ಸಂಸ್ಕೃತಿ
ಇತಿಹಾಸದುದ್ದಕ್ಕೂ ಶಿರವಸ್ತ್ರವನ್ನು ಸುಲ್ತಾನರು ಮತ್ತು ವಿದ್ವಾಂಸರಿಂದ ಹಿಡಿದು ಯೋಧರು ಮತ್ತು ಸಾಮಾನ್ಯರವರೆಗೂ, ಮುಸ್ಲಿಂ ಪುರುಷರು ತಮ್ಮ ಸಂಪ್ರದಾಯ ಅಥವಾ ಶ್ರೇಣಿ, ಸಂಬಂಧ, ಸ್ಥಾನಮಾನ ಮತ್ತು ಘನತೆಯನ್ನು ಸೂಚಿಸಲು ಹಾಗೂ ಮುಸ್ಲಿಂ ಪುರುಷರನ್ನು ಮುಸ್ಲಿಮೇತರರಿಂದ ಪ್ರತ್ಯೇಕಿಸಲು ಸಹ ಧರಿಸುತ್ತಿದ್ದರು. ಇಂದು, ನಿಯಮಿತವಾಗಿ ತಲೆ ಉಡುಪುಗಳನ್ನು ಧರಿಸುವುದು ಸಾಮಾನ್ಯವಾಗಿ ಇಸ್ಲಾಮಿಕ್ ವಿದ್ವಾಂಸರಲ್ಲಿ ಕಂಡುಬರುತ್ತದೆ. ಸಣ್ಣ ಮಡಚಬಹುದಾದ ಕ್ಯಾಪ್ಗಳನ್ನು ಕೆಲವೊಮ್ಮೆ ಕೆಲವು ಮುಸ್ಲಿಂ ಪುರುಷರು ಕೂಡಾ ಪ್ರಾರ್ಥನೆ ಅಥವಾ ಇತರ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಾಗ ಧರಿಸುತ್ತಾರೆ.

ಶಿರವಸ್ತ್ರ
ಪ್ರವಾದಿ ಮುಹಮ್ಮದ್ (ಸ) ರವರು ಪೇಟವನ್ನು ಧರಿಸಿದ್ದು, ಅದರ ಬಾಲದ ತುದಿಯನ್ನು ತಮ್ಮ ಭುಜಗಳ ಮೇಲೆ ಇಳಿಬಿಡುತ್ತಿದ್ದರು ಎಂದು ವಿವರಿಸುವ ಹಲವಾರು ಹದೀಸ್ ದಾಖಲೆಗಳನ್ನು ಇಬ್ನ್ ಉಮರ್ ವರದಿ ಮಾಡಿದ್ದಾರೆ. ಹಿಜರಿ ಶಕೆ ಎಂಟರಲ್ಲಿ ಮಕ್ಕಾವನ್ನು ಪುನಃ ಸ್ವಾಧೀನಪಡಿಸಿ, ಪ್ರವಾದಿಯವರು ನಗರವನ್ನು ಪ್ರವೇಶಿಸಿದಾಗ ಕಪ್ಪು ಪೇಟವನ್ನು ಧರಿಸಿದ್ದರು ಮತ್ತು ಪ್ರವಾದಿ ಸಹಚರರು ಹಳದಿ ಪೇಟವನ್ನು ಧರಿಸಿದ್ದರು ಎಂದು ದಾಖಲೆಗಳು ತಿಳಿಸುತ್ತವೆ. ಬದ್ರ್ ಕದನದಲ್ಲಿ ಮುಸಲ್ಮಾನರ ನೆರವಿಗೆ ಬಂದ ದೇವದೂತರು ಜುಬೈರ್ ಇಬ್ನ್ ಅಲ್-ಅವ್ವಾಮರ(ರ) ಯುದ್ಧಭೂಮಿಯಲ್ಲಿನ ಶೌರ್ಯದ ಗೌರವಾರ್ಥವಾಗಿ ಚಿನ್ನದ ಬಣ್ಣದ ಪೇಟವನ್ನು ಧರಿಸಿದ್ದರು ಎಂದು ದಾಖಲಿಸಲಾಗಿದೆ. ಒಂದು ಹದೀಸ್‌ನಲ್ಲಿ, ಪ್ರವಾದಿ ಮುಹಮ್ಮದ್(ಸ) “ಪೇಟ ಅರಬ್ಬರ ಕಿರೀಟವಾಗಿದೆ” ಎಂದು ಹೇಳಿರುವುದಾಗಿ ವರದಿಯಾಗಿದೆ. ದುರ್ಬಲ ಎಂದು ಪರಿಗಣಿಸಲಾಗಿದ್ದರೂ, ಇಮಾಮ್ ಅಲ್-ಬೈಹಕಿ ಈ ಹದೀಸ್ ಅನ್ನು ಅವರ ಶುಅಬ್ ಅಲ್-ಇಮಾನ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದು ಇಸ್ಲಾಂ ಧರ್ಮದ ಸಂಕೇತ ಎಂಬ ನೆಲೆಯಲ್ಲಿ ಪೇಟಕ್ಕೆ ನೀಡಲಾದ ಪ್ರಾಮುಖ್ಯತೆಯನ್ನು ವಿವರಿಸುತ್ತದೆ. ಪ್ರವಾದಿ ﷺ ರ ಮರಣದ ನಂತರ, ಪೇಟವನ್ನು ಹೆಚ್ಚಾಗಿ ಪುರುಷರು -ವಿಶೇಷವಾಗಿ ವಿದ್ವಾಂಸ- ಧರಿಸುತ್ತಿದ್ದರು. ಇಮಾಮ್ ಮಾಲಿಕ್‌ರವರು ಕಲಿಯಲು ಹೊರಟಾಗ ಅವರ ತಾಯಿಯವರು ಅವರ ತಲೆಯ ಸುತ್ತ ಪೇಟವನ್ನು ಸುತ್ತುತ್ತಿದ್ದರು ಎಂದು ನೆನಪಿಸುತ್ತಾ “ಇಸ್ಲಾಮಿನ ಆರಂಭದಿಂದಲೂ ಪೇಟವನ್ನು ಧರಿಸಲಾಗುತ್ತಿದ್ದು ನಮ್ಮ ಕಾಲದವರೆಗೂ ಅದನ್ನು ವ್ಯಾಪಕವಾಗಿ ಜನರು ಧರಿಸುತ್ತಿದ್ದರು” ಎಂದು ಹೇಳಿದ್ದಾರೆ.

ಪ್ರಸ್ತುತ ವಿವಿಧ ರೀತಿಯ ಮತ್ತು ಶೈಲಿಗಳ ಪೇಟ ಧರಿಸಿದ ವಿದ್ವಾಂಸರನ್ನು ನಿರ್ದಿಷ್ಟ ಸಂಸ್ಥೆ, ಧಾರ್ಮಿಕ ಸ್ಥಾನ ಅಥವಾ ಆಧ್ಯಾತ್ಮಿಕ ಸಂಪ್ರದಾಯದೊಂದಿಗೆ ಥಳಕು ಹಾಕಿ ನೋಡಲು ಬಯಸುತ್ತಾರೆ. ಇಸ್ಲಾಮಿಕ್ ಅಧ್ಯಯನವನ್ನು ಪೂರ್ಣಗೊಳಿಸಿದ ಅಥವಾ ಧಾರ್ಮಿಕ ಬಾಧ್ಯತೆಯನ್ನು ಪೂರೈಸಿದ ವಿದ್ಯಾರ್ಥಿಗಳು ಗುರುಗಳಿಂದ ವಿಧ್ಯುಕ್ತವಾಗಿ ತಮ್ಮ ತಲೆಯ ಸುತ್ತಲೂ ಪೇಟವನ್ನು ಸುತ್ತಿಕೊಳ್ಳುವ ರೀತಿಯೂ ಮುಂದುವರಿಯುತ್ತಿದೆ. ಕೆಂಪು ಬಣ್ಣದ ಟೋಪಿ ಧರಿಸಿ ಅದರ ಮೇಲೆ ಸುತ್ತುವ ಕಿರಿದಾದ ಪೇಟವು ಅಲ್-ಅಝ್ಹರ್ ವಿಶ್ವವಿದ್ಯಾಲಯದ ಪದವೀಧರರನ್ನು ಸೂಚಿಸುತ್ತದೆ. ಯೆಮೆನಿನ ದಾರುಲ್-ಮುಸ್ತಫಾ, ದಾರುಲ್ ಉಲೂಮ್ ವಿದ್ಯಾರ್ಥಿಗಳನ್ನು ಅವರು ಧರಿಸುವ ಪೇಟದ ಶೈಲಿಯಿಂದ ಗುರುತಿಸಬಹುದು. ಟರ್ಕಿ ಮತ್ತು ಬಾಲ್ಕನ್‌ನಲ್ಲಿ ಅಗಲವಾದ ಬಿಳಿ ಪೇಟವನ್ನು ಹೊಂದಿರುವ ದಪ್ಪದ ಕೆಂಪು ಟೋಪಿಯನ್ನು ಅಲ್ಲಿನ ಸರ್ಕಾರ ನೇಮಿಸಿದ ಇಮಾಮರುಗಳು ಮತ್ತು ಖತೀಬರುಗಳು ಧರಿಸುತ್ತಾರೆ. ಒಂದು ವ್ಯಕ್ತಿಯ ರಾಜಕೀಯ ನಿಲುವುಗಳನ್ನು ಗುರುತಿಸಲು ಪೇಟಗಳು ಮತ್ತು ಶಿರವಸ್ತ್ರಗಳು ಸುಲಭವಾದ ಮಾರ್ಗಗಳಾಗಿದ್ದವು. ಅಬ್ಬಾಸಿಯ್ಯಾ ಅವಧಿಯಲ್ಲಿ (750 – 1258) ಖಲೀಫರು ಮತ್ತು ನ್ಯಾಯಾಲಯದ ಅಧಿಕಾರಿಗಳು ಹಾಗೂ ವಿದ್ವಾಂಸರು ಮತ್ತು ಖತೀಬರುಗಳು ಕಪ್ಪು ಪೇಟಗಳನ್ನು ಮತ್ತು ಬಟ್ಟೆಗಳನ್ನು ಧರಿಸುವ ಪದ್ಧತಿ ರೂಢಿಯಲ್ಲಿತ್ತು. ಉತ್ತರ ಆಫ್ರಿಕಾ ಮತ್ತು ಸ್ಪೈನ್ ಬರ್ಬರ್ ಅಥವಾ ಅಮಾಝಿಗ್ ಆಳ್ವಿಕೆಯಲ್ಲಿ, ಮುರಾಬಿತುನ್ ಪುರುಷರಿಗಾಗಿ ಲಿಥಮ್ (ಮುಸುಕು) ಧರಿಸುವಿಕೆ ಪದ್ಧತಿ ಜಾರಿಗೆ ತರಲಾಗಿತ್ತು. ಆದಾಗ್ಯೂ, ಮುವಹಿದುನ್ ಆಳ್ವಿಕೆಯಲ್ಲಿ ಲಿಥಮ್ ಧರಿಸುವುದನ್ನು ನಿಷೇಧಿಸಲಾಯಿತು ಹಾಗೂ ದಕ್ಷಿಣ ಮೊರಾಕೊದಲ್ಲಿ ಬಾರ್ಬರ್ ಶೈಲಿಯ ಪೇಟವನ್ನು ಮಾತ್ರ ಜನಪ್ರಿಯಗೊಳಿಸಲಾಯಿತು.

ಶಿರವಸ್ತ್ರ ಧಾರ್ಮಿಕ ಸಂಕೇತ
ಮಮ್ಲುಕ್ ಮತ್ತು ಒಟ್ಟೋಮನ್ ಅವಧಿಯಲ್ಲಿ ಶಿರವಸ್ತ್ರ, ಅದರ ಗಾತ್ರ, ಸುತ್ತುವ ಶೈಲಿ ಮತ್ತು ಅದರ ಬಣ್ಣ ಜನರ ಉದ್ಯೋಗ ಹಾಗೂ ಶ್ರೇಣಿಗಳ ಸೂಚಕಗಳಾಗಿ ಮಾರ್ಪಟ್ಟಿದ್ದವು. ಇದರಿಂದ ಬೇರೆ ಬೇರೆ ಧಾರ್ಮಿಕ ಸಮುದಾಯಗಳನ್ನು ಗುರುತಿಸಲು ಸಹಾಯ ಮಾಡುತ್ತಿತ್ತು. ಮುಸ್ಲಿಮರು ಬಿಳಿ ಶಿರವಸ್ತ್ರವನ್ನು ಧರಿಸಿದ್ದರೆ, ಯಹೂದಿಗಳು ಹಸಿರು, ಝೋರೊಸ್ಟ್ರಿಯನ್ನರು ಕಪ್ಪು ಮತ್ತು ಕ್ರಿಶ್ಚಿಯನ್ನರು ನೀಲಿ ಬಣ್ಣವನ್ನು ಧರಿಸುತ್ತಿದ್ದರು.


12 ನೇ ಮತ್ತು 13 ನೇ ಶತಮಾನಗಳಲ್ಲಿ ಸೂಫಿಸಂನ ವ್ಯಾಪಕ ಸ್ವೀಕಾರದೊಂದಿಗೆ, ವಿವಿಧ ಆಧ್ಯಾತ್ಮಿಕ ತ್ವರೀಖಗಳನ್ನು ಗುರುತಿಸುವಲ್ಲಿಯೂ ಶಿರವಸ್ತ್ರಗಳು ಪ್ರಮುಖ ಪಾತ್ರ ವಹಿಸಿವೆ. ಮವ್ಲವಿಯ್ಯಾ, ನಕ್ಷಬಂದಿಯ್ಯಾ, ಹಕ್ಕಾನಿಯ್ಯಾ ಸಂತರು ವೈವಿಧ್ಯಮಯ ರೀತಿಯ ಪೇಟಗಳನ್ನು ಧರಿಸುವ ಮೂಲಕ ಜನರ ಮಧ್ಯೆ ಪ್ರಸಿದ್ಧಿಯನ್ನು ಪಡೆದರು. ಹಸಿರು ಪೇಟಗಳು ಒಟ್ಟೋಮನ್ ಅವಧಿಯವರೆಗೆ ಅಶ್ರಫ್ ಅಥವಾ ಅಹ್ಲ್ ಬೈತಿನ ಸಂಕೇತವಾಗಿತ್ತು. ವಿವಿಧ ಬುಡಕಟ್ಟುಗಳು, ಕುಲಗಳು ಮತ್ತು ಜನಾಂಗೀಯ ಗುಂಪುಗಳನ್ನು ಗುರುತಿಸುವಲ್ಲಿಯೂ ಶಿರವಸ್ತ್ರಗಳು ಪ್ರಮುಖ ಎನಿಸಿವೆ. ಮಧ್ಯ ಏಷ್ಯಾದ ಮಧ್ಯಯುಗೀನ ಇತಿಹಾಸ ನೋಡಿದರೆ ತುರ್ಕಿ ಅಲೆಮಾರಿಗಳು ‘ಉಯ್ಘರ್ ಡೊಪ್ಪಾ, ಕಿರ್ಗಿಜ್‌ನಲ್ಲಿ ಎತ್ತರದ ಅಂಚುಳ್ಳ ಅಕ್-ಕಲ್ಪಕ್ ಮತ್ತು ಸಲ್ಜೂಕಿ ಮಿಲಿಟರಿ ಅಧಿಕಾರಿಗಳು ಐತಿಹಾಸಿಕ ತುಪ್ಪಳ-ರೇಖೆಯ ‘ಶಾರ್ಬುಷ್’ ಟೋಪಿಗಳನ್ನು ಮಧ್ಯಯುಗದಲ್ಲಿ ಬಳಸುತ್ತಿದ್ದದ್ದು ಕಾಣಬಹುದು. ಅಂತೆಯೇ, ಅಫ್ಘಾನಿಸ್ತಾನ ಮತ್ತು ವಾಯುವ್ಯ ಪಾಕಿಸ್ತಾನದಾದ್ಯಂತ ಉಣ್ಣೆಯ ಟೋಪಿ ಮತ್ತು ಪೂರ್ವ ಆಫ್ರಿಕಾ ಮತ್ತು ಒಮಾನ್‌ನಲ್ಲಿ ವರ್ಣರಂಜಿತ ‘ಕುಮಾ’ ವನ್ನು ಪುರುಷರು ಧರಿಸುತ್ತಾರೆ,
ಆಧುನಿಕ ಯುಗದಲ್ಲಿ
19ನೇ ಶತಮಾನದ ಪ್ರಾರಂಭದ ಒಟ್ಟೋಮನ್ ಪ್ರಾಂತ್ಯಗಳ ವಿನಾಶಕಾರಿ ಸೋಲುಗಳ ಬಳಿಕ ರಾಷ್ಟ್ರವನ್ನು ಆಧುನೀಕರಿಸುವ ಪ್ರಯತ್ನಗಳ ಭಾಗವಾಗಿ 1826ರಲ್ಲಿ ಸುಲ್ತಾನ್ ಮಹಮೂದ್ II (1839) ಕೆಂಪು ಫೆಜ್ ಅಥವಾ ಟಾರ್ಬುಷ್ ಟೋಪಿಯನ್ನು ಪರಿಚಯಿಸಿದರು. ಇದು ಒಟ್ಟೋಮನ್ ಸಮಾಜವನ್ನು ಏಕರೂಪಗೊಳಿಸುವ ಮತ್ತು ಅಷ್ಟರವರೆಗೆ ಚಾಲ್ತಿಯಲ್ಲಿದ್ದ ವಸ್ತ್ರಸಂಹಿತೆಯನ್ನು ಬದಲಿಸುವ ಇರಾದೆಯನ್ನು ಹೊಂದಿತ್ತು. ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳಿಗೆ ಇದ್ದ ವ್ಯತ್ಯಸ್ತ ಬಟ್ಟೆಗಳು ಮತ್ತು ಶಿರವಸ್ತ್ರಗಳು ಹಾಗೆ ಕೊನೆಗೊಂಡವು.

1860 ಮತ್ತು 70ರ ದಶಕದಲ್ಲಿ, ಬಾಲ್ಕನ್‌ನಿಂದ ಪೂರ್ವ ಆಫ್ರಿಕಾ ವರೆಗೆ ಮತ್ತು ಮೊರಾಕೊದಿಂದ ಭಾರತದವರೆಗೆ ಫೆಜ್ ಟೋಪಿ ಮುಸ್ಲಿಮರ ಅಂಗೀಕೃತ ತಲೆಯುಡುಪು ಎನಿಸಿಕೊಂಡಿತು. 19ನೇ ಶತಮಾನದಲ್ಲಿ ಆಫ್ರಿಕಾದ ಬಹುತೇಕ ಭಾಗಗಳು ಯುರೋಪಿಯನ್ ವಸಾಹತುಶಾಹಿ ಶಕ್ತಿಗಳಿಗೆ ಅಧೀನಕ್ಕೊಳಪಟ್ಟಾಗ ಕೆಂಪು ಫೆಜ್ ಟೋಪಿಯನ್ನು ವಸಾಹತುಶಾಹಿ ಏಜೆಂಟ್‌ಗಳು, ಅಧಿಕಾರಿಗಳು ಮತ್ತು ಸ್ಥಳೀಯ ಸೈನಿಕರು ಸಾಮಾನ್ಯವಾಗಿ ಧರಿಸಲಾರಂಭಿಸಿದರು.

ವಸಾಹತುಶಾಹಿಯ ಈ ಅವಧಿಯಲ್ಲಿ ಪೂರ್ವದ ಬಗೆಗಿನ ಯುರೋಪಿನ ಆಕರ್ಷಣೆಯಿಂದಾಗಿ ಒಂದು ವಿಶಿಷ್ಟವಾದ ಸಾಂಸ್ಕೃತಿಕ ವಿನಿಮಯ ನಡೆಯಿತು. ಹಾಗೆ, ಮುಸ್ಲಿಮರ ತಲೆ ಉಡುಪು ಯುರೋಪಿಯನ್ ಫ್ಯಾಶನ್ ಜಗತ್ತನ್ನು ಪ್ರವೇಶಿಸಿತು. ಪ್ರಥಮ ಮಹಾಯುದ್ಧದ ವೇಳೆ ಒಟ್ಟೋಮನ್ ಸೋಲು ಮತ್ತು ಹೊಸ ಟರ್ಕಿಶ್ ಗಣರಾಜ್ಯದ ರಚನೆಯ ನಂತರ 1925ರಲ್ಲಿ ಹೊಸ ಟೋಪಿ ಸಂಹಿತೆಯನ್ನು ಜಾರಿಗೆ ತರಲಾಯಿತು.

ಅದರೊಂದಿಗೆ ಫೆಜ್ ಮತ್ತು ಪೇಟವನ್ನು ನಿಷೇಧ ಹೇರಿ ಪಾಶ್ಚಿಮಾತ್ಯ ಶೈಲಿಯ ಟೋಪಿಗಳನ್ನು ಧರಿಸುವುದನ್ನು ಉತ್ತೇಜಿಸಲಾಯಿತು. ಇಂದು ಪ್ಯಾಲಿಸ್ತೀನಿಯನ್ ‘ಕೆಫಿಯೆಹ್’ ತಲೆಯುಡುಪನ್ನು ಪುರುಷರು ಮತ್ತು ಮಹಿಳೆಯರು, ಮುಸ್ಲಿಂ ಮತ್ತು ಮುಸ್ಲಿಮೇತರರು ಧರಿಸುತ್ತಾರೆ. ಇದು ಸ್ವಾತಂತ್ರ್ಯ ಹಾಗೂ ಪ್ಯಾಲೆಸ್ಟೈನ್ ಪರ ಹೋರಾಟದ ಸಾರ್ವತ್ರಿಕ ಗುರುತಾಗಿ ಬಳಸಲಾಗುತ್ತಿದೆ.
ಇಂಗ್ಲೀಷ್: ಅಬೂ ಅಯ್ಯೂಬ್
ಕನ್ನಡಕ್ಕೆ : ತಂಶೀರ್ ಮುಈನೀ ಉಳ್ಳಾಲ್