ದಲಾಇಲುಲ್ ಖೈರಾತ್: ಆರಂಭಿಕ ಹಸ್ತಪ್ರತಿಗಳು ಮತ್ತು ಚಿತ್ರಕಲೆಗಳು

ಪೈಗಂಬರ್ (ಸ.ಅ.) ರ ಮೇಲಿನ ಪ್ರಕೀರ್ತನೆಗಳು ಮತ್ತು ದರೂದಿನ ಸಮಾಹಾರ ಈ ದಲಾಇಲುಲ್ ಖೈರಾತ್. ಹದಿನೈದನೆಯ ಶತಮಾನದಲ್ಲಿ ರಚಿಸಲ್ಪಟ್ಟ ಈ ಗ್ರಂಥವನ್ನು ಜಾಗತಿಕ ಮುಸ್ಲಿಮರು ತಮ್ಮ ಮನೆಗಳಲ್ಲಿ, ಮಸ್ಜಿದ್ ಮತ್ತು ಮಖ್ಬರಾಗಳಲ್ಲಿ ದಿನನಿತ್ಯ ಓದುತ್ತಾರೆ.

ಗ್ರಂಥದ ಕರ್ತೃ ಸುಲೈಮಾನುಲ್ ಜಸೂಲಿ (ರ). ಆಧುನಿಕ ಮೊರಾಕ್ಕೊದಲ್ಲಿ ಜನಿಸಿದ ಇವರು ಪ್ರಮುಖ ವಿದ್ವಾಂಸರಾಗಿ ಗುರುತಿಸಿಕೊಂಡವರು. ‘ಒಳಿತಿನೆಡೆಗೆ ಮಾರ್ಗದರ್ಶಿ’ ಎಂಬ ಅರ್ಥ ನೀಡುವ ಈ ಗ್ರಂಥದ ರಚನೆಗೆ ಓರ್ವ ಹೆಣ್ಣುಮಗಳ ಆಕಸ್ಮಿಕ ಭೇಟಿ ಅವರಿಗೆ ಪ್ರೇರಣೆ ನೀಡಿತು. ಒಮ್ಮೆ ಅಂಗಸ್ನಾನ ಮಾಡಲೆಂದು ಇಮಾಮ್ ಜಸೂಲಿಯವರು ಬಾವಿಯ ಬಳಿಗೆ ತೆರಳಿದರು. ಆದರೆ, ಬಾವಿ ಬತ್ತಿರುವುದನ್ನು ಕಂಡು ಚಿಂತಿತರಾದರು. ಆ ವೇಳೆ ಅಲ್ಲಿಗೆ ತಲುಪಿದ ಒಬ್ಬಳು ಹೆಣ್ಣುಮಗಳು ಆ ಬಾವಿಗೆ ಉಗುಳುವುದರೊಂದಿಗೆ ನೀರು ಮತ್ತೆ ತುಂಬಿತು. ಆಶ್ಚರ್ಯಚಕಿತರಾಗಿ ಇಮಾಮರು ಆ ಮಗುವಿನೊಂದಿಗೆ ಇದರ ಹಿಂದಿನ ಆಧ್ಯಾತ್ಮಿಕ ಶಕ್ತಿಯ ಕುರಿತಾಗಿ ಕೇಳಿದರು. ‘ಕಾಡಿನಲ್ಲಿ ನಡೆಯುವಾಗ ವನ್ಯಜೀವಿಗಳು ಯಾರನ್ನು ಅನುಕರಿಸುತ್ತಿತ್ತೋ ಆ ಪ್ರವಾದಿಯವರ ಮೇಲಿನ ಸ್ವಲಾತಿನ ಮಹಿಮೆ’ ಆ ಹೆಣ್ಣುಮಗುವಿನ ಪ್ರತ್ಯುತ್ತರ ಹೀಗಿತ್ತು. ಈ ಮಾತು ಕೇಳಿದೊಡನೆ ಇಮಾಮರ ಮನದೊಳಗೆ ದಲಾಇಲುಲ್ ಖೈರಾತಿನ ರಚನೆ ಪ್ರಾರಂಭಗೊಂಡಿತು.

ದಿನದಿಂದ ದಿನಕ್ಕೆ ಇದರ ಕೀರ್ತಿ ಹಬ್ಬಿದಂತೆ, ಮಧ್ಯ ಮೊರಾಕ್ಕೋದಿಂದ ಹಿಡಿದು ಪೂರ್ವ ಚೀನಾದವರೆಗೆ ದಲಾಇಲುಲ್ ಖೈರಾತಿನ ಸುಂದರ ಮುದ್ರಿತ ಚಿತ್ರಕಲೆಗಳ ಸಂಪ್ರದಾಯ ಬೆಳೆಯತೊಡಗಿತು. ಪರಿಣಾಮವಾಗಿ ವ್ಯತಿರಿಕ್ತ ಚಿತ್ರಗಳ ಜೊತೆಗೆ ದಲಾಇಲುಲ್ ಖೈರಾತಿನ ಹಲವು ಪ್ರತಿಗಳು ಮೂಡಿ ಬಂದವು. ಬಹುಶಃ ಪವಿತ್ರ ಖುರ್‌ ಆನಿನ ನಂತರ ಅತೀ ಹೆಚ್ಚು ನಕಲು ಮಾಡಲ್ಪಟ್ಟ ಗ್ರಂಥ ಇದೇ ಆಗಿರಬಹುದು. ಪವಿತ್ರ ಮಕ್ಕಾ ಮತ್ತು ಮದೀನಾದ ಹಾಗೂ ಪೈಗಂಬರ್ (ಸ.ಅ) ರಿಗೆ ಸಂಬಂಧಪಟ್ಟ ಸ್ಥಳಗಳು ಹಾಗೂ ವಸ್ತುಗಳ ಚಿತ್ರಗಳು ರಚನೆಯ ಪೈಕಿ ಅತೀ ಹೆಚ್ಚು.

ದಲಾಇಲುಲ್ ಖೈರಾತ್: ಒಂದು ಆಳ ವೀಕ್ಷಣೆ

ಮೊರಾಕ್ಕೊ ಹದಿನಾರನೆಯ ಶತಮಾನ

ಮೇಲಿನ ಚಿತ್ರ ಎರಡು ಪುಟಗಳ ರಚನೆ. (Double page spread) ಆದರೆ, ಇದು ವಿಶಾಲ ವ್ಯಾಪ್ತಿಯೊಳಗೆ ರೂಪಾಂತರಗೊಂಡಿದೆ. ಹಲವು ಹಸ್ತಪ್ರತಿಗಳಲ್ಲಿ ಈ ಚಿತ್ರ ಮೂಡಿ ಬಂದಿದೆ. ಬಲಭಾಗದಲ್ಲಿ ಚಿತ್ರಿಸಲ್ಪಟ್ಟಿರುವುದು ಮಕ್ಕಾ ಮಸೀದಿಯ ಪಕ್ಷಿನೋಟ (Birds eye view). ನಾಲ್ಕು ಮದ್ಹಬ್ ಗಳಿಂದಾವೃತಗೊಂಡ ಪವಿತ್ರ ಕಅಬಾ. ಎಡದಲ್ಲಿ ಎತ್ತರದ ಗೋಡೆಯೊಳಗೆ ಪೈಗಂಬರ್ (ಸ.ಅ) ರು ಮತ್ತು ಅನುಚರರಾದ ಅಬೂಬಕರ್ ಮತ್ತು ಉಮರ್ (ರ.ಅ.) ಅವರು ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಮದೀನಾ ಮಸೀದಿಯ ಕೋಣೆ. ಜೊತೆಗೆ ಪೈಗಂಬರರ ಮಿಂಬರ್ ಸಹ ಚಿತ್ರದಲ್ಲಿ ಕಾಣಬಹುದು.

ಹಸ್ತಪ್ರತಿಯ ರಚನಾಶೈಲಿ, ಲಿಪಿ, ಪಾಶ್ಚಾತ್ಯ ಇಸ್ಲಾಮಿಕ್ ಶೈಲಿಯನ್ನೊಳಗೊಂಡಿರುವ ರಚನೆಯ ಅಲಂಕಾರ ಇವೆಲ್ಲವೂ ಈ ಚಿತ್ರ ಹದಿನಾರನೆಯ ಶತಮಾನದ ವೇಳೆ ಮೊರಾಕ್ಕೊದಲ್ಲಿ ರಚಿಸಲ್ಪಟ್ಟಿದೆ ಎಂಬುದನ್ನು ದೃಢೀಕರಿಸುತ್ತದೆ. ಇಂತಹಾ ಚಿತ್ರಗಳು ಇಸ್ಲಾಮಿನ ಪವಿತ್ರ ಯಾತ್ರೆಗಳು ಮತ್ತು ಇನ್ನಿತರ ಯಾತ್ರೆಗಳ ಇತಿಹಾಸವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. 1960ರ ವೇಳೆ ಅಫ್ಘಾನಿಸ್ತಾನದ ಕಾಬೂಲ್ ನಗರದ ಒಂದು ಮಾರುಕಟ್ಟೆಯಲ್ಲಿ ಈ ಚಿತ್ರ ಮೊದಲ ಬಾರಿಗೆ ಬೆಳಕಿಗೆ ಬಂತು. ಹಸ್ತಪ್ರತಿ ಉಪಯೋಗಿಸುವ ಸಲುವಾಗಿ ಸೇರಿಸಿದ ದೇವನಗಿರಿ ಲಿಪಿ ಈ ಪ್ರತಿಯನ್ನು ಮಕ್ಕಾಕ್ಕೆ ಕೊಂಡೊಯ್ಯಲಾಗಿತ್ತು ಎಂಬುದನ್ನು ಸೂಚಿಸುತ್ತದೆ. ಅಲ್ಲಿಂದ ಓರ್ವ ಭಾರತೀಯ ಯಾತ್ರಿಕ ಅದನ್ನು ಖರೀದಿಸಿದನು.

ದಲಾಇಲುಲ್ ಖೈರಾತಿನ ಹಸ್ತಪ್ರತಿಯ ಎರಡು ಪುಟಗಳಲ್ಲಿ ಮೂಡಿ ಬಂದ ಮಕ್ಕಾ ಮತ್ತು ಮದೀನಾದ ಪವಿತ್ರ ಮಸೀದಿಗಳು. 1629- 30, ಟುನೀಶಿಯಾದಿಂದ ದೊರಕಿದ್ದು ಎನ್ನಲಾಗಿದೆ. The metropolitan museum of art, purchase, Friends of islamic Art Gifts, 2017 (2017.301)

ಚಿತ್ರ ಎರಡರಲ್ಲಿ ಕಾಣಬಹುದಾದ ಹದಿನೇಳನೆಯ ಶತಮಾನದ ಹಸ್ತಪ್ರತಿ ದಲಾಇಲುಲ್ ಖೈರಾತಿನ ಆರಂಭಿಕ ರಚನೆಗಳ ಸಾಲಿಗೆ ಸೇರುತ್ತದೆ. ಮುಹಮ್ಮದ್ ಬಿನ್ ಅಹಮದ್ ಬಿನ್ ಅಬ್ದುರ್ರಹ್ಮಾನ್ ರಿಯಾದಿಯ ಈ ಹಸ್ತಪ್ರತಿಯಲ್ಲಿ ಬಾಲಭಾಗದಲ್ಲಿ ಮಕ್ಕಾ ಮತ್ತು ಎಡಭಾಗದಲ್ಲಿ ಮದೀನಾವನ್ನು ಚಿತ್ರಿಸಲಾಗಿದೆ. ಎರಡೂ ಮಸೀದಿಗಳ ಮಿಂಬರ್ ಚಿತ್ರದ ಕೆಳಭಾಗದಲ್ಲಿ ಕೆಂಪು ಬಣ್ಣದಲ್ಲಿ ಮೂಡಿ ಬಂದಿದೆ. ಮದೀನಾದ ಅನುಗ್ರಹೀತ ಮೂರು ಮಖ್ಬರಾಗಳನ್ನೂ ಚಿತ್ರ ಒಳಗೊಂಡಿದೆ.

ಎರಡು ಬದಿಯಲ್ಲಿ ಚಿತ್ರಿಸಿದ ಮಕ್ಕಾ ಮತ್ತು ಮದೀನಾದ ಮಸೀದಿಗಳು. ಕಾಶ್ಮೀರ, 1800
ಹತ್ತೊಂಬತ್ತನೆಯ ಶತಮಾನದಲ್ಲಿ ರಚಿಸಿದ ಮಕ್ಕಾ ಮತ್ತು ಮದೀನಾದ ಮಸೀದಿಗಳ ಚಿತ್ರಗಳಿರುವ ಹಸ್ತಪ್ರತಿ, ಕಾಶ್ಮೀರ
ಎರಡು ಪುಟಗಳಲ್ಲಿ ಬಿಡಿಸಿದ ಪವಿತ್ರ ಮಸೀದಿಗಳ ಚಿತ್ರ. ಕಾಶ್ಮೀರ, Dated: 1808/1223 AH

ಈ ಮೇಲಿನ ಚಿತ್ರಗಳು ಹತ್ತೊಂಬತ್ತನೆಯ ಶತಮಾನದ ವೇಳೆ ಕಾಶ್ಮೀರದಲ್ಲಿ ರಚಿಸಲ್ಪಟ್ಟ ಹಸ್ತಪ್ರತಿಗಳಿಂದ ದೊರಕಿದ ರಚನೆಗಳು. ಇಲ್ಲಿ ಉತ್ತರ ಆಫ್ರಿಕಾದ ರಚನಾಶೈಲಿಯನ್ನು ಅನುಕರಿಸಲಾಗಿದೆ. ಈ ಮೇಲಿನ ಮೂರೂ ರಚನೆಗಳ ಎಡಭಾಗದಲ್ಲಿ ಖರ್ಜೂರ ಮರಗಳ (ಪೈಗಂಬರ್ (ಸ.ಅ) ರ ಖುತುಬಾದ ಮಧ್ಯೆ ಕಣ್ಣೀರು ಹಾಕಿದ ಖರ್ಜೂರ ಮರ) ಚಿತ್ರವಿದೆ. ಮೂರನೆಯ ಹಸ್ತಪ್ರತಿ ಶಅಬಾನ್ 1223 (ಸೆಪ್ಟೆಂಬರ್ 1808 ಎ.ಡಿ.) ರಲ್ಲಿ ರಚಿಸಲ್ಪಟ್ಟದ್ದು ಎಂದು ಲೇಖಕ ಖಾನ್ ಯೂನುಸ್ ಖಾನ್ ಅಭಿಪ್ರಾಯಪಡುತ್ತಾರೆ.

ಮಕ್ಕಾ ಮತ್ತು ಮದೀನಾದ ಪವಿತ್ರ ಮಸೀದಿಗಳ ಚಿತ್ರಕಲೆ. ಭಾರತದಲ್ಲಿ ಅಥವಾ ಭಾರತೀಯ ಮೂಲದ ಕಲಾವಿದ ಮಕ್ಕಾದಲ್ಲಿ ರಚಿಸಿದ್ದು. ರಜಬ್, 1216 (November 1801), ರಮಝಾನ್ 1216 (January 1802)

ಹತ್ತೊಂಬತ್ತನೆಯ ಶತಮಾನದಲ್ಲಿ ರಚಿಸಲ್ಪಟ್ಟ ಈ ಮೇಲಿನ ಹಸ್ತಪ್ರತಿಯಲ್ಲಿ ಬಲಭಾಗಕ್ಕೆ ಮದೀನಾದ ಮಸ್ಜಿದ್ ಮತ್ತು ಎಡಭಾಗಕ್ಕೆ ಜನ್ನತುಲ್ ಬಕೀಅ್ ಸಮಾಧಿಯನ್ನು ಚಿತ್ರಿಸಲಾಗಿದೆ. ಕೆಲವು ಪ್ರಮುಖ ಮಖ್ಬರಾಗಳನ್ನು ವಿಶೇಷವಾಗಿ ಸೂಚಿಸಲಾಗಿದೆ. ಬಹುಶಃ ಇದು ಭಾರತದಲ್ಲಿ ಅಥವಾ ಮಕ್ಕಾದಲ್ಲಿ ಭಾರತೀಯ ಕಲಾವಿದರಿಂದ ರಚಿಸಲ್ಪಟ್ಟದ್ದು ಎಂದು ಭಾವಿಸಲಾಗಿದೆ.

ಪವಿತ್ರ ಹರಮೈನ್ ಶರೀಫೈನಿನ ಚಿತ್ರಗಳು. ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತದಲ್ಲಿ ರಚಿಸಲ್ಪಟ್ಟಿದೆ. ಬಹುಶಃ ದಖನ್ ನಲ್ಲಿ ರಚಿಸಲ್ಪಟ್ಟಿರಲೂಬಹುದು.

ಈ ಎರಡು ಪುಟಗಳ ಹಸ್ತಪ್ರತಿ ಭಾರತೀಯ ಮೂಲದ ರಚನೆ. ರಚನೆಯಲ್ಲಿ ಮಸೀದಿಯ ಸುತ್ತಲೂ ಬಾಗಿಲುಗಳನ್ನು ಕಾಣಬಹುದು.

ಪವಿತ್ರ ಮಸೀದಿಗಳ ಚಿತ್ರಗಳು ಮೂಡಿಬಂದ ಈ ಹಸ್ತಪ್ರತಿ ಹತ್ತೊಂಬತ್ತನೆಯ ಶತಮಾನದ ಕೊನೆಗೆ ಇರಾನ್ ಅಥವಾ ಅಫ್ಘಾನಿಸ್ತಾನದಲ್ಲಿ ರಚಿಸಲ್ಪಟ್ಟದ್ದು.

ಈ ಹಸ್ತಪ್ರತಿಯು ಹತ್ತೊಂಬತ್ತನೆಯ ಶತಮಾನದಲ್ಲಿ ಇರಾನ್ ಅಥವಾ ಅಫ್ಘಾನಿಸ್ತಾನದಲ್ಲಿ ರಚಿಸಲ್ಪಟ್ಟದ್ದೆಂದು ಭಾವಿಸಲಾಗಿದೆ.

ಸೂಕ್ಷ್ಮ ಅಧ್ಯಯನ:

ಮೇಲಿನ ರೇಖಾಚಿತ್ರ ರಚನೆಗಳಿಗಿಂತ (diagrammatic) ಭಿನ್ನವಾಗಿ ಒಟ್ಟೋಮನ್ ಟರ್ಕಿ ಮತ್ತು ಬಾಲ್ಕನ್ ಪ್ರಾಂತ್ಯಗಳಲ್ಲಿ ಮಕ್ಕಾ ಮತ್ತು ಮದೀನಾದ ಮಸೀದಿಗಳ ಚಿತ್ರಗಳು ವಿಹಂಗಮ ನೋಟವಾಗಿ (panoramic view) ಬಿಡಿಸಲ್ಪಟ್ಟಿವೆ.

ಎರಡು ಪುಟಗಳಲ್ಲಿ ರಚಿಸಿದ ಮಕ್ಕಾ ಮತ್ತು ಮದೀನಾದ ಪವಿತ್ರ ಮಸೀದಿಗಳು. ಒಟ್ಟೋಮನ್ ಟರ್ಕಿ, 1769/1182 AH
Signed by husayn, known as khaffaf, Zadeh. Ottoman turkey, 1739-40/1152 AH
ಪವಿತ್ರ ಮಕ್ಕಾ ಮತ್ತು ಮದೀನಾದ ಮಸೀದಿಗಳು. ಒಟ್ಟೋಮನ್ ಟರ್ಕಿಯ ಅವಧಿಯಲ್ಲಿ ಇಸ್ತಾಂಬುಲಿನಲ್ಲಿ ರಚಿಸಲ್ಪಟ್ಟದ್ದು ಎಂದು ಭಾವಿಸಲಾಗಿದೆ. 1848-9/1265 AH. Khalili collection

ಮದೀನಾದ ಮಸೀದಿಯ ಗುಂಬದ್‌ ಗೆ 1837ರ ವೇಳೆ ಹಸಿರು ಬಣ್ಣ ಹಚ್ಚಲಾಯಿತು. ಎರಡು ದಶಕಗಳ ನಂತರ ಚಿತ್ರಿಸಿದ ಕೆಳಗಿನ ಹಸ್ತಪ್ರತಿಯಲ್ಲಿಯೂ ಇದು ಕಾಣಬಹುದು.

ಎರಡು ಪುಟಗಳಲ್ಲಿ ಬಿಡಿಸಿದ ಪವಿತ್ರ ಮಸೀದಿಗಳ ಚಿತ್ರ. ಒಟ್ಟೋಮನ್ ಬಾಲ್ಕನ್ಸ್ ಅಥವಾ ಟರ್ಕಿಯಲ್ಲಿ ರಚಿಸಲ್ಪಟ್ಟದ್ದು. 1859-60/1275 AH
ಒಟ್ಟೋಮನ್ ಟರ್ಕಿ, ಹತ್ತೊಂಬತ್ತನೆಯ ಶತಮಾನ
ಪೈಗಂಬರ್ (ಸ.ಅ.)ರ ಪವಿತ್ರ ಗುಂಬದ್ ನ ಚಿತ್ರ. ಹದಿನೇಳು ಅಥವಾ ಹದಿನೆಂಟನೆಯ ಶತಮಾನದ ವೇಳೆ ಒಟ್ಟೋಮನ್ ಟರ್ಕಿಯಲ್ಲಿ ರಚಿಸಿದ್ದು. MSS 97, fols 9b -10a, Khalili collection

ಪೈಗಂಬರರ ಮಸೀದಿಯ ಈ ಚಿತ್ರ (ಚಿತ್ರ 14) ದಲ್ಲಿ ಗುಂಬದ್ ಅಗ್ನಿ ಜ್ವಾಲೆಯಿಂದಾವೃತಗೊಂಡದ್ದಾಗಿ ಕಾಣಬಹುದು. ಪರ್ಷಿಯನ್ ಚಿತ್ರಕಲೆಗಳಲ್ಲಿ ವಿಶೇಷ ವ್ಯಕ್ತಿಗಳನ್ನು ಗುರುತಿಸಲು ಈ ರೀತಿ ಚಿತ್ರೀಕರಿಸಲಾಗುತ್ತಿತ್ತು. ಗುಂಬದ್‌ ನ ಶ್ರೇಷ್ಠತೆಯನ್ನು ತಿಳಿಸುವುದಕ್ಕಾಗಿ ಈ ರೀತಿ ಅಗ್ನಿಜ್ವಾಲೆಯನ್ನು ಸುತ್ತಲೂ ಬಿಡಿಸಿರಬಹುದು.

ಪೈಗಂಬರರ ರೌಲಾ ಶರೀಫ್ ಮತ್ತು ಮಿಂಬರ್:

ದಲಾಇಲುಲ್ ಖೈರಾತಿನ ಹಸ್ತಪ್ರತಿಗಳ ಪೈಕಿ ಪೈಗಂಬರ್ (ಸ.ಅ) ಮತ್ತು ಪ್ರಿಯ ಅನುಚರರಾದ ಅಬೂಬಕರ್ ಹಾಗೂ ಉಮರ್ (ರ.ಅ.) ರವರ ಮಖ್ಬರಾಗಳು ಒಂದು ಭಾಗದಲ್ಲಿ ಹಾಗೂ ಪೈಗಂಬರರ ಮಿಂಬರ್ ಮತ್ತೊಂದು ಭಾಗದಲ್ಲಿಯೂ ಆಗಿ ಚಿತ್ರೀಕರಿಸಲ್ಪಟ್ಟ ಅನೇಕ ಎರಡು ಪುಟಗಳ (double page spread) ರಚನೆಗಳು ದೊರಕಿವೆ. ಈ ಕೆಳಗಿನ ಚಿತ್ರಕಲೆಗಳು ಹದಿನೆಂಟನೆಯ ಶತಮಾನದಲ್ಲಿ ಟರ್ಕಿಯಲ್ಲಿ ದೊರಕಿದ್ದು ಹಾಗೂ ಕೊನೆಯ ನಾಲ್ಕು ಹಸ್ತಪ್ರತಿಗಳು ಉತ್ತರ ಆಫ್ರಿಕಾದಲ್ಲಿ ದೊರಕಿದವುಗಳು.

ಈಸ್ಟ್ ಟರ್ಕಿ, AH 1719-20/1132 AH
ಟುನೀಶಿಯಾ, 1629-30. The metropolitan museum of art, purchase, Friends of islamic art Gifts, 2017 (2017.301)
ಮೊರಾಕ್ಕೊ, ಜುಮಾದಿಲ್ ಅವ್ವಲ್ 23 1303 AH/ 27 ಫೆಬ್ರವರಿ 1886 AD.
ಮೊರಾಕ್ಕೊ, Before 1717-18/1129 AH.
ಮೊರಾಕ್ಕೊ, ಹದಿನಾರನೆಯ ಶತಮಾನ

ಆಧುನಿಕ ಕ್ಯಾಮರಗಳನ್ನು ಜಗತ್ತು ಪರಿಚಯಗೊಳ್ಳುವುದಕ್ಕಿಂತ ಶತಮಾನಗಳ ಮೊದಲೇ ಜಾಗತಿಕ ಮುಸ್ಲಿಮರು ಪೈಗಂಬರ್ (ಸ.ಅ.) ಮತ್ತು ಅನುಚರರ ಮಖ್ಬರಾ, ಮಸೀದಿಗಳು ಹಾಗೂ ಪವಿತ್ರ ನಗರಗಳನ್ನು ದಲಾಇಲುಲ್ ಖೈರಾತಿನಂತಹ ಚಿತ್ರಕಲೆಗಳ ಸಹಿತ ಮೂಡಿಬರುತ್ತಿದ್ದ ಹಸ್ತಪ್ರತಿಗಳ ಮೂಲಕ ದರ್ಶಿಸುತ್ತಿದ್ದರು ಎಂಬ ಸತ್ಯಾಂಶ ಈ ಅಧ್ಯಯನದ ಮೂಲಕ ಬೆಳಕಿಗೆ ಬರುತ್ತದೆ. ಇಲ್ಲಿನ ಹಸ್ತಪ್ರತಿಗಳು ಪುರಾಣ ಚಿತ್ರಕಲೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವುದರ ಜೊತೆಗೆ ಅಂದಿನ ವಾಸ್ತುಶಿಲ್ಪ ವೈಶಿಷ್ಟ್ಯತೆಗಳನ್ನೂ ಪ್ರತಿಬಿಂಬಿಸುತ್ತವೆ.

ಪೈಗಂಬರ್ (ಸ.ಅ.) ರೊಂದಿಗಿನ ಉತ್ಕಟ ಪ್ರೀತಿಯ ಫಲವಾಗಿ ರೂಪು ಪಡೆದ ದಲಾಇಲುಲ್ ಖೈರಾತಿನ ರಚನೆಯಂತೆಯೇ ಇಲ್ಲಿನ ಚಿತ್ರಕಲೆಗಳೂ ಮಹತ್ವದ್ದು. (ಶೈಖ್ ಜಸೂಲಿ ಮದೀನಾ ಸಂದರ್ಶನದ ವೇಳೆ ಪೈಗಂಬರರ ಸನ್ನಿಧಿಯ ಮುಂಭಾಗದಲ್ಲಿ ದಿನನಿತ್ಯ ದಲಾಇಲ್ ಪಠಿಸುತ್ತಿದ್ದರು.) ಆರಂಭಿಕ ಘಟ್ಟದ ದಲಾಇಲಿನ ಹಸ್ತಪ್ರತಿಗಳಲ್ಲಿ ಮೂಡಿಬರುತ್ತಿದ್ದ ಇಂತಹಾ ಚಿತ್ರಕಲೆಗಳು ಪವಿತ್ರ ನಗರಗಳು, ಹಸಿರು ಗುಂಬದ್ ಹಾಗೂ ಪೈಗಂಬರ್ (ಸ.ಅ.) ರೊಂದಿಗಿನ ಪ್ರೇಮವನ್ನು ಉತ್ತೇಜಿಸುತ್ತಿತ್ತು. ಪಾಶ್ಚಾತ್ಯ ಮೊರಾಕ್ಕೋದಿಂದ ಹಿಡಿದು ಚೀನಾದವರೆಗೆ ಹರಡಿದ ಇಂತಹ ರಚನೆಗಳು ಭೌಗೋಳಿಕ ವೈವಿಧ್ಯತೆಯನ್ನೂ ವಿಶ್ಲೇಷಿಸುತ್ತವೆ.

Footnotes :

  • Sheila s.blair and jonathan M. Bloom, The art and architecture of Islam (1250 – 1800), yale university press, 1995, p.263.

ಮೂಲ: ಸಾರಾ ಚೌಧರಿ
ಅನುವಾದ: ಅಬ್ದುಸ್ಸಲಾಮ್ ಮುಈನಿ ಮಿತ್ತರಾಜೆ

Sarah Choudhari
freelance writer and editor, and a former student of School of Oriental and African studies. Completed graduation in Islamic Art & Archaeology

Leave a Reply

*