ಬಲಿಗಲ್ಲ ಮೇಲೆ ಕೊರಳನಿಟ್ಟು
ಮನ್ಸೂರನಂತೆ ‘ನಾವೆ ಸತ್ಯ’ ವೆಂದರು !
ಆತ್ಮಜ್ಞಾನವನ್ನು ಅರಸಿ
ತಬ್ರೇಝಿನ ಶಮ್ಸನಂತೆ
ಆತ್ಮಾಹುತಿಗೈದರು
ಅವರು ನನ್ನ ಗೆಳೆಯರು
ಕಾಡಿನ ಪಕ್ಷಿ ಸಂಕುಲವೇ
ಗಿಡುಗನತ್ತ ಹಾರುವಂತೆ
ಆಹುತಿಯತ್ತ ನೆಗೆದರು
ಡಯರನ ಮೃತ್ಯುದಾಹವನ್ನು
ತಣಿಸಲೇನೋ ಎನ್ನುವಂತೆ
ನೆತ್ತರಿನ ತೊರೆಗಳಂತೆ
ಚಿಮ್ಮಿ ಚಿಮ್ಮಿ ನಡೆದರು
ಆ ನನ್ನ ಗೆಳೆಯರು!
‘ಖೂನೀ ಬೈಸಾಖಿ’ ಅಥವಾ ರಕ್ತಸಿಕ್ತ ಸುಗ್ಗಿ ಎಂಬುದು 1919 ರ ಜಲಿಯನ್ ವಾಲಾ ಬಾಗ್/ ಅಮೃತಸರ ಹತ್ಯಾಕಾಂಡದಲ್ಲಿ ಬದುಕುಳಿದಿದ್ದ ಪಂಜಾಬಿ ಕವಿಯೊಬ್ಬ ಬರೆದಿದ್ದ ಕವಿತೆ, ಅದನ್ನು ಬ್ರಿಟಿಷರು ನಿಷೇದಿಸಿದ್ದರು. ಈಗ ಆತನ ಮೊಮ್ಮಗನಿಂದ ಆಂಗ್ಲ ಭಾಷೆಗೆ ತರ್ಜುಮೆಗೊಂಡ ಆ ಕವಿತೆ, ಆ ಹತ್ಯಾಕಾಂಡ ನಡೆದ ನೂರು ವರ್ಷಗಳಾದ ಸಂದರ್ಭದಲ್ಲಿ ಆ ಘಟನೆಯ ನೆನಪಾಗಿ ಉಳಿದಿದೆ.
ನಾನಕ್ ಸಿಂಗನಿಗೆ ಆಗ 22 ವರ್ಷ ಪ್ರಾಯ. ಆತನ ಕೆಲವು ಗೆಳೆಯರೊಂದಿಗೆ ಬ್ರಿಟೀಷತ ಭೀಕರ ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸಲೆಂದು ವೈಸಾಖಿ ಹಬ್ಬದ ಆ ದುರ್ದಿನದಂದು ಆತ ಜಲಿಯನ್ ವಾಲಾ ಬಾಗ್ ಕಡೆಗೆ ಹೊರಟಿದ್ದ. ಅಂದು ಬ್ರಿಟೀಷ್ ಅಧಿಕಾರಿ ಜನರಲ್ ಡಯರ್ ನೀಡಿದ ಫೈರಿಂಗ ಆದೇಶದಿಂದಾಗಿ ದೊಡ್ಡ ಗದ್ದಲವೇ ಏರ್ಪಟ್ಟಿತು. ನಾನಕ ಸಿಂಗನ ಗೆಳೆಯರು ಕೂಡಾ ಮೃತರಾದರೂ ನಾನಕ ಸಿಂಗ ಮಾತ್ರ ಬದುಕುಳಿದ. ಮುಂದೆ ಆತ ಪ್ರಸಿದ್ಧ ಲೇಖಕನೂ ಆದ. ಸುಮಾರು 50 ಕಾದಂಬರಿಗಳನ್ನೂ , ಹಲವಾರು ಸಣ್ಣ ಕಥೆಗಳನ್ನೂ , ಪ್ರಬಂಧಗಳನ್ನೂ ರಚಿಸಿದ ಆತನ ಏಕ್ ಮ್ಯಾನ್ ದೋ ತಲ್ವಾರೇನ್ ಎಂಬ ಕೃತಿಗೆ 1962 ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂತು.
ಆದರೆ ಇದಲ್ಲದ್ದಕಿಂತಲೂ ಮುಂಚೆ ಆತ ಕವಿತೆಯೊಂದನ್ನು ಬರೆದಿದ್ದ.
ಮನ್ಸೂರ್ ಅಲ್ ಹಲ್ಲಾಜ್ : 10ನೇ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಇರಾನಿನ ಸೂಫೀ ಸಂತ.
ಆತ್ಮಸಾಕ್ಷಾತ್ಕಾರದ ಮೂಲಕ ಪರಮಾತ್ಮನಲ್ಲಿ ಲೀನವಾಗುವ ವಿಧಾನವನ್ನು ಆತ ‘ಅನಲ್ ಹಕ್’ ಎಂದು ಕರೆದರು. ಆತ್ಮವೆಂಬ ಪತಂಗವು ಪರಮಜ್ಞಾನವನ್ನು ಅರಸುತ್ತಾ ಸಾಗುವ ಸೂಫೀ ಪ್ರಕ್ರಿಯೆಯಲ್ಲಿ ಕೊನೆಗೆ ಆತ್ಮಜ್ಞಾನದ ಅರಿವು ಸಿಗುತ್ತದೆ. ಇದನ್ನು ಇಲ್ಮ್ ಉಲ್ ಯಕೀನ್ ಎನ್ನುತ್ತಾರೆ. ನಂತರ ಅದೇ ಪತಂಗವು ಬೆಂಕಿಯಲ್ಲಿ ಉರಿದು ಲೀನವಾಗಿ ಕೇವಲ ಬೆಂಕಿ ಮಾತ್ರ ಉಳಿಯುತ್ತದೆ. ಇದನ್ನು ಇಲ್ಮ್ ಉಲ್ ಹಕ್ ಎನ್ನುತ್ತಾರೆ. ಇಲ್ಲಿ ಪರಮ ಸತ್ಯದೊಡನೆ ಪತಂಗ ‘ಫನಾ’ ಆಗುತ್ತದೆ. ಹಲ್ಲಾಜನ ಈ ‘ನಾನೇ ಸತ್ಯ’ವೆಂಬ ಘೋಷಣೆಯನ್ನು ತಪ್ಪು ತಿಳಿದುಕೊಂಡ ಅಲ್ಲಿನ ಪ್ರಭುತ್ವ ಆತನ ಮೇಲೆ ರಾಜದ್ರೋಹ ಆಪಾದನೆ ಹೊರಿಸಿ ಬಂಧಿಸುತ್ತದೆ. ಆತನನ್ನು ಚಿತ್ರವಧೆಯ ಮೂಲಕ ಕೊಲ್ಲಲು ಆದೇಶಿಸುತ್ತದೆ. ಇಲ್ಲಿ ಸ್ವತಃ ಹಲ್ಲಾಜರೇ ಈ ವಿಧಾನವನ್ನು ಬಯಸಿದರು ಎಂದೂ ಅವರ ಕೆಲವು ಕವಿತೆಗಳಲ್ಲಿ ಕಂಡು ಬರುತ್ತವೆ.
ಹಲ್ಲಾಜರನ್ನು ಬಂಧಿಸಿ ಆತನ ಕೈ ಕಾಲುಗಳನ್ನು ಕಡಿದು ನರಳಿ ನರಳಿ ಸಾಯಲು ಬಿಡಲಾಗುತ್ತದೆ. ಜನರು ಕಲ್ಲುಗಳನ್ನು ಎತ್ತಿ ಎತ್ತಿ ಬಿಸಾಡತೊಡಗುತ್ತಾರೆ. ಆ ಸಮಯದಲ್ಲಿ ಅಲ್ಲಿದ್ದ ಹಲ್ಲಾಜರ ಪರಮಶಿಷ್ಯ ಶಿಬ್ಲೀ ಎಂಬವರು ಗುಲಾಬಿಯೊಂದನ್ನು ತನ್ನ ಗುರುವಿನತ್ತ ಎಸೆಯುತ್ತಾರೆ. ಕಲ್ಲೇಟು ಹೊಡೆಯುವವರನ್ನು ಹುರಿದುಂಬಿಸುತ್ತಿದ್ದೆ ಹಲ್ಲಾಜ್ ತನ್ನ ಮೈಗೆ ಗುಲಾಬಿಯು ಸೋಕಿದಾಗ ಅದನ್ನು ಎಸೆದ ಶಿಷ್ಯನನ್ನು ನೋಡಿ ಆತನಿಗೆ ಕೋಪದಿಂದ ಹೀಗೆ ಹೇಳುತ್ತಾರೆ, ” ಇಷ್ಟು ಕಲ್ಲೇಟುಗಳಲ್ಲಿ ನನಗೆ ನೋವಾಗಿರಲಿಲ್ಲ ಆದರೆ ನೀನೆಸೆದ ಒಂದು ಗುಲಾಬಿಯು ನನಗೆ ಅದೆಷ್ಟು ನೋವುಂಟು ಮಾಡಿತು” ಎಂಬುದಾಗಿ..
ಬ್ರಿಟೀಷರು ನಮ್ಮಿಂದ ಮುಚ್ಚಿಟ್ಟಿದ್ದ ಜಲಿಯನ್ ವಾಲಾಬಾಗ್ ಕುರಿತ ಕವಿತೆ.
‘ಖೂನೀ ಬೈಸಾಖಿ’
ಗಡಿಯಾರದ ಕಡ್ಡಿಯು ಐದರಲ್ಲಿ ನಿಂತಿತು
ಹದಿಮೂರ ಎಪ್ರೀಲಿನ ಆ ತೋಟದ ಕಡೆಯಲಿ
ಒಕ್ಕಟ್ಟಾಗಿ ನಿಂತರು, ಅವರು ನನ್ನ ಗೆಳೆಯರು
ಸಮಪಾಲಿನ ಸಮಬಾಳಿನ ನ್ಯಾಯಕ್ಕಾಗಿ ನಿಂತರು
ಸಿಖ್ಖ್ ಹಿಂದು ಮುಸಲ್ಮಾನರಲ್ಲರೂ
ಅಂದು ಒಂದಾಗಿ ನಿಂತರು
ವೃದ್ಧರೋ ಮಕ್ಕಳೋ
ಎಲ್ಲರೂ ಎದ್ದು ಹೊರಟರು
ಕೆಲವರನ್ನೂ ಹಿಂದೆ ಬಿಟ್ಟು
ಅವರೂ ನನ್ನ ಗೆಳೆಯರು
ಬಾಯಿತುಂಬಾ ಮಾತನಾಡಲೆಂದು
ದುಗುಡವನ್ನು ಹಂಚಲೆಂದು
ನನ್ನ ಗೆಳೆಯರೆಲ್ಲಾ
ನಿರ್ಭೀತಿಯಂದ ಹೊರಟರು
ಬೆಲೆಬಾಳುವ ಬದುಕನ್ನೇ ಲೆಕ್ಕಿಸದೆ ಹೊರಟರು
ಜಗವನ್ನೇ ಹಿಂದಿಕ್ಕಿ ತಾವು ಮುಂದೆ ಹೊರಟರು
ಅವರು ನನ್ನ ಗೆಳೆಯರು!
ಮರಳುವಾಸೆ ಮರೆತು ಬಿಟ್ಟು
ಆಸೆ ಆಕಾಂಕ್ಷೆಗಳನೆ ಬದಿಗೆ ಇಟ್ಟು
ಮುಂದೆ ಮುಂದೆ ಹೊರಟರು
ಅವರು ನನ್ನ ಗೆಳೆಯರು
ಆ ಒಣ ನೆಲವ ತಣಿಸಲೆಂದು
ನೆತ್ತರನ್ನೆ ನೆಲಕೆ ಚೆಲ್ಲಿ
ತೋಟವೆಲ್ಲ ಅರಳಲೆಂದು
ಬಯಸಿ ಮುನ್ನಡೆದರು
ಬೆಂಕಿಯ ಕೆನ್ನಾಲಿಗೆಗೆ
ಮಿಡತೆಗಳಂತೆ ನೆಗೆದರು
ನೊಂದ ಬದುಕಿನಿಂದ ಹೊರಗೆ
ಸಾವಿನ ಹಿತ್ತಲಿನ ಒಳಗೆ
ಯಮನನ್ನೇ ಕರೆದರು
ತಮ್ಮ ಜೀವವನ್ನೆ ನೀನು
ತಗೆದುಕೊಳ್ಳೋ ಎಂದರು!
ಬಲಿಗಲ್ಲ ಮೇಲೆ ಕೊರಳನಿಟ್ಟು
ಮನ್ಸೂರನಂತೆ ‘ನಾವೆ ಸತ್ಯ’ ವೆಂದರು !
ಆತ್ಮಜ್ಞಾನವನ್ನು ಅರಸಿ
ತಬ್ರೇಝಿನ ಶಮ್ಸನಂತೆ
ಆತ್ಮಾಹುತಿಗೈದರು
ಅವರು ನನ್ನ ಗೆಳೆಯರು
ಕಾಡಿನ ಪಕ್ಷಿ ಸಂಕುಲವೇ
ಗಿಡುಗನತ್ತ ಹಾರುವಂತೆ
ಆಹುತಿಯತ್ತ ನೆಗೆದರು
ಡಯರನ ಮೃತ್ಯುದಾಹವನ್ನು
ತಣಿಸಲೇನೋ ಎನ್ನುವಂತೆ
ನೆತ್ತರಿನ ತೊರೆಗಳಂತೆ
ಚಿಮ್ಮಿ ಚಿಮ್ಮಿ ನಡೆದರು
ಆ ನನ್ನ ಗೆಳೆಯರು!
ಅಯ್ಯೋ ನನ್ನ ಊರೇ ಈಗ
ಶೋಕ ತಪ್ತವಾಗಿದೆ
ಸಂತಸದ ಮನೆಯ ತುಂಬ
ಸೂತಕವೇ ಹರಡಿದೆ
ಭಾರತಾಂಭೆಯ ಚರಣದೆಡೆಗೆ
ಬಲಿಗೈಯ್ಯಲೆಂದು ಶಿರವನ್ನೆತ್ತಿ
ಅದೋ ನೋಡಿ ಸಾಗುತಿಹರು
ಮೃತ್ಯುಕೂಪದೆಡೆಗೆ ನಡೆವ
ದಿಟ್ಟ ಸೈನಿಕರ ಪಡೆಯ
ನಿಲ್ಲಲೆಂದು ಸ್ತುತಿಸುತಿಹರು
ಅವರು ನಿಲ್ಲಲೊಲ್ಲರು!
ಓ ತಾಯಿಯಂದಿರೇ ನೋಡಿ ನಿಮ್ಮ ಪುತ್ರರು
ಯೌವನವನು ಬಲಿಗೈಯ್ಯಲೆಂದು
ಅವರು ಸಾಗುತ್ತಿರುವರು
ಓ ಸಹೋದರಿಯರೇ, ನೋಡಿ ನಿಮ್ಮ ಸೋದರರನು
ಒಮ್ಮೆ ತಡೆದು ನಿಲ್ಲಿಸಿ
ಇಂದು ನೀವು ತಡೆಯದಿರೆ
ಮುಂದೆ ಅವರ ಕಾಣಲಾರಿರಿ!
ಓ ಹೆಣ್ಮಕ್ಕಳೇ ನಿಮ್ಮ ಪ್ರೇಮಿಗಳನು ತಬ್ಬಿಕೊಳ್ಳಿ
ವೈದವ್ಯದ ವಿರಹವಿದು
ಬೀಳ್ಕೊಡುವ ಮುನ್ನ ಯೋಚಿಸಿ
ಓ ಮುದ್ದು ಮಕ್ಕಳೆ,
ಅನಾಥರಾಗುವುದಕ್ಕೆ ಮುಂಚೆ
ನಿಮ್ಮ ತಂದೆಯನ್ನು ಅಪ್ಪಿ ಕೊಳ್ಳಿರಿ
ನಾನಕ್ ಸಿಂಗನು ಮಾತ ಕೇಳಿರಿ
ದೇಶಕಾಗಿ ಬಲಿದಾನವ ಗೈಯ್ಯಲೆಂದೆ
ಹೊರಟವರು
ಅವರೆಂದಿಗೂ ಮರಳರು !
— ಪುನೀತ್ ಅಪ್ಪು