ತವಕ್ಕಲ್ ಮಸ್ತಾನ್: ಮಹಾ ನಗರದಲ್ಲಿನ ಅಭಯ

ನಗರಗಳು ಅನೇಕ ವೈವಿಧ್ಯತೆಗಳನ್ನು ಒಡಲಲ್ಲಿಟ್ಟು ಬೇರೆ ಯಾವುದರ ಕುರಿತೂ ಚಿಂತಿಸದೆ ನಿರಂತರ ಚಲಿಸುತ್ತಿರುತ್ತವೆ. ಸ್ಥಳಗಳಾಗಲಿ ವ್ಯಕ್ತಿಗಳಾಗಲಿ ವಸ್ತುಗಳಾಗಲಿ ಅವುಗಳಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳಲು ನಗರಗಳು ನಮ್ಮನ್ನು ಅನುಮತಿಸಬೇಕೆಂದಿಲ್ಲ. ಮಾನಸಿಕವಾಗಿ ಹತ್ತಿರವಾಗಲು ಪ್ರಾರಂಭಿಸುವಾಗ ನಗರಗಳು ಅದನ್ನು ಅಳಿಸಿ ಹಾಕಿ ಹೊಸ ದೃಶ್ಯಗಳನ್ನು ನಮ್ಮೆದುರಿಗೆ ತಂದಿಡುತ್ತದೆ. ವಾಹನಗಳನ್ನು ಮತ್ತು ಪ್ರೀತಿಯನ್ನು ಎಡೆಯಿಲ್ಲದೆ ಹರಿಸುತ್ತಿರುವ ಈ ರೀತಿಯ ಮಹಾ ನಗರಗಳನ್ನು ‘ನಿತ್ಯಪ್ರವಾಹ’ ಎಂದು ಕರೆಯಬೇಕೆನಿಸುತ್ತದೆ.

ಹೈದರಾಬಾದಿನಿಂದ ಹಿಂದಿರುಗುವ ಯಾತ್ರಾಮಧ್ಯೆ ಅನಿರೀಕ್ಷಿತವಾಗಿ ಬೆಂಗಳೂರು ನಗರಕ್ಕೆ ತಲುಪಿದೆ. ಬೆಂಗಳೂರು ಸುತ್ತಾಟವನ್ನು ತವಕ್ಕಲ್ ಮಸ್ತಾನ್ ದರ್ಗಾದಿಂದ ಶುರುಮಾಡಬೇಕೆಂದು ಆತಿಥೇಯ ಸ್ನೇಹಿತರು ಸಲಹೆ ನೀಡಿದ್ದರು. ಈ ಸಲಹೆ ಸರಿಯಾದುದೆಂದು ತೋಚಿತು. ನಗರಗಳ ಜೀವಂತಿಕೆಯಿರುವುದೇ ಅಲ್ಲಿನ ದರ್ಗಾ, ಗಲ್ಲಿ- ಓಣಿಗಳಲ್ಲಿ. ದರ್ಗಾ ಮತ್ತು ಅಲ್ಲಿನ ಸಂಸ್ಕೃತಿ- ಸಂಪ್ರದಾಯಗಳನ್ನು ಕಾಣುವಾಗ ಒಂದು ಬಗೆಯ ಅನುಭೂತಿ ಹುಟ್ಟುತ್ತದೆ.

ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಮೂವತ್ತರಷ್ಟು ದರ್ಗಾಗಳಿವೆ. ಇಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಮಹಾತ್ಮರು ಬಾಗ್ದಾದ್, ಅರೆಬಿಯನ್ ಪರ್ಯಾಯ ದ್ವೀಪ, ಪರ್ಶಿಯ, ಸಿಂಧ್ ಮೊದಲಾದ ಕಡೆಗಳಿಂದ ಬಿಜಾಪುರವನ್ನು ತಲಪಿದವರು. ದಕ್ಷಿಣ ಭಾರತೆಡೆಗೆ ಸೂಫಿಗಳ ಆಗಮನದ ಕುರಿತು ರಿಚರ್ಡ್ ಮ್ಯಾಕ್ಸ್ವೆಲ್ ಈಟನ್ ತನ್ನ ‘ಸೂಫಿಸ್ ಆಫ್ ಬಿಜಾಪುರ’ ಎಂಬ ಕೃತಿಯಲ್ಲಿ ಬರೆದಿರುವುದು ನೆನಪಿಗೆ ಬರುತ್ತದೆ. ಇಲ್ಲಿರುವ ದರ್ಗಾಗಳಲ್ಲಿ ಹೆಚ್ಚಿನವು ಹುತಾತ್ಮರದ್ದು. ಉದಾಹರಣೆಗೆ: ಜೆ.ಸಿ. ರೋಡ್ ಎಂಬಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಹಾಮಿದ್ ಶಾ, ಬಮುಹೀಬ್ ಶಾ, ಶರಫುದ್ದೀನ್ ಶಾ ಮೊದಲಾದವರು 1791ರ ಮಾರ್ಚ್‌ನಲ್ಲಿ ನಡೆದ ಮೂರನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಮಡಿದವರು. ಅಂದು ಯುದ್ಧದಲ್ಲಿ ಹುತಾತ್ಮರಾದ ಸಾವಿರಕ್ಕೂ ಮಿಕ್ಕ ಸೈನಿಕರನ್ನು ಹಾಮಿದ್ ಶಾರ ದರ್ಗಾದ ಸನಿಹ ದಫನ ಮಾಡಲಾಯಿತೆಂದು ಹೇಳಲಾಗುತ್ತದೆ. ಶರಫುದ್ದೀನ್ ಶಾರ ದರ್ಗಾದ ಪ್ರವೇಶ ದ್ವಾರದಲ್ಲಿರುವ ಫಿರಂಗಿ ಗುಂಡುಗಳು ಟಿಪ್ಪು ಸುಲ್ತಾನರು ಯುದ್ಧದ ಸಂದರ್ಭದಲ್ಲಿ ಬಳಸಲ್ಪಟ್ಟದ್ದೆಂಬ ಅಭಿಪ್ರಾಯವಿದೆ. ಸುಲ್ತಾನರ ತಾಯಿಯ ತಂದೆ ಇಬ್ರಾಹಿಂ ಖಾನ್ ಶತ್ತಾರಿಯ ಸಮಾಧಿಯು ನಾಗರಾಜಪೇಟೆಯ ಧರ್ಮರಾಯ ಸ್ವಾಮಿ ಕ್ಷೇತ್ರದ ಹಿಂಬದಿಯ ಗಲ್ಲಿಯಲ್ಲಿದೆ. ಕೆಕ್ಕೇರಿ ಗೇಟ್ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಹಝ್ರತ್ ಲಕಬ್ ಶಾರ ದರ್ಗಾ ಬೆಂಗಳೂರಿನ ಅತ್ಯಂತ ಹಳೆಯ ದರ್ಗಾ. ಅಭಿವೃದ್ಧಿಯ ಕಬಂಧ ಬಾಹುಗಳಿಂದ ಬಂಧಿಯಾಗಿರುವ ನಿಬಿಡ ಮಾರುಕಟ್ಟೆಗಳು ಮತ್ತು ವಸತಿಗಳ ನಡುವೆ ಬೆಂಗಳೂರಿನ ದರ್ಗಾಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಲಾಗುತ್ತಿಲ್ಲ ಎಂಬ ವಾಸ್ತವವನ್ನು ಈ ಹಿಂದೆ ‘ದಿ ಎಕನಾಮಿಕ್ಸ್ ಟೈಮ್ಸ್’ ಎತ್ತಿ ಹಿಡಿದಿತ್ತು.

ಗುಲಾಬಿ ದಳಗಳ, ಸುಗಂಧಗಳ, ಊದುಬತ್ತಿಗಳ ವಿಶಿಷ್ಟ ಸುವಾಸನೆಗಳಿಂದ ತುಂಬಿದ ದಾರಿಗಳು ದರ್ಗಾಕ್ಕಿರುವ ದೂರ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ. ಸಮೂಸ ಮತ್ತು ಇತರ ಪದಾರ್ಥಗಳ ಪಾಕದ ಗಂಧವು ಇಡೀ ವಾತಾವರಣವನ್ನು ಆವರಿಸುತ್ತಿರುತ್ತದೆ. ಅನುಭವಗಳನ್ನು ರೂಪಿಸುವಲ್ಲಿ ಮತ್ತು ಗತವನ್ನು ನೆನಪಿಸುವುದರಲ್ಲಿ ಈ ಪರಿಮಳ ಮಹತ್ತರ ಪಾತ್ರ ವಹಿಸುತ್ತದೆ.

ದೂರದಿಂದಲೇ ಮಸೀದಿಯ ಮಿನಾರವನ್ನು ಕಾಣಬಹುದು. ಈ ಮಸೀದಿಯ ನಿರ್ಮಾಣದ ಹಿಂದೆ ಸಾಮಾನ್ಯವಾಗಿ ಕೇಳಿಬರುವ ಕೆಲವು ಘಟನೆಗಳನ್ನು ಹೀಗೆ ಸಂಗ್ರಹಿಸಬಹುದು: ತವಕ್ಕಲ್ ಮಸ್ತಾನ್ ಎಂದು ಪ್ರಸಿದ್ಧರಾದ ವ್ಯಕ್ತಿ ಮಿರ್ಝಾ ಬೇಗ್ ಎಂಬ ಹೆಸರಿನ ಪರ್ಶಿಯನ್ ಕುದುರೆ ವ್ಯಾಪಾರಿ. ಅವರು ಬೆಂಗಳೂರಿಗೆ ಬಂದು ಐಹಿಕ ಸುಖಗಳನ್ನು ತ್ಯಜಿಸಿ ಆರಾಧನೆಗಳಲ್ಲಿ ತಲ್ಲೀನರಾದರು ಮತ್ತು ನಿರ್ಗತಿಕರ ಸೇವೆ ಮಾಡುವುದಕ್ಕಾಗಿಯೇ ಸಮಯವನ್ನು ಮೀಸಲಿಟ್ಟಿದ್ದರು.

ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಕೆಂಪೇಗೌಡ 1537ರಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ಬೆಂಗಳೂರು ಕೋಟೆ (ಕಲಾಸಿ ಪಾಳ್ಯ ಕೋಟೆ)ಯನ್ನು ಕಲ್ಲಿನಿಂದ ಪುನರ್ ನಿರ್ಮಿಸಲು 1761ರಲ್ಲಿ ಮೈಸೂರು ಆಡಳಿತಾಧಿಕಾರಿಯಾಗಿದ್ದ ಹೈದರಾಲಿ ತೀರ್ಮಾನಿಸಿದರು. ಕೋಟೆ ನಿರ್ಮಾಣದಲ್ಲಿ ಭಾಗವಹಿಸಿದ್ದ ಮೂವರು ವೇತನ ಪಡೆಯಲು ತಿರಸ್ಕರಿಸಿದಾಗ ಅವರ ಕುರಿತು ಅನ್ವೇಷಿಸುವಂತೆ ಕಿಲಾದರ್ ಇಬ್ರಾಹಿಂ ಖಾನನಿಗೆ ಹೈದರಾಲಿ ಆದೇಶಿಸಿದರು. ಹಗಲು ಪೂರ್ತಿ ಕಾರ್ಮಿಕರಾಗಿ ದುಡಿದು ರಾತ್ರಿ ಕುಂಬಾರ್ ಪೇಟೆ ಮಸೀದಿಯಲ್ಲಿ ತಂಗಿ ಆರಾಧನೆಗಳಲ್ಲಿ ತಲ್ಲೀಣರಾಗುವ ತವಕ್ಕಲ್ ಮಸ್ತಾನ್, ಟಿಪ್ಪು ಮಸ್ತಾನ್, ಮನ್ನಿಕ್ಕ್ ಮಸ್ತಾನ್ ಎಂಬವರಾಗಿದ್ದರು ಆ ಮೂವರು. ಇವರು ಸಹೋದರರಾಗಿದ್ದರು ಮತ್ತು ಪೀರ್ ಭಾಯಿ ಅಥವಾ ಆಧ್ಯಾತ್ಮಿಕ ಸೂಫಿಯೊಬ್ಬರ ಶಿಷ್ಯಂದಿರಾಗಿದ್ದರು.

ಹೈದರಾಲಿಯ ಆದೇಶದ ಪ್ರಕಾರ, ಕಿಲಾದರ್ ಇಬ್ರಾಹಿಂ ಖಾನನು ಅವರನ್ನು ಹಿಂಬಾಲಿಸಿದರು. ಆ ಮೂವರು ಹಗಲಿನ ದುಡಿಮೆಯ ಬಳಿಕ ಕುಂಬಾರ್ ಪೇಟೆಯ ಮಸೀದಿಯನ್ನು ಪ್ರವೇಶಿಸುವುದಾಗಿ ಕಂಡನು. ಆದರೆ, ಆತ ಮಸೀದಿಯ ಒಳಹೊಕ್ಕು ನೋಡಿದಾಗ ಎರಡು ನಾಯಿಗಳು ಕಾವಲು ನಿಂತಿರುವ ಒಂದು ಮನುಷ್ಯ ಶರೀರದ ಮೂರು ಭಾಗಗಳನ್ನು ಮಾತ್ರವೇ ಕಾಣಲು ಸಾಧ್ಯವಾಯಿತು. ಇಬ್ರಾಹಿಂ ಖಾನನು ಕೋಟೆಗೆ ಮರಳಿ ನವಾಬರೊಂದಿಗೆ ಈ ಘಟನೆಯನ್ನು ವಿವರಿಸಿದನು. ನಂತರ ನವಾಬ್ ಹೈದರಾಲಿ ಅಲ್ಲಿಗೆ ತಲುಪಿದಾಗ ಅವರು ಮೂವರು ವಿಶ್ರಾಂತಿಯಲ್ಲಿರುವುದನ್ನು ಕಂಡರು. ಈ ಘಟನೆಯಿಂದ ಮತ್ತು ಕೋಟೆಯ ನಿರ್ಮಾಣ ಅವಧಿಯಲ್ಲಿ ಇವರ ಜೊತೆಗಿದ್ದವರ ಕೆಲವು ಅನುಭವಗಳಿಂದ ಇವರು ಸಾಮಾನ್ಯರಲ್ಲ ಎಂದು ತಿಳಿದ ಹೈದರಾಲಿ ಇವರ ಮೇಲೆ ವಿಶೇಷ ಆಸ್ಥೆ ವಹಿಸಿದ್ದರು.

ನಂತರ ಮನ್ನಿಕ್ಕ್ ಮಸ್ತಾನ್ ಬೆಂಗಳೂರಿನ ಈಗಿನ ಅವೆನ್ಯೂ ರೋಡಿನ ಪ್ರದೇಶಕ್ಕೂ ಟಿಪ್ಪು ಮಸ್ತಾನ್ ತಮಿಳು ನಾಡಿನ ಆರ್ಕೋಟಿಗೂ ತೆರಳಿದಾಗ ತವಕ್ಕಲ್ ಮಸ್ತಾನ್ ಮಾತ್ರ ಮೆಜೆಸ್ಟಿಕ್ ಸಮೀಪದ ಕಾಟನ್ ಪೇಟೆಯಲ್ಲಿಯೇ ವಾಸ್ತವ್ಯ ಹೂಡಿದರು. ಅಂದು ಈ ಪ್ರದೇಶ ಮುಳ್ಳಿನಿಂದ ಕೂಡಿದ ಕುರುಚಲು ಸಸ್ಯಗಳಿರುವ ಪಾಳು ಭೂಮಿಯಾಗಿತ್ತು. ನವಾಬ್ ಹೈದರಾಲಿಯು ಈ ಪ್ರದೇಶವನ್ನು ಸಂದರ್ಶಿಸಿ, ತವಕ್ಕಲ್ ಮಸ್ತಾನರಿಗೆ ಕಾಣಿಕೆಗಳನ್ನು ನೀಡಲು ಮುಂದಾದರು. ಆದರೆ ಮಸ್ತಾನರು ಅದನ್ನು ವಿನಯಪೂರ್ವಕ ತಿರಸ್ಕರಿಸಿದರು. ಬದಲಾಗಿ ಅಲ್ಲೊಂದು ಮಸೀದಿ ನಿರ್ಮಿಸಿಕೊಡುವಂತೆ ಕೇಳಿಕೊಂಡರು. ಆ ವಿನಂತಿಯನ್ನು ಗಣಗೆಗೆ ತೆಗೆದು 1777ರಲ್ಲಿ ಹೈದರಾಲಿ ಆರಂಭಿಸಿದ ಮಸೀದಿ ನಿರ್ಮಾಣ 1783ರಲ್ಲಿ ಅವರ ಕಾಲದ ನಂತರ ಮಗ ಟಿಪ್ಪು ಸುಲ್ತಾನ್ ಪೂರ್ತಿಗೊಳಿಸಿದರು.

ಆರ್ಕೋಟಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಟಿಪ್ಪು ಮಸ್ತಾನರೊಂದಿಗಿನ ಗೌರವದ ಸೂಚಕವಾಗಿ ತನ್ನ ಮಗನಿಗೆ ಹೈದರಾಲಿಯು ಫತ್ಹೆ ಅಲಿ ಎಂಬ ಹೆಸರಿನ ಹೊರತಾಗಿಯೂ ಟಿಪ್ಪು ಎಂದು ನಾಮಕರಣ ಮಾಡಿದ್ದರು ಎಂಬ ಅಭಿಪ್ರಾಯವಿದೆ. ಆದರೆ ಟಿಪ್ಪು ಸುಲ್ತಾನ್ ಜನಿಸಿದ್ದು 1751ರಲ್ಲಿ ಮತ್ತು ಮೇಲೆ ವಿವರಿಸಲಾದ ಘಟನೆ ನಡೆದಿರುವುದು 1761ರಲ್ಲಾಗಿದೆ ಎಂದು ಹೇಳಲಾಗುತ್ತದೆ. ಟಿಪ್ಪು ಎಂಬ ಹೆಸರಿನ ಹಿಂದಿರುವ ಹಲವು ಕಥೆಗಳು ಈ ಮೊದಲು ಓದಿದ್ದು ನೆನಪಿಗೆ ಬರತೊಡಗಿದವು. ಬಾಯ್ಮಾತಿನ ಆಚೆಗೆ ಮೇಲೆ ವಿವರಿಸಲಾದ ಘಟನೆಗಳ ಕಾಲ ಗಣನೆ ಮತ್ತು ಇತರ ಅಂಶಗಳನ್ನು ಸಂಶೋಧಿಸಬೇಕಾಗಿದೆ.

ಒಟ್ಟಿನಲ್ಲಿ ಈ ಮಸೀದಿಯನ್ನು ನವೀಕರಿಸಲಾಗಿದೆ ಎಂಬುವುದು ಮೊದಲ ನೋಟಕ್ಕೆ ತಿಳಿಯುತ್ತದೆ. ಎರಡೂವರೆ ಶತಮಾನದ ಇತಿಹಾಸವಿರುವ ಈ ಮಸೀದಿಯನ್ನು ದುರಸ್ತಿ ಮಾಡಿ ಎರಡು ದಶಕದ ಕೆಳಗೆ ವಿಶಾಲಗೊಳಿಸಲಾಗಿದೆ. ಸಮಾಧಿಯ ಒಂದು ಶಿಲಾಲಿಪಿಯಲ್ಲಿ ತವಕ್ಕಲ್ ಮಸ್ತಾನರ ವಫಾತ್ 1777ರಲ್ಲಿ ಎಂದು ಕೆತ್ತಿರುವುದನ್ನು ಕಾಣಬಹುದು. ತವಕ್ಕಲ್ ಮಸ್ತಾನರು ಪೆನೆಗೊಂಡದ ಪ್ರಸಿದ್ಧ ಸೂಫಿವರ್ಯರಾದ ಬಾವ ಫಕ್ರುದ್ದೀನ್ ಸುಹ್ರವರ್ದಿಯವರ ತ್ವರೀಕತ್ ಸ್ವೀಕರಿಸಿದ್ದರೆಂದು ಪ್ರಸಿದ್ಧ ಪರ್ಶಿಯನ್ ಚರಿತ್ರೆಕಾರರಾದ ಕಿರ್ಮಾನಿ ಹಝ್ರತ್ ಉಲ್ಲೇಖಿಸುತ್ತಾರೆ.

ಗೂಗಲ್ ಮಾಡಿದಾಗ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಮಧ್ಯೆ ರಾಹುಲ್ ಗಾಂಧಿ ದರ್ಗಾ ಸಂದರ್ಶಿಸಿದ ಫೋಟೊ ಒಂದನ್ನು ಕಂಡೆ. ಈ ಹಿಂದೆ ಅಮಿತಾಬ್ ಬಚ್ಚನ್, ಕನ್ನಡ ಚಲನಚಿತ್ರ ನಟ ರಾಜ್ ಕುಮಾರ್ ಮತ್ತು ಕುಟುಂಬ, ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್ ಮೊದಲಾದವರು ಸಂದರ್ಶಿಸಿದ್ದಾರೆಂದು ತಿಳಿಯಲು ಸಾಧ್ಯವಾಯಿತು.

ದರ್ಗಾಗಳು ‘ಅಭಯ’ ಎಂಬ ಪರಿಕಲ್ಪನೆಯನ್ನು ಹೇಗೆ ಜೀವಂತವಾಗಿರಿಸುತ್ತದೆ ಎಂಬುವುದನ್ನು ದೆಹಲಿಯ ಫಿರೋಝ್ ಶಾಹ್ ಕೋಟೆಯಲ್ಲಿನ ಸೂಫಿ ದರ್ಗಾಗಳ ಕುರಿತಾದ ವಿವೇಕ್ ತಾನೇಜ್ ತನ್ನ ಅಧ್ಯಯನದಲ್ಲಿ ( Jinnealogy Time, Islam, and Ecological Thought in the medieval Ruins of Delhi) ವಿವರಿಸುವುದನ್ನು ಕಾಣಬಹುದಾಗಿದೆ. ನಮಾಝ್ ಮುಗಿಸಿ ಬರುವ ಇಸ್ಲಾಮ್ ಧರ್ಮೀಯರ ಆಶೀರ್ವಾದವು ತನ್ನ ಮಗುವಿಗೆ ಲಭಿಸಬೇಕೆಂದು ಕಾದು ನಿಂತಿದ್ದ ಅಮ್ಮಂದಿರನ್ನು ಕಂಡಾಗ ಅದನ್ನೇ ಚಿಂತಿಸತೊಡಗಿದೆ. ಬೆಂಗಳೂರಿನ ಸ್ಥಳೀಯ ಉತ್ಸವವಾದ ಕರಗ ಹಬ್ಬಕ್ಕೆ ಸಂಬಂಧಿಸಿದಂತೆ ತವಕ್ಕಲ್ ಮಸ್ತಾನ್ ದರ್ಗಾಕ್ಕೆ ಪ್ರಮುಖ ಪಾತ್ರವಿದೆ ಎಂಬುದನ್ನು ಇದರೊಂದಿಗೆ ಸೇರಿಸಿ ಓದಬೇಕೆಂದೆನಿಸುತ್ತದೆ. ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ದರ್ಗಾ ದಾರಿಯ ಇಕ್ಕೆಲಗಳಲ್ಲಿ ಲೋಹದ ಬೀಗಗಳನ್ನು ನೇತು ಹಾಕುವ ಸಂಪ್ರದಾಯವಿದೆ.

ಬೆಂಗಳೂರು ಮಹಾನಗರದ ಮಧ್ಯ ಭಾಗದಲಿದ್ದು, ಮೆಜೆಸ್ಟಿಕಿಗೆ ಹತ್ತಿರವಿದ್ದರೂ ತವಕ್ಕಲ್ ಮಸ್ತಾನ್ ದರ್ಗಾ ಪರಿಸರದಲ್ಲಿರುವ ಗಾಢ ಮೌನ, ಶಾಂತ ಪರಿಸರ ಆಕರ್ಷಕವಾಗಿದೆ. ಶುಕ್ರವಾರ ದಿನಗಳಲ್ಲಿ ಇಲ್ಲಿ ಕವ್ವಾಲಿ ನಡೆಯುತ್ತದೆ. ಗಾಢ ಮೌನ ಮತ್ತು ಸಂಗೀತಾತ್ಮಕ ಶಬ್ದದ ಹಿನ್ನೆಲೆ, ಭಕ್ತಿ ತುಂಬಿದ ವಾತಾವರಣ, ಇಸ್ಲಾಮೀ ಬದುಕಿನ ಸೌಂದರ್ಯವನ್ನು ಕಾಣಿಸುವ ಸ್ಥಳ ಎಂಬ ನೆಲೆಯಲ್ಲಿ ಈ ರೀತಿಯ ದರ್ಗಾಗಳು ಮಹತ್ವ ಪಡೆಯುತ್ತದೆ. ’ಹೃದಯದಿಂದ ಆಲಿಸಿ’ ಎಂದು ಚಾಲ್ಸ್ ಹಿಸ್ಕಿಂದ್ ವರ್ಣಿಸಿದ ಶ್ರವಣಾನುಭವಗಳನ್ನಾಗಿದೆ ಈ ದರ್ಗಾಗಳ ಕವ್ವಾಲಿಗಳು, ಕೀರ್ತನೆಗಳು, ಭಕ್ತಿ ಗೀತೆಗಳು ಶ್ರುತಪಡಿಸುತ್ತಿರುವುದು.

ತಮ್ಮ ಬದುಕನ್ನು ನಿಯಂತ್ರಿಸುವ ಅಗೋಚರ ಕೈಗಳನ್ನು ಹುಡುಕಿ ಜನರು ದರ್ಗಾಗಳಿಗೆ ಹರಿದು ಬರುತ್ತಾರೆ. ಆಧುನಿಕತೆಯ ಮುಸುಕುಗಳಿಗೆ ಮುಚ್ಚಿಡಲು ಅಸಾಧ್ಯವೆಂಬತೆ ದರ್ಗಾಗಳು ನಿರ್ವಹಿಸುತ್ತಿರುವ ಈ ಅಧ್ಯಾತ್ಮದ ವಾತಾವರಣವಾಗಿದೆ ಜನರ ಹರಿವಿಗೆ ಮುಖ್ಯ ಸಬೂಬು. ಅಲ್ಲಿ ವಿಶ್ವಾಸಿಗಳ ಆತಂಕ, ಒಳಗುದಿಗಳೆಲ್ಲ ಮಾಯವಾಗುತ್ತದೆ. ಅಧ್ಯಾತ್ಮ ಶಕ್ತಿಯು ಆಶ್ವಾಸ ನೀಡುತ್ತದೆ. ಸ್ತ್ರೀ-ಪುರುಷ ತಾರತಮ್ಯವಿಲ್ಲದೆ ಜನರು ಭಕ್ತಿಯಲ್ಲಿ ಮುಳುಗುತ್ತಾರೆ. ಎಲ್ಲರೂ ತಮ್ಮ ಅಹಂಗಳನ್ನು ಮರೆತು, ತುಂಬಿದ ಕಣ್ಣುಗಳಲ್ಲಿ ಔಲಿಯಾಗಳ ಸಮಾಧಿಗಳಿಗೆ ಬಯಕೆಗಳನ್ನು ಸಲ್ಲಿಸುತ್ತಾರೆ. ಬಿಜು ಇಬ್ರಾಹಿಂ ಬರೆದಂತೆ ಆಂತರಿಕ ಬೆಳಕಿನಿಂದ ತುಂಬುವ ಸ್ಥಳಗಳಾಗಿ ದರ್ಗಾಗಳು ಕಾರ್ಯನಿರ್ವಹಿಸುತ್ತಲೇ ಇದೆ.

ಮೂಲ: ಮುಹಮ್ಮದ್ ಸಿರಾಜ್ ರಹ್ಮಾನ್
ಅನುವಾದ: ಅಮ್ಮಾರ್ ನೀರಕಟ್ಟೆ

1 Comment

Leave a Reply

*