14ನೇ ಶತಮಾನದಲ್ಲಿ ಪಶ್ಚಿಮ ಆಫ್ರಿಕಾದ ಮೊರೊಕೊದಿಂದ ಸುಮಾರು 29 ವರ್ಷಗಳಲ್ಲಿ 75,000ಕ್ಕೂ ಅಧಿಕ ಮೈಲಿಗಳಷ್ಟು ಯಾತ್ರೆ ಕೈಗೊಂಡ ಇಬ್ನ್ ಬತೂತ ಇತಿಹಾಸ ಪುಟಗಳಲ್ಲಿ ಇಂದಿಗೂ ಅಜರಾಮರರಾಗಿದ್ದಾರೆ. ತನ್ನ ಜೀವನದ ಸಿಂಹ ಭಾಗವನ್ನು ಬಿಸಿಲು- ಚಳಿಯೆನ್ನದೆ ಪ್ರವಾಸಕ್ಕಾಗಿ ಮುಡಿಪಾಗಿಟ್ಟ ಈ ಯಾತ್ರಿಕನನ್ನು ಮೊರೊಕೊ ಎಂಬ ದೇಶಕ್ಕೆ ಸೀಮಿತಗೊಳಿಸುವುದು ಒಂದು ರೀತಿಯ ವಿರೋಧಾಭಾಸ ಅಲ್ಲವೇ? ಇದು ಇಬ್ನ್ ಬತೂತರವರ ಪ್ರವಾಸದ ಕುರಿತಾದ ಅಧ್ಯಯನ ಮಾಡುವ ಅಮೆರಿಕಾದ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಅನೇಕರು ಎತ್ತುವ ಪ್ರಶ್ನೆಯಾಗಿದೆ.
ಸಮುದ್ರ ಮತ್ತು ಭೂಪ್ರದೇಶಗಳನ್ನು ದಾಟಿ ಇತರ ದೇಶಗಳಿಗೆ ಪ್ರವಾಸ ಹೊರಟ ಮಧ್ಯಕಾಲೀನ ಮುಸ್ಲಿಂ ಸಂಚಾರಿಗಳ ಜೀವನದಲ್ಲಿ ಸಂಚಾರವು ಯಾವ ಪರಿಣಾಮ ಬೀರಿದೆ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಅಪರಿಚಿತವಾದ ಜೀವನ ಶೈಲಿಗಳು ಮತ್ತು ಪರಿಚಯವಿಲ್ಲದ ಸಂಸ್ಕೃತಿಗಳು ಇವುಗಳ ಬಗ್ಗೆ ಅವರು ದಾಖಲಿಸಿದ ಅನುಭವಗಳು ಇಂದಿಗೂ ಮಾಸದೆ ಹಾಗೆಯೇ ಉಳಿದುಕೊಂಡ ಒಂದು ಪಾಠ ಪುಸ್ತಕವಾಗಿದೆ.
“ಅವತ್ತು ಮುಂಜಾನೆ ನಾವು ಪ್ರವಾದಿ ಮಹಮ್ಮದ್ﷺ ಅಂತ್ಯ ವಿಶ್ರಮಿಸುತ್ತಿರುವ ಮದೀನಾದ ಮಸೀದಿಗೆ ತಲುಪಿದೆವು. ಮದೀನ ಪ್ರೇಮಿಗಳು ತಮ್ಮೆಲ್ಲಾ ಪ್ರೇಮ ಆಲಾಪನೆಗಳನ್ನು ಅಲ್ಲಿ ಅರ್ಪಿಸಿ ಸೃಷ್ಟಿಕರ್ತನೊಂದಿಗೆ ನೊಂದು ಕೈಯೆತ್ತಿ ಬೇಡಿದಾಗ ಹೃದಯವು ಕಣ್ಣೀರ ಹನಿಗಳಿಂದ ಮುಳುಗಿತು. ಅಂತ್ಯ ವಿಶ್ರಮಿಸುವ ರೌಳಾ ಶರೀಫ್ನ ಮತ್ತು ಅರಿವು ಪಸರಿಸಿದ ಮಿಂಬರಿನ ನಡುವಿನ ಸ್ವರ್ಗೀಯ ಉದ್ಯಾನದಲ್ಲಿ ನಿಂತಾಗ ಆ ನಬಿﷺ ಅವರ ಸನ್ನಿಧಿಯ ಮುಂದೆ ನಿಂತ ಭಾವವು ನಮ್ಮನ್ನು ರೋಮಾಂಚನಗೊಳಿಸಿತು. ನಬಿ ﷺ ರ ಬಳಿ ಅಂತ್ಯ ವಿಶ್ರಮಿಸುವ ಇಬ್ಬರು ಪವಿತ್ರ ಸಹಚರರಾದ ಅಬೂಬಕ್ಕರ್ (ರ.ಅ ) ಉಮರ್(ರ.ಅ) ರವರ ತ್ಯಾಗೋಜ್ವಲ ನೆನಪುಗಳು ನಮ್ಮನ್ನು ಇನ್ನಷ್ಟು ಪುಳಕಿತಗೊಳಿಸಿದವು. ಜೀವನಾಂತ್ಯದವರೆಗೆ ದೊಡ್ಡ ಗುರಿಯ ಹೊತ್ತು ಸೃಷ್ಟಿಕರ್ತನಿಗೆ ಕೃತಜ್ಞತೆ ಸಲ್ಲಿಸಿ ಇದು ನಮ್ಮ ಕೊನೆಯ ಯಾತ್ರೆಯಾಗದಿರಲಿ ಎಂದು ಮನಸಾರೆ ಪ್ರಾರ್ಥಿಸಿದೆವು. ರೂಮ್ಗೆ ಮರಳಿದಾಗ ಆ ಪಾವನ ಸನ್ನಿಧಿಯಿಂದ ಆಶೀರ್ವಾದ ಲಭಿಸಿದವರಂತೆ ಎಲ್ಲಿಲ್ಲದ ಆವೇಶ ನಮ್ಮಲ್ಲಿ ಕಂಡು ಬಂದವು.” (The Travels of ibn Battuta, Translated by H.A.R. GIBB).
ಮೇಲೆ ವಿವರಿಸಿದ ಇಬ್ನ್ ಬತೂತರವರ ಸಾಲುಗಳು, ಯಾತ್ರೆಯ ಮೊದಲ ಹಂತವೆಂಬಂತೆ ಮಕ್ಕಾ ತಲುಪುವ ದಾರಿಯಲ್ಲಿ ಪ್ರವಾದಿ ﷺರ ಸಮೀಪ ಲಭಿಸಿದಂತಹ ಭಾವನಾತ್ಮಕವಾದ ಅನುಭವಗಳ ಮತ್ತು ಆನಂದದ ಆವಿಷ್ಕಾರವಾಗಿದೆ. ಯಾತ್ರೆಯಲ್ಲಿ ಉಂಟಾದ ಎಲ್ಲಾ ಸುಖ, ದುಃಖ, ನೋವುಗಳನ್ನು ವಿವರಿಸಿ ಬರೆಯುವುದು ಅವರ ಪ್ರವಾಸ ಕಥನಗಳ ಸವಿಶೇಷತೆಯಾಗಿದೆ.
ವಾಸ್ತವಿಕತೆ ಮತ್ತು ಪ್ರಕೃತಿಯ ಕಥೆ ಮತ್ತು ಐತಿಹಾಸಿಕ ಸತ್ಯಗಳ ಅಗಾಧತೆಯನ್ನು ಸೂಚಿಸುವ ಇಂತಹ ನೆನಪುಗಳು ಆ ಕಾಲದ ಪ್ರಪಂಚದ ಬಗ್ಗೆಯೂ ಮಾಹಿತಿಯನ್ನು ಒದಗಿಸುತ್ತವೆ. ಅಂದಿನ ಮುಸ್ಲಿಂ ಸಂಸ್ಕೃತಿಯ ಚಾರಿತ್ರಿಕ ವರ್ತಮಾನವು ಅವರ ಪ್ರವಾಸ ಕಥನಗಳಲ್ಲಿ ಬಿಂಬಿಸಿದ್ದಾರೆ. ಯಾತ್ರೆಯ ಬಹು ಭಾಗವನ್ನು ಪ್ರವಾಸಕ್ಕಾಗಿ ಮುಡಿಪಾಗಿಟ್ಟ ಅನೇಕ ಸಂಚಾರಿಗಳು ಈ ಕಾಲದಲ್ಲೂ ಇದ್ದಾರೆ.
ಪ್ರವಾಸ ಕಥನಗಳಲ್ಲಿ ಇಂದು ಅನನ್ಯ ಪ್ರತಿಭೆಗಳಾಗಿ ಜೀವಂತವಾಗಿ ಉಳಿದಿದ್ದಾರೆ.
ಪ್ರವಾಸ ಕಥನಗಳ ಇತಿಹಾಸ ಮತ್ತು ಪರಿಣಾಮ:
ಸಂಚಾರದ ಇತಿಹಾಸ ಎಂಬುದು ಮನುಷ್ಯನ ಇತಿಹಾಸ ಕೂಡಾ ಆಗಿದೆ. ಪುರಾತನ ಸಮೂಹದಲ್ಲಿ ಮನುಷ್ಯ ತನ್ನ ದೈನಂದಿನ ಜೀವನೋಪಾಯೋಗಕ್ಕೆ ಬೇಕಾಗಿ ಸಂಚರಿಸುತ್ತಿದ್ದನು. ನಂತರ ಕಾಲದಲ್ಲಿ ಇದು ತೀರ್ಥಯಾತ್ರೆ, ವ್ಯಾಪಾರದ ಸಂಕೇತವಾಗಿ ಮಾರ್ಪಟ್ಟಿತು. ಯಾತ್ರೆ ಮಧ್ಯೆ ಕಂಡ ಪ್ರಕೃತಿ ವಿಸ್ಮಯಗಳನ್ನು ಮತ್ತು ಅಲ್ಲಿನ ಜನತೆಯ ಜೀವನ ಶೈಲಿಯು ಪ್ರವಾಸ ಕಥನವನ್ನು ಪ್ರೋತ್ಸಾಹಿಸಿ ಆ ಸಾಹಿತ್ಯವನ್ನು ಬೆಳೆಸುವಂತೆ ಮಾಡಿತು. ಈ ಅನುಭವಗಳೇ ಇತಿಹಾಸ ಪುಸ್ತಕಗಳ ರಚನೆಗೆ ಕಾರಣವಾಯಿತು. ಇತಿಹಾಸ ಪಿತಾಮಹ ಹೇರೋಡೋಟಸ್ ತನ್ನ The Histories ಎಂಬ ಗ್ರಂಥದಲ್ಲಿ ಈಜಿಪ್ಟ್, ಪರ್ಷಿಯಾ, ಅನಾಟೋಲಿಯ ಮುಂತಾದ ನಗರಗಳ ಕುರಿತಾದ ಪ್ರವಾಸ ಕಥನಗಳನ್ನು ಆ ಪ್ರದೇಶಗಳಲ್ಲಿ ಯಾತ್ರೆ ಮಾಡಿಯೇ ಬರೆದಿದ್ದಾರೆ. ಇತಿಹಾಸ ಮತ್ತು ಪ್ರವಾಸ ಸಾಹಿತ್ಯಗಳ ನಡುವಿನ ಅಂತರ ಹೆಚ್ಚುತ್ತಿರುವಾಗ ಆಧುನಿಕ ದೃಷ್ಟಿಕೋನದಿಂದ ಅವುಗಳ ನಡುವೆಯೂ ಗಾಢ ಸಂಬಂಧಗಳನ್ನು ಸ್ಥಾಪಿಸುತ್ತದೆ.
ಯಾತ್ರೆಯ ಪ್ರಧಾನ ಉದ್ದೇಶ ಜ್ಞಾನದಡೆಗೆ ತಿರುಗಿದ್ದು ಮಧ್ಯ ಕಾಲೀನ ಯುಗದಲ್ಲಾಗಿದೆ. ಪ್ರಯಾಣವು ಇಸ್ಲಾಮಿಕ್ ಸಂಸ್ಕೃತಿಯ ಸಂಕೇತವಾದಾಗ ಜ್ಞಾನ ಮತ್ತು ಪ್ರಯಾಣದ ನಡುವೆ ಇರುವ ಸಂಬಂಧ ದೃಢವಾದದ್ದು. ನೀವು ಚೀನಾಕ್ಕೆ ಹೋಗಿಯಾದರೂ ಸರಿ ನೀವು ಅರಿವುಳ್ಳವರಾಗಿರಿ, ಲೌಕಿಕ ವಿಷಯದಲ್ಲಿ ನೀವು ವಿದೇಶಿಗಳಾಗಿರಿ ಎಂಬ ಪ್ರವಾದಿ ಮುಹಮ್ಮದ್ﷺ ರವರ ವಚನವನ್ನು ಪಾಲಿಸುತ್ತಾ ದೇಶಗಳ ಗಡಿದಾಟಿ ಅರಬಿಗಳು ಸಂಚರಿಸಿದರು.
ಯಾಕೆ ನೀವು ಭೂಮಿಯಲ್ಲಿ ಸಂಚರಿಸುತಿಲ್ಲ ಎಂಬ ಖುರ್ ಆನ್ ನ ಸೂಕ್ತವು ಭೂಮಿಯುದ್ದಕ್ಕೂ ಪ್ರಯಾಣ ಬೆಳೆಸಲು ಅವರಿಗೆ ಸ್ಪೂರ್ತಿಯಾಯಿತು. ಜರ್ಮನ್ ಚಿಂತಕ ಫ್ರಾಂಝ್ ರೋಸೆಂತಾಲ್ Knowledge Triumphant : the concept of knowledge on mediaeval Islam ಎಂಬ ತನ್ನ ಪುಸ್ತಕದಲ್ಲಿ ಜ್ಞಾನ ಮತ್ತು ಪ್ರಯಾಣದ ನಡುವೆಯಿರುವ ಅಚಂಚಲವಾದ ಸಂಬಂಧವನ್ನು ವ್ಯಕ್ತವಾಗಿ ತಿಳಿಸುತ್ತಾರೆ. ಮಧ್ಯ ಕಾಲೀನ ಮುಸ್ಲಿಂ ಸಂಚಾರಿಗಳ ಜ್ಞಾನ ಸಂಪಾದನೆಗೆ ಬೇಕಾದ ಪ್ರಯಾಣವು ಆಧುನಿಕ ಯುಗದ ಯಾತ್ರೆಯೊಂದಿಗೆ ಹೋಲಿಕೆಯಾಗುತ್ತದೆ ಎಂದು ಅವರು ಹೇಳುತ್ತಾರೆ. ಯಾತ್ರೆ ಮತ್ತು ಜ್ಞಾನ ನಡುವೆಯಿರುವ ನೈತಿಕವಾದ ಸಂಬಂಧಕ್ಕೆ ಷರಾ ಬರೆದ ಇಮಾಂ ಗಝ್ಝಾಲಿ(ರ ಅ) ಸೂಕ್ಷ್ಮ ಮತ್ತು ಪ್ರಾದೇಶಿಕ ವಾಸ್ತವತೆಗಳಲ್ಲಿನ ವಿಶಿಷ್ಟ ಅವಲೋಕನ ಮತ್ತು ಸಂವೇದನಾ ಗ್ರಹಿಕೆಗಳು ಅರಿವಿನ ಅನುಭವಗಳಾಗಿ ಹೇಗೆ ರೂಪಾಂತರಗೊಳ್ಳುತ್ತವೆ ಎಂಬುದನ್ನು ಗುರುತಿಸಿದ್ದಾರೆ. ಆ ಸಮಯದಲ್ಲಿ ಬರೆಯಲಾದ ಪ್ರವಾಸ ಕಥನಗಳು ಈ ಎರಡು ಅಂಶಗಳನ್ನು ಪ್ರತಿಬಿಂಬಿಸುತ್ತವೆ. ಆಧುನಿಕ ಪ್ರವಾಸ ಸಾಹಿತ್ಯದಲ್ಲಿ ಈ ಅಂಶಗಳ ಪ್ರಾಮುಖ್ಯತೆಯೂ ದೊಡ್ಡದಾಗಿದೆ.
ಮದ್ಯಕಾಲಿನ ಅರಬರು ಪ್ರಯಾಣ ಮಾಡುವುದರಲ್ಲಿ ಅತ್ಯಧಿಕ ಆಸಕ್ತಿಯುಳ್ಳವರಾಗಿದ್ದರು. ಸುಡು ಬಿಸಿಲಿನಲ್ಲಿ ಹಸಿರನ್ನು ಹುಡುಕುತ್ತಾ ನಡೆಯುವುದು ಬದು (ಬುಡಕಟ್ಟು) ಜನಾಂಗದ ದೈನಂದಿನ ಕಾರ್ಯವಾಗಿತ್ತು. ಇಂತಹ ಯಾತ್ರೆಗಳಿಂದ ಪರಕೀಯರ ಸಂಸ್ಕಾರ, ಜೀವನಶೈಲಿ ಕಲಿಯಲು, ಅರಿಯಲು ಸಾಧ್ಯವಾಯಿತು. ದಿಕ್ಸೂಚಿಯ ಕಂಡು ಹಿಡಿತದ ನಂತರ ಪ್ರಯಾಣವು ವೇಗ ಪಡೆದುಕೊಂಡಿತು. 9 ರಿಂದ 15 ಶತಮಾನದವರೆಗಿನ ಅವಧಿಯಲ್ಲಿ ವಿಶ್ವ ವ್ಯಾಪಾರದ ಮೇಲೆ ಅರಬ್ಬರು ನಿಯಂತ್ರಣ ಹೊಂದಿದ್ದರು. ಕಾರಣವೇನೆಂದರೆ ಸಮುದ್ರ ಪ್ರಯಾಣದಲ್ಲಿ ಅರಬ್ಬರು ಮುಂಚೂಣಿಯಲ್ಲಿದ್ದರು. ಆಧುನಿಕ ಶಾಸ್ತ್ರದ ಪಿತಾಮಹ ಸಾರ್ಟನ್ನ ಪ್ರಕಾರ ದಿಕ್ಸೂಚಿ ನೋಡಿ ಅತ್ಯಧಿಕವಾಗಿ ಸಮುದ್ರ ಪ್ರಯಾಣ ಮಾಡಿದವರು ಅರಬ್ಬರಾಗಿದ್ದಾರೆ. ಇದರ ಸಹಾಯದೊಂದಿಗೆ ಭೂಖಂಡ ಗಳನ್ನು ದಾಟಿ ನಡೆಸಿದ ಸಂಚಾರವೂ ಆಧುನಿಕ ಜಗತ್ತಿಗೆ ಅವರ ಸ್ವಭಾವ ಮತ್ತು ಅಲ್ಲಿನ ಜನಪದ, ಜೀವನ ಶೈಲಿ, ಸಂಸ್ಕೃತಿ ಅರಿಯಲು ಅರಬ್ಬರಿಗೆ ಸಹಾಯ ಮಾಡಿತು. ಹಾಗೆ ಅವರು ಹತ್ತಿ ಇಳಿದ ಸ್ಥಳಗಳೆಲ್ಲಾ ಇಸ್ಲಾಮಿನ ಪರಿಚಯ ಮಾಡಿದರು. ಬಂದರುಗಳನ್ನು ಕೇಂದ್ರೀಕರಿಸಿ ವ್ಯಾಪಾರ ಶಾಖೆಗಳನ್ನು ಸ್ಥಾಪಿಸಿದರು. ಮಧ್ಯಕಾಲೀನ ಯುಗದಲ್ಲಿ ವಿಶ್ವದ ಮೂರನೇ ಒಂದು ಭಾಗವು ಇಸ್ಲಾಮಿಕ್ ಆಡಳಿತ ಆಳ್ವಿಕೆಯ ಹಿಂದೆ ಇಂತಹ ಸಾಹಸಿಕ ಸಂಚಾರ ಸೃಷ್ಟಿಸಿದ ಐತಿಹಾಸಿಕ ಕ್ರಾಂತಿಯನ್ನು ನೋಡಬಹುದು.
ಪ್ರಪಂಚದಲ್ಲಿ ರಚಿಸಲ್ಪಟ್ಟ ಪ್ರವಾಸ ಕಥನಗಳಲ್ಲಿ ಅತ್ಯಧಿಕವೂ ಅರಬ್ಬರ ರಚನೆಗಳಾಗಿವೆ. ಮಧ್ಯಕಾಲೀನ ಯುಗದಲ್ಲಿ ಅಲ್ಲಿನ ಪರಿಸ್ಥಿತಿಗಳನ್ನು ಅರಿಯಲು ಒಂದು ತೆರೆದ ಪುಸ್ತಕದಂತೆ ಅವರ ಕೃತಿಗಳು ಮಾರ್ಪಟ್ಟಿವೆ. ಇರುಳು ಕೂಡಿದ ಮಧ್ಯಕಾಲ ಯುರೋಪಿನ ಸ್ಥಿತಿಗಳನ್ನರಿಯಲು ಅಹಮದ್ ಫಾನ್ ರ ರಿಹ್ಲ ಮೂಲಕ ಸಾಧ್ಯ. ಅಪರೂಪದ ವಾಸ್ತವಿಕ ಚರಿತ್ರೆಗಳನ್ನು ಸರಳವಾದ ರೂಪದಲ್ಲಿ ವಿವರಿಸಿ ಸಾಹಿತ್ಯ ಕಥನಕ್ಕೆ ಒಂದು ರೂಪ ಭಾವವನ್ನು ನೀಡಿದೆ.14ನೇ ಶತಮಾನ ಪ್ರಮುಖ ಇತಿಹಾಸಕಾರ ಇಬ್ನ್ ಖಲ್ದೂಮ್ ತನ್ನ ‘ಮುಖದ್ದಿಮ’ ಗ್ರಂಥದಲ್ಲಿ ಹೇಳುತ್ತಾರೆ. ರಿಹ್ಲಾಗಳು ವಿದ್ವಾಂಸರು ಮತ್ತು ಸಾಮಾನ್ಯ ಜನರ ನಡುವೆಯಿರುವ ಸಂಬಂಧವನ್ನು ದೃಢಗೊಳಿಸುತ್ತದೆ. ರಿಹ್ಲಾಗಳು ಅಲ್ಲಿನ ಸಾಮಾನ್ಯ ಜನರ ಸಂಸ್ಕೃತಿಯ ಆಳಕ್ಕೆ ಇಳಿದು ಬರೆದ ದಾಖಲೆಗಳಾದ ಕಾರಣ ಇಂತಹ ಪ್ರವಾಸ ಸಾಹಿತ್ಯಗಳನ್ನು ಓದುವಂತೆ ಪ್ರೇರೇಪಿಸುತ್ತವೆ.
‘ರಾಷ್ಟ್ರಗಳು’ ಎಂಬ ಆಧುನಿಕ ಪರಿಕಲ್ಪನೆಗಳು ಇಲ್ಲದಿದ್ದ ಕಾಲದಲ್ಲಿ ಪೌರತ್ವದ ಬಗ್ಗೆಯ ಆಲೋಚನೆಗಳು ಅಪ್ರಸ್ತುತವಾಗಿದ್ದರೂ, ವಿಶಾಲವಾದ ಇಸ್ಲಾಂ ಸಂಸ್ಕೃತಿಯ ಹೊರಗಿನ ಲೋಕಕ್ಕೆ ಸಂಚಾರ ಮಾಡಿದವರಾಗಿದ್ದಾರೆ ಇಬ್ನ್ ಬತೂತ, ಇಬ್ನ್ ಜುಬೈರ್ ರಂತಹ ಸಂಚಾರಿಗಳು. ಇಂತಹ ಪ್ರವಾಸಗಳು ಆಧುನಿಕ ಯುರೋಪಿನ ಅಸ್ತಿತ್ವವನ್ನು ಹೇಗೆ ರೂಪಿಸಿದವು ಎಂಬುದನ್ನು ಹೆಚ್ ಕೋಮರ್ the legacy of Islam ಎಂಬ ಗ್ರಂಥದಲ್ಲಿ ದಾಖಲಿಸುತ್ತಾರೆ.ಅಂತಹ ಕೃತಿಗಳು ಅಪರಿಚಿತ ಜೀವನದ ಸನ್ನಿವೇಶಗಳ ಮೂಲಕ ಪ್ರಯಾಣಿಸಿದ ಜೀವನದ ವೈವಿಧ್ಯಮಯ ಅರ್ಥಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತವೆ.
ಇಸ್ಲಾಮಿನಲ್ಲಿ ಒಬ್ಬ ಮುಸ್ಲಿಮನಿಗೆ ಒಂದು ಅನಿವಾರ್ಯವಾದ ಕಾರ್ಯವಾಗಿದೆ ಪವಿತ್ರ ಹಜ್ಜ್.
ಹಜ್ಜ್ ನಿರ್ವಹಿಸಲು ಮಾಡುವ ಯಾತ್ರೆಯು ಪ್ರವಾದಿಯವರ ಕಾಲದ ಮುಂಚೆಯು ಅದರ ನಂತರವೂ ನಡೆಯುತ್ತಿತ್ತು. ಇಂತಹ ಯಾತ್ರೆಗಳಿಂದ ಲಭಿಸುವ ಅನುಭವ ಕಥೆಯು ನಂತರ ಕಾಲದಲ್ಲಿ ರಿಹ್ಲಾಗಳ ಭಾಗವಾಗಿದೆ. ಮಧ್ಯಕಾಲೀನ ಮುಸ್ಲಿಂ ಯಾತ್ರಿಕರು ಯಾತ್ರೆ ಮೊದಲ ಹಂತವೆಂಬಂತೆ ಮಕ್ಕಾಗೆ ಹಜ್ಜ್ ಗಾಗಿ ತಿರುಗಿಸುತ್ತಿದ್ದರು.
ಮಕ್ಕಾದಿಂದಾ ಲಭಿಸಿದ ಆತ್ಮ ಧೈರ್ಯವು ಅವರನ್ನು ಪ್ರಪಂಚದ ವಿವಿಧ ಭಾಗಗಳಿಗೆ ಪ್ರಯಾಣಿಸುವಂತೆ ಮಾಡುವುದು ಕಾಣಬಹುದು.
ಪ್ರಯಾಣದ ಪಾತ್ರವನ್ನು ನಿರ್ಧರಿಸುವಲ್ಲಿ ಹಜ್ ತೀರ್ಥಯಾತ್ರೆಯು ನೀಡುವ ಪ್ರೇರಣೆಯೇ ಕಾರಣ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಇತಿಹಾಸದಲ್ಲಿ ಹೆರೊಡೋಟಸ್ ಹಾಗೂ ಪೌಸನಿಯಸ್ ನ ನಂತರ ಅತೀ ಹೆಚ್ಚು ಪ್ರವಾಸಕಥನಗಳನ್ನು ರಚಿಸಿದ್ದು ಮುಸ್ಲಿಂ ಸಂಚಾರಿಗಳಾಗಿದ್ದಾರೆ. ಸ್ಥಳ ಮತ್ತು ಸಮಯವು ಅಪ್ರಸ್ತುತವಾಗಿರುವ ಇಂತಹ ಪ್ರಯಾಣಗಳು ಮಾನವನ ಸಂಸ್ಕೃತಿಗಳ ಆತ್ಮಕ್ಕೆ ಕೊಂಡೊಯ್ಯುವ ಪ್ರಯಾಣಗಳಾಗಿವೆ ಎಂದು ಅಲ್ ಬಿರೂನಿ ಗಮನಿಸುತ್ತಾರೆ (The Book of Demarkation of limits of areas).
ಆಧುನಿಕ ಶೈಲಿಯ ಪ್ರಯಾಣಕ್ಕೆ ಹತ್ತಿರವಾಗುವ ಇಂತಹ ರಿಹ್ಲಾಗಳು ಮೌಲ್ಯಯುತವಾದ ಮರು ಓದಿಗೆ ಕರೆ ನೀಡುತ್ತವೆ.
ಮೂಲ: ಆಸಫ್ ಅಲವಿ
ಅನು: ಅರ್ಷದ್ ಕಳಾಯಿ