4. ಕರಡಿಯೊಂದಿಗೆ ಗೆಳೆತನ
ಉತ್ತರ ಇರಾನಿನ ಪರ್ವತ ಪ್ರದೇಶದಲ್ಲಿ ಬಹಳಷ್ಟು ಕಂದು ಕರಡಿಗಳಿದ್ದವು. ಈ ಕರಡಿಗಳು ಬೇಟೆಗಾರರಿಂದ ತಪ್ಪಿಸಿಕೊಳ್ಳುತ್ತಾ ಪರ್ವತಗಳ ಮೇಲೆ ಓಡಾಡುತ್ತಿದ್ದವು. ಆದರೆ, ಊರವರು ಎಂದೂ ನೋಡದ, ಆದರೆ ಡ್ರಾಗನ್ ಎಂದು ಕರೆಯುತ್ತಿದ್ದ ಭಯಾನಕ ಪ್ರಾಣಿಯೊಂದು ಕರಡಿಗಳ ನಿದ್ದೆಗೆಡಿಸಿತ್ತು. ಈ ಡ್ರಾಗನ್ ಕರಡಿಗಳ ಮೇಲೆ ದಾಳಿ ಮಾಡಿ, ಬಹಳ ಸುಲಭದಲ್ಲಿ ತಿಂದು ಹಾಕುತ್ತಿತ್ತು.
ಇದ್ಯಾವುದನ್ನೂ ತಿಳಿಯದ ದೂರದೂರಿನ ಬೇಟೆಗಾರನೊಬ್ಬ ಬೇಟೆಯನ್ನು ಹುಡುಕುತ್ತಾ ಆ ಪರ್ವತ ಪ್ರದೇಶಕ್ಕೆ ಹೋದನು. ಆ ರಾತ್ರಿ ಆತ ಪರ್ವತ ದ ಮೇಲೆ ಟೆಂಟ್ ಹಾಕಿ, ಬೆಂಕಿ ಹೊತ್ತಿಸಿ ಚಳಿಕಾಯಿಸಿಕೊಳ್ಳುತ್ತಾ, ತನ್ನ ಇಷ್ಟದ ಹಾಡನ್ನು ಗುನುಗುತ್ತಾ, ಮರುದಿನದ ತನ್ನ ಬೇಟೆಯ ಬಗ್ಗೆ ಉತ್ಸಾಹದಿಂದ ಯೋಚಿಸುತ್ತಿರಬೇಕಾದರೆ ಎಲ್ಲಿಂದಲೋ ಭಯಾನಕ ಘರ್ಜನೆಯೊಂದು ಕೇಳಿಸಿ ನಡುಗಿ ಹೋದನು. ರಕ್ಕಸ ಗಾತ್ರದ ಪ್ರಾಣಿಯೊಂದು ಇನ್ನೊಂದು ಪ್ರಾಣಿಯ ಮೇಲೆ ದಾಳಿ ಮಾಡುವಾಗ ಕೇಳುವ ಭೀಕರ ಘರ್ಜನೆ. ಅಂತಹ ಘರ್ಜನೆಯನ್ನು ಆತ ಹಿಂದೆಂದೂ ಕೇಳಿಸಿಕೊಂಡಿರಲಿಲ್ಲ. ಏನಿರಬಹುದು? ಎಂಬ ಕುತೂಹಲದಿಂದ ಆತ ತನ್ನ ಬಿಲ್ಲು ಬಾಣಗಳನ್ನು ಎತ್ತಿಕೊಂಡು ಹೊರಗೆ ಬಂದನು. ಆದರೆ, ತನ್ನೆದುರಿಗೆ ಕಂಡ ದೃಶ್ಯ ಆತನನ್ನು ಭಯಭೀತಗೊಳಿಸಿತು. ಡ್ರಾಗನ್ ತನ್ನ ಬೆಂಕಿಯುಗುಳುವ ಕಣ್ಣುಗಳೊಂದಿಗೆ, ಚೂಪಾದ ಹಲ್ಲುಗಳನ್ನು ಪ್ರದರ್ಶಿಸುತ್ತಾ ಕರಡಿಯ ಮೇಲೆ ದಾಳಿ ಮಾಡಲು ಸಿದ್ಧವಾಗಿ ನಿಂತಿತ್ತು. ಬೇಟೆಗಾರ ತಕ್ಷಣವೇ ತನ್ನ ಬಿಲ್ಲು ತೆಗೆದು ಡ್ರಾಗನ್ ನ ಕಣ್ಣಿಗೆ ಗುರಿಯಿಟ್ಟನು. ಡ್ರಾಗನ್ ಅಟ್ಟಹಾಸಗೈಯುತ್ತಾ ನೆಲಕ್ಕೆ ಕುಸಿದು ಬಿತ್ತು. ಸಾವಿನ ದವಡೆಯಲ್ಲಿದ್ದ ಕರಡಿಗೆ ತನ್ನ ಮುಂದೆ ಅನಿರೀಕ್ಷಿತವಾಗಿ ಜರಗಿದ ಘಟನೆಗಳನ್ನು ನಂಬಲು ಸಾಧ್ಯವಾಗಲಿಲ್ಲ. ಕರಡಿ ಬೇಟೆಗಾರನನ್ನು ಕೃತಜ್ಞತೆಯಿಂದ ನೋಡಿತು. ಬಾಲ ಅಲ್ಲಾಡಿಸಿ ಬೇಟೆಗಾರನ ಸಮೀಪಕ್ಕೆ ಹೋಯಿತು. ಆರಂಭದಲ್ಲಿ ಬೇಟೆಗಾರನಿಗೆ ಸ್ವಲ್ಪ ಭಯವಾದರೂ, ಕರಡಿ ತನ್ನ ಮುಂದೆ ಮಂಡಿಯೂರಿ ನಿಂತಾಗ ಭಯ ಮಾಯವಾಯಿತು.
ಬೇಟೆಗಾರ ತನ್ನ ಡೇರೆಗೆ ಹಿಂದಿರುಗಿದಾಗ ಕರಡಿ ಆತನನ್ನು ಹಿಂಬಾಲಿಸಿತು. ಅಂದಿನಿಂದ ಅವರಿಬ್ಬರು ಮಿತ್ರರಾದರು. ಬೇಟೆಗಾರ ಎಲ್ಲಿಗೆ ಹೋದರೂ ಕರಡಿಯೂ ಜೊತೆಗೆ ಹೋಗುತ್ತಿತ್ತು. ಇವರಿಬ್ಬರ ಒಡನಾಟ ಆ ಪ್ರದೇಶದ ಜನರ ಆಶ್ಚರ್ಯಕ್ಕೆ ಕಾರಣವಾಯಿತು. ಅವರೆಲ್ಲರೂ ಬೇಟೆಗಾರನಿಗೆ ಎಚ್ಚರಿಕೆ ನೀಡಿದರು; “ಮೂರ್ಖ, ಕರಡಿಯಂತಹ ಪ್ರಾಣಿಯೊಂದಿಗೆ ಸ್ನೇಹ ಬೆಳೆಸುವುದು ಬಹಳ ಅಪಾಯಕಾರಿ. ಮನುಷ್ಯ ಶತ್ರುವಿಗಿಂತಲೂ ಅಪಾಯಕಾರಿ” ಎಂದು ಕಿವಿ ಮಾತು ಹೇಳಿದರು. ಆದರೆ, ಆ ಬೇಟೆಗಾರ ಜನರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಕರಡಿಯೊಂದಿಗಿನ ತನ್ನ ಗೆಳೆತನ ಕಂಡು ಅಸೂಯೆಯಿಂದ ಜನರು ಹೀಗಾಡುತ್ತಿದ್ದಾರೆ ಎಂದು ಆತ ಭಾವಿಸಿದನು. ಜನರು ಆತನಿಗೆ ಉಪದೇಶಿಸುವುದನ್ನು ಬಿಟ್ಟುಬಿಟ್ಟರು.
ಒಂದು ದಿನ ಬೇಟೆಗಾರ ಕರಡಿಯನ್ನು ಜೊತೆಗೂಡಿಸಿಕೊಂಡು ಬೇಟೆಗೆ ಹೊರಟನು. ಪರ್ವತದ ಪ್ರದೇಶದ ವಿವಿಧ ಕಡೆಗಳಲ್ಲಿ ಅಲೆದಾಡಿದರೂ, ದುರದೃಷ್ಟವಶಾತ್ ಈ ಗೆಳೆಯರಿಗೆ ಒಂದೇ ಒಂದು ಬೇಟೆಯೂ ಸಿಗಲಿಲ್ಲ. ಕಾಡಿನಲ್ಲಿ ನಡೆದು ಸುಸ್ತಾದ ಬೇಟೆಗಾರ ಒಂದು ಮರದ ಕೆಳಗೆ ಅಲ್ಪ ಹೊತ್ತು ಮಲಗಿದನು. ಕರಡಿ ಆತನ ಪಕ್ಕದಲ್ಲಿ ವಿಧೇಯ ಸೇವಕನಂತೆ ಆತನಿಗೆ ಕಾವಲು ಕುಳಿತಿತು. ಬೇಟೆಗಾರ ಸುಂದರವಾದ ಕನಸು ಕಾಣುತ್ತಾ ನಿದ್ರಿಸುತ್ತಿರಬೇಕಾದರೆ, ನೊಣವೊಂದು ಆತನ ಹಣೆಯ ಮೇಲೆ ಗುಂಯ್ ಗುಟ್ಟುತ್ತಾ ಹಾರಾಡ ತೊಡಗಿತು. ಬೇಟೆಗಾರ ನಿದ್ರೆಯ ಮಂಪರಿನಲ್ಲಿಯೇ ಆ ನೊಣವನ್ನು ಓಡಿಸಲೆತ್ನಿಸಿದನು. ಆದರೆ, ನೊಣ ಮತ್ತೆ ಮತ್ತೆ ಬಂದು ಬೇಟೆಗಾರನಿಗೆ ತೊಂದರೆ ಕೊಡುತ್ತಿತ್ತು. ಕರಡಿ ಇದನ್ನು ಗಮನಿಸಿತು. ತನ್ನ ಯಜಮಾನನ ನಿದ್ರೆಗೆ ಭಂಗವನ್ನುಂಟು ಮಾಡುತ್ತಿರುವ ನೊಣವನ್ನು ಕರಡಿ ಓಡಿಸುವ ಶತ ಪ್ರಯತ್ನ ಮಾಡಿ ಸೋತಿತು. ಕರಡಿಯ ಸಿಟ್ಟು ನೆತ್ತಿಗೇರಿತು. ‘ಇನ್ನು ನೊಣವನ್ನು ಉಳಿಸಬಾರದು’ ಎಂದು ಯೋಚಿಸಿ, ಪಕ್ಕದಲ್ಲಿ ಬಿದ್ದಿದ್ದ ದೊಡ್ಡ ಕಲ್ಲು ತೆಗೆದು, ನೊಣಕ್ಕೆ ಹೊಡೆಯಿತು. ನೊಣವೇನೋ ಸತ್ತು ಬಿದ್ದಿತು. ಅದರ ಜೊತೆಗೆ ಬೇಟೆಗಾರನ ತಲೆಯೂ ಎರಡು ಹೋಳಾಯಿತು.
ಮೂರ್ಖನ ಸಂಗ ಆಪತ್ತಿಗೆ ಕಾರಣ ಎಂದು ಬೇಟೆಗಾರನಿಗೆ ಕೊನೆಗೂ ತಿಳಿಯಲಿಲ್ಲ.
5. ಬುದ್ಧಿವಂತ ಹುಚ್ಚ
‘ಇದು ಮದುವೆಯಾಗಲು ಸೂಕ್ತ ಸಮಯ’ ಎಂದು ಯುವಕನೊಬ್ಬ ಮದುವೆಯಾಗಲು ನಿರ್ಧರಿಸಿದನು. ಮದುವೆಯೆಂಬುದು ಜೀವನದ ಅತೀ ಮುಖ್ಯ ಘಟಕ. ಆದ್ದರಿಂದ ಎಲ್ಲೂ ತಪ್ಪು ಸಂಭವಿಸಬಾರದೆಂಬ ಕಾಳಜಿ ಆ ಯುವಕನಿಗಿತ್ತು. ಆದ್ದರಿಂದ ಆತ ತನಗಿಂತ ಬುದ್ಧಿವಂತನಾದ ವ್ಯಕ್ತಿಯೊಬ್ಬನಿಂದ ಸಲಹೆ ಕೇಳಲು ನಿರ್ಧರಿಸಿದನು. ಪಟ್ಟಣದಲ್ಲಿ ಅಲೆದಾಡಿ, ಎದುರು ಸಿಕ್ಕ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಈ ಪರಿಸರದಲ್ಲಿರುವ ಬುದ್ಧಿವಂತ ವ್ಯಕ್ತಿಯ ಬಗ್ಗೆ ವಿಚಾರಿಸತೊಡಗಿದನು.
ಕೆಲವರು ಆತನೊಂದಿಗೆ; ”ನಮ್ಮ ಪೇಟೆಯಲ್ಲಿ ಅಂತಹ ವಯಸ್ಸಾದ ಒಬ್ಬ ವ್ಯಕ್ತಿಯಿದ್ದಾನೆ. ಆತ ಮಕ್ಕಳ ಜೊತೆಗೆ ಆಟವಾಡುತ್ತಿರುತ್ತಾನೆ” ಎಂದರು.
ಜನರು ಹೇಳಿದ ಆ ಬುದ್ಧಿವಂತ ವ್ಯಕ್ತಿಯನ್ನು ಹುಡುಕಲು ಯುವಕ ಹೆಚ್ಚು ಕಷ್ಟಪಡಬೇಕಾಗಿ ಬರಲಿಲ್ಲ. ನೋಡಿದರೆ ಆತ ಊರ ಜನರಿಗೆ ಬಹಳ ಪರಿಚಯಸ್ಥನೂ ಆಗಿದ್ದ.
ನಗರ ಮಧ್ಯದ ಮುಖ್ಯ ವೃತ್ತದಲ್ಲಿ ಆತ ಬಿದಿರಿನ ಕೋಲನ್ನು ಕುದುರೆಯೆಂಬಂತೆ ಕಲ್ಪಿಸಿ ಮಕ್ಕಳ ಗುಂಪಿನ ಜೊತೆಗೆ ಓಡುತ್ತಿದ್ದನು. ಈ ದೃಶ್ಯವನ್ನು ದೂರದಿಂದಲೇ ನೋಡಿದ ಯುವಕ ಆ ಬುದ್ಧಿವಂತನನ್ನು ಕರೆದು, “ಏಯ್, ಕುದುರೆ ಸವಾರ, ಆ ಕುದುರೆಯನ್ನು ಸ್ವಲ್ಪ ಹೊತ್ತು ನಿಲ್ಲಿಸುವೆಯಾ?” ಎಂದು ಕೇಳಿದನು.
“ಏನು ಹೇಳಬೇಕೋ ಅದನ್ನು ಬೇಗ ಹೇಳಿಬಿಡು. ನೀನು ನೋಡಿದೆಯಲ್ಲ, ಇದು ಕಾಡು ಕುದುರೆ, ಹತ್ತಿರ ಬಂದರೆ ಒದೆಯುತ್ತದೆ” ಎಂದು ಆ ಬುದ್ಧಿವಂತ ಹೇಳಿದನು.
“ನಾನು ಮದುವೆಯಾಗಲು ನಿರ್ಧರಿಸಿದ್ದೇನೆ. ಆದರೆ, ಹೇಗೆ ಮುಂದುವರಿಯಬೇಕೆಂದು ತಿಳಿಯುತ್ತಿಲ್ಲ. ಈ ವಿಷಯದಲ್ಲಿ ನಿಮ್ಮ ಸಲಹೆ ಬೇಕು. ಹೆಣ್ಣಿನ ಕುರಿತು ನನಗೆ ಹೇಳಿಕೊಡಬೇಕು. ಅತ್ಯುತ್ತಮ ಹೆಣ್ಣು ಯಾರು?” ಎಂದು ಯುವಕ ಕೇಳಿದನು. ತನಗೆ ಸ್ಪಷ್ಟ ಉತ್ತರ ಲಭಿಸುತ್ತದೆ ಎಂಬ ಭರವಸೆ ಅವನಿಗೆ ಇರಲಿಲ್ಲ.
“ಈ ಲೋಕದಲ್ಲಿ ಮೂರು ವಿಧದ ಹೆಂಗಸರಿದ್ದಾರೆ. ಅವರಲ್ಲಿ ಎರಡು ಬಗೆಯ ಹೆಂಗಸರು ನಿಮಗೆ ಉತ್ತಮ ಸಂಗಾತಿಯಾಗುತ್ತಾರೆ. ಆದರೆ, ಮೂರನೇಯ ವಿಧದ ಹೆಂಗಸರು, ಇಹಪರ ಎರಡೂ ಲೋಕದಲ್ಲೂ ಅತ್ಯಂತ ಬೆಲೆಬಾಳುವ ನಿಧಿಯಾಗಿರುತ್ತಾರೆ.
ಯುವಕನಿಗೆ ಗೊಂದಲವಾಯಿತು. ”ಹೇಗೆಂದು ವಿವರಿಸುವಿರಾ?”
“ಸರಿ. ನಾನು ಒಂದೊಂದಾಗಿ ವಿವರಿಸುತ್ತೇನೆ. ಮೊದಲನೇಯ ವಿಧದ ಹೆಂಸಗರು, ಆಯುಷ್ಕಾಲವಿಡೀ ನಿಮ್ಮ ಜೊತೆಗಿರುತ್ತಾರೆ. ಎರಡನೇ ವಿಧದ ಹೆಂಗಸರು, ಭಾಗಶಃ ನಿಮ್ಮ ಜೊತೆಗಿರುತ್ತಾರೆ. ಮೂರನೇಯ ವಿಧದ ಹೆಂಗಸರು, ನಿಮಗೆ ಸಿಗುವುದೇ ಇಲ್ಲ. ಹೋಗು ಇಲ್ಲಿಂದ. ಇಲ್ಲದಿದ್ದರೆ ನನ್ನ ಕುದುರೆ ನಿನ್ನನ್ನು ಒದೆಯುತ್ತದೆ” ಎಂದು ಆ ಬುದ್ಧಿವಂತ ಮುದುಕ ತನ್ನ ಬಿದಿರಿನ ಕೋಲಿನೊಂದಿಗೆ ಮಕ್ಕಳ ಕಡೆಗೆ ಓಡಿದನು.
“ಒಂದ್ನಿಮಿಷ” ಯುವಕ ಮತ್ತೆ ಆ ಮುದುಕನನ್ನು ಕರೆದನು. “ಅಮೂಲ್ಯ ಉಪದೇಶ ಕೊಟ್ಟಿರಿ. ಕೃತಜ್ಞತೆಗಳು. ಆದರೆ, ಅದನ್ನು ಇನ್ನೂ ಸ್ಪಷ್ಟವಾಗಿ ಹೇಳುವಿರಾ?”
“ಸರಿ. ಕೊನೆಯ ಬಾರಿ ಹೇಳುತ್ತೇನೆ, ಒಬ್ಬಳು, ಮಕ್ಕಳಿಲ್ಲದ ವಿಧವೆ, ಆಕೆ ನಿನ್ನವಳಾಗುತ್ತಾಳೆ ನಿಜ. ಆದರೆ, ಆಕೆಯ ಮನಸ್ಸಿನ ಅರ್ಧ ಭಾಗವನ್ನು ಮರಣ ಹೊಂದಿದ ಆಕೆಯ ಪತಿಯೇ ತುಂಬಿಕೊಂಡಿರುತ್ತಾನೆ. ತನ್ನ ಮೊದಲ ಪತಿಯೊಂದಿಗೆ ನಿನ್ನನ್ನು ಹೋಲಿಸುತ್ತಿರುತ್ತಾಳೆ. ಹೆದರಬೇಡ, ಅವಳು ನಿನ್ನವಳೇ ಆಗಿರುತ್ತಾಳೆ. ಇನ್ನೊಂದು ರೀತಿಯ ಹೆಂಗಸರು, ಮಕ್ಕಳಿರುವ ವಿಧವೆಯರು, ಅವರ ಮನಸ್ಸಲ್ಲಿ ಸದಾ ಸಮಯವೂ ಅವರ ಮಕ್ಕಳೇ ತುಂಬಿರುತ್ತಾರೆ. ಅವಳೆಂದೂ ತನ್ನ ಮನಸ್ಸನ್ನು ನಿನ್ನೊಂದಿಗೆ ಹಂಚಿಕೊಳ್ಳುವುದಿಲ್ಲ. ತನ್ನ ಮಕ್ಕಳನ್ನು ನೋಡುವಾಗ ಅವಳಿಗೆ ತನ್ನ ಮೊದಲ ಪತಿಯ ನೆನಪಾಗುತ್ತಿರುತ್ತದೆ. ಮೂರನೇಯವಳು ಕನ್ಯೆ, ತನ್ನ ಜೀವನವನ್ನು ಯಾರ ಜೊತೆಗೂ ಹಂಚಿಕೊಳ್ಳದವಳು, ಅವಳು ನಿನಗೆ ಅತ್ಯುತ್ತಮ ಜೋಡಿಯಾಗಿರುವಳು. ಇನ್ನು ಇಲ್ಲಿ ನಿಲ್ಲಬೇಡ. ಬೇಗ ಹೊರಟು ಹೋಗು”
“ಸರಿ ನಾನು ಹೊರಡುತ್ತೇನೆ. ಆದರೆ, ಕೊನೆಯದಾಗಿ ಒಂದು ಪ್ರಶ್ನೆ. ನೀವು ಮಹಾಬುದ್ಧಿವಂತರು. ಯಾಕೆ, ಹುಚ್ಚರಂತೆ ನಟಿಸುತ್ತೀರಿ?”
“ಪಟ್ಟಣದ ಮುಖ್ಯಸ್ಥ ನನ್ನನ್ನು ನ್ಯಾಯಾಧೀಶನಾಗುವಂತೆ ಒತ್ತಾಯಿಸುತ್ತಿದ್ದಾನೆ. ನಾನೆಷ್ಟೇ ನಿರಾಕರಿಸಿದರೂ ಆತ ಬಿಡುತ್ತಿಲ್ಲ. ಆದ್ದರಿಂದ ಹುಚ್ಚನಂತೆ ನಟಿಸುವುದಲ್ಲದೆ ನನಗೆ ಬೇರೆ ಮಾರ್ಗವಿಲ್ಲ. ನನ್ನ ಮನಸ್ಸೇ ನನ್ನ ಆಧ್ಯಾತ್ಮಿಕತೆ. ಅದನ್ನು ನಾನು ಯಾರಿಗೂ ಮಾರಾಟ ಮಾಡುವುದಿಲ್ಲ” ಯುವಕ ಚಕಿತನಾಗಿ ನಿಂತು ನೋಡುತ್ತಿದ್ದಂತೆಯೇ ಆ ಮುದುಕ ತನ್ನ ಅಪೂರ್ಣ ಆಟವನ್ನು ಮುಂದುವರಿಸಲು ಮತ್ತೆ ಮಕ್ಕಳ ಹಿಂದೆ ಓಡತೊಡಗಿದನು.
6. ಕುಡುಕ ಮತ್ತು ಕಾವಲುಗಾರ
ಮಧ್ಯರಾತ್ರಿಯ ಸಮಯ. ರಾತ್ರಿ ಪಹರೆಗಾರರು ಊರ ಸುತ್ತ ಗಸ್ತು ತಿರುಗುತ್ತಿರಬೇಕಾದರೆ ಕುಡುಕನೊಬ್ಬ ಗೋಡೆಗೆ ಒರಗಿ ನಿಂತಿರುವುದು ಕಂಡಿತು. ಪಹರೆಗಾರರಲ್ಲಿ ಒಬ್ಬ ಕುಡುಕನ ಕಾಲರ್ ಪಟ್ಟಿ ಹಿಡಿದು;
“ಕುಡಿದಿರುವೆಯಾ? ಏನನ್ನು ಕುಡಿದಿರುವೆ ಹೇಳು” ಎಂದು ಗದರಿಸಿದನು.
“ಆ ಬಾಟಲಿಯಲ್ಲಿ ಏನಿತ್ತೋ ಅದನ್ನು ಕುಡಿದಿರುವೆ” ಎಂದು ಕುಡುಕ ಹತ್ತಿರದಲ್ಲಿ ಬಿದ್ದಿದ್ದ ಖಾಲಿ ಬಾಟಲಿಯತ್ತ ಬೊಟ್ಟು ಮಾಡಿ ಹೇಳಿದನು.
“ಬಾಟಲಿಯಲ್ಲಿ ಏನಿದೆಯೋ ನನಗೆ ಕಾಣುತ್ತಿಲ್ಲ. ನೀನು ಕುಡಿದದ್ದೇನೆಂದು ನೀನೇ ಹೇಳು” ಎಂದು ಪಹರೆಗಾರ ಹೇಳಿದನು.
“ನಾನು ಹೇಳಿದೆನಲ್ಲ, ಬಾಟಲಿಯಲ್ಲಿ ಏನಿತ್ತೋ ಅದನ್ನೇ ನಾನು ಕುಡಿದಿದ್ದೇನೆ” ಎಂದು ಕುಡುಕ ಪುನರಾವರ್ತಿಸಿದನು.
ಕುಡುಕನೊಂದಿಗೆ ಮಾತನಾಡಿ ಪ್ರಯೋಜನವಿಲ್ಲವೆಂದು ಪಹರೆಗಾರನಿಗೆ ಮನವರಿಕೆಯಾಯಿತು. ಆದರೆ, ಬಂಧಿಸಬೇಕಾದರೆ ಏನಾದರು ಸಾಕ್ಷಿ ಬೇಕು. ಅದಕ್ಕೆ ಬೇರೆ ರೀತಿಯಲ್ಲಿ ಪ್ರಯತ್ನಿಸಬೇಕೆನಿಸಿತು.
“ಬಾಯಿ ತೆರೆದು ‘ಆ..ಹ್….’ ಎಂದು ಹೇಳು” ಎಂದನು.
“ಹು…”ಎಂದು ಕುಡುಕ ಕೂಗಿದನು.
“ನಾನು ಹೇಳಿದ್ದು ಆ…ಹ್ ಎಂದು ಹೇಳಲು ‘ಹು’ ಎಂದು ಹೇಳಲಲ್ಲ” ಎಂದು ಪಹರೆಗಾರ ಸಿಟ್ಟುಗೊಂಡನು.
“ನಾನೀಗ ಆನಂದಪರವಶನಾಗಿರುವೆ. ನಾನೇಕೆ ಆಹ್ ಎಂದು ಹೇಳಲಿ? ನಿಮ್ಮಂತಹ ದುಃಖಿತರು ಹೊರಡಿಸುವ ಶಬ್ಧವದು. ನನ್ನಂತಹ ವ್ಯಕ್ತಿಗಳು ಸದಾ ಸಮಯವೂ ಸಂತೋಷದಲ್ಲಿರುವರು. ಆದ್ದರಿಂದ ನನ್ನಂತಹವನ ಬಾಯಿಯಲ್ಲಿ ‘ಹು..’ ಎಂಬ ಶಬ್ಧವಷ್ಟೇ ಹೊರಡುತ್ತದೆ” ಎಂದು ಕುಡುಕ ಹೇಳಿದನು.
“ಮೂರ್ಖ ತತ್ವಗಳನ್ನು ಹೇಳಿ ನನ್ನ ಕೈಯಿಂದ ತಪ್ಪಿಸಿಕೊಳ್ಳಲು ನೋಡಬೇಡ. ಅದು ನಿನ್ನಿಂದ ಸಾಧ್ಯವಿಲ್ಲ. ನಿನ್ನ ನಕಲಿ ಅಧ್ಯಾತ್ಮವನ್ನು ನನ್ನ ಜೊತೆಗೆ ಬೇಡ. ಏಳು, ಹೋಗೋಣ” ಎಂದು ಪಹರೆಗಾರ ಕುಡುಕನನ್ನು ಬಂಧಿಸುವ ಪ್ರಯತ್ನ ಮಾಡಿದನು.
“ನೀನು ಹೊರಡು. ನಾನು ಇಲ್ಲಿ ವಿಶ್ರಾಂತಿ ಪಡೆಯುತ್ತೇನೆ” ಎಂದು ಕುಡುಕ ಮಲಗಲನುವಾದನು.
ಪಹರೆಗಾರನಿಗೆ ಸಿಟ್ಟು ಬಂತು. “ಹೊರಡು ಇಲ್ಲಿಂದ” ಎಂದು ಕಿರುಚಿದನು.
“ನನ್ನನ್ನು ನನ್ನಷ್ಟಕ್ಕೇ ಬಿಟ್ಟು ಬಿಡು. ನಗ್ನನಾಗಿರುವವನ ಬಟ್ಟೆಯನ್ನು ಯಾಕೆ ಕಳಚಲು ಪ್ರಯತ್ನಿಸುವೆ? ನನಗೆ ಎದ್ದು ನಡೆಯುವ ಶಕ್ತಿಯಿದ್ದಿದ್ದರೆ ಮನೆಗೆ ಹೋಗುತ್ತಿದ್ದೆ. ನಿನ್ನೊಂದಿಗೆ ವಾದ ಹೂಡಿ ಸಮಯ ಕಳೆಯುತ್ತಿರಲಿಲ್ಲ. ಮೂರ್ಖ! ನನಗೆ ಸ್ವಲ್ಪವಾದರು ಸ್ವಪ್ರಜ್ಞೆಯಿದ್ದಿದ್ದರೆ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದೆ. ಇಲ್ಲಿ ಬಿದ್ದಿರುತ್ತಿರಲಿಲ್ಲ” ಎಂದು ಹೇಳುತ್ತಲೇ ಕುಡುಕ ತನ್ನ ಕಾಲ ಮೇಲೆ ನಿಲ್ಲಲಾಗದೆ ನೆಲದ ಮೇಲೆ ಕುಸಿದು ಬಿದ್ದನು. ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಕುಡುಕನನ್ನು ಎಬ್ಬಿಸಲಾಗದೆ ಪಹರೆಗಾರ ಅಲ್ಲಿಂದ ಜಾಗ ಖಾಲಿ ಮಾಡಿದನು.
7. ಸಿಕ್ಕಿಬಿದ್ದ ಕಳ್ಳ!
ಮಧ್ಯರಾತ್ರಿ ಮೆಟ್ಟಿಲು ಇಳಿಯುವ ಹೆಜ್ಜೆ ಸಪ್ಪಳ ಕೇಳಿ ಮನೆಯೊಡೆಯನಿಗೆ ಎಚ್ಚರವಾಯಿತು. ತಕ್ಷಣವೇ ಎದ್ದ ಆತ ದೊಂದಿ ಹಿಡಿದು ಕೆಳಗೆ ಇಳಿದು ನೋಡಿದನು. ಅವನ ಅನುಮಾನ ನಿಜವಾಗಿತ್ತು. ಕೈ ತುಂಬಾ ಬೆಲೆಬಾಳುವ ವಸ್ತುಗಳನ್ನು ಹಿಡಿದು ಕಳ್ಳನೊಬ್ಬ ವರಾಂಡದಲ್ಲಿ ನಿಂತಿದ್ದನು. ಮನೆಯೊಡೆಯನನ್ನು ನೋಡಿ ಗಾಬರಿಯಾದ ಕಳ್ಳ ತನ್ನ ಕೈಯಲ್ಲಿದ್ದ ವಸ್ತುಗಳನ್ನು ಎಸೆದು ಓಡತೊಡಗಿದನು. ಮನೆಯೊಡೆಯ ಆತನನ್ನು ಬೆನ್ನಟ್ಟಿದನು. ಇನ್ನೂ ಯುವಕನಾಗಿದ್ದ ಮನೆಯೊಡೆಯ ಅತಿವೇಗದಲ್ಲಿ ಓಡಿ ಕಳ್ಳನನ್ನು ಹಿಡಿದನು. ಇನ್ನೇನು ಅವನು ಆ ಕಳ್ಳನನ್ನು ಪೊಲೀಸರ ಕೈಗೊಪ್ಪಿಸಲು ಹೊರಡಬೇಕೆನ್ನುವಷ್ಟರಲ್ಲಿ ಹಿಂದಿನಿಂದ ಯಾರೋ ಕರೆದರು.
“ಇಲ್ಲಿ ಬನ್ನಿ. ನಿಮ್ಮ ಮನೆ ಲೂಟಿ ಹೊಡೆಯಲು ಬಂದ ಕಳ್ಳನ ಹೆಜ್ಜೆ ಗುರುತುಗಳು ಇಲ್ಲಿದೆ ಮೂಡಿದೆ. ಸಾಕ್ಷಿಗೆ ಬೇಕಾಗಬಹುದು” ಆ ಅಜ್ಞಾತ ಧ್ವನಿ ಕೂಗಿ ಹೇಳಿತು.
ಮನೆಯೊಡೆಯನಿಗೆ ನಿಜವೆನಿಸಿತು. ಇದನ್ನು ತನಗೆ ನೆನಪಿಸಿದ ಆ ಅಜ್ಞಾತ ವ್ಯಕ್ತಿಯ ಬಗ್ಗೆ ಕೃತಜ್ಞತೆ ಮೂಡಿತು. “ಎಷ್ಟೊಂದು ಒಳ್ಳೆಯ ವ್ಯಕ್ತಿ” ಎಂದು ಯೋಚಿಸುತ್ತಿದ್ದಾಗಲೇ ಇನ್ನೊಂದು ಯೋಚನೆ ಮನಸ್ಸಿಗೆ ಬಂತು; ”ಈ ಕಳ್ಳನ ಜೊತೆಗೆ ಬಂದಿರುವ ಇನ್ನೊಬ್ಬ ಕಳ್ಳ ಮನೆಯಲ್ಲಿರಬಹುದೇ? ಅದು ಆತನ ಹೆಜ್ಜೆ ಗುರುತುಗಳಾಗಿರಬಹುದೇ? ಮನೆಯಲ್ಲಿರುವ ಹೆಂಡತಿ, ಮಕ್ಕಳಿಗೆ ಆತ ತೊಂದರೆ ನೀಡಿದರೆ…? ಒಂದುವೇಳೆ ಈತನ ಬದಲು ಆತನೇ ನಿಜವಾದ ಕಳ್ಳನಾಗಿದ್ದರೆ…? ಆ ಹಾನಿಯನ್ನು ಭರಿಸಲು ತನ್ನ ಒಂದು ಜೀವನ ಸಾಲದು” ಎಂದು ಯೋಚಿಸಿದ ಮನೆಯೊಡೆಯ ತನ್ನ ಮುಷ್ಠಿಯಲ್ಲಿದ್ದ ಕಳ್ಳನನ್ನು ಬಿಟ್ಟು ಮನೆಯ ಕಡೆಗೆ ಓಡಿದನು. ಅಜ್ಞಾತ ವ್ಯಕ್ತಿ ಮನೆಯ ಹೊರಗೆ ನಿಂತಿದ್ದನು. ಆತ ಮನೆಯೊಡೆಯ ಬರುವುದನ್ನು ಕಾಯುತ್ತಿದ್ದನು.
ಮನೆಯೊಡೆಯ ಆತನನ್ನು ಕಂಡೊಡನೇ “ತುಂಬಾ ಒಳ್ಳೆಯ ಕೆಲಸ ಮಾಡಿದಿರಿ. ಧನ್ಯವಾದಗಳು. ಅಂದಹಾಗೆ ಯಾಕೆ ಕರೆದಿರಿ ನನ್ನನ್ನು” ಎಂದನು.
“ಇಲ್ಲಿ ನೋಡಿ ಕಳ್ಳನ ಹೆಜ್ಜೆ ಗುರುತುಗಳು. ಕಳ್ಳ ಈ ದಾರಿಯಾಗಿ ಓಡಿ ಹೋಗಿದ್ದಾನೆ” ಎಂದು ಬಲ ಭಾಗದ ಕಡೆಗೆ ಬೊಟ್ಟು ಮಾಡಿದನು.
“ಈ ದಾರಿಯಲ್ಲಿ ಹೋದರೆ ಆ ಕಳ್ಳನನ್ನು ಹಿಡಿಯಬಹುದು”
“ಶತಮೂರ್ಖ! ಏನು ಮಾತನಾಡುತ್ತಿರುವೆ ನೀನು! ಆಗಲೇ ನಾನವನನ್ನು ಹಿಡಿದಿದ್ದೆ. ಅವನು ನನ್ನ ಕೈಯಿಂದ ತಪ್ಪಿಸಿಕೊಳ್ಳಲು ನೀನು ಈ ನಾಟಕ ಹೂಡಿರಬೇಕು ಅಲ್ಲವೇ. ಸತ್ಯ ನನ್ನ ಕೈಮುಷ್ಠಿಯಲ್ಲಿತ್ತು. ಅದನ್ನು ತಪ್ಪಿಸಿಕೊಳ್ಳಲು ಬಿಟ್ಟು ನೀನೀಗ ಅದರ ಹೆಜ್ಜೆ ಗುರುತುಗಳನ್ನು ತೋರಿಸುತ್ತಿರುವೆಯಾ?”
“ಸತ್ಯ ಏನೆಂದು ನನಗೆ ತಿಳಿದಿದೆ. ಅಲ್ಲಿಗೆ ತಲುಪುವ ಮಾರ್ಗದ ಕುರಿತು ನಿಮಗೆ ತಿಳಿಸಿಕೊಡಲು ನಾನು ಪ್ರಯತ್ನಿಸಿದೆ”
“ಒಂದೋ ನೀನೊಬ್ಬ ಕಳ್ಳ ಅಥವಾ ಒಬ್ಬ ಅಜ್ಞಾನಿ” ಎಂದ ಮನೆಯೊಡೆಯ ತಕ್ಷಣವೇ ತನ್ನನ್ನು ತಿದ್ದಿಕೊಂಡು, “ಇಲ್ಲ.ಇಲ್ಲ. ನೀನು ಅವನನ್ನು ರಕ್ಷಿಸಿದೆ ಅಷ್ಟೇ. ಆದರೂ, ಈಗ ನನ್ನೊಂದಿಗೆ ಸತ್ಯದ ಕುರಿತು ವಟಗುಟ್ಟುತ್ತಿರುವೆ”
ಕೆಲವೊಮ್ಮೆ ಸತ್ಯ ಬಹಳ ಸ್ಪಷ್ಟವಾಗಿರುತ್ತದೆ. ಆದರೆ, ಜನರು ತಮ್ಮ ಮುಖಕ್ಕೆ ದಿಟ್ಟಿಸುತ್ತಿರುವ ಸತ್ಯವನ್ನು ಗಮನಿಸದೆ ಅದರ ಗುರುತುಗಳನ್ನು ಹುಡುಕಿಕೊಂಡು ಹೋಗುತ್ತಾರೆ.
ಅನು: ಸ್ವಾಲಿಹ್ ತೋಡಾರ್