ಜಿನ್ನ್ ಗಳ ನಗರ

ನನ್ನ ಜೀವನದಲ್ಲಿ ನಾನು ಮೊದಲ ಬಾರಿಗೆ ಓರ್ವ ಸೂಫಿಯನ್ನು ಭೇಟಿಯಾಗಿದ್ದು ಫಿರೋಝ್ ಶಾ ಕೋಟ್ಲಾದಲ್ಲಿ. ತೀಕ್ಷ್ಣ ಕಣ್ಣುಗಳು ಮತ್ತು ಮೈನಾದ ಗೂಡಿನಂತಿದ್ದ ಗಡ್ಡವನ್ನು ಇಳಿಬಿಟ್ಟಿದ್ದ ಅವರ ಹೆಸರು ಪೀರ್ ಸದ್ರುದ್ದೀನ್. ಅವರು ಕುಡಿಯಲು ಚಹಾ ಕೊಟ್ಟು, ಕಾರ್ಪೆಟ್ ಮೇಲೆ ನನ್ನನ್ನು ಕೂರಲು ಹೇಳಿ ಜಿನ್ನ್ ಗಳ ಬಗ್ಗೆ ಹೇಳಲು ಪ್ರಾರಂಭಿಸಿದರು.
ಹೊಸ ಜಗತ್ತಿನಲ್ಲಿ ಅಲ್ಲಾಹನು ಮಣ್ಣಿನಿಂದ ಮಾನವಕುಲವನ್ನು ಸೃಷ್ಟಿಸಿದಾಗ, ಇನ್ನೊಂದು ವರ್ಗವನ್ನೂ ಸಹ ಸೃಷ್ಟಿಸಿದ. ಎಲ್ಲ ವಿಷಯದಲ್ಲೂ ಮನುಷ್ಯರನ್ನೇ ಹೋಲುವ ಅವರನ್ನು ಬೆಂಕಿಯಿಂದ ಸೃಷ್ಟಿಸಲಾಗಿದೆ. ಜಿನ್ನ್‌ಗಳು ಎಂದರೆ ಆತ್ಮಗಳು. ಬರಿಗಣ್ಣಿಗೆ ಕಾಣದ ಒಂದು ವರ್ಗ. ಅವರನ್ನು ನೋಡಬೇಕಾದರೆ ಪ್ರಾರ್ಥನೆ ಮತ್ತು ವ್ರತಾನುಷ್ಠಾನ ಮಾಡಬೇಕು. ಪೀರ್ ಸದರುದ್ದೀನ್ ಅರೆನಗ್ನನಾಗಿ ಅನ್ನಾಹಾರವಿಲ್ಲದೆ ನಲವತ್ತೊಂದು ದಿನಗಳನ್ನು ಹಿಮಾಲಯದ ತಪ್ಪಲಲ್ಲಿ ಕಳೆದಿದ್ದರಂತೆ! ನಂತರದ ನಲವತ್ತೊಂದು ದಿನಗಳನ್ನು ಯಮುನಾ ನದಿಯಲ್ಲಿ ಕುತ್ತಿಗೆಯವರೆಗಿನ ನೀರಿನಲ್ಲೂ ಕಳೆದಿದ್ದರು.
ಒಂದು ರಾತ್ರಿ ಖಬರಸ್ಥಾನದಲ್ಲಿ ನಿದ್ದೆಗೆ ಜಾರಿದ್ದಾಗ ಅವರನ್ನು ನೋಡಲು ಜಿನ್ನ್ ಗಳ ರಾಜನ ಆಗಮನವಾಯಿತು. ನೋಡಲು ಕಪ್ಪು ಬಣ್ಣ ಹೊಂದಿದ್ದ, ಒಂದು ಮರದ ಎತ್ತರಕ್ಕೆ ಇದ್ದ ಆ ಜಿನ್ನ್ ಗೆ ಹಣೆಯ ಮಧ್ಯದಲ್ಲಿ ಒಂದು ಕಣ್ಣು ಇತ್ತು ಎಂದು ಪೀರ್ ವಿವರಿಸಿದರು. ‘ನಿನ್ನ ಬಯಕೆಗಳೇನು?’ ಎಂದು ಕೇಳಿದ. ಪ್ರತಿ ಬಾರಿಯೂ ನಾನು ನಿರಾಕರಿಸಿದೆ.
ನನಗೆ ಜಿನ್ನನ್ನು ತೋರಿಸುವಿರಾ? ಎಂದು ಅವರಿಗೆ ನಾನು ಕೇಳಿದೆನು.
‘ಖಂಡಿತ,’ ಎಂದು ಪೀರ್ ಉತ್ತರಿಸಿದರು. ‘ಆದರೆ ನೀನು ಓಡುವೆ’ ಎಂದರು.

ಆಗ ನನಗೆ ಕೇವಲ ಹದಿನೇಳು ವರ್ಷವಾಗಿತ್ತು. ಉತ್ತರ ಯಾರ್ಕ್‌ಷೈರ್ ನ ದೂರದ ಕಣಿವೆಯ ಒಂದು ಊರಿನಲ್ಲಿ ಹತ್ತು ವರ್ಷಗಳ ಶಿಕ್ಷಣ ಪಡೆದ ನಂತರ, ಇದ್ದಕ್ಕಿದ್ದಂತೆ ನನ್ನನ್ನು ನಾನು ದೆಹಲಿಯಲ್ಲಿ ಕಂಡುಕೊಂಡೆನು. ಪ್ರಾರಂಭದಲ್ಲಿ ಆ ಬೃಹನ್ನಗರವನ್ನು ಕಂಡು ಮೂಕವಿಸ್ಮಿತನಾಗಿದ್ದೆ. ಹಿಂದೆಂದಿಗೂ ಕಂಡಿದ್ದಕ್ಕಿಂತಲೂ ಸಂಪೂರ್ಣವಾಗಿ ಭಿನ್ನವಾಗಿತ್ತು. ಅಪಾರ ಸಂಪತ್ತು ಮತ್ತು ಅಷ್ಟೇ ಭಯಾನಕತೆಯನ್ನು ಮೈಗೂಡಿಸಿದ್ದ, ಚಕ್ರವ್ಯೂಹದಂತಿದ್ದ, ಅನೇಕ ಅರಮನೆ ಗೋಪುರಗಳಿದ್ದ, ತೆರೆದ ಚರಂಡಿಗಳ ಆಗರವಾಗಿದ್ದ, ತೀವ್ರ ಜನಸಂದಣಿಯ, ಗುಮ್ಮಟಗಳಿಂದ ತುಂಬಿದ್ದ, ಹೊಗೆಯುಕ್ತ ವಾತಾವರಣದ ನಗರವಾಗಿ ದೆಹಲಿಯನ್ನು ಮೊದಲಿಗೆ ನಾನು ಕಂಡೆ.
ಇಷ್ಟು ಮಾತ್ರವಲ್ಲದೇ, ದೆಹಲಿಯ ಇನ್ನೊಂದು ಮುಖವನ್ನು ಕೂಡ ನಾನು ಕಂಡೆ. ತಳಬುಡವಿಲ್ಲದ ಪುರಾವೆ ರಹಿತ ಕಥೆಗಳನ್ನು ದೆಹಲಿ ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿತ್ತು. ಕಥೆಗಳು ವಾಸ್ತವಕ್ಕಿಂತ ಬಲುದೂರ. ಗೆಳೆಯರು ಜನಪಥ್‌ನ ತಲೆಹಿಡುಕರ ಕುರಿತು ಗೋಳಿಡಬಹುದು. ಬೇಡವೇ ಬೇಡ ಎಂದು ಗೋವಾ ತೀರದೆಡೆ ಪ್ರವಾಸ ಹೊರಡಬಹುದು. ಆದರೆ, ನನಗಂತೂ ದೆಹಲಿ ಯಾವಾಗಲೂ ಗಾಢಮೋಹಿನಿಯಂತೆ ಕಾಡುವುದು. ನಾನು ಕಾಲಹರಣ ಮಾಡುತ್ತಿದ್ದ ಸಮಯದಲ್ಲಿಯೇ ನಗರದ ಉತ್ತರ ಭಾಗದಲ್ಲಿದ್ದ ನಿರಾಶ್ರಿತರ ನಿಲಯವೊಂದರಲ್ಲಿ ನನಗೆ ಕೆಲಸ ಸಿಕ್ಕಿತು.
ನಗರದ ಕೊಚ್ಚೆ ಗಳನ್ನೆಲ್ಲಾ ತಳ್ಳುವ ಕೊಳಚೆ ಗುಂಡಿಯಿದ್ದದ್ದು ನೋಡದೆ ಭಗಿನಿಯರು ನನಗೆ ಅದೇ ಕೊಠಡಿಯನ್ನು ಕೊಟ್ಟರು. ಅಲ್ಲಿಂದ ಬೆಳಗ್ಗೆದ್ದು ಹೊರ ನೋಡಿದರೆ ತಗಡಿನ ಆಗಸದ ಕೆಳಗೆ ಪೆಚ್ಚು ಮೋರೆ ಹಾಕಿಕೊಂಡು ಗಬ್ಬು ವಾಸನೆ ಬೀರುವ ಇಕ್ಕೆಲಗಳಲ್ಲಿ ಚಿಂದಿ ಆಯುವ ಮಂದಿಗಳನ್ನು ಕಾಣಬಹುದಿತ್ತು. ಚಿತ್ರದರ್ಶಕದಲ್ಲಿ ಮಿನುಗುವ ಗಾಜಿನ ತುಣುಕುಗಳ ಹಾಗೆ ಇರುವ ವಿನ್ಯಾಸಗಳನ್ನು ರೂಪಿಸುತ್ತಿದ್ದ ಬೇಸಗೆಯ ಬಟ್ಟೆಗಳ ಸುತ್ತ ರಣಹದ್ದುಗಳು ಹಾರುತ್ತಿದ್ದವು. ಅಂಗಣವನ್ನು ಗುಡಿಸಿದ ನಂತರ ಎಲ್ಲರೂ ಸುರಕ್ಷಿತವಾಗಿ ಮಲಗುವ ಮಧ್ಯಾಹ್ನ ಹೊತ್ತಲ್ಲಿ ನಾನು ಹೊರಗಿಳಿಯುತ್ತಿದ್ದೆ. ಹಳೆಯ ನಗರದ ಒಳ ಹೊಕ್ಕು ಸುತ್ತಾಡಲು ರಿಕ್ಷಾ ಹಿಡಿಯುತ್ತಿದ್ದೆ. ಕಿರಿದಾಗುತ್ತಾ ಬರುವ ಲಾಳಿಕೆಯಂತಹ ಗಲ್ಲಿಗಳ, ಕಿರುದಾರಿಗಳ, ಓಣಿಗಳ, ನಿಲುಕೊನೆಗಳ ಮೂಲಕ ಸಂಚರಿಸುವಾಗ ನನ್ನ ಹತ್ತಿರದಿಂದ ಸಾಗುವ ಮನೆಗಳು ನನ್ನನ್ನು ಆವರಿಸುವಂತೆ ಅನುಭವವಾಗುತ್ತಿತ್ತು.

ವಿಲಿಯಂ ಡಾರ್ಲಿಂಪ್ಲ್


ಬೇಸಿಗೆಯಲ್ಲಿ ದಟ್ಟಣೆ ಕಡಿಮೆ ಇರುವ ಲುಟೈನ್ಸ್ ನ ದೆಹಲಿಗೆ ನನ್ನ ಆದ್ಯತೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಗುಲ್ ಮೊಹರ್ ಗಳಿಂದ ತುಂಬಿದ ಬಂಗಲೆಗಳ ಎದುರು ಬೇರೂರಿರುವ ಬೇವು, ಹುಣಸೆ ಮರಗಳ ನೆರಳು ಪಡೆಯುತ್ತಾ ಸಾಗುತ್ತಿದ್ದೆ. ಎರಡೂ ದೆಹಲಿಗಳಲ್ಲು ಹಳೆಯ ಕಾಲದ ಅವಶೇಷಗಳು ನನ್ನನ್ನು ಆಕರ್ಷಿಸಿದವು. ಹೊಸ ಕಾಲೊನಿಗಳ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಲು ಯೋಜಕರು ಎಷ್ಟೇ ಪ್ರಯತ್ನಿಸಿದರೂ, ಮುರಿದು ಬಿದ್ದ ಸಮಾಧಿಗಳು, ಹಳೆಯ ಮಸೀದಿಗಳು, ಹಳೆಯ ಇಸ್ಲಾಮಿಕ್ ಕಾಲೇಜು/ ಮದ್ರಸಾಗಳು ಒಳನುಗ್ಗಿದಂತೆ ಕಾಣುತ್ತಿದ್ದವು. ಗಾಲ್ಫ್ ಕೋರ್ಸ್ ಗಳ ಮನೋಹರವಾದ ದೃಶ್ಯಗಳನ್ನು ಕೂಡ ಅವುಗಳು ಅಸ್ಪಷ್ಟವಾಗಿಸುತ್ತಿದ್ದವು.
ನವದೆಹಲಿಯು ಹೊಸ ನಗರವಲ್ಲ. ಅದರ ವಿಶಾಲವಾದ ರಸ್ತೆಗಳಲ್ಲಿ ಭಯಾನಕವಾದ ಸಮಾಧಿಗಳಿವೆ, ರಾಜವಂಶದ ಸ್ಮಶಾನಗಳೂ ಇವೆ. ದೆಹಲಿಯಲ್ಲಿ ಏಳು ಮೃತನಗರಗಳಿವೆ. ಸದ್ಯ ಇರುವುದು ಎಂಟನೇ ನಗರ ಎಂದು ಕೆಲವರು ಹೇಳುತ್ತಾರೆ. ಹದಿನೈದನೆಯದ್ದು ಎಂದು, ಇಪ್ಪತ್ತನೆಯದ್ದು ಎಂದೂ ಹೇಳುವವರಿದ್ದಾರೆ. ದೆಹಲಿಯು ಹಲವು ಬಾರಿ ಧ್ವಂಸಗೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ದೆಹಲಿಯ ಹಲವು ಕಡೆ ಹರಡಿಕೊಂಡಿರುವ ಮಾನವ ಅವಶೇಷಗಳು ದೆಹಲಿಯನ್ನು ವಿಶಿಷ್ಟವಾಗಿಸಿದೆ. ದೆಹಲಿಯ ಪ್ರತಿಯೊಂದು ಪ್ರದೇಶವೂ ವಿಭಿನ್ನ ಶತಮಾನ- ಸಹಸ್ರಮಾನದ ಅವಶೇಷಗಳನ್ನು ಉಳಿಸಿಕೊಂಡಿವೆ. 1980 ರ ದಶಕದಲ್ಲಿ ಮಾರುತಿ ಕಾರು ಮತ್ತು ಹೊಸ ವಸ್ತುಗಳೊಂದಿಗೆ ದೆಹಲಿಗೆ ವಲಸೆ ಬಂದ ಪಂಜಾಬಿಗರು ನಗರಕ್ಕೆ ಹೊಸ ಸ್ಪರ್ಷ ನೀಡಿದರು. ಲೋಧಿ ಗಾರ್ಡನ್ ನಲ್ಲಿ ಕಾಣಸಿಗುವ ಓರ್ವ ವೃದ್ಧ ಜನರಲ್ ನಿಮ್ಮನ್ನು ಅರ್ಧ ಶತಮಾನದ ಹಿಂದಿನ ದಿನಗಳಿಗೆ ಕೊಂಡೊಯ್ಯಬಲ್ಲ. ಆತನ ದಪ್ಪ ಮೀಸೆ ಮತ್ತುಲಿಂ ಹೀಲಿಂಗ್ ಕಾಮಿಡಿಯಂತಹ ಮಾತಿನ ಶೈಲಿಯನ್ನು ನೋಡಿದರೆ ಆತ ಇನ್ನೂ 1946 ರಲ್ಲಿ ಬದುಕುತ್ತಿದ್ದಾನೆ ಎಂದು ಅನ್ನಿಸಬಹುದು. ಆಸ್ಥಾನದಲ್ಲಿ ಮಾತನಾಡುವಂತಹ ಉರ್ದು ಭಾಷೆಯಲ್ಲಿ ಮಾತನಾಡುವ ಹಳೆಯ ದೆಹಲಿಯ ಖೋಜಾ (Eunuchs) ಗಳಿಗೆ ಹಳೆಯ ದೆಹಲಿಯ ಮೊಘಲ್ ಆಡಳಿತದ ಪ್ರಭಾವವು ಇನ್ನೂ ಆವರಿಸಿಕೊಂಡಿತ್ತು. ನಿಗಂಬೋಧ್ ಘಾಟ್ ನ ಸನ್ಯಾಸಿಗಳನ್ನು ನೋಡುವಾಗ ಪೌರಾಣಿಕ ಇಂದ್ರಪ್ರಸ್ಥದ ಕೆಲವೊಂದು ನೆನಪುಗಳು ಬರುತ್ತಿದ್ದವು.

ಎಲ್ಲಾ ವಯೋಮಾನದ ಜನರನ್ನೂ ದೆಹಲಿ ಜನತೆಯಲ್ಲಿ ಕಾಣಬಹುದು. ಹಲವು ಶತಮಾನಗಳ ಐತಿಹ್ಯಗಳು ಕೂಡ ಅಲ್ಲಿ ಅಸ್ತಿತ್ವದಲ್ಲಿವೆ. ವಿಭಿನ್ನ ಯುಗಗಳ ಮನೋಧರ್ಮಗಳು ಕೂಡ ಅಲ್ಲೇ ಹುಟ್ಟಿ, ಬೆಳೆದು ಮಣ್ಣಾದವು.
ದೆಹಲಿಯು ಪ್ರತಿ ಬಾರಿಯೂ ನಾಶದ ನಂತರ ತಲೆಯೆತ್ತುದ್ದಿದ್ದರ ಹಿಂದಿನ ರಹಸ್ಯವನ್ನು ಪೀರ್ ಸದರುದ್ದೀನರೊಂದಿಗಿನ ಭೇಟಿಯ ಎಷ್ಟೋ ತಿಂಗಳುಗಳ ನಂತರ ನಾನು ಅರ್ಥೈಸಿದೆನು. ದೆಹಲಿಯು ಜಿನ್ನ್’ಗಳ ನಗರ ಎಂದು ಪೀರ್ ಹೇಳುತ್ತಾರೆ. ಆಕ್ರಮಣಕಾರರಿಂದ ಹಲವು ಬಾರಿ ಧ್ವಂಸಗೊಂಡರೂ ದೆಹಲಿಯು ಪುನಃ ತಲೆಯೆತ್ತಿ ನಿಂತಿತು. ಬೆಂಕಿಯಿಂದ ಫೀನಿಕ್ಸ್ ಹಕ್ಕಿಯು ಎದ್ದು ಬರುವಂತೆ ಎದ್ದು ಬಂತು. ಹಿಂದುಗಳ ಪುನರ್ಜನ್ಮದ ನಂಬಿಕೆಯಂತೆ, ಆ ನಗರವು ಪ್ರತಿ ಸಲವೂ ಗತಿಸಿದ ಮೇಲೂ ಪುನರ್ಜನ್ಮ ಹೊಂದುತ್ತಿತ್ತು. ಶತಮಾನಗಳ ನಡುವೆ ಹೊಸ ಹೊಸ ರೂಪ ತಾಳುತ್ತಿತ್ತು. ಇದಕ್ಕೆ ಪ್ರಮುಖ ಕಾರಣ, ಸದರುದ್ದೀನರು ಹೇಳುವಂತೆ, ಇದು ಜಿನ್ನ್’ಗಳ ನಗರವಾಗಿರುವುದು. ಜಿನ್ನ್’ಗಳು ಆ ನಗರವನ್ನು ಇಷ್ಟಪಟ್ಟಿದ್ದರು. ಅದು ನಿರ್ಜನವಾಗಿರುವುದನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ. ದೆಹಲಿಯ ಪ್ರತಿಯೊಂದು ಮನೆ, ಗಲ್ಲಿಯೂ ಜಿನ್ನ್’ಗಳ ವಾಸಸ್ಥಾನವಾಗಿದ್ದವು. ಅವುಗಳನ್ನು ನೋಡಲು ನಮಗೆ ಸಾಧ್ಯವಿಲ್ಲ. ಚೆನ್ನಾಗಿ ಗಮನಿಸಿದರೆ, ಏಕಾಗ್ರತೆ ಹೊಂದಿದ್ದರೆ ಅವರ ಸಾನಿಧ್ಯದ ಅನುಭವವುಂಟಾಗುವುದು. ನೀವು ಅದೃಷ್ಟವಂತರಾಗಿದ್ದರೆ ಅವರ ಮಾತುಗಳನ್ನು, ಉಸಿರಿನ ಏರಿಳಿತಗಳನ್ನು ಗ್ರಹಿಸಬಹುದು.

ಮೂಲ: ವಿಲಿಯಂ ಡಾರ್ಲಿಂಪ್ಲ್
ಕನ್ನಡಕ್ಕೆ: ಮುಹಮ್ಮದ್ ಶಮೀರ್, ಪೆರುವಾಜೆ

5 Comments

  1. ಆರಂಭದಲ್ಲಿದ್ದ ಜಿನ್ನ್ ಗಳ ಕಥೆ ರೋಚಕವಾಗಿತ್ತು ನಂತರ ಹಿಡಿತ ಸ್ವಲ್ಪ ಸಡಿಲಗೊಂಡಿದಂತನಿಸಿತು.

Leave a Reply

*