ಎಲ್ಲಿರುವೆ ನೀ?
ಇಲ್ಲೇ ಇರುವೆ ನಾ!
ಅವಶೇಷಗಳಡಿಯಲ್ಲಿ,
ನಿನಗಾಗಿ ಕೊನೆಯ ಕವಿತೆಯ ಬರೆಯುತ್ತಾ!
ಇಲ್ಲೇ ಇರುವೆ ನಾ!
ಕಳೆದುಹೋದ ಮುಖವೊಂದು
ಬಿಳಿ ಮರೆವಿನ ಧೂಳಿನಲ್ಲಿ
ಮತ್ತೆ ಕಣ್ಮರೆಯಾಗುತ್ತಾ
ಇಲ್ಲೇ ಇರುವೆ ನಾ!
ನಿನಗೂ ಅವರಿಗೂ
ನನ್ನ ಕೊನೆಯ ಪ್ರಶ್ನೆಯನ್ನು ಕೇಳುತ್ತಾ
ಈ ಪುಟ್ಟ ದೇಹ ನಿನಗೇನು ಮಾಡಿತ್ತು?
ನನ್ನ ಸಾವಿನ ಮೇಲೆಯೇ ನೀನು ಮತ್ತೊಮ್ಮೆ ತುಳಿದು ಸಾಗುವಷ್ಟು!
ಆಂಗ್ಲ ಮೂಲ: ಮುಹಮ್ಮದ್ ಮೂಸ
ಅನುವಾದ: ಮುಹಮ್ಮದ್ ಝೈನುದ್ದೀನ್

ಇಂಗ್ಲಿಷ್ ಸಾಹಿತ್ಯದಲ್ಲಿ ಪದವೀಧರರಾದ ಮುಹಮ್ಮದ್ ಅನುವಾದಕ ಮತ್ತು ಇಂಗ್ಲಿಷ್ ತರಬೇತುದಾರ. ತಮ್ಮ ಭಾವನೆಗಳನ್ನು ಜಗತ್ತಿಗೆ ತಲುಪಿಸಲು ಕಾವ್ಯವನ್ನು ಒಂದು ‘ಸುರಕ್ಷಿತ ನದಿ’ ಎಂದು ಕರೆಯುವ ಇವರು, ಯುದ್ಧಕಾಲದ ಅನುಭವಗಳ ಕುರಿತು ‘ಐ ವಾಸ್ ಬಾರ್ನ್ ಇನ್ ಗಾಝಾ’ ಎಂಬ ಕವನ ಸಂಕಲನವನ್ನು ಬರೆದಿದ್ದಾರೆ. “ಮುತ್ತಿಗೆ ಹಾಕಲ್ಪಟ್ಟ ನಗರದಲ್ಲಿನ ಬದುಕು, ಸಂಕಷ್ಟಗಳ ಕಹಿಯಿಂದ ಜೀವನದ ಸಿಹಿಯನ್ನು ಕಸಿದುಕೊಳ್ಳುವುದನ್ನು ನನಗೆ ಕಲಿಸಿದೆ,” ಎಂದು ಅವರು ಹೇಳುತ್ತಾರೆ.