ಫಕೀರ್ ಮುಹಮ್ಮದ್ ಕಟ್ಪಾಡಿ; ಬದುಕು – ಬರಹ ಅವಲೋಕನ

ಕನ್ನಡ ಸಾಹಿತ್ಯ ಲೋಕದಲ್ಲಿ ಕರಾವಳಿ ಕರ್ನಾಟಕದ ಮುಸ್ಲಿಂ ಬದುಕನ್ನು ಅತ್ಯಂತ ಪ್ರಾಮಾಣಿಕವಾಗಿ, ಒಳನೋಟಗಳೊಂದಿಗೆ ದಾಖಲಿಸಿದ ಬೆರಳೆಣಿಕೆಯ ಲೇಖಕರಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಹೆಸರು ಮುಂಚೂಣಿಯಲ್ಲಿದೆ. ೧೯೪೮ರ ಜೂನ್ ೧ರಂದು ಉಡುಪಿ ಜಿಲ್ಲೆಯ ಐತಿಹಾಸಿಕ ತಾಣ ಬಾರಕೂರಿನಲ್ಲಿ ಜನಿಸಿದ ಇವರು, ಉಡುಪಿ ಸಮೀಪದ ಕಟ್ಪಾಡಿಯಲ್ಲಿ ಬಾಲ್ಯ ಕಳೆದರು. ಕಟ್ಪಾಡಿಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಕುಂದಾಪುರದ ಬಂಡಾರ್ ಕ್ರಾರ್ಸ್ ಕಾಲೇಜಿನಿಂದ ಬಿ.ಕಾಂ ಪದವಿ ಪಡೆದರು. ವೃತ್ತಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯಾಗಿ ೩೫ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕಟ್ಪಾಡಿಯವರ ಸಾಹಿತ್ಯ ಪಯಣ ೧೯೮೧ರಲ್ಲಿ ‘ಗೋರಿ ಕಟ್ಟಿಕೊಂಡವರು’ ಎಂಬ ಮೊದಲ ಕಥಾ ಸಂಕಲನದ ಮೂಲಕ ಆರಂಭವಾಯಿತು. ಕರಾವಳಿ ಮುಸ್ಲಿಂ ಬದುಕಿನ ಒಳನೋಟಗಳನ್ನು ಕಟ್ಟಿಕೊಟ್ಟ ಈ ಸಂಕಲನದ ನಂತರ, ೧೯೮೮ರಲ್ಲಿ ‘ನೋಂಬು’ ಕಥಾ ಸಂಕಲನ ಪ್ರಕಟವಾಯಿತು. ರಂಜಾನ್ ತಿಂಗಳ ಉಪವಾಸದ ಆಚರಣೆಯ ಹಿನ್ನೆಲೆಯಲ್ಲಿ ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಚಿತ್ರಿಸಿದ ಈ ಕೃತಿಗೆ ೧೯೯೧ರ ಪ್ರತಿಷ್ಠಿತ ರಾಷ್ಟ್ರೀಯ ಕಥಾ ಪ್ರಶಸ್ತಿ ಲಭಿಸಿತು. ೨೦೦೧ರಲ್ಲಿ ಹೊರಬಂದ ಮೂರನೇ ಸಂಕಲನ ‘ದಜ್ಜಾಲ’. ಇದು ಕರಾವಳಿಯ ಸಾಮಾಜಿಕ-ಧಾರ್ಮಿಕ ತಲ್ಲಣಗಳನ್ನು ತೀವ್ರವಾಗಿ ದಾಖಲಿಸಿ ೨೦೦೦ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಯಿತು. ಆರು ವರ್ಷಗಳ ನಂತರ ೨೦೦೭ರಲ್ಲಿ ‘ಅತ್ತರ್ ಹಾಜಿಕಾ ಮತ್ತು ಇತರ ಕತೆಗಳು’ ಎಂಬ ನಾಲ್ಕನೇ ಸಂಕಲನದ ಮೂಲಕ ಅವರು ಮತ್ತೆ ಓದುಗರನ್ನು ತಲುಪಿದರು. ಬದಲಾಗುತ್ತಿರುವ ಕರಾವಳಿಯ ಚಿತ್ರಣವನ್ನು ಕಟ್ಟಿಕೊಟ್ಟ ‘ಪಚ್ಚೆ ಕುದುರೆ’ ೨೦೧೨ರಲ್ಲಿ ಐದನೇ ಸಂಕಲನವಾಗಿ ಪ್ರಕಟವಾಯಿತು. ೨೦೧೩ರಲ್ಲಿ ಬಿಡುಗಡೆಯಾದ ‘ಕಡವು ಮನೆ’ – ನೀಲ್ಗತೆ ಆರನೇ ಸಂಕಲನವು ಕುಟುಂಬ, ನೆಲ ಮತ್ತು ನೆನಪುಗಳ ಕುರಿತಾದ ಸೂಕ್ಷ್ಮ ನಿರೂಪಣೆಗಾಗಿ ೨೦೧೫ರ ‘ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ’ಯನ್ನು ಪಡೆಯಿತು. ಅವರ ಇನ್ನೊಂದು ಕಥಾ ಸಂಕಲನವಾದ ‘ಕುಂದಾಪ್ರ ಪರಿಸರದ ಸಣ್ಣ ಕಥೆಗಳು’ ೨೦೨೦ರಲ್ಲಿ ಪ್ರಕಟವಾಗಿ, ಕುಂದಾಪುರದ ಭಾಷೆ, ಸಂಸ್ಕೃತಿ ಮತ್ತು ಅಲ್ಲಿನ ಮುಸ್ಲಿಂ ಜನಜೀವನವನ್ನು ಕಥೆಗಳಲ್ಲಿ ಆಪ್ತವಾಗಿ ಕಟ್ಟಿಕೊಟ್ಟರು.

ಕರಾವಳಿ ಕರ್ನಾಟಕದ ಮುಸ್ಲಿಂ ಸಮುದಾಯದ ಬದುಕು, ಸಂಸ್ಕೃತಿ, ತಲ್ಲಣಗಳನ್ನು ತುಂಬ ಆತ್ಮೀಯವಾಗಿ ಕಟ್ಟಿಕೊಟ್ಟವರು ಫಕೀರ್ ಮುಹಮ್ಮದ್ ಕಟ್ಪಾಡಿ. ಅವರು ಬರೆದ ಎರಡು ಪ್ರಮುಖ ಕಾದಂಬರಿ; ಸರಕುಗಳು (೧೯೮೯) ಮತ್ತು ಕಚ್ಚಾದ (೧೯೯೭). ‘ಸರಕು’ ಎಂದರೆ ವ್ಯಾಪಾರದ ಸಾಮಾನು. ಇಲ್ಲಿ ಮನುಷ್ಯ ಸಂಬಂಧಗಳೇ ‘ಸರಕು’ ಆಗುವ ವಿಪರ್ಯಾಸವನ್ನು ಕಟ್ಟಿಕೊಡುತ್ತಾರೆ.‌ ಮುಸ್ಲಿಂ ಸಮುದಾಯದ ಗಂಭೀರ ಸಮಸ್ಯೆಯನ್ನು ‘ಸರಕುಗಳು’ ಕಾದಂಬರಿ ಚರ್ಚಿಸುತ್ತದೆ. ಕುಟ್ಟಿಚ್ಚಿರಾದ ಹೆಣ್ಣುಮಕ್ಕಳ ಸಂಕಷ್ಟವನ್ನು ಲೇಖಕರು ದಾಖಲಿಸಿದ್ದಾರೆ. ಇಲ್ಲಿನ ಹಲವು ಪಾತ್ರಗಳು ಬಹುಕಾಲ ನೆನಪಲ್ಲಿ ಉಳಿಯುತ್ತವೆ. ಈ ಕೃತಿ ಬರಹಗಾರರ ಸಾಮಾಜಿಕ ಬದ್ಧತೆಯನ್ನು ನೆನಪಿಸುವ ಬಹಳ ಮುಖ್ಯ ಕೃತಿ. ಇವರು ಬರೆದ ಎರಡನೇ ಕಾದಂಬರಿ ‘ಕಚ್ಚಾದ’. ಈ ಕಾದಂಬರಿ ಸುಧಾದಲ್ಲಿ ಧಾರಾವಾಹಿಯಾಗಿ ಬಂದು ಕನ್ನಡಿಗರ ಮನಗೆದ್ದು, ಪುಸ್ತಕವಾಗಿ ಹೊರಬಂದು ಈಗ ಹಲವು ವರ್ಷಗಳು ಸಂದಿವೆ. ಬಂಡಾಯದ ಕಾವು ಏರಿದ್ದ ಕಾಲದಲ್ಲಿ ಈ ಕಾದಂಬರಿ ಹುಟ್ಟಿಕೊಂಡಿತು. ಬ್ಯಾರಿ ಸಮುದಾಯದ ಕಚ್ಚಾದ ಎಂಬ ಮಹಿಳೆ ತನಗೆ ಕಷ್ಟ ಎಷ್ಟಿದ್ದರೂ ಎದೆಗುಂದದೆ ಬದುಕನ್ನು ಅಪ್ಪಿಕೊಂಡಳು, ಇವಳೇ ಕಾದಂಬರಿಯ ಜೀವಾಳ.

ಲೇಖಕರು ಅನುವಾದ ಕ್ಷೇತ್ರದಲ್ಲೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಮಲೇಷ್ಯಾದ ಖ್ಯಾತ ವೈದ್ಯೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಆಗಿದ್ದ ಡಾ. ಆಂಗ್ ಸ್ವಿ ಚಾಯ್ ಬರೆದ ‘From Beirut to Jerusalem’ ಕೃತಿಯನ್ನು ‘ಬೇರೂತಿನಿಂದ ಜರೂಸಲೇಮಿಗೆ’ (೨೦೧೦) ಎಂದು ಇವರು ಅನುವಾದಿಸಿದ್ದಾರೆ. ಕೇರಳದ ‘Other Books’ ಇದನ್ನು ಪ್ರಕಟ ಮಾಡಿದೆ. ಲೇಖಕಿ ಪ್ಯಾಲೆಸ್ಟೀನ್‌ಗೆ ವೈದ್ಯಕೀಯ ನೆರವು ನೀಡಲು ಹೋದಾಗ ಕಂಡ ಯುದ್ಧ, ನಿರಾಶ್ರಿತರ ಬದುಕು, ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನೈಜ ಚಿತ್ರಣವನ್ನು ಈ ಪುಸ್ತಕ ದಾಖಲಿಸುತ್ತದೆ. ಕಟ್ಪಾಡಿ ಅವರ ಅನುವಾದದ ಮೂಲಕ ಕನ್ನಡ ಓದುಗರಿಗೆ ಮಧ್ಯಪ್ರಾಚ್ಯದ ಸಂಕೀರ್ಣ ರಾಜಕೀಯ ಮತ್ತು ಮಾನವೀಯ ದುರಂತದ ನೇರ ಪರಿಚಯ ಮಾಡಿಕೊಟ್ಟಿದ್ದಾರೆ. ಇದು ಪ್ರವಾಸ ಕಥನ ಮಾತ್ರವಲ್ಲ, ಒಂದು ರಾಜಕೀಯ ದಾಖಲೆ ಕೂಡ ಹೌದು. ಇಸ್ರೇಲ್ ದೇಶವು ಫೆಲಸ್ತೀನರ ಮೇಲೆ ನಡೆಸುವ ಕ್ರೂರತೆಯನ್ನು ಕಂಡಿಲ್ಲವೆಂದು ನಟಿಸುವವರಿಗೆ ಉತ್ತಮ ದಾಖಲೆಯೇ ಡಾ. ಆಂಗ್ ಸ್ವೀ ಚಾಯ್ ಅವರು ಬರೆದ ಈ ಪುಸ್ತಕ. ಅಸಾಹಯಕತೆಯ ನಡುವೆ ಸಿಲುಕಿ ನೋವು ಅನುಭವಿಸುವ ಅನುಭವಗಳನ್ನು ಸಾಕ್ಷಿಯಾರಿಸಿ ಬರೆದ ಗ್ರಂಥವಿದು. ಪ್ರತಿಯೊಂದು ಗೆರೆಯಲ್ಲೂ ಫೆಲಸ್ತೀನ್ ಜನರ ನೋವು ಎಷ್ಟು ತೀವ್ರತೆಯನ್ನು ಪಡೆದಿತ್ತೆಂದು‌ ಓದುತ್ತಾ ಹೋದಂತೆ ಓದುಗನಿಗೆ ಅರಿವಾಗುತ್ತದೆ.


‘ಮಂಟೋ ಬರೆದ ದೇಶ ವಿಭಜನೆಯ ಕಥೆಗಳು’ ಇದು ೨೦೧೦ನೇ ಇಸವಿಯಲ್ಲಿ ಪ್ರಕಟವಾದ ಅನುವಾದ ಕೃತಿ. ಉರ್ದು ಸಾಹಿತ್ಯದ ದೈತ್ಯ ಪ್ರತಿಭೆ ಹಸನ್ ಸಾದಾತ್ ಮಂಟೋ ಇದರ ಮೂಲ ಲೇಖಕ‌. ೧೯೪೭ರ ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದ ಕ್ರೌರ್ಯ, ಹಿಂಸೆ, ಮನುಷ್ಯತ್ವದ ಪತನವನ್ನು ಮಂಟೋ ತೀಕ್ಷ್ಣವಾಗಿ ಕಥೆಗಳಲ್ಲಿ ಹಿಡಿದಿಟ್ಟಿದ್ದಾರೆ. ಕಟ್ಪಾಡಿ ಅವರು ಮಂಟೋನ ಮೂಲ ಧ್ವನಿಯನ್ನು ಕೆಡದಂತೆ ಕನ್ನಡಕ್ಕೆ ತಂದಿದ್ದಾರೆ. ವಿಭಜನೆಯ ಗಾಯಗಳನ್ನು ಅರ್ಥಮಾಡಿಕೊಳ್ಳಲು ಈ ಕೃತಿ ಮುಖ್ಯ ಆಕರ.

ಆಧುನಿಕ ಉರ್ದು ಸಾಹಿತ್ಯದ ಅತ್ಯಂತ ಪ್ರಭಾವಶಾಲಿ ಲೇಖಕಿ ಆಗಿದ್ದರು ಇಸ್ಮತ್ ಚುಗ್ತಾಯಿ. ಇವರು ಸ್ತ್ರೀವಾದಿ ಮತ್ತು ಸಮಾಜ ಸುಧಾರಕಿ. ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮುರಿದು, ಮಹಿಳಾ ಸಮಸ್ಯೆಗಳು ಮತ್ತು ಲೈಂಗಿಕತೆಯ ಕುರಿತು ಮುಕ್ತವಾಗಿ ಬರೆದ ಧೈರ್ಯಶಾಲಿ ಬರಹಗಾರ್ತಿಯಾಗಿ ಇವರು ಪ್ರಸಿದ್ಧರು.‌ ಇವರ ಬಗ್ಗೆ ಲೇಖಕರು ‘ಇಸ್ಮತ್ ಚುಗ್ತಾಯಿ’ (೨೦೨೩) ಎಂಬ ಕೃತಿಯನ್ನೂ ಬರೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಪುಸ್ತಕವನ್ನು ಪ್ರಕಟಿಸಿದೆ.

ಬಿಜಾಪುರದ ಆದಿಲ್ ಶಾಹಿ ಅರಸರ ಕಾಲದ ಸಾಹಿತ್ಯವನ್ನು ದಾಖಲಿಸುವ ಬೃಹತ್ ಯೋಜನೆಯ ಭಾಗವಾಗಿ‌ ಹೊರತಂದ ಆದಿಲ್ ಶಾಹಿ ಸಾಹಿತ್ಯ ಸಂಪುಟ-೦೭ (ಭಾಗ-೦೨) ಕೃತಿಯ ಅನುವಾದ ಕೆಲಸವನ್ನೂ ಲೇಖಕರು ಮಾಡಿದ್ದಾರೆ. ದಖನಿ ಉರ್ದು, ಪರ್ಷಿಯನ್ ಮತ್ತು ಕನ್ನಡದಲ್ಲಿ ರಚನೆಯಾದ ಆ ಕಾಲದ ಸಾಹಿತ್ಯ, ಆಡಳಿತದ ದಾಖಲೆ, ಸೂಫಿ ಪರಂಪರೆ ಇವುಗಳನ್ನು ಸಂಗ್ರಹಿಸಿ ಕನ್ನಡಕ್ಕೆ ತರುವ ಕೆಲಸವನ್ನು ನಿಭಾಯಿಸಿದ್ದಾರೆ. ಅಲ್ಲದೆ ‘ಜಾಹೂರ್ ಬಿನ್ ಜಾಹೂರಿಯಾ ‘ಮೊಹಮ್ಮದ್ ನಾಮಾ’ ಎಂಬ ಕೃತಿಯನ್ನೂ ‘ತಝ್ಕಿರತುಲ್ ಮುಲೂಕ್’ – ರಫಿಯುದ್ದೀನ್ ಇಬ್ರಾಹಿಂ ಶಿರಾಜಿ, ಹತ್ತನೇ ಸಂಪುಟವನನ್ನು ಮೌಲಾನಾ ಸಯ್ಯದ್ ರಶೀದ್ ಅಲ್ ಖಾಸಿಮಿ ಅವರೊಂದಿಗೆ ಅನುವಾದಿಸಿದ್ದಾರೆ. ಹಿಂದಿ, ಗುಜರಾತಿ, ಮರಾಠಿ, ಬಂಗಾಳಿ, ಮಲಯಾಳಂ, ಇಂಗ್ಲಿಷ್, ಉರ್ದು, ಕೊಂಕಣಿ ಮತ್ತು ತೆಲುಗು ಭಾಷೆಗಳಿಗೆ ಇವರ ಕೃತಿಗಳು ಅನುವಾದಗೊಂಡಿದೆ.

ಇವರ ಸಾಹಿತ್ಯಿಕ ಸಾಧನೆಯು ಹಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದೆ‌. ಸೂಫಿ ಅಧ್ಯಯನ, ಸಾಮಾಜಿಕ-ರಾಜಕೀಯ ವಿಷ್ಲೇಷಣೆ ಮತ್ತು ಸಾಂಸ್ಕೃತಿಕ-ಸಾಹಿತ್ಯ ವಿಮರ್ಶೆ. ಸೂಫಿ ಪರಂಪರೆಯ ಆಳವಾದ ಅಧ್ಯಯನ ಕೈಗೊಂಡ ಲೇಖಕರ ಕೃತಿಗಳಲ್ಲಿ ಸೂಫಿ ಚಿಂತನೆ ಕೇಂದ್ರಸ್ಥಾನದಲ್ಲಿದೆ. ಇದೊಂದು ಆಕಸ್ಮಿಕವಲ್ಲ. ಕರ್ನಾಟಕ-ಕೇರಳ ಭಾಗದಲ್ಲಿ ಶತಮಾನಗಳಿಂದ ಬೇರೂರಿರುವ ಸೂಫಿ ಪರಂಪರೆಯನ್ನು ದಾಖಲಿಸುವ, ವಿಶ್ಲೇಷಿಸುವ ಮತ್ತು ಜನಸಾಮಾನ್ಯರಿಗೆ ತಲುಪಿಸುವ ದೊಡ್ಡ ಯತ್ನ ಇಲ್ಲಿ ಕಾಣುತ್ತದೆ. ‘ಸೂಫಿ ಸಂತರು’ (೨೦೧೦) ಮತ್ತು ‘ಉತ್ತರ ಕರ್ನಾಟಕದ ಸೂಫಿ ಸಂತರು’ (೨೦೧೭) ಈ ಎರಡು ಕೃತಿಗಳು ಕರ್ನಾಟಕದ ಅಧ್ಯಾತ್ಮಿಕ ಕ್ಷೇತ್ರಕ್ಕೆ ಸೂಫಿ ಸಂತರ ಕೊಡುಗೆಯನ್ನು ಗುರುತಿಸುತ್ತವೆ. ೨೦೧೦ ರಲ್ಲಿ ಪ್ರಕಟವಾದ ‘ಸೂಫಿ ಮಹಿಳೆಯರು’ ಇದು ಅತ್ಯಂತ ಮಹತ್ವದ ಕೃತಿ. ಸಾಮಾನ್ಯವಾಗಿ ಪುರುಷ ಕೇಂದ್ರಿತವಾಗಿ ಚರ್ಚೆಯಾಗುವ ಸೂಫಿ ಪರಂಪರೆಯಲ್ಲಿ ಮಹಿಳಾ ಸಂತರ, ಸಾಧಕಿಯರ ಪಾತ್ರವನ್ನು ಮುನ್ನೆಲೆಗೆ ತರುತ್ತದೆ. ಮಹಿಳೋ ಸೂಫಿಗಳ ಅಧ್ಯಾತ್ಮ ಸಾಧನೆ, ಕಾವ್ಯ ಮತ್ತು ಸಾಮಾಜಿಕ ಪ್ರತಿರೋಧವನ್ನು ಈ ಕೃತಿ ಬೆಳಕಿಗೆ ತರುತ್ತದೆ. ‘ಸೂಫಿ ಅಧ್ಯಾತ್ಮ ಚಿಂತನೆಗಳು’ (೨೦೨೦) ಮತ್ತು ‘ಸೂಫಿ ಆಧ್ಯಾತ್ಮ ದರ್ಶನ’ ಈ ಕೃತಿಗಳು ಸೂಫಿ ತತ್ವಶಾಸ್ತ್ರದ ಮೂಲಭೂತ ಸಂಗತಿಗಳನ್ನು ವಿವರಿಸುತ್ತವೆ. ‘ವಹದತ್-ಉಲ್-ವುಜೂದ್’ ಅಂದರೆ ಸೃಷ್ಟಿಯ ಏಕತೆ, ‘ಇಶ್ಕ್-ಎ-ಹಕೀಕಿ’, ‘ಫನಾ’ – ಇಂತಹ ಕಠಿಣ ಪರಿಕಲ್ಪನೆಗಳನ್ನು ಕನ್ನಡದ ಓದುಗರಿಗೆ ಸರಳವಾಗಿ ಪರಿಚಯಿಸುವ ಪ್ರಯತ್ನ ಇಲ್ಲಿದೆ. ಇದು ಕೇವಲ ಇಸ್ಲಾಮಿಕ್ ಚಿಂತನೆಯಲ್ಲ, ಭಾರತೀಯ ಭಕ್ತಿ ಪರಂಪರೆಗಳೊಂದಿಗೆ ಇರುವ ಸಾಮ್ಯತೆಯನ್ನು ಹುಡುಕುವ ಕೆಲಸವನ್ನೂ ಮಾಡುತ್ತದೆ.

ಲೇಖಕರು ಕೇವಲ ಅಧ್ಯಾತ್ಮಕ್ಕೆ ಸೀಮಿತರಾದವರಲ್ಲ. ಸಮಕಾಲೀನ ಸಮಾಜದ ತಲ್ಲಣಗಳಿಗೂ ಬರಹಗಳ ಮೂಲಕ ಸ್ಪಂದಿಸಿದ್ದಾರೆ.‌ ೧೯೮೯ರಲ್ಲಿ ಪ್ರಕಟವಾದ ‘ಕೇರಳದಲ್ಲಿ ಹದಿನೈದು ದಿನಗಳು’ ಇದು ೧೯೮೦ರ ದಶಕದ ಕೇರಳದ ಸಾಮಾಜಿಕ-ಧಾರ್ಮಿಕ ಬದುಕನ್ನು ಸೂಕ್ಷ್ಮವಾಗಿ ದಾಖಲಿಸಿದೆ. ೨೦೧೦ ರಲ್ಲಿ ಪ್ರಕಟವಾದ ‘ಕೈಯೂರಿನ ರೈತವೀರರು’ ಕೃತಿಯು ರೈತರ ಶೋಷಣೆಯನ್ನೇ ತಮ್ಮ ಪೋಷಣೆಯನ್ನಾಗಿಸಿಕೊಂಡಿದ್ದ ಬ್ರಿಟಿಷರು ನಡೆಸುತ್ತಿದ್ದ ಸುಲಿಗೆ-ದಬ್ಬಾಳಿಕೆ-ಅಪಮಾನ ಮತ್ತು ಅದರ ವಿರುದ್ಧ ಕಯ್ಯೂರಿನ ರೈತರು ಸಿಡಿದೆದ್ದವರ ರಕ್ತದ ಹೋರಾಟ, ಛಲ-ದುರಂತ ಕತೆಗಳನ್ನು ಬಿಚ್ಚಿಡುತ್ತದೆ. ಇದು ಕೇವಲ ರೈತರ ಕತೆಯಲ್ಲದೆ ಇತಿಹಾಸ-ರೈತರ ಬಂಡಾಯವನ್ನು ಧ್ವನಿಯಾಗಿಸಿಕೊಂಡಿರುವ ಕತೆಯೂ ಹೌದು.

‘ಕೋಮುಹಿಂಸೆ ನಿಯಂತ್ರಣಾ ಮಸೂದೆ’ (೨೦೧೧) ಇದು ಅತ್ಯಂತ ಪ್ರಸ್ತುತ ಕೃತಿ. ಕೋಮು ಗಲಭೆಗಳನ್ನು ತಡೆಯುವಲ್ಲಿ ಕಾನೂನಿನ ಪಾತ್ರ, ಅಲ್ಪಸಂಖ್ಯಾತರ ರಕ್ಷಣೆ, ಸರ್ಕಾರದ ಜವಾಬ್ದಾರಿ ಇವುಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಇದಕ್ಕಿದೆ. ಇವರು ‘ರಾಷ್ಟ್ರೀಯತೆ ಮತ್ತು ಮುಸ್ಲಿಮರು’ ಎಂಬ ಕೃತಿಯನ್ನೂ ಬರೆದಿದ್ದಾರೆ.

‘ಕನ್ನಡ ಕಥಾ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’ ಇದು ಸಾಹಿತ್ಯ ವಿಮರ್ಶಾ ಕೃತಿ. ಎಲ್ಲ ಧರ್ಮೀಯರನ್ನು ಅಪ್ಪಿಕೊಂಡು ಬೆಳೆದ ಈ ನೆಲದ ಕಥಾ ಸಾಹತ್ಯಕ್ಕೆ ಅದರದೇ ಇತಿಹಾಸ ಇದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಲೇಖಕರು ಕನ್ನಡಕ್ಕೆ ಕೊಟ್ಟ ಕೊಡುಗೆಯನ್ನು, ಅದರಲ್ಲಿನ ಮಾನವೀಯ ಸ್ಪರ್ಶವನ್ನು ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ತಮ್ಮ ಆಳವಾದ ಅಧ್ಯಯನ ಮತ್ತು ಅನುಭವದ ಆಧಾರದಲ್ಲಿ ಇಲ್ಲಿ ವಿದ್ವತ್‌ಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

೧೯೮೯ರಿಂದ ಈಚೆಗೆ ಅಂದರೆ ಸುಮಾರು ಮೂರು ದಶಕಗಳ ಕಾಲ ನಿರಂತರವಾಗಿ ಬರೆಯುತ್ತಿರುವ ಲೇಖಕರ ಈ ಪಯಣ ಗಮನಾರ್ಹ. ಅವರ ಕೃತಿಗಳು ಇಸ್ಲಾಂ ಮತ್ತು ಭಾರತೀಯ ಪರಂಪರೆ, ಕನ್ನಡ ಮತ್ತು ಸೂಫಿ ಪರಂಪರೆ, ಇತಿಹಾಸ ಮತ್ತು ವರ್ತಮಾನಗಳ ನಡುವೆ ಸೇತುವೆ ಕಟ್ಟುತ್ತವೆ. ಉತ್ತರ ಕರ್ನಾಟಕದ ಸೂಫಿ ಪರಂಪರೆ, ಕೈಯೂರು ಹೋರಾಟದಂತಹ ಸ್ಥಳೀಯ ಇತಿಹಾಸಗಳನ್ನು ದಾಖಲು ಮಾಡಿದ್ದಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಈ ಕೃತಿಗಳ ಒಟ್ಟು ಆಶಯ ‘ಬಹುತ್ವದ ಭಾರತ’ವನ್ನು ಕಟ್ಟುವುದು. ಸೂಫಿ ಚಿಂತನೆಯ ಪ್ರೀತಿ ಮತ್ತು ಸಮನ್ವಯದ ಮೂಲಕ, ಇತಿಹಾಸದ ಸತ್ಯಗಳ ಮೂಲಕ ಮತ್ತು ಸಾಹಿತ್ಯದ ವಿಮರ್ಶೆಯ ಮೂಲಕ ವಿಭಜನೆಯ ರಾಜಕಾರಣಕ್ಕೆ ಉತ್ತರ ಕೊಡುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ.

ಪ್ರಶಸ್ತಿ ಮತ್ತು ಗೌರವಗಳು

ಕರಾವಳಿಯ ಸಾಂಸ್ಕೃತಿಕ ಲೋಕವನ್ನು ತಮ್ಮ ಬರಹಗಳಲ್ಲಿ ಜೀವಂತವಾಗಿಸಿದ ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಕನ್ನಡ ಮತ್ತು ಬ್ಯಾರಿ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅನನ್ಯ. ಕತೆ, ಕಾದಂಬರಿ, ಅನುವಾದ, ಸಂಶೋಧನೆ ಕ್ಷೇತ್ರಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ತೊಡಗಿಸಿಕೊಂಡಿರುವ ಇವರಿಗೆ ಪ್ರಾದೇಶಿಕ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಹಲವು ಗೌರವಗಳು ಲಭಿಸಿವೆ.

ಇವರ ಸಾಹಿತ್ಯ ಪಯಣದಲ್ಲಿ ಮೊದಲ ರಾಷ್ಟ್ರೀಯ ಮನ್ನಣೆ ಸಿಕ್ಕಿದ್ದು ೧೯೯೧ರಲ್ಲಿ. ಬ್ಯಾರಿ ಸಮುದಾಯದ ನೋವು-ನಲಿವುಗಳನ್ನು ಚಿತ್ರಿಸುವ ‘ನೋಂಬು’ ಕಥಾಸಂಕಲನಕ್ಕೆ ‘ರಾಷ್ಟ್ರೀಯ ಕಥಾ ಪ್ರಶಸ್ತಿ’ ಲಭಿಸಿ, ಕರಾವಳಿಯ ಧ್ವನಿ ದೆಹಲಿಯನ್ನು ತಲುಪಿತು. ನಂತರ ೨೦೦೦ದಲ್ಲಿ ‘ದಜ್ಜಾಲ’ ಕಾದಂಬರಿಗೆ ಮತ್ತು ೨೦೧೦ರಲ್ಲಿ ‘ದೇಶ ವಿಭಜನೆಯ ಕಥೆಗಳು’ ಅನುವಾದ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ಗಳು ಸಂದವು. ಕನ್ನಡ ನಾಡು-ನುಡಿಗೆ ಸಲ್ಲಿಸಿದ ಸಮಗ್ರ ಸೇವೆಯನ್ನು ಗುರುತಿಸಿ ೨೦೦೧ರಲ್ಲಿ ರಾಜ್ಯ ಸರ್ಕಾರ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತು.

ಸಾಹಿತ್ಯದ ಜೊತೆಗೆ ಸಾಮಾಜಿಕ ಸೌಹಾರ್ದಕ್ಕೂ ಇವರು ನೀಡಿದ ಕೊಡುಗೆ ಗಮನಾರ್ಹ. ೨೦೦೪ರಲ್ಲಿ ‘ತುಳುಶ್ರೀ ಪ್ರಶಸ್ತಿ’, ೨೦೧೧ರಲ್ಲಿ ಪ್ರಗತಿಪರ ಬರಹಗಳಿಗೆ ‘ಲಂಕೇಶ್ ಪ್ರಶಸ್ತಿ’ ೨೦೧೩ರಲ್ಲಿ ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’ ಲಭಿಸಿವೆ. ೨೦೧೫ ಇವರ ಪಾಲಿಗೆ ವಿಶೇಷ ವರ್ಷ. ‘ಕಡವು ಮನೆ’ ಕೃತಿಗೆ ‘ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ’ ಹಾಗೂ ‘ಸೂಫಿಸಂತರು’ ಕೃತಿಗೆ ವಿಜಯಪುರ, ಕೋಲಾರದಲ್ಲಿ ‘ಸದ್ಭಾವನಾ ಪ್ರಶಸ್ತಿ’ ಒಟ್ಟಿಗೆ ಬಂದವು. ೨೦೦೭ರಲ್ಲೂ ಎರಡು ಗೌರವಗಳು ಒಟ್ಟಿಗೆ ಬಂದವು: ಕನ್ನಡ ಸಾಹಿತ್ಯ ಪರಿಷತ್ತಿನ ‘ಸಾಹಿತ್ಯಶ್ರೀ ಪ್ರಶಸ್ತಿ’ ಮತ್ತು ‘ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ’. ಈ ಎಲ್ಲ ಪ್ರಮುಖ ಪ್ರಶಸ್ತಿಗಳು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಈ ಗೌರವಗಳು ಕೇವಲ ವ್ಯಕ್ತಿಗತ ಸಾಧನೆಯಲ್ಲ, ಕನ್ನಡ ಸಾಹಿತ್ಯದ ಬಹುತ್ವಕ್ಕೆ ಸಂದ ಮನ್ನಣೆಯೂ ಹೌದು.

ಒಟ್ಟು ಸಾಹಿತ್ಯ ಅವಲೋಕನ

ಲೇಖಕರು ತಮ್ಮ ಕಥೆಗಳ ಒಟ್ಟು ಪಯಣವನ್ನು ನಾಲ್ಕು ಹಂತಗಳಲ್ಲಿ ವಿವರಿಸುತ್ತಾರೆ. ಮೊದಲನೇಯದು ಸಾಮಾಜಿಕ ಸಮಸ್ಯೆಗಳ ಅವಲೋಕನ. ಬಾಲ್ಯದ ಸಂಪ್ರದಾಯಿಕ ಪರಿಸರ, ಮದ್ರಸಾದ ಬೋಧನೆಗಳು ಮತ್ತು ಬದುಕಿನ ವಾಸ್ತವಗಳ ನಡುವಿನ ವ್ಯತ್ಯಾಸಗಳು‌ ಇವರಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿತ್ತು. ಹಿಂದು ನೆರೆಹೊರೆಯವರ ಸಂಸ್ಕೃತಿ, ಸಮುದಾಯದ ಸಮಸ್ಯೆಗಳು, ಮದುವೆಯಲ್ಲಿನ ಕ್ರೌರ್ಯ ಇವುಗಳನ್ನು ಕಂಡಾಗ ಶ್ರೇಷ್ಠತೆಯ ನಂಬಿಕೆ ಕರಗಿತು. ಈ ಅನುಭವಗಳು ‘ಗೋರಿ ಕಟ್ಟಿಕೊಂಡವರು’, ‘ನೋಂಬು’ ಕಥೆಗಳಾದವು. ಇದರಿಂದ ಸಮುದಾಯದ ವಿರೋಧವನ್ನೂ ಎದುರಿಸಬೇಕಾಯಿತು ಎಂದು ಲೇಖಕರು ಹೇಳುತ್ತಾರೆ.

ಎರಡನೇಯದು ಕೋಮುಸೌಹಾರ್ದದ ಶಿಥಿಲತೆ. ೮೦-೯೦ರ ದಶಕದ ವ್ಯಾಪಾರ ಪೈಪೋಟಿ, ಜಾತಿ ವೈಷಮ್ಯ ಮತ್ತು ಕೋಮುವಾದಿ ರಾಜಕಾರಣದಿಂದ ದಕ್ಷಿಣ ಕನ್ನಡದಲ್ಲಿ ಸಾಮರಸ್ಯ ಒಡೆಯಿತು. ಬಾಬರಿ ಮಸೀದಿ ಧ್ವಂಸ, ಮುಂಬೈ, ಗುಜರಾತ್ ಗಲಭೆಗಳ ಪರಿಣಾಮ ಜಿಲ್ಲೆಯ ಮೇಲೂ ಆಯಿತು. ಈ ಆತಂಕ, ಸಾಮಾಜಿಕ ಸೌಹಾರ್ದದ ಸಡಿಲತೆಯ ನೋವು ‘ದಜ್ಜಾಲ’ ಸಂಕಲನ ಮತ್ತು ನಂತರದ ಕಥೆಗಳಲ್ಲಿ ಪ್ರತಿಫಲಿಸಿದೆ ಅಂತ ಲೇಖಕರು ಹೇಳುತ್ತಾರೆ.

ತಮ್ಮ ಕಥೆಗಳ ಮೂರನೇ ಮತ್ತು ನಾಲ್ಕನೇ ಹಂತವು ಸೂಫಿ ಪ್ರಭಾವ ಮತ್ತು ಬಡತನದ ದನಿ ಅಂತ ಗುರುತಿಸಿಕೊಂಡಿದ್ದಾರೆ. ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕಥೆಗಳಲ್ಲಿ ಬಡತನ ಮತ್ತು ಎಡಪಂಥೀಯ ನೋಟವು ಪದೇ ಪದೇ ಕಾಣಿಸುತ್ತದೆ. ಸೂಫಿ ಚಿಂತನೆಯಲ್ಲಿ ಬಡತನ ದೇವರ ಭಾಗ್ಯವಾದರೂ ಅದರ ಕ್ರೌರ್ಯ ಅನುಭವಿಸಿದವರಿಗೆ ಮಾತ್ರ ಗೊತ್ತು. ಹೀಗಾಗಿ ಮುಸ್ಲಿಂ ಬದುಕನ್ನು ಬರೆಯುವಾಗ ಬಡತನ ಅನಿವಾರ್ಯ ಅಂತ ಲೇಖಕರು ಹೇಳುತ್ತಾರೆ. ೯೦ರ ದಶಕದಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ತೀವ್ರವಾಗಿ ಯೋಚಿಸಿ, ಮಂಗಳೂರಿನ ಎಡಪಂಥೀಯ ಹೋರಾಟಗಳಲ್ಲಿ ಭಾಗವಹಿಸಿ, ಅದರ ಪ್ರಭಾವದಿಂದ ಸಾಹಿತ್ಯ ರಚನೆಗಳು ನಡೆಸುತ್ತಾರೆ. ‘ಈ ಹಂತಗಳು ನನ್ನ ಬರವಣಿಗೆಯ ತಳಪಾಯ, ಪ್ರಶ್ನೆ ಆತಂಕ ಮತ್ತು ವಾಸ್ತವದ ಹುಡುಕಾಟವೇ ನನ್ನ ಕಥೆಗಳ ಜೀವಾಳ’ ಅಂತ ಲೇಖಕರು ತಮ್ಮ ಕಥೆಗಳ ಹುಟ್ಟಿನ ಬಗ್ಗೆ ಮಾತಾಡುತ್ತಾರೆ.

ಇವರು ಬರೆದ ‘ಕಡವು ಮನೆ’ ನೀಳ್ಗಥೆಯ ಮುನ್ನುಡಿಯಲ್ಲಿ ತಮ್ಮ ಕಥೆಗಳ ಹುಟ್ಟು ಮತ್ತು ಆಗಿನ ಸಮಾಜದ ಸ್ಥಿತಿಗತಿಯ ಬಗ್ಗೆ ಹೇಳಿಕೊಂಡಿದ್ದಾರೆ; “ನಾನು ಬರೆಯಲು ಪ್ರಾರಂಭಿಸಿದ ಬಗ್ಗೆ ಅನ್ವೇಷಿಸುವುದಕ್ಕೆ ತೊಡಗಿದರೆ ನನ್ನಲ್ಲಿ ಈ ಆಸಕ್ತಿ ಹೇಗೆ ಹುಟ್ಟಿಕೊಂಡಿತು ಎನ್ನುವ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನನ್ನಲ್ಲಿಲ್ಲ. ಯಾಕೆಂದರೆ ನನ್ನ ಮನೆಯಲ್ಲಾಗಲೀ, ಕುಟುಂಬದಲ್ಲಾಗಲೀ ಯಾರೂ ಬರಹಗಾರರಾಗಿರಲಿಲ್ಲ, ಸಾಹಿತ್ಯಾಸಕ್ತರೂ ಇರಲಿಲ್ಲ. ನಾನು ಕತೆಗಾರನಾದದ್ದು ತುಂಬ ಅನಿರೀಕ್ಷಿತ. ನನ್ನಲ್ಲಿ ನನ್ನ ಹುಟ್ಟೂರು ಮತ್ತು ಬೆಳೆದ ಊರಿನ ಪರಿಸರದ ಬಗೆಗಿನ ಪ್ರೀತಿ, ಆಸಕ್ತಿ ನನ್ನನ್ನು ಕತೆಗಳಿಗೆ ಸಾಮಾಗ್ರಿ ಒದಗಿಸುವಂತೆ ಮಾಡಿದ್ದರೂ, ಕತೆ ಕಾದಂಬರಿಗಳನ್ನು ಓದುವ ಗೀಳು ನನ್ನನ್ನು ಬರಹಗಾರನಾಗಲು ಮುಖ್ಯ ಪ್ರೇರಣೆ ನೀಡಿರಬೇಕು ಎಂದು ಅನಿಸುತ್ತದೆ. ನಾನು ಹುಟ್ಟಿ ಬೆಳೆದ ಪರಿಸರದಲ್ಲಿ ಬರಹಗಾರನಾಗಿ ಬೆಳೆಯುವುದಕ್ಕೆ ವಿರೋಧಿಯಾದ ವಾತಾವರಣ ಸಾಕಷ್ಟು ಇತ್ತು. ಪಾಠ ಪುಸ್ತಕಗಳನ್ನು ಹೊರತು ಉಳಿದ ಪುಸ್ತಕಗಳ ಓದಿಗೆ ಸಾಕಷ್ಟು ವಿರೋಧವಿತ್ತು. ಜೊತೆಗೆ ಮನೆಯಲ್ಲಿ ಸಂಪೂರ್ಣ ಧಾರ್ಮಿಕ ಸಂಪ್ರದಾಯಿಕ ವಾತಾವರಣವಿತ್ತು. ನಮಾಜು, ಕುರಾನ್ ಪಠಣ, ಮೌಲೀದ್, ದೀನೀಶಾಸ್ತ್ರಗಳ ಅಧ್ಯಯನ, ಸೂಫಿ ವ್ಯಾಖ್ಯಾನ ನಡೆಯುತ್ತಿತ್ತು. ಈ ನಡುವೆ ಬಿಡುವು ಮಾಡಿಕೊಂಡು ಊರಿಡೀ ಓಡಾಡುವ, ಕೋಲ, ಕಂಬಳ, ಯಕ್ಷಗಾನಗಳನ್ನು ನೋಡುವ ಮೂಲಕ ನನಗೆ ಹೊಸ ಅನುಭವಗಳನ್ನು ನನ್ನದಾಗಿಸಿಕೊಳ್ಳುವ ದಾಹವಿತ್ತು” ಎನ್ನುತ್ತಾರೆ.

ಸ್ವತಃ ಕಟ್ಟಾಡಿಯವರೇ ಹೇಳಿಕೊಳ್ಳುವಂತೆ “ನಾನು ಬರಹಗಾರನಾಗುವುದಕ್ಕೆ ಹಿನ್ನೆಲೆಯನ್ನು ಹುಡುಕುತ್ತ ಹೋದಂತೆ ನನಗೆ ನನ್ನ ಊರು, ನನ್ನ ಜನಗಳು, ಪರಿಸರಗಳು ನನ್ನನ್ನು ರೂಪಿಸಿರುವುದಕ್ಕೆ ಕಾರಣವೆಂದು ನನಗನಿಸುತ್ತದೆ. ನಮ್ಮೂರಿನಲ್ಲಿ ನಡೆದ ಘಟನೆಗಳು, ಜನರ ಬಲವಾದ ನಂಬಿಕೆಗಳು, ನಮ್ಮ ಜನ ಸಂಕಷ್ಟಗಳನ್ನು ಎದುರಿಸಿದ ರೀತಿ, ತಮಗಾದ ಅನ್ಯಾಯವನ್ನು ಪ್ರತಿಭಟಿಸಿದ ರೀತಿ, ಬಾಲ್ಯದ ಅನುಭವಗಳು, ಆಸಕ್ತಿಗಳು, ಬದುಕಿನಲ್ಲಿ ನನಗೆ ಸವಾಲಾಗಿ ನಿಂತ ಒತ್ತಡಗಳು ಮುಖ್ಯವಾದ ಪಾತ್ರವಹಿಸಿವೆ. ನನ್ನ ಕೃತಿಗಳ ಜೊತೆಗಿನ ನನ್ನ ಸಂಬಂಧ ಬರಿಯ ಪ್ರತಿಭೆ ಸೃಜನಶೀಲತೆಗೆ ಮಾತ್ರ ಸೀಮಿತಗೊಂಡಿಲ್ಲ, ಜೊತೆಗೆ ಅಗೋಚರವಾದ ಆಧ್ಯಾತ್ಮಿಕ ಒಡನಾಟವಿದೆಯೆನಿಸುತ್ತದೆ⁶³. ನನ್ನ ಕಥೆಗಳಲ್ಲಿ ಬಡತನ ಹೆಚ್ಚು ಕಾಣಸಿಗುತ್ತದೆ. ಎಡಪಂಥೀಯ ಎಂದೆಲ್ಲ ಹೇಳುವವರಿಗೆ ನಾನು ಕಂಡ ಸತ್ಯಗಳನ್ನಷ್ಟೇ ನನ್ನ ಕೃತಿಗಳಲ್ಲಿ ಹೇಳಲು ಪ್ರಯತ್ನಪಡುತ್ತೇನೆಂದು ಹೇಳಬಯಸುತ್ತೇನೆ” (ಪಚ್ಚೆ ಕುದುರೆ – ಫಕೀರ್ ಮುಹಮ್ಮದ್ ಕಟ್ಪಾಡಿ, ಪುಟ-೦೭,೨೦೧೨)

ಲೇಖಕರು ತಮಗೆ ಆದ ಒಂದು ಕಹಿ ಅನುಭವವನ್ನು ದಾಖಲಿಸಿದ್ದಾರೆ. ೬ನೇ ತರಗತಿಗೆ ಪೇಟೆಯ ಶಾಲೆಯಲ್ಲಿ ಸೇರಿಕೊಂಡು ಇತಿಹಾಸ ಪಾಠದಲ್ಲಿ ಭಾರತದ ಮೇಲೆ ಮ್ಲೇಚ್ಛರ ದಾಳಿ, ಮುಖ್ಯವಾಗಿ ಅವರಂಗಜೇಬನ ಬಗ್ಗೆ ಉಲ್ಲೇಖವಾಗುವ ಸಂದರ್ಭದಲ್ಲಿ ಲೇಖಕರಿಗೆ ಕೀಳರಿಮೆ ಬೆಳೆಯಲು ಕಾರಣವಾಯಿತು ಅಂತ ಹೇಳಿಕೊಂಡಿದ್ದಾರೆ. “೧೯೭೪ರ ಹೊತ್ತಿಗೆ ಬಂಡಾಯ ಸಾಹಿತ್ಯ ಚಳವಳಿಯ ಸಂಪರ್ಕವಾದ ನಂತರದಲ್ಲಿ ನನ್ನಲ್ಲಿದ್ದ ಎಲ್ಲ ಕೀಳರಿಮೆಗಳು ಹೆಚ್ಚುಕಮ್ಮಿ ಮಾಯವಾಗಿದ್ದವು. ಮುಸ್ಲಿಮ್ ಸಮಾಜದ ಹಲವು ಸಮಸ್ಯೆಗಳು, ಬದುಕಿನ ಸಂಕೀರ್ಣ ವಲಯಗಳನ್ನೊಳಗೊಂಡ ಕತೆಗಳು, ಮುಖ್ಯವಾಗಿ ‘ಗೋರಿ ಕಟ್ಟಿಕೊಂಡವರು’, ‘ಅಕ್ಕನ ಮದುವೆ ಮತ್ತು ಆಡು’, ‘ಒಂದು ಹಗಲು ಒಂದು ರಾತ್ರಿ’, ‘ವಂತಿಗೆ’ ‘ಅಪ್ಪ’, ‘ಮುಸುಕು’, ‘ಹತ್ಯೆ’, ‘ರಾಬಿಯಾ’ ಮುಂತಾದವು ಸೃಷ್ಟಿಯಾದವು. ಶಾಬಾನು ಪ್ರಕರಣದ ತೀರ್ಪು ಬಂದ ಸಂದರ್ಭದಲ್ಲಿ ಸಾಮಾಜಿಕ ಸಮಸ್ಯೆಯನ್ನು ಧಾರ್ಮಿಕ ಸಮಸ್ಯೆಯನ್ನಾಗಿಸುವ ಹುನ್ನಾರವನ್ನು ಅರ್ಥಮಾಡಿಕೊಂಡಾಗ ‘ವೈಯಕ್ತಿಕ’ ಕತೆ ಹುಟ್ಟಿಕೊಂಡಿತ್ತು. ೧೯೯೧ರಲ್ಲಿ ಮತಾಂಧರು ಉರುಳಿಸಿದ ಬಾಬರಿ ಮಸೀದಿಯ ಸಂದರ್ಭ ಮತ್ತು ನಂತರದಲ್ಲಿ ದೇಶದಾದ್ಯಂತ ನಡೆದ ಕೋಮು ಹಿಂಸೆ ಮನಸ್ಸನ್ನು ಅಳವಾಗಿ ಮಾಡಿದ ಘಾಸಿಯಾಗಿತ್ತು. ಸೂಫಿಗಳ ಮಾನವೀಯತೆ, ಜನರ ಮಧ್ಯೆ ಬೆಳೆದಿದ್ದ ಕೋಮು ಸೌಹಾರ್ದಕ್ಕಾದ ಆಘಾತ, ಈ ಸಂದರ್ಭದಲ್ಲಿ ಕಂಡು ಹೌಹಾರಿದ್ದೆ. ಗೆಳೆಯರ ತಂಡದೊಂದಿಗೆ ದಕ್ಷಿಣ ಕನ್ನಡದಲ್ಲಿ ವ್ಯಾಪಕವಾಗಿ ಹರಡಿದ ಕೋಮು ಹಿಂಸೆಯ ಅಧ್ಯಯನವನ್ನು ಮಾಡಿದಾಗ ಕಂಡು-ಕೇಳಿದ ಅನುಭವಗಳು ಗಾಢವಾಗಿ ಕಲಕಿದಾಗ ‘ದಜ್ಜಾಲ’, ‘ತುಷ್ಣೀಕರಣ’, ‘ಬುರ್ಖಾ’, ‘ಕೋಮು’ ‘ಬಂದಿ’ ‘ಅಜರ್ ಎಂಬ ಹುಡುಗ’ ಎಂಬ ಕತೆಗಳು ಹುಟ್ಟಿಕೊಂಡವು. ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಅನೇಕ ಪ್ರತಿಭಟನೆ, ರ್ಯಾಲಿಗಳನ್ನು ಸಂಯೋಜಿಸಿ, ಪಾಲ್ಗೊಂಡಿದ್ದೆ. ಈ ಸಂದರ್ಭದಲ್ಲಿ ಬರಹಗಾರನಾಗಿ ನಾನು ಎದುರಿಸಿದ ಕೋಮುವಾದಿಗಳ ವಿಶಿಷ್ಟ ಪ್ರತಿಕ್ರಿಯೆಗಳು, ಸಾಮಾಜಿಕ ವಿರೋಧಗಳು, ಬೆದರಿಕೆ ಪತ್ರಗಳು, ದೈಹಿಕ ಬೆದರಿಕೆಗಳು, ಇತ್ತೀಚೆಗೆ ನನ್ನ ‘ಅಪ್ಪ’ ಕತೆ ತೆಲುಗು ಭಾಷೆಗೆ ಅನುವಾದಗೊಂಡು ಆಂಧ್ರಜ್ಯೋತಿ ಪತ್ರಿಕೆಯಲ್ಲಿ ಪ್ರಕಟವಾದಾಗ ಅಲ್ಲಿನ ಮುಲ್ಲಾಗಳು ನೀಡಿದ ಬೆದರಿಕೆ, ಎಚ್ಚರಿಕೆ, ಅಸಾಮಾಜಿಕ ಒತ್ತಡಗಳು ಎಲ್ಲವೂ ನನ್ನ ಕೆಳರಿಮೆಯನ್ನು ಮರೆಯುವುದಕ್ಕೆ, ನನ್ನ ಬರಹಗಳನ್ನು ಗಟ್ಟಿಯಾಗಿ ರೂಪಿಸುವುದಕ್ಕೆ ಸಹಕಾರಿಯಾಗಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಈ ಕಾರಣಕ್ಕಾಗಿ ನಾನು ಇವನ್ನೆಲ್ಲ ಎಂದೂ ಪ್ರಚಾರಕ್ಕಾಗಿ ಬಳಸಿಕೊಳ್ಳದೆ ನನ್ನ ಜನರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗುವ ಮಾರ್ಗವಾಗಿ ಬಳಸಿಕೊಂಡಿದ್ದೇನೆ. ನಾನು ಕಟ್ಟಾ ಸಂಪ್ರದಾಯವಾದಿ ಮನೆಯಲ್ಲಿ ಹುಟ್ಟಿದ್ದರಿಂದ ನನ್ನಲ್ಲಿ ಧಾರ್ಮಿಕ ನಂಬಿಕೆ, ಸಂಪ್ರದಾಯ, ಆಚರಣೆಗಳ ಬಗ್ಗೆ ಸಹಾನುಭೂತಿ, ಗೌರವ ನನ್ನಲ್ಲಿ ಮನೆಮಾಡಿದೆ. ಇಸ್ಲಾಮಿನ ಧಾರ್ಮಿಕ ತತ್ವಗಳನ್ನು ಮಾತ್ರವಲ್ಲ ಅವುಗಳ ಅಳವಡಿರುವ ಮಾನವೀಯ ಆಶಯಗಳನ್ನು ನನ್ನ ಹೆತ್ತವರು ನನಗೆ ತಿಳಿಸಿ, ಕಲಿಸಿದ್ದರಿಂದ ಸಾಮಾಜಿಕ ಸಮಸ್ಯೆಗಳನ್ನು ಹೆಚ್ಚು ವಿಮರ್ಶಾತ್ಮಕ ದೃಷ್ಟಿಕೋನದಿಂದ ನೋಡಲು ನನಗೆ ಸಾಧ್ಯವಾಯಿತು. ನನ್ನ ಸಮಾಜವನ್ನು ಎಷ್ಟೇ ಕಟುವಾಗಿ ನನ್ನ ಕತೆಗಳ, ಕಾದಂಬರಿಗಳ ಮೂಲಕ ವಿಮರ್ಶೆಗೆ ಒಳಪಡಿಸಿಕೊಂಡರೂ, ಎಷ್ಟೇ ಒತ್ತಡ, ಪ್ರತಿಭಟನೆ, ಬೆದರಿಕೆಗಳನ್ನು ಎದುರಿಸಬೇಕಾಗಿ ಬಂದರೂ ನಾನು ನನ್ನ ಜನಗಳ ಒಡನಾಟವನ್ನು ಬಿಟ್ಟಿಲ್ಲ. ಸಮಾಜದ ಒಳಗಡೆ ಇದ್ದುಕೊಂಡೇ ನನ್ನ ವಿಚಾರವನ್ನು ವ್ಯಕ್ತಪಡಿಸುತ್ತೇನೆ. ಈ ಆಶಯ ಮತ್ತು ವಿಚಾರಗಳು ನನ್ನ ಕೃತಿಗಳಲ್ಲಿ ಮನೆಮಾಡಿವೆ. ಹೀಗಾಗಿ ಒಂದು ರೀತಿಯಲ್ಲಿ ನನ್ನ ಸಾಮಾಜಿಕ ಪ್ರತಿಭಟನೆಯಲ್ಲಿ ಧಾರ್ಮಿಕ ಚೌಕಟ್ಟು ಕಂಡುಬರುವುದು ಸಹಜ. ಇದು ಸೂಫಿ ಪಂಥದ ಪ್ರಭಾವ ನನ್ನ ಮೇಲೆ ಆಗಿರುವುದು ಕೂಡ ಕಾರಣವಾಗಿರಬಹುದು. ಸೂಫಿ ಆಧ್ಯಾತ್ಮದ ಕಡೆಗೆ ನನ್ನ ಒಲವು, ಸೂಫಿಗಳ ಜೊತೆಗಿನ ಒಡನಾಟದ ಅನುಭವವನ್ನು ‘ಪಾಡು,’ ‘ಕರಾಮತ್’, ‘ಕುದ್ರತ್’ ಎಂಬ ಮೂರು ಒಂದಕ್ಕೊಂದು ಸಂಬಂಧವಿರುವ ಕತೆಗಳಲ್ಲಿ ದಾಖಲಿಸಲು ಯತ್ನಿಸಿದ್ದೇನೆ. ಬರವಣಿಗೆಯ ಮೂಲ ಉದ್ದೇಶ ಆತ್ಮತೃಪ್ತಿ ಮತ್ತು ಸಂತೋಷ. ಕತೆಯ ಹುಟ್ಟು ಸಾಮಾಜಿಕ ಅಥವಾ ಯಾವುದೇ ಅನುಭವದ ವಿಶ್ಲೇಷಣೆಯಲ್ಲಿ ಮತ್ತು ಅವನ್ನ ದಾಖಲಿಸುವ ಒತ್ತಡದಲ್ಲಿ ಅಡಗಿದೆಯೆಂದು ನನಗನಿಸುತ್ತದೆ. ಬಹುಶಃ ತೀರ ವೈಯಕ್ತಿಕವಾದ ಅನುಭವಗಳು ಬರಹಗಳನ್ನು ರೂಪಿಸಿದರೂ ನನ್ನ ಅನುಭವ ಪ್ರಕಾರ ಬರಹ ಮೂಡಿ ಬರಲು ಇವಿಷ್ಟು ಮಾತ್ರ ಸಾಲದು. ಕಂಡು ಕೇಳಿದ ಘಟನೆಗಳನ್ನು ತನ್ನದಾಗಿಸಿಕೊಳ್ಳುವ ವಿನಯ, ಬರಹಕ್ಕೆ ತಕ್ಕ ಭಾಷೆಯ ಆಯ್ಕೆ, ಪ್ರತಿಭೆಯ ಭಾಗವಾಗಿರುವ ತಂತ್ರ, ಶೈಲಿ, ನಿರೂಪಣೆ ಎಲ್ಲವೂ ಪ್ರಮುಖವಾಗಿರುತ್ತದೆ. ತನ್ನ ಸಾಮರ್ಥ್ಯವನ್ನು ಸರ್ವರ ಶಕ್ತಿಯನ್ನಾಗಿ ರೂಪಿಸಿಕೊಳ್ಳುವುದನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ”.
(ಕಡವು ಮನೆ ಪುಟ-೧-೫, ೨೦೧೩)

ಫಕೀರ್ ಮುಹಮ್ಮದ್ ಕಟ್ಟಾಡಿಯವರ ಬರಹಕ್ಕೆ ಅವರ ಊರು, ಜನ ಮತ್ತು ಪರಿಸರವೇ ಮೂಲದ್ರವ್ಯ. ಬಾಲ್ಯದ ಅನುಭವ, ಜನರ ಸಂಕಷ್ಟ, ಅನ್ಯಾಯದ ವಿರುದ್ಧದ ಹೋರಾಟಗಳು ಅವರ ಕಥೆಗಳ ಜೀವಾಳವೆಂದು ಅವರ‌‌ ಮಾತುಗಳಿಂದ ಸ್ಪಷ್ಟವಾಗುತ್ತದೆ. ಬಡತನವನ್ನೇ ಹೆಚ್ಚಾಗಿ ಚಿತ್ರಿಸಿದರೂ, ತಾವು ಕಂಡ ಸತ್ಯವನ್ನು ಹೇಳುವುದೇ ಅವರ ಉದ್ದೇಶ. ಹೀಗೆ ಕಟ್ಟಾಡಿಯವರ ಸಾಹಿತ್ಯವು ರಾಜಕೀಯ ಹಣೆಪಟ್ಟಿಯನ್ನು ಮೀರಿ ಬದುಕಿನ ನೈಜ ತಲ್ಲಣಗಳ ದನಿಯಾಗಿದೆ.

~ಸಲೀಂ ಮುಈನೀ, ಇರುವಂಬಳ್ಳ

Leave a Reply

*