‘ಎ ಸ್ಮಾಲ್ ಡೆತ್’ – ‘ಇಬ್ನ್-ಅರಬಿ’ಯೆಡೆಗೊಂದು ಪಯಣ

"ಸೃಷ್ಟಿಕರ್ತನೇ... 
ನಿನ್ನ ಮೇಲಿನ ಪ್ರೀತಿ 
ನನ್ನೊಳು ಮಾತ್ರವಲ್ಲ
ಆದರೆ, ನನ್ನೊಳಿರುವ
ಪ್ರೀತಿ ನಿನ್ನೊಳು ಮಾತ್ರ...
                    -ಇಬ್ನ್- ಅರಬಿ

ಹದಿನೇಳನೆಯ ಶತಮಾನದ ಹೊತ್ತಿಗೆ ಅರಬ್ ಪ್ರಪಂಚದಲ್ಲಿ ಕಾದಂಬರಿ ಸಾಹಿತ್ಯವು ಸಣ್ಣ ಪ್ರಮಾಣದಲ್ಲಿ ಪರಿಚಿತವಾಗಿದ್ದರೂ, ಆರಂಭಿಕ ದಿನಗಳಲ್ಲಿ ಇವು ಕೇವಲ ಅನುವಾದಿತ ಕೃತಿಗಳು ಮಾತ್ರವಾಗಿತ್ತು. ಇಸ್ಲಾಮಿಕ್ ಜೀವನ ಶೈಲಿಯೆಡೆಗಿನ ಸಾಹಿತ್ಯದ ನವ್ಯ ರೂಪದ ಅಭಿವ್ಯಕ್ತಿಯ ಪ್ರಾರಂಭ ಅವರ ಕೃತಿಗಳಲ್ಲಿ ಸ್ಪಷ್ಟವಾದ ಪ್ರಭಾವ ಬೀರಿತು. ಜಾರ್ಜ್ ಸೈದಾನ್, ನಜೀಬ್ ಕಯ್ಲಾನಿ, ಮಅರೂಫ್ ಅರ್ನಾತ್ವ್ ಮುಂತಾದವರ ಲೇಖನಿಯು ಅರಬ್ ಸಾಹಿತ್ಯವೆಂಬ ವಿಶಾಲ ಜಗತ್ತಿಗೆ ಇಸ್ಲಾಮಿಕ್ ಇತಿಹಾಸ ಕಾದಂಬರಿಗಳ ಪ್ರವೇಶಕ್ಕೆ ಪ್ರಮುಖ ಪಾತ್ರ ವಹಿಸಿವೆ. ಜಾರ್ಜ್ ಸೈದಾನನ ಕಾದಂಬರಿಗಳಲ್ಲಿ ಮುಸ್ಲಿಂ ವಿದ್ವಾಂಸರು ಕೀಳು ಮಟ್ಟದಲ್ಲಿ ಚಿತ್ರಿಸಲ್ಪಡತೊಡಗಿದಾಗ ನಜೀಬ್ ಕೈಲಾನಿ ಈ ಬಗ್ಗೆ ಪ್ರಾಮಾಣಿಕತೆ ವ್ಯಕ್ತಪಡಿಸಲಾರಂಭಿಸಿದರು. ವ್ಯಕ್ತಿಗತ ಇತಿಹಾಸದ ಜೊತೆಗೆ ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ಪರಿಚಯಿಸುವ ಮತ್ತು ಇಸ್ಲಾಂ ಧರ್ಮದ ಆಚಾರಗಳನ್ನು ಜನರೆಡೆಯಲ್ಲಿ ಬಿತ್ತರಿಸುವ ಸಾಧ್ಯತೆಗಳನ್ನು ಅವರು ತಮ್ಮ ಬರಹಗಳ ಮೂಲಕ ಸಾಫಲ್ಯಗೊಳಿಸಲು ಶ್ರಮಿಸಿದರು.

ಮುಹಮ್ಮದ್ ಹಸನ್ ಅಲ್- ವಾನ್

ಕೆಲವೊಮ್ಮೆ ವೈಯಕ್ತಿಕ ಇತಿಹಾಸಗಳು ಸಾಮಾಜಿಕ ಇತಿಹಾಸವನ್ನು ಉತ್ಕೃಷ್ಟಗೊಳಿಸುತ್ತವೆ. ವಿದ್ವಾಂಸರು ಮತ್ತು ಆತ್ಮಜ್ಞಾನಿಗಳ ಪುಣ್ಯ ಸ್ಮರಣೆಗಳು ಮುಸ್ಲಿಂ ದೈನಂದಿನ ಜೀವನದ ಒಂದು ಪ್ರಮುಖ ಭಾಗವಾಗಿಯೂ ಕಾಣಬಹುದು. ಆಧ್ಯಾತ್ಮಿಕ ವಾತಾವರಣವನ್ನು ರಚಿಸುವಲ್ಲಿ ಧಾರ್ಮಿಕ ಪಂಡಿತರ ಜೀವನ ಚರಿತ್ರೆಯ ಕಥೆಗಳು ಮತ್ತು ಕಾವ್ಯಗಳು ಸೇರಿದಂತೆ ವಿಭಿನ್ನ ರೀತಿಯ ಕಥನಗಳನ್ನು ಬಳಸಲಾಗುತ್ತದೆ. ರೂಮಿ ಮತ್ತು ತಿಬ್ರೀಸಿಯನ್ನು ಕಾದಂಬರಿ ಸಾಹಿತ್ಯದಲ್ಲಿ ಓದಿ ಪಡೆದ ಆಧುನಿಕ ಜಗತ್ತಿನ ಮುಂದೆ ಇಬ್ನ್- ಅರಬಿಯ ಜೀವನ ಪಯಣಗಳು ಮತ್ತು ದೈವಿಕ ಸ್ನೇಹದ ಆಳವನ್ನು ಅಕ್ಷರ ರೂಪಕ್ಕಿಳಿಸುವ ಮೂಲಕ ಕಳೆದ ವರ್ಷದ ಅರೇಬಿಕ್ ಬುಕರ್ ಪ್ರಶಸ್ತಿ ವಿಜೇತ ಕೃತಿ ಮುಹಮ್ಮದ್ ಹಸನ್ ಅಲ್- ವಾನ್ ವಿರಚಿತ ‘ಎ ಸ್ಮಾಲ್ ಡೆತ್ ‘(موت الصغير ) ತನ್ನ ಸ್ವ- ಭಾವನೆಗಳ ಸಾಗರದಲ್ಲಿ ಮಿಂದು ದಡ ಸೇರುವಲ್ಲಿ ಯಶಸ್ವಿಯಾಗಿದೆ. ದೈವಿಕ ಪ್ರೀತಿಯ ಅವಿಸ್ಮರಣೀಯ ಬ್ರಹ್ಮಾಂಡದೊಳು ತೀರ್ಥಯಾತ್ರೆ ಹೊರಟ ಆಧ್ಯಾತ್ಮಿಕ ಜ್ಞಾನಿಗಳಲ್ಲಿ ಪ್ರಮುಖರಾಗಿದ್ದಾರೆ ಇಬ್ನ್- ಅರಬಿ. ಅಪವಿತ್ರ ಮನಸ್ಸಿನಲ್ಲಿ ಶಾಂತಿ ನೆಲೆಸಲು ಮತ್ತು ಏಕಾಂತ ಪ್ರಯಾಣದ ಮೂಲಕ ದೈವಿಕ ಪ್ರೀತಿಯ ದಾಹ ನೀಗಿಸಲು ದಿವ್ಯ ಜ್ಞಾನಿಗಳೆಂದೂ ಅಲೆದಾಡುತ್ತಿರುವರು. ತನ್ನ ಮನಶ್ಶಾಂತಿಗಾಗಿ ದೈವಿಕ ಪ್ರೇಮದ ಆಳವನ್ನರಸುತ್ತಾ ನಾಲ್ಕು ಆಧ್ಯಾತ್ಮಿಕ ಸಾಧಕರನ್ನು ಹುಡುಕುವ ಪ್ರಯಾಣವಾಗಿದೆ ಈ ಕಾದಂಬರಿಯ ಹೂರಣ. ಅರೇಬಿಕ್ ಬುಕರ್ ಪ್ರಶಸ್ತಿ ಕಿರುಪಟ್ಟಿಯಲ್ಲಿ ಸ್ಥಾನ ಪಡೆದ ‘ಅಲ್- ಖುನ್ದುಸ್ ‘(2013) ಸೇರಿದಂತೆ ಸುಮಾರು ಐದು ಕಾದಂಬರಿಗಳನ್ನು ರಚಿಸಿದ ಹಸನ್ ಅಲ್- ವಾನ್ ಈ ಹಿಂದೆಂದಿಗಿಂತಲೂ ಬಹಳ ಭಿನ್ನವಾಗಿ ಕಲ್ಪನಾಮಯ ಅವಾಸ್ತವಿಕ ಬರವಣಿಗೆಯ ತೊಡೆದು ವಾಸ್ತವಾಧಾರಿತ ಕಾದಂಬರಿಯೆಡೆಗಿನ ಬದಲಾವಣೆಯನ್ನಾಗಿದೆ ಈ ಕೃತಿಯ ಮೂಲಕ ಸಾಕ್ಷಾತ್ಕಾರಗೊಳಿಸುವುದು.

ಮೌಲ್ಯಗಳ, ವ್ಯಕ್ತಿಗಳ, ಘಟನಾ ಸಂದರ್ಭಗಳ ಈ ರಚನೆಗೆ ಸಾಹಿತ್ಯಿಕವಾದದ್ದೇ ಅಲ್ಲದೆ ಸಾಮಾಜಿಕವಾದ ಹಾಗೂ ಒಮ್ಮೊಮ್ಮೆ ದಾರ್ಶನಿಕವಾದ ಆಯಾಮವೂ ಉಂಟು. ಇಸ್ಲಾಮಿಕ್ ಸೂಫೀ- ಬೌದ್ಧಿಕ ಸಂಕಥನದಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಟ್ಟ ಇಬ್ನ್- ಅರಬಿಯ ಕಲ್ಪನಾ ಜಗತ್ತನ್ನು ಅನಾವರಣಗೊಳಿಸುವ ಮೂಲಕವಾಗಿದೆ ಕಾದಂಬರಿಯ ಪ್ರತಿಯೊಂದು ಸಾಲುಗಳು ಮುಂದುವರಿಯುವುದು. ಇಬ್ನ್- ಅರಬಿಯೊಂದಿಗಿನ ಕೆಲವೊಂದು ಸೈದ್ಧಾಂತಿಕ ಚರ್ಚೆಗಳು ನಡೆಯುತ್ತಿದ್ದರೂ, ಅವರ ಯಾವುದೇ ಜೀವನ ಚರಿತ್ರೆಗಳು ಪ್ರಕಟಿಸಲ್ಪಟ್ಟಿಲ್ಲ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡಲ್ಲಿ ಈ ಕಾದಂಬರಿಯು ಸಾಹಿತ್ಯ ವಲಯದಲ್ಲಿ ಹೊಸ ಮೈಲಿಗಲ್ಲಾಗುತ್ತದೆ. ಅದೇ ಸಂದರ್ಭ, ಅತ್ಯಂತ ಪ್ರಸಿದ್ಧ ಅರೇಬಿಕ್ ತತ್ವಜ್ಞಾನಿ (Arabic philosopher) ಎಂಬ ನಿಟ್ಟಿನಲ್ಲಿ ಕಾದಂಬರಿಯು ಇಬ್ನ್- ಅರಬಿಯ ಜೀವನ ಮತ್ತು ವಿಚಾರಗಳನ್ನು ಪ್ರಸ್ತುತಪಡಿಸುವಲ್ಲಿ ತನ್ನದೇ ಆದ ಇತಿ- ಮಿತಿಗಳನ್ನು ಎದುರಿಸುತ್ತಿದೆ. ಇಪ್ಪತ್ತೊಂದನೆಯ ಶತಮಾನದ ಅಕಾಡಮಿಕ್ ವಲಯದಲ್ಲಿ ಹೆಚ್ಚು ಚರ್ಚಿಸಲ್ಪಡುತ್ತಿರುವ ವ್ಯಕ್ತಿಗಳಲ್ಲಿ ಇಬ್ನ್- ಅರಬಿಯ ಹೆಸರೂ ಸ್ಥಳಹಿಡಿದಿದೆ.

ಧಾರ್ಮಿಕ ಜ್ಞಾನದಲ್ಲಿ ಪರಿಣಿತರಾದ ಇಬ್ನ್- ಅರಬಿಯನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸುವ ಮೂಲಕ ಸಾಹಿತ್ಯ ವಲಯದಲ್ಲಿ ಆ ಹೆಸರು ಚರ್ಚಾವಿಷಯವಾಗಿ ಮಾರ್ಪಡುವ ಸಾಧ್ಯತೆಯಿಲ್ಲದಿದ್ದರೂ, ಹಸನ್ ಅಲ್- ವಾನ್ ಉಪಯೋಗಿಸಿದ ಈ ವಿಧಾನವು ಅಂತಹ ಒಂದು ಸಾಧ್ಯತೆಯನ್ನು ಮುಂದಿಡುವ ಪ್ರಯತ್ನ ಮಾಡಿದೆ. ಇಬ್ನ್- ಅರಬಿಯ ಜೀವನವನ್ನು ಸಂಪೂರ್ಣ ನಿಖರವಾಗಿ ದಾಖಲಿಸಲಾಗಿಲ್ಲವಾದರೂ, ತನ್ನ ಸ್ವ- ರಚನೆಯಾದ ಪ್ರಸಿದ್ಧ ಕೃತಿ ‘ಫುತೂಹಾತುಲ್ ಮಕ್ಕಿಯ್ಯಾ’ ದಲ್ಲಿ ಸ್ವಯಂ ದಾಖಲಿಸಿದ ಜೀವನದ ಭಾಗಗಳನ್ನು ಅದರ ನೈತಿಕತೆ ನಷ್ಟ ಹೊಂದದ ರೀತಿ ತನ್ನ ಬರವಣಿಗೆಯಲ್ಲಿ ಸ್ವೀಕರಿಸಿದ್ದಾರೆ. ನೀರಸ ಓದುವಿಕೆಯ ಅಪಾಯದಿಂದ ಪಾರಾದ ಈ ಕೃತಿಯ ಭಾಷಾ ತೇಜಸ್ಸು, ಇಬ್ನ್- ಅರಬಿಯ ಸ್ವಂತ ಭಾಷಾ ಪ್ರಾವೀಣ್ಯತೆಯ ಸಂಯೋಗದೊಂದಿಗೆ ಕಾದಂಬರಿಯ ಹಾದಿ ಹಿಡಿಯುತ್ತದೆ.

ವಿಧಿಗಳಿಂದ ಮಾರ್ಗದರ್ಶಿಸಲ್ಪಟ್ಟ ಜೀವನ…

ಯಾವುದೇ ಒಬ್ಬ ವ್ಯಕ್ತಿಯನ್ನು ಮತ್ತು ಆತ ಬೆಳೆದು ಬಂದ ಸಾಮಾಜಿಕ- ಸಾಂಸ್ಕೃತಿಕ ವ್ಯವಸ್ಥೆಯನ್ನು ಇತಿಹಾಸ ಪುಸ್ತಕಗಳಿಗಿಂತ ಹೆಚ್ಚು ಹೃದಯಸ್ಪರ್ಶಿಯಾಗಿ ಕಣ್ಣಿಗೆ ಕಟ್ಟುವಂತೆ ಕಾದಂಬರಿಗಳು ಹೆಣೆದು ಕೊಡುತ್ತವೆ. ಕಾದಂಬರಿಕಾರ ಇಲ್ಲಿ ಇಬ್ನ್- ಅರಬಿಯನ್ನು ಆತ್ಮ ಚರಿತ್ರೆಯ ರೂಪದಲ್ಲಿ ಪರಿಚಯಿಸುವ ಮೂಲಕ ಈ ಅನುಭವಗಳನ್ನು ಅನುವಾದಿಸಲು ಪ್ರಯತ್ನಿಸತ್ತಾರೆ. ತಾಯಿಯ ಗರ್ಭದಿಂದ ತನ್ನ ಜೀವನದ ಕೊನೆಯ ಉಸಿರಿನವರೆಗೂ, ಅದರೆಡೆಯಲ್ಲಿ ಸವೆಸಿದ ಅನಂತ ಹಾದಿಗಳು ಮೂಡಿಸಿದ ಹೆಜ್ಜೆ ಗುರುತುಗಳನ್ನೂ ಹನ್ನೊಂದು ಅಧ್ಯಾಯಗಳನ್ನಾಗಿಸಿ ತಮ್ಮ ಕೃತಿಯಲ್ಲಿ ವಿವರಿಸಹೊರಟಿದ್ದಾರೆ. ಇಬ್ನ್- ಅರಬಿಯ ಕೃತಿ ಸಂಗ್ರಹಗಳು ಮತ್ತು ಜೀವನ ಚರಿತ್ರೆಯು ಹಸ್ತಾಂತರಿಸಲ್ಪಟ್ಟ ಹಿ. 610 ರಿಂದ ಹಿ. 1433 ( ಕ್ರಿ.ಶ 1212 – ಕ್ರಿ.ಶ 2012 ) ರವರೆಗಿನ ತೀವ್ರವಾದ ಇತಿಹಾಸವನ್ನು ವಿವರಿಸುವ ಭಾಗವೂ ಈ ಹನ್ನೊಂದು ಅಧ್ಯಾಯಗಳೆಡೆಯಲ್ಲಿ ಕಾದಂಬರಿಯ ಒಂದು ಭಾಗವಾಗಿ ಪರಿಚಯಿಸಲ್ಪಟ್ಟಿದೆ.

“ಜನನ ಪೂರ್ವ ಮತ್ತು ಮರಣೋತ್ತರವಾಗಿ ಸೃಷ್ಟಿಕರ್ತನು ನನಗೆ ಎರಡು ಅಲೌಕಿಕ ಜೀವನವನ್ನು ಅನುಭವಿಸುವ ಅವಕಾಶ ನೀಡಿದ. ಮೊದಲನೆಯದಾಗಿ, ತಾಯಿ ನನಗೆ ಜನ್ಮ ನೀಡುವುದು ಮತ್ತು ಎರಡನೇಯದು, ನನ್ನ ಮಗ ನನ್ನನ್ನು ದಫನ್ ಮಾಡುವುದಾಗಿಯೂ ನಾನು ಕಂಡೆನು” ತಾಯಿಯ ಗರ್ಭಾಶಯದಿಂದ ಇಬ್ನ್- ಅರಬಿಯ ಆಗಮನದಿಂದಾಗಿದೆ ಕಾದಂಬರಿಯ ಪ್ರಾರಂಭ. ತನ್ನ ತಂದೆ ಮಹಾನ್ ವಿದ್ವಾಂಸರು ಮತ್ತು ಅಂದಿನ ಆಡಳಿತಗಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯಾಗಿದ್ದರು. ಇಬ್ನ್- ಅರಬಿ ಧಾರ್ಮಿಕ ವಾತಾವರಣದಲ್ಲಿ ಬೆಳೆಯುವುದರ ಜೊತೆಗೆ ಧಾರ್ಮಿಕ ವಿಷಯಗಳಲ್ಲಿ ಜಾಗರೂಕತೆಯನ್ನು ಪಾಲಿಸ ತೊಡಗಿದರು. ದೈವಿಕ ಮಾರ್ಗಸೂಚಿಗಳನ್ನನುಸರಿಸಿ ಜೀವನದ ಹಾದಿಯನ್ನು ದಾಟಿದರು. ರಾತ್ರಿಯ ಏಕಾಂತತೆಯಲ್ಲಿ ದೈವಿಕ ಗ್ರಂಥದ ಪಾರಾಯಣದೊಳು ತೊಡಗಿ, ದೈವೀಸ್ಮರಣೆಯೊಳು ಜಪಮಣಿಯ ಎಣಿಸುತ್ತಾ ನಿರ್ಲಿಪ್ತ ಮನಸ್ಸಿನೊಡನೆ ಗಾಢ ಕತ್ತಲನ್ನೂ ಭೇದಿಸುವ ದಿವ್ಯ ದೀಪ್ತಿಯನ್ನು ಬೆಳಗಿಸಿದರು. ಆಧ್ಯಾತ್ಮಿಕತೆಯ ಔನ್ನತ್ಯಕ್ಕೆ ತಲುಪಿದಾಗ ರಾತ್ರಿ ವೇಳೆಗಳಲ್ಲಿ ದೈವಿಕ ಗ್ರಂಥದ ಪಾರಾಯಣಕ್ಕಾಗಿ ಸಮಾಧಿ ಸ್ಥಳಗಳ ಇರುಳಿನ ಏಕಾಂತತೆಯನ್ನರಸುತ್ತಾ ಹೊರಟ ಇಬ್ನ್- ಅರಬಿಯ ಆರಂಭಿಕ ದಿನಗಳನ್ನಾಗಿದೆ ಕಾದಂಬರಿಯ ಪ್ರಾರಂಭಿಕ ಹಂತದಲ್ಲಿ ವಿವರಿಸುವುದು.

ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳನ್ನು ತಡೆಯುವ ಮತ್ತು ಧರ್ಮ ಪ್ರಚಾರದಲ್ಲಿ ತಮ್ಮನ್ನು ಸಕ್ರಿಯಗೊಳಿಸಿದ್ದ, ಇಮಾಂ ಗಝಾಲಿಯ ಶಿಷ್ಯನೂ ಆದ ಇಬ್ನ್- ತೂಮರ್ ಆರಂಭಿಸಿದ ‘ಅಲ್- ಮುವಹ್ಹಿದೀನ್ ‘ ಆಡಳಿತದ ಕೊನೆಯ ದಿನಗಳಲ್ಲಿ ಅಂದರೆ, ಹಿ. 560 ರಲ್ಲಾಗಿತ್ತು ಇಬ್ನ್- ಅರಬಿಯ ಜನನ. ಧಾರ್ಮಿಕ ವಿದ್ವಾಂಸರು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಗೌರವಿಸಿದ ಇವರಿಗೆ ಅತಿ ದೊಡ್ಡ ಬೆದರಿಕೆ ಫ್ರೆಂಚ್ ಆಕ್ರಮಣವಾಗಿತ್ತು. ಮುವಹ್ಹಿದೀನ್ ಆಡಳಿತಗಾರರ ಉಳಿವಿಗೆ ಅಡ್ಡಿಪಡಿಸುವ ಶಕ್ತಿಗಳನ್ನು ಎದುರಿಸುವುದು ಅವರಿಗೆ ಬೆದರಿಕೆಯಾಗಿ ಮಾರ್ಪಟ್ಟಿತು. ಹಿ. 567 ರಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಂತೆ ಇಬ್ನ್- ಅರಬಿಯ ಕುಟುಂಬ ಮುರ್ಸಿಯ್ಯಾದಿಂದ ಇಶ್ಬೆಲಿಯ್ಯಾ (ಸೆವಿಯ್ಯಾ) ಪ್ರದೇಶದತ್ತ ವಲಸೆ ಹೋಗಬೇಕಾಯಿತು. ತನ್ನದೆಲ್ಲವ ಬಿಟ್ಟು ತನ್ನದಲ್ಲದೂರಿಗೆ ಹೊರಡುವ ಈ ನೋವು ಕಾದಂಬರಿಯುದ್ದಕ್ಕೂ ಇಬ್ನ್- ಅರಬಿಯ ಅಂತಃಕರಣದೊಳು ತನ್ಮಯವಾಗಿ ನರ್ತಿಸುವ ನರ್ತನೆಯ ಕಾಣಬಹುದು.

ಆತ್ಮೀಯ ಚೈತನ್ಯ ಮತ್ತು ಸಂರಕ್ಷಣೆಯನ್ನು ಒದಗಿಸುವ ನಾಲ್ಕು ಆಧ್ಯಾತ್ಮಿಕ ಗುರುಗಳ ಅನ್ವೇಷಣೆಯಲ್ಲಾಗಿದೆ ಇನ್ನು ಮುಂದಕ್ಕೆ ಕಾದಂಬರಿಯ ಪ್ರಯಾಣ ಮುಂದುವರೆಯುವುದು. ಬದಲಾವಣೆಯಾಗುವ ವಿಶ್ವಾಸಿಯ ಜೀವನ ಕ್ರಮಗಳು ಮತ್ತು ಜೀವನದ ಜಂಜಾಟದೊಳು ಎದುರಾಗುವ ತೊಂದರೆಗಳು, ಈ ಯಾತ್ರೆಯ ಉದ್ದಗಲಕ್ಕೂ ಇಬ್ನ್- ಅರಬಿಯೆಂಬ ದೈವಿಕ ಸಂಪ್ರೀತಿಯೆಡೆಗಿನ ದಾರಿಹೋಕನೊಂದಿಗಿದೆ. ಈಜಿಪ್ಟ್, ಹಿಜಾಸ್, ಶಾಮ್, ಇರಾಕ್ ಮತ್ತು ತುರ್ಕೀ ಮೊದಲಾದ ದೇಶಗಳ ಮೇಲೆ ಹಾದು ತನ್ನ ಯಾತ್ರೆ ಡಮಾಸ್ಕಸಿನಲ್ಲಿ ಅಂತ್ಯಗೊಳ್ಳುತ್ತದೆ. ಈ ಒಂದು ದೀರ್ಘ ಪ್ರಯಾಣದ ಮಧ್ಯೆ ತನ್ನೆಲ್ಲಾ ಸಂತೋಷಗಳು ಮತ್ತು ಕಷ್ಟಗಳಲ್ಲಿ ಭಾಗಿಯಾದ ಸಹ ಪ್ರಯಾಣಿಕರಾಗಿದ್ದರು ತನ್ನ ಶಿಷ್ಯಂದಿರಲ್ಲೊಬ್ಬರಾದ ‘ಬದ್ರುಲ್ ಹಬ್ಶೀ’. ಯಾತ್ರೆಯ ಅಂತ್ಯದವರೆಗೂ ಜೊತೆಗಿದ್ದ ಅವರು ಕೊನೆಯ ಸಮಯದಲ್ಲಿ ಕುಷ್ಠರೋಗ ಬಾಧಿತರಾಗಿ ಇಬ್ನ್- ಅರಬಿಯಿಂದ ಅಗಲಬೇಕಾಯಿತು. ಸುಧಾರಿಸಿಕೊಳ್ಳಲಾಗದ ಬೇಸರದೊಂದಿಗಾಗಿತ್ತು ತನ್ನ ಶಿಷ್ಯನನ್ನು ತೊರೆದು ಯಾತ್ರೆ ಮುಂದುವರೆಸುವುದು.

ಜೀವನದ ಕೊನೆಯವರೆಗೂ ನೆಲೆನಿಲ್ಲುವ ಪ್ರೀತಿಯ ವಿಭಿನ್ನ ಮುಖಗಳು ಕಾದಂಬರಿಯುದ್ದಕ್ಕೂ ವ್ಯಕ್ತವಾಗಿದೆ. ಜನ್ಮ ನೀಡಿದ ತಾಯಿ – ತಂದೆಯ ಪ್ರೀತಿ ಅವರೊಂದಿಗಿನ ಪ್ರತ್ಯೇಕಗೊಳ್ಳುವಿಕೆಯಲ್ಲಿಯೂ, ಹುಟ್ಟಿ ಬೆಳೆದು ಬಾಲ್ಯವನ್ನು ರೂಪಿಸಿದ ತಾಯ್ನಾಡು ಮುರ್ಸಿಯ್ಯಾದೊಂದಿಗಿನ ಪ್ರೀತಿ ಅದರೊಂದಿಗಿನ ಅಗಲುವಿಕೆಯಲ್ಲಿಯೂ, ಗುರು – ಶಿಷ್ಯ ಪ್ರೀತಿಯ ಪ್ರಾಮಾಣಿಕ ಮುಖಗಳು ಯಾತ್ರೆಗಳಾಗಿಯೂ, ಜ್ಞಾನಾನುಭವಗಳಾಗಿಯೂ ಕಾದಂಬರಿಯೊಳು ಚಿತ್ರೀಕರಿಸಲ್ಪಟ್ಟಿದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಇಲ್ಲಿನ ಕಾದಂಬರಿ ರೂಪುಗೊಳ್ಳುವುದೇ, ವಿಶಾಲ ಮರುಭೂಮಿಯೊಳು ದಿಕ್ಕುತಪ್ಪಿ ಓಯಸಿಸ್ ಹುಡುಕಿ ನಡೆವ ಅಲೆಮಾರಿಗಳಂತೆಯೇ ದೈವಿಕ ಪ್ರೀತಿಯ ದಾಹ ತಣಿಸುವಿಕೆಗಾಗಿ ಕೈಗೊಳ್ಳುವ ಯಾತ್ರೆಗಳ ಮೂಲಕವಾಗಿದೆ.

ಪರಿಕಲ್ಪನಾ ಜಗತ್ತು ಮತ್ತು ವಿಭಿನ್ನ ಸಾಂಸ್ಕೃತಿಕ ಚಿತ್ರಗಳು…

ಸಮರ್ಪಕವಾದ ಒಂದು ಜೀವನ ಚರಿತ್ರೆ ಎಂಬ ನಿಟ್ಟಿನಿಂದ ಹೊರತಾಗಿ ಹಾಗೂ ಕಾದಂಬರಿಯೆಂಬ ಸಂಕೀರ್ಣತೆಯಿಂದ ಸ್ವತಂತ್ರರಾಗಿಯಾಗಿದೆ ಇಬ್ನ್- ಅರಬಿಯ ಪರಿಕಲ್ಪನಾ ಜಗತ್ತನ್ನು ಅಕ್ಷರಲೋಕದಿಂದ ಓದಬೇಕಾಗಿರುವುದು. ಆಧ್ಯಾತ್ಮಿಕತೆ ಒಂದು ಲಕ್ಷಣವೆಂದೂ, ಆ ಲಕ್ಷಣ ದೂರ ಸರಿದಾಗ ಆಧ್ಯಾತ್ಮಿಕತೆ ಆತನಿಂದ ದೂರವಾಗುತ್ತದೆಯೆಂಬ ಇಬ್ನ್- ಅರಬಿಯ ಈ ಮಾತುಗಳನ್ನೂ ಓದಬೇಕಾಗಿರುವುದು ಕಾದಂಬರಿಯ ಸೀಮೆಯ ಹೊರ ನಿಂತುಕೊಂಡಾಗಿದೆ. ಕಾರಣ, ಕಾದಂಬರಿಯ ಒಳಗಿರುವ ಇಬ್ನ್- ಅರಬಿ ಆಪ್ತರಾಗುವುದು ಪ್ರಯಾಣಗಳ ಮೂಲಕವೇ ಹೊರತು ತಮ್ಮ ಪರಿಕಲ್ಪನಾ ಜಗತ್ತಿನ ಮೂಲಕವಲ್ಲ.

ಜನನಿಬಿಡತೆಯಿಂದ ದೂರ ಸರಿದು ಆರಾಧನಾ ಲೋಕದಲ್ಲಿ ವಿಹರಿಸುವುದಕ್ಕೆ ಭಿನ್ನವಾಗಿ ಜ್ಞಾನಾರ್ಜನೆ ಮತ್ತು ಜ್ಞಾನ ಪ್ರಸಾರದಲ್ಲಿ ಸಾಗುವ ಆಧ್ಯಾತ್ಮಿಕ ಜೀವನವಾಗಿತ್ತು ಅವರ ಆಯ್ಕೆ. ಆದ್ದರಿಂದಲೇ, ಅವರ ಆತ್ಮೀಯ ಸಭೆಗಳಲ್ಲಿ ಪಾಲ್ಗೊಂಡ ಸಾಮಾನ್ಯ ಜನರಿಗೆ ತಮ್ಮ ಸಂಪೂರ್ಣ ಆಲೋಚನೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಒಮ್ಮೆ ಕೈರೋ ನಗರದಲ್ಲಿ ನೆರೆದ ಜನಸ್ತೋಮಕ್ಕೆ ಆಧ್ಯಾತ್ಮಿಕ ಹಿತೋಪದೇಶ ನೀಡುತ್ತಿರುವಾಗ ಸಭೆಯಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಎದ್ದು ನಿಂತು ಟೀಕಿಸಲು ಪ್ರಾರಂಭಿಸಿದ. ವಹ್ದತುಲ್ ವುಜೂದ್ ಎಂಬ ಪರಿಕಲ್ಪನೆ ಏಕಾದೈವಾರಾಧನೆಯನ್ನು ನಿರಾಕರಿಸುತ್ತದೆಯೆಂದೂ, ತಾವು ಅವಿಶ್ವಾಸಿ ಎಂದೂ ಆಗಿತ್ತು ಅವನ ವಾದ. ಈ ವಿಚಾರ ನ್ಯಾಯಾಧೀಶರ ಬಳಿ ತಲುಪಿ ಇಬ್ನ್- ಅರಬಿಯ ತರಗತಿಗಳು ಸ್ಥಗಿತಗೊಳಿಸಿ ಅವರನ್ನು ಬಂಧಿಸುವ ಮಟ್ಟಿಗೆ ವಿಷಯ ತಾರಕ್ಕೇರಿತು. ಇನ್ನೊಂದೆಡೆ ಆ ಊರಿನ ನ್ಯಾಯಾಧೀಶರಾಗಿದ್ದ ಇಬ್ನ್- ಸಕಿಯ್ಯ್ ಇಬ್ನ್- ಅರಬಿಯ ಆಧ್ಯಾತ್ಮಿಕ ಪ್ರವಚದಲ್ಲಿ ಭಾಗವಹಿಸಿದರು. ತರಗತಿಯ ನಂತರ ಊಟದ ಮಧ್ಯೆ ನ್ಯಾಯಾಧೀಶರು, ಪ್ರವಾದಿ ಮಹಮ್ಮದರ ಆರಂಭಿಕ ಉತ್ತರಾಧಿಕಾರಿಯಾಗಿ ತಮ್ಮ ಅಳಿಯನಾದ ಅಲೀಯವರು ನಿಯುಕ್ತರಾಗಬೇಕಿತ್ತೆಂದೂ, ಖಿಲಾಫತ್ ನೀಡುವಿಕೆಯಲ್ಲಿ ಒಳಸಂಚು ನಡೆದಿದೆಯೆಂದೂ ಶಿಯಾ ಪಂಗಡದವರು ಸಮರ್ಥಿಸುತ್ತಾರಲ್ಲ ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನೆಂದು ಕೇಳಿ ಪ್ರಶ್ನಾರ್ಥಕವಾಗಿ ಮುಖ ನೋಡಿದರು. “ಪ್ರತಿಯೊಂದು ಕ್ಷಣವೂ ದೈವ ಇಚ್ಛೆಗೆ ಅನುಗುಣವಾಗಿಯಾಗಿದೆ ಹಾದುಹೋಗುವುದು. ಒಂದನೇ ಉತ್ತರಾಧಿಕಾರಿಯಾದ ಅಬೂಬಕ್ಕರ್ ಅವರ ಮರಣಾವಧಿಯನ್ನಾಗಿದೆ ಸೃಷ್ಟಿಕರ್ತನು ಮೊದಲು ನಿಶ್ಚಯಿಸಿದ್ದು. ನಂತರ ಉಮರ್, ಉಸ್ಮಾನ್, ಅಲೀ ಈ ರೀತಿಯಾಗಿ ಅವರಿಗೆ ನೀಡಿದ ಅಧಿಕಾರ ಕಾಲಾವಧಿಯನುಸರಿಸಿಯಾಗಿದೆ ಅವರ ಮರಣ ಸಂಭವಿಸುವುದು.” ಈ ರೀತಿಯಾಗಿ ಇತರರಿಗಿಂತ ಭಿನ್ನ ರೂಪದಲ್ಲಿ ತಮ್ಮ ಕೃತಿಗಳಲ್ಲಿ ಆಧ್ಯಾತ್ಮಿಕ ಭಾಷೆಯನ್ನು ವಿವರಿಸಿದ ಇಬ್ನ್- ಅರಬಿಯ ವಚನಗಳನ್ನು ಯುಗಗಳಿಂದ ಇಸ್ಲಾಮ್ ಎದುರಿಸುತ್ತಿರುವ ಶಿಯಾ ವಾದಗಳಿಗಿರುವ ಪ್ರತ್ಯುಕ್ತಿಗಳಾಗಿ ಎತ್ತಿಹಿಡಿಯುತ್ತಲಿದ್ದೇವೆ. ಅಕ್ಷರದ ಆಳಕ್ಕಿಳಿಯುವಾಗ ಹಸನ್ ಅಲ್- ವಾನಿನ ರಾಜಕೀಯ ನಿಲುವುಗಳನ್ನೂ ಕಾದಂಬರಿಯ ಈ ಭಾಗ ವಿವರಿಸುವುದು ಗೋಚರಿಸುತ್ತದೆ.

ಕಾದಂಬರಿಯಲ್ಲಿ ಆ ಕಾಲಾವಧಿಯ ನಾಗರಿಕತೆ, ಸಾಂಸ್ಕೃತಿಕ ಚಿತ್ರಣಗಳು, ಉಡುಪು ಶೈಲಿಗಳು ಮತ್ತು ಆಹಾರ ವಿಧಾನಗಳನ್ನು ನಿಖರವಾಗಿ ಚಿತ್ರಿಸುವಲ್ಲಿನ ಪ್ರಯತ್ನ ಅಪೂರ್ಣವಾದರೂ, ಸಾಫಲ್ಯತೆಯೆಡೆಗಿನ ದಾರಿ ಹಿಡಿದಿದೆ. ಅಸಾಸಿನುಗಳಿಗೆ (ಶಿಯಾ ಪಂಗಡದ ಇಸ್ಮಾಯೀಲೀ ವಿಭಾಗದಲ್ಲಿರುವ ರಹಸ್ಯ ಹೋರಾಟಗಾರರು) ಹೆದರಿ ಮುಸಲ್ಮಾನರ ಪೋಷಾಕು ಧರಿಸಿ ಪ್ರಯಾಣ ಬೆಳೆಸುವ ಕ್ರೈಸ್ತರನ್ನು ಮತ್ತು ಮದರಸಾಗಳನ್ನು ನಿರ್ಮಿಸಿ ವಿದ್ವಾಂಸರಿಗೆ ಒಪ್ಪಿಸುವ ಅಧಿಕಾರಿಗಳನ್ನು ಹಸನ್ ಅಲ್- ವಾನ್ ವಿವರಿಸುವುದು ಅಂದಿನ ರಾಜಕೀಯ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಪೂರ್ವ ಕಾಲಗಳಲ್ಲಿ ಸರ್ಕಾರ ಮತ್ತು ರಾಜಕೀಯದೊಂದಿಗೆ ವಿದ್ವತ್ ಸಮುದಾಯಕ್ಕೆ ನೇರ ಸಂಬಂಧಗಳಿದ್ದವು. ಕಾರಣ, ಅಂದು ಇಸ್ಲಾಮಿಕ್ ಸ್ಟೇಟ್ ಅಸ್ತಿತ್ವದಲ್ಲಿದ್ದುದ್ದರಿಂದ ಧಾರ್ಮಿಕ ತೀರ್ಪುಗಳನ್ನು ಹೊರಡಿಸಲು ರಾಜಕೀಯ ನಾಯಕತ್ವವು ಅವರೊಂದಿಗೆ ವ್ಯವಹರಿಸಬೇಕಾದ ಅನಿವಾರ್ಯತೆಯಿತ್ತು. ಇಬ್ನ್- ಅರಬಿಯ ಕಾಲಾವಧಿಯಲ್ಲಿ ಮುವಹ್ಹಿದೀನ್ ಆಡಳಿತವು ಕಟ್ಟು ನಿಟ್ಟಿನ ಧಾರ್ಮಿಕ ತೀರ್ಪುಗಳನ್ನು ವಿಧಿಸಿತು ಮತ್ತು ವಿದ್ವಾಂಸರಿಗೆ ರಾಜ ಮನೆತನದಲ್ಲಿ ಪ್ರಮುಖ ಸ್ಥಾನಗಳನ್ನು ನೀಡುವಲ್ಲಿಯೂ ಯಶಸ್ವಿಯಾಯಿತು. ಜನರ ಧಾರ್ಮಿಕ ನಂಬಿಕೆಯಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆಯೆಂಬ ಕಾರಣ ನೀಡಿ ಅನೇಕ ಕೃತಿಗಳ ಮಾರಾಟದ ಹಕ್ಕನ್ನು ಹತ್ತಿಕ್ಕಲು ಪ್ರಾರಂಭಿಸಿದರು. ಈ ಸಂದರ್ಭ ಇಬ್ನ್- ರುಶ್ದ್ ಅವರ ಬರಹಗಳನ್ನು ನಿಷೇಧಿಸುವ ಮೂಲಕ ಅವರನ್ನು ಬಂಧನಕ್ಕೊಳಪಡಿಸಿದ ಘಟನೆಯ ಪರಿಣಾಮ ಇಬ್ನ್- ಅರಬಿಯ ದುಃಖ ಮತ್ತು ನೋವು ಕಾದಂಬರಿಯಲ್ಲಿ ಅಕ್ಷರಗಳ ನಾಡಿಮಿಡಿತಗಳನ್ನು ಆಲಿಸುವಂತಿದೆ. ನಾಲ್ಕು ಆಧ್ಯಾತ್ಮಿಕ ಗುರುಗಳನ್ನರಸುತ್ತಾ ಹೊರಟ ಯಾತ್ರೆಯ ಮಧ್ಯೆ ತಮ್ಮ ಯಾತ್ರೆಯ ದಿಕ್ಕನ್ನು ಮಕ್ಕಾದೆಡೆಗೆ ಬದಲಿಸಿ ಮುಂದುವರೆಸಬೇಕಾದ ಅನಿವಾರ್ಯತೆ ಎದುರಾಯಿತು. ಮಕ್ಕಾದಲ್ಲಿರಲು ಅಲ್ಲಿನ ನ್ಯಾಯಾಧೀಶರಾಗಿದ್ದ ಅಸ್ಫಹಾನಿಯ ಸನ್ನಿಧಿಗೆ ಜ್ಞಾನಾರ್ಜನೆಗೆ ತೆರಳುತ್ತಿದ್ದರು ಮತ್ತು ಅವರ ಮಗಳಾದ ನಳಾಮಿಯ ಬಳಿ ಜ್ಞಾನ ಸಂಪಾದನೆಯನ್ನೂ ನಡೆಸಿದ್ದರು. ‘ನಳಾಮ್ ‘ ಎಂಬ ಈ ಮಹಿಳಾ ಮಣಿಯೊಂದಿಗಿನ ಆಧ್ಯಾತ್ಮಿಕ ಸಂಬಂಧವನ್ನು ‘ತರ್ಜುಮಾನುಲ್ ಅಶ್ವಾಖ್ ‘ ಎಂಬ ಕೃತಿಯ ಮೂಲಕ ಇಬ್ನ್- ಅರಬಿ ವಿವರಿಸಿದ್ದರೂ ವಾಸ್ತವವಾಗಿ ಇದು ದೈವಿಕ ಸ್ನೇಹದ ಪ್ರತೀಕವಾಗಿತ್ತು. ಇಬ್ನ್- ಅರಬಿಯ ವಹ್ದತುಲ್ ವುಜೂದ್ ಎಂಬ ಪರಿಕಲ್ಪನೆಯ ಮಟ್ಟವನ್ನು ಈ ಘಟನೆಯೊಂದಿಗೆ ತಾಳೆ ಹಾಕಿ ನೋಡದಿದ್ದರೆ ಸತ್ಯವನ್ನು ಅರಿಯುವಲ್ಲಿ ನಾವು ವಿಫಲರಾಗುತ್ತೇವೆ. ತರ್ಜುಮಾನುಲ್ ಅಶ್ವಾಖಿನ ಪ್ರಕಟನೆಯೊಂದಿಗೆ ಇಬ್ನ್- ಅರಬಿಯನ್ನು ಜನರು ತಪ್ಪಾಗಿ ಅರ್ಥೈಸಿಕೊಂಡರು. ‘ಫುತೂಹಾತುಲ್ ಮಕ್ಕಿಯ್ಯಾ ‘ಎಂಬ ಕೃತಿ ರಚನೆಯು ಅನಿಷ್ಟ ಭ್ರಮೆಗಳ ಕಾರಣದಿಂದ ಪೂರ್ತಿ ಮಾಡಲಾಗದ ಸ್ಥಿತಿ ಎದುರಿಸಬೇಕಾಯಿತು. ಅವರು ಮಕ್ಕಾ ತೊರೆದು ಡಮಾಸ್ಕಸ್ ಬಳಿ ಯಾತ್ರೆ ಹೊರಟರು. ನಳಾಮ್ ತನ್ನ ಆಧ್ಯಾತ್ಮಿಕ ಗುರುಗಳ ಪೈಕಿ ಮೂರನೆಯವರೆಂದು ಡಮಾಸ್ಕಸಿನಲ್ಲಿ ಇಬ್ನ್- ಅರಬಿ ಗುರುತಿಸುವರು. ಡಮಾಸ್ಕಸಿನ ಮಸೀದಿಯಲ್ಲಿರಲು ನಳಾಮಿಯ ತಂದೆ ಅಸ್ಫಹಾನಿಯ ನಿಧನದ ಸುದ್ದಿಯೊಂದಿಗೆ ಬಂದು ತಲುಪಿದ ಶಿಷ್ಯ ಬದರ್, ಅವರ ಮರಣೋತ್ತರ ಕರ್ಮಗಳಲ್ಲಿ ಭಾಗವಹಿಸಿದ್ದರು. ಸುಮಾರು ಮೂರು ವರ್ಷಗಳ ಕಾಲ ನಳಾಮ್ ತನ್ನ ಬಳಿಯಲ್ಲಿಯೇ ಇದ್ದರು ಎಂಬ ವಾಸ್ತವಿಕತೆಯನ್ನು ಅರಿತ ಇಬ್ನ್- ಅರಬಿಯ ಮನಸ್ಥಿತಿ ಓದುಗನನ್ನು ಭಾವನಾತ್ಮಕವಾಗಿ ಆವರಿಸತೊಡಗುತ್ತದೆ. ಡಮಾಸ್ಕಸಿನಲ್ಲಿಯೇ ತಮ್ಮ ಅಂತಿಮ ಗುರುಗಳನ್ನು ಸಂಧಿಸುವುದರೊಂದಿಗೆ ಆಧ್ಯಾತ್ಮಿಕ ಶ್ರೇಣಿಯೊಳು ತನ್ನ ಗುರುವೃಂದದ ಆಶೀರ್ವಾದವು ಪೂರ್ಣಗೊಳ್ಳುತ್ತದೆ. ದೈವಿಕ ಸಂಪ್ರೀತಿಯೆಡೆಗಿನ ತನ್ನ ಯಾತ್ರೆಯು ಸಫಲತೆಯನ್ನು ಕಂಡ ನಂತರ ಉಳಿದ ತನ್ನ ಜೀವಿತಾವಧಿಯನ್ನು ಕುಟುಂಬದೊಂದಿಗೆ ವ್ಯಯಿಸಲು ಕೃಷಿ ಉದ್ಯೋಗದಲ್ಲೇರ್ಪಡಲು ತೀರ್ಮಾನಿಸಿದರು.

ಸಮಗ್ರವಲ್ಲದಿದ್ದರೂ, ಸಾಹಿತ್ಯ ಜಗತ್ತಿಗೆ ಅನ್ಯವಾಗಿದ್ದ ಇಬ್ನ್- ಅರಬಿಯ ಜೀವನವನ್ನು ಪರಿಚಯಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಇಬ್ನ್- ಅರಬಿಯ ಚಿಂತನೆಯ ಆಳ ಮತ್ತು ಅದರ ಕುರಿತಾದ ಚರ್ಚೆಗಳಲ್ಲಿ ವಿದ್ವಾಂಸರು ಪಾಲಿಸಿದ ವಿವೇಕತೆಗಳು, ಈ ಎರಡೂ ಗೊಡವೆಗಳನ್ನು ಹಾಸುಹೊಕ್ಕಾಗಿ ಮೈತುಂಬಿಸಿಕೊಂಡ ಈ ಕಾದಂಬರಿ ಸೃಷ್ಟ್ಯಾತ್ಮಕ ಬರಹಗಾರನೊಬ್ಬ ಕಂಡ ಆಳವಾದ ಒಂದು ಜೀವನದ ಸಮಗ್ರ ಪರಿಚಯದ ಅಸಲುಚಿತ್ರವಾಗಿ ಅತ್ಯಂತ ಅರ್ಥಪೂರ್ಣ ಮತ್ತು ಒಂದು ಮೋಹಕವಾದ ಕಥೆಯನ್ನು ನೇಯುತ್ತದೆ.

ಬಿಶ್ರ್ ಇಸ್ಮಾಯೀಲ್
ಅನುವಾದ:ಅಬ್ದುಸ್ಸಲಾಂ ಮಿತ್ತರಾಜೆ ಸಾಲೆತ್ತೂರು.

1 Comment

Leave a Reply to Jamsheerkt Cancel reply

*