ರೂಮಿಯ ಪಟ್ಟಣದಲ್ಲೊಂದು ಪ್ರೇಮ ಯಾನ: ಭಾಗ ಒಂದು

ಇಸ್ತಾಂಬುಲ್‌ನಿಂದ ಸುಮಾರು 716 ಕಿ.ಮೀ ದೂರದಲ್ಲಿರುವ ಟರ್ಕಿಯ ಹೃದಯಭಾಗದಲ್ಲಿ ಬೆಚ್ಚಗೆ ಮಲಗಿರುವ ಪುಟ್ಟದಾದ ನಗರವೇ ಕೋನ್ಯಾ. ಮೌಲಾನಾ ಜಲಾಲುದ್ದೀನ್ ರೂಮಿ ಮತ್ತು ‘ಸಮಾ’ ನೃತ್ಯ ನನ್ನನ್ನು ಈ ಶಹರಕ್ಕೆ ಬರಮಾಡಿಕೊಂಡಿತೋ ಅಥವಾ ಜಿಯಾವುದ್ದೀನ್ ಸರ್ದಾರ್ ಅವರ ‘ಡೆಸ್ಪರೇಟ್ಲೀ ಸೀಕಿಂಗ್ ಪ್ಯಾರಡೈಸ್’ ಪುಸ್ತಕದ ಕೆಲವು ಪುಟಗಳು ಮತ್ತು ಎಲಿಫ್ ಶೆಫಾಕ್ ಅವರ ‘ಫೋರ್ಟೀ ರೂಲ್ಸ್ ಆಫ್ ಲವ್’ ಕಾದಂಬರಿಯ ಪ್ರಣಯಭರಿತ ಸಾಲುಗಳು ನನಗೆ ಆ ಊರೇ ಬಲು ಪ್ರೀತಿಯಿಂದ ಖುದ್ದಾಗಿ ಕಳುಹಿಸಿಕೊಟ್ಟಿರುವ ಕರೆಯೋಲೆಯಂತೆ ಕಾಣಿಸಿತೋ ಗೊತ್ತಿಲ್ಲ. ನಾನಂತೂ ಒಂದು‌ ಪುಟ್ಟ ಮಗುವಿನಂತೆ ಕೋನ್ಯಾದ ಮಡಿಲನ್ನು ಸೇರಿಕೊಂಡು ಬಿಟ್ಟಿದ್ದೆ. ಸುಮಾರು ಹನ್ನೊಂದು ಗಂಟೆಗಳ ದೀರ್ಘ ಯಾತ್ರೆಯ ಬಳಿಕ ಕೋನ್ಯಾದಲ್ಲಿ ರೈಲು ತನ್ನ ನೀಳವಾದ ನಿಟ್ಟುಸಿರು ಬಿಡುತ್ತಿದ್ದರೆ ಅಲ್ಲಿ ಸಮಾ ಸಂಗೀತದ ನಿನಾದ ಮೆತ್ತಗೆ ಕೇಳಿಸುತ್ತಿತ್ತು. ಕೋನ್ಯಾ ಬಸ್ ನಿಲ್ದಾಣಕ್ಕೆ ತಲುಪುವ ಯಾವೊಬ್ಬ ಯಾತ್ರಿಕನನ್ನೂ ಮೊದಲಾಗಿ ಸ್ವಾಗತಿಸುವುದು ಸಮಾದ ಇದೇ ಇಂಪಾದ ಸಂಗೀತದ ಸ್ವರಮೇಳಗಳು. ಟರ್ಕಿಶ್ ನಿರ್ದೇಶಕ ಫಾತಿಹ್ ಅಕಿನ್ ಬರೆದ ‘ಕ್ರಾಸಿಂಗ್ ದಿ ಬ್ರಿಡ್ಜ್: ದಿ ಸೌಂಡ್ ಆಫ್ ಇಸ್ತಾಂಬುಲ್’ ಸಾಕ್ಷ್ಯಚಿತ್ರದ ಆರಂಭದಲ್ಲಿ ಹೀಗಿದೆ: If you want to know a civilization you should listen its music, music can reveal you everything about a place (ನೀವು ಒಂದು ನಾಗರಿಕತೆಯ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಅಲ್ಲಿನ ಸಂಗೀತವನ್ನು ಆಲಿಸಿ! ಸಂಗೀತವು ಆ ಮಣ್ಣಿನ ಸೊಗಡೆಲ್ಲವನ್ನು ನಿಮ್ಮ ಮುಂದೆ ಅನಾವರಣಗೊಳಿಸುತ್ತದೆ).
ಕೋನ್ಯಾ ಪಟ್ಟಣವನ್ನು ತಲುಪಿದ ನಾನು ಸ್ನೇಹಿತ ಮುಹಮ್ಮದಲಿಯ ಆಗಮನದ ನಿರೀಕ್ಷೆಯಲ್ಲಿದ್ದೆ. ‘ಕೋನ್ಯಾ: ದಿ ಸಿಟಿ ಆಫ್ ಹಾರ್ಟ್ಸ್’ ಎಂಬ ನೇರವಾಗಿ ಎದೆಗೆ ಇಳಿದು ಬಿಡಬಹುದಾದ
ಫಲಕವೊಂದು ದೂರದಿಂದಲೇ ನಮ್ಮನ್ನು ಕೈಬೀಸಿ ಕರೆಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಸದಾ ಗಿಜಿಗುಡುವ ನಗರ ಇಸ್ತಾಂಬುಲ್‌ನಿಂದ ಕೋನ್ಯಾಕ್ಕೆ ತಲುಪಿದರೆ ಅದೊಂದು ಶಾಂತ ಸುಂದರವೂ ಮನೋಹರವೂ ಆದ ಮೌನದ ನಗರವೆಂದು ನಿಮಗೆ ಅನಿಸತೊಡಗುತ್ತದೆ.

ಒಲವನ್ನು ತನ್ನೊಡಲಲ್ಲಿ ಕಾಪಿಟ್ಟು ಕಾಯುವ, ಪ್ರೀತಿಗಾಗಿ ಪ್ರತಿ ನಿಮಿಷವೂ ಮಿಡಿಯುವ ಆ ಶಹರದ ಎದೆಬಡಿತವು ನಿಮಗೆ ಕೇಳಿಸುವಷ್ಟು ಮೌನದಿಂದಿರುವ ನಗರಿಯದು. ಮೌಲಾನಾ ರೂಮಿಯ ಆತ್ಮವನ್ನು ತನ್ನ ಬಗಲಲ್ಲಿಟ್ಟುಕೊಂಡಿರುವ ಕಾರಣಕ್ಕಾಗಿಯೇ ಆ ಮಣ್ಣಿಗೆ ಈ ಮೌನ, ಒಲುಮೆಯ ದಾಹ ಸರಾಗವಾಗಿ ಬಂದು ಸೇರಿಕೊಂಡಿರಬೇಕೆಂದು ನನಗನಿಸುತ್ತಿತ್ತು. ಈ ಊರಿನ ನಿನ್ನೆಗಳನ್ನು ತಿರುವಿನೋಡಿದರೆ ಇತಿಹಾಸ ಪುಟದಲ್ಲಿ ಪ್ರಸ್ತಾಪಿಸಲ್ಪಟ್ಟ ಕೆಲವೊಂದು ಅಪರೂಪದ, ಅಚ್ಚರಿಯ ಘಟನೆಗಳೂ ಕಾಣಸಿಗುವುದುಂಟು.
ಪ್ರವಾಹದಿಂದ ಹಾನಿಗೊಳಗಾಗಿ ಶೂನ್ಯದಿಂದ ಬದುಕು ಕಟ್ಟಿಕೊಂಡ ಮೊದಲ ನಗರವಾಗಿದೆ ಕೋನ್ಯಾ ಎಂದು ಜಿಯಾವುದ್ದೀನ್ ಸರ್ದಾರ್ ತನ್ನ ಕೃತಿಯಲ್ಲಿ ಉಲ್ಲೇಖಿಸುತ್ತಾರೆ.
ಸ್ವರ್ಗವನ್ನು ಅರಸುತ್ತ ಸಾಗಿದ ಈ ನನ್ನ ಪಯಣದುದ್ದಕ್ಕೂ ಸರ್ದಾರ್ ಅವರ ‘ಡೆಸ್ಪರೇಟ್ಲೀ ಸೀಕಿಂಗ್ ಪ್ಯಾರಡೈಸ್’ ಪುಸ್ತಕದ ಕೆಲವು ಪುಟಗಳನ್ನು ಮತ್ತೆಮತ್ತೆ ಆವರ್ತಿಸಿ ಓದಿಕೊಂಡದ್ದಿದೆ. ಇಮ್ಮಡಿ ರಾಮೆಸ್ಸೆಸ್ ತನ್ನ ಹೆಣ್ಣುಮಗಳೊಬ್ಬಳನ್ನು ಇಲ್ಲಿಯೇ ಲಗ್ನಮಾಡಿಕೊಟ್ಟನೆಂದೂ, ಅಪೊಸ್ತಲ ಬರ್ನಬಸ್ ಮತ್ತು ಅವನ ಶಿಷ್ಯನಾಗಿರುವ ಸಂತ ತಿಮೋತಿ ಸುವಾರ್ತೆಯನ್ನು ಮೊದಲಬಾರಿಗೆ ಇಲ್ಲಿಯೇ ಭೋದಿಸಿದರೆಂದೂ, ಮೊದಲ ಕ್ರೈಸ್ತ ಸಮುದಾಯಗಳ ಹುಟ್ಟು ಇಲ್ಲೇ ನಡೆಯಿತೆಂದೂ ಆರಂಭಿಕ ಚರ್ಚಿನ ಸಭೆಗಳು ಈ ನಗರ ಮತ್ತು ಇದರ ಆಸುಪಾಸಿನ ಪ್ರದೇಶಗಳಲ್ಲಿ ಜರುಗಿದ್ದವೆಂದೂ ಸರ್ದಾರ್ ದಾಖಲಿಸಿದ್ದಾರೆ. ಇಮ್ಮಡಿ ರಾಮೆಸ್ಸೆಸ್ ನಿಂದ ಹಿಡಿದು ಸಲ್ಜೂಕ್ ರಾಜವಂಶದ ಆಡಳಿತ ಅವಧಿಯವರೆಗಿನ ಕೋನ್ಯಾದ ಪ್ರೌಢಿಮೆ ಅಪಾರವಾದದ್ದಾದರೂ ಮೌಲಾನ ರೂಮಿಯ ಕಾಲದಲ್ಲಿ ಜಗತ್ತು ಈ ಊರಿನ ಕಡೆಗೆ ಬೆರಗುಗೊಂಡು ಹುಬ್ಬೇರಿಸಿ ನೋಡಲು ಶುರುಮಾಡುತ್ತದೆ. ಇದೊಂದು ಚಾರಿತ್ರಿಕ ಸತ್ಯವೂ ಹೌದು.
ಕೋನ್ಯಾ ಪಟ್ಟಣದಲ್ಲಿ ಇಳಿದ ಬಳಿಕ ಅಲ್ಲಿಯ ಪ್ರಯಾಣಕ್ಕಾಗಿ ಪಾಸೊಂದನ್ನು ಪಡೆದುಕೊಂಡ ನಾನು ಫ್ರೆಶ್ ಆಗಲೆಂದು ನನ್ನ ಸ್ನೇಹಿತರು ಅಧ್ಯಯನಗೈಯುತ್ತಿರುವ ನಜ್ಮುದ್ದೀನ್ ಅರ್ಬಕನ್ ಯೂನಿವರ್ಸಿಟಿ ಹಾಸ್ಟೆಲಿನತ್ತ ಟ್ರಾಮ್ ಹಿಡಿದೆ. ನಿಧಾನಕ್ಕೆ ಮೀದು ಅಲ್ಪ ನಿರಾಳವಾದ ಬಳಿಕ ತಣ್ಣನೆಯ ಕುಳಿರ್ಗಾಳಿಯನ್ನು ಹೀರುತ್ತಾ ಜುಮಾ ನಮಾಝಿಗಾಗಿ (ಶುಕ್ರವಾರದ ವಿಶೇಷ ಪ್ರಾರ್ಥನೆ) ಮೌಲಾನಾ ನಗರದತ್ತ ಹೆಜ್ಜೆ ಹಾಕಿದೆವು.
ಮೂರು ವರ್ಷಗಳಿಂದ ಕೋನ್ಯಾದಲ್ಲೇ ಇರುವ ಮೊಹಮ್ಮದ್ ಅಲಿ ಹೇಳಿದಂತೆ ಕೊನ್ಯಾದ ಜನರು ಸಾಮಾನ್ಯವಾಗಿ ಯಾತ್ರೆಯಲ್ಲಿ ಮೌನಿಗಳಾಗುತ್ತಾರೆ. ಒಂದು ರೀತಿಯಲ್ಲಿ ಅಂತರ್ಮುಖಿಗಳಾಗಿಬಿಡುತ್ತಾರೆ. ಆ ದಿನ ಒಂದರ್ಥದಲ್ಲಿ ನೀರವ ಮೌನವೇ ನನ್ನ ಯಾತ್ರೆಯ ಸಂಗಾತಿಯಾಗಿತ್ತೆಂದು ಹೇಳಬೇಕು. ಯಾವ ಒಡನಾಡಿಗೂ ಕಡಿಮೆಯಿಲ್ಲದ ಮೌನದ ಸೆರಗನ್ನು ಹಿಡಿದು ಕಿಟಕಿಯ ಬಳಿಯಲ್ಲಿ ಒಬ್ಬನೇ ಕುಳಿತಿದ್ದೆ. ಮೌನದ ಜೊತೆಗಿನ ಒಡನಾಟ ತೆರೆದಿಡುವ ಬದುಕಿನ ಬಗೆಗಿನ ಒಳನೋಟಗಳು ಮನುಷ್ಯನಿಗೆ ಎಷ್ಟು ಅಗತ್ಯ ಎಂದು ನನ್ನಲ್ಲೇ ಕೇಳಿಕೊಳ್ಳುತ್ತಾ ಕುಳಿತಿದ್ದ ಕ್ಷಣವದು. ಯಾಕೋ ಏಕಾಂತವು ಸಾಕೆನಿಸಿ ನನ್ನ ಸಣ್ಣ ಬ್ಯಾಗ್ ನಿಂದ ಇಯರ್‌ಫೋನನ್ನು ಹೊರಗೆಳೆದು ಆಬಿದಾ ಪರ್ವೀನ್ ಹಾಡಿದ ‘ಆಖಾ’ ಹಾಡನ್ನು ಟ್ಯೂನ್ ಮಾಡಿದೆ. ‘ಯೆ ಸಬ್ ತುಮಾರಾ ಕರಮ್ ಹೈ ಮೌಲಾ’ ಸಾಲುಗಳು ಕೇಳುತ್ತಿದ್ದಂತೆ ನನ್ನ ಕಣ್ಣುಗಳು ಆಬಿದಾಜಿಯ ಆ ಹಾಡಿನ ಲಯದೊಂದಿಗೆ ಮೆತ್ತಗೆ ತಲೆದೂಗುತ್ತಾ ನನಗರಿವಿಲ್ಲದಂತೆಯೇ ತೇವಗೊಂಡಿದ್ದವು.
ನಾವು ನಗರವನ್ನು ತಲುಪುವ ಹೊತ್ತಿಗೆ ಕೋನ್ಯಾದ ಒಂದಿಷ್ಟು ಕಥೆಗಳನ್ನು ಗೆಳೆಯರಾದ ಉಮರ್ ಟಿ, ಎನ್.ಮೊಹಮ್ಮದ್ ಅಲಿ, ಶಫೀಕ್ ಉತ್ಸಾಹದಿಂದ ಹಂಚಿಕೊಂಡಿದ್ದರು. ಅವರಲ್ಲಿ ಕೋನ್ಯಾದ ಬಗೆಗೆ ವಿಶೇಷವೆನಿಸುವ ಮೋಹವಿರುವುದು ಸ್ಪಷ್ಟವಾಗಿ ಗೊತ್ತಾಗುವಂತಿತ್ತು. ಕೇಳುಗರಿಲ್ಲದೆ ಒದ್ದಾಡುವ ಅಜ್ಜಿಯಂತೆ ತನ್ನೊಳಗೆ ಸಾವಿರ ಕಥೆಗಳನ್ನು ಹುದುಗಿಕೊಂಡು ಮೌನವಾಗಿ ಕುಳಿತಿರುವ ಒಂದಿಷ್ಟು ಪುರಾತನ ಪ್ರತಿಮೆಗಳು, ಪಾಳುಬಿದ್ದ ಕಟ್ಟಡಗಳು ಮತ್ತು ಚರ್ಚುಗಳು ಅಲ್ಲಿದ್ದವು. ಅವುಗಳನ್ನು ನೋಡುವುದೇ ಒಂದು ವಿಶಿಷ್ಟ ಅನುಭೂತಿಯೆಂದು ಹೇಳಬೇಕಿಲ್ಲ ತಾನೇ?!
ಬಳಿಕ ನಾವು ಊಟಕ್ಕೆಂದು ರೆಸ್ಟೋರೆಂಟುಗಳನ್ನು ಹುಡುಕುತ್ತಿದ್ದಾಗ ಅಲ್ಲಿಯ ಹೋಟೆಲುಗಳ ಹೆಸರುಗಳು ಸೂಫಿಸಮ್ಮಿನ ಅತ್ತರಿನ ಘಮವನ್ನು ಸ್ಫುರಿಸುತ್ತಿದ್ದದ್ದನ್ನು ಕಂಡು ಒಳಗೊಳಗೆ ಹಿಗ್ಗಿಕೊಂಡಿದ್ದೆ. ಅವುಗಳಲ್ಲಿ ಸೂಫಿ ಕಬಾಬ್, ಸೂಫಿ ರೆಸ್ಟೋರೆಂಟ್, ಮಥ್ಅಮ್(ಹೋಟೆಲ್) ಮೌಲಾನಾ, ಸಮಾ ರೆಸ್ಟೋರೆಂಟ್, ದರ್ವೇಶ್ ಹೋಟೆಲ್ ಮುಂತಾದ ಸೊಗಸಾದ ಹೆಸರುಗಳಿದ್ದವು. ಕೊನ್ಯಾದ ಜನರ ದೈನಂದಿನ ಬದುಕು, ಸಂಸ್ಕೃತಿ ಮತ್ತು ಜೀವನಶೈಲಿ ಈ ಹೋಟೆಲುಗಳಲ್ಲಿ ಹಾಗೂ ಅಂಗಡಿ ಮುಗ್ಗಟ್ಟುಗಳಲ್ಲಿ ನೇರವಾಗಿ ಪ್ರತಿಫಲನಗೊಂಡದ್ದು ಕಾಣುತ್ತಿದ್ದವು. ಒಂದಿಷ್ಟು ಹುಡುಕಾಟದ ತರುವಾಯ ‘ಸಮಾ ರೆಸ್ಟೋರೆಂಟ್‌’ನಿಂದ ಕೋನ್ಯಾದ ಸ್ಪೆಷಲ್ ಡಿಶ್ ‘ಬೊರಾಕ್’ಅನ್ನು ಸವಿದು ಜುಮಾ ನಮಾಝಿಗಾಗಿ ರೂಮಿಯ ಮಸೀದಿಯತ್ತ ಹೆಜ್ಜೆ ಬದಲಿಸಿದೆವು. ಕೋನ್ಯಾದ ಜನರಲ್ಲಿ ರೂಮಿ ಮಸೀದಿಯೆಂದರೆ ಅವರೊಂದು ಕ್ಷಣ ತಬ್ಬಿಬ್ಬಾಗಿ ಅತ್ತಿತ್ತ ನೋಡುತ್ತಾರೆ. ಕೋನ್ಯಾದಲ್ಲೆಲ್ಲೂ ನಿಮಗೆ ರೂಮಿಯೆಂಬ ಹೆಸರನ್ನು ಕೇಳಸಿಗುವುದೇ ಇಲ್ಲ ಎನ್ನಬಹುದೇನೊ. ಅವರು ರೂಮಿಯನ್ನು ಉಸ್ತಾದ್(ಗುರುಗಳು) ಎಂಬರ್ಥವಿರುವ ‘ಮೌಲಾನಾ’ ಅಥವಾ ‘ಮೆವ್‌ಲಾನಾ’ ಎಂದೇ ಸಂಭೋದಿಸುವುದು. ನಮ್ಮ ನೆಚ್ಚಿನ ರೂಮಿ ಕೋನ್ಯಾದ ಜನರ ಮನಸ್ಸುಗಳಲ್ಲಿ ಮೌಲಾನರಾಗಿಹೋದದ್ದು ನನಗೆ ಸೋಜಿಗವೆನಿಸಿತ್ತು. ಕೊನೆಗೂ ಮೌಲಾನಾರ ಮಸೀದಿಯನ್ನು ಕಂಡುಹಿಡಿದು ಅತ್ತ ಧಾವಿಸಿದೆವು.

ಶುಕ್ರವಾರದ ಪ್ರಾರ್ಥನೆಯನ್ನು ಮುಗಿಸಿ ಮಸೀದಿಯಿಂದ ಹೊರಬೀಳುತ್ತಲೇ ಗೆಳೆಯರು ರೂಮಿಯ ಸಮಾಧಿಯ ಬಗಲಲ್ಲಿ ಇಕ್ಬಾಲರ ಸಾಂಕೇತಿಕ ಸಮಾಧಿ ಇದೆಯೆಂದೂ ಮೊದಲು ಅಲ್ಲಿಗೆ ಹೋಗಿ ಬಳಿಕ ರೂಮಿಯ ಸಮಾಧಿಯನ್ನು ಸಂದರ್ಶಿಸುವುದಾಗಿ ಹೇಳಿದರು. ನಾನು ಉತ್ಸಾಹದಿಂದಲೇ ಅದಕ್ಕೆ ಒಪ್ಪಿಗೆಯನ್ನು ನೀಡಿದೆ. ನನಗೆ ಕುತೂಹಲ, ಸಂತೋಷ ಮತ್ತು ಆಶ್ಚರ್ಯ ಎಲ್ಲವೂ ಒಟ್ಟೊಟ್ಟಿಗೆ ಎದೆಯೊಳಗೆ ಮಗ್ಗುಲು ಬದಲಿಸಿದ ಅನುಭವವಾಗಿತ್ತು. ಆ ಒಂದು ಕ್ಷಣ ರೂಮಿಯನ್ನು ಬಿಟ್ಟು ನನ್ನಿಡೀ ಮನಸ್ಸು ಇಕ್ಬಾಲರಿಂದ ತುಂಬಿಕೊಂಡುಬಿಟ್ಟಿತ್ತು. ‘ಇಕ್ಬಾಲ್..’ ಒಂದು ಉದ್ಗಾರದೊಂದಿಗೆ ನನ್ನೊಳಗೆ ಸಂಚಲನ ಸೃಷ್ಟಿಸಿತ್ತು ಆ ಹೆಸರು. ‘ದಾರುಲ್ ಹುದಾ’‌ ಕಾಲೇಜಿನ ಪಠ್ಯಕ್ರಮದಲ್ಲಿ ಶಿಕ್ಷಕರು ಭೋದಿಸುವ ಕವಿತೆಗಳಲ್ಲಿ ರೂಮಿಯ ಜೊತೆಗೆ ‌ಇಕ್ಬಾಲರ ಕವಿತೆಗಳು ಕೂಡ ಇರುತ್ತಿದ್ದವು. ಇಕ್ಬಾಲರ ಕವಿತೆಯಲ್ಲಿ ‌ಆಗೊಮ್ಮೆ ಈಗೊಮ್ಮೆ ‌ಇಣುಕಿಹೋಗುತ್ತಿದ್ದ ಹೆಸರು ಮಾತ್ರವಾಗಿತ್ತು ರೂಮಿ! ಆ ಕವಿತೆಗಳ ಮೂಲಕವೇ ರೂಮಿಯನ್ನು ನಾನು ಮೊದಮೊದಲು ಕೇಳಿದ್ದು. ಈ ಏಕಮಾತ್ರ ಕಾರಣಕ್ಕಾಗಿಯೇ ಕಾಕತಾಳೀಯವೋ ಎಂಬಂತೆ ಇಕ್ಬಾಲರ ಸಾಂಕೇತಿಕ ಸಮಾಧಿಯನ್ನು ನೋಡಿದ ನಂತರವೇ ‘ಇಕ್ಬಾಲ್ ವಸೀಲಾ’ದ ಮೂಲಕ ಇಕ್ಬಾಲರ ಆಶಿರ್ವಾದದೊಂದಿಗೆ ಮಾತ್ರ ರೂಮಿಯನ್ನು ದರ್ಶಿಸಬೇಕೆಂಬುದು ವಿಧಿಲಿಖಿತವಾಗಿರಬೇಕೆಂದು ಭಾವಿಸಿಕೊಂಡೆ.
ಇಕ್ಬಾಲ್ ಅವರ ಕವಿತೆಗಳಿಗೆ ಒಂದು ವಿಶೇಷ ತೆರನಾದ ಮಾಧುರ್ಯವನ್ನು ಸುರಿದುಕೊಟ್ಟದ್ದೇ ರೂಮಿಯೊಂದಿಗಿನ ನಿಕಟವಾದ ಆತ್ಮಬಂಧವೆನಿಸುತ್ತದೆ. ತನ್ನ ಎಲ್ಲಾ ಕೃತಿಗಳಲ್ಲಿಯೂ ಇಕ್ಬಾಲ್ ರೂಮಿಯನ್ನು ಸುಂದರವಾದ ರೂಪಕವಾಗಿ ಬಣ್ಣಿಸಿರುವುದನ್ನು ನಾನು ಆಗ ನೆನಪಿಸಿಕೊಳ್ಳುತ್ತಿದ್ದೆ.
ರೂಮಿಯ ಪ್ರವಾದಿ ಪ್ರೇಮ(ಇಶ್ಕ್) ಮತ್ತು ಮಸ್ನವಿಯಲ್ಲಿ ಖುರಾನನ್ನು ವ್ಯಾಖ್ಯಾನಿಸಿದ ರೀತಿಗೆ ಮಾರುಹೋಗಿದ್ದ ಇಕ್ಬಾಲರು ತನ್ನನ್ನು ಪ್ರಭಾವಿಸಿದ ಕವಿಗಳಲ್ಲಿ ರೂಮಿ ಅಗ್ರಗಣ್ಯರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
‘The light of the Quran is hidden in his (Rumi’s) breast, the cup of Jam fades in the presence of his mirror’ಎಂದು ಇಕ್ಬಾಲರ ರೂಮಿಯ ಕುರಿತ ಮಾತುಗಳಲ್ಲಿ ಆ ಆತ್ಮೀಯತೆಯನ್ನು ಗ್ರಹಿಸಬಹುದಾಗಿದೆ.
ರೂಮಿಯ ಮಸೀದಿಯ ಬಳಿಯಲ್ಲಿ ಕಟ್ಟಲಾಗಿರುವ ಇಕ್ಬಾಲರ ಸಾಂಕೇತಿಕ ಸಮಾಧಿಯ ಮೇಲೆ ಹೀಗೆ ಬರೆಯಲಾಗಿದೆ; ‘This position was given to Muhammad Iqbal, a national poet and philosopher of Pakistan, in the spiritual presence of his beloved mentor Mavlana. 1965’.

ಪ್ರೇಮಿಗಳ ಕ‌ಅಬಾದೆಡೆಗೆ:

ಇಕ್ಬಾಲರಿಗೆ ಸಲಾಂ ಹೇಳಿ ಮತ್ತೆ ರೂಮಿಯನ್ನು ಅರಸುತ್ತಾ ನಾವಲ್ಲಿಂದ ಮುಂದೆ ನಡೆದೆವು. ಆ ಕ್ಷಣಕ್ಕೆ ಮನಸ್ಸೆಲ್ಲವೂ ರೂಮಿಯೇ ತುಂಬಿಕೊಂಡುಬಿಟ್ಟಿದ್ದರು. ಮೌಲಾನ ರೂಮಿಯ ಕುರಿತಾಗಿ ಓದಿದ ಹಳೆಯ ಕೃತಿಗಳ ಜೊತೆಗೆ ಇತ್ತೀಚೆಗೆ ಓದಿಕೊಂಡ ಮೌಲಾನರ ಕೃತಿ ‘ಫೀಹಿ ಮಾ ಫೀಹಿ’

ಮತ್ತು ವಿಲಿಯಂ ಸಿ ಚಿಟ್ಟಿಕ್ಕ್ ರ ಇಂಗ್ಲಿಷ್ ಅನುವಾದಿತ ತಬ್ರೇಝರ ಆತ್ಮಕಥೆ ‘ಮಿ ಆಂಡ್ ರೂಮಿ’ ಎಂಬೀ ಕೃತಿಗಳ ಹಲವು ಸಾಲುಗಳಲ್ಲಿಯೇ ನನ್ನ ಮನಸ್ಸು ತೇಲಾಡುತ್ತಿತ್ತು. ಆ ಪದ್ಯದ ಸಾಲುಗಳ ಜೋಕಾಲಿಯಲ್ಲಿ ಹೊಯ್ದಾಡಿದಂತೆ ಎದೆಯಲ್ಲಿ ತಣ್ಣನೆಯ ಗಾಳಿಯೊಂದು ಸೋಕಿದ ಅನುಭೂತಿಯಾಗುತ್ತಿತ್ತು.

ಮುಂದೆ ನೋಡಿದರೆ ಸಮಾಧಿಯ ಪ್ರವೇಶದ್ವಾರದ ಬಳಿ ಸಂದರ್ಶಕರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹೆಚ್ಚಾಗಿ ವಿದೇಶಿಯರು! ಚೀನೀಯರು ಮತ್ತು ಜಪಾನಿಗರನ್ನು ಹೋಲುವ ವಿಭಿನ್ನ ಚಹರೆಯ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಮತ್ತು ಇರಾನಿಯನ್ನರಂತೆ ಕಾಣುವ ಮಹಿಳೆಯರೂ ಬಹಳಷ್ಟಿದ್ದರು. ಅವರಲ್ಲಿ ಧಾರ್ಮಿಕ ಚಿಹ್ನೆಗಳಿದ್ದವರು, ಇಲ್ಲದವರು, ಆಸ್ತಿಕರು, ನಾಸ್ತಿಕರು ಎಲ್ಲರೂ ಇದ್ದರು. ರೂಮಿಯ ಕರೆಗೆ ವರುಷಗಳ ಬಳಿಕ ಓಗೊಟ್ಟು ಬಂದ ಯಾತ್ರಾರ್ಥಿಗಳು ಆ ಸನ್ನಿಧಿಯಲ್ಲಿ ತುಂಬಿ ಹೋಗಿದ್ದರು. ರೂಮಿ ಜನಹೃದಯಗಳನ್ನು ತಟ್ಟಿ ಕರೆದದ್ದೇ ಹೀಗೆ! “ನೀವು ಯಾರೇ ಆಗಿದ್ದರೂ ನನ್ನೆಡೆಗೆ ಬನ್ನಿ. ನೀವು ಧರ್ಮ ವಿಶ್ವಾಸಿಯೋ, ಪ್ರಾಚೀನ ಧರ್ಮದವರೋ, ಅಗ್ನಿ ಆರಾಧಕರೋ ಯಾರಾದರೂ ಬನ್ನಿ. ನಮ್ಮದು ಹತಾಶೆಯ ಸಹೋದರ ಗುಂಪು ಖಂಡಿತಾ ಅಲ್ಲ. ನೀವು ಪಶ್ಚಾತ್ತಾಪದ ಒಡಂಬಡಿಕೆಯನ್ನು ಸಾವಿರ ಬಾರಿ ಮುರಿದಿರಬಹುದು. ಆದರೂ ಬನ್ನಿ.”

ವಾಸ್ತವದಲ್ಲಿ, ಬೃಹತ್ತಾದ ಗೋರಿಗಳನ್ನು ಕಟ್ಟುವುದು ಮತ್ತು ಸಮಾಧಿಗಳನ್ನು ಎತ್ತಿಕಟ್ಟುವುದರ ಬಗೆಗೆ ರೂಮಿಗೆ ತನ್ನದೇ ಆದ ಕೆಲವೊಂದು ತಕರಾರುಗಳಿದ್ದವು. ತಮ್ಮ ಸವಿನೆನಪಿಗಾಗಿ ಒಂದೊಳ್ಳೆಯ ವೈಭವದ ಸಮಾಧಿಯನ್ನು ಕಟ್ಟುವ ಕುರಿತು ಶಿಷ್ಯರು ರೂಮಿಯನ್ನು ಕೇಳಿಕೊಂಡಾಗ “ಆಕಾಶಕ್ಕಿಂತ ವಿಶಾಲವಾದ, ಮಿಗಿಲಾದ ಗುಂಬಜ್ ಎಲ್ಲಿಯಾದರು ಇರಲಿಕ್ಕೆ ಸಾಧ್ಯವೇ?” ಎಂದು ತಿರುಗಿ ಕೇಳಿದ್ದರಂತೆ. ನಂತರ, ರೂಮಿಯ ಮರಣದ ಬಳಿಕ, ಅವರ ಮಗನ ಅನುಮತಿಯೊಂದಿಗೆ, ಪರ್ಷಿಯನ್ ವಾಸ್ತುಶಿಲ್ಪಿ ಬದ್ರುದ್ದೀನ್ ಇಲ್ಲಿ ಒಂದು ಸಣ್ಣ ಸ್ಮಾರಕವನ್ನು ನಿರ್ಮಿಸಿದರು. ಕಾಲಗಳು ಕಳೆದ ಅನಂತರದ ದಿನಗಳಲ್ಲಿ ಆಡಳಿತಗಾರರು ರೂಮಿಯ ಸಮಾಧಿಯನ್ನು ಅರಮನೆಯಂತೆ ಭವ್ಯವಾಗಿ ನಿರ್ಮಿಸಿದರು.
ನಾವು ರೂಮಿಯ ಸಮಾಧಿಯ ದರ್ಬಾರಿನ ಬಳಿಗೆ ಸಮೀಪಿಸಿದೆವು. ಅಲ್ಲಿ ಪ್ರೇಮಭಾವ ಸ್ಫುರಿಸುವ ಒಂದು ವಿಶೇಷವಾದ ಅನುಭೂತಿಯ ವಾತಾವರಣವಿದ್ದಿತು. ಜೊತೆಜೊತೆಗೆ ಅತ್ತರಿನ ಮತ್ತು ಬರಿಸುವ ಮೋಹಕವೆನಿಸುವ ಘಮ. ದಿವಾನ್ ಶಮ್ಸಿನ ಎರಡು ಸಾಲುಗಳನ್ನು ಬಾಗಿಲಿನ ಮೇಲ್ಭಾಗದಲ್ಲಿ ಆ ಸನ್ನಿಧಿಗೆ ಆಗಮಿಸುವ ಪ್ರೇಮ ಪಥಿಕರಿಗಾಗಿ ಕೆತ್ತಿರುವಂತೆ ಕಾಣುತ್ತಿತ್ತು. ಆ ಎರಡು ಸಾಲುಗಳ ಅರ್ಥ ಹೀಗಿದೆ, “ಈ ಸನ್ನಿಧಿಯು ಪ್ರೇಮಿಗಳ ಕ‌ಅಬಾ (ಕೇಂದ್ರ) ಆಗಿದೆ. ಇಲ್ಲಿ ಅಪೂರ್ಣರಾಗಿ ಬರುವವರೆಲ್ಲರೂ ಪೂರ್ಣರಾಗಿಯೇ ಮರಳುತ್ತಾರೆ”.
ಸಮಾಧಿಯ ಬಾಗಿಲಿನ ಮೂಲಕ ಒಳಹೊಕ್ಕಾಗ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಅನೇಕ ಸುಂದರವಾದ ಕ್ಯಾಲಿಗ್ರಫಿಯನ್ನು ನೋಡಬಹುದು. ಒಂದಿಷ್ಟು ಕವನಗಳ ಸಾಲುಗಳು‌ ಮತ್ತು ದೀರ್ಘಪದ್ಯಗಳನ್ನು ಅಲ್ಲಿನ ಕಲ್ಲುಗಳ ಮೇಲೆ ಕೆತ್ತಲಾಗಿದೆ. ಕಂಬಳಿಯಂತ ದಪ್ಪನೆಯ ಚಾದರಗಳಲ್ಲಿ ಕೈಯ್ಯಲ್ಲೇ ಹೊಲಿದ ಅರಬಿಕ್ ಅಕ್ಷರಗಳು ವಿಶಿಷ್ಠವಾಗಿ ಆಕರ್ಷಿಸುವಂತಿದೆ. ಸುಲ್ತಾನ್ ಅಬ್ದುಲ್ ಹಮೀದ್ ನ ಆಳ್ವಿಕೆಯಲ್ಲಿ ಸಮಾಧಿಯನ್ನು ಕುರ್‌ಆನಿನ ವಚನಗಳಿಂದ ನೇಯ್ದ ಬಟ್ಟೆಯಿಂದ ತಯಾರಿಸಿದ ವಿಶೇಷ ಹೊದಿಕೆಗಳಿಂದ ಅಲಂಕರಿಸಲಾಯಿತೆಂದು ತಿಳಿದುಕೊಂಡೆವು. ರೂಮಿಯ ತಂದೆ, ಮಗ, ಸುಲ್ತಾನ್ ವಲೀದ್ ಸೇರಿದಂತೆ ಅವರ ಕುಟುಂಬದ ಅನೇಕ ಸದಸ್ಯರ ಸಮಾಧಿಗಳು ರೂಮಿಯ ಗೋರಿಗೆ ಆಸುಪಾಸಿನಲ್ಲಿ ಸ್ಥಾಪಿಸಲಾಗಿದೆ. ಪ್ರತಿ ಸಮಾಧಿಯ ತಲೆಯ ಮೇಲೆ ಪೇಟದಂತಹ ಟೋಪಿ ಇದೆ. ಇದನ್ನೆಲ್ಲಾ ಮೀರಿಸುವಂತೆ ಮೌಲಾನ‌ ರೂಮಿಯವರು ಅಪ್ಪಟ ಮಹಾರಾಜರ ಠೀವಿಯಲ್ಲಿ ಸೂಫಿಗಳ ಕಿರೀಟವನ್ನು ತೊಟ್ಟು ಎಲ್ಲವನ್ನು ಮತ್ತು ಎಲ್ಲರನ್ನು ಆತ್ಮೀಯವಾಗಿ ಮುನ್ನಡೆಸುತ್ತಿರುವಂತೆ ಮಲಗಿರುವುದನ್ನು ಕಾಣುವುದು ನಮ್ಮ ಕಣ್ಣುಗಳಿಗೆ ಹಬ್ಬ ಮತ್ತು ಹೆಮ್ಮೆಯ ನೋಟವೆನಿಸುತ್ತದೆ. ರೂಮೀ ಅಭಿಮಾನಿಗಳಿಗೆ ಇದಕ್ಕಿಂತಲೂ ಮೋಹಕವೆನಿಸುವ ನೋಟವೊಂದು ಇರಲಾರದೆಂದರೆ ನೀವು ನಂಬಲೇಬೇಕು!


ಅಲ್ಲಿ ಸುತ್ತಲೂ ದಪ್ಪನೆಯ ಶ್ವೇತವರ್ಣದ ಲೋಹದಲ್ಲಿ ನಿರ್ಮಿಸಲಾದ ಗೋಳಾಕಾರದ ಕಮಾನುಗಳಿವೆ. ಒಳಗೆ ಎತ್ತರದಲ್ಲಿ ಚಿರನಿದ್ರೆಯಲ್ಲಿರುವ ರೂಮಿಯ ಸಮಾಧಿ. ಅದರ ಸ್ವಲ್ಪವೇ ಮೇಲೆಯಾಗಿ ಹಸಿರು ಅಂಚುಗಳನ್ನು ಹೊಂದಿರುವ ಭವ್ಯವಾದ ನೀಲಿ ಗುಮ್ಮಟವೂ ಇದೆ! ರೂಮಿಯ ಗೋರಿಯನ್ನು ಹಸಿರು ಬಟ್ಟೆಯಿಂದ ಹೊದಿಸಲಾಗಿದ್ದು, ಕುರಾನ್‌ನ ಶ್ಲೋಕಗಳನ್ನು ಸುಂದರವಾಗಿ ಚಿನ್ನದ ದಾರದಿಂದ ನೇಯಲಾಗಿದೆ. ‘ಮಸ್ನವಿಯ’ ಮತ್ತು ‘ದಿವಾನ್ ಕಬೀರ್’ ಕಾವ್ಯಗಳ ತುಣುಕುಗಳು ವಿಶ್ವದ ವಿಚಾರಗಳನ್ನು ಬೊಟ್ಟುಮಾಡಿ ತೋರಿಸುತ್ತಿರುವಂತೆ ಸಮಾಧಿಯ ಸುತ್ತಲೂ ಚಂದದ ಹಸ್ತಾಕ್ಷರದಲ್ಲಿ ಬರೆಯಲಾಗಿದೆ. ನಾವು ಅವುಗಳನ್ನೆಲ್ಲಾ ನೋಡುತ್ತಾ ನಮ್ಮನ್ನೇ ಮರೆತು ಬಿಟ್ಟಿದ್ದೆವು. ಅಷ್ಟೊಂದು ಸೊಗಸಾದ ಕಸೂತಿಯಾಗಿದ್ದವು ಅವುಗಳು.
ಬಳಿಕ, ನಾವು ಒಳಗೆ ಪ್ರವೇಶಿಸುತ್ತಿರುವಂತೆ ಆ ದರ್ಬಾರಿನ ದಾರವಂದದ ಮೇಲೆ ಬರೆದಿಡಲಾದ ‘ಈ ಸನ್ನಿಧಿ ಪ್ರೇಮಿಗಳ ಕ‌ಅಬಾ’ಎಂಬ ಸಾಲುಗಳು ನಮ್ಮೆದೆಯಲ್ಲೊಂದು ಇಶ್ಕಿನ ಕಡಲನ್ನು ತೆರೆದಿಡುತ್ತದೆ. ನಿಜಕ್ಕೂ ಆ ಸನ್ನಿಧಿ ಮೊಹಬ್ಬತಿನ ಸಾಗರದಲ್ಲಿ ಅದ್ದಿ ತೆಗೆದಿರುವ ಇಶ್ಕಿನ ಇಟ್ಟಿಗೆಗಳಿಂದ ಕಟ್ಟಲಾಗಿರುವ ಆಶಿಕುಗಳ ಕ‌ಅಬಾವೇ ಆಗಿದೆ. ಆ ಪ್ರೇಮ ಗೋಪುರದ ಪ್ರಾಕಾರಗಳ ಸುತ್ತಲೂ ತವಾಫ್ ಮಾಡುತ್ತಿರುವಂತೆ ಪ್ರಪಂಚದ ನಾನಾ ದಿಕ್ಕುಗಳಿಂದ ರೂಮಿಯನ್ನು ಕಾಣಲು ಬಂದಿರುವ ನೂರಾರು ಯಾತ್ರಿಕರಿದ್ದಾರೆ.

ಒಂದು ಗುಂಪು ಪ್ರಾರ್ಥನೆಯಲ್ಲಿ ಮುಳುಗಿ ಕಣ್ಣೀರಾದರೆ ಮತ್ತೊಂದು ಗುಂಪು ಪ್ರೇಮ ಭಾವ, ದುಃಖ, ಸಂತೋಷ, ನೋವು ಮತ್ತು ಆಶ್ಚರ್ಯ ಇವೆಲ್ಲವನ್ನೂ ತಮ್ಮೆದೆಯಲ್ಲಿ ಒಂದೇ ತೂಕದಲ್ಲಿ ಒಳಗೊಳ್ಳುತ್ತಲೇ ಶಾಂತವಾದ ಅನುಭೂತಿಯ ಲೋಕಕ್ಕೆ ತೆರಳುತ್ತಿರುವಂತೆ ಕಾಣುತ್ತಾರೆ. ಇದೆಲ್ಲವನ್ನು ನೋಡುತ್ತಾ ಇತ್ತ ರೂಮಿ ಮುಗುಳ್ನಗುತ್ತಲೇ ಅಲ್ಲಿಯೇ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಣ್ಣಿಗೆ ಕಟ್ಟಿದಂತೆ ಇದೆ.
ರೂಮಿಯ ಪಕ್ಕದಲ್ಲೇ ಪೈಗಂಬರ್(ಸ.ಅ)ರ ‘ಶ‌ಅ್‌ರೇ ಮುಬಾರಕ್'(ಪವಿತ್ರ ಕೇಶ) ವನ್ನು ಬಹಳ ಗೌರವಾದರದಿಂದ ಜೋಪಾನವಾಗಿರಿಸಲಾಗಿದೆ. ವಿಶ್ವಾಸಿಗಳೆಲ್ಲರೂ ಆ ಶ‌ಅ್‌ರೇ ಮುಬಾರಕ್ಕನ್ನು ಕಣ್ತುಂಬಿಕೊಳ್ಳುತ್ತಿರುತ್ತಾರೆ. ಇಷ್ಕ್ ಮತ್ತು ಶಾಂತಿಗಾಗಿ ಮಾತ್ರ ಬದುಕಿದ್ದ ಪ್ರವಾದಿಯ ಶ‌‌ಅ್‌ರೇ ಮುಬಾರಕ್ಕೊಂದು ಇಷ್ಕಿನ ರಾಜಕುಮಾರನ ಸನ್ನಿಧಿಯಲ್ಲಿ ಇರಿಸಲಾಗಿರುವುದು ಒಂದೊಮ್ಮೆ
ರೂಮಿ ಮಾಡಿದ ಕರ್ಮಫಲದ ಕಾರಣದಿಂದಲೇ ಆಗಿರಬಹುದೇನೋ
ನಾವು ರೂಮಿಯ ಬಳಿಯಿಂದ ಸರಿದು ಪಕ್ಕದ ಮ್ಯೂಸಿಯಂನತ್ತ ನಡೆದೆವು. ರೂಮಿಯ ಬದುಕನ್ನು ಆಧರಿಸಿ ಸ್ಥಾಪಿಸಲಾಗಿರುವ ಆ ಮ್ಯೂಸಿಯಂ ಸಂದರ್ಶನಕ್ಕೆಂದು ಅಲ್ಲಿಗೆ ಹೋದೆವು. ಅಲ್ಲಿ ‘ಸಮಾ’ದ ಒಂದಷ್ಟು ಉಪಕರಣಗಳು, ಮಸ್ನವಿಯ ಹಳೆಯ ಹಸ್ತಪ್ರತಿಗಳು, ರೂಮಿಯ ಉಡುಪುಗಳು, ದರ್ವೇಶರು ಬಳಸುವ ಟೋಪಿ, ಪೇಟ ಮತ್ತು ಸೂಫಿಗಳ ಬದುಕನ್ನು ತೆರೆದಿಡುವ ವಸ್ತುಗಳಿಂದ ತುಂಬಿದ್ದ ಆ ಮ್ಯೂಸಿಯಂ ನಮ್ಮನ್ನು ಆದರದಿಂದ ಬರಮಾಡಿಕೊಂಡಿತು. ಆ ಪುರಾತನ ವಸ್ತುಗಳು ತಮ್ಮನ್ನು ಕಾಣಲು ಬರಲಿರುವ ಯಾತ್ರಿಕರಿಗಾಗಿ ಗಾಜಿನ ಗೋಪುರದ ಪಂಜರದಲ್ಲಿ ಕಾಯುತ್ತಾ ಕುಳಿತಿದ್ದಂತೆ ಕಾಣುತ್ತಿದ್ದವು.

(ಮುಂದಿನ ಭಾಗದಲ್ಲಿ ರೂಮಿಯಿಂದ ಶಂಮ್ಸ್ ಏ ತಬ್ರೇಝ್ ಕಡೆಗಿನ ಯಾತ್ರಾ ವಿವರಣೆಯಿದೆ)

ಮೂಲ: ಫಾಸಿಲ್ ಫಿರೋಝ್
ಅನು: ಝುಬೈರ್ ಅಹ್ಮದ್ ಪರಪ್ಪು

2 Comments

  1. ಅನುವಾದ ಚೆನ್ನಾಗಿ ಬಂದಿದೆ. ಕೋನ್ಯಾದಲ್ಲಿ ಅಡ್ಡಾಡಿ ಬಂದ ಅನುಭವವೂ ದಕ್ಕಿತು. ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ.

Leave a Reply to ಝೈನ್ Cancel reply

*