ಭಾರತೀಯ ಮತ್ತು ಇಸ್ಲಾಮಿಕ್ ದಾರ್ಶನಿಕತೆಯಲ್ಲಿ ಕಸ್ತೂರಿಯ ಸುಗಂಧ

ಕಸ್ತೂರಿ ಸಾಕಷ್ಟು ಪ್ರಸಿದ್ಧಿ ಹೊಂದಿದ್ದರೂ, ಅಪರಿಚಿತವಾಗಿಯೇ ಉಳಿದ ಇದರ ಇನ್ನಷ್ಟು ವಿವರಗಳ ಕುರಿತು ಈ ಲೇಖನವು ತಿಳಿಯಪಡಿಸುತ್ತದೆ. ಪ್ರಾಚೀನ ಮತ್ತು ಆಧುನಿಕ ಸುಗಂಧ ವಸ್ತುಗಳ ಜೊತೆಗೆ ಕಸ್ತೂರಿಯ ಮೂಲ, ಇದರ ಗುಣಲಕ್ಷಣಗಳು, ವಿಭಿನ್ನ ಉಪ ಉತ್ಪನ್ನಗಳು ಹಾಗೂ ಇದರ ವಿವಿಧ ಉಪಯೋಗಗಳ ಕುರಿತು ನಿಮಗೆ ತಿಳಿದಿರಬಹುದು. ಆದರೂ, ಕಸ್ತೂರಿಯ ಇತಿಹಾಸ ಮತ್ತು ಇದಕ್ಕಿರುವ ಆಧ್ಯಾತ್ಮಿಕ ಮಹತ್ವದ ಕುರಿತು ತಿಳಿದುಕೊಳ್ಳುವುದು ಆಸಕ್ತಿದಾಯಕವಾಗಿದೆ. ಧಾರ್ಮಿಕ ಆಯಾಮವನ್ನು ಉಲ್ಲೇಖಿಸದೆ ಕಸ್ತೂರಿಯ ಬಗೆಗಿನ ವಿವರಣೆಯನ್ನು ಮುಗಿಸುವುದೇ ಅಸಾಧ್ಯ. ಮುಖ್ಯವಾಗಿ, ಇಸ್ಲಾಂ ಇಲ್ಲದಿದ್ದರೆ ಕಸ್ತೂರಿ ಇಷ್ಟು ಪ್ರಸಿದ್ಧಿ ಪಡೆಯುತ್ತಿರಲಿಲ್ಲ ಎನ್ನುವುದು ಕಟುವಾಸ್ತವ.

ಕಸ್ತೂರಿಗೆ ಇಸ್ಲಾಮಿಕ್ ಜಗತ್ತಿನಲ್ಲೇ ಉನ್ನತ ಸ್ಥಾನವಿದೆ. ಇಸ್ಲಾಮಿಕ್ ಸಾಂಸ್ಕೃತಿಕ ಲೋಕದಲ್ಲಿ ಕಸ್ತೂರಿಗೆ ಅಷ್ಟೊಂದು ಮಹತ್ವ ನೀಡಲಾಗಿದೆ. ಕಾಳಿದಾಸ ಕೂಡ ತನ್ನ ಋತುಸಂಹಾರದಲ್ಲಿ ಕಸ್ತೂರಿಯ ಕುರಿತು ಪರಾಮರ್ಶೆ ನಡೆಸುತ್ತಾನೆ. ವಾಸ್ತವದಲ್ಲಿ, ಕಸ್ತೂರಿಯ ನೈಸರ್ಗಿಕ ಗಾಢ ಕರಿಬಣ್ಣಕ್ಕಿಂತಲೂ, ಭಾರತ ಎಲ್ಲಾ ಕಾಲದಲ್ಲೂ ಕರ್ಪೂರದ ಪರಿಶುದ್ಧತೆಗೆ ಆದ್ಯತೆ ನೀಡಿದೆ. ಅದನ್ನು ವೇದಕಾಲೀನ ಭಾರತದ ಸುಗಂಧ ದ್ರವ್ಯಗಳ ಬಗ್ಗೆ ನೀವು ಓದಿ ನೋಡಿದಾಗ ಕಾಣಬಹುದು.
ಈಗ ಕೆಲವು ಪ್ರಶ್ನೆಗಳು ಸ್ವತಃ ಉದ್ಭವಿಸಬಹುದು. ಹಾಗಾದರೆ, ಪರ್ಷಿಯನ್ ಕವಿತೆಗಳಲ್ಲಿ ಕಸ್ತೂರಿಯನ್ನು ಯಾಕೆ ಅಷ್ಟೊಂದು ಸೊಗಸಾಗಿ ವರ್ಣಿಸಲಾಗಿದೆ? ಮುಸ್ಲಿಂ ತತ್ವಶಾಸ್ತ್ರಜ್ಞರಿಂದ ಕಸ್ತೂರಿ ಇಷ್ಟೊಂದು ಪ್ರಶಂಸೆ ಪಡೆದುಕೊಂಡಿರುವುದು ಯಾಕೆ? ಸುಗಂಧ ಎಂದರೆ ಕಸ್ತೂರಿಯೇ ಅನ್ನುವಷ್ಟು, ಕಸ್ತೂರಿ ಇಲ್ಲದೆ ಯಾವುದೇ ಮುಸ್ಲಿಂ ಆಚರಣೆಯನ್ನು ಕಲ್ಪಿಸಿಕೊಳ್ಳಲಾಗದಷ್ಟು ಇಸ್ಲಾಮಿನಲ್ಲಿ ಕಸ್ತೂರಿ ಯಾಕಿಷ್ಟು ಅಂತರ್ಗತವಾಗಿ ಲೀನವಾಗಿಬಿಟ್ಟಿದೆ? ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ, ಕಸ್ತೂರಿಯ ಗೂಢ ಇಸ್ಲಾಮಿಕ್ ʼಸತ್ಯʼಗಳ ಕುರಿತು ಪರಿಶೋಧಿಸಬೇಕು.
ಒಟ್ಟಾರೆ ಭಾರತೀಯ ಸಾಹಿತ್ಯದಲ್ಲಿ ಕಸ್ತೂರಿ ವಿರಳವಾಗಿ ಉಲ್ಲೇಖಿಸಲ್ಪಟ್ಟಿದೆ ಎಂಬುದನ್ನು ನಾವು ಮೊದಲು ಗಮನಿಸಬೇಕು. ಹಿಮಾಲಯದ ತಪ್ಪಲಿನ ಬಿಳಿ ಕಸ್ತೂರಿ ಮೃಗಗಳಿಂದ ಉತ್ಪತ್ತಿಗೊಳ್ಳುವ ಕಸ್ತೂರಿಯು ವೇದಗಳು ಮತ್ತು ಎಲ್ಲಾ ಸಂಸ್ಕೃತ ಸಾಹಿತ್ಯಗಳಲ್ಲಿಯೂ ತೀರಾ ವಿರಳವಾಗಿ ಮಾತ್ರ ಉಲ್ಲೇಖಿಸಲಾಗಿದೆ ಎನ್ನುವುದೇ ಆಶ್ಚರ್ಯಕರ. ಇದು ವೇದ ಕಾಲದ ಸಂಪ್ರದಾಯಗಳಲ್ಲಿ, ಕಸ್ತೂರಿಗೆ ಕೇವಲ ಸಾಂಕೇತಿಕ ಮಹತ್ವವನ್ನು ಮಾತ್ರ ನೀಡಲಾಗಿದೆ ಎನ್ನುವುದನ್ನು ತಿಳಿಸುತ್ತದೆ.
ಕಸ್ತೂರಿ ಮೃಗವು ತನ್ನದೇ ಸುವಾಸನೆಗೆ ಮಾರುಹೋಗಿ ಅಥವಾ ಮತ್ತನಾಗಿ ಆ ಮೋಹಕ ಸುವಾಸನೆಯ ಮೂಲ ಹುಡುಕಿ ಹಿಮಾಲಯನ್ ಕಾಡುಗಳನ್ನು ಮತ್ತು ಪರ್ವತಗಳನ್ನು ಹುಡುಕುತ್ತಾ ಅಲೆದಾಡುತ್ತದೆ ಎಂದು ನಂಬಲಾಗಿದೆ. ತನ್ನನ್ನು ಮೋಹಕವಾಗಿ ಮೋಡಿಮಾಡಿದ ಸುಗಂಧವು ತನ್ನೊಳಗೆ ಅಡಗಿದೆ ಎಂಬ ಸತ್ಯವನ್ನು ಅದು ಎಂದಿಗೂ ಅರಿತುಕೊಳ್ಳುವುದಿಲ್ಲ ಎಂಬ ಅಂಶವು ಮನುಷ್ಯನು ಲೌಕಿಕ ಸುಖಗಳನ್ನರಸಿ ಅಲೆದಾಡುವುದನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಸುಪ್ತವಾಗಿ ಮನುಷ್ಯನೊಳಗೆ ಅಡಗಿರುವ ಆತ್ಮದ ಘಮಲೇ ಅತ್ಯುತ್ತಮ ಸುಗಂಧ ಎನ್ನುವುದು ಭಾರತೀಯ ನಂಬುಗೆ. ಓರ್ವ ತನ್ನದೇ ಆತ್ಮವನ್ನು ಅರಸಿ ತನ್ನೊಳಗೆ ನಿಂತು ನೋಡಿಕೊಳ್ಳುವ ಪ್ರಕ್ರಿಯೆ ಅಥವಾ ಈ ಆದ್ಯಾತ್ಮಿಕ ಅನುಭವ ಸಂಪ್ರದಾಯವಾದಿ ಬರಹಗಾರರಿಗೆ ಪ್ರಿಯವಾದುದು. ಇದು ಇಸ್ಲಾಮಿಗೂ ಪರಕೀಯವಲ್ಲ.
ಸಾಂಬ್ರಾಣಿ, ಗುಲಾಬಿ, ಧೂಪ (ಆಲುಮಡ್ಡಿ) ಅಥವಾ ಭಾರತದ ಇನ್ಯಾವುದೇ ಸುಗಂಧ ವಸ್ತುಗಳಿಗಿಂತ ಕಸ್ತೂರಿಯು ಜನಪ್ರಿಯವಾಗಿತ್ತು ಎಂದೇ ಹೇಳಬಹುದು. “ಹಿಮಾಲಯನ್ ಪರ್ವತ ಶಿಖರಗಳು ಕಸ್ತೂರಿ ಪರಿಮಳದಿಂದ ದಟ್ಟವಾಗಿವೆ” ಎಂದಷ್ಟೇ ನಾಲ್ಕನೇ ಶತಮಾನದ ಕವಿ ಕಾಳಿದಾಸ ತನ್ನ ಇಡೀ ʼಮೇಘದೂತʼದಲ್ಲಿ ಕಸ್ತೂರಿಯ ಕುರಿತು ಮಾಡಿರುವ ಉಲ್ಲೇಖ.. ಅದೇ ವೇಳೆ, ಭಾರತದಿಂದ ಮಧ್ಯಪ್ರಾಚ್ಯಕ್ಕೆ ಹೋಗುತ್ತಿದ್ದ ಸರಕು ಸರಂಜಾಮುಗಳಲ್ಲಿ ಕಸ್ತೂರಿ ಕೂಡಾ ಸ್ಥಾನ ಪಡೆದಿದ್ದವು ಎಂದು ಸೋಗ್ಡಿಯನ್ ದಾಖಲೆಗಳು ತೋರಿಸುತ್ತವೆ. ಮಧ್ಯಪ್ರಾಚ್ಯದೊಂದಿಗಿನ ಕಸ್ತೂರಿಯ ಒಡನಾಟವು ಪರ್ಷಿಯನ್ ಕವಿಗಳ ಅಲೌಕಿಕ ಪ್ರೇಮ ಕವಿತೆಗಳಲ್ಲಿ ಧಾರಳವಾಗಿ ಕಾಣ ಸಿಗುವ ಕಸ್ತೂರಿಯ ಉಲ್ಲೇಖದಿಂದಲೂ ನಾವು ಊಹಿಸಬಹುದು. ಅಲೌಕಿಕ ಲೋಕದ ಸೌಂದರ್ಯವನ್ನು ವರ್ಣಿಸಲು, ಮತ್ತು ಅದರೊಂದಿಗಿರುವ ತಮ್ಮ ವಿಪರೀತ ಮೋಹವನ್ನು ವಿವರಿಸಲು ಕಸ್ತೂರಿಯ ಉಪಮೆಯನ್ನು ಬಳಸುವ ಕುರಿತು ಪರ್ಶಿಯನ್ ಕಾವ್ಯ ಓದಿದವರ ಅರಿವಿಗೆ ಬರುತ್ತದೆ.


“ನಿನ್ನ ಮುಖದಲಿ ಹಳ್ಳಿಯ ಎಲ್ಲಾ ಪ್ರಕಾಶವೂ, ನಿನ್ನ ಕೂದಲು ಪೂರಾ ಕಸ್ತೂರಿಯೂ” ಎಂದು ಹತ್ತನೇ ಶತಮಾನದಲ್ಲಿ ಇಮಾಮ್ ತಿರ್ಮಿದಿ ಹೇಳುತ್ತಾರೆ. ಅದೇ, ಒಂದು ಶತಮಾನದ ಬಳಿಕ ಮಸ್ಊದ್ ಸಅದ್ “ನಿನ್ನ ಸುಂದರ ಗಂಧವುಳ್ಳ ಕರಿಕೂದಲಿಗೆ ಖೋತಾನಿನ ಯಾವುದೇ ಕಸ್ತೂರಿಗೂ ತಲುಪಲು ಸಾಧ್ಯವಿಲ್ಲ” ಎನ್ನುತ್ತಾರೆ. ಹದಿಮೂರನೆಯ ಶತಮಾನದಲ್ಲಿ, ಪ್ರಸಿದ್ಧ ಸೂಫಿ ಸಅದಿ ಶಿರಾಝ್ ತನ್ನ ʼಗುಲಿಸ್ತಾನ್ʼ ನಲ್ಲಿ, “ಈ ಮೋಡಿಮಾಡುವ ರಮ್ಯ ಮೋಹಕ ಸುವಾಸನೆ ಕಸ್ತೂರಿಯದ್ದೋ ಅಥವಾ ಅಂಬರ್ ಗ್ರಿಸಿದ್ದೋ (ತಿಮಿಂಗಿಲ ಹೊರಸೂಸುವ ಪರಿಮಳಯುಕ್ತ ವಸ್ತು)” ಎಂದು ಕೇಳುತ್ತಾರೆ.
ಕಸ್ತೂರಿಯ ಸೌಂದರ್ಯವು ಅದರ ಭೌತಿಕ ಕಾಣ್ಕೆಯಲ್ಲಿಲ್ಲ. ಸ್ನಾನಗೃಹದಲ್ಲಿನ ಆವಿಯಲ್ಲಿ, ಮರೆಯಲ್ಲಿ, ಲಘುವಾದ ಗಾಳಿ ಮೊದಲಾದಂತೆ ಎಲ್ಲಿಯೂ ಆಪ್ತವಾಗಿ ಹೊಂದಿಕೊಳ್ಳುವ ಸುಗಂಧ ವಸ್ತು ಕಸ್ತೂರಿ. ಸುಗಂಧ ದ್ರವ್ಯಗಳ ಸಂಪ್ರದಾಯದಲ್ಲಿ ಕಸ್ತೂರಿಯ ಉಪಸ್ಥಿತಿಯು ತೀರಾ ನಗಣ್ಯ ಎಂಬ ಸಂಗತಿಯನ್ನು ಮನದಲ್ಲಿಟ್ಟುಕೊಂಡೇ ಇಸ್ಲಾಮಿಕ್ ಜಗತ್ತಿನಲ್ಲಿ ಇದರ ಉನ್ನತ ಸ್ಥಾನವನ್ನು ತಿಳಿಯಬೇಕು. ಇಸ್ಲಾಮಿಕ್ ಲೋಕದೊಳಗೆ ಕಸ್ತೂರಿಯ ಪ್ರವೇಶವನ್ನು ಅರ್ಥಮಾಡಿಕೊಳ್ಳಲು ಹದೀಸ್ ಮೂಲಕ ಆಳವಾಗಿ ಸಾಗಬೇಕಾಗಿದೆ. “ಮುದ್ರೆಯೊತ್ತಿದ ಶುದ್ಧವಾದ ದ್ರಾಕ್ಷಾರಸದಿಂದ ಅವರಿಗೆ ಕುಡಿಯಲು ನೀಡಲ್ಪಡುವುದು. ಇದರ ಪದಾರ್ಥ ಕಸ್ತೂರಿ ಆಗಿರುವುದು” ಎಂದು ಸೂರಾ: ಮುತ್ವಫೀಫಿನಲ್ಲಿ ಒಂದು ಬಾರಿ ಕಸ್ತೂರಿಯ ಬಗ್ಗೆ ಉಲ್ಲೇಖಿಸಲಾಗಿದೆ. ಭೂಮಿ, ಸ್ವರ್ಗ, ಮಾನವೀಯತೆ ಮತ್ತು ಅಮರತ್ವದ ನಡುವಿನ ವಿಪರಿತಾತ್ಮಕ ಸಂಬಂಧವನ್ನು ಸೂಚಿಸುವ ಸುಂದರವಾದ ಸೂಫಿ ಕವಿತೆಗಳು ಈ ಸೂಕ್ತಿಯಲ್ಲಿನ ಮದ್ಯ ಹಾಗು ಕಸ್ತೂರಿ ನಡುವಿನ ಸಂಪರ್ಕವನ್ನು ಎತ್ತಿ ತೋರಿಸುತ್ತದೆ.
ಶುದ್ಧ ಅಥವಾ ಅಪರೂಪದ ದ್ರಾಕ್ಷಾರಸವನ್ನು ಶುದ್ಧ ದೈವಿಕ ಸತ್ವದ ಸಂಕೇತವಾಗಿ ಬಳಸಲಾಗಿದೆ. ಹಾಗಾಗಿ ಅಲವಿ ಅದನ್ನು “ಆದಮನ ಮುಂಚೆಯೇ ಮುದ್ರೆಯೊತ್ತಲ್ಪಟ್ಟ ದ್ರಾಕ್ಷಾರಸ” ಎಂದು ಪರಾಮರ್ಶಿಸುತ್ತಾರೆ. ಸ್ವರ್ಗದೊಂದಿಗಿನ ಕಸ್ತೂರಿಯ ಸಂಬಂಧವು ಅದರ ಕಾಲ್ಪನಿಕ ಮೌಲ್ಯದ ಮೂಲ ಎನ್ನುವುದು ನಾವು ಈ ಮೂಲಕ ಅರ್ಥ ಮಾಡಿಕೊಳ್ಳಬಹುದು. ಕಿತಾಬುಲ್-ಅಹ್ವಾಲ್ ವಲ್ ಕಿಯಾಮಾ ಹೀಗೆ ಹೇಳುತ್ತದೆ: “ಈಡನ್ ತೋಟದ (ಸ್ವರ್ಗದ ತೋಟ) ಗೋಡೆಗಳು ಚಿನ್ನದಿಂದ ಕೂಡಿವೆ. ಇದನ್ನು ಕಸ್ತೂರಿಯೊಂದಿಗೆ ಬೆಳ್ಳಿಯ ಇಟ್ಟಿಗೆಗಳಿಂದ ಮತ್ತು ಕೇಸರಿ, ಮರಳಿನೊಂದಿಗೆ ನಿರ್ಮಿಸಲಾಗಿದೆ. ಒಂದು ಹದೀಸನ್ನು ಉಲ್ಲೇಖಿಸಿ, ಇಮಾಮ್ ಗಝಾಲಿ, “ಇದರ (ಈಡನ್) ನೆಲ ಕೇಸರಿಯದ್ದೂ ಮತ್ತು ಅದರ ಮಣ್ಣು ಕಸ್ತೂರಿಯೂ ಆಗಿದೆ” ಎಂದು ಹೇಳುತ್ತಾರೆ.
“ಅಲ್ಲಿ‌ ಕಸ್ತೂರಿಯ ದೊಡ್ಡ ಪರ್ವತವಿದೆ, ಅದರಿಂದ ಸಲ್ಸಬೀಲ್ ನದಿ ಹರಿಯುತ್ತದೆ. ಕೇಸರಿ, ಅಂಬರ್, ಕಸ್ತೂರಿ ಮತ್ತು ಕರ್ಪೂರ ಹೂರಿಗಳ ಆಕರ್ಷಕ ಕೂದಲಿನ ಸೌಂದರ್ಯದ ಮುಖ್ಯ ಆಧಾರ” ಎಂದೂ ಇಮಾಮ್ ಬುಖಾರಿ ಹೇಳುತ್ತಾರೆ. ಇತರ ಧರ್ಮಗಳಿಗೆ ಹೋಲಿಸಿದರೆ ಸ್ವರ್ಗ ಮತ್ತು ಸುಗಂಧದ ನಡುವೆ ಅವಿನಾಭಾವ ಸಂಬಂಧವನ್ನು ಇಸ್ಲಾಂ ಧರ್ಮವು ಕಂಡಿದೆ.
ಮಸ್ಊದ್ ಉಲ್ಲೇಖಿಸಿದ ಹದೀಸಿನಲ್ಲಿ “ಅಧಪತನಗೊಂಡ ಆದಮನನ್ನು ಸ್ವರ್ಗದಿಂದ ಹೊರಹಾಕಿದಾಗ ನೇರವಾಗಿ ಭಾರತಕ್ಕೆ ಬಂದು ಬಿದ್ದರಂತೆ. ಬೀಳುವಿಕೆಯ ಜಂಜಾಟದಲ್ಲಿ ಸ್ವರ್ಗದ ಎಲೆಯಿಂದ ಮಾಡಲಾದ ಅವರ ಬಟ್ಟೆ ಚೆದುರಿ ಬಿಟ್ಟಿತಂತೆ. ಹಾಗೆ ಭಾರತೀಯ ಕಾಡುಗಳು ಈಡನ್ (ಸ್ವರ್ಗದ) ಪರಿಮಳಗಳಿಂದ ನಳನಳಿಸತೊಡಗಿತು. ಹೀಗೆ ಈಡನ್ ನಿಂದ ಕಳೆದುಹೋದ ಸುಗಂಧ ಕಸ್ತೂರಿ ಎನ್ನುವುದೇ ಇಸ್ಲಾಮಿನಲ್ಲಿ ಕಸ್ತೂರಿಗೆ ಪರಮೋನ್ನತ ಅಸ್ತಿತ್ವ ಲಭಿಸಲು ಕಾರಣಕರ್ತವಾಗಿರುವುದು. ತನ್ನ ಸೃಷ್ಟಿಕರ್ತನನ್ನು ಮುಖಾಮುಖಿಯಾಗಿ ಎದುರಿಸುವ ʼಆದಮೀಯʼ ಸ್ಥಿತಿಗೆ ಮರಳುವ ಮನುಷ್ಯನ ಸಹಜ ಪವಿತ್ರತೆಯ ಸಂಕೇತವೇ ಕಸ್ತೂರಿ.
ಹುತಾತ್ಮರ ದೇಹಗಳು ಸ್ವರ್ಗದಲ್ಲಿ ಕಸ್ತೂರಿಯಾಗಿ ಬದಲಾಗುತ್ತದೆ ಎಂದು ಇಮಾಮ್ ಮುಸ್ಲಿಂ ತಮ್ಮ ಒಂದು ಹದೀಸ್‌ನಲ್ಲಿ ಹೇಳುತ್ತಾರೆ. ಇನ್ನೊಂದೆಡೆ, ಅನುಗ್ರಹೀತರಾದ ಮನುಷ್ಯರು ಮಲವಿಸರ್ಜನೆ ಮಾಡುವುದಿಲ್ಲ, ಆದರೆ ಅವರ ತ್ಯಾಜ್ಯವನ್ನು ಕಸ್ತೂರಿಗಳಾಗಿ ಪರಿವರ್ತಿಸಿ, ದೇಹದಾದ್ಯಂತ ಸುಗಂಧವನ್ನು ಹರಡಲಾಗುತ್ತದೆ ಎಂದು ಹೇಳಲಾಗಿದೆ.
ಮುಹಮ್ಮದ್ (ಸ) ರ ಬೆವರಿಗೆ ಕಸ್ತೂರಿಯ ಪರಿಮಳವಿದೆ ಎಂಬುದು ಮೇಲಿನ ಹದೀಸನ್ನು ದೃಡೀಕರಿಸುತ್ತದೆ. ಪ್ರವಾದಿ ಮುಹಮ್ಮದ್ (ಸ) ರವರ ಮಲವಿಸರ್ಜನೆ ಭೂಮಿಯನ್ನು ಸ್ಪರ್ಷಿಸುತ್ತಿದ್ದಂತೆಯೇ ಭೂಮಿ ಅದನ್ನು ಸ್ವಾಧೀನಿಸಿ ಆ ಸ್ಥಳದಲ್ಲಿ ಕಸ್ತೂರಿಯ ವಾಸನೆಯು ಹರಡುತ್ತದೆ ಎಂದು ಇಮಾಮ್ ಸುಯೂತಿ ಹೇಳುತ್ತಾರೆ. ಈ ಮರುಭೂಮಿಯಲ್ಲಿ ಆತ್ಮದೊಂದಿಗಿನ ಸರ್ವೋಚ್ಚ ಪರಿಕಲ್ಪನೆಯಾಗಿದೆ ಕಸ್ತೂರಿ. ಮಲವಿಸರ್ಜನೆ ಮತ್ತು ಬೆವರು ಕಸ್ತೂರಿಯಾಗಿ ಪರಿವರ್ತನೆ ಆಗುವುದು ಸಾವು ಮತ್ತು ನಾಶವನ್ನು ಅಮರತ್ವಕ್ಕೇರಿಸುವ ಸೃಷ್ಟಿಕರ್ತನ ಸಾಮರ್ಥ್ಯವನ್ನು ಸೂಚಿಸುತ್ತದೆ. ಪವಿತ್ರತೆಯನ್ನು ಗಳಿಸುವ ಕಸ್ತೂರಿಯನ್ನು ಕಳಂಕಿತ ಮಾನುಷಿಕತೆಯ ದಿವ್ಯ ವಿಮೋಚನೆಯೊಂದಿಗೆ ಸೂಫಿಗಳು ಉಪಮೆಯ ಮೂಲಕ ಹೋಲಿಸುತ್ತಾರೆ. ಕಸ್ತೂರಿ ಮೃಗಗಳ ಕಲುಷಿತ ರಕ್ತವು ಕಸ್ತೂರಿಯಾಗಿ ಬದಲಾಗುವಂತೆ ಮನುಷ್ಯನ ಕೆಟ್ಟ ಕಾರ್ಯಗಳಿಂದ ಒಳ್ಳೆಯ ಕಾರ್ಯಗಳನ್ನು ಬೇರ್ಪಡಿಸಿ ಎತ್ತಬಹದು.
ಅಧಃಪತನಕ್ಕೂ ಮೊದಲಿನ ಮನುಷ್ಯನ ಸತ್ವವನ್ನು ಕಸ್ತೂರಿ ಪ್ರತಿಫಲಿಸುತ್ತದೆ ಎನ್ನುವುದೇ ಇದರ ಒಟ್ಟಾರೆ ಸಾರ. ಮುವಶ್ಶಹಾದ ಕೊನೆಯ ಅಧ್ಯಾಯವು “ಉಪ್ಪು ಮತ್ತು ಸುಗಂಧದ್ರವ್ಯಗಳು ಸಿಹಿ ಮತ್ತು ಕಸ್ತೂರಿಯಾಗಿದೆ” ಎಂದು ಇಬ್ನುಲ್ ಮುಲ್ಕ್ ಹೇಳುತ್ತಾರೆ. ಆ ಮೂಲಕ ಅವರು ಉದ್ಧೇಶಿಸಿರುವುದು ಅದರ ಸತ್ವವನ್ನು. ʼಕಸ್ತೂರಿ ಮೃಗಗಳ ರಕ್ತವೇ ಕಸ್ತೂರಿ” ಎಂದು ಕವಿ ಮುತನಬ್ಬಿ ಹೇಳುತ್ತಾರೆ. ಪೂರ್ವಜರ ಅಸ್ತಿತ್ವವು ಅವರ ವಂಶಸ್ಥರಲ್ಲಿದೆ ಎನ್ನುವುದನ್ನು ಇದು ವಿವರಿಸುತ್ತದೆ. ಅಧಃಪತನದ ನಂತರ ಮಾನವ ಕುಲ ಕಳೆದುಕೊಂಡದ ಸುಂದರ ಸತ್ವವೇ ಶುದ್ಧ ಮತ್ತು ನಿಜವಾದ ಸತ್ವ. ಇದು ರಾಜರದ್ದೋ ಅಥವಾ ವೀರ ನಾಯಕರದ್ದೋ ಸತ್ವವಲ್ಲ. ಅಸಂಖ್ಯಾತ ಒಳ್ಳೆಯ ಕಾರ್ಯಗಳನ್ನು ಮಾಡಿದ ಸಜ್ಜನರೂ, ಪರಿಶುದ್ಧ ಜನರ ಮೂಲಕ ಆದಮರ ನರಗಳಲ್ಲಿ ಹರಿಯುವ ಅದೇ ಸತ್ವವಾಗಿದೆ ಸೂಫಿಗಳು ಮತ್ತು ಸಾತ್ವಿಕರ ಭವ್ಯವಾದ ಸತ್ವ!

ಮೂಲ: ಅಲೆಕ್ಸಾಂಡರ್ ಹೆಲ್ವಾನಿ
ಕನ್ನಡಕ್ಕೆ: ಎ.ಕೆ ರುಕ್ಸಾನ ಗಾಳಿಮುಖ

Leave a Reply

*