ಇಸ್ಲಾಮಿಕ್ ದತ್ತಿ ಸೇವೆಗಳು: ಪ್ರವಾದೀ ಕಾಲದಿಂದ ಇಪ್ಪತ್ತನೇ ಶತಮಾನದವರೆಗೆ

ಇಸ್ಲಾಮಿಕ್ ದತ್ತಿ ಚಟುವಟಿಕೆಗಳ ಪ್ರಾಥಮಿಕ ಘಟ್ಟವು ಐತಿಹಾಸಿಕ ಹಿಜ್ರಾದ ಬಳಿಕ ಆರಂಭಗೊಂಡು ಅಬ್ಬಾಸಿಯ್ಯಾ ಆಡಳಿತಾವಧಿಯ ಆರಂಭಿಕ ವೇಳೆಯಲ್ಲಿ ಕೊನೆಗೊಳ್ಳುತ್ತದೆ. ಈ ಸಮಾಜಮುಖಿ ಸಂಸ್ಥೆಗಳು ಖುರ್ಆನ್ ಮತ್ತು ಪ್ರವಾದಿ ವಚನಗಳ ಆಧಾರದ ಮೇಲೆ ರೂಪುಪಡೆಯಿತು.

ಇಸ್ಲಾಮಿಕ್ ಇತಿಹಾಸದಲ್ಲಿ ವಕ್ಫ್ ವ್ಯವಸ್ಥೆಯು ಸಾಮಾನ್ಯ ಮುಸಲ್ಮಾನರ ಜೀವನದೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಹೊರತಾಗಿಯೂ, ವಕ್ಫ್ ಎಂಬ ಪರಿಕಲ್ಪನೆಯು ಖುರ್‌ಆನ್ ಮತ್ತು ಹದೀಸ್ ದಾಖಲೆಗಳಲ್ಲಿ ಎಲ್ಲಿಯೂ ಉಲ್ಲೇಖಿಸಲ್ಪಟ್ಟಿಲ್ಲ ಎನ್ನುವುದು ಆಶ್ಚರ್ಯಕರ ಸಂಗತಿ. ಮೂರನೆಯ ಶತಮಾನದ ಮಧ್ಯಭಾಗದಲ್ಲಿ ಕೆಲವು ಸಮಾಜಮುಖಿ ಚಟುವಟಿಕೆಗಳನ್ನು ವಕ್ಫ್ ಎಂಬ ಹೆಸರಿನಲ್ಲಿ ಸಮುದಾಯವು ವ್ಯಾಪಕವಾಗಿ ಬಳಸಲು ಪ್ರಾರಂಭಿಸಿತು. ಕೆಲವು ಖುರ್‌ಆನ್ ವ್ಯಾಖ್ಯಾನಕಾರರು ಖುರ್‌ಆನ್ ಪದಪ್ರಯೋಗಗಳ ಒಳಾರ್ಥಗಳಲ್ಲಿ ವಕ್ಫ್ ಅನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ.

“ನೀವು ಕಾಳಜಿವಹಿಸುವ ಸಂಪತ್ತಿನಲ್ಲಿ ನೀವು ಖರ್ಚು ಮಾಡದ ಹೊರತು ಯಾರೂ ಸಂಪೂರ್ಣವಾಗಿ ಧರ್ಮನಿಷ್ಠರಾಗುವುದಿಲ್ಲ” ಎಂಬ ಪೈಗಂಬರರ ಪ್ರವಚನವನ್ನು ಆಲಿಸಿದ ನಂತರ ಅವರ ಅನುಚರರ ಪೈಕಿ ಪ್ರಮುಖರಾಗಿದ್ದ ಅಬೂತಲ್ಹಾರವರು ತಾನು ಅತ್ಯಂತ ಪ್ರೀತಿಯಿಂದ ಪೋಷಿಸುತ್ತಿದ್ದ ಮದೀನಾದ ವಿಶಾಲ ಖರ್ಜೂರದ ತೋಟವನ್ನು ಬಡವರಿಗೆ ದಾನ ಮಾಡಿದರು. ಆರುನೂರಕ್ಕೂ ಹೆಚ್ಚು ಮರಗಳು ದಟ್ಟವಾಗಿ ಬೆಳೆದು ಉತ್ತಮ ಫಸಲು ನೀಡುತ್ತಿದ್ದ ತೋಟವನ್ನು ದಾನ ಮಾಡುವ ಮೂಲಕ ಅವರ ಆತ್ಯಂತಿಕ ಗುರಿ ನೈಜಭಕ್ತಿ ಮತ್ತು ಪರಲೋಕ ಯಶಸ್ಸು ಎಂಬುದನ್ನು ದೃಢೀಕರಿಸಿದರು. ಈ ಪುಣ್ಯ ಕಾರ್ಯವನ್ನು ಮಾಡಿ ಮನೆತಲುಪಿದಾಗ ತಾನು ಈಗಷ್ಟೇ ದಾನ ಮಾಡಿ ಬಂದ ತೋಟದಲ್ಲಿ ತನ್ನ ಹೆಂಡತಿ ಮತ್ತು ಮಗು ವಿಶ್ರಾಂತಿ ಪಡೆಯುತ್ತಿರುವುದನ್ನು ಕಂಡರು. ತಕ್ಷಣ ಅಬೂತಲ್ಹಾ ನಡೆದ ವಿಷಯವನ್ನು ವಿವರಿಸಿದರು. ತೋಟವನ್ನು ಯಾರ ಹೆಸರಿನಲ್ಲಿ ದಾನ ನೀಡಿದಿರಿ ಎಂಬ ಪತ್ನಿಯ ಪ್ರಶ್ನೆಗೆ ‘ನಮ್ಮ ಹೆಸರಿನಲ್ಲಿ’ ಎಂದು ಅಬೂತಲ್ಹಾ ಉತ್ತರಿಸಿದರು. ನಮ್ಮ ಮಧ್ಯೆ ಇರುವ ಬಡವರಿಗೆ ನಾವೇನು ಮಾಡಬಲ್ಲೆವು ಎಂದು ನಾನು ಸದಾ ಚಿಂತಿತಳಾಗಿದ್ದೆ. ಅಲ್ಲಾಹನು ನಿಮ್ಮ ಈ ಸತ್ಕರ್ಮವನ್ನು ಸ್ವೀಕರಿಸಲಿ ಎಂದು ಹಾರೈಸುತ್ತಾ ಆ ದಂಪತಿಗಳು ತೋಟದಿಂದ ಹೊರ ನಡೆದರು.

ಇತಿಹಾಸಕಾರರು ಈ ಐತಿಹಾಸಿಕ ಘಟನೆಯನ್ನು ಉಲ್ಲೇಖಿಸುತ್ತಾ ಇದು ಇಸ್ಲಾಮಿಕ್ ಇತಿಹಾಸದಲ್ಲಿ ನಡೆದ ಮೊದಲ ವಕ್ಫ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರವಾದಿವರ್ಯರ ಚರ್ಯೆಗಳನ್ನು ಗಮನಿಸಿದಾಗ ನಮಗೆ ವಕ್ಫ್ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗುತ್ತದೆ. ಇಹಲೋಕದಲ್ಲಿ ಮೂರು ವಿಚಾರಗಳನ್ನು ಬಾಕಿಯುಳಿಸಿ ಪೈಗಂಬರರು ಪರಲೋಕ ಯಾತ್ರೆಯಾದರು. ಹೇಸರಗತ್ತೆ, ಆಯುಧ ಮತ್ತು ದತ್ತಿ ಸೇವೆಗಳಿಗಾಗಿ ಮೀಸಲಿಟ್ಟ ಭೂಮಿ. ಪ್ರವಾದಿವರ್ಯರು ಇಸ್ಲಾಮಿಕ್ ದತ್ತಿ ಚಟುವಟಿಕೆಗಳ ವಿಧಾನಗಳನ್ನು ಉಮರ್ ಬಿನ್ ಖತ್ತಾಬರಿಗೆ ಕಲಿಸಿಕೊಟ್ಟರು. ತದನಂತರ ಪ್ರವಾದೀ ಅನುಚರರು ಪ್ರಸ್ತುತ ಕಲಿಸಿಕೊಟ್ಟ ವಿಧಾನದ ಆಧಾರದಲ್ಲಿ ವಕ್ಫ್ ಕರ್ಮವನ್ನು ಮಾದರಿಯಾಗಿಟ್ಟುಕೊಂಡರು. ಇಮಾಮ್ ಮಾಲಿಕ್ ಪೈಗಂಬರರ ಈ ಬೋಧನೆಯನ್ನು ‘ಅಹ್ಬಾಸ್’ ಎಂದು ಪರಿಚಯಿಸುತ್ತಾರೆ. ಉಮರ್ ಬಿನ್ ಖತ್ತಾಬರು ಪ್ರವಾದೀ ಸನ್ನಿಧಿಗೆ ಬಂದು ಕೇಳಿದರು; “ನನಗೆ ಖೈಬರ್‌ನಲ್ಲಿ ಒಂದಿಷ್ಟು ಭೂಮಿ ಇದೆ. ಅದು ನನಗೆ ಅತ್ಯಂತ ಪ್ರಿಯವಾದ ಭೂಮಿ. ಓ ಪ್ರವಾದಿಯರೇ, ನೀವು ನನಗೆ ನಿರ್ದೇಶಿಸಿರಿ, ನಾನು ಏನು ಮಾಡಬೇಕೆಂದು.”

“ನೀವು ಬಯಸಿದರೆ, ಅದರ ಬಂಡವಾಳವನ್ನು ಹೊರತುಪಡಿಸಿ ಲಾಭವನ್ನು ಸಾಮಾಜಿಕ ಕಲ್ಯಾಣ ಚಟುವಟಿಕೆಗಳಿಗಾಗಿ ವಿತರಣೆ ಮಾಡಿರಿ” ಪೈಗಂಬರರು ಪ್ರತ್ಯುತ್ತರಿಸಿದರು. ಬಳಿಕ ಉಮರ್ ರವರು ಖೈಬರ್ ಭೂಮಿಯಿಂದ ಪಡೆದ ಆದಾಯವನ್ನು ಬಡವರು, ಸಂಬಂಧಿಕರು, ಪ್ರಯಾಣಿಕರು, ಅತಿಥಿಗಳು, ಗುಲಾಮರ ವಿಮೋಚನೆ ಮತ್ತು ಮಿಲಿಟರಿ ಕಲ್ಯಾಣಕ್ಕಾಗಿ ವಿನಿಯೋಗಿಸಲಾರಂಭಿಸಿದರು ಎಂದು ಇಬ್ನ್ ಉಮರ್ ಉಲ್ಲೇಖಿಸಿದ್ದಾಗಿ ಕಾಣಬಹುದು.

ಈ ಮೇಲೆ ಉಲ್ಲೇಖಿಸಿದ ಐತಿಹಾಸಿಕ ಘಟನೆಗಳು ಪ್ರವಾದೀ ಅನುಚರರು ವಕ್ಫ್‌ನೊಂದಿಗೆ ಯಾವ ರೀತಿ ಸಂಬಂಧ ಹೊಂದಿದ್ದರು ಎಂಬುದನ್ನು ವಿವರಿಸುತ್ತದೆ. ತಮಗೆ ಅತ್ಯಂತ ಪ್ರಿಯವಾದ ಸಂಪತ್ತುಗಳಾಗಿದ್ದರೂ ಅವರು ಅದನ್ನು ದಾನ ಮಾಡಲು ತೋರಿದ ಉತ್ಸಾಹ ಖುರ್‌ಆನ್ ಮತ್ತು ಪ್ರವಾದೀ ವಚನಗಳು ಅವರ ಜೀವನವನ್ನು ಎಷ್ಟರ ಮಟ್ಟಿಗೆ ಸ್ವಾಧೀನಪಡಿಸಿದೆ ಎಂಬುವುದಕ್ಕಿರುವ ಉತ್ತಮ ನಿದರ್ಶನ.

ಇಲ್ಲಿ ಉಮರರಿಗೆ ಪೈಗಂಬರರು ನೀಡಿದ ಆಜ್ಞೆಯು, ನಮ್ಮ ಆಸ್ತಿಯು ಸಂಪೂರ್ಣವಾಗಿ ವಾರೀಸುದಾರರಿಗೆ ತಲುಪಿಸಲಿರುವ ಅಥವಾ ಮಾರಾಟ ಮಾಡುಲಿಕ್ಕಿರುವ ವಸ್ತುವಲ್ಲ ಬದಲಾಗಿ, ಅದು ನಮ್ಮ ಸುತ್ತಲು ವಾಸಿಸುತ್ತಿರುವ ಜನರಿಗೂ ಸೇರಿದ್ದಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇಸ್ಲಾಮಿಕ್ ಮಾನವಸೇವಾ ಪ್ರಕ್ರಿಯೆಗಳ ಎರಡು ಪ್ರಮುಖ ಅಂಶಗಳನ್ನು ಈ ಹದೀಸಿನಲ್ಲಿ ಉಲ್ಲೇಖಿಸಿದ ಘಟನೆ ಒತ್ತಿಹೇಳುತ್ತದೆ. ಬಂಡವಾಳವನ್ನು ತೆಗೆದಿಟ್ಟು ಆದಾಯವನ್ನು ಬಡವರ ಮಧ್ಯೆ ಹಂಚುವುದಾಗಿದೆ ಒಂದನೇ ದೃಷ್ಟಿಕೋನ. ವಕ್ಫ್ ಕರ್ಮದ ಸ್ವರೂಪಕ್ಕೆ ಸಂಬಂಧಿಸಿದ್ದಾಗಿದೆ ಮತ್ತೊಂದು. ಕಾನೂನಾತ್ಮಕವಾಗಿ ಮತ್ತು ವ್ಯಾವಹಾರಿಕವಾಗಿ ವ್ಯಾಪಾರ ಸರಕಿನಿಂದ ಮುಕ್ತವಾಗಿರುವುದು, ಪರೋಪಕಾರ ಸೇವೆಗಳಿಗೆ ಮಾತ್ರ ನಿಶ್ಚಯಿಸಲ್ಪಡುವುದು ಮುಂತಾದವುಗಳು ಗಮನಿಸಬೇಕಾದ ವಿಷಯಗಳು.

ಉಮರ್ ತನ್ನ ಮಗಳು ಹಫ್ಸಾಳನ್ನು ಕಾವಲುಗಾರಳನ್ನಾಗಿ ನೇಮಿಸಿದ್ದು ಒಂದು ಉದಾಹರಣೆಯಾಗಿದೆ. ಭಿಕ್ಷುಕರು, ನಿರ್ಗತಿಕರು ಮತ್ತು ಬಡ ಸಂಬಂಧಿಕರ ರಕ್ಷಣೆಯನ್ನು ವಹಿಸಿಕೊಂಡವರು ಇಳುವರಿಯನ್ನು ಅವರಿಗಾಗಿ ಖರ್ಚು ಮಾಡಬೇಕು. ಇಲ್ಲಿ ಸಂರಕ್ಷಕನ ಕೆಲಸಕ್ಕಿರುವ ವೇತನವನ್ನು ವಕ್ಫ್ ಮಾಡುವವರು ಪಾವತಿಸುವರು. ಇಲ್ಲದಿದ್ದರೆ, ಸಂರಕ್ಷಕನು ಆಡಳಿತಾಧಿಕಾರಿಯನ್ನು ಸಂಪರ್ಕಿಸಲು ಅವಕಾಶಗಳಿವೆ.

ಸಮಾಜಮುಖಿ ಚಳುವಳಿಗಳ ಆರಂಭಿಕ ಹಂತದ ನಂತರ ಮಸೀದಿ, ಗ್ರಂಥಾಲಯಗಳು ಸೇರಿ ಮದರಸಾಗಳು ಮತ್ತು ಅರೇಬಿಕ್ ಕಾಲೇಜುಗಳ ಹೆಸರಿನಲ್ಲಿ ವಕ್ಫ್ ಅಭಿವೃದ್ಧಿ ಹೊಂದಿತು. ಬೈತುಲ್-ಹಿಕ್ಮಾದ ನಂತರ, ಈ ಹಂತದ ವಕ್ಫ್ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಫಾತಿಮೀ ಖಲೀಫ ಅಲ್ – ಮುಯಿಸ್ ಕೈರೋ ಪಟ್ಟಣದಲ್ಲಿ ನಿರ್ಮಿಸಿದ ಅಲ್ – ಅಝ್ಹರ್ ಮಸೀದಿ ಮತ್ತು ಮದ್ರಸಾ (969/1562) ಒಳಪಟ್ಟಿದೆ. ಪ್ರವಾದೀ ಕುಟುಂಬಿಕರಾದ ಫಾತಿಮಾ ಅಲ್ – ಫಿಹ್ರಿಯಾ ಎಂಬ ಓರ್ವ ಮಹಿಳೆಯ ನೇತೃತ್ವದಲ್ಲಿ ನಿರ್ಮಿಸಲಾದ ಮೊರೊಕ್ಕೊದ ಫೆಝ್ ನಗರದಲ್ಲಿರುವ ಅಲ್-ಕರವಿಯ್ಯಿನ್ ವಿಶ್ವವಿದ್ಯಾನಿಲಯ ಮತ್ತು ಮಸೀದಿ (859/1455), ಅವರ ಸಹೋದರಿ ಮರಿಯಂ ಅಲ್-ಫಿಹ್ರಿಯಾ ನಿರ್ಮಿಸಿದ ಅಂದಲೂಸ್ ಮಸೀದಿ, ಬಗ್ದಾದಿನಲ್ಲಿ ನಿಜಾಮ್ ಅಲ್-ಮುಲ್ಕ್ ನೇತೃತ್ವದಲ್ಲಿ ಸ್ಥಾಪಿಸಲಾದ ನಿಝಾಮಿಯ್ಯಾ ಮದರಸ (1065/1654) ಮುಂತಾದವುಗಳು ವಕ್ಫ್ ಜಮೀನಿನ ಜಾಗತಿಕ ಕೊಡುಗೆಗಳಾಗಿವೆ.

ಇಂತಹಾ ಧಾರ್ಮಿಕ ಕೇಂದ್ರಗಳು ಮುಸ್ಲಿಂ ಸಾಕ್ಷರ ಸಮಾಜವನ್ನು ನಿರ್ಮಿಸಿ, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ತತ್ವ ಮತ್ತು ಸಿದ್ಧಾಂತಗಳ ಅತ್ಯಂತ ಸೃಜನಶೀಲ ವಿನಿಮಯವನ್ನು ನಡೆಸಲು ಸಹಕಾರಿಯಾಯಿತು. ಇದು ಮುಸಲ್ಮಾನರಿಗೆ ಶೈಕ್ಷಣಿಕ ಬಲವನ್ನು ನೀಡುವುದರೊಂದಿಗೆ ಸಮೃದ್ಧ ದಿನಗಳನ್ನು ಆಶೀರ್ವದಿಸಿತು. ಆಡಳಿತಗಾರರ ಮತ್ತು ಪ್ರಜೆಗಳ ಸ್ವಹಿತಾಸಕ್ತಿಯಿಂದ ನಡೆದ ಇಂತಹ ಮಹಾದಾನಗಳು ವಿವಿಧ ರೀತಿಯ ವಕ್ಫ್‌ಗಳತ್ತ ಜನರನ್ನು ಪ್ರೇರೇಪಿಸಿ, ವಕ್ಫ್ ಆಚರಣೆಗಳಿಗೆ ಹೊಸ ಆಯಾಮವನ್ನು ನೀಡಿತು. ಮುಸ್ಲಿಂ ಸ್ತ್ರೀ-ಶಿಕ್ಷಣದ ಪ್ರಗತಿಗೆ ಚಾಲಕ ಶಕ್ತಿಯಾಗುವಲ್ಲಿ ಮಾತ್ರವಲ್ಲದೆ, ಶಿಲುಬೆಯುದ್ಧ, ಮಂಗೋಲಿಯನ್ ಆಕ್ರಮಣದ ನಂತರದ ಸಮಾಜವನ್ನು ಪುನರುಜ್ಜೀವನಗೊಳಿಸುವಲ್ಲಿ ಈ ವಕ್ಫ್ ದಾನಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಸೂಫೀ ಕೇಂದ್ರಗಳು, (ಝಾವಿಯಾ/ತಕಿಯಾ/ಖಾನ್’ಕಾಹ್) ಪ್ರಯಾಣಿಕರ ವಸತಿಗೃಹಗಳು, ಸಾರ್ವಜನಿಕ ಶೌಚಾಲಯಗಳು, ಮಹಿಳಾ ಕಲ್ಯಾಣ ಕೇಂದ್ರಗಳು, ದರ್ಗಾ ಸಂರಕ್ಷಣೆ, ಆಸ್ಪತ್ರೆಗಳು, ಪಶುವೈದ್ಯಕೀಯ ಸೇವೆಗಳು, ಪ್ರವಾಸೀ ವಿಶ್ರಾಂತಿ ಕೊಠಡಿಗಳು, ಗ್ರಂಥಾಲಯಗಳು, ಸಾರ್ವಜನಿಕ ನಲ್ಲಿಗಳು, ಅನಾಥಾಶ್ರಮಗಳು, ಸ್ಮಶಾನಗಳು, ಸಣ್ಣ ಮಕ್ಕಳಿಗೆ ಖುರ್ಆನಿನ ಪ್ರಾಥಮಿಕ ಜ್ಞಾನವನ್ನು ಕಲಿಸುವ ಮಸೀದಿಗಳ ಪಕ್ಕದಲ್ಲೇ ನಿರ್ಮಿಸಲಾದ ಪ್ರಾಥಮಿಕ ಶೈಕ್ಷಣಿಕ ಕೇಂದ್ರಗಳು, ದತ್ತಿ ಉದ್ದೇಶಗಳಿಗಾಗಿ ವಿಶೇಷವಾಗಿ ನಿರ್ಮಿಸಲಾದ ಸಾಂತ್ವನ ಕೇಂದ್ರಗಳು (ಗುಲಾಮರನ್ನು ಮುಕ್ತಗೊಳಿಸುವುದು, ಬಡವರಿಗೆ ಆಹಾರ ನೀಡುವುದು, ಸಾಲಗಳನ್ನು ತೀರಿಸುವುದು, ಹಬ್ಬದ ಉಡುಗೊರೆಗಳ ವಿತರಣೆ, ಮರಣೋತ್ತರ ಕರ್ಮ ನಿರ್ವಹಣೆ) ಇತ್ಯಾದಿಗಳು ವಕ್ಫ್‌ಗಳು ಹೆಚ್ಚು ಸಕ್ರಿಯವಾಗಿದ್ದ ವೇಳೆಯ ಪ್ರಮುಖ ಕೊಡುಗೆಗಳು.

ತಮ್ಮ ಡಮಾಸ್ಕಸ್‌ ಕಡೆಗಿನ ಪ್ರಯಾಣದ ಮಧ್ಯೆ ಕಂಡ ವಕ್ಫ್ ಕೇಂದ್ರಗಳ ಸವಿಶೇಷತೆಗಳನ್ನು ಇಬ್ನ್ ಬತೂತ ಈ ರೀತಿ ವಿವರಿಸುತ್ತಾರೆ; ‘ಬೃಹತ್ ವೆಚ್ಚದಲ್ಲಿ ನಿರ್ಮಿಸಿದ ಹಲವು ವಕ್ಫ್ ಕೇಂದ್ರಗಳನ್ನು ನಾನು ಕಂಡೆ. ವಿದೇಶೀ ಯಾತ್ರಿಕರಿಗೆ ಸೇವೆ ಒದಗಿಸುವ ಕೇಂದ್ರಗಳಾಗಿ ಅವು ಕಾರ್ಯನಿರ್ವಹಿಸುತ್ತಿದ್ದವು. ಮಹಿಳಾ ವಿವಾಹ ಕಲ್ಯಾಣ ಕೇಂದ್ರಗಳು, ಜೈಲಿನಲ್ಲಿ ಸೆರೆಯಾದವರ ಬಿಡುಗಡೆಗೆ ಕ್ರಮ, ನಗರದಲ್ಲಿ ರಸ್ತೆ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುವ ಸಮಿತಿಗಳು ಹೀಗೆ ವಿವಿಧ ರೀತಿಯ ವಕ್ಫ್ ಕೇಂದ್ರಗಳಿವೆ. ಡಮಾಸ್ಕಸ್‌ನಲ್ಲಿ ಪಾದಚಾರಿಗಳಿಗೆ ವಿಶೇಷ ರಸ್ತೆಗಳಿರಲಿಲ್ಲ. ಚಲಿಸುವ ವಾಹನಗಳ ಎಡೆಯಲ್ಲಿ ನಡೆಯುವುದೊಂದೇ ದಾರಿ. ಒಂದು ದಿನ ನಾನು ಡಮಾಸ್ಕಸ್‌ನ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಗುಲಾಮ ಹುಡುಗನ ಕೈಯಿಂದ ಚೈನೀಸ್ ನಿರ್ಮಿತ ಮಣ್ಣಿನ ಮಡಿಕೆ ಬಿದ್ದು ಒಡೆಯುವುದನ್ನು ಕಂಡೆ. ತಕ್ಷಣವೇ ಅವನ ಸುತ್ತಲೂ ಜನರು ಜಮಾಯಿಸಿದರು. ಗುಂಪಿನಲ್ಲೊಬ್ಬರು ಹೇಳಿದರು; ‘ಆ ಮುರಿದ ತುಂಡುಗಳನ್ನು ತೆಗೆದುಕೊಂಡು ವಕ್ಫ್ ಆಸ್ತಿ ನೋಡಿಕೊಳ್ಳುವ ವ್ಯಕ್ತಿಯ ಬಳಿಗೆ ಹೋಗೋಣ. ಹಾಗೆ ಪರಿಪಾಲಕನ ಬಳಿ ಹೋದಾಗ ಹರಿದ ದಾಖಲೆ ಪತ್ರ ಪಡೆದು ಬದಲಿಸಿ ಕೊಟ್ಟು ಕಳಿಸಿದರು.’

ಫಲಾನುಭವಿಗಳನ್ನು ಪರಿಗಣಿಸುವಾಗ ಎರಡು ರೀತಿಯ ವಕ್ಫ್ ವ್ಯವಸ್ಥೆಗಳು ಅಸ್ತಿತ್ವದಲ್ಲಿತ್ತು. ಸಾರ್ವಜನಿಕ ವಕ್ಫ್‌ಗಳು ಮತ್ತು ಖಾಸಗಿ ವಕ್ಫ್‌ಗಳು. ಒಪ್ಪಂದದ ಸಮಯದಲ್ಲಿ ಸಾರ್ವಜನಿಕ ವಕ್ಫ್ ಸಾರ್ವಜನಿಕರನ್ನು ಒಳಗೊಂಡಿದ್ದರೆ, ಖಾಸಗಿ ವಕ್ಫ್‌ಗಳು ಬಡವರು, ಅನಾಥರು ಮತ್ತು ಸಮಾಜದ ಒಂದು ವರ್ಗದ ಮೇಲೆ ಕೇಂದ್ರೀಕೃತವಾಗಿತ್ತು. ವಕ್ಫ್‌ ಫಲಾನುಭವಿಗಳು ಸಾಮಾನ್ಯವಾಗಿ ಸಮಾಜದ ಕೆಳಸ್ತರದಲ್ಲಿ ಉಳ್ಳವರಾಗಿದ್ದರೂ, ವಕ್ಫ್‌ನ ರಚನೆಯು ಶ್ರೀಮಂತರನ್ನು ಒಳಗೊಳ್ಳುವಷ್ಟು ವಿಶಾಲವಾಗಿತ್ತು. ಹೀಗಾಗಿ, ಪ್ರಯಾಣಿಕರಿಗಾಗಿ ವಕ್ಫ್ ಮೂಲಕ ನಿರ್ಮಿಸಲಾದ ವಿಶ್ರಾಂತಿ ಕೊಠಡಿಗಳಲ್ಲಿ ಶ್ರೀಮಂತ ಮತ್ತು ಬಡ ಪ್ರಯಾಣಿಕರು ಒಂದೇ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ವಕ್ಫ್ ಆಸ್ತಿಯ ಅನುಕೂಲ ಪಡೆಯುವ ನಿಟ್ಟಿನಲ್ಲಿ ಇಲ್ಲಿ ಕಡುಬಡತನ ಅನುಭವಿಸುವವರು ಮತ್ತು ಸಂಪತ್ತನ್ನು ಅತಿಯಾಗಿ ಸಂಗ್ರಹಿಸಿ ಜೀವಿಸುವವರು ಯಾರೂ ಇಲ್ಲ. ಎಲ್ಲರೂ ವಕ್ಫ್ ದಾನಿಗಳು ಮತ್ತು ಸ್ವೀಕರಿಸುವವರು ಎಂಬ ರಚನೆಯ ಒಳಗೆ ಸೇರುತ್ತಾರೆ.

ಅರೇಬಿಕ್ ಅಕ್ಷರಮಾಲೆಯ ‘ವಾವ್’ ಅಕ್ಷರವು ಈ ಸಾರಾಂಶವನ್ನು ತಿಳಿಸುತ್ತದೆ. ಮೂರು ವಾವ್‌ಗಳನ್ನು ಇಲ್ಲಿ ಆಲಂಕಾರಿಕವಾಗಿ ಪರಿಚಯಿಸಲಾಗುವುದು. ಮೊದಲನೆಯದು ‘ವಲ್ಲಾಹಿ’ (ಈ ವಕ್ಫ್ ಅಲ್ಲಾಹನ ನಾಮದಲ್ಲಾಗಿದೆ) ಎಂಬುವುದನ್ನೂ, ಎರಡನೆಯದು ‘ವಲಿಯ್ಯ್’ (ನಿರ್ವಾಹಕ ಮತ್ತು ಅವನ ಮೇಲಿನ ನಂಬಿಕೆ) ಎಂಬುದನ್ನು ಉಲ್ಲೇಖಿಸಿದರೆ, ಮೂರನೆಯದು ‘ವಕ್ಫ್’ ಎಂಬ ದಾನಧರ್ಮ ಕಾರ್ಯವನ್ನೇ ಸೂಚಿಸುತ್ತದೆ.

ಅರೇಬಿಕ್’ ಲಿಪಿಯಲ್ಲಿ ಸಾಮಾನ್ಯವಾಗಿ ‘ವಾವ್’ ಎಂಬ ಅಕ್ಷರವನ್ನು ಎರಡು ರೀತಿಯಲ್ಲಿ ಬರೆಯಲಾಗುತ್ತದೆ. ಒಂದು ಅಕ್ಷರದ ಕೊನೆಯನ್ನು ಕೆಳಗಡೆ ಎಳೆದು ಬರೆಯುವುದು, ಅಕ್ಷರದ ತುದಿಯು ವಕ್ರವಾಗಿ ಅಕ್ಷರವನ್ನು ನೇರವಾಗಿ ಸಂಧಿಸುವ ರೀತಿ ಮತ್ತೊಂದು. ಇಲ್ಲಿ ವಕ್ಫ್ ಮೂಲಕ ಆಸ್ತಿಯನ್ನು ಇನ್ನೊಬ್ಬರಿಗೆ ನೀಡಿ ನಮ್ಮ ಮಾಲೀಕತ್ವವನ್ನು ಬಿಟ್ಟುಕೊಡುವುದು ಮೊದಲ ವಿಧಾನವಾದರೆ, ವಕ್ಫ್ ಮೂಲಕ ಇನ್ನೊಬ್ಬರಿಂದ ಆಸ್ತಿಯನ್ನು ಪಡೆಯುವುದು ಎರಡನೆಯ ವಿಧಾನ. ವಕ್ಫ್ ಎಂಬ ಸಮಾಜಮುಖಿ ಚಟುವಟಿಕೆಯು ಸೃಷ್ಟಿಕರ್ತ, ಜನರು, ಸಂಪತ್ತು ಮತ್ತು ಕಲ್ಯಾಣ ಇವುಗಳ ಮಧ್ಯೆ ಪರಸ್ಪರ ಸಂಬಂಧಗಳನ್ನು ಹೆಣೆದುಕೊಂಡಿದ್ದು, ಸಮುದಾಯದಲ್ಲಿ ಜವಾಬ್ದಾರಿಯುತ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ ಮತ್ತು ಜಗತ್ತನ್ನು ಹೇಗೆ ಉತ್ತಮ ಸ್ಥಳವನ್ನಾಗಿ ಮಾಡಬೇಕೆಂದು ಮುಸಲ್ಮಾನರಿಗೆ ಕಲಿಸಿ ಕೊಡುತ್ತದೆ. ಈ ಅವಧಿಯಲ್ಲಿ ದತ್ತಿ ಚಟುವಟಿಕೆಗಳು ಅದರ ಉತ್ತುಂಗವನ್ನು ತಲುಪಿ, ನಂತರ ಒಟ್ಟೋಮನ್ ಸಾಮ್ರಾಜ್ಯದ ದ್ವಿತೀಯಾರ್ಧದಲ್ಲಿ ವಿವಾದಾತ್ಮಕ ರೀತಿಯಲ್ಲಿ ಎಲ್ಲಾ ಭೂಮಿಗಳು ನಗದು ರೂಪ ಪಡೆದವು.

20 ನೆಯ ಶತಮಾನವು ಕೆಲವು ಅಪಾಯಕಾರಿ ದುರಂತಗಳ ಕಾಲವಾಗಿತ್ತು. ಎರಡು ಜಾಗತಿಕ ಮಹಾಸಮರಗಳು, ಮಹಾ ಆರ್ಥಿಕ ಕುಸಿತ (1929-1934), ಶೀತಲ ಸಮರ (1947-1991), ಗಲ್ಫ್ ವಾರ್ (1990-1991) ಮತ್ತು ಬೋಸ್ನಿಯನ್ ನರಮೇಧ (1992-1995) ದಂತಹ ದುರಂತಗಳ ಮೂಲಕ ಲಕ್ಷಾಂತರ ಸಾವು-ನೋವುಗಳಿಗೆ ಈ ಶತಮಾನ ಸಾಕ್ಷಿಯಾಯಿತಲ್ಲದೆ ಇದು ಸಮಾಜದಲ್ಲಿ ಮಾನಸಿಕ ಆಘಾತವನ್ನು ಸೃಷ್ಟಿಸಿತು. ಈ ಆಘಾತವು ಮುಸಲ್ಮಾನರನ್ನು ಇನ್ನೂ ಆಳವಾಗಿ ಘಾಸಿಗೊಳಿಸಿತು. ಸಮಾಜದ ಇಂತಹಾ ಜನರಿಗೆ ಆಸರೆಯಾಗುವುದಾಗಿತ್ತು ಇಸ್ಲಾಮಿಕ್ ದತ್ತಿ ಸೇವೆಗಳ ಮೂಲ ಉದ್ದೇಶ. ಆ ನಿಟ್ಟಿನಲ್ಲಿ ದತ್ತಿ ಸಂಸ್ಥೆಗಳು ಸಮಾಜದ ಧಾರ್ಮಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಶ್ರಮಿಸಿದೆ.

ಇಸ್ಲಾಮಿಕ್ ಸಂಸ್ಕೃತಿಯನ್ನು ಹೆಚ್ಚು ಸೊಗಸಾಗಿ ಮತ್ತು ಸಾರ್ವತ್ರಿಕವಾಗಿ ಬದಲಾಯಿಸಿದ್ದು ಈ ರೀತಿಯ ದಾನ – ಧರ್ಮಗಳ ಸಾಂತ್ವನ ಸಮೂಹಗಳಾಗಿವೆ. ಇಂತಹಾ ಪರಸ್ಪರ ಬೆರೆತು ಜೀವಿಸುವ ಪ್ರಕ್ರಿಯೆಯಲ್ಲಿ ವಕ್ಫ್ ಸಂಸ್ಥೆಯ ಪಾತ್ರ ಅಪಾರ. ಇತರರ ಕಲ್ಯಾಣಕ್ಕಾಗಿ ತಾವು ತಮಗೆ ಪ್ರಿಯವಾದುದನ್ನು ನೀಡುವಾಗ, ಕೇವಲ ನೀನು ಮತ್ತು ನಾನು ಮಾತ್ರವಲ್ಲ ಅಕ್ಷರಶಃ ಈ ಪ್ರಪಂಚವೇ ಪವಿತ್ರಗೊಳ್ಳುತ್ತದೆ.

ಮೂಲ: ಖಲೀಲ್ ಅಬ್ದುರ್ರಶೀದ್
ಅನುವಾದ: ಸ್ವಾದಿಖ್ ಮುಈನಿ ಬೆಳಾಲ್

Leave a Reply

*