ವಿಸ್ಮೃತಿಗೆ ಸರಿದ ಸ್ಪೇನಿನ ಮುಸ್ಲಿಮರು

ನಾಗರಿಕತೆಗೆ ಕಲಾತ್ಮಕ ಮತ್ತು ಬೌದ್ಧಿಕವಾದ ಕೊಡುಗೆಗಳನ್ನು ನೀಡುವ ಮೂಲಕ ಮುಸ್ಲಿಂ ಸ್ಪೇನಿನ ಹೆಸರು ಚರಿತ್ರೆಯಲ್ಲಿ ಹಚ್ಚ ಹಸುರಾಗಿದೆ. ಕ್ರಿ.ಶ. 1492ರಲ್ಲಿ ಗ್ರನಡಾದ ಕೊನೆಯ ಮುಸ್ಲಿಂ ಸಾಮ್ರಾಜ್ಯದ ಪತನದ ನಂತರದ ಮುಸ್ಲಿಂ ಸ್ಪೇನ್‌ನ ಕೊನೆಯ ಶತಮಾನದ ಬಗ್ಗೆ ಬಹುಶಃ ಯಾರೂ ತಿಳಿದಿರಲಾರರು.

ಕ್ರಿ.ಶ. 1232 ರಲ್ಲಿ ಅಸ್ತಿತ್ವಕ್ಕೆ ಬಂದ ನಸ್ರಿದ್ ಸಾಮ್ರಾಜ್ಯವು ಕ್ರಿ.ಶ. 1492 ರಲ್ಲಿ ಕಿಂಗ್ ಫರ್ಡಿನ್ಯಾಂಡ್ ಮತ್ತು ಕ್ವೀನ್ ಇಸಬೆಲ್ಲ ನೇತೃತ್ವದ ಕ್ಯಾಥೊಲಿಕ್ ಕ್ರೈಸ್ತರ ದಾಳಿಗೆ ತುತ್ತಾಗಿ ಸ್ವಾಧೀನ ಕಳೆದುಕೊಂಡಿತು. ನಂತರ ರಾಜನ ಆಜ್ಞೆಯಂತೆ ಐಬೀರಿಯನ್ ಪರ್ಯಾಯ ದ್ವೀಪದಿಂದ ಯಹೂದಿಗಳನ್ನು ಸಂಪೂರ್ಣವಾಗಿ ಹೊರದೂಡಲಾಯಿತು. ಆಟೋಮನ್ ಬಾಯಝೀದರು ನೌಕಾ ಸೇನೆಯನ್ನು ಕಳುಹಿಸಿ ಯಹೂದಿಗಳನ್ನು ತಮ್ಮ ಸಾಮ್ರಾಜ್ಯಕ್ಕೆ ಕರೆತಂದು ಪೌರತ್ವವನ್ನು ನೀಡಿದರು. ಸಾವಿರಾರು ಮುಸ್ಲಿಮರು ಆಶ್ರಯತಾಣಗಳನ್ನು ಅರಸುತ್ತಾ ಮೆಡಿಟರೇನಿಯನ್ ಹಾಗೂ ಇತರ ಪ್ರದೇಶಗಳತ್ತ ಗುಳೆ ಹೊರಟರು. ಕ್ರಿ.ಶ. 1492 ರಲ್ಲಿ ಐದು ಲಕ್ಷಗಳಷ್ಟು ಇದ್ದ ಮುಸ್ಲಿಮರಲ್ಲಿ ಸುಮಾರು ಎರಡು ಲಕ್ಷ ಜನರು ಆಫ್ರಿಕಾದತ್ತ ವಲಸೆ ಹೋದರು.

ಆರಂಭದಲ್ಲಿ ಮುಸ್ಲಿಮರು ಕ್ರೈಸ್ತರ ಆಡಳಿತದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಮಹತ್ವದ ಪಾತ್ರ ಹೊಂದಿದ್ದರು. ನಂತರ ಈ ಪ್ರಕ್ರಿಯೆಯಲ್ಲಿ ಬದಲಾವಣೆ ಬಂತು. ಕ್ಯಾಥೊಲಿಕ್ ಚರ್ಚ್‌ಗಳು ಎಲ್ಲಾ ಮುಸ್ಲಿಮರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಶುರು ಮಾಡಿದವು. ಆದ್ದರಿಂದ ಮುಸ್ಲಿಮರು ಅಲ್ಲಿ ಅತಂತ್ರರಾದರು. ಸ್ಪಾನಿಷ್ ಸರಕಾರವು ಹಣದ ಆಮಿಷ ಒಡ್ಡಿ ಮುಸ್ಲಿಮರನ್ನು ಮತಾಂತರಿಸುವ ಮೊದಲ ಪ್ರಯತ್ನ ಮಾಡಿತು. ಮತಾಂತರಗೊಂಡ ಜನರಿಗೆ ಅಪಾರ ಪ್ರಮಾಣದ ಧನ-ಕನಕ, ಭೂಮಿ ನೀಡಿ ಉಪಚರಿಸಲಾಯಿತು. ಮತಾಂತರಗೊಂಡ ಜನರು ಅವುಗಳನ್ನು ಸ್ವೀಕರಿಸಿ ಪುನಃ ಇಸ್ಲಾಂ ಧರ್ಮಕ್ಕೆ ಮರಳಿದ್ದರಿಂದ ಈ ಪ್ರಯತ್ನವು ವಿಫಲವಾಯಿತು ಎಂದೇ ಹೇಳಬಹುದು.

ಕ್ರಿ.ಶ 15ನೆಯ ಶತಮಾನದ ಅಂತ್ಯದ ವೇಳೆಗೆ ಸ್ಪೇನ್‌ನ ಮುಸ್ಲಿಮರು ಇಸ್ಲಾಂ ಧರ್ಮದ ಕಡೆಗೆ ಉತ್ಸಾಹ ತೋರಿದರು. ಹಾಗೂ ಸಂಪತ್ತಿಗಿಂತ ತಮ್ಮ ನಂಬಿಕೆಗಳಿಗೆ ಬದ್ಧರಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಈ ವಿಚಾರ ಸ್ಪಾನಿಷ್ ಸರಕಾರವು ಹೊಸ ಕಠಿಣ ಕ್ರಮ ಕೈಗೊಳ್ಳುವಂತೆ ಮಾಡಿತು. ಕ್ರಿ.ಶ. 1499 ರಲ್ಲಿ ಬಲವಂತದ ಮತಾಂತರವನ್ನು ತ್ವರಿತವಾಗಿ ಜಾರಿಗೊಳಿಸಲು ಫ್ರಾನ್ಸಿಸ್ಕೋ ಜೆಮೆನಝ್ ಡಿ ಸಿಸ್ನೆರೋಸ್ ಎಂಬ ಕ್ಯಾಥೊಲಿಕ್ ಕಾರ್ಡಿನಲ್‌ನನ್ನು ಸ್ಪೇನಿಗೆ ಕರೆತರಲಾಯಿತು. “ಅನ್ಯಧರ್ಮೀಯರನ್ನು ಮೋಕ್ಷದ ದಾರಿಗೆ ಆಕರ್ಷಿಸಲು ಸಾಧ್ಯವಾಗದೇ ಹೋದರೆ ಅವರನ್ನು ಬಲವಂತವಾಗಿ ಕರೆತರಬೇಕು” ಎಂದು ಆತ ಆಜ್ಞೆ ಇತ್ತನು. ಕಾರ್ಡಿನಲ್ ಫ್ರಾನ್ಸಿಸ್ಕೋ ಸ್ಪೇನಿನ ಮುಸ್ಲಿಮರ ಸಕಲ ಕುರುಹುಗಳನ್ನು ಅಳಿಸುವ ದೃಢ ನಿಶ್ಚಯ ಮಾಡಿದನು. ಕ್ರಿ.ಶ. 1501 ಅಕ್ಟೋಬರ್ ತಿಂಗಳಲ್ಲಿ ಅರೇಬಿಕ್ ಧಾರ್ಮಿಕ ಗ್ರಂಥಗಳನ್ನು ಸುಡಲು ಆತ ರಾಜಕೀಯ ಅನುಮೋದನೆ ಪಡೆದನು. ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಮುಸ್ಲಿಮರನ್ನು ಜೈಲಿಗೆ ಕಳುಹಿಸಲಾಯಿತು. ಅವರಿಗೆ ಚಿತ್ರಹಿಂಸೆ ನೀಡಲಾಯಿತು. ಮತ್ತು ಮತಾಂತರಗೊಳ್ಳಲು ಮನವೊಲಿಸುವ ಸಲುವಾಗಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಕ್ರಿ.ಶ. 1499ರ ಡಿಸೆಂಬರ್ 18-25 ರ ನಡುವೆ ಸುಮಾರು 3000 ಮುಸ್ಲಿಮರಿಗೆ ದೀಕ್ಷಾಸ್ನಾನ (Baptism) ಮಾಡಿಸಿ ಮತಾಂತರಿಸಲಾಯಿತು.

This image has an empty alt attribute; its file name is islamic-spain-c-1024x683.jpg

ಕಿರುಕುಳ ಮತ್ತು ದಬ್ಬಾಳಿಕೆ ಮೂಲಕ ಸ್ಪಾನಿಷ್ ಸರಕಾರವು ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಮಾಡಿತು. ಅದು ದಂಗೆಗೆ ಕಾರಣವಾಗುತ್ತಿತ್ತು. ದಂಗೆಯನ್ನು ಹಿಂಸಾತ್ಮಕವಾಗಿ ನಿಗ್ರಹಿಸಲು ಸೇನೆಯನ್ನು ಬಳಸಲಾಗುತ್ತಿತ್ತು. ಗ್ರನಡಾದ ಮುಸ್ಲಿಮರು ಬೀದಿಗಳಲ್ಲಿ ಪ್ರತಿಭಟಿಸಿದರು. ಡಿ ಸಿಸ್ನೆರೋಸ್‌ನ ನಿರಂಕುಶ ಪ್ರಭುತ್ವವನ್ನು ವಿರೋಧಿಸಿದರು. ಆತನನ್ನು ಪದಚ್ಯುತಗೊಳಿಸುವ ಬೆದರಿಕೆಯನ್ನು ಒಡ್ಡಿದರು. ಈ ಬಂಡಾಯವನ್ನು ಹತ್ತಿಕ್ಕಲು ಮುಸ್ಲಿಮರ ಬಾಹುಳ್ಯವಿರುವ ನಗರಗಳಿಗೆ ಸೇನೆಯನ್ನು ನುಗ್ಗಿಸಲಾಯಿತು. ಅಲ್ಲಿ ಸೇನೆಯು ನರಮೇಧವನ್ನು ನಡೆಸಿತು. ಮತ್ತು ಅಲ್ಲಿನ ಜನರನ್ನು ಸಾಮೂಹಿಕವಾಗಿ ಮತಾಂತರಿಸಲಾಯಿತು.

ಕ್ರಿ.ಶ. 1502 ಫೆಬ್ರವರಿ 12 ರಂದು ಕ್ಯಾಥಲಿಕನ್ನರು ಕ್ಯಾಸ್ಟಲ್ ಮತ್ತು ಲಿಯೋನ್ ಪ್ರಾಂತ್ಯದ ಮುಸ್ಲಿಮರ ವಿರುದ್ಧ ಮತಾಂತರ ಇಲ್ಲವೇ ಗಡಿಪಾರಿನ ಆದೇಶವನ್ನು ಶಾಸನದ ಮೂಲಕ ಹೊರಡಿಸಿದರು. ಶಾಸನದ ಮೂಲಕ ಇಸ್ಲಾಂ ಧರ್ಮವನ್ನು ಕಾನೂನು ಬಾಹಿರಗೊಳಿಸಲಾಯಿತು. ಶಾಸನದ ಪ್ರಕಾರ 14 ವರ್ಷದ ಕೆಳಗಿನ ಬಾಲಕರು 12 ವರ್ಷದ ಕೆಳಗಿನ ಬಾಲಕಿಯರು ಆಧ್ಯಾತ್ಮಿಕ ಮೋಕ್ಷ (Spiritual Salvation) ಹೊಂದುವ ಅವಕಾಶದಿಂದ ವಂಚಿತರಾಗಬೇಕಾಯಿತು. ಶಾಸನದ ಪ್ರತಿಯು ಮತಾಂತರಕ್ಕಿಂತ ಗಡಿಪಾರಿಗೆ ಒತ್ತು ನೀಡಿತು. ವಾಸ್ತವದಲ್ಲಿ ಕ್ಯಾಸ್ಟಿಲಿಯನ್ ಪ್ರಾಧಿಕಾರವು ಮತಾಂತರಕ್ಕೆ ಪ್ರಾಧಾನ್ಯತೆ ನೀಡಿತು. ಅರಗಾನ್ ಮತ್ತು ವೇಲೆನ್ಸಿಯಾ ಪ್ರಾಂತ್ಯದ ಮುದೈಹರ್ (Mudejars) ಗಳು ಒತ್ತಾಯಪೂರ್ವಕ ಮತಾಂತರಕ್ಕೆ ಒಳಗಾಗದೆ ಉಳಿದಿದ್ದರಿಂದ ಆ ಪ್ರಾಂತ್ಯಗಳಿಗೆ ವಲಸೆ ಹೋಗದಂತೆ ತಡೆಯಲಾಯಿತು. ಉತ್ತರ ಆಫ್ರಿಕಾ, ಆಟೋಮನ್ ಸಾಮ್ರಾಜ್ಯದಂತಹ ಸಾಗರೋತ್ತರ ದೇಶಗಳಿಗೂ ವಲಸೆಯನ್ನು ತಡೆದರು. ಕೊನೆಗೆ ಉಳಿದ ಒಂದು ದಾರಿ ಅಂದರೆ ಅಟ್ಲಾಂಟಿಕ್ ಬಂದರಿನ ಮೂಲಕ ಸಾಗುವುದು. ಅದು ದುರ್ಗಮ ಮತ್ತು ಪ್ರಯಾಸದ ದಾರಿಯಾಗಿದ್ದರಿಂದ ಹಲವರು ಹಿಂಜರಿದರು.

ಕ್ರಿ.ಶ. 1526ರಲ್ಲಿ ಅರಗಾನ್ ಮತ್ತು ವೆಲೆನ್ಸಿಯಾ ಗಳಲ್ಲೂ ಮತಾಂತರದ ಕಾನೂನನ್ನು ಜಾರಿಗೆ ತರಲಾಯಿತು. ಬಹುತೇಕ ಮುಸಲ್ಮಾನರು ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಆದರೆ ಅವರು ರಹಸ್ಯವಾಗಿ ಮುಸ್ಲಿಮರ ಆಚಾರಗಳನ್ನು ಪಾಲಿಸುತ್ತಿದ್ದರು. ಈ ಒಂದು ಸಮುದಾಯವನ್ನು ‘ಮೋರಿಸ್ಕೋಸ್’ (Moriscos) ಗಳೆಂದು ಕರೆಯಲಾಗುತ್ತದೆ.

ರಹಸ್ಯವಾಗಿ ಇಸ್ಲಾಂ ಧರ್ಮೀಯರಾಗಿದ್ದವರನ್ನು ನಿಯಂತ್ರಿಸಲು ನಂತರದ ದಿನಗಳಲ್ಲಿ ದಮನಕಾರಿ ಧೋರಣೆಯನ್ನು ಸ್ಪಾನಿಷ್ ಸರಕಾರವು ತಳೆಯಿತು. ಇಸ್ಲಾಮಿಕ್ ನಂಬಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು. ಇಸ್ಲಾಮಿಕ್ ಕರ್ಮಶಾಸ್ತ್ರದ ಪ್ರಕಾರ ನಡೆಸುವ ಪ್ರಾಣಿವಧೆ (ಹಲಾಲ್) ಯನ್ನು ಕ್ರಿ.ಶ. 1511 ರಲ್ಲಿ ಕಾನೂನು ಬಾಹಿರಗೊಳಿಸಲಾಯಿತು. ಕ್ರಿ.ಶ. 1523 ರಲ್ಲಿ ಖುರ್‌ಆನ್ ಪಠಣ ಮತ್ತು ಇಸ್ಲಾಮಿಕ್ ವಸ್ತ್ರಧಾರಣೆಯನ್ನು ನಿಷೇಧಿಸಲಾಯಿತು. ಕ್ರಿ.ಶ. 1526 ರಲ್ಲಿ ವಿಶೇಷ ದಿನಗಳಲ್ಲಿನ ಸ್ನಾನ ಮತ್ತು ಅರೆಬಿಕ್ ಭಾಷೆಯ ಓದು ಮತ್ತು ಬರಹದ ಮೇಲೂ ನಿರ್ಬಂಧ ಹೇರಲಾಯಿತು. ಸೈನಿಕರು ಯಾವುದೇ ಹೊತ್ತಿನಲ್ಲಿ ಹತ್ತಿಳಿಯಲು ಅನುವಾಗುವಂತೆ ಶಂಕಿತ ಮುಸ್ಲಿಮರ ಮನೆಯ ಬಾಗಿಲನ್ನು ಸದಾ ತೆರೆದಿಡಬೇಕೆಂದು ಆದೇಶಿಸಲಾಯಿತು. ಇಸ್ಲಾಂ ಧರ್ಮವನ್ನು ಅನುಸರಿಸಿ ತಪ್ಪಿತಸ್ಥನೆಂದು ರುಜುವಾತು ಆದರೆ ನಿರ್ದಯವಾಗಿ ಕೊಲ್ಲಲಾಗುತ್ತಿತ್ತು. ಇದೊಂದು ಧಾರ್ಮಿಕ ಭಯೋತ್ಪಾದನೆಯೆಂದೇ ಹೇಳಬಹುದು. ಮೋರಿಸ್ಕೋಸ್‌ಗಳ ಸಂಸ್ಕೃತಿ ಮತ್ತು ಪರಂಪರೆಯ ಮೇಲಿನ ನಿರಂತರ ದಾಳಿಯು ಅವರನ್ನು ಭೂಗತರಾಗುವಂತೆ ಮಾಡಿತು. ಹಾಗೂ ತಮ್ಮ ನಂಬಿಕೆಗಳಲ್ಲಿ ಅಚಲವಾಗುವಂತೆ ಮಾಡಿತು.

ತೀವ್ರವಾದ ನಿರ್ಬಂಧ ಮತ್ತು ದಾಳಿಗಳ ನಡುವೆಯೂ ಸುಮಾರು ನೂರು ವರ್ಷಗಳಷ್ಟು ಕಾಲ ಮೋರಿಸ್ಕೋಸ್‌ಗಳು ತಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಅಚಲರಾಗಿದ್ದರು. ಈ ಸಂದರ್ಭದಲ್ಲಿ ಹಲವಾರು ಇಸ್ಲಾಮಿಕ್ ಕೃತಿಗಳೂ ರಚಿಸಲ್ಪಟ್ಟವು. ಈ ಬೆಳವಣಿಗೆಯನ್ನು ಹೇಗೆ ನಿಯಂತ್ರಿಸಬೇಕೆಂಬ ನಿಟ್ಟಿನಲ್ಲಿ ಕ್ರೈಸ್ತರ ಸಭೆಗಳಲ್ಲಿ ಚರ್ಚೆಗಳು ನಡೆದವು. ಕೆಲವರು ಸೌಜನ್ಯಯುತವಾಗಿ ಕಾರ್ಯಾಚರಣೆ ನಡೆಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಕೆಲವರು ಮೂಲೋತ್ಪಾಟನೆಯೇ ಪರಿಹಾರ ಎಂದು ವಾದಿಸಿದರು. ಕ್ರೈಸ್ತರೇ ಈ ಭೂಮಿಯ ವಾರಸುದಾರರು ಎಂಬುದು ಅವರ ಧೋರಣೆಯಾಗಿತ್ತು.

ಕೊನೆಗೂ, ಮೋರಿಸ್ಕೋಸ್‌ಗಳನ್ನು ಹೊರಹಾಕಬೇಕೆಂಬ ಅಭಿಪ್ರಾಯಕ್ಕೆ ಬಲ ಬಂದು, ಕ್ರಿ.ಶ. 1609 ರ ಎಪ್ರಿಲ್‌ನಲ್ಲಿ ಮೂರನೇ ಫಿಲಿಪ್ ರಾಜನು ಸ್ಪೇನಿನಲ್ಲಿದ್ದ ಎಲ್ಲಾ ಮೋರಿಸ್ಕೋಸ್‌ಗಳನ್ನು ಗಡೀಪಾರು ಮಾಡಲು ಆದೇಶವಿತ್ತನು. ಅವರ ಮೇಲೆ ಧರ್ಮದ್ರೋಹ ಮತ್ತು ದೇಶದ್ರೋಹದ ಆರೋಪ ಹೊರಿಸಲಾಯಿತು. ತಮ್ಮ ನಾಡಿನ ಭದ್ರತೆಯ ಕಾರಣ ಈ ಆದೇಶ ಹೊರಡಿಸಿದ್ದೇವೆ ಎಂದು ರಾಜನು ಸಾರಿದನು. ಸಾಮಗ್ರಿಗಳನ್ನು ಶೇಖರಿಸಲು ಮತ್ತು ಉತ್ತರ ಆಫ್ರಿಕಾ ಮತ್ತು ಯುರೋಪ್ ಕಡೆಗಿನ ಹಡಗನ್ನು ಗೊತ್ತುಪಡಿಸಲು ಕೇವಲ ಮೂರು ದಿನಗಳ ಕಾಲಾವಕಾಶ ನೀಡಲಾಯಿತು.

ಸ್ಪಾನಿಷ್ ಕಡಲತೀರವನ್ನು ತಲುಪುವ ಮುನ್ನವೇ ಹಲವಾರು ಮೋರಿಸ್ಕೋಗಳನ್ನು ಸೈನಿಕರು ಮತ್ತು ಕ್ರೈಸ್ತರು ದರೋಡೆಗೈದು ಕೊಂದು ಹಾಕಿದರು. ಹಡಗಿನಲ್ಲಿ ಹೊರಟ ಯಾತ್ರಿಕರಿಗೆ ತಮ್ಮ ಖರ್ಚನ್ನು ತಾವೇ ಭರಿಸಬೇಕಾಗಿತ್ತು. ನಾವಿಕರು ಆ ಯಾತ್ರಿಕರನ್ನು ಲೂಟಿ ಮಾಡಿದರು. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು. ಕೆಲವರನ್ನು ಕೊಲೆಗೈದರು. ಕೆಲದಿನಗಳಲ್ಲೇ ಫಿಲಿಪ್ ರಾಜನು ಸಂಪುಟ ಸಭೆಯಲ್ಲಿ ಗಡಿಪಾರಿನ ಆಜ್ಞೆಯನ್ನು ಕ್ಯಾಸ್ಟಲ್, ಅಂದಲೂಸಿಯ ಮತ್ತು ಅರಗಾನಿಗೂ ವಿಸ್ತರಿಸಿದನು. ಐದು ವರ್ಷಗಳಲ್ಲಿ ಸುಮಾರು 3 ಲಕ್ಷ (ಒಟ್ಟು ಜನಸಂಖ್ಯೆಯ 5%) ಮುಸ್ಲಿಮರನ್ನು ಹೆಂಗಸರು, ಮಕ್ಕಳು ಎಂಬ ಬೇಧವಿಲ್ಲದೆ ಹೊರದಬ್ಬಲಾಯಿತು. ಕ್ರಿ.ಶ‌ 1614 ರಲ್ಲಿ ಸ್ಪೇನ್ ಸರಕಾರವು ಮೋರಿಸ್ಕೋಗಳ ಸಾಮೂಹಿಕ ಹತ್ಯಾಕಾಂಡ ನಡೆಸಿತು. ಡಾಮಿಯನ್ ಫೊನ್ಸೇಕ (Damian Fonseca) ಎಂಬ ಡೊಮಿನಿಕನ್ ಪಾದ್ರಿಯು ಇದನ್ನು ‘ಒಪ್ಪಿಗೆಯ ಹತ್ಯಾಕಾಂಡ’ ಎಂದು ಕರೆದನು.

ಗಡಿಪಾರಿನ ನಂತರ ಹಲವಾರು ಮೋರಿಸ್ಕೋಗಳು ಮರಳಿ ಸ್ಪೇನ್‌ಗೆ ಮರಳುವ ವಿಫಲ ಯತ್ನ ನಡೆಸಿದರು. ಅವರನ್ನು ಥಳಿಸಿ ಓಡಿಸಲಾಯಿತು. ಕೆಲವರು ಉತ್ತರ ಆಫ್ರಿಕಾದಲ್ಲಿ ಆಶ್ರಯ ಕಂಡುಕೊಂಡರು. ಅಲ್ಲಿ ಅವರು ಅಂದಲೂಸಿಯನ್ ಅಸ್ಮಿತೆಯನ್ನು ಜೀವಂತವಾಗಿಸಿ, ಅಲ್ಲಿನ ಜನರೊಂದಿಗೆ ಬೆರೆತರು. ಡೀಗೋ ಲೂಯಿಸ್ ಮೋರ್ಲೆಮ್ ಎಂಬ ಮೋರಿಸ್ಕೋ ಓರ್ವನು ತನ್ನ ಮಾಜಿ ದೊರೆಗೆ ಬರೆದ ಪತ್ರದಲ್ಲಿ ” ಸ್ವಂತ ನಾಡನ್ನು ಕಳೆದುಕೊಂಡ ನಾವು ಕಣ್ಣೀರಿನಲ್ಲೇ ಕಳೆದಿದ್ದೇವೆ. ನಮ್ಮನ್ನು ನೀವು ಗಲ್ಲಿಗೇರಿಸುವುದಾದರೂ ಸರಿ, ನಾವು ಆ ಮಣ್ಣಿಗೆ ಕಾಲಿಡುತ್ತೇವೆ” ಎಂದು ಬರೆದಿದ್ದನು.

ಟ್ಯುನೀಶಿಯಾ ಪ್ರಾಂತ್ಯದ ಆಟೋಮನ್ ಪ್ರಾಧಿಕಾರವು ಅವರನ್ನು ಬರಮಾಡಿಕೊಂಡಿತು. ಸುಮಾರು 80 ಸಾವಿರದಷ್ಟು ಮೋರಿಸ್ಕೋಗಳು ಟ್ಯುನೀಶಿಯಾಗೆ ವಲಸೆ ಹೋದರು. ಸಿದಿ ಬುಲ್ಗೇಝ್ ಎಂಬ ಅಲ್ಲಿನ ಗವರ್ನರ್ ಅವರಿಗೆ ಬೇಕಾದ ವಲಸೆ ಸೌಲಭ್ಯಗಳನ್ನು ಒದಗಿಸಿದನು. ಮಸೀದಿ ಹಾಗೂ ಇನ್ನಿತರ ಧಾರ್ಮಿಕ ಸಂಸ್ಥೆಗಳನ್ನು ತಾತ್ಕಾಲಿಕ ಆಶ್ರಯತಾಣವಾಗಿ ಮಾರ್ಪಡಿಸಿದನು. ಯಾವುದೇ ಸರಂಜಾಮುಗಳಿಲ್ಲದೆ ಬರಿಗೈನಲ್ಲಿ ಬಂದ ವಲಸಿಗರಿಗೆ ಮೊದಲ ಒಂದು ವರ್ಷಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಲಾಯಿತು. ಹಲವು ತಿಂಗಳುಗಳ ಕಾಲ ಅವರಿಗೆ ಬೇಕಾದ ಬಟ್ಟೆ-ಬರೆ ಮತ್ತು ಆಹಾರವನ್ನು ಕೂಡ ನೀಡಲಾಯಿತು.

ಉತ್ತರ ಆಫ್ರಿಕಾದಲ್ಲಿ ನೆಲೆ ಕಂಡುಕೊಂಡ ಮೋರಿಸ್ಕೋಗಳ ಮೂಲಕ ಹಳೆಯ ಮುಸ್ಲಿಂ ಸ್ಪೇನಿನ ಗತ ವೈಭವವು ಜೀವಂತವಾಗಿದೆ. ಐಬೀರಿಯನ್ ಪರ್ಯಾಯ ದ್ವೀಪದ ಶ್ರೀಮಂತ ಚರಿತ್ರೆಯನ್ನು ಅವರು ಇಂದಿಗೂ ಪ್ರಸ್ತುತ ಪಡಿಸಿದ್ದಾರೆ. ಅವರ ದುರಂತಮಯ ಗಡಿಪಾರು ಇಂದಿಗೂ ಯುರೋಪ್ ಕಂಡ ಅತಿ ದೊಡ್ಡ ಹತ್ಯಾಕಾಂಡವಾಗಿ ಗುರುತಿಸಲ್ಪಡುತ್ತಿದೆ.

ಮೂಲ: ಫಿರಾಸ್ ಅಲ್ ಖತೀಬ್
ಅನು: ಮುಹಮ್ಮದ್ ಶಮೀರ್ ಪೆರುವಾಜೆ

Leave a Reply

*