ಕಲೆಗಾರಿಕೆಯನ್ನು ವಿಸ್ತರಿಸಿದ ಕತೆಗಾರರು

ಕಥನ ಕಲೆಗಾರಿಕೆಯ ತಾತ್ವಿಕ ಸಾಧ್ಯತೆಗಳನ್ನು ವಿಸ್ತರಿಸಿದ ಅಮರೇಶ ನುಗಡೋಣಿ ಕನ್ನಡದ ಮಹತ್ವದ ಕತೆಗಾರರು. ಅವರ ಕಥನ ಮಾದರಿ ಕನ್ನಡದಲ್ಲಿಯೇ ವಿಶಿಷ್ಟವೆಂಬಂತೆ ರೂಪತಾಳಿದೆ. ಸಾಹಿತ್ಯ ಚಳುವಳಿಗಳು ಸ್ಥಗಿತಗೊಂಡ ಕಾಲದಲ್ಲಿ ಬದುಕನ್ನು ಭಿನ್ನ ನೋಟಗಳಿಂದ, ವಿಭಿನ್ನ ಆಶಯಗಳಿಂದ ವಿಸ್ತರಿಸಿದ ನುಗಡೋಣಿ ಅವರು ಕಥೆಗಳಲ್ಲಿ ತಿಳಿಯ ಹೇಳುವ ಕ್ರಮವೇ ವಿಶಿಷ್ಟ ತಮ್ಮ ಸೀಮೆಯ ಬದುಕಿನ ಅನುಭವಗಳನ್ನು ತೋರುಗಾಣಿಸುವ ರೀತಿಯೇ ಹೊಸದು. ಅವರ ಯಾವುದೇ ಪಾತ್ರಗಳು ಅಗಾಧವಾದ ಬದುಕಿನ ಹಿನ್ನೆಲೆಯಿಂದ ಕೂಡಿವೆ. ಕಥೆಗಳಲ್ಲಿ ಅಧಿಕಾರ ಮತ್ತು ಅಧೀನತೆಯ ನೆಲೆಗಳನ್ನು, ಜೀವನ ಕ್ರಮದಲ್ಲಾದ ಪಲ್ಲಟಗಳನ್ನು, ಹೊಸ ಕಾಲದ ಸ್ಥಿತ್ಯಂತರಗಳನ್ನು ದಾಖಲಿಸುವಲ್ಲಿ ಜನಪ್ರಿಯ ಮಾದರಿಯ ಕ್ರಮಗಳನ್ನು ಮೀರಿದ ಕಂಪನವಿಸ್ತಾರವಿದೆ.

ಈ ನೆಲದ ಅನುಭಾವ, ಬಾಳಿನ ಹಿರಿತನ, ಕರುಣೆ ಅಂತಃಕರಣಗಳನ್ನು ಜನಸಮುದಾಯಗಳ ನಿತ್ಯಬದುಕಿನ ಲಯಗಳಲ್ಲಿ ಅವರು ಕಾಣುತ್ತಾರೆ. ಸಾಮುದಾಯಿಕ ಅನುಭವಗಳ ಆದ್ರ್ರವಾದ ಚಹರೆಗಳನ್ನು ಸ್ಥಳೀಯ ಅನನ್ಯತೆಯಲ್ಲಿ ಗುರುತಿಸುತ್ತಾರೆ. ಅದಕ್ಕೆ ತಕ್ಕಹಾಗೆ ಭಾಷೆಯನ್ನು ಹದಗೊಳಿಸಿದ್ದಾರೆ. ಈ ಕಾರಣಕ್ಕೆ ಅವರ ಕಥೆಗಳಿಗೆ ಸೂಕ್ತತೆ ಮತ್ತು ಅಗಾಧತೆಯ ಛಾಯೆ ಇದೆ. ಅವರ ಗದ್ಯ ಕುವೆಂಪು ಅವರ ಗದ್ಯವನ್ನು ನೆನಪಿಸುತ್ತದೆ. ಕನ್ನಡ ಕಥಾಪರಂಪರೆಯ ಸಮಗ್ರ ತಿಳುವಳಿಕೆ ಅವರನ್ನು ಸಾಕಷ್ಟು ಮುಂದೆ ನಡೆಸಿದೆ. ಅವರ ‘ದಡ ಸೇರಿಸು ತಂದೆ’ ಸಂಕಲನದ ಕತೆಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಹೊತ್ತಿನಲ್ಲಿ ಅವರು ‘ಪ್ರಶಸ್ತಿಯು ಇಡೀ ಕನ್ನಡ ಕಥಾ ಸಾಹಿತ್ಯಕ್ಕೆ ಸಂದ ಗೌರವ’ ಎಂದಿರುವುದು ವಿಶೇಷವಾಗಿದೆ.

ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಪಾಠಗಳ ಮಧ್ಯೆಯೇ ನಲವತ್ತು ವರ್ಷಗಳಲ್ಲಿ ಅರವತ್ತಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ. ಅಧ್ಯಾಪಕರಾಗಿ ನಿವೃತ್ತಿ ಹೊಂದಿದ ನುಗಡೋಣಿ ಅವರು ಕಥನವನ್ನು ಬಹುದೀರ್ಘ ಕಾಲದವರೆಗೆ ಧ್ಯಾನಿಸಿದವರು. ಅವರು ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಕಥೆಗಳನ್ನು ಬೆಳೆಸುತ್ತಾರೆ. ಸಾಕಷ್ಟು ಕಾಯ್ದು ಬರೆಯುತ್ತಾರೆ. ಅವರ ಮೊದಲ ಕಥಾ ಸಂಕಲನ ‘ಮಣ್ಣು ಸೇರಿತು ಬೀಜ’ ಪ್ರಕಟವಾದದ್ದು ೧೯೯೧ರಲ್ಲಿ. ನಂತರ ‘ತಮಂಧದ ಕೇಡು’ (೨೦೦೭), ‘ಸವಾರಿ’ (೨೦೦೭), ‘ಓಡಲ ಹಂಗು’ (೨೦೧೪), ‘ಚುಕ್ಕಿ ಮದುವೆ ಪ್ರಸಂಗ’ (೨೦೧೭), ‘ದಡ ಸೇರಿಸು ತಂದೆ’ (೨೦೧೯), ಸೇರಿ ಇದುವರೆಗೆ ಒಟ್ಟು ಆರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಬುತ್ತಿ’ (೨೦೧೭) ಎಂಬ ಬಾಲ್ಯದ ಅನುಭವ ಕಥನವನ್ನು, ‘ದಂದುಗ’ (೨೦೨೦), ‘ಗೌರಿಯರು’ (೨೦೨೨) ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಈ ಬರಹಗಳಲ್ಲಿ ಮನುಷ್ಯನ ವಿಕಾಸ ಮತ್ತು ಅವನತಿಯ ಹಂತಗಳನ್ನು ಬದುಕಿನ ಸಮಗ್ರ ವ್ಯಾಪಾರದಿಂದ ಕಾಣುವ ಪ್ರಯತ್ನಗಳನ್ನು ಮಾಡುತ್ತಾರೆ. ಹೈದ್ರಾಬಾದ್ ಕರ್ನಾಟಕದ ಜನಬದುಕು ಇಲ್ಲಿನ ಕೊರತೆಗಳನ್ನೂ ಮೀರಿ ಜೀವನಪ್ರವಾಹದಲ್ಲಿ ಕೊಚ್ಚಿಹೋಗದೆ ಹೇಗೆ ದೃಢವಾಗಿ ನಿಂತಿದೆ ಎಂದು ದಾಖಲಿಸುತ್ತಾರೆ. ದಂದುಗ ಕಾದಂಬರಿಯು ಕೊರೋನಾ ಕಾಲದ ಅನುಭವಗಳನ್ನು ಚಿತ್ರಿಸಿದರೆ ಗೌರಿಯರು ಕಾದಂಬರಿ ಹೊಸಕಾಲದ ಮಹಿಳೆಯರ ಬದುಕು ಮತ್ತು ಸಾಧ್ಯತೆಗಳನ್ನು ಸ್ತ್ರೀವಾದಿ ನೆಲೆಯಿಂದ ತೀವ್ರವಾಗಿ ಮತ್ತು ಸೂಕ್ಷ್ಮವಾಗಿ ಚಿತ್ರಿಸುತ್ತದೆ.

ಅಮರೇಶ ನುಗಡೋಣಿ ಅವರು ಸಂಶೋಧಕರಾಗಿಯೂ ನಾಡಿನಾದ್ಯಂತ ಹೆಸರಾದವರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕನ್ನಡ ಸಂವೇದನೆಯನ್ನು ರೂಪಿಸಿದವರು. ತತ್ವಪದಗಳ ಸಾಂಸ್ಕೃತಿಕ ಅಧ್ಯಯನವಾದ ‘ನುಡಿವ ಬೆಡಗು’ (೧೯೯೯). ‘ತತ್ವಪದ ಸಾಹಿತ್ಯ ಅಧ್ಯಯನ’ (೨೦೧೪), ಸಾಹಿತ್ಯ ವಿಮರ್ಶೆಯ – ‘ಶ್ರೀಕೃಷ್ಣ ಆಲನಹಳ್ಳಿ’ (೧೯೯೫), ‘ನುಡಿವ ಪಾಡು’ (೨೦೧೧), ‘ನುಡಿ ದಂದುಗ’ (೨೦೧೪), ಹಾಗೆಯೇ ‘ರಾಯಚೂರು ಜಿಲ್ಲೆಯಲ್ಲಿ ಹೈ. ಕ. ವಿಮೋಚನಾ ಚಳುವಳಿ’ (೨೦೦೦), ‘ಹೈದ್ರಾಬಾದು ಕರ್ನಾಟಕ ಹಾಡು ಪಾಡು’ (೨೦೦೩), ‘ಸಣ್ಣಕತೆ : ಸಾಮಾಜಿಕ ವಾಸ್ತವ’ (೨೦೧೬), ಭಾರತೀಯ ಸಾಹಿತ್ಯ ನಿರ್ಮಾಪಕರ ಮಾಲೆಯಲ್ಲಿ ‘ಜೇಡರ ದಾಸಿಮಯ್ಯ’ (೨೦೧೮). ‘ವಚನಗಳ ಅನುಸಂಧಾನ’ (೨೦೨೧), ‘ಮಧ್ಯಕಾಲೀನ ಸಾಹಿತ್ಯ ಸಂಸ್ಕೃತಿ’ (೨೦೨೨) ಎನ್ನುವ ಪುಸ್ತಕಗಳು ಸಂಶೋಧನೆ ಮತ್ತು ವಿಮರ್ಶೆಯ ಭಾಗವಾಗಿ ಬೆಳಕು ಚೆಲ್ಲಿದ ವಿಶಿಷ್ಟ ಬರಹಗಳು.

೧೯೯೫ರಲ್ಲಿ ಹೈದರಾಬಾದ್ ಕರ್ನಾಟಕದ ಪ್ರಾತಿನಿಧಿಕ ಕಥಾಸಂಕಲನವಾದ ‘ಬಿಸಿಲ ಹನಿಗಳು’, ಕನ್ನಡ ಸಾಹಿತ್ಯ ಅಕಾಡೆಮಿಗೆ ‘ಸಣ್ಣಕತೆ:೧೯೯೭’, ಮಹಾಂತೇಶ ಮಸ್ಕಿ ಅವರೊಂದಿಗೆ ಜಂಬಣ್ಣ ಅಮರಚಿಂತ ಅವರ ಗೌರವ ಗ್ರಂಥವಾದ ‘ಅಮರಚಿಂತ’, ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಪುಟವಾದ ‘ಕಲ್ಯಾಣ ಕರ್ನಾಟಕ’, ಎಚ್.ಎಸ್. ರಾಘವೇಂದ್ರರಾವ್ ಅವರ ಸಾಹಿತ್ಯದ ಕುರಿತ ವಿಮರ್ಶಾ ಕೃತಿಯಾದ ‘ನುಡಿ ಬಾಗಿನ’ ದಂಡೆ ನಂದೀಶ್ವರ ಅವರೊಂದಿಗೆ ‘ಬಸವಣ್ಣ’ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ವಿವಿಧ ವಿಚಾರ ಸಂಕಿರಣಗಳನ್ನು ಏರ್ಪಡಿಸಿದ ನಿಮಿತ್ತ ಶೂನ್ಯಸಂಪಾದನೆಗಳು, ಬಸವಣ್ಣನ ವಚನಗಳು, ಅಲ್ಲಮಪ್ರಭು ವಚನಗಳು, ಹರಿಚಂದ್ರ ಚಾರಿತ್ಯ, ಜೈಮಿನಿ ಭಾರತ, ಗ್ರಾಮಾಯಣ ಕುರಿತ ‘ಸಾಂಸ್ಕೃತಿಕ ಮುಖಾಮುಖಿ’ಗಳ ಸಂಪಾದನೆಗಳನ್ನು ಅಷ್ಟೇ ಅಲ್ಲದೆ ‘ನಾನೇಕೆ ಬರೆಯುತ್ತೇನೆ?’, ‘ಕಥೆ ಹುಟ್ಟುವ ಪರಿ’. ‘ಪುರಂದರದಾಸರ ಸಾಹಿತ್ಯ ಅಧ್ಯಯನಗಳು’, ‘ದಿನಕರ ದೇಸಾಯಿ -೧೦೦. ‘ಸರ್ವಜ್ಞನ ತ್ರಿಪದಿಗಳು : ಅನುಸಂಧಾನದ ನೆಲೆಗಳು’, ಸಂಶೋಧನಾ ವೈಧಾನಿಕತೆಯ ಕುರಿತ ‘ಕನ್ನಡ ಸಂಶೋಧನೆಯ ವೈಧಾನಿಕತೆಗಳು’ ಪುಸ್ತಕಗಳನ್ನು ವಿಚಾರಸಂಕಿರಣಗಳಿಂದ ಸಂಪಾದಿಸಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗದಿಂದ ಪ್ರಕಟಿಸಿದ್ದಾರೆ.

ಅಷ್ಟೇ ಅಲ್ಲದೆ ನುಗಡೋಣಿ ಅವರ ಅನೇಕ ಕತೆಗಳು ರಂಗ ಪಠ್ಯಗಳಾಗಿ, ನಾಟಕಗಳಾಗಿ ಮತ್ತು ಸಿನಿಮಾಗಳಾಗಿ ರೂಪಾಂತರಗೊಂಡಿವೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬೋ ಕುದುರೆಯನೇರಿ’ ‘ಸವಾರಿ’ ಕತೆಯನ್ನು ಆಧರಿಸಿದೆ. ಹಾಗೆಯೇ ‘ನೀರು ತಂದವರು’ (ನೀರು ತಂದವರು ಕತೆ), ‘ಆಲಿಂಡಿಯಾ ರೇಡಿಯೋ’ (ದೈವಕ್ಕೆ ಮೊದಲು ಶರಣೆಂಬೆವು ಕತೆ), ‘ವಾಘಚಿಪಾಣಿ’ (ಧರೆ ಉರಿದರೆ ಕತೆ) ಆಸಿಫ್ ಕ್ಷತ್ರಿಯ, ರಂಗಸ್ವಾಮಿ ಮತ್ತು ನಟೇಶ್ ಹೆಗಡೆ ಅವರ ನಿರ್ದೇಶನದಲ್ಲಿ ಸಿನಿಮಾಗಳಾಗಿ ಪ್ರಶಸ್ತಿಗಳನ್ನೂ ಪಡೆದಿವೆ.

ಮಮತೆ ವಾತ್ಸಲ್ಯಗಳಿಂದ ಒಡನಾಡುವ ಅಮರೇಶ ನುಗಡೋಣಿ ಅವರದು ಯಾವಾಗಲೂ ಬೆಳೆಯುವ ಜೀವನ್ಮುಖಿ ವ್ಯಕ್ತಿತ್ವ, ಬದುಕಿನ ಬಗೆಗೆ ಅವರಿಗಿರುವ ಜೀವನಾಸಕ್ತಿ ತೀವ್ರವಾದದ್ದು. ಜೊತೆಗೆ ಇದ್ದಷ್ಟು ಅಪ್ತವಾದ ಸೃಜನಶೀಲ ವಾತಾವರಣವನ್ನು ನಿರ್ಮಿಸುವವರು. ಮುಗ್ಧವಾಗಿಯೇ ತಮ್ಮಲ್ಲಿನ ಪ್ರಬುದ್ಧತೆಯನ್ನು ಕಾಪಿಟ್ಟುಕೊಂಡು ತಮ್ಮ ಸಾತ್ವಿಕ ಗುಣದಿಂದ ನಮ್ಮಲ್ಲಿ ಜೀವನಾಸಕ್ತಿಯನ್ನು ಎಚ್ಚರಿಸುವಂತೆ ಬೆರೆಯುತ್ತಾರೆ. ಅವರ ಬದುಕಿನ ವಿಸ್ತರಣೆಯಾಗಿ ಅವರ ಕತೆಗಳಿವೆ. ಅವರು ನಂಬಿದ ಮೌಲ್ಯಗಳು ಜೀವಪರ, ಅವರ ಬದುಕು ಮತ್ತು ಬರಹಗಳಲ್ಲಿ ವಚನ ಸಾಹಿತ್ಯ ಚಳವಳಿಯ ದಟ್ಟವಾದ ಪ್ರಭಾವವಿದೆ. ಅವರ ಮನಸ್ಸು ದಡಗಳಲ್ಲಿ ಬೆಳೆದು ನಿಂತ ಗಿಡಬಳ್ಳಿಗಳಿಗೆ ಸದಾ ನೀರೂಡುತ್ತ ಚಲಿಸುವ ನದಿಯ ಹಾಗೆ. ಹರಿಯುವ ನದಿಗೆ ಕತೆಗಳು ಹೆಚ್ಚು.

‘ತಮಂಧದ ಕೇಡು’, ‘ಸವಾರಿ’, ‘ಏ ದಿಲ್ ಮಾಂಗೆ ಮೋರ್’, ‘ಪರಿಣಾಮಿ’, ‘ಧರೆ ಉರಿದರೆ’, ‘ಧೈವಕ್ಕೆ ಮೊದಲು ಶರಣೆಂಬೆವು’, ಮೊದಲಾದ ಕತೆಗಳಿಂದ ಕನ್ನಡ ಕಥಾಜಗತ್ತಿನಲ್ಲಿ ಮಹತ್ವದ ಲೇಖಕನಾಗಿ ಉಳಿಯುವ ಅಮರೇಶ ನುಗಡೋಣಿ ಅವರು ಮಾಸ್ತಿ. ಅನಂತಮೂರ್ತಿ, ಯಶವಂತ ಚಿತ್ತಾಲ, ಲಂಕೇಶ್, ತೇಜಸ್ವಿ ಅವರ ಸ್ಥಾನವನ್ನು ತುಂಬಬಲ್ಲ ಶಕ್ತಿಶಾಲಿ ಕತೆಗಾರರಾಗಿ ನಿಲ್ಲುತ್ತಾರೆ. ಪ್ರಶಸ್ತಿ ಸಂಭ್ರಮದಲ್ಲಿ ಇರುವ ಕತೆಗಾರರಿಗೆ ಇದೊಂದು ಸಣ್ಣ ನುಡಿಗೌರವ. ಹೇಳಬೇಕಾದದ್ದು ಇನ್ನೂ ಉಳಿದಿದೆ.

-ಮಂಜುನಾಥ ಬಾದಾಮಿ


Leave a Reply

*