆದರೆ ಈ ಸ್ಥಳವು ಇಂದು ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಮೊದಲ ಮಸೀದಿಯೂ ಕಳೆದುಹೋಗಿದೆ. ನಮ್ಮ ಹಿಂದಿನ ಮತ್ತು ಇಸ್ಲಾಮಿಕ್ ಶ್ರೀಮಂತ ಸಂಸ್ಕೃತಿಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ. ಆದರೆ, ಅದನ್ನು ಸಂರಕ್ಷಿಸಲು ಮತ್ತು ಮುಂಬರುವ ಪೀಳಿಗೆಗೆ ರವಾನಿಸಲು ಸಮುದಾಯ ಮಾಡುತ್ತಿರುವುದು ಸಣ್ಣ ಮಟ್ಟಿನ ಪ್ರಯತ್ನ ಮಾತ್ರ.” ಎಂದು ಸ್ಥಳೀಯ ಇತಿಹಾಸಾಸಕ್ತ ಬಶೀರ್ ಹೇಳುತ್ತಾರೆ. ಐತಿಹಾಸಿಕವಾದ ಪ್ರಮುಖ ಸ್ಥಳಗಳನ್ನು ಖರೀದಿಸುವ ಮತ್ತು ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ನಿರ್ಮಿಸುವ ಯೋಜನೆಗಳ ಬಗ್ಗೆ ಅವರು ಮಾತನಾಡುತ್ತಾರೆ. ಇದನ್ನು ಕಾರ್ಯಗತಗೊಳಿಸಲು ಬೇಕಾದ ಸಾಕಷ್ಟು ಸಂಪನ್ಮೂಲಗಳನ್ನು ಪಟ್ಟಣ ಹೊಂದಿದೆ. ಆದರೆ ಇದಕ್ಕೆ ನಾಯಕತ್ವ ನೀಡಲು ಯಾರಿದ್ದಾರೆ? ಅವು ಅರ್ಥಪೂರ್ಣವಾಗಿ ಸಾಕಾರಗೊಳ್ಳಬಹುದೇ? ಕಾಲವೇ ಉತ್ತರಿಸಬಲ್ಲದು. ಆದರೆ ಪಟ್ಟಣವು ತನ್ನ ಅದ್ಭುತ ಗತಕಾಲದ ಬಗ್ಗೆ ಕಾಳಜಿ ವಹಿಸಲು ಎಚ್ಚೆತ್ತುಕೊಳ್ಳದಿದ್ದರೆ ಸಮಾಧಿ ಕಲ್ಲು , ಶಿಲಾಶಾಸನ , ಆರ್ವಿ ಹಸ್ತಪ್ರತಿ, ಇಸ್ಲಾಮಿಕ್- ದ್ರಾವಿಡ ವಾಸ್ತುಶಿಲ್ಪ ಸಹಿತ ಇರುವ ವಿವಿಧ ರೂಪಗಳ ಅವಶೇಷಗಳು ಶಾಶ್ವತವಾಗಿ ಕಳೆದುಹೋಗಲಿವೆ.

ಲೇ: ಮೊಹಮ್ಮದ್ ನೌಶಾದ್
ಕನ್ನಡಕ್ಕೆ: ತಂಶೀರ್ ಮುಈನಿ ಉಳ್ಳಾಲ್


ದಲಾಇಲುಲ್ ಖೈರಾತ್: ಆರಂಭಿಕ ಹಸ್ತಪ್ರತಿಗಳು ಮತ್ತು ಚಿತ್ರಕಲೆಗಳು

ಪೈಗಂಬರ್ (ಸ.ಅ.) ರ ಮೇಲಿನ ಪ್ರಕೀರ್ತನೆಗಳು ಮತ್ತು ದರೂದಿನ ಸಮಾಹಾರ ಈ ದಲಾಇಲುಲ್ ಖೈರಾತ್. ಹದಿನೈದನೆಯ ಶತಮಾನದಲ್ಲಿ ರಚಿಸಲ್ಪಟ್ಟ ಈ ಗ್ರಂಥವನ್ನು ಜಾಗತಿಕ ಮುಸ್ಲಿಮರು ತಮ್ಮ ಮನೆಗಳಲ್ಲಿ, ಮಸ್ಜಿದ್ ಮತ್ತು ಮಖ್ಬರಾಗಳಲ್ಲಿ ದಿನನಿತ್ಯ ಓದುತ್ತಾರೆ.

ಗ್ರಂಥದ ಕರ್ತೃ ಸುಲೈಮಾನುಲ್ ಜಸೂಲಿ (ರ). ಆಧುನಿಕ ಮೊರಾಕ್ಕೊದಲ್ಲಿ ಜನಿಸಿದ ಇವರು ಪ್ರಮುಖ ವಿದ್ವಾಂಸರಾಗಿ ಗುರುತಿಸಿಕೊಂಡವರು. ‘ಒಳಿತಿನೆಡೆಗೆ ಮಾರ್ಗದರ್ಶಿ’ ಎಂಬ ಅರ್ಥ ನೀಡುವ ಈ ಗ್ರಂಥದ ರಚನೆಗೆ ಓರ್ವ ಹೆಣ್ಣುಮಗಳ ಆಕಸ್ಮಿಕ ಭೇಟಿ ಅವರಿಗೆ ಪ್ರೇರಣೆ ನೀಡಿತು. ಒಮ್ಮೆ ಅಂಗಸ್ನಾನ ಮಾಡಲೆಂದು ಇಮಾಮ್ ಜಸೂಲಿಯವರು ಬಾವಿಯ ಬಳಿಗೆ ತೆರಳಿದರು. ಆದರೆ, ಬಾವಿ ಬತ್ತಿರುವುದನ್ನು ಕಂಡು ಚಿಂತಿತರಾದರು. ಆ ವೇಳೆ ಅಲ್ಲಿಗೆ ತಲುಪಿದ ಒಬ್ಬಳು ಹೆಣ್ಣುಮಗಳು ಆ ಬಾವಿಗೆ ಉಗುಳುವುದರೊಂದಿಗೆ ನೀರು ಮತ್ತೆ ತುಂಬಿತು. ಆಶ್ಚರ್ಯಚಕಿತರಾಗಿ ಇಮಾಮರು ಆ ಮಗುವಿನೊಂದಿಗೆ ಇದರ ಹಿಂದಿನ ಆಧ್ಯಾತ್ಮಿಕ ಶಕ್ತಿಯ ಕುರಿತಾಗಿ ಕೇಳಿದರು. ‘ಕಾಡಿನಲ್ಲಿ ನಡೆಯುವಾಗ ವನ್ಯಜೀವಿಗಳು ಯಾರನ್ನು ಅನುಕರಿಸುತ್ತಿತ್ತೋ ಆ ಪ್ರವಾದಿಯವರ ಮೇಲಿನ ಸ್ವಲಾತಿನ ಮಹಿಮೆ’ ಆ ಹೆಣ್ಣುಮಗುವಿನ ಪ್ರತ್ಯುತ್ತರ ಹೀಗಿತ್ತು. ಈ ಮಾತು ಕೇಳಿದೊಡನೆ ಇಮಾಮರ ಮನದೊಳಗೆ ದಲಾಇಲುಲ್ ಖೈರಾತಿನ ರಚನೆ ಪ್ರಾರಂಭಗೊಂಡಿತು.

ದಿನದಿಂದ ದಿನಕ್ಕೆ ಇದರ ಕೀರ್ತಿ ಹಬ್ಬಿದಂತೆ, ಮಧ್ಯ ಮೊರಾಕ್ಕೋದಿಂದ ಹಿಡಿದು ಪೂರ್ವ ಚೀನಾದವರೆಗೆ ದಲಾಇಲುಲ್ ಖೈರಾತಿನ ಸುಂದರ ಮುದ್ರಿತ ಚಿತ್ರಕಲೆಗಳ ಸಂಪ್ರದಾಯ ಬೆಳೆಯತೊಡಗಿತು. ಪರಿಣಾಮವಾಗಿ ವ್ಯತಿರಿಕ್ತ ಚಿತ್ರಗಳ ಜೊತೆಗೆ ದಲಾಇಲುಲ್ ಖೈರಾತಿನ ಹಲವು ಪ್ರತಿಗಳು ಮೂಡಿ ಬಂದವು. ಬಹುಶಃ ಪವಿತ್ರ ಖುರ್‌ ಆನಿನ ನಂತರ ಅತೀ ಹೆಚ್ಚು ನಕಲು ಮಾಡಲ್ಪಟ್ಟ ಗ್ರಂಥ ಇದೇ ಆಗಿರಬಹುದು. ಪವಿತ್ರ ಮಕ್ಕಾ ಮತ್ತು ಮದೀನಾದ ಹಾಗೂ ಪೈಗಂಬರ್ (ಸ.ಅ) ರಿಗೆ ಸಂಬಂಧಪಟ್ಟ ಸ್ಥಳಗಳು ಹಾಗೂ ವಸ್ತುಗಳ ಚಿತ್ರಗಳು ರಚನೆಯ ಪೈಕಿ ಅತೀ ಹೆಚ್ಚು.

ದಲಾಇಲುಲ್ ಖೈರಾತ್: ಒಂದು ಆಳ ವೀಕ್ಷಣೆ

ಮೊರಾಕ್ಕೊ ಹದಿನಾರನೆಯ ಶತಮಾನ

ಮೇಲಿನ ಚಿತ್ರ ಎರಡು ಪುಟಗಳ ರಚನೆ. (Double page spread) ಆದರೆ, ಇದು ವಿಶಾಲ ವ್ಯಾಪ್ತಿಯೊಳಗೆ ರೂಪಾಂತರಗೊಂಡಿದೆ. ಹಲವು ಹಸ್ತಪ್ರತಿಗಳಲ್ಲಿ ಈ ಚಿತ್ರ ಮೂಡಿ ಬಂದಿದೆ. ಬಲಭಾಗದಲ್ಲಿ ಚಿತ್ರಿಸಲ್ಪಟ್ಟಿರುವುದು ಮಕ್ಕಾ ಮಸೀದಿಯ ಪಕ್ಷಿನೋಟ (Birds eye view). ನಾಲ್ಕು ಮದ್ಹಬ್ ಗಳಿಂದಾವೃತಗೊಂಡ ಪವಿತ್ರ ಕಅಬಾ. ಎಡದಲ್ಲಿ ಎತ್ತರದ ಗೋಡೆಯೊಳಗೆ ಪೈಗಂಬರ್ (ಸ.ಅ) ರು ಮತ್ತು ಅನುಚರರಾದ ಅಬೂಬಕರ್ ಮತ್ತು ಉಮರ್ (ರ.ಅ.) ಅವರು ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಮದೀನಾ ಮಸೀದಿಯ ಕೋಣೆ. ಜೊತೆಗೆ ಪೈಗಂಬರರ ಮಿಂಬರ್ ಸಹ ಚಿತ್ರದಲ್ಲಿ ಕಾಣಬಹುದು.

ಹಸ್ತಪ್ರತಿಯ ರಚನಾಶೈಲಿ, ಲಿಪಿ, ಪಾಶ್ಚಾತ್ಯ ಇಸ್ಲಾಮಿಕ್ ಶೈಲಿಯನ್ನೊಳಗೊಂಡಿರುವ ರಚನೆಯ ಅಲಂಕಾರ ಇವೆಲ್ಲವೂ ಈ ಚಿತ್ರ ಹದಿನಾರನೆಯ ಶತಮಾನದ ವೇಳೆ ಮೊರಾಕ್ಕೊದಲ್ಲಿ ರಚಿಸಲ್ಪಟ್ಟಿದೆ ಎಂಬುದನ್ನು ದೃಢೀಕರಿಸುತ್ತದೆ. ಇಂತಹಾ ಚಿತ್ರಗಳು ಇಸ್ಲಾಮಿನ ಪವಿತ್ರ ಯಾತ್ರೆಗಳು ಮತ್ತು ಇನ್ನಿತರ ಯಾತ್ರೆಗಳ ಇತಿಹಾಸವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. 1960ರ ವೇಳೆ ಅಫ್ಘಾನಿಸ್ತಾನದ ಕಾಬೂಲ್ ನಗರದ ಒಂದು ಮಾರುಕಟ್ಟೆಯಲ್ಲಿ ಈ ಚಿತ್ರ ಮೊದಲ ಬಾರಿಗೆ ಬೆಳಕಿಗೆ ಬಂತು. ಹಸ್ತಪ್ರತಿ ಉಪಯೋಗಿಸುವ ಸಲುವಾಗಿ ಸೇರಿಸಿದ ದೇವನಗಿರಿ ಲಿಪಿ ಈ ಪ್ರತಿಯನ್ನು ಮಕ್ಕಾಕ್ಕೆ ಕೊಂಡೊಯ್ಯಲಾಗಿತ್ತು ಎಂಬುದನ್ನು ಸೂಚಿಸುತ್ತದೆ. ಅಲ್ಲಿಂದ ಓರ್ವ ಭಾರತೀಯ ಯಾತ್ರಿಕ ಅದನ್ನು ಖರೀದಿಸಿದನು.

ದಲಾಇಲುಲ್ ಖೈರಾತಿನ ಹಸ್ತಪ್ರತಿಯ ಎರಡು ಪುಟಗಳಲ್ಲಿ ಮೂಡಿ ಬಂದ ಮಕ್ಕಾ ಮತ್ತು ಮದೀನಾದ ಪವಿತ್ರ ಮಸೀದಿಗಳು. 1629- 30, ಟುನೀಶಿಯಾದಿಂದ ದೊರಕಿದ್ದು ಎನ್ನಲಾಗಿದೆ. The metropolitan museum of art, purchase, Friends of islamic Art Gifts, 2017 (2017.301)

ಚಿತ್ರ ಎರಡರಲ್ಲಿ ಕಾಣಬಹುದಾದ ಹದಿನೇಳನೆಯ ಶತಮಾನದ ಹಸ್ತಪ್ರತಿ ದಲಾಇಲುಲ್ ಖೈರಾತಿನ ಆರಂಭಿಕ ರಚನೆಗಳ ಸಾಲಿಗೆ ಸೇರುತ್ತದೆ. ಮುಹಮ್ಮದ್ ಬಿನ್ ಅಹಮದ್ ಬಿನ್ ಅಬ್ದುರ್ರಹ್ಮಾನ್ ರಿಯಾದಿಯ ಈ ಹಸ್ತಪ್ರತಿಯಲ್ಲಿ ಬಾಲಭಾಗದಲ್ಲಿ ಮಕ್ಕಾ ಮತ್ತು ಎಡಭಾಗದಲ್ಲಿ ಮದೀನಾವನ್ನು ಚಿತ್ರಿಸಲಾಗಿದೆ. ಎರಡೂ ಮಸೀದಿಗಳ ಮಿಂಬರ್ ಚಿತ್ರದ ಕೆಳಭಾಗದಲ್ಲಿ ಕೆಂಪು ಬಣ್ಣದಲ್ಲಿ ಮೂಡಿ ಬಂದಿದೆ. ಮದೀನಾದ ಅನುಗ್ರಹೀತ ಮೂರು ಮಖ್ಬರಾಗಳನ್ನೂ ಚಿತ್ರ ಒಳಗೊಂಡಿದೆ.

ಎರಡು ಬದಿಯಲ್ಲಿ ಚಿತ್ರಿಸಿದ ಮಕ್ಕಾ ಮತ್ತು ಮದೀನಾದ ಮಸೀದಿಗಳು. ಕಾಶ್ಮೀರ, 1800
ಹತ್ತೊಂಬತ್ತನೆಯ ಶತಮಾನದಲ್ಲಿ ರಚಿಸಿದ ಮಕ್ಕಾ ಮತ್ತು ಮದೀನಾದ ಮಸೀದಿಗಳ ಚಿತ್ರಗಳಿರುವ ಹಸ್ತಪ್ರತಿ, ಕಾಶ್ಮೀರ
ಎರಡು ಪುಟಗಳಲ್ಲಿ ಬಿಡಿಸಿದ ಪವಿತ್ರ ಮಸೀದಿಗಳ ಚಿತ್ರ. ಕಾಶ್ಮೀರ, Dated: 1808/1223 AH

ಈ ಮೇಲಿನ ಚಿತ್ರಗಳು ಹತ್ತೊಂಬತ್ತನೆಯ ಶತಮಾನದ ವೇಳೆ ಕಾಶ್ಮೀರದಲ್ಲಿ ರಚಿಸಲ್ಪಟ್ಟ ಹಸ್ತಪ್ರತಿಗಳಿಂದ ದೊರಕಿದ ರಚನೆಗಳು. ಇಲ್ಲಿ ಉತ್ತರ ಆಫ್ರಿಕಾದ ರಚನಾಶೈಲಿಯನ್ನು ಅನುಕರಿಸಲಾಗಿದೆ. ಈ ಮೇಲಿನ ಮೂರೂ ರಚನೆಗಳ ಎಡಭಾಗದಲ್ಲಿ ಖರ್ಜೂರ ಮರಗಳ (ಪೈಗಂಬರ್ (ಸ.ಅ) ರ ಖುತುಬಾದ ಮಧ್ಯೆ ಕಣ್ಣೀರು ಹಾಕಿದ ಖರ್ಜೂರ ಮರ) ಚಿತ್ರವಿದೆ. ಮೂರನೆಯ ಹಸ್ತಪ್ರತಿ ಶಅಬಾನ್ 1223 (ಸೆಪ್ಟೆಂಬರ್ 1808 ಎ.ಡಿ.) ರಲ್ಲಿ ರಚಿಸಲ್ಪಟ್ಟದ್ದು ಎಂದು ಲೇಖಕ ಖಾನ್ ಯೂನುಸ್ ಖಾನ್ ಅಭಿಪ್ರಾಯಪಡುತ್ತಾರೆ.

ಮಕ್ಕಾ ಮತ್ತು ಮದೀನಾದ ಪವಿತ್ರ ಮಸೀದಿಗಳ ಚಿತ್ರಕಲೆ. ಭಾರತದಲ್ಲಿ ಅಥವಾ ಭಾರತೀಯ ಮೂಲದ ಕಲಾವಿದ ಮಕ್ಕಾದಲ್ಲಿ ರಚಿಸಿದ್ದು. ರಜಬ್, 1216 (November 1801), ರಮಝಾನ್ 1216 (January 1802)

ಹತ್ತೊಂಬತ್ತನೆಯ ಶತಮಾನದಲ್ಲಿ ರಚಿಸಲ್ಪಟ್ಟ ಈ ಮೇಲಿನ ಹಸ್ತಪ್ರತಿಯಲ್ಲಿ ಬಲಭಾಗಕ್ಕೆ ಮದೀನಾದ ಮಸ್ಜಿದ್ ಮತ್ತು ಎಡಭಾಗಕ್ಕೆ ಜನ್ನತುಲ್ ಬಕೀಅ್ ಸಮಾಧಿಯನ್ನು ಚಿತ್ರಿಸಲಾಗಿದೆ. ಕೆಲವು ಪ್ರಮುಖ ಮಖ್ಬರಾಗಳನ್ನು ವಿಶೇಷವಾಗಿ ಸೂಚಿಸಲಾಗಿದೆ. ಬಹುಶಃ ಇದು ಭಾರತದಲ್ಲಿ ಅಥವಾ ಮಕ್ಕಾದಲ್ಲಿ ಭಾರತೀಯ ಕಲಾವಿದರಿಂದ ರಚಿಸಲ್ಪಟ್ಟದ್ದು ಎಂದು ಭಾವಿಸಲಾಗಿದೆ.

ಪವಿತ್ರ ಹರಮೈನ್ ಶರೀಫೈನಿನ ಚಿತ್ರಗಳು. ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತದಲ್ಲಿ ರಚಿಸಲ್ಪಟ್ಟಿದೆ. ಬಹುಶಃ ದಖನ್ ನಲ್ಲಿ ರಚಿಸಲ್ಪಟ್ಟಿರಲೂಬಹುದು.

ಈ ಎರಡು ಪುಟಗಳ ಹಸ್ತಪ್ರತಿ ಭಾರತೀಯ ಮೂಲದ ರಚನೆ. ರಚನೆಯಲ್ಲಿ ಮಸೀದಿಯ ಸುತ್ತಲೂ ಬಾಗಿಲುಗಳನ್ನು ಕಾಣಬಹುದು.

ಪವಿತ್ರ ಮಸೀದಿಗಳ ಚಿತ್ರಗಳು ಮೂಡಿಬಂದ ಈ ಹಸ್ತಪ್ರತಿ ಹತ್ತೊಂಬತ್ತನೆಯ ಶತಮಾನದ ಕೊನೆಗೆ ಇರಾನ್ ಅಥವಾ ಅಫ್ಘಾನಿಸ್ತಾನದಲ್ಲಿ ರಚಿಸಲ್ಪಟ್ಟದ್ದು.

ಈ ಹಸ್ತಪ್ರತಿಯು ಹತ್ತೊಂಬತ್ತನೆಯ ಶತಮಾನದಲ್ಲಿ ಇರಾನ್ ಅಥವಾ ಅಫ್ಘಾನಿಸ್ತಾನದಲ್ಲಿ ರಚಿಸಲ್ಪಟ್ಟದ್ದೆಂದು ಭಾವಿಸಲಾಗಿದೆ.

ಸೂಕ್ಷ್ಮ ಅಧ್ಯಯನ:

ಮೇಲಿನ ರೇಖಾಚಿತ್ರ ರಚನೆಗಳಿಗಿಂತ (diagrammatic) ಭಿನ್ನವಾಗಿ ಒಟ್ಟೋಮನ್ ಟರ್ಕಿ ಮತ್ತು ಬಾಲ್ಕನ್ ಪ್ರಾಂತ್ಯಗಳಲ್ಲಿ ಮಕ್ಕಾ ಮತ್ತು ಮದೀನಾದ ಮಸೀದಿಗಳ ಚಿತ್ರಗಳು ವಿಹಂಗಮ ನೋಟವಾಗಿ (panoramic view) ಬಿಡಿಸಲ್ಪಟ್ಟಿವೆ.

ಎರಡು ಪುಟಗಳಲ್ಲಿ ರಚಿಸಿದ ಮಕ್ಕಾ ಮತ್ತು ಮದೀನಾದ ಪವಿತ್ರ ಮಸೀದಿಗಳು. ಒಟ್ಟೋಮನ್ ಟರ್ಕಿ, 1769/1182 AH
Signed by husayn, known as khaffaf, Zadeh. Ottoman turkey, 1739-40/1152 AH
ಪವಿತ್ರ ಮಕ್ಕಾ ಮತ್ತು ಮದೀನಾದ ಮಸೀದಿಗಳು. ಒಟ್ಟೋಮನ್ ಟರ್ಕಿಯ ಅವಧಿಯಲ್ಲಿ ಇಸ್ತಾಂಬುಲಿನಲ್ಲಿ ರಚಿಸಲ್ಪಟ್ಟದ್ದು ಎಂದು ಭಾವಿಸಲಾಗಿದೆ. 1848-9/1265 AH. Khalili collection

ಮದೀನಾದ ಮಸೀದಿಯ ಗುಂಬದ್‌ ಗೆ 1837ರ ವೇಳೆ ಹಸಿರು ಬಣ್ಣ ಹಚ್ಚಲಾಯಿತು. ಎರಡು ದಶಕಗಳ ನಂತರ ಚಿತ್ರಿಸಿದ ಕೆಳಗಿನ ಹಸ್ತಪ್ರತಿಯಲ್ಲಿಯೂ ಇದು ಕಾಣಬಹುದು.

ಎರಡು ಪುಟಗಳಲ್ಲಿ ಬಿಡಿಸಿದ ಪವಿತ್ರ ಮಸೀದಿಗಳ ಚಿತ್ರ. ಒಟ್ಟೋಮನ್ ಬಾಲ್ಕನ್ಸ್ ಅಥವಾ ಟರ್ಕಿಯಲ್ಲಿ ರಚಿಸಲ್ಪಟ್ಟದ್ದು. 1859-60/1275 AH
ಒಟ್ಟೋಮನ್ ಟರ್ಕಿ, ಹತ್ತೊಂಬತ್ತನೆಯ ಶತಮಾನ
ಪೈಗಂಬರ್ (ಸ.ಅ.)ರ ಪವಿತ್ರ ಗುಂಬದ್ ನ ಚಿತ್ರ. ಹದಿನೇಳು ಅಥವಾ ಹದಿನೆಂಟನೆಯ ಶತಮಾನದ ವೇಳೆ ಒಟ್ಟೋಮನ್ ಟರ್ಕಿಯಲ್ಲಿ ರಚಿಸಿದ್ದು. MSS 97, fols 9b -10a, Khalili collection

ಪೈಗಂಬರರ ಮಸೀದಿಯ ಈ ಚಿತ್ರ (ಚಿತ್ರ 14) ದಲ್ಲಿ ಗುಂಬದ್ ಅಗ್ನಿ ಜ್ವಾಲೆಯಿಂದಾವೃತಗೊಂಡದ್ದಾಗಿ ಕಾಣಬಹುದು. ಪರ್ಷಿಯನ್ ಚಿತ್ರಕಲೆಗಳಲ್ಲಿ ವಿಶೇಷ ವ್ಯಕ್ತಿಗಳನ್ನು ಗುರುತಿಸಲು ಈ ರೀತಿ ಚಿತ್ರೀಕರಿಸಲಾಗುತ್ತಿತ್ತು. ಗುಂಬದ್‌ ನ ಶ್ರೇಷ್ಠತೆಯನ್ನು ತಿಳಿಸುವುದಕ್ಕಾಗಿ ಈ ರೀತಿ ಅಗ್ನಿಜ್ವಾಲೆಯನ್ನು ಸುತ್ತಲೂ ಬಿಡಿಸಿರಬಹುದು.

ಪೈಗಂಬರರ ರೌಲಾ ಶರೀಫ್ ಮತ್ತು ಮಿಂಬರ್:

ದಲಾಇಲುಲ್ ಖೈರಾತಿನ ಹಸ್ತಪ್ರತಿಗಳ ಪೈಕಿ ಪೈಗಂಬರ್ (ಸ.ಅ) ಮತ್ತು ಪ್ರಿಯ ಅನುಚರರಾದ ಅಬೂಬಕರ್ ಹಾಗೂ ಉಮರ್ (ರ.ಅ.) ರವರ ಮಖ್ಬರಾಗಳು ಒಂದು ಭಾಗದಲ್ಲಿ ಹಾಗೂ ಪೈಗಂಬರರ ಮಿಂಬರ್ ಮತ್ತೊಂದು ಭಾಗದಲ್ಲಿಯೂ ಆಗಿ ಚಿತ್ರೀಕರಿಸಲ್ಪಟ್ಟ ಅನೇಕ ಎರಡು ಪುಟಗಳ (double page spread) ರಚನೆಗಳು ದೊರಕಿವೆ. ಈ ಕೆಳಗಿನ ಚಿತ್ರಕಲೆಗಳು ಹದಿನೆಂಟನೆಯ ಶತಮಾನದಲ್ಲಿ ಟರ್ಕಿಯಲ್ಲಿ ದೊರಕಿದ್ದು ಹಾಗೂ ಕೊನೆಯ ನಾಲ್ಕು ಹಸ್ತಪ್ರತಿಗಳು ಉತ್ತರ ಆಫ್ರಿಕಾದಲ್ಲಿ ದೊರಕಿದವುಗಳು.

ಈಸ್ಟ್ ಟರ್ಕಿ, AH 1719-20/1132 AH
ಟುನೀಶಿಯಾ, 1629-30. The metropolitan museum of art, purchase, Friends of islamic art Gifts, 2017 (2017.301)
ಮೊರಾಕ್ಕೊ, ಜುಮಾದಿಲ್ ಅವ್ವಲ್ 23 1303 AH/ 27 ಫೆಬ್ರವರಿ 1886 AD.
ಮೊರಾಕ್ಕೊ, Before 1717-18/1129 AH.
ಮೊರಾಕ್ಕೊ, ಹದಿನಾರನೆಯ ಶತಮಾನ

ಆಧುನಿಕ ಕ್ಯಾಮರಗಳನ್ನು ಜಗತ್ತು ಪರಿಚಯಗೊಳ್ಳುವುದಕ್ಕಿಂತ ಶತಮಾನಗಳ ಮೊದಲೇ ಜಾಗತಿಕ ಮುಸ್ಲಿಮರು ಪೈಗಂಬರ್ (ಸ.ಅ.) ಮತ್ತು ಅನುಚರರ ಮಖ್ಬರಾ, ಮಸೀದಿಗಳು ಹಾಗೂ ಪವಿತ್ರ ನಗರಗಳನ್ನು ದಲಾಇಲುಲ್ ಖೈರಾತಿನಂತಹ ಚಿತ್ರಕಲೆಗಳ ಸಹಿತ ಮೂಡಿಬರುತ್ತಿದ್ದ ಹಸ್ತಪ್ರತಿಗಳ ಮೂಲಕ ದರ್ಶಿಸುತ್ತಿದ್ದರು ಎಂಬ ಸತ್ಯಾಂಶ ಈ ಅಧ್ಯಯನದ ಮೂಲಕ ಬೆಳಕಿಗೆ ಬರುತ್ತದೆ. ಇಲ್ಲಿನ ಹಸ್ತಪ್ರತಿಗಳು ಪುರಾಣ ಚಿತ್ರಕಲೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವುದರ ಜೊತೆಗೆ ಅಂದಿನ ವಾಸ್ತುಶಿಲ್ಪ ವೈಶಿಷ್ಟ್ಯತೆಗಳನ್ನೂ ಪ್ರತಿಬಿಂಬಿಸುತ್ತವೆ.

ಪೈಗಂಬರ್ (ಸ.ಅ.) ರೊಂದಿಗಿನ ಉತ್ಕಟ ಪ್ರೀತಿಯ ಫಲವಾಗಿ ರೂಪು ಪಡೆದ ದಲಾಇಲುಲ್ ಖೈರಾತಿನ ರಚನೆಯಂತೆಯೇ ಇಲ್ಲಿನ ಚಿತ್ರಕಲೆಗಳೂ ಮಹತ್ವದ್ದು. (ಶೈಖ್ ಜಸೂಲಿ ಮದೀನಾ ಸಂದರ್ಶನದ ವೇಳೆ ಪೈಗಂಬರರ ಸನ್ನಿಧಿಯ ಮುಂಭಾಗದಲ್ಲಿ ದಿನನಿತ್ಯ ದಲಾಇಲ್ ಪಠಿಸುತ್ತಿದ್ದರು.) ಆರಂಭಿಕ ಘಟ್ಟದ ದಲಾಇಲಿನ ಹಸ್ತಪ್ರತಿಗಳಲ್ಲಿ ಮೂಡಿಬರುತ್ತಿದ್ದ ಇಂತಹಾ ಚಿತ್ರಕಲೆಗಳು ಪವಿತ್ರ ನಗರಗಳು, ಹಸಿರು ಗುಂಬದ್ ಹಾಗೂ ಪೈಗಂಬರ್ (ಸ.ಅ.) ರೊಂದಿಗಿನ ಪ್ರೇಮವನ್ನು ಉತ್ತೇಜಿಸುತ್ತಿತ್ತು. ಪಾಶ್ಚಾತ್ಯ ಮೊರಾಕ್ಕೋದಿಂದ ಹಿಡಿದು ಚೀನಾದವರೆಗೆ ಹರಡಿದ ಇಂತಹ ರಚನೆಗಳು ಭೌಗೋಳಿಕ ವೈವಿಧ್ಯತೆಯನ್ನೂ ವಿಶ್ಲೇಷಿಸುತ್ತವೆ.

Footnotes :

  • Sheila s.blair and jonathan M. Bloom, The art and architecture of Islam (1250 – 1800), yale university press, 1995, p.263.

ಮೂಲ: ಸಾರಾ ಚೌಧರಿ
ಅನುವಾದ: ಅಬ್ದುಸ್ಸಲಾಮ್ ಮುಈನಿ ಮಿತ್ತರಾಜೆ

Sarah Choudhari
freelance writer and editor, and a former student of School of Oriental and African studies. Completed graduation in Islamic Art & Archaeology

ಅಗತ್ತಿ ಉಸ್ತಾದ್‌ ಎಂಬ ಮಲಬಾರಿನ ವಿನೀತ ಇತಿಹಾಸಜ್ಞ

“The Calligraphic State: Textual Domination and History in a Muslim Society” ಬಹಳ ಆಪ್ತ ಎನಿಸಿದ ಈ ಕೃತಿಯನ್ನು ಮೊದಲ ಬಾರಿ ನೋಡಿದ್ದು ಎರಡು ಸಾವಿರದ ಐದು-ಆರು ಇಸವಿಗಳಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಸ್ಟಡೀಸ್ ಆಫ್ ಕಲ್ಚರ್ ಆಂಡ್ ಸೊಸೈಟಿಯಲ್ಲಿ ಇಂಟರ್ನ್ ಆಗಿದ್ದಾಗ. ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಬ್ರಿಂಕ್ಲಿ ಮೆಸಿಕ್ ಈ ಪುಸ್ತಕದ ಕರ್ತೃ. ಈ ಗ್ರಂಥಕರ್ತರನ್ನು ಮೊದಲ ಬಾರಿ ಕೇಳಿದ್ದು ಈ ಪುಸ್ತಕದ ಮೂಲಕವೆ. ಮಾಧ್ಯಮ ಅಧ್ಯಯನ ವಿಭಾಗದ ವಿದ್ಯಾರ್ಥಿಯಾದ ನನಗೆ ಇಂತಹ ಮಾನವಶಾಸ್ತ್ರೀಯ ಅಧ್ಯಯನಗಳನ್ನು ನಿಕಟವಾಗಿ ಅನುಸಂಧಾನ ಮಾಡಬೇಕಾದ ಯಾವುದೇ ಅಗತ್ಯವಿರಲಿಲ್ಲ. ಭಾರತದಲ್ಲಿನ ಮೀಡಿಯಾ ಸ್ಟಡೀಸ್ ಕ್ಷೇತ್ರದ ಸಂಪ್ರದಾಯ ಕೂಡಾ ಇಂತಹ ಅನುಸಂಧಾನಗಳಿಗೆ ಪ್ರೇರಕವಾಗಿರಲಿಲ್ಲ.

ನನ್ನನ್ನು ಆ ಪುಸ್ತಕದ ಕಡೆಗೆ ಆಕರ್ಷಿಸಿದ್ದು ಅದರ ಶೀರ್ಷಿಕೆಯಲ್ಲಿದ್ದ ‘ಕ್ಯಾಲಿಗ್ರಾಫಿಕ್ ಸ್ಟೇಟ್’ ಎನ್ನುವ ಪದಪುಂಜ. ಯಮನ್ ಮುಸ್ಲಿಮರ ನಡುವೆ ಚಾಲ್ತಿಯಲ್ಲಿದ್ದ ಬರಹ ಸಂಪ್ರದಾಯಗಳು, ಅವುಗಳ ವಿಕಾಸ, ಕೈಬರಹದಿಂದ ಮುದ್ರಣಕ್ಕೆ ಆದ ಬದಲಾವಣೆ, ಆ ಬದಲಾವಣೆಯ ಮಧ್ಯೆ ನಡೆದ ಮುಂದುವರಿಕೆ-ಸ್ಥಗಿತತೆಗಳ ಪಾತಳಿಯಲ್ಲಿ ಬರಹ ಮತ್ತು ಅಧಿಕಾರದ ನಡುವೆ ಇದ್ದ ಸಂಬಂಧ ಮತ್ತು ಆ ಸಂಬಂಧಗಳ ಮೂಲಕ ಯಮನ್ ಎನ್ನುವ ನಾಡಿನ ಇತಿಹಾಸ ಹಾಗೂ ವರ್ತಮಾನ ‘ಕ್ಯಾಲಿಗ್ರಾಫಿಕ್ ಸ್ಟೇಟ್’ ಕೃತಿಯಲ್ಲಿ ಪ್ರತಿಪಾದನೆಗೊಂಡಿರುವ ವಿಚಾರಗಳು.

ಕಾನೂನು ಸಂಹಿತೆಗಳ ಬಗೆಗಿನ ಜ್ಞಾನ, ಸಾಕ್ಷರತೆ, ಬರಹ ಹಾಗೂ ಅವುಗಳ ಸುತ್ತಮುತ್ತ ಹೆಣೆಯಲಾಗಿರುವ ಸ್ಥಳೀಯ ಆಚಾರಗಳು ಮುಸ್ಲಿಮ್ ಸಮೂಹಗಳಲ್ಲಿ ಸಂಕೀರ್ಣವಾದ ರಾಷ್ಟ್ರವ್ಯವಸ್ಥೆಯೊಂದನ್ನು ಹೇಗೆ ಉಳಿಸಿಕೊಂಡು ಬಂದಿದೆ ಎನ್ನುವ ಜಿಜ್ಞಾಸೆ ಮೆಸಿಕ್ ಕೃತಿಯ ಜೀವಾಳ. ಮುಸ್ಲಿಮ್ ಜನಾಂಗಗಳನ್ನು ಅರ್ಥೈಸುವಲ್ಲಿ ಇಂತಹ ಅಂಶಗಳು ಪ್ರಾಮುಖ್ಯತೆ ಪಡೆಯುತ್ತವೆ ಎನ್ನುವ ಗ್ರಹಿಕೆಗೆ ಅಡಿಗೆರೆ ಎಳೆಯುವ ಈ ಕೃತಿ ಮಾನವಶಾಸ್ತ್ರ, ಇಸ್ಲಾಮಿಕ್ ಸ್ಟಡೀಸ್ ಹಾಗೂ ಪಶ್ಚಿಮೇಷ್ಯ ಅಧ್ಯಯನ ವಿಭಾಗಗಳ ವಿಧಾನಗಳಲ್ಲಿ ಮಹಾತಿರುವುಗಳಿಗೆ ಕಾರಣವಾದ ಗ್ರಂಥ ಎಂದು ಅಭಿಪ್ರಾಯಿಸಲಾಗಿದೆ. ಮುಸ್ಲಿಮ್ ಜನಾಂಗಗಳನ್ನು textual polity ಯಾಗಿ ನೋಡಬೇಕಾದ ಸಾಧ್ಯತೆಗಳೆ ಈ ಕೃತಿಯ ಸಾರ.

Brinkley Morris Messick

ಈ ಟೆಕ್ಸ್ಚುವಲ್ ಪೊಲಿಟಿಯನ್ನು ಸಾಂಪ್ರದಾಯಿಕ ಮಾಧ್ಯಮ ಅಧ್ಯಯನ ಕ್ಷೇತ್ರದೊಂದಿಗೆ ಜೋಡಿಸುವ ಯಾವುದೇ ಸೂಚನೆಗಳು ಮೆಸಿಕ್ ಕೃತಿಯಲ್ಲಿ ಇರಲಿಲ್ಲ. ಅದಾಗ್ಯೂ, ಮೆಸ್ಸಿಕ್ ಪುಸ್ತಕದಿಂದ ಇಂತಹ ಒಂದು ಎಳೆಯನ್ನು ಹೊರತರಲು ಸಾಧ್ಯವಾಗಿದ್ದು ಕಳೆದ ವಾರ ನಮ್ಮನ್ನಗಲಿದ ಲಕ್ಷದ್ವೀಪ ನಿವಾಸಿಯಾದ ಹಿರಿಯ ವಿದ್ವಾಂಸ ಅಬೂಬಕರ್ ಕಾಮಿಲ್ ಸಖಾಫಿ ಅಗತ್ತಿ ಉಸ್ತಾದರ ಬೌದ್ಧಿಕ ಜೀವನವನ್ನು ನೋಡಿದಾಗ. ಮುಸ್ಲಿಮ್ ಜನಾಂಗಗಳಲ್ಲಿ ಕಂಡು ಬರುವ ವಿಸ್ತೃತವಾದ ಮಾಧ್ಯಮ ಸಂಸ್ಕೃತಿ (media culture) ಹಾಗೂ ಮಾಧ್ಯಸ್ಥತೆಯನ್ನು (mediation) ಇತಿಹಾಸಕ್ಕೆ ಸೇರ್ಪಡೆಗೊಳಿಸಲು ಈ ಮೂಲಕ ನನಗೆ ಸಾಧ್ಯವಾಯಿತು.

ಸಂಶೋಧನೆಯ ವೇಳೆ ಕೆಲವು ಗ್ರಂಥಗಳನ್ನು ಹುಡುಕಾಡಿಕೊಂಡು ಅವರು ಕೆಲಸ ಮಾಡುತ್ತಿದ್ದ ಮಅದಿನ್ ಸಂಸ್ಥೆಗೆ ಹೋಗಿದ್ದೆ. ಆಗ ಅವರು ಗದ್ದೆ ಬದಿಯ ಸಣ್ಣ ಮಸೀದಿಯ ಎರಡನೆಯ ಮಹಡಿಯಲ್ಲಿ ಗ್ರಂಥಗಳು ತುಂಬಿದ್ದ ಕೊಠಡಿಯೊಂದರಲ್ಲಿ ಕುಳಿತಿದ್ದರು. ಈ ದೃಶ್ಯವನ್ನು ನೋಡಿದಾಗ ಮೆಸಿಕ್ ಬರೆದಿರುವ ಯಮನ್ ಬಗೆಗಿನ ಮಾನವಶಾಸ್ತ್ರೀಯ ವಿವರಣೆಗಳು ಮನಸ್ಸಲ್ಲಿ ತೇಲಿ ಬಂತು. ಜತೆಗೆ ನನ್ನ ಅಧ್ಯಾಪಕ ಹಾಗೂ ಗ್ರಂಥೇತಿಹಾಸ ಕ್ಷೇತ್ರದ ಹಿರಿಯ ಸಂಶೋಧಕರಾದ ಪ್ರೊಫೆಸರ್ ಕಾರ್ನಾರ್ಡ್ ಹಿಷ್‌ಲರ್‌ರವರ ಡಮಸ್ಕಸ್ ಬಗೆಗಿನ ಐತಿಹಾಸಿಕ ವಿವರಣೆಗಳು ಕೂಡಾ ನೆನಪಿಗೆ ಬಂತು.

ವಿಶಾಲವಾದ ಆ ಕೊಠಡಿಯ ಒಂದು ಮೂಲೆಯಲ್ಲಿ ನಾಲ್ಕೈದು ವಿದ್ಯಾರ್ಥಿಗಳು ವೃತ್ತಾಕೃತಿಯಲ್ಲಿ ಕೂತು ಗ್ರಂಥಗಳನ್ನು ಓದುತ್ತಾ ಇದ್ದಾರೆ. ನಡುನಡುವೆ ಪರಸ್ಪರ ಓದಲು ಸಹಾಯ ಮಾಡುತ್ತಲೂ ಇದ್ದಾರೆ. ಮತ್ತೊಂದು ಬದಿಯಲ್ಲಿ ಕೂತಿರುವ ಕೆಲವು ವಿದ್ಯಾರ್ಥಿಗಳು ಕೊಠಡಿಯಾದ್ಯಂತ ಪ್ರಾಚೀನತೆಯ ಘಮವನ್ನು ಪಸರಿಸುತ್ತಿದ್ದ ಕೈಬರಹದ ಪ್ರತಿಗಳ ಕಟ್ಟನ್ನು ಹುಡುಕಾಡುತ್ತಿದ್ದಾರೆ. ಸಮೀಪದಲ್ಲಿರುವ ಮತ್ತೊಬ್ಬರು ಕೈಬರಹದ ಒಂದು ಪ್ರತಿಯನ್ನು ಸ್ವಲ್ಪ ಮೇಲಕ್ಕಿಟ್ಟು ಅದರಲ್ಲಿರುವ ಅಕ್ಷರಗಳನ್ನು ಟೈಪ್ ಮಾಡುತ್ತಾ ಇದ್ದಾರೆ. ಕೊಠಡಿಯ ಮತ್ತೊಂದು ಬದಿಯಲ್ಲಿ ಕೆಲವು ವಿದ್ಯಾರ್ಥಿಗಳು ಸ್ಕ್ಯಾನಿಂಗ್ ಮುಗಿಸಿ ಹಾಳೆಗಳನ್ನು ಒಂದೊಂದಾಗಿ ತಿರುವಿ ಹಾಕುತ್ತಾ ಇದ್ದಾರೆ. ಝೆರಾಕ್ಸ್ ತೆಗೆಯಲು ಹಾಗೂ ಪ್ರಿಂಟಿಂಗ್ ಪೂರ್ಣಗೊಂಡಿರುವ A4 ಹಾಳೆಗಳನ್ನು ಜೋಡಿಸಿಡಲು ಇಬ್ಬರು ಕಾಯುತ್ತಾ ಇದ್ದಾರೆ. ಮತ್ತೊಂದು ವಿದ್ಯಾರ್ಥಿ ಏಕಾಗ್ರತೆಯೊಂದಿಗೆ ಜಿಲ್ದ್ (ಮಸೀದಿಗಳನ್ನು ಕೇಂದ್ರೀಕರಿಸಿ ನಡೆಯುತ್ತಿದ್ದ ಬುಕ್ ಬೈಂಡಿಂಗ್ ವಿಧಾನ) ಕಟ್ಟುತ್ತಾ ಇದ್ದಾರೆ. ಏತನ್ಮಧ್ಯೆ, ತನ್ನ ಮುಂದಿರುವ ಕಂಪ್ಯೂಟರಿನ ದೊಡ್ಡ ಸ್ಕ್ರೀನಲ್ಲಿ ಫೋಲ್ಡರುಗಳನ್ನು ತೆರೆಯುತ್ತಾ ಮುಚ್ಚುತ್ತಾ ಕೂತಿದ್ದಾರೆ ಅಬೂಬಕರ್ ಸಖಾಫಿ ಎಂಬ ಅಗತ್ತಿ ಉಸ್ತಾದ್. ಕೊಠಡಿಯಲ್ಲಿರುವ ಅಲ್ಮೇರಾಗಳಲ್ಲಿ ತುಂಬಿ ತುಳುಕುತ್ತಿರುವ ಗ್ರಂಥಗಳನ್ನು ಪರಾಂಬರಿಸುತ್ತಿರುವ ಬೇರೆ ಜನರೂ ಅಲ್ಲಿದ್ದಾರೆ.

ಇಷ್ಟೊಂದು ಜನರು ತುಂಬಿರುವ, ಇಷ್ಟೊಂದು ಕೆಲಸಗಳು ನಡೆಯುತ್ತಿರುವ ಆ ಕೊಠಡಿಯಲ್ಲಿ ಮೌಸ್ ಕ್ಲಿಕ್ಕುಗಳ, ಪ್ರಿಂಟರ್ ಹಾಗೂ ಸ್ಕ್ಯಾನಿಂಗ್ ಮೆಷಿನ್‌ಗಳಿಂದ ಬರುವ ಶಬ್ದಗಳನ್ನು ಬಿಟ್ಟರೆ ನೀರವ ಮೌನ. ನಾನು ಅಲ್ಲಿಗೆ ತಲುಪಿದ್ದು ಜಗದ್ವಿಖ್ಯಾತಿ ಪಡೆದ ಕೇರಳದ ಪ್ರಥಮ ಗ್ರಂಥವಾದ ಫತ್ಹುಲ್ ಮುಈನಿನ ಹಳೆಯ ಪ್ರತಿಗಳನ್ನು ಹುಡುಕಿಕೊಂಡು. ತನ್ನ ಡೆಸ್ಕ್ ಟಾಪಲ್ಲಿರುವ ಫೋಲ್ಡರನ್ನು ತೆರೆದು ಲಭ್ಯವಿರುವ ಹಳೆಯ ಹಸ್ತ ಪ್ರತಿಗಳನ್ನು ಕೂಡಾ ಒಳಗೊಂಡ 25 ಪ್ರತಿಗಳನ್ನು ಹಿಂದೆ ಮುಂದೆ ನೋಡದೆ ನನ್ನ ಪೆನ್ಡ್ರೈವ್‌ಗೆ ಕಾಪಿ ಮಾಡಿ ಕೊಟ್ಟರು ಅಗತ್ತಿ ಉಸ್ತಾದ್. ಈಜಿಪ್ಟ್‌ನಿಂದ ಇಂಡೋನೇಷ್ಯಾ ವರೆಗಿನ ವಿವಿಧ ಸ್ಥಳಗಳಿಂದ ವಿವಿಧ ಕಾಲಗಳಲ್ಲಿ ಪ್ರಕಟಗೊಂಡ ಹಸ್ತ ಪ್ರತಿಗಳು ಹಾಗೂ ಮುದ್ರಿತ ಪ್ರತಿಗಳು ಆ ಪೈಕಿ ಇದ್ದವು. ವರ್ಷಗಳ ಕಾಲದ ಪ್ರಯತ್ನದಿಂದ ಮಾತ್ರ ದೊರೆಯಬಹುದಾದ ಬೃಹತ್ ಜ್ಞಾನ ಭಂಡಾರವನ್ನು ಒಂದೇ ಕ್ಲಿಕ್ಕಿನಲ್ಲಿ ಅವರು ನನಗೆ ನಕಲು ಮಾಡಿ ಕೊಟ್ಟರು! ಅದಾಗ್ಯೂ, ಅಗತ್ಯವಾದದ್ದು ದೊರಕಿದಾಗ ಉಂಟಾಗುವ ಸಂತೋಷಕ್ಕಿಂತ ಕೊಠಡಿಯಲ್ಲಿ ನಡೆಯುತ್ತಿರುವ ವೈವಿಧ್ಯಮಯ ಚಟುವಟಿಕೆಗಳಿಂದ ಉಂಟಾದ ಆಶ್ಚರ್ಯವೆ ನನ್ನನ್ನು ಬರ ಸೆಳೆದಿತ್ತು.

ಆದರೆ ಅಲ್ಲಿದ್ದ ಜನರಿಗೆ ಇದರಲ್ಲೇನೂ ಹೊಸತನ ಇರಲಿಲ್ಲ. ಅವರಿಗೆ ಇದು ವರ್ಷಪೂರ್ತಿ ದಿನದ ಮೂರರಲ್ಲೊಂದು ಭಾಗ ನಡೆಯುತ್ತಾ ಬಂದಿರುವ ದೈನಂದಿನ ಚಟುವಟಿಕೆಯಷ್ಟೇ. ಇತಿಹಾಸದ ಬಗ್ಗೆ ಅದರಲ್ಲೂ ವಿಶೇಷವಾಗಿ ಹಿಂದೂ ಮಹಾಸಮುದ್ರದ ತೀರ ಪ್ರದೇಶಗಳ ಇತಿಹಾಸದ ಬಗ್ಗೆ ಅಗಾಧವಾದ ಜ್ಞಾನ ಅಗತ್ತಿ ಉಸ್ತಾದರಿಗಿತ್ತು. ಅವರ ಈ ಜ್ಞಾನವನ್ನು ತಮ್ಮ ಸಂಶೋಧನೆಗಳಿಗಾಗಿ ಸದುಪಯೋಗಪಡಿಸಲು ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಮಲಪ್ಪುರಂ ಜಿಲ್ಲೆಯ ಕುಗ್ರಾಮವಾದ ಮೇಲ್ಮುರಿಗೆ ಹೋಗಿರುವ ಎಲ್ಲಾ ಸಂಶೋಧಕರಿಗೂ, ವಿದ್ಯಾರ್ಥಿಗಳಿಗೂ ಇಂಥದೇ ಅನುಭವಗಳಿವೆ.

Konrad Hirschler

‘Most bookish society’, ಮಧ್ಯಕಾಲದ ಮುಸ್ಲಿಂ ಜನಾಂಗಗಳನ್ನು ಪ್ರೊಫೆಸರ್ ಹಿಷ್‌ಲರ್ ವರ್ಣಿಸುವುದು ಹೀಗೆ. ಅಗತ್ತಿ ಉಸ್ತಾದರ ಜೀವನ ಈ ಪದಪುಂಜ ಜೀವತೆತ್ತು ಬಂದಿರುವ ಹಾಗಿದೆ. ಚರಿತ್ರೆ ಹಾಗೂ ವರ್ತಮಾನದಲ್ಲಿ ಗ್ರಂಥಗಳನ್ನು ಹುಡುಕಾಡಲು ಮತ್ತು ಅವುಗಳನ್ನು ಇತರರಿಗೆ ಲಭ್ಯಗೊಳಿಸಲು ಕಠಿಣ ಪ್ರಯತ್ನವನ್ನೇ ಅವರು ಮಾಡುತ್ತಿದ್ದರು.

ಹೊಸತಾಗಿ ಒಂದು ಪುಸ್ತಕ ಯಾ ಹಸ್ತ ಪ್ರತಿ ಸಿಕ್ಕಿದರೆ ಅಥವಾ ಸಿಗಬಹುದೆಂದು ತಿಳಿದರೆ ಅವರಿಗಾಗುತ್ತಿದ್ದ ಆನಂದವನ್ನು ಜೊತೆಗಿರುವವರಿಗೂ ಕರೆದು ತಿಳಿಸುತ್ತಿದ್ದರು. ಯಾವತ್ತೋ ಬಂದಿದ್ದ ಸಂಶೋಧಕರನ್ನು ಕೂಡಾ ಕರೆದು ಸೂಚನೆ ನೀಡುತ್ತಿದ್ದರು. ಅವರು ಕೇಳದಿದ್ದರೂ ಅದನ್ನು ಸ್ಕ್ಯಾನ್ ಮಾಡಿ ಕಳುಹಿಸಿಕೊಡುತ್ತಿದ್ದರು. ಜ್ಞಾನವನ್ನು ಹಾಗೂ ಜ್ಞಾನದ ಮೂಲವನ್ನು ಇತರರಿಂದ ಬಚ್ಚಿಡಲು ಅವರಿಗೆ ಭಯವಾಗುತ್ತಿತ್ತು.

ಕಲಿಯಲು ಹಾಗೂ ನಕಲು ಮಾಡಲು ಯಾವ ವಿದ್ಯಾರ್ಥಿಯ ಬಳಿಗೆ ತೆರಳಲೂ ಅವರು ಹೇಸುತ್ತಿರಲಿಲ್ಲ. ಮಧ್ಯಯುಗದಲ್ಲಿ ಮಲಬಾರ್ ತೀರಕ್ಕೆ ತಲುಪುತ್ತಿದ್ದ ಅಪೂರ್ವ ಗ್ರಂಥಗಳನ್ನು ಸ್ವಾಗತಿಸಲು ಕ್ಯಾಲಿಕಟ್ ಸಮುದ್ರ ತೀರದಲ್ಲಿ ಹಬ್ಬಕ್ಕೆ ಸಮಾನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತೆನ್ನುವ ವಿಚಾರವನ್ನು ಕುಟ್ಟಿಚ್ಚಿರದಲ್ಲಿ ನಡೆದ ಸೆಮಿನಾರಿನಲ್ಲಿ ಒಮ್ಮೆ ಉಲ್ಲೇಖಿಸಿದ್ದೆ. ಕೊನೆಯದಾಗಿ ಅವರು ನನ್ನನ್ನು ಸಂಪರ್ಕಿಸಿದ್ದು ಆ ಬಗೆಗಿನ ವಿವರಗಳನ್ನು ಪಡೆಯಲೋಸುಗ. ಅಪೂರ್ವ ಆಕರಗಳನ್ನು ಹುಡುಕಾಡಿಕೊಂಡು ಬರುವವರು ತೋರುವ ಅಪ್ಯಾಯಮಾನತೆಯನ್ನು ತನ್ನ ಸ್ನೇಹ ಹಾಗೂ ಉದಾರತೆಯಿಂದ ಮಂಕಾಗಿಸುತ್ತಿದ್ದರು ಅಬೂಬಕರ್‌ ಸಖಾಫಿ ಅಗತ್ತಿ. ಅಧ್ಯಯನ ಸಂಶೋಧನೆಗಳ ಔಪಚಾರಿಕತೆಯಾಚೆಗೆ ಆ ಸಂಬಂಧ ಬೆಳೆಯುತ್ತಿತ್ತು.

ಮಲಬಾರಿನ ಹಾಗೂ ಮಲಬಾರ್ ಬಗೆಗಿನ ಬೌದ್ಧಿಕ ಅನುಸಂಧಾನಗಳಲ್ಲಿ ಜ್ಞಾನ ಶಾಸ್ತ್ರೀಯ ಸ್ಥಗಿತತೆಗಳು ಕಳೆದೆರಡು ದಶಕಗಳಲ್ಲಿ ಘಟಿಸಿದೆ. ಭಾರತದ ಹಾಗೂ ವಿದೇಶದ ಪ್ರಮುಖ ವಿಶ್ವವಿದ್ಯಾನಿಲಯ ಹಾಗೂ ಅಧ್ಯಯನ ಕೇಂದ್ರಗಳಿಗೆ ಕೇರಳದಿಂದ ತಲುಪಿದ ಸಂಶೋಧನಾರ್ಥಿಗಳ ಸಂಶೋಧನೆಗಳೆ ಈ ಸ್ಥಗಿತತೆಗೆ ಕಾರಣ. ಈ ಸ್ಥಗಿತತೆಯ ವಿಧಾನ, ಆಕರ ಹಾಗೂ ದತ್ತಾಂಶಕ್ಕೆ ಸಂಬಂಧಪಟ್ಟ ಮೂಲಭೂತ ಸ್ವಭಾವವನ್ನು ನಿರ್ಧರಿಸುವಲ್ಲಿ ಅಬೂಬಕರ್ ಸಖಾಫಿಯವರ ಗ್ರಂಥ ಭಂಡಾರ ಹಾಗೂ ಅವುಗಳನ್ನು ಗ್ರಹಿಸುವಲ್ಲಿ ಅವರಿಗಿದ್ದ ಪ್ರಾವೀಣ್ಯತೆ ಮಹತ್ತರ ಪಾತ್ರವನ್ನು ವಹಿಸಿದೆ. ಆ ನಿಟ್ಟಿನಲ್ಲಿ ನೋಡಿದರೆ ಕಳೆದ ಒಂದುವರೆ ದಶಕದಲ್ಲಿ ಬೆಳೆದು ಬಂದಿರುವ ಮಲಬಾರ್ ಸ್ಟಡೀಸ್ ಎನ್ನುವ ಇಡೀ ಅಧ್ಯಯನ ಶಿಸ್ತಿನ ಪ್ರಧಾನ ಆಧಾರ ಶಿಲೆಗಳಲ್ಲೊಂದು ಅಬೂಬಕರ್ ಸಖಾಫಿ ಹಾಗೂ ಅವರ ಅಧ್ಯಯನ ತೃಷೆ ಎನ್ನಬಹುದು. ಈ ಕಾಲಾವಧಿಯಲ್ಲಿ ಭಾರತದ ಒಳಗಿಂದ ಹಾಗೂ ಹೊರಗಿನಿಂದ ಬಂದಿರುವ ಮಲಬಾರ್ ಸಂಬಂಧಿತ ಸಂಶೋಧನೆಗಳ ಅಕ್ನಾಲೆಜ್ಮೆಂಟ್ ಪುಟಗಳ ಮೂಲಕ ಹಾದು ಹೋದರೆ ಈ ವಿಚಾರವನ್ನು ಮನಗಾಣಬಹುದು.

ಲಕ್ಷದ್ವೀಪದಲ್ಲಿ ಜನಿಸಿದ ವ್ಯಕ್ತಿಯೆಂಬ ನೆಲೆಯಲ್ಲಿ ಸಹಜವಾಗಿಯೇ ದೊರಕಿರುವ ಕೆಲವು ಪ್ರತಿಭೆಗಳು ಅಗತ್ತಿ ಉಸ್ತಾದರಿಗಿದೆ. ಭೂವಿಜ್ಞಾನ ಹಾಗೂ ಖಗೋಳವಿಜ್ಞಾದಲ್ಲಿ ಅಲಿ ಮಾಣಿಕ್‌ಫಾನರ ಹಾಗೆ ಉಸ್ತಾದರಿಗೆ ಅಗಾಧ ಪಾಂಡಿತ್ಯ ಇದೆ. ಈ ಕ್ಷೇತ್ರದಲ್ಲಿ ಹಲವಾರು ಅಧ್ಯಯನಗಳನ್ನು ಹಾಗೂ ಆಲೋಚನೆಗಳನ್ನು ಅವರು ಜಂಟಿಯಾಗಿ ನಡೆಸಿದ್ದಾರೆ. ಅವರು ಜನಜನಿತರಾಗಿರುವುದು ಕೂಡಾ ಈ ಕ್ಷೇತ್ರದಲ್ಲಿರುವ ಅವರ ವಿಶೇಷ ತಜ್ಞತೆಯಿಂದ. ದಿಕ್ಕುಗಳನ್ನು ನಿರ್ಣಯಿಸುವುದು, ನಮಾಝಿನ ಹಾಗೂ ಚಂದ್ರದರ್ಶನದ ಸಮಯ ನಿರ್ಣಯಿಸುವುದರಲ್ಲಿ ಅವರ ಸಾಮರ್ಥ್ಯ ವಿಶೇಷವಾಗಿತ್ತು. ಕೇರಳದ ಪ್ರಮುಖ ಕ್ಯಾಲೆಂಡರುಗಳು ಹಾಗೂ ಪತ್ರಿಕೆಗಳು ಈ ವಿಚಾರದಲ್ಲಿ ಅವರ ಲೆಕ್ಕಾಚಾರಗಳನ್ನು ಆಶ್ರಯಿಸುತ್ತಿತ್ತು. ಆದರೆ, ಇದಕ್ಕಿಂತಲೂ ವಿಸ್ತೃತವಾದ ಕಾರ್ಯಕ್ಷೇತ್ರವನ್ನು ಅವರು ಹೊಂದಿದ್ದರು ಎನ್ನುವುದನ್ನು ಕೂಡಾ ನಾವು ಗಮನಿಸಬೇಕಿದೆ. ಬೇರೆ ಬೇರೆ ಕಾಲದೇಶಗಳಲ್ಲಿ ಪ್ರಕಟವಾದ ಒಂದೇ ಪುಸ್ತಕದ ವಿವಿಧ ಹಸ್ತಪ್ರತಿಗಳ ಹುಡುಕಾಟ, ದೊರಕಿದ ಹಸ್ತಪ್ರತಿಗಳ ಆಧಾರದಲ್ಲಿ ಹೊಸ ಕ್ರಿಟಿಕಲ್ ಆವೃತ್ತಿಗಳ ಪ್ರಕಟಣೆ, ಹಳೆಯ ಗ್ರಂಥಗಳಿಗೆ ಟಿಪ್ಪಣಿಗಳನ್ನು ಸೇರಿಸಿ ನವೀಕರಿಸುವುದು ಇವೇ ಮುಂತಾದವು ಉಸ್ತಾದರ ಹವ್ಯಾಸಗಳು. ಹೀಗೆ ಸದಾ ಸಮಯ ಪುಸ್ತಕಗಳೊಂದಿಗೆ ಕಳೆಯುವುದು ಅವರಿಗೆ ಮುದ ನೀಡುತ್ತಿತ್ತು.

ಈ ಕ್ಷೇತ್ರದಲ್ಲಿನ ವಿದ್ಯಾರ್ಥಿಗಳ ಬೆಳವಣಿಗೆಯನ್ನು ಬಯಸಿ ಹಲವಾರು ಕೈಪಿಡಿಗಳನ್ನು ಕೂಡಾ ಅವರು ರಚಿಸಿದ್ದಾರೆ. ಈ ಪೈಕಿ ಅವರ ಇಂಗ್ಲಿಷ್-ಅರೇಬಿಕ್-ಮಲಯಾಳಂ ಕೈಪಿಡಿ ಗಮನಾರ್ಹ ಎನಿಸಿದೆ. ಕಂಪ್ಯೂಟರ್ ಟೈಪಿಂಗ್ ವ್ಯಾಪಕವಾಗುತ್ತಿದ್ದ ಕಾಲದಲ್ಲಿ ಟೈಪಿಂಗ್ ಕಲಿಯಲು ಬಹುತೇಕ ವಿದ್ಯಾರ್ಥಿಗಳು ಈ ಕೃತಿಯನ್ನು ಬಳಸಿಕೊಳ್ಳುತ್ತಿದ್ದರು. ಪುಸ್ತಕದ ವಸ್ತುವಿಗೆ ಪ್ರಾಮುಖ್ಯತೆ ಕೊಡುವ ಹಾಗೆ ಅದರ ವಿನ್ಯಾಸಕ್ಕೂ ಬಹಳ ಮಹತ್ವ ನೀಡುವುದು ಉಸ್ತಾದರ ಜಾಯಮಾನ. ಡಿಜಿಟೈಝೇಶನ್ ರಂಗದ ಆಧುನಿಕ ವ್ಯವಸ್ಥೆಗಳನ್ನು ಅರಿತು ಆರ್ಕೈವಿಂಗ್‌ಗಾಗಿ ಅದನ್ನು ಬಳಸುವಲ್ಲಿ ಕೂಡಾ ಅವರು ಮುಂಚೂಣಿಯಲ್ಲಿದ್ದರು.

ಹಳೆಯ ಗ್ರಂಥಗಳ ಹಾಶಿಯಗಳನ್ನು (ವಿವರಣಾ ಗ್ರಂಥ) ಒಳಗೊಂಡಂತೆ ನೂರರಷ್ಟು ಗ್ರಂಥಗಳನ್ನು ಅಗತ್ತಿ ಉಸ್ತಾದರು ರಚಿಸಿದ್ದಾರೆ. ಜತೆಗೆ ನೂರಾರು ಪುಸ್ತಕಗಳನ್ನು ಸಿದ್ಧಪಡಿಸಿಟ್ಟು ಉಸ್ತಾದರು ನಮ್ಮನ್ನಗಲಿದ್ದಾರೆ. ಪ್ರಿಂಟ್ ಮಾಡುವ ಬದಲು ಪುಸ್ತಕಗಳನ್ನು ಆನ್ಲೈನ್ ಓಪನ್ ಸೋರ್ಸಾಗಿ ಪ್ರಕಟಿಸುವ ಶೈಲಿ ಅವರು ಪಾಲಿಸುತ್ತಿದ್ದರು.

ಅರಬಿ ಮಲಯಾಳಂ ಭಾಷೆಯ ಆದಿಕಾಲದ ರಚನೆಗಳಲ್ಲೊಂದಾದ ‘ಮುಹ್ಯಿದ್ದೀನ್ ಮಾಲೆ’ಯ ಕಾವ್ಯಪುರುಷರಾಗಿದ್ದಾರೆ ಅಬ್ದುಲ್ ಖಾದಿರ್ ಜೀಲಾನಿ. ಅವರ ಜೀವನದ ಬಗ್ಗೆ ಅಲೆಗ್ಸಾಂಡ್ರಿಯನ್ ವಿದ್ವಾಂಸ ಇಮಾಮ್ ಇಬ್ನು ಹಜರಿಲ್ ಅಸ್ಖಲಾನಿ ರಚಿಸಿದ ‘ಜಿಬ್ತತು ನಾಳಿರ್ ಫೀ ತರ್ಜುಮತಿ ಶೈಖ್ ಅಬ್ದುಲ್ ಖಾದಿರ್’ ಕೃತಿಯ ಟಿಪ್ಪಣಿಯನ್ನು ಪೂರ್ಣಗೊಳಿಸಿ ಲೈಬ್ರರಿಯಿಂದ ಹೊರಬರುವಾಗ ಮರಣ ಅವರ ಬಾಗಿಲನ್ನು ತಟ್ಟಿತ್ತು. ಉಸ್ತಾದರಿಗೆ ಮುದ್ರಣ ಪೂರ್ವ ಕಾಲದ ಮಲಬಾರಿನ ಸಾಹಿತ್ಯ ಚರಿತ್ರೆಯ ಬಗ್ಗೆ ಕೂಡಾ ಅಪಾರವಾದ ಪಾಂಡಿತ್ಯವಿತ್ತು. ಮಲಬಾರ್ ತೀರದ ಮಕ್ತಬುಗಳ (ಮಸೀದಿಗಳೊಂದಿಗೆ ಹೊಂದಿಕೊಂಡಿರುವ ಲೈಬ್ರೆರಿಗಳು) ಬಗ್ಗೆ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ʼWriting cultures in the Malabar Coastʼ ಎನ್ನುವ ಸಂಶೋಧನಾ ಪ್ರಾಜೆಕ್ಟಿನ ಮಾರ್ಗದರ್ಶಕರಾಗಿಯೂ ಕೆಲಸ ಮಾಡುತ್ತಿದ್ದರು ಅಗತ್ತಿ ಉಸ್ತಾದ್.

ಮಲಬಾರ್ ಮುಸ್ಲಿಮರ ಮಾಧ್ಯಮ ಸಂಸ್ಕೃತಿ ಎಂಬ ವಿಷಯದಲ್ಲಿ ಆರಂಭಗೊಂಡ ನನ್ನ ಸಂಶೋಧನೆ 2018ರಲ್ಲಿ ಪೂರ್ಣಗೊಳ್ಳುವಾಗ ಅದರ ಒತ್ತು ಬದಲಾಗಿ ಬೇರೆಯೇ ವಿಷಯವಾಗಿ ಮಾರ್ಪಟ್ಟಿತ್ತು. ಮಾಧ್ಯಮ ಸಂಸ್ಕೃತಿ ಎನ್ನುವುದನ್ನು ಮೀರಿ ತಾಂತ್ರಿಕತೆ ಹಾಗೂ ದೇವವಿಜ್ಞಾನ ಎನ್ನುವ ವಿಷಯದ ಕಡೆಗೆ ಅದು ಹೊರಳಿತ್ತು. ಮುಸ್ಲಿಮರಲ್ಲಿರುವ ಸಂವಹನ ವಿಧಾನಗಳನ್ನು ಇತಿಹಾಸಕ್ಕೆ ತರುವಲ್ಲಿ ಅಗತ್ತಿ ಉಸ್ತಾದಾರು ತೋರಿದ ಆಸ್ಥೆ ಹಾಗೂ ಅದಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಲಭ್ಯಗೊಳಿಸುವಲ್ಲಿ ಅವರು ವಹಿಸಿದ ಕಾಳಜಿ ಈ ಬದಲಾವಣೆಯ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ. ಜತೆಗೆ ಮಾಧ್ಯಮ ಇತಿಹಾಸಜ್ಞರಾದ ಹೈದರಾಬಾದ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊಫೆಸರ್ ತಿರುಮಾಳ್ ಹಾಗೂ ಸಮಾಜ ವಿಜ್ಞಾನಿ ಸಜೇಶ್ ಹೆಗ್ಡೆ ಮುಂತಾದವರ ಮಾರ್ಗದರ್ಶನವೂ ಈ ವಿಕಾಸದ ಹಿಂದಿತ್ತು.

ನನ್ನ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸುವ ತುಸು ಮುಂಚೆ ಮೆಸ್ಸಿಕ್ ಅವರ ಹೊಸ ಗ್ರಂಥ Shariah Script: A Historical Anthropology ಕೂಡಾ ಹೊರಬಂತು. ಇಸ್ಲಾಮಿಕ್ ಕಾನೂನು ವ್ಯವಸ್ಥೆ ಯಮನ್ ಮುಸಲ್ಮಾನರ ನಡುವೆ ಒಂದು ಪ್ರಾದೇಶಿಕ ಜೀವನ ಸಂಸ್ಕೃತಿಯಾಗಿ ಹೇಗೆ ಉಳಿಯುತ್ತಾ ಬಂದಿದೆ ಎನ್ನುವುದನ್ನು ಈ ಕೃತಿ ಶೋಧಿಸಿದೆ. ವಸಾಹತುಶಾಹಿ, ಒಟ್ಟೊಮನ್, ರಾಷ್ಟ್ರೀಯವಾದಿ ಹಂತಗಳನ್ನೆಲ್ಲ ಅತಿಜಯಿಸಿದ ಈ ಜೀವನ ಸಂಸ್ಕೃತಿ ಶತಮಾನಗಳ ಕಾಲ ಉಳಿಯಲು ಕಾರಣ ಮುಸ್ಲಿಮರ ನಡುವೆ ಚಾಲ್ತಿಯಲ್ಲಿದ್ದ ಪುಸ್ತಕಗಳೊಂದಿಗೆ ಹಾಗೂ ಪುಸ್ತಕಗಳ ಮೂಲಕ ಇರುವಂತಹ ವಿಶೇಷ ಸಂಬಂಧಗಳಾಗಿವೆ ಎಂದು ಮೆಸ್ಸಿಕ್ ವಾದಿಸಿದ್ದಾರೆ. ಪಠ್ಯಕೇಂದ್ರಿತ ಪ್ರಾದೇಶಿಕ ಸಂಸ್ಕೃತಿ ಎನ್ನುವ ನೆಲೆಯಲ್ಲಿ ಇಸ್ಲಾಮಿನ ಕಾನೂನು ವ್ಯವಸ್ಥೆಯನ್ನು ಮೆಸ್ಸಿಕ್ ಗ್ರಹಿಸಿದ್ದಾರೆ. ಧಾರ್ಮಿಕ ವಿದ್ವಾಂಸರ ಫತ್ವಗಳು, ನ್ಯಾಯಾಲಯದ ತೀರ್ಪುಗಳು, ವ್ಯಕ್ತಿಗಳ ನಡುವಿನ ಒಪ್ಪಂದಗಳು ಮತ್ತು ಪಾಠ ಪುಸ್ತಕಗಳು ಕೂಡ ಸದರಿ ಪಠ್ಯಗಳಲ್ಲಿ ಒಳಗೊಳ್ಳುತ್ತದೆ. ಈ ಪಠ್ಯಗಳ ಓದುಗನಾಗಿ ಸಂಶೋಧನೆಗೆ ಇಳಿಯುವ ಮಾನವ ಶಾಸ್ತ್ರಜ್ಞನಿಗೆ ಸಿಗುವ ಒಳನೋಟಗಳು ಮೆಸಿಕ್ ರವರ ಈ ಹೊಸ ಗ್ರಂಥದ ವಿಧಾನಗಳನ್ನು ಗಮನಾರ್ಹಗೊಳಿಸುತ್ತದೆ.

ಮೆಸಿಕ್‌ರವರ ಬಹುತೇಕ ವಾದಗಳು ಲೈಬ್ರರಿಗಳು ಹಾಗೂ ಆರ್ಕೈವುಗಳು ಎಂಬ ವಿಂಗಡಣೆಯನ್ನು ತರುತ್ತವೆ. ಅವರು ತನ್ನ ಪ್ರಬಂಧವನ್ನು ಮಂಡಿಸಿದ ನಂತರ ಈ ಬಗೆಗಿನ ಪ್ರಶ್ನೆಯೊಂದನ್ನು ಸಭಿಕರು ಅವರತ್ತ ಎಸೆದಿದ್ದರು. ಆಗ ನನಗೆ ಆಗತ್ತಿ ಉಸ್ತಾದರ ಲೈಬ್ರರಿ ನೆನಪಿಗೆ ಬಂತು. ಅವರ ಲೈಬ್ರರಿಯಲ್ಲಿ ಇಂತಹ ವಿಂಗಡನೆ ಇರಲಿಲ್ಲ. ಹಸ್ತ ಪ್ರತಿಗಳನ್ನು ಭೂತಕಾಲಕ್ಕೆ ಕಳಿಸದೆ ಲೈಬ್ರರಿಯಲ್ಲಿ ಅಥವಾ ವರ್ತಮಾನದಲ್ಲೇ ಉಳಿಸುವ ಕೆಲಸವನ್ನು ಅವರು ಮಾಡಿದ್ದರು.

ದ್ವೀಪಗಳಿಗೆ ಭೌಗೋಳಿಕವಾಗಿ ಬರುವಂತಹ ಮುಕ್ತತೆ ದೀರ್ಘಕಾಲ ಕೇರಳದಲ್ಲಿ ಜೀವಿಸಿದ ಈ ಇತಿಹಾಸಜ್ಞನ ನಿಲುವುಗಳನ್ನು ನಿರ್ಧರಿಸುವಲ್ಲಿ ಹಾಗೂ ನಿಯಂತ್ರಿಸುವಲ್ಲಿ ಪಾತ್ರವಹಿಸಿದೆ. ಆ ಮುಕ್ತತೆಯ ಗಾಳಿ ಬೆಳಕುಗಳೆ ಅವರ ಅಧ್ಯಯನ-ಸಂಶೋಧನೆಗಳ ಹಿಮ್ಮತ್ತು ಎನ್ನಬಹುದು.

ಲೇಖಕ: ನುಐಮಾನ್‌ ಕೀಪ್ರತ್‌ ಅಂದ್ರು
ಕನ್ನಡಕ್ಕೆ: ನಝೀರ್‌ ಅಬ್ಬಾಸ್‌


ಡಾ. ನುಐಮಾನ್’ರವರು ಪ್ರಸ್ತುತ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜರ್ಮನಿಯ ಫ್ರೈಬರ್ಗ್ ಯುನಿವರ್ಸಿಟಿಯಲ್ಲಿ ಸಂಶೋಧಕರಾಗಿದ್ದ ಇವರು ಮಲೇಷ್ಯಾದ ಕರ್ಟನ್ ವಿಶ್ವವಿದ್ಯಾಲಯದಲ್ಲಿಯೂ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ. ವಿವಿಧ ರಾಷ್ಟ್ರಗಳ ವಿವಿಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.

ಕೃಪೆ: ಟ್ರೂಕಾಪಿ ಥಿಂಕ್

ಜಾಮಿಉ ತಮ್ಸೀಲ್ ಮತ್ತು ಪರ್ಷಿಯನ್ ಸಾಹಿತ್ಯ ಸಮೃದ್ಧಿ

ಪ್ರತಿಯೊಂದು ಪುಸ್ತಕವು ತನ್ನದೇ ಆದ ಐತಿಹಾಸಿಕ ಮತ್ತು ಪ್ರಾದೇಶಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ಸಾಲು- ಸಾಲು ಪುಸ್ತಕಗಳನ್ನು ಜೋಡಿಸಿ ಓದುವುದಕ್ಕಿಂತ ಆ ಸಾಲುಗಳ ನಡುವೆ ಉತ್ತಮ ಪುಸ್ತಕದ ಆಯ್ಕೆ ಮಾಡಿ ಓದುವುದು ಸೂಕ್ತ. ಅದು ತನ್ನದೇ ಆದ ಗತಕಾಲದ ಒಳನೋಟಗಳನ್ನು ಮಾತ್ರವಲ್ಲದೆ, ಭವಿಷ್ಯದಲ್ಲಿ ಎದುರುಗೊಳ್ಳುವ ಪ್ರಪಂಚದ ಒಳನೋಟಗಳನ್ನು ನಮಗೆ ಬಹಿರಂಗಪಡಿಸುತ್ತದೆ. ಮಧ್ಯಯುಗದಲ್ಲಿ ಪರ್ಷಿಯನ್ ಭಾಷೆಯಿಂದ ಸಾಧ್ಯವಾದ ಖಂಡಾಂತರ ಸಾಹಿತ್ಯ ಕ್ರಾಂತಿಗೆ ‘ಜಾಮಿಉ ತಮ್ಸೀಲ್’ ( ಕಥೆಗಳ ಸಂಗ್ರಹ) ಎಂಬ ಪುಸ್ತಕ ಒಂದು ವಿಶಿಷ್ಟ ಉದಾಹರಣೆ. ಈ ಪುಸ್ತಕವನ್ನು ಹದಿನೇಳನೆಯ ಶತಮಾನದಲ್ಲಿ ಪರ್ಷಿಯನ್ ಭಾಷೆಯಲ್ಲಿ ಬರೆಯಲಾಗಿದೆ. ಆದರೆ ಕೃತಿಯ ರಚನೆ ಪರ್ಷಿಯನ್ ಭಾಷೆಯ ಹುಟ್ಟೂರಾದ ಇರಾನಿನಲ್ಲಿ ಆಗಿರಲಿಲ್ಲ. ಬದಲಿಗೆ, ದಕ್ಷಿಣ ಏಷ್ಯಾದಲ್ಲಾಗಿತ್ತು. ನಿಖರ ಮಾಹಿತಿಯ ಪ್ರಕಾರ, ಪುಸ್ತಕದ ಐತಿಹಾಸಿಕ ಪಯಣವು ಪ್ರಾರಂಭಗೊಳ್ಳುವುದು ಡೆಕ್ಕನ್ ಪ್ರಸ್ಥಭೂಮಿಯ ಅತ್ಯಂತ ಪ್ರಮುಖ ನಗರ ಹೈದರಾಬಾದಿನಿಂದ. ಜಾಮಿಉ ತಮ್ಸೀಲ್ ಲೇಖಕ ಮುಹಮ್ಮದ್ ಅಲಿ ಹ್ಯಾಬ್ಲೆರುಡಿ ಇರಾನಿನ ಕ್ಯಾಸ್ಪಿಯನ್ ಕರಾವಳಿಯಲ್ಲಿರುವ ಹ್ಯಾಬಲ್‌ರೂಡ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. ಜಾಮಿಉ ತಮ್ಸೀಲಿನ ಲೇಖಕರು ಪರ್ಶಿಯನ್ ಮೂಲದವರಾದರೂ ಪುಸ್ತಕದ ಇತಿಹಾಸ ರಾಷ್ಟ್ರದ ಗಡಿಗಳನ್ನು ಮೀರಿ ಪರ್ಷಿಯನ್ ಸಾಹಿತ್ಯದ ಕಳೆದುಹೋಗಿರುವ ಭೌಗೋಳಿಕ ವ್ಯಾಪ್ತಿಯನ್ನು ಬಹಿರಂಗಪಡಿಸುತ್ತದೆ.

ಆ ಸುಂದರ ಗತವು ಏಷ್ಯಾದ ವೈವಿಧ್ಯಮಯ ಪ್ರದೇಶಗಳನ್ನು ಒಂದುಗೂಡಿಸಿತು. ರಾಷ್ಟ್ರಗಳು ಎಂಬ ಪರಿಕಲ್ಪನೆ ಬೇರೂರಿರುವ ಈ ಯುಗದಲ್ಲಿ, ಗಡಿಗಳು ಮತ್ತು ಗೋಡೆಗಳಿಂದ ಬೇರ್ಪಟ್ಟ ವಿಭಿನ್ನ ನಾಗರಿಕತೆಗಳಾಗಿ ನಮ್ಮನ್ನು ನಾವು ಗ್ರಹಿಸುತಿದ್ದೇವೆ. ಆದರೆ ಜಾಮಿಉ ತಮ್ಸೀಲ್ ನಮಗೆ ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ನಾಗರಿಕತೆಯನ್ನು ಪರಿಚಯಿಸಲು ಶ್ರಮಿಸುತ್ತದೆ. ಹೈದರಾಬಾದಿನಿಂದ ತುರ್ಕಿಯವರೆಗೆ ವಿಸ್ತರಿಸಿರುವ ಪರ್ಷಿಯನ್‌ ಭೂವ್ಯಾಪ್ತಿಯ ಗತಕಾಲದ ಹಿಂದಿನ ಮರೆಮಾಚಲ್ಪಟ್ಟ ನೆನಪುಗಳನ್ನು ಈ ಕೃತಿ ಕೆದಕಲು ಪ್ರಯತ್ನಿಸಿದೆ.
ದಕ್ಷಿಣ ಏಷ್ಯಾದ ರಾಜವಂಶಗಳು ತಮ್ಮ ಜನಾಂಗೀಯ ಮೂಲವನ್ನು ಲೆಕ್ಕಿಸದೆ ರಾಮಾಯಣ ಮತ್ತು ಮಹಾಭಾರತದಂತಹ ಪ್ರಮುಖ ಸಂಸ್ಕೃತ ಕೃತಿಗಳ ಪರ್ಷಿಯನ್ ಅನುವಾದ ಯೋಜನೆಗಳನ್ನು ಕೈಗೊಂಡವು. ಇಂಡೋ- ಪರ್ಷಿಯನ್ ಕವಿ ಅಮೀರ್ ಖುಸ್ರು (14 ನೇ ಶತಮಾನ) ದೆಹಲಿ ಮತ್ತು ಸುತ್ತಮುತ್ತಲಿನ‌ ಪ್ರದೇಶಗಳಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದ್ದರು. ಇರಾನಿನಲ್ಲಿ ಇಕ್ಬಾಲ್- ಎ ಲಾಹೋರಿ ಎಂದು ಕರೆಯಲ್ಪಡುವ ಮುಹಮ್ಮದ್ ಇಕ್ಬಾಲ್ (1877-1938) ನಂತಹ ದಕ್ಷಿಣ ಏಷ್ಯಾದ ಕವಿಗಳನ್ನು ಇಂದಿಗೂ ವ್ಯಾಪಕವಾಗಿ ಓದಲಾಗುತ್ತಿದೆ.

ಆ ವೇಳೆ ಪರ್ಷಿಯನ್ ದಕ್ಷಿಣ ಏಷ್ಯಾದಲ್ಲಿ ಮಾತ್ರ ಸೀಮಿತಗೊಳ್ಳದೆ ಮಧ್ಯ ಏಷ್ಯಾದಾದ್ಯಂತ ಮತ್ತು ಪಶ್ಚಿಮ ಏಷ್ಯಾದ ಕಾಕಸ್‌ಗಳಂತಹ ಭಾಗಗಳಲ್ಲಿ ಮುಖ್ಯವಾಹಿನಿಯ ಮಾಧ್ಯಮವಾಗಿತ್ತು. ಈ ರೀತಿಯಾಗಿ, ಪರ್ಷಿಯನ್ ಭಾಷೆಯ ಮೂಲಕ ವಿಭಿನ್ನ ಹಿನ್ನೆಲೆಯ ಜನರ ನಡುವೆ ಪರಸ್ಪರ ಸಂಬಂಧ ಏರ್ಪಡುತ್ತಿತ್ತು. ಪರ್ಷಿಯನ್ ಭಾಷೆಯು ಮುಸಲ್ಮಾನರು, ಹಿಂದೂಗಳು, ಸಿಖ್, ಕ್ರಿಶ್ಚಿಯನ್, ಝೋರಾಸ್ಟ್ರಿಯನ್ನರು ಮತ್ತು ಯಹೂದಿಗಳ ಸಂಕರ ಸಂಸ್ಕೃತಿಯ ಬೀಜಗಳನ್ನು ಬಿತ್ತಿತು. ಇದು ಅಭಿರುಚಿ ಮತ್ತು ನೈತಿಕ ನಡವಳಿಕೆಯ ಸಾಮಾನ್ಯ ಪ್ರಜ್ಞೆಯನ್ನು ಹೊಂದಿರುವ ವೈವಿಧ್ಯಮಯ ಜನರಲ್ಲಿ ‘ಕಾಸ್ಮೋಪಾಲಿಟನ್’ ಭಾವನೆಯನ್ನು ಹುಟ್ಟುಹಾಕಿತು. ವಿವಿಧ ಭಾಷೆಗಳು ಮತ್ತು ಸಮಾಜಗಳ ನಡುವೆ ಜ್ಞಾನವನ್ನು ಹಂಚಿಕೊಳ್ಳುವ ಮಾಧ್ಯಮವಾಗಿ ಪರ್ಷಿಯನ್ ಅಂದಿನ ದಿನಗಳಲ್ಲಿ ಪಾತ್ರ ವಹಿಸಿತು. ಅನೇಕ ಕೃತಿಗಳನ್ನು ಸಂಸ್ಕೃತ, ಅರೇಬಿಕ್, ಚಗತೈ, ಟರ್ಕಿಶ್, ತಮಿಳು ಮುಂತಾದವುಗಳಿಂದ ಪರ್ಷಿಯನ್ ಭಾಷೆಗೆ ಅನುವಾದಿಸಲಾಯಿತು. ಕ್ರಿ.ಶ. 1500ರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಪರ್ಷಿಯನ್ ಭಾಷೆಯನ್ನು ಸಾಮ್ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಲು ಪರ್ಷಿಯನ್ ಭಾಷೆಯ ಕಾಸ್ಮೋಪಾಲಿಟನ್ ಸ್ವಭಾವವು ಕಾರಣ ಎಂಬುದನ್ನು ತಿಳಿಯಬೇಕು. ಮುಖ್ಯವಾಗಿ ಈ ಭಾಷೆಯು ಸೀಮಿತ ವರ್ಗಕ್ಕೆ ಮೀಸಲಾಗಿರಲಿಲ್ಲ. ಹೊರತಾಗಿ, ಎಲ್ಲರನ್ನೂ ಮತ್ತು ಪ್ರತೀ ಕ್ಷೇತ್ರವನ್ನು ಒಳಗೊಂಡಿತ್ತು.

ಪರ್ಷಿಯನ್ ಭಾಷೆ ಪ್ರಸ್ತುತ ಇರಾನ್‌ ಆಡಳಿತದ ಅಧಿಕೃತ ಭಾಷೆ. ಅವರು ಗತಕಾಲದ ನೆನಪುಗಳನ್ನು ಉಳಿಸುವ ಮೂಲಕ ಆಧುನಿಕ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದಾರೆ. ಅನೇಕರು ತಮ್ಮ ಮಾತೃಭಾಷೆಯ ಹೊರತಾಗಿ, ಪರ್ಷಿಯನ್ ಭಾಷೆಯನ್ನು ಸಾಮಾನ್ಯ ಸಾಂಸ್ಕೃತಿಕ ಭಾಷೆಯಾಗಿ ಇಂದಿಗೂ ಬಳಸುತ್ತಾರೆ. ಅಜೆರೀಸ್, ಕುರ್ಡ್ಸ್, ಟರ್ಕ್ಸ್, ಅಸಿರಿಯನ್ನರು ಮತ್ತು ಇತರ ಭಾಷೆಗಳನ್ನು ಉಪಯೋಗಿಸುವ ಜನರಿಗೆ ಪರ್ಷಿಯನ್ ತಮ್ಮ ಸಾಹಿತ್ಯದ ಭಾಗವಾಗಿದೆ. ಇದಲ್ಲದೆ, ಪರ್ಷಿಯನ್ ಭಾಷೆ ಅವರ ನಡುವೆ ಸಾಮಾನ್ಯ ಸಂವಹನದ ಮಾಧ್ಯಮವಾಗಿ ವಿಕಸನಗೊಂಡಿದೆ. ಈ ಕಾಸ್ಮೋಪಾಲಿಟನ್ ಪರ್ಷಿಯನ್ ಸಾಮ್ರಾಜ್ಯದಾದ್ಯಂತ ಬಹುಭಾಷೆಯ ಬಳಕೆ ಸಾಮಾನ್ಯವಾಗಿತ್ತು. ಅದು ಇಂದಿನಂತೆ ಭಾಷೆಗಳನ್ನು ಅಸ್ಮಿತೆಗೆ ಹೊಂದಿಸಿಕೊಂಡು ಅರ್ಥಮಾಡಿಕೊಳ್ಳುತ್ತಿರಲಿಲ್ಲ; ಹೊರತಾಗಿ, ವಿವಿಧ ಭಾಷೆಗಳು ವಿವಿಧ ರೀತಿಯ ಜ್ಞಾನಗಳಿಗಿರುವ ಪ್ರವೇಶದ ಮಾಧ್ಯಮಗಳಾಗಿ ಗುರುತಿಸಲ್ಪಟ್ಟಿದ್ದವು. ದಕ್ಷಿಣ ಏಷ್ಯಾದಲ್ಲಿ ಜನಪ್ರಿಯವಾಗಿದ್ದ ‘ಅರೇಬಿಕ್ ಎಂದರೆ ವಿಜ್ಞಾನ, ಪರ್ಷಿಯನ್ ಎಂದರೆ ಸಕ್ಕರೆ, ಹಿಂದಿ ಎಂದರೆ ಉಪ್ಪು, ಟರ್ಕಿಶ್ ಎಂದರೆ ಕಲೆ’ ಎಂಬ ಗಾದೆ ಈ ದೃಷ್ಟಿಕೋನವನ್ನು ದೃಢೀಕರಿಸುತ್ತದೆ. ಇದು ನಮ್ಮ ಬೌದ್ಧಿಕ ಕ್ಷೇತ್ರದ ವೈವಿಧ್ಯತೆಯನ್ನು ಸೂಚಿಸುತ್ತದೆ. ಅಂತಹಾ ವಿಶಾಲ ಸಾಂಸ್ಕೃತಿಕ ಕ್ಷೇತ್ರವು ಏಕರೂಪದ ಭಾಷೆಯನ್ನು ಹಂಚಿಕೊಂಡ ಕಾರಣ ಜನರು ದೂರದೂರಿಗೆ ಪ್ರಯಾಣ ಬೆಳೆಸಿದಾಗ ಸಾಮಾನ್ಯವಾಗಿ ಉಂಟಾಗುವ ಸಂವಹನ ತೊಡಕುಗಳು ಇಲ್ಲವಾಯಿತು. ದಕ್ಷಿಣ ಏಷ್ಯಾವು ಇರಾನಿನ ಕವಿಗಳು ಮತ್ತು ವಿದ್ವಾಂಸರನ್ನು ಆಕರ್ಷಿಸಿತ್ತು. ದಕ್ಷಿಣ ಏಷ್ಯಾದ ಶ್ರೀಮಂತ ರಾಜರು ಮತ್ತು ಪ್ರಬುದ್ಧ ರಾಜಕುಮಾರರು ಅವರ ಆಕರ್ಷಣೆಗೆ ಮುಖ್ಯ ಕಾರಣರಾಗಿದ್ದರು.

ಕ್ರಿ.ಶ. 1600ರ ವೇಳೆ ಮುಹಮ್ಮದಲಿ ಹ್ಯಾಬ್ಲೆರುಡಿ ಉತ್ತರ ಇರಾನಿನಿಂದ ಭಾರತಕ್ಕೆ ವಲಸೆ ಬಂದರು. ಅವರು ಹೈದರಾಬಾದಿನ ಕುತುಬ್‌ಶಾಹಿ ನ್ಯಾಯಾಲಯದಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ಕುತುಬ್ ಶಾಹಿ ಸುಲ್ತಾನರು ಪರ್ಷಿಯನ್ ಭಾಷೆ ಮಾತನಾಡುವ ವಿದ್ವಾಂಸರನ್ನು ತಮ್ಮ ಬಳಿ ಕರೆಸಿಕೊಂಡು ತಮ್ಮ ಆಡಳಿತ ವೈಭವವನ್ನು ವಿಶ್ಲೇಷಿಸುವ ಕೃತಿಗಳು ಮತ್ತು ಕವಿತೆಗಳನ್ನು ಬರೆಯಲು ನೇಮಿಸಿಕೊಂಡರು. ಆ ಪೈಕಿ ಪರ್ಷಿಯನ್, ಅರೇಬಿಕ್ ಮತ್ತು ಟರ್ಕಿಶ್ ಭಾಷೆಗಳಲ್ಲಿ ಹರಡಿರುವ ಪುರಾಣಗಳು ಮತ್ತು ಗಾದೆಗಳನ್ನು ಸಂಗ್ರಹಿಸಲು ಹ್ಯಾಬ್ಲೆರುಡಿಯನ್ನು ನಿಯೋಜಿಸಿದರು. ಅವರು ಹೈದರಾಬಾದಿನಲ್ಲಿ ಕೇಳಿದ ಅನೇಕ ಕಥೆಗಳನ್ನು ಸಂಗ್ರಹಿಸಿ ಪರ್ಷಿಯನ್ ಭಾಷೆಗೆ ಅನುವಾದಿಸಿದರು. ಈ ಎಲ್ಲಾ ಕಥೆಗಳನ್ನು ಕುತುಬ್ ಶಾಹಿಗಳನ್ನು ಉಲ್ಲೇಖಿಸಿ ಪ್ರಸ್ತುತಪಡಿಸುವ ಮೂಲಕ ಶತಮಾನಗಳ ಕಾಲ ಪರ್ಷಿಯನ್ ಜಗತ್ತಿನಲ್ಲಿ ಅವರ ಖ್ಯಾತಿಯನ್ನು ಹರಡಿಸಲಾಯಿತು. 1626 ರಿಂದ 1671ರವರೆಗೆ ಆಳಿದ ಅಬ್ದುಲ್ಲಾ ಕುತುಬ್‌ ಶಾಹಿ‌ಗಾಗಿ ಇದನ್ನು ರಚಿಸಿದ್ದೇನೆ ಎಂದು ಹ್ಯಾಬ್ಲೆರುಡಿ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಹೈದರಾಬಾದಿನಲ್ಲಿ ವಾಸಿಸುತ್ತಿದ್ದರೂ ಸುಮಾರು ಎರಡು ಸಾವಿರ ಮೈಲುಗಳಷ್ಟು ದೂರದಲ್ಲಿರುವ ಇಸ್ಫಹಾನಿನಲ್ಲಿ ನಡೆಯುತ್ತಿದ್ದ ಎಲ್ಲಾ ಹೊಸ ಬೆಳವಣಿಗೆಗಳ ಬಗ್ಗೆ ಅವರಿಗೆ ಸ್ಪಷ್ಟವಾದ ತಿಳುವಳಿಕೆ ಇತ್ತು. ಇದರಲ್ಲಿ ಪರ್ಷಿಯನ್ ಪ್ರಪಂಚವನ್ನು ಸಾಮ್ರಾಜ್ಯಶಾಹಿ ಮತ್ತು ಭೌಗೋಳಿಕ ಗಡಿಗಳಿಂದ ಹೇಗೆ ಜೋಡಿಸಲಾಗಿದೆ ಎಂಬುದನ್ನು ವಿವರಿಸುವ ಉದ್ದೇಶವಿತ್ತು. ಪರ್ಷಿಯನ್ ಕಾವ್ಯ, ಖುರ್‌ಆನ್ ಮತ್ತು ಹದೀಸಿನಲ್ಲಿರುವ ಘಟನೆಗಳ ಜೊತೆಗೆ ಈ ಪುಸ್ತಕವು ಕೆಲವೊಂದು ವಿಶೇಷ ಸಂದರ್ಭಗಳನ್ನು ಸೇರಿಸುವ ಮೂಲಕ ಸುಮಾರು ಎರಡು ಸಾವಿರದಷ್ಟು ಕಥೆಗಳನ್ನು ಒಳಗೊಂಡಿದೆ. ಆ ಪೈಕಿ ಮೂಕಪ್ರಾಣಿಗಳ ಸಂವಹನ ಹಾಗೂ ಆತ್ಮಗಳು, ಯಕ್ಷಯಕ್ಷಿಣಿಯರು ಮತ್ತು ದೇವತೆಗಳು ಪರಸ್ಪರ ಸಂವಹನ ನಡೆಸುವ ಮಾಂತ್ರಿಕ ಕತೆಗಳು ಒಳಗೊಂಡಿದೆ. ಹೆಚ್ಚಿನವು ಉತ್ತಮ ನೈತಿಕ ಕಥೆಗಳಾಗಿವೆ. ಉದಾಹರಣೆಗೆ, ಆನೆಯನ್ನು ಹೇಗೆ ಪಳಗಿಸುವುದು ಎಂದು ಲೆಕ್ಕಾಚಾರ ಮಾಡಲು ಪ್ರಯತ್ನಿಸುತ್ತಿರುವ ನೊಣಗಳ ಗುಂಪಿನ ಕಥೆಯನ್ನು ವಿವರಿಸಿದೆ. ಇನ್ನೊಂದು, ಓರ್ವ ಬ್ರಾಹ್ಮಣ ಮತ್ತು ಆತನ ಮುದ್ದಿನ ಮುಂಗುಸಿಯ ಕಥೆ. ಬ್ರಾಹ್ಮಣ ತನ್ನ ಮಗುವನ್ನು ರಕ್ಷಿಸಲು ಒಂದು ಮುಂಗುಸಿಯನ್ನು ಸಾಕಲು ಪ್ರಾರಂಭಿಸುತ್ತಾನೆ. ಮಗು ಕೊಲ್ಲಲ್ಪಟ್ಟಾಗ ಮುಂಗುಸಿಯೇ ಕಾರಣ ಎಂದು ಭಾವಿಸಿ ಅದನ್ನು ಸಾಯಿಸುತ್ತಾನೆ. ವಾಸ್ತವಾಂಶ ಮನವರಿಕೆಯಾದಾಗ ಕಾಲ ಮಿಂಚಿ ಹೋಗಿತ್ತು. ಕೋಪದ ಕೈಯಲ್ಲಿ ಬುದ್ಧಿ ಕೊಡಬೇಡಿ ಎಂಬ ನೀತಿಪಾಠವನ್ನು ಈ ಕಥೆ ಸಾರುತ್ತದೆ. ಜಾಮಿಉ ತಮ್ಸೀಲಿನ ಸಂಗ್ರಹಣೆಯ ಮೂಲಕ ಇಂತಹಾ ಕಥೆಗಳು ಭಾರತ ಮತ್ತು ಪರ್ಷಿಯನ್ ಜನರ ಮನೆಮಾತಾಯಿತು. ಹ್ಯಾಬ್ಲೆರುಡಿಯವರ ಈ ಕಥೆಗಳ ಸಂಗ್ರಹವು ಶತಮಾನಗಳ ಕಾಲ ವ್ಯಾಪಕವಾಗಿ ಓದಲ್ಪಟ್ಟ ಪರ್ಷಿಯನ್ ಕೃತಿಗಳ ಪೈಕಿ ಒಂದಾಗಿದೆ.

ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಪರ್ಷಿಯನ್ ಲಿಥೋಗ್ರಾಫ್ ಮುದ್ರಣದ ಲಭ್ಯತೆಯಿಂದ ಭಾರತದಲ್ಲಿ ಜಾಮಿಉ ತಮ್ಸೀಲಿನ ಸಾವಿರಾರು ಪ್ರತಿಗಳನ್ನು ಅಗ್ಗದ ಬೆಲೆಗೆ ಮುದ್ರಿಸಲು ಸಾಧ್ಯವಾಯಿತು. ಆ ಬೆಳವಣಿಗೆ ಹಿಂದೆಂದಿಗಿಂತಲೂ ವೇಗವಾಗಿ ಕೃತಿಯನ್ನು ಪ್ರಸಾರ ಮಾಡಲು ಕಾರಣವಾಯಿತು. ಇರಾನಿನಲ್ಲಿ ಇದರ ಮೊದಲ ಪ್ರತಿಗಳನ್ನು 1860ರ ವೇಳೆ ಮುದ್ರಿಸಲಾಯಿತು. ಇರಾನಿನ ಮುದ್ರಣಗಳು ಭಾರತೀಯ ಆವೃತ್ತಿಗಳಿಗಿಂತ ಭಿನ್ನವಾಗಿ, ಸಾಮಾನ್ಯವಾಗಿ ಮರದ ಕತ್ತರಿಸುವಿಕೆಯ ಚಿತ್ರಗಳನ್ನು ಒಳಗೊಂಡಿತ್ತು. ಮುಖ್ಯವಾಗಿ ಸಚಿತ್ರಕಾರ ಮಿರ್ಜಾ ಅಲಿ- ಖೋಲಿ ಖೋಯ್ ಅವರ ಚಿತ್ರಗಳಿಂದ ಪುಸ್ತಕವು ಗುರುತಿಸಲ್ಪಟ್ಟಿದೆ. ದಕ್ಷಿಣ ಏಷ್ಯಾದಲ್ಲಿನ ರಾಜಕೀಯ ಬೆಳವಣಿಗೆಗಳು ಪರ್ಷಿಯನ್ ಭಾಷೆಯ ಮೇಲೆ ಹೆಚ್ಚು ಪ್ರಭಾವ ಬೀರಿತು. ಬ್ರಿಟೀಷರ ವಸಾಹತು ಕಾಲದಲ್ಲಿ, ಪರ್ಷಿಯಾ ತನ್ನ ರಾಜಕೀಯ, ಸಾಂಸ್ಕೃತಿಕ ಮತ್ತು ಬೌದ್ಧಿಕ ಸ್ಥಾನಗಳನ್ನು ಕ್ರಮೇಣ ಕಳೆದುಕೊಂಡಿತು. ಆದಾಗ್ಯೂ, ಭಾರತೀಯರು ಪರ್ಷಿಯನ್ ಕಲಿಯುವುದನ್ನು ಮುಂದುವರೆಸಿದರು. ಆದರೆ, ಪರ್ಷಿಯನ್ನಿನ ವ್ಯಾಪಕ ಬಳಕೆ ಕ್ರಮೇಣ ಕ್ಷೀಣಿಸಿತು. ಇಂಡೋ- ಪರ್ಷಿಯನ್ ಕೃತಿಗಳ ವಿಶಾಲ ಗ್ರಂಥಾಲಯಗಳು ಓದುಗರಿಲ್ಲದೆ ಬಿಕೋ ಎನ್ನಲಾರಂಭಿಸಿತು. ಪರ್ಷಿಯನ್ ಭಾಷೆಯ ಅಂದಿನ ದುಸ್ಥಿತಿಯನ್ನು ಗುರುತಿಸುವ ಹಲವು ಗಾದೆಮಾತುಗಳು ಇಂದು ಉರ್ದು ಮತ್ತು ಪಂಜಾಬಿ ಭಾಷೆಯಲ್ಲಿ ಕಾಣಬಹುದು. ‘ಪರ್ಹೈನ್ ಫಾರ್ಸಿ, ಬೆಚೈನ್ ಡೆಯಿಲ್’ ಎಂಬುದು ಉರ್ದುವಿನಲ್ಲಿ ವ್ಯಾಪಕವಾಗಿರುವ ವ್ಯಂಗ್ಯ ಮಾತು. ಉನ್ನತ ಶಿಕ್ಷಣವನ್ನು ಹೊಂದಿರುವ ಆದರೆ ಅವರ ಅರ್ಹತೆಗಿಂತ ಕಡಿಮೆ ಕೆಲಸ ಮಾಡುವ ಪ್ರವೃತ್ತಿಯನ್ನು ಈ ಮಾತು ಸೂಚಿಸುತ್ತದೆ. ಇರಾನ್ ತೈಲವನ್ನು ರಫ್ತು ಮಾಡಲು ಪ್ರಾರಂಭಿಸಿದಾಗಿನಿಂದ ಈ ನುಡಿಗಟ್ಟು ವ್ಯಂಗ್ಯವಾಯಿತು. ಪರ್ಷಿಯನ್ ಭಾಷೆ ಇತರ ಹಲವು ದೇಶಗಳಲ್ಲಿ (ಅಫ್ಘಾನಿಸ್ತಾನ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಅಜೆರ್ಬೈಜಾನ್) ಬಳಸಲ್ಪಡುತ್ತಿದ್ದರೂ, ಐತಿಹಾಸಿಕವಾಗಿ ಇರಾನಿನ ರಾಜಕೀಯ ಸಂಬಂಧದೊಂದಿಗೆ ವ್ಯಾಪಕವಾಗಿ ಪರಿಗಣಿಸಲಾಗಿದೆ.

ಪರ್ಷಿಯನ್ ಕೇವಲ ಇರಾನಿನ ಆಡಳಿತ ಮಾಧ್ಯಮವಲ್ಲ. ಹೊರತಾಗಿ, ದಕ್ಷಿಣ, ಮಧ್ಯ ಮತ್ತು ಪಶ್ಚಿಮ ಏಷ್ಯಾದ ವೈವಿಧ್ಯಮಯ ಜನರನ್ನು ಸಂಪರ್ಕಿಸುವ ಮಾಧ್ಯಮ. ನಾನು ಟೆಹ್ರಾನಿನ ಪುರಾತನ ವಸ್ತುಗಳನ್ನು ಮಾರುವ ಪುಟ್ಟ ಅಂಗಡಿಯೊಂದರಲ್ಲಿ ಜಾಮಿಉ ತಮ್ಸೀಲಿನ ಪ್ರತಿಯನ್ನು ಮೊದಲ ಬಾರಿಗೆ ಕಂಡಿದ್ದೆ. ಅಫೀಮಿನ ವಾಸನೆಯು ಅಂಗಡಿಯನ್ನು ವ್ಯಾಪಿಸಿತ್ತು ಮತ್ತು ಆ ಅಂಗಡಿ ರತ್ನಗಂಬಳಿಗಳು, ಕರಕುಶಲ ವಸ್ತುಗಳು ಮತ್ತು ಸುಂದರ ಲೋಹದ ಕೆತ್ತನೆಯ ಫಲಕಗಳಿಂದ ತುಂಬಿತ್ತು. ಇದರ ಮಧ್ಯೆ ಆ ವ್ಯಾಪಾರಿ ತನ್ನ ಅಜ್ಜ ರಬ್ಬಿಯ ಭಾವಚಿತ್ರದ ಅಡಿಯಲ್ಲಿ ಚರ್ಮದಿಂದ ಸುತ್ತಲ್ಪಟ್ಟ ಹಲವಾರು ಪುಸ್ತಕಗಳನ್ನು ಜೋಡಿಸಿಟ್ಟಿದ್ದನು. ಆ ಪೈಕಿ ಮುಸ್ಲಿಮರು ಮತ್ತು ಯಹೂದಿಗಳ ಕೆಲವು ಧಾರ್ಮಿಕ ಪುಸ್ತಕಗಳು, ಮಂತ್ರಗಳ ಪುಸ್ತಕಗಳು ಮತ್ತು ವಿವಿಧ ವಿಶ್ವ ದೃಷ್ಟಿಕೋನಗಳ ಬಗ್ಗೆ ಮಾತನಾಡುವ ಲಿಥೋಗ್ರಾಫ್ ಗಳು ಒಳಗೊಂಡಿತ್ತು. ಆ ರಾಶಿಯ ನಡುವೆ ಹೈದರಾಬಾದಿನ ಜಾಮಿಉ ತಮ್ಸೀಲ್ ಎಂಬ ಕೃತಿಯು ದೊರೆಯಿತು. ಹ್ಯಾಬ್ಲೆರುಡಿ ಕಾಲದ ಪರ್ಷಿಯನ್ ‘ಕಾಸ್ಮೋಪಾಲಿಟನಿಸಂ’ ಇಂದು ಬಳಕೆಯಲ್ಲಿಲ್ಲ. ಅವು ವಸಾಹತುಶಾಹಿ ಗಡಿಗಳು ಮತ್ತು ಆಧುನಿಕ ರಾಷ್ಟ್ರ- ರಾಜ್ಯ ಪರಿಕಲ್ಪನೆಗಳಿಂದ ನಶಿಸಲ್ಪಟ್ಟಿದೆ. ಆದರೆ ಟೆಹರಾನಿನ ಆ ಪುಟ್ಟ ಅಂಗಡಿಯ ಕಪಾಟಿನಲ್ಲಿ ಪೇರಿಸಿಟ್ಟ ಪುಸ್ತಕಗಳ ಮೂಲಕ ಆ ಸಾಂಸ್ಕೃತಿಕ ಪರಂಪರೆಯ ಗತಕಾಲದ ವೈಭವದೆಡೆಗೆ ಮತ್ತೆ ಬೆಳಕು ಚೆಲ್ಲುವಂತಾಯಿತು.

ಮೂಲ: ಅಲೆಕ್ಸ್ ಶಾಮ್ಸ್
ಅನುವಾದ: ಮುಹಮ್ಮದ್ ಯಾಸೀನ್ ಮಟ್ಟಂ

ಶಿರವಸ್ತ್ರ : ಮಧ್ಯ ಕಾಲದ ಧಾರ್ಮಿಕ ಸಂಕೇತ

ಸಂಸ್ಕೃತಿ

ಇತಿಹಾಸದುದ್ದಕ್ಕೂ ಶಿರವಸ್ತ್ರವನ್ನು ಸುಲ್ತಾನರು ಮತ್ತು ವಿದ್ವಾಂಸರಿಂದ ಹಿಡಿದು ಯೋಧರು ಮತ್ತು ಸಾಮಾನ್ಯರವರೆಗೂ, ಮುಸ್ಲಿಂ ಪುರುಷರು ತಮ್ಮ ಸಂಪ್ರದಾಯ ಅಥವಾ ಶ್ರೇಣಿ, ಸಂಬಂಧ, ಸ್ಥಾನಮಾನ ಮತ್ತು ಘನತೆಯನ್ನು ಸೂಚಿಸಲು ಹಾಗೂ ಮುಸ್ಲಿಂ ಪುರುಷರನ್ನು ಮುಸ್ಲಿಮೇತರರಿಂದ ಪ್ರತ್ಯೇಕಿಸಲು ಸಹ ಧರಿಸುತ್ತಿದ್ದರು. ಇಂದು, ನಿಯಮಿತವಾಗಿ ತಲೆ ಉಡುಪುಗಳನ್ನು ಧರಿಸುವುದು ಸಾಮಾನ್ಯವಾಗಿ ಇಸ್ಲಾಮಿಕ್ ವಿದ್ವಾಂಸರಲ್ಲಿ ಕಂಡುಬರುತ್ತದೆ. ಸಣ್ಣ ಮಡಚಬಹುದಾದ ಕ್ಯಾಪ್ಗಳನ್ನು ಕೆಲವೊಮ್ಮೆ ಕೆಲವು ಮುಸ್ಲಿಂ ಪುರುಷರು ಕೂಡಾ ಪ್ರಾರ್ಥನೆ ಅಥವಾ ಇತರ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಾಗ ಧರಿಸುತ್ತಾರೆ.

 Illustration from a 13th century manuscript of Maqamat of al-Hariri by Yahyá al-Wasiti, Baghdad (1237).

ಶಿರವಸ್ತ್ರ

ಪ್ರವಾದಿ ಮುಹಮ್ಮದ್ (ಸ) ರವರು ಪೇಟವನ್ನು ಧರಿಸಿದ್ದು, ಅದರ ಬಾಲದ ತುದಿಯನ್ನು ತಮ್ಮ ಭುಜಗಳ ಮೇಲೆ ಇಳಿಬಿಡುತ್ತಿದ್ದರು ಎಂದು ವಿವರಿಸುವ ಹಲವಾರು ಹದೀಸ್ ದಾಖಲೆಗಳನ್ನು ಇಬ್ನ್ ಉಮರ್ ವರದಿ ಮಾಡಿದ್ದಾರೆ. ಹಿಜರಿ ಶಕೆ ಎಂಟರಲ್ಲಿ ಮಕ್ಕಾವನ್ನು ಪುನಃ ಸ್ವಾಧೀನಪಡಿಸಿ, ಪ್ರವಾದಿಯವರು ನಗರವನ್ನು ಪ್ರವೇಶಿಸಿದಾಗ ಕಪ್ಪು ಪೇಟವನ್ನು ಧರಿಸಿದ್ದರು ಮತ್ತು ಪ್ರವಾದಿ ಸಹಚರರು ಹಳದಿ ಪೇಟವನ್ನು ಧರಿಸಿದ್ದರು ಎಂದು ದಾಖಲೆಗಳು ತಿಳಿಸುತ್ತವೆ. ಬದ್ರ್ ಕದನದಲ್ಲಿ ಮುಸಲ್ಮಾನರ ನೆರವಿಗೆ ಬಂದ ದೇವದೂತರು ಜುಬೈರ್ ಇಬ್ನ್ ಅಲ್-ಅವ್ವಾಮರ(ರ) ಯುದ್ಧಭೂಮಿಯಲ್ಲಿನ ಶೌರ್ಯದ ಗೌರವಾರ್ಥವಾಗಿ ಚಿನ್ನದ ಬಣ್ಣದ ಪೇಟವನ್ನು ಧರಿಸಿದ್ದರು ಎಂದು ದಾಖಲಿಸಲಾಗಿದೆ. ಒಂದು ಹದೀಸ್‌ನಲ್ಲಿ, ಪ್ರವಾದಿ ಮುಹಮ್ಮದ್(ಸ) “ಪೇಟ ಅರಬ್ಬರ ಕಿರೀಟವಾಗಿದೆ” ಎಂದು ಹೇಳಿರುವುದಾಗಿ ವರದಿಯಾಗಿದೆ. ದುರ್ಬಲ ಎಂದು ಪರಿಗಣಿಸಲಾಗಿದ್ದರೂ, ಇಮಾಮ್ ಅಲ್-ಬೈಹಕಿ ಈ ಹದೀಸ್ ಅನ್ನು ಅವರ ಶುಅಬ್ ಅಲ್-ಇಮಾನ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದು ಇಸ್ಲಾಂ ಧರ್ಮದ ಸಂಕೇತ ಎಂಬ ನೆಲೆಯಲ್ಲಿ ಪೇಟಕ್ಕೆ ನೀಡಲಾದ ಪ್ರಾಮುಖ್ಯತೆಯನ್ನು ವಿವರಿಸುತ್ತದೆ. ಪ್ರವಾದಿ ﷺ ರ ಮರಣದ ನಂತರ, ಪೇಟವನ್ನು ಹೆಚ್ಚಾಗಿ ಪುರುಷರು -ವಿಶೇಷವಾಗಿ ವಿದ್ವಾಂಸ- ಧರಿಸುತ್ತಿದ್ದರು. ಇಮಾಮ್ ಮಾಲಿಕ್‌ರವರು ಕಲಿಯಲು ಹೊರಟಾಗ ಅವರ ತಾಯಿಯವರು ಅವರ ತಲೆಯ ಸುತ್ತ ಪೇಟವನ್ನು ಸುತ್ತುತ್ತಿದ್ದರು ಎಂದು ನೆನಪಿಸುತ್ತಾ “ಇಸ್ಲಾಮಿನ ಆರಂಭದಿಂದಲೂ ಪೇಟವನ್ನು ಧರಿಸಲಾಗುತ್ತಿದ್ದು ನಮ್ಮ ಕಾಲದವರೆಗೂ ಅದನ್ನು ವ್ಯಾಪಕವಾಗಿ ಜನರು ಧರಿಸುತ್ತಿದ್ದರು” ಎಂದು ಹೇಳಿದ್ದಾರೆ.

Portrait of Suleiman the Magnificent by Titian, c. 1530.

ಪ್ರಸ್ತುತ ವಿವಿಧ ರೀತಿಯ ಮತ್ತು ಶೈಲಿಗಳ ಪೇಟ ಧರಿಸಿದ ವಿದ್ವಾಂಸರನ್ನು ನಿರ್ದಿಷ್ಟ ಸಂಸ್ಥೆ, ಧಾರ್ಮಿಕ ಸ್ಥಾನ ಅಥವಾ ಆಧ್ಯಾತ್ಮಿಕ ಸಂಪ್ರದಾಯದೊಂದಿಗೆ ಥಳಕು ಹಾಕಿ ನೋಡಲು ಬಯಸುತ್ತಾರೆ. ಇಸ್ಲಾಮಿಕ್ ಅಧ್ಯಯನವನ್ನು ಪೂರ್ಣಗೊಳಿಸಿದ ಅಥವಾ ಧಾರ್ಮಿಕ ಬಾಧ್ಯತೆಯನ್ನು ಪೂರೈಸಿದ ವಿದ್ಯಾರ್ಥಿಗಳು ಗುರುಗಳಿಂದ ವಿಧ್ಯುಕ್ತವಾಗಿ ತಮ್ಮ ತಲೆಯ ಸುತ್ತಲೂ ಪೇಟವನ್ನು ಸುತ್ತಿಕೊಳ್ಳುವ ರೀತಿಯೂ ಮುಂದುವರಿಯುತ್ತಿದೆ. ಕೆಂಪು ಬಣ್ಣದ ಟೋಪಿ ಧರಿಸಿ ಅದರ ಮೇಲೆ ಸುತ್ತುವ ಕಿರಿದಾದ ಪೇಟವು ಅಲ್-ಅಝ್ಹರ್ ವಿಶ್ವವಿದ್ಯಾಲಯದ ಪದವೀಧರರನ್ನು ಸೂಚಿಸುತ್ತದೆ. ಯೆಮೆನಿನ ದಾರುಲ್-ಮುಸ್ತಫಾ, ದಾರುಲ್ ಉಲೂಮ್ ವಿದ್ಯಾರ್ಥಿಗಳನ್ನು ಅವರು ಧರಿಸುವ ಪೇಟದ ಶೈಲಿಯಿಂದ ಗುರುತಿಸಬಹುದು. ಟರ್ಕಿ ಮತ್ತು ಬಾಲ್ಕನ್‌ನಲ್ಲಿ ಅಗಲವಾದ ಬಿಳಿ ಪೇಟವನ್ನು ಹೊಂದಿರುವ ದಪ್ಪದ ಕೆಂಪು ಟೋಪಿಯನ್ನು ಅಲ್ಲಿನ ಸರ್ಕಾರ ನೇಮಿಸಿದ ಇಮಾಮರುಗಳು ಮತ್ತು ಖತೀಬರುಗಳು ಧರಿಸುತ್ತಾರೆ. ಒಂದು ವ್ಯಕ್ತಿಯ ರಾಜಕೀಯ ನಿಲುವುಗಳನ್ನು ಗುರುತಿಸಲು ಪೇಟಗಳು ಮತ್ತು ಶಿರವಸ್ತ್ರಗಳು ಸುಲಭವಾದ ಮಾರ್ಗಗಳಾಗಿದ್ದವು. ಅಬ್ಬಾಸಿಯ್ಯಾ ಅವಧಿಯಲ್ಲಿ (750 – 1258) ಖಲೀಫರು ಮತ್ತು ನ್ಯಾಯಾಲಯದ ಅಧಿಕಾರಿಗಳು ಹಾಗೂ ವಿದ್ವಾಂಸರು ಮತ್ತು ಖತೀಬರುಗಳು ಕಪ್ಪು ಪೇಟಗಳನ್ನು ಮತ್ತು ಬಟ್ಟೆಗಳನ್ನು ಧರಿಸುವ ಪದ್ಧತಿ ರೂಢಿಯಲ್ಲಿತ್ತು. ಉತ್ತರ ಆಫ್ರಿಕಾ ಮತ್ತು ಸ್ಪೈನ್ ಬರ್ಬರ್ ಅಥವಾ ಅಮಾಝಿಗ್ ಆಳ್ವಿಕೆಯಲ್ಲಿ, ಮುರಾಬಿತುನ್ ಪುರುಷರಿಗಾಗಿ ಲಿಥಮ್ (ಮುಸುಕು) ಧರಿಸುವಿಕೆ ಪದ್ಧತಿ ಜಾರಿಗೆ ತರಲಾಗಿತ್ತು. ಆದಾಗ್ಯೂ, ಮುವಹಿದುನ್ ಆಳ್ವಿಕೆಯಲ್ಲಿ ಲಿಥಮ್ ಧರಿಸುವುದನ್ನು ನಿಷೇಧಿಸಲಾಯಿತು ಹಾಗೂ ದಕ್ಷಿಣ ಮೊರಾಕೊದಲ್ಲಿ ಬಾರ್ಬರ್ ಶೈಲಿಯ ಪೇಟವನ್ನು ಮಾತ್ರ ಜನಪ್ರಿಯಗೊಳಿಸಲಾಯಿತು.

Member of the Mevlevi Order, 1809, anonymous painter.

ಶಿರವಸ್ತ್ರ ಧಾರ್ಮಿಕ ಸಂಕೇತ

ಮಮ್ಲುಕ್ ಮತ್ತು ಒಟ್ಟೋಮನ್ ಅವಧಿಯಲ್ಲಿ ಶಿರವಸ್ತ್ರ, ಅದರ ಗಾತ್ರ, ಸುತ್ತುವ ಶೈಲಿ ಮತ್ತು ಅದರ ಬಣ್ಣ ಜನರ ಉದ್ಯೋಗ ಹಾಗೂ ಶ್ರೇಣಿಗಳ ಸೂಚಕಗಳಾಗಿ ಮಾರ್ಪಟ್ಟಿದ್ದವು. ಇದರಿಂದ ಬೇರೆ ಬೇರೆ ಧಾರ್ಮಿಕ ಸಮುದಾಯಗಳನ್ನು ಗುರುತಿಸಲು ಸಹಾಯ ಮಾಡುತ್ತಿತ್ತು. ಮುಸ್ಲಿಮರು ಬಿಳಿ ಶಿರವಸ್ತ್ರವನ್ನು ಧರಿಸಿದ್ದರೆ, ಯಹೂದಿಗಳು ಹಸಿರು, ಝೋರೊಸ್ಟ್ರಿಯನ್ನರು ಕಪ್ಪು ಮತ್ತು ಕ್ರಿಶ್ಚಿಯನ್ನರು ನೀಲಿ ಬಣ್ಣವನ್ನು ಧರಿಸುತ್ತಿದ್ದರು.

Kullīyāt of Saʿdī, dated 1624
Hejazi ‘Alim, late Ottoman period, 1873.

12 ನೇ ಮತ್ತು 13 ನೇ ಶತಮಾನಗಳಲ್ಲಿ ಸೂಫಿಸಂನ ವ್ಯಾಪಕ ಸ್ವೀಕಾರದೊಂದಿಗೆ, ವಿವಿಧ ಆಧ್ಯಾತ್ಮಿಕ ತ್ವರೀಖಗಳನ್ನು ಗುರುತಿಸುವಲ್ಲಿಯೂ ಶಿರವಸ್ತ್ರಗಳು ಪ್ರಮುಖ ಪಾತ್ರ ವಹಿಸಿವೆ. ಮವ್ಲವಿಯ್ಯಾ, ನಕ್ಷಬಂದಿಯ್ಯಾ, ಹಕ್ಕಾನಿಯ್ಯಾ ಸಂತರು ವೈವಿಧ್ಯಮಯ ರೀತಿಯ ಪೇಟಗಳನ್ನು ಧರಿಸುವ ಮೂಲಕ ಜನರ ಮಧ್ಯೆ ಪ್ರಸಿದ್ಧಿಯನ್ನು ಪಡೆದರು. ಹಸಿರು ಪೇಟಗಳು ಒಟ್ಟೋಮನ್ ಅವಧಿಯವರೆಗೆ ಅಶ್ರಫ್ ಅಥವಾ ಅಹ್ಲ್ ಬೈತಿನ ಸಂಕೇತವಾಗಿತ್ತು. ವಿವಿಧ ಬುಡಕಟ್ಟುಗಳು, ಕುಲಗಳು ಮತ್ತು ಜನಾಂಗೀಯ ಗುಂಪುಗಳನ್ನು ಗುರುತಿಸುವಲ್ಲಿಯೂ ಶಿರವಸ್ತ್ರಗಳು ಪ್ರಮುಖ ಎನಿಸಿವೆ. ಮಧ್ಯ ಏಷ್ಯಾದ ಮಧ್ಯಯುಗೀನ ಇತಿಹಾಸ ನೋಡಿದರೆ ತುರ್ಕಿ ಅಲೆಮಾರಿಗಳು ‘ಉಯ್ಘರ್ ಡೊಪ್ಪಾ, ಕಿರ್ಗಿಜ್‌ನಲ್ಲಿ ಎತ್ತರದ ಅಂಚುಳ್ಳ ಅಕ್-ಕಲ್ಪಕ್‌ ಮತ್ತು ಸಲ್ಜೂಕಿ ಮಿಲಿಟರಿ ಅಧಿಕಾರಿಗಳು ಐತಿಹಾಸಿಕ ತುಪ್ಪಳ-ರೇಖೆಯ ‘ಶಾರ್ಬುಷ್‌’ ಟೋಪಿಗಳನ್ನು ಮಧ್ಯಯುಗದಲ್ಲಿ ಬಳಸುತ್ತಿದ್ದದ್ದು ಕಾಣಬಹುದು. ಅಂತೆಯೇ, ಅಫ್ಘಾನಿಸ್ತಾನ ಮತ್ತು ವಾಯುವ್ಯ ಪಾಕಿಸ್ತಾನದಾದ್ಯಂತ ಉಣ್ಣೆಯ ಟೋಪಿ ಮತ್ತು ಪೂರ್ವ ಆಫ್ರಿಕಾ ಮತ್ತು ಒಮಾನ್‌ನಲ್ಲಿ ವರ್ಣರಂಜಿತ ‘ಕುಮಾ’ ವನ್ನು ಪುರುಷರು ಧರಿಸುತ್ತಾರೆ,

ಆಧುನಿಕ ಯುಗದಲ್ಲಿ

19ನೇ ಶತಮಾನದ ಪ್ರಾರಂಭದ ಒಟ್ಟೋಮನ್ ಪ್ರಾಂತ್ಯಗಳ ವಿನಾಶಕಾರಿ ಸೋಲುಗಳ ಬಳಿಕ ರಾಷ್ಟ್ರವನ್ನು ಆಧುನೀಕರಿಸುವ ಪ್ರಯತ್ನಗಳ ಭಾಗವಾಗಿ 1826ರಲ್ಲಿ ಸುಲ್ತಾನ್ ಮಹಮೂದ್ II (1839) ಕೆಂಪು ಫೆಜ್ ಅಥವಾ ಟಾರ್ಬುಷ್ ಟೋಪಿಯನ್ನು ಪರಿಚಯಿಸಿದರು. ಇದು ಒಟ್ಟೋಮನ್ ಸಮಾಜವನ್ನು ಏಕರೂಪಗೊಳಿಸುವ ಮತ್ತು ಅಷ್ಟರವರೆಗೆ ಚಾಲ್ತಿಯಲ್ಲಿದ್ದ ವಸ್ತ್ರಸಂಹಿತೆಯನ್ನು ಬದಲಿಸುವ ಇರಾದೆಯನ್ನು ಹೊಂದಿತ್ತು. ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳಿಗೆ ಇದ್ದ ವ್ಯತ್ಯಸ್ತ ಬಟ್ಟೆಗಳು ಮತ್ತು ಶಿರವಸ್ತ್ರಗಳು ಹಾಗೆ ಕೊನೆಗೊಂಡವು.

Fez makers, Morocco, 1936.

1860 ಮತ್ತು 70ರ ದಶಕದಲ್ಲಿ, ಬಾಲ್ಕನ್‌ನಿಂದ ಪೂರ್ವ ಆಫ್ರಿಕಾ ವರೆಗೆ ಮತ್ತು ಮೊರಾಕೊದಿಂದ ಭಾರತದವರೆಗೆ ಫೆಜ್ ಟೋಪಿ ಮುಸ್ಲಿಮರ ಅಂಗೀಕೃತ ತಲೆಯುಡುಪು ಎನಿಸಿಕೊಂಡಿತು. 19ನೇ ಶತಮಾನದಲ್ಲಿ ಆಫ್ರಿಕಾದ ಬಹುತೇಕ ಭಾಗಗಳು ಯುರೋಪಿಯನ್ ವಸಾಹತುಶಾಹಿ ಶಕ್ತಿಗಳಿಗೆ ಅಧೀನಕ್ಕೊಳಪಟ್ಟಾಗ ಕೆಂಪು ಫೆಜ್ ಟೋಪಿಯನ್ನು ವಸಾಹತುಶಾಹಿ ಏಜೆಂಟ್‌ಗಳು, ಅಧಿಕಾರಿಗಳು ಮತ್ತು ಸ್ಥಳೀಯ ಸೈನಿಕರು ಸಾಮಾನ್ಯವಾಗಿ ಧರಿಸಲಾರಂಭಿಸಿದರು.

Two men wearing Fez. Image Noomen9 via Wiki Commons.

ವಸಾಹತುಶಾಹಿಯ ಈ ಅವಧಿಯಲ್ಲಿ ಪೂರ್ವದ ಬಗೆಗಿನ ಯುರೋಪಿನ ಆಕರ್ಷಣೆಯಿಂದಾಗಿ ಒಂದು ವಿಶಿಷ್ಟವಾದ ಸಾಂಸ್ಕೃತಿಕ ವಿನಿಮಯ ನಡೆಯಿತು. ಹಾಗೆ, ಮುಸ್ಲಿಮರ ತಲೆ ಉಡುಪು ಯುರೋಪಿಯನ್ ಫ್ಯಾಶನ್‌ ಜಗತ್ತನ್ನು ಪ್ರವೇಶಿಸಿತು. ಪ್ರಥಮ ಮಹಾಯುದ್ಧದ ವೇಳೆ ಒಟ್ಟೋಮನ್‌ ಸೋಲು ಮತ್ತು ಹೊಸ ಟರ್ಕಿಶ್ ಗಣರಾಜ್ಯದ ರಚನೆಯ ನಂತರ 1925ರಲ್ಲಿ ಹೊಸ ಟೋಪಿ ಸಂಹಿತೆಯನ್ನು ಜಾರಿಗೆ ತರಲಾಯಿತು.

/../Palestinian man wearing a keffiyeh. Image via Hirbawi

ಅದರೊಂದಿಗೆ ಫೆಜ್ ಮತ್ತು ಪೇಟವನ್ನು ನಿಷೇಧ ಹೇರಿ ಪಾಶ್ಚಿಮಾತ್ಯ ಶೈಲಿಯ ಟೋಪಿಗಳನ್ನು ಧರಿಸುವುದನ್ನು ಉತ್ತೇಜಿಸಲಾಯಿತು. ಇಂದು ಪ್ಯಾಲಿಸ್ತೀನಿಯನ್ ‘ಕೆಫಿಯೆಹ್’ ತಲೆಯುಡುಪನ್ನು ಪುರುಷರು ಮತ್ತು ಮಹಿಳೆಯರು, ಮುಸ್ಲಿಂ ಮತ್ತು ಮುಸ್ಲಿಮೇತರರು ಧರಿಸುತ್ತಾರೆ. ಇದು ಸ್ವಾತಂತ್ರ್ಯ ಹಾಗೂ ಪ್ಯಾಲೆಸ್ಟೈನ್‌ ಪರ ಹೋರಾಟದ ಸಾರ್ವತ್ರಿಕ ಗುರುತಾಗಿ ಬಳಸಲಾಗುತ್ತಿದೆ.

ಇಂಗ್ಲೀಷ್: ಅಬೂ ಅಯ್ಯೂಬ್
ಕನ್ನಡಕ್ಕೆ : ತಂಶೀರ್ ಮುಈನೀ ಉಳ್ಳಾಲ್

ಇಸ್ಲಾಮಿಕ್ ದತ್ತಿ ಸೇವೆಗಳು: ಪ್ರವಾದೀ ಕಾಲದಿಂದ ಇಪ್ಪತ್ತನೇ ಶತಮಾನದವರೆಗೆ

ಇಸ್ಲಾಮಿಕ್ ದತ್ತಿ ಚಟುವಟಿಕೆಗಳ ಪ್ರಾಥಮಿಕ ಘಟ್ಟವು ಐತಿಹಾಸಿಕ ಹಿಜ್ರಾದ ಬಳಿಕ ಆರಂಭಗೊಂಡು ಅಬ್ಬಾಸಿಯ್ಯಾ ಆಡಳಿತಾವಧಿಯ ಆರಂಭಿಕ ವೇಳೆಯಲ್ಲಿ ಕೊನೆಗೊಳ್ಳುತ್ತದೆ. ಈ ಸಮಾಜಮುಖಿ ಸಂಸ್ಥೆಗಳು ಖುರ್ಆನ್ ಮತ್ತು ಪ್ರವಾದಿ ವಚನಗಳ ಆಧಾರದ ಮೇಲೆ ರೂಪುಪಡೆಯಿತು.

ಇಸ್ಲಾಮಿಕ್ ಇತಿಹಾಸದಲ್ಲಿ ವಕ್ಫ್ ವ್ಯವಸ್ಥೆಯು ಸಾಮಾನ್ಯ ಮುಸಲ್ಮಾನರ ಜೀವನದೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಹೊರತಾಗಿಯೂ, ವಕ್ಫ್ ಎಂಬ ಪರಿಕಲ್ಪನೆಯು ಖುರ್‌ಆನ್ ಮತ್ತು ಹದೀಸ್ ದಾಖಲೆಗಳಲ್ಲಿ ಎಲ್ಲಿಯೂ ಉಲ್ಲೇಖಿಸಲ್ಪಟ್ಟಿಲ್ಲ ಎನ್ನುವುದು ಆಶ್ಚರ್ಯಕರ ಸಂಗತಿ. ಮೂರನೆಯ ಶತಮಾನದ ಮಧ್ಯಭಾಗದಲ್ಲಿ ಕೆಲವು ಸಮಾಜಮುಖಿ ಚಟುವಟಿಕೆಗಳನ್ನು ವಕ್ಫ್ ಎಂಬ ಹೆಸರಿನಲ್ಲಿ ಸಮುದಾಯವು ವ್ಯಾಪಕವಾಗಿ ಬಳಸಲು ಪ್ರಾರಂಭಿಸಿತು. ಕೆಲವು ಖುರ್‌ಆನ್ ವ್ಯಾಖ್ಯಾನಕಾರರು ಖುರ್‌ಆನ್ ಪದಪ್ರಯೋಗಗಳ ಒಳಾರ್ಥಗಳಲ್ಲಿ ವಕ್ಫ್ ಅನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ.

“ನೀವು ಕಾಳಜಿವಹಿಸುವ ಸಂಪತ್ತಿನಲ್ಲಿ ನೀವು ಖರ್ಚು ಮಾಡದ ಹೊರತು ಯಾರೂ ಸಂಪೂರ್ಣವಾಗಿ ಧರ್ಮನಿಷ್ಠರಾಗುವುದಿಲ್ಲ” ಎಂಬ ಪೈಗಂಬರರ ಪ್ರವಚನವನ್ನು ಆಲಿಸಿದ ನಂತರ ಅವರ ಅನುಚರರ ಪೈಕಿ ಪ್ರಮುಖರಾಗಿದ್ದ ಅಬೂತಲ್ಹಾರವರು ತಾನು ಅತ್ಯಂತ ಪ್ರೀತಿಯಿಂದ ಪೋಷಿಸುತ್ತಿದ್ದ ಮದೀನಾದ ವಿಶಾಲ ಖರ್ಜೂರದ ತೋಟವನ್ನು ಬಡವರಿಗೆ ದಾನ ಮಾಡಿದರು. ಆರುನೂರಕ್ಕೂ ಹೆಚ್ಚು ಮರಗಳು ದಟ್ಟವಾಗಿ ಬೆಳೆದು ಉತ್ತಮ ಫಸಲು ನೀಡುತ್ತಿದ್ದ ತೋಟವನ್ನು ದಾನ ಮಾಡುವ ಮೂಲಕ ಅವರ ಆತ್ಯಂತಿಕ ಗುರಿ ನೈಜಭಕ್ತಿ ಮತ್ತು ಪರಲೋಕ ಯಶಸ್ಸು ಎಂಬುದನ್ನು ದೃಢೀಕರಿಸಿದರು. ಈ ಪುಣ್ಯ ಕಾರ್ಯವನ್ನು ಮಾಡಿ ಮನೆತಲುಪಿದಾಗ ತಾನು ಈಗಷ್ಟೇ ದಾನ ಮಾಡಿ ಬಂದ ತೋಟದಲ್ಲಿ ತನ್ನ ಹೆಂಡತಿ ಮತ್ತು ಮಗು ವಿಶ್ರಾಂತಿ ಪಡೆಯುತ್ತಿರುವುದನ್ನು ಕಂಡರು. ತಕ್ಷಣ ಅಬೂತಲ್ಹಾ ನಡೆದ ವಿಷಯವನ್ನು ವಿವರಿಸಿದರು. ತೋಟವನ್ನು ಯಾರ ಹೆಸರಿನಲ್ಲಿ ದಾನ ನೀಡಿದಿರಿ ಎಂಬ ಪತ್ನಿಯ ಪ್ರಶ್ನೆಗೆ ‘ನಮ್ಮ ಹೆಸರಿನಲ್ಲಿ’ ಎಂದು ಅಬೂತಲ್ಹಾ ಉತ್ತರಿಸಿದರು. ನಮ್ಮ ಮಧ್ಯೆ ಇರುವ ಬಡವರಿಗೆ ನಾವೇನು ಮಾಡಬಲ್ಲೆವು ಎಂದು ನಾನು ಸದಾ ಚಿಂತಿತಳಾಗಿದ್ದೆ. ಅಲ್ಲಾಹನು ನಿಮ್ಮ ಈ ಸತ್ಕರ್ಮವನ್ನು ಸ್ವೀಕರಿಸಲಿ ಎಂದು ಹಾರೈಸುತ್ತಾ ಆ ದಂಪತಿಗಳು ತೋಟದಿಂದ ಹೊರ ನಡೆದರು.

ಇತಿಹಾಸಕಾರರು ಈ ಐತಿಹಾಸಿಕ ಘಟನೆಯನ್ನು ಉಲ್ಲೇಖಿಸುತ್ತಾ ಇದು ಇಸ್ಲಾಮಿಕ್ ಇತಿಹಾಸದಲ್ಲಿ ನಡೆದ ಮೊದಲ ವಕ್ಫ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರವಾದಿವರ್ಯರ ಚರ್ಯೆಗಳನ್ನು ಗಮನಿಸಿದಾಗ ನಮಗೆ ವಕ್ಫ್ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗುತ್ತದೆ. ಇಹಲೋಕದಲ್ಲಿ ಮೂರು ವಿಚಾರಗಳನ್ನು ಬಾಕಿಯುಳಿಸಿ ಪೈಗಂಬರರು ಪರಲೋಕ ಯಾತ್ರೆಯಾದರು. ಹೇಸರಗತ್ತೆ, ಆಯುಧ ಮತ್ತು ದತ್ತಿ ಸೇವೆಗಳಿಗಾಗಿ ಮೀಸಲಿಟ್ಟ ಭೂಮಿ. ಪ್ರವಾದಿವರ್ಯರು ಇಸ್ಲಾಮಿಕ್ ದತ್ತಿ ಚಟುವಟಿಕೆಗಳ ವಿಧಾನಗಳನ್ನು ಉಮರ್ ಬಿನ್ ಖತ್ತಾಬರಿಗೆ ಕಲಿಸಿಕೊಟ್ಟರು. ತದನಂತರ ಪ್ರವಾದೀ ಅನುಚರರು ಪ್ರಸ್ತುತ ಕಲಿಸಿಕೊಟ್ಟ ವಿಧಾನದ ಆಧಾರದಲ್ಲಿ ವಕ್ಫ್ ಕರ್ಮವನ್ನು ಮಾದರಿಯಾಗಿಟ್ಟುಕೊಂಡರು. ಇಮಾಮ್ ಮಾಲಿಕ್ ಪೈಗಂಬರರ ಈ ಬೋಧನೆಯನ್ನು ‘ಅಹ್ಬಾಸ್’ ಎಂದು ಪರಿಚಯಿಸುತ್ತಾರೆ. ಉಮರ್ ಬಿನ್ ಖತ್ತಾಬರು ಪ್ರವಾದೀ ಸನ್ನಿಧಿಗೆ ಬಂದು ಕೇಳಿದರು; “ನನಗೆ ಖೈಬರ್‌ನಲ್ಲಿ ಒಂದಿಷ್ಟು ಭೂಮಿ ಇದೆ. ಅದು ನನಗೆ ಅತ್ಯಂತ ಪ್ರಿಯವಾದ ಭೂಮಿ. ಓ ಪ್ರವಾದಿಯರೇ, ನೀವು ನನಗೆ ನಿರ್ದೇಶಿಸಿರಿ, ನಾನು ಏನು ಮಾಡಬೇಕೆಂದು.”

“ನೀವು ಬಯಸಿದರೆ, ಅದರ ಬಂಡವಾಳವನ್ನು ಹೊರತುಪಡಿಸಿ ಲಾಭವನ್ನು ಸಾಮಾಜಿಕ ಕಲ್ಯಾಣ ಚಟುವಟಿಕೆಗಳಿಗಾಗಿ ವಿತರಣೆ ಮಾಡಿರಿ” ಪೈಗಂಬರರು ಪ್ರತ್ಯುತ್ತರಿಸಿದರು. ಬಳಿಕ ಉಮರ್ ರವರು ಖೈಬರ್ ಭೂಮಿಯಿಂದ ಪಡೆದ ಆದಾಯವನ್ನು ಬಡವರು, ಸಂಬಂಧಿಕರು, ಪ್ರಯಾಣಿಕರು, ಅತಿಥಿಗಳು, ಗುಲಾಮರ ವಿಮೋಚನೆ ಮತ್ತು ಮಿಲಿಟರಿ ಕಲ್ಯಾಣಕ್ಕಾಗಿ ವಿನಿಯೋಗಿಸಲಾರಂಭಿಸಿದರು ಎಂದು ಇಬ್ನ್ ಉಮರ್ ಉಲ್ಲೇಖಿಸಿದ್ದಾಗಿ ಕಾಣಬಹುದು.

ಈ ಮೇಲೆ ಉಲ್ಲೇಖಿಸಿದ ಐತಿಹಾಸಿಕ ಘಟನೆಗಳು ಪ್ರವಾದೀ ಅನುಚರರು ವಕ್ಫ್‌ನೊಂದಿಗೆ ಯಾವ ರೀತಿ ಸಂಬಂಧ ಹೊಂದಿದ್ದರು ಎಂಬುದನ್ನು ವಿವರಿಸುತ್ತದೆ. ತಮಗೆ ಅತ್ಯಂತ ಪ್ರಿಯವಾದ ಸಂಪತ್ತುಗಳಾಗಿದ್ದರೂ ಅವರು ಅದನ್ನು ದಾನ ಮಾಡಲು ತೋರಿದ ಉತ್ಸಾಹ ಖುರ್‌ಆನ್ ಮತ್ತು ಪ್ರವಾದೀ ವಚನಗಳು ಅವರ ಜೀವನವನ್ನು ಎಷ್ಟರ ಮಟ್ಟಿಗೆ ಸ್ವಾಧೀನಪಡಿಸಿದೆ ಎಂಬುವುದಕ್ಕಿರುವ ಉತ್ತಮ ನಿದರ್ಶನ.

ಇಲ್ಲಿ ಉಮರರಿಗೆ ಪೈಗಂಬರರು ನೀಡಿದ ಆಜ್ಞೆಯು, ನಮ್ಮ ಆಸ್ತಿಯು ಸಂಪೂರ್ಣವಾಗಿ ವಾರೀಸುದಾರರಿಗೆ ತಲುಪಿಸಲಿರುವ ಅಥವಾ ಮಾರಾಟ ಮಾಡುಲಿಕ್ಕಿರುವ ವಸ್ತುವಲ್ಲ ಬದಲಾಗಿ, ಅದು ನಮ್ಮ ಸುತ್ತಲು ವಾಸಿಸುತ್ತಿರುವ ಜನರಿಗೂ ಸೇರಿದ್ದಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇಸ್ಲಾಮಿಕ್ ಮಾನವಸೇವಾ ಪ್ರಕ್ರಿಯೆಗಳ ಎರಡು ಪ್ರಮುಖ ಅಂಶಗಳನ್ನು ಈ ಹದೀಸಿನಲ್ಲಿ ಉಲ್ಲೇಖಿಸಿದ ಘಟನೆ ಒತ್ತಿಹೇಳುತ್ತದೆ. ಬಂಡವಾಳವನ್ನು ತೆಗೆದಿಟ್ಟು ಆದಾಯವನ್ನು ಬಡವರ ಮಧ್ಯೆ ಹಂಚುವುದಾಗಿದೆ ಒಂದನೇ ದೃಷ್ಟಿಕೋನ. ವಕ್ಫ್ ಕರ್ಮದ ಸ್ವರೂಪಕ್ಕೆ ಸಂಬಂಧಿಸಿದ್ದಾಗಿದೆ ಮತ್ತೊಂದು. ಕಾನೂನಾತ್ಮಕವಾಗಿ ಮತ್ತು ವ್ಯಾವಹಾರಿಕವಾಗಿ ವ್ಯಾಪಾರ ಸರಕಿನಿಂದ ಮುಕ್ತವಾಗಿರುವುದು, ಪರೋಪಕಾರ ಸೇವೆಗಳಿಗೆ ಮಾತ್ರ ನಿಶ್ಚಯಿಸಲ್ಪಡುವುದು ಮುಂತಾದವುಗಳು ಗಮನಿಸಬೇಕಾದ ವಿಷಯಗಳು.

ಉಮರ್ ತನ್ನ ಮಗಳು ಹಫ್ಸಾಳನ್ನು ಕಾವಲುಗಾರಳನ್ನಾಗಿ ನೇಮಿಸಿದ್ದು ಒಂದು ಉದಾಹರಣೆಯಾಗಿದೆ. ಭಿಕ್ಷುಕರು, ನಿರ್ಗತಿಕರು ಮತ್ತು ಬಡ ಸಂಬಂಧಿಕರ ರಕ್ಷಣೆಯನ್ನು ವಹಿಸಿಕೊಂಡವರು ಇಳುವರಿಯನ್ನು ಅವರಿಗಾಗಿ ಖರ್ಚು ಮಾಡಬೇಕು. ಇಲ್ಲಿ ಸಂರಕ್ಷಕನ ಕೆಲಸಕ್ಕಿರುವ ವೇತನವನ್ನು ವಕ್ಫ್ ಮಾಡುವವರು ಪಾವತಿಸುವರು. ಇಲ್ಲದಿದ್ದರೆ, ಸಂರಕ್ಷಕನು ಆಡಳಿತಾಧಿಕಾರಿಯನ್ನು ಸಂಪರ್ಕಿಸಲು ಅವಕಾಶಗಳಿವೆ.

ಸಮಾಜಮುಖಿ ಚಳುವಳಿಗಳ ಆರಂಭಿಕ ಹಂತದ ನಂತರ ಮಸೀದಿ, ಗ್ರಂಥಾಲಯಗಳು ಸೇರಿ ಮದರಸಾಗಳು ಮತ್ತು ಅರೇಬಿಕ್ ಕಾಲೇಜುಗಳ ಹೆಸರಿನಲ್ಲಿ ವಕ್ಫ್ ಅಭಿವೃದ್ಧಿ ಹೊಂದಿತು. ಬೈತುಲ್-ಹಿಕ್ಮಾದ ನಂತರ, ಈ ಹಂತದ ವಕ್ಫ್ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಫಾತಿಮೀ ಖಲೀಫ ಅಲ್ – ಮುಯಿಸ್ ಕೈರೋ ಪಟ್ಟಣದಲ್ಲಿ ನಿರ್ಮಿಸಿದ ಅಲ್ – ಅಝ್ಹರ್ ಮಸೀದಿ ಮತ್ತು ಮದ್ರಸಾ (969/1562) ಒಳಪಟ್ಟಿದೆ. ಪ್ರವಾದೀ ಕುಟುಂಬಿಕರಾದ ಫಾತಿಮಾ ಅಲ್ – ಫಿಹ್ರಿಯಾ ಎಂಬ ಓರ್ವ ಮಹಿಳೆಯ ನೇತೃತ್ವದಲ್ಲಿ ನಿರ್ಮಿಸಲಾದ ಮೊರೊಕ್ಕೊದ ಫೆಝ್ ನಗರದಲ್ಲಿರುವ ಅಲ್-ಕರವಿಯ್ಯಿನ್ ವಿಶ್ವವಿದ್ಯಾನಿಲಯ ಮತ್ತು ಮಸೀದಿ (859/1455), ಅವರ ಸಹೋದರಿ ಮರಿಯಂ ಅಲ್-ಫಿಹ್ರಿಯಾ ನಿರ್ಮಿಸಿದ ಅಂದಲೂಸ್ ಮಸೀದಿ, ಬಗ್ದಾದಿನಲ್ಲಿ ನಿಜಾಮ್ ಅಲ್-ಮುಲ್ಕ್ ನೇತೃತ್ವದಲ್ಲಿ ಸ್ಥಾಪಿಸಲಾದ ನಿಝಾಮಿಯ್ಯಾ ಮದರಸ (1065/1654) ಮುಂತಾದವುಗಳು ವಕ್ಫ್ ಜಮೀನಿನ ಜಾಗತಿಕ ಕೊಡುಗೆಗಳಾಗಿವೆ.

ಇಂತಹಾ ಧಾರ್ಮಿಕ ಕೇಂದ್ರಗಳು ಮುಸ್ಲಿಂ ಸಾಕ್ಷರ ಸಮಾಜವನ್ನು ನಿರ್ಮಿಸಿ, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ತತ್ವ ಮತ್ತು ಸಿದ್ಧಾಂತಗಳ ಅತ್ಯಂತ ಸೃಜನಶೀಲ ವಿನಿಮಯವನ್ನು ನಡೆಸಲು ಸಹಕಾರಿಯಾಯಿತು. ಇದು ಮುಸಲ್ಮಾನರಿಗೆ ಶೈಕ್ಷಣಿಕ ಬಲವನ್ನು ನೀಡುವುದರೊಂದಿಗೆ ಸಮೃದ್ಧ ದಿನಗಳನ್ನು ಆಶೀರ್ವದಿಸಿತು. ಆಡಳಿತಗಾರರ ಮತ್ತು ಪ್ರಜೆಗಳ ಸ್ವಹಿತಾಸಕ್ತಿಯಿಂದ ನಡೆದ ಇಂತಹ ಮಹಾದಾನಗಳು ವಿವಿಧ ರೀತಿಯ ವಕ್ಫ್‌ಗಳತ್ತ ಜನರನ್ನು ಪ್ರೇರೇಪಿಸಿ, ವಕ್ಫ್ ಆಚರಣೆಗಳಿಗೆ ಹೊಸ ಆಯಾಮವನ್ನು ನೀಡಿತು. ಮುಸ್ಲಿಂ ಸ್ತ್ರೀ-ಶಿಕ್ಷಣದ ಪ್ರಗತಿಗೆ ಚಾಲಕ ಶಕ್ತಿಯಾಗುವಲ್ಲಿ ಮಾತ್ರವಲ್ಲದೆ, ಶಿಲುಬೆಯುದ್ಧ, ಮಂಗೋಲಿಯನ್ ಆಕ್ರಮಣದ ನಂತರದ ಸಮಾಜವನ್ನು ಪುನರುಜ್ಜೀವನಗೊಳಿಸುವಲ್ಲಿ ಈ ವಕ್ಫ್ ದಾನಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಸೂಫೀ ಕೇಂದ್ರಗಳು, (ಝಾವಿಯಾ/ತಕಿಯಾ/ಖಾನ್’ಕಾಹ್) ಪ್ರಯಾಣಿಕರ ವಸತಿಗೃಹಗಳು, ಸಾರ್ವಜನಿಕ ಶೌಚಾಲಯಗಳು, ಮಹಿಳಾ ಕಲ್ಯಾಣ ಕೇಂದ್ರಗಳು, ದರ್ಗಾ ಸಂರಕ್ಷಣೆ, ಆಸ್ಪತ್ರೆಗಳು, ಪಶುವೈದ್ಯಕೀಯ ಸೇವೆಗಳು, ಪ್ರವಾಸೀ ವಿಶ್ರಾಂತಿ ಕೊಠಡಿಗಳು, ಗ್ರಂಥಾಲಯಗಳು, ಸಾರ್ವಜನಿಕ ನಲ್ಲಿಗಳು, ಅನಾಥಾಶ್ರಮಗಳು, ಸ್ಮಶಾನಗಳು, ಸಣ್ಣ ಮಕ್ಕಳಿಗೆ ಖುರ್ಆನಿನ ಪ್ರಾಥಮಿಕ ಜ್ಞಾನವನ್ನು ಕಲಿಸುವ ಮಸೀದಿಗಳ ಪಕ್ಕದಲ್ಲೇ ನಿರ್ಮಿಸಲಾದ ಪ್ರಾಥಮಿಕ ಶೈಕ್ಷಣಿಕ ಕೇಂದ್ರಗಳು, ದತ್ತಿ ಉದ್ದೇಶಗಳಿಗಾಗಿ ವಿಶೇಷವಾಗಿ ನಿರ್ಮಿಸಲಾದ ಸಾಂತ್ವನ ಕೇಂದ್ರಗಳು (ಗುಲಾಮರನ್ನು ಮುಕ್ತಗೊಳಿಸುವುದು, ಬಡವರಿಗೆ ಆಹಾರ ನೀಡುವುದು, ಸಾಲಗಳನ್ನು ತೀರಿಸುವುದು, ಹಬ್ಬದ ಉಡುಗೊರೆಗಳ ವಿತರಣೆ, ಮರಣೋತ್ತರ ಕರ್ಮ ನಿರ್ವಹಣೆ) ಇತ್ಯಾದಿಗಳು ವಕ್ಫ್‌ಗಳು ಹೆಚ್ಚು ಸಕ್ರಿಯವಾಗಿದ್ದ ವೇಳೆಯ ಪ್ರಮುಖ ಕೊಡುಗೆಗಳು.

ತಮ್ಮ ಡಮಾಸ್ಕಸ್‌ ಕಡೆಗಿನ ಪ್ರಯಾಣದ ಮಧ್ಯೆ ಕಂಡ ವಕ್ಫ್ ಕೇಂದ್ರಗಳ ಸವಿಶೇಷತೆಗಳನ್ನು ಇಬ್ನ್ ಬತೂತ ಈ ರೀತಿ ವಿವರಿಸುತ್ತಾರೆ; ‘ಬೃಹತ್ ವೆಚ್ಚದಲ್ಲಿ ನಿರ್ಮಿಸಿದ ಹಲವು ವಕ್ಫ್ ಕೇಂದ್ರಗಳನ್ನು ನಾನು ಕಂಡೆ. ವಿದೇಶೀ ಯಾತ್ರಿಕರಿಗೆ ಸೇವೆ ಒದಗಿಸುವ ಕೇಂದ್ರಗಳಾಗಿ ಅವು ಕಾರ್ಯನಿರ್ವಹಿಸುತ್ತಿದ್ದವು. ಮಹಿಳಾ ವಿವಾಹ ಕಲ್ಯಾಣ ಕೇಂದ್ರಗಳು, ಜೈಲಿನಲ್ಲಿ ಸೆರೆಯಾದವರ ಬಿಡುಗಡೆಗೆ ಕ್ರಮ, ನಗರದಲ್ಲಿ ರಸ್ತೆ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುವ ಸಮಿತಿಗಳು ಹೀಗೆ ವಿವಿಧ ರೀತಿಯ ವಕ್ಫ್ ಕೇಂದ್ರಗಳಿವೆ. ಡಮಾಸ್ಕಸ್‌ನಲ್ಲಿ ಪಾದಚಾರಿಗಳಿಗೆ ವಿಶೇಷ ರಸ್ತೆಗಳಿರಲಿಲ್ಲ. ಚಲಿಸುವ ವಾಹನಗಳ ಎಡೆಯಲ್ಲಿ ನಡೆಯುವುದೊಂದೇ ದಾರಿ. ಒಂದು ದಿನ ನಾನು ಡಮಾಸ್ಕಸ್‌ನ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಗುಲಾಮ ಹುಡುಗನ ಕೈಯಿಂದ ಚೈನೀಸ್ ನಿರ್ಮಿತ ಮಣ್ಣಿನ ಮಡಿಕೆ ಬಿದ್ದು ಒಡೆಯುವುದನ್ನು ಕಂಡೆ. ತಕ್ಷಣವೇ ಅವನ ಸುತ್ತಲೂ ಜನರು ಜಮಾಯಿಸಿದರು. ಗುಂಪಿನಲ್ಲೊಬ್ಬರು ಹೇಳಿದರು; ‘ಆ ಮುರಿದ ತುಂಡುಗಳನ್ನು ತೆಗೆದುಕೊಂಡು ವಕ್ಫ್ ಆಸ್ತಿ ನೋಡಿಕೊಳ್ಳುವ ವ್ಯಕ್ತಿಯ ಬಳಿಗೆ ಹೋಗೋಣ. ಹಾಗೆ ಪರಿಪಾಲಕನ ಬಳಿ ಹೋದಾಗ ಹರಿದ ದಾಖಲೆ ಪತ್ರ ಪಡೆದು ಬದಲಿಸಿ ಕೊಟ್ಟು ಕಳಿಸಿದರು.’

ಫಲಾನುಭವಿಗಳನ್ನು ಪರಿಗಣಿಸುವಾಗ ಎರಡು ರೀತಿಯ ವಕ್ಫ್ ವ್ಯವಸ್ಥೆಗಳು ಅಸ್ತಿತ್ವದಲ್ಲಿತ್ತು. ಸಾರ್ವಜನಿಕ ವಕ್ಫ್‌ಗಳು ಮತ್ತು ಖಾಸಗಿ ವಕ್ಫ್‌ಗಳು. ಒಪ್ಪಂದದ ಸಮಯದಲ್ಲಿ ಸಾರ್ವಜನಿಕ ವಕ್ಫ್ ಸಾರ್ವಜನಿಕರನ್ನು ಒಳಗೊಂಡಿದ್ದರೆ, ಖಾಸಗಿ ವಕ್ಫ್‌ಗಳು ಬಡವರು, ಅನಾಥರು ಮತ್ತು ಸಮಾಜದ ಒಂದು ವರ್ಗದ ಮೇಲೆ ಕೇಂದ್ರೀಕೃತವಾಗಿತ್ತು. ವಕ್ಫ್‌ ಫಲಾನುಭವಿಗಳು ಸಾಮಾನ್ಯವಾಗಿ ಸಮಾಜದ ಕೆಳಸ್ತರದಲ್ಲಿ ಉಳ್ಳವರಾಗಿದ್ದರೂ, ವಕ್ಫ್‌ನ ರಚನೆಯು ಶ್ರೀಮಂತರನ್ನು ಒಳಗೊಳ್ಳುವಷ್ಟು ವಿಶಾಲವಾಗಿತ್ತು. ಹೀಗಾಗಿ, ಪ್ರಯಾಣಿಕರಿಗಾಗಿ ವಕ್ಫ್ ಮೂಲಕ ನಿರ್ಮಿಸಲಾದ ವಿಶ್ರಾಂತಿ ಕೊಠಡಿಗಳಲ್ಲಿ ಶ್ರೀಮಂತ ಮತ್ತು ಬಡ ಪ್ರಯಾಣಿಕರು ಒಂದೇ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ವಕ್ಫ್ ಆಸ್ತಿಯ ಅನುಕೂಲ ಪಡೆಯುವ ನಿಟ್ಟಿನಲ್ಲಿ ಇಲ್ಲಿ ಕಡುಬಡತನ ಅನುಭವಿಸುವವರು ಮತ್ತು ಸಂಪತ್ತನ್ನು ಅತಿಯಾಗಿ ಸಂಗ್ರಹಿಸಿ ಜೀವಿಸುವವರು ಯಾರೂ ಇಲ್ಲ. ಎಲ್ಲರೂ ವಕ್ಫ್ ದಾನಿಗಳು ಮತ್ತು ಸ್ವೀಕರಿಸುವವರು ಎಂಬ ರಚನೆಯ ಒಳಗೆ ಸೇರುತ್ತಾರೆ.

ಅರೇಬಿಕ್ ಅಕ್ಷರಮಾಲೆಯ ‘ವಾವ್’ ಅಕ್ಷರವು ಈ ಸಾರಾಂಶವನ್ನು ತಿಳಿಸುತ್ತದೆ. ಮೂರು ವಾವ್‌ಗಳನ್ನು ಇಲ್ಲಿ ಆಲಂಕಾರಿಕವಾಗಿ ಪರಿಚಯಿಸಲಾಗುವುದು. ಮೊದಲನೆಯದು ‘ವಲ್ಲಾಹಿ’ (ಈ ವಕ್ಫ್ ಅಲ್ಲಾಹನ ನಾಮದಲ್ಲಾಗಿದೆ) ಎಂಬುವುದನ್ನೂ, ಎರಡನೆಯದು ‘ವಲಿಯ್ಯ್’ (ನಿರ್ವಾಹಕ ಮತ್ತು ಅವನ ಮೇಲಿನ ನಂಬಿಕೆ) ಎಂಬುದನ್ನು ಉಲ್ಲೇಖಿಸಿದರೆ, ಮೂರನೆಯದು ‘ವಕ್ಫ್’ ಎಂಬ ದಾನಧರ್ಮ ಕಾರ್ಯವನ್ನೇ ಸೂಚಿಸುತ್ತದೆ.

ಅರೇಬಿಕ್’ ಲಿಪಿಯಲ್ಲಿ ಸಾಮಾನ್ಯವಾಗಿ ‘ವಾವ್’ ಎಂಬ ಅಕ್ಷರವನ್ನು ಎರಡು ರೀತಿಯಲ್ಲಿ ಬರೆಯಲಾಗುತ್ತದೆ. ಒಂದು ಅಕ್ಷರದ ಕೊನೆಯನ್ನು ಕೆಳಗಡೆ ಎಳೆದು ಬರೆಯುವುದು, ಅಕ್ಷರದ ತುದಿಯು ವಕ್ರವಾಗಿ ಅಕ್ಷರವನ್ನು ನೇರವಾಗಿ ಸಂಧಿಸುವ ರೀತಿ ಮತ್ತೊಂದು. ಇಲ್ಲಿ ವಕ್ಫ್ ಮೂಲಕ ಆಸ್ತಿಯನ್ನು ಇನ್ನೊಬ್ಬರಿಗೆ ನೀಡಿ ನಮ್ಮ ಮಾಲೀಕತ್ವವನ್ನು ಬಿಟ್ಟುಕೊಡುವುದು ಮೊದಲ ವಿಧಾನವಾದರೆ, ವಕ್ಫ್ ಮೂಲಕ ಇನ್ನೊಬ್ಬರಿಂದ ಆಸ್ತಿಯನ್ನು ಪಡೆಯುವುದು ಎರಡನೆಯ ವಿಧಾನ. ವಕ್ಫ್ ಎಂಬ ಸಮಾಜಮುಖಿ ಚಟುವಟಿಕೆಯು ಸೃಷ್ಟಿಕರ್ತ, ಜನರು, ಸಂಪತ್ತು ಮತ್ತು ಕಲ್ಯಾಣ ಇವುಗಳ ಮಧ್ಯೆ ಪರಸ್ಪರ ಸಂಬಂಧಗಳನ್ನು ಹೆಣೆದುಕೊಂಡಿದ್ದು, ಸಮುದಾಯದಲ್ಲಿ ಜವಾಬ್ದಾರಿಯುತ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ ಮತ್ತು ಜಗತ್ತನ್ನು ಹೇಗೆ ಉತ್ತಮ ಸ್ಥಳವನ್ನಾಗಿ ಮಾಡಬೇಕೆಂದು ಮುಸಲ್ಮಾನರಿಗೆ ಕಲಿಸಿ ಕೊಡುತ್ತದೆ. ಈ ಅವಧಿಯಲ್ಲಿ ದತ್ತಿ ಚಟುವಟಿಕೆಗಳು ಅದರ ಉತ್ತುಂಗವನ್ನು ತಲುಪಿ, ನಂತರ ಒಟ್ಟೋಮನ್ ಸಾಮ್ರಾಜ್ಯದ ದ್ವಿತೀಯಾರ್ಧದಲ್ಲಿ ವಿವಾದಾತ್ಮಕ ರೀತಿಯಲ್ಲಿ ಎಲ್ಲಾ ಭೂಮಿಗಳು ನಗದು ರೂಪ ಪಡೆದವು.

20 ನೆಯ ಶತಮಾನವು ಕೆಲವು ಅಪಾಯಕಾರಿ ದುರಂತಗಳ ಕಾಲವಾಗಿತ್ತು. ಎರಡು ಜಾಗತಿಕ ಮಹಾಸಮರಗಳು, ಮಹಾ ಆರ್ಥಿಕ ಕುಸಿತ (1929-1934), ಶೀತಲ ಸಮರ (1947-1991), ಗಲ್ಫ್ ವಾರ್ (1990-1991) ಮತ್ತು ಬೋಸ್ನಿಯನ್ ನರಮೇಧ (1992-1995) ದಂತಹ ದುರಂತಗಳ ಮೂಲಕ ಲಕ್ಷಾಂತರ ಸಾವು-ನೋವುಗಳಿಗೆ ಈ ಶತಮಾನ ಸಾಕ್ಷಿಯಾಯಿತಲ್ಲದೆ ಇದು ಸಮಾಜದಲ್ಲಿ ಮಾನಸಿಕ ಆಘಾತವನ್ನು ಸೃಷ್ಟಿಸಿತು. ಈ ಆಘಾತವು ಮುಸಲ್ಮಾನರನ್ನು ಇನ್ನೂ ಆಳವಾಗಿ ಘಾಸಿಗೊಳಿಸಿತು. ಸಮಾಜದ ಇಂತಹಾ ಜನರಿಗೆ ಆಸರೆಯಾಗುವುದಾಗಿತ್ತು ಇಸ್ಲಾಮಿಕ್ ದತ್ತಿ ಸೇವೆಗಳ ಮೂಲ ಉದ್ದೇಶ. ಆ ನಿಟ್ಟಿನಲ್ಲಿ ದತ್ತಿ ಸಂಸ್ಥೆಗಳು ಸಮಾಜದ ಧಾರ್ಮಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಶ್ರಮಿಸಿದೆ.

ಇಸ್ಲಾಮಿಕ್ ಸಂಸ್ಕೃತಿಯನ್ನು ಹೆಚ್ಚು ಸೊಗಸಾಗಿ ಮತ್ತು ಸಾರ್ವತ್ರಿಕವಾಗಿ ಬದಲಾಯಿಸಿದ್ದು ಈ ರೀತಿಯ ದಾನ – ಧರ್ಮಗಳ ಸಾಂತ್ವನ ಸಮೂಹಗಳಾಗಿವೆ. ಇಂತಹಾ ಪರಸ್ಪರ ಬೆರೆತು ಜೀವಿಸುವ ಪ್ರಕ್ರಿಯೆಯಲ್ಲಿ ವಕ್ಫ್ ಸಂಸ್ಥೆಯ ಪಾತ್ರ ಅಪಾರ. ಇತರರ ಕಲ್ಯಾಣಕ್ಕಾಗಿ ತಾವು ತಮಗೆ ಪ್ರಿಯವಾದುದನ್ನು ನೀಡುವಾಗ, ಕೇವಲ ನೀನು ಮತ್ತು ನಾನು ಮಾತ್ರವಲ್ಲ ಅಕ್ಷರಶಃ ಈ ಪ್ರಪಂಚವೇ ಪವಿತ್ರಗೊಳ್ಳುತ್ತದೆ.

ಮೂಲ: ಖಲೀಲ್ ಅಬ್ದುರ್ರಶೀದ್
ಅನುವಾದ: ಸ್ವಾದಿಖ್ ಮುಈನಿ ಬೆಳಾಲ್

ಹಳರಮೀಸ್ : ಮಲಬಾರಿನ ಚಾರಿತ್ರಿಕ ಹಿನ್ನೆಲೆ

ಮಲಬಾರ್ ಪ್ರದೇಶಕ್ಕೆ ಹಳರಮೀ ಸಯ್ಯಿದರುಗಳ ವಲಸೆಯು ಹಿಂದೂ ಮಹಾಸಾಗರದ ಇನ್ನಿತರ ಕರಾವಳಿ ಪ್ರದೇಶಗಳಲ್ಲಿ ಘಟಿಸಿದ ಹಾಗೆ ಮಲಬಾರ್ ಮುಸ್ಲಿಮರ ಜೀವನ ಮತ್ತು ಸಂಸ್ಕೃತಿಯಲ್ಲಿ ಮಹತ್ತರವಾದ ಬದಲಾವಣೆಗಳನ್ನುಂಟು ಮಾಡಿತು. ಪ್ರಮುಖವಾಗಿ ಅವರ ವಲಸೆಯು ಕೇರಳದ ಉತ್ತರದಿಂದ ಹಿಡಿದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡ ಮಲಬಾರ್ ಪ್ರದೇಶಕ್ಕಾಗಿತ್ತು. ಅಲ್ಲಿನ ಆಡಳಿತಗಾರರು ಮಧ್ಯಪ್ರಾಚ್ಯದಿಂದ ವಲಸೆ ಬಂದವರೊಂದಿಗೆ ಬಹಳ ಸೌಹಾರ್ದಯುತವಾಗಿ ವರ್ತಿಸುತ್ತಿದ್ದರು. ಸಾಮೂದಿರಿ (ಕಲ್ಲಿಕೋಟೆಯ ದೊರೆಗಳು) ಮತ್ತು ವೆಲ್ಲತಿರಿ ರಾಜ ಮನೆತನ (ವಳ್ಳುವನಾಡಿನ ಆಡಳಿತಗಾರರು) ಮತ್ತು ಉತ್ತರ ಮಲಬಾರಿನ ಕೋಲತಿರಿ ವಂಶಸ್ಥರು ಸ್ವತಃ ತಮ್ಮ ದೇಶಗಳಲ್ಲಿ ವಿದೇಶಿ ವ್ಯಾಪಾರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ವಿಶೇಷವಾಗಿ ಅರಬ್ ದೇಶಗಳಿಂದ ಬಂದವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದರು. ಸಮಾನತೆ ಮತ್ತು ನ್ಯಾಯ ಇವೆರಡೂ ಸಾಮೂದಿರಿ ದೊರೆಗಳ ಆಳ್ವಿಕೆಯ ಮುಖ ಮುದ್ರೆಯಾಗಿತ್ತು.

ಅವರು ತಮ್ಮ ಪ್ರಜೆಗಳಿಗೆ ನೀಡುತ್ತಿದ್ದ ವ್ಯಕ್ತಿ ಮತ್ತು ಆಸ್ತಿಯ ಸಂಪೂರ್ಣ ಭದ್ರತಾ ವ್ಯವಸ್ಥೆಯು ಅರಬ್ಬರ ಪ್ರಾಬಲ್ಯ ಹೊಂದಿರುವ ಅನೇಕ ವ್ಯಾಪಾರೀ ಸಮುದಾಯಗಳು ಕ್ಯಾಲಿಕಟ್‌ಗೆ ಆಕರ್ಷಿತರಾಗಲು ಕಾರಣವಾಯಿತು. ಪೋರ್ಚುಗೀಸ್ ಬರಹಗಾರ ಬಾರ್ಬೊಸಾ ಹೇಳಿದಂತೆ, “ರಾಜನು ಪ್ರತಿಯೊಬ್ಬರಿಗೂ (ಮೂರಿಶ್ ವ್ಯಾಪಾರಿಗೆ) ಒಬ್ಬ ನಾಯರನ್ನು ಕಾವಲು ಹಾಗೂ ಸೇವೆ ಮಾಡಲು, ಒಬ್ಬ ಚೆಟ್ಟಿ ಬರಹಗಾರನನ್ನು ಲೆಕ್ಕಪರಿಶೋಧನೆ ಹಾಗೂ ಆಸ್ತಿಯನ್ನು ನೋಡಿಕೊಳ್ಳಲು ಮತ್ತು ವ್ಯಾಪಾರಕ್ಕಾಗಿ ದಲ್ಲಾಳಿಯನ್ನು ನೇಮಿಸಿ ಕೊಟ್ಟನು.” ಇದು ಸಾಮೂದಿರಿ ದೊರೆಗಳ ನಡುವೆ ಸ್ನೇಹವನ್ನು ಬೆಳೆಸಿತು. ಎಷ್ಟರಮಟ್ಟಿಗೆ ಅರಬ್ಬರೊಂದಿಗಿನ ಸ್ನೇಹ ಗಾಢವಾಯಿತು ಎಂದರೆ ಒಂಬತ್ತನೇ ಶತಮಾನದಲ್ಲಿ ಸಾಮೂದಿರಿ ವಂಶಸ್ಥರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು ಮತ್ತು ಕಅಬಾಕ್ಕೆ ಖಿಲ್’ಅವನ್ನು ನೀಡಿದರು ಎಂದು ಹೇಳಲಾಗುತ್ತದೆ.

ಸೂಫಿಸಂ ಜಾಗತಿಕವಾಗಿ ವ್ಯಾಪಿಸತೊಡಗಿದಾಗ ಅನೇಕ ಹಳರಮೀ ಸೂಫಿಗಳು ಮತ್ತು ಅರಬ್ ವ್ಯಾಪಾರಸ್ಥರು ಇಲ್ಲಿಗೆ ವಲಸೆ ಬಂದು ತಮ್ಮ ಧರ್ಮಶಾಲೆಗಳನ್ನು ನಿರ್ಮಿಸಿದರು. “ಸೂಫಿಗಳು ಹಾಗೂ ಅರಬ್ ಮುಸ್ಲಿಮರು ವಾಸಿಸಲು ಕಲ್ಲಿಕೋಟೆಯಲ್ಲಿ ವಿಶೇಷ ಭವನಗಳನ್ನು ನಿರ್ಮಿಸಲಾಯಿತು” ಎಂದು ಇಬ್ನ್ ಬತೂತ ಉಲ್ಲೇಖಿಸುತ್ತಾರೆ. ಪರ್ಷಿಯಾದ ಶೀರಾಝಿನ ಶೈಖ್ ಒಬ್ಬರು ಅಬೂ ಇಸ್ಹಾಕ್ ಗಝರೂನಿ ಎಂಬ ಹೆಸರಿನಲ್ಲಿ ಸೂಫಿ ಭವನವನ್ನು ನಿರ್ಮಿಸಿ ಶೈಖ್ ಶಿಹಾಬುದ್ದೀನ್ ಗಝರೂನಿಯನ್ನು ಮುಖ್ಯಸ್ಥರಾಗಿ ನೇಮಿಸಿದರು ಹಾಗೂ ‘ಗಝರೂನಿಯ್ಯಾ’ ಎಂಬ ಸೂಫಿ ಪಂಗಡವನ್ನು ಅವರ ಹೆಸರಿನಲ್ಲಿ ಪ್ರಾರಂಭಿಸಿದರು. ಭಾರತ ಮತ್ತು ಚೀನಾಕ್ಕೆ ಸಮುದ್ರಯಾನದಲ್ಲಿನ ಅಪಾಯಗಳ ವಿರುದ್ಧ ರಕ್ಷಣೆ ಅವರ ಪ್ರಮುಖ ಕೊಡುಗೆಗಳು ಎಂದು ನಂಬಲಾಗಿದೆ. ಚೀನಾದ ಝೈತುನ್‌ನಲ್ಲಿ ಅವರ ಹೆಸರಿನಲ್ಲಿ ಒಂದು ಧಾರ್ಮಿಕ ಕ್ಷೇತ್ರ ನಿರ್ಮಿಸಲಾಗಿದೆ.

ಬಾ ಅಲವಿಗಳು ಭಾರತಕ್ಕೆ :

ಬಾ-ಅಲವಿ ಹಳರಮೌತಿನ ಸಯ್ಯದ್ ವಂಶಸ್ಥರ ಪೈಕಿ ಪ್ರಮುಖ ಕುಟುಂಬ. ಸಾಮೂದಿರಿಗಳು ಮುಸ್ಲಿಮರೊಂದಿಗೆ ಬೆಳೆಸಿದ ಸಂಬಂಧದ ಫಲವಾಗಿ ಹಳರಮೌತಿನ ಶ್ರೇಷ್ಠ ಪ್ರವಾದೀ ವಂಶಸ್ಥರಾದ ಬಾ-ಅಲವಿ ಕುಟುಂಬದ ಶೈಖ್ ಸಯ್ಯದ್ ಜಿಫ್ರಿಯವರು 1746 ರಲ್ಲಿ ಕ್ಯಾಲಿಕಟ್‌ಗೆ ಬಂದು ನೆಲೆಸಿದರು. ಅವರನ್ನು ಮುಹ್ಯದ್ದೀನ್ ಬಿ, ಕ್ಯಾಲಿಕಟ್‌ನ ಖಾಝಿ ಅಬ್ದುಸ್ಸಲಾಂ ಮತ್ತು ಸಾಮೂದಿರಿ ದೊರೆ ಮಾನವವಿಕ್ರಮನ್ ಮುಂತಾದವರು ಸ್ವಾಗತಿಸಿದರು. ರಾಜನು ಕ್ಯಾಲಿಕಟ್‌ನಲ್ಲಿ ನೆಲೆಸಲು ಶೈಖ್‌ಗೆ ವಿನಂತಿಸಿದನು ಮತ್ತು ಅವರಿಗೆ ಕಲ್ಲೈನದಿಯ ದಡದಲ್ಲಿ ತೆಂಗಿನ ತೋಪು ಹಾಗೂ ಕುಟ್ಟಿಚಿರಾದ ಬಳಿ ಜಮೀನು ಮತ್ತು ಮನೆಯನ್ನು ನೀಡಿದನು. ಜೊತೆಗೆ ರಾಜ್ಯದ ಎಲ್ಲಾ ರೀತಿಯ ತೆರಿಗೆಗಳಿಂದ ವಿನಾಯಿತಿಯನ್ನು ನೀಡಿ ವಿಶೇಷ ಸ್ಥಾನಮಾನ ಘೋಷಿಸಿ ಗೌರವಿಸಿದನು. ಶೈಖ್ ಜಿಫ್ರಿ ತಮ್ಮ ಸಹೋದರ ಹಸನ್ ಜಿಫ್ರಿರವರ ಜೊತೆ 1754 ರಲ್ಲಿ ಕ್ಯಾಲಿಕಟ್ ತಲುಪಿದರು. ನಂತರ ಅವರು ತಿರೂರಙಾಡಿ ಬಳಿ ನೆಲೆಸಿದರು. ಜಿಫ್ರಿ ಮತ್ತು ಇತರ ಬಾ-ಅಲವಿ ಸಯ್ಯಿದ್ ಕುಟುಂಬಗಳಿಂದ ಹೆಚ್ಚಿನ ಸದಸ್ಯರು ಮಲಬಾರಿಗೆ ವಲಸೆ ಬಂದು ವಿವಿಧ ಭಾಗಗಳಲ್ಲಿ ನೆಲೆಸಿದರು. ಕೊಯಿಲಾಂಡಿ ಹಳರಮೌತ್ ಸಯ್ಯಿದ್ ಕುಟುಂಬಗಳ ಕೇಂದ್ರವಾಯಿತು. ಕೊಯಿಲಾಂಡಿ, ಪಂತಲಾಯನಿ, ಕಡಲುಂಡಿ, ಪೊನ್ನಾನಿ, ಮಲಪ್ಪುರಂ, ಪರಪ್ಪನಂಗಾಡಿ, ತಿರೂರಂಗಾಡಿ, ಚಾಲಿಯಮ್, ಕುಟ್ಟಾಯಿ, ಚಾವಕ್ಕಾಡ್, ಕಣ್ಣೂರು, ವಲಪಟ್ಟಣಂ, ಕಪ್ಪಾಡ್ ಮತ್ತು ಕೊಚ್ಚಿ ಬಾ-ಅಲವಿ ಸಯ್ಯಿದರ ಪ್ರಮುಖ ಕೇಂದ್ರಗಳಾದವು. ಈ ಎಲ್ಲಾ ಸ್ಥಳಗಳಲ್ಲಿ ಅವರು ಸೂಫೀ ಕೇಂದ್ರಗಳನ್ನು ಪ್ರಾರಂಭಿಸಿದರು ಮತ್ತು ಸಾಮಾನ್ಯ ಜನರಿಗೆ ಆಧ್ಯಾತ್ಮಿಕ ನೆರಳನ್ನು ನೀಡುವ ಮೂಲಕ ಸೇವೆ ಸಲ್ಲಿಸಿದರು.

ಮಲಬಾರಿನಲ್ಲಿ ಅವರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳನ್ನು ಗುಣಪಡಿಸಲು ಆಧ್ಯಾತ್ಮಿಕತೆಯ ಒಂದು ಶಾಖೆಯಾದ ಇಲ್ಮ್ ಅಲ್-ರೂಹಾನಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆಯನ್ನು (ಅಲ್ ರುಕ್’ಯಾ ಅಥವಾ ಸಿಮಿಯಾ) ಪ್ರಯೋಗ ಮಾಡುತ್ತಾರೆ. ಇದು ಅವರ ಕುಟುಂಬದ ಸದಸ್ಯರ ಮಧ್ಯೆ ಹಸ್ತಾಂತರಗೊಳ್ಳುವ ಒಂದು ರೀತಿಯ ರಹಸ್ಯ ಜ್ಞಾನವಾಗಿತ್ತು. ಆಧ್ಯಾತ್ಮಿಕ ಚಿಕಿತ್ಸೆಯನ್ನು ಅಭ್ಯಾಸ ಮಾಡಲು ಒಬ್ಬರು ಹಿರಿಯರು ಅಥವಾ ಮಾರ್ಗದರ್ಶಿ (ಮುರ್ಷಿದ್) ಯಿಂದ ಸಮ್ಮತಿಯನ್ನು (ಇಜಾಝ) ಪಡೆಯಬೇಕು. ಸಾಧಕರು ಧರ್ಮದ ನಿಯಮಗಳಿಗೆ ಬದ್ಧರಾಗಿರಬೇಕು ಮತ್ತು ದುಶ್ಚಟಗಳಿಂದ ದೂರವಿರಬೇಕು. ಸಾಮಾನ್ಯ ಜನರು ಮಾನಸಿಕ ಒತ್ತಡ ಮತ್ತು ಚಿಂತೆಗಳು ಅಥವಾ ದೈಹಿಕ ಸಮಸ್ಯೆಗಳಿಂದ ತಮ್ಮನ್ನು ಮುಕ್ತಿಗೊಳಿಸಲು ಈ ಸೂಫಿಗಳನ್ನು ಭೇಟಿ ಮಾಡುತ್ತಿದ್ದರು. ಕೆಲವು ಖುರ್ ಆನ್ ಸೂಕ್ತಗಳನ್ನು ಅಥವಾ ದೈವ ನಾಮಗಳನ್ನು(ಅಸ್ಮಾ) ಪಠಿಸಿದ ನಂತರ ಸೂಫಿಗಳು ಅವರಿಗೆ ಕೆಲವು ಎಲೆಗಳ ಮೇಲೆ ದೈವಸ್ಮರಣೆಯ ಜಪಗಳನ್ನು ಪಠಿಸಿ ಕಳುಹಿಸುತ್ತಿದ್ದರು. ಈ ಮಾರ್ಗವನ್ನು ಹೆಚ್ಚಾಗಿ ಬಾ-ಅಲವಿಗಳು ಅನುಸರಿಸುತ್ತಿದ್ದರು. ಶ್ಲೋಕಗಳನ್ನು ಪಠಿಸಿದ ನಂತರ ರೋಗಿಗಳಿಗೆ ಕುಡಿಯಲು ನೀರನ್ನು ಸಹ ಒದಗಿಸಲಾಗುತ್ತಿತ್ತು. ಕೆಲವೊಮ್ಮೆ ಖುರ್ಆನ್ ಸೂಕ್ತಗಳನ್ನು ತಟ್ಟೆಗಳ ಮೇಲೆ ಅಥವಾ ಎಲೆಗಳ ಮೇಲೆ, ವಿಶೇಷವಾಗಿ ಹಲಸಿನ ಹಣ್ಣಿನ ಮರದ ಎಲೆಯ ಮೇಲೆ ಕಪ್ಪು ಶಾಯಿಯಿಂದ ಬರೆದು ರೋಗಿಗಳಿಗೆ ನೀರಿನಲ್ಲಿ ಅದ್ದಿ ಕುಡಿಯಲು ಹೇಳುತ್ತಿದ್ದರು. ಕೆಲವು ಸೂಫಿಗಳು ದುಶ್ಚಟಗಳನ್ನು ಹೋಗಲಾಡಿಸಲು ರೋಗಿಗಳ ತಲೆಯ ಮೇಲೆ ಖುರ್ಆನ್ ಸೂಕ್ತಗಳನ್ನು ಪಠಿಸುತ್ತಿದ್ದರು. ಕುರ್ಆನಿ‌ನ ಕೆಲವು ಅಧ್ಯಾಯಗಳನ್ನು ಪಠಿಸುವಂತೆ ರೋಗಿಗಳಿಗೆ ಸೂಚಿಸುತ್ತಿದ್ದರು . ಹೆಚ್ಚಾಗಿ ಸೂರ ಯಾಸಿನ್ ಮತ್ತು ಆಯತುಲ್ ಕುರ್ಸಿಯ್ ಎಂಬ ಕುರ್‌ಆನ್ ಸೂಕ್ತವನ್ನು ರೋಗಿಗಳಿಗೆ ಓದಲು ನೀಡುತ್ತಿದ್ದರು.

ಕುರ್‌ಆನಿನಿಂದ ಆಯ್ದ ಪ್ರಾರ್ಥನೆಗಳು ಮತ್ತು ಸೂಕ್ತಗಳನ್ನು ವಿವಿಧ ಅಗತ್ಯಗಳನ್ನು ಪೂರೈಸಲು ಬೇಕಾಗಿ ಪುನರಾವರ್ತಿಸಿ ಓದಲು ಸೂಚಿಸುತ್ತಿದ್ದರು. ಕೆಲವೊಮ್ಮೆ ಸೂಕ್ತಗಳು ಅಥವಾ ಮಂತ್ರಗಳನ್ನು ಜಿಂಕ್ ಪ್ಲೇಟ್‌ ಕಾಗದದ ಮೇಲೆ ಬರೆದು, ಅದನ್ನು ಅಲ್ಯೂಮಿನಿಯಂ ಅಥವಾ ತಾಮ್ರದ ತಾಯತಗಳನ್ನಾಗಿ ಮಾಡಿ ರೋಗಿಗಳ ಕುತ್ತಿಗೆಗೆ ಅಥವಾ ಸೊಂಟದ ಮೇಲೆ ಕಟ್ಟಲು ಹೇಳುತ್ತಿದ್ದರು. ವಿವಿಧ ರೀತಿಯ ಚೌಕಾಕಾರಗಳನ್ನು ಕಾಗದಗಳಲ್ಲಿ ಅಥವಾ ಲೋಹದ ಫಲಕಗಳಲ್ಲಿ ಚಿತ್ರಿಸಿ, ಕೆಲವು ಅರೇಬಿಕ್ ವರ್ಣಮಾಲೆಗಳನ್ನು ಅದರ ಮಧ್ಯ ಭಾಗ ಅಥವಾ ಬದಿಯಲ್ಲಿ ಬರೆದು ದೆವ್ವವನ್ನು ಓಡಿಸಲು ಅಥವಾ ಬಯಕೆಗಳನ್ನು ಈಡೇರಿಸಲು ನಿರ್ದಿಷ್ಟ ಸ್ಥಳಗಳಲ್ಲಿ ಇರಿಸುತ್ತಿದ್ದರು. ಅರೇಬಿಕ್ ಅಕ್ಷರಗಳ ಆಧಾರದ ಮೇಲೆ ಸಂಖ್ಯಾ ಪದ್ಧತಿಯ ಲೆಕ್ಕಾಚಾರವನ್ನು (ಅಬ್’ಜದ್) ಅನುಸರಿಸಲಾಗುತ್ತಿತ್ತು. ‘ಪಾಲ್ ಕಣಕ್ಕ್’ ಅಥವಾ ‘ಕುರ್ರತ್ ಅಲ್-ಅನ್ಬಿಯಾ’ ಅಥವಾ ‘ಮಶಿನೋಟಂ’ ಎಂಬ ವಿಭಿನ್ನ ಲೆಕ್ಕಾಚಾರಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಬಾ-ಅಲವಿಗಳು ತಮ್ಮ ದೈವಿಕ ಶಕ್ತಿಯು ಪ್ರವಾದಿ ಮುಹಮ್ಮದರ ಕೊಡುಗೆಯಾಗಿದೆ, ಆ ಮೂಲಕ ತಮ್ಮ ಶೈಖರ ಮೂಲಕ ಶಿಷ್ಯಂದಿರಿಗೆ ವರ್ಗಾವಣೆಯಾಗುತ್ತಾ ಈ ಪ್ರಕ್ರಿಯೆ ಅಂತ್ಯದಿನದವರೆಗೆ ಮುಂದುವರಿಯುತ್ತದೆ ಎಂದು ಬಲವಾಗಿ ನಂಬುತ್ತಾರೆ. ಅವರು ಶೈಖ್ ಮುಹ್ಯದ್ದೀನ್, ಶೈಖ್ ರಿಫಾಯೀ, ನಫೀಸತ್ ಅಲ್ ಮಿಸ್ರೀ ಮತ್ತು ಅಬುಲ್ ಹಸನ್ ಅಲ್ ಶಾದುಲಿಯಂತಹ ಪ್ರಸಿದ್ಧ ಸೂಫಿಗಳ ಹೆಸರಿನಲ್ಲಿ ತಮ್ಮ ಸೂಫೀ ಸಿದ್ಧಾಂತಗಳನ್ನು ಸುತ್ತಮುತ್ತಲ ಉದ್ದಗಲಕ್ಕೂ ಹರಡಲು ಬೇಕಾಗಿ ಧರ್ಮಶಾಲೆಗಳನ್ನು (ರಿಬಾತ್ ಅಥವಾ ತಕಿಯಾ) ಪ್ರಾರಂಭಿಸಿದರು. ದುಷ್ಟತನಗಳಿಂದ ಮುಕ್ತಿಗಾಗಿ ಹಾಗೂ ಜೀವನದಲ್ಲಿ ಸಮೃದ್ಧಿಗಾಗಿ ‘ಮೌಲಿದ್’ ಎಂಬ ಕಾವ್ಯಾತ್ಮಕ ಸಂಕಲನವನ್ನು ಅಥವಾ ‘ಮಾಲಾ’ ಎಂದು ಕರೆಯಲ್ಪಡುವ ಸ್ಥಳೀಯ ಉಪಭಾಷೆಯಲ್ಲಿ ಬರೆದ ಸೂಫಿಗಳ ಹೊಗಳಿಕೆಗಳನ್ನು ಪ್ರತೀ ಮನೆಗಳಲ್ಲಿ ಪಠಿಸಲು ಅವರು ಮುಸಲ್ಮಾನರಿಗೆ ಸೂಚಿಸುತ್ತಿದ್ದರು. ಮಗ್ರಿಬ್ ಪ್ರಾರ್ಥನೆಯ ನಂತರ ಅಥವಾ ರಾತ್ರಿಯ ಇಶಾ ಪ್ರಾರ್ಥನೆಯ ನಂತರ ವಿಶೇಷವಾಗಿ ಪಠಿಸಲು ಅಲವಿ ಸೂಫಿಗಳು ಹದ್ದಾದ್ ರಾತೀಬ್ ಎಂಬ ದೈವಸ್ಮರಣೆಯ ಮಾಲಿಕೆಯನ್ನು ಪರಿಚಯಿಸಿದರು. ಈ ಆಚರಣೆಗಳು ಇಂದಿಗೂ ಮಲಬಾರಿನಲ್ಲಿ ಚಾಲ್ತಿಯಲ್ಲಿದೆ.

ಮಂಬುರಂ ಮಖಾಂ

ದರ್ಗಾ ಝಿಯಾರತ್ (ಸಂದರ್ಶನ) ಬಾ-ಅಲವಿ ಸಯ್ಯಿದರುಗಳ ಆಧ್ಯಾತ್ಮಿಕ ಆಚರಣೆಗಳಲ್ಲಿ ಆಳವಾಗಿ ಬೇರೂರಿದೆ. ಅವರು ತಮ್ಮ ಸೂಫಿ ಗುರುಗಳು ಮತ್ತು ಉಲಮಾಗಳ ಮೇಲೆ ಗೋರಿಗಳನ್ನು ನಿರ್ಮಿಸಿದರು ಮತ್ತು ಅವರನ್ನು ಸಂದರ್ಶಿಸಿ ಆಶೀರ್ವಾದ ಪಡೆಯುತ್ತಿದ್ದರು. ಮುಸ್ಲಿಮರು ಸಾಮಾನ್ಯವಾಗಿ ದರ್ಗಾಗಳಿಗೆ ಭೇಟಿ ನೀಡುತ್ತಾರೆ ಮತ್ತು ಅವರಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಬೇಕಾಗಿ ಗೋರಿಗಳಿಗೆ ಹರಕೆಗಳನ್ನು ಅರ್ಪಣೆ ಮಾಡುತ್ತಾರೆ. ದರ್ಗಾಗಳಿಗೆ ಭೇಟಿ ನೀಡುವ ಪ್ರತಿಜ್ಞೆ ಅಥವಾ ಬಯಕೆಗಳನ್ನು ಈಡೇರಿಸಲು ಅವರಿಗೆ ಕಾಣಿಕೆಗಳನ್ನು ನೀಡುವುದು ಮಾಪಿಳ್ಳ ಮುಸ್ಲಿಮರಲ್ಲಿನ ಸಾಮಾನ್ಯ ಸಂಪ್ರದಾಯವಾಗಿದೆ. ಸೂಫಿಗಳು ಸಾಮಾನ್ಯ ಜನರ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಸೂಫಿ ಮಝಾರಗಳು ಭರವಸೆ ಮತ್ತು ಆಶ್ರಯ ಕೇಂದ್ರವಾಯಿತು. ಧಾರಾಳ ಮಳೆಗಾಗಿ, ಮಿಡತೆ ನಿವಾರಣೆಗಾಗಿ, ಉತ್ತಮ ಫಸಲು ಪಡೆಯಲು, ವ್ಯಾಪಾರದಲ್ಲಿ ಲಾಭ ಪಡೆಯಲು ಜನರು ಸೂಫಿ ಸಂತರ ಹೆಸರಿನಲ್ಲಿ ಕಾಣಿಕೆಗಳನ್ನು ನೀಡಿ ಅವರ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಲ್ಲಾಹನ ಸಂತರು ಜೀವಂತವಾಗಿರುವಾಗ ಮತ್ತು ಮರಣ ಹೊಂದಿದ ನಂತರವೂ ಜನರ ದುಃಖಗಳಿಗೆ ಮಿಡಿಯುವರು ಎಂಬುದು ಬಲವಾದ ನಂಬಿಕೆ. ಆದ್ದರಿಂದ ಮಝಾರಗಳಿಗೆ ಭೇಟಿ ನೀಡುವುದರಿಂದ ಜನರಿಗೆ ಪ್ರಯೋಜನವಾಗುತ್ತಿತ್ತು. ಮಲಬಾರಿ‌ನಲ್ಲಿ ಬಾ-ಅಲವಿ ಸಯ್ಯಿದರುಗಳ ಪೈಕಿ ಹಲವರ ಗೋರಿಗಳನ್ನು ನಿರ್ಮಿಸಲಾಗಿದೆ. ಕಲ್ಲಿಕೋಟೆಯಲ್ಲಿರುವ ಶೈಖ್ ಜಿಫ್ರಿ ಮತ್ತು ಮಂಬುರಮಿನಲ್ಲಿರುವ ಸಯ್ಯಿದ್ ಅಲವಿಯವರ ಗೋರಿಗಳು ಹೆಸರುವಾಸಿಯಾಗಿದೆ. ಗೋರಿಗಳನ್ನು ದೀಪಗಳು ಮತ್ತು ಹಸಿರು ರೇಷ್ಮೆ ಬಟ್ಟೆಗಳಿಂದ ಅಲಂಕರಿಸಲಾಗುತ್ತಿತ್ತು. ಕೆಲವೊಮ್ಮೆ ಎಣ್ಣೆಯನ್ನು ಕಂಚಿನ ದೀಪದಲ್ಲಿ ಪವಿತ್ರವೆಂದು ಇರಿಸಿ ಹಗಲು ರಾತ್ರಿ ದೀಪವನ್ನು ಬೆಳಗಿಸಲಾಗುತ್ತದೆ. ಜನರು ದೀಪದಿಂದ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಗೌರವಾರ್ಥವಾಗಿ ತಮ್ಮ ತಲೆ ಮತ್ತು ಶರೀರಕ್ಕೆ ಹಚ್ಚುತ್ತಾರೆ. ಮಂಬುರಮ್ ಮಝಾರದಲ್ಲಿ ದರ್ಗಾ ಪಾಲಕರು ತಮ್ಮೊಂದಿಗೆ ಒಂದು ತುಂಡು ಹಸಿರು ಬಟ್ಟೆಯನ್ನು ಸಂದರ್ಶಕರ ತಲೆಯ ಮೇಲೆ ಬೀಸಲು ಇಟ್ಟುಕೊಳ್ಳುತ್ತಾರೆ. ಅವರ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸುವ ಸಂಕೇತವಾಗಿ ಅದನ್ನು ಬೀಸಲಾಗುತ್ತದೆ.

ಮಂಬುರಮ್ ಮಝಾರದಲ್ಲಿ ಸಾಪ್ತಾಹಿಕ ಪ್ರಾರ್ಥನಾ ಸಭೆಗಳು (ಸ್ವಲಾತ್) ನಡೆಯುತ್ತಿತ್ತು. ಪ್ರತೀ ಗುರುವಾರ ಸಂಜೆ ಪ್ರಾರ್ಥನೆಯ ನಂತರ ಭಕ್ತರು ಅಲ್ಲಿ ಸೇರಿ ಖುರ್ಆನಿನ ಅಧ್ಯಾಯಗಳು, ಮೂರು ಬಾರಿ ಸೂರಾ ಯಾಸೀನ್ ಮತ್ತು ತಹ್ಲೀಲ್ (ಕಲಿಮಾ) ಪಠಿಸುತ್ತಾರೆ. ಕೊನೆಗೆ ನಾಯಕತ್ವ ನೀಡಿದವರು ಸಯ್ಯಿದ್ ಅಲವಿ ತಂಙಳರ ಮಧ್ಯಸ್ಥಿಕೆಯಲ್ಲಿ ಕೈ ಎತ್ತಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ. ಅರೇಬಿಕ್ ತಿಂಗಳ ಮೊಹರ್ರಮಿನ ಮೊದಲ ಏಳು ದಿನಗಳಲ್ಲಿ ನಡೆಯುವ ವಾರ್ಷಿಕ ಸಮಾರಂಭದಲ್ಲಿ ಜನರು ದರ್ಗಾಕ್ಕೆ ಬಂದು ಸೇರುತ್ತಾರೆ. ಮೊದಲ ದಿನ ಧ್ವಜಾರೋಹಣ ಮಾಡಲಾಗುತ್ತದೆ ಮತ್ತು ಪ್ರತೀ ದಿನ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಮತ್ತು ಸಯ್ಯಿದ್ ಅಲವಿ ಅವರ ಹೆಸರಿನಲ್ಲಿ ಮೌಲಿದ್ ಪಠಿಸಲಾಗುತ್ತದೆ. ವಾರ್ಷಿಕ ಸಮಾರಂಭದಲ್ಲಿ ಮಲಬಾರಿನ ಎಲ್ಲಾ ಭಾಗಗಳ ಜನರು ಭಾಗವಹಿಸುತ್ತಾರೆ. ಕೊನೆಗೆ ನೆರೆದವರಿಗೆ ಆಹಾರವನ್ನು ವಿತರಿಸಲಾಗುತ್ತದೆ. ಮಝಾರಕ್ಕೆ ಭೇಟಿ ನೀಡುವ ಜನರು ಗೋರಿಯ ಬಳಿ ತಮ್ಮ ಪ್ರಾರ್ಥನೆಗಳನ್ನು ಮಾಡುತ್ತಾರೆ ಮತ್ತು ಗೌರವದ ಸಂಕೇತವಾಗಿ ಅವರು ಗೋರಿಗಳ ಮೇಲಿನ ಹಸಿರು ಚಾದರವನ್ನು ಚುಂಬಿಸುತ್ತಾರೆ. ಆ ಪ್ರದೇಶದ ಮುಸ್ಲಿಮೇತರರು ಸಹ ದರ್ಗಾಕ್ಕೆ ಭೇಟಿ ನೀಡುತ್ತಾರೆ ಮತ್ತು ತಮ್ಮ ಅಗತ್ಯಗಳನ್ನು ಪೂರೈಸಲು ಕಾಣಿಕೆಗಳನ್ನು ನೀಡುತ್ತಾರೆ.

ಕಲ್ಲಿಕೋಟೆಯ ಜಿಫ್ರಿ ಮನೆಯಲ್ಲಿ ವಾರ್ಷಿಕ ಸಮಾರಂಭವು ‘ದುಲ್ ಕಅದ್’ ತಿಂಗಳ ಎಂಟರಿಂದ ಹತ್ತರವರೆಗೆ ನಡೆಯುತ್ತದೆ. ಈ ದಿನಗಳಲ್ಲಿ ಖುರ್‌ಆನ್ ಸಂಪೂರ್ಣವಾಗಿ (ಖತ್ಮುಲ್ ಖುರ್‌ಆನ್) ಪಠಿಸಲಾಗುತ್ತದೆ. ಜಅಫರ್ ಬಿನ್-ಹಸನ್ ಅಲ್-ಬರ್ಝಾಂಜಿ ಬರೆದ ಮೌಲಿದ್ ಸಹ ಪಠಿಸಲಾಗುತ್ತದೆ. ಕೊನೆಯಲ್ಲಿ ಎಲ್ಲರಿಗೂ ಆಹಾರವನ್ನು ವಿತರಿಸಲಾಗುತ್ತದೆ. ಹೆಚ್ಚಾಗಿ ಜಿಫ್ರಿ ದರ್ಗಾಗಳಲ್ಲಿ ವಾರ್ಷಿಕ ಆಚರಣೆಗಳನ್ನು ಬಾ-ಅಲವಿ ಸಯ್ಯಿದರ ಕುಟುಂಬಸ್ಥರು ನಡೆಸುತ್ತಾರೆ. ಬಾ-ಅಲವಿಗಳಿಂದ ಉಲಮಾಗಳು ಮತ್ತು ಹೆಚ್ಚಿನ ಸಂಖ್ಯೆಯ ಸಾಮಾನ್ಯ ಜನರು ಶಿಷ್ಯತ್ವವನ್ನು ಸ್ವೀಕರಿಸಿದ್ದರು.

ಸೂಫಿಗಳು ಮತ್ತು ಅವರ ಮಝಾರಗಳು (ಸಮಾಧಿಗಳು) ಮಲಬಾರಿನಲ್ಲಿ ಸಾಮಾಜಿಕ ಸುಧಾರಣೆಗಳು ಮತ್ತು ಧಾರ್ಮಿಕ ಸೌಹಾರ್ದತೆಯಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದೆ. ಜನರಲ್ಲಿ, ವಿಶೇಷವಾಗಿ ಕೆಳವರ್ಗದವರಲ್ಲಿ ಇಸ್ಲಾಮಿಕ್ ಆದರ್ಶಗಳ ಪ್ರಚಾರದ ಮೂಲಕ ಅವರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಹದಿನಾರನೇ ಶತಮಾನದ ಪೋರ್ಚುಗೀಸ್ ಬರಹಗಾರ ಗಾಸ್ಪರ್ ಕೊರಿಯಾ ವರದಿ ಮಾಡುತ್ತಾರೆ, “ಮೂರ್ಸ್ (ಕೆಳವರ್ಗದವರು) ಅವರು ಇಷ್ಟಪಟ್ಟಲ್ಲಿಗೆ ಹೋಗಬಹುದು ಮತ್ತು ಅವರು ಇಷ್ಟಪಟ್ಟಂತೆ ತಿನ್ನಬಹುದು. ಅವರು ಮೂರ್ಸ್ ಗಳಿಗೆ ಬಟ್ಟೆ ಮತ್ತು ನಿಲುವಂಗಿಯನ್ನು ನೀಡಿದರು. ಇಸ್ಲಾಮಿಗೆ ಮತಾಂತರಗೊಳ್ಳುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರಕುತ್ತದೆ ಮತ್ತು ಕೀಳರಿಮೆ ಹಾಗೂ ತಾರತಮ್ಯಗಳನ್ನು ಅದು ಹೋಗಲಾಡಿಸುತ್ತದೆ ಎಂದು ಕೆಳಜಾತಿಗಳು ಅರಿತುಕೊಂಡಾಗ, ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಲಾರಂಭಿಸಿದರು.” ‘ಸಿ.ಎ ಇನ್ನೆಸ್’ ಹೇಳುತ್ತಾರೆ : “ಚೇರುಮಾನ್‌ಗಳು, ಜೀತದಾಳು ವರ್ಗ ಹಾಗೂ ತಿಯ್ಯಾನ್ ವರ್ಗದವರ ಮತಾಂತರಗೊಳ್ಳುವ ಸಂಖ್ಯೆಯು ಕಾಲಕಾಲಕ್ಕೆ ಅಧಿಕಗೊಂಡಾಗ ಇತರೆ ಜಾತಿಯ ಮುಂದೆ ಇಸ್ಲಾಮಿನ ಗೌರವ ಹೆಚ್ಚಿತು.”

1748 ರಲ್ಲಿ ಹಳರಮೌತಿನ ಶೈಖ್ ಜಿಫ್ರಿ ಕಲ್ಲಿಕೋಟೆಗೆ ಆಗಮಿಸುವುದರೊಂದಿಗೆ ಮಲಬಾರಿನಲ್ಲಿ ಬಾ-ಅಲವಿಗಳು ತಮ್ಮ ಪ್ರಾಬಲ್ಯವನ್ನು ಹೊಂದಿದರು. ಈ ಪ್ರದೇಶದಲ್ಲಿ ಬಾ-ಅಲವಿ ತ್ವರೀಖವನ್ನು (ಪಂಗಡ) ಪರಿಚಯಿಸಿದವರು ಶೈಖ್ ಜಿಫ್ರಿ. ಅದೇ ಸಮಯದಲ್ಲಿ ಸಯ್ಯಿದ್ ಅಬ್ದುಲ್ ರೆಹಮಾನ್ ಹೈದ್ರೂಸ್ 1751 ರಲ್ಲಿ ಮಲಬಾರಿಗೆ ವಲಸೆ ಬಂದು ಪೊನ್ನಾನಿಯಲ್ಲಿ ನೆಲೆಸಿದರು. ಅವರು ಬಾ-ಅಲವಿ ತ್ವರೀಕವನ್ನು ಪಸರಿಸಲು ಅಲ್ಪ ವ್ಯತಿರಿಕ್ತ ಶೈಲಿಯನ್ನು ಅಳವಡಿಸಿದರು. ಅವರ ಮಾರ್ಗವು ಖಾದಿರಿ ತ್ವರೀಕಾದ ಕುಬ್ರವಿಯ್ಯ ಶೈಲಿಗೆ ಹೆಚ್ಚು ಹತ್ತಿರವಾಗಿತ್ತು. ಜಿಫ್ರಿ ಮತ್ತು ಹೈದ್ರೂಸ್ ಎರಡೂ ವಂಶಸ್ಥರು ಸಾಮಾನ್ಯ ಜನರ ಮೇಲೆ, ವಿಶೇಷವಾಗಿ ಕರಾವಳಿಯ ಮೀನುಗಾರರ ಮೇಲೆ ಹೆಚ್ಚಿನ ಆಧ್ಯಾತ್ಮಿಕ ಪ್ರಭಾವ ಬೀರಿದರು. ಮೇಲ್ಜಾತಿಗಳಿಂದ ನಿರ್ಲಕ್ಷಿಸಲ್ಪಟ್ಟ ಈ ಜನರು ಸೈಯ್ಯದ್‌ಗಳನ್ನು ಸಂರಕ್ಷಕರಾಗಿ ಕಂಡುಕೊಂಡರು ಮತ್ತು ಇದು ಹೆಚ್ಚಿನ ಸಂಖ್ಯೆಯ ಮೀನುಗಾರ ಸಮುದಾಯ ಇಸ್ಲಾಮಿಗೆ ಪರಿವರ್ತನೆ ಹೊಂದಲು ಕಾರಣವಾಯಿತು. ಅಬ್ದುರಹ್ಮಾನ್ ಹೈದ್ರೂಸ್ ಅವರ ಉತ್ತರಾಧಿಕಾರಿಗಳಾಗಿ ವಲಿಯ ತಂಙಳ್ ಆಧ್ಯಾತ್ಮಿಕ ನಾಯಕರಾಗಿ ಮುಂದುವರೆದರು.

ಮಂಬುರಂ ಸಯ್ಯಿದ್ ಅಲವೀ:

ಶೈಖ್ ಜಿಫ್ರಿ ಅವರ ಸೋದರಳಿಯ ಸಯ್ಯಿದ್ ಅಲವಿ (1844) ಅವರು ತಮ್ಮ ಕೇಂದ್ರವನ್ನು ತಿರೂರಂಗಾಡಿ ಬಳಿಯ ಮಂಬುರಮಿನಲ್ಲಿ ಸ್ಥಾಪಿಸಿದರು. ಸಯ್ಯಿದ್ ಅಲವಿಯವರ ಜನಪ್ರಿಯತೆಯು ಎಷ್ಟರಮಟ್ಟಿಗೆ ಹೆಚ್ಚಾಯಿತು ಎಂದರೆ ಅವರನ್ನು ಅವರ ಸಮಕಾಲೀನರು ಕುತುಬುಝಮಾನ್ (ಯುಗಪುರುಷ) ಎಂದು ಗೌರವಿಸಿದರು. ಆ ಕಾಲದ ಪ್ರಸಿದ್ಧ ಉಲಮಾಗಳು ಮತ್ತು ಸೂಫಿಗಳು ಅವರ ಆಧ್ಯಾತ್ಮಿಕ ಶಿಷ್ಯರಾದರು. ಸಂಕಷ್ಟದ ಸಮಯದಲ್ಲಿ ಮಾಪಿಳ್ಳರಿಗೆ ನಾಯಕತ್ವವನ್ನು ನೀಡಿದರು. ಮರಣಾನಂತರ ಅವರ ಮಗ ಸಯ್ಯಿದ್ ಪಝಲ್ (1901) ಅವರ ತಂದೆಯ ಆಧ್ಯಾತ್ಮಿಕ ಸೇವೆಯನ್ನು ಮುಂದುವರೆಸಿದರು ಮತ್ತು ಸುಧಾರಣೆಯ ಯುಗವನ್ನು ಪ್ರಾರಂಭಿಸಿದರು. ಬಾ-ಅಲವಿಗಳೊಂದಿಗೆ ಪೊನ್ನಾನಿಯ ಮಖ್ದೂಂಗಳು ಮತ್ತು ಮಲಬಾರಿನ ಹೆಸರಾಂತ ಉಲಮಾಗಳಾದ ವೆಳಿಯಂಕೋಡ್‌ ಉಮರ್ ಖಾಝಿ ಮತ್ತು ಪರಪ್ಪನಂಗಾಡಿಯ ಔಕೋಯ ಮುಸ್ಲಿಯಾರ್, ಸಯ್ಯಿದ್ ಅಲವಿ ಮತ್ತು ಅವರ ಪುತ್ರನ ಸುಧಾರಣಾ ಪ್ರಯತ್ನಕ್ಕೆ ಸಕ್ರಿಯವಾಗಿ ಸಹಾಯ ಮಾಡಿದರು. ದಕ್ಷಿಣ ಮಲಬಾರ್‌ನಲ್ಲಿ ಹಲವಾರು ಮಸೀದಿಗಳನ್ನು ಅವರ ಆಜ್ಞೆಯ ಮೇರೆಗೆ ನಿರ್ಮಿಸಲಾಯಿತು.

ಹತ್ತೊಂಬತ್ತನೇ ಶತಮಾನದಲ್ಲಿ ಬಾ-ಅಲವಿ ಪಥಕ್ಕೆ ಸಂಬಂಧಪಟ್ಟ ಧಾರ್ಮಿಕ ಆಚರಣೆಗಳು ಮತ್ತು ಭಕ್ತಿಗೀತೆಗಳು ಮಾಪಿಳ್ಳರಲ್ಲಿ ಸಾಮಾನ್ಯವಾದವು. ಅಬ್ದುಲ್ಲಾ ಅಲವಿ ಅಲ್-ಹದ್ದಾದ್ ವಿರಚಿತ ಹದ್ದಾದ್ ರಾತೀಬು ಮತ್ತು ಕುತುಬಿಯ್ಯತ್ ಅವುಗಳ ಪೈಕಿ ಪ್ರಮುಖವಾದುದು. ಬಾ-ಅಲವಿಗಳ ಸಂಪ್ರದಾಯವಾಗಿರುವುದರಿಂದ ಹದ್ದಾದ್ ರಾತೀಬ್ ಮಾಪಿಳ್ಳ ಮುಸ್ಲಿಮರಲ್ಲಿ ವ್ಯಾಪಕವಾಗಿ ರೂಢಿಯಾಯಿತು. ಮಾಲಾ ಮತ್ತು ಮೌಲಿದ್ ಪಠಣಗಳಂತಹ ಆಚರಣೆಗಳು ಸಮುದಾಯಕ್ಕೆ ಏಕತೆಯ ಭಾವನೆಯನ್ನು ಒದಗಿಸಿದವು. ‘ನೇರ್ಚ’ ಮುಂತಾದ ಮಾಪಿಳ್ಳ ಸಮಾರಂಭಗಳು ಸಹ ಸಮುದಾಯಕ್ಕೆ ಒಗ್ಗಟ್ಟನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ನೇರ್ಚಾಗಳನ್ನು ಸಾಮಾನ್ಯವಾಗಿ ಸೂಫಿಗಳು ಮತ್ತು ಔಲಿಯಾ ಹುತಾತ್ಮರನ್ನು (ಶುಹದಾಗಳ) ಸ್ಮರಿಸಲು ನಡೆಸಲಾಗುತ್ತಿತ್ತು. ಸ್ಮರಣಾರ್ಥವು ಸ್ಥಳೀಯ ಹುತಾತ್ಮರನ್ನು ಮಾತ್ರವಲ್ಲದೆ ಬದ್ರ್ ಮತ್ತು ಕರ್ಬಲಾದಲ್ಲಿ ನಡೆದಂತಹ ಇಸ್ಲಾಮಿಕ್ ಯುದ್ಧಗಳಲ್ಲಿ ಹುತಾತ್ಮರಾದವರನ್ನು ಸಹ ಒಳಗೊಂಡಿತ್ತು.

ಸೂಫೀ ತತ್ತ್ವಗಳ ಆಕರ್ಷಣೆಯು ಮಲಬಾರಿನಲ್ಲಿ ಮತಾಂತರ ಹೆಚ್ಚಳಕ್ಕೆ ಕಾರಣವಾಯಿತು. ಆದರೆ ಏಕಾಏಕಿ ಮತಾಂತರಕ್ಕೆ ಯಾವುದೇ ರೀತಿಯ ಪ್ರೋತ್ಸಾಹ ನೀಡಲ್ಪಟ್ಟಿಲ್ಲ. ಅನೇಕ ಹಿಂದೂ ಹಿಡುವಳಿದಾರರು ಜಾತಿ ದೌರ್ಜನ್ಯದಿಂದ ಮುಕ್ತರಾಗಲು ಇಸ್ಲಾಮಿನಲ್ಲಿ ಆಶ್ರಯ ಪಡೆದರು. ಇಸ್ಲಾಮಿಗೆ ಮತಾಂತರಗೊಂಡ ನಂತರ ಅವರು ತಮ್ಮ ಬಂಡಾಯದಲ್ಲಿ ಮಾಪಿಳ್ಳರೊಂದಿಗೆ ಸೇರಿಕೊಂಡರು. ಹೊಸ ಮತಾಂತರಗಳು ಯಾವಾಗಲೂ ಮಾಪಿಳ್ಳ ರೈತರ ಬಂಡಾಯಗಳ ಬೆನ್ನೆಲುಬಾಗಿದ್ದವು. ತಂಙಳ್‌ಗಳ ವ್ಯಕ್ತಿತ್ವ ಮತ್ತು ಆಧ್ಯಾತ್ಮಿಕ ಜ್ಞಾನವು ಆಶೀರ್ವಾದಕ್ಕಾಗಿ ಅವರನ್ನು ಸಂಪರ್ಕಿಸಿದ ಅನೇಕ ಹಿಂದೂಗಳ ಹೃದಯವನ್ನು ಗೆದ್ದಿತು ಮತ್ತು ಅನೇಕರು ಇಸ್ಲಾಂ ಧರ್ಮವನ್ನು ಅವರ ಸನ್ನಿಧಿಗಳಲ್ಲಿ ಸ್ವೀಕರಿಸಿದರು. ಮತಾಂತರಗಳಿಂದಾಗಿ ಸಮುದಾಯದ ಬಲವು ಹೆಚ್ಚಾಗುವುದರೊಂದಿಗೆ ಇದು ಬಂಡಾಯಗಳಿಗೆ ಸಾಕಷ್ಟು ಮಾನವ ಶಕ್ತಿಯನ್ನು ಒದಗಿಸಿತು.

ಇಪ್ಪತ್ತು ವರ್ಷಗಳ ಹಿಂದೆ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಹೆಚ್. ಬಾಬರ್ ಅವರು ಮತಾಂತರವನ್ನು ಸಂಪೂರ್ಣವಾಗಿ ಕಾನೂನುಬಾಹಿರಗೊಳಿಸುವುದು ಉತ್ತಮ ಎಂದು ಸೂಚಿಸಲು ಪ್ರೇರೇಪಿಸಿದ ಹಿಂದಿರುವ ಸಬಬುಗಳಲ್ಲಿ ಇದೂ ಒಂದಾಗಿದೆ. ಆದರೆ ಸರ್ಕಾರ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ವಿರೋಧಾಭಾಸವೆಂದರೆ, ಆರಂಭಿಕ ವರ್ಷಗಳಲ್ಲಿ ಹಿಂದೂಗಳ ಮತ್ತು ಕೆಳಜಾತಿಯ ಹಿಡುವಳಿದಾರರ ಮತಾಂತರಕ್ಕೆ ಯಾವುದೇ ಗಂಭೀರ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ. ಅನೇಕ ಉಲಮಾಗಳು ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಅದು ಇಂದಿಗೂ ಧರ್ಮ ಮತ್ತು ತತ್ವಶಾಸ್ತ್ರದ ಕ್ಷೇತ್ರದಲ್ಲಿ ಮಾಪಿಳ್ಳ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತದೆ. ಸಯ್ಯಿದ್ ಫಝಲ್ ಮತ್ತು ಅವರ ಸಮಕಾಲೀನರಾದ ಉಮರ್ ಖಾಝಿ, ಮರಕ್ಕರಕತ್ ಔಕೋಯ ಮುಸ್ಲಿಯಾರ್ ಮತ್ತು ಸಯ್ಯಿದ್ ಫಕ್ರುದ್ದೀನ್ ಅವರು ಈ ಅವಧಿಯ ಪ್ರಸಿದ್ಧ ಲೇಖಕರು. ಸಯ್ಯದ್ ಫಝಲ್ ಅವರು ಹತ್ತು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.

ಮಲಬಾರಿನಲ್ಲಿ ಶೈಖ್ ಜಿಫ್ರಿ ಮತ್ತು ಅವರ ಅನುಯಾಯಿಗಳು ಕಲ್ಲಿಕೋಟೆಯ ಬಳಿಯ ಕೊಂಡೊಟ್ಟಿಯಲ್ಲಿ ನೆಲೆಸಿದ್ದ ಫಕೀರ್ ಎಂದು ಕರೆಯಲ್ಪಡುವ ಮುಹಮ್ಮದ್ ಷಾ ಬೋಧಿಸಿದ ಸೂಫಿ ಆಶಯವನ್ನು ಎದುರಿಸಬೇಕಾಯಿತು. ಮುಹಮ್ಮದ್ ಷಾ ಹಳರಮಿ ಆಗಿರಲಿಲ್ಲ ಮತ್ತು ಅವರ ಪೂರ್ವಜರು ಪರ್ಷಿಯಾಕ್ಕೆ ಸೇರಿದವರು. ಟಿಪ್ಪು ಸುಲ್ತಾನ್ ಮಲಬಾರನ್ನು ವಶಪಡಿಸಿಕೊಂಡಾಗ ಕೆಲವು ಮುಸ್ಲಿಂ ವಿದ್ವಾಂಸರು ಫಕೀರ್ ಮತ್ತು ಅವರ ಉತ್ತರಾಧಿಕಾರಿಯ ಧರ್ಮದ್ರೋಹಿ ನಂಬಿಕೆಗಳ ಬಗ್ಗೆ ದೂರು ನೀಡಿದರು. ಅಲ್ಲಿ ಸುಲ್ತಾನನು ಅವರನ್ನು ತನ್ನ ಸನ್ನಿಧಿಗೆ ಕರೆತಂದು ಫಕೀರನೊಂದಿಗೆ ಮುಸ್ಲಿಂ ವಿದ್ವಾಂಸರಿಂದ ತನಿಖೆ ನಡೆಸಿದರು. ಫಕೀರ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿ ತಾನು ನೈಜ ನಂಬಿಕೆಯಲ್ಲಿ ಇದ್ದೇನೆ ಎಂದು ಪ್ರತಿಪಾದಿಸಿದನು ಮತ್ತು ತಾನು ಸೂಫಿಸಮಿನ ಖಾದಿರಿ ಕ್ರಮವನ್ನು ಅನುಸರಿಸಿದವನು ಎಂದು ಹೇಳಿ ಸುಲ್ತಾನನ ಮುಂದೆ ಒಂದು ಕವಿತೆಯನ್ನು ಓದಿದನು. ಅದು ಈ ಕೆಳಗಿನ ಸಾರವನ್ನು ಹೊಂದಿದೆ: “ಇಸ್ಲಾಂ ನನ್ನ ಧರ್ಮ, ಮುಹಮ್ಮದ್ ನನ್ನ ಪ್ರವಾದಿ, ಖುರ್‌ಆನ್ ನನ್ನ ಮಾರ್ಗದರ್ಶಕ ಮತ್ತು ಕರಮ್ ಅಲೀ ನನ್ನ ಶೈಖ್. ನಾನು ಶೈಖ್ ಮುಯಿನುದ್ದೀನ್ ಚಿಶ್ತಿ ಮತ್ತು ಅಬ್ದುಲ್ ಖಾದಿರ್ ಜೀಲಾನಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡವನು.” ಟಿಪ್ಪು ಸುಲ್ತಾನ್ ಫೆರೋಕ್‌ನಲ್ಲಿ ತನ್ನ ಪ್ರಧಾನ ಕಛೇರಿಯನ್ನು ನಿರ್ಮಿಸುತ್ತಿದ್ದಾಗ ಅಲ್ಲಿ ಸೂಫಿಗಳು ಮತ್ತು ಉಲಮಾಗಳನ್ನು ಆಹ್ವಾನಿಸಿದ ಮತ್ತು ತನ್ನ ಹೊಸ ಯೋಜನೆಗಳ ಯಶಸ್ಸಿಗಾಗಿ ಪ್ರಾರ್ಥಿಸಲು ವಿನಂತಿಸಿದರು. ಅವರು ಮುಹಮ್ಮದ್ ಷಾನನ್ನು ಇನಾಂದಾರನನ್ನಾಗಿ ಮಾಡಿದರು ಮತ್ತು ಅವನಿಗೆ ತೆರಿಗೆ ಮುಕ್ತವಾಗಿ ಭೂಮಿಯನ್ನು ನೀಡಿದರು. ಫಕೀರನ ಬ್ರಿಟೀಷರೊಂದಿಗಿನ ನಂಟು ಮತ್ತು ಶಿಯಾ ಆಚರಣೆಗಳು ಬಹುಪಾಲು ಉಲಮಾಗಳಲ್ಲಿ ದ್ವೇಷವನ್ನು ಉಂಟುಮಾಡಿತು. ಆದ್ದರಿಂದ, ಅವರು ಫಕೀರ್ ಮತ್ತು ಅವನ ಶಿಷ್ಯಂದಿರನ್ನು ಧರ್ಮದ್ರೋಹಿಗಳೆಂದು ಪ್ರಚಾರ ಪಡಿಸಿದರು.

ಹಲವಾರು ಮಾಪಿಳ್ಳಾಗಳು ಜಿಫ್ರಿಯವರ ಆದೇಶದ ಮೇರೆಗೆ ಅವರ ಸಂದೇಶವನ್ನು ಉತ್ತರದಿಂದ ದಕ್ಷಿಣ ಮಲಬಾರಿ‌ಗೆ ಹರಡಿದರು. ಅವರ ಮುರೀದರುಗಳಲ್ಲಿ ಪ್ರಖ್ಯಾತ ಉಲಮಾಗಳು ಮತ್ತು ಸಯ್ಯಿದ್‌ಗಳಿದ್ದರು. ಅವರು ಮಲಬಾರಿ‌ನ ಪೊನ್ನಾನಿಯ ಮುಸ್ಲಿಂ ವಿದ್ವಾಂಸರಾದ ಮಖ್ದೂಮ್‌ಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಜಿಫ್ರಿಗಳಂತೆ ಮಖ್ದೂಮ್‌ಗಳು ಸಹ ದಕ್ಷಿಣ ಅರೇಬಿಯಾದಿಂದ ವಲಸೆ ಬಂದವರು. ಇದಲ್ಲದೆ ‘ಅಬ್ದುರಹ್ಮಾನ್ ಹೈದ್ರೂಸ್’ ಅವರ ಶಿಷ್ಯ ಸಂಬಂಧಿ ಮತ್ತು ಹಳರಮೌತಿನ ಸ್ಥಳೀಯರು ಮಖ್ದೂಮ್‌ಗಳ ಕುಟುಂಬದಿಂದ ವಿವಾಹವಾಗುವ ಮೂಲಕ ಮಾಪಿಳ್ಳರ ಜೊತೆ ಹೆಚ್ಚಿನ ನಂಟು ಬೆಳೆಸಿದರು. ಪೊನ್ನಾನಿಯಲ್ಲಿ ಅಧ್ಯಯನ ಮಾಡಿದ ಮಖ್ದೂಮ್‌ಗಳು ಮತ್ತು ಉಲಮಾಗಳು ಸಯ್ಯಿದ್ ಜಿಫ್ರಿಯನ್ನು ತಮ್ಮ ಆಧ್ಯಾತ್ಮಿಕ ನಾಯಕನನ್ನಾಗಿ ಸ್ವೀಕರಿಸಿದರು. ಮಾಪಿಳ್ಳಗಳ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿದ್ದ ಪೊನ್ನಾನಿಯ ಉಲಮಾಗಳ ಮೂಲಕ ಜಿಫ್ರಿಯವರ ಸಂದೇಶವು ಮಲಬಾರಿನ ಮೂಲೆ ಮೂಲೆಗಳನ್ನು ತಲುಪಿತು.

ಸಯ್ಯಿದ್ ಜಿಫ್ರಿಯವರ ಸೂಫೀ ಮಾರ್ಗವನ್ನು ಮಲಬಾರಿನಲ್ಲಿ ಅವರ ಸೋದರಳಿಯ ಸಯ್ಯಿದ್ ಅಲವಿ ಅವರು ಜನಪ್ರಿಯಗೊಳಿಸಿದರು. ಜಿಫ್ರಿ ಅವರು ಹಲವಾರು ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕನ್ಝ್-ಅಲ್ ಬರಾಹಿನ್, ಕೌಕಬ್-ಅಲ್ ದುರ್ರಿಯಾ, ಅಲ್ ನತೀಜ ಮತ್ತು ಅಲ್ ಕುರ್ಬತ್ ವಲ್ ಅಸ್ರಾರ್ ಪ್ರಮುಖವಾಗಿವೆ. 1807 ರಲ್ಲಿ (ದುಲ್-ಕಅದ್ ಎಂಟು) ತಮ್ಮ ಎಂಬತ್ತಮೂರನೆಯ ವಯಸ್ಸಿನಲ್ಲಿ ಶೈಖ್ ಜಿಫ್ರಿ ನಿಧನ ಹೊಂದಿದರು. ನಂತರ ಅವರನ್ನು ಮಲಿಯಕ್ಕಲ್ ಮನೆಯ ಬಳಿ ಸಮಾಧಿ ಮಾಡಲಾಯಿತು. ಶೈಖ್ ಜಿಫ್ರಿಯವರು ಒಮ್ಮೆ ಕೊಂಡೊಟ್ಟಿಯಲ್ಲಿನ ಫಕೀರನನ್ನು ಭೇಟಿಯಾಗುತ್ತಾರೆ. ಸತತ ಅನ್ವೇಷಣೆಯ ಬಳಿಕ ಅವನೊಬ್ಬ ಶಿಯಾ ಪಂಗಡಕ್ಕೆ ಸೇರಿದವನು ಎಂದು ದೃಢಪಡಿಸಿಕೊಂಡರು. ಆದರೆ, ಅವನು ತನಗೆ ಶಿಯಾ ಪಂಗಡದೊಂದಿಗೆ ಯಾವದೇ ಸಂಬಂಧ ಇಲ್ಲವೆಂದು ಕಟುವಾಗಿ ನಿರಾಕರಿಸಿದನು. ಸ್ವತಃ ಶಾಫಿ ಸುನ್ನಿ ಎಂದು ಹೇಳಿಕೊಂಡನು. ತನ್ನ ಕನ್ಝ್-ಅಲ್ ಬರಾಹಿನ್ ನಲ್ಲಿ ಶೈಖ್ ಜಿಫ್ರಿ ‘ಮುಹಮ್ಮದ್ ಷಾ’ನನ್ನು ಹುಸಿ-ಸೂಫಿ ಎಂದು ಘೋಷಿಸುತ್ತಾರೆ. “ತಪ್ಪು ದಾರಿಯಲ್ಲಿ ಚಲಿಸುವ ಮತ್ತು ಇತರರನ್ನು ದಾರಿ ತಪ್ಪಿಸುವ, ನಮಾಝ್ ಮತ್ತು ಹಜ್ಜನ್ನು ನಿರುತ್ಸಾಹಗೊಳಿಸುವ, ಜನರು ದೈವಸ್ಮರಣೆ ಮಾಡುವುದನ್ನು ತಡೆಯುವ ಮತ್ತು ಪುರುಷರನ್ನು ಮುಕ್ತವಾಗಿ ಮಹಿಳೆಯರೊಂದಿಗೆ ಬೆರೆಯುವುದನ್ನು ಅನುಮತಿಸುವ” ಮುಂತಾದ ಅವನ ಅಧಾರ್ಮಿಕ ಮತ್ತು ಧರ್ಮದ್ರೋಹಿ ಚಟುವಟಿಕೆಗಳನ್ನು ಜಿಫ್ರಿ ಎತ್ತಿ ತೋರಿಸಿದರು.

ಔದಿಲಿಚ್ಚಿ ಮುಸ್ಲಿಯಾರ್ ಎಂದು ಪ್ರಸಿದ್ಧರಾದ ಖಾಜಿ ಅಬ್ದುಲ್ ಅಝೀಝ್ ಶೈಖ್ ಜಿಫ್ರಿಯನ್ನು ಟೀಕಿಸಿ ಫಕೀರನನ್ನು ಸಮರ್ತಿಸಿದರು. ಖ್ಯಾತ ಮುಸ್ಲಿಂ ನ್ಯಾಯಶಾಸ್ತ್ರಜ್ಞರಾದ ಇಮಾಮ್ ಶಾಫಿ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಅಬ್ದುಲ್ ಅಝೀರವರು ಕರ್ಮಶಾಸ್ತ್ರದ ವ್ಯಾಪ್ತಿಯಿಂದ ಹೊರಗೆ ಚಲಿಸುವ ಸೂಫಿಗಳ ಕ್ರಮಗಳು ಮತ್ತು ವಿಧಾನಗಳೊಂದಿಗೆ ದೇವತಾಶಾಸ್ತ್ರಜ್ಞರಿಗೆ (theologian) ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ ಶೈಖ್ ಜಿಫ್ರಿಯವರು ಅಬ್ದುಲ್ ಅಝೀಝ್ ರವರ ಹೇಳಿಕೆಗಳಲ್ಲಿನ ಪ್ರಮಾದಗಳು ಮತ್ತು ದೋಷಗಳನ್ನು ಹೊರತಂದು ಫಕೀರ್ ಅಳವಡಿಸಿಕೊಂಡ ವಿಧಾನಗಳು ಇಸ್ಲಾಮ್ ಮತ್ತು ಸೂಫಿಗಳು ಸೇರಿದಂತೆ ಎಲ್ಲಾ ಮುಸ್ಲಿಮರು ಹೊಂದಿರುವ ಶರೀಅತ್ತಿಗೆ ವಿರುದ್ಧವಾಗಿವೆ ಎಂದು ಪ್ರತಿಪಾದಿಸಿದರು. ಶೈಖ್ ಜಿಫ್ರಿಯವರು ಫಕೀರ್ ಮತ್ತು ಅವನ ಅನುಯಾಯಿಗಳ ಇಸ್ಲಾಮಿಕ್ ಆಚರಣೆಗಳನ್ನು ಈ ರೀತಿ ವರ್ಣಿಸುತ್ತಾರೆ:

“ಓಹ್, ಹಶಿಶ್ ಅನ್ನು ಧೂಮಪಾನ ಮಾಡುವ ಜನರು, ಯಾವಾಗಲೂ ದೇವರ ಮನೆಯನ್ನು ನಿರ್ಲಕ್ಷಿಸುತ್ತಾರೆ, ಪ್ರಾರ್ಥನೆ ಮತ್ತು ಉಪವಾಸವನ್ನು ತ್ಯಜಿಸಿ, ದೇವರು ಕಡ್ಡಾಯಗೊಳಿಸಿದ್ದನ್ನು ತಿರಸ್ಕರಿಸಿ, ಮಾತುಕತೆಗಳಲ್ಲಿ ಮತ್ತು ಕಾರ್ಯಗಳಲ್ಲಿ ಅವರು ಮಿತಿಗಳನ್ನು ಮೀರುತ್ತಾರೆ ಮತ್ತು ಜನರಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತಾರೆ. ಕೊನೆಗೆ ಅವರು ಶೈತಾನನನ್ನು ಅಪ್ಪಿಕೊಳ್ಳುತ್ತಾರೆ. ಧರ್ಮದ್ರೋಹಿ ಫಕೀರ್ ಅನ್ನು ಅನುಸರಿಸದಿರಿ ಅವನು ಜನರನ್ನು ದಾರಿ ತಪ್ಪಿಸುತ್ತಿದ್ದಾನೆ. ಅವರು ತಮ್ಮ ತಪ್ಪುಗಳಿಗಾಗಿ ಪಶ್ಚಾತ್ತಾಪ ಪಡದಿದ್ದರೆ ದೊಡ್ಡ ವಿನಾಶವನ್ನು ಕಾಣುವರು” ಎಂದು ಎಚ್ಚರಿಸಿದರು.

ಶೈಖ್ ಜಿಫ್ರಿಯವರು ಖುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್ (ಸ.ಅ) ರ ಸಂಪ್ರದಾಯವನ್ನು ನಿರ್ಲಕ್ಷಿಸಿದಕ್ಕಾಗಿ ಪ್ರಮುಖ ಖಾಜಿಯನ್ನು ಸಹ ಟೀಕಿಸುತ್ತಾರೆ. ಮುಹಮ್ಮದ್ ಷಾ ಮತ್ತು ಅವನ ಸೂಫಿ ಪದ್ಧತಿಗಳ ವಿರುದ್ಧ ತೀರ್ಪು ನೀಡಿದ ಉಲಮಾಗಳು ಇತರ ಆಚರಣೆಗಳೊಂದಿಗೆಅವನು ಶಿಯಾ ಪದ್ಧತಿಗಳನ್ನು ಅನುಸರಿಸಿದವನು ಎಂದು ಎತ್ತಿ ತೋರಿಸಿದರು.

ಮಂಬುರಮಿನ ಸಯ್ಯಿದ್ ಅಲವಿ ಯವರು ಷಾ ರನ್ನು ಬೋಹ್ರಾ ಪಂಗಡಕ್ಕೆ ಸೇರಿದ ಶಿಯಾ ಎಂದು ಚಿತ್ರಿಸಿದ್ದಾರೆ. ಅವರು ಹೇಳುತ್ತಾರೆ: “ಪಠಾಣರಲ್ಲಿ ಸುನ್ನಿಗಳಿಗೆ ಸೇರಿದ ನಾಲ್ಕು ಗುಂಪುಗಳಿವೆ; ಶೇಖ್‌ಗಳು, ಸಯ್ಯಿದರುಗಳು, ಮೊಘಲರು ಮತ್ತು ಪಠಾಣರು. ಕೊಂಡೊಟ್ಟಿ ಫಕೀರ್ ಈ ಯಾವುದೇ ಗುಂಪುಗಳಿಗೆ ಸೇರಿದವನಲ್ಲ, ಆದರೆ ಅವನು ರಾಫಿಳೀ ಎಂಬ ತೀವ್ರವಾದ ಧರ್ಮದ್ರೋಹಿ ಶಿಯಾ ಗುಂಪಿನ ಅಡಿಯಲ್ಲಿ ಬರುವ ಬೋಹ್ರಾ ಪಂಗಡಕ್ಕೆ ಸೇರಿದವನು” ಎಂದು ಫಕೀರನನ್ನು ರಾಫಿಳಿ ಮತ್ತು ಬೋಹ್ರಾ ಪಂಥದ ಶಿಯಾ ಎಂದು ಕರೆದರು. ಮಂಬುರಮಿನ ಸಯ್ಯಿದ್ ಅಲವಿ ಉಲ್ಲೇಖಿಸುತ್ತಾರೆ “ಪ್ರವಾದಿ ಮುಹಮ್ಮದ್ ಮತ್ತು ಅವರ ಮೂವರು ಖಲೀಫರಾದ – ಅಬೂಬಕ್ಕರ್, ಉಮರ್ ಮತ್ತು ಉಸ್ಮಾನ್ ಅವರ ಮಾದರಿಗಳನ್ನು ತಯಾರಿಸುವ ಪದ್ಧತಿಗಳು ಶಿಯಾಗಳೆಡೆಯಲ್ಲಿ ಹೇಗಿತ್ತೆಂದರೆ, ನಾಲ್ಕು ಕುಳಿಯನ್ನು ತಯಾರಿಸಲಾಗುತ್ತದೆ ಮತ್ತು ಅವುಗಳಲ್ಲಿ ಜೇನುತುಪ್ಪವನ್ನು ಸುರಿಸಲಾಗುತ್ತದೆ. ಇನ್ನಿತರ ಸ್ವಹಾಬಿಗಳು ಅಲೀಯಿಂದ ಪ್ರವಾದಿತ್ವವನ್ನು ಕಸಿದುಕೊಂಡರು ಎಂದು ಭಾವಿಸಿ ನಂತರ ಅವರು ಅದನ್ನು ಒಡೆದು ಪ್ರವಾದಿ ಮತ್ತು ಖಲೀಫರ ರಕ್ತವನ್ನು ಹೀರುವಂತೆ ಜೇನುತುಪ್ಪವನ್ನು ಹೀರುತ್ತಾರೆ.” ಪ್ರಮುಖ ರಾಫಿಳಿಗಳಾದ ಸಬ್ಬಾಹ್, ಇಬ್ನ್ ಸಮಾ, ಮುಗೀರಾ ಬಿ , ಸೈದ್ ಮತ್ತು ಅಬೀ ಖತ್ತಾಬ್ ಅಲ್ ಅಸದಿ ಶೈಖನ ಮುಂದೆ ಸಾಷ್ಟಾಂಗ ನಮಸ್ಕಾರವನ್ನು ಮಾಡಲು ಶಿಫಾರಸ್ಸು ಮಾಡಿದರು.

ಫಕೀರ್ ವಿರುದ್ಧ ಬಾ ಅಲವಿಗಳು , ಮಕ್ದೂಮ್ ಗಳು ಮತ್ತು ಮಲಬಾರಿ‌ನ ಉಲಮಾಗಳ ಜಂಟಿ ಟೀಕೆಗಳು ಅವನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು. ಆದರೂ, ಹೆಚ್ಚಿನ ಸಂದರ್ಭಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ಅವನಿಗೆ ಸಹಾಯ ನೀಡಿದರು. ನಂತರ ಫಕೀರ‌ನ ಉತ್ತರಾಧಿಕಾರಿಗಳು ಮಕ್ದೂಮ್‌ಗಳ ಅಡಿಯಲ್ಲಿ ಉಲಮಾಗಳೊಂದಿಗೆ ರಾಜಿ ಮಾಡಿಕೊಂಡು ಸರ್ವ ಇಸ್ಲಾಮೇತರ ಆಚರಣೆಗಳ ಖಾನ್’ಕಾಹನ್ನು ತೆರವುಗೊಳಿಸಿದರು. ಆ ಮೂಲಕ ಮಲಬಾರಿನ ಧಾರ್ಮಿಕ ಕ್ಷೇತ್ರದಲ್ಲಿ ಹಳರಮಿಗಳ ಪ್ರಾಬಲ್ಯವು ಹೆಚ್ಚಾಯಿತು. ಮಲಬಾರಿನ ಧಾರ್ಮಿಕ ವಿಚಾರಗಳಲ್ಲಿ ಬಾ-ಅಲವಿ ಸಂಪ್ರದಾಯವನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಹೆಚ್ಚಾಗಿ ಸಯ್ಯಿದ್ ಸಮುದಾಯವು ಧಾರ್ಮಿಕ-ರಾಜಕೀಯ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಮಧ್ಯ ಏಷ್ಯಾದ ಬುಖಾರ ಪ್ರದೇಶದಿಂದ ಬಂದ ಬುಖಾರಿ ಮನೆತನದವರು ಬಾ-ಅಲವಿಗಳ ಮಾರ್ಗವನ್ನು ಅನುಸರಿಸುತ್ತಾರೆ ಹಾಗೂ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಈ ಸಯ್ಯಿದರು‌ಗಳ ಹಿಡಿತವು ಇನ್ನೂ ದೃಢವಾಗಿ ಉಳಿದಿದೆ.

ಇಂಗ್ಲಿಷ್‌ ಮೂಲ: ಡಾ. ಹುಸೈನ್ ರಂಡತ್ತಾನಿ
ಕನ್ನಡಕ್ಕೆ: ತಂಶೀರ್ ಉಳ್ಳಾಲ್

1 2 3 16