ವಾಇಲ್ ಹಲ್ಲಾಖ್ ಸಂದರ್ಶನ

ವಾಇಲ್ ಹಲ್ಲಾಖ್ ಪ್ಯಾಲೆಸ್ತೀನ್ ಮೂಲದ ಕೆನೆಡಿಯನ್ ವಿದ್ವಾಂಸರು. ಕೊಲಂಬಿಯ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದು ಕಾನೂನು ಮತ್ತು ರಾಜಕೀಯ ಚಿಂತನೆಯನ್ನು ಕಲಿಸುತ್ತಿದ್ದಾರೆ. ಷರಿಯಾ ಅಥವಾ ಇಸ್ಲಾಮಿಕ್ ಕಾನೂನು ಕ್ಷೇತ್ರದ ಪ್ರಕಾಂಡ ಸಂಶೋಧಕರಾಗಿರುವ ಇವರು ಈ ಬಗ್ಗೆ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ. The Impossible State: Islam, Politics and Modernity’s Moral Predicament, An Introduction to Islamic Law, Shari’a: Theory, Practice, Transformations ಇವು ಇಸ್ಲಾಮಿಕ್ ಕಾನೂನು ವ್ಯವಸ್ಥೆಯ ಬಗೆಗಿನ ಇವರ ಕೆಲವು ಕೃತಿಗಳು. ಷರಿಯಾ ಹಾಗೂ ಮಾನವ ಹಕ್ಕುಗಳ ಬಗ್ಗೆ ಡೈಲಿ ಫಿಲಾಸಫಿ ವೆಬ್ ತಾಣಕ್ಕೆ ಇವರು ನೀಡಿರುವ ಸಂದರ್ಶನವನ್ನು ‘ತಿಜೋರಿ’ ಓದುಗರಿಗಾಗಿ ಕನ್ನಡಕ್ಕೆ ತಂದಿದ್ದೇವೆ.

ಡಿಪಿ: ಪ್ರೊಫೆಸರ್ ವಾಇಲ್ ಹಲ್ಲಾಕ್‌, ತಾವಿಂದು ನಮ್ಮ ಜತೆಗೆ ಮಾತನಾಡಲು ಇಲ್ಲಿಗೆ ಬಂದಿರುವುದು ನನ್ನಲ್ಲಿ ಬಹಳ ಸಂತೋಷ ಹಾಗೂ ಗೌರವ ಮೂಡಿಸಿದೆ. ತಾವು ಇಸ್ಲಾಮಿಕ್ ಕಾನೂನು ಮತ್ತು ಇಸ್ಲಾಮಿಕ್ ಬೌದ್ಧಿಕ ಇತಿಹಾಸ ಅಧ್ಯಯನ ಕ್ಷೇತ್ರದ ವಿಶ್ವದ ಅಗ್ರಗಣ್ಯ ತಜ್ಞರಲ್ಲೊಬ್ಬರು. ಶರಿಯಾದ ಕೆಲವು ಸಂಕೀರ್ಣತೆಗಳನ್ನು ನಿಕಷಕ್ಕೊಡ್ಡಲು ನೀವು ಒಪ್ಪಿಕೊಂಡಿರುವುದು ಖುಷಿ ತಂದಿದೆ.

ಹಲ್ಲಾಖ್: ಇಲ್ಲಿಗೆ ಬಂದಿರುವುದು ನನಗೂ ಸಂತೋಷ ನೀಡಿದೆ. ನಿಮ್ಮ ಆತ್ಮೀಯ ಆಹ್ವಾನಕ್ಕೆ ಧನ್ಯವಾದಗಳು.

ಡಿಪಿ: ನಿಮ್ಮ ‘ದಿ ಇಂಪಾಸಿಬಲ್ ಸ್ಟೇಟ್’ ಪುಸ್ತಕದಲ್ಲಿ ಆಧುನಿಕ ಸ್ಟೇಟ್‌ ಪರಿಕಲ್ಪನೆಯ ಇಸ್ಲಾಮಿಕ್ ‘ರಾಷ್ಟ್ರ’ ಅಸಾಧ್ಯ ಎಂದು ವಾದಿಸಿದ್ದೀರಿ. ಆಧುನಿಕ ಮುಸ್ಲಿಮರಿಗೂ ಸಹ ಪಾಶ್ಚಿಮಾತ್ಯ ಶೈಲಿಯ ರಾಷ್ಟ್ರ ಪರಿಕಲ್ಪನೆಯ ಮೂಲಭೂತ ಅಂಶಗಳನ್ನು ಸ್ವೀಕರಿಸುವುದು ಕಷ್ಟಸಾಧ್ಯ ಎಂದು ಹೇಳುತ್ತೀರಿ. ಇದು ಹೇಗೆ ಎನ್ನುವುದನ್ನು ನಮ್ಮ ಓದುಗರಿಗೆ ಸಂಕ್ಷಿಪ್ತವಾಗಿ ವಿವರಿಸಬಲ್ಲಿರಾ ?

ಹಲ್ಲಾಖ್: ಆಧುನಿಕ ರಾಷ್ಟ್ರ ಪರಿಕಲ್ಪನೆಯು ಒಂದು ನಿರ್ದಿಷ್ಟ ನೈತಿಕತೆಯನ್ನು ಪ್ರತಿನಿಧಿಸುತ್ತದೆ ಎಂದು ಸದ್ಯ ಒಪ್ಪಿಕೊಂಡು ಮಾತನಾಡೋಣ. ಪ್ರಸ್ತುತ ನೈತಿಕ ಕ್ರಮವು ಇಸ್ಲಾಮ್ ಒಟ್ಟಾರೆಯಾಗಿ ಏನನ್ನು ಪ್ರತಿನಿಧಿಸುತ್ತದೆಯೋ ಅದಕ್ಕೆ ತೀರಾ ಭಿನ್ನವೆನಿಸಿದೆ. ಇಸ್ಲಾಮ್ ಧರ್ಮ ಹಲವು ಸಂಗತಿಗಳ ಒಟ್ಟು ಮೊತ್ತ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅದು ಶರಿಯವೂ ಹೌದು, ಸೂಫಿಸಮ್ಮೂ ಹೌದು ಇನ್ನಿತರ ಹಲವೂ ಹೌದು. ಆದರೆ, ನಮಗೆ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ, ಶರಿಯಾ ಮತ್ತು ಸೂಫಿಸಂನಲ್ಲಿನ ವೈವಿಧ್ಯತೆ ಮತ್ತು ಬಹುತ್ವವನ್ನು ಅರಗಿಸಿಕೊಳ್ಳುವುದು ಬಹಳ ಸವಾಲಿನ ಕೆಲಸ ಎನಿಸಿಬಿಟ್ಟಿದೆ. ಶರಿಯಾ ವಿವಿಧ ಧಾರೆಗಳನ್ನು ಒಳಗೊಂಡಿದೆ. ಪ್ರತಿ ಧಾರೆಯೊಳಗೂ ಅನೇಕ ಆಂತರಿಕ ಆದರೆ ವಿಭಿನ್ನ ವ್ಯಾಖ್ಯಾನಗಳಿರುತ್ತವೆ. ಸೂಫಿಸಂ ಕೂಡಾ ಶರಿಯಾದಷ್ಟೇ, ಪ್ರಾಯಶಃ ಅದಕ್ಕಿಂತ ಹೆಚ್ಚೇ ವ್ಯಕ್ತಿಗತವಾಗಿದೆ ಮತ್ತು ವೈವಿಧ್ಯತೆಯಿಂದ ಕೂಡಿದೆ.
ಈ ಎಲ್ಲಾ ವೈವಿಧ್ಯತೆ ಮತ್ತು ವಿಸ್ತೃತವಾದ ವ್ಯತ್ಯಾಸಗಳು ಸೇರಿದಂತೆ ಅನೇಕ ಸಂಗತಿಗಳು ಇದ್ದಾಗ್ಯೂ, ಆಧುನಿಕ ಪರಿಕಲ್ಪನೆಯ ‘ಪ್ರಜೆ’ಯನ್ನು ಪೋಷಿಸಿ ಬೆಳೆಸುವ ಅವಕಾಶ ಇಸ್ಲಾಮಿನಲ್ಲಿಲ್ಲ. ಪ್ರಜೆಯಾಗುವುದೆಂದರೆ ಅಸ್ತಿತ್ವದ ಆತ್ಯಂತಿಕ ಆಶಯ ಎಂಬ ನೆಲೆಯಲ್ಲಿ ಮನೋವೈಜ್ಞಾನಿಕವಾಗಿಯೂ ಜ್ಞಾನಶಾಸ್ತ್ರೀಯವಾಗಿಯೂ ರಾಷ್ಟ್ರ ಮತ್ತು ರಾಜ್ಯಕ್ಕೆ ನಿಷ್ಠನಾಗಿರುವುದು. ಇಲ್ಲಿ ಜೀವನ ಮತ್ತು ಮರಣದ ನಿರ್ಣಯಾಧಿಕಾರ ರಾಷ್ಟ್ರಕ್ಕಿದೆ. ಆದರೆ ರಾಜ್ಯ ಅಥವಾ ರಾಷ್ಟ್ರ ಎಂಬ ಪರಿಕಲ್ಪನೆ ಮುಸ್ಲಿಮ್ ಪ್ರಜೆಯ ನಂಬಿಕೆ ಮತ್ತು ನಿಷ್ಠೆಯ ಕೇಂದ್ರವಾಗುವಷ್ಟು ಸಮರ್ಥವಾಗಿಲ್ಲ. ರಾಜ್ಯ ಅಥವಾ ರಾಷ್ಟ್ರ ಪರಿಕಲ್ಪನೆ ಮುಸ್ಲಿಮರ ಜೀವನದ ಅರ್ಥವು ನೆಲೆಸಿರುವ ನೈತಿಕ ಆದರ್ಶವಲ್ಲ ಅಥವಾ ಆಗಲು ಸಾಧ್ಯವಿಲ್ಲ.
ಪೈಗಂಬರರ ಆದರ್ಶವು ಶರಿಯಾ ಮತ್ತು ಸೂಫಿ ವ್ಯಕ್ತಿನಿಷ್ಠತೆಗಳೆರಡಕ್ಕೂ ಕೇಂದ್ರಬಿಂದುವಾಗಿರುವುದು ಯಾಕೆ ಎಂಬುವುದನ್ನು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಅವುಗಳು ಹೆಚ್ಚಾಗಿ ಒಂದೇ ಆಗಿರಲಿಲ್ಲ. ಇಲ್ಲಿರುವ ನೈತಿಕ ಅನುಕರಣೆಗೆ ಪ್ರಾಮುಖ್ಯತೆ ಮತ್ತು ಕೇಂದ್ರ ಸ್ಥಾನ ದೊರಕಿರುವುದು ವಸ್ತುತಃ ಪ್ರವಾದಿಗಳು ಪ್ರವಾದಿಗಳಾದ್ದರಿಂದಲ್ಲ. ಒಂದು ಅಸ್ತಿತ್ವವನ್ನು ಪೂಜಿಸಲು ಆ ಅಸ್ತಿತ್ವವು ಜನರು ತಮ್ಮನ್ನು ತಾವು ರೂಪಿಸಿಕೊಳ್ಳುವ ತಂತ್ರಗಳಿಗೆ (technologies of self) ಆದರ್ಶಪ್ರಾಯವಾಗಿರಬೇಕು. ವ್ಯಕ್ತಿಯು ತನ್ನನ್ನು ತಾನು ಒಂದು ನೈತಿಕ ಅಸ್ತಿತ್ವವಾಗಿ ಪ್ರಜ್ಞಾಪೂರ್ವಕವಾಗಿ ರೂಪಿಸಿಕೊಳ್ಳುವುದು ಈ ತಂತ್ರಗಳ ಮೂಲಕ. ಹೀಗೆ ಪ್ರಜ್ಞಾಪೂರ್ವಕ ಮತ್ತು ಉದ್ದೇಶಪೂರ್ವಕವಾಗಿ ಕೆಲಸ ಮಾಡುವ ತಂತ್ರಜ್ಞಾನದ ಅಭಾವದಲ್ಲಿ ಇಸ್ಲಾಮ್ ಇರಲಾರದು. ಫುಕೋ ‘ಕಾಲೇಜ್ ಡಿ ಫ್ರಾನ್ಸ್‌’ನಲ್ಲಿ ಮಂಡಿಸಿದ ಬಹುಸಂಪುಟಗಳ ಉಪನ್ಯಾಸಗಳಲ್ಲಿ ವಿವರಿಸಿರುವ ಹಾಗೆ ಈ ತಂತ್ರಜ್ಞಾನಗಳು ಅಸ್ತಿತ್ವದ ಹಾಗೂ ಜೀವನದ ವಿಧಾನಗಳಿಂದ ಕಣ್ಮರೆಯಾಗಿದ್ದು ಈ ನಷ್ಟಕ್ಕೆ ನಾವು ಭಾರೀ ಬೆಲೆತೆತ್ತಿದ್ದೇವೆ.
ಬಲವಂತಿಕೆ ಹಾಗೂ ಶಿಸ್ತನ್ನು ಹೊರಗಿನಿಂದ ಹೇರುವ ಮೂಲಕ ಆಧುನಿಕ ರಾಷ್ಟ್ರ ಪರಿಕಲ್ಪನೆ ಪ್ರಜೆಗಳನ್ನು ರೂಪಿಸುತ್ತದೆ. ಆದರೆ, ತನ್ನ ಮೇಲೆ ಪ್ರಜ್ಞಾಪೂರ್ವಕವಾಗಿ ಹಾಗೂ ಉದ್ದೇಶಪೂರ್ವಕವಾಗಿ ಕಾರ್ಯನಿರ್ವಹಿಸುವ ಆತ್ಮಾವಲೋಕನ, ಸ್ವಯಂ- ಶಿಸ್ತು ಹಾಗೂ ನೈತಿಕ ಸ್ವ- ಕೃಷಿಯ ಪ್ರಕ್ರಿಯೆಯ ಮೂಲಕ ಅವರನ್ನು ಒಳಗಿನಿಂದ ರೂಪಿಸುತ್ತದೆ.
ಆದ್ದರಿಂದ, ಇಸ್ಲಾಮಿನೊಳಗಿನ ಪ್ರಕ್ರಿಯೆಯು ಹೆಚ್ಚು ವ್ಯಕ್ತಿಗತ. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಧುನಿಕ ರಾಷ್ಟ್ರ ಪರಿಕಲ್ಪನೆಯಲ್ಲಿನ ಈ ಪ್ರಕ್ರಿಯೆ ಸಾಮೂಹಿಕವಾಗಿದ್ದು ಸ್ವಯಂ ಕಾರ್ಯಕ್ಷಮತೆಯ ಆಂತರಿಕ ಚಲನಶೀಲತೆಯನ್ನು ಹೊಂದಿಲ್ಲ.

ಡಿಪಿ: ಇಸ್ಲಾಮಿಕ್ ಕಾನೂನು ಮತ್ತು ಪಾಶ್ಚಿಮಾತ್ಯ ಸಾಂವಿಧಾನಿಕ ಕ್ರಮದ ನಡುವೆ ನಾವು ಕಾಣುತ್ತಿರುವ ವಿರೋಧ ಇಸ್ಲಾಮಿನ ಸಮಸ್ಯೆಯಲ್ಲ ಎನ್ನವುದು ನಿಮ್ಮ ಮಾತಿನ ಒಟ್ಟು ತಾತ್ಪರ್ಯವೆಂದು ಅನ್ನಿಸುತ್ತದೆ. ನನ್ನ ಗ್ರಹಿಕೆ ಸರಿಯಾಗಿದೆ ಎಂದು ಭಾವಿಸುತ್ತೇನೆ. ಹಾಗಾದರೆ ಇದು ಎಲ್ಲ ಧರ್ಮಾಧಾರಿತ ಸಮಾಜಗಳ ಸಾಮಾನ್ಯ ಲಕ್ಷಣ ಎಂದು ಹೇಳಬಹುದೇ ? ಉದಾಹರಣೆಗೆ: ಕ್ರಿಶ್ಚಿಯನ್ ಅಥವಾ ಕನ್ಫ್ಯೂಷಿಯನ್ ಸಮಾಜ ಕೂಡಾ ಜಾತ್ಯತೀತ ರಾಷ್ಟ್ರ ಪರಿಕಲ್ಪನೆಯ ಅಚ್ಚಿನೊಳಗೆ ಹೊಂದಿಕೊಳ್ಳುವಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ಹೊಂದಿವೆ ಎಂದು ನೀವು ಭಾವಿಸುತ್ತೀರಾ?

ಹಲ್ಲಾಖ್: ನೈತಿಕ ಮಾನದಂಡಗಳನ್ವಯ ಮುಂದುವರಿಯುವ ಯಾವುದೇ ಸಾಮಾಜಿಕ ವ್ಯವಸ್ಥೆಗೆ ಅಸ್ತಿತ್ವದ ಈ ಜಾತ್ಯತೀತ ವಿಧಾನಕ್ಕೆ ಹೊಂದಿಕೊಳ್ಳುವುದು ಬಹಳ ದೊಡ್ಡ ಸವಾಲಿನ ವಿಷಯವೆ. ಜಾತ್ಯತೀತತೆ ಎಂದರೇನು ಎಂಬುದನ್ನು ನಾವು ನೆನಪಿನಲ್ಲಿಡೋಣ. ಜಾತ್ಯತೀತತೆಯು ಧಾರ್ಮಿಕ ಜೀವನವನ್ನು ಖಾಸಗಿ ವಲಯಕ್ಕೆ ಸೀಮಿತಗೊಳಿಸಿಕೊಂಡು ಸುಮ್ಮನಿರುವುದಿಲ್ಲ. ಧರ್ಮ ಏನು, ಏನಲ್ಲ, ಅದನ್ನು ಎಲ್ಲಿ ಮತ್ತು ಹೇಗೆ ಕಾರ್ಯಗತಗೊಳಿಸಬೇಕು ಎಂದು ನಿರ್ಣಯಿಸುವ ಘಟಕವಾಗಿಯೂ ಅದು ಕೆಲಸ ಮಾಡುತ್ತದೆ. ರಾಜಕೀಯ ದೇವತಾಶಾಸ್ತ್ರದ ದೃಷ್ಟಿಯಲ್ಲಿ ಜಾತ್ಯತೀತತೆ ಎನ್ನುವುದು ರಾಷ್ಟ್ರ ನಡೆಸುವ ದೇವರ ಕಗ್ಗೊಲೆ. ಯಾವುದೇ ಧಾರ್ಮಿಕ ಆಚರಣೆಗೆ ಮಿತಿ ನಿರ್ಣಯಿಸಲು, ಹೊರಗಿಡಲು ಅಥವಾ ಮೊಟಕುಗೊಳಿಸಲು ರಾಷ್ಟ್ರಕ್ಕೆ ಸಾಧ್ಯವಿದೆ. ಹೀಗಾಗಿ ರಾಷ್ಟ್ರಕ್ಕೆ ಹೇಗೆ ಬೇಕೊ ಹಾಗೆ ಧಾರ್ಮಿಕ ಕ್ಷೇತ್ರದ ಗುಣಮಟ್ಟ ಮತ್ತು ಪ್ರಮಾಣವನ್ನು ನಿರ್ಧರಿಸುವ ಅಧಿಕಾರವನ್ನು ಅದು ಹೊಂದಿದೆ ಎನ್ನಬಹುದು. ಏಕೆಂದರೆ, ಇಲ್ಲಿ ರಾಷ್ಟ್ರ ಎನ್ನುವುದು ಅಸ್ತಿತ್ವಕ್ಕೆ ತನ್ನದೇ ಆದ ಕಾರಣವನ್ನು ಹೊಂದಿರುವ ಅಂತಿಮ ಸಾರ್ವಭೌಮ. Raison d’etat ಅಥವಾ ರಾಷ್ಟ್ರದ ಕಾರಣ ಎಂದು ನಾವು ಕರೆಯುವ ಈ ಪರಿಕಲ್ಪನೆ ಮಾನವೇತಿಹಾಸದಲ್ಲಿಯೇ ಹೊಸತು ಎನಿಸಿದೆ.

ಧರ್ಮ ಎನ್ನುವುದು ನೈತಿಕ ಮಾನದಂಡಗಳನ್ನು ಆಧರಿಸಿದ ಸಾಮಾಜಿಕ ವ್ಯವಸ್ಥೆಯಾಗಿರುತ್ತದೆ ಎಂದು ನಾವಂದುಕೊಂಡರೆ ಎಲ್ಲಾ ಧರ್ಮಗಳು ಕೂಡಾ ಆಧುನಿಕ ರಾಷ್ಟ್ರದ ಕೈಕೆಳಗೆ ಸರಿಸುಮಾರು ಒಂದೇ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ, ಇದು ನಿಮ್ಮ ಪ್ರಶ್ನೆಗೆ ನನ್ನ ನೇರ ಉತ್ತರ.

ಡಿಪಿ: ವಿಶ್ವಸಂಸ್ಥೆಯ ಶೈಲಿಯ ಮಾನವಹಕ್ಕುಗಳು ಮತ್ತು ಇಸ್ಲಾಮಿಕ್‌ ರಾಷ್ಟ್ರಗಳಲ್ಲಿನ ಮಹಿಳಾ ಹಕ್ಕುಗಳಾಗಿವೆ ಪಾಶ್ಚಿಮಾತ್ಯ ಸಂವೇದನೆಗಳು ಮತ್ತು ಮೌಲ್ಯಗಳು ಬಹಳ ಕಾಳಜಿ ವಹಿಸುತ್ತಿರುವ ಇರುವ ಎರಡು ಕ್ಷೇತ್ರಗಳು. ಇಸ್ಲಾಮಿಕ್ ಸಮಾಜ ಈ ಹಕ್ಕುಗಳನ್ನು ನಿರ್ಲಕ್ಷಿಸುವುದು ಅಗತ್ಯವೆಂದು ನೀವು ಭಾವಿಸುತ್ತೀರಾ? ನಿಜವಾಗಿಯೂ ಇಸ್ಲಾಮಿಕ್ ಆಗಿರುವುದರ ಜತೆಜತೆಗೆ ಹಕ್ಕುಗಳ ಬಗೆಗಿನ ಈ ಪಾಶ್ಚಿಮಾತ್ಯ ಪರಿಕಲ್ಪನೆಗಳನ್ನು ಗೌರವಿಸುವ ಮಧ್ಯಮ ಇಸ್ಲಾಮಿಕ್ ರಾಜ್ಯದ ಕಡೆಗಿನ ಹಾದಿಗಳೇನಾದರೂ ಇವೆಯೆ?

ಹಲ್ಲಾಖ್: ಈ ಪ್ರಶ್ನೆಗಳು ನಿಸ್ಸಂದೇಹವಾಗಿಯೂ ಕ್ಲಿಷ್ಟಕರವಾಗಿದ್ದು ಇದಕ್ಕೆ ಉತ್ತರಿಸಲು ಹತ್ತೊಂಬತ್ತು ಹಾಗೂ ಇಪ್ಪತ್ತನೆಯ ಶತಮಾನದ ಇತಿಹಾಸವನ್ನು ಪರಿಶೀಲಿಸುವ ಅಗತ್ಯವಿದೆ. ಮುಸ್ಲಿಮರ ಸಾಮಾಜಿಕ ರಚನೆಗಳು ಮತ್ತು ಪ್ರಮುಖ ಸಂಸ್ಥೆಗಳನ್ನು ಕೆಡವಿದ ವಸಾಹತುಶಾಹಿಯ ದಾಳಿಗೆ ಮುಸ್ಲಿಮ್‌ ಜಗತ್ತು ತುತ್ತಾಗಿತ್ತು ಈ ಕಾಲದಲ್ಲಿ. ಕಳೆದ ಎರಡು ಶತಮಾನಗಳಲ್ಲಿ ಮುಸ್ಲಿಮ್ ಜಗತ್ತಿಗೆ ಏನೆಲ್ಲಾ ಆಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳದೆ ಮುಸ್ಲಿಮ್ ಜಗತ್ತಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡುವ ಹಾಗಿಲ್ಲ.
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಪರಿಕಲ್ಪನೆ ಮತ್ತು ಮಾನವ ಹಕ್ಕುಗಳ ಬಗೆಗಿನ ಇಸ್ಲಾಮಿಕ್ ಪರಿಕಲ್ಪನೆಯ ನಡುವಿನ ಅಂತರ ನಾವು ಊಹಿಸುವಷ್ಟು ದೊಡ್ಡದಲ್ಲ. ಇಸ್ಲಾಮ್ ಧರ್ಮದ ಚಿತ್ರವನ್ನು ವಿರೂಪಗೊಳಿಸಿರುವ ಇಸ್ಲಾಮೋಫೋಬಿಯಾದ ಕೈ ಪ್ರಬಲವಾಗಿದ್ದು ಇಲ್ಲಿಯೂ ಅದು ನಡೆದಿದೆ. ಯುದ್ಧಕಾಲದ ಕಾನೂನುಗಳು, ಕಾನೂನಿನ ಮೂಲತತ್ವಗಳು ಮತ್ತು ಸಂಸ್ಥೆಗಳನ್ನೆಲ್ಲ ಒಳಗೊಂಡಿರುವ ಯುರೋಪಿಯನ್ ಅಂತರರಾಷ್ಟ್ರೀಯ ಕಾನೂನು ವ್ಯವಸ್ಥೆ ಇಸ್ಲಾಮಿಕ್ ಕಾನೂನು ಸಂಪ್ರದಾಯದಿಂದ ಸ್ಫೂರ್ತವಾಗಿದೆ ಎನ್ನುವ ಮಾನ್ಯತೆ ಇರುವ ವಾದಗಳು ಈಗ ಹೊರ ಬರುತ್ತಿವೆ.
ಯುದ್ಧ ವೇಳೆಯಲ್ಲಿನ ಕೈದಿಗಳ ಅವಸ್ಥೆ ಮತ್ತು ಯುದ್ಧಕಾಲದ ನಡವಳಿಕೆಗಳೊಂದಿಗೆ ಈ ಸಂಪ್ರದಾಯ ಸೂಕ್ಷ್ಮತೆಯಿಂದ ವ್ಯವರಿಸುತ್ತಾ ಬಂದಿದ್ದು ಈ ಸೂಕ್ಷ್ಮತೆ ಅನೇಕ ಆಧುನಿಕ ಮನಸ್ಸುಗಳನ್ನು ಬೆರಗುಗೊಳಿಸಿವೆ. ಮಾನವ ಹಕ್ಕುಗಳ ವಿರುದ್ಧ ಕೆಲವು ಮುಸ್ಲಿಮ್ ರಾಜ್ಯಗಳು ಒಡ್ಡುತ್ತಿರುವ ಪ್ರತಿರೋಧವು ಹಕ್ಕುಗಳ ಬಗೆಗಿನ ಮೂಲಭೂತ ತಾತ್ವಿಕ ವಿರೋಧವಲ್ಲ. ಬದಲಾಗಿ ಹಕ್ಕುಗಳ ಬಗೆಗಿನ ಪಾಶ್ಚಿಮಾತ್ಯ ಪರಿಕಲ್ಪನೆಯ ಬಗೆಗಿನ ತಿರಸ್ಕಾರವಷ್ಟೇ.
ಮಹಿಳೆಯರ ವಿಷಯವು ಇನ್ನಷ್ಟು ಜಟಿಲವಾಗಿದೆ. ಪಾಶ್ಚಿಮಾತ್ಯ ಕಾನೂನು ವ್ಯವಸ್ಥೆ ಮಹಿಳೆಯರಿಗೆ ಕಾನೂನಾತ್ಮಕವಾದ ಸಂಪೂರ್ಣ ಸ್ಥಾನಮಾನವನ್ನು (ವೈವಾಹಿಕ ಆಸ್ತಿ ಹಾಗೂ ಮತದಾನದ ಹಕ್ಕುಗಳ ಸಮೇತ) ನೀಡಿದ್ದು ಇಪ್ಪತ್ತನೇ ಶತಮಾನದ ಆರಂಭದಲ್ಲಿ. ಆದರೆ ಶರಿಯಾವು ಕ್ರಿ.ಶ. ಏಳನೇ ಶತಮಾನದಿಂದಲೇ ಮಹಿಳೆಯರನ್ನು ಪೂರ್ಣ ಕಾನೂನಾತ್ಮಕ ವ್ಯಕ್ತಿಗಳಾಗಿ ಗುರುತಿಸಿದೆ ಎನ್ನುವುದನ್ನು ಮೊದಲು ತಿಳಿಯಬೇಕಿದೆ.
ಇಸ್ಲಾಮಿನಲ್ಲಿ ಮಹಿಳೆಯರು ಮತ್ತು ಪುರುಷರು ಕಾನೂನಾತ್ಮಕವಾಗಿ ಸಮಾನ ಸಾಮರ್ಥ್ಯವನ್ನು ಹೊಂದಿದ್ದು ಇದು ಒಂದು ಸಹಸ್ರಮಾನಕ್ಕೂ ಹೆಚ್ಚು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಸಾಂಪ್ರದಾಯಿಕ ಸಾಮಾಜಿಕ ರಚನೆಯಲ್ಲಿ ಮಹಿಳೆಯರಿಗೆ ಅತೀವ ಸುರಕ್ಷೆ ಇತ್ತು. ಈ ವ್ಯವಸ್ಥೆಯಿಂದ ಆಧುನಿಕ ಬಂಡವಾಳಶಾಹಿ ವ್ಯವಸ್ಥೆಗೆ ಪಲ್ಲಟಗೊಂಡಾಗ ಹೊಸ ಸಂದರ್ಭಗಳಿಗನುಸಾರ ಹೊಂದಾಣಿಕೆ ಮಾಡಲು ಹೊಸ ಬದಲಾವಣೆಗಳು ಬಂದವು. ಆದರೆ ಈ ಬದಲಾವಣೆಗಳು ಈ ಸುರಕ್ಷೆಯ ಅಂಶವನ್ನು ಒಳಗೊಂಡಿರಲಿಲ್ಲ. ಆದರೆ ಹೊಸ ಅಧ್ಯಯನಗಳ ಪ್ರಕಾರ 19ನೇ ಶತಮಾನಕ್ಕಿಂತ ಹಿಂದಿನ ಶರಿಯಾ ವ್ಯವಸ್ಥೆಯಲ್ಲಿ ಮಹಿಳೆಯರು ಸೂಕ್ಷ್ಮತೆಯಿಂದ ಕೂಡಿದ ಕಾನೂನು ಚೌಕಟ್ಟಿನೊಳಗೆ ಸುಖವಾಗಿದ್ದರು. ಯುರೋಪಿಯನ್ ಕಾನೂನು ಸಂಸ್ಥೆಗಳು ಮತ್ತು ಮೂಲತತ್ವಗಳು ಆಧರಿಸಿದ ಆಧುನಿಕ ಕಾನೂನು ಸುಧಾರಣೆಗಳ ಅಡಿಯಲ್ಲಿರುವುದಕ್ಕಿಂತ ಹೆಚ್ಚಿನ ಕಾನೂನಾತ್ಮಕ ಹಕ್ಕುಗಳನ್ನು ಪಡೆಯುವ ಮೂಲಕ ಅವರು ಪ್ರವರ್ಧಮಾನದಲ್ಲಿದ್ದರು.
ಇದೆಲ್ಲದರ ಜೊತೆಗೆ ಮುಸ್ಲಿಮ್ ಸಮುದಾಯದ ಹೆಚ್ಚು ಸಂಪ್ರದಾಯವಾದಿ ಎನಿಸಿರುವ ವಿಭಾಗಗಳು ಮಹಿಳೆಯರ ವಿಚಾರದಲ್ಲಿನ ಅತಿಯಾದ ಉದಾರೀಕರಣದ ವಿರುದ್ಧ ಸಾಂದರ್ಭಿಕ ವಿರೋಧಗಳನ್ನು ವ್ಯಕ್ತಪಡಿಸುತ್ತಿವೆ. ಛಿದ್ರತೆ ಮತ್ತು ಅಸ್ಥಿರತೆಯಿಂದ ತುಂಬಿದ ಪಾಶ್ಚಿಮಾತ್ಯ ಕುಟುಂಬ ವ್ಯವಸ್ಥೆ ಈ ಮುಸ್ಲಿಮರಿಗೆ ಅರ್ಥವಾಗಬಲ್ಲ ಸಾಮಾಜಿಕ ಮಾದರಿಯನ್ನು ಒದಗಿಸಿಯೂ ಇಲ್ಲ. ಮಹಿಳೆಯರ ಉದಾರೀಕರಣವು ರಚನಾತ್ಮಕವಾಗಿ ಬಂಡವಾಳಶಾಹಿಯೊಂದಿಗೆ ಸಂಪರ್ಕ ಹೊಂದಿದ್ದು ಸಾಮಾಜಿಕ ರಚನೆಯನ್ನು ಯಶಸ್ವಿಯಾಗಿ ನಾಶ ಮಾಡಿ ಪಾಶ್ಚಿಮಾತ್ಯ ಕುಟುಂಬ ರಚನೆಯ ಮೇಲೆ ಹಾನಿಯನ್ನುಂಟುಮಾಡಿದ ಅಪರಾಧಿ ಇದುವೆ ಎಂದು ಹಲವರು ಮನಗಂಡಿದ್ದಾರೆ.
ಸೂಕ್ಷ್ಮ ಮತ್ತು ಸ್ಥೂಲ ಹಂತಗಳಿರುವ (ಸ್ಥಳೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ) ಸಮುದಾಯ (ಉಮ್ಮಾ) ಎಂಬ ಪರಿಕಲ್ಪನೆಯು ಇಸ್ಲಾಮಿನಲ್ಲಿ ಅತ್ಯಂತ ಮುಖ್ಯವಾದುದು ಎಂಬ ವಿಚಾರಕ್ಕೆ ನಾವಿಲ್ಲಿ ಒತ್ತುಕೊಡಬೇಕಿದೆ. ತಾಲಿಬಾನ್ ಮತ್ತು ಇತರ ಉಗ್ರಗಾಮಿ ಗುಂಪುಗಳು ಉಗ್ರವಾದ ಹಾಗೂ ಮತಾಂಧತೆಯ ಪ್ರತೀಕಗಳು. ಸಮುದಾಯದಲ್ಲಿ ಅತ್ಯಂತ ಅಲ್ಪಸಂಖ್ಯಾತರೆನಿಸಿರುವ ಈ ಗುಂಪುಗಳನ್ನು ಮುಸ್ಲಿಮ್ ಮುಖ್ಯವಾಹಿನಿ ತಿರಸ್ಕರಿಸಿದೆ. ಈ ಗುಂಪುಗಳ ತೀವ್ರ ಚಿಂತನೆಗಳನ್ನು ಬದಿಗಿಡೋಣ. ಆದರೆ, ಉಳಿದಿರುವ ಮುಸ್ಲಿಮ್ ಸಮುದಾಯಗಳು ಮಾತ್ರವಲ್ಲ ಇಡೀ ಜಗತ್ತೇ ಮಹಿಳೆಯರ ಹಕ್ಕುಗಳು, ಬಂಡವಾಳಶಾಹಿ ಹಾಗೂ ಸಾಕ್ಷಾತ್‌ ಹಕ್ಕುಗಳ ಪರಿಕಲ್ಪನೆ ನಡುವಿನ ರಚನಾತ್ಮಕವಾದ ಈ ಬೆಸುಗೆಯೊಂದಿಗೆ ಹೇಗೆ ಅನುಸಂಧಾನ ಮಾಡಬೇಕು ಎಂಬ ಬಗ್ಗೆ ಆಳವಾಗಿ ಚಿಂತಿಸಬೇಕಿದೆ. ವಸ್ತುತಃ ಹಕ್ಕುಗಳು ಸಮಾಜದಲ್ಲಿ ಯಾವ ಕೆಲಸ ಮಾಡುತ್ತವೆ, ಕುಟುಂಬ ಮೌಲ್ಯಗಳ ಮೇಲೆ ಅವು ಹೇಗೆ ಪ್ರಭಾವ ಬೀರುತ್ತವೆ ಮುಂತಾದ ವಿಚಾರಗಳ ಬಗ್ಗೆ ಆಲೋಚಿಸಬೇಕಿದೆ. ಆದ್ದರಿಂದ, ಮುಸ್ಲಿಮ್ ಸಮಾಜ ಹಾಗೂ ಇತರೆಡೆ ಮಹಿಳೆಯರು ಎದುರಿಸುತ್ತಿರುವ ಸವಾಲುಗಳಿಗಿರುವ ಪರಿಹಾರವನ್ನು ಪ್ರತ್ಯೇಕವಾಗಿ ಹುಡುಕಲಾಗದು. ನಾವು ನಮಗಾಗಿ ರಚಿಸಿಕೊಂಡಿರುವ ಆಧುನಿಕ ಕಾಲದ ವ್ಯವಸ್ಥೆಗಳನ್ನು ಮತ್ತು ರಚನೆಗಳನ್ನು ಮರುಚಿಂತನೆಗೊಳಪಡಿಸಬೇಕು. ಮಹಿಳಾ ಹಕ್ಕುಗಳು ಸಂಬಂಧಿತ ಸಮಸ್ಯೆಯನ್ನು ಅದೊಂದು ಪ್ರತ್ಯೇಕ ಕೆಟಗರಿ ಎಂಬ ನೆಲೆಯಲ್ಲಿ ನೋಡುವುದು ತಪ್ಪಾದ ವಿಧಾನ.

Leave a Reply

*