ಸಾವಿತ್ರಿ ಬಾಯಿ ಫುಲೆಯವರನ್ನು ನೆನಪಿಸುವ ದೇಶ ಫಾತಿಮಾ ಶೇಖ್‌ ರನ್ನು ಮರೆತಿದ್ದೇಕೆ?

ಪ್ರತಿ ವರ್ಷ ಜನವರಿ ೩ರಂದು ಭಾರತವು ಸಾವಿತ್ರಿ ಬಾಯಿ ಫುಲೆಯವರ ಜನ್ಮ ದಿನವನ್ನು ಆಚರಿಸುತ್ತದೆ. ಅವರು ಮೊದಲ ಭಾರತೀಯ ಮಹಿಳಾ ಶಿಕ್ಷಕಿಯಾಗಿದ್ದರು ಮತ್ತು ಬಾಲಕಿಯರಿಗಾಗಿ ಶಾಲೆಯನ್ನು ಪ್ರಾರಂಭಿಸಿದ ಮೊದಲಿಗೆಯೂ ಆಕೆಯೇ ಆಗಿದ್ದರು. ಈ ಸಾವಿತ್ರಿ ಬಾಯಿ ಫುಲೆ ಹಾಗೂ‌ ಅವರ ಪತಿ ಜ್ಯೋತಿ ರಾವ್ ಫುಲೆಯವರ ಜೊತೆಗೇ ನಿಂತ ಮಹಿಳೆಯೋರ್ವರಿದ್ದರು. ಅವರು ಭಿದೇವಾಡದ ಫುಲೆಯವರ ಶಾಲೆಯನ್ನು ಹೆಣ್ಣು ಮಕ್ಕಳಿಗೆ ಕಲಿಸುತ್ತಿದ್ದರು. ಮನೆಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನು ಸಾರುತ್ತಾ, ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಪ್ರೋತ್ಸಾಹಿಸುತ್ತಿದ್ದರು ಮತ್ತು ಶಾಲೆಯ ಆಡಳಿತಾತ್ಮಕ ವ್ಯವಸ್ಥೆಗಳನ್ನೂ ನೋಡಿಕೊಳ್ಳುತ್ತಿದ್ದರು. ಆಕೆಯ ಸಹಾಯವಿಲ್ಲದೇ ಆ ಬಾಲಕಿಯರ ಶಾಲೆಯ ಯೋಜನೆ ಒಂದು ಉತ್ತಮ ರೂಪ ಪಡೆದುಕೊಳ್ಳುತ್ತಲೇ ಇರಲಿಲ್ಲ. ಆಕೆಯೇ ಫಾತಿಮಾ ಶೈಕ್.‌ ಭಾರತದ ಇತಿಹಾಸವು ಸದ್ಯ ಆಕೆಯನ್ನೂ, ಆಕೆಯ ಕೊಡುಗೆಯನ್ನೂ ಚೌಕಟ್ಟಿನಿಂದ ಬದಿಗಿರಿಸಿದೆ.

ಈ ವರ್ಷವೂ ಟ್ವಿಟರ್‌ ನಲ್ಲಿ ಸಾವಿತ್ರಿ ಬಾಯಿ ಫುಲೆ ತಮ್ಮ ಜನ್ಮದಿನದಂದು ಟ್ರೆಂಡಿಂಗ್‌ ನಲ್ಲೇ ಇದ್ದರು. ಪ್ರಧಾನಿ ನರೇಂದ್ರ ಮೋದಿ ಆಕೆಯ ಕುರಿತಾದಂತೆ “ಸಾವಿತ್ರಿ ಬಾಯಿ ಫುಲೆ ಜಯಂತಿಯಂದು ನಾನು ಆಕೆಗೆ ನಮಿಸುತ್ತೇನೆ. ಆಕೆಯ ಜೀವನವು ಬಡವರನ್ನು ಮುನ್ನೆಲೆಗೆ ತರುವಲ್ಲಿ ಮತ್ತು ಬಡವರ ಅಭಿವೃದ್ಧಿಗೆ ಮೀಸಲಾಗಿತ್ತು” ಎಂದು ಬರೆದುಕೊಂಡಿದ್ದರು. ಪ್ರಧಾನಿಯ ಸಹೋದ್ಯೋಗಿಗಳು ಕೂಡಾ ಈ ಕುರಿತಾದಂತೆ ಬರೆದರು. ಕಳೆದ ವರ್ಷ ಗೂಗಲ್‌ ʼಡೂಡಲ್‌ʼ ಮೂಲಕ ಸಾವಿತ್ರಿ ಬಾಯಿ ಫುಲೆಗೆ ಗೌರವ ಸಲ್ಲಿಸಿತ್ತು. ಬ್ರಾಹ್ಮಣ ವಿರೋಧಿ ಲೇಖನಗಳನ್ನೇ ಫುಲೆ ಹೆಚ್ಚಾಗಿ ನರೆಯುತ್ತಿದ್ದರೂ ಆರೆಸ್ಸೆಸ್‌ ಕೂಡಾ ಆಕೆಯ ಮುಂದೆ ತಲೆಬಾಗಿತು. ಪುಣೆಯ ಯುನಿವರ್ಸಿಟಿಯು ಸಾವಿತ್ರಿ ಬಾಯಿ ಫುಲೆ ಯುನಿವರ್ಸಿಟಿ ಎಂದು ಮರುನಾಮಕರಣಗೊಂಡಿತು. ಮಹಾರಾಷ್ಟ್ರ ಸರಕಾರವು ಆಕೆಯ ಹೆಸರಿನಲ್ಲಿ ಪ್ರಶಸ್ತಿಗಳನ್ನೂ ಘೋಷಿಸಿತು. ಆಕೆಯ ಜೀವನದ ಕುರಿತಾದಂತೆ ಒಂದು ಟಿವಿ ಸೀರಿಯಲ್‌ ಕೂಡಾ ಪ್ರಸಾರವಾಗಿತ್ತು. ಇದು ಆಕೆಗೆ ಸಲ್ಲಬೇಕಾದದ್ದು ಮತ್ತು ಇತಿಹಾಸ ಆಕೆಗೆ ನ್ಯಾಯ ಸಲ್ಲಿಸುತ್ತಿದೆ.

ಫಾತಿಮಾ ಶೇಖ್‌ ರವರ ಜನ್ಮದಿನಾಂಕದ ಬಗ್ಗೆಯೇ ಹಲವಾರು ಗೊಂದಲಗಳು, ಮತ್ತು ಚರ್ಚೆಗಳಿವೆ. ಜನವರಿ ೯ರಂದು ಆಕೆಯ ಜನ್ಮದಿನ ಎಂಬುವುದು ಹಲವರ ಅಭಿಪ್ರಾಯ. ಆದರೂ ಆಕೆಯ ಜನ್ಮದಿನವನ್ನು ಏಕೆ ನೆನಪಿಸುತ್ತಿಲ್ಲ?

ಸಾವಿತ್ರಿ ಬಾಯಿ ಫುಲೆ ಹಾಗೂ ಜ್ಯೋತಿ ರಾವ್ ರನ್ನು ತಮ್ಮ ಪೂರ್ವಜರ ಮನೆಯನ್ನು ಬಿಟ್ಟು ತೆರಳುವಂತೆ ಜ್ಯೋತಿ ರಾವ್‌ ತಂದೆ ಆದೇಶಿಸಿದಾಗ ಮನೆಯಿಂದ ಹೊರ ಬಿದ್ದ ಇಬ್ಬರಿಗೆ ಆಸರೆಯಾಗಿದ್ದು ಫಾತಿಮಾ ಶೇಖ್‌ ಮತ್ತು ಆಕೆಯ ಸಹೋದರ ಉಸ್ಮಾನ್‌ ಶೇಖ್‌ ಆಗಿದ್ದರು. ಅದೇ ಕಟ್ಟಡದಲ್ಲಿ ಮುಂದೆ ಶಾಲೆಯನ್ನೂ ಪ್ರಾರಂಭ ಮಾಡಲಾಯಿತು. ಆ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದೆಂದರೆ ಅದೊಂದು ದೊಡ್ಡ ಕ್ರಾಂತಿಗೆ ಸಮಾನವಾಗಿತ್ತು. ಅಂಥಹಾ ಸಂದರ್ಭದಲ್ಲಿ ಫಾತಿಮಾ ಶೈಖ್‌ ರವರು ಶಾಲೆ ತೆರೆಯಲು ಅವಕಾಶ ನೀಡಿದ್ದು ನಿಜಕ್ಕೂ ಅತ್ಯುತ್ತಮ ವಿಚಾರವೇ ಸರಿ. ಆದರೂ ಇತಿಹಾಸಗಳಲ್ಲಿ ಫಾತಿಮಾ ಶೇಖ್‌ ಇಂದಿಗೂ ಕಣ್ಮರೆಯಾಗಿದ್ದಾರೆ.

ಸಾವಿತ್ರಿ ಬಾಯಿ ಫುಲೆಗೆ ಸುಲಭವಾಗಿ ಜಯ ದೊರಕಿತು ಎಂದು ಹೇಳಲು ಸಾಧ್ಯವಿಲ್ಲ. ಮುಖ್ಯವಾಹಿನಿಯ ಇತಿಹಾಸಕಾರರು ಆಕೆಯೊಂದಿಗೆ ಕ್ರೂರವಾಗಿಯೇ ವರ್ತಿಸಿದ್ದಾರೆ. ಭಾರತದ ಪುನರುಜ್ಜೀವನದ ಕುರಿತು ಉಲ್ಲೇಖಿಸುವಾಗ ಅವರು ರಾಜಾ ರಾಮ್‌ ಮೋಹನ್‌ ರಾಯ್‌, ಈಶ್ವರ ಚಂದ್ರ ವಿದ್ಯಾ ಸಾಗರ್‌, ಸ್ವಾಮಿ ದಯಾನಂದ, ಸ್ವಾಮಿ ವಿವೇಕಾನಂದ ಅಥವಾ ಮಹಾದೇವ ಗೋವಿಂದ್‌ ರಾನಡೆಯವರ ಕುರಿತು ಹೇಳುತ್ತಾರೆ. ಹಿಂದಿನ ಪಠ್ಯ ಪುಸ್ತಕಗಳಲ್ಲಿ ಸಾವಿತ್ರಿ ಬಾಯಿ ಫುಲೆಯ ಹೆಸರೇ ಇರಲಿಲ್ಲ. ದಶಮಾನಗಳ ಬಳಿಕ ದಲಿತ ಮತ್ತು ಬಹುಜನ ಕಾರ್ಯಕರ್ತರು ಆಕೆಯ ಬಗ್ಗೆ ಮಾತನಾಡಲು ಆರಂಭಿಸಿದ ಬಳಿಕವೇ ಪಠ್ಯಪುಸ್ತಕಗಳಲ್ಲಿ ಸಾವಿತ್ರಿ ಬಾಯಿ ಫುಲೆಯ ಪಾಠಗಳು ಅಚ್ಚಾಗತೊಡಗಿದ್ದು.

ಆದರೆ ಆ ಪ್ರಕ್ರಿಯೆಯು ಫಾತಿಮಾ ಶೇಖ್‌ ರವರನ್ನು ಹೊರಜಗತ್ತಿಗೆ ಪರಿಚಯಿಸುವಲ್ಲಿ ವಿಫಲವಾಯಿತು. ಓರ್ವ ಶೈಕ್ಷಣಿಕ ಮತ್ತು ಸಮಾಜ ಸುಧಾರಕಿಯಾಗಿ ಆಕೆಯ ಕೊಡುಗೆ ಫುಲೆಗಳಿಗಿಂತಲೂ ಕಡಿಮೆಯೇನಲ್ಲ. ಆಕೆ ಇವರಿಗಿಂತಲೂ ಹೆಚ್ಚು ತೊಂದರೆಗಳನ್ನು ಅನುಭವಿಸಿರಬಹುದು. ಆಕೆಯ ಸಾಧನೆಗಳನ್ನು ಕಡತಗಳಲ್ಲಿ ರಕ್ಷಿಸಿಡಲಾಗಿಲ್ಲ. ಅಂದಿನ ಪರಿಸ್ಥಿತಿಯಲ್ಲಿ ಮುಸಿಂ ಸಮುದಾಯದ ಮಹಿಳೆಯಾಗಿ ಹೆಣ್ಣುಮಕ್ಕಳ ಶಾಲೆ ತೆರೆಯುವಲ್ಲಿ ಆಕೆ ಅದೆಷ್ಟು ಕಷ್ಟ ಅನುಭವಿಸಿರಬಹುದು? ಕೆಲ ಬರಹಗಾರರು ಆ ಸಂದರ್ಭದಲ್ಲಿ ಆಕೆ ಹಿಂದೂ ಮತ್ತು ಮುಸ್ಲಿಂ ಸಮುದಾಯ ಎರಡರಿಂದಲೂ ವಿರೋಧ ಕಟ್ಟಿಕೊಳ್ಳಬೇಕಾಗಿ ಬಂತು ಎಂದು ಬರೆದಿದ್ದಾರೆ. ಈ ವೇಳೆ ಸಾವಿತ್ರಿ ಬಾಯಿ ಫುಲೆಯವರಯ ಬ್ರಾಹ್ಮಣರ ವಿರುದ್ಧ ಹೋರಾಡುತ್ತಿದ್ದರು. ದಲಿತರಿಗೂ ತಮ್ಮ ಶಾಲೆಯ ಬಾಗಿಲನ್ನು ತೆರೆಯುತ್ತಿದ್ದರು.

ಫಾತಿಮಾ ಶೇಖ್‌ ವಿಭಿನ್ನ ಪ್ರತಿಪಾದನೆಯನ್ನು ಹೊಂದಿದ್ದರು. ಬಾಲಕಿಯರ ಶಿಕ್ಷಣವನ್ನು ಇಸ್ಲಾಂ ಧರ್ಮ ವಿರೋಧಿಸುವುದಿಲ್ಲ. ಆದ್ದರಿಂದ ಆಕೆ ಫುಲೆಯವರೊಂದಿಗೆ ಸೇರಿಕೊಂಡು ಜಾತಿ ವಿರೋಧಿ ಯೋಜನೆಯ ಭಾಗವಾಗಿಬಿಟ್ಟರು ಮತ್ತು ಓರ್ವ ಕ್ರಾಂತಿಕಾರಿಯೂ ಆದರು. ಮುಸ್ಲಿಂ ಹೆಣ್ಣು ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ಪರಿಚಯಿಸುವ ಫಾತಿಮಾರ ಪ್ರಯತ್ನಗಳು ಕೆಲ ಮುಸ್ಲಿಂ ವಿದ್ವಾಂಸರಿಗೂ ಹಿಡಿಸಿರಲಿಲ್ಲ ಎಂಬುವುದು ಸಾವಿತ್ರಿ ಬಾಯಿ ತಮ್ಮ ಪತಿಗೆ ಪತ್ರ ಬರೆಯುವಾಗ ಉಲ್ಲೇಖಿಸಿದ್ದರು. ಫಾತಿಮಾ ಶೇಖ್‌ ರ ಹಲವು ಕೊಡುಗೆಗಳ ಕುರಿತೂ ಅವರು ಬರೆದಿದ್ದು ಸದ್ಯ ಮಹಾರಾಷ್ಟ್ರದ ಉರ್ದು ಶಾಲೆಯ ಪಠ್ಯಪುಸ್ತಕದ ಭಾಗವಾಗಿದೆ.

ಫಾತಿಮಾ ಶೇಖ್‌ ತಮ್ಮ ಜೀವನ ಅಥವಾ ತಾವು ಮಾಡಿದ ಕಾರ್ಯದ ಕುರಿತು ಏನೂ ಬರೆದಿಟ್ಟಿಲ್ಲ. ಅದಕ್ಕಾಗಿಯೇ ಅವರ ಕುರಿತಾದಂತೆ ನಮಗೆ ಏನೂ ತಿಳಿಸಿಲ್ಲ. ಆದರೆ ಸಾವಿತ್ರಿ ಬಾಯಿ ಫುಲೆ ಹಾಗೂ ಅವರ ಪತಿ ಜ್ಯೋತಿ ರಾವ್‌ ಫುಲೆಯವರು ಬಹಳಷ್ಟು ಬರೆದಿದ್ದಾರೆ. ತಾವು ಬರೆಯುತ್ತಿದ್ದ ಪ್ರಬಂಧ, ನಾಟಕಗಳು, ಕವಿತೆಗಳಲ್ಲಿ ಅವರು ತಮ್ಮ ಜೀವನವನ್ನು ತೆರೆದಿಟ್ಟಿದ್ದಾರೆ. ಜಾತಿ ವ್ಯವಸ್ಥೆಯ ವಿರುದ್ಧ ಕೆಲಸ ಮಾಡಿದ್ದ ಫಾತಿಮಾ ಶೇಖ್‌ ರನ್ನು ಇತಿಹಾಸಕಾರರು ತಿರಸ್ಕರಿಸಿದ್ದರೂ ಕೂಡಾ ಅವರ ಕುರಿತಾದಂತೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ ಎನ್ನುವ ವಿಚಾರವನ್ನು ನಾವು ಒಪ್ಪಲೇಬೇಕು.


(ಲೇಖಕರು ಇಂಡಿಯಾ ಟುಡೇ ಹಿಂದಿ ಮ್ಯಾಗಜಿನ್ ಮಾಜಿ ಕಾರ್ಯನಿರ್ವಾಹಕ ಸಂಪಾದಕರಾಗಿದ್ದು ಮಾಧ್ಯಮ ಮತ್ತು ಸಮಾಜವಿಜ್ಞಾನ ವಿಭಾಗದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.)

ದಿಲೀಪ್ ಮಂಡಲ್
ಅನುವಾದ: ಮುಆದ್ ಜಿ ಎಂ

ಕೃಪೆ: The print Magazine

Leave a Reply

*