ಅರಬ್ ಸಾಹಿತ್ಯ ಸಾರ್ವಕಾಲಿಕವಾದುದು

ಜಲಾಲ್ ಬರ್ಜಾಸ್/ಶಾಮಿಲ್ ಪುಳ್ಳಿಪ್ಪಾರ

ಜಲಾಲ್ ಬರ್ಜಾಸ್ ಸಮಕಾಲೀ‌ನ ಅರಬ್ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. 2021ರಲ್ಲಿ ತಮ್ಮ ‘ದಫಾತಿರ್ ಅಲ್ ವರ್ರಾಕ್’ (The Bookseller’s Notebooks) ಕೃತಿಗೆ ಅರಬ್ ಸಾಹಿತ್ಯದ ಅತ್ಯುನ್ನತ ಗೌರವವಾದ ಅಂತರರಾಷ್ಟ್ರೀಯ ಅರೇಬಿಕ್ ಬುಕರ್ ಪ್ರಶಸ್ತಿ ಲಭಿಸಿತು.

ಜೋರ್ಡಾನ್‌ನ ಮಾದಬಾ ಪ್ರಾಂತ್ಯದ ಹನೀನಾ ಎಂಬ ಗ್ರಾಮದಲ್ಲಿ ಹುಟ್ಟಿರುವ ಬರ್ಜಾಸ್, ವಾಯುಪಡೆಯ ಏರೋನಾಟಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಜೋರ್ಡಾನ್‌ನ ಮರುಭೂಮಿಗಳ ಏಕಾಂತ ಜೀವನದಲ್ಲಿದ್ದಾಗಲೇ ಅವರು ಓದು ಮತ್ತು ಬರವಣಿಗೆಯ ಗಂಭೀರ ಜಗತ್ತಿಗೆ ಕಾಲಿಟ್ಟರು.

ಅವರ ‘ನಶೀಜ್ ಅದ್ದುದ್ ಕ್ ‘ (The Duduk’s Whimper) ಎಂಬ ಕಾದಂಬರಿಯನ್ನು ಫ್ರಾನ್ಸ್ ಮತ್ತು ಮೊರೊಕ್ಕೊ ದೇಶಗಳ ಕೆಲವು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಸಾಂಪ್ರದಾಯಿಕ ಹಾಗೂ ಫ್ಯಾಸಿಸ್ಟ್ ಪ್ರವೃತ್ತಿಗಳನ್ನು ಪ್ರಶ್ನಿಸುವ ಅವರ ಕೃತಿಗಳು ಇಂದು ಅನೇಕ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ವಿಷಯಗಳಾಗಿವೆ.

ಜಲಾಲ್ ಬರ್ಜಾಸ್: ‘ದಫಾತಿರ್ ಅಲ್-ವರ್ರಾಕ್’ ಬರೆಯಲು ನನ್ನನ್ನು ಪ್ರೇರೇಪಿಸಿದ್ದು ಮಾನವೀಯ, ರಾಜಕೀಯ ಮತ್ತು ನೈತಿಕ ಕಾರಣಗಳು ಎಂದು ನಾನು ನಂಬುತ್ತೇನೆ.
ಜೀವನದ ಮುಖ್ಯವಾಹಿನಿಯಿಂದ ನಿಧಾನವಾಗಿ ಅಂಚಿಗೆ ತಳ್ಳಲ್ಪಡುತ್ತಿರುವ ಮನುಷ್ಯನ ಕುರಿತ ಚಿಂತೆ ನನ್ನನ್ನು ಸದಾ ಕಾಡುತ್ತಿತ್ತು. ಅವರು ಅಂಚಿಗೆ ಸರಿಯುವುದು ಅವರಲ್ಲಿ ಅರ್ಹತೆ ಅಥವಾ ಮೌಲ್ಯ ಇಲ್ಲದ ಕಾರಣದಿಂದಲ್ಲ. ಬದಲಾಗಿ, ಕ್ರೂರ ಜಾಗತೀಕರಣ ಮತ್ತು ಮಾರುಕಟ್ಟೆ ವ್ಯವಸ್ಥೆಗಳು ಮನುಷ್ಯನ ಮೌಲ್ಯವನ್ನು ಲಾಭ ಮತ್ತು ಉಪಭೋಗದ ಮಾನದಂಡಗಳಿಂದ ಮರುನಿರ್ವಚಿಸುತ್ತಿರುವುದರಿಂದ.

ಇಂದಿನ ಅರಬ್ ನಗರಗಳು ಒಂದು ತೀವ್ರ ವೈರುಧ್ಯವನ್ನು ಎದುರಿಸುತ್ತಿವೆ ಎಂದು ನನಗೆ ಅನಿಸುತ್ತದೆ. ಒಂದೆಡೆ ವೇಗವಾಗಿ ಬೆಳೆಯುತ್ತಿರುವ ಆಧುನಿಕತೆ; ಮತ್ತೊಂದೆಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮನುಷ್ಯನ ಅಸಹಾಯಕತೆ.
ಆದ್ದರಿಂದ, ಅಧಿಕಾರ, ಮಾರುಕಟ್ಟೆ ವ್ಯವಸ್ಥೆ ಮತ್ತು ಈ ಮಾನಸಿಕ ಅಸಹಾಯಕತೆಯ ನಡುವಿನ ಸಂಬಂಧವನ್ನು ಪರಿಶೀಲಿಸುವ ಪ್ರಯತ್ನವೇ ಈ ಕಾದಂಬರಿ.
ಅದರ ಜೊತೆಗೆ, ನನ್ನನ್ನು ಯಾವಾಗಲೂ ಆತಂಕಕ್ಕೀಡುವ ಮಾಡುವ ಒಂದು ಪ್ರಶ್ನೆಯನ್ನು ನಾನು ಓದುಗರ ಮುಂದೆ ಇಡಲು ಬಯಸಿದೆ:
ಒಬ್ಬ ಮನುಷ್ಯ ತನ್ನ ಗೌರವವನ್ನೂ, ಸಮಾಜದಲ್ಲಿನ ಮಾನ್ಯತೆಯನ್ನೂ ಕಳೆದುಕೊಂಡಾಗ, ಅವನ ಕೋಪ ಯಾವ ಯಾವ ರೂಪಗಳಲ್ಲಿ ಹೊರಹೊಮ್ಮಬಹುದು?

ಜಲಾಲ್ ಬರ್ಜಾಸ್: ಈ ಕಾದಂಬರಿಯಲ್ಲಿ ಸಂಗೀತವೆಂದರೆ ಕಥೆಗೆ ಅಲಂಕಾರ ನೀಡುವ ಅಂಶ ಮಾತ್ರವಲ್ಲ. ದುಃಖ, ವಿರಹ, ಏಕಾಂತ ಇವುಗಳನ್ನು ಕೇವಲ ಪದಗಳಿಂದ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಅಂತಹ ಕ್ಷಣಗಳಲ್ಲಿ ಪದಗಳಿಗಿಂತ ಸಂಗೀತವೇ ಹೆಚ್ಚು ಸ್ಪಷ್ಟವಾಗಿ ಮಾತನಾಡುತ್ತದೆ.
ದುದುಕ್ ಎಂಬ ಸಂಗೀತ ವಾದ್ಯದ ಸ್ವರಕ್ಕೆ ಒಂದು ವಿಶಿಷ್ಟ ಗುಣವಿದೆ. ಅದನ್ನು ಕೇಳಿದಾಗ ಮನಸ್ಸಿಗೆ ನೋವಾಗುತ್ತದೆ. ಆದರೆ ಅದೇ ಸಮಯದಲ್ಲಿ ಆ ಸ್ವರದಲ್ಲಿ ಎಂದಿಗೂ ಸೋಲೊಪ್ಪದ ಒಂದು ಅಂತರಂಗದ ಶಕ್ತಿಯೂ ಇರುತ್ತದೆ. ಆ ನೋವೂ, ಆ ಹೋರಾಟದ ಮನೋಭಾವವೂ ನನ್ನನ್ನು ಸೆಳೆದವು.
ಅಮ್ಮಾನ್‌ನಿಂದ ಅರ್ಮೇನಿಯಾವರೆಗೆ ಹರಡಿರುವ ಅನೇಕ ಜನರ ನೆನಪುಗಳು ಮತ್ತು ನೋವುಗಳನ್ನು ಪರಸ್ಪರ ಜೋಡಿಸುವ ಒಂದು ಸೇತುವೆಯಾಗಿ ನಾನು ಈ ಸಂಗೀತವನ್ನು ಬಳಸಿದೆ.
ಮನುಷ್ಯನಿಗೆ ಮಾತನಾಡಲು ಸಾಧ್ಯವಾಗದ ಕ್ಷಣದಲ್ಲಿ ಅವನ ಅಂತರಂಗದ ಆರ್ತನಾದವಾಗಿ ಬದಲಾಗುವ ಪಾತ್ರವೇ ಈ ಕಾದಂಬರಿಯಲ್ಲಿನ ದುದುಕ್.

ಜಲಾಲ್ ಬರ್ಜಾಸ್: ಮಾನವ ಕಲ್ಪನೆಯಲ್ಲಿ ಅತ್ಯಂತ ಆಳವಾಗಿ ಬೇರುಬಿಟ್ಟಿರುವ ಸಂಕೇತಗಳಲ್ಲಿ ಹಾವು ಒಂದಾಗಿದೆ. ಭಯ, ಪ್ರಲೋಭನೆ, ಜ್ಞಾನ, ಮರಣ ಇವೆಲ್ಲವೂ ಹಾವಿನೊಂದಿಗೆ ಜೋಡಿಸಿಕೊಂಡಿವೆ. ಬಹುತೇಕ ಎಲ್ಲಾ ಸಂಸ್ಕೃತಿಗಳ ಕಥೆಗಳಲ್ಲಿ ಹಾವು ಯಾವುದೋ ಒಂದು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
ಈ ಸಂಕೇತ ನನ್ನನ್ನು ಸೆಳೆದ ಪ್ರಮುಖ ಕಾರಣವೆಂದರೆ, ಹಾವನ್ನು ನೋಡುವುದಕ್ಕೂ ಮುಂಚೆಯೇ ಅದರ ಭಯ ನಮ್ಮೊಳಗೆ ಹುಟ್ಟಿರುತ್ತದೆ. ಅದು ಅಲ್ಲಿ ಇರಬಹುದೆಂಬ ಕೇವಲ ಸಾಧ್ಯತೆಯೇ ಸಾಕು; ನಮ್ಮ ಮನಸ್ಸಿನಲ್ಲಿ ಆತಂಕವನ್ನು ಹುಟ್ಟಿಸುತ್ತದೆ.
ಇದು ಸಮಾಜದ ದಮನ ವ್ಯವಸ್ಥೆಗಳು ಕಾರ್ಯನಿರ್ವಹಿಸುವ ರೀತಿಯಂತೆಯೇ ಇದೆ. ಬಹುತೇಕ ಸರ್ವಾಧಿಕಾರಿ ವ್ಯವಸ್ಥೆಗಳು ಯಾವಾಗಲೂ ನೇರ ಹಿಂಸೆಯನ್ನು ಬಳಸಬೇಕಾಗುವುದಿಲ್ಲ. ‘ನಿನಗೆ ಶಿಕ್ಷೆಯಾಗಬಹುದು’ ಎಂಬ ಭಯವನ್ನು ಜನರ ಮನಸ್ಸಿನಲ್ಲಿ ಬಿತ್ತಿದರೆ ಸಾಕು. ನಂತರ ಜನರು ತಾವೇ ತಮ್ಮನ್ನು ನಿಯಂತ್ರಿಸಿಕೊಳ್ಳಲು, ತಮ್ಮ ಮಾತುಗಳನ್ನೇ ತಾವೇ ಸೆನ್ಸರ್ ಮಾಡಿಕೊಳ್ಳಲು ಆರಂಭಿಸುತ್ತಾರೆ.
ಅಲ್ಲಿಂದಲೇ ನನ್ನ ಕಾದಂಬರಿಯ ಹಾವುಗಳು, ವ್ಯಕ್ತಿಯ ಮತ್ತು ಸಮಾಜದ ಮನಸ್ಸಿನೊಳಗೆ ನುಗ್ಗಿ ಭಯವನ್ನು ಉತ್ಪಾದಿಸುವ ಎಲ್ಲ ವ್ಯವಸ್ಥೆಗಳ ಸಂಕೇತವಾಗಿ ರೂಪುಗೊಂಡವು.
ಅವುಗಳಲ್ಲಿ ವಿಭಿನ್ನತೆಯ ಭಯ, ಪ್ರಶ್ನಿಸುವ ಭಯ, ಸ್ವತಂತ್ರ ಚಿಂತನೆಯ ಭಯ, ಸಂಪ್ರದಾಯವನ್ನು ಮುರಿಯುವ ಭಯ ಇವೆಲ್ಲವೂ ಸೇರಿವೆ.
ಸಾಮಾಜಿಕ ಫ್ಯಾಸಿಸಂ ರಾಜಕೀಯ ಅಧಿಕಾರದಿಂದ ಮಾತ್ರ ಹುಟ್ಟುವುದಿಲ್ಲ. ಅಜ್ಞಾನ ಮತ್ತು ಮೂಢನಂಬಿಕೆಗಳು ಒಂದಾಗಿ ಸಮಾಜದೊಳಗೇ ದಮನವನ್ನು ಮರುಸೃಷ್ಟಿಸಿದಾಗಲೂ ಅದು ಹುಟ್ಟುತ್ತದೆ.

ಜಲಾಲ್ ಬರ್ಜಾಸ್: ಈ ಕಾದಂಬರಿಯಲ್ಲಿ ಮಹಿಳೆ ಕೇವಲ ಒಂದು ವಿಷಯವಲ್ಲ; ಲೋಕವನ್ನು ಪ್ರಶ್ನಿಸುವ ನನ್ನ ಸಹಯಾತ್ರಿಯಾಗಿದ್ದಾಳೆ. ಇಂದಿನ ಅರಬ್ ಲೋಕದ ಮಹಿಳೆ ಅತ್ಯಂತ ತೀವ್ರವಾದ ಬದಲಾವಣೆಗಳ ಮೂಲಕ ಸಾಗುತ್ತಿದ್ದಾಳೆ. ಅದು ಕೇವಲ ಹೊರಗಿನ ಹೋರಾಟವಲ್ಲ. ಶತಮಾನಗಳಿಂದ ಅವಳ ಮೇಲೆ ಹೇರಲ್ಪಟ್ಟಿರುವ ಭಯ ಮತ್ತು ಸಂಪ್ರದಾಯಗಳ ವಿರುದ್ಧ ನಡೆಯುವ ಆಂತರಿಕ ಹೋರಾಟವೂ ಆಗಿದೆ.

ಮನುಷ್ಯನು ತನ್ನ ಇಂದ್ರಿಯಗಳ ಮೂಲಕವೇ ಜಗತ್ತನ್ನು ಅರಿಯುತ್ತಾನೆ. ಸಮಕಾಲೀನ ಅರಬ್ ಲೋಕದ ಬಿಕ್ಕಟ್ಟನ್ನು ಕೇವಲ ರಾಜಕೀಯದ ಭಾಷೆಯಲ್ಲಿ ಹೇಳುವುದಕ್ಕಿಂತ, ಇಂದ್ರಿಯಗಳ ಅನುಭವಗಳ ಮೂಲಕ ಹೇಳಲು ನಾನು ಪ್ರಯತ್ನಿಸಿದೆ.
ಯುದ್ಧ ಮತ್ತು ರಾಜಕೀಯ ನಮ್ಮ ಇಂದ್ರಿಯಗಳನ್ನು ಹೇಗೆ ವಿರೂಪಗೊಳಿಸುತ್ತವೆ ಎಂಬುದನ್ನು ತೋರಿಸಲು ನಾನು ಈ ಫ್ಯಾಂಟಸಿ ಶೈಲಿಯನ್ನು ಆರಿಸಿಕೊಂಡೆ. ಈ ಕಾದಂಬರಿಯಲ್ಲಿ ಐದು ಇಂದ್ರಿಯಗಳು ಐದು ಮಹಿಳೆಯರಾಗಿ ಕಾಣಿಸಿಕೊಳ್ಳುವುದಕ್ಕೂ ಒಂದು ಕಾರಣವಿದೆ.
ಒಂದು ದೇಶದ ಪತನ ಆರಂಭವಾಗುವುದು ಅದರ ಇಂದ್ರಿಯಗಳ ಪತನದಿಂದಲೇ. ಜಗತ್ತನ್ನು ಸರಿಯಾಗಿ ನೋಡಲು, ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಇರುವ ನಮ್ಮ ಸಾಮರ್ಥ್ಯವನ್ನು ಕಳೆದುಕೊಂಡಾಗ, ವಾಸ್ತವವೇ ಕಣ್ಮರೆಯಾಗುತ್ತದೆ. ಆ ಸ್ಥಿತಿಯನ್ನು ಫ್ಯಾಂಟಸಿಯ ಮೂಲಕ ಎದುರಿಸಲು ನಾನು ಪ್ರಯತ್ನಿಸಿದ್ದೇನೆ.

ಜಲಾಲ್ ಬರ್ಜಾಸ್: ಒಳಗಿನ ಜಗತ್ತು ಮತ್ತು ಹೊರಗಿನ ವಾಸ್ತವದ ನಡುವೆ ತೀವ್ರ ಸಂಘರ್ಷ ಉಂಟಾದಾಗ, ಆ ಅನುಭವವನ್ನು ವ್ಯಕ್ತಪಡಿಸಲು ಅತ್ಯಂತ ಪ್ರಾಮಾಣಿಕವಾದ ಭಾಷೆ ಮನೋವೈಜ್ಞಾನಿಕ ವಿಶ್ಲೇಷಣೆಯ ಭಾಷೆ.
ಮನುಷ್ಯನು ವೈರುಧ್ಯಗಳ ಅಂಚಿನಲ್ಲಿ ನಿಂತಾಗ, ಒಂದೇ ಸಮಯದಲ್ಲಿ ಅನೇಕ ಧ್ವನಿಗಳ ನಡುವೆ ಬದುಕಬೇಕಾದ ಪರಿಸ್ಥಿತಿ ಉಂಟಾಗುತ್ತದೆ.
ನನ್ನ ಕಾದಂಬರಿಗಳಲ್ಲಿ ನಾನು ಅನ್ವೇಷಿಸುವುದು ಇದನ್ನೇ.‌ ಒಬ್ಬ ಮನುಷ್ಯನೊಳಗೆ ಒಂದೇ ಸಮಯದಲ್ಲಿ ಸಹಬಾಳ್ವೆ ನಡೆಸುವ ಪರಸ್ಪರ ವಿರೋಧಿ ಧ್ವನಿಗಳ ಪ್ರತೀಕಾತ್ಮಕ ಸ್ಥಿತಿ.

ಜಲಾಲ್ ಬರ್ಜಾಸ್: ಇಂದು ಮಧ್ಯಪ್ರಾಚ್ಯದ ಯುದ್ಧಗಳು ಮತ್ತು ನಿರಾಶ್ರಿತರ ಪ್ರವಾಹ ಸಾಹಿತ್ಯದ ಕಚ್ಚಾ ವಸ್ತುಗಳಾಗಿವೆ.
ಸಾಹಿತ್ಯಕ್ಕೆ ಯುದ್ಧವನ್ನು ನಿಲ್ಲಿಸಲು ಸಾಧ್ಯವಿಲ್ಲ. ನಿರಾಶ್ರಿತರನ್ನು ಅವರ ಮನೆಗಳಿಗೆ ಹಿಂದಿರುಗಿಸಲು ಸಾಧ್ಯವಿಲ್ಲ. ಆದರೆ ಅದಕ್ಕಿಂತ ದೊಡ್ಡ ಕೆಲಸವನ್ನು ಅದು ಮಾಡಬಲ್ಲದು. ಮನುಷ್ಯರ ನೋವು ಮತ್ತು ನೆನಪುಗಳು ಮರೆವಿನ ಕತ್ತಲೆಯಲ್ಲಿ ಕಣ್ಮರೆಯಾಗದಂತೆ ಅವುಗಳನ್ನು ಉಳಿಸಬಲ್ಲದು.
ಇದು ಸಣ್ಣ ಪ್ರತಿರೋಧವಲ್ಲ. ಅಕ್ಷರಗಳಿಗೆ ಮನುಷ್ಯನ ಗಾಯಗಳನ್ನು ವಿಸ್ಮೃತಿಯ ವಿನಾಶದಿಂದ ರಕ್ಷಿಸುವ ಸಾಮರ್ಥ್ಯವಿದೆ. ಇದೇ ಸಾಹಿತ್ಯದ ಅತ್ಯಂತ ದೊಡ್ಡ ಶಕ್ತಿ.

ಜಲಾಲ್ ಬರ್ಜಾಸ್:‌ ನನ್ನ ಪ್ರಯಾಣಗಳಲ್ಲಿ ನಾನು ಅರಿತ ಒಂದು ಸತ್ಯವೆಂದರೆ, ಭೌಗೋಳಿಕ ಗಡಿಗಳು ಬೇರೆಬೇರೆ ಆಗಿರಬಹುದು; ಆದರೆ ಮನುಷ್ಯ ಪ್ರೀತಿಸುವ ವಿಧಾನ ಎಲ್ಲೆಡೆ ಒಂದೇ ಆಗಿರುತ್ತದೆ. ಅದಕ್ಕಾಗಿಯೇ ಆ ಕೃತಿಗೆ ‘ಪ್ರೇಮದ ಮಾರ್ಗಗಳು’ ಎಂಬ ಹೆಸರಿಟ್ಟೆ. ನಾನು ಕಾದಂಬರಿಕಾರನ ದೃಷ್ಟಿಯಿಂದ ಪ್ರಯಾಣಿಸಿದ್ದರಿಂದ, ಅಲ್ಲಿ ಕೇವಲ ದೃಶ್ಯವರ್ಣನೆಗಳಿಲ್ಲ. ಪ್ರತಿಯೊಂದು ಸ್ಥಳದ ಹಿಂದೆ ಅಡಗಿರುವ ಕಥೆಗಳು, ಜನರ ಜೀವನಸಂಘರ್ಷಗಳು ಮತ್ತು ಅವರ ಸಂಸ್ಕೃತಿಯನ್ನು ದಾಖಲಿಸಲು ನಾನು ಪ್ರಯತ್ನಿಸಿದ್ದೇನೆ.

ಜಲಾಲ್ ಬರ್ಜಾಸ್: ಅನುವಾದಗಳು ಹೆಚ್ಚುತ್ತಿರುವುದು ನಿಜ. ಸಊದ್ ಅಲ್-ಸನೂಸಿ, ಜೋಖಾ ಅಲ್-ಹಾರ್ತಿ, ಅಹ್ಮದ್ ಸಾದಾವಿ ಮೊದಲಾದವರ ಕೃತಿಗಳು ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ. ಹಾಗೆಯೇ ವೈಕಂ ಮುಹಮ್ಮದ್ ಬಶೀರ್ ಮತ್ತು ತಕಝಿ ಶಿವಶಂಕರ ಪಿಳ್ಳೈ ಅವರ ಕೃತಿಗಳು ಅರೇಬಿಕ್‌ಗೆ ಅನುವಾದವಾಗಿರುವುದನ್ನೂ ನಾನು ಕಂಡಿದ್ದೇನೆ.‌ ಇದು ಮಹತ್ವದ ಸಾಂಸ್ಕೃತಿಕ ವಿನಿಮಯ. ಆದರೆ ಇದು ಇನ್ನೂ ಸಮಾನತೆಯ ಸಾಂಸ್ಕೃತಿಕ ಸಂವಾದವಾಗಿ ರೂಪುಗೊಂಡಿಲ್ಲ.
ಅನೇಕ ಬಾರಿ ಪಾಶ್ಚಾತ್ಯ ಪ್ರಕಾಶನ ಮಾರುಕಟ್ಟೆಗೆ ಅರಬ್ ಜಗತ್ತಿನ ಬಗ್ಗೆ ಕೆಲವು ಪೂರ್ವಗ್ರಹಗಳಿರುತ್ತವೆ. ರಾಜಕೀಯ ಸಂಘರ್ಷಗಳು ಅಥವಾ ವಿಚಿತ್ರ ಸ್ಥಳೀಯ ಅಂಶಗಳಿರುವ ಕೃತಿಗಳ ಕಡೆಗೇ ಅವರು ಹೆಚ್ಚು ಗಮನ ಹರಿಸುತ್ತಾರೆ. ಆದರೆ ಅರಬ್ ಸಾಹಿತ್ಯ ಅದಕ್ಕಿಂತ ಬಹಳ ವಿಶಾಲವಾದುದು.


ಅದು ಆಧುನಿಕತೆಯನ್ನೂ ಪ್ರಾಚೀನ ಆಧ್ಯಾತ್ಮಿಕ, ತಾತ್ವಿಕ ಸ್ಮೃತಿಗಳನ್ನೂ ಒಂದೇ ಸಮಯದಲ್ಲಿ ಹೊತ್ತು ಸಾಗುವ ಮಾಂತ್ರಿಕ ಸಾಹಿತ್ಯಭೂಮಿ. ಅರಬ್ ಸಾಹಿತ್ಯವು ಅತ್ಯಂತ ಆಳವಾದ ತಾತ್ವಿಕ ಮತ್ತು ಸಾರ್ವತ್ರಿಕ ಮಾನವೀಯ ಪ್ರಶ್ನೆಗಳನ್ನು ಚರ್ಚಿಸುವ ಸಾಹಿತ್ಯ. ಆದ್ದರಿಂದ, ಅರಬ್ ಲೇಖಕರನ್ನು ಕೇವಲ ಒಂದು ಪ್ರದೇಶದ ಲೇಖಕರೆಂದು ಅಲ್ಲ; ಜಾಗತಿಕ ಮಾನವನ ಸಂಕಟಗಳನ್ನು ಬರೆಯುವ ವಿಶ್ವಲೇಖಕರಾಗಿ ನೋಡಬೇಕಾದ ಕಾಲ ಬರಬೇಕು.

ಜಲಾಲ್ ಬರ್ಜಾಸ್: ಭಾರತೀಯ ಸಾಹಿತ್ಯ ಅಪಾರ ಶ್ರೀಮಂತಿಕೆಯೂ ಅದ್ಭುತ ವೈವಿಧ್ಯವೆಯಿಂದ ಕೂಡಿದ.‌ ಅರುಂಧತಿ ರಾಯ್ ಅವರ The God of Small Things ನನ್ನನ್ನು ಅತ್ಯಂತ ಆಳವಾಗಿ ಸ್ಪರ್ಶಿಸಿದ ಕೃತಿಗಳಲ್ಲಿ ಒಂದು.
ಅದೇ ರೀತಿ ವಿಕ್ರಂ ಸೇಟ್ ಅವರ ಸಾಮಾಜಿಕ ಕಾದಂಬರಿಗಳು ಹಾಗೂ ಅಮಿತಾವ್ ಘೋಷ್ ಅವರ ಇತಿಹಾಸ ಮತ್ತು ಮಾನವಶಾಸ್ತ್ರವನ್ನು ಒಳಗೊಂಡ ಬರವಣಿಗೆಗಳು, ಇತಿಹಾಸವು ವ್ಯಕ್ತಿಗಳ ಬದುಕನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಅದ್ಭುತವಾಗಿ ತೋರಿಸುತ್ತವೆ.
ಬಹುಸಂಸ್ಕೃತಿಗಳು ಮತ್ತು ವೈರುಧ್ಯಗಳಿಂದ ಕೂಡಿದ ಒಂದು ಮಹತ್ತರ ಸಮಾಜದ ಆತ್ಮವನ್ನು ಸಾಹಿತ್ಯವಾಗಿ ಪರಿವರ್ತಿಸುವ ಭಾರತೀಯ ಲೇಖಕರ ಸಾಮರ್ಥ್ಯವು ವಿಶ್ವಸಾಹಿತ್ಯಕ್ಕೂ ಒಂದು ಪಾಠವಾಗಿದೆ.

ಜಲಾಲ್ ಬರ್ಜಾಸ್: ಬೇಗ ಪ್ರಸಿದ್ಧರಾಗಬೇಕೆಂಬ ಆಸೆಗಾಗಿ ಅಥವಾ ಪ್ರಭಾವಲಯವನ್ನು ನಿರ್ಮಿಸಿಕೊಳ್ಳಬೇಕೆಂಬ ಉದ್ದೇಶಕ್ಕಾಗಿ ಬರೆಯಬೇಡಿ.
ಒಂದು ಕಾದಂಬರಿ ಕೇವಲ ಬೌದ್ಧಿಕ ಕಲ್ಪನೆಯಿಂದ ಹುಟ್ಟುವುದಿಲ್ಲ. ಅದು ಲೇಖಕನ ಬದುಕಿನ ಅನುಭವ ಮತ್ತು ಅವನ ಮಾನವೀಯ ಸ್ಪಂದನೆಯ ಜೀವಂತ ಸಂಬಂಧದಿಂದ ಹುಟ್ಟುತ್ತದೆ. ಕಥಾಹಂದರ, ತಂತ್ರ, ರಚನಾ ಕೌಶಲ ಇವೆಲ್ಲ ನಂತರದ ವಿಷಯಗಳು.
ಮೊದಲು ಲೇಖಕನಿಗೆ ನಿಜವಾಗಿಯೂ ಹೇಳಬೇಕಾದ ಯಾವುದೋ ಒಂದು ಸತ್ಯ ಇರಬೇಕು. ಅದನ್ನು ಯಾವುದೇ ಭಯವಿಲ್ಲದೆ ಎದುರಿಸಿ ಬರೆಯುವ ಧೈರ್ಯ ಇರಬೇಕು.
ತಾನು ಬರೆಯುವುದು ಕೇವಲ ಭಾಷೆಯ ಅಲಂಕಾರವಲ್ಲ; ಅದು ಅರಿವಿನ, ಪ್ರತಿರೋಧದ ಮತ್ತು ಮಾನವೀಯ ಸತ್ಯದ ಒಂದು ರೂಪ ಎಂಬ ಭಾವನೆ ಲೇಖಕನಲ್ಲಿ ಮೂಡಿದಾಗ ಮಾತ್ರ ಒಂದು ಕೃತಿಗೆ ಜೀವ ಬರುತ್ತದೆ. ಆಗ ಮಾತ್ರ ಆ ಕೃತಿ ಸಮಾಜದೊಂದಿಗೆ ಜೀವಂತ ಸಂವಾದ ನಡೆಸಬಲ್ಲದು.

ಕನ್ನಡ : ಸ್ವಾಲಿಹ್ ತೋಡಾರ್


ಮೌರಿಟಾನಿಯಾದ ಮರದ ಹಲಗೆಗಳು

ಪಶ್ಚಿಮ ಆಫ್ರಿಕಾದ ಅಟ್ಲಾಂಟಿಕ್ ಮಹಾ ಸಮುದ್ರ ದಡದಲ್ಲಿ ಅತಿ ತೀಕ್ಷ್ಣೋಷ್ಣಾಂಶ ಭೌಗೋಳಿಕ ಪ್ರದೇಶವಾಗಿದೆ ಮೌರಿಟಾನಿಯ. ಅರಬ್ – ಬರ್’ಬರ್ ಸಂಸ್ಕೃತಿ ಮತ್ತು ಆಫ್ರಿಕನ್ ಸಂಪ್ರದಾಯವನ್ನು ಒಟ್ಟಿಗೆ ಮೈಗೂಡಿಸಿಕೊಂಡಿರುವ ಈ ಸಣ್ಣ ದೇಶವು ತನ್ನ ಪ್ರಾಕೃತಿಕ ವೈವಿಧ್ಯತೆ ಹಾಗೂ ವ್ಯತಿರಿಕ್ತ ಜನಜೀವನ ಶೈಲಿಯ ಮೂಲಕ ಜಗಜ್ಜಾಹೀರುಗೊಂಡಿದೆ. ಶೇಕಡಾ ತೊಂಬತ್ತರಷ್ಟೂ ಸಹರಾ ಮರುಭೂಮಿಯಿಂದಾವ್ರತಗೊಂಡಿರುವ ಕಾರಣ ಇದು ಉಷ್ಣತೀಕ್ಷ್ಣಾಂಶ ಪ್ರದೇಶವಾಗಿದೆ.

ಕೆಲ ತಿಂಗಳುಗಳ ಹಿಂದೆ ಪ್ರಮುಖ ಅರೇಬಿಕ್ ವ್ಲಾಗರ್ ಒಮರ್ ಫಾರೂಕ್ ತಮ್ಮ ಯೂಟ್ಯೂಬ್ ವಾಹಿನಿಯ ಮುಖಾಂತರ ‘ಮೌರಿಟಾನಿಯಾದ ಸೂಪರ್ ಮೆಮೊರೈಝರ್ಸ್’ ಎಂಬ ತಮ್ನೈಲಿನಲ್ಲಿ ಪ್ರಸಾರ ಮಾಡಿದ ವಿಡಿಯೋ ಒಂದರಲ್ಲಿ ಅಲ್ಲಿನ ಜನರ ಬುದ್ಧಿ ಕುಶಾಗ್ರಾಮತೆಯ ಕುರಿತು ಹಂಚಿಕೊಳ್ಳುತ್ತಾರೆ. ಅವರ ಏಕಾಗ್ರತೆ ಮತ್ತು ಆಧುನಿಕತೆಯೊಂದಿಗಿನ ಅಂತರ ಕಾಯ್ದುಕೊಳ್ಳುವಿಕೆಯನ್ನು ಅವರು ತಮ್ಮ ವೀಡಿಯೊದಲ್ಲಿ ಒತ್ತಿ ಹೇಳುತ್ತಾರೆ.

ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಅದರ ಅನುಬಂಧಿತ ವ್ಯವಸ್ಥೆಗಳು ಮಾನವನ ಕೌಶಲ್ಯಗಳನ್ನು ಹತ್ತಿಕ್ಕುತ್ತಿರುವ ಈ ಹಂತದಲ್ಲಿ, ಸಹರಾ ಮರುಭೂಮಿಯ ಹೃದಯ ಭಾಗದಲ್ಲಿ ವಾಸಿಸುವ ಈ ಜನರು ತಮ್ಮ ಸಂಪ್ರದಾಯವನ್ನು ಉಳಿಸಿಕೊಂಡ ರೀತಿ ಜಗತ್ತಿಗೆ ಕೌತುಕ ಉಂಟುಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ, ಉತ್ತಮ ಸೌಲಭ್ಯಗಳ ಅಲಭ್ಯತೆಯ ನಡುವೆಯೂ ಜ್ಞಾನಾರ್ಜನೆಯೊಂದಿಗಿನ ತಮ್ಮ ಆಸ್ಥೆ ಮೌರಿಟಾನಿಯಾದ ಜನರನ್ನು ಅಧ್ಯಯನ ಕ್ಷೇತ್ರದಲ್ಲಿ ಜಾಗತಿಕವಾಗಿ ವ್ಯತಿರಿಕ್ತಗೊಳಿಸುತ್ತದೆ.

ಅಟ್ಲಾಂಟಿಕ್ ಸಮುದ್ರ ಕಿನಾರೆಯಲ್ಲಿರುವ ಈ ಭೂಪ್ರದೇಶ ಭೌಗೋಳಿಕವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ, ಉಚ್ಛ ಸಂಸೃತಿ ಮತ್ತು ಸಂಪ್ರದಾಯಗಳಿಂದ ಸಂಪನ್ನಗೊಂಡಿದೆ. ಹತ್ತು ಲಕ್ಷಕ್ಕೂ ಮಿಕ್ಕ ಕವಿಗಳನ್ನು ಜನ್ಮವೆತ್ತ ಭೂಮಿ ಎಂಬ ಖ್ಯಾತಿ ಈ ಮಣ್ಣಿಗಿದೆ. ಅದಕ್ಕಿಂತಲೂ ಮಿಗಿಲಾಗಿ ಇಂದು ಇದು ‘ಹತ್ತು ಲಕ್ಷ ಖುರ್ಆನ್ ವಿದ್ವಾಂಸರ ನಾಡು’ ಎಂಬುದು ಈ ಪ್ರದೇಶವನ್ನು ಹೊರ ಜಗತ್ತಿನಿಂದ ಇನ್ನಷ್ಟು ವ್ಯತಿರಿಕ್ತಗೊಳಿಸುತ್ತದೆ. ಒಟ್ಟು ಜನಸಂಖ್ಯೆಯಲ್ಲಿ ಅಧಿಕ ಶೇಕಡಾವಾರೂ ಹಾಫಿಝ್ ಗಳು. ಸಾಂಪ್ರದಾಯಿಕ ಧಾರ್ಮಿಕ ಶಿಕ್ಷಣ ವ್ಯವಸ್ಥೆಯನ್ನು ಜಗತ್ತಿನ ಮುಂದೆ ತೋರಿಸುವುದರೊಂದಿಗೆ, ಮನುಷ್ಯ ಮಸ್ತಿಷ್ಕದ ಚಲನಾ ಪರಿಯನ್ನು ನೋಡುಗರ ಮುಂದಿಡುವ ಶ್ರಮವೂ ಆಗಿತ್ತು ಇಲ್ಲಿ ಒಮರ್ ಅವರದ್ದು.

“ಮೌಟ ಮೌಲಾನಾ” ಎಂಬ ಗ್ರಾಮವು ಮೌರಿಟಾನಿಯಾದ ಜ್ಞಾನ ತೇಜಸ್ಸಿನ ಒಂದು ತುಣುಕಾಗಿ ನೆಲೆನಿಂತಿದೆ. ಕಿಕ್ಕಿರಿದ ನಗರದ ಜನಜಂಗುಳಿ, ಡಿಜಿಟಲ್ ಜಗತ್ತಿನ ನೋಟಿಫಿಕೇಷನ್’ಗಳು ಮೌಟಾ ಮೌಲಾನಾ ಗ್ರಾಮದ ನಿಶಬ್ಧತೆಯನ್ನು ಎಂದಿಗೂ ಭೇದಿಸುವುದಿಲ್ಲ. ಇಲ್ಲಿ ಮಧ್ಯರಾತ್ರಿ ಎರಡರ ವೇಳೆಯೇ ತಮ್ಮ ದಿನಚರಿ ಪ್ರಾರಂಭಗೊಳ್ಳುತ್ತದೆ. ಜಗತ್ತು ಗಾಢ ನಿದ್ರೆಯಲ್ಲಿರುವಾಗ ಇಲ್ಲಿನ ಗ್ರಾಮೀಣರು ಜ್ಞಾನಾರ್ಜನೆಯ ಮಹಾಜಗತ್ತಿಗೆ ಪಯಣ ಬೆಳೆಸುತ್ತಾರೆ. ಪ್ರಾಯ ಪರಿವೆಯಿಲ್ಲದೆ ಇಡಿಯ ಗ್ರಾಮವೇ ತಮ್ಮನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಕಾಣುವಾಗ, ಆ ಗ್ರಾಮವೇ ಒಂದು ವಿಶ್ವವಿದ್ಯಾನಿಲಯದಂತೆ ಭಾಸವಾಗುತ್ತದೆ. ‘ಮಹ್’ದರ’ ಎಂದು ಕರೆಯಲ್ಪಡುವ ಅಲ್ಲಿನ ಕಲಿಕಾ ಕೊಠಡಿಗಳಿಗೆ ಸಾವಿರಾರು ವರ್ಷಗಳ ಕಥೆ ಹೇಳಲಿಕ್ಕಿದೆ. ಲೇಖನಿಯನ್ನು ಶಾಯಿಯಲ್ಲಿ ಅದ್ದಿ ಮರದ ಹಲಗೆಗಳ ಮೇಲೆ ಬರೆಯುವ ಹವ್ಯಾಸ ಇಂದಿಗೂ ಇಲ್ಲಿ ಕಾಣಬಹುದು. ಆಧುನಿಕ ಸ್ಮಾರ್ಟ್ ಮೊಬೈಲುಗಳಿಗೆ ನೀಡಲು ಅಸಾಧ್ಯವಾದ ಗಾಢ ಶ್ರದ್ಧೆ ಮತ್ತು ಇಚ್ಛಾಶಕ್ತಿಯನ್ನು ಅದು ವಿದ್ಯಾರ್ಥಿಗಳಿಗೆ ನೀಡುತ್ತದೆ. ಈ ಪ್ರಕ್ರಿಯೆಯು ಅಪೂರ್ವ ಬುದ್ಧಿಶಕ್ತಿಯನ್ನೂ ನೀಡುತ್ತದೆ. ಅರೇಬಿಕ್ ವ್ಯಾಕರಣ ಗ್ರಂಥಗಳ ಪೈಕಿ ಸಾವಿರ ಪದ್ಯಸಾಲುಗಳಿರುವ ‘ಅಲ್ಫಿಯತ್ ಇಬ್ನ್ ಮಾಲಿಕ್’ ನಿರಾಯಾಸ ಅಲ್ಲಿನ ವಿದ್ಯಾರ್ಥಿಗಳು ಹಾಡುವುದರ ಹಿಂದೆ ಅವರ ಈ ರೀತಿಯ ಕಲಿಕಾ ಕೌಶಲ್ಯಗಳ ಪಾತ್ರವೂ ಅಡಗಿದೆ.

ಜಗತ್ತಿನ ವಿವಿಧ ಪ್ರದೇಶಗಳಿಂದ ಜನರು ವಿದ್ಯಾರ್ಜನೆಯ ನಿಮಿತ್ತ ಮೌರಿಟಾನಿಯಾದ ಮಣ್ಣಿಗೆ ತಲುಪಲು ಪ್ರೇರಣೆ ಅಲ್ಲಿನ ಭೌಗೋಳಿಕ ಸೌಲಭ್ಯಗಳಲ್ಲ, ಹೊರತಾಗಿ ಕಾಲಾಂತರಗಳಲ್ಲಿ ತಂತ್ರಜ್ಞಾನ ನಿಮಿತ್ತ ನಷ್ಟಹೊಂದಿದ ಮಾನವನ ನೆಮ್ಮದಿ ಹಾಗೂ ಏಕಾಗ್ರತೆಯನ್ನು ಮರಳಿ ಪಡೆಯುವ ಹುಮ್ಮಸ್ಸು ಅವರನ್ನು ಇಲ್ಲಿಗೆ ತಲುಪಿಸುತ್ತಿದೆ. ಅಮೆರಿಕಾ, ಅಷ್ಟ್ರೇಲಿಯಾದಿಂದ ತಲುಪುವ ಜನರಿಗೆ ಈ ಮರುಭೂಮಿಯ ಸರಳ ಜೀವನ ಬಹಳ ಉತ್ಸುಕತೆಯನ್ನು ನೀಡುತ್ತದೆ. ಯಾವುದೋ ಒಂದು ನೌಕರಿಗಾಗಿ ಮಾತ್ರ ಪದವಿಗಳ ಬೆನ್ನೇರಿ ಹೊರಡುವ ಜಗತ್ತಿನ ಮುಂದೆ, ಸಣ್ಣ ಮಕ್ಕಳ ಆಳಜ್ಞಾನ ನಿಬ್ಬೆರಗುಗೊಳಿಸುತ್ತದೆ.

ಏಕಾಗ್ರತೆ ಮತ್ತು ನಿರಂತರ ತರಬೇತಿಯ ಮೂಲಕ ಜ್ಞಾನಜಗತ್ತಿನಲ್ಲಿ ಉನ್ನತ ಮಟ್ಟಕ್ಕೆ ತಲುಪಬಹುದು ಎಂಬುದನ್ನು ಮೌರಿಟಾನಿಯಾದ ಮಹದರಗಳು ಜಗತ್ತಿನ ಮುಂದೆ ಸಾಬೀತು ಪಡಿಸುತ್ತಿದೆ. ಅದು ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಮಧ್ಯೆ ಇರುವ ಚರ್ಚೆ ಅಲ್ಲ ಹೊರತು, ಮಾನವನ ಬುದ್ಧಿಶಕ್ತಿಯನ್ನು ಪರಿಮಿತಗೊಳಿಸುತ್ತಿರುವ ಬಾಹ್ಯಶಕ್ತಿಗಳನ್ನು ಎದುರಿಸಿ ಜ್ಞಾನಾರ್ಜನೆಯನ್ನು ಹೇಗೆ ಪಡೆಯಬಹುದು ಎಂಬ ಕಲೆಯನ್ನು ಮೌರಿಟಾನಿಯ ಜಗತ್ತಿನ ಮುಂದಿಡುತ್ತಿದೆ. ಪ್ರತಿಯೋರ್ವ ವಿದ್ಯಾರ್ಥಿಯೂ ಇಲ್ಲಿ ಉಪಯೋಗಿಸುತ್ತಿರುವ ಮರದ ಹಲಗೆಗಳು ಆಧುನಿಕ ಜಗತ್ತಿನ ಸ್ಮಾರ್ಟ್ ಸ್ಕ್ರೀನ್’ಗಳಿಗಿಂತ ಪ್ರಕಾಶಪೂರಿತ ಸಂದೇಶವನ್ನು ನಮಗೆ ನೀಡುತ್ತಿದೆ.

“ಈ ಗ್ರಾಮ ಮರುಭೂಮಿಯ ಮಧ್ಯೆ ಅಡಗಿಕೊಂಡಿರುವ ಟೈಮ್ ಕ್ಯಾಪ್ಸುಯೆಲ್” ಎಂದಾಗಿದೆ ಒಮರ್ ಇದನ್ನು ವಿಶೇಷಿಸುವುದು. ಸರಳ ಜೀವನದ ಮೂಲಕ ಗಾಢ ಏಕಾಗ್ರತೆಯನ್ನು ಬೆಳೆಸಿಕೊಂಡರೆ ಉತ್ತಮ ಜ್ಞಾನಿಯಾಗಬಹುದು ಎಂಬುದನ್ನು ಮೌರಿಟಾನಿಯಾ ಇಂದಿಗೂ ಸಾಬೀತುಪಡಿಸುತ್ತಲೇ ಇದೆ. ಜಗತ್ತು ಇಂಟರ್ನೆಟ್ ಮತ್ತು ತಂತ್ರಜ್ಞಾನಗಳ ಹಿಂದೆ ಶರವೇಗದಿಂದ ಓಡುತ್ತಿರುವ ಈ ವೇಳೆ, ಏಕಾಗ್ರತೆಯ ಮೂಲಕ ‘ಸೂಪರ್ ಹ್ಯೂಮನ್ಸ್’ಗಳಾಗಿ ಸರಳ ಜೀವನ ಸಾಗಿಸುತ್ತಿರುವ ಒಂದು ಜನಾಂಗ ಇಂದಿಗೂ ಈ ಭೂಮಿಯಲ್ಲಿದೆ ಎಂಬುವುದನ್ನು ನೆನಪಿಸುತ್ತಲೇ ಇರಬೇಕು.

ಸಜ್ಜಾದ್ ಪಾರಕ್ಕಡವ್
ಕ ~ ಅಬ್ದುಸ್ಸಲಾಮ್ ಮುಈನಿ ಮಿತ್ತಾರಾಜೆ.

ಆ ಪ್ರತಿಭೆಗಳು ಎಲ್ಲಿ ಮಾಯವಾದರು..?

ಕೆಲವು ದಿನಗಳ ಹಿಂದೆ ಕ್ಯಾಲಿಕಟ್’ನಲ್ಲಿ ನಡೆದ ಪುಸ್ತಕ ವಿಮರ್ಶೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹೊರಬಂದಾಗ ಬಿಳಿ ಮುಂಡಾಸು ಧರಿಸಿದ ಯುವಕನೊಬ್ಬ ನನ್ನನ್ನೇ ಕಾಯುತ್ತಾ ನಿಂತಿದ್ದ. ಅವನು ಹಲವು ವರ್ಷಗಳಿಂದ ಫೇಸ್ಬುಕ್ ಮುಖಾಂತರ ಪರಿಚಯವಾದ ಒಬ್ಬ ವಿದ್ಯಾರ್ಥಿ. ಚೆನ್ನಾಗಿ ಕವಿತೆ ಬರೆಯುವ ಅಲ್ಲದೆ ಸ್ವತಃ ಒಂದು ಕವನ ಸಂಕಲನವನ್ನೂ ಪ್ರಕಟಿಸಿದ್ದ ಆತ. ನೇರ ಮಾತುಕತೆಗೆ ಸಿಗದಿದ್ದರೂ ಚಾಟಿಂಗ್ ಮೂಲಕ, ಕರೆಗಳ ಮೂಲಕ ನಿರಂತರವಾಗಿ ನನ್ನನ್ನು ಸಂಪರ್ಕಿಸುತ್ತಿದ್ದ ಚಲಾಕಿ ಹುಡುಗ. ಮಾತು ಆರಂಭಿಸಿ ಬರವಣಿಗೆಯು ಹೇಗೆ ಸಾಗುತಿದೆ ಎಂದು ಕೇಳಿದಾಗ ಬರವಣಿಗೆ ಬಿಟ್ಟು ಓದು ಸರಿಯಾಗಿ ನಡೀತಿಲ್ಲ ಅಂತ ಉತ್ತರಿಸಿದ.

ನನಗಿದು ಹೊಸ ಅನುಭವವೇನಲ್ಲ.‌ ಹಲವ ವಿದ್ಯಾರ್ಥಿಗಳು ಇದೇ ಉತ್ತರವನ್ನು ಕೊಟ್ಟ ತುಂಬಾ ಅನುಭವಗಳು ನನಗಿದೆ. ಅಧ್ಯಯನದ ಹೊತ್ತಲ್ಲಿ ಗುರುಗಳ ಸಲಹೆ, ಪ್ರೋತ್ಸಾಹದಿಂದ ಚೆನ್ನಾಗಿ ಓದು ಬರಹ ಮಾಡುತಿದ್ದ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಚುರುಕಾಗಿ ಮಾತನಾಡುತ್ತಿದ್ದ ಯುವಕರು ತಮ್ಮ ಅಧ್ಯಯನ ಪೂರ್ತಿಯಾದ‌ ಬಳಿಕ ಉದ್ಯೋಗ ನಿಮಿತ್ತವೋ ಇನ್ಯಾವುದೋ ಗಡಿಬಿಡಿಯಲ್ಲಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಬೇಡವೆಂದು ಬದಿಗಿಟ್ಟು ಹೋಗುವ ಖೇದಕರ ಸಂಗತಿಯನ್ನು ನಾನು ಅನುಭವಿಸುತ್ತಿದ್ದೇನೆ.

ಇವತ್ತು ಕೇರಳದ ಸುನ್ನೀ ವಿದ್ಯಾ ಸಂಸ್ಥೆಗಳ ಗ್ರಂಥಾಲಯದಲ್ಲಿ ಧಾರ್ಮಿಕ ಗ್ರಂಥಗಳಲ್ಲದೆ ಇತರೆ ಸಾಹಿತ್ಯ ಪುಸ್ತಕಗಳ ಭೀಮಶೇಖರಣೆಯು ಕಾಣಿಸುತ್ತದೆ. ಅದಲ್ಲದೆ ಧಾರ್ಮಿಕ ಗ್ರಂಥಗಳ ಅಧ್ಯಯನವನ್ನು ಹೊರತುಪಡಿಸಿ ಓದಲು ಮತ್ತು ಬರೆಯಲು ಪ್ರೇರೇಪಿಸುವ ಹಲವು ವಿಶೇಷ ಕಾರ್ಯಾಗಾರಗಳೂ ನಡೆಯುತ್ತಿದೆ. ಇವುಗಳ ಮುಖಾಂತರ ಕಲೆ, ಬರವಣಿಗೆಯಲ್ಲಿ ಆಸಕ್ತಿಯಿರುವ ದೊಡ್ಡದೊಂದು ತಂಡವನ್ನು ಹೊರಜಗತ್ತಿಗೆ ಪರಿಚಯಿಸಲು ಸಾಧ್ಯವಾಗಿದೆ.‌ ಅದರ ಫಲವಂಬಂತೆ ಈ ವಿದ್ಯಾರ್ಥಿಗಳ ಪ್ರಾತಿನಿಧ್ಯವು ಸಂಸ್ಥೆಗಳಲ್ಲಿ, ಪತ್ರಿಕಾ ಪ್ರಕಟಣೆಗಳಲ್ಲಿ, ನಿಯತಕಾಲಿಕೆಗಳಲ್ಲಿ, ಭಾಷಣಗಳ ವೇದಿಕೆಯಲ್ಲಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿತ್ಯವೂ ಕಾಣಿಸುತ್ತಿದೆ. ಇದನ್ನು ಸ್ವತಃ ಅನುಭವಿಸಿದ ಕಾರಣಕ್ಕಾಗಿ ಏಳೆಂಟು ವರ್ಷಗಳ ಹಿಂದೆ ‘ಮೌಲಿಯಾರ್ ಕುಟ್ಟಿಗಳುಡೆ ವರ್ತಮಾನಮ್’ ಎಂಬ ಬರಹವನ್ನು ನಾನು ಬರೆದಿದ್ದೆ. ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ, ಪುಸ್ತಕಗಳಲ್ಲಿ, ಗ್ರಂಥಾಲಯಗಳಲ್ಲಿ, ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಕಂಡ ಮುತಅಲ್ಲಿಮರ ಬಗ್ಗೆ ಬರೆದ ಬರಹವಾಗಿತ್ತದು.

ಸುನ್ನಿ ವಿದ್ಯಾ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಕಿತಾಬ್ ಅಧ್ಯಯನದ ಹೊರತಾಗಿ ಪುಸ್ತಕ ಓದು, ಬರವಣಿಗೆ, ಚರ್ಚೆ ಮತ್ತು ಇತರ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದು ಸಾರ್ವಜನಿಕರಿಗೆ ಮತ್ತು ಮುಸ್ಲಿಮರಲ್ಲೇ ಹಲವರಿಗೆ ತಿಳಿಯದ ಸಂಗತಿಯಾಗಿ ಉಳಿದಿದೆ. ಬಹುಶಃ ಕೇರಳದ ಶ್ರೇಷ್ಠ ಗ್ರಂಥಾಲಯಗಳು ಈ ವಿದ್ಯಾ ಸಂಸ್ಥೆಗಳ ಒಳಗಿರುವ ಗ್ರಂಥಾಲಯಗಳೇ ಆಗಿರಬಹುದೇನೋ ಅಂತ ಹಲವು ಬಾರಿ ನಾನು ಯೋಚಿಸಿದ್ದಿದೆ. ಗ್ರಂಥಾಲಯಗಳು ಮಾತ್ರವಲ್ಲದೆ ವಾರಕ್ಕೆ ಅಥವಾ ತಿಂಗಳಿಗೆ ನಡೆಯುವ ಸಾಹಿತ್ಯಿಕ ಚರ್ಚೆಗಳು, ಪುಸ್ತಕಾವಲೋಕನ, ಸಾಹಿತಿಗಳನ್ನು ಕರೆದು ಆಯೋಜಿಸುವ ಕಾರ್ಯಕ್ರಮಗಳು ಇವೆಲ್ಲವೂ ಕೇರಳದ ಸುನ್ನೀ ವಿದ್ಯಾರ್ಥಿಗಳೊಳಗೆ ಸಾಹಿತ್ಯ ಪರವಾದ ಚಟುವಟಿಕೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಲು ಸಹಕಾರಿಯಾಗಿದೆ. ಸಾಹಿತ್ಯೋತ್ಸವ, ಚರ್ಚಾ ಕೂಟ,‌ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಅನುಭವ ಇರುವ ಕಾರಣ ಅವರೊಳಗಿನ ಸಾಹಿತ್ಯಾಭಿರುಚಿ, ಕೌಶಲ್ಯ, ಸಾಧನೆಯನ್ನು ಹತ್ತಿರದಿಂದ ತಿಳಿಯಲು ನನಗೆ ಸಾಧ್ಯವಾಗಿದೆ.

ವಿಶ್ವವಿದ್ಯಾಲಯಗಳಲ್ಲೇ ಸಾಹಿತ್ಯ ಪರವಾದ ಕಾರ್ಯಕ್ರಮಗಳು ಕಡಿಮೆ ಆಗುತ್ತಿರುವ ಕಾಲವಿದು. ಯಾವುದೋ ನಿರ್ದಿಷ್ಟ ದಿನಗಳಲ್ಲಿ ಸರಕಾರದ ಆದೇಶಕ್ಕೆ ಮಾತ್ರ ಸಾಹಿತ್ಯ ಕಾರ್ಯಕ್ರಮಗಳು ನಡೆಸುವ ಶಾಲಾ-ಕಾಲೇಜುಗಳಿವೆ. ಸಾಹಿತ್ಯದ ಬಗ್ಗೆಯೂ, ಸಾಹಿತಿಗಳ ಬಗ್ಗೆಯೂ ವಿಶಿಷ್ಟ ಜ್ಞಾನವೋ, ಅಭಿರುಚಿಯೋ ಇಲ್ಲದ ವಿದ್ಯಾರ್ಥಿಗಳನ್ನು ಕಂಡು ಹಲವು ಬಾರಿ ನಾನು ನೊಂದುಕೊಂಡಿದ್ದೆ. ಆದರೆ ಸುನ್ನಿ ವಿದ್ಯಾಸಂಸ್ಥೆಗಳ ಭೇಟಿಯ ವೇಳೆ ಸಿಕ್ಕಿದ ಮರ್ಯಾದೆ, ಆತಿಥ್ಯ ಶೈಲಿ ಕಂಡು ಮನತುಂಬಿಕೊಂಡ ಹಲವು ಅನುಭವಗಳು ನನಗಿದೆ. ಅದು ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಸಾಹಿತಿಯ ಮೇಲಿರುವ ಪ್ರೀತಿ ಎಂದು ನಾನು ಅಂದುಕೊಂಡಿದ್ದೇನೆ. ಚರ್ಚಾ ವೇಳೆಯಲ್ಲಿ ಅವರೆತ್ತುವ ಪ್ರಶ್ನೆಗಳು ಓದು ಮತ್ತು ಬರಹವನ್ನು ವಿದ್ಯಾರ್ಥಿಗಳು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಂದು ತಿಳಿಯುತ್ತದೆ. ಇತ್ತೀಚಿಗೆ ಮರ್ಕಝ್ ನಾಲೆಜ್ ಸಿಟಿಯ ಹೆಣ್ಣು ಮಕ್ಕಳ ವಿಭಾಗ ‘WIRAS – G’ ಓದು ಬರೆಹದ ಬಗ್ಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿನ ವಿದ್ಯಾರ್ಥಿನಿಯರು ಓದಿದ ಪುಸ್ತಕಗಳ ಬಗ್ಗೆ, ಅವರ ಸಾಹಿತ್ಯ ಅಭಿರುಚಿ ಬಗ್ಗೆ ತಿಳಿದಾಗ ಪುಳಕಗೊಂಡಿದ್ದೆ. ಪೂನೂರಿನಲ್ಲಿರುವ ವಿದ್ಯಾರ್ಥಿಗಳು ಹಲವು ರಾಷ್ಟ್ರಗಳಿಗೆ ಭೇಟಿ ಕೊಟ್ಟ ಯಾತ್ರಾನಭವದ ಪುಸ್ತಕವನ್ನು ನೀಡಿ ಗೌರವಿಸಿದ್ದನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ.

ವಿದ್ಯಾರ್ಥಿಗಳ ಆಸಕ್ತಿಯ ಜೊತೆಗೆ ಗುರುಗಳ ಪ್ರೋತ್ಸಾಹವೂ ಇದರ ಹಿಂದಿದೆ. ಪ್ರತಿಭೆ ಇರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಅವರಿಗೆ ನಿರಂತರವಾಗಿ ಪ್ರೋತ್ಸಾಹವನ್ನು ನೀಡಿ ತಮ್ಮ ಸಾಮರ್ಥ್ಯವನ್ನು ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಅವರು ಮಾಡುತ್ತಾರೆ. ಹಳೆಯ ‘ಪಳ್ಳಿದರ್ಸ್’ ಕಾಲದಿಂದಲೂ ಸುನ್ನಿ ಸಮುದಾಯವು ಸಾಹಿತ್ಯ, ಓದು, ಚರ್ಚೆ, ಗ್ರಂಥ ಬರವಣಿಗೆಯ ಕ್ಷೇತ್ರದಲ್ಲಿ ತಮ್ಮನ್ನು ತೊಡೆಗಿಸಿಕೊಂಡಿದ್ದರು. ಗೌರವಾನ್ವಿತ ಗುರು ಎ.ಪಿ ಅಬೂಬಕರ್ ಮುಸ್ಲಿಯಾರರ ‘ವಿಶ್ವಾಸಪೂರ್ವಂ’ ಎಂಬ ಆತ್ಮಕಥೆಯಲ್ಲಿ ‘ವೆಲ್ಲೂರು ಬಾಕಿಯಾತುಸ್ವಾಲಿಹಾತ್’ನ ಗ್ರಂಥಾಲಯದ ಬಗ್ಗೆ ಪರಾಮರ್ಶೆ ಮಾಡುವುದನ್ನು ಗಮನಿಸಬಹುದು.

ಕೇರಳವು ಸಂಪೂರ್ಣವಾಗಿ ಸಾಕ್ಷರತೆಯನ್ನು ಗಳಿಸುವ ಶತಮಾನಕ್ಕಿಂತಲೂ ಹಿಂದೆ ಅರಬಿ ಮಲಯಾಳಂ ಭಾಷೆಯ ಮೂಲಕ ಸಂಪೂರ್ಣ ಸಾಕ್ಷರತೆಯನ್ನು ಪಡೆದವರಾಗಿದ್ದರು ಅಲ್ಲಿನ ಮುಸ್ಲಿಮರು.‌ ಮುಹ್ಯದ್ದೀನ್ ಮಾಲೆ, ಕಪ್ಪಪ್ಟಾಟ್ ಸೇರಿದಂತೆ ಹಲವು ಗ್ರಂಥಗಳು ಅದಾಗಲೇ ಬಂದಿದ್ದವು. ಕೇರಳ ಇತಿಹಾಸದ ಬಗ್ಗೆ ಸಿಕ್ಕಿದ ಹಳೆಯ ಗ್ರಂಥವೆಂದರೆ ತುಹ್ಫತುಲ್ ಮುಜಾಹಿದೀನ್. ಆ ಗ್ರಂಥದಿಂದ ತೊಡಗಿ ಆಯುರ್ವೇದ ಗ್ರಂಥ ‘ಅಷ್ಟಾಂಗ ಹೃದಯ’ದ ವರೆಗಿನ ಸರಳವಾದ ಅರಬಿ ಮಲಯಾಳಂ ಅನುವಾದ ಈ ಕಾಲದಲ್ಲಿ ರಚನೆಯಾದದ್ದು ನೋಡಬಹುದು. ಹೆಚ್ಚೇಕೆ, ಮಲಯಾಳಂ ಭಾಷೆಯ ಮೊದಲ ಕಾದಂಬರಿ ಪ್ರಕಟವಾಗುವ ಮುಂಚೆಯೇ ಪರ್ಶಿಯನ್ ಭಾಷೆಯಲ್ಲಿ ಬರೆದ ‘ಚಾರ್ ದರ್ವೇಶ್’ ಎಂಬ ಕಾದಂಬರಿಯು ಅರಬಿ ಮಲಯಾಳಂ ಪರಿಭಾಷೆಯನ್ನು ಕೇರಳೀಯರು ಓದಿಕೊಂಡಿದ್ದರು. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯು ವಿನಿಮಯ ಭಾಷೆಯಾಗಿ ಬರುವುದಕ್ಕಿಂತ ಮೊದಲೇ ಇವರಿಗೆ ಪರಸ್ಪರ ಸಂವಹನಕ್ಕೆ ತಮ್ಮದೇ ಆದ ಭಾಷೆಯು ಪ್ರಚಲಿತದಲ್ಲಿತ್ತು. ಈ ಕಾರಣಕ್ಕಾಗಿ ವಸಾಹತು ಶಕ್ತಿಗಳ ವಿರುದ್ಧ ನಿರಂತರವಾಗಿ ಹೋರಾಡಿ, ಸಮಾಜವನ್ನು ಜಾಗೃತಿ ಮೂಡಿಸುವ ಕಿರು ಪುಸ್ತಕಗಳನ್ನು ಮತ್ತು ಅರಬಿ ಮಲಯಾಳಂ ಭಾಷೆಯಲ್ಲಿ ಲೇಖನ ಬರೆದು ಪ್ರಕಟಿಸಿ ಅಮೂಲ್ಯ ಕೊಡುಗೆಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವೆಂಬಂತೆ ಮುಸ್ಲಿಂ ಧಾರ್ಮಿಕ ವಿದ್ಯಾಸಂಸ್ಥೆಗಳಲ್ಲಿ ಸಾಹಿತ್ಯ ಚರ್ಚೆಗಳು ಮತ್ತು ಗ್ರಂಥಾಲಯಗಳು ಇಂದಿಗೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ. ಅರಾಜಕತೆ, ನೈತಿಕ ಮೌಲ್ಯ ಹಾಗೂ ಪ್ರಜ್ಞೆ ಇಲ್ಲದೆ‌ ಬದುಕಿದ ಕಾರಣಕ್ಕೆ ಹಿಂದಿನ ಕಾಲದ ಹಲವು ಬರಹಗಾರರು ತಮ್ಮ ಗೌರವವನ್ನು ಉಳಿಸುವಲ್ಲಿ ಸೋತರು ಎಂಬುದು ನಗ್ನ ಸತ್ಯ.‌ ಮುಸ್ಲಿಂ ಲೇಖಕರು ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಇಂತವರೇ ಸಾಹಿತಿಗಳು ಎಂಬ ಅವರ ಭಾವನೆ ಅವರಲ್ಲಿದ್ದ ಭಾವನೆಯಿಂದ ಅವರು ಮೂಲೆಗುಂಪಾದರು.

ಇಂದು ಸುನ್ನೀ ವಿದ್ಯಾ ಸಂಸ್ಥೆಗಳಲ್ಲಿ ಶ್ರೇಷ್ಠ ಸಾಹಿತಿಗಳನ್ನು ಕರೆಸಿ ಅವರಿಂದ ನಿರಂತರವಾಗಿ ತರಗತಿಗಳನ್ನು ನಡೆಸಲಾಗುತ್ತಿದೆ. ಅವರ ಲೇಖನ, ಕಥೆ, ಕವಿತೆಗಳು ಕೇರಳದ ಶ್ರೇಷ್ಠ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿದೆ. ಆದರೆ ಈ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಳಿಕ ಯಾವ ಕ್ಷೇತ್ರಕ್ಕೆ ಹೋಗುತ್ತಾರೆ, ಎಲ್ಲಿ ಹೋಗುತ್ತಾರೆ ಎಂಬುದು ಗಂಭೀರವಾಗಿ ನನ್ನನ್ನು ಕಾಡುವ ಪ್ರಶ್ನೆ. ಆಳವಾದ ಓದು ಮತ್ತು ಬರವಣಿಗೆಯ ಕೌಶಲ್ಯವಿರುವ ವಿದ್ಯಾರ್ಥಿಗಳು ಕಲಿಕೆ ಮುಗಿದರೆ, ಓದು ಬರಹವನ್ನು ಅರ್ಧಕ್ಕೆ ಬಿಡುವ, ನಿಶ್ಯಬ್ದರಾಗಿ ಒಂದು ಕಡೆ ಮೂಲೆಗುಂಪಾಗುವ ಪರಿಸ್ಥಿತಿ ನಮ್ಮ ನಡುವೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.‌ ಇನ್ನು ಅದೇ ದಾರಿಯಲ್ಲಿ ಮುಂದುವರಿದವರು‌ ಕೇವಲ ಸಂಘಟನೆಯ ಕಾರ್ಯಕ್ರಮದಲ್ಲೋ, ಸಂಘಟನೆಯ ನಿಯತಕಾಲಿಕೆಗಳಲ್ಲೋ ತಮ್ಮನ್ನು ಸೀಮಿತಗೊಳಿಸಿದ್ದಾಗಿ ಕಾಣಬಹುದು.

ಕಲೆಯಾದರೂ ಸಾಹಿತ್ಯವಾದರೂ ಈ ಸಮುದಾಯದ ಒಳಗಿರುವವರೇ ಬರೆಯುತ್ತಾ, ಓದುತ್ತಾ, ಹೊಸ ವಿಷಯಗಳ ಅಧ್ಯಯನ ನಡೆಸುತ್ತಾ ಮುಂದೆ ಸಾಗಿದರೆ ಮಾತ್ರ ನಮ್ಮ ಬಗೆಗೆ ಹೊರಗಿನವರಿಗೆ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯ. ದುರದೃಷ್ಟ ಏನೆಂದರೆ ಧರ್ಮದೊಳಗಿರುವವರೇ ಧರ್ಮದ ಬಗ್ಗೆ ಇಲ್ಲಸಲ್ಲದ್ದನ್ನು ಬರೆದು, ಧರ್ಮವೇ ಇದಕ್ಕೆಲ್ಲ ಕಾರಣವೆಂದು ಟೀಕಿಸುವವರು ಇದ್ದಾರೆ. ಇದು ದುಃಖದ ಸಂಗತಿ. ಇದರ ಪರಿಣಾಮವಾಗಿ ಮುಸ್ಲಿಂ ಮತ್ತು ಮುಸ್ಲಿಮೇತರರ‌ ನಡುವೆ ಹಲವು ಗೊಂದಲಗಳು, ಕೆಟ್ಟ ಅಭಿಪ್ರಾಯಗಳು ಮನೆಮಾಡಿದೆ. ಆದರೆ ಸಂಪನ್ನವಾಗಿದ್ದ ಇಸ್ಲಾಂ ಧರ್ಮದ ಹಳೆಯಕಾಲದ ಚರಿತ್ರೆಯನ್ನು ಬಲ್ಲ, ಅದೇ ಸಂಸ್ಕೃತಿಯ ಜೊತೆ ಆಚರಣೆಗಳ ಜೊತೆ ಚೆನ್ನಾಗಿ ಬೆರೆತುಕೊಂಡಿರುವ, ಚೆನ್ನಾಗಿ ಬರೆಯಲು ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ ಇಸ್ಲಾಂ ಧರ್ಮದ ಸರಿಯಾದ ಎಸಳನ್ನು ತಲುಪಿಸುವ, ಪ್ರಚಾರ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಈ ಬಗೆಗಿನ ಹೆಚ್ಚೆಚ್ಚು ಕೆಲಸಗಳು ನಡೀತಾ ಇಲ್ಲ ಎಂಬುದು ಖೇದಕರ.

‘ಕಥೆಗಳಲ್ಲಿ ಹಾಗೂ ಕಾದಂಬರಿಗಳಲ್ಲಿ ಮುಸ್ಲಿಮರನ್ನು ಕೀಳಾಗಿ, ವಿಲನ್ ಆಗಿ ಚಿತ್ರಿಸುವುದನ್ನು ನೋಡಿ ಮನನೊಂದು ನಾನು ಲೇಖಕನಾಗುವ ತೀರ್ಮಾನ ಕೈಗೊಂಡೆ’ ಎಂದು ವೈಕಂ ಮುಹಮ್ಮದ್ ಬಶೀರ್ ಅವರು ಹೇಳುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಲಿಮರನ್ನು ಅವಹೇಳನ ಮಾಡುವ, ಇಲ್ಲದ್ದನ್ನು ಧರ್ಮದ ಮೇಲೆ ಎತ್ತಿಕಟ್ಟುವ ಈ ಯುಗದಲ್ಲಿ ಆ ಬಗ್ಗೆ ಜ್ಞಾನ ಇರುವವರು ಕಾರ್ಯಪ್ರವೃತ್ತರಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಜ್ಞಾನಿಗಳು ಆ ಕೆಲಸವನ್ನು ಮಾಡದೆ ಹೋದರೆ ಅಜ್ಞಾನಿಗಳು ಒಳಿತಿಗಿಂತ ಹೆಚ್ಚು ಕೆಡುಕನ್ನೇ ಪ್ರಚಾರ ಮಾಡುವ ಹುನ್ನಾರ ನಡೆಸಿಯಾರು‌. ತರ್ಕ ಮತ್ತು ಸಂವಾದವನ್ನು ಬಿಟ್ಟು ನೈಜ ಇತಿಹಾಸವನ್ನು, ಚರಿತ್ರೆಗಳನ್ನು, ಮುಸ್ಲಿಮರ ಸಹಬಾಳ್ವೆಯ ಜೀವನ ಶೈಲಿಯನ್ನು ಜನರಿಗೆ ದಾಟಿಸುವ ಕೆಲಸವು ಪ್ರಾಥಮಿಕವಾಗಿ ನಡೆಯಬೇಕಿದೆ.

ಓದು ಬರಹ, ಸಾಹಿತ್ಯೋತ್ಸವ, ಕಲಾ ಕಾರ್ಯಕ್ರಮದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು ಅಲ್ಲಿಂದ ಹೊರಬಂದ ನಂತರ ಎಲ್ಲಿ ಹೋದರೆಂಬುದು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ಅವರನ್ನು ಪುನಃ ಕರೆತರುವ ಕೆಲಸವು ತುರ್ತಾಗಿ ನಡೆಯಬೇಕಿದೆ.

ಜ್ಞಾನ ಮತ್ತು ಚಿಂತನೆಗಳು ಮುಚ್ಚಿಡಬೇಕಾದ ವಸ್ತುಗಳಲ್ಲ. ಅದು ನಿರಂತರವಾಗಿ ಬೆಳಗುತ್ತಾ ಇನ್ನೊಬ್ಬರಿಗೆ ದಾರಿದೀಪವಾಗಬೇಕಾದ ಅಮೂಲ್ಯ ವಸ್ತು. ಓದು ಬರಹ ಎಲ್ಲರಿಗೂ ದಕ್ಕುವಂತದ್ದಲ್ಲ. ಪ್ರತಿಭೆ ಇರುವವರು ಅದನ್ನು ಸರಿಯಾಗಿ ಬಳಸಿಕೊಳ್ಳುವ ಸಕಲ ಪ್ರಯತ್ನವನ್ನು ಮಾಡಬೇಕಿದೆ. ಇಲ್ಲದೆ ಇದ್ದರೆ ಪರಲೋಕದಲ್ಲಿ ಅದರ ಬಗ್ಗೆ ಪ್ರಶ್ನೆಯನ್ನು ಎದುರಿಸಬೇಕಾದೀತು. ಸಕಲ ಸೌಕರ್ಯಗಳಿದ್ದೂ ಯಾಕೆ ಜನರಲ್ಲಿ ಈ ತರದ ಆಲಸ್ಯವು ಕಾಣಿಸುತ್ತವೆ ಎಂಬುದು ನನ್ನ ಗಂಭೀರ ಪ್ರಶ್ನೆ..!

~ನಜೀಬ್ ಮೂಡಾಡಿ
ಅನು; ಸಲೀಂ ಮುಈನೀ, ಇರುವಂಬಳ್ಳ
ಕೃಪೆ; ರಿಸಾಲ


ನಜೀಬ್ ಮೂಡಾಡಿ

ದೈವ ಪ್ರೇಮವೇ ಸಾಕ್ಷಾತ್ಕಾರದ ಹಾದಿ

ಸೂಫಿ ಸಿದ್ಧಾಂತ

ನಿರಾಕಾರತೆ-ನಿರ್ಗುಣತೆಯನ್ನು ಪ್ರಧಾನ ಪರಿಕಲ್ಪನೆಯಾಗಿರಿಸಿಕೊಂಡ ಇಸ್ಲಾಂ ಧರ್ಮದ ಏಕರೂಪ ಉಪಾಸನೆ ಭಾರತೀಯ ನಿರಾಕಾರ ಅದ್ವೈತ ಸಿದ್ಧಾಂತಕ್ಕೆ ಬಹಳ ಹತ್ತಿರವಿರುವಂಥದ್ದು. ನಿರಾಕಾರ ದೈವದ ನಂಬಿಕೆಯಿಂದಾಗಿಯೇ ಇಸ್ಲಾಂನಲ್ಲಿ ದೈವದ, ದೈವ ಪ್ರವಾದಿಗಳ ಮೂರ್ತ ಮುಖವನ್ನು ನಾವೆಲ್ಲೂ ಕಾಣೆವು. ಆದಾಗ್ಯೂ, ಆನಂತರ ಪ್ರವರ್ಧಮಾನಕ್ಕೆ ಬಂದ ಸೂಫಿ ಪಂಥಗಳಲ್ಲಿ ದೈವವನ್ನು ಪ್ರಿಯಕರ, ಸಾಕಿ, ಮದಿರೆ, ಸಂಗೀತ, ಕಾವ್ಯಗಳ ರೂಪಕಗಳ ಮೂಲಕ ಸಾಕಾರ ರೂಪ ನೀಡಿವೆ. ಇದು, “ದೈವ ನಿನ್ನ ಕಣ್ಣಿಗೆ ಕಾಣುವವರೆಗೂ ಪ್ರಾರ್ಥಿಸು”, ಎಂಬ ಪ್ರವಾದಿಗಳ ಮಾತಿನ ಇನ್ನೊಂದು ರೂಪವೇ ಆಗಿದೆ.

ಭಕ್ತಿ ಆಚರಣೆ ಸ್ವರೂಪ ಮತ್ತು ಗುರು

ಸೂಫಿಗಳ ಇಂಥ ಸಾನಿರಾಕಾರ ಅಥವ ಸನಿರ್ಗುಣದ ಆಚರಣೆಯ ಬೀಜಗಳು ಕ್ರಿ.ಶ ಮೂರನೆಯ ಶತಮಾನದಲ್ಲಿ ಆಸುಪಾಸಲ್ಲಿ ಪ್ಲೆಟೋನಸ್ ಅನುಯಾಯಿಗಳಿಂದ ಪ್ರವರ್ಧಮಾನಕ್ಕೆ ಬಂದ ನವ ಪ್ಲೆಟೋನಸ್ ಸಿದ್ಧಾಂತ ಮತ್ತು ಇತರ ತತ್ವಗಳಲ್ಲಿ ಹುದುಗಿರುವುದನ್ನು ಅಧ್ಯಯನಗಳು ಗುರುತಿಸುತ್ತವೆ.

ಇಸ್ಲಾಂಪೂರ್ವ ಧರ್ಮ ಸಿದ್ಧಾಂತಗಳಾದ ಅಗ್ನಿಪೂಜಕ ಜರಾತೃಷ್ಟ್ರ ತತ್ವ, ಕ್ರಿಸ್ತ ಸಿದ್ಧಾಂತ, ಯಹೂದಿ  ಹಾಗೂ ಗ್ರೀಕ್‌ಮೂಲದ ಧಾರ್ಮಿಕ ಆಚರಣೆಗಳಲ್ಲಿ ಇಂಥ ಸನಿರ್ಗುಣದ ಅಂಶಗಳು ಹುದುಗಿವೆ, ಎಂದು ಈ ಅಧ್ಯಯನಗಳು ಹೇಳುತ್ತವೆ. ಕ್ರಿ.ಶ ಆರನೆಯ ಶತಮಾನದಿಂದಲೇ ಈ ಬಗೆಯ ಭಕ್ತಿ ಆಚರಣೆಗಳು ರೂಢಿಯಲ್ಲಿದ್ದವೆಂಬುದು ಅವುಗಳ ಅರಹು. ಸೂಫಿಗಳು ಸಾಕಾರ ರೂಪದ ಗುರುವನ್ನು ದೈವ ಸ್ವರೂಪಿಯನ್ನಾಗಿ ಸ್ವೀಕರಿಸಿದ್ದು ಇಂಥ ಆಚರಣೆಗಳಿಂದ ಪ್ರೇರಣೆ ಪಡೆದುದೇ ಆಗಿದೆ, ಎಂಬುದೂ ಇಂಥ ಅಧ್ಯಯನಗಳ ಅಭಿಮತ. ಅಂತೆಯೇ, ಸಾಕಾರ ರೂಪದಲ್ಲಿರುವ ಗುರು- (ಮೌಲಾನಾ/ಔಲಿಯಾ/ಶೇಖ್/ಪೀರ್) ಸ್ವರ್ಗ ಮತ್ತು ಭೂಮಿಗಳ ನಡುವಿನ ಬಿಡುಗಡೆಯ ಕೊಂಡಿಯಾಗಿ ಕಾಣಿಸುತ್ತಾನೆ (ರೆನಾಲ್ಡ್ ನಿಕಲ್‌ಸನ್, 1898).

ವೈದಿಕ-ಅವೈದಿಕ ಧರ್ಮ ಪ್ರಸ್ತಾವನೆಗಳಲ್ಲಿ ಗುರುವಿಗಿರುವ ಸ್ಥಾನ ನಮಗೆಲ್ಲ ತಿಳಿದುದಾಗಿದೆ. ಗುರುಕೃಪೆಯಿಲ್ಲದೆ ಮೋಕ್ಷವಿಲ್ಲ ಎಂಬುದೇ ಅವುಗಳ ಸಾರ. ಹೀಗಾಗಿ, ಏಕೋಪಾಸನೆ ಮತ್ತು ನಿರಾಕಾರಗಳನ್ನು ಬುನಾದಿಯಾಗಿ ಹೊಂದಿರುವ ಸಿದ್ಧಾಂತಗಳಲ್ಲಿ ಕೂಡ ದೈವಸ್ವರೂಪಿ ಗುರುವೇ ಪರಮ ಪುರುಷನನ್ನು ಸಾಕ್ಷಾತ್ಕರಿಸಬಲ್ಲ ಊರುಗೋಲಾಗಿ ಕಂಡಿದ್ದರೆ ಅಚ್ಚರಿಯೇನಿಲ್ಲ. ಏನೂ ಕಾಣಿಸದ ಕತ್ತಲಿನ ಹೊದಿಕೆಯೊಳಗೆ ಬೆಳಕಿನ ಕಿರಣವನು ಬೆಳಗಿಸುವವನು ಈ ಗುರುವೇ. ಸಗ್ಗವನು ಸಾಧಿಸಬೇಕೆಂದರೆ ಬುವಿಯಲ್ಲಿ ಸಗುಣನೂ, ಸಾಕಾರನೂ ಆಗಿರುವ ಗುರುವಿನ ಕರುಣೆ ಪಡೆಯಲೇಬೇಕು. ‘ಪ್ರಜ್ಞೆಯೇ ಪರಮೇಶ್ವರ’, ಎಂಬ ಕಾಶ್ಮೀರ ಶೈವಸಿದ್ಧಾಂತದ ನಿಲುವು ಕೂಡ ಈ ಮಾದರಿಗೆ ಹತ್ತಿರವಾಗಿದೆ. ಬ್ರಹ್ಮಾಂಡದ ಅಮೂರ್ತ ಜ್ಞಾನರಹಸ್ಯವನ್ನು ಅರಿಯಲು ಗುರುವಿನ ಸಾಕಾರರೂಪ ಶಿಷ್ಯನಿಗೆ ವರದಾನ. ಮಧ್ಯಯುಗದ “ಸೂಫಿ ಪಂಥಗಳಲ್ಲಿ ಸಾಧಕನಿಗೆ ಗುರುವಿಲ್ಲದಿದ್ದರೆ ಆತ ದಾರಿ ತಪ್ಪಬಹುದು. ಸರಿಯಾದ ಮಾರ್ಗದಲ್ಲಿ ನಡೆಯಲು ಆತನಿಗೆ ಗುರು ಬೇಕೇಬೇಕು”, ಎಂಬುದೇ ನಿಲುವಾಗಿತ್ತು. ಗುರು, ದೇವ ಪ್ರತಿನಿಧಿ, ಆತನ ಕ್ರಿಯೆಗಳು ದೈವಪ್ರೇರಿತ. ಆತ ತೋರುವ ದಾರಿ ಮೋಕ್ಷದ ದಾರಿ. (ಜಾರ್ಜ್ ರೋಸೆನ್, 1866).

ಸಂಪ್ರದಾಯನಿಷ್ಠ ಎಂದೇ ಗುರುತಿಸಲಾಗುವ ಹನ್ನೊಂದನೆಯ ಶತಮಾನದ ಇಸ್ಲಾಂ ವಿದ್ವಾಂಸ ಅಲ್ ಘಜಲಿ, ಎಲ್ಲ ಬಗೆಯ ಆಧ್ಯಾತ್ಮಿಕ ಸಾಧ್ಯತೆಗಳನ್ನು ಪರಿಶೀಲಿಸಿದ ಮೇಲೆ ಸೂಫಿ ಸಿದ್ಧಾಂತದಲ್ಲಿ ನೆಮ್ಮದಿಯನ್ನು ಪಡೆದ. ಸತ್ಯದ ನೆಲೆಗಟ್ಟು, ಅನುಭಾವಿಕ ತಳಹದಿಯ ಸೂಫಿ ಇಸ್ಲಾಂನಲ್ಲಿ ತನ್ನ ನಂಬಿಕೆಯನ್ನು ಕಂಡುಕೊಂಡಿದ್ದಾಗಿ ಘಜಲಿ ನುಡಿದ (ರುಡಾಲ್ಫ್ ಸ್ಪೆನ್ಸರ್). ಘಜಲಿಯ ತುರ್ಕಿ ಭಾಷೆಯ ಕೃತಿಯನ್ನು ಇಂಗ್ಲಿಶಿಗೆ ಅನುವಾದಿಸಿರುವ ಎಚ್. ಎ. ಹೋಮ್ಸ್, ಆತನನ್ನು ಗ್ರೀಕ್ ತತ್ವಶಾಸ್ತ್ರಜ್ಞ `ಆರಿಜನ್’ಗೆ ಹೋಲಿಸುತ್ತಾನೆ. ಆತನೊಬ್ಬ ಧರ್ಮಶ್ರದ್ಧೆಯ, ನಿಜವಾದ ಮುಹಮ್ಮದೀಯ. ಮುಹಮ್ಮದನ ಧರ್ಮಶಾಸ್ತ್ರವನ್ನು ಅತ್ಯಂತ ಸಮರ್ಪಕವಾಗಿ ವ್ಯಾಖ್ಯಾನಿಸಿದವನು, ಎಂದು ಹೊಗಳುತ್ತಾನೆ. ಘಜಲಿಯಂತೆಯೇ, `ಶುದ್ಧ ಸೋದರತೆ’ಯನ್ನು ಪಶ್ಚಿಮಕ್ಕೆ ಕೊಂಡೊಯ್ದವನು ಹನ್ನೊಂದನೆಯ ಶತಮಾನದ ಸ್ಪೇನ್‌ನ ಮುಹಮ್ಮದ್ ಅಬುಲ್ ಖಾಸೀಮ್ ಅಲ್ ಮರ್ಜಿತಿ ಅಲ್-ಅಂದಲುಸಿ. ಆನಂತರ ಮೂರಿಶ್ ತತ್ವಶಾಸ್ತ್ರಜ್ಞ ಇಬ್ನೆ ರಶ್ದಿಯಿಂದಾಗಿ (ಲ್ಯಾಟೀನ್ ಹೆಸರು: ಆವರೂಸ್) ಸ್ಪೇನ್, ಇಸ್ಲಾಂ ಪ್ರಚಾರಕ ಕೇಂದ್ರವಾಗಿ ಬದಲಾಯಿತು. ಉತ್ತರ ಆಫ್ರಿಕಾದ ಮೂರೀಶ್ ಇಸ್ಲಾಂ ಪಂಗಡ ಕ್ರಿ.ಶ 711ರಿಂದ 1492ರವರೆಗೆ ಸ್ಪೇನ್‌ನಲ್ಲಿ ಆಳ್ವಿಕೆ ನಡೆಸಿತ್ತು.

ಇಂದು ಪರ್ಶಿಯಾ, ತುರ್ಕಿ, ಮಧ್ಯ ಏಶಿಯಾ ಎಂದು ಗುರುತಿಸಲಾಗುವ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಸುನ್ನಿ ಮತ್ತು ಶಿಯಾ ಪಂಗಡಗಳಲ್ಲಿ ಉಂಟಾಗುತ್ತಿದ್ದ ರಾಜಕೀಯ ಮತ್ತು ಧಾರ್ಮಿಕ ಬದಲಾವಣೆಗಳು ಕೂಡ ಇಸ್ಲಾಂ ಧರ್ಮದ ವ್ಯಾಖ್ಯಾನ ಹಾಗೂ ಪ್ರಚಾರಕ್ಕೆ ತಮ್ಮದೇ ಆದ ಪ್ರಭಾವವನ್ನು ಬೀರಿದವು. ಮುಸ್ಲೀಂ ಸಮುದಾಯದ ಪರಮೋಚ್ಚ ಧರ್ಮಗುರುವಾದ ಇಮಾಮ್ ಪದ್ಧತಿ ಜಾರಿ ಬಂದಿದ್ದು ಕೂಡ ಈ ಕಾಲಘಟ್ಟದಲ್ಲಿಯೇ. ಆರನೆಯ ಇಮಾಮ್ ಜಾಫರ್ ಅಶ್ ಶಾದಿಕ್ ಕ್ರಿ.ಶ. 765ರಲ್ಲಿ ಮರಣಿಸಿದ ಬಳಿಕ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡವು.

ಈ ಪ್ರದೇಶದ ಆರಂಭಿಕ ಭಕ್ತಿ ಆಚರಣೆಗಳ ಕುರಿತು ಹೇಳುವುದಾದರೆ, ಇಂತಹ ದೈವಭಕ್ತರು ಸರ್ವದೇವತಾ ಪೂಜೆಯಲ್ಲಿ ತೊಡಗಿಸಿಕೊಂಡಿದ್ದರು.

ಸೂಫಿ ಪದದ ಅರ್ಥ, ವಿಸ್ತಾರ

ಸೂಫಿ ಎಂಬ ಪದದ ವ್ಯುತ್ಪತ್ತಿಯ ಕುರಿತು ಓರಿಯಂಟಲಿಸ್ಟ್  ಅಧ್ಯಯನಕಾರರು, ಮುಸ್ಲೀಂ ವಿದ್ವಾಂಸರು ಸಾಕಷ್ಟು ಚರ್ಚೆ, ವಾಗ್ವಾದಗಳನ್ನು ನಡೆಸಿದ್ದಾರೆ. ಅಂತಿಮವಾಗಿ ಆ ಪದದ ನಿಷ್ಪತ್ತಿ ಅರಬ್ಬಿಯ ಶೂಫ್‌ನಿಂದಾಗಿದ್ದು, ಉಣ್ಣೆಯ ನೂಲನ್ನು ಸೂಚಿಸುತ್ತದೆ. ಪ್ರಾರಂಭದ ಧರ್ಮಶ್ರದ್ಧೆಯ ಮುಸ್ಲೀಂ ಸಮುದಾಯದಲ್ಲಿ ಸರಳತೆಯನ್ನು ಸೂಸುವ ಉಣ್ಣೆಯ ಬಟ್ಟೆಗಳು ಅತ್ಯಂತ ಜನಾನುರಾಗಿಯಾಗಿದ್ದವು. ಪರ್ಶಿಯನ್ ಗುಣವಾಚಕ, ಪಶ್ಮಿನಾ-ಪೂಶ್‌ಎಂದರೆ ಉಣ್ಣೆಯ ಬಟ್ಟೆ ತೊಡುವವನು, ಎಂಬ ಅರ್ಥ ನೀಡುತ್ತದೆ. ಎರಡನೆಯ ಕಲೀಫನಾಗಿದ್ದ ಉಮರ್, ತಾನು ಉಣ್ಣೆಯ (ಶೂಫ್) ಜುಬ್ಬಾ ತೊಡುತ್ತಿದುದಾಗಿ ಹೇಳಿಕೊಂಡಿದ್ದಾನೆ. ಪ್ರವಾದಿಯ ಒಡನಾಡಿಯಾಗಿದ್ದ ಅಬು ಉಬೆದುಲ್ಲ ಇಬ್ನೆ ಅಲ್‌ಜರ್‌ಹಾ ಮತ್ತು ಪರ್ಶಿಯಾದ ಸುಲೇಮಾನ್‌ರಂಥ ಧರ್ಮನಿಷ್ಠರು ಕೂಡ ಇಂಥ ಸರಳ ಉಣ್ಣೆಯ ಬಟ್ಟೆ ತೊಡುತ್ತಿದ್ದರೆಂದು ಇತಿಹಾಸ ದಾಖಲಿಸುತ್ತದೆ (ಮುರುಜೂದ್ ದಹಬ್ ಸಂ. ಬಾರ್ಬೇರ್ ಮೇನರ್ಡ್, ಸಂ. 4). ಈ ಎಲ್ಲ ಕಾರಣವಾಗಿ ಸೂಫಿ ಎಂದರೆ `ಸರಳ ಉಡುಗೆ-ತೊಡುಗೆಯ, ಸಚ್ಚಾರಿತ್ರ್ಯದ ಧರ್ಮಶ್ರದ್ಧೆಯ ವ್ಯಕ್ತಿ’, ಎಂಬ ಅರ್ಥವನ್ನು ಇಂದು ಬಹುಪಾಲು ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಉಳಿದ ನಿಷ್ಪತ್ತಿಗಳು ಬೌದ್ಧಿಕ ಚರ್ಚೆಗಳು.

 ಪ್ರವಾದಿಗಳ ನಿಕಟ ಸಂಗಾತಿಗಳ ಧಾರ್ಮಿಕತೆಯನ್ನು ಒಪ್ಪಿಕೊಂಡಿದ್ದ ಅನುಯಾಯಿಗಳಿಗೆ ಬರುಬರುತ್ತ ಧರ್ಮದ ಬಾಹ್ಯ ಆಡಂಬರ ಮತ್ತು ಪ್ರದರ್ಶನ ಆತಂಕವನ್ನು ಹುಟ್ಟಿಸತೊಡಗಿತು. ಸರಳತೆಯನ್ನು ಮರೆಮಾಚಿದ ದುಂದುಗಾರಿಕೆ ಹಾಗೂ ಬಾಹ್ಯ ತೋರಿಕೆಗಳನ್ನು ಈ ಅನುಯಾಯಿಗಳು ಮೌನವಾಗಿ ಪ್ರತಿಭಟಿಸತೊಡಗಿದರು. ನಿರಾಡಂಬರತೆ, ಶ್ರದ್ಧೆ, ಲೌಕಿಕ ವಿಷಯಗಳ ಕುರಿತು ನಿರ್ಲಿಪ್ತತೆಯನ್ನು ತೋರುವ ಜನ ಮತ್ತು ಗುಂಪಗಳನ್ನು ಪ್ರಾಜ್ಞರು ಸೂಫಿಗಳು ಎಂದು ಗುರುತಿಸಲಾರಂಭಿಸಿದರು. ಇದು ಆರಂಭ ಕಾಲದ ಸೂಫಿ ಧಾರ್ಮಿಕರ ಚಿತ್ರಣ. ಸೂಫಿ ಸಂತರ ಕುರಿತು, ಅಲ್-ಖುಶಾಯಿರಿ ಹೇಳುವುದು ಹೀಗೆ:

“ದೈವವಾಣಿಯ ಪ್ರಚಾರಕರ ಮರಣದ ಬಳಿಕ, ಯಾವುದೇ ಸ್ಥಾನಮಾನ ಹೊಂದಿರದ ಅತ್ಯಂತ ಶ್ರೇಷ್ಠ ಮುಸಲ್ಮಾನರು, ಇದಕ್ಕಿಂತ ಉದಾತ್ತವಾದುದು ಯಾವುದೂ ಇಲ್ಲವೆಂಬಂತೆ ಪ್ರವಾದಿಯೊಂದಿಗಿನ ತಮ್ಮ ಒಡನಾಟವನ್ನು ಗಟ್ಟಿಗೊಳಿಸಿಕೊಂಡರು. ಮಾತ್ರವಲ್ಲ, ಆ ಕಾರಣವಾಗಿಯೇ ಅವರನ್ನು `ಸಂಗಾತಿ’ಗಳು ಎಂದು ಕರೆಯಲಾಗುವುದು. ಮುಂದಿನ ಕಾಲಾವಧಿಯಲ್ಲಿ ಅವರೊಂದಿಗೆ ಒಡನಾಟ ಸಾಧಿಸಿ, ಆ ಸಂಗಾತಿಗಳೊಂದಿಗೆ ಸಂವಾದ ನಡೆಸಿದವರನ್ನು `ಅನುಯಾಯಿ’ಗಳು ಎಂದು ಕರೆಯಬಹುದು. ಅಂಥವರನ್ನು ಮಹಾ ಮಹಿಮರು ಎಂದು ಗುರುತಿಸಲಾಗುತ್ತಿತ್ತು. ಆ ಬಳಿಕ ಬಂದವರು ಅನುಯಾಯಿಗಳ `ಅನುಚರ’ರು. ಮುಂದೆ ಭಿನ್ನತೆಗಳು ಮೈದೋರಿ, ವಿವಿಧ ಪಂಗಡಗಳು ಉಂಟಾದವು. ಧರ್ಮದ ಕುರಿತು ವಿಶೇಷ ಕಾಳಜಿ ವಹಿಸಿ, ಅದರಲ್ಲಿ ತಲ್ಲೀನರಾದವರನ್ನು ಭಕ್ತರು ಮತ್ತು ಸಂತರು ಎಂದು ಕರೆದರು. ಬಳಿಕ ಪಾಖಂಡಿತನ ಶುರುವಾಯಿತು. ವಿವಿಧ ಪಂಥಗಳ ನಡುವೆ ವಿರೋಧ ಹುಟ್ಟಿ ತಮ್ಮದೇ ನಿಜವಾದ ಭಕ್ತಿ ಎಂಬ ತಗಾದೆ ಉಂಟಾಯಿತು. ದೈವಭಕ್ತಿಯಲ್ಲಿ ಮನವನ್ನು, ದೈವ ಚಿಂತನೆಯಲ್ಲಿ ಹೃದಯವನ್ನು ನೆಟ್ಟ ಸುನ್ನಿ ಸಮುದಾಯವನ್ನು ಸೂಫಿಗಳು ಎಂದು ಗುರುತಿಸಲಾಯಿತು. ಇಂತಹ ಪುಣ್ಯ ಪುರುಷರು ಬದುಕಿದ್ದು ಹಿಜರಾ ಶಕೆ ಎರಡನೆಯ ಶತಮಾನದ ಸೋಪಾನದಲ್ಲಿ (ಹಿ.ಶ. 200/ಕ್ರಿ.ಶ 815-16).” (ಜಾಮಿ, ನಾಸೂ ಲೀಸ್, ಕಲ್ಕತ್ತ, 1858)

ಪ್ರಥಮ ಸೂಫಿ ಅಬೂ ಹಾಶಿಮ್, ಹುತಾತ್ಮ ಹಲ್ಲಾಜ್ ಮತ್ತು ಹಮದಾನಿ

ಎಂಟನೆಯ ಶತಮಾನದಲ್ಲಿ ಬದುಕಿದ್ದ, ಸಿರಿಯಾದ ಶ್ರದ್ಧಾವಂತ ಅಬೂ ಹಾಶಿಮ್‌ನನ್ನು ಮೊದಲಬಾರಿಗೆ `ಸೂಫಿ’ ಎಂಬ ವಿಶೇಷಣ ಅಥವ ಪದನಾಮದ ಮೂಲಕ ಗುರುತಿಸಲಾಯಿತು. ಈತ ಪ್ಯಾಲೆಸ್ತೀನ್‌ನ ರಮ್ಲಾದಲ್ಲಿ, ಧರ್ಮಭೀರುಗಳ ಪ್ರಾರ್ಥನಾತಾಣ `ಖಾನಕ಼ಾ’ ನಿರ್ಮಿಸಿದನೆಂದು ಪ್ರತೀತಿ. ಸೂಫಿ ಸಿದ್ಧಾಂತವನ್ನು ವ್ಯಾಖ್ಯಾನಿಸಿದ ಆದ್ಯಪುರುಷ, ಗುರು ಮಾಲಿಕ್‌ನ ಶಿಷ್ಯ, ಈಜಿಪ್ಟಿನ ಧೂನ್ ನೂನ್ ಅಲ್-ಮಿಶ್ರಿ (ಕ್ರಿ.ಶ. 796-859). ಈ ಎರಡೂ ಅಂಶಗಳನ್ನು ಕವಿ ಜಾಮಿ ದಾಖಲಿಸಿದ್ದಾನೆ. ಮಿಶ್ರಿಯ ಸೂಫಿ ಸಿದ್ಧಾಂತವನ್ನು ವಿಸ್ತರಿಸಿ, ಅದಕ್ಕೊಂದು ಚೌಕಟ್ಟು ಒದಗಿಸಿ ಪಠ್ಯರೂಪಕ್ಕಿಳಿಸಿದವನು ಅಬೂ ಖ಼ಾಸಿಮ್ ಇಬ್ನೆ ಮುಹಮ್ಮದ್ ಜುನೈದ್ ಬಾಗ್ದಾದಿ (ಕ್ರಿ.ಶ. 830-910). ಜುನೈದ್, ತನ್ನ ಕಾಲದ ಮಹಾ ಗುರು ಎಂದು ಪ್ರಸಿದ್ಧ. ಒಂದೆಡೆ: “ಮೂರು ದಶಕಗಳಿಂದ ಜನರೊಡನೆ ಜುನೈದನ ನಾಲಗೆಯ ಮೂಲಕ ದೈವ ಮಾತಾಡಿತು. ಆದರೆ, ಜನಕ್ಕೆ ಇದರ ಅರಿವಿರಲಿಲ್ಲ! ಪರಮಪುರುಷನ ಸಮ್ಮಿಲನದ ಸಿದ್ಧಾಂತ ಪ್ರಮಾಣವು ದೈವ ಸಮ್ಮಿಲನದ ನಿರಾಕರಣೆಯೇ ಆಗಿದೆ!” ಎಂಬಂಥ ಒಡಪಿನ ಮಾತಾಡಿದ. ಈತನ ಶಿಷ್ಯರೂ ಕಡಿಮೆಯೇನಲ್ಲ. ಜುನೈದ್, `ಅನ್ ಅಲ್ ಹಕ್’, ಸಿದ್ಧಾಂತ ಪ್ರತಿಪಾದಕ ಹುಸೇನ್ ಮನ್ಸೂರ್ ಅಲ್-ಹಲ್ಲಾಜ್‌ನ ದೀಕ್ಷಾ ಗುರುವೂ ಹೌದು.

ತನ್ನ, `ನಾನೇ ಸತ್ಯ, ನಾನೇ ದೈವ’ (ಅನ್ ಅಲ್ ಹಕ್) ಸಿದ್ಧಾಂತಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟ ಹಲ್ಲಾಜ್‌ನ ಉಸಿರಿನ ಕೊನೆ ಗಳಿಗೆಯಲ್ಲಿ ನಿಶಾಪುರದ ಫಾತೀಮಳನ್ನು ಆತನೊಂದಿಗೆ ಮಾತನಾಡಲು ಕಳಿಸಲಾಯಿತು. ಆಕೆ, ‘ಸೂಫಿ ಸಿದ್ಧಾಂತವೆಂದರೇನು?’ ಎಂದು ಕೇಳಿದಾಗ, ಹಲ್ಲಾಜ್ ಹೇಳಿದ್ದು: “ನನ್ನದೆಲ್ಲವೂ ದೇವನದೇ ಆಗಿದೆ. ನನ್ನ ಸುಖ ಮತ್ತು ಯಾತನೆಗಳನ್ನು ಅರೆಚಣವು ಕೂಡ ಎರಡಾಗಿ ನೋಡಲಾರೆ!” ಎಂದು! ಅಂದರೆ, ತಾನು ಮತ್ತು ದೈವ ಒಂದೇ, ಹಾಗೂ ಈ ಅಹಂ ಬ್ರಹ್ಮಾಸ್ಮಿ ಸ್ಥಿತಿಯೇ ಸೂಫಿ ಸಿದ್ಧಾಂತವಾಗಿದೆ, ಎಂಬುದು ಹಲ್ಲಾಜ್ ನೀಡಿದ ಸಂದೇಶವಾಗಿತ್ತು.

ಕೇಶವ ಮಳಗಿಯವರ ಕೃತಿಗಳು

ಸೂಫಿ ಸಿದ್ಧಾಂತವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಪ್ರವಚನಗಳ ಮೂಲಕ ಪ್ರಸಿದ್ಧಿಗೆ ತಂದವನು ಜುನೈದ್‌ನ ಇನ್ನೊಬ್ಬ ಶಿಷ್ಯ ಮತ್ತು ಹುಸೇನ್ ಮನ್ಸೂರ್ ಹಲ್ಲಾಜನ ಪ್ರೀತಿಪಾತ್ರ ಗೆಳೆಯ ಅಬೂ ಬಕ್ರ್ ಶಿಬ್ಲಿ (ಕ್ರಿ.ಶ. 861-946). ಹಿಜರಿ ಶಕೆ ಎರಡನೆಯ ಶತಮಾನದ ಸೋಪಾನದಲ್ಲಿ (ಕ್ರಿ.ಶ. ಒಂಬತ್ತನೆಯ ಶತಮಾನದ ಆರಂಭದಿಂದ ಕೊನೆಯವರೆಗೆ) ಪ್ರಕಟಗೊಂಡ ಕೆಲವು ಸೂಫಿ ಜ್ಞಾನಿಗಳ ಹೆಸರುಗಳು ಹೀಗಿವೆ: ಇಬ್ರಾಹೀಂ ಬಿನ್ ಆದಮ್ ಅಬು ಸುಲೇಮಾನ್ ದಾವೂದ್ ಇಬ್ನೆ ನಾಸೀರ್, ಅಲ್ ಫುದೈಲ್ ಇಬ್ನೆ ಇಯಾದ್, ಅಬು ಮಹ್‌ಫೂಸ಼್ ಇಬ್ನೆ ಫಿರೂಜ಼್ (ಮಾರೂಫ್ ಕರ್‌ಖಿ) ಮತ್ತು ಹುಸೇನ್ ಮನ್ಸೂರ್ ಅಲ್-ಹಲ್ಲಾಜ್. ರಬಿಯ ಅಲ್ ಬಸ್ರ್ಳನ್ನು ಕೂಡ ಸೂಫಿ ಪರಂಪರೆಯ ಪರಮಜ್ಞಾನಿ ಎಂದು ಸ್ವತಃ ಸೂಫಿ ಕವಿಗಳಾಗಿದ್ದ ಜಾಮಿ ಮತ್ತು ಫರೀದುದ್ದೀನ್ ಅತ್ತಾರ್ ಗುರುತಿಸುತ್ತಾರೆ.

ಆ ಕಾಲದ ಉಳಿದ ಐತಿಹಾಸಿಕ ಉಲ್ಲೇಖಗಳನ್ನು ಗಮನಿಸಿ, ಕ್ರಿ.ಶ. ಎಂಟನೆಯ ಶತಮಾನದ ಅಂತ್ಯದ ವೇಳೆಗೆ ಸೂಫಿ ಸಿದ್ಧಾಂತ ಸ್ಪಷ್ಟ ರೂಪ ಪಡೆಯಿತು, ಎಂದು ಗುರುತಿಸಬಹುದಾಗಿದೆ. ಆರಂಭಿಕ ಸೂಫಿ ಸಿದ್ಧಾಂತ-ಕಾವ್ಯ ಅರಳಿದ್ದು ಇಂದಿನ ಇರಾಕ್-ಇರಾನ್‌ಗಳ ಖೋರಾಸನ್, ಬಸ್ರ್, ಹೇರತ್, ಶಿರಾಜ್, ಬಾಗ್ದಾದ್, ಹಮದಾನ್, ನಿಶಾಪುರ ಮುಂತಾದ ಸ್ಥಳಗಳಲ್ಲಿ. ಪಂಥ ಸೂಫಿಯಾದರೂ ಇಲ್ಲಿನ ಕವಿಗಳು ಬೇರೆ ಬೇರೆ ಆಚರಣಾ ಪರಂಪರೆ (ಸಿಲ್‌ಸಿಲಾ)ಯಲ್ಲಿ ದೀಕ್ಷೆಯನ್ನು (ಬಯತ್) ಪಡೆದ ಸಾಧಕರು (ಸಾಲಿಕ್).

ಹುಸೇನ್ ಮನ್ಸೂರ್ ಹಲ್ಲಾಜ್‌ನಂತೆಯೇ ಆಳುವ ವರ್ಗದ ಕ್ರೌರ್ಯಕ್ಕೆ ಬಲಿಯಾದ ಇನ್ನೊಬ್ಬ ಹುತಾತ್ಮನೆಂದರೆ, ‘ಹಿಕ್ಮತ್’ ಸಿದ್ಧಾಂತದ ಬೀಜ ಪುರುಷ ಐನ್ ಅಲ್-ಖುದಾತ್ ಹಮದಾನಿ (ಕ್ರಿ.ಶ. 1098-1131). ಮೂವತ್ಮೂರು ವರ್ಷದ ಯುವ ತತ್ವಜ್ಞಾನಿಯ ಪ್ರಖರ ವಿಚಾರಗಳನ್ನು ಸಹಿಸುವುದಾಗದೆ ಇರಾಕಿನ ವಜೀರ ಸೆಲ್ಜೂಖಿದ್ ಆತನನ್ನು ಹತ್ಯೆ ಮಾಡಿದ. ಹಮದಾನಿಯ ಸೂತ್ರವನ್ನು ಸರಳ ಮಾತಿನಲ್ಲಿ ಹೇಳುವುದಾದರೆ- “ತಕ್ಷಣದ ಖಾಸಗಿ ಅನುಭವದ ಮೂಲಕ ವಸ್ತುಲೋಕವನ್ನು ಅರಿಯುವುದು ಮತ್ತು ವಸ್ತುವೊಂದರ ಕುರಿತು ಅರಿಯುವುದು, ಎಂಬ ಪರಿಕಲ್ಪನೆಯ ನಡುವಿನ ವಿಶಿಷ್ಟ ವ್ಯತ್ಯಾಸವನ್ನು ತಿಳಿದುಕೊಳ್ಳುವುದಾಗಿದೆ. ಇದು, ಜೇನು ಸಿಹಿಯಾಗಿದೆ ಎಂದು ಅರಿಯುವುದು ಮತ್ತು ಜೇನಿನ ಸಿಹಿಯನ್ನು ಅದನ್ನು ಸೇವಿಸುವ ಮೂಲಕ ಅನುಭವಿಸುವುದು. ಈ ಎರಡು ಅರಿವಿನ ನಡುವೆ ಅಗಾಧವಾದ ವ್ಯತ್ಯಾಸವಿದೆ. ಇದರಂತೆಯೇ, ಉನ್ನತ ಸ್ತರದ ಧಾರ್ಮಿಕ ಬದುಕಿನಲ್ಲಿಯೂ ಎರಡು ಬಗೆಯ ಜ್ಞಾನಗಳಿವೆ. ದೇವರ ಕುರಿತು ಅರಿಯುವುದು ಒಂದು ಬಗೆಯ ಜ್ಞಾನವಾದರೆ, ದೈವಿಕ ಸ್ತರಗಳ ಮೂಲಕ ನೇರವಾಗಿ ಆತನೊಂದಿಗೆ ಸಮಾಗಮ ಸಾಧಿಸಿ, ಅನುಭಾವಿಕವಾಗಿ ದಿವ್ಯಜ್ಞಾನ ಪಡೆವುದು ಇನ್ನೊಂದು ಬಗೆ. ಹೀಗೆ ಆಗಬೇಕಾದರೆ ಭಕ್ತನ ಅಂತರಂಗದ ಆಧ್ಯಾತ್ಮಿಕ ಕಣ್ಣು ತೆರೆಯಬೇಕು. ಇದಕ್ಕಾಗಿ ಕಾರ್ಯಕಾರಣಗಳ ಪರಿಮಿತಿಯನ್ನು ದಾಟಿ, ಅಂತರಂಗ ಕಣ್ಣು ತೆರೆದಿಟ್ಟ ಒಳಲೋಕವನ್ನು ಪ್ರವೇಶಿಸಬೇಕು,” ಎಂಬುದು. ಹಮದಾನಿಯ ಜ್ಞಾನಸೂತ್ರಗಳನ್ನು ಕಂಡು ಆತನಿಗೆ ನಾಸ್ತಿಕನೆಂಬ ಹಣೆಪಟ್ಟಿ ಕಟ್ಟಲಾಯಿತು. ಸುಲ್ತಾನ್ ಮುಹಮ್ಮದ್ ಇಬ್ನೆ ಮಲಿಕ್‌ಶಾನ ಸಮ್ಮುಖದಲ್ಲಿ, ಮೇ 23, 1131ರಂದು ಹಮದಾನಿಯನ್ನು ವಧಿಸಲಾಯಿತು.

ಸೂಫಿ: ಪ್ರಾಜ್ಞರ ದೃಷ್ಟಿ

ಸೂಫಿ ಸಿದ್ಧಾಂತವು ಪ್ರವಾದಿ ಮುಹಮ್ಮದರು ಬೋಧಿಸಿದ ರಹಸ್ಯಜ್ಞಾನವನ್ನು ಪ್ರತಿನಿಧಿಸುತ್ತದೆ. ಕುರಾನ್, ಸೂಫಿ ಸಿದ್ಧಾಂತದ ತಳಹದಿಯಾಗಿದೆ ಎಂಬುದು ಸೂಫಿ ನಂಬಿಕೆಯಾಗಿದೆ. ಪರಮಪುರುಷ ತತ್ವಜ್ಞಾನ, ಭಾವೋನ್ಮಾದಿತ ಭಕ್ತಿ, ಅನುಭಾವಿಕತೆಯನ್ನು ಸಿದ್ಧಾಂತ ಒಳಗೊಂಡಿದ್ದು, ಸನ್ನಡತೆ, ಸಚ್ಚಾರಿತ್ರ್ಯಗಳಿಗೆ ಮಹತ್ವ ನೀಡಬೇಕು, ಚೆಲುವು ಹಾಗೂ ಒಳಿತು ದೈವಲೀಲೆಯಾಗಿವೆ, ಜೀವದೈವಗಳ ಸಂಯೋಗವೇ ಮೋಕ್ಷ, ಎನ್ನುವುದೂ ಸೂಫಿ ನಂಬಿಕೆಯೆ.

ಈ ಅನುಭಾವವು (ತಸವೂಫ್) ಬುದ್ಧಿ, ತರ್ಕ ಮತ್ತು ಭಾಷೆಗೆ ನಿಲುಕದ್ದಾಗಿದೆ. ಅನುಭಾವದಿಂದ ಪಡೆವ ಅರಿವು ಪವಿತ್ರವೂ, ಕೋಮಲವೂ ಆಗಿದೆ. ಆದಾಗ್ಯೂ, ಭಾಷೆಗಿರುವ ಅಪಾರವಾದ ಮಿತಿಯನ್ನು ಒಪ್ಪಿಕೊಂಡು ಸೂಫಿ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ಮುಕ್ತಿಮಾರ್ಗ ಕೊಂಚ ಸುಗಮವಾಗಬಹುದು (ಹಜ್ರತ್ ಮಹಮೂದ ಬಹರಿ).

“ಶುದ್ಧತೆ (ಸಫಾ) ಅಶುದ್ಧದ ವಿರುದ್ಧ ಪದವಾಗಿದೆ. ಕಲ್ಮಶತೆ ಮನುಷ್ಯನ ಗುಣಗಳಲ್ಲೊಂದು. ನಿಜವಾದ ಸೂಫಿ ಈ ಕಲ್ಮಶತೆಯನ್ನು ತ್ಯಜಿಸಿರುತ್ತಾನೆ. ಮನುಷ್ಯನು ಮೃಣ್ಮಯನಾಗಿರುವುದರಿಂದ ಶುದ್ಧತೆ ಆತನ ಗುಣವಲ್ಲ. ಆತ ಅಶುದ್ಧತೆಯಿಂದ ತಪ್ಪಿಸಿಕೊಳ್ಳಲಾರ. ಹೀಗಾಗಿಯೇ, ಅಕಳಂಕತೆಯು ಪ್ರಿಯಕರನ ಮುಖ್ಯಲಕ್ಷಣವಾಗಿದೆ. ಈ ಪ್ರಿಯಕರ ಮೋಡಗಳಿಲ್ಲದ ಸೂರ್ಯನಂತೆ. ಶುದ್ಧತೆ ಪ್ರೀತಿಗೊಳಗಾಗುವವನ ಗುಣವಿಶೇಷವಾಗಿದೆ. ಪ್ರೇಮಿ ತನ್ನದೇ ಗುಣವಿಶೇಷಣದಲ್ಲಿ ಹತನಾಗುವವನು. ತನ್ನ ಪ್ರಿಯಕರನ ಗುಣವಿಶೇಷಣಗಳಲ್ಲಿ ಜೀವಿಸುವವನು. ಆ ಸ್ಥಿತಿ ಸ್ಫಟಿಕ ಸೂರ್ಯನಂತಿರುವುದು. ಸಾಧಕನ ಸ್ಥಿತಿಯ ಕುರಿತು ಪ್ರವಾದಿಯನ್ನು ಕೇಳಿದಾಗ, ಅವರು ಹೇಳಿದ್ದು: “ಆತನ ಹೃದಯವು ನಂಬಿಕೆಯ ಬೆಳಕಿನಿಂದ ಬೆಳಗುತಿದೆ. ಆತನ ಮುಖವು ಚಂದ್ರನ ಕಾಂತಿಯಿಂದ ತುಳುಕುತಿದೆ. ಆತನನ್ನು ದೈವಿಕ ಬೆಳಕಿನಿಂದ ರೂಪಿಸಲಾಗಿದೆ.”

“ಸೂರ್ಯಚಂದ್ರರು ಸಮಾಗಮ ಸಾಧಿಸಿದಾಗ ಉಂಟಾಗುವ ಬೆಳಕು ಪರಿಶುದ್ಧ ಪ್ರೇಮದಂತೆ. ಇಬ್ಬರ ಸಂಯೋಗ ಇಂಥ ದೈವಿಕತೆಯನ್ನು ಹುಟ್ಟುಹಾಕುವುದು. ಆಧ್ಯಾತ್ಮವನ್ನು ಅಪ್ಪಿಕೊಂಡವರೇ ಸೂಫಿಗಳು. ಪ್ರೇಮದಿಂದ ಪರಿಶುದ್ಧಗೊಂಡವರೂ, ಉಳಿದೆಲ್ಲವನೂ ತೊರೆದು ಪ್ರೇಮಿಯಲ್ಲಿ ಲೀನವಾದವರೇ ಸೂಫಿಗಳು. ಸೂಫಿಗಳು ತಮ್ಮ ಅಸ್ತಿತ್ವ ಕುರಿತು ಅತ್ಯಂತ ನೈಜ ಭಾಷೆಯಲ್ಲಿ ಮಾತನಾಡುವರು. ತಮ್ಮಲ್ಲಿಲ್ಲದ ಯಾವುದರ ಕುರಿತೂ ಅವರು ಹೇಳರು. ಅವರು ಮೌನವಾಗಿದ್ದಾಗ ಆ ಮೌನವೇ ಸೂಫಿಗಳ ವ್ಯಕ್ತಿತ್ವವನು ಅರಹುವುದು.” (ಹಜ್ರತ್ ಅಲೀ ಬಿನ್ ಉಸ್ಮಾನ್ ಅಲ್ ಹುಜ್ವಿರಿ)

ಸೂಫಿ ಪಂಥವೆಂದರೇನು?”

“ಯಾತನೆ ನಿನ್ನನ್ನು ಹುಡುಕಿಕೊಂಡು ಬಂದಾಗ

ಹೃದಯದಲಿ ಅನುರಾಗವನ್ನು ಹುಡುಕುವುದು” (ರೂಮಿ)

“ಏನನ್ನೂ ಗಳಿಸದಿರುವುದು, ಶೂನ್ಯದಲ್ಲೇ ತುಂಬಿಹೋಗಿರುವುದೇ ಸೂಫಿ ಸಿದ್ಧಾಂತ”. (ಜುನೈದ್)

“ಸ್ವಾರ್ಥವನು ಬಿಟ್ಟುಕೊಟ್ಟಾಗ ದೊರಕುವ ಉದಾರತೆ ಮತ್ತು ಸ್ವಾತಂತ್ರ್ಯ, ನಿನ್ನ ಆತ್ಮವನು ತ್ಯಜಿಸುವುದೇ ಸೂಫಿ ಸಿದ್ಧಾಂತ.” (ರೂವಯ್ಯಂ)

“ಪ್ರೀತಿಯ ಶುದ್ಧತೆಯಲಿ ಮಿಂದವನು, ಒಡನಾಡಿಯಿಂದ ಶುದ್ಧಗೊಂಡವನೇ ಸೂಫಿ”. (ಖರಖ್ವಾನಿ)

ಯುರೋಪಿಯನ್ನರ ಪರ್ಶಿಯನ್ ಸಾಹಿತ್ಯ ಪ್ರೇಮ

ಪರ್ಶಿಯನ್ ಸಾಹಿತ್ಯ ಯುರೋಪಿಯನ್ನರ ಗಮನ ಸೆಳೆದದ್ದು ಹತ್ತೊಂಬತ್ತನೆ ಶತಮಾನದ ಎರಡನೆಯ ದಶಕದ ಬಳಿಕ. ಓರಿಯಂಟಲಿಸ್ಟರು ಎಂದು ಗುರುತಿಸಲಾಗುವ ಯುರೋಪಿಯನ್ ವಿದ್ವಾಂಸರು ಪರ್ಶಿಯನ್ ಸಾಹಿತ್ಯವನ್ನು ಓದಿ ವಜ್ರದ ಗಣಿ ದೊರೆತಷ್ಟು ಸಂಭ್ರಮಪಟ್ಟರು. ಜರ್ಮನಿಯ ಎಫ್. ಎ. ಡಿ ಥೊಲಕ್ 1821ರಲ್ಲಿ ಸೂಫಿ ಸಿದ್ಧಾಂತದ ಕುರಿತು ಹೊತ್ತಿಗೆಯೊಂದನ್ನು ಪ್ರಕಟಿಸಿದರು. ಜಾನ್ ಪೇನ್‌ರ ಅರೇಬಿಯನ್ ನೈಟ್ಸ್ ಮತ್ತು ಉಮರ್ ಖಯಾಮ್ ಅನುವಾದಗಳು ಪಾಶ್ಚಾತ್ಯರಿಗೆ ಹೊಸಲೋಕವನ್ನೇ ತೆರೆದಿಟ್ಟವು. ಇ. ಎಚ್. ಪಾಮರ್ ಓರಿಯಂಟಲ್ ಮಿಸ್ಟಿಸಿಸಂ (1867), ಅಲ್ಫ್ರೆಡ್ ವಾನ್ ಕ್ರೇಮರ್ 1968ರಲ್ಲಿ, ರೈನ್ ಹರ್ಟ್ ಪಿ ಡೋಸಿ 1869ರಲ್ಲಿ, ರೆನಾಲ್ಡ್ ಎ. ನಿಕೊಲ್‌ಸನ್ 1900ರಲ್ಲಿ, ಇ. ಜೆ. ಡಬ್ಲು. ಗಿಬ್ 1900ರಲ್ಲಿ, ಎಡ್ವರ್ಡ್ ಜಿ. ಬ್ರೌನ್ 1900ರಲ್ಲಿ, ಲೂಯಿ ಮಸ್ಸಿನಾನ್ 1931 ಪರ್ಶಿಯನ್ ಮತ್ತು ಒಟ್ಟೋಮನ್ ಸಾಹಿತ್ಯದ ಕುರಿತು ತಮ್ಮ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದೇ ಸೂಫಿ ಸಿದ್ಧಾಂತ ಜಗತ್ತಿನ ಬಹುಮುಖ್ಯ ಚರ್ಚಾ ವಿಷಯವಾಗಿ ಮಾರ್ಪಟ್ಟಿತು. ಇನ್ನೂರು ವರ್ಷಗಳಿಂದಲೂ ಹೊಸ ಅನುವಾದಗಳು ಪ್ರಕಟಗೊಳ್ಳುತ್ತಲೇ ಇವೆ. ಹೊಸದಾಗಿ ಹಸ್ತಪತ್ರಿಗಳ ಶೋಧ ನಡೆದೇ ಇದೆ. ಇದಕ್ಕೊಂದು ಉದಾಹರಣೆಯೆಂದರೆ, ದಿಢೀರನೆ ಕಣ್ಮರೆಯಾದ ಜಲಾಲುದ್ದೀನ್ ರೂಮಿಯ ಹಿರಿಯ ಸಂಗಾತಿ ಶಂಷುದ್ದೀನ್ ಎ- ತಬ್ರಿಜ್‌ನ ಇನ್ನೊಂದು ಆಯಾಮ ಪರಿಚಯವಾದುದು 2004ರಲ್ಲಿ ಪ್ರಕಟಗೊಂಡ ಆತನ ಆತ್ಮಚರಿತ್ರೆಯಿಂದ.

ಜರ್ಮನ್ ವಿದ್ವಾಂಸ ವಾರ್ನ್ ಕ್ರೇಮರ್ ಮತ್ತು ಬೆರಳೆಣಿಕೆಯ ಪಂಡಿತರು ಪರ್ಶಿಯನ್ ಸೂಫಿ ಪರಂಪರೆಯು ಭಾರತೀಯ ತತ್ತ್ವಸಿದ್ಧಾಂತ ಮತ್ತು ವೇದಾಂತಗಳಿಂದ ಪ್ರೇರಣೆ ಪಡೆದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಆದರೆ, ಈ ವಾದವನ್ನು ಪರ್ಶಿಯನ್ ಭಾಷೆ, ಸಾಹಿತ್ಯವನ್ನು ಅಧ್ಯಯನ ಮಾಡಿ ಅನುವಾದದಲ್ಲಿ ತೊಡಗಿಕೊಂಡ ಎಡ್ವರ್ಡ್ ಜಿ. ಬ್ರೌನ್ ಮತ್ತಿತರರು ಒಪ್ಪುವುದಿಲ್ಲ. ಜತೆಗೆ, ಆರ್ಯಜ್ಞಾನ ಕೇಂದ್ರಿತ ಮತ್ತು ಭಾರತೀಯ ಕೇಂದ್ರಿತ ಇಂಥ ಸಂಕಥನಗಳು ಪರ್ಶಿಯನ್ ಸಾಹಿತ್ಯವನ್ನು ಅರ್ಥೈಸುವಲ್ಲಿ ಹಾನಿಯನ್ನುಂಟು ಮಾಡಿದೆ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ಇಪ್ಪತ್ತನೆ ಶತಮಾನದ ಕೊನೆಗೆ ಮತ್ತು ಇಪ್ಪತ್ತೊಂದನೆಯ ಶತಮಾನ ಆರಂಭದಲ್ಲಿ ತುರ್ಕಿ-ಪರ್ಶಿಯನ್, ತಾಜಿಕಿ, ಪಶ್ತೋ ಮತ್ತಿತರ ಸ್ಥಳೀಯ ಭಾಷೆಗಳ ಅಧ್ಯಯನದಲ್ಲಿ ತೊಡಗಿಕೊಂಡಿರುವ ಅಧ್ಯಯನಕಾರಿಗೂ ವಾರ್ನ್ ಕ್ರೇಮರ್‌ನ ವಾದ ಅಮಾನ್ಯ.

ಅದೇನೆ ಇದ್ದರೂ, ಸೂಫಿ ಮತ್ತು ಉಪಖಂಡದ ಸನಿರ್ಗುಣ ಭಕ್ತಿ ಪಂಥ ಹಾಗೂ ಕಾಶ್ಮೀರ ಶೈವ ಸಿದ್ಧಾಂತಗಳಲ್ಲಿ ಸಾಮ್ಯತೆಯಂತೂ ಇದೆ. ಇವುಗಳ ತೌಲನಿಕ ಅಧ್ಯಯನ ಮಧ್ಯಯುಗದ ಭಕ್ತಿ ಸಾಹಿತ್ಯಕ್ಕೆ ಹೊಸ ಒಳನೋಟ ಮತ್ತು ದಿಕ್ಕುದೆಸೆಯನ್ನು ಒದಗಿಸಬಲ್ಲುದು. ಹುಸೇನ್ ಮನ್ಸೂರ್ ಅಲ್-ಹಲ್ಲಾಜ್ ತನ್ನ ಶಿಷ್ಯವೃಂದದೊಂದಿಗೆ, ಕ್ರಿ.ಶ.897 ಸುಮಾರಿಗೆ ಪಂಜಾಬ್ ಮತ್ತು ಸಿಂಧ್ ಪ್ರಾಂತಗಳಿಗೆ ಭೇಟಿ ನೀಡಿ, ವಾಸ್ತವ್ಯ ಹೂಡಿ ಜನಾನುರಾಗಿಯಾಗಿದ್ದು ಮತ್ತು ಅದರ ಪರಿಣಾಮವಾಗಿ ಆ ಪ್ರದೇಶಗಳಲ್ಲಿ ಕಾಲಾಂತರದಲ್ಲಿ ಶ್ರೇಷ್ಠ ಸೂಫಿಗಳು ಹೊರಹೊಮ್ಮಿದ್ದು ಮಾತ್ರವಲ್ಲ, ಜನಪದರ ಸಾಮಾನ್ಯ ಬದುಕಲ್ಲೂ ಹಲ್ಲಾಜ್‌ನ ನೆನಪು ರಕ್ತನೀರಿನಂತೆ ಬೆರೆತು ಹೋಗಿದೆ. ಕಾಶ್ಮೀರದ ಲಲ್ಲೇಶ್ವರಿ ತನ್ನ ವಿಚಾರ ಮತ್ತು ಕಾವ್ಯಗಳಿಂದ ಭಾರತೀಯ ಮತ್ತು ಮುಸ್ಲೀಂ ಸಮುದಾಯದಿಂದ ಏಕಪ್ರಕಾರವಾಗಿ ಸ್ವೀಕಾರಗೊಂಡಿರುವುದು, ಭಾರತ ಉಪಖಂಡದ ಹಜರತ್ ಅಲಿ ಬಿನ್ ಉಸ್ಮಾನ್ ಅಲ್-ಹುಜ್ವಿರಿ ಸೂಫಿ ಶಾಸ್ತ್ರಗ್ರಂಥ ರಚಿಸಿದ್ದು, ಬಾಬಾ ಫರೀದ್, ಬುಲ್ಲೆಹ್ ಶಹಾರ ಕಾವ್ಯ, ಹಜ್ರತ್ ನಿಜಾಮುದ್ದೀನ್ ಔಲಿಯಾರ ಉಪಕ್ರಮಗಳು, ಅಮೀರ್ ಖುಸ್ರೋ ಸಾಹಿತ್ಯ, ಖ್ವಾಜಿ ಮೊಯಿನುದ್ದೀನ್ ಚಿಸ್ತಿ ಅವರ ಉಪಕ್ರಮಗಳು, ಖ್ವಾಜಿ ಬಂದೇ ನವಾಜ‌ರ ಉಪಕ್ರಮ ಮತ್ತು ಸಾಹಿತ್ಯ, ಹಜ್ರತ್ ಖ್ವಾಜಿ ಮಹಮೂದ ಬಹರಿಯವರ ಉಪಕ್ರಮ ಮತ್ತು ಸಾಹಿತ್ಯ ಇಂಥ ಅಧ್ಯಯನಗಳ ಅಗತ್ಯವನ್ನು ಎತ್ತಿ ತೋರಿಸುತ್ತವೆ.

ರಾಜಕೀಯ ಬದಲಾವಣೆ, ಅಸ್ಥಿರ ಪಂಥ

ಅಂದಿನ ವಿಶಾಲ ಪರ್ಶಿಯನ್ ಭೂಪ್ರದೇಶದ ಜನಜೀವನ, ಸಂಸ್ಕೃತಿ, ಧರ್ಮಗಳು ರಾಜಕೀಯ ಮೇಲಾಟಗಳಿಗೆ ನೇರವಾಗಿ ಬಲಿಯಾಗುತ್ತಿದ್ದುದನ್ನು ಈ ಹಿಂದೆ ಹೇಳಿದೆ. ರಾಜಪ್ರಭುತ್ವ ಮತ್ತು ಧರ್ಮಗಳಲ್ಲಿ ಯಾವುದು ಪ್ರಬಲ ಎಂಬ ಪ್ರಶ್ನೆ ಎಲ್ಲ ಕಾಲದಲ್ಲೂ ಇರುವಂಥದ್ದೆ. ಎರಡೂ ಶಕ್ತಿಗಳು ಮೇಲುಗೈ ಸಾಧಿಸಲು ನಿರಂತರವಾಗಿ ಪ್ರಯತ್ನಿಸಿರುವುದನ್ನು ಇತಿಹಾಸದುದ್ದಕ್ಕೂ ಕಾಣುವಂಥದ್ದೆ. ಮಧ್ಯಯುಗದ ಯುರೋಪಿನಂತೆಯೇ ವಿಶಾಲ ಪರ್ಶಿಯಾದಲ್ಲಿಯೂ ಈ ಸಂಘರ್ಷ ಸ್ಪಷ್ಟವಾಗಿ ಗೋಚರಿಸುತ್ತದೆ.

ಹತ್ತನೆಯ ಶತಮಾನದ ಮಧ್ಯಭಾಗದಲ್ಲಿ ನಾಲ್ವರು ಖಲಿಫತ್ತರ ಆಳ್ವಿಕೆ ಕಾಲ ಮುಗಿದು ಪರ್ಶಿಯನ್ ಮೂಲದ ಬುವಾಹಿದ್‌ರ ಶಕ್ತಿಸಾಮರ್ಥ್ಯ ಏರಿಕೆ ಕಾಣತೊಡಗಿತು. ಶಿಯಾ ಪಂಗಡದ ಈ ಆಳರಸರು ಸಾಹಿತ್ಯ ಮತ್ತು ಲೋಕವಿಜ್ಞಾನಕ್ಕೆ ಪ್ರೋತ್ಸಾಹ ನೀಡಿದರು. ವೈದ್ಯಪದ್ಧತಿ, ರೇಖಾಗಣಿತ, ನಾಮಾ ಮುಂತಾದ ಕ್ಷೇತ್ರಗಳಲ್ಲಿ ಪ್ರಕಟಣೆಗಳು ಕಂಡುಬಂದರೂ ಧಾರ್ಮಿಕ ಕ್ಷೇತ್ರ ನಿಷ್ಕ್ರಿಯವಾಗಿತ್ತೆಂದು ಅಧ್ಯಯನಗಳು ನುಡಿಯುತ್ತವೆ. ಅಲ್ ಖುಶೈರಿ (ಅಬ್ದಲ್ ಕರೀಮ್ ಇಬ್ನೆ ಹಂಜಾನ್) ಈ ಸಮಯದಲ್ಲಿ ಪ್ರಕಟಿಸಿದ ‘ಫಿಹ್‌ರಿಸ್ತ್’ (ಸೂಚಿಕೆ) ಇಸ್ಲಾಮಿಕ್ ಪ್ರಕಟಣಾ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖ ಕೃತಿಯೆಂದು ಗುರುತಿಸಲಾಗುತ್ತದೆ. ತನ್ನ ಕಾಲದಲ್ಲಿ ಲಭ್ಯವಿದ್ದ ಅರಬ್ಬಿ ಭಾಷೆಯ ಸ್ವತಂತ್ರ ಕೃತಿಗಳು ಮತ್ತು ಅನುವಾದಗಳ ಸೂಚಿಕೆಯನ್ನು ಈ ಪುಸ್ತಕ ನೀಡುತ್ತದೆ. ನಮ್ಮಲ್ಲಿ ಆರ್. ನರಸಿಂಹಾಚಾರ್ಯರು ಪ್ರಕಟಿಸಿದ ಕವಿಚರಿತೆಯಂತೆ ಅಥವ ಅದಕ್ಕೂ ಶತಮಾನಗಳ ಹಿಂದಿನ ಕವಿರಾಜಮಾರ್ಗದಂತೆ. ಇದು ತನ್ನ ಕಾಲದ ಸಾಹಿತ್ಯ ಚರಿತ್ರೆ, ಕವಿ ಪರಿಚಯವನ್ನು ನೀಡುವುದು ಮಾತ್ರವಲ್ಲದೆ, ಒಟ್ಟಾರೆ ಸಾಮಾಜಿಕ ಜನಜೀವನವನ್ನು ಚಿತ್ರಿಸುವುದರಿಂದ ಆಕರಗ್ರಂಥವಾಗಿ ಪರಿಗಣಿತವಾಗಿದೆ.

ಕೇಶವ ಮಳಗಿ

ಕಾಲಕ್ರಮೇಣ ಬದಲಾದ ರಾಜಕೀಯ ಸನ್ನಿವೇಶ; ಶಿಯಾ ಮತ್ತು ಸುನ್ನಿಗಳ ರಾಜಕೀಯ-ಸಾಂಸ್ಕೃತಿಕ ಸಂಘರ್ಷ, ಅರಬ್ಬಿ ಮತ್ತು ಪರ್ಶಿಯನ್ ಭಾಷೆಗಳ ನಡುವಿನ ತಣ್ಣಗಿನ ತಿಕ್ಕಾಟ, ರಕ್ತಪಾತ, ಅಧಿಕಾರ ಪಡೆಯಲು ನಡೆಸುವ ಷಡ್ಯಂತ್ರಗಳು, ಮಂಗೋಲರ ಉತ್ಥಾನ ಮತ್ತು ಪ್ರವರ್ಧಮಾನ, ಒಟ್ಟೋಮನ್ ಅರಸರ ಹೊರಹೊಮ್ಮುವಿಕೆ ಮತ್ತು ಮುನ್ನಡೆ, ಸಣ್ಣಪುಟ್ಟ ತುರ್ಕಿ ಆಳರಸರು ಇತ್ಯಾದಿಗಳು ಕಾಲಕಾಲದ ಸೂಫಿ ಪಂಥ-ಸಾಹಿತ್ಯದ ಏಳುಬೀಳುಗಳನ್ನು ನಿರ್ಧರಿಸಿವೆ. ಹದಿಮೂರನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ, ಏಶಿಯಾ ಮೈನರ್ ಭಾಗದಲ್ಲಿ ರೋಮನ್ನರು ಎಂದು ಕರೆಯಲಾಗುತ್ತಿದ್ದ, ಒಟ್ಟೋಮನ್ ಆಳ್ವಿಕೆಯ ನಂತರ ಆ ಪ್ರದೇಶದಲ್ಲಿದ್ದ ವಾಸಿಸುತ್ತಿದ್ದ ಸೂಫಿ ಪರಂಪರೆಯ ಲೇಖಕರನ್ನು ಒಟ್ಟೋಮನ್ ಲೇಖಕರೆಂದು ಗುರುತಿಸಲಾರಂಭಿಸಿದರು. ಹೀಗಾಗಿ, ಜಲಾಲುದ್ದೀನ್ ರೂಮಿ, ಆತನ ತಂದೆ ಬಹಾವುದ್ದೀನ್ ವಲದ್, ಸುಲ್ತಾನ್ ವಲದ್, ಶಂಷುದ್ದೀನ್ ತಬ್ರೀಜ್ ಇನ್ನು ಕೆಲವು ಲೇಖಕರನ್ನು ಪರ್ಶಿಯನ್ ಹಾಗೂ ಒಟ್ಟೋಮನ್ ಎರಡೂ ಸಾಹಿತ್ಯ ಚರಿತ್ರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಕಾಲದ ರಾಜಕೀಯ ಬೇಗುದಿ ಅಸಾಧಾರಣ. ಆಳರಸರ ಅಪಕೃಪೆಗೆ ಒಳಗಾದ ಕವಿಗಳು, ಬುದ್ಧಿಜೀವಿಗಳು ಸುರಕ್ಷಿತ ಪ್ರದೇಶಗಳನ್ನು ಹುಡುಕಿ ಸ್ಥಳಾಂತರಗೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗೆ ನೋಡಿದರೆ, ತನ್ನ ನಿಷ್ಠುರ ನಿಲುವುಗಳಿಂದ ಅರಸನ ಕೆಂಗಣ್ಣಿಗೆ ಗುರಿಯಾಗಿದ್ದ ರೂಮಿಯ ತಂದೆ ಬಹಾವುದ್ದೀನ್ ಕೂಡ ಹೀಗೆ ವಲಸೆ ಹೋದವನೆ. ಇಂತಹ ನೂರಾರು ಪ್ರಸಂಗ, ಸನ್ನಿವೇಶಗಳು, ಹಲವಾರು ದೃಷ್ಟಾಂತ ಕಥೆಗಳು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿದ್ದು, ಆಸಕ್ತರಿಗೆ ಲಭ್ಯವಿವೆ.

ಆರಂಭಕಾಲದಲ್ಲಿ, ಆಳರಸರಂತೆಯೇ ಜನಸಾಮಾನ್ಯರ ಸಂದೇಹ, ದ್ವೇಷಗಳಿಗೂ ಸೂಫಿ ಪಂಥೀಯರು ಈಡಾಗಿರುವುದು ಕಂಡುಬರುತ್ತದೆ. ಅವರ ಅನುಯಾಯಿಗಳನ್ನು ಹೊರತುಪಡಿಸಿ, ಉಳಿದ ಸಾಮಾನ್ಯರಲ್ಲಿ ಅವರ ಕುರಿತು ಹಿತಕರವಾದ ಭಾವನೆ ಇರಲಿಲ್ಲ. ಮಾತ್ರವಲ್ಲ, ಎಷ್ಟೋ ಸಲ ಅವಹೇಳನವೇ ಕಾದಿರುತ್ತಿತ್ತು. ಈ ಗುಂಪುಗಳು ರಹಸ್ಯವಾಗಿ, ಸಮಾಜಬಾಹಿರ ಚಟುವಟಿಕೆಯಲ್ಲಿ ತೊಡಗಿವೆ, ಎಂಬ ಅನ್ನಿಸಿಕೆ ವ್ಯಾಪಕವಾಗಿರುತ್ತಿತ್ತು. ಮೇಲಾಗಿ, ಸೂಫಿಗಳು ಮಾದಕತೆಯ ವ್ಯಸನಿಗಳು, ನಶೆಯಲ್ಲಿರುವವರು, ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವವರು, ಎನ್ನುವ ಅಭಿಪ್ರಾಯಕ್ಕೂ ಸೂಫಿಗಳು ತುತ್ತಾಗುತ್ತಿದ್ದರು. ಕೆಲವು ಅರಸರಂತೂ ಈ ಗುಂಪುಗಳು ತಮ್ಮ ಆಳ್ವಿಕೆ ವಿರುದ್ಧ ಬಂಡಾಯವನ್ನು ಸಂಘಟಿಸುತ್ತಿವೆ ಎಂಬ ಕಾರಣಕ್ಕೆ ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ಗುಪ್ತಪಡೆಗಳನ್ನು ರಚಿಸಿದ್ದೂ ಕಾಣ ಸಿಗುತ್ತದೆ. ಹುಸೇನ್ ಹಲ್ಲಾಜ್ ತನ್ನ ಅರಸನ ವಿರುದ್ಧ ಸುನ್ನಿ ಬಂಡಾಯವನ್ನು ಸಂಘಟಿಸಿದ್ದ ಎಂಬ ಆಪಾದನೆಯನ್ನು ಎದುರಿಸಿದ್ದ. ಈ ಎಲ್ಲ ಭಾವನೆಗಳೂ ಹಲವೊಮ್ಮೆ ವ್ಯಂಗ್ಯ ರೂಪದಲ್ಲಿ, ವಿಷಾದಕರವಾಗಿ ಸೂಫಿ ಕಾವ್ಯದಲ್ಲಿ ಅಭಿವ್ಯಕ್ತಿಗೊಂಡಿರುವುದುಂಟು.

ಉಪಖಂಡದ ಭಕ್ತಿಪಂಥದಂತೆಯೇ ಸೂಫಿ ಸಿದ್ಧಾಂತದಲ್ಲಿಯೂ ಭಾವೋನ್ಮಾದಿತ ಭಕ್ತಿ ಇಲ್ಲವೆ ದೈವಪರವಶತೆ ಎದ್ದು ಕಾಣುವ ಅಂಶವಾಗಿದೆ. ತನ್ಮಯತೆ ತುಂಬಿದ ಭಕ್ತಿಯಿಂದ ಲೌಕಿಕ ಬಿಡುಗಡೆ ಸಾಧ್ಯವೆಂಬ ಅಗಾಧ ನಂಬಿಕೆ, ಅಚಲ ಗುರು ಅದರತ್ತ ಕರೆದೊಯ್ಯುವನೆಂಬ ಅದಮ್ಯ ವಿಶ್ವಾಸ, ಪರವಶೆಯತೆಯ ಮೂಲಕ ಬೇರೊಂದು ಲೋಕದೊಂದಿಗೆ ಸಾಮೀಪ್ಯ, ಸಾಯುಜ್ಯತೆಗಳು ಸಾಧಿಸುವ ಭರವಸೆಗಳು ಇಲ್ಲಿವೆ.

ಮಧ್ಯಯುಗದ ಅತ್ಯುತ್ತಮ ಸೂಫಿ ಸಂತರು ಮತ್ತು ಅನುಭಾವಿ ಕವಿಗಳು ಎಂದು ಗುರುತಿಸಲಾಗುವ ಹಕೀಮ್ ಅಬುಲ್ ಮಜ್ದೂದ್ ಸನಾಯಿ, ಫರೀದುದ್ದೀನ್ ಅತ್ತಾರ್, ಜಲಾಲುದ್ದೀನ್ ರೂಮಿ ಮತ್ತಿತರರು ಇಸ್ಲಾಂನ ಸುನ್ನಿ ಪಂಗಡಕ್ಕೆ ಸೇರಿದವರು. ಸೂಫಿ ಸಂತರಲ್ಲಿ ಬಹುಪಾಲು ಕಾಣುವುದು ಸುನ್ನಿ ಪಂಗಡವೇ. ಶಿಯಾ ಪಂಗಡದ ಸೂಫಿಗಳು ಇಲ್ಲವೇ ಇಲ್ಲ ಎಂದು ಇದರರ್ಥವಲ್ಲ.

ಸಾಮಾನ್ಯವಾಗಿ ಸೂಫಿ ಸಾಹಿತ್ಯದ ಮಧ್ಯಯುಗದ ಅಂತ್ಯವನ್ನು ಸೂಫಿ ಸಂತ ಮತ್ತು ಶ್ರೇಷ್ಠ ಕವಿ ಎಂದು ಗುರುತಿಸಲಾಗುವ ಮೌಲಾನಾ ಜಾಮಿಯ ಮರಣದ ದಿನಾಂಕದೊಂದಿಗೆ ನಿಗದಿಪಡಿಸಲಾಗಿದೆ. ಅಂದರೆ, ಮಧ್ಯಯುಗದ ಸೂಫಿ ಸಾಹಿತ್ಯದ ಅಧ್ಯಯನವನ್ನು ಕ್ರಿ.ಶ. 1492ಕ್ಕೆ ನಿಲ್ಲಿಸಲಾಗುತ್ತದೆ. ಆಮೇಲೆ ಮಹತ್ವದ ಸಂತರು, ಕವಿಗಳು ಬಂದಿಲ್ಲವೆಂದಲ್ಲ. ಜಾಮಿಯಂಥ ಶ್ರೇಷ್ಠ ಕವಿಗಳೊಂದಿಗೆ ಅಧ್ಯಯನವನ್ನು ನಿಲ್ಲಿಸಿದರೆ ಅದಕ್ಕೊಂದು ವಿಶೇಷ ಅರ್ಥ ಎಂಬ ಕಾರಣದಿಂದ ನಿಗದಿಪಡಿಸಿರುವಂತೆ ಕಾಣುತ್ತದೆ.

ಜಾಮಿಯ ಮರಣದ ನಂತರ ಇಂದು ಇರಾನ್ ಎಂದು ಗುರುತಿಸಲಾಗುವ ಭಾಗವನ್ನು ಸಫಾವಿದ್ ಅರಸರು ಆಳ್ವಿಕೆ ನಡೆಸತೊಡಗಿದರು. ಶಿಯಾ ಪಂಗಡದ ಈ ದೊರೆಗಳು ಶಿಯಾ ಇಸ್ಲಾಂ ಧರ್ಮವನ್ನು ಆಳ್ವಿಕೆ ಪ್ರದೇಶದ ಧರ್ಮವಾಗಿ ಪಾಲಿಸುವಂತೆ ಆಜ್ಞೆ ಮಾಡಿದರು. ಆದಾಗ್ಯೂ, ಅಭಿಜಾತ ಮತ್ತು ಸೂಫಿ ಸಾಹಿತ್ಯ ಈ ಎಲ್ಲ ರಾಜಕೀಯ ಬದಲಾವಣೆಗಳು ಹಾದು ಉಳಿದುಕೊಂಡು ಬಂದಿತು. ಮಾತ್ರವಲ್ಲ, ಪರ್ಶಿಯನ್ ಭೂಭಾಗದ ಅಸ್ಮಿತೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿತು. ಹದಿನಾರನೆಯ ಶತಮಾನದ ಬಳಿಕ ತುರ್ಕಿಗಳು ಮತ್ತು ಭಾರತದ ಉಪಖಂಡದ ಲೇಖಕರು ಗಮನಾರ್ಹ ಪ್ರಮಾಣದಲ್ಲಿ ಪರ್ಶಿಯನ್ ಭಾಷೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿದರು.

ರುಬಾಯಿ (ರುಬಾಯತ್) ಅಥವ ಚೌಪದಿಗಳನು ಪರ್ಶಿಯನ್, ಅರೆಬಿಕ್ ಭಾಷೆಗಳ ಅತಿ ಹಳೆಯ ಕಾವ್ಯಾಭಿವ್ಯಕ್ತಿಯ ಮಾದರಿಯೆಂದು ಗುರುತಿಸಲಾಗಿದೆ. ಬಿಡಿಸಾಲುಗಳೆಂದು ಕರೆಯಲಾಗುವ ಖತಾ/ಮುಖತ್ತಾತ್‌ಗಳನ್ನು, ಖ಼ಾಸೀದ, ಗ಼ಜಲ್, ಮಸ್ನವಿಗಳನ್ನು (ಕಥನ ಕಾವ್ಯ) ಕೂಡ ಸೂಫಿ ಕವಿಗಳು ಅಭಿವ್ಯಕ್ತಿಗಾಗಿ ಬಳಸಿಕೊಂಡಿರುವುದುಂಟು. ಅಭಿಜಾತ ಅರೆಬಿಕ್ ಮತ್ತು ಪರ್ಶಿಯನ್ ಕಾವ್ಯದಲ್ಲಿ ಖ಼ಾಸೀದ ಪದ್ಯಪ್ರಕಾರ ಬಹು ಜನಪ್ರಿಯ. ಸಮಮಾತ್ರೆ, ಹತ್ತು ಅಥವ ಅದಕ್ಕಿಂತ ಹೆಚ್ಚಿನ ಸಾಲಿನ ದ್ವಿಪದಿಗಳು, ತ್ರಿಪಕ್ಷೀಯ ಕಥನದ ಅಂಶ, ಗುಣಗಾನ, ವಿರಹ, ಶೋಕವನ್ನು ವ್ಯಕ್ತಪಡಿಸುವುದು ಈ ಪ್ರಕಾರದ ವಿಶಿಷ್ಟತೆಯಾಗಿದೆ. ಅಂತೆಯೇ, ಗಜ಼ಲ್ ಇತ್ಯಾದಿಗಳು. ಸೂಫಿ ಸಂತರು ಆಯಾ ಸನ್ನಿವೇಶಕ್ಕೆ ತಕ್ಕಂತೆ ಕಾವ್ಯ ಮಾದರಿಗಳನ್ನು ಬಳಸಿಕೊಂಡಿರುವುದನ್ನು ಕಾಣುತ್ತೇವೆ.

ಸೂಫಿಗಳು ಅದಾಗಲೆ ಲಭ್ಯವಿದ್ದ ಛಂದಸ್ಸಗಳನ್ನು ತಮ್ಮ ಆಧ್ಯಾತ್ಮಿಕ ಅಭಿವ್ಯಕ್ತಿಗಾಗಿ ಬಳಸಿಕೊಂಡರು. ಹಳೆಯ ಛಂದಸ್ಸುಗಳಲ್ಲಿದ್ದ ಭಾವದೀಪ್ತಿಯೂ ಸೂಫಿ ಅಭಿವ್ಯಕ್ತಿಯಲ್ಲಿ ಸೇರಿಕೊಂಡಿತು. ಭಕ್ತಿಯೊಡನೆ ನವಿರು ಶೃಂಗಾರಭಾವ ಸೇರಿಕೊಂಡಿತು. ಅಭಿಜಾತ ಕಾವ್ಯದ ಪ್ರೇಮದ ಪ್ರೇಮದ ಉತ್ಕಟತೆಯಲ್ಲಿ ಪ್ರಿಯತಮನಿಗೆ ಸಮರ್ಪಣೆಗೊಳ್ಳಲು ಸಿದ್ಧವಿರುವ ದೇಹ ಇಲ್ಲಿ ದೈವಿಕ ಸ್ವರೂಪವನ್ನು ಪಡೆಯಿತು. ಋಜುಮಾರ್ಗದಲಿ ಬದುಕಿದವನಿಗೆ ದೇವಪ್ರೀತಿ ದೊರಕಿಯೇ ತೀರುವುದು ಎಂಬ ಕುರಾನಿನ ಭರವಸೆಯೇ ಈ ಸೂಫಿ ಸಂತರು ಕನ್ನೆಯರಾಗಿ ದೇವನಿಗೆ ಅರ್ಪಿಸಿಕೊಳ್ಳುವಂತೆ ಮಾಡುತ್ತದೆ. ದೈವಪ್ರೇಮ ಕುರಾನಿನಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗುವ ಅಂಶ. ಪುರುಷ-ಸ್ತ್ರೀ ಸಂಬಂಧಗಳ ಬಗ್ಗೆ ಕೂಡ ಉಲ್ಲೇಖಗಳು ಕಾಣುವುದುಂಟು. “ನೀವು ಪರಸ್ಪರ ನೆಮ್ಮದಿಯನ್ನು ಕಂಡುಕೊಳ್ಳಲು ನಿಮ್ಮ ಸಂಗಾತಿಗಳಿಂದ ನಿಮ್ಮನ್ನು ಸೃಷ್ಟಿಸಿದನು; ನಿಮ್ಮ ಹೃದಯದಲಿ ಅಕ್ಕರೆ, ಕರುಣೆಗಳನ್ನು ಇರಿಸಿದನು. ವಿಚಾರವಂತರು ನಿಜಕ್ಕೂ ಯೋಚಿಸುವ ಅಂಶವಿದು”, (ಕುರಾನ್: 30:21). ಅಲ್ ಅಜ಼ೀಜ್‌ನ ಮಡದಿ ಜೋಸೆಫ್‌ನೊಂದಿಗೆ ಮಾಡಿಕೊಳ್ಳುವ ಪ್ರೇಮ ನಿವೇದನೆಯ ಶ್ಲೋಕಗಳಲ್ಲಿ ತೆಳುವಾದ ಶೃಂಗಾರವನ್ನು ಕಾಣಬಹುದು (ಕುರಾನ್: 12:24 ರಿಂದ 30). ತಾತ್ಪರ್ಯದಲ್ಲಿ, ಸೂಫಿಗಳು ದೈವದೊಂದಿಗೆ ಶೃಂಗಾರಭಕ್ತಿಯನ್ನು ಕಾಣಲು ಮೂಲ ಆಕರದಿಂದಲೇ ಸ್ಫೂರ್ತಿ ಪಡೆದರು, ಎಂಬುದು.

ಈ ಬಗೆಯ ಶೃಂಗಾರಭಕ್ತಿಯನ್ನು ರಬಿಯ ಅಲ್-ಬಸ್ರ್, ಹುಸೇನ್ ಮನ್ಸೂರ್ ಅಲ್-ಹಲ್ಲಾಜ್, ರೂಮಿ, ಇಬ್ನೆ ಅರಬಿ, ಅಲ್ ಫಾರಿದ್, ಸಾದಿ, ಇರಾಕಿ, ಜಾಮಿ, ಅಮೀರ್ ಖುಸ್ರೋ ಕಾವ್ಯದಲ್ಲಿ ನವುರಾಗಿ ಕಾಣುವೆವು.

“ಸಾಕಿ, ತೆಗೆದುಕೊಂಡು ಬಾ ಮದಿರೆ

ಸುರಿ ನನಗೂ ಕೊಂಚ.

ಪ್ರೇಮವೆಂದರೆ ಮೊದಲಿಗೆ

ಸರಾಗವೆಂದುಕೊಂಡಿದ್ದೆ,

ಈಗ ಬದುಕು ಮೂರಾಬಟ್ಟೆಯಾಗಿಸುತಿದೆ”

ನಮ್ಮನ್ನೆಲ್ಲ ನಿಯಂತ್ರಿಸುವ ಎರಡು ಅತ್ಯಂತ ಪ್ರಬಲ ಶಕ್ತಿಗಳೆಂದರೆ ಧರ್ಮ ಮತ್ತು ರಾಜಕಾರಣ. ಎರಡರಲ್ಲೂ ಕರ್ಮಠತೆ, ಕಬ್ಬಿಣದ ಕಾಠಿಣ್ಯವನ್ನು ಎಲ್ಲ ಕಾಲಗಳಲ್ಲೂ ಕಾಣುವುದು ಸಾಮಾನ್ಯ. ಅವುಗಳ ಇನ್ನೊಂದು ಮಗ್ಗುಲಿಗೆ ಹೂವಿನ ಮೃದುತ್ವವನು ಗುಣವಾಗಿ ಪಡೆದ ಇನ್ನೊಂದು ಲೋಕವೂ ಇದೆ. ನಿಜ. ಹೂವಿನ ಮೃದುತ್ವಕ್ಕಿಂತ ಕಬ್ಬಿಣದ ಕಠಿಣತೆಯ ಬಲ ಹೆಚ್ಚು. ಮೃದುತ್ವದ ಆಯುಷ್ಯ ಕಡಿಮೆ. ಆದರೆ, ಅದರ ನವುರು ಸುಗಂಧ ನಮ್ಮ ಸ್ಮೃತಿಯಲ್ಲಿ ಉಳಿದಿರುತ್ತದೆ. ನಮ್ಮ ನಾಗರಿಕತೆಗಳು ನಿರ್ಮಾಣಗೊಂಡಿರುವುದು ಇಂತಹ ಶ್ರುತಿ ಮತ್ತು ಸ್ಮೃತಿಗಳಿಂದಲೇ. ಸ್ಮೃತಿ ಮತ್ತು ಶ್ರುತಿಗೆ ಸೂಫಿ ಸಂವಾದಿ ಪದ: `ಸಮಾ’. ಇದು ಮೋಕ್ಷ ಸಾಧನೆಯ ಹನ್ನೊಂದನೆಯ `ಪರದೆ’. ಆಲಿಕೆ, ಸ್ಮರಣೆ, ಮನನ ಮತ್ತು ಪರಿಷ್ಕರಣೆಗಳನ್ನು ಆಚರಣೆಗೆ ತರುತ್ತ ಮುಂದಡಿ ಇಡುವುದು ಒಂದು ವಿಧಾನ. ಆರ್ದ್ರತೆಯ ಕಾಲಾವಧಿ ಕಡಿಮೆ. ನಿಜವೇ. ಆದರೆ, ಕಬ್ಬುನ ಮತ್ತು ಕಲ್ಲುಗಳಿಂದ ಕಟ್ಟಿದ ಶ್ರೇಷ್ಠ ಇಮಾರತುಗಳು ಮುಂದೊಂದು ಕಾಲಕ್ಕೆ ಪ್ರಾಚ್ಯವಸ್ತುಗಳಾಗಿ, ಪಾಳು ಕೊತ್ತಲಗಳಾಗಿ ಬದಲಾಗುವವು ಎನ್ನುವುದೂ ನಿಜವೆ.

ದೇಹವನು ಕಾಯಕದಲಿ ಕರಗಿಸುವ ಶರಣ, ದೇಹವನು ವ್ಯೂಮದಲಿ ಸಿಲುಕಿಸಿ ಸಿಕ್ಕುಸಿಕ್ಕಾದ ಲೋಕದ ಅರ್ಥ ಒಡೆದು ಬ್ರಹ್ಮಾಂಡದಲಿ ಲೀನನಾಗುವ ಯೋಗಿ, ತನ್ನನ್ನು ಕನ್ನೆಯಂತೆ ಪರಮಪುರುಷನಿಗೆ ಸಮರ್ಪಸಿಕೊಳ್ಳುವ ಸೂಫಿ ಸಂತ, ಇವರೆಲ್ಲ ನಮಗೆ ಏನನ್ನಾದರೂ ಹೇಳುತ್ತಿದ್ದಾರೆಯೆ? ನಿಸ್ವಾರ್ಥ ಪ್ರೇಮ, ತಾನು ಮಾಡುವ ಕೆಲಸದಲಿ ತನ್ಮಯತೆ, ಸಿದ್ಧಿಸಲು ರಾಗದ್ವೇಷಗಳಿಂದ ಮುಕ್ತನಾಗಿರಬೇಕಾದ ಅಗತ್ಯ, ಕುಹಕ, ತರತಮ, ಅವಹೇಳನ, ಶೋಷಣೆ ಮಾಡುವ, ಕೀರ್ತಿ-ಪ್ರಸಿದ್ಧಿಗಾಗಿ ಹಾತೊರೆಯುವುದರ ಹೊರತಾಗಿಯೂ ಬೇರೊಂದು ವಿಧಾನವಿರಲು ಸಾಧ್ಯ, ಎಂದು ಈ ಹೂವಿನ ಮೃದುತ್ವದ ಮನುಷ್ಯರು ಹೇಳುತ್ತಿದ್ದಾರೆಂದು ಅನ್ನಿಸಿದರೆ, ಅಂಥ ನಿಷ್ಕಲ್ಮಶ ಲೋಕವನು ನಿರ್ಮಿಸಬೇಕಾದ ಹೊಣೆ ನಮ್ಮ ಮೇಲೆಯೇ ಇದೆ.

ಕೇಶವ ಮಳಗಿ


ಲೋಕಸಂಚಾರದ ವಿಶ್ವರೂಪ

ನಾಗರಿಕತೆಯ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಅದರ ವಿಕಾಸವು ಕೇವಲ ರಾಜ್ಯಗಳ ಉದಯ– ಪತನಗಳ ಚರಿತ್ರೆಯಲ್ಲ, ಅಥವಾ ಯುದ್ಧ– ವಿಜಯಗಳ ದಾಖಲೆಗಳಲ್ಲ ಎಂಬುದು ಸ್ಪಷ್ಟವಾಗುತ್ತದೆ. ವಾಸ್ತವವಾಗಿ ಅದು ಮನುಷ್ಯನ ನಿರಂತರ ಅನ್ವೇಷಣಾ ಪ್ರವೃತ್ತಿಯ, ಹೊಸತನ್ನು ಅರಿಯುವ ಆತುರದ, ದಿಗಂತಗಳನ್ನು ದಾಟುವ ಧೈರ್ಯದ ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಉದಾತ್ತ ಮನೋಭಾವದ ಮಹಾಕಾವ್ಯದಂತೆ ಭಾಸವಾಗುತ್ತದೆ. ಮನುಷ್ಯನು ತನ್ನ ನೆಲೆಯನ್ನು ಬಿಟ್ಟು ಹೊರಟ ಕ್ಷಣದಿಂದಲೇ ಇತಿಹಾಸವು ಹೊಸ ದಿಕ್ಕನ್ನು ಪಡೆಯತೊಡಗಿತು. ಜಗತ್ತಿನಲ್ಲಿ ಆಗಿಹೋದ ಪ್ರತಿಯೊಂದು ಮಹಾನ್ ನಾಗರಿಕತೆಯೂ ಯಾವುದೋ ಒಂದು ಕಾಲದಲ್ಲಿ ತನ್ನ ಗಡಿಗಳನ್ನು ಮೀರಿ ಹೊರಜಗತ್ತಿನೊಂದಿಗೆ ಸಂವಾದ ನಡೆಸಿದೆ. ಪರ್ವತಗಳನ್ನು ದಾಟಿದ ವ್ಯಾಪಾರಿಗಳ ಕಾಲ್ನಡಿಗೆ, ಮರುಭೂಮಿಯನ್ನು ಭೇದಿಸಿ ಸಾಗಿದ ಒಂಟೆ ಕಾರವಾನ್‌ಗಳು, ಬೃಹತ್ ಅಲೆಗಳನ್ನು ಎದುರು ಹಾಕಿಕೊಂಡ ಹಡಗುಗಳು, ಜ್ಞಾನವನ್ನು ಹೊತ್ತ ಮಹದ್ ಗ್ರಂಥಗಳು, ಧರ್ಮ ಮತ್ತು ನೈತಿಕತೆಯನ್ನು ಹೊತ್ತ ಸೂಫಿ ದರವೇಶಿಗಳ ಪಾದಯಾತ್ರೆಗಳು, ಭಾಷೆಗಳನ್ನು ಮೀರಿ ಮಾನವೀಯತೆಯನ್ನು ವಿಸ್ತರಿಸಿದ ವಿದ್ವಾಂಸರ ಸಂಚಾರ ಇವೆಲ್ಲವೂ ಸೇರಿ ವಿಶ್ವ ನಾಗರಿಕತೆಯ ವಿಸ್ತಾರದ ನೈಜ ಶಕ್ತಿಗಳೆನಿಸಿವೆ. ಸಂಚಾರವನ್ನು ಭೌಗೋಳಿಕ ಚಲನೆಯ ದೃಷ್ಟಿಯಿಂದ ನೋಡುವುದಕ್ಕಿಂತಲೂ ಅದು ಸಂಸ್ಕೃತಿಗಳ ಪರಸ್ಪರ ಸಂವಾದ, ಜ್ಞಾನಗಳ ವಿನಿಮಯ, ತಂತ್ರಜ್ಞಾನಗಳ ಪ್ರಸರಣ, ಭಾಷೆಗಳ ಪುನಾರಚನೆ ಮತ್ತು ಮಾನವೀಯ ಅನುಭವಗಳ ವಿಸ್ತರಣೆಗೆ ಕಾರಣವಾದುದನ್ನು ಗುರುತಿಸುವುದು ಬಹಳ ಮುಖ್ಯ. ಈ ಅರ್ಥದಲ್ಲಿ ವಿಶ್ವ ಸಂಚಾರವು ನಾಗರಿಕತೆಗೆ ಹೊಸ ದಿಕ್ಕನ್ನು ತೋರಿಸಿ, ಮಾನವ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ನಾಟಿದೆ.

ಪ್ರಾಚೀನ ಈಜಿಪ್ಟ್, ಮೆಸಪೊಟೇಮಿಯಾ, ಸಿಂಧೂ ಕಣಿವೆ (Indus valley) ಮತ್ತು ಇತರ ಪ್ರಾಚೀನ ನಾಗರಿಕತೆಗಳು ತಮ್ಮ ಆಂತರಿಕ ವೈಭವದಿಂದ ಮೆರೆಯುವುದರ ಜೊತೆಜೊತೆಗೆ ಅವು ದೂರದ ದೇಶಗಳೊಂದಿಗೆ ನಡೆಸಿದ ಸಂಪರ್ಕಗಳಿಂದಲೂ ಸಮೃದ್ಧವಾದವು. ‘ಸಿಲ್ಕ್ ರೂಟ್’ (ರೇಷ್ಮೆ ಮಾರ್ಗ) ಅದಕ್ಕೊಂದು ನಿದರ್ಶನ. ಹಳೆಯ ಕಾಲದ ಸರಕು ಸಾಗಾಣಿಕೆಯ ದಾರಿಗಳು ಹಾಗೂ ಸಾಗರಪಥಗಳು ಕೇವಲ ವ್ಯಾಪಾರದ ದಾರಿಗಳಾಗಿರಲಿಲ್ಲ; ಅವು ವೈವಿಧ್ಯಮಯ ಆಲೋಚನೆಗಳ, ಕಲೆಯ, ಧರ್ಮದ, ವಿಜ್ಞಾನದ ಮತ್ತು ಜೀವನಶೈಲಿಯ ಹೆದ್ದಾರಿಗಳಾಗಿದ್ದವೆಂದು ಚರಿತ್ರೆಯನ್ನು ಅವಲೋಕಿಸಿದಾಗ ತಿಳಿಯುತ್ತದೆ. ಒಂದು ಪ್ರದೇಶದಲ್ಲಿ ಹುಟ್ಟಿದ ತತ್ವ ಮತ್ತೊಂದು ಪ್ರದೇಶದಲ್ಲಿ ಹೊಸ ರೂಪ ತಾಳಿತು; ಒಂದು ದೇಶದಲ್ಲಿ ಅಭಿವೃದ್ಧಿಯಾದ ತಂತ್ರಜ್ಞಾನ ಮತ್ತೊಂದು ದೇಶದಲ್ಲಿ ಪರಿಷ್ಕೃತವಾಯಿತು; ಒಂದು ಭಾಷೆಯಲ್ಲಿದ್ದ ಜ್ಞಾನ ಮತ್ತೊಂದು ಭಾಷೆಯ ಮೂಲಕ ಸಮೃದ್ಧವಾಯಿತು. ನಾಗರಿಕತೆಗಳು ಬೆಳೆಯುವುದು ಕೋಟೆಗಳನ್ನು ಕಟ್ಟಿ ತನ್ನನ್ನು ತಾನು ಸುರಕ್ಷಿತವಾಗಿ ಇಟ್ಟುಕೊಳ್ಳುವುದರಿಂದಲ್ಲ; ತನ್ನ ಗಡಿಯನ್ನು ದಾಟಿ ಜಗತ್ತಿನತ್ತ ತೆರೆದುಕೊಳ್ಳುವುದರಿಂದ ಎಂಬ ಇತಿಹಾಸದ ಮಹತ್ವದ ಪಾಠವನ್ನು ವಿಶ್ವ ಸಂಚಾರಗಳು ನಮಗೆ ಕಲಿಸುತ್ತವೆ.

ಇತಿಹಾಸದ ಈ ವಿಶಾಲ ಪ್ರವಾಹದಲ್ಲಿ ಇಸ್ಲಾಮಿನ ಉದಯವು ಮಾನವ ಸಂಚಾರಕ್ಕೆ ಹೊಸ ತಾತ್ವಿಕ ಅರ್ಥವನ್ನೂ ನೈತಿಕ ದಿಕ್ಕನ್ನೂ ನೀಡಿತು. ಇಸ್ಲಾಮ್ ಇಡೀ ಭೂಮಿಯನ್ನೇ ಅಲ್ಲಾಹನ ವಿಶಾಲ ಭೂಮಿಯೆಂದು ಪರಿಚಯಿಸಿತು. ಪವಿತ್ರ ಖುರ್‌ಆನ್ ಅನೇಕ ಕಡೆಗಳಲ್ಲಿ ಭೂಮಿಯಲ್ಲಿ ಸಂಚರಿಸಿ, ಪೂರ್ವಜರ ಇತಿಹಾಸವನ್ನು ಗಮನಿಸಿ, ಪ್ರಕೃತಿಯ ಚಿಹ್ನೆಗಳನ್ನು ಅವಲೋಕಿಸಿ ಎಂದು ಸೃಷ್ಟಿಯ ರಹಸ್ಯಗಳನ್ನು ಅರಿಯುವಂತೆ ಆಹ್ವಾನಿಸುತ್ತದೆ. ಈ ಆಹ್ವಾನವು ಸಂಚಾರವನ್ನು ಜ್ಞಾನಸಾಧನೆಯ ಸಾಧನವಾಗಿ ಪರಿವರ್ತಿಸಿತು. ‘ಸೀರೂ ಫಿಲ್ ಅರ್ಳ್..’ (ಭೂಮಿಯಲ್ಲಿ ಸಂಚರಿಸಿರಿ) ಎಂಬ ಖುರ್‌ಆನಿನ ಕರೆಯು ಮುಸ್ಲಿಮರಲ್ಲಿ ಅನ್ವೇಷಣಾ ಮನೋಭಾವವನ್ನು ಬೆಳೆಸಿತು. ಜ್ಞಾನಕ್ಕಾಗಿ ದೂರದ ದೇಶಗಳಿಗೆ ಪ್ರಯಾಣಿಸುತ್ತ, ವ್ಯಾಪಾರದ ಮೂಲಕ ಹೊಸ ಸಮಾಜಗಳನ್ನು ಪರಿಚಯ ಮಾಡಿಕೊಳ್ಳುತ್ತ, ವಿವಿಧ ಜನಾಂಗಗಳೊಂದಿಗೆ ಮುಖಾಮುಖಿಯಾಗುತ್ತ, ಹೊಸ ಭೌಗೋಳಿಕ ಪ್ರದೇಶಗಳನ್ನು ಅಧ್ಯಯನ ಮಾಡುತ್ತ ವಿಭಿನ್ನವಾದ ಸಾಂಸ್ಕೃತಿಕ, ಸಾಮಾಜಿಕ ಅನುಸಂಧಾನಗಳ ಮೂಲಕ ಮುಸ್ಲಿಮರು ಬೌದ್ಧಿಕ ವಿಕಸನದ ಉನ್ನತಿಗೇರಿದರು. ಅವರಿಗೆ ಅದು ಕೇವಲ ಧಾರ್ಮಿಕ ಕರ್ತವ್ಯವಾಗದೆ ಬೌದ್ಧಿಕ ಸಾಧನೆಯ ಭಾಗವಾಗಿಯೂ ಕಾರ್ಯನಿರ್ವಹಿಸಿತು.

Al-Rihla (The Travels of Ibn Battuta)

ಇಸ್ಲಾಮಿನ ಆರಂಭಿಕ ಶತಮಾನಗಳಲ್ಲಿಯೇ ಅರೇಬಿಯಾದ ಸೀಮಿತ ಭೌಗೋಳಿಕ ವ್ಯಾಪ್ತಿಯನ್ನು ಮೀರಿ ಮುಸ್ಲಿಮರು ಏಷ್ಯಾ, ಆಫ್ರಿಕಾ ಮತ್ತು ಯೂರೋಪಿನ ವಿಶಾಲ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸಿದರು. ಆದರೆ ಈ ವಿಸ್ತಾರವನ್ನು ಕೇವಲ ರಾಜಕೀಯ ವಿಜಯಗಳ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುವುದು ಇತಿಹಾಸಕ್ಕೆ ಮಾಡುವ ಅನ್ಯಾಯವಾಗುತ್ತದೆ. ನಿಜವಾದ ಪರಿವರ್ತನೆಯನ್ನು ತಂದವರು ವಿದ್ವಾಂಸರು, ಸೂಫಿಗಳು, ವ್ಯಾಪಾರಿಗಳು ಮತ್ತು ನಾವಿಕರು. ಒಂದು ರೀತಿಯಲ್ಲಿ ಸಾಂಸ್ಕೃತಿಕ ರಾಯಭಾರಿಗಳಂತೆ ಕಾರ್ಯಾಚರಿಸಿದ ಅವರು ತಮ್ಮೊಂದಿಗೆ ಸರಕುಗಳನ್ನು ಅಥವಾ ಗ್ರಂಥಗಳನ್ನು ಸಾಗಿಸುವುದರ ಜೊತೆಗೆ ಜ್ಞಾನ, ಕೌಶಲ್ಯ ಮತ್ತು ಪರಸ್ಪರ ಮಾನವೀಯ ಮೌಲ್ಯಗಳನ್ನೂ ಹೊತ್ತೊಯ್ದರು. ಈ ಕಾರಣದಿಂದಲೇ ಅನೇಕ ದೇಶಗಳಲ್ಲಿ ಇಸ್ಲಾಮಿನ ಪ್ರಭಾವವು ಖಡ್ಗದ ಮೂಲಕವಲ್ಲ, ವ್ಯಕ್ತಿತ್ವ ಮತ್ತು ಜ್ಞಾನಾಣ್ವೇಷಣೆಯ ಮೂಲಕ ಹರಡಿತು ಎಂದು ಅನೇಕ ಆಧುನಿಕ ಇತಿಹಾಸಕಾರರೂ ಸಮರ್ಥಿಸಿದ್ದಾರೆ.

ಜಾಗತಿಕ ಇತಿಹಾಸದ ಅನೇಕ ಮಹಾನ್ ಸಂಚಾರಗಳಲ್ಲಿ ಭೌಗೋಳಿಕ ಅನ್ವೇಷಣೆಗಿಂತ ಹೆಚ್ಚಿನ ಮಹತ್ವ ಪಡೆದದ್ದು ಜ್ಞಾನದ ಸಂಚಾರ. ಮೈಲಿಗಟ್ಟಲೆ ಸಂಚರಿಸಿದ ಪರಿಣಾಮವಾಗಿ ಮಹತ್ವದ ಗ್ರಂಥಗಳು ರಚಿಸಲ್ಪಟ್ಟವು. ಆ ಮೂಲಕ ಅನೇಕ ಪ್ರದೇಶಗಳಲ್ಲಿ ಬೃಹತ್ತಾದ ಗ್ರಂಥಾಲಯಗಳು ನಿರ್ಮಿಸಲ್ಪಟ್ಟವು. ವೈವಿಧ್ಯಮಯ ಕ್ಷೇತ್ರಗಳಲ್ಲಿ ಪರಿಣಿತರಾದ ಸಮರ್ಥ ವಿದ್ವಾಂಸರು ಬೆಳಕಿಗೆ ಬಂದರು. ಅಂತಹ ವಿದ್ವಾಂಸರನ್ನು ಅರಸಿ ಸಾವಿರಾರು ಶಿಷ್ಯಂದಿರು ರೂಪುಗೊಂಡರು. ಇಸ್ಲಾಮಿನ ಜ್ಞಾನ ಪರಂಪರೆಯಲ್ಲಿ ಈ ಸಂಚಾರಗಳಿಗೆ ಅಪೂರ್ವ ಸ್ಥಾನವಿದೆ. ಒಂದು ಹದೀಸನ್ನು ನೇರವಾಗಿ ಕೇಳಲು ನೂರಾರು ಮೈಲಿಗಳ ಪ್ರಯಾಣ ಮಾಡುವುದು, ಒಬ್ಬ ವಿದ್ವಾಂಸರ ಬಳಿಯಲ್ಲಿ ಕೆಲವು ತಿಂಗಳುಗಳು ಅಥವಾ ವರ್ಷಗಳು ಅಧ್ಯಯನ ಮಾಡುವುದು, ನಂತರ ಆ ಜ್ಞಾನವನ್ನು ಮತ್ತೊಂದು ದೇಶಕ್ಕೆ ಕೊಂಡೊಯ್ಯುವುದು ಇದು ಆರಂಭಿಕ ಹಂತದಲ್ಲಿ ಕಂಡುಬರುತ್ತಿದ್ದ ಸಾಮಾನ್ಯ ಶೈಕ್ಷಣಿಕ ಪದ್ಧತಿಯಾಗಿತ್ತು. ಈ ರೀತಿಯಾಗಿ ವಿಶ್ವದ ವಿವಿಧ ಭಾಗಗಳಲ್ಲಿ ಹರಡಿದ್ದ ಜ್ಞಾನವು ಒಂದು ಸಕ್ರಿಯ ಜಾಲವಾಗಿ ರೂಪುಗೊಂಡಿತು. ಇದೇ ಜಾಲವು ಮಧ್ಯಯುಗೀನ ಇಸ್ಲಾಮಿಕ್ ವಲಯವನ್ನು ಬೌದ್ಧಿಕವಾಗಿ ಏಕೀಕರಿಸಿದ ಮಹಾನ್ ಶಕ್ತಿಯಾಯಿತು.

ಈ ಜ್ಞಾನಯಾನಗಳ ವೈಶಿಷ್ಟ್ಯವೆಂದರೆ ಅವು ಯಾವುದೇ ಅಧಿಕಾರವನ್ನು ಆಶ್ರಯಿಸದೆ ಜ್ಞಾನವನ್ನೇ ಪರಮ ಸಂಪತ್ತೆಂದು ಬಗೆದ ವ್ಯಕ್ತಿಗಳ ಆತ್ಮಸಾಧನೆಯಾಗಿ ಬೆಳೆಯಿತೆಂಬುದು. ಇಸ್ಲಾಮಿನ ಆರಂಭಿಕ ಶತಮಾನಗಳಲ್ಲಿ ರೂಪುಗೊಂಡ ‘ರಿಹ್ಲಾ ಫೀ ತಲಬಿಲ್ ಇಲ್ಮ್’— ಜ್ಞಾನಾನ್ವೇಷಣೆಯ ಪ್ರಯಾಣ ಚಾರಿತ್ರಿಕವಾಗಿ ಮುಖ್ಯವಾದುದು. ಜ್ಞಾನದಾಹಿಯಾದ ವಿದ್ಯಾರ್ಥಿಗಳು ತಮ್ಮ ಊರಿನಿಂದ ಹೊರಟು ಮದೀನಾ, ಮಕ್ಕಾ, ಕೂಫಾ, ಬಸರಾ, ಡಮಾಸ್ಕಸ್, ಕೈರೋ, ನಿಶಾಪೂರ್, ಬುಖಾರಾ, ಸಮರ್ಖಂದ್, ಬಾಗ್ದಾದ್, ಕೊರ್ಡೋಬಾ, ಕೈರುವಾನ್‌ನಂತಹ ಜ್ಞಾನಕೇಂದ್ರಗಳಿಗೆ ತೆರಳುತ್ತಿದ್ದ ದೃಶ್ಯವು ಅಂದು ಸರ್ವೇಸಾಮಾನ್ಯವಾಗಿತ್ತು. ಪರಂಪರಾಗತವಾಗಿ ಸಾಗಿ ಬಂದ ಅಮೂಲ್ಯಜ್ಞಾನವನ್ನು ಸಮರ್ಥ ಗುರುಗಳಿಂದ ನೇರವಾಗಿ ಸ್ವೀಕರಿಸುವುದು, ಅವರ ವ್ಯಕ್ತಿತ್ವವನ್ನು ಅನುಭವಿಸುವುದು, ಜ್ಞಾನ ಮತ್ತು ನೈತಿಕತೆಯ ಏಕತೆಯನ್ನು ಅರಿಯುವುದು ಇವೇ ಮೊದಲಾದ ಉದ್ದೇಶಗಳಿಗಾಗಿ ಅವರು ನಿರಂತರವಾಗಿ ಅಲೆದರು. ಹೀಗೆ ಜ್ಞಾನವು ವ್ಯಕ್ತಿಯಿಂದ ವ್ಯಕ್ತಿಗೆ, ಹೃದಯದಿಂದ ಹೃದಯಕ್ಕೆ ಮತ್ತು ಪೀಳಿಗೆಯಿಂದ ಪೀಳಿಗೆಗೆ ಜೀವಂತ ಪರಂಪರೆಯಾಗಿ ಹರಿಯಿತು.

ಈ ಪರಂಪರೆಯ ಶ್ರೇಷ್ಠ ಪ್ರತಿನಿಧಿಗಳಲ್ಲಿ ಇಮಾಮ್ ಅಲ್ ಬುಖಾರಿ (810 – 870) ಪ್ರಮುಖರು. ತಮ್ಮ ಯೌವನದಲ್ಲಿಯೇ ಮಧ್ಯ ಏಷ್ಯಾದ ಬುಖಾರಾದಿಂದ ಹಿಜಾಝ್, ಇರಾಕ್, ಸಿರಿಯಾ ಮತ್ತು ಈಜಿಪ್ಟ್ ಸೇರಿದಂತೆ ಅನೇಕ ಜ್ಞಾನಕೇಂದ್ರಗಳಿಗೆ ಸಂಚರಿಸಿ ಅನೇಕ ವಿದ್ವಾಂಸರ ಬಳಿಯಿಂದ ಹದೀಸ್‌ಗಳನ್ನು ಅಧ್ಯಯನ ಮಾಡಿದರು. ಇಮಾಮ್ ಮುಸ್ಲಿಮ್, ಇಮಾಮ್ ತಿರ್ಮಿದಿ, ಇಮಾಮ್ ನಸಾಈ, ಇಮಾಮ್ ಅಬೂ ದಾವೂದ್ ಹಾಗೂ ಇತರ ಮಹಾನ್ ಮುಹದ್ದಿಸರೂ ಇದೇ ಪರಂಪರೆಯನ್ನು ಅನುಸರಿಸಿದರು. ಅವರ ಪ್ರಯಾಣಗಳು ಕೇವಲ ಮಾಹಿತಿ ಸಂಗ್ರಹಣೆಯ ಉದ್ದೇಶದ್ದಾಗಿರಲಿಲ್ಲ; ಪ್ರತಿಯೊಂದು ಹದೀಸ್‌ನ ನಿರೂಪಕರ ಸರಣಿ, ಅವರ ವಿಶ್ವಾಸಾರ್ಹತೆ, ಸ್ಮರಣಶಕ್ತಿ ಮತ್ತು ಪರಸ್ಪರ ಭೇಟಿಯ ಸಾಧ್ಯತೆಯವರೆಗೂ ಸೂಕ್ಷ್ಮವಾಗಿ ಪರಿಶೀಲಿಸುವ ವೈಜ್ಞಾನಿಕ ಸಂಶೋಧನಾ ವಿಧಾನವನ್ನು ಅವರು ರೂಪಿಸಿಕೊಂಡಿದ್ದರು. ಪ್ರತಿಯೊಬ್ಬ ಹದೀಸ್ ವಿದ್ವಾಂಸರಿಗೂ ತಮ್ಮದೇ ಆದ ಸಂಶೋಧನಾ ವಿಧಾನ (research methodology) ಗಳಿದ್ದವು. ಮೂಲಪರಿಶೀಲನೆ (source criticism), ಸಾಕ್ಷ್ಯ ವಿಮರ್ಶೆ (evidence evaluation) ಮತ್ತು ತಾರ್ಕಿಕ ವಿಶ್ಲೇಷಣೆ (logical analysis) ಗೆ ಅವರು ನೀಡಿದ ಮಹತ್ವವು ಇಸ್ಲಾಮಿಕ್ ಜ್ಞಾನಸಂಪ್ರದಾಯದ ವೈಜ್ಞಾನಿಕ ಪ್ರಬುದ್ಧತೆಯನ್ನು ಸ್ಪಷ್ಟಪಡಿಸುತ್ತದೆ.

Ihya Ulum al-Din (Al-Ghazali)

ಜ್ಞಾನದ ಈ ಪಯಣವು ಕೇವಲ ಬೌದ್ಧಿಕ ಹಿರಿಮೆಗೆ ಸೀಮಿತವಾಗಿರಲಿಲ್ಲ; ಅದು ಆತ್ಮಪರಿಷ್ಕಾರ ಮತ್ತು ವ್ಯಕ್ತಿತ್ವದ ಅಲಂಕಾರ ಸಾಧನವೂ ಆಗಿತ್ತೆಂಬುದು ಇನ್ನೊಂದು ಮಹತ್ವದ ಸಂಗತಿ. ಇದರ ಉಜ್ವಲ ಉದಾಹರಣೆಯೇ ಇಮಾಮ್ ಅಬೂ ಹಾಮಿದ್ ಅಲ್-ಗಝಾಲಿ (1058 – 1111). ಅವರು ಬಾಗ್ದಾದ್‌ನ ಪ್ರಖ್ಯಾತ ನಿಝಾಮಿಯಾ ವಿಶ್ವವಿದ್ಯಾಲಯದ ಉನ್ನತ ಹುದ್ದೆಯನ್ನು ತ್ಯಜಿಸಿ ಸಿರಿಯಾ, ಪ್ಯಾಲೆಸ್ಟೈನ್ ಮತ್ತು ಹಿಜಾಝ್ ಪ್ರದೇಶಗಳಲ್ಲಿ ದೀರ್ಘಕಾಲ ಸಂಚರಿಸಿ ಧ್ಯಾನ, ಆತ್ಮಪರಿಶೀಲನೆ ಮತ್ತು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದರು. ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಅವರು ಅದನ್ನೆಲ್ಲ ಹಠಾತ್ತನೆ ತ್ಯಜಿಸಿ ಊರಿಂದೂರಿಗೆ ಅಲೆದರು. ಆತ್ಮಜ್ಞಾನವನ್ನು ಅರಸಿ ನಡೆಸಿದ ಪರ್ಯಟನೆಗಳು ಅವು ಎಂದು ಅವರೇ ಆ ನಂತರ ಬರೆದ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಆ ಅನುಭವಗಳೇ ಅವರ ಚಿಂತನೆಗೆ ಆಳವಾದ ಪ್ರಭಾವವನ್ನು ಬೀರಿದವು. ಅವರ ಕೃತಿಗಳಲ್ಲಿ ತಸವ್ವುಫ್, ಬೌದ್ಧಿಕತೆ, ಆಧ್ಯಾತ್ಮಿಕತೆ, ಜ್ಞಾನ ಮತ್ತು ಆಚರಣೆಗಳ ಅಪೂರ್ವ ಸಮನ್ವಯ ಕಾಣುವುದು ಈ ಸಂಚಾರಗಳ ಪರಿಣಾಮವಾಗಿದೆ. ಅವರ ಪ್ರಮುಖ ಕೃತಿ ‘ಇಹ್ಯಾ ಉಲೂಮುದ್ದೀನ್’ – ತಸವ್ವುಫ್ (ಸೂಫಿಸಮ್) ಜ್ಞಾನಶಾಖೆಗೆ ಬುನಾದಿಯಾದ ಗ್ರಂಥವೆಂಬ ಅಭಿಪ್ರಾಯವಿದೆ. ಜ್ಞಾನವು ವ್ಯಕ್ತಿಯ ಅಂತರಂಗವನ್ನು ಪರಿಷ್ಕರಿಸಿ ಜೀವನವನ್ನು ರೂಪಿಸದಿದ್ದರೆ ಅದು ಅಪೂರ್ಣವೆಂದು ಅವರು ಪ್ರತಿಪಾದಿಸುತ್ತಾರೆ. ಮಧ್ಯಯುಗೀನ ಮುಸ್ಲಿಮ್ ವಿದ್ವಾಂಸರ ಪೈಕಿ ಸಂಚಾರಿಗಳೆಂದು ಗುರುತಿಸಲ್ಪಡುವ ಅನೇಕರ ಪೈಕಿ ಅಲ್ ಗಝಾಲಿಯವರು ವಿಶಿಷ್ಟವಾಗಿ ನಿಲ್ಲುವುದು ಈ ಕಾರಣಕ್ಕೆ.

ಒಂಬತ್ತನೇ ಶತಮಾನದಿಂದ ಶುರುವಾದ ಸುವರ್ಣಯುಗದ ಕಾಲದಲ್ಲಿ ಧಾರ್ಮಿಕ ಜ್ಞಾನಾಣ್ವೇಷಣೆಗಿಂತ ವೈಜ್ಞಾನಿಕವಾದ ಅಥವಾ ಕೌಶಲ್ಯಾಧಾರಿತ ವಿಜ್ಞಾನ ವಿಭಾಗಗಳತ್ತ ಅನೇಕರು ಆಸಕ್ತಿಯನ್ನು ಬೆಳೆಸಿದರು. ಒಂದು ರೀತಿಯ ಬೌದ್ಧಿಕ ವರ್ತುಲವು (intellectual circle) ಅಲ್ಲಿ ರೂಪುಗೊಂಡಿತು. ಆ ಕಾಲದ ಅನೇಕ ಜ್ಞಾನಪಿಪಾಸುಗಳ ಬೌದ್ಧಿಕ ಸಂಚಾರಗಳು ಇಸ್ಲಾಮಿಕ್ ನಾಗರಿಕತೆಯನ್ನು ವಿಶ್ವವ್ಯಾಪಿಯಾಗಿಸಿದವು. ಅರಬ್ಬೀ ಭಾಷೆಯು ವಿಜ್ಞಾನ, ತತ್ತ್ವಶಾಸ್ತ್ರ, ವೈದ್ಯಶಾಸ್ತ್ರ, ಗಣಿತ, ಖಗೋಳಶಾಸ್ತ್ರ ಮತ್ತು ಧರ್ಮಶಾಸ್ತ್ರಗಳ ಸಾಮಾನ್ಯ ಮಾಧ್ಯಮವಾಗಿ ರೂಪುಗೊಂಡಿತು. ಈ ಘಟ್ಟದಲ್ಲಿ ಪರ್ಷಿಯನ್, ಸಿರಿಯಕ್, ಗ್ರೀಕ್, ಸಂಸ್ಕೃತ, ಲ್ಯಾಟಿನ್ ಸೇರಿದಂತೆ ಅನೇಕ ಭಾಷೆಗಳ ಜ್ಞಾನವನ್ನು ಅರಬ್ಬೀ ಭಾಷೆಗೆ ಅನುವಾದಿಸಿ, ಪುನಃ ಅದನ್ನು ವಿಶ್ವದಾದ್ಯಂತ ಹಂಚುವ ಮಹತ್ವದ ಕೆಲಸಗಳು ನಡೆದವು. 9 ನೇ ಶತಮಾನದಲ್ಲಿ ಅಬ್ಬಾಸೀ ಖಲೀಫಾ ಹಾರೂನ್ ರಶೀದ್ ಬಾಗ್ದಾದ್‌ನಲ್ಲಿ ಸ್ಥಾಪಿಸಿ, ಖಲೀಫಾ ಅಲ್ ಮ‌ಅ್‌ಮೂನ್ ರ ಕಾಲದಲ್ಲಿ ಉತ್ತುಂಗಕ್ಕೇರಿದ ‘ಬೈತುಲ್ ಹಿಕ್ಮಾ’ ಕೇಂದ್ರವು ಈ ಬೌದ್ಧಿಕ ವಿನಿಮಯದ ಉಜ್ವಲ ಸಂಕೇತವಾಗಿತ್ತು. ಇಲ್ಲಿ ಗ್ರೀಕ್ ಮತ್ತು ಭಾರತೀಯ ತತ್ವಶಾಸ್ತ್ರ, ಪರ್ಷಿಯನ್ ಮೂಲದ ಜ್ಞಾನ ಮತ್ತು ಇತರ ನಾಗರಿಕತೆಗಳ ವೈಜ್ಞಾನಿಕ ಪರಂಪರೆಗಳು ಭಾಷಾಂತರಗೊಂಡವು; ವಿಮರ್ಶಿಸಲ್ಪಟ್ಟವು; ಪರಿಷ್ಕೃತವಾದವು ಮತ್ತು ಹೊಸ ಸೃಜನಶೀಲತೆಯೊಂದಿಗೆ ಮರುರೂಪಿಸಲ್ಪಟ್ಟವು. ಬೈತುಲ್ ಹಿಕ್ಮಾ ಕೇವಲ ಒಂದು ಗ್ರಂಥಾಲಯವಾಗಿರಲಿಲ್ಲ; ಅನುವಾದ ಕೇಂದ್ರ, ಸಂಶೋಧನಾ ಸಂಸ್ಥೆ, ಶಿಕ್ಷಣ ಕೇಂದ್ರ ಮತ್ತು ವೀಕ್ಷಣಾಲಯ (Observatory) ಆಗಿಯೂ ಅದು ಕಾರ್ಯನಿರ್ವಹಿಸಿತು. ಬೀಜಗಣಿತದ ಪಿತಾಮಹ ಅಲ್ ಖವಾರಿಝ್ಮಿ (780–850), ಗ್ಯಾಲನ್, ಹಿಪ್ಪೊಕ್ರೇಟಿಸ್, ಅರಿಸ್ಟಾಟಲ್ ಮೊದಲಾದವರ ಅನೇಕ ಕೃತಿಗಳನ್ನು ಅರಬಿಗೆ ಅನುವಾದಿಸಿ ಇಸ್ಲಾಮಿಕ್ ಜ್ಞಾನಪರಂಪರೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಕ್ರೈಸ್ತ ವೈದ್ಯ ಹುನೈನ್ ಬಿನ್ ಇಸ್ಹಾಖ್ (809–873), ತತ್ವಶಾಸ್ತ್ರ, ಗಣಿತ, ವೈದ್ಯಶಾಸ್ತ್ರ, ಖಗೋಳಶಾಸ್ತ್ರ, ಸಂಗೀತ, ಬೆಳಕಿನ ವಿಜ್ಞಾನ (Optics) ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ 250ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ‘ಅರಬ್ಬರ ಮೊದಲ ತತ್ವಜ್ಞಾನಿ’ ಎಂದು ಕರೆಯಲ್ಪಡುವ ಅಲ್ ಕಿಂದಿ (801–873) ಮುಂತಾದ ಮೇಧಾವಿಗಳು ಇದೇ ಬೈತುಲ್ ಹಿಕ್ಮಾದ ಕೊಡುಗೆಗಳು.

ಈ ಪ್ರಕ್ರಿಯೆಯ ಫಲವಾಗಿ ಮಾನವ ಚಿಂತನೆಗೆ ಹೊಸ ಆಯಾಮಗಳು ದೊರಕಿದವು. ಭಾರತೀಯ ಸಂಖ್ಯಾ ಪದ್ಧತಿ ಮತ್ತು ಶೂನ್ಯದ ಕಲ್ಪನೆ ಅರಬ್ಬೀ ಜಗತ್ತಿನ ಮೂಲಕ ವಿಶ್ವದಾದ್ಯಂತ ತಲಪಿತು; ಗ್ರೀಕ್ ವೈದ್ಯಶಾಸ್ತ್ರವು ಮುಸ್ಲಿಮ್ ವೈದ್ಯರ ಕೈಯಲ್ಲಿ ಪ್ರಯೋಗಾತ್ಮಕ ಶಕ್ತಿಯನ್ನು ಪಡೆದುಕೊಂಡಿತು; ಖಗೋಳಶಾಸ್ತ್ರವು ನಿಖರ ಅವಲೋಕನಗಳ ಮೂಲಕ ಹೊಸ ಎತ್ತರಕ್ಕೇರಿತು; ಭೂಗೋಳಶಾಸ್ತ್ರವು ಪ್ರವಾಸಿಗರ ಅನುಭವಗಳಿಂದ ವಾಸ್ತವಿಕತೆಯನ್ನು ಅಳವಡಿಸಿಕೊಂಡಿತು. ಈ ಜ್ಞಾನವಿಕಾಸದ ಹಾದಿಯಲ್ಲಿ ನಿರಂತರ ಸಂಚಾರವು ಮಹತ್ತರ ಪಾತ್ರವನ್ನು ವಹಿಸಿತು. ಒಂದು ನಗರದಲ್ಲಿ ಹುಟ್ಟಿದ ಆಲೋಚನೆ ಮತ್ತೊಂದು ನಗರದಲ್ಲಿ ಪರಿಪಕ್ವವಾಯಿತು; ಒಂದು ದೇಶದಲ್ಲಿ ರೂಪುಗೊಂಡ ಗ್ರಂಥ ಮತ್ತೊಂದು ದೇಶದಲ್ಲಿ ವ್ಯಾಖ್ಯಾನಿಸಲ್ಪಟ್ಟು ಹೊಸ ರೂಪ ತಾಳಿತು. ಹೀಗೆ ಇಸ್ಲಾಮಿಕ್ ಜಗತ್ತು ಒಂದೇ ಬೌದ್ಧಿಕ ವಲಯವಾಗಿ ಕಾರ್ಯನಿರ್ವಹಿಸಿತು.

ವಿಶ್ವನಕ್ಷೆ

ಭೂಗೋಳಶಾಸ್ತ್ರ ಮತ್ತು ಪ್ರವಾಸ ಸಾಹಿತ್ಯದಲ್ಲಿ ಅಲ್-ಇದ್ರೀಸಿ (1100-1166) ಅವರ ಕೊಡುಗೆ ವಿಶ್ವಮಟ್ಟದಲ್ಲಿ ವಿಶೇಷವಾಗಿ ಸ್ಮರಣೀಯವಾಗಿದೆ. ಸಿಸಿಲಿಯ ಇಮ್ಮಡಿ ರೋಜರ್ ನ ಅರಮನೆಯ ಆಶ್ರಯದಲ್ಲಿ ಅವರು ರಚಿಸಿದ ವಿಶ್ವನಕ್ಷೆ ಮತ್ತು ಭೌಗೋಳಿಕ ಗ್ರಂಥವು (ನುಝ್‌ಹತುಲ್ ಮುಶ್ತಾಖ್ ಫೀ ಇಶ್ತಿರಾಖಿಲ್ ಆಫಾಖ್) ಮಧ್ಯಯುಗದ ಅತ್ಯಂತ ನಿಖರ ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಅದು ಕೇವಲ ಕಲ್ಪನೆಯ ನಕ್ಷೆಯಾಗಿರಲಿಲ್ಲ; ವ್ಯಾಪಾರಿಗಳು, ನಾವಿಕರು ಮತ್ತು ಯಾತ್ರಿಕರಿಂದ ಸಂಗ್ರಹಿಸಿದ ಮಾಹಿತಿಯ ವೈಜ್ಞಾನಿಕ ಸಂಗ್ರಹವಾಗಿತ್ತು. ಅದೇ ರೀತಿ ಇಬ್ನ್ ಬತ್ತುತಾ (1304-1369) ಅವರ ಸುಮಾರು ಮೂರು ದಶಕಗಳ ವಿಶ್ವಸಂಚಾರ ಮಾನವ ಇತಿಹಾಸದ ಅತ್ಯಂತ ವಿಸ್ತಾರವಾದ ವೈಯಕ್ತಿಕ ಪ್ರವಾಸಗಳಲ್ಲಿ ಒಂದಾಗಿದೆ. ಉತ್ತರ ಆಫ್ರಿಕಾದ ಮೊರೊಕ್ಕೊದಿಂದ ಆರಂಭಿಸಿ ಈಜಿಪ್ಟ್, ಹಿಜಾಝ್ (ಮಕ್ಕಾ ಮತ್ತು ಮದೀನಾ), ಸಿರಿಯಾ ಮತ್ತು ಇರಾಕ್, ಪರ್ಷಿಯಾ (ಇರಾನ್), ಯಮನ್ ಮತ್ತು ಒಮಾನ್, ಪೂರ್ವ ಆಫ್ರಿಕಾ, ಅನಾತೋಲಿಯಾ (ಇಂದಿನ ಟರ್ಕಿ), ಮಧ್ಯ ಏಷ್ಯಾ, ಭಾರತ, ಮಾಲ್ಡೀವ್ಸ್, ಶ್ರೀಲಂಕಾ, ಬಾಂಗ್ಲಾದೇಶ, ಆಗ್ನೇಯ ಏಷ್ಯಾ, ಚೀನಾ ತನಕ ಅವರು ಸಂಚರಿಸಿ ವಿವಿಧ ಸಮಾಜಗಳ ರಾಜಕೀಯ, ನ್ಯಾಯವ್ಯವಸ್ಥೆ, ಶಿಕ್ಷಣ, ಧಾರ್ಮಿಕ ಆಚರಣೆ ಮತ್ತು ದೈನಂದಿನ ಜೀವನದ ಅಮೂಲ್ಯ ಚಿತ್ರಣಗಳನ್ನು ‘ರಿಹ್ಲ ಇಬ್ನ್ ಬತೂತ’ ಎಂಬ ಹೆಸರಿನಲ್ಲಿ ದಾಖಲಿಸಿದರು. ಅವರ ಪ್ರವಾಸ ವಿವರಣೆಯು ಮಧ್ಯಯುಗದ ಜಾಗತಿಕ ನಾಗರಿಕತೆಯ ಜೀವಂತ ದಾಖಲೆಯೆಂಬಂತಿದೆ.

ನಾಗರಿಕತೆಯ ಏಳುಬೀಳುಗಳ ಚರಿತ್ರೆಯಲ್ಲಿ ಸಮುದ್ರವು ಯಾವತ್ತಿಗೂ ಒಂದು ವಿಚಿತ್ರ ವಿರೋಧಾಭಾಸವನ್ನು ಹೊಂದಿದೆ. ಒಂದು ಕಡೆ ಅದು ಭೂಭಾಗಗಳನ್ನು ಬೇರ್ಪಡಿಸಿದರೆ, ಮತ್ತೊಂದು ಕಡೆ ಅವುಗಳನ್ನು ಸಂಪರ್ಕಿಸುವ ಮಹಾಮಾರ್ಗವಾಗಿ ಕೆಲಸ ಮಾಡಿದೆ. ಸಮುದ್ರವನ್ನು ಭಯದಿಂದ ನೋಡಿದ ಜನಾಂಗಗಳು ತಮ್ಮ ಗಡಿಗಳೊಳಗೆ ಸೀಮಿತವಾದರೆ, ಅದನ್ನು ಅವಕಾಶವೆಂದು ಕಂಡ ಸಮುದಾಯಗಳು ಇತಿಹಾಸವನ್ನು ನಿರೂಪಿಸಿದವು. ಮುಸ್ಲಿಮರು ಈ ಎರಡನೆಯ ವಿಭಾಗಕ್ಕೆ ಸೇರಿದವರು. ಅರಬ್ ನಾವಿಕರು ಋತುಮಾರುತಗಳ ಚಲನವಲನವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಗಾಳಿಯ ದಿಕ್ಕುಗಳನ್ನು ಅರ್ಥಮಾಡಿಕೊಂಡು, ನಕ್ಷತ್ರಗಳ ನೆರವಿನಿಂದ ಸಮುದ್ರದ ಮಧ್ಯದಲ್ಲಿ ದಿಕ್ಕನ್ನು ನಿರ್ಧರಿಸುವ ಅದ್ಭುತ ಪರಿಣತಿಯನ್ನು ಗಳಿಸಿದರು. ಏಳನೆಯ ಶತಮಾನದಿಂದಲೇ ಅರಬ್ಬೀ ಸಮುದ್ರ, ಕೆಂಪು ಸಮುದ್ರ, ಪರ್ಷಿಯನ್ ಕೊಲ್ಲಿ ಮತ್ತು ಹಿಂದೂ ಮಹಾಸಾಗರಗಳಲ್ಲಿ ಅವರ ನೌಕಾಯಾನವು ಚರಿತ್ರೆಯನ್ನು ಬರೆಯಿತು. ಬಸರಾ, ಸೀರಾಫ್, ಅದನ್, ಮಸ್ಕತ್, ಜಿದ್ದಾ ಮತ್ತು ಮಲಬಾರ್ ತೀರದ ಬಂದರುಗಳು ಜಾಗತಿಕ ವ್ಯಾಪಾರದ ಪ್ರಮುಖ ಕೇಂದ್ರಗಳಾದವು. 8ನೇ ಶತಮಾನದಿಂದ 15 ನೇ ಶತಮಾನದವರೆಗೆ ಈ ಬಂದರುಗಳ ಜಾಲವು ಹಿಂದೂ ಮಹಾಸಾಗರದ ವ್ಯಾಪಾರವನ್ನು ನಿಯಂತ್ರಿಸುವಲ್ಲಿ ಮಹತ್ತರ ಪಾತ್ರ ವಹಿಸಿತು. ಈ ಬಂದರುಗಳಿಂದ ಹೊರಟ ಹಡಗುಗಳು ಪೂರ್ವ ಆಫ್ರಿಕಾದ ಕರಾವಳಿಯಿಂದ ಚೀನಾದ ‘ಗ್ವಾಂಗ್‌ಝೌ’ (Guangzhou) ವರೆಗೆ ನಿರಂತರ ಸಂಚಾರ ನಡೆಸುತ್ತಿದ್ದವು. ಈ ಸಾಗರಪಥವು ‘ಸಮುದ್ರದ ರೇಷ್ಮೆ ಮಾರ್ಗ’ (Maritime silk road) ಎಂದೇ ಪ್ರಸಿದ್ಧವಾಗಿದೆ.

ನುಝ್‌ಹತುಲ್ ಮುಶ್ತಾಖ್ ಫೀ ಇಶ್ತಿರಾಖಿಲ್ ಆಫಾಖ್

ಮುಸ್ಲಿಮರ ಈ ನೌಕಾಯಾನದ ಬೆಳವಣಿಗೆಯಲ್ಲಿ ಅಬ್ಬಾಸಿದ್ ಆಡಳಿತ ಕಾಲಘಟ್ಟವು ವಿಶೇಷ ಮಹತ್ವ ಪಡೆದಿದೆ. ಬಾಗ್ದಾದ್ ನಗರವು ಜ್ಞಾನರಾಜಧಾನಿಯಾಗಿ ಬೆಳೆಯುತ್ತಿದ್ದಾಗ, ಅದರ ಬಂದರು ಪಟ್ಟಣವಾದ ಬಸರಾ ವಿಶ್ವ ವ್ಯಾಪಾರದ ಕೇಂದ್ರವಾಗಿ ಮಾರ್ಪಟ್ಟಿತು. ಅಲ್ಲಿಂದ ಹೊರಟ ವ್ಯಾಪಾರಿಗಳು ಭಾರತೀಯ ಕರಾವಳಿ, ಶ್ರೀಲಂಕಾ, ಸುಮಾತ್ರಾ, ಜಾವಾ, ಮಲಯಾ ಮತ್ತು ಚೀನಾದೊಂದಿಗೆ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರು. ಮಸಾಲೆ ಪದಾರ್ಥಗಳು, ರೇಷ್ಮೆ, ಅಮೂಲ್ಯ ರತ್ನಗಳು, ಸುಗಂಧದ್ರವ್ಯಗಳು, ಔಷಧೀಯ ಸಸ್ಯಗಳು ಮತ್ತು ವೈವಿಧ್ಯಮಯ ಉತ್ಪನ್ನಗಳೊಂದಿಗೆ ಅವರು ವೈಜ್ಞಾನಿಕ ಮಾಹಿತಿಯನ್ನೂ, ಭೌಗೋಳಿಕ ಜ್ಞಾನವನ್ನೂ ಮತ್ತು ಸಾಂಸ್ಕೃತಿಕ ಅನುಭವಗಳನ್ನೂ ಹೊತ್ತು ತರುತ್ತಿದ್ದರು. ಈ ಸಂಚಾರಗಳ ದಾಖಲೆಗಳು ಅರಬ್ ಭೂಗೋಳಶಾಸ್ತ್ರದ ಬೆಳವಣಿಗೆಗೆ ಮಹತ್ತರವಾದ ಆಧಾರಗಳಾದವು.

ವ್ಯಾಪಾರದ ಉದ್ದೇಶದಿಂದ ಸಮುದ್ರಕ್ಕಿಳಿದ ಮುಸ್ಲಿಮ್ ನಾವಿಕರು ಖಗೋಳಶಾಸ್ತ್ರವನ್ನು ನೌಕಾಯಾನದೊಂದಿಗೆ ಸಮನ್ವಯಗೊಳಿಸಿ ದಿಕ್ಕು ನಿರ್ಣಯದ ವಿಧಾನಗಳನ್ನು ಪರಿಷ್ಕರಿಸಿದರು. ನಕ್ಷತ್ರಗಳು, ಸೂರ್ಯ- ಚಂದ್ರರ ಸ್ಥಾನಗಳು ಮತ್ತು ಋತುಮಾರುತಗಳ (Monsoon winds) ಚಲನವಲನವನ್ನು ಆಧರಿಸಿ ಸುರಕ್ಷಿತ ಸಮುದ್ರ ಮಾರ್ಗಗಳನ್ನು ಕಂಡುಹಿಡಿದರು. ಗ್ರೀಕರ ಕೊಡುಗೆಯೆನ್ನಲಾಗುವ ಪ್ರಾಚೀನ ಆಸ್ಟ್ರೋಲಾಬ್‌ (Astrolabe) ನ್ನು ಮತ್ತಷ್ಟು ನಿಖರಗೊಳಿಸಿ ಸಮುದ್ರಯಾನಕ್ಕೆ ಹೊಂದುವಂತೆ ಬಳಸಿದರು. ಈ ಜ್ಞಾನವು ನಂತರ ಯೂರೋಪಿನ ನೌಕಾಯಾನ ಮತ್ತು ಭೌಗೋಳಿಕ ಅನ್ವೇಷಣೆಗಳ ಬೆಳವಣಿಗೆಗೂ ಮಹತ್ವದ ಪ್ರಭಾವ ಬೀರಿತು ಎಂದು ಜಾರ್ಜ್ ಎಫ್. ಹೌರಾನಿ, ಡೇವಿಡ್ ಎ. ಕಿಂಗ್, ಜಾರ್ಜ್ ಸಲೀಬಾ ಮತ್ತು ಇತರ ವಿಜ್ಞಾನ ಇತಿಹಾಸಕಾರರ ಅಧ್ಯಯನಗಳು ಸೂಚಿಸುತ್ತವೆ. ಹದಿನಾಲ್ಕನೇ ಶತಮಾನದಲ್ಲಿ ನಡೆದ ಯೂರೋಪಿನ ನವೋದಯಕ್ಕೆ ಮಧ್ಯಯುಗೀನ ಮುಸ್ಲಿಮ್ ವಿಜ್ಞಾನಿಗಳು, ತತ್ವಜ್ಞಾನಿಗಳು ಮತ್ತು ಚಿಂತಕರ ಕೊಡುಗೆ ಸಾಕಷ್ಟಿದೆ ಎಂಬುದನ್ನು ರಾಬರ್ಟ್ ಬ್ರಿಫಾಲ್ಟ್ (Making of Humanity) ಮತ್ತು ಫಿಲಿಪ್ ಕೆ. ಹಿಟ್ಟೀ (History of Arabs) ತಮ್ಮ ಕೃತಿಗಳಲ್ಲಿ ಉಲ್ಲೇಖಿಸುತ್ತಾರೆ.

Muruj al-Dhahab wa Ma’adin al-Jawhar
(Al-Masudi)

ಈ ಹಿನ್ನೆಲೆಯಲ್ಲೇ ಸುಲೈಮಾನ್ ಅಲ್ ತಾಜಿರ್ (ಕೃತಿ: ಅಖ್‌ಬಾರ್ ಅಸ್ಸೀನ್ ವಲ್ ಹಿಂದ್), ಅಬೂ ಝೈದ್ ಅಲ್ ಸೀರಾಫಿ, ಅಲ್ ಮಸುಊದಿ (ಕೃತಿ: ಮುರೂಜು ಝಹಬ್ ವ ಮ‌ಆದಿನುಲ್ ಜೌಹರ್) , ಅಹ್ಮದ್ ಇಬ್ನ್ ಮಾಜಿದ್ (ಕೃತಿ: ಕಿತಾಬುಲ್ ಫವಾಇದ್ ಫೀ ಉಸೂಲಿ ಇಲ್ಮಿಲ್ ಬಹ್ರಿ ವಲ್ ಖವಾಇದ್) ರಂತಹ ನಾವಿಕರು ಮತ್ತು ಯಾತ್ರಿಕರ ಕೃತಿಗಳು ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅವರ ಬರಹಗಳಲ್ಲಿ ಮಾರ್ಗನಕ್ಷೆಗಳ ಜೊತೆಗೆ ವಿವಿಧ ದೇಶಗಳ ಸಾಮಾಜಿಕ ಜೀವನ, ಆರ್ಥಿಕ ವ್ಯವಸ್ಥೆ, ಧಾರ್ಮಿಕ ಆಚರಣೆಗಳು, ನೈಸರ್ಗಿಕ ಸಂಪತ್ತು ಮತ್ತು ಜನರ ಜೀವನಶೈಲಿಗಳ ಸೂಕ್ಷ್ಮ ಚಿತ್ರಣಗಳೂ ಉಲ್ಲೇಖಿತವಾಗಿವೆ. ಇಂತಹ ಪ್ರವಾಸ ಸಾಹಿತ್ಯವು ಇತಿಹಾಸ, ಭೂಗೋಳ, ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರಗಳಿಗೆ ಅಮೂಲ್ಯ ಮೂಲಸಾಧನಗಳಾಯಿತು. ನಂತರದ ಯೂರೋಪಿಯನ್ ಅನ್ವೇಷಕರೂ ಅರಬ್ ಭೌಗೋಳಿಕ ಜ್ಞಾನದಿಂದ ವಿವಿಧ ರೀತಿಯಲ್ಲಿ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಅನೇಕ ಸಂಶೋಧಕರು ಒಪ್ಪಿಕೊಂಡಿದ್ದಾರೆ.

ಈ ಬೌದ್ಧಿಕ ಸಂಚಾರಕ್ಕೆ ಸಮಾನಾಂತರವಾಗಿ ಇನ್ನೊಂದು ಮಹತ್ತರವಾದ ಪ್ರವಾಹವೂ ಮುಸ್ಲಿಮ್ ಸಮುದಾಯವನ್ನು ಬೆಳಗುತ್ತಿತ್ತು. ಅದು ಸೂಫಿಗಳ, ಔಲಿಯಾಗಳ ಮತ್ತು ಧರ್ಮಪ್ರಚಾರಕರ ಸಂಚಾರವಾಗಿತ್ತು. ಅವರ ಕೈಯಲ್ಲಿ ಖಡ್ಗವಿರಲಿಲ್ಲ; ಅವರ ತುಟಿಗಳಲ್ಲಿ ಪ್ರೀತಿಯ ಭಾಷೆ ಇತ್ತು. ಅವರ ಬಳಿ ಅಧಿಕಾರದ ಬಲವಿರಲಿಲ್ಲ; ಆದರೆ ಆಕರ್ಷಕ ವ್ಯಕ್ತಿತ್ವದ ಪ್ರಭಾವವಿತ್ತು. ಅವರ ಗುರಿ ಸಾಮ್ರಾಜ್ಯಗಳ ನಿರ್ಮಾಣವಾಗಿರಲಿಲ್ಲ; ಮಾನವನ ಅಂತರಂಗದ ಉದ್ಧಾರವಾಗಿತ್ತು. ಅವರು ಭಾಷೆಯ ಗೋಡೆಗಳನ್ನು ಮೀರಿ ಪ್ರೀತಿಯ ಭಾಷೆಯಲ್ಲಿ ಮಾತನಾಡಿದರು; ಜನಾಂಗದ ಗಡಿಗಳನ್ನು ಮೀರಿ ಮಾನವೀಯತೆಯ ಬಾಂಧವ್ಯವನ್ನು ಗಟ್ಟಿಗೊಳಿಸಿದರು; ಸ್ಥಳೀಯ ಸಂಸ್ಕೃತಿಯನ್ನು ಧ್ವಂಸಗೊಳಿಸುವ ಬದಲು ಅದರಲ್ಲಿದ್ದ ಶ್ರೇಷ್ಠ ಮೌಲ್ಯಗಳನ್ನು ಗೌರವಿಸಿ, ನೈತಿಕತೆ ಮತ್ತು ದೈವಭಕ್ತಿಯೊಂದಿಗೆ ಸಂಯೋಜಿಸಿದರು.

Kitab al-Fawa’id fi Usul Ilm al-Bahr wa al-Qawa’id (Ahmad ibn Majid)

ಸೂಫಿಗಳ ಸಂಚಾರವು ಧರ್ಮದ ವ್ಯಾಪ್ತಿಯನ್ನು ವಿಸ್ತರಿಸುವ ಕಾರ್ಯ (ಮಿಶನರಿ) ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಜಗತ್ತಿನ ಯಾವ ಪ್ರದೇಶದ ಸೂಫೀ ದರವೇಶಿಗಳ ಖಾನಖಾಹಗಳನ್ನು, ಕುಟೀರಗಳನ್ನು ಅಥವಾ ಅವರು ನೆಲೆಸುತ್ತಿದ್ದ ಪ್ರದೇಶಗಳನ್ನು ಅಧ್ಯಯನ ಮಾಡಿದರೆ ಈ ಅಭಿಪ್ರಾಯವು ಸತ್ಯಕ್ಕೆ ದೂರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಸೂಫೀಗಳ ಸಂಚಾರವು ವಿಭಿನ್ನ ಸಂಸ್ಕೃತಿಗಳ ನಡುವೆ ಸೇತುವೆಯನ್ನು ನಿರ್ಮಿಸಿದೆ. ಅವರು ಸ್ಥಳೀಯ ಭಾಷೆಗಳನ್ನು ಕಲಿತು, ಜನರ ಜೀವನಶೈಲಿಯನ್ನು ಅರ್ಥಮಾಡಿಕೊಂಡು, ಅವರ ನೋವು- ನಲಿವುಗಳಲ್ಲಿ ಪಾಲ್ಗೊಂಡರು. ಜನರ ಸಂಸ್ಕೃತಿಯನ್ನು ತಿರಸ್ಕರಿಸುವ ಬದಲು ಅದರಲ್ಲಿದ್ದ ಉತ್ತಮ ಮೌಲ್ಯಗಳನ್ನು ಅಪ್ಪಿಕೊಂಡರು. ಪರಿಣಾಮವಾಗಿ ಇಸ್ಲಾಮಿನ ವಿಶ್ವಮಾನವ ಸಂದೇಶವು ವಿವಿಧ ದೇಶಗಳಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಸಹಜವಾಗಿ ಬೆರೆಯಿತು. ಇದೇ ಕಾರಣದಿಂದ ಏಷ್ಯಾ ಮತ್ತು ಆಫ್ರಿಕಾದ ಅನೇಕ ಪ್ರದೇಶಗಳಲ್ಲಿ ಇಸ್ಲಾಮಿನ ಸಾಂಸ್ಕೃತಿಕ ಬೇರುಗಳು ಸೂಫಿಗಳ ಪಾದಸ್ಪರ್ಶದಿಂದ ಆಳವಾಗಿ ಬೇರೂರಿದವು.

ಭಾರತೀಯ ತೀರಪ್ರದೇಶಗಳಲ್ಲಿ ಇದೇ ರೀತಿಯ ಅವಸ್ಥೆಯನ್ನು ಕಾಣಬಹುದು. ಅರಬ್ ವ್ಯಾಪಾರಿಗಳು ಮತ್ತು ಸೂಫಿಗಳು ಶತಮಾನಗಳ ಹಿಂದೆಯೇ ಮಲಬಾರ್ ಹಾಗೂ ಕರಾವಳಿ ಕರ್ನಾಟಕವನ್ನು ತಲಪಿದರು. ಅವರು ವ್ಯಾಪಾರದ ಜೊತೆಗೆ ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ನೈತಿಕತೆಯ ಆದರ್ಶವನ್ನೂ ತಂದರು. ಅವರ ವ್ಯವಹಾರದಲ್ಲಿದ್ದ ಸತ್ಯನಿಷ್ಠೆ ಹಾಗೂ ವರ್ತನೆಯಲ್ಲಿದ್ದ ವಿಧೇಯ ಗುಣವು ಸ್ಥಳೀಯ ಜನರಲ್ಲಿ ಗೌರವವನ್ನು ಹುಟ್ಟಿಸಿತು. ಅನೇಕ ಕಡೆಗಳಲ್ಲಿ ಮಸ್ಜಿದುಗಳು ಕೇವಲ ಪ್ರಾರ್ಥನಾ ಕೇಂದ್ರಗಳಾಗಿರದೆ, ಶಿಕ್ಷಣ, ಸಾಮಾಜಿಕ ಸಹಕಾರ ಮತ್ತು ಸಾಂಸ್ಕೃತಿಕ ಕೊಡುಕೊಳೆಯ ಕೇಂದ್ರಗಳಾಗಿದ್ದವು. ಈ ಸಂಬಂಧವು ಇಂದಿಗೂ ಭಾರತದ ಸಾಮಾಜಿಕ ರಂಗದಲ್ಲಿ ಎದ್ದು ಕಾಣುತ್ತದೆ.

ಈ ಎಲ್ಲ ಉದಾಹರಣೆಗಳು ಒಂದು ಮೂಲಭೂತ ತತ್ವವನ್ನು ಸ್ಪಷ್ಟಪಡಿಸುತ್ತವೆ. ಜ್ಞಾನವು ಸ್ಥಾವರ ಸ್ಥಿತಿಯಲ್ಲಿ ಕ್ಷೀಣಿಸುತ್ತದೆ; ಸಂಚಾರಿ ಸ್ಥಿತಿಯಲ್ಲಿ ವಿಕಸಿಸುತ್ತದೆ. ಒಂದು ಸಂಸ್ಕೃತಿ ತನ್ನೊಳಗೆ ಮಾತ್ರ ಸೀಮಿತವಾದಾಗ ಅದು ನಿಧಾನವಾಗಿ ಕುಗ್ಗುತ್ತದೆ. ಆದರೆ ಅದು ಇತರ ಸಂಸ್ಕೃತಿಗಳೊಂದಿಗೆ ಮುಕ್ತ ಸಂವಾದ ನಡೆಸಿದಾಗ ತನ್ನ ಮೂಲತತ್ವವನ್ನು ಕಳೆದುಕೊಳ್ಳದೆ ಹೊಸ ಸೃಜನಶೀಲತೆಯನ್ನು ಪಡೆಯುತ್ತದೆ. ಇಸ್ಲಾಮಿಕ್ ನಾಗರಿಕತೆಯ ಸುವರ್ಣಯುಗದ ವೈಭವಕ್ಕೆ ಕಾರಣ ಇದೇ. ಅದು ತನ್ನ ಆತ್ಮವಿಶ್ವಾಸವನ್ನು ಕಾಪಾಡಿಕೊಂಡೇ ಇತರ ನಾಗರಿಕತೆಗಳಿಂದ ಕಲಿಯಿತು, ಅವುಗಳನ್ನು ವಿಮರ್ಶಿಸಿತು ಮತ್ತು ಹೊಸರೂಪ ನೀಡಿ ಅವುಗಳನ್ನು ಪುನರುದ್ಧರಿಸಿತು.

~ ಡಾ. ಸಿ.ಎಂ. ಹನೀಫ್ ಅಮ್ಜದಿ


ಡಾ. ಸಿ.ಎಂ. ಹನೀಫ್ ಅಮ್ಜದಿ

ಅನಲ್‌ ಹಖ್

ಅನಲ್ ಹಖ್ ಎಂದು ಸಾಧಾರಣವಾಗಿ ಹೇಳುತ್ತಾ ಓಡಾಡುತ್ತಿದ್ದ ಮನ್ಸೂರ್ ಅಲ್ ಹಲ್ಲಾಜ್ ರನ್ನು ಸರ್ಕಾರ, ಸರ್ಕಾರಕ್ಕೆ ಸೇರಿದ್ದ ಮತ ಪಂಡಿತರು ಕೊಂದು ಕತ್ತು ಸೀಳಿ ನಜ್ಜುಗುಜ್ಜು ಮಾಡಿ ದಹಿಸಿ ಯೂಫ್ರಟಿಸ್‌ ನದಿಗೆಸೆದಾಗ ಕ್ಷೋಭೆಗೊಳಗಾದ ಮಹಾ ಸಮುದ್ರದಂತೆ ಯೂಫ್ರಟಿಸ್‌ ಅನಲ್ ಹಖ್! ಅನಲ್ ಹಖ್! ಎಂದು ಅತಿ ಗಂಭೀರತೆಯಿಂದ ಘರ್ಜಿಸಿತು ಎಂಬುದು ಐತಿಹ್ಯ. ಆ ಗರ್ಜನೆಯ ವಿಚಾರ ಅತಿಶಯೋಕ್ತಿಯಿಂದ ಕೂಡಿದ್ದಾದರೂ ಮನ್ಸೂರ್ ರ ಜೀವನ ಚರಿತ್ರೆ ಕ್ರೋಧ ಹುಟ್ಟಿಸುವಂತದ್ದೆ. ಇಂತಹ ಅನೇಕ ಘಟನೆಗಳು ಪ್ರತಿಯೊಂದು ಧರ್ಮದ ಹೆಸರಲ್ಲಿ ಲೋಕ ಚರಿತ್ರೆಯಲ್ಲಿದೆ. ಇದರಲ್ಲಿ ಮನ್ಸೂರರ ತಪ್ಪು ಏನು ಎಂದು ನೋಡಿದರೆ ಅವರು ಅನಲ್ ಹಖ್! ಅನಲ್ ಹಖ್! ಎಂದು ಹೇಳುತ್ತಿದ್ದರಂತೆ! ಅನಲ್ ಹಖ್ ಎಂಬುದರ ಅರ್ಥ ‘ನಾನು ಸತ್ಯ!’ ಎಂದಾಗಿದೆ. ಅಹಂ ಬ್ರಹ್ಮಾಸ್ಮಿ ಎಂದು. ದೇವರ ಪರ್ಯಾಯಗಳಲ್ಲಿ ಒಂದು. ಸಂಕ್ಷಿಪ್ತವಾಗಿ ಮನ್ಸೂರ್ ಹೇಳಿದರು; ಮನ್ಸೂರ್ ದೇವರೆಂದು.‌ ಹಾಗೆ ಸ್ಪಷ್ಟವಾಗಿ ಹೇಳಿದರೋ ಏನೋ. ಹೇಳಿದರೂ ಅದರಲ್ಲೇನಿದೆ ತಪ್ಪು? ಒಬ್ಬ ಹುಚ್ಚನ ವಚನಗಳು ಎಂದು ಬಿಟ್ಟು ಬಿಡಬಹುದಿತ್ತು.‌ ಆದರೆ, ಮನ್ಸೂರ್ ಹುಚ್ಚನಾಗಿರಲಿಲ್ಲ. ಆಧ್ಯಾತ್ಮಿಕವಾದಿಯಾದ ಓರ್ವ ಸೂಫಿ. ಮಹಾ ಸಮುದ್ರದ ಒಂದು ಹನಿ, “ನಾನು ಮಹಾ ಸಮುದ್ರ!” ಎಂದು ಹೇಳುವಂತೆಯೋ, ಮಹಾಶಿಲೆಯ ಒಂದು ಕಣ; ‘ನಾನು ಮಹಾಶಿಲೆ’ ಎಂದು ಹೇಳುವಂತೆಯೋ ಆಗಿರಬಹುದು ಮನ್ಸೂರ್ ಹೇಳಿದ್ದು. ಎಲ್ಲವೂ ಈಶ್ವರನ ಅಂಶವಾದುದರಿಂದ…
ಅದೇನಿದ್ದರೂ ರಕ್ತಸಿಕ್ತವಾದ ಆ ಘಟನೆ ಹೀಗಿದೆ…
ವಿಚಾರಗಳ ಬೆಳವಣಿಗೆಯಲ್ಲಿ ಕೋಪೋದ್ರಿಕ್ತರಾಗುವ ಕಾಲಘಟ್ಟ: ಹಿಜ್ರದ ನಂತರದ ನಾಲ್ಕನೇ ಶತಮಾನದ ಆರಂಭ. ಜ್ಞಾನಿಗಳು, ಮುನಿ ಪುಂಗವರು, ಕವಿಗಳು, ಕಲಾವಿದರು ಸ್ವೇಚ್ಛಾಧಿಪತ್ಯದ ಮುಂದೆ ವಿನೀತರಾಗಿ ನಿಂತಿದ್ದರು. ಕೇವಲ ಹೊಗಳುಭಟರು! ಪರ್ಷಿಯಾ ರಾಷ್ಟ್ರ ದ್ರಾಕ್ಷಾ ರಸದ ಮಾಧುರ್ಯದಲ್ಲೂ, ಪನ್ನೀರು ಸುಮಗಳ ಸೌರಭ್ಯದಲ್ಲೂ, ಸುಂದರಿಗಳ ಆಲಿಂಗನದಲ್ಲೂ ಮುಳುಗಿ ಹೋಗಿತ್ತು. ಆಗ ಮನ್ಸೂರ್ ಹಲ್ಲಾಜ್ ಸಂಜಾತರಾಗುತ್ತಾರೆ. ಅಂತಃಸತ್ವವಿಲ್ಲದ ಆರ್ಭಟಗಳಲ್ಲಿ ಲಯಿಸಿ ಹೋಗಿದ್ದ ರಾಜಧಾನಿಯಿಂದ ಬಹುದೂರವಿದ್ದ ಪುಟ್ಟ ಗ್ರಾಮವಾದ ‘ಬೈಸಾ’ದಲ್ಲಿ, ಅದರ ಪ್ರಶಾಂತತೆಯಲ್ಲಿ ಮನ್ಸೂರ್ ಹಲ್ಲಾಜ್ ಬೆಳೆದರು.
ಮನ್ಸೂರ್ ಹಲ್ಲಾಜ್…ವಿಚಾರಶೀಲನಾಗಿದ್ದ ಆ ಬಾಲಕ ಯುವತ್ವದ ಗಾಂಭೀರ್ಯವನ್ನು ತಲುಪಿದರು. ಸಮೀಪದ ಪಟ್ಟಣವಾದ ‘ತುಷ್ತಾರಿ’ಯದ ಮಹಾವಿದ್ಯಾಲಯ ಸೇರಿದರು. ಆಧ್ಯಾತ್ಮಿಕ, ಧರ್ಮ, ಸಮಾಜ, ಸಾಹಿತ್ಯ ಹೀಗೆ ಎಲ್ಲಾ ಕೋನಗಳಲ್ಲೂ ಅತ್ಯಮೂಲ್ಯ ಪಾಂಡಿತ್ಯ ಪಡೆದರು. ವಿದ್ವಾಂಸರಾದ ಮನ್ಸೂರ್ ಅಸಂತೃಪ್ತಿಯೊಂದಿಗೆ ಹೊರಗೆ ಬಂದರು.‌ ಅಜ್ಞಾತವಾದ ಒಂದು ತೊಳಲಾಟ, ಅರಿತದ್ದ್ಯಾವುದೂ ಅರಿಯಬೇಕಾದದ್ದಲ್ಲ; ತೀರದ ಆತ್ಮದಾಹ; ಅರಿಯುವ, ಹತ್ತಿರವಾಗುವ ತೀವ್ರ ವಾಂಛೆ. ದಾರಿ ನಿಶ್ಚಯವಿಲ್ಲದ ಇರುಳಲ್ಲಿ ಅಲೆದಾಟ. ದಿಗ್ಭ್ರಾಂತರಾಗಿ ಮನ್ಸೂರ್ ಶೋಧಿಸಿದರು; ಬೆಳಕಿನ ಒಂದು ಕಿರಣ, ಅದಕ್ಕಾಗಿ ಅಂಡಲೆದರು.‌ ಓರ್ವ ಫಕೀರನಂತೆ ವಿಷಾದದೊಂದಿಗೆ ಓಡಾಡಿದರು. ಹೀಗಿರಲು ಒಮ್ಮೆ ‘ಉಮರ್ ಇಬ್ನ್ ಉಸ್ಮಾನ್ ರನ್ನು ಭೇಟಿಯಾದರು. ಅವರ ಆಶ್ರಮ ಮರುಭೂಮಿಯ ಹರಿತ ಪ್ರದೇಶವೆಂದು ಮನ್ಸೂರ್ ಗೆ ತೋರಿತು.‌ ಗುರು ನವ್ಯಪಥವೊಂದನ್ನು ತೋರಿಸಿಕೊಟ್ಟರು: ಸೂಫಿಸಂ.
ಆಧ್ಯಾತ್ಮಿಕ ವಿಜ್ಞಾನದ ಉಜ್ವಲ ಪ್ರಭಾವ! ಅದರತ್ತ ಮನ್ಸೂರ್ ನಾಗಾಲೋಟವಿಟ್ಟರು. ಯುಗಗಳ ಉತ್ಕಂಠದೊಂದಿಗೆ, ಬಿರುಗಾಳಿಯ ಆವೇಗದಲ್ಲಿ, ಭೌತಿಕತೆಯ ಗಡಿ ದಾಟಿದರು.‌ ಅಕ್ಷಯವೂ, ಅನಶ್ವರೂ ಆದ ಮಹಾ ಬೆಳಕಿನಲ್ಲಿ ಮೇಘ ಬಿಂದುವಿನಂತೆ ಮನ್ಸೂರ್ ವಿಸ್ಮೃತರಾದರು. ಧ್ಯಾನ ಮಗ್ನರಾಗಿದ್ದ ಮನ್ಸೂರ್ ಆವೇಶ ಭರಿತರಾಗಿ ಕೂಗಿದರು: ‘ಅನಲ್ ಹಖ್! ಅನಲ್ ಹಖ್!
ಅನಶ್ವರವಾದ ಸತ್ಯ, ಸೃಷ್ಟಿಯೂ ಸೃಷ್ಟಿಕರ್ತನೂ ನಾನೇ! ನಾನೇ…
ಅನಶ್ವರವಾದ ಸತ್ಯ! ಆಶ್ರಮ ಒಂದು ಕ್ಷಣ ನಡುಗಿತು. ಗುರು ಶಿಷ್ಯರು ಬೆಚ್ಚಿದರು. ಎಂಥಾ ಘಟನೆ! ಶತಮಾನಗಳ ಮನುಷ್ಯ ವಿಶ್ವಾಸ. ಅದರ ಮೇಲ್ಛಾವಣಿಯನ್ನೇ ಧ್ವಂಸಗೊಳಿಸುವ ಭಯಂಕರ ಘೋಷಣೆ; ಅನಲ್ ಹಖ್…ಮನ್ಸೂರ್ ವಿಸ್ಮೃತ ಎಂದು ಅವರು ಸಮಾಧಾನಪಟ್ಟುಕೊಂಡರು. ಆದರೂ, ಕೊನೆಗೆ ಮಹಾಗುರು ಉಪದೇಶಿಸಿದರು:
“ಮನ್ಸೂರ್, ಇದು ಸರಿಯಲ್ಲ; ಏಕಭಾವದಲ್ಲಿ ಸೃಷ್ಟಿಯನ್ನು ಹಾಗೂ ಸೃಷ್ಟಿಕರ್ತನನ್ನು ಭಾವಿಸುವುದು ಸರಿಯಲ್ಲ. ಇದು ಸಾಮೂಹಿಕ ನಿಯಮಕ್ಕೆ ವಿರುದ್ಧವಾಗಿದೆ. ಶರೀಅತ್ ಉಲ್ಲಂಘಿಸಿದರೆ ಮರಣ ದಂಡನೆ ಎಂಬುದು ನಿಮಗೆ ತಿಳಿದಿದೆ ತಾನೇ?”
ಮರಣ ದಂಡನೆ!
ಮನ್ಸೂರ್ ಅವೆಲ್ಲವನ್ನು ಮರೆತು ಮತ್ತೆ ಮತ್ತೆ ಆವೇಶಭರಿತರಾಗುವುದು ವಾಡಿಕೆಯಾಯಿತು. ಸಾಮೂಹಿಕ ನಿಯಮ ಆಶ್ರಮವನ್ನು ನಾಶ ಮಾಡುತ್ತದೆ! ಭೀತಿಯಿಂದ ಗುರು ಮನ್ಸೂರರನ್ನು ಹೊರ ತಳ್ಳಿದರು. ಜನರು ಕುಹಕವಾಡಿದರು. ಸಾಂಕ್ರಾಮಿಕ ರೋಗ ಬಾಧಿತನೆನ್ನುವಂತೆ ಮನ್ಸೂರರನ್ನು ಕಲ್ಲೆಸೆದು ಓಡಿಸಿದರು. ಬಸರಿನಲ್ಲಿ ನಿಲ್ಲಲಾಗದ ಸ್ಥಿತಿ ಉದ್ಭವಿಸಿತು.‌ ಎಲ್ಲೂ ಆಶ್ರಯ ಸಿಗದೆ ಮನ್ಸೂರ್ ಮತ್ತೆ ಅಲೆಮಾರಿಯಾದರು. ಹಲವು ಯತಿ ವರ್ಯರ ಆಶ್ರಮಗಳನ್ನು ಹತ್ತಿಳಿದರು. ಕೊನೆಗೆ ಬಾಗ್ದಾದ್ ತಲುಪಿದರು. ಸುಪ್ರಸಿದ್ಧ ಸೂಫಿ, ಮಹಾ ವಿದ್ವಾಂಸರಾದ ಹಝ್ರತ್ ಜುನೈದ್ ಮಂದಸ್ಮಿತರಾಗಿ ಬಹಿಷ್ಕೃತರಾಗಿದ್ದ ಮನ್ಸೂರ್ ಗೆ ಅಭಯ ನೀಡಿದರು. ಆದರೆ, ಅಭಿಪ್ರಾಯಗಳನ್ನು ಒಳಗೆ ಇಟ್ಟುಕೊಳ್ಳಬೇಕೆಂಬ ಉಪದೇಶವನ್ನೂ ನೀಡಿದರು.
‘ಸ್ವಾತಂತ್ರ್ಯದ ಶುದ್ಧವಾಯು ಉಸಿರಾಡುವ ಒಂದಿಂಚು ಸ್ಥಳವೂ ಭೂಮಿಯಲ್ಲಿಲ್ಲವೇ?’ ಎಂದು ಮನ್ಸೂರ್ ಚಕಿತರಾದರು.‌ ಆದರೂ, ಅಲ್ಲಿಯೇ ವಾಸ ಹೂಡಿದರು. ಅಲ್ಲೂ ಅವರು ಆವೇಶಭರಿತರಾಗುವುದು ಸಾಮಾನ್ಯವಾಯಿತು. ಹಝ್ರತ್ ಜುನೈದ್ ನೋವಿನಿಂದ ಮತ್ತೊಂದು ಉಪದೇಶ ನೀಡಿದರು:
“ಮನ್ಸೂರ್! ಎಚ್ಚರಿಕೆಯಿಂದಿರಿ. ದುರಿತ ದಿನವೊಂದು ಹತ್ತಿರವಾಗುತ್ತಿದೆ. ನಿಮ್ಮ ಬಿಸಿರಕ್ತದಿಂದ ಯೂಫ್ರಟಿಸ್‌ ನದಿ ತೀರದ ಬಿಳಿ ಮರಳು ಕುಂಕುಮದಿಂದ ಅಲಂಕರಿಸಲ್ಪಡುವ ಅಂತಿಮ ದಿನ.‌ ಎಚ್ಚರವಾಗಿರಿ…”
“ಆ ಅಂತಿಮ ದಿನ!” ಮನ್ಸೂರ್ ಹೇಳಿದರು: ‘ಅದರಲ್ಲಿ‌ ನನಗೆ ಭಯವಿಲ್ಲ. ಆದರೆ, ಅಂದು ನೀವು ಈ ಮಹೋನ್ನತ ಪದವಿಯಿಂದ ಕೆಳಗಿಳಿಯುವಿರಿ. ಈ ಸನ್ಯಾಸಿ ಧಿರಿಸನ್ನು ಕಿತ್ತೆಸೆದು ತಾವು ಕೇವಲ ನ್ಯಾಯಾಧೀಶರಾಗುವಿರಿ. ತಾವು ಎಚ್ಚರವಾಗಿರಿ.‌ ಅನಲ್ ಹಖ್!”
ಚರಿತ್ರೆ ಹೀಗೆ ಮುಂದುವರಿಯುತ್ತದೆ.
ಘಟನಾತ್ಮಕವಾದ ಕಾಲದ ಪುಟಗಳು ಮತ್ತೆ ಮಗುಚಿದವು. ಮನ್ಸೂರ್ ಹೊರಗೆ ಬಂದರು.‌
ದೇವಾಲಯಗಳು, ಪೇಟೆ, ಮೈದಾನಗಳು ಮನ್ಸೂರರ ಆವೇಶಭರಿತ ಪ್ರಭಾಷಣಗಳಿಂದ ಪ್ರಸನ್ನಗೊಂಡಿತು. ನವೀನ ಆದರ್ಶ ಜನರನ್ನು ಹಠಾತ್ ಆಕರ್ಷಿಸಿತು. ಚಿಂತನಾ ಲೋಕದಲ್ಲಿ ಬಿರುಗಾಳಿ ಎದ್ದಿತು. ಅದರಲ್ಲಿ ಕ್ರಾಂತಿಯ ನಗಾರಿ ಶಬ್ಧ ಕೇಳಿಸಿತು. ಪಂಡಿತ ವರ್ಗ ದಿಗ್ಮೂಢರಾದರು. ಪ್ರಸಿದ್ಧಿಯ ತುತ್ತತುದಿಗೇರಿದ ಮನ್ಸೂರರ ಸುತ್ತ ಗೂಢಾಲೋಚನೆಯ ಕುಣಿಕೆಗಳು ಬಿಗಿದವು. ಧರ್ಮದ್ರೋಹಿ, ನಾಸ್ತಿಕ ಮೊದಲಾದ ವದಂತಿಗಳು ಹರಡಿದವು. ಮನ್ಸೂರರನ್ನು ವಧಿಸುವ ನಿಗೂಢ ಪ್ರಯತ್ನಗಳು ನಡೆದವು.‌ ಆ ಕಾಲದಲ್ಲಿ ಮನ್ಸೂರ್ ಪರ್ಯಟನೆ ಮಾಡಿದರು, ಗ್ರಂಥಗಳನ್ನು ಬರೆದರು. ಹಲವು ಸಂಕಟಗಳನ್ನು ಎದುರಿಸಿ ಐದು ವರ್ಷಗಳಲ್ಲಿ ನಲ್ವತ್ತೇಳು ಗ್ರಂಥಗಳನ್ನು ರಚಿಸಿದರು. ಆದರೆ, ಗ್ರಂಥಗಳ ಪ್ರಸರಣವನ್ನು ಸರಕಾರ ನಿಷೇಧಿಸಿದ ಕಾರಣ ಸಾರ್ವತ್ರಿಕ ಪ್ರಚಾರವೂ ಲಭಿಸಿತು.‌ ಕೆಲವು ಕವಿಗಳು, ಚಿಂತಕರು ಮನ್ಸೂರರನ್ನು ಹೊಗಳದಿರಲಿಲ್ಲ. ಮಹಾಕವಿ, ಅತುಲ್ಯ ತತ್ವಜ್ಞಾನಿ ಹೀಗೆ ಮನ್ಸೂರರ ಕೀರ್ತಿ ದೇಶವ್ಯಾಪಿಯಾಗಿ ಹರಡಿತು.‌ ಸುಲ್ತಾನನ ಬಲಹೀನ ಸರ್ಕಾರ ಇದರಿಂದ ಭೀತಿಗೊಂಡಿತು. ಜತೆಗೆ ಪುರೋಹಿತರ ವಿರೋಧವೂ ಬಲವಾಯಿತು.‌ ಹೀಗೆ ಅಧಿಕಾರ ಮತ್ತು ಆಚಾರ ಮನ್ಸೂರರ ವೈರಿಗಳಾಗಿ ಬದಲಾಯಿತು. ಅವರು ಮನ್ಸೂರರಿಗೆ ಸ್ಥಾನಮಾನಗಳ ವಾಗ್ದಾನ ಮಾಡಿದರು. ಪಂಡಿತ ವರ್ಗ ತಂತ್ರಪೂರ್ವಕ ಮನ್ಸೂರರಿಗೆ ವಾದ ಪ್ರತಿವಾದಕ್ಕೆ ಆಹ್ವಾನ ನೀಡಿತು.‌ ಬಾಗ್ದಾದಿನ ಪಂಡಿತ ವರ್ಗವನ್ನು ಅಭಿಸಂಭೋದನೆ ಮಾಡಿ ಮನ್ಸೂರ್ ಹೇಳಿದರು:
“ಮನ್ಸೂರನ ವಿಚಾರವನ್ನು ಕೋಟೆಯಲ್ಲಿ ಬಂಧಿಸಲು ಸಾಧ್ಯವಿಲ್ಲ.‌ ಅದು ವಿಶ್ವವ್ಯಾಪಿಯಾಗಿ, ಆಕಾಶವನ್ನು ಬೇಧಿಸಿ, ಲೋಕ ಲೋಕಗಳನ್ನು ದಾಟಿ ಹಾರಿ ಹೋಗುತ್ತದೆ. ನನ್ನ ಆದರ್ಶಗಳು, ನನ್ನ ವಿಶ್ವಾಸಗಳು ಯಾವುದೂ ನಿಮ್ಮ ಆಜ್ಞಾಪಾಲನೆಗೆ ನಿಲ್ಲುವಂತದ್ದಲ್ಲ.‌ ನನ್ನನ್ನು ನಿಮ್ಮ ಕೂಟಕ್ಕೆ ಸೇರಿಸಬೇಕೆಂದೇನಿಲ್ಲ”
ಸಾವಿರಾರು ಪಂಡಿತರ ರುಧಿರ ನಯನಗಳು ಮನ್ಸೂರರ ಕಡೆಗೆ ತಿರುಗಿದವು.‌ ಅದುಮಿಡಲಾಗದ ಸಿಟ್ಟಿನಿಂದ ಪಂಡಿತವರ್ಯರೊಬ್ಬರು ಸಭೆಯಲ್ಲಿ ಎದ್ದು ನಿಂತರು.‌ ಮನ್ಸೂರರನ್ನು ಕೆಳಗೆಳೆದು ಅತಿ ಕಠಿಣ ಪ್ರಹಾರ ನಡೆಸಿದರು. ಪ್ರಜ್ಞೆ ತಪ್ಪಿ ಬಿದ್ದಿದ್ದ ಮನ್ಸೂರರನ್ನು ಹದ್ದುಗಳಂತೆ ಸುತ್ತುವರಿದರು.‌ ಆಗಲೇ ಮತ ಪಂಡಿತರು ಒಕ್ಕೊರಲ ಅಭಿಪ್ರಾಯವಾಗಿ ಫತ್ವಾವೊಂದನ್ನು ಸಿದ್ಧಪಡಿಸಿದರು.‌
“ಮನ್ಸೂರ್, ಶರೀಅತ್ ಉಲ್ಲಂಘಿಸಿದ ಕಾಫರ್ ಆಗಿರುವರು. ತನ್ಮೂಲ ಮರಣ ದಂಡನೆಗೆ ಅರ್ಹರಾಗಿದ್ದಾರೆ…”
ಸಾವಿರಾರು ಪಂಡಿತರು ಯಾವುದೇ ವಿರೋಧವಿಲ್ಲದೆ ಅದರಲ್ಲಿ ಸಹಿ ಹಾಕಿದರು. ಬಾಗ್ದಾದಿನ ಮಂತ್ರಿಯಾಗಿದ್ದ ಹಮೀದ್ ಇಬ್ನ್ ಅಬ್ಬಾಸ್ ಆರೋಪಪಟ್ಟಿಗೆ ಸಹಮತ ವ್ಯಕ್ತಪಡಿಸಿದರು.‌ ಸುಲ್ತಾನ್ ಮುಖ್ತದಿರ್ ಬಿಲ್ಲಾ ಮಾತ್ರ ಅದಕ್ಕೆ ಸಹಿ ಹಾಕಲಿಲ್ಲ.‌ ಹಝ್ರತ್ ಜುನೈದ್ ಸಹಿ ಹಾಕದ ಪತ್ರಕ್ಕೆ ತಾನು ಸಹಿ ಹಾಕುವುದಿಲ್ಲವೆಂದು ಸುಲ್ತಾನ್ ಹಠ ಹಿಡಿದರು. ಹೀಗೆ ಪಂಡಿತರ ನಿಯೋಗ ಹಝ್ರತ್ ಜುನೈದ್ ರ ಆಶ್ರಮಕ್ಕೆ ಹೋಯಿತು.‌ ಆರು ಬಾರಿ ಅವರು ನಿರಾಶೆಯಿಂದ ಮರಳಿದರು. ಹೌದು ಅಥವಾ ಇಲ್ಲ ಎಂಬ ಖಚಿತವಾದ ಅಭಿಪ್ರಾಯ ಹೇಳುವಂತೆ ಖಲೀಫ ಆಗ್ರಹಿಸಿದರು. ಕ್ಲೇಶಭರಿತರಾದ ಅವರು ದರ್ವೇಶಿ ವೇಷಭೂಷಣಗಳನ್ನು ಕಿತ್ತೆಸೆದರು.‌ ನ್ಯಾಯಾಧೀಶನ ವೇಷ ತೊಟ್ಟರು. ಫತ್ವಾ ಪತ್ರಕ್ಕೆ ಸಹಿ ಹಾಕಿದರು.‌ ಅವರ ಕಣ್ಣುಗಳಲ್ಲಿ ಬಾಷ್ಪ ತುಂಬಿತು. ನಡುಗುವ ಕೈಗಳೊಂದಿಗೆ ಹಝ್ರತ್ ಜುನೈದ್ ಅದರಲ್ಲಿ ಬರೆದರು;
“ಸಾಮೂಹಿಕ ನಿಯಮದ ಅನುಸಾರ ಮನ್ಸೂರ್ ವಧೆ ಶಿಕ್ಷೆಗೆ ಅರ್ಹರು. ಆದರೆ, ಸತ್ಯವನ್ನು ಆಧಾರವಾಗಿಟ್ಟುಕೊಂಡರೆ ಎಲ್ಲವನ್ನು ಅರಿಯುವವನು ಲೋಕ ನಿಯಂತ್ರಕ ಮಾತ್ರ”
ಸಾಮೂಹಿಕ ನಿಯಮವಲ್ಲವೇ ಪ್ರಬಲ!
ಮನ್ಸೂರರ ಕೈಗೆ ಕೋಳ ಹಾಕಿ, ಭಟರ ಬೆಂಗಾವಲಿನಲ್ಲಿ ಯೂಫ್ರಟಿಸ್‌ ನದಿ ತೀರಕ್ಕೆ ಕರೆದೊಯ್ದರು. ಮರದ ಕುರ್ಚಿಯೊಂದಕ್ಕೆ ಅವರನ್ನು ಕಟ್ಟಿ ಹಾಕಿ ನಾನಾ ವಿಧದಲ್ಲಿ ಪೀಡಿಸಿದರು.‌ ಕೊನೆಗೆ ಅವರನ್ನು ಜೈಲಿಗಟ್ಟಿದರು. ಕಂಬಿಗಳ ಹಿಂದೆ ನಿಂತು ಮನ್ಸೂರ್ ಭಾಷಣ ಮಾಡುತ್ತಿದ್ದರು. ದಿನಗಳು ಕಳೆದಂತೆ ಜೈಲಿನ ಮುಂದೆ ಜನಸಾಗರವೇ ನೆರೆಯಲಾರಂಭಿಸಿತು. ಮನ್ಸೂರ್ ನಿರ್ದೋಷಿ ಎಂಬ ಕೆಲವು ಪ್ರಸ್ತಾವನೆಗಳು ಎಲ್ಲೆಲ್ಲೂ ಹರಿದಾಡಿತು. ಉಲಮಾಗಳು ಜೈಲಿಗೆ ಭೇಟಿ ನೀಡಿದರು. ಸುದ್ದಿ ತಿಳಿದ ಸುಲ್ತಾನ್ ಆಜ್ಞೆ ಹೊರಬಿತ್ತು:
“ಮನ್ಸೂರರನ್ನು ಇನ್ನು ಮುಂದೆಯೂ ಜೈಲಿನಲ್ಲಿಟ್ಟಿಕೊಂಡರೆ ರಾಷ್ಟ್ರದಲ್ಲಿ ಕ್ಷೋಭೆ ಉಂಟಾಗಬಹುದು. ಜನ ಕ್ಷೇಮಕ್ಕಾಗಿ ಅವರನ್ನು ವಧಿಸುವುದು ಅನಿವಾರ್ಯ. ಅನಲ್ ಹಖ್ ಎಂದು ಗದ್ದಲ ಎಬ್ಬಿಸಿದರೆ ಬೆನ್ನಿಗೆ ಛಡಿಯೇಟು ನೀಡಿರಿ. ಈ ದಿನವೇ ಅವರನ್ನು ವಧಿಸಬೇಕು…”
ಹಿಜ್ರ 304 ದ್ಸುಲ್ ಖಅದ್ 29…ಚರಿತ್ರೆ ಮಹಾಕಂಪನದೊಂದಿಗೆ ನೆನೆಯುವ ದಿನ.
ಅಂದು ಮನ್ಸೂರರನ್ನು ಹೊರಗೆ ಕರೆದುಕೊಂಡು ಬಂದರು.‌ ಕಿಕ್ಕಿರಿದು ನೆರೆದ ಜನಸಂದಣಿಯ ಮುಂದೆ ಮರಣ ಶಾಸನ ಓದಲಾಯಿತು. ಮನ್ಸೂರ್ ಮುಗುಳ್ನಕ್ಕರು. ಆಹ್ಲಾದಭರಿತರಾಗಿ ಅವರು ಕೂಗಿ ಹೇಳಿದರು:
‘ಅನಲ್ ಹಖ್! ಅನಲ್ ಹಖ್!’
ತಕ್ಷಣವೇ ಮುನ್ನೂರಕ್ಕೂ ಹೆಚ್ಚು ಛಡಿಯೇಟುಗಳು ಅವರ ಬೆನ್ನಿಗೆ ಬಿದ್ದವು. ಸುಡು ಬಿಸಿಲಲ್ಲಿ ಅವರನ್ನು ನಗ್ನಗೊಳಿಸಿ ನಿಲ್ಲಿಸಲಾಯಿತು. ಬೆನ್ನು ಇಂಚಿಂಚಾಗಿ ಊದಿಕೊಂಡು ಒಡೆದು ರಕ್ತ ಹರಿಯತೊಡಗಿತು. ಜನರ ಹೇಷಾರವ ಮುಗಿಲು ಮುಟ್ಟಿತು. ಮನ್ಸೂರರನ್ನು ಗಲ್ಲುಕಂಬದತ್ತ ಕರೆದೊಯ್ದರು.
“ಧೀರರಿಗೆ ಪಾಲಿಗೆ ಗಲ್ಲುಕಂಬದತ್ತ ಕರೆದೊಯ್ಯುವುದೆಂದರೆ ಸ್ವರ್ಗದ ಕವಾಟವನ್ನು ತೆರೆಯುವುದೆಂದರ್ಥ” ಮನ್ಸೂರ್ ಗಲ್ಲುಕಂಬವನ್ನು ಎದೆಗೆ ಅವುಚಿಕೊಂಡರು. ಕೊನೆಯ ಪ್ರಾರ್ಥನೆ ನಿರ್ವಹಿಸಿದರು. ಅಷ್ಟರಲ್ಲಿ ಕಲ್ಲುಗಳು ಬೀಸಿ ಬಂದು ಅವರ ದೇಹವನ್ನು ಹೊಕ್ಕವು. ಮನ್ಸೂರ್ ಮಂದಹಾಸ ಬೀರಿದರಷ್ಟೇ.‌
ಮತಾಂಧ ಜನರು ಗೊಣಗಿದರು:
“ಅವನ ಅಂಗಾಂಗಗಳನ್ನು ಛೇದಿಸಬೇಕು”
ಕೊಲೆಗಾರರು ಆಜ್ಞೆ ಅನುಸರಿಸಿದರು.
“ಭೌತಿಕವಾದ ನನ್ನ ಕೈಗಳನ್ನು ತುಂಡರಿಸುವುದು ಬಹಳ ಸುಲಭ” ಮನ್ಸೂರ್ ನುಡಿದರು.
ನಂತರ ಅವರ ಕಾಲುಗಳನ್ನು ಕತ್ತರಿಸಲಾಯಿತು. ನೆಲದ ಮೇಲೆ ನಿಂತಿದ್ದ ರಕ್ತಕ್ಕೆ ಮುಖ ಕೆಳಗಾಗಿ ಬಿದ್ದರು. ಹಂತಕರು ಅವರನ್ನು ಹಿಡಿದು‌ ನಿಲ್ಲಿಸಿದರು.
“ಬಿಳುಚಿದ ನನ್ನ ಮುಖವನ್ನು ಲೋಕ ನೋಡದಿರಲಿ.”
ನಿರ್ಭಯವಾದ ಆ ಎರಡು ಕಣ್ಣುಗಳು ಉಜ್ವಲವಾಗಿ ಪ್ರಕಾಶಿಸಿದವು. ತಕ್ಷಣವೇ ಆ ಕಣ್ಣುಗಳನ್ನು ಕೀಳಲಾಯಿತು.‌
ಜನಸ್ತೋಮ ಕೂಗಿತು:
“ಆ ಭ್ರಷ್ಟನ ನಾಲಗೆ ಕತ್ತರಿಸಿ!”
“ಅಲ್ಪ ಸಹನೆಯಿರಲಿ” ಮನ್ಸೂರ್ ಬೇಡಿದರು.
“ಕೊನೆಯದಾಗಿ ನನಗೆ ಹೇಳಲಿಕ್ಕಿದೆ…”
ಇಲ್ಲದ ಕಣ್ಣುಗಳಲ್ಲಿ ಆಕಾಶದ ಕಡೆಗೆ ನೋಡಿದರು. ಮನ್ಸೂರ್ ಕೊನೆಯದಾಗಿ ಪ್ರಾರ್ಥಿಸಿದರು.
“ನನ್ನ ಆಶೆಯ ಪರಮ ಲಕ್ಷ್ಯವೇ, ನನ್ನ ಹಿಂಸಿಸಿರುವವರ ಆನಂದ ಸೌಭಾಗ್ಯಗಳನ್ನು ಹಿಂಪಡೆಯದಿರು! ಅನಲ್ ಹಖ್”
ಅಷ್ಟರಲ್ಲಿ ಓರ್ವ ವೃದ್ಧ ಮಹಿಳೆ ಮುಂದೆ ಬಂದು; ಮನ್ಸೂರರ ನಾಲಗೆ ಹಿಡಿದು ಎಳೆದು ಕ್ಯಾಕರಿಸಿ ಮುಖಕ್ಕೆ ಉಗಿದರು. ನಂತರ ನಾಲಗೆ ಕತ್ತರಿಸಿದರು.
ಅಂತಿಮವಾಗಿ ಮನ್ಸೂರರ ಗಂಭೀರವಾದ ಶಿರಸ್ಸು ದೇಹದಿಂದ ಬೇರ್ಪಟ್ಟು, ರಕ್ತ ಮಿಶ್ರಿತ ಮಣ್ಣಿನ ಮೇಲೆ ಉರುಳಿಬಿತ್ತು. ಆದರೂ ಜನಸಾಮಾನ್ಯರ ಕ್ರೋಧ ಶಮನವಾಗಲಿಲ್ಲ.
ಐತಿಹ್ಯ ಹೀಗೆ ದಾಖಲಿಸುತ್ತದೆ:
“…ಅವರು ಮನ್‌ಸೂರನ್ನು ಸಾವಿರಾರು ತುಂಡುಗಳಾಗಿ ಕತ್ತರಿಸಿದರು. ಒಂದು ದೊಡ್ಡ ಚಿತೆಯನ್ನು ರಚಿಸಿ, ಎಲ್ಲವನ್ನೂ ಅದರಲ್ಲಿ ಎಸೆದು ಸುಟ್ಟುಹಾಕಿದರು. ಆ ಅಗ್ನಿಜ್ವಾಲೆಯನ್ನು ನೋಡುತ್ತ ಅವರು ಅಟ್ಟಹಾಸಗೈದರು. ಕೊನೆಗೆ ಆ ಭಸ್ಮವನ್ನು ನದಿಯಲ್ಲಿ ಚೆಲ್ಲಿದರು. ಹೀಗೆ ತಮ್ಮ ಮಹಾಕ್ರೋಧವನ್ನು ತಣಿಸಿಕೊಂಡರು.”
“ಆದರೆ!
ಅಷ್ಟರವರೆಗೆ ಶಾಂತವಾಗಿ ಹರಿಯುತ್ತಿದ್ದ ಯೂಫ್ರಟೀಸ್ ನದಿ ಏಕಾಏಕಿ ಅಶಾಂತಗೊಂಡು ರಕ್ತಮಯವಾಯಿತು. ಪ್ರಕೃತಿ ನಿಶ್ಚಲಗೊಂಡಿತು. ಅಷ್ಟರಲ್ಲಿ ಗರ್ಜನೆಯೊಂದಿಗೆ ಪರ್ವತಾಕಾರದ ಅಲೆಗಳು ಎದ್ದವು. ತೀವ್ರ ಕೋಪದಿಂದ ಉಕ್ಕಿದ ಮಹಾಸಮುದ್ರದಂತೆ, ಸಮಸ್ತ ಬ್ರಹ್ಮಾಂಡವನ್ನೇ ನಡುಗಿಸುವಷ್ಟು ಭಯಂಕರವಾಗಿ, ಅತ್ಯುದ್ರಿಕ್ತವಾಗಿ, ಅತ್ಯಂತ ಗಂಭೀರವಾಗಿ ಯೂಫ್ರಟೀಸ್ ಗರ್ಜಿಸಿತು:
“ಅನಲ್‌ ಹಖ್! ಅನಲ್‌ ಹಖ್!”

— ವೈಕಂ ಮುಹಮ್ಮದ್ ಬಶೀರ್
ಕನ್ನಡ : ಸ್ವಾಲಿಹ್ ತೋಡಾರ್


ಅನರ್ಘ್ಯ ನಿಮಿಷ

ನೀನು ನಾನು ಎಂಬ ವಾಸ್ತವದಿಂದ ಕೊನೆಗೆ ನೀನು ಮಾತ್ರ ಉಳಿಯಲಿರುವೆ.
ನೀನು ಮಾತ್ರ.
ಯಾತ್ರೆ ಹೊರಡುವ ಸಮಯ ಹತ್ತಿರವಾಗಿದೆ.
ಇನ್ನೇನು ಸುರಿಯಲಿರುವ ಕಾರ್ಮೋಡದಂತೆ ಈ ನೆನಪುಗಳು ಎದೆಯೊಡೆವ ವೇದನೆಯಾಗಿ ನಿಂತಿದೆ.
ಇದು ನನ್ನ ಮಿತ್ರರಿಗೆ ತಿಳಿದಿಲ್ಲ. ಅವರು ಹಿಂದಿನಂತೆಯೇ ನನ್ನ ಬಳಿ ಬರುತ್ತಾರೆ. ತಮಾಷೆ ಕಥೆಗಳನ್ನು ಹೇಳುವಂತೆ ಒತ್ತಾಯಿಸುತ್ತಾರೆ.
ಅವರಿಗಾಗಿ ಏನೇನೋ ಜೋಕುಗಳನ್ನು ಹೇಳುತ್ತೇನೆ. ಅವರೊಂದಿಗೆ ಸೇರಿ ನಗುತ್ತೇನೆ.‌ ನನ್ನ ನಗುವಿನೊಳಗಿನ ದುಃಖದ ಮೊರೆತ ಅವರಿಗೆ ಕೇಳಿಸುವುದಿಲ್ಲ.
ನಾನಿಲ್ಲಿ ಶೂನ್ಯದಲ್ಲಿ ಲಯಿಸಲಿದ್ದೇನೆ.
ಶೂನ್ಯದಲ್ಲಿ!
ಇದು ಅಪ್ರಧಾನವಾದ ಘಟನೆ ಅಥವಾ ಅತಿ ಪ್ರಧಾನವಾದುದೋ? ಏನೋ-ಆಯಿತು-ಅದಿಲ್ಲಿ ಮುಖ್ಯವೇ? ಏನೇ ಆಗಲಿ; ಈ ಎರಡರ‌ ನಡುವಿನ ಅನರ್ಘ್ಯ ನಿಮಿಷವೇ ನಾನು. ವರ್ತಮಾನ ಕಾಲದ ಅಂಚಿನಲ್ಲಿ ನಿಂತಿರುವ ಭೂತಕಾಲ.
ನಿನ್ನೆಗೆ ಸಂಪೂರ್ಣವಾಗಿ ಲಯಿಸಿ ಹೋಗಲಿರುವ ಇಂದು. ಯುಗಗಳು…ಮನ್ವಂತರಗಳು…ಅನಂತವಾದ…ಶಾಶ್ವತವಾದ ನಿನ್ನೆಗೆ!
ವಿದಾಯ ಹೇಳುತ್ತಿರುವೆ.
ಮುಗಿಯಿತು- ಇಲ್ಲ, ಇನ್ನೇನು ಮುಗಿಯಲಿದೆ.
ಮುಂದಿನ ಕ್ಷಣದಿಂದ ನಾನು ವಿಸ್ಮೃತಿಗೆ ಸೇರಿದ ಕೋಟ್ಯಂತರ ನಿನ್ನೆಗೆ!
ಪರಿಚಿತರಾದ ಹಲವರು ಹೊರಟು ಹೋಗಿದ್ದಾರೆ.
ಅವರು ಎಲ್ಲಿಗೆ ಹೋಗಿರಬಹುದು?
ನನಗೂ ಮೊದಲೇ ಹೋದ ಅನಂತಕೋಟಿ!
ನೆನಪುಗಳು ಅಕಾರಣ ಆರಂಭವನ್ನು ಸ್ಪರ್ಶಿಸುತ್ತಿದೆ.
ಆರಂಭ..!
ನಾನು ಅನಂತತೆಯ, ಅದ್ಭುತ ರಹಸ್ಯದ, ಅಜ್ಞಾತತೆಯ ಎಲ್ಲೆಯನ್ನು ಸೇರಿದಂತೆ! ಅದೋ ಒಂದು ಗರ್ಜನೆ, ನಾದಬ್ರಹ್ಮದ ಅನಂತವಾದ ವಿಭ್ರಮೆ!
ಗಮನಿಸುತ್ತಿದ್ದೀರಾ?
ಇಷ್ಟು ಕಾಲ ನೀನು ನನ್ನನ್ನು ಅಪಾರವಾದ ಕಾರುಣ್ಯದೊಂದಿಗೆ ಪ್ರೀತಿಸಿದೆ. ಸಹಿಸಿದೆ. ನನ್ನ ಕುರಿತು ನಿನಗೆಲ್ಲವೂ ತಿಳಿದಿದೆ. ಸೌಲಭ್ಯಾನುಸಾರ ಮುಂದೆಯೂ ಓದಬಹುದಾದ ಲಘುಗ್ರಂಥ ನಾನು!
ನೀನೀಗಲೂ ನನಗೆ ಮಹಾರಹಸ್ಯ!
ಕಾಲವಿಷ್ಟಾದರೂ ನಿನ್ನ ಕುರಿತು ಅರಿಯಲು ನನ್ನಿಂದ ಸಾಧ್ಯವಾಗಿಲ್ಲ. ಅರಿಯದೆಯೇ ನಿನ್ನನ್ನು ಪ್ರೀತಿಸಿದೆ. ಅರಿಯದೆಯೇ ನಿನ್ನನ್ನು ದ್ವೇಷಿಸಿದೆ. ತಿಳಿದೂ ನಿನ್ನನ್ನು ನೋಯಿಸಿದೆನೇ?
ಆದರೂ ಆದರೂ ನೀನು ನನ್ನ ಪ್ರೀತಿಸಿದೆ. ಸಹಿಸಿಕೊಂಡೆ. ನಿನ್ನೊಂದಿಗೆ ನಾನು ಹಲವು ರಹಸ್ಯಗಳನ್ನು ಹೇಳಿಕೊಂಡಿದ್ದೇನೆ. ನನ್ನೆಲ್ಲಾ ಪ್ರವೃತ್ತಿಗಳು ನಿನಗೆ ತಿಳಿದಿದೆ. ನನ್ನನ್ನು ನೀನು ಹಾಸ್ಯಾಸ್ಪದಗೊಳಿಸುವೆಯಾ?
ನಾನು ಹೊರಡುತ್ತಿದ್ದೇನೆ.
ನಿನ್ನನ್ನು ಪ್ರೀತಿಸುತ್ತಾ ಎಂಬುದು ತಿಳಿ.
ನೀನು ನಾನು ಪರಸ್ಪರ ಪರಿಚಯಿಸಿಕೊಂಡದ್ದು ಯಾವಾಗ? ಪರಿಚಯವಾಗಿದೆಯೇ? ನಾನು ಪ್ರಯತ್ನಿಸಿದೆ. ಕೊನೆಗೆ ಪ್ರೀತಿಸುವುದನ್ನಷ್ಟೇ ಕಲಿತೆ. ಇಲ್ಲ. ಸರಿಯಾಗಿ ಅರಿತುಕೊಂಡೇ ಇಲ್ಲ. ಅಜ್ಞಾನ. ಗಂಭೀರವಾಗಿ ಅರಿತಿಲ್ಲ.
ಬಂದಂತೆಯೇ ಒಂಟಿಯಾಗಿಯೇ ಹೋಗುತ್ತಿರುವೆ.
ಯಾತ್ರೆಯ ಸಮಯ ತೀರಾ ಹತ್ತಿರವಾಗುತ್ತಿದೆ‌.
ನೀನು ನಾನು ಎಂಬ ವಾಸ್ತವದಿಂದ ಕೊನೆಗೆ ನೀನು ಮಾತ್ರ ಉಳಿಯಲಿರುವೆ.
ನೀನು ಮಾತ್ರ!

– ವೈಕಂ ಮುಹಮ್ಮದ್ ಬಶೀರ್
ಕನ್ನಡ : ಸ್ವಾಲಿಹ್ ತೋಡಾರ್


ಹುಡುಕಾಟದ ಹಾದಿಯಲ್ಲಿ; ರೂಮಿ- ತಬ್ರೇಝ್ ಭೇಟಿ

ಮೌಲಾನಾ ಜಲಾಲುದ್ದೀನ್ ರೂಮಿ ಒಮ್ಮೆ ಕೆಲವು ಗ್ರಂಥಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದರು. ಆಗ ಬಹಳ ವಿಲಕ್ಷಣವಾದ ಮುಖಚಹರೆಯ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದರು. ರೂಮಿಯವರು ಅದು ಯಾರೋ ಸಾಮಾನ್ಯ ವ್ಯಕ್ತಿ ಎಂದು ತಿಳಿದು ಅವರತ್ತ ಗಮನವನ್ನು ಕೊಡದೆ ತಮ್ಮ ಅಧ್ಯಯನದಲ್ಲಿ ಮಗ್ನರಾಗಿದ್ದರು. ಆಗಂತುಕ ವ್ಯಕ್ತಿಯು ಮೌಲಾನಾ ರೂಮಿಯವರ ಮುಂದಿದ್ದ ಗ್ರಂಥರಾಶಿಯನ್ನು ನೋಡಿ, ‘ಐನ್ ಚೀಸ್ತ್’ – ಏನಿದು? ಎಂದು ಕೇಳಿದರು. ರೂಮಿಯವರು ಅವರನ್ನು ಆಪಾದಮಸ್ತಕವಾಗಿ ನೋಡುತ್ತ, ‘ಐನ್ ಆನ್ ಇಲ್ಮ್ ಅಸ್ತ್ ಕೆ ತೂ ನಮೀ ದಾನಮ್’- ಇದು ತಮಗೆ ತಿಳಿಯದ ಜ್ಞಾನ ಎಂದು ಹೇಳಿದರು. ಬಂದ ವ್ಯಕ್ತಿಯು ಈ ಉತ್ತರವನ್ನು ಕೇಳಿ ನಸುನಕ್ಕು ಸುಮ್ಮನಾದರು. ತುಸು ಹೊತ್ತಿನ ಬಳಿಕ ಮೌಲಾನಾ ರೂಮಿಯವರು ತಾವು ಅಧ್ಯಯನ ಮಾಡುತ್ತಿದ್ದ ಬೃಹತ್ ಗ್ರಂಥಗಳನ್ನು ಬಿಟ್ಟು ಯಾವುದೋ ಕಾರ್ಯದ ನಿಮಿತ್ತ ಹೊರಗೆ ಹೋದರು. ಆಗಂತುಕ ವ್ಯಕ್ತಿ ಅಲ್ಲಿದ್ದ ಅಮೂಲ್ಯ ಗ್ರಂಥಗಳನ್ನೆಲ್ಲ ಹತ್ತಿರದಲ್ಲೇ ಇದ್ದ ಕೊಳಕ್ಕೆ ಹಾಕಿಬಿಟ್ಟರು. ಆ ಬೆಲೆಬಾಳುವ ಗ್ರಂಥಗಳೆಲ್ಲ ನೀರಿನಲ್ಲಿ ಮುಳುಗಿದವು. ಸ್ವಲ್ಪ ಹೊತ್ತಿನ ನಂತರ ತಿರುಗಿ ಬಂದ ರೂಮಿಯವರು ತನ್ನ ಗ್ರಂಥಗಳು ಅವುಗಳನ್ನಿಟ್ಟಿದ್ದ ಸ್ಥಳದಲ್ಲಿ ಕಾಣದಿದ್ದನ್ನು ನೋಡಿ ‘ಇಲ್ಲಿದ್ದ ಗ್ರಂಥಗಳೆಲ್ಲಿ’ ಎಂದು ಕೇಳಿದರು. ಅವರು ಕೊಳದತ್ತ ಬೊಟ್ಟು ಮಾಡಿದರು. ಆ ಕಾಲದಲ್ಲಿ ಗ್ರಂಥಗಳನ್ನು ಕೈಯಾರೆ ಬರೆಯಲಾಗುತ್ತಿತ್ತು. ಸಾವಿರಾರು ಪುಟಗಳ ಒಂದು ಗ್ರಂಥವನ್ನು ರಚಿಸಬೇಕೆಂದರೆ ಬಹಳವೇ ಸಮಯ ಮತ್ತು ಶ್ರಮ ಬೇಕಾಗಿತ್ತು. ಅವುಗಳ ಮೇಲೆ ನೀರು ಬಿದ್ದರೆ ಅವು ಹಾಳಾಗುತ್ತಿದ್ದವು. ಹಾಗಿರುವಾಗ ಅಷ್ಟೊಂದು ಬೆಲೆಬಾಳುವ ಬೃಹತ್ ಪ್ರಮಾಣದ ಗ್ರಂಥಗಳನ್ನು ಹೀಗೆ ನೀರಿಗೆ ಹಾಕಿದ್ದನ್ನು ಕೇಳಿ ಅವುಗಳ ಬೆಲೆಯ ಬಗ್ಗೆ ಚೆನ್ನಾಗಿ ಅರಿವಿದ್ದ ರೂಮಿಯವರಿಗೆ ಸಹಿಸಲಾಗಲಿಲ್ಲ. ಈ ವಿಷಯವನ್ನು ಕೇಳುತ್ತಲೇ ಅವರು ಚೀರಿದರು; ‘ಛೇ, ಏನು ಮಾಡಿದಿರಿ? ಅವುಗಳ ಬೆಲೆಯೇನೆಂದು ನಿಮಗೆ ಗೊತ್ತೇನು? ಅಯ್ಯೋ.. ಎಷ್ಟು ಅಮೂಲ್ಯವಾದ ಪುಸ್ತಕಗಳು. ಛೇ, ಎಲ್ಲವೂ ಹಾಳಾಯಿತಲ್ಲ..’ ಎಂದು ಸಿಡಿಮಿಡಿಗೊಳ್ಳತೊಡಗಿದ ರೂಮಿಯವರನ್ನು ನೋಡಿ ಆ ವ್ಯಕ್ತಿಯು ನಗುತ್ತ, ‘ಅದಕ್ಯಾಕೆ ಈ ಥರ ಕೂಗುತ್ತೀರ? ಪುಸ್ತಕ ತಾನೆ, ನಾನು ಕೊಡುತ್ತೇನೆ’ ಎಂದು ಹೇಳುತ್ತ ನೀರಿಗೆ ಕೈಹಾಕಿ ಮುಳುಗಿದ್ದ ಅಷ್ಟೂ ಗ್ರಂಥಗಳನ್ನು ಮೇಲೆತ್ತಿ ಕೊಟ್ಟರು. ನೋಡುವುದೇನು! ಅವೆಲ್ಲ ಒಂದು ಸ್ವಲ್ಪವೂ ಒದ್ದೆಯಾಗದಂತೆ ಹಿಂದೆ ಹೇಗಿತ್ತೋ ಹಾಗೆಯೇ ಇದ್ದವು. ರೂಮಿಯವರು ಒಂದು ಕ್ಷಣ ದಂಗಾಗಿಬಿಟ್ಟರು. ಅವರಿಗರಿವಿಲ್ಲದೆ ಅವರ ಬಾಯಿಂದ ಉದ್ಗಾರವೊಂದು ಹೊರಬಿತ್ತು;

‘ಐನ್ ಚೀಸ್ತ್’- ಏನಿದು?! ಆಗ ಆ ವ್ಯಕ್ತಿಯು ಶಾಂತಚಿತ್ತರಾಗಿ, ‘ಐನ್ ಆನ್ ಇಲ್ಮ್ ಅಸ್ತ್ ಕೆ ತೂ ನಮೀ ದಾನಮ್’- ಇದು ತಮಗೆ ತಿಳಿಯದ ಜ್ಞಾನ ಎಂದು ಹೇಳಿ ಅಲ್ಲಿಂದ ಎಲ್ಲಿಗೋ ಹೊರಟರು.

ರೂಮಿಯವರ ತಲೆ ಗಿರ್ರನೆ ತಿರುಗತೊಡಗಿತು. ಅವರು ಆ ವ್ಯಕ್ತಿಯ ಹಿಂದೆ ಓಡಿ ಹೋಗಿ ಅವರ ಕಾಲಿಗೆ ಬಿದ್ದು, ‘ನನ್ನನ್ನು ಕ್ಷಮಿಸಿ’ ಎಂದು ಅತ್ತು ಗೋಗರೆದರು. ಬಂದ ವ್ಯಕ್ತಿಯು ಅಂದಿನ ಕಾಲದ ಪ್ರಸಿದ್ಧ ಸೂಫೀ ಗುರು ಹಝ್ರತ್ ಶಂಸ್ ತಬ್ರೀಝಿ ಅವರಾಗಿದ್ದರು! ಹಝ್ರತ್ ಶಮ್ಸ್ ತಬ್ರೀಝಿ ಅವರು ಮೌಲಾನಾ ರೂಮಿಯವರನ್ನು ತಬ್ಬಿಕೊಂಡು ತನ್ನ ಎದೆಗೊತ್ತುತ್ತ, ‘ಹೇ, ಜಲಾಲುದ್ದೀನ್! ಎಷ್ಟು ದಿನಗಳಿಂದ ನಿಮ್ಮನ್ನು ಹುಡುಕುತ್ತಿದ್ದೆ..’ ಎಂದು ಉದ್ಗರಿಸಿದರು.

ಈ ಇಡೀ ಘಟನೆಯನ್ನು ನೋಡುವಾಗ ರೂಮಿಯವರು ತಮ್ಮ ಮಸ್ನವಿಯಲ್ಲಿ ಹೇಳಿದ ಮಾತೊಂದು ಇಲ್ಲಿ ಪ್ರಸ್ತುತವೆನಿಸುತ್ತದೆ. ‘ನೀನು ಏನನ್ನು ಹುಡುಕುತ್ತಿದ್ದೀಯೊ, ಅದೇ ನೀನು. ನೀನು ಹುಡುಕುತ್ತಿರುವುದು ನಿನ್ನನ್ನು ಹುಡುಕುತ್ತಿದೆ’. ಜಗತ್ತಿನಾದ್ಯಂತ ಅನೇಕ ಸಂಸ್ಕೃತಿಗಳಲ್ಲಿ, ವಿವಿಧ ರೂಪಗಳಲ್ಲಿ ಈ ಮಾತು ವಿಶೇಷ ಸ್ಥಾನವನ್ನು ಹಿಡಿದಿದೆ. ಪರ್ಷಿಯನ್ ಭಾಷೆಯಲ್ಲಿರುವ ಮಸ್ನವಿಯಲ್ಲಿ ಅಕ್ಷರಶಃ ಇದೇ ಪದಗಳನ್ನು ಬಳಸಿ ಬರೆದ ಸಾಲುಗಳಿಲ್ಲ. ಆದರೆ ಸರಿಸುಮಾರು ಇದನ್ನೇ ಹೋಲುವ ಒಂದಷ್ಟು ದ್ವಿಪದಿಗಳಿವೆ. ಅವುಗಳನ್ನು ತರ್ಜುಮೆ ಮಾಡುವಾಗ ಸೃಷ್ಟಿಯಾದ ಮಾತುಗಳೇ ಮೇಲೆ ಹೇಳಿದ ಉಕ್ತಿಗಳು. ಒಂದು ರೀತಿಯಲ್ಲಿ ಮಸ್ನವಿಯ ಭಾವಾನುವಾದ ಎನ್ನಬಹುದು ಅದನ್ನು. ಮಸ್ನವಿಯಲ್ಲಿ ರೂಮಿಯವರು ಬಳಸಿದ ರೂಪಕಗಳನ್ನು ಕೈಬಿಟ್ಟು, ಒಂದು ಸಾರ್ವತ್ರಿಕ ಶೈಲಿಯ ವಾಕ್ಯರಚನೆ ಇವುಗಳಲ್ಲಿ ಕಾಣುತ್ತದೆ.

ಮಸ್ನವಿಯಲ್ಲಿ ಹೀಗಿದೆ;
‘ಹರ್ ಚೀಝ್ ಕೆ ದರ್ ಜುಸ್ತನ್ ಆನಿ ಆನಿ’ – ನೀವು ಬಯಸುವ ಎಲ್ಲವೂ ನಿಮ್ಮ ಬಳಿಯೇ ಇದೆ.
ಇದು ವಿಭಿನ್ನ ಅರ್ಥವನ್ನು ಹೊಂದಿದೆ. ಅಪಾರ ಶ್ರಮವಹಿಸಿ ಏನನ್ನೋ ಹುಡುಕುತ್ತಿರುತ್ತೇವೆ. ಆದರೆ, ಅದು ನಮ್ಮಲ್ಲೇ ಇತ್ತೆಂದರೆ ಹುಡುಕಲು ಹಾಕಿದ ಶ್ರಮ ವ್ಯರ್ಥವಾದಂತೆ. ಅದನ್ನು ಸೂಚಿಸುವ ಸಲುವಾಗಿ ರೂಮಿಯವರು ಹೀಗೆ ಹೇಳುತ್ತಾರೆ. ‘ನೀವು ಸರವನ್ನು ಕೊರಳಲ್ಲಿ ಧರಿಸಿ ಅದನ್ನು ಹುಡುಕುತ್ತ ಕೊಠಡಿಯಿಂದ ಕೊಠಡಿಗೆ ಅಲೆದಾಡುತ್ತಿರುವಿರಿ’. ನಿಧಿಯ ಕನಸು ಬಿದ್ದ ಯುವಕನ ಕತೆಯನ್ನು ಹೇಳುತ್ತ ರೂಮಿಯವರು ತನ್ನಲ್ಲೇ ಅಡಗಿರುವ ನಿಧಿಯನ್ನು ಹುಡುಕುವುದು ಬಿಟ್ಟು ಆತ ಯಾವುದೋ ದೂರದ ಊರಿನ ನಿಧಿಯ ಹಿಂದೆ ಹೋಗುವುದನ್ನು ಸೂಚ್ಯವಾಗಿ ಹೇಳುತ್ತಾರೆ. ನೀನೇ ಒಂದು ನಿಧಿ, ನಿನಗಿಂತ ಮಿಗಿಲಾದ ನಿಧಿ ಬೇರೊಂದಿಲ್ಲ ಎಂದು ಹೇಳಿದಂತಿದೆ ಅದು. ‘ನೀನು ಹುಡುಕಿದ ರತ್ನವು ಸಿಕ್ಕಿಬಿಟ್ಟರೆ ಆ ರತ್ನದೊಳಗೊಂದು ರತ್ನವನ್ನು ಹುಡುಕು’ ಎಂದು ಮತ್ತೊಂದು ಕಡೆ ರೂಮಿಯವರು ಎಚ್ಚರಿಸುತ್ತಾರೆ. ಹುಡುಕಾಟ ನಿರಂತರವಾಗಿರಬೇಕು ಎಂದರ್ಥ.

ಮಸ್ನವಿಯಲ್ಲಿ ಇದೇ ಅರ್ಥವಿರುವ ಇನ್ನೊಂದು ದ್ವಿಪದಿಯನ್ನು ನೋಡಿ;
‘ತಶ್ನೆಗಾನ್ ಗರ್ ಆಬ್ ಜೂಯಂದ್ ಅಝ್ ಜಹಾನ್
ಆಬ್ ಜೂಯದ್ ಹಮ್ ಬಹ ಆಲಮ್ ತಶ್ನೆಗಾನ್’ – ‘ಜಗತ್ತಿನಲ್ಲಿ ಬಾಯಾರಿದವರು ನೀರನ್ನು ಹುಡುಕುತ್ತಿದ್ದಾರೆ. ಆದರೆ ನೀರು ಬಾಯಾರಿದವರನ್ನು ಹುಡುಕುತ್ತಿದೆ’.


ಇಲ್ಲಿ ನೀರು ಮತ್ತು ಬಾಯಾರಿದವರ ಸ್ಥಾನದಲ್ಲಿ ನೀವು ದೇವರನ್ನು ಮತ್ತು ಮನುಷ್ಯರನ್ನು ಕಲ್ಪಿಸಿಕೊಳ್ಳಬಹುದು. ಪ್ರೇಮಿಗಳಿಬ್ಬರನ್ನು ಕಲ್ಪಿಸಿಕೊಳ್ಳಬಹುದು. ಅಥವಾ ತೀರಾ ಸಾಮಾನ್ಯವಾದ ಪದಾರ್ಥಗಳನ್ನೂ ಊಹಿಸಬಹುದು. ಮೇಲಿನ ದ್ವಿಪದಿ ಪ್ರೇಮಿಯ ತೀವ್ರ ಹುಡುಕಾಟ ಮತ್ತು ಪ್ರೇಮಿಯ ಆ ಹುಡುಕಾಟಕ್ಕೆ ಪ್ರತಿಯಾಗಿ ಸಿಗುವ ಸ್ಪಂದನೆಯ ರೋಚಕತೆಯನ್ನು ಅನಾವರಣ ಮಾಡುತ್ತದೆ. ನೀವು ಒಂದು ವಸ್ತುವನ್ನು ತೀವ್ರವಾಗಿ ಬಯಸುತ್ತಿರುವಂತೆ ಆ ವಸ್ತುವೂ ತಿರುಗಿ ನಿಮ್ಮನ್ನು ಅಷ್ಟೇ ತೀವ್ರವಾಗಿ ಬಯಸುತ್ತಿದೆ ಎಂಬುದು ಅಲ್ಲಿನ ಆಶಯ.

ಈ ರೀತಿಯ ಪ್ರತಿ ಹುಡುಕಾಟದ ಪ್ರಕ್ರಿಯೆಯು ಸೃಷ್ಟಿಶೀಲ ನಿಯಮ. ರೂಮಿಯವರ ಇದೇ ಉಕ್ತಿಯನ್ನು law of attraction – ಆಕರ್ಷಣಾ ತತ್ವದ ಮೂಲವೆಂದು ವಾದಿಸಿದವರೂ ಇದ್ದಾರೆ.
‘ನೀನು ಹುಡುಕುತ್ತಿರುವುದು ನಿನ್ನನ್ನು ಹುಡುಕುತ್ತಿದೆ’ ಎಂದು ಕೆಲವರು ಅದನ್ನು ತರ್ಜುಮೆ ಮಾಡಿದ್ದಾರೆ. ‘ಹುಡುಕು’ ಎಂಬುದು ಇಲ್ಲಿ ಪ್ರಮುಖ ಪದ. ಇಲ್ಲಿರುವ ಉಲ್ಲೇಖವು ತಾತ್ವಿಕವಾಗಿದೆ, ಅಕ್ಷರಾರ್ಥದಲ್ಲಿ ಅದನ್ನು ತೆಗೆದುಕೊಂಡರೂ ತಪ್ಪಿಲ್ಲ. ಇಲ್ಲಿನ ಆಲಂಕಾರಿಕ ಅಂಶಗಳು ಮುಖ್ಯವಾಗಿ ಇಡೀ ಜಗತ್ತಿನ ಗಮನ ಸೆಳೆಯಬಲ್ಲ ತಾತ್ವಿಕ ಚಿಂತನೆಗಳನ್ನು ಹೊಂದಿವೆ.
‘ಬಾಯಾರಿದವರು ನೀರನ್ನು ಹುಡುಕುವುದು ಮಾತ್ರವಲ್ಲ, ಬಾಯಾರಿದವರಿಗಾಗಿ ನೀರು ಕೂಡ ಹುಡುಕುತ್ತಿರುತ್ತದೆ’ ಎಂಬ ಈ ಉಕ್ತಿಯ ಅರ್ಥವನ್ನು ಗಣಿತದ ಸಮೀಕರಣದ ದೃಷ್ಟಿಕೋನದಿಂದಲೂ ನೋಡಬಹುದು. ಒಂದು ಸಮೀಕರಣಕ್ಕೆ ಎರಡು ಭಾಗಗಳಿರುತ್ತವೆ ಮತ್ತು ಎರಡೂ ಬದಿಗಳಲ್ಲಿ ಅದು ಸಮಾನವಾದ ಮೌಲ್ಯವನ್ನು ಹೊಂದಿರಬೇಕು. ಇದು ಸೂಕ್ಷ್ಮಾತಿಸೂಕ್ಷ್ಮ ಅಣುಗಳಿಂದ ಹಿಡಿದು ಅಖಿಲ ಬ್ರಹ್ಮಾಂಡದ ಸರ್ವ ವಸ್ತುಗಳಿಗೂ ಒಂದೇ ಬಗೆಯಲ್ಲಿ ಅನ್ವಯಿಸುವ ಪರಿಕಲ್ಪನೆ. ಪ್ರತಿಯೊಂದು ಅಣುವೂ ಇನ್ನೊಂದು ಅಣುವಿನ ಹುಡುಕಾಟದಲ್ಲಿರುತ್ತದೆ, ಅವುಗಳು ಪರಸ್ಪರ ಆಕರ್ಷಿತವಾಗುತ್ತವೆ ಮತ್ತು ಪರಿಸ್ಥಿತಿ ಹೊಂದಿಕೊಂಡಾಗ ಅವು ಒಂದಾಗುತ್ತವೆ.

ಈ ಜಗತ್ತಿನಲ್ಲಿ ನಾವು ಅನೇಕ ವಿಷಯಗಳಿಗಾಗಿ ಅನ್ವೇಷಣೆ ಮಾಡಬಹುದು, ಅದು ಪ್ರತಿಯಾಗಿ ನಮ್ಮ ಅನ್ವೇಷಣೆಯಲ್ಲಿರುತ್ತವೆ ಎನ್ನುವುದು ನಮ್ಮ ಮಟ್ಟಿಗೆ ನಿಗೂಢ.
ಮೇಲೆ ಹೇಳಿದ್ದು ಪ್ರಸ್ತುತ ದ್ವಿಪದಿಯ ಲೌಕಿಕ ಅರ್ಥಗಳನ್ನು. ರೂಮಿಯವರು ಬಹುಶಃ ಅದನ್ನು ಪಾರಮಾರ್ಥಿಕ ಅರ್ಥದಲ್ಲಿ ಹೇಳಿರಬಹುದು. ಸೃಷ್ಟಿಯ ಪ್ರೇಮಕ್ಕಿಂತಲೂ ಸೃಷ್ಟಿಕರ್ತನ ಪ್ರೇಮವೇ ಸೂಫಿಗಳ ಮುಖ್ಯ ವಸ್ತುವಾಗಿರುವಾಗ ರೂಮಿಯವರೂ ಅದರಿಂದ ಹೊರತೇನಲ್ಲ. ಸೃಷ್ಟಿಕರ್ತನ ಮೇಲಿನ ಪ್ರೇಮಕ್ಕೆ ಬಾಯಾರಿರುವ ಸೂಫಿಯ ಚಿತ್ರಣ ನಮ್ಮ ಮುಂದೆ ತೇಲಿ ಬರಬೇಕು. ಆ ಪ್ರೇಮದ ಪಾನೀಯವನ್ನು ಸವಿದ ಬಳಿಕ ಆತ ಹುಚ್ಚನಾಗುತ್ತಾನೆ. ಎಲ್ಲವನ್ನೂ ಮರೆತ ಹುಚ್ಚ. ಎಲ್ಲವನ್ನೂ ಎಂದರೆ ಎಲ್ಲವನ್ನೂ, ತನ್ನನ್ನೂ ಸೇರಿಸಿ. ತನ್ನನ್ನು ತಾನು ನಾಶಪಡಿಸುವ ಅನುಭಾವದ ಅಮೋಘ ಸ್ಥಿತಿ ಅದು. ಇದಕ್ಕೆ ಸೂಫೀ ಪರಿಭಾಷೆಯಲ್ಲಿ ‘ಫನಾ’ ಎನ್ನುತ್ತಾರೆ. ಈ ಸ್ಥಿತಿಗೆ ತಲಪಬೇಕಾದರೆ ಮೊದಲು ಹುಡುಕಬೇಕು. ಆ ಹುಡುಕಾಟದ ಮೊದಲ ಹಂತವೇ ತನ್ನನ್ನು ತಾನು ಅರಿಯುವುದು. ಸ್ವಂತದ ಬಗ್ಗೆ ಅರಿವಾದರೆ ಅದು ಸೃಷ್ಟಿಕರ್ತನ ಅರಿವಿನ ತನಕ ಅವನನ್ನು ತಲಪಿಸಿಬಿಡುತ್ತದೆ. ಸೂಫಿ ಸಂತ ಶೈಖ್ ಇಬ್ನ್ ಅರಬಿಯವರ ಪ್ರಸಿದ್ಧ ಮಾತೊಂದಿದೆ; ‘ಮನ್ ಅರಫ ನಫ್‌ಸಹೂ ಫಖದ್ ಅರಫ ರಬ್ಬಹು’ ~ ಯಾರು ತನ್ನ ಬಗ್ಗೆ ಅರಿಯುತ್ತಾನೊ ಅವನು ತನ್ನ ಪ್ರಭುವಿನ ಬಗ್ಗೆ ಅರಿತಿರುತ್ತಾನೆ. ತನ್ನನ್ನು ತಾನು ಅರಿಯುವುದೇ ತನ್ನ ಸೃಷ್ಟಿಕರ್ತನ ಬಗೆಗಿನ ಅರಿವಿನ ಮೂಲ.

ಬಾಯಾರಿದವರನ್ನು ನೀರು ಹುಡುಕುತ್ತಿದೆ ಎಂದರೆ ಆಧ್ಯಾತ್ಮಿಕ ಬಾಯಾರಿಕೆಯಿಂದ ಬಳಲುತ್ತಿರುವ ಸೂಫಿಯನ್ನು ದೈವಿಕ ಪ್ರೇಮದ ಸಾಕ್ಷಾತ್ಕಾರ ಎಂಬ ಪವಿತ್ರ ನೀರು ಕಾಯುತ್ತಿದೆ ಎಂದರ್ಥ. ರೂಮಿಯವರನ್ನು ತಬ್ರೀಝ್ ಹುಡುಕುತ್ತಿದ್ದದ್ದು ಆ ಅರ್ಥದಲ್ಲಿ. ತಬ್ರೀಝ್ ರಿಗೆ ಅನುಭವವಾದ ದೈವಿಕ ಪ್ರೇಮದ ಅನುಭವವನ್ನು ರೂಮಿಯವರಿಗೆ ದಾಟಿಸುವ ಅವಕಾಶ, ಅದನ್ನು ತಬ್ರೀಝ್ ಕಳೆದುಕೊಳ್ಳುವುದು ಸಾಧ್ಯವಿಲ್ಲ. ಆದರೆ, ಅಷ್ಟರ ತನಕ ರೂಮಿಯವರಿಗೆ ಇದರ ಬಗ್ಗೆಯೆಲ್ಲ ತಿಳಿದಿರಲಿಲ್ಲ. ಕೊನ್ಯಾದ ಮಸ್ಜಿದ್ ಒಂದರಲ್ಲಿ ಶಿಷ್ಯಂದಿರಿಗೆ ಪಾಠ ಹೇಳಿ ಕೊಡುತ್ತಿದ್ದ ರೂಮಿಯವರಿಗೆ ಬಹುಶಃ ಅಧ್ಯಾತ್ಮದ ತತ್ವಗಳ ಬಗ್ಗೆ ಚೆನ್ನಾಗಿ ಗೊತ್ತಿದ್ದಿರಬಹುದು. ಅದರ ಥಿಯರಿಗಳ ಬಗ್ಗೆ ಅವರು ಗಂಟೆಗಟ್ಟಲೆ ಪಾಠ ಮಾಡಿದ್ದಿರಬಹುದು. ಉಪನ್ಯಾಸಗಳನ್ನು ನೀಡಿದ್ದಿರಬಹುದು. ಆದರೆ, ತಬ್ರೀಝ್ ಅವರ ಅನುಭಾವದ ಮೋಡಿಗೊಳಗಾದಾಗ ಅವರಿಗೆ ತಾನು ಇಷ್ಟು ದಿನ ಯಾವುದಕ್ಕಾಗಿ ಬಾಯಾರಿದ್ದೆನೋ ಅದು ಸಿಕ್ಕಿತು ಎಂಬ ಭಾವ ಬಂದಿದ್ದಿರಬಹುದು. ಆದರೆ, ಈ ದ್ವಿಪದಿಗಳಲ್ಲಿ ಅದಕ್ಕಿಂತಲೂ ಶಂಸ್ ತಬ್ರೀಝ್ ತನಗಾಗಿ ಕಾಯುತ್ತಿದ್ದ ಅಂಶವನ್ನು ಒತ್ತಿ ಹೇಳುತ್ತ ‘ಹೇ, ಜಲಾಲುದ್ದೀನ್.. ನಿನಗಾಗಿ ಎಷ್ಟು ದಿನಗಳಿಂದ ಕಾಯುತ್ತಿದ್ದೆ’ ಎಂಬ ತಬ್ರೀಝರ ಮಾತಿನ ಮರ್ಮವನ್ನು ಸೂಚಿಸುತ್ತ, ‘ಬಾಯಾರಿದವರಿಗಾಗಿ ನೀರು ಕಾಯುತ್ತಿದೆ’ ಎಂದು ಹೇಳುತ್ತಾರೆ. ಈ ಅರ್ಥದಲ್ಲಿ ಬಾಯಾರಿಕೆ ಎಂದರೆ ಅದು. ಅಧ್ಯಾತ್ಮದ ಬಾಯಾರಿಕೆ.

‘ನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತಿದೆ’ ಎಂಬುದನ್ನು ಹಲವು ವಿಧಗಳಲ್ಲಿ ಅರ್ಥೈಸಬಹುದು. ಅಧ್ಯಾತ್ಮದ ಕನ್ನಡಿಯ ಮೂಲಕ ಈ ಕಾವ್ಯಾತ್ಮಕ ಸಾಲುಗಳನ್ನು ನೋಡಿದರೆ, ಅದು ‘ನೀವು ಹುಡುಕುವ ಎಲ್ಲವೂ ಈಗಾಗಲೇ ನಿಮ್ಮೊಂದಿಗೆ ಇದೆ’ ಎಂಬ ಶ್ರೇಷ್ಠ ತತ್ವಕ್ಕೆ ನಮ್ಮನ್ನು ತಲಪಿಸುತ್ತದೆ. ಈ ವಾಕ್ಯವು ಪ್ರತಿಯೊಬ್ಬರಿಗೂ ವಿಭಿನ್ನ ರೂಪದಲ್ಲಿ ಅನ್ವಯಿಸಬಹುದು. ನೀವು ನಿಜವಾಗಿಯೂ ಏನನ್ನಾದರೂ ಬಯಸಿದರೆ, ಅದನ್ನು ನಿಮ್ಮ ದಾರಿಗೆ ತರಲು ಇಡೀ ವಿಶ್ವವು ಜೊತೆಸೇರಿ ಕೆಲಸ ಮಾಡುತ್ತದೆ ಎಂಬ ಸುಂದರ ತತ್ವವೂ ಇದೇ ತಳಹದಿಯಲ್ಲಿ ಉದ್ಭವಿಸಿದೆಯೆಂದು ಹೇಳಬಹುದು. ‘ದಿ ಆಲ್ಕೆಮಿಸ್ಟ್’ ಎಂಬ ಪ್ರಸಿದ್ಧ ನಾವೆಲ್ ನಲ್ಲಿ ಲೇಖಕ ಪಾವ್ಲೊ ಕೊಯ್ಲೊ ಹೇಳುವ ತತ್ವವೂ ಸರಿಸುಮಾರು ಹೀಗೆಯೇ ಇದೆ – ‘ನೀವು ಏನನ್ನಾದರೂ ಬಯಸಿದರೆ, ಅದನ್ನು ಸಾಧಿಸಲು ಇಡೀ ವಿಶ್ವವು ನಿಮಗೆ ಸಹಾಯ ಮಾಡುತ್ತದೆ’.

ಹುಡುಕುವುದೆಂದರೆ ಬಯಸುವುದೇ ಆಗಿದೆ. ನೂರಾರು ಮೈಲಿಗಳ ಪ್ರಯಾಣವು ಒಂದು ಹೆಜ್ಜೆಯಿಂದ ಶುರುವಾಗುವಂತೆ ಎಂತಹ ಕಠಿಣ ಸಾಧನೆಯಾದರೂ ಅದನ್ನು ಉತ್ಕಟವಾಗಿ ಬಯಸುವುದರೊಂದಿಗೆ ಅದರ ಪಯಣವು ಆರಂಭವಾಗುತ್ತದೆ. ಆ ಪಯಣದಲ್ಲಿ ಆತನ ಸಾಧನೆಗೆ ಪೂರಕವಾಗುವ ಎಲ್ಲವೂ ಆತನಿಗೆ ನಿಗೂಢವಾದ ರೀತಿಯಲ್ಲಿ ಸಹಾಯ ಮಾಡುತ್ತವೆ. ಜಗತ್ತಿನ ಎಲ್ಲವೂ ಹೀಗೆ ಪರಸ್ಪರ ಸಂಬಂಧವನ್ನು ಹೊಂದಿರುವುದನ್ನು ತಿಳಿದುಕೊಳ್ಳಬಹುದು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಇದು Theory of relativity – ಸಾಪೇಕ್ಷ ಸಿದ್ಧಾಂತದ ಇನ್ನೊಂದು ರೂಪವಷ್ಟೆ.

-ಡಾ. ಸಿ.ಎಂ. ಹನೀಫ್ ಅಮ್ಜದಿ


ಡಾ. ಸಿ.ಎಂ. ಹನೀಫ್ ಅಮ್ಜದಿ

ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿ

ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿಯ ಬಗ್ಗೆ, ಅದರ ಇತಿಹಾಸದ ಬಗ್ಗೆ ಮಿತ್ರರಾದ ಪುನೀತ್ ಅಪ್ಪು ಅವರು ಬಹಳಷ್ಟು ಬಾರಿ ಹೇಳಿದ್ದರು. ಮಲಬಾರ್ ಇತಿಹಾಸದ ಬಗ್ಗೆ ಅವರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಅವರ ಮಾತುಗಳನ್ನು ಕೇಳಿದಾಗಲೆಲ್ಲ ಒಮ್ಮೆ ಈ ಮಸೀದಿಗೆ ಭೇಟಿ ನೀಡಬೇಕೆಂದು ಅನಿಸುತ್ತಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಮೊನ್ನೆ ಕೋಯಿಕ್ಕೋಡ್ ಭೇಟಿಯ ಸಂದರ್ಭದಲ್ಲಿ ಪುನೀತ್ ಅಪ್ಪು ಹಾಗೂ ಇನ್ನಿತರ ಗೆಳೆಯರೊಂದಿಗೆ ಮಿಶ್ಕಾಲ್ ಮಸೀದಿಗೆ ಹೋಗಲು ಸಾಧ್ಯವಾಯಿತು.

ಮಸೀದಿಗಿಂತ ಮೊದಲು ನಾವು ನೋಡಿದ್ದು ಮಸೀದಿಯ ಮುಂಭಾಗದಲ್ಲಿರುವ ಕುಟ್ಟಿಚ್ಚಿರ ಕೆರೆಯನ್ನು. ಮಿಶ್ಕಾಲ್ ಮಸೀದಿ ನಿರ್ಮಾಣಕ್ಕೆ ಮಣ್ಣು ತೆಗೆದಾಗ ಅಲ್ಲೊಂದು ಸುಂದರವಾದ ಕೆರೆ ನಿರ್ಮಾಣವಾಗಿತ್ತು. ಅದುವೇ ಪ್ರಸಿದ್ಧ ಕುಟ್ಟಿಚ್ಚಿರ ಕೆರೆ. ನಾವು ಹೋದಾಗ ಅಲ್ಲಿ ವಿಪರೀತ ಉರಿ ಬಿಸಿಲಿತ್ತು. ಮಳೆಯ ನಿರೀಕ್ಷೆಯಲ್ಲಿದ್ದ ಗೆಳೆಯರಿಗೆ ನಿರಾಶೆಯಾಗಿತ್ತು.

ಕುಟ್ಟಿಚ್ಚಿರ ಕೆರೆ ವಿಶಾಲವಾಗಿತ್ತು. ಕೆರೆಯಲ್ಲಿ ಕೆಲವರು ಸ್ನಾನ ಮಾಡುತ್ತಿದ್ದರು. ಮಕ್ಕಳು ಈಜುತ್ತಾ, ಇತರರ ಮೇಲೆ ನೀರೆರೆಚುತ್ತಾ ಆಟವಾಡುತ್ತಿದ್ದರು. ಆದರೆ, ಕೆರೆಯ ನೀರು ಎಷ್ಟು ಕೊಳಕಾಗಿತ್ತು ಎಂದರೆ ನೀರಿಗೆ ಇಳಿಯಲು ನಮ್ಮಲ್ಲಿ ಯಾರಿಗೂ ಮನಸ್ಸಾಗಲಿಲ್ಲ. ಮೆಟ್ಟಿಲ ಮೇಲೆ ಕುಳಿತು ಕೆರೆಯ ನೀರಿಗೆ ಕಾಲುಗಳನ್ನು ಇಳಿಬಿಟ್ಟು ‘ಫಿಶ್ ಥೆರಪಿ’ ಮಾಡಿಸಿಕೊಳ್ಳುವ ಆಸೆಯಿದ್ದರೂ ನೀರನ್ನು ನೋಡಿದಾಗ ಯಾಕೋ ಬೇಡವೆನಿಸಿತು. ದಟ್ಟ ವಾಸನೆಗೆ ಮೂಗು ಮುಚ್ಚಿ ನಡೆಯಬೇಕಾದ ಪರಿಸ್ಥಿತಿಯಿತ್ತು. ಮೀನುಗಳು‌ ಸತ್ತು ಮೂಲೆಯಲ್ಲಿ ರಾಶಿಬಿದ್ದಿದ್ದವು.

ಜೊತೆಗಿದ್ದ ಗೆಳೆಯ ಮುನವ್ವರ್ ಜೋಗಿಬೆಟ್ಟು ಕೆರೆಯನ್ನು ನೋಡುತ್ತಾ ಆಳವಾದ ಯೋಚನೆಗೆ ಬಿದ್ದಿದ್ದರು. ಬಹುಶಃ ಕೆರೆಯ ಪರಿಸರವನ್ನಿಟ್ಟುಕೊಂಡು ಹೊಸ ಕಥೆ ಬರೆಯುವ ಕುರಿತು ಯೋಚಿಸುತ್ತಿದ್ದರೇನೋ? ಮಿತ್ರರಾದ ಯಂಶ ಬೇಂಗಿಲ ಮತ್ತು ಸಿನಾನ್ ಇಂದಬೆಟ್ಟು ಅವರು ಪುನೀತ್ ಅಪ್ಪುರವರನ್ನು ತಮ್ಮ ಶಾಶ್ವತ ಗೈಡ್ ಮಾಡಿಕೊಂಡಿದ್ದರು.‌ ನನಗಂತೂ ಸತ್ತ‌ ಮೀನುಗಳ ದಟ್ಟ ವಾಸನೆಯಿಂದ ಕೂಡಿದ್ದ ಆ ಕೆರೆಯನ್ನು ನೋಡುವುದೇ ಹಿಂಸೆಯೆನಿಸುತ್ತಿತ್ತು. ಭ್ರಷ್ಟಾಚಾರದಿಂದ ಕೊಳೆತು ಹೋಗಿರುವ ಇಂದಿನ ವ್ಯವಸ್ಥೆಗೆ ಆ ಕೆರೆ ರೂಪಕದಂತಿತ್ತು.‌

ಕೆರೆಯ ಸುತ್ತಲಿನ ಆವರಣದಲ್ಲಿ ಸಾಮೂದಿರಿ ರಾಜರ ಕಾಲದ ಮಲಬಾರ್ ಇತಿಹಾಸವನ್ನು ಕೆತ್ತಲಾಗಿದೆ. ಅರಬ್ ವ್ಯಾಪಾರಿಗಳ ಕೇರಳ ಪ್ರವೇಶ, ಪೋರ್ಚುಗೀಸ್ ನಾವಿಕರು, ಸಾಮೂದಿರಿ ರಾಜರು ಹಾಗೂ ಕುಂಞಾಲಿ ಮರಕ್ಕಾರ್ ಮೊದಲಾದವರ ಇತಿಹಾಸ, ಸುನ್ನತಿ, ಒಪ್ಪನಪ್ಪಾಟ್ಟ್ ಮೊದಲಾದ ಮಲಬಾರಿನ ಇಸ್ಲಾಮಿಕ್ ಸಂಸ್ಕೃತಿಯನ್ನು ಗೋಡೆಯ ಮೇಲಿನ ಕಲಾಕೃತಿಗಳಲ್ಲಿ ಸುಂದರವಾಗಿ ಕೆತ್ತಲಾಗಿದೆ. ಪುನೀತ್ ಅಪ್ಪು ಅವರು ಆ ಇತಿಹಾಸಗಳನ್ನು ವಿವರಿಸುತ್ತಲೇ ತಮ್ಮ ಮೊಬೈಲ್ ನಿಂದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಇತಿಹಾಸ ಜ್ಞಾನ ಬೆರಗು ಹುಟ್ಟಿಸುತ್ತಿತ್ತು. ಅವರು ಜೊತೆಯಲ್ಲಿದ್ದುದರಿಂದ ನಮಗೆ ಪ್ರತ್ಯೇಕ ಗೈಡ್‌ನ ಅವಶ್ಯಕತೆ ಬೀಳಲಿಲ್ಲ. ವಕೀಲಿ ವೃತ್ತಿಯಲ್ಲಿರುವುದರಿಂದಲೋ ಏನೋ, ಮಾತುಗಾರಿಕೆ ಅವರಿಗೆ ಚೆನ್ನಾಗಿ ಒಲಿದಿದೆ.

ಬಿಸಿಲಿನ ಝಳ ಹೆಚ್ಚಾಗುತ್ತಲೇ ಹೋದಾಗ ನಾವು ಕೆರೆಯನ್ನು ಅದರ ಪಾಡಿಗೆ ಬಿಟ್ಟು ನೇರವಾಗಿ ಮಿಶ್ಕಾಲ್ ಮಸೀದಿಯ ಕಡೆಗೆ ಹೊರಟೆವು.

ಆಕಾಶಕ್ಕೆ ಕಲಶವಿಟ್ಟಂತಿದ್ದ ಮಿಶ್ಕಾಲ್ ಮಸೀದಿ ನಿರ್ಮಲವಾಗಿ ಕಾಣಿಸಿತು. ಮಸೀದಿಯ ಸುತ್ತಲೂ ಆವರಿಸಿದ್ದ ಮೌನ, ಅದರ ಪುರಾತನ ಸೌಂದರ್ಯ ನಮ್ಮಲ್ಲಿ ವಿಶಿಷ್ಟ ಭಾವನೆಗಳನ್ನು ಉದ್ದೀಪಿಸುತ್ತಿತ್ತು. ಮಸೀದಿಯಿಂದ ಕಣ್ಣು ಕೀಳುವುದೇ ಸಾಧ್ಯವಾಗುತ್ತಿರಲಿಲ್ಲ. ಅದರ ಸಹಜ ಸೌಂದರ್ಯಕ್ಕೆ‌ ನನ್ನ ಮನಸು ಮಾರು ಹೋಗಿತ್ತು.‌

ಮಸೀದಿಯ ಮುಖ್ಯದ್ವಾರದ ಮೂಲಕವೇ ನಾವು ಆವರಣಕ್ಕೆ ಪ್ರವೇಶಿಸಿದೆವು. ಸಾಲಾಗಿ ನಿಂತಿರುವ ನೀಲಿ ಬಣ್ಣದ ಹತ್ತಾರು ಕಮಾನುಗಳು ತಕ್ಷಣವೇ ನಮ್ಮ ಗಮನ ಸೆಳೆದವು. ಹಿಂದೂ–ಮುಸ್ಲಿಂ ವಾಸ್ತುಶಿಲ್ಪ ಶೈಲಿಗಳ ಸಂಗಮದಲ್ಲಿ ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.‌ ಈ ಮಸೀದಿಯನ್ನು ಕ್ರಿ.ಶ. 1340ರ ಸುಮಾರಿಗೆ ನಿರ್ಮಿಸಲಾಯಿತು. ಒಮ್ಮೆ ಸುಮಾರು ನಲವತ್ತು ಹಡಗುಗಳ ಮಾಲೀಕರಾಗಿದ್ದ ಯೆಮನ್ ಮೂಲದ ವ್ಯಾಪಾರಿ ನೆಖೂದ ಮಿಶ್ಕಾಲ್, ವ್ಯಾಪಾರಕ್ಕಾಗಿ ಪ್ರಸಿದ್ಧವಾಗಿದ್ದ ಕೋಯಿಕ್ಕೋಡಿಗೆ ಬಂದರು. ಅವರಿಗೆ ಅಲ್ಲಿ ದೂರದೂರಿನಿಂದ ಬರುವ ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಸೂಕ್ತ ತಾಣವೊಂದರ ಕೊರತೆ ಕಂಡುಬಂತು. ಕೂಡಲೇ ಅವರು ಪ್ರಯಾಣಿಕರು ತಂಗಲು ಹಾಗೂ ಆರಾಧನೆ ನಡೆಸಲು ಒಂದು ಕೇಂದ್ರವನ್ನು ನಿರ್ಮಿಸುವ ಸಂಕಲ್ಪ ಮಾಡಿದರು. ಅದಕ್ಕಾಗಿ ಸಾಮೂದಿರಿ ರಾಜರ ಬಳಿ ತೆರಳಿ ಜಾಗವನ್ನು ಕೋರಿದರು. ಮಾಪಿಳ್ಳ ಸಮುದಾಯದ ಮುಖಂಡರು ಹಾಗೂ ತೆಕ್ಕೆಪ್ಪುರದ ಕೋಯಮಾರರೊಂದಿಗೆ ಸಮಾಲೋಚನೆ ನಡೆಸಿದ ಸಾಮೂದಿರಿ ರಾಜರು ಕುಟ್ಟಿಚ್ಚಿರದಲ್ಲಿ ಜಾಗವನ್ನು ನೀಡಿದರು. ನೆಖೂದ ಮಿಶ್ಕಾಲ್ ಅಲ್ಲಿ ಮಸೀದಿಯನ್ನು ನಿರ್ಮಿಸಿದರು. ಅದುವೇ ಇಂದಿನ ಮಿಶ್ಕಾಲ್ ಮಸೀದಿ.

ಮಿಶ್ಕಾಲ್ ಮಸೀದಿ ಕೇರಳದ ಅತ್ಯಂತ ಪ್ರಾಚೀನ ಮತ್ತು ಐತಿಹಾಸಿಕ ಮಸೀದಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಮಸೀದಿಗಳಲ್ಲಿ ಕಾಣುವ ಎತ್ತರದ ಮಿನಾರಗಳು ಇಲ್ಲದಿರುವುದು ಇದರ ವಿಶೇಷತೆ. ಕೇರಳದ ಸಾಂಪ್ರದಾಯಿಕ ದೇವಾಲಯಗಳ ವಾಸ್ತುಶಿಲ್ಪದ ಪ್ರಭಾವ ಇದರ ನಿರ್ಮಾಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮರದ ಕೆತ್ತನೆಗಳು, ಇಳಿಜಾರು ಛಾವಣಿ ಮತ್ತು ಬಹುಮಹಡಿ ವಿನ್ಯಾಸವು ಇದನ್ನು ಭಾರತದ ಇಸ್ಲಾಮಿಕ್ ವಾಸ್ತುಶಿಲ್ಪದ ವಿಶಿಷ್ಟ ಮಾದರಿಯನ್ನಾಗಿ ಮಾಡಿದೆ.

ಮಸೀದಿಯ ಒಳಭಾಗದ ವಿನ್ಯಾಸವಂತೂ ಅದ್ಭುತವಾಗಿತ್ತು.‌ ನಾವು ಮಸೀದಿಯನ್ನು ನೋಡುತ್ತಿರಬೇಕಾದರೆ ಮುಕ್ರಿಕಾ ನಮ್ಮ‌ ಹಿಂದೆಯೇ ಬಂದರು.‌ ನಾವು ಅಲ್ಲಲ್ಲಿ‌ ನಿಂತು ಪೋಟೋ ತೆಗೆಸಿಕೊಳ್ಳುತ್ತಿದ್ದೆವು. ಪುನೀತ್ ಅಪ್ಪು ಅವರು ಗೈಡ್ ಸ್ಥಾನದಿಂದ‌ ಫೋಟೋಗ್ರಫಿಗೆ ಧುಮುಕಿದ್ದರು. ಛಾಯಾಗ್ರಹಣದ ಬಗ್ಗೆ ಅವರಿಗೆ ಅವರದೇ ಆದ ವಿಶಿಷ್ಟ ಜ್ಞಾನ ಹಾಗೂ ಕಲ್ಪನೆಗಳಿದ್ದವು.‌ ಯಂಶ ಬೇಂಗಿಲರಿಗೆ ಈಗಲೂ ಉಳಿದಿರುವ ಮಸೀದಿಯ ಸುಟ್ಟ ಭಾಗವನ್ನು ನೋಡುವ ತವಕ.‌ ಮುಕ್ರಿಕಾ ಗೈಡ್ ಆಗಿ ನಮ್ಮ ಜೊತೆಗೆ ನಿಂತರು.‌ ಪೋರ್ಚುಗೀಸರ ಕ್ರೌರ್ಯದ ಕುರುಹಾಗಿ ಆ ಸುಟ್ಟ ಬೀಮ್ ಇಂದಿಗೂ ಅಲ್ಲಿಯೇ ಉಳಿದಿದೆ.

ಅದರ ಇತಿಹಾಸ ಹೀಗಿದೆ; 1498ರ ಮೇ 20ರಂದು ಪೋರ್ಚುಗೀಸ್ ನಾವಿಕ ವಾಸ್ಕೋಡ ಗಾಮ ಕೋಯಿಕ್ಕೋಡ್ ಸಮೀಪದ ಕಾಪ್ಪಾಡ್ ಕರಾವಳಿಗೆ ತಲುಪಿದನು. ಯುರೋಪಿನಿಂದ ಭಾರತಕ್ಕೆ ಸಮುದ್ರಮಾರ್ಗವನ್ನು ಕಂಡುಹಿಡಿಯುವುದು ಅವನ ಪ್ರಮುಖ ಉದ್ದೇಶವಾಗಿತ್ತು. ಜೊತೆಗೆ ಅರಬ್ ವ್ಯಾಪಾರಿಗಳ ನಿಯಂತ್ರಣದಲ್ಲಿದ್ದ ಮಸಾಲೆ ವ್ಯಾಪಾರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮತ್ತು ಹಿಂದೂ ಮಹಾಸಾಗರದಲ್ಲಿ ಪೋರ್ಚುಗೀಸ್ ಪ್ರಭುತ್ವ ಸ್ಥಾಪಿಸುವ ಉದ್ದೇಶವೂ ಅವರಿಗಿತ್ತು. ಆರಂಭದಲ್ಲಿ ಸಾಮೂದಿರಿಯೊಂದಿಗೆ ವ್ಯಾಪಾರ ಸಂಬಂಧ ಬೆಳೆಸಲು ಪ್ರಯತ್ನಿಸಿದರೂ, ನಂತರ ವ್ಯಾಪಾರ ಹಿತಾಸಕ್ತಿಗಳ ಸಂಘರ್ಷದಿಂದ ಪೋರ್ಚುಗೀಸರು ಮತ್ತು ಮಲಬಾರಿನ ಸ್ಥಳೀಯ ಶಕ್ತಿಗಳ ನಡುವೆ ಘರ್ಷಣೆಗಳು ಆರಂಭವಾದವು.

ಮಲಬಾರ್ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದ ಇತಿಹಾಸಕಾರ ಸೆಬಾಸ್ಟಿಯನ್ ಆರ್. ಪೆರಂಜೆ ಅವರ ಅಭಿಪ್ರಾಯದಂತೆ, ಮಲಬಾರಿನಲ್ಲಿ ಪೋರ್ಚುಗೀಸರ ಹೋರಾಟವು ಕೇವಲ ಧಾರ್ಮಿಕ ಸಂಘರ್ಷವಾಗಿರಲಿಲ್ಲ; ಅದು ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳು ಮತ್ತು ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣಕ್ಕಾಗಿ ನಡೆದ ರಾಜಕೀಯ ಹಾಗೂ ಆರ್ಥಿಕ ಪೈಪೋಟಿಯ ಭಾಗವಾಗಿತ್ತು. ಇದೇ ಕಾರಣದಿಂದ ಕೋಯಿಕ್ಕೋಡಿನ ಸಾಮೂದಿರಿಯೂ, ಅರಬ್–ಮಾಪಿಳ್ಳ ವ್ಯಾಪಾರಿಗಳೂ ಪೋರ್ಚುಗೀಸರ ಪ್ರಮುಖ ಎದುರಾಳಿಗಳಾಗಿ ಮಾರ್ಪಟ್ಟರು.

ಮಲಬಾರಿನ ಅರಬ್–ಮಾಪಿಳ್ಳ ವ್ಯಾಪಾರ ಜಾಲವನ್ನು ದುರ್ಬಲಗೊಳಿಸಿ, ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣವನ್ನು ತಮ್ಮ ಕೈಗೆ ಪಡೆಯುವುದು ಪೋರ್ಚುಗೀಸರ ಪ್ರಮುಖ ಗುರಿಯಾಗಿತ್ತು. ಇದರಿಂದ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳೊಂದಿಗೆ ಹಾಗೂ ಸಾಮೂದಿರಿಯ ಆಡಳಿತದೊಂದಿಗೆ ಸಂಘರ್ಷಗಳು ತೀವ್ರಗೊಂಡವು.

ಈ ಸಂಘರ್ಷಗಳ ನಡುವೆಯೇ, 1510ರ ಜನವರಿ 3ರಂದು (ರಂಝಾನ್ 22) ಅಫೊನ್ಸೊ ಡಿ ಅಲ್ಬುಕರ್ಕ್ ನೇತೃತ್ವದಲ್ಲಿ ಪೋರ್ಚುಗೀಸರು ಕುಟ್ಟಿಚ್ಚಿರದ ಮೇಲೆ ದಾಳಿ ನಡೆಸಿದರು. ಮಾಪಿಳ್ಳ ಸಮುದಾಯದ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದ ಮಿಶ್ಕಾಲ್ ಮಸೀದಿಯನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಿದರು. ಇದು ಕೇವಲ ಒಂದು ಕಟ್ಟಡದ ಮೇಲಿನ ದಾಳಿಯಾಗಿರಲಿಲ್ಲ; ಕೋಯಿಕ್ಕೋಡಿನ ಮುಸ್ಲಿಂ ವ್ಯಾಪಾರಿ ಸಮುದಾಯದ ಪ್ರಭಾವವನ್ನು ಕುಗ್ಗಿಸುವ ಮತ್ತು ಸ್ಥಳೀಯ ಜನರಲ್ಲಿ ಭಯ ಹುಟ್ಟಿಸುವ ರಾಜಕೀಯ ಸಂದೇಶವೂ ಅದರ ಹಿಂದೆ ಅಡಗಿತ್ತು ಎಂದು ಇತಿಹಾಸಕಾರರು ಸೂಚಿಸುತ್ತಾರೆ.

ಸಾಮೂದಿರಿಯ ಅಧೀನದಲ್ಲಿದ್ದ ಮುಸ್ಲಿಮರು ಮತ್ತು ನಾಯರ್‌ಗಳನ್ನು ಒಳಗೊಂಡ ಸೇನೆ ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿತು. ಹಿಂದೂಗಳಾಗಿದ್ದ ಸಾಮೂದಿರಿಗಳು ಮುಸ್ಲಿಮರ ಮಸೀದಿಯ ರಕ್ಷಣೆಗೆ ಸರ್ವ ಪ್ರಯತ್ನಗಳನ್ನು ಮಾಡಿದರು. ಆದರೆ, ಮಸೀದಿಯ ಹಲವು ಭಾಗಗಳು ಸುಟ್ಟು ಹೋದವು.‌

 ಕುಟ್ಟಿಚ್ಚಿರದ ಜನರಿಗೆ ಮರೆಯಲಾಗದ ಆ ಉಪವಾಸದ ದಿನಗಳ ಕರಾಳ ನೆನಪಿನ ಗುರುತುಗಳು ಇಂದಿಗೂ ಮಸೀದಿಯ ಮೇಲ್ಮಹಡಿಯ ಸ್ತಂಭಗಳಲ್ಲಿ ಕಾಣಿಸುತ್ತವೆ.

ವಸಾಹತುಶಾಹಿಯ ವಿರುದ್ಧ ಮಲಬಾರಿನ ಎರಡು ಪ್ರಬಲ ಸಮುದಾಯಗಳು ಒಂದಾಗಿ ಹೋರಾಡಿದ ಪರಿಣಾಮವಾಗಿಯೇ 1571ರಲ್ಲಿ ಚಾಲಿಯಂ ಕೋಟೆ ಸಾಮೂದಿರಿಯ ವಶಕ್ಕೆ ಬಂದಿತು. ಹಾನಿಗೊಂಡಿದ್ದ  ಮಿಶ್ಕಾಲ್ ಮಸೀದಿಯನ್ನು ಚಾಲಿಯಂ ಕೋಟೆಯ ಮರದ ಸಾಮಗ್ರಿಗಳಿಂದ ಸಾಮೂದಿರಿಗಳು ಪುನರ್‌ನಿರ್ಮಿಸಿ‌ಕೊಟ್ಟರು. ಹಿಂದೂ ಮುಸ್ಲಿಮರ ನಡುವೆ ಬಿರುಕು ಮೂಡಿಸಿ, ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳು ಮತ್ತು ಮಸಾಲೆ ವ್ಯಾಪಾರದ ಮೇಲಿನ ನಿಯಂತ್ರಣವನ್ನು ಸುಲಭವಾಗಿ ಪಡೆದುಕೊಳ್ಳುವ ಪೋರ್ಚುಗೀಸರ ಹುನ್ನಾರಕ್ಕೆ ಸಾಮೂದಿರಿ ರಾಜರು ಹಾಗೂ ಕುಂಞಾಲಿ ಮರಕ್ಕಾರ್ ಯೋಧರು ಅಡ್ಡಿಯಾದರು. ಇವರಿಬ್ಬರ ನಡುವಿನ ಬಾಂಧವ್ಯ ಪೋರ್ಚುಗೀಸರ ಪಾಲಿಗೆ ದುಃಸ್ವಪ್ನವಾಗಿತ್ತು.

ವಿಶಾಲವಾದ ತೆರೆದ ಪ್ರದೇಶದಲ್ಲಿ ಎತ್ತರವಾಗಿ ನಿಂತಿರುವ ಮಿಶ್ಕಾಲ್ ಮಸೀದಿಯ ಅಡಿಪಾಯವನ್ನು ಚೌಕಾಕಾರದ ಕಲ್ಲುಗಳಿಂದ ನಿರ್ಮಿಸಲಾಗಿದೆ. ನಾಲ್ಕು ದಿಕ್ಕುಗಳಲ್ಲೂ ವರಾಂಡ ಹೊಂದಿರುವ ಅಪರೂಪದ ಮಸೀದಿಗಳಲ್ಲಿ ಇದೂ ಒಂದು. ನಾಲ್ಕು ಬದಿಗಳಲ್ಲೂ ಅರ್ಧವೃತ್ತಾಕಾರದ ಬಾಗಿಲುಗಳಿವೆ. ಸುತ್ತುಗೋಡೆಗಳು ಮತ್ತು ಮರದ ಕಂಬಗಳು ಮೇಲ್ಛಾವಣಿಯನ್ನು ತೂಗಿ ನಿಲ್ಲಿಸುತ್ತವೆ.

ನಾವು ಮಸೀದಿಯ ಪ್ರಾಂಗಣದಲ್ಲಿದ್ದ ಕೊಳದ ಹತ್ತಿರ ಹೋದೆವು.‌ ಕೊಳದ ನೀರು ತಣ್ಣಗಿತ್ತು. ಬಿಸಿಲಲ್ಲಿ ಬೆಂದು ಹೋಗಿದ್ದ ಮುಖಕ್ಕೆ ತಣ್ಣೀರು ಚಿಮುಕಿಸಿದಾಗ ಹೊಸ ಉತ್ಸಾಹ ಮೂಡಿತು.‌ ಕೊಳದ ಮೇಲೆ ಕಾಂಕ್ರೀಟ್ ದೋಣಿಯನ್ನು ನಿಲ್ಲಿಸಿದ್ದರು. ಅದರೊಳಗೆ ಕೋಲಿನ ಪ್ಲಾಸ್ಟಿಕ್ ಮಗ್ ಗಳನ್ನು ಕಟ್ಟಿಟ್ಟಿದ್ದರು. ಅದರಿಂದ ನೀರು ಬಾಚಿ ಕಾಲು ತೊಳೆದು,‌ ಮೆಟ್ಟಿಲು ಹತ್ತಿ ಮೇಲ್ಭಾಗಕ್ಕೆ ಹೋದೆವು. ಕೆಳಗಿನ ಅಂತಸ್ತು ಬಿಟ್ಟರೆ, ಮೇಲಿನ ಮೂರು ಅಂತಸ್ತನ್ನೂ ಸಂಪೂರ್ಣವಾಗಿ ಮರದಿಂದಲೇ ನಿರ್ಮಿಸಲಾಗಿತ್ತು.

ವಿಶಿಷ್ಟ ವಾಸ್ತುಶಿಲ್ಪವೇ ಮಿಶ್ಕಾಲ್ ಮಸೀದಿಯ ಸೌಂದರ್ಯವನ್ನು ಹೆಚ್ಚಿಸಿದೆ. ಗೋಡೆಗಳನ್ನು ದಪ್ಪದ ಕೆಂಪು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಸುಣ್ಣದ ಮಿಶ್ರಣವನ್ನು ಕಲ್ಲಿನ ಕೆಲಸಕ್ಕೂ ಲೇಪನಕ್ಕೂ ಬಳಸಲಾಗಿದೆ. ಇಳಿಜಾರು ಛಾವಣಿ ಮತ್ತೊಂದು ವಿಶೇಷತೆ. ಮರದ ಕಂಬಗಳನ್ನು ವಿಶೇಷ ರೀತಿಯಲ್ಲಿ ಜೋಡಿಸಿ, ಅದರ ಮೇಲೆ ಹಲಗೆಗಳನ್ನು ಅಳವಡಿಸಿ ಮಂಗಳೂರು ಹೆಂಚುಗಳನ್ನು ಹಾಸಲಾಗಿದೆ. ಈ ಹೆಂಚುಗಳನ್ನು ಸೂಕ್ಷ್ಮವಾಗಿ ಗಮನಿಸಿ ಪೋಟೋಗಳನ್ನು ತೆಗೆಯುತ್ತಿದ್ದ ಪುನೀತ್ ಅಪ್ಪು ಅವರು ಅದರ ಮೇಲಿದ್ದ ಇಸವಿ ಹಾಗೂ ಕಂಪನಿಯ ಹೆಸರುಗಳನ್ನು ನಮಗೆ ತೋರಿಸಿದರು.‌‌

ಮಸೀದಿಯ ಮೇಲಿನ ಮೂರು ಮಹಡಿಗಳನ್ನು ಸಂಪೂರ್ಣವಾಗಿ ಮರದಿಂದ ನಿರ್ಮಿಸಲಾಗಿದೆ. ಮಸೀದಿಯ ಒಳಗೆ ಮೇಲ್ಮಹಡಿಗಳನ್ನು ಸಂಪರ್ಕಿಸುವ ಎರಡು ತೇಗದ ಕಂಬಗಳಿವೆ. ಚೌಕಾಕಾರ ಮತ್ತು ಅಷ್ಟಕೋನಾಕಾರದ ವಿನ್ಯಾಸಗಳಲ್ಲಿ ಪರ್ಯಾಯವಾಗಿ ರೂಪುಗೊಂಡಿರುವ ಈ ಕಂಬಗಳಲ್ಲಿ ಕೆಳಗಿನಿಂದ ಮೇಲಿನವರೆಗೆ ಸುಂದರ ಕೆತ್ತನೆಗಳಿವೆ.

ಮೇಲ್ಮಡಿಯನ್ನು ನೋಡಿ ಕೆಳಗಿಳಿದ ನಮಗೆ ಮುಕ್ರಿಕಾ ಪಲ್ಲಕ್ಕಿಯನ್ನು ತೋರಿಸಿದರು.‌ ಹಿಂದೆ ಖಾಝಿಗಳು ಸಂಚರಿಸಲು ಬಳಸುತ್ತಿದ್ದ ಪಲ್ಲಕ್ಕಿಯದು. ಆ ಪಲ್ಲಕ್ಕಿಯನ್ನು ಹೊರಲು ಮೂವರು ಕೆಲಸಗಾರರು ಇರುತ್ತಿದ್ದರು. ಇಬ್ಬರು ಪಲ್ಲಕ್ಕಿಯನ್ನು ಹೊತ್ತುಕೊಂಡು ನಡೆಯುವಾಗ ಇನ್ನೊಬ್ಬ ಅವರಿಗೆ ಬದಲಿಯಾಗಿ ಅವರೊಂದಿಗೆ ನಡೆಯುತ್ತಿದ್ದನು ಎಂದು ಮುಕ್ರಿಕಾ‌ ಹೇಳಿದರು. ಪಲ್ಲಕ್ಕಿಯ ಮೇಲೆ‌ ಸುಂದರವಾದ ಚಿತ್ರಗಳನ್ನು ಬಿಡಿಸಿದ್ದರು.‌ ಅದರಲ್ಲೊಂದು ಚಿತ್ರ ನನ್ನ ಗಮನ ಸೆಳೆಯಿತು. ಅದೊಂದು ಹೂದಾ‌ನಿಯ ಚಿತ್ರ.‌‌ ಹೂದಾನಿಯಿಂದ ಮೂರು ಹೂವುಗಳು ಮತ್ತು ಸುರುಳಿ ಆಕಾರದ ಎಲೆಗಳು ಮೇಲಕ್ಕೆ ಚಾಚಿಕೊಂಡಿವೆ.

ಹೂದಾನಿಯ ಮಧ್ಯಭಾಗದಲ್ಲಿ ವೃತ್ತಾಕಾರದ ವಿನ್ಯಾಸ ಇದೆ.‌ ನಾಲ್ಕು ಮೂಲೆಗಳಲ್ಲೂ ಅರ್ಧ ಸೂರ್ಯ ಅಥವಾ ಕಮಲದ ದಳಗಳಂತಿರುವ ಆಲಂಕಾರಿಕ ಚಿತ್ತಾರವನ್ನು ಬಿಡಿಸಲಾಗಿದೆ.‌ ಚಿತ್ರವನ್ನು ಗಾಢ ಕಂದು ಬಣ್ಣದ ಮರದ ಫಲಕದ ಮೇಲೆ ಹಳದಿ, ಹಸಿರು ಮತ್ತು ಗುಲಾಬಿ ಬಣ್ಣಗಳಿಂದ ಚಿತ್ರಿಸಲಾಗಿದೆ. ನಾನು ಅದರ ಪೋಟೋಗಳನ್ನು‌ ಕ್ಲಿಕ್ಕಿಸಿದೆ.‌

 ಮುಅಝಿನ್ ನಮ್ಮನ್ನು ಮಸೀದಿಯ ಇನ್ನೊಂದು ಭಾಗಕ್ಕೆ ಕರೆದೊಯ್ದರು. ಅಲ್ಲಿ ಅನೇಕ ಐತಿಹಾಸಿಕ ವಸ್ತುಗಳು ಇದ್ದವು. ಕತ್ತಲಲ್ಲಿ ಹಳೆಯ ಅಲಮಾರವಿತ್ತು. ಅದರಲ್ಲಿ 600 ವರ್ಷಗಳಷ್ಟು ಹಳೆಯ ಗ್ರಂಥಗಳಿದ್ದವು. ಅಲಮಾರದಿಂದ ಒಂದು ಗ್ರಂಥವನ್ನು ತೆಗೆದು ಮುಕ್ರಿಕಾ ಇದು 600 ವರ್ಷಗಳಷ್ಟು ಹಳೆಯ, ಕೈಯಲ್ಲಿ ಬರೆದ ಗ್ರಂಥವೆಂದು ತೋರಿಸಿದರು.‌ ಯಾಕೋ ನಮಗೆ ನಂಬುವುದು ಕಷ್ಟವಾಯಿತು. ಮುನವ್ವರ್ ಅದರ ಮೇಲೆ ಮೊಬೈಲ್ ಟಾರ್ಚ್ ಲೈಟ್ ಹಾಕಿ ನೋಡಿ, ‘ಇಮಾಮ್ ಗಝ್ಝಾಲಿಯವರು ಬರೆದಿರುವ ‘ಇಹ್ಯಾ ಉಲೂಮುದ್ದೀನ್’ ಎಂದರು. 

ನಮ್ಮ ಮುಂದಿದ್ದ ಮೇಜಿನ ಮೇಲೆ ಒಂದು ತೆಂಗಿನ ಕಾಯಿಯನ್ನು ಇಟ್ಟಿದ್ದರು.‌ ಅದು ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದ್ದೆಂದು ಮುಕ್ರಿಕಾ ಹೇಳಿದರು. ಅದನ್ನೂ ನಂಬಲು ನಮ್ಮಿಂದ ಸಾಧ್ಯವಾಗಲಿಲ್ಲ.‌ ಅಲ್ಲೇ ಕೆಳಗೆ ಬೆಂಚಿನ ಮೇಲೆ ಚಪ್ಪಲಿಗಳಿದ್ದವು. ಅವು ಯಾರದ್ದೆಂದು ಕೇಳಿದಾಗ ಸಾಮೂದಿರಿ ರಾಜರ ಕಾಲದದ್ದೆಂದು ಉತ್ತರ ಬಂತು.‌

ಕೋಣೆಯ ಒಂದು ಮೂಲೆಯಲ್ಲಿದ್ದ ನಗಾರಿಯೊಂದು ನಮ್ಮ ಗಮನ ಸೆಳೆಯಿತು. ಸ್ಥಳೀಯರು ಇದನ್ನು ‘ತಾಂಬಾರ್’ ಎನ್ನುತ್ತಾರಂತೆ. ಮೊದಲ ನೋಟಕ್ಕೆ ಅದೊಂದು ಬೃಹತ್ ಡೋಲಿನಂತೆ ಕಂಡರೂ, ಅದರ ಹಿಂದೆ ಒಂದು ಕಾಲಘಟ್ಟದ ಸಾಮಾಜಿಕ ಇತಿಹಾಸವೇ ಅಡಗಿದೆ ಎನಿಸಿತು. ವಿಶೇಷ ಸಂದರ್ಭಗಳಲ್ಲಿ ಚಂದ್ರ ದರ್ಶನವಾದ ಸುದ್ದಿ ಹಾಗೂ ಈದ್ ಹಬ್ಬದ ಘೋಷಣೆಯನ್ನು ಊರಿಗೆ ತಿಳಿಸಲು ಈ ತಾಂಬಾರ್ ಬಡಿಯುತ್ತಿದ್ದರು. ಆಧುನಿಕ ಸಂವಹನ ವ್ಯವಸ್ಥೆಗಳೇ ಇಲ್ಲದ ಕಾಲದಲ್ಲಿ ತಾಂಬಾರಿನ ಧ್ವನಿಯೇ ಕುಟ್ಟಿಚ್ಚಿರದ ಜನರಿಗೆ ಅಧಿಕೃತ ಸುದ್ದಿಯಾಗಿತ್ತು. ರಂಝಾನಿನ ಆರಂಭದ ಸಂತೋಷವೂ, ಈದ್ ಹಬ್ಬದ ಉಲ್ಲಾಸವೂ, ಅನೇಕ ಧಾರ್ಮಿಕ ಕಾರ್ಯಕ್ರಮಗಳ ಘೋಷಣೆಯೂ ಈ ತಾಂಬಾರದ ನಾದದೊಂದಿಗೆ ಜನರ ಬದುಕಿಗೆ ಪ್ರವೇಶಿಸುತ್ತಿದ್ದವು. ಆ ತಾಂಬಾರ್  ನಮ್ಮ ಮುಂದೆ ಮೌನವಾಗಿ ನಿಂತಿದ್ದರೂ, ಅದರ ಚರ್ಮದ ಮೇಲೆ ಮೂಡಿರುವ ಕಾಲದ ಗುರುತುಗಳು ಶತಮಾನಗಳ ಇತಿಹಾಸವನ್ನು ಹೇಳುತ್ತಿದ್ದವು. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಇಂದಿಗೂ ತಾಂಬಾರ್ ಬಡಿಯುವುದಾಗಿ ಮುಕ್ರಿಕಾ ಹೇಳಿ, ಅದಕ್ಕೆ ಬಡಿಯುವ ಕೋಲು ತೋರಿಸಿದರು. ಒಂದೆರೆಕ್ಷಣ ನಾವೂ ಬಡಿದು ಇತಿಹಾಸದ ಕೊಂಡಿಯನ್ನು ಸೇರಿಕೊಂಡೆವು.‌

ಆ ಕೋಣೆಯ ಇನ್ನೊಂದು ಕಡೆ ಒಂದು ಕನ್ನಡಿಯಿತ್ತು. ವೆಳಿಯಂಗೋಡು ಉಮರ್ ಖಾಝಿಯವರು ಆ ಕನ್ನಡಿ ಬಳಸುತ್ತಿದ್ದರಂತೆ.‌‌ ಅವರ ಕವಿತೆಯ ಸಾಲುಗಳನ್ನು ಬರೆದಿದ್ದ ಗೋಡೆಯ ಭಾಗವನ್ನು ವಿಶೇಷವಾಗಿ ಗುರುತಿಸಲಾಗಿದೆ. ಆ ಸಾಲುಗಳನ್ನು ಆನಂತರ ಬರೆಯಲಾಗಿದೆ ಎಂದು ಮುಕ್ರಿಕಾ ತಿಳಿಸಿದರು.‌

ನಂತರ ನಾವು ಕೆಳಗಿಳಿದು ಮಿಂಬರ್ ನೋಡಲು ಹೋದೆವು. ಇಡೀ ಮಸೀದಿ ಮೌನದಲ್ಲಿ ಅದ್ದಿ ತೆಗೆದಂತಿತ್ತು.‌ ಅಲ್ಲಲ್ಲಿ ಒಂದಿಬ್ಬರು ಹಿರಿಯರು ಬಿಟ್ಟರೆ ಮಸೀದಿಯಲ್ಲಿ ಯಾರೂ ಇರಲಿಲ್ಲ. ಆ ನಿಗೂಢ ಶಾಂತಿಯ ಆವರಣದೊಳಗೆ ಒಂದರೆಕ್ಷಣ ಹಾಗೆಯೇ ಇದ್ದು ಬಿಡೋಣ ಅನಿಸಿತು.‌

ಮಿಂಬರ್ ಗೆ ಆನಿಸಿ ಇಟ್ಟಿದ್ದ ಶುಕ್ರವಾರದ ಜುಮಾ ಖುತ್ಬಾ ಸಮಯದಲ್ಲಿ ಬಳಸುವ ಕತ್ತಿ ನಮ್ಮ‌ ಗಮನ ಸೆಳೆಯಿತು. ಟಿಪ್ಪು ಸುಲ್ತಾನ್ ಕಾಲದ ಹಿಡಿಯಿದ್ದ ಕತ್ತಿಯಾಗಿತ್ತು ಅದು. ಆದರೆ, ಆ ಕಾಲದ ಕತ್ತಿ ಈಗ ಅಲ್ಲಿಲ್ಲ, ಹಿಡಿ‌ ಮಾತ್ರ ಉಳಿದಿದೆ. ಹಳೆಯ ಹಿಡಿಗೆ ಈಗ ಹೊಸ ಕತ್ತಿ ಸೇರಿಕೊಂಡಿದೆ.

ಮಸೀದಿಯ ಒಳಗೆ ಹೋಗುವಾಗ ಕಾಲು ತೊಳೆದುಕೊಂಡೇ ಹೋಗಿದ್ದರೂ ಮೇಲ್ಭಾಗ ಸುತ್ತಾಡಿ ಬಂದಿದ್ದರಿಂದ ಪಾದಗಳಿಗೆ ಧೂಳು ಮೆತ್ತಿಕೊಂಡಿತ್ತು. ಅದೇ ಕಾಲಿನಲ್ಲಿ‌ ಮಿಂಬರ್ ತನಕ ಹೋಗಿದ್ದಕ್ಕೆ ಹಿರಿಯರೊಬ್ಬರಿಂದ ಸಹಸ್ರನಾಮಾರ್ಚನೆಯಾಯಿತು.‌ ಇನ್ನೊಂದಿಷ್ಟು ಹೊತ್ತು ಮಸೀದಿಯ ನಿರ್ಮಲ ವಾತಾವರಣದಲ್ಲಿ ಇದ್ದು ಬಿಡೋಣ ಅನಿಸಿದರೂ ಹಿರಿಯರ ವರ್ತನೆಯಿಂದ ಮನಸುಗೆಟ್ಟು ಹೊರಟು ಬಂದೆವು.‌ ಹಿಂದಿರುಗುವಾಗ ಗೇಟಿನ ಬಳಿ ಒಂದಿಷ್ಟು ಹೊತ್ತು ಮತ್ತೆ ಮಸೀದಿಯೆಡೆಗೆ ದೃಷ್ಟಿ ಹಾಯಿಸಿದೆವು. ಹದಿನಾಲ್ಕನೇ ಶತಮಾನ, ಸಾಮೂದಿರಿ ರಾಜರು,‌ ನಾಯರುಗಳು, ಅವರ ಜೊತೆಗೆ ಗಟ್ಟಿಯಾಗಿ ನಿಂತ ಮುಸ್ಲಿಮರು, ಅವರ ಸಾಂಸ್ಕೃತಿಕ ಬದುಕು, ಮರಕ್ಕಾರ್ ಗಳ ವೀರ ಪರಾಕ್ರಮ, ಕಡಲಾಳದ ವ್ಯಾಪಾರ ವಹಿವಾಟು, ಪೋರ್ಚುಗೀಸರ ವ್ಯಾಪಾರಿ ಕುಶಾಗ್ರತೆ, ಯುದ್ಧ ನೈಪುಣ್ಯ, ಕ್ರೌರ್ಯ, ಸಾಮೂದಿರಿ ರಾಜರ ಧಾರ್ಮಿಕ ಸಹಿಷ್ಣುತೆ ಮೊದಲಾದವುಗಳಿಗೆ ಪ್ರತೀಕವಾಗಿ ಕುಟ್ಟಿಚ್ಚಿರ ಮಸೀದಿ ತನ್ನ ಪುರಾತನ ಸೊಬಗನ್ನು ಪ್ರದರ್ಶಿಸುತ್ತಾ ಬಾನೆತ್ತರಕ್ಕೆ ತಲೆಯೆತ್ತಿ ನಿಂತಿತ್ತು. ಮಸೀದಿಯ ಮುಂದೆ ಗೆಳೆಯರೆಲ್ಲ ಒಟ್ಟಿಗೆ ನಿಂತು ಪೋಟೋ ತೆಗೆಸಿಕೊಂಡೆವು.‌ ಸೆಲ್ಫಿಗಳ ಮೇಲಾಟ ಜೋರಾಗಿತ್ತು.‌ ಆಕಾಶ ನೋಡಿದರೆ ಮಳೆ ಬರುವ ಸೂಚನೆಯಿತ್ತು.

ಮಸೀದಿಯ ಆವರಣದಿಂದ ಹೊರಗೆ ಬರುತ್ತಾ ಕುಟ್ಟಿಚ್ಚಿರ ಎಂಬ ಪುಟ್ಟ ಲೋಕವು ಮನಪಟಲದಲ್ಲಿ ಬಿಚ್ಚಿಕೊಳ್ಳಲಾರಂಭಿಸಿತು. ಕುಟ್ಟಿಚ್ಚಿರವು ಕೋಯಿಕ್ಕೋಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಈ ನೆಲವು ಕೇವಲ ಒಂದು ಪ್ರದೇಶವಲ್ಲ; ಅದು ಮಲಬಾರಿನ ಬಹುಸಂಸ್ಕೃತಿಯ ಪರಂಪರೆ, ಸಮುದಾಯಗಳ ಸಹಬಾಳ್ವೆ ಮತ್ತು ವಸಾಹತುಶಾಹಿಯ ವಿರುದ್ಧದ ಪ್ರತಿರೋಧದ ಜೀವಂತ ಸ್ಮಾರಕವಾಗಿದೆ. ಪ್ರಸ್ತುತ ಭಾರತದ ರಾಜಕಾರಣಕ್ಕೆ ಸಾಮೂದಿರಿ ದೊರೆಗಳು ಬಹುದೊಡ್ಡ ಸೌಹಾರ್ದ ಮಾದರಿಯನ್ನು ಬಿಟ್ಟು ಹೋಗಿದ್ದಾರೆನಿಸಿತು.‌

ಕೆರೆ ಮತ್ತು ಮಸೀದಿಯಲ್ಲಿ ಸುತ್ತಾಡಿ ಸುಸ್ತಾಗಿದ್ದ ನಾವು ಟೀ ಕುಡಿಯಲೆಂದು ಹೋಟೆಲ್ ಹುಡುಕುತ್ತಾ ಮತ್ತೆ ಕೆರೆಯ ದಾರಿಯಾಗಿ ನಡೆದೆವು.‌ ಕೆರೆಯ ಪಕ್ಕದ ಬಸ್ ನಿಲ್ದಾಣದಲ್ಲಿ ವಯಸ್ಸಾದವರು ಕೂತು ಹರಟೆ ಹೊಡೆಯುತ್ತಿದ್ದರು. ಆ ಕೆರೆ ಅವರ ದಿನಚರಿಯ ಭಾಗವಾಗಿರುವುದು ಅವರ ಹಾವಭಾವಗಳಿಂದಲೇ ತಿಳಿಯುತ್ತಿತ್ತು.‌ ಒಬ್ಬರು ಹರಟೆ ಹೊಡೆಯುತ್ತಲೇ ಸಣ್ಣಪುಟ್ಟ ತಿನಿಸುಗಳ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ ಎಂಬುದು ಕೋಯಿಕ್ಕೋಡಿನ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವುದಕ್ಕೆ ಸಾಕ್ಷಿ ಎಂಬಂತೆ ಅವರು ಕಂಡರು.‌ ಮತ್ತೆ ಕೆರೆಯ ಕಡೆಗೆ ನೋಡಿದರೆ ನೀರು ಹಕ್ಕಿಗಳು ಮೀನುಗಳನ್ನು ಹುಡುಕುತ್ತಾ ನೀರಿನಲ್ಲಿ ಮುಳುಗೇಳುತ್ತಿದ್ದವು. ಅವುಗಳ ಚಲನವಲನಗಳನ್ನು ಸೆರೆ ಹಿಡಿಯಲು ಹಲವು ಕ್ಯಾಮೆರಾಗಳು ಪ್ರಯತ್ನಿಸುತ್ತಿದ್ದವು. ಆದರೆ, ಜನರು ಕ್ಯಾಮೆರಾ ಹೊರ ತೆಗೆದರೆ‌ ಸಾಕು ಅವುಗಳು ಸರಕ್ಕಂತ ನೀರಿನಾಳಕ್ಕೆ ಮರೆಯಾಗಿ ಆಟವಾಡಿಸುತ್ತಿದ್ದವು.

ಕುಟ್ಟಿಚ್ಚಿದರಿಂದ ನಾವು ಕೋಯಿಕ್ಕೋಡ್ ನತ್ತ ಹೊರಟು ಬರುವಾಗ ನಮ್ಮ ಮನಸ್ಸುಗಳೂ ಆ ಹಕ್ಕಿಗಳಂತೆ ಇತಿಹಾಸ ಮತ್ತು ವರ್ತಮಾನದ ನಡುವೆ ಜೀಕಾಡುತ್ತಾ, ಹರಟೆ ಮತ್ತು ಹಾಸ್ಯಗಳ ಅಲೆಯಲ್ಲಿ ತೇಲುತ್ತಿದ್ದವು.

– ಸ್ವಾಲಿಹ್‌ ತೋಡಾರ್


ಈ ಅಧ್ಯಯನಗಳು ಭೂಮಿಗಿಳಿಯುವುದು ಯಾವಾಗ

Part – 2

ಪ್ರ: ಸಮಾಜ ವಿಜ್ಞಾನಗಳಲ್ಲಿನ ನಿಯಂತ್ರಣಗಳ ಬಗ್ಗೆ ಸಮಾಜದ ಒಟ್ಟು ಸ್ಥಿತಿಯ ಜತೆಜತೆಗೂ ಮಾತಾಡಬಹುದು. ಇಂದಿನ ನಮ್ಮ ಬದುಕಿನ ಪರಿಸ್ಥಿತಿ ತುಂಬಾ ಸ್ಪರ್ಧೆಯಿಂದ ಕೂಡಿದೆ. ಎಲ್ಲರೂ ತಮ್ಮ ಸ್ವಾತಂತ್ರ್ಯ, ಹಕ್ಕುಗಳು, ಸ್ಥಾನಮಾನ ಮತ್ತು ಬೆಂಬಲಕ್ಕಾಗಿ ಪರಸ್ಪರ ಸ್ಪರ್ಧಿಸುತ್ತಿದ್ದಾರೆ. ಪರಸ್ಪರ ಅರ್ಥಮಾಡಿಕೊಳ್ಳಲು, ಇತರರನ್ನು ಒಳಗೊಳ್ಳಲು, ತಾಳ್ಮೆ ತೋರಲು ಅಥವಾ ಕರುಣೆ ತೋರಲು ಇರುವ ಅವಕಾಶಗಳು ಕಡಿಮೆಯಾಗುತ್ತಿವೆ. ಕರುಣೆ ಮತ್ತು ಶಾಂತಿಯ ಭಾಷೆಯೇ ಕಣ್ಮರೆಯಾಗುತ್ತಿರುವಂತೆ ತೋರುತ್ತಿದೆ. ಸಾಮಾಜಿಕ ಸಂವಾದ ಹೆಚ್ಚು ನಿಯಂತ್ರಿತವಾಗುತ್ತಿರುವುದು ಕೂಡಾ ಇದೇ ಕಾರಣಕ್ಕಾಗಿರಬಹುದೇ?

ಸರುಕ್ಕೈ: ಹೌದು, ಪರಸ್ಪರ ಅರ್ಥಮಾಡಿಕೊಳ್ಳದ ಒಂದು ಸಂಕಷ್ಟಕರ ಸ್ಥಿತಿಯಲ್ಲಿ ನಾವಿದ್ದೇವೆ. ಅಧ್ಯಯನ ಶಿಸ್ತುಗಳ (disciplines) ಸ್ವಭಾವ ಇಲ್ಲೊಂದು ಮುಖ್ಯ ಸಮಸ್ಯೆ ಎನಿಸಿದೆ. ಈ ಶಿಸ್ತುಗಳ ಉದ್ದೇಶಿತ ವಸ್ತು ಯಾರು? ಉದಾಹರಣೆಗೆ, ಸಾಮಾಜಿಕ ಶಾಸ್ತ್ರಗಳು ಸಮಾಜದ ಒಂದು ಸಣ್ಣ ವಿಭಾಗವನ್ನೇ ಮುಖ್ಯವಾಗಿ ಅಧ್ಯಯನ ನಡೆಸುತ್ತವೆ. ಇತರ ಜ್ಞಾನ ಶಿಸ್ತುಗಳೊಂದಿಗೆ ಹೋಲಿಸಿದರೆ, ಸಾಮಾನ್ಯ ಜನರಿಗೆ ನೇರವಾಗಿ ಉಪಯೋಗವಾಗುವ ರೀತಿಯಲ್ಲಿ ಜ್ಞಾನವನ್ನು ರೂಪಿಸುವಲ್ಲಿ ಸಾಮಾಜಿಕ ಶಾಸ್ತ್ರಗಳು ಬಹಳಷ್ಟು ಹಿಂದುಳಿದಿವೆ. ಜಾತಿ, ಮತ, ಸಾಮಾಜಿಕ ಸಿದ್ಧಾಂತಗಳು ಮುಂತಾದ ವಿಷಯಗಳ ಬಗ್ಗೆ ಅಕಾಡೆಮಿಕ್ ಲೋಕದಲ್ಲಿ ಅನೇಕ ಬರಹಗಳು ಬಂದಿವೆ. ಆದರೆ, ನಾವು ಕಾಣುತ್ತಿರುವುದು ಸಾಮಾನ್ಯ ಜನರ ನಡುವೆ ಉಂಟಾಗುತ್ತಿರುವ ಸಾಮಾಜಿಕ ಸಂಘರ್ಷಗಳೇ. ಆ ವಿಷಯಗಳ ಅಧ್ಯಯನಗಳು ಬಹಳ ಉನ್ನತ ಮಟ್ಟದಲ್ಲಿ, ಅತೀ ಸಂಕೀರ್ಣವಾದ ಭಾಷೆಯಲ್ಲಿ ಮಾತ್ರ ವಿರಚಿತವಾಗುತ್ತಿವೆ. ಆ ಜ್ಞಾನ ಸಾಮಾನ್ಯ ಜನರಿಗೆ ಹೇಗೆ ತಲುಪುತ್ತದೆ ಎಂಬುದು ಮುಖ್ಯ ಪ್ರಶ್ನೆ. ಅದರ ಪ್ರಾಯೋಗಿಕತೆ ಹಾಗೂ ಹಸ್ತಾಂತರದ ಬಗ್ಗೆ ನೀವು ಪ್ರಶ್ನಿಸಬೇಕು.

ಕರುಣೆ, ಪರಸ್ಪರ ಗೌರವ, ಅಹಿಂಸೆ ಮುಂತಾದ ವಿಚಾರಗಳು ನಮ್ಮ ದೈನಂದಿನ ಜೀವನವನ್ನು ಹೇಗೆ ಪ್ರಭಾವಿಸಬಹುದು? ಸಾಮಾನ್ಯ ಜನರು ಅಂತಹ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವಂತಹ ವಾತಾವರಣ ನಿರ್ಮಿಸಲು ಸಾಮಾಜಿಕ ಶಾಸ್ತ್ರಗಳ ಜ್ಞಾನ ಸಹಾಯ ಮಾಡಬಹುದೇ? ಈ ಆಲೋಚನೆಗಳನ್ನು ಸಮಾಜ ವಿಜ್ಞಾನದ ತರಬೇತಿ ಪಡೆಯದವರಿಗೂ ತಾಂತ್ರಿಕ ಪದಗಳನ್ನು ತಿಳಿಯದವರಿಗೂ ತಲುಪಿಸುವುದು ಅತ್ಯಂತ ಮುಖ್ಯವಾಗಿದೆ. ಸಾಮಾನ್ಯ ಜನರಿಗಾಗಿ ಪ್ರಕಟವಾಗುವ ಮಾಸಪತ್ರಿಕೆಗಳು ಮತ್ತು ಇತರ ವೇದಿಕೆಗಳ ಮಹತ್ವ ಇಲ್ಲಿ ಬಹಳ ಹಿರಿದು. ಈ ವಿಷಯದಲ್ಲಿ ಕೇರಳ ಬಹಳ ಮುಂಚೂಣಿಯಲ್ಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿನ ಸಾರ್ವಜನಿಕ ಸಂವಾದದ ಗುಣಮಟ್ಟ ಉತ್ತಮವಾಗಿದೆ.

ಸಾಮಾಜಿಕ ಶಾಸ್ತ್ರಗಳಲ್ಲಿ ಹುಟ್ಟುವ ಆಲೋಚನೆಗಳನ್ನು ಸಮಾಜದ ಮಟ್ಟಕ್ಕೆ ಹೇಗೆ ತರುವುದು ಎಂಬುದೇ ದೊಡ್ಡ ಸವಾಲು. ಸಮಾಜವಿಜ್ಞಾನದ ಪ್ರತಿಯೊಂದು ಶಿಸ್ತು ಕೂಡಾ ಮಾನವ ಜೀವನದ ಅನೇಕ ಅಂಶಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ನಿರ್ಮಿಸಿದೆ. ಮಾನವಶಾಸ್ತ್ರ (Anthropology), ಸಮಾಜವಿಜ್ಞಾನ ಮತ್ತಿತರ ಆಧ್ಯಯನ ಶಿಸ್ತುಗಳು ‘ಇತರರನ್ನು’ ಅರ್ಥಮಾಡಿಕೊಳ್ಳಲು ಬಹಳ ಕಾಲ ಮತ್ತು ಪರಿಶ್ರಮವನ್ನು ವ್ಯಯಿಸಿವೆ. ವಿಭಿನ್ನ ಸಮಾಜಗಳ ನೈತಿಕ ರಚನೆ ಮತ್ತು ಒಳಗಿನ ತರ್ಕವನ್ನು ಅವು ಅಧ್ಯಯನ ಮಾಡುತ್ತವೆ. ಆದರೆ, ಆ ಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ದೊಡ್ಡ ಕೊರತೆ ಇದೆ ಎನ್ನುವುದು ನನ್ನ ಅನಿಸಿಕೆ. ಒಂದು ಸಮಾಜ ಮತ್ತೊಂದು ಸಮಾಜವನ್ನು ಹೆಚ್ಚು ಅರ್ಥಮಾಡಿಕೊಳ್ಳಲು, ಅದರ ಮೂಲಕ ಹೆಚ್ಚಿನ ಸಂವಾದ ಮತ್ತು ಕರುಣೆಗೆ ದಾರಿ ತೆರೆಯಲು ಈ ಜ್ಞಾನ ಸಹಾಯ ಮಾಡಬೇಕು. ಆದರೆ ಅಕಾಡೆಮಿಕ್ ಪುಸ್ತಕಗಳ ಬಹುಪಾಲು ಸಾಮಾನ್ಯ ಜನರ ಕೈಗೆ ತಲುಪುವುದೇ ಇಲ್ಲ.

ಇತಿಹಾಸ, ಮಾನವಶಾಸ್ತ್ರ, ಸಮಾಜವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅತ್ಯಂತ ಆಳವಾದ ಅಧ್ಯಯನಗಳು ನಡೆದಿವೆ. ಅವುಗಳೊಂದಿಗೆ ಜನರನ್ನು ಬೆಸೆಯುವುದು ಹೇಗೆನ್ನುವುದೇ ಪ್ರಶ್ನೆ. ಉದಾಹರಣೆಗೆ, ಲೈಲಾ ಅಬೂ-ಲುಘೋದ್ ಬರೆದಿರುವ ಮುಸ್ಲಿಮರು, ಬರ್ಬರ್ ಸಮುದಾಯಗಳು ಮತ್ತು ಜಾತಿಯ ಕುರಿತ ಪುಸ್ತಕವನ್ನು ಬೇಕಾದರೆ ನನಗೆ ಚರ್ಚಿಸಬಹುದು. ಅದನ್ನು ಓದಿದಾಗ ಸಮಾಜಗಳ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಅಕಾಡೆಮಿಕ್ ವಲಯದ ಹೊರಗಿನ ಜನರಿಗೆ ಇಂತಹ ಅಧ್ಯಯನಗಳು ಸುಲಭವಾಗಿ ಲಭ್ಯವಾಗುವುದಿಲ್ಲ. ಈ ರೀತಿಯ ಸಾಹಿತ್ಯ ಮತ್ತು ಅಧ್ಯಯನಗಳು ಸಮಾಜದ ಮಟ್ಟಕ್ಕೆ ಇಳಿದರೆ, ನಾವು ಪರಸ್ಪರ ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯ ಇದೆ. ಮೊದಲನೆಯದಾಗಿ ಬೇಕಾಗಿರುವುದು ಕೂಡಾ ಈ ಅರ್ಥಮಾಡಿಕೊಳ್ಳುವಿಕೆ ಮತ್ತು ಹೊಸ ಆಲೋಚನೆಗಳನ್ನು ಸ್ವೀಕರಿಸುವ ಮನೋಭಾವ. ಹೀಗಾಗಿ, ಅಕಾಡೆಮಿಕ್ ಗ್ರಂಥಗಳಲ್ಲಿನ ಈ ಚಿಂತನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಸಾಧ್ಯವೇ ಎನ್ನುವ ಪ್ರಶ್ನೆ ನಿರ್ಣಾಯಕವಾದದ್ದು.

ನಾನು ಮೊದಲೇ ಹೇಳಿದಂತೆ, ಇತರ ಸಮಾಜಗಳು ಮತ್ತು ಸಮುದಾಯಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಅವರ ವೈವಿಧ್ಯಮಯ ಕಥೆಗಳು ಮತ್ತು ಪ್ರತಿನಿಧಿತ್ವಗಳನ್ನು ನಾವು ತಿಳಿದುಕೊಳ್ಳಬೇಕು. ನೀವು ಉಲ್ಲೇಖಿಸಿದ ಕರುಣೆ ಮತ್ತು ಕಾಳಜಿಯ ಕೊರತೆ ಅನೇಕ ಸಂದರ್ಭಗಳಲ್ಲಿ ಬರುತ್ತಿರುವುದು ಅಜ್ಞತೆಯಿಂದಾಗಿ. ಜನರ ನಡುವೆ ದ್ವೇಷ ಮತ್ತು ವೈಮನಸ್ಸನ್ನು ಬಿತ್ತಲು ಖಂಡಿತವಾಗಿಯೂ ಸಾಧ್ಯವಿದೆ. ಆದರೆ, ದ್ವೇಷ ಇಲ್ಲಿ ವ್ಯಾಪಕಗೊಂಡಿರುವುದು ತಿಳಿವಳಿಕೆಯ ಕೊರತೆಯಿಂದಲೇ. ಉದಾಹರಣೆಗೆ, ನಾನು ಹೇಳಿದಂತೆ ಬೆಂಗಳೂರಿನಲ್ಲಿ ವಿಭಿನ್ನ ಸಮುದಾಯಗಳ ಮಧ್ಯೆ ಅನೇಕ ಪೂರ್ವಗ್ರಹಗಳಿವೆ. ಮುಸ್ಲಿಮ್ ಸಮುದಾಯದ ಬಗ್ಗೆ ವ್ಯಾಪಕವಾದ ತಪ್ಪು ಕಲ್ಪನೆಗಳು ರೂಪುಗೊಂಡಿವೆ. “ನೀವು ಜೀವನದಲ್ಲಿ ಒಬ್ಬ ಮುಸ್ಲಿಮನನ್ನಾದರೂ ನೇರವಾಗಿ ಭೇಟಿ ಮಾಡಿದ್ದೀರಾ? ಅವರ ಮನೆಗೆ ಹೋಗಿದ್ದೀರಾ? ಅವರ ಜೊತೆ ಕೂತು ಮಾತನಾಡಿದ್ದೀರಾ?” ಎಂದೆಲ್ಲಾ ನಾನವರೊಂದಿಗೆ ಕೇಳುತ್ತಿರುತ್ತೇನೆ .ಮುಸ್ಲಿಮರೊಂದಿಗೆ ಅವರು ನೇರವಾಗಿ ಯಾವ ಸಂಪರ್ಕವನ್ನೂ ಹೊಂದಿಲ್ಲ ಎನ್ನುವುದೇ ನಿಜ. ಅವರ ಸಂಪೂರ್ಣ ದೃಷ್ಟಿಕೋನ ರೂಪುಗೊಂಡಿರುವುದು ಶುದ್ಧ ಅಜ್ಞಾನದಿಂದ. ಹಾಗಾಗಿ ಪರಸ್ಪರ ಅನುಸಂಧಾನ ಹಾಗೂ ಕಥಾವಿನಿಮಯಗಳ ಮಹತ್ವವನ್ನು ನಾನಿಲ್ಲಿ ಒತ್ತಿಹೇಳಲು ಬಯಸುತ್ತೇನೆ. ಬೆಂಗಳೂರಿನ ಹಿಂದೂ ಸಮುದಾಯಗಳೊಳಗೆ ಕೂಡಾ ದಲಿತರ ಬಗ್ಗೆ ಅನೇಕ ಕಪೋಲಕಲ್ಪಿತ ಕಲ್ಪನೆಗಳಿವೆ. ಆದರೆ, ಅವರಲ್ಲಿ ಹಲವರಿಗೆ ಒಂದೇ ಒಂದು ದಲಿತ ವ್ಯಕ್ತಿಯೊಂದಿಗೂ ಆಪ್ತ ಪರಿಚಯವಿಲ್ಲ. ಅವರ ಬದುಕು ಹೇಗಿದೆ ಎಂದು ತಿಳಿದಿಲ್ಲ. ಆದ್ದರಿಂದ, ತೆರೆದ ಮನಸ್ಸಿನಿಂದ ಮತ್ತೊಬ್ಬರ ಕಥೆಗಳನ್ನು ಕೇಳಲು ಸಿದ್ಧರಾದರೆ ಮಾತ್ರ ಸಂವಾದದ ದಾರಿ ತೆರೆಯಬಹುದೆನ್ನುವ ನಿರೀಕ್ಷೆ ನನ್ನದು.

ಪ್ರ: ವಿಭಿನ್ನ ಸಮುದಾಯಗಳು ತಮ್ಮನ್ನು ಹೇಗೆ ರೂಪಿಸಿಕೊಳ್ಳುತ್ತವೆ, ಅವರ ನಡೆ- ನುಡಿಗಳ ಹಿಂದಿನ ಪ್ರೇರಕಗಳು ಯಾವುವು ಎಂಬುದರ ಬಗೆಗಿನ ಅಜ್ಞಾನವೇ ಪರಸ್ಪರ ಪೂರ್ವಗ್ರಹಗಳು ರೂಪುಗೊಳ್ಳುವುದಕ್ಕೆ ಮೂಲಭೂತ ಕಾರಣ. ಇಂತಹ ವಿಚಾರಗಳನ್ನು ಇನ್ನಷ್ಟು ಜನರಿಗೆ ವಿನಿಮಯಗೊಳಿಸುವ ಉದ್ದೇಶದಿಂದಲೇ ನೀವು ಫಿಕ್ಷನ್ ಕ್ಷೇತ್ರದತ್ತ ತಿರುಗಿದ್ದೀರಾ?

ಸರುಕ್ಕೈ: ಹೌದು. 2018ರ ಸುಮಾರಿಗೆ ನಾನು National Institute of Advanced Studies (NIAS) ಮಣಿಪಾಲ ಹಾಗೂ ಇತರ ಹಲವು ಸಂಸ್ಥೆಗಳಲ್ಲಿ ಸಂಚರಿಸುತ್ತಿದ್ದೆ. ಆ ಸಂದರ್ಭದಲ್ಲಿ ದೇಶದ ರಾಜಕೀಯ ವಾತಾವರಣ ನನಗೆ ಉಪಟಳ ಎನಿಸಲು ಆರಂಭಿಸಿತ್ತು. ವಿಶೇಷವಾಗಿ, ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ತಪ್ಪು ಕಲ್ಪನೆಗಳು ಜನರಲ್ಲಿ ವೇಗವಾಗಿ ಹರಡುತ್ತಿದ್ದು, ದ್ವೇಷಪೂರ್ಣ ಮಾತುಗಳು ದೈನಂದಿನ ಜೀವನದ ಭಾಗವಾಗಿ ಬಿಟ್ಟಿತ್ತು. ದ್ವೇಷ ಹರಡುವಿಕೆ ಸಾಮಾನ್ಯವಾಗಿಬಿಟ್ಟಿತ್ತು. ಆ ಹೊತ್ತಿನಲ್ಲಿ ನಾನು ನನ್ನ ಗಮನವನ್ನು ಮಕ್ಕಳ ಕಡೆಗೆ ಕೇಂದ್ರೀಕರಿಸಲು ನಿರ್ಧರಿಸಿದೆ. 2018ರಲ್ಲೇ ಅನೌಪಚಾರಿಕವಾಗಿ ‘Barefoot Philosophers’ ಎಂಬ ಪ್ರಯತ್ನವನ್ನು ಆರಂಭಿಸಬೇಕೆಂದು ಯೋಚಿಸಿದೆ. ಮಕ್ಕಳಲ್ಲಿಯೇ ಅದಾಗಲೇ ಕೆಲವು ರೂಢಿಬದ್ಧ ಕಲ್ಪನೆಗಳು ಮತ್ತು ತಪ್ಪು ಧೋರಣೆಗಳು ಬೆಳೆದುಬರುತ್ತಿರುವುದನ್ನು ನಾನು ಗಮನಿಸಿದ್ದೆ. ಹಾಗಾಗಿ, ‘Philosophy for Children’ ಎಂಬ ಒಂದು ಯೋಜನೆ ಆರಂಭಿಸಿದೆ. ಅದು ನನಗೆ ಅದ್ಭುತ ಅನುಭವವನ್ನು ನೀಡಿತು. ಅದರ ಉದ್ದೇಶ ಕೇವಲ ತತ್ತ್ವಚಿಂತನೆ ಅಭ್ಯಾಸ ಮಾಡಿಸುವುದಾಗಿರಲಿಲ್ಲ; ಬದಲಾಗಿ ಲೋಕದ ಬಗ್ಗೆ ಒಂದು ವಿಶೇಷ ರೀತಿಯಲ್ಲಿ ಚಿಂತಿಸಲು ಮಕ್ಕಳನ್ನು ಪ್ರೇರೇಪಿಸುವುದಾಗಿತ್ತು. ಮುಂದುವರಿದು ‘Philosophy for Children’ ಎಂಬ ಪುಸ್ತಕವನ್ನು ಬರೆದೆ. ಆ ಕೃತಿ ಈಗ ಹಲವು ಭಾಷೆಗಳಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ತತ್ತ್ವಚಿಂತನೆಯ ಜಗತ್ತಿಗಾಗಲಿ ಅಥವಾ ಅಕಾಡೆಮಿಕ್ ವಲಯಕ್ಕಾಗಲಿ ಎಂದಿಗೂ ತಲುಪದ ಅನೇಕ ಜನರೊಂದಿಗೆ ಸಂವಹನ ಮಾಡಲು ಆ ಮೂಲಕ ಸಾಧ್ಯವಾಗಿದೆ.
ಮಕ್ಕಳೊಂದಿಗಿನ ಈ ಅನುಸಂಧಾನಗಳು ನಂತರ ‘The Social Life of Democracy’ ಎಂಬ ಪುಸ್ತಕ ರಚನೆಯತ್ತ ನನ್ನನ್ನು ಕರೆದೊಯ್ದವು. ವಿಶೇಷವಾಗಿ ‘ಸಾಮಾಜಿಕ ಪ್ರಜಾಸತ್ತೆ’ ಎಂಬ ಕಲ್ಪನೆ ನನ್ನನ್ನು ಆಕರ್ಷಿಸಿತು. ಸಾಮಾನ್ಯ ಜನರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವ, ಆಲೋಚನೆಗಳನ್ನು ತೆರೆದು ಹಿಡಿಯುವ ಒಂದು ಪುಸ್ತಕವಾಗಿತ್ತದು. ಫಿಕ್ಷನ್ ಬರೆಯಲು, ವಿಶೇಷವಾಗಿ ‘Following a Prayer’ ಎಂಬ ಕಾದಂಬರಿಯನ್ನು ಬರೆಯಲು ಆರಂಭಿಸಿದಾಗ, ನೇರವಾಗಿ ತತ್ತ್ವಶಾಸ್ತ್ರೀಯ ಪ್ರಶ್ನೆಗಳನ್ನು ಕೇಳಬೇಕೆಂಬ ಉದ್ದೇಶ ನನಗಿರಲಿಲ್ಲ. ‘ಪ್ರಾರ್ಥನೆ ಎಂದರೇನು? ಜನರು ಏಕೆ ಪ್ರಾರ್ಥಿಸುತ್ತಾರೆ?’ ನಾನು ಪ್ರಾರ್ಥಿಸುವಾಗ ಕೆಲವು ಪದಗಳನ್ನು ಉಚ್ಚರಿಸುತ್ತೇನೆ; ಆ ಪದಗಳಿಗೆ ಏನಾಗುತ್ತದೆ? ಅವು ಎಲ್ಲಿಗೆ ಹೋಗುತ್ತವೆ? ಎಂಬಂತಹ ಪ್ರಶ್ನೆಗಳು ದೀರ್ಘಕಾಲದಿಂದ ತತ್ತ್ವವಿಜ್ಞಾನ ಹಾಗೂ ಭಾಷಾತತ್ತ್ವದ ನೆಲೆಯಲ್ಲಿ ನನ್ನನ್ನು ಕಾಡುತ್ತಿದ್ದವು. ಮಕ್ಕಳೊಂದಿಗೆ ನಡೆದ ಸಂವಾದಗಳ ನಂತರ ‘Following a Prayer’ ಅನ್ನು ಬರೆಯುವಾಗ, ನಾನು ಈ ಪ್ರಶ್ನೆಯನ್ನು ಒಂದು ಮಗುವಿನ ದೃಷ್ಟಿಕೋನದಿಂದ ಪರಿಶೀಲಿಸಿದೆ.

ಪ್ರ: ಸಮಕಾಲೀನ ಜಾಗತಿಕ ಪರಿಸ್ಥಿತಿಯಲ್ಲಿ ಬಲಪಂಥೀಯ ಜನಪ್ರಿಯ (right- wing populist) ರಾಜಕೀಯದ ಬೆಳವಣಿಗೆ ಅನೇಕ ದೇಶಗಳಿಗೆ ವ್ಯಾಪಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಲ್ಲಿ ರಾಜಕೀಯ ಪ್ರಜಾಸತ್ತೆ ಒಂದರ್ಥದಲ್ಲಿ ದ್ವೇಷವನ್ನು ಪ್ರೋತ್ಸಾಹಿಸುತ್ತಿದೆ ಎಂಬ ಭಾವನೆ ಮೂಡುತ್ತದೆ. ಸಮುದಾಯಗಳ ನಡುವೆ ಹೆಚ್ಚು ದ್ವೇಷ ಹುಟ್ಟುಹಾಕುವವರು ಗೆಲ್ಲುವ ಸಾಧ್ಯತೆ ಹೆಚ್ಚುತ್ತಿದೆ. ರಾಜಕೀಯ ಪ್ರಜಾಸತ್ತೆ ದ್ವೇಷಕ್ಕೆ ಕುಮ್ಮಕ್ಕು ನೀಡುತ್ತದೆ ಎಂದು ಹೇಳಬೇಕಾದ ಪರಿಸ್ಥಿತಿ ಇದೆ. ಹೆಚ್ಚಿನ ದೇಶಗಳು ಕೂಡಾ ಇಂತಹ ನಿರಾಶಾದಾಯಕ ದಿಕ್ಕಿನತ್ತ ಸಾಗುತ್ತಿರುವಂತೆ ಕಾಣುತ್ತದೆ. ಇದಕ್ಕೆ ಪರಿಹಾರವೇನು?

ಸರುಕ್ಕೈ: ನಿಜವಾದ ಸಮಸ್ಯೆ ಇರುವುದು ‘ರಾಜಕೀಯ ಪ್ರಜಾಸತ್ತೆ’ಯಲ್ಲೇ? ಎನ್ನುವುದು ನನ್ನ ಪ್ರಶ್ನೆ. ಭಾರತದ ರಾಜಕೀಯ ಪ್ರಜಾಸತ್ತೆಯನ್ನೇ ಕೈಗೆತ್ತಿಕೊಳ್ಳೋಣ. ಅನೇಕ ರಾಜಕೀಯ ತತ್ತ್ವಚಿಂತಕರು ಸೂಚಿಸಿರುವ ಹಾಗೆ ವರ್ಣಾಶ್ರಮ ವ್ಯವಸ್ಥೆಯಡಿಯಲ್ಲಿ ಜೀವಿಸುತ್ತಿದ್ದ ಜನರಿಗೆ ಪ್ರಜಾಸತ್ತಾತ್ಮಕ ವ್ಯವಸ್ಥೆ ಹಕ್ಕುಗಳನ್ನು ನೀಡಿದೆ. ಆದರೆ ಪ್ರಸ್ತುತ ‘ಮೆಜಾರಿಟೇರಿಯನಿಸಂ’ (majoritarianism) ಎಂಬ ಸಮಸ್ಯೆಯೂ ಅದರೊಳಗೇ ಬೆಳೆಯುತ್ತಿದೆ. ಬಹುಮತ ಪಡೆಯುವುದೇ ಪ್ರಜಾಸತ್ತೆ ಎಂಬ ರೀತಿಯಲ್ಲಿ ಅರ್ಥ ಬದಲಾಗುತ್ತಿದೆ. ಇಲ್ಲಿ ಸಮಸ್ಯೆ ಇರುವುದು ರಾಜಕೀಯ ಪ್ರಜಾಸತ್ತೆಯನ್ನು ‘ಕಾರ್ಯಗತಗೊಳಿಸುವ ವ್ಯವಸ್ಥೆ’ಯಲ್ಲಿ (delivery mechanism). ಈ ವ್ಯವಸ್ಥೆ ಪ್ರಜಾಸತ್ತೆಯ ಮೂಲ ಗುರಿಯೊಂದಿಗೆ ನೇರವಾಗಿ ಹೊಂದಿಕೊಂಡಿರಬೇಕೆಂದಿಲ್ಲ.

ಮತದಾನ ಸೇರಿದಂತೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನೈತಿಕವಾಗಿ ಅಡಕವಾಗಿರುವ ಅಂಶವೇನು? ‘The Social Life of Democracy’ ಎಂಬ ಪುಸ್ತಕವನ್ನು ಬರೆಯುವಾಗ ಆರಂಭದಲ್ಲೇ ನಾನು ಕೇಳಿಕೊಂಡ ಪ್ರಶ್ನೆಯಿದು. ಮತದಾನದ ನೈತಿಕ ಆಯಾಮವೇನು (moral dimension)? ಎಂಬ ಚಿಂತನೆ ನನ್ನನ್ನು ಆ ಪ್ರಶ್ನೆಯತ್ತ ಕೊಂಡೊಯ್ದಿತ್ತು ‘ನಾವು ಏಕೆ ಮತ ಹಾಕುತ್ತೇವೆ? ಯಾರಿಗೆ ಮತ ಹಾಕುತ್ತೇವೆ?’ ಎಂಬ ಪ್ರಶ್ನೆಗಳ ಬಗ್ಗೆ ಬರೆಯಲು ಪ್ರಾರಂಭಿಸಿದ್ದು ಆಮೇಲೆ. ನಾನು ಮುಂದಿಟ್ಟ ವಾದ ಬಹಳ ಸರಳವಾದುದು. ‘ಸಾರ್ವಜನಿಕ’ (public) ಎಂಬ ಪದದ ಅರ್ಥವೇ ಇದು: ಸಾರ್ವಜನಿಕ ವಲಯದಲ್ಲಿ ನಮ್ಮೆಲ್ಲರಿಗೂ ಸಮಾನ ಪಾಲು ಇದೆ. ಅದು ನಮ್ಮೆಲ್ಲರಿಗೂ ಸೇರಿದ ಸಾಮೂಹಿಕ ಸ್ವತ್ತು. ಉದಾಹರಣೆಗೆ, ಐದು ಲಕ್ಷ ಜನರಿರುವ ಒಂದು ಸಮಾಜವನ್ನು ಕಲ್ಪಿಸಿಕೊಳ್ಳಿ. ಅದರಲ್ಲಿ ಒಂದು ಸಾರ್ವಜನಿಕ ಉದ್ಯಾನವನವಿದ್ದರೆ, ಆ ಐದು ಲಕ್ಷ ಜನರಿಗೂ ಆ ಉದ್ಯಾನವನದಲ್ಲಿ ಸಮಾನ ಪಾಲು ಇದೆ. ಆ ಉದ್ಯಾನವನ ನಮ್ಮೆಲ್ಲರಿಗೂ ಸೇರಿದೆ. ಎಲ್ಲರೂ ಒಟ್ಟಾಗಿ ನಿರ್ಧರಿಸದೆ ಅದನ್ನು ವೈಯಕ್ತಿಕವಾಗಿ ಮಾರಲು ಸಾಧ್ಯವಿಲ್ಲ.

ಹಾಗಾದರೆ, ನಾನು ಮತ ಚಲಾಯಿಸುವಾಗ ಮಾಡುತ್ತಿರುವುದಾದರೂ ಏನು? ಸಾರ್ವಜನಿಕ ಸಂಪತ್ತನ್ನು ನಿರ್ವಹಣೆ ಮಾಡಲು ಮತ್ತು ಕಾಪಾಡಲು ಒಬ್ಬರನ್ನು ಆಯ್ಕೆ ಮಾಡುತ್ತಿದ್ದೇನೆ. ಆ ಸಾರ್ವಜನಿಕ ವಲಯ ಅವನಿಗಷ್ಟೇ ಅಲ್ಲ, ನನಗೂ ಸೇರಿದ್ದು; ನಮ್ಮೆಲ್ಲರಿಗೂ ಸೇರಿದ್ದು. ಇಲ್ಲಿಯೇ ಮಹತ್ವದ ನೈತಿಕ ಪ್ರಶ್ನೆ ಉದ್ಭವಿಸುತ್ತದೆ. ಮತ ಚಲಾಯಿಸುವ ಮೂಲಕ ‘ನಮ್ಮೆಲ್ಲರಿಗೂ ಸೇರಿದ ಈ ಸಾರ್ವಜನಿಕ ವಲಯದ ರಕ್ಷಕನಾಗಿ (trustee) ನೀನು ಕಾರ್ಯನಿರ್ವಹಿಸಬೇಕು’ ಎಂದು ನನ್ನ ಅಭ್ಯರ್ಥಿಗೆ ನಾನು ಹೇಳುತ್ತೇನೆ. ಪ್ರಜಾಸತ್ತಾತ್ಮಕತೆಯ ವೈಫಲ್ಯ ಸ್ಪಷ್ಟವಾಗುವುದೇ ಇಲ್ಲಿ. ‘ಸಾರ್ವಜನಿಕ’ ಎಂಬ ಕಲ್ಪನೆ ನಾಶವಾಗುವ ಕ್ಷಣದಲ್ಲಿ ಪ್ರಜಾಸತ್ತೆ ಕುಸಿಯಲು ಆರಂಭಿಸುತ್ತದೆ. ‘ಸಾರ್ವಜನಿಕ’ದ ಸ್ವಭಾವ ಹಾಳಾದರೆ, ಅಲ್ಲಿ ಪ್ರಜಾಸತ್ತಾತ್ಮಕತೆ ವಿಫಲವಾಗಿದೆ ಎಂದರ್ಥ. ‘ಸಾರ್ವಜನಿಕ’ ಎನ್ನುವಾಗ ನಾನು ಉದ್ದೇಶಿಸುತ್ತಿರುವುದು ಕೇವಲ ವೈಯಕ್ತಿಕ ಅಥವ ಸಾಮಾಜಿಕ ಮಟ್ಟದಲ್ಲಿ ಮಾತ್ರವಲ್ಲ. ಎಲ್ಲಾ ಸಂಪನ್ಮೂಲಗಳಲ್ಲಿಯೂ ಸಾರ್ವಜನಿಕತೆ ಎಂದರೆ ನಮ್ಮೆಲ್ಲರಿಗೂ ಸೇರಿದ ಪಾಲು. ನಾವು ಒಟ್ಟಾಗಿ ಅನುಭವಿಸಿ ಕಾಪಾಡಿಕೊಳ್ಳಬೇಕಿರುವ ವಸ್ತು. ಈ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಿದಾಗ, ನೀರು, ಗಾಳಿ, ಭೂಮಿ, ಪ್ರಕೃತಿ ಸಂಪನ್ಮೂಲಗಳು, ನಮ್ಮೆಲ್ಲರಿಗೂ ಸೇರಿದ ಹಕ್ಕುಗಳು ಕಳೆದುಹೋಗುತ್ತವೆ. ಇದನ್ನು ಎಸಗುವವರು ಮುಖ್ಯವಾಗಿ ರಾಜಕೀಯ ನಾಯಕರು. ಏಕೆಂದರೆ, ಸಾರ್ವಜನಿಕ ವಲಯದ ವಿಶ್ವಾಸಾರ್ಹ ರಕ್ಷಕರಾಗಬೇಕಿರುವ ಅವರು ಅದರ ಮಾಲೀಕರಂತೆ ವರ್ತಿಸಲು ಆರಂಭಿಸುತ್ತಾರೆ. ಇದೇ ನಿಜವಾದ ಸಮಸ್ಯೆ.
ಆದ್ದರಿಂದ, ಇದು ಪ್ರಜಾಸತ್ತೆ ಎಂಬ ಕಲ್ಪನೆಯ ವೈಫಲ್ಯವಲ್ಲ ಎಂದು ದಿಟವಾಗಿ ಹೇಳಬಹುದು. ಇದು ಪ್ರಜಾಸತ್ತೆಯನ್ನು ಜಾರಿಗೆ ತರುವ ವ್ಯವಸ್ಥೆಯ ವೈಫಲ್ಯ. ಇಲ್ಲಿ ಹೊಣೆಗಾರಿಕೆಯನ್ನು (accountability) ಖಚಿತಪಡಿಸುವಲ್ಲಿ ದೊಡ್ಡ ಕೊರತೆ ಇದೆ. ಮತದಾನದ ಬಗೆಗಿನ ಜಾಗೃತಿಯ ಕೊರತೆ ಕೂಡಾ ಈ ಜಾರಿಗೊಳಿಸುವಿಕೆಯ ಸಮಸ್ಯೆಯೇ. ಇಲ್ಲಿ ‘ಶಿಕ್ಷಣ’ ಎಂಬ ಪದವನ್ನು ಬಳಸುವುವಾಗ ಸ್ವಲ್ಪ ಸೂಕ್ಷ್ಮವಾಗಿರಬೇಕದೆ. ಶಿಕ್ಷಣ ಎನ್ನುವಾಗ ನಾನು ಮುಂದಿಡುವ ತಾತ್ಪರ್ಯ ಅಕಾಡೆಮಿಕ್ ಪದವಿಗಳು ಅಥವಾ ಪ್ರಮಾಣಪತ್ರಗಳಲ್ಲ. ಬದಲಾಗಿ ಮತದಾರನಲ್ಲಿ ನಾವು ನಿರೀಕ್ಷಿಸಬೇಕಾದ ಕೆಲವು ಗುಣಗಳು. ಅಂದರೆ, ಮಾನವನಾಗಿ ಬದುಕುವುದರ ಅರ್ಥವೇನು ಎಂಬ ಅರಿವು, ‘ನಾನು ಏಕೆ ಮತ ಹಾಕುತ್ತಿದ್ದೇನೆ?’ ಎಂಬ ಸ್ಪಷ್ಟತೆ, ಮತ್ತು ಒಂದು ನೈತಿಕ- ಸಾಮಾಜಿಕ ಜಾಗೃತಿ. ಅಂತಹ ಜಾಗೃತಿ ಸಮಾಜದಲ್ಲಿ ವ್ಯಾಪಕವಾಗಿರಬೇಕಿತ್ತು. ಖಂಡಿತವಾಗಿಯೂ ಕೆಲವರು ಹಣಕ್ಕಾಗಿ ಮತ ಹಾಕಬಹುದು. ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಸಂಪೂರ್ಣ ಸಮಾಜದ ಬಗ್ಗೆ ನಿರಾಶರಾಗುವುದಕ್ಕಿಂತ, ಬಹುಸಂಖ್ಯೆಯ ಜನರು ಸಮಾಜವನ್ನು ಹೇಗೆ ನೋಡುತ್ತಾರೆ ಎಂಬುದೇ ಮುಖ್ಯ ಪ್ರಶ್ನೆ.
ಕೊನೆಯದಾಗಿ ನಾವು ಸಮಾಜವನ್ನು ಹೇಗೆ ನೋಡುತ್ತೇವೆಯೋ ಅದರ ಆಧಾರದ ಮೇಲೆಯೇ ಮತ ಹಾಕುತ್ತೇವೆಂದು ನಾನು ಹೇಳಲು ಬಯಸುತ್ತೇನೆ. ಮತದಾರರು ಅವರ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ಪ್ರೀತಿಸಬೇಕೆಂದಿಲ್ಲ, ಅಥವಾ ಆರಾಧಿಸಬೇಕೆಂದಿಲ್ಲ. ‘ನನಗವರು ಇಷ್ಟ, ಹಾಗಾಗಿ ನಾನವರಿಗೆ ಮತ ಹಾಕುತ್ತೇನೆ’ ಎಂಬುದೇ ಮುಖ್ಯ ಕಾರಣವಾಗಿರುವುದಿಲ್ಲ. ಬದಲಾಗಿ, ಆ ಅಭ್ಯರ್ಥಿ ಸಮಾಜದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರತಿನಿಧಿಸುತ್ತಾರೆ ಎಂಬ ಕಾರಣಕ್ಕೇ ಮತದಾರರು ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ, ನಿಜವಾಗಿ ಬದಲಾಗಬೇಕಿರುವುದು ರಾಜಕಾರಣಿಗಳಿಗಿಂತ ಹೆಚ್ಚಾಗಿ ಸಮಾಜದ ಕುರಿತ ಮತದಾರರ ದೃಷ್ಟಿಕೋನವೇ ಆಗಿದೆ ಎನ್ನುವುದು ನನ್ನ ಅನಿಸಿಕೆ.

ಪ್ರ: ಸಾಮಾನ್ಯವಾಗಿ ಸಂಘರ್ಷಗಳು ಹುಟ್ಟುತ್ತಿರುವುದು ಕೂಡಾ ‘ಸಾರ್ವಜನಿಕ ವಲಯ’, ‘ಸಾರ್ವಜನಿಕ ಹಿತ’, ‘ನ್ಯಾಯಸಮ್ಮತ ಪಾಲು’ (fair share) ಮುಂತಾದ ವಿಚಾರಗಳ ಬಗ್ಗೆಯೇ. ವಿಭಿನ್ನ ರೂಪಗಳಲ್ಲಿರುವ ಅಲ್ಪಸಂಖ್ಯಾತ ರಾಜಕಾರಣ ‘ನಮಗೆ ನ್ಯಾಯವಾಗಿ ಸಿಗಬೇಕಾದ ಪಾಲು ಸಿಗುತ್ತಿಲ್ಲ’ ಎಂದು ಹೇಳುತ್ತದೆ. ಆ ನಿಟ್ಟಿನಲ್ಲಿ, ವಿಶೇಷವಾಗಿ ದೀರ್ಘಕಾಲದಿಂದ ದಮನಕ್ಕೊಳಗಾದ ಸಮುದಾಯಗಳಿಂದ ಮೂಡಿಬರುವಾಗ, ಅದೊಂದು ವಿಮೋಚನಾತ್ಮಕ (emancipatory) ಸಂವಾದವೂ ಹೌದು. ಆದರೆ ಇದೇ ವಾದವನ್ನು ಬಹುಸಂಖ್ಯಾತ ರಾಜಕಾರಣವೂ ಮುಂದಿಡುತ್ತಿರುವುದು ದೊಡ್ಡ ವಿರೋಧಾಭಾಸ. ಅವರು ಕೂಡಾ ‘ಸಂಪನ್ಮೂಲಗಳು ಪೂರ್ಣವಾಗಿ ನಮಗೇ ಬೇಕು’ ಎಂದು ಹೇಳುವುದಿಲ್ಲ. ಅವರ ವಾದವೂ ‘ನಮಗೆ ಸಿಗಬೇಕಾದುದು ಸಿಗುತ್ತಿಲ್ಲ’ ಎಂದೇ. ಮೇಲ್ನೋಟಕ್ಕೆ ಇದು ಸಂಪೂರ್ಣ ಪ್ರಜಾಸತ್ತಾತ್ಮಕ ವಾದದಂತೆ ಕಾಣುತ್ತದೆ. ಆದರೆ,ಇಂತಹ ಪ್ರಜಾಸತ್ತಾತ್ಮಕ ‘ಹಕ್ಕು’ ಆಧಾರಿತ ವಾದಗಳೇ ನಮ್ಮನ್ನು ಇಂದಿನ ಸಂಕಷ್ಟಕ್ಕೆ ತಳ್ಳಿವೆ. ಹಾಗಾದರೆ, ಈ ಗೊಂದಲದಿಂದ ಹೊರಬರುವ ದಾರಿ ಏನು? ಮತ್ತೊಬ್ಬರಿಗಾಗಿ ತ್ಯಾಗ ಮಾಡಲು ಸಿದ್ಧವಾಗಿರುವ ನೈತಿಕತೆಯ ಮೇಲೆ ಆಧಾರಿತವಾದ ಹೊಸ ರಾಜಕೀಯದ ಅಗತ್ಯವಿಲ್ಲವೇ? ಪ್ರಜಾಸತ್ತಾತ್ಮಕ ಸಂವಾದವೇ ಮೂಲಭೂತವಾಗಿ ವಿಕಲವಾಗಿರುವ ಈ ಹೊತ್ತಿನಲ್ಲಿ ಹೊಸ ನೈತಿಕ ಸಂವಾದಗಳು ತೆರೆಯಬೇಕಾದದು ಅಗತ್ಯವಲ್ಲವೇ?

ಸರುಕ್ಕೈ: ನಿಜ. ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಸಾಮಾಜಿಕ ಪ್ರಜಾಸತ್ತೆ’ (social democracy) ಎಂಬ ಕಲ್ಪನೆ ನನ್ನನ್ನು ಆಕರ್ಷಿಸಿದ್ದು ಇಂತಹ ಪ್ರಶ್ನೆಗಳನ್ನು ಎದುರಿಸಿದಾಗ. ನಾನು ‘The Social Life of Democracy’ ಎಂಬ ಪುಸ್ತಕವನ್ನು ಬರೆಯುವಾಗ ಅದರ ಆರಂಭದಲ್ಲೇ ಒಂದು ವಿಚಾರವನ್ನು ಸೂಚಿಸಿದ್ದೆ. ಅಂಬೇಡ್ಕರ್ ಹೀಗೆ ಹೇಳುತ್ತಾರೆ: ರಾಜಕೀಯ ಪ್ರಜಾಸತ್ತೆ ಅವಶ್ಯಕ. ಆದರೆ, ಸಮಾಜ ಪ್ರಜಾಸತ್ತಾತ್ಮಕವಲ್ಲದಿದ್ದರೆ ರಾಜಕೀಯ ಪ್ರಜಾಸತ್ತೆಗೆ ಅರ್ಥವೇ ಇರುವುದಿಲ್ಲ. ಅಂದರೆ, ನಾವು ಪ್ರಜಾಸತ್ತೆಯ ಆತ್ಮವನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಮತದಾನವೇ ಪ್ರಜಾಸತ್ತೆ ಎಂದುಕೊಳ್ಳುವುದು ತಪ್ಪು. ಸಮಾಜವೇ ಪ್ರಜಾಸತ್ತಾತ್ಮಕವಾಗಿರದಿದ್ದಲ್ಲಿ ಸರ್ಕಾರವನ್ನು ಮಾತ್ರ ‘ಪ್ರಜಾಸತ್ತಾತ್ಮಕ ಸರ್ಕಾರ’ ಎಂದು ಕರೆಯುವುದಕ್ಕೆ ಅರ್ಥವೇನು? ಇದು ‘ಒಂದು ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸಲು ಹೇಗೆ ಸಾಧ್ಯ’ ಎನ್ನುವ ಇನ್ನೊಂದು ಪ್ರಶ್ನೆಯನ್ನು ಹುಟ್ಟು ಹಾಕಿತು. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಕೇವಲ ‘ಯಾರು ಆಡಳಿತ ನಡೆಸುತ್ತಾರೆ?’ ಎಂಬ ಆಯ್ಕೆಯ ಪ್ರಶ್ನೆಗೆ ಸೀಮಿತವಾಗಿಲ್ಲ. ಬದಲಿಗೆ, ಆಡಳಿತ, ಹಂಚಿಕೆ ಮತ್ತು ವಿತರಣೆಯ ಯಾವ ವ್ಯವಸ್ಥೆಗಳು ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸುತ್ತವೆ ಎನ್ನುವುದೇ ಮುಖ್ಯ ಪ್ರಶ್ನೆ.
ಹಾಗಾದರೆ ಸಮಾಜ ಪ್ರಜಾಸತ್ತಾತ್ಮಕವಾಗಿದೆ ಎನ್ನುವುದರ ತಾತ್ಪರ್ಯವೇನು? ಪ್ರಜಾಸತ್ತೆಯನ್ನು ಹುಡುಕಬೇಕಾದದ್ದೆಲ್ಲಿ? ಒಂದು ಮನೆಯೊಳಗೆ ಪ್ರಜಾಸತ್ತೆ ಹೇಗೆ ವ್ಯಕ್ತವಾಗುತ್ತದೆ? ಒಂದು ಮಗು ತನ್ನ ಪೋಷಕರಿಗೆ ‘ನೀವು ನನ್ನೊಂದಿಗೆ ಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತಿಲ್ಲ; ನನಗೆ ಚಾಕೊಲೇಟ್ ಬೇಕು, ನೀವು ಬಟ್ಟೆ ಮಾತ್ರ ಕೊಡುತ್ತೀರಿ’ ಎಂದು ಹೇಳಬಹುದೇ? ಅದು ಪ್ರಜಾಸತ್ತೆಯಲ್ಲ. ಅದು ಕೇವಲ ಆಯ್ಕೆಯ ಪ್ರಶ್ನೆ. ಹಾಗೆಯೇ, ಸಹಜವಾಗಿಯೇ ಶ್ರೇಣಿಕ್ರಮ (hierarchical) ಇರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ- ವಿದ್ಯಾರ್ಥಿ ಸಂಬಂಧಗಳಲ್ಲಿ ಪ್ರಜಾಸತ್ತೆ ಎಂದರೇನು? ‘ಈ ಪಾಠ ನನಗೆ ಇಷ್ಟವಿಲ್ಲ, ಆದ್ದರಿಂದ ನಾನು ಓದುವುದಿಲ್ಲ’ ಎಂದು ಹೇಳುವ ವಿದ್ಯಾರ್ಥಿಗಳನ್ನು ನಾನು ನೋಡಿದ್ದೇನೆ. ‘ಗಣಿತ ನನಗೆ ಇಷ್ಟವಿಲ್ಲ; ಅದನ್ನು ನನಗೆ ಕಲಿಸಬೇಡಿ’ ಎಂದೂ ಕೆಲವರು ಹೇಳುತ್ತಾರೆ. ಹಾಗಾದರೆ, ‘ನೀನು ಗಣಿತ ಓದಲೇಬೇಕು’ ಎಂದು ಹೇಳುವುದು ಪ್ರಜಾಸತ್ತೆಗೆ ವಿರುದ್ಧವೇ?
ಇಂತಹ ಪ್ರಶ್ನೆಗಳನ್ನು ನಾನು ಆ ಪುಸ್ತಕದಲ್ಲಿ ಪರಿಶೀಲಿಸಿದ್ದೇನೆ. ಮನೆಗಳಿಂದ ಆರಂಭಿಸಿ ಶಾಲೆಗಳು, ಕಾಲೇಜುಗಳು, ಕೆಲಸದ ಸ್ಥಳಗಳು, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಜಾಸತ್ತೆ ಹರಡದೆ ಕೇವಲ ರಾಜಕೀಯ ನಾಯಕರಿಂದ ಮಾತ್ರ ಪ್ರಜಾಸತ್ತಾತ್ಮಕ ವರ್ತನೆಯನ್ನು ನಿರೀಕ್ಷಿಸುವುದು ನ್ಯಾಯವೇ? ಸ್ವಾತಂತ್ರ್ಯ (liberty), ಸಮಾನತೆ (equality), ಮತ್ತು ಸಹೋದರತ್ವ (fraternity) ಪ್ರಜಾಸತ್ತೆಯ ಮೂರು ಮೂಲ ಮೌಲ್ಯಗಳಾಗಿವೆ ಎಂದು ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ಸ್ವಾತಂತ್ರ್ಯ ಮುಖ್ಯವಾಗಿ ವೈಯಕ್ತಿಕ ಹಕ್ಕುಗಳು ಮತ್ತು ಇಚ್ಛೆಯ ಆಯ್ಕೆಗಳಿಗೆ ಸಂಬಂಧಿಸಿದೆ. ಆದರೆ ಕೇವಲ ಸ್ವಾತಂತ್ರ್ಯ ಎನ್ನುವುದು ಸಮಾನತೆಗೆ ವಿರುದ್ಧವಾಗಬಲ್ಲದು. ‘ಮೆರಿಟ್ ವರ್ಸಸ್ ಮೀಸಲಾತಿ’ಯ ಬಗೆಗಿನ ಚರ್ಚೆಗಳು ಇದಕ್ಕೊಂದು ಉತ್ತಮ ಉದಾಹರಣೆ. ಸ್ವಾತಂತ್ರ್ಯವೂ ಬೇಕು, ಸಮಾನತೆಯೂ ಬೇಕು. ಆದರೆ ಅವೆರಡೂ ಪರಸ್ಪರ ಸಂಘರ್ಷಕ್ಕೊಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಅವೆರಡನ್ನೂ ಸಮತೋಲನದಲ್ಲಿಡುವ ಮತ್ತೊಂದು ಮೌಲ್ಯ ಅಗತ್ಯ. ಅದೇ ಅಂಬೇಡ್ಕರ್ ಹೇಳುವ “fraternity” — ಅಂದರೆ ಸಹೋದರತ್ವ. ಈ ಕಲ್ಪನೆಗೆ ಬೌದ್ಧ ಧರ್ಮದ ಮೈತ್ರಿ (maitri) ಪರಿಕಲ್ಪನೆಯಿಂದಲೂ ಅವರಿಗೆ ಪ್ರೇರಣೆ ದೊರಕಿತ್ತು. ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ, ಸಹೋದರತ್ವವೇ ಪ್ರಜಾಸತ್ತೆಯನ್ನು ಜೀವಂತವಾಗಿರಿಸುವ ಅಂಶ.

ಈ ಚಿಂತನೆಗಳು ಅವರ ಸ್ವಂತ ಜೀವನಾನುಭವಗಳಿಂದಲೇ ಉದ್ಭವಿಸಿದ್ದವು. ದಲಿತ ಸಮುದಾಯ ಅನುಭವಿಸಿದ ನೋವು ಮತ್ತು ಅವಮಾನಗಳು ‘ಪ್ರಜಾಸತ್ತೆ ಎಂದರೇನು?’ ಎಂಬ ಪ್ರಶ್ನೆಯನ್ನು ಆಳವಾಗಿ ಸ್ಪರ್ಶಿಸುತ್ತವೆ. ಪ್ರಜಾಸತ್ತೆಯನ್ನು ತಿರಸ್ಕರಿಸದೆ, ಅದನ್ನು ವಿಮರ್ಶಿಸಿ ಪುನರ್ವ್ಯಾಖ್ಯಾನ ಮಾಡುವ ದಾರಿಗಳನ್ನು ತೆರೆಯಬೇಕಿದೆ. ‘ಜನತಂತ್ರಕ್ಕೆ ಪರ್ಯಾಯವೇನು?’ ಎಂಬ ಪ್ರಶ್ನೆಯೇ ಭಯಾನಕ. ಬಹುಸಂಖ್ಯಾತರ ಪ್ರಭುತ್ವ ನಮ್ಮನ್ನು ನೋಯಿಸುತ್ತಿದೆ. ಆದರೆ ಚುನಾವಣಾ ಪ್ರಜಾಸತ್ತೆ ಇಲ್ಲದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತೆಂದು ಕಲ್ಪಿಸುವುದೇ ಕಷ್ಟ. ಇತಿಹಾಸವು ಇಂತಹ ಅನೇಕ ಭೀಕರ ಉದಾಹರಣೆಗಳಿಂದ ತುಂಬಿದೆ. ಇಲ್ಲಿ ಕರುಣೆ, ಕಾಳಜಿ ಮತ್ತು ಸಹೋದರತ್ವ ಎಲ್ಲಿಂದ ಬೆಳೆಯಬೇಕು ಎಂಬ ಪ್ರಶ್ನೆಯತ್ತ ನಾವು ಮರಳಬೇಕಾಗಿ ಬರುತ್ತದೆ. ಅದು ಶಾಲೆಗಳಿಂದಲೇ ಆರಂಭವಾಗಬೇಕು. ಆದರೆ ಇಂದಿನ ಶಾಲಾ ಶಿಕ್ಷಣ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಒಂದು ತರಗತಿಯಲ್ಲಿ ಉಳಿಯಲು ಒಬ್ಬ ಮಗು ಮತ್ತೊಬ್ಬ ಮಗುವನ್ನು ಸೋಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಂತಹ ವಾತಾವರಣದಲ್ಲಿ ಕರುಣೆ, ಪರಿಗಣನೆ ಮತ್ತು ಸಹೋದರತ್ವ ಹೇಗೆ ಬೆಳೆದುಬರಲು ಸಾಧ್ಯ?

ಸಂದರ್ಶನ: ಮಶ್ಕೂರ್ ಖಲೀಲ್
ಕನ್ನಡಕ್ಕೆ: ನಝೀರ್ ಅಬ್ಬಾಸ್


Sundar Sarukkai is one of India’s leading contemporary philosophers and public intellectuals, known for his work in the philosophy of science and interdisciplinary studies. Trained in physics and philosophy, he earned his PhD from Purdue University, USA, and has held key academic positions including at the National Institute of Advanced Studies, Bengaluru, and as Founder-Director of the Manipal Centre for Philosophy and Humanities. He is the author of several influential books, including Translating the World, Philosophy of Symmetry, and What is Science?, and continues to actively promote philosophy through research, writing, and public engagement.

1 2 3 19