ಕೆಲವು ದಿನಗಳ ಹಿಂದೆ ಕ್ಯಾಲಿಕಟ್’ನಲ್ಲಿ ನಡೆದ ಪುಸ್ತಕ ವಿಮರ್ಶೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹೊರಬಂದಾಗ ಬಿಳಿ ಮುಂಡಾಸು ಧರಿಸಿದ ಯುವಕನೊಬ್ಬ ನನ್ನನ್ನೇ ಕಾಯುತ್ತಾ ನಿಂತಿದ್ದ. ಅವನು ಹಲವು ವರ್ಷಗಳಿಂದ ಫೇಸ್ಬುಕ್ ಮುಖಾಂತರ ಪರಿಚಯವಾದ ಒಬ್ಬ ವಿದ್ಯಾರ್ಥಿ. ಚೆನ್ನಾಗಿ ಕವಿತೆ ಬರೆಯುವ ಅಲ್ಲದೆ ಸ್ವತಃ ಒಂದು ಕವನ ಸಂಕಲನವನ್ನೂ ಪ್ರಕಟಿಸಿದ್ದ ಆತ. ನೇರ ಮಾತುಕತೆಗೆ ಸಿಗದಿದ್ದರೂ ಚಾಟಿಂಗ್ ಮೂಲಕ, ಕರೆಗಳ ಮೂಲಕ ನಿರಂತರವಾಗಿ ನನ್ನನ್ನು ಸಂಪರ್ಕಿಸುತ್ತಿದ್ದ ಚಲಾಕಿ ಹುಡುಗ. ಮಾತು ಆರಂಭಿಸಿ ಬರವಣಿಗೆಯು ಹೇಗೆ ಸಾಗುತಿದೆ ಎಂದು ಕೇಳಿದಾಗ ಬರವಣಿಗೆ ಬಿಟ್ಟು ಓದು ಸರಿಯಾಗಿ ನಡೀತಿಲ್ಲ ಅಂತ ಉತ್ತರಿಸಿದ.
ನನಗಿದು ಹೊಸ ಅನುಭವವೇನಲ್ಲ. ಹಲವ ವಿದ್ಯಾರ್ಥಿಗಳು ಇದೇ ಉತ್ತರವನ್ನು ಕೊಟ್ಟ ತುಂಬಾ ಅನುಭವಗಳು ನನಗಿದೆ. ಅಧ್ಯಯನದ ಹೊತ್ತಲ್ಲಿ ಗುರುಗಳ ಸಲಹೆ, ಪ್ರೋತ್ಸಾಹದಿಂದ ಚೆನ್ನಾಗಿ ಓದು ಬರಹ ಮಾಡುತಿದ್ದ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಚುರುಕಾಗಿ ಮಾತನಾಡುತ್ತಿದ್ದ ಯುವಕರು ತಮ್ಮ ಅಧ್ಯಯನ ಪೂರ್ತಿಯಾದ ಬಳಿಕ ಉದ್ಯೋಗ ನಿಮಿತ್ತವೋ ಇನ್ಯಾವುದೋ ಗಡಿಬಿಡಿಯಲ್ಲಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಬೇಡವೆಂದು ಬದಿಗಿಟ್ಟು ಹೋಗುವ ಖೇದಕರ ಸಂಗತಿಯನ್ನು ನಾನು ಅನುಭವಿಸುತ್ತಿದ್ದೇನೆ.
ಇವತ್ತು ಕೇರಳದ ಸುನ್ನೀ ವಿದ್ಯಾ ಸಂಸ್ಥೆಗಳ ಗ್ರಂಥಾಲಯದಲ್ಲಿ ಧಾರ್ಮಿಕ ಗ್ರಂಥಗಳಲ್ಲದೆ ಇತರೆ ಸಾಹಿತ್ಯ ಪುಸ್ತಕಗಳ ಭೀಮಶೇಖರಣೆಯು ಕಾಣಿಸುತ್ತದೆ. ಅದಲ್ಲದೆ ಧಾರ್ಮಿಕ ಗ್ರಂಥಗಳ ಅಧ್ಯಯನವನ್ನು ಹೊರತುಪಡಿಸಿ ಓದಲು ಮತ್ತು ಬರೆಯಲು ಪ್ರೇರೇಪಿಸುವ ಹಲವು ವಿಶೇಷ ಕಾರ್ಯಾಗಾರಗಳೂ ನಡೆಯುತ್ತಿದೆ. ಇವುಗಳ ಮುಖಾಂತರ ಕಲೆ, ಬರವಣಿಗೆಯಲ್ಲಿ ಆಸಕ್ತಿಯಿರುವ ದೊಡ್ಡದೊಂದು ತಂಡವನ್ನು ಹೊರಜಗತ್ತಿಗೆ ಪರಿಚಯಿಸಲು ಸಾಧ್ಯವಾಗಿದೆ. ಅದರ ಫಲವಂಬಂತೆ ಈ ವಿದ್ಯಾರ್ಥಿಗಳ ಪ್ರಾತಿನಿಧ್ಯವು ಸಂಸ್ಥೆಗಳಲ್ಲಿ, ಪತ್ರಿಕಾ ಪ್ರಕಟಣೆಗಳಲ್ಲಿ, ನಿಯತಕಾಲಿಕೆಗಳಲ್ಲಿ, ಭಾಷಣಗಳ ವೇದಿಕೆಯಲ್ಲಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿತ್ಯವೂ ಕಾಣಿಸುತ್ತಿದೆ. ಇದನ್ನು ಸ್ವತಃ ಅನುಭವಿಸಿದ ಕಾರಣಕ್ಕಾಗಿ ಏಳೆಂಟು ವರ್ಷಗಳ ಹಿಂದೆ ‘ಮೌಲಿಯಾರ್ ಕುಟ್ಟಿಗಳುಡೆ ವರ್ತಮಾನಮ್’ ಎಂಬ ಬರಹವನ್ನು ನಾನು ಬರೆದಿದ್ದೆ. ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ, ಪುಸ್ತಕಗಳಲ್ಲಿ, ಗ್ರಂಥಾಲಯಗಳಲ್ಲಿ, ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಕಂಡ ಮುತಅಲ್ಲಿಮರ ಬಗ್ಗೆ ಬರೆದ ಬರಹವಾಗಿತ್ತದು.
ಸುನ್ನಿ ವಿದ್ಯಾ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಕಿತಾಬ್ ಅಧ್ಯಯನದ ಹೊರತಾಗಿ ಪುಸ್ತಕ ಓದು, ಬರವಣಿಗೆ, ಚರ್ಚೆ ಮತ್ತು ಇತರ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದು ಸಾರ್ವಜನಿಕರಿಗೆ ಮತ್ತು ಮುಸ್ಲಿಮರಲ್ಲೇ ಹಲವರಿಗೆ ತಿಳಿಯದ ಸಂಗತಿಯಾಗಿ ಉಳಿದಿದೆ. ಬಹುಶಃ ಕೇರಳದ ಶ್ರೇಷ್ಠ ಗ್ರಂಥಾಲಯಗಳು ಈ ವಿದ್ಯಾ ಸಂಸ್ಥೆಗಳ ಒಳಗಿರುವ ಗ್ರಂಥಾಲಯಗಳೇ ಆಗಿರಬಹುದೇನೋ ಅಂತ ಹಲವು ಬಾರಿ ನಾನು ಯೋಚಿಸಿದ್ದಿದೆ. ಗ್ರಂಥಾಲಯಗಳು ಮಾತ್ರವಲ್ಲದೆ ವಾರಕ್ಕೆ ಅಥವಾ ತಿಂಗಳಿಗೆ ನಡೆಯುವ ಸಾಹಿತ್ಯಿಕ ಚರ್ಚೆಗಳು, ಪುಸ್ತಕಾವಲೋಕನ, ಸಾಹಿತಿಗಳನ್ನು ಕರೆದು ಆಯೋಜಿಸುವ ಕಾರ್ಯಕ್ರಮಗಳು ಇವೆಲ್ಲವೂ ಕೇರಳದ ಸುನ್ನೀ ವಿದ್ಯಾರ್ಥಿಗಳೊಳಗೆ ಸಾಹಿತ್ಯ ಪರವಾದ ಚಟುವಟಿಕೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಲು ಸಹಕಾರಿಯಾಗಿದೆ. ಸಾಹಿತ್ಯೋತ್ಸವ, ಚರ್ಚಾ ಕೂಟ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ಅನುಭವ ಇರುವ ಕಾರಣ ಅವರೊಳಗಿನ ಸಾಹಿತ್ಯಾಭಿರುಚಿ, ಕೌಶಲ್ಯ, ಸಾಧನೆಯನ್ನು ಹತ್ತಿರದಿಂದ ತಿಳಿಯಲು ನನಗೆ ಸಾಧ್ಯವಾಗಿದೆ.
ವಿಶ್ವವಿದ್ಯಾಲಯಗಳಲ್ಲೇ ಸಾಹಿತ್ಯ ಪರವಾದ ಕಾರ್ಯಕ್ರಮಗಳು ಕಡಿಮೆ ಆಗುತ್ತಿರುವ ಕಾಲವಿದು. ಯಾವುದೋ ನಿರ್ದಿಷ್ಟ ದಿನಗಳಲ್ಲಿ ಸರಕಾರದ ಆದೇಶಕ್ಕೆ ಮಾತ್ರ ಸಾಹಿತ್ಯ ಕಾರ್ಯಕ್ರಮಗಳು ನಡೆಸುವ ಶಾಲಾ-ಕಾಲೇಜುಗಳಿವೆ. ಸಾಹಿತ್ಯದ ಬಗ್ಗೆಯೂ, ಸಾಹಿತಿಗಳ ಬಗ್ಗೆಯೂ ವಿಶಿಷ್ಟ ಜ್ಞಾನವೋ, ಅಭಿರುಚಿಯೋ ಇಲ್ಲದ ವಿದ್ಯಾರ್ಥಿಗಳನ್ನು ಕಂಡು ಹಲವು ಬಾರಿ ನಾನು ನೊಂದುಕೊಂಡಿದ್ದೆ. ಆದರೆ ಸುನ್ನಿ ವಿದ್ಯಾಸಂಸ್ಥೆಗಳ ಭೇಟಿಯ ವೇಳೆ ಸಿಕ್ಕಿದ ಮರ್ಯಾದೆ, ಆತಿಥ್ಯ ಶೈಲಿ ಕಂಡು ಮನತುಂಬಿಕೊಂಡ ಹಲವು ಅನುಭವಗಳು ನನಗಿದೆ. ಅದು ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಸಾಹಿತಿಯ ಮೇಲಿರುವ ಪ್ರೀತಿ ಎಂದು ನಾನು ಅಂದುಕೊಂಡಿದ್ದೇನೆ. ಚರ್ಚಾ ವೇಳೆಯಲ್ಲಿ ಅವರೆತ್ತುವ ಪ್ರಶ್ನೆಗಳು ಓದು ಮತ್ತು ಬರಹವನ್ನು ವಿದ್ಯಾರ್ಥಿಗಳು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಂದು ತಿಳಿಯುತ್ತದೆ. ಇತ್ತೀಚಿಗೆ ಮರ್ಕಝ್ ನಾಲೆಜ್ ಸಿಟಿಯ ಹೆಣ್ಣು ಮಕ್ಕಳ ವಿಭಾಗ ‘WIRAS – G’ ಓದು ಬರೆಹದ ಬಗ್ಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿನ ವಿದ್ಯಾರ್ಥಿನಿಯರು ಓದಿದ ಪುಸ್ತಕಗಳ ಬಗ್ಗೆ, ಅವರ ಸಾಹಿತ್ಯ ಅಭಿರುಚಿ ಬಗ್ಗೆ ತಿಳಿದಾಗ ಪುಳಕಗೊಂಡಿದ್ದೆ. ಪೂನೂರಿನಲ್ಲಿರುವ ವಿದ್ಯಾರ್ಥಿಗಳು ಹಲವು ರಾಷ್ಟ್ರಗಳಿಗೆ ಭೇಟಿ ಕೊಟ್ಟ ಯಾತ್ರಾನಭವದ ಪುಸ್ತಕವನ್ನು ನೀಡಿ ಗೌರವಿಸಿದ್ದನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ.

ವಿದ್ಯಾರ್ಥಿಗಳ ಆಸಕ್ತಿಯ ಜೊತೆಗೆ ಗುರುಗಳ ಪ್ರೋತ್ಸಾಹವೂ ಇದರ ಹಿಂದಿದೆ. ಪ್ರತಿಭೆ ಇರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಅವರಿಗೆ ನಿರಂತರವಾಗಿ ಪ್ರೋತ್ಸಾಹವನ್ನು ನೀಡಿ ತಮ್ಮ ಸಾಮರ್ಥ್ಯವನ್ನು ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಅವರು ಮಾಡುತ್ತಾರೆ. ಹಳೆಯ ‘ಪಳ್ಳಿದರ್ಸ್’ ಕಾಲದಿಂದಲೂ ಸುನ್ನಿ ಸಮುದಾಯವು ಸಾಹಿತ್ಯ, ಓದು, ಚರ್ಚೆ, ಗ್ರಂಥ ಬರವಣಿಗೆಯ ಕ್ಷೇತ್ರದಲ್ಲಿ ತಮ್ಮನ್ನು ತೊಡೆಗಿಸಿಕೊಂಡಿದ್ದರು. ಗೌರವಾನ್ವಿತ ಗುರು ಎ.ಪಿ ಅಬೂಬಕರ್ ಮುಸ್ಲಿಯಾರರ ‘ವಿಶ್ವಾಸಪೂರ್ವಂ’ ಎಂಬ ಆತ್ಮಕಥೆಯಲ್ಲಿ ‘ವೆಲ್ಲೂರು ಬಾಕಿಯಾತುಸ್ವಾಲಿಹಾತ್’ನ ಗ್ರಂಥಾಲಯದ ಬಗ್ಗೆ ಪರಾಮರ್ಶೆ ಮಾಡುವುದನ್ನು ಗಮನಿಸಬಹುದು.
ಕೇರಳವು ಸಂಪೂರ್ಣವಾಗಿ ಸಾಕ್ಷರತೆಯನ್ನು ಗಳಿಸುವ ಶತಮಾನಕ್ಕಿಂತಲೂ ಹಿಂದೆ ಅರಬಿ ಮಲಯಾಳಂ ಭಾಷೆಯ ಮೂಲಕ ಸಂಪೂರ್ಣ ಸಾಕ್ಷರತೆಯನ್ನು ಪಡೆದವರಾಗಿದ್ದರು ಅಲ್ಲಿನ ಮುಸ್ಲಿಮರು. ಮುಹ್ಯದ್ದೀನ್ ಮಾಲೆ, ಕಪ್ಪಪ್ಟಾಟ್ ಸೇರಿದಂತೆ ಹಲವು ಗ್ರಂಥಗಳು ಅದಾಗಲೇ ಬಂದಿದ್ದವು. ಕೇರಳ ಇತಿಹಾಸದ ಬಗ್ಗೆ ಸಿಕ್ಕಿದ ಹಳೆಯ ಗ್ರಂಥವೆಂದರೆ ತುಹ್ಫತುಲ್ ಮುಜಾಹಿದೀನ್. ಆ ಗ್ರಂಥದಿಂದ ತೊಡಗಿ ಆಯುರ್ವೇದ ಗ್ರಂಥ ‘ಅಷ್ಟಾಂಗ ಹೃದಯ’ದ ವರೆಗಿನ ಸರಳವಾದ ಅರಬಿ ಮಲಯಾಳಂ ಅನುವಾದ ಈ ಕಾಲದಲ್ಲಿ ರಚನೆಯಾದದ್ದು ನೋಡಬಹುದು. ಹೆಚ್ಚೇಕೆ, ಮಲಯಾಳಂ ಭಾಷೆಯ ಮೊದಲ ಕಾದಂಬರಿ ಪ್ರಕಟವಾಗುವ ಮುಂಚೆಯೇ ಪರ್ಶಿಯನ್ ಭಾಷೆಯಲ್ಲಿ ಬರೆದ ‘ಚಾರ್ ದರ್ವೇಶ್’ ಎಂಬ ಕಾದಂಬರಿಯು ಅರಬಿ ಮಲಯಾಳಂ ಪರಿಭಾಷೆಯನ್ನು ಕೇರಳೀಯರು ಓದಿಕೊಂಡಿದ್ದರು. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯು ವಿನಿಮಯ ಭಾಷೆಯಾಗಿ ಬರುವುದಕ್ಕಿಂತ ಮೊದಲೇ ಇವರಿಗೆ ಪರಸ್ಪರ ಸಂವಹನಕ್ಕೆ ತಮ್ಮದೇ ಆದ ಭಾಷೆಯು ಪ್ರಚಲಿತದಲ್ಲಿತ್ತು. ಈ ಕಾರಣಕ್ಕಾಗಿ ವಸಾಹತು ಶಕ್ತಿಗಳ ವಿರುದ್ಧ ನಿರಂತರವಾಗಿ ಹೋರಾಡಿ, ಸಮಾಜವನ್ನು ಜಾಗೃತಿ ಮೂಡಿಸುವ ಕಿರು ಪುಸ್ತಕಗಳನ್ನು ಮತ್ತು ಅರಬಿ ಮಲಯಾಳಂ ಭಾಷೆಯಲ್ಲಿ ಲೇಖನ ಬರೆದು ಪ್ರಕಟಿಸಿ ಅಮೂಲ್ಯ ಕೊಡುಗೆಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವೆಂಬಂತೆ ಮುಸ್ಲಿಂ ಧಾರ್ಮಿಕ ವಿದ್ಯಾಸಂಸ್ಥೆಗಳಲ್ಲಿ ಸಾಹಿತ್ಯ ಚರ್ಚೆಗಳು ಮತ್ತು ಗ್ರಂಥಾಲಯಗಳು ಇಂದಿಗೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ. ಅರಾಜಕತೆ, ನೈತಿಕ ಮೌಲ್ಯ ಹಾಗೂ ಪ್ರಜ್ಞೆ ಇಲ್ಲದೆ ಬದುಕಿದ ಕಾರಣಕ್ಕೆ ಹಿಂದಿನ ಕಾಲದ ಹಲವು ಬರಹಗಾರರು ತಮ್ಮ ಗೌರವವನ್ನು ಉಳಿಸುವಲ್ಲಿ ಸೋತರು ಎಂಬುದು ನಗ್ನ ಸತ್ಯ. ಮುಸ್ಲಿಂ ಲೇಖಕರು ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಇಂತವರೇ ಸಾಹಿತಿಗಳು ಎಂಬ ಅವರ ಭಾವನೆ ಅವರಲ್ಲಿದ್ದ ಭಾವನೆಯಿಂದ ಅವರು ಮೂಲೆಗುಂಪಾದರು.
ಇಂದು ಸುನ್ನೀ ವಿದ್ಯಾ ಸಂಸ್ಥೆಗಳಲ್ಲಿ ಶ್ರೇಷ್ಠ ಸಾಹಿತಿಗಳನ್ನು ಕರೆಸಿ ಅವರಿಂದ ನಿರಂತರವಾಗಿ ತರಗತಿಗಳನ್ನು ನಡೆಸಲಾಗುತ್ತಿದೆ. ಅವರ ಲೇಖನ, ಕಥೆ, ಕವಿತೆಗಳು ಕೇರಳದ ಶ್ರೇಷ್ಠ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿದೆ. ಆದರೆ ಈ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಳಿಕ ಯಾವ ಕ್ಷೇತ್ರಕ್ಕೆ ಹೋಗುತ್ತಾರೆ, ಎಲ್ಲಿ ಹೋಗುತ್ತಾರೆ ಎಂಬುದು ಗಂಭೀರವಾಗಿ ನನ್ನನ್ನು ಕಾಡುವ ಪ್ರಶ್ನೆ. ಆಳವಾದ ಓದು ಮತ್ತು ಬರವಣಿಗೆಯ ಕೌಶಲ್ಯವಿರುವ ವಿದ್ಯಾರ್ಥಿಗಳು ಕಲಿಕೆ ಮುಗಿದರೆ, ಓದು ಬರಹವನ್ನು ಅರ್ಧಕ್ಕೆ ಬಿಡುವ, ನಿಶ್ಯಬ್ದರಾಗಿ ಒಂದು ಕಡೆ ಮೂಲೆಗುಂಪಾಗುವ ಪರಿಸ್ಥಿತಿ ನಮ್ಮ ನಡುವೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇನ್ನು ಅದೇ ದಾರಿಯಲ್ಲಿ ಮುಂದುವರಿದವರು ಕೇವಲ ಸಂಘಟನೆಯ ಕಾರ್ಯಕ್ರಮದಲ್ಲೋ, ಸಂಘಟನೆಯ ನಿಯತಕಾಲಿಕೆಗಳಲ್ಲೋ ತಮ್ಮನ್ನು ಸೀಮಿತಗೊಳಿಸಿದ್ದಾಗಿ ಕಾಣಬಹುದು.
ಕಲೆಯಾದರೂ ಸಾಹಿತ್ಯವಾದರೂ ಈ ಸಮುದಾಯದ ಒಳಗಿರುವವರೇ ಬರೆಯುತ್ತಾ, ಓದುತ್ತಾ, ಹೊಸ ವಿಷಯಗಳ ಅಧ್ಯಯನ ನಡೆಸುತ್ತಾ ಮುಂದೆ ಸಾಗಿದರೆ ಮಾತ್ರ ನಮ್ಮ ಬಗೆಗೆ ಹೊರಗಿನವರಿಗೆ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯ. ದುರದೃಷ್ಟ ಏನೆಂದರೆ ಧರ್ಮದೊಳಗಿರುವವರೇ ಧರ್ಮದ ಬಗ್ಗೆ ಇಲ್ಲಸಲ್ಲದ್ದನ್ನು ಬರೆದು, ಧರ್ಮವೇ ಇದಕ್ಕೆಲ್ಲ ಕಾರಣವೆಂದು ಟೀಕಿಸುವವರು ಇದ್ದಾರೆ. ಇದು ದುಃಖದ ಸಂಗತಿ. ಇದರ ಪರಿಣಾಮವಾಗಿ ಮುಸ್ಲಿಂ ಮತ್ತು ಮುಸ್ಲಿಮೇತರರ ನಡುವೆ ಹಲವು ಗೊಂದಲಗಳು, ಕೆಟ್ಟ ಅಭಿಪ್ರಾಯಗಳು ಮನೆಮಾಡಿದೆ. ಆದರೆ ಸಂಪನ್ನವಾಗಿದ್ದ ಇಸ್ಲಾಂ ಧರ್ಮದ ಹಳೆಯಕಾಲದ ಚರಿತ್ರೆಯನ್ನು ಬಲ್ಲ, ಅದೇ ಸಂಸ್ಕೃತಿಯ ಜೊತೆ ಆಚರಣೆಗಳ ಜೊತೆ ಚೆನ್ನಾಗಿ ಬೆರೆತುಕೊಂಡಿರುವ, ಚೆನ್ನಾಗಿ ಬರೆಯಲು ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ ಇಸ್ಲಾಂ ಧರ್ಮದ ಸರಿಯಾದ ಎಸಳನ್ನು ತಲುಪಿಸುವ, ಪ್ರಚಾರ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಈ ಬಗೆಗಿನ ಹೆಚ್ಚೆಚ್ಚು ಕೆಲಸಗಳು ನಡೀತಾ ಇಲ್ಲ ಎಂಬುದು ಖೇದಕರ.
‘ಕಥೆಗಳಲ್ಲಿ ಹಾಗೂ ಕಾದಂಬರಿಗಳಲ್ಲಿ ಮುಸ್ಲಿಮರನ್ನು ಕೀಳಾಗಿ, ವಿಲನ್ ಆಗಿ ಚಿತ್ರಿಸುವುದನ್ನು ನೋಡಿ ಮನನೊಂದು ನಾನು ಲೇಖಕನಾಗುವ ತೀರ್ಮಾನ ಕೈಗೊಂಡೆ’ ಎಂದು ವೈಕಂ ಮುಹಮ್ಮದ್ ಬಶೀರ್ ಅವರು ಹೇಳುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಲಿಮರನ್ನು ಅವಹೇಳನ ಮಾಡುವ, ಇಲ್ಲದ್ದನ್ನು ಧರ್ಮದ ಮೇಲೆ ಎತ್ತಿಕಟ್ಟುವ ಈ ಯುಗದಲ್ಲಿ ಆ ಬಗ್ಗೆ ಜ್ಞಾನ ಇರುವವರು ಕಾರ್ಯಪ್ರವೃತ್ತರಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಜ್ಞಾನಿಗಳು ಆ ಕೆಲಸವನ್ನು ಮಾಡದೆ ಹೋದರೆ ಅಜ್ಞಾನಿಗಳು ಒಳಿತಿಗಿಂತ ಹೆಚ್ಚು ಕೆಡುಕನ್ನೇ ಪ್ರಚಾರ ಮಾಡುವ ಹುನ್ನಾರ ನಡೆಸಿಯಾರು. ತರ್ಕ ಮತ್ತು ಸಂವಾದವನ್ನು ಬಿಟ್ಟು ನೈಜ ಇತಿಹಾಸವನ್ನು, ಚರಿತ್ರೆಗಳನ್ನು, ಮುಸ್ಲಿಮರ ಸಹಬಾಳ್ವೆಯ ಜೀವನ ಶೈಲಿಯನ್ನು ಜನರಿಗೆ ದಾಟಿಸುವ ಕೆಲಸವು ಪ್ರಾಥಮಿಕವಾಗಿ ನಡೆಯಬೇಕಿದೆ.
ಓದು ಬರಹ, ಸಾಹಿತ್ಯೋತ್ಸವ, ಕಲಾ ಕಾರ್ಯಕ್ರಮದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು ಅಲ್ಲಿಂದ ಹೊರಬಂದ ನಂತರ ಎಲ್ಲಿ ಹೋದರೆಂಬುದು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ಅವರನ್ನು ಪುನಃ ಕರೆತರುವ ಕೆಲಸವು ತುರ್ತಾಗಿ ನಡೆಯಬೇಕಿದೆ.
ಜ್ಞಾನ ಮತ್ತು ಚಿಂತನೆಗಳು ಮುಚ್ಚಿಡಬೇಕಾದ ವಸ್ತುಗಳಲ್ಲ. ಅದು ನಿರಂತರವಾಗಿ ಬೆಳಗುತ್ತಾ ಇನ್ನೊಬ್ಬರಿಗೆ ದಾರಿದೀಪವಾಗಬೇಕಾದ ಅಮೂಲ್ಯ ವಸ್ತು. ಓದು ಬರಹ ಎಲ್ಲರಿಗೂ ದಕ್ಕುವಂತದ್ದಲ್ಲ. ಪ್ರತಿಭೆ ಇರುವವರು ಅದನ್ನು ಸರಿಯಾಗಿ ಬಳಸಿಕೊಳ್ಳುವ ಸಕಲ ಪ್ರಯತ್ನವನ್ನು ಮಾಡಬೇಕಿದೆ. ಇಲ್ಲದೆ ಇದ್ದರೆ ಪರಲೋಕದಲ್ಲಿ ಅದರ ಬಗ್ಗೆ ಪ್ರಶ್ನೆಯನ್ನು ಎದುರಿಸಬೇಕಾದೀತು. ಸಕಲ ಸೌಕರ್ಯಗಳಿದ್ದೂ ಯಾಕೆ ಜನರಲ್ಲಿ ಈ ತರದ ಆಲಸ್ಯವು ಕಾಣಿಸುತ್ತವೆ ಎಂಬುದು ನನ್ನ ಗಂಭೀರ ಪ್ರಶ್ನೆ..!
~ನಜೀಬ್ ಮೂಡಾಡಿ
ಅನು; ಸಲೀಂ ಮುಈನೀ, ಇರುವಂಬಳ್ಳ
ಕೃಪೆ; ರಿಸಾಲ

ಸಮಕಾಲೀನ ಮಲಯಾಳಂ ಸಾಹಿತ್ಯದ ಗಮನಾರ್ಹ ಲೇಖಕರಲ್ಲಿ ಒಬ್ಬರು. ಬದುಕಿನ ಸೂಕ್ಷ್ಮ ಅನುಭವಗಳನ್ನು ತಮ್ಮ ಕೃತಿಗಳ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಅವರು, ಸರಳ ನಿರೂಪಣೆ ಮತ್ತು ಭಾವಪೂರ್ಣ ಬರವಣಿಗೆಯಿಂದ ಓದುಗರ ಮನಸ್ಸನ್ನು ಗೆದ್ದಿದ್ದಾರೆ. ಅವರ ಪ್ರಮುಖ ಕೃತಿಗಳಲ್ಲಿ ‘ಒಟ್ಟಕ್ಕರುತ್ತ್’, ‘ಸಂಗಡ ಮನಮುಳ್ಳ ಬಿರಿಯಾನಿ’, ‘ಮುಸಾಫಿರುಗಳುಡೆ ಆಕಾಶಂಙಳ್’, ‘ಉಡಲಿನುಮಪ್ಪುರಂ ಅವರ್’ ಹಾಗೂ ‘ಪರದೇಶಿಯುಡೆ ಜಾಲಗಂ’ ಸೇರಿವೆ. ಈ ಕೃತಿಗಳಲ್ಲಿ ಮಾನವ ಜೀವನದ ವಿವಿಧ ಮುಖಗಳು, ಭಾವನೆಗಳು ಮತ್ತು ಸಾಮಾಜಿಕ ವಾಸ್ತವತೆಗಳನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಜೀವನದ ಸಾಮಾನ್ಯ ಘಟನೆಗಳಲ್ಲಿಯೇ ಅಸಾಮಾನ್ಯ ಅರ್ಥಗಳನ್ನು ಹುಡುಕುವ ನಜೀಬ್ ಮೂಡಾಡಿ ಅವರ ಬರವಣಿಗೆ, ಸಮಕಾಲೀನ ಮಲಯಾಳಂ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯಾಗಿದೆ.