ಮನಮೋಹಕ ಶಾರ್ಜಾ ಪುಸ್ತಕ ಮೇಳ

ಒಬ್ಬ ಸಾಮಾನ್ಯವ್ಯಕ್ತಿ ಒಂದು ದೇಶದ ಸಾಂಸ್ಕೃತಿಕ ರಾಯಭಾರಿಯಾದ ಕಥೆಯಾಗಿದೆ ಇದು. ಸರಾಸರಿ ವ್ಯಕ್ತಿಯಾಗಿದ್ದುಕೊಂಡು ದೊಡ್ಡ ಕೆಲಸಗಳನ್ನು ಹೇಗೆ ಮಾಡಬೇಕು ಎಂಬುವುದಕ್ಕೆ ಅಸಲಿ ಪುರಾವೆ ಇವರ ಜೀವನ. ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸಂಘಟಕ ಮೋಹನ್ ಕುಮಾರರೊಂದಿಗೆ Thasrak.com ನ ಬರಹಗಾರರಾದ ರಾಜೇಶ್ ಚಿತ್ತಿರ ಮತ್ತು ಜೋಸ್ಲೆಟ್ ಜೋಸೆಫ್ ನಡೆಸಿದ ಸಂದರ್ಶನ.

ಮೂರೂವರೆ ದಶಕದ ಶಾರ್ಜಾ ಪುಸ್ತಕ ಮೇಳದ ಇತಿಹಾಸದೊಂದಿಗೆ ನೀವಿದ್ದೀರಿ. ಈಗ ಅದರ ಯಶಸ್ಸು ಎಲ್ಲಿಯವರೆಗೆ ತಲುಪಿ ನಿಂತಿದೆ?

ವಿಶ್ವದ ಅತಿದೊಡ್ಡ ಮೇಳವನ್ನಾಗಿಸುವುದಾಗಿದೆ ನಮ್ಮ ಗುರಿ. ಬಹುತೇಕ ನಾವು ಅದರ ಅಂಚಿನಲ್ಲಿದ್ದೇವೆ. ಫ್ರಾಂಕ್ ಫುರ್ಟ್ ಮೇಳ ಒಂದನೇ ಸ್ಥಾನದಲ್ಲಿದ್ದರೆ
ನಮ್ಮ ಪುಸ್ತಕ ಮೇಳ ಎರಡನೇ ಸ್ಥಾನದಲ್ಲಿದೆ.
ಆದರೆ ಫ್ರಾಂಕ್ ಫುರ್ಟ್ ಮೇಳವು ಪುಸ್ತಕ ವ್ಯಾಪಾರ ಮೇಳವಾಗಿದೆ. ಸಾರ್ವಜನಿಕ ಓದುಗರಿಗಾಗಿ ನಡೆಸುವ ಮೇಳದಲ್ಲಿ ನಾವೂ ಮುಂಚೂಣಿಯಲ್ಲಿದ್ದೇವೆ ಹಾಗೂ ಹತ್ತು ದಿನಗಳಲ್ಲಿ ಬರೋಬ್ಬರಿ ಎರಡು ಮಿಲಿಯನ್ ಸಾರ್ವಜನಿಕರು ಭೇಟಿ ನೀಡಿದ್ದಾರೆ. ಇಲ್ಲಿ ನಮಗೆ ಪುಸ್ತಕ ವಿತರಣೆ ಮಾಡುವವರಿಗಿಂತ ಪುಸ್ತಕ ಪ್ರಕಾಶಕರು ನೇರವಾಗಿ ಬರುವಂತೆ ಮಾಡಬೇಕಾಗಿದೆ. Oxford ಸೇರಿದಂತೆ ಹಲವಾರು ಪ್ರಕಾಶಕರು ತಮ್ಮ ಪುಸ್ತಕಗಳು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುವ ಫ್ರಾಂಕ್ ಫುರ್ಟ್ ನಂತಹ ಸ್ಥಳಗಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ನಾವು ಆ ಭಾವನೆಗಳನ್ನು ಬದಲಾಯಿಸುತ್ತಿದ್ದೇವೆ.

ಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯಗಳಿಗಾಗಿ ಲೋಕದಾದ್ಯಂತ ಯಾತ್ರೆ ಕೈಗೊಳ್ಳುವ ನಿಮಗೆ, ಪುಸ್ತಕಗಳ ಭವಿಷ್ಯದ ಬಗ್ಗೆ ಇರುವ ಅಭಿಪ್ರಾಯವೇನು?

ಪುಸ್ತಕಗಳು ಓದುವ ಹವ್ಯಾಸ ಕುಂಟುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ. ಅದನ್ನು ನಿವಾರಿಸಲಿರುವ ಏಕೈಕ ಮಾರ್ಗ ಜನರನ್ನು ಓದುವಿಕೆಗೆ ಮರುಳಿಸುವುದಾಗಿದೆ. ಶಾರ್ಜಾ ಸುಲ್ತಾನರ ನೇತೃತ್ವದಲ್ಲಿ ಪ್ರಪಂಚದಾದ್ಯಂತ ಓದುವ ಸಂಸ್ಕೃತಿಯನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇವೆ.
ಶಾರ್ಜಾ ಪುಸ್ತಕ ಮೇಳ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶಾಲಾ ಮಕ್ಕಳಿಗಾಗಿ ಮಾತ್ರ ತೆರೆಯಲ್ಪಡುತ್ತಿದ್ದವು. ಅದರಂತೆ ಪ್ರತೀವರ್ಷ ಶಾರ್ಜಾ ಮಕ್ಕಳ ಪುಸ್ತಕ ಮೇಳವು ನಡೆಸಲ್ಪಡುತ್ತದೆ. ಆದರೆ ಬೊಲೋನ (bologna) ದಂತಹ ಮಕ್ಕಳ ಪುಸ್ತಕ ಮೇಳದಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ ಎಂಬುವುದು ಆಶ್ಚರ್ಯಕರವಾದ ಸಂಗತಿಯಾಗಿದೆ. ಅದು ಕೇವಲ ವ್ಯಾಪಾರ ಮೇಳ.
ಓದುವಿಕೆಯನ್ನು ಪ್ರೋತ್ಸಾಹಿಸಲು ಶಾರ್ಜಾದ ಎಲ್ಲಾ ಸ್ಥಳೀಯ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ. ಈ ಸಂಸ್ಕೃತಿಯನ್ನು ನೋಡಿ ಬೆಳೆಯುವ ಮಕ್ಕಳು ಓದುವ ಹವ್ಯಾಸ ವನ್ನು ಕೂಡಾ
ಅವರೊಂದಿಗೆ ಬೆಳೆಸುತ್ತಾರೆ ಎಂಬ ನಂಬಿಕೆ. ಪುಸ್ತಕಗಳನ್ನು ಓದುವ ಹವ್ಯಾಸವಿರುವ ಮಕ್ಕಳ ಕುರಿತು ಪೋಷಕರು ಚಿಂತಿಸಬೇಕಾಗಿಲ್ಲ. ಅವರಿಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಿ ಕೊಡುವ ಕೆಲಸ ಮಾತ್ರ ಮಾಡಿದರೆ ಸಾಕಾಗುತ್ತದೆ.

ಪ್ರಪಂಚದಾದ್ಯಂತ ನಡೆಯುವ ಪುಸ್ತಕ ಮೇಳಗಳನ್ನು ಗಮನಿಸಿದರೆ ಫ್ರಾಂಕ್ ಫುರ್ಟ್ ನಲ್ಲಿರುವ ಎಂಟನೇ ಹಾಲ್ ಭದ್ರತಾ ತಪಾಸಣೆಗಳ ಬಳಿಕ ಪ್ರವೇಶಿಸ ಬಹುದಾದ ಏಕೈಕ ಸ್ಥಳವಾಗಿತ್ತು. ಆದರೆ ಈ ವರ್ಷ ಇರಲಿಲ್ಲ. ಅಲ್ಲಿದ್ದವರನ್ನು ಇತರ ಸಭಾಂಗಣ ಗಳಿಗೆ ಸ್ಥಳಾಂತರಿಸಲಾಯಿತು. ಲಂಡನ್ ಮೇಳವನ್ನು ವಿಶಾಲವಾದ ಹಳೆಯ ಜಾಗದಿಂದ ಒಲಿಂಪಿಯಾದ ಸಣ್ಣ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ನಾಲ್ಕು ಸಭಾಂಗಣ ಗಳಲ್ಲಿ ಆಯೋಜಿಸಲ್ಪಡುತ್ತಿದ್ದ ಮಾಸ್ಕೋ ಪುಸ್ತಕ ಮೇಳ ವರ್ಷದಿಂದ ವರ್ಷಕ್ಕೆ ಒಂದೊಂದು ಕಡಿಮೆಯಾಗುತ್ತಾ ಈ ವರ್ಷ ಒಂದಕ್ಕೆ ಕುಗ್ಗಿದೆ. ಇವೆಲ್ಲವೂ ಪುಸ್ತಕ ಮೇಳಗಳ ಮೇಲಿರುವ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬುದಕ್ಕೆ ಸೂಚನೆಯಾಗಿದೆ. ಆದರೆ ಶಾರ್ಜಾ ಪುಸ್ತಕ ಮೇಳ ಇದಕ್ಕೆಲ್ಲ ವಿರುದ್ಧವಾಗಿ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದೆ. ಆರು ಸಭಾಂಗಣ ಗಳಲ್ಲಿ ನಡೆಯುತ್ತಿದ್ದ ಮೇಳ ಈ ವರ್ಷ ಏಳನೇ ಸಭಾಂಗಣ ಕ್ಕೆ ವಿಸ್ತಾರವಾಗಿದೆ. ಅಲ್ಲದೆ ೨೦೧೯ ಕ್ಕೆ ಶಾರ್ಜಾ ವಿಶ್ವ ಪುಸ್ತಕಗಳ ರಾಜಧಾನಿ ಆಗಲಿದೆ.

ಹೆಸರಿಗೆ ಪುಸ್ತಕ ಮೇಳವಾದರೂ, ಚಿತ್ರರಂಗದವರು ಸೇರಿದಂತೆ ಅನೇಕ ಸಾರ್ವಜನಿಕರು ಸೇರುವ ದೊಡ್ಡ ಹಬ್ಬವಲ್ಲವೇ ?

ಅದರಲ್ಲಿ ತಪ್ಪೇನಿದೆ?! ೧೦ ಜನರಲ್ಲಿ ಓದುವ ಹವ್ಯಾಸವನ್ನು ರೂಢಿ ಮಾಡಿಕೊಂಡವರು ಎಷ್ಟು ಜನ ಇರುತ್ತಾರೆ? ಕೇವಲ ಮೂರೋ ನಾಲ್ಕೋ ಅಥವಾ ಅದಕ್ಕಿಂತ ಕಡಿಮೆಯಿರುತ್ತಾರೆ. ಆ ೧೦ ಜನಕ್ಕೆ ಚಿತ್ರ ನಟ ಮೋಹನಲಾಲರನ್ನು ಚೆನ್ನಾಗಿ ಪರಿಚಯ ವಿರುತ್ತದೆ. ಆದರೆ ಬರಹಗಾರರಾದ ಎಂ.ಮುಕುಂದನವರನ್ನು ಕೆಲವೇ ಜನರಿಗೆ ಮಾತ್ರ ಪರಿಚಯ ಇರುತ್ತದೆ. ಇದೆಲ್ಲ ನಮ್ಮ ಭಾಷೆಗಳ ಮಿತಿಯನ್ನು ತೋರಿಸುತ್ತಿದೆ. ಅಮಿತಾಭ್ ಬಚ್ಚನ್ ವಿಶ್ವ ಪ್ರಸಿದ್ಧ ಆದರೆ ಮಹಾ ವಿದ್ವಾಂಸ ಮತ್ತು ಕವಿಯಾಗಿದ್ದ ಅವರ ತಂದೆ ಹರಿವಂಶ ರಾಯ್‌ ಬಚ್ಚನ್ ರವರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ?. ವಿಶ್ವದ ಎಲ್ಲೆಡೆ ಇರುವ ಪರಿಸ್ಥಿತಿ ಇದು. ಮಮ್ಮುಟ್ಟಿಯವರನ್ನು ಪುಸ್ತಕ ಮೇಳಕ್ಕೆ ಕರೆತಂದಾಗ ಯಾಕೆ ಎಂದು ಅನೇಕ ಜನರು ಪ್ರಶ್ನಿಸಿದ್ದರು. ಅವರನ್ನು ನೋಡಲು ಮಾತ್ರ ಬಂದವರಲ್ಲಿ ಮಮ್ಮುಟ್ಟಿಯವರು ಓದುವಿಕೆಯ ಬಗ್ಗೆ ಹೇಳುವ ಮಾತುಗಳಲ್ಲಿ ಆಕರ್ಷಿತರಾಗಿ ಓದಲು ಪ್ರಾರಂಭಿಸಿದರೆ ನಾವು ಪಡುವ ಶ್ರಮಕ್ಕೆ ದೊರಕುವ ಪ್ರೋತ್ಸಹವಲ್ಲವೇ?. ಅದೇ ರೀತಿ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ ಹಾಗೆ ನಡೆಯುವ ಒಂದು ದೊಡ್ಡ ವಿಭಾಗವಿದೆ. ನಾನು ಉಸ್ತಾದರಲ್ಲಿ ಪುಸ್ತಕ ಓದುವಿಕೆಯ ಬಗ್ಗೆ ಎರಡು ಮಾತನಾಡಬೇಕೆಂದು ಕೇಳಿಕೊಂಡೆ. ಅವರು ಅದರ ಮಹತ್ವವನ್ನು ಸರಳವಾಗಿ ಸ್ಪಷ್ಟವಾಗಿ ಹೇಳಿ ಬೋಧಿಸಿದರು. ಇವೆಲ್ಲವೂ ಓದುವಿಕೆಯನ್ನು ಪ್ರೋತ್ಸಾಹಿಸುವ ಒಂದೊಂದು ರೀತಿಗಳಾಗಿವೆ.

ಅಷ್ಟೊಂದು ಪುಸ್ತಕಗಳೊಂದಿಗೆ ಬೆರೆತ ನಿಮ್ಮ ಓದುವಿಕೆಯ ಶೈಲಿ ಹೇಗಾಗಿದೆ?

ಆಸಕ್ತಿ ಮತ್ತು ಜವಾಬ್ದಾರಿ ಒಂದುಗೂಡಿದ್ದಾಗಿದೆ ನನ್ನ ಜೀವನ. ಓದುವುದು ನನ್ನ ಕೆಲಸದ ಭಾಗ ಹಾಗೂ ಹವ್ಯಾಸ ಕೂಡ. ನಾನು ಆತ್ಮಚರಿತ್ರೆ, ಸ್ಪೂರ್ತಿದಾಯಕ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೇನೆ. ಕಥೆ ಕಾದಂಬರಿ ಮತ್ತು ಕವಿತೆಗಳನ್ನು ಓದುವುದು ವಿರಳ. ಕಾರಿನಲ್ಲಿ ಹಾಡಿನ ಬದಲಿಗೆ ಸ್ಟೀಫನ್ ಕೋವೆಯ ಸೆವೆನ್ ಹ್ಯಾಬಿಟ್ಸ್ ಪುಸ್ತಕದ ಆಡಿಯೋವನ್ನ ಕೇಳುವೆ. ರಿಚರ್ಡ್ ಟೆಂಪ್ಲರ್ ಇತ್ತೀಚೆಗೆ ಬರೆದ ದಿ ರೂಲ್ಸ್ ಆಫ್ ಲೈಫ್ ಓದಿದೆ. ರೂಲ್ಸ್ ಆಫ್ ಲವ್ ಸಹ ಅತ್ಯುತ್ತಮ ಪುಸ್ತಕವಾಗಿದೆ.

ಉದ್ಯೋಗ ಮತ್ತು ಆಸಕ್ತಿ ಎಂಬ ರೀತಿಯಲ್ಲಿ ಪುಸ್ತಕಗಳೊಂದಿಗೆ ಹೆಚ್ಚಾಗಿ ತೊಡಗಿಸಿಕೊಂಡಿದೀರಿ. ಹಾಗಾದರೆ ಜಗತ್ತಿನಲ್ಲಿ ಈ ಸಾಹಿತ್ಯದ ಅವಶ್ಯಕತೆ ಏನು?

ಅತ್ಯತ್ತಮ ಪುಸ್ತಕಗಳು ನಮಗೆ ಜೀವನದ ಬಗ್ಗೆ ಮತ್ತು ಪ್ರಪಂಚದ ಬಗ್ಗೆ ಸಾಕಷ್ಟು ಜ್ಞಾನವನ್ನು ನೀಡುತ್ತದೆ. ಜ್ಞಾನ ಒಬ್ಬ ವ್ಯಕ್ತಿಯನ್ನು,ವ್ಯಕ್ತಿತ್ವವನ್ನು ರೂಪಿಸುತ್ತದೆ. ಜ್ಞಾನ ಮಾತ್ರವಿದ್ದು ಯಾವ ಪ್ರಯೋಜನವೂ ಇಲ್ಲ. ಆ ಅರ್ಥದಲ್ಲಿ ಸಾಹಿತ್ಯಕೂಡ ನಿಷ್ಪ್ರಯೋಜಕ ಎಂದು ತೋರುತ್ತದೆ. ಆದರೆ ಪುಸ್ತಕಗಳಿಂದ ಮತ್ತು ಜೀವನಾನುಭವದಿಂದ ಪಡೆದ ಜ್ಞಾನ ನಾವು ರೂಢಿಗೆ ತರುವುದಿರಿಂದ ಮಾತ್ರ ಅದರ ಪ್ರಯೋಜನ ಬರುವುದು. ನಮ್ಮ ಜ್ಞಾನ ನಮಗೂ ಇತರರಿಗೂ ಉಪಯುಕ್ತವಾಗಬೇಕು ಹಾಗು ಅದನ್ನು ನೀಡಲು ನಾವು ಸಿದ್ಧರಿರಬೇಕು. ಇದು ನಾನು ಕಲಿತ ತತ್ವ. ಸಣ್ಣ ಪುಟ್ಟ ಕಾರ್ಯಗಳಲ್ಲಿ ಆನಂದವನ್ನು ಗಳಿಸಲು ಸಾಧ್ಯವಾಗಬೇಕು.

ಈ ಪುಸ್ತಕ ಜಗತ್ತಲ್ಲಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ?

ಯಾವ ಅನುಮಾನವಿಲ್ಲದೆ ಶಾರ್ಜಾ ಸುಲ್ತಾನ್ ಡಾ. ಸುಲ್ತಾನ್ ಬಿನ್ ಮೊಹಮ್ಮದ್ ಅಲ್ ಕಾಸಿಮ್ ಎಂದು ಹೇಳುವೆ. ಅವರಿಗೆ ಈಗ ೭೮ ವರ್ಷ ವಯಸ್ಸಾಗಿದೆ. ಆದರೆ ಅವರು ಜಗತ್ತಿನಲ್ಲಿ ನಡೆಯುವ ಎಲ್ಲ ಪುಸ್ತಕ ಮೇಳಗಳಲ್ಲಿ ಭಾಗವಹಿಸುವವರಾಗಿದ್ದಾರೆ. ಅರುವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಆ ಪುಸ್ತಕಗಳು ವಿಶ್ವದ ಎಲ್ಲಾ ಭಾಷೆಗಳಿಗೆ ಭಾಷಾಂತರಿಸಲಾಗಿದೆ. ಶಾರ್ಜಾ ಪುಸ್ತಕ ಮೇಳ ಆ ಒಬ್ಬ ವ್ಯಕ್ತಿಯ ಉತ್ಸಾಹದಿಂದ ಮಾತ್ರ ಹಾಗು ಮಿಲಿಯನ್ ದಿರ್ಹಮ್ ವೆಚ್ಚದಿಂದ
ನಡೆಸಲ್ಪಡುತ್ತಿದೆ. ಅವರ ನಿರ್ದೇಶನದೊಂದಿಗೆ ನಾವು ಕೆಲಸ ನಿರ್ವಹಿಸುತ್ತಿದ್ದೇವೆ.

ನಾನು ದೆಹಲಿಯಲ್ಲಿ ನಡೆದ ಪುಸ್ತಕ ಮೇಳದಲ್ಲಿ ಭಾಗವಹಿಸಿದೆ. ಅಲ್ಲಿ ಗಮನಿಸಿದ ವಿಷಯವೇನೆಂದರೆ ನಮ್ಮ ನಾಯಕರು ಹೊರಗಡೆ ನೆರೆದಿರುವ ನೂರಾರು ಮಾಧ್ಯಮಗಳ ಮುಂದೆ ಉದ್ಘಾಟಿಸಿ ಶೀಘ್ರವೇ ಹೊರಡುತ್ತಾರೆ. ಆದರೆ ಸುಲ್ತಾನ್ ಹಾಗಲ್ಲ! ಎರಡು ದಿನ ಮುಂಚಿತವಾಗಿ ಆಗಮಿಸಿ ಎಲ್ಲ ಸಿದ್ಧತೆಗಳಿಗೆ ನೇತೃತ್ವವನ್ನು ವಹಿಸುತ್ತಾರೆ. ಸ್ವಂತವಾಗಿ ಪ್ರಕಾಶನ ಕೇಂದ್ರವನ್ನು ಹೊಂದಿರುವ ವಿಶ್ವದ ಏಕೈಕ ಆಡಳಿತಗಾರ ಅವರಾಗಿದ್ದಾರೆ.
ಸುಲ್ತಾನ್ ಭಾರತದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಹಿಂದೆ ಅರಬ್ಬರನ್ನು ಕಡಲ್ಗಳ್ಳರೆಂದು ಕೀಳಾಗಿ ಗುರುತಿಸಲಾಗುತ್ತಿತ್ತು. ಈ ಅಪಪ್ರಚಾರವನ್ನು ಇಲ್ಲವಾಗಿಸಲು ಡಾ .ಸುಲ್ತಾನ್ ಚಿಕ್ಕವಯಸ್ಸಿನಲ್ಲೇ ಬಾಂಬೆ ವಿಶ್ವವಿದ್ಯಾಲಯದ ಆರ್ಕ್ಕಿ ವೈಸ್ನನ ದಾಖಲೆಗಳನ್ನು ಕಂಡುಹಿಡಿದು ಪ್ರಕಿಟಿಸಿದರು. ತನ್ನ ಮೊದಲ ಪುಸ್ತಕವಾದ “ದಿ ಮಿಥ್ ಆಫ್ ಅರಬ್ ಪೈರಸಿಯಲ್ಲಿ” ಅರಬರು ಸಮುದ್ರ ಮೂಲಕ ಭಾರತದೊಂದಿಗೆ ಉತ್ತಮ ವ್ಯಾಪಾರ ಸಂಬಂದ ಹೊಂದಿದ್ದರು ಎಂದು ಸಾಬೀತು ಪಡಿಸಿದರು. ಆ ಸಮಯದಲ್ಲಿ ತನಗೆ ಅಗತ್ಯ ನೆರವು ನೀಡಿದ ಬಾಂಬೆ ವಿಶ್ವವಿದ್ಯಾಲಯದ ಉಪಕುಲಪತಿ ಈಗ ಆಡಳಿತಗಾರರ ಕಚೇರಿಯ ಸಲಹೆಗಾರರಲ್ಲಿ ಒಬ್ಬರಾಗಿದ್ದಾರೆ.

ಶಾರ್ಜಾ ಸುಲ್ತಾನರ ಕೇರಳ ಭೇಟಿಯ ಹಿಂದಿನ ರೂವಾರಿ ನೀವಲ್ಲವೇ?

ಅದು ನನ್ನ ಕನಸಾಗಿತ್ತು. ನನಸು ಮಾಡಲು ಪ್ರಯತ್ನಿಸಿದೆ. ಒಬ್ಬ ಆಡಳಿತಗಾರ ಇನ್ನೊಂದು ರಾಷ್ಟ್ರಕ್ಕೆ ಭೇಟಿ ನೀಡುವುದು ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ (diplomatic ) ವಿಷಯವಾಗಿದೆ. ಅದು ಅಷ್ಟು ಸುಲಭದ ಮಾತಲ್ಲ. ನಾನು ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಓದಿದ್ದೇನೆ. ಶಾರ್ಜಾ ಸುಲ್ತಾನರನ್ನು ನನ್ನ ದೇಶಕ್ಕೆ ಕರೆತಂದು ಗೌರವಿಸುವುದು ನನ್ನ ಕನಸಾಗಿತ್ತು. ಅಂತಹ ಒಬ್ಬ ಮಹಾನ್ ವಿದ್ವಾಂಸ ಮತ್ತು ನಿಷ್ಠಾವಂತ ಆಡಳಿತಗಾರನನ್ನು ನಮ್ಮ ದೇಶ ಗೌರವಿಸುವುದರ ಬಗ್ಗೆ ಕನಸು ಕಾಣಬಹುದು. ಆದರೆ ನನ್ನಂತಹ ಸಾಮಾನ್ಯ ವ್ಯಕ್ತಿ ಅದನ್ನು ಕಾರ್ಯಗತಗೊಳಿಸ ಬಹುದೇ?! ಹೌದು ಸಾಧಿಸಬಹುದು!. ದಿಟ್ಟವಾದ ಒಳ್ಳೆಯ ನಿಯತಿನೊಂದಿಗೆ ಕನಸುಕಂಡರೆ ಅದು ನನಸಾಗುವುದಕ್ಕೆ ಎಲ್ಲ ಸಂದರ್ಭಗಳು ಅನುಕೂಲವಾಗ ಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಶಾರ್ಜಾ ಸುಲ್ತಾನರ ಕೇರಳ ಭೇಟಿ. ಸುಲ್ತಾನರನ್ನು ಕರತರಲು ನಾನು ಮೊದಲು ಮಾಡಿದ ಕಾರ್ಯವೇನಂದರೆ ಕ್ಯಾಲಿಕಟ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸಲೀಮರನ್ನು ಶಾರ್ಜಾ ಪುಸ್ತಕಮೇಳದಲ್ಲಿ ಮಾತನಾಡಲು ಆಹ್ವಾನಿಸಿದೆ. ಅವರು ಬಂದಾಗ ಶಾರ್ಜಾ ಸುಲ್ತಾನರ ಬಗ್ಗೆ ನಾನು ಮೊದಲೇ ಬರೆದು ತಯಾರಿಸಿದ ಲೇಖನವನ್ನು ಅವರ ಕೈಯ್ಯಲ್ಲಿ ಕೊಟ್ಟೆ. ಅನೇಕ ಪುಸ್ತಕಗನ್ನು ಬರೆದ ವ್ಯಕ್ತಿ ಅತ್ಯತ್ತಮ ಆಡಳಿತಗಾರ ಮಲಯಾಳಿ ಸೇರಿದಂತೆ ಭಾರತೀಯರಿಗೆ ಎಲ್ಲರೀತಿಯ ಆತಿಥ್ಯವನ್ನು ನೀಡುವ ವ್ಯಕ್ತಿ ಎಂಬ ಎಲ್ಲಾ ಅಂಶಗಳನ್ನು ಪರಿಗಣಿಸಿ ಅವರಿಗೆ ಗೌರವ ಡಿ.ಲಿಟ್ ನೀಡಬೇಕೆಂದು ನಾನು ಅವರಲ್ಲಿ ಒತ್ತಾಯಿಸಿದೆ. ಅವರು ಪ್ರಸ್ತುತ ೧೭ ಡಿ.ಲಿಟ್ ನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಗಣ್ಯ ವ್ಯಕ್ತಿಗಳಿಗೆ ಮಾತ್ರ ಅದು ನೀಡುವುದು. ಅದು ಇಲ್ಲದಿದ್ದರೆ ಇನ್ನಿತರ ವಿಶ್ವವಿದ್ಯಾಲಯಗಳಿಗೆ ನೀಡಲಾಗುವುದು. ಅದು ಇಲ್ಲದಿದ್ದರೆ ಭಾರತದ ಇನ್ನಿತರ ರಾಜ್ಯಗಳಿಂದ ಬಂದವರನ್ನು ಆಯ್ಕೆ ಮಾಡುವುದು ವಾಡಿಕೆ. ಇವೆಲ್ಲವನ್ನೂ ಮೀರಿಸಿ ಒಬ್ಬ ವಿದೇಶಿ ಆಡಳಿತಗಾರನಿಗೆ ಡಿ.ಲಿಟ್ ನೀಡಿ ಗೌರವಿಸಲು ನಮ್ಮ ವಿಶ್ವವಿದ್ಯಾಲಯ ನಿರ್ಧರಿಸಿತು. ಅದಕ್ಕೆ ಸಚಿವರಾಗಿದ್ದ ಡಾ ಎಂ ಕೆ ಮುನೀರ್ ಸಹಾಯನೀಡಿದರು.ಪ್ರಾಂಕ್ ಫರ್ಟ್ ಮೇಳದಲ್ಲಿ ಮುನೀರ್ ವರು ಶಾರ್ಜಾ ಸುಲ್ತಾನರ ಬಳಿ ಅಧಿಕೃತವಾಗಿ ತಂದೆ ತಿಳಿಸಿದರು. ಅದನ್ನು ಸ್ವೀಕರಿಸಲು ಕೇರಳಕ್ಕೆ ಬರುವೆ ಎಂಬ ಭರವಸೆ ಕೊಟ್ಟರು.

ಅಧ್ಯಕ್ಷರಾಗಿದ್ದ ಎಪಿ ಜೆ ಅಬ್ದುಲ್ ಕಲಾಮಾರನ್ನು ಶಾರ್ಜಾಗೆ ತಂದವರು ನೀವಲ್ಲವೇ ?

ಕಲಾಮರಿಗೂ ಶಾರ್ಜಾ ಸುಲ್ತಾನರಿಗೂ ಬಹಳಷ್ಟು ಸಾಮ್ಯತೆಗಳಿವೆ. ಇಬ್ಬರು ಉತ್ತಮ ಬರಹಗಾರರು ಮತ್ತು ಉತ್ತಮ ಆಡಳಿತಗಾರರಾಗಿದ್ದರು. ಆದ್ದರಿಂದ ಅವರಿಬ್ಬರು ಪರಸ್ಪರ ಭೇಟಿಯಾಗಲೆಂದು ನಾನು ಬಯಸಿದ್ದೆ. ಅದರಂತೆ ಅವರನ್ನು ಶಾರ್ಜಾ ಪುಸ್ತಕ ಮೇಳಕ್ಕೆ ಆಹ್ವಾನಿಸಲಾಯಿತು. ಎಲ್ಲ ಅಧಿಕೃತ ಕಾರ್ಯವಿಧಾನಗಳಿಗೆ ಅನುಸಾರವಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ ಕಲಾಮರನ್ನು ಸ್ವೀಕರಿಸಲು ಶಾರ್ಜಾ ಸಿದ್ದವಾಯಿತು. ಪುಸ್ತಕ ಮೇಳದ ಉದ್ಘಾಟನೆಯ ನಂತರ ಸುಲ್ತಾನರಿಗೆ ಆಹ್ವಾನಿಸಲಾದ ಅತಿಥಿಗಳೊಂದಿಗೆ ಔತಣಕೂಟಕ್ಕೆ ಭಾಗವಹಿಸ ಬೇಕಾಗಿತ್ತು. ಅದರಿಂದ ಕಲಾಂರೊಂದಿಗೆ ಅಧಿಕೃತ ಸಭೆ ನಡೆಸಲು ಕೇವಲ ೫ ನಿಮಿಷಗಳ ಕಾಲಾವಕಾಶ ಮಾತ್ರ ಸಿಕ್ಕಿತು. ಇಬ್ಬರು ಮಾತುಕತೆ ಪ್ರಾರಂಭಿಸಿದರು. ಪುಸ್ತಕಗಳು, ಯಾತ್ರೆಗಳು,ಭಾರತ ಮತ್ತು ಅರಬ್ ರಾಷ್ಟ್ರಗಳ ಸಂಬಂಧ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು. ಕೇವಲ ೫ ನಿಮಿಷ ಮಾತ್ರ ನಿಗದಿ ಪಡಿಸಿದ್ದ ವೇಳಾಪಟ್ಟಿ ೧ ಗಂಟೆ ಆದರೂ ಮುಗಿಯಲಿಲ್ಲ. ಈ ಇಬ್ಬರು ಆಡಳಿತಗಾರರು ಸ್ನೇಹಿತರಾಗುವುದಕ್ಕೆ ನಾನು ಸಾಕ್ಷಿಯಾದೆ. ನಂತರ ಅನೇಕ ಸ್ಥಳಗಳಲ್ಲಿ, ವೇದಿಕೆಗಳಲ್ಲಿ ಅಬ್ದುಲ್ ಕಲಾಮರು ಶಾರ್ಜಾ ಹಾಗೂ ಅಲ್ಲಿಯ ಪುಸ್ತಕ ಮೇಳಗಳ ಬಗ್ಗೆ ಮಾತನಾಡುತಿದ್ದರು. ಒಂದೊಂದು ಮನೆಗಳಲ್ಲಿ ಗ್ರಂಥಾಲಯಗಳು ಸ್ಥಾಪನೆ ಆಗ ಬೇಕು ಎಂಬ ನನ್ನ ಕನಸನ್ನು ನೆನಸಾಗಿಸಿದವರು ಶಾರ್ಜಾ ಸುಲ್ತಾನ್ ಎಂದು ಹೇಳುತ್ತಿದ್ದರು. ಆ ಭೇಟಿ ನನ್ನ ಕನಸುಗಳಲ್ಲಿ ಒಂದು ಕನದು ನನಸಾದ ಭೇಟಿಯಾಗಿತ್ತು.

ನಿಮ್ಮ ಮುಂದೆ ಉಳಿದಿರುವ ಕನಸುಗಳೇನು?

ಶಾರ್ಜಾ ಪುಸ್ತಕ ಮೇಳಯನ್ನು ವಿಶ್ವದ ಅತೀದೊಡ್ಡ ಅಂತಾರಾಷ್ಟ್ರೀಯ ಮೇಳವನ್ನಾಗಿಸುವುದು.

ನಿಮ್ಮ ಎಲ್ಲ ಕನಸುಗಳು ಸಾಧನಗಳಾಗಿವೆ, ಇಲ್ಲಿಯವರೆಗೆ ನಿಮ್ಮ ಜೀವನದಲ್ಲಿ ಮಾಡಿದ ದೊಡ್ಡ ಸಾಧನೆ ಯಾವುದು ?

ಸಂತೋಷಕರ ವಾದ ಜೀವನವೇ ದೊಡ್ಡ ಸಾಧನೆಯಾಗಿದೆ. ೬೨ ವರ್ಷ ವಯಸ್ಸಾಯಿತು. ಜೀವನದಲ್ಲಿ ಎಲ್ಲ ರೀತಿಯಲ್ಲೂ ಸಂತೃಪ್ತನಾಗಿದ್ದೇನೆ. ಯಾವುದಕ್ಕೂ ಅತಿಯಾಸೆ ಪಟ್ಟಿಲ್ಲ. ಮುಖದಲ್ಲಿ ಸದಾ ಸಮಯ ಮಂದಹಾಸವನ್ನಿಟ್ಟುಕೊಳ್ಳಲು ಸಾಧ್ಯವಾಗುತ್ತಿದೆ. ಆಫೀಸ್ ಅಲ್ಲಿ ಅರಬರು ಸಹ ಏನಾದರೂ ಖಿನ್ನತೆಗೆ ಅಥವಾ ಉದ್ವೇಗಕ್ಕೆ ಒಳಪಟ್ಟರೆ ನಿಮ್ಮ ಕಚೇರಿಗೆ ಬಂದು ಸ್ವಲ್ಪ ಸಮಯ ಕುಳಿತು ಸಂತೋಷದಿಂದ ಹೊರಡಬಹುದು ಎಂದು ಹೇಳುತ್ತಾರೆ ಇದಕ್ಕಿತ ಮಿಗಿಲಾಗಿ ಏನು ಬೇಕು?. ಶಾರ್ಜಾದ ಅತ್ಯುತ್ತಮ ಸರಕಾರಿ ನೌಕರ ಪ್ರಶಸ್ತಿ ಪಡೆದೆ. ಶ್ರೇಷ್ಠತೆಗಾಗಿ ೨೦೦ ಹೆಚ್ಚು ಮಾನ್ಯತೆಗಳನ್ನು ಪಡದೆ. ಸರಕಾರದ ಪ್ರತಿ ಕಾರ್ಯಕ್ರಮದ ಕೊನೆಗೆ ಉತ್ತಮ ಸಾಧನೆಗನ್ನು ಮಾಡಿದವರಿಗೆ ಸರಕಾರಿ ಗೌರವವನ್ನು ನೀಡಲಾಗುವುದು. ನನ್ನ ಹೆಸರು ಅವರ ಪೂರ್ವಯೋಜಿತ(default)ಪಟ್ಟಿಯಲ್ಲಿದೆ ಎಂದು ಅನಿಸುತ್ತಿದೆ.

ಫ್ಲಾಶ್ ಬ್ಯಾಕ್

೮೦ರ ದಶಕದ ಆರಂಭದಲ್ಲಿ ಮಧ್ಯಪ್ರಾಚ್ಯ ದೇಶಗಳು ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿದ್ದ ಕಾಲ ಕಂಪ್ಯೂಟರ್ ಬಳಕೆ ಸಾಮಾನ್ಯ ಜನರಲ್ಲಿ ಹರಡಲು ಪ್ರಾರಂಭಿಸಿದ ಕಾಲ. ಸರಿಯಾಗಿ ಹೇಳುವುದಾದರೆ, ಲೆಕ್ಕಹಾಕಲು ಮಾತ್ರ ಉಪಯೋಗಿಸುತ್ತಿದ್ದ ಕಂಪ್ಯೂಟರ್ಗಳಲ್ಲಿ ಗೇಮ್ ಗಳನ್ನು ಸೇರಿಸುತ್ತಿದ್ದ ಕಾಲ. ಶಾರ್ಜಾದಲ್ಲಿ ಕಟ್ಟಡ ನಿರ್ಮಾಣ ಕಂಪನಿಯನ್ನು ನಡೆಸುತ್ತಿದ್ದ ಸಿರಿಯಾ ಮೂಲದ ಅಬ್ದುಲ್ ಸೈಯದ್ ಕಂಪ್ಯೂಟರ್ ಗೇಮಿಂಗ್ ಗಳನ್ನು ಸುಗಮಗೊಳಿಸುವ ಮತ್ತು ಹೊಸ ಉದ್ಯೋಗಗಳನ್ನು ಹುಡಕುವರಿಗೆ ಅದನ್ನು ಕಲಿಸುವ ಒಂದು ಕಂಪ್ಯೂಟರ್ ಸಂಸ್ಥೆಯನ್ನು ಪ್ರಾರಂಭಿಸುವುದರಿಂದ ಜೀವನದ ದಿಕ್ಕು ಬದಲಿಸಬಹುದು ಎಂದು ಕನಸು ಕಾಣುತ್ತಿದ್ದರು. ಅದರಂತೆ ಸೈಯದ್ ತೈವಾನಿಗೆ ಹೋಗಿ ೨೫ ಕಂಪ್ಯೂಟರ್ ಗಳನ್ನೂ ತಂದು ಯುನೆಸ್ಕೋ ಕಂಪ್ಯೂಟರ್ ಕನ್ಸಲ್ಟೆನ್ಸಿ ಎಂದು ಹೆಸರಿಟ್ಟರು. ಇದು UAE ಯಲ್ಲಿ ಮೊದಲ ಸಂಸ್ಥೆಯಾಗಿತ್ತು. ಅದೇ ಸಮಯ ಥಾಮಸ್ ವ್ಯಾನ್ ಪ್ಲೀಟ್ ಎಂಬ ಸ್ವೀಡಿಷ್ ಮೂಲದ ವ್ಯಕ್ತಿ ಇನ್ನೊಂದು ಕನಸಿನ ಹಿಂದೆ ಬಿದ್ದಿದ್ದ. ಕೊಲ್ಲಿ ರಾಷ್ಟ್ರಗಳು ಮನರಂಜನೆ ಮತ್ತು ಪ್ರವಾಸ ತಾಣಗಳ ಕೇಂದ್ರವಾಗುತ್ತಿದ್ದ ಆ ಸಮಯದಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಮೂಲ ಸೌಕರ್ಯಗಳನ್ನು ಹೊಂದಿರುವ ಶಾರ್ಜಾದಲ್ಲಿ ಅನೇಕ ಉದ್ಯೋಗಾವಕಾಶವಿದೆ ಎಂದು ತಿಳಿದುಕೊಂಡ. ಹೆಚ್ಚಿನ ಅನಿವಾಸಿಗಳು ಆಸ್ಟ್ರಿಯ ಮತ್ತು ಜರ್ಮನಿಯಂತಹ ದೇಶಗಳಿಂದ ಬರುವವರು ಆಗಿದ್ದರಿಂದ ಇಂಗ್ಲಿಷ್ ಚೆನ್ನಾಗಿ ತಿಳಿದಿರುವ ಒಬ್ಬ ವ್ಯಕ್ತಿಯನ್ನು ತನ್ನೊಂದಿಗೆ ಸೇರಿಸಿದರೆ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಬಹುದು ಎಂದು ಯೋಚಿಸಿದ. ಶಾರ್ಜಾ ಪ್ರವಾಸೋದ್ಯಮದ ಹಿರಿಯ ಅಧಿಕಾರಿಯಾಗಿದ್ದ ಥಾಮಸ್ ಅನೇಕ ಯೋಜನೆಗಳ ಬಗ್ಗೆ ಕನಸುಕಂಡರು. ಕಣ್ಣಾನೂರಿನ ಪೆರಿಂಗೋಮ್ ಸಹಕರಣ ಬ್ಯಾಂಕ್ ಉದ್ಯೋಗಿಯಾಗಿದ್ದ ತಂದೆಯ ಹೆಜ್ಜೆಗಳನ್ನು ಅನುಕರಿಸುತ್ತಿದ್ದ ಪಯ್ಯನೂರ್ ಕಾಲೇಜಿನಲ್ಲಿ ವಾಣಿಜ್ಯ ಅಧ್ಯಯನ ಮಾಡಿದ ಒಬ್ಬ ಯುವಕ ಇದ್ದರು. ಯುಎಇ ಯಲ್ಲಿ ಕೆಲಸಮಾಡುತ್ತಿದ್ದ ಅವರ ಚಿಕ್ಕಪ್ಪ ಬಾಲಕೃಷ್ಣನ್ ಅಲ್ಲಿಂದ ವೀಸಾ ಕಳುಹಿಸಿದರು. ಎಲ್ಲ ಮಲಯಾಳಿಗಳು ಕನಸುಕಾಣುವಂತೆ ಕೊಲ್ಲಿರಾಷ್ಟ್ರದ ಕನಸಿನೊಂದಿಗೆ ವಿಮಾನ ಹತ್ತಿದ ಮೋಹನ್ ಕುಮಾರ್ ಎಂಬ ಪೆರಿಂಗೋಮಿನ ಆ ಯುವಕ ಅಬ್ದುಲ್ ಸೈಯದ್ ಎಂಬ ಸಿರಿಯನ್ ವ್ಯಕ್ತಿಯನ್ನು, ಚಹಾ ತಯಾರಿಸುವ ಮಾಧವನ್ ಎಂಬವರನ್ನು ಮತ್ತು ಸ್ವೀಡನಿನ ಥಾಮಸ್ ವಾಂಪ್ಲಿಟ್ ಎಂಬ ವ್ಯಕ್ತಿಯೊಂದಿಗೆ ಯುಎಯಿನಲ್ಲಿ ಭೇಟಿಯಾದ ಕಥೆಯಾಗಿದೆ ನನ್ನ ಜೀವನದ ಯಶಸ್ಸಿನ ಸಾಕ್ಷಿ ಪತ್ರ. ಈಗ ಮೋಹನ್ ಕುಮಾರ್ ವಿಶ್ವದ ಅತಿಹೆಚ್ಚು ಜನರು ಒಂದುಗೂಡುವ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕಮೇಳದ ಚುಕ್ಕಾಣಿಹಿಡಿಯುತಿದ್ದಾರೆ ಹಾಗೂ ಶಾರ್ಜಾ ಸುಲ್ತಾನ್ ಮೊಹಮ್ಮದ್ ಅಲ್ ಖಾಸಿಮಿಯಾ ಆಪ್ತ ಮಿತ್ರಕೂಡ ಆಗಿದ್ದಾರೆ.

ಮೂರು ದಶಕಗಳ ಹಿಂದೆ ಯುಎಇಗೆ ಬರುವಾಗ ಅಲ್ಲಿಯ ಪರಿಸ್ಥಿತಿ ಹೇಗಿತ್ತು?

ದೊಡ್ಡ ಕನಸುಗಳನ್ನು ಕಟ್ಟಿ ಹೊಸದಾಗಿ ಬರುವವರನ್ನು ಮೊದಲ ನೋಟದಲ್ಲೇ ಈಗ ಕೊಲ್ಲಿ ರಾಷ್ಟ್ರಕ್ಕೆ ಬರುತ್ತಿದ್ದೀರ ಎಂಬ ಪ್ರಶ್ನೆಗಳೊಂದಿಗೆ ಜನರು ಸ್ವಾಗತಿಸುತ್ತಿದ್ದರು. ಕಟ್ಟಿದ ಕನಸನ್ನು ನನಸು ಮಾಡಲು ದಿಟ್ಟವಾದ ಮನಸ್ಸಿದ್ದರೆ ಸಾಕು .

ನಿಮ್ಮ ಜೀವನವನ್ನು ಇಲ್ಲಿ ಯಾವ ರೀತಿಯಲ್ಲಿ ಪ್ರಾರಂಭಿಸಿದ್ದೀರಿ?

ಯುನೆಸ್ಕೋ ಕನ್ಸಲ್ಟೆನ್ಸಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದೆ. ಕೇವಲ ೧೫ ದಿನ ಮಾತ್ರ ಅಲ್ಲಿ ಕೆಲಸದಲ್ಲಿದ್ದೆ. ಅಷ್ಟರಲ್ಲಿ ಅದರ ಮಾಲೀಕ ಅಬ್ದುಲ್ ಸೈಯದ್ ಕಂಪ್ಯೂಟರ್ ಸಂಸ್ಥೆಯನ್ನು ಪ್ರಾರಂಭಿಸಿದರು. ನನ್ನ ಕೆಲಸದ ವಿಧಾನಗಳನ್ನು ನೋಡಿ ನನ್ನನ್ನು ಅಲ್ಲಿಗೆ ವರ್ಗಾವಣೆ ಮಾಡಿದರು. ನನ್ನೊಂದಿಗೆ ಮ್ಯಾಥ್ಯೂ ಎಂಬ ಮಲಯಾಳಿ ಮತ್ತು ಇನ್ನೊಬ್ಬ ವ್ಯಕ್ತಿ ಇದ್ದ. ನಮಗೆ ತರಬೇತಿ ನೀಡಲು ಇರಾನಿನಿಂದ ಒಬ್ಬರನ್ನು ಕರೆತರಲು ನಿರ್ಧರಿಸಿದರು. ಹೊಸದಾಗಿ ಬಂದ ಪರವಾನಗಿ (licence) ಪಡೆದ ಕಂಪ್ಯೂಟರ್ ಆಟಗಳನ್ನು ವಿಸ್ತರಿಸಲು ವಿವಿಧ ಸ್ಥಳಗಳಿಗೆ ಈಮೈಲ್ ಗಳನ್ನೂ ಕಳುಹಿಸುವ ಕಾರ್ಯವನ್ನು ಕಾರ್ಯದರ್ಶಿಯಾಗಿದ್ದ ಮ್ಯಾಥ್ಯೂ ಅವರಿಗೆ ವಹಿಸಲಾಗಿತ್ತು. ಸೈಯೆದ್ ನೀಡಿದ ಕ್ಯಾಟಲಾಗ್ ಅನ್ನು ನೋಡಿ ಈ-ಮೇಲ್ ರವಾನಿಸಿದರು. ಅದರಲ್ಲಿ ಕೆಲವು ಇಸ್ರೇಲ್ ರಾಷ್ಟ್ರಕ್ಕೂ ರವಾನೆಯಾಯಿತು. ಅಂದು ಪ್ಯಾಲೆಸ್ಟೀನ್ ಇಸ್ರೇಲ್ ರಾಷ್ಟ್ರಗಳ ನಡುವೆ ಸಮಸ್ಯೆಗಳು ನಡೆಯುತ್ತಿದ್ದ ಸಮಯವಾಗಿತ್ತು.ಇಸ್ರೇಲ್ ರಾಷ್ರ್ಟವೊಂದಿಗೆ ಏನೋ ಸಂಬಂಧವಿದೆ ಎಂದು ಹೇಳಿ ಸಂಸ್ಥೆಯನ್ನು ಮುಚ್ಚಲು ಸರ್ಕಾರದ ಆದೇಶ ಬಂತು.


ನಂತರ ಮುಂದಿನ ಉದ್ಯೋಗವನ್ನು ಹುಡುಕಲಿಲ್ಲವೇ?

ಊರಲ್ಲಿ ಜಮೀನು,ಆಸ್ತಿ ಇರುವುದರಿಂದ ಕುಟುಂಬದ ಜವಾಬ್ದಾರಿ ನನ್ನ ಮೇಲೆ ಇರಲಿಲ್ಲ. ಆದರೆ ತನ್ನದೇ ಆದ ಜೀವನವನ್ನು ಕಟ್ಟಬೇಕು ಎಂಬ ಕನಸು ಇರುವುದರಿಂದ ಪಾರ್ಟ್ ಟೈಮಾಗಿ ಅನೇಕ ಸ್ಥಳಗಳಲ್ಲಿ ಅಕೌಂಟೆಂಟ್ ಆಗಿ ಕೆಲಸಮಾಡಿ ಉತ್ತಮ ರೀತಿಯಲ್ಲಿ ಹಣವನ್ನು ಪಡೆಯಲು ಪ್ರಾರಂಭಿಸಿದೆ. ಅಲ್ಲಿ ಲೆಕ್ಕ ಪರಿಶೋಧಕನಾಗಿ ಒಂದು ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಮಾಧವನ್ ಎಂಬವರಿದ್ದರು. ನನಗೆ ಚಹಾ ಮಾಡಿಕೊಡುತ್ತಿದ್ದರು. ಅವರೊಂದಿಗೆ ವಾಸವಿದ್ದ ಮಲಯಾಳಿ ಯುವಕರೊಬ್ಬರು ಶಾರ್ಜಾ ಪ್ರವಾಸೋದ್ಯಮದ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದರು. ಅವರ ಕಚೇರಿಯಲ್ಲಿ ಒಂದು ಉದ್ಯೋಗ ಖಾಲಿಯಿದೆ ಎಂದು ಮಾಧವನ್ ಹೇಳಿದರು. ಓಹ್! ಅದು ಸರಕಾರಿ ಕೆಲಸವಲ್ಲವೇ? ಅರಬರಿಗೆ ಮಾತ್ರವೆಂದು ಭಾವಿಸಿ ಅಲ್ಲಿಗೆ ಹೋಗಲೇ ಇಲ್ಲ. ಆದರೆ ಮಾಧವನ್ ಅವರು ಹಲವಾರು ಬಾರಿ ಒತ್ತಾಯಿಸಿದಾಗ ನಾನು ಅಲ್ಲಿಗೆ ಹೋದೆ. ಆ ಕಚೇರಿಯ ಉಸ್ತುವಾರಿಯಾಗಿದ್ದ ಥಾಮಸ್ ವ್ಯಾನ್ ಪ್ಲೀಟ್ ನನ್ನನ್ನು ಇಂಟರ್ವ್ಯೂ ಮಾಡಿದರು. ಸ್ವಂತ ಕೈಬರಹದಲ್ಲೇ ಬಯೋಡೇಟಾ ಬರೆದು ಕೊಡಬೇಕೆಂದು ಕೇಳಿದರು.ಇಂಗ್ಲಿಷ್ ಪತ್ರಿಕೆಗಳನ್ನು ಓದುವ ರೂಢಿ ಇರುವುದರಿಂದ ಅದು ಸುಲಭದ ಕೆಲಸವಾಗಿತ್ತು. ಟೆಲೆಕ್ಟ್ ಅನ್ನು ನಿರ್ವಹಿಸಲು ತಿಳಿದುಕೊಳ್ಳಬೇಕಾಗಿತ್ತು. ಅಲ್ಪಾವಧಿಯಲ್ಲಿ ಯುನಿಸ್ಕೋದಿಂದ ಕಲಿತಿದ್ದೆ. ನಂತರ ತಿಳಿಸುವೆ ಎಂದು ಹೇಳಿ ವಾಪಾಸ್ ಕಳುಹಿಸಿದರು. ಎರಡು ಮೂರು ದಿನಗಳ ನಂತರ ನನ್ನನ್ನು ಹುಡುಕಿ ಇಲೆಕ್ಟ್ರಾನಿಕ್ ಅಂಗಡಿಗೆ ಫೋನ್ ಬಂತು. ಆ ಕಾಲದಲ್ಲಿ ಮೊಬೈಲ್ ಬಳಕೆಯಲ್ಲಿ ಇಲ್ಲದ ಕಾರಣ ನಾನು ಅಂಗಡಿಯ ದೂರವಾಣಿ ಸಂಖ್ಯೆಯನ್ನು ನೀಡಿದ್ದೆ. ಮರುದಿನವೇ ನಾನು ಪ್ರವಾಸೋದ್ಯಮ ಕಚೇರಿಯಲ್ಲಿ ಹಾಜರಾದೆ. ಅವರು ವಿಷಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ನೇಮಕಾತಿಯ ಆದೇಶವನ್ನು ನೀಡಿದರು. ಅದು ಜೀವನದ ಹೊಸಯುಗದ ಆರಂಭವಾಗಿತ್ತು

ಅಲ್ಲಿ ನಿಮ್ಮ ಜೀವನಹೇಗಿತ್ತು ಮತ್ತು ಕೆಲಸ ಏನಾಗಿತ್ತು?

ಸಂಕ್ಷಿಪ್ತವಾಗಿ ಹೇಳಬೇಕಾದರೆ ಶಾರ್ಜಾ ಪ್ರವಾಸೋದ್ಯಮದ ಪ್ರಚಾರ(promotion). ಸಾಕಷ್ಟು ಜೀವನಾನುಭವ ಹೊಂದಿರುವ ಥೋಮಸ್ ರೊಂದಿಗೆ ಕೆಲಸಮಾಡಲು ಬಹಳ ಉತ್ಸಾಹವಾಗಿತ್ತು. ಒಂದು ವರ್ಷದವರೆಗೆ ಶಾರ್ಜಾ ಪ್ರವಾಸ ತಾಣಗಳ ಬಗ್ಗೆ ಕರಪತ್ರಗಳನ್ನು ತಯಾರುಮಾಡಿ ಅದಕ್ಕಾಗಿ ಚಿತ್ರಗಳನ್ನು ತೆಗೆದುಕೊಳ್ಳುವುದು ಹಾಗೂ ಪ್ರವಾಸಿಗರ ವೀಸಾ ಸಂಬಂಧ ಕಾರ್ಯಗಳನ್ನು ಸರಿಪಡಿಸಿಕೊಡುವುದು ಮತ್ತು ಅವರಿಗೆ ಬೇಕಾದ ವಸತಿಯ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿತ್ತು.

ಇಂದು ಪ್ರವಾಸೋದ್ಯಮದ ಆಕರ್ಷಕ ಕೇಂದ್ರ ದುಬೈ ಅಲ್ಲವೆ?

ಹೌದು. ಹೊರದೇಶಗಳಲ್ಲಿ ಗಲ್ಫ್ ಅಂದರೆ ದುಬೈ ಎಂಬ ಭಾವನೆ.ದುಬೈ ಅಭಿವೃದ್ಧಿ ಹೊಂದುತ್ತಾ ಇದೆ. ಹಿಂದೆ ನಾನು ಇಲ್ಲಿಗೆ ಬಂದ ಕಾಲದಲ್ಲಿ ಶಾರ್ಜಾದಿಂದ ದುಬೈಗೆ ಹೋಗುವ ರಸ್ತೆಗಳು ಮರುಭೂಮಿಗಳಿಂದ ಬೀಸುವ ಗಾಳಿಯ ರಭಸಕ್ಕೆ ಮರುಳುಗಳಿಂದ ಮುಚ್ಚಿರುತ್ತಿತ್ತು. ಕಾರಣ ಇವತ್ತು ನಾವು ಕಾಣುವಂತಹ ಕಟ್ಟಡಗಳು ರಸ್ತೆಗಳ ಎರಡು ಬದಿಗಳಲ್ಲಿ ಇರಲಿಲ್ಲ. ರಸ್ತೆಗಳಲ್ಲಿ ವಾಹನಗಳ ೨ ಚಕ್ರಗಳು ಮಾತ್ರ ಗೋಚರಿಸಿತಿತ್ತು. ಆಗ ಶಾರ್ಜಾ ಉತ್ತಮ ರಸ್ತೆ ಸೇತುವೆಗಳಿಂದ ಅಭಿವೃದ್ಧಿ ಹೊಂದಿತ್ತು. ದುಬೈ ನಿಧಾನವಾಗಿ ಅಭಿವೃದ್ದಿಯ ಹಾದಿ ಹಿಡಿಯಿತು. ಈಗ ವಿಶ್ವದ ಅತಿದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾ ದುಬೈಯಲ್ಲಿದೆ. ದುಬೈ ೨೦-೨೦ ಎಕ್ಸ್ಪೋ ಬರುವಹೊತ್ತಿಗೆ ಅಲ್ಲಿ ಬರುವ ಬದಲಾವಣೆಗಳು ಅನಿರೀಕ್ಷಿತವಾಗಿದೆ. ಅದಲ್ಲದೆ ದುಬೈ ಸೌತ್ ಎಂಬ ಹೊಸಾ ನಗರದ ನಿರ್ಮಾಣ ನಡಯುತ್ತಿದೆ.ಇವೆಲ್ಲವೂ ದೂರದೃಷ್ಟಿಯ ಆಡಳಿತಗಾರನ ಸಾಧನೆಗಳಾಗಿವೆ.
ಆರ್ಟಿಫಿಷಿಯಲ್ ಇಂಟಲಿಜೆಂಟ್ ಎಂಬ ಹೊಸ ತಂತ್ರಜ್ಞಾನಕ್ಕಾಗಿ ದುಬೈ ಸಚಿವರನ್ನು ನೇಮಿಸಿದೆ. ವಿಶ್ವದಲ್ಲಿ ಮೊದಲ ಬಾರಿಗೆ ಜನರ ಕ್ಷೇಮ, ಕುಟುಂಬಕಲ್ಯಾಣಕ್ಕಾಗಿ ಸಚಿವಸಂಪುಟವನ್ನು ರಚಿಸಲಾಗಿದೆ. ಶೈಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತುಮ್ ದೇಶದ ಪ್ರತಿಯೊಬ್ಬ ಪ್ರಜೆಗಳ ಸಂತೋಷ ಮತ್ತು ಕ್ಷೇಮವನ್ನು ನೋಡಿಕೊಳ್ಳುವುದು ಒಬ್ಬ ದಿಟ್ಟ ಆಡಳಿತಗಾರನ ಜವಾಬ್ದಾರಿ ಎಂದು ಸಾರಿ ಹೇಳಿದ್ದಾರೆ. ಇತ್ತೀಚೆಗೆ ಅವರು ಬರೆದ ಪುಸ್ತಕ ರಿಫ್ಲೆಕ್ಷನ್ ಆನ್ ಹ್ಯಾಪಿನೆಸ್. ಅದರಲ್ಲಿ ದೇಶ ಹೇಗೆ ಮುನ್ನಡೆಸಬೇಕು ಮತ್ತು ಅಭಿವೃದ್ಧಿಯತ್ತ ಹೇಗೆ ಸಾಗಬೇಕು? ಇತ್ಯಾದಿ ವಿಷಯಗಳನ್ನು ಪ್ರತಿಪಾದಿಸಿದ್ದಾರೆ. ಅದಲ್ಲದೆ ಈ ಪುಸ್ತಕದ ಎಲ್ಲಾ ವಿಷಯಗಳು ಒಬ್ಬ ವ್ಯಕ್ತಿಯ ಯಶಸ್ವಿಗೆ ಅನ್ವಯಿಸಬಹುದಾಗಿದೆ. ಅದನ್ನು ಎಲ್ಲರೂ ಓದಬೇಕೆಂದು ನನ್ನ ಅಭಿಪ್ರಾಯ.

ಪ್ರವಾಸೋದ್ಯಮದಿಂದ ಪುಸ್ತಕ ಮೇಳದತ್ತ ನಿಮ್ಮ ದಿಕ್ಕನ್ನು ಹೇಗೆ ಬದಲಾಯಿಸಿದ್ದೀರಿ?

ಶಾರ್ಜಾದಲ್ಲಿ ಮೊದಲ ಪುಸ್ತಕ ಮೇಳ ಪ್ರಾರಂಭಿಸುವಾಗ ನನ್ನ ಕೆಲಸ ಪ್ರವಾಸೋದ್ಯಮದಲ್ಲಾಗಿತ್ತು. ಪ್ರಾರಂಭದಲ್ಲಿ ಈ ಮೇಳದ ಹೆಸರು ಶಾರ್ಜಾ ಇಸ್ಲಾಮಿಕ್ ಪುಸ್ತಕ ಮೇಳ ಎಂದಾಗಿತ್ತು. ಇದರ ನಿರ್ದೇಶಕ ಮುಹಮ್ಮದ್ ಬಿನ್ ಮೂಸ ಎಂಬವರಾಗಿದ್ದರು. ಪುಸ್ತಕ ಮೇಳ ಎಂಬ ಕಲ್ಪನೆಯನ್ನು ಮೊದಲು ರೂಪಿಸಿದವರು ಅವರೇ ಆಗಿದ್ದರು. ಪ್ಯಾಲೆಸ್ಟೀನಿಯನ್ ಪ್ರಜೆಯಾಗಿದ್ದ ಅವರು ಶಾರ್ಜಾ ಸುಲ್ತಾನರ ಶಾಲಾ ಶಿಕ್ಷಕರಾಗಿದ್ದರು. ಅವರ ಗೌರವ ಸಂಕೇತವಾಗಿ ಇವತ್ತಿಗೂ ಅವರಿಗೆ ಆಡಳಿತ ಕಚೇರಿಯಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ನನ್ನನ್ನೊಳಗೊಂಡ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಇಲಾಖೆಯಾಗಿತ್ತು ಪುಸ್ತಕ ಮೇಳವನ್ನು ಆಯೋಜಿಸಿದ್ದು. ಹಾಗಾಗಿ ನನಗೆ ಸಾಕಷ್ಟು ಕೆಲಸಗಳಿದ್ದವು. ನಂತರ ಸುಡಾನ್ ಮೂಲದ ಡಾ.ಯೂಸುಫ್ ಫಾಯದಾವಿ ಪುಸ್ತಕ ಮೇಳದ ಮುಖ್ಯಸ್ಥರಾದರು. ೨೫ ವರ್ಷಗಳ ಕಾಲ ಅವರು ನಿರ್ದೇಶಕರಾಗಿದ್ದರು. ಆ ಕಾಲದಲ್ಲಿ ಅರಬ್ ರಾಷ್ಟ್ರಗಳ ಪುಸ್ತಕಗಳನ್ನು ಮಾತ್ರ ಪ್ರದರ್ಶನಕ್ಕೆ ಇಟ್ಟಿದ್ದರು. ಪ್ರಾರಂಭದಿಂದಲೂ ನನ್ನ ಜವಾಬ್ದಾರಿ UAE ಯ ಹೊರಗಿನ ಅಂತಾರಾಷ್ಟ್ರೀಯ ಪುಸ್ತಕ ವಿಭಾಗದಲ್ಲಾಗಿತ್ತು. ನಂತರ ಪುಸ್ತಕ ಮೇಳದ ಪ್ರಾಧಿಕಾರದ ಅಧ್ಯಕ್ಷರಾಗಿ ಹಣಕಾಸು ನಿಯಂತ್ರಕರಾಗಿದ್ದ ಅಹ್ಮದ್ ಎಂಬ ಅರಬ್ ವ್ಯಕ್ತಿ ಆಯ್ಕೆಯಾದರು. ನಾವು ಒಟ್ಟಿಗೆ ಕೆಲಸ ಮಾಡಿದ್ದೆವು. ಅವರು ಆಯ್ಕೆಯಾದಾಗ ನನ್ನ ಕರ್ತವ್ಯಗಳು ಹೆಚ್ಚಾದವು. ಪುಸ್ತಕ ಮೇಳವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರಲು ಹಲವು ರೀತಿಯ ಯೋಜನೆಗಳನ್ನು ಮುಂದಿಟ್ಟೆವು. ಹೇರಳವಾಗಿ ಭಾರತೀಯರನ್ನು ಹೊಂದಿರುವ ದೇಶದಲ್ಲಿ ಭಾರತೀಯರಿಗೆ ಪಥ್ಯವಾಗುವ ಹಲವು ವಿಧಾನಗಳನ್ನು ಪ್ರಾಬಲ್ಯಕ್ಕೆ ತಂದ ಕಾರಣ ಪುಸ್ತಕ ಮೇಳ ಯಶಸ್ಸನ್ನು ಕಂಡಿತು.ಇ ದು ೩೬ನೆ ಪುಸ್ತಕ ಮೇಳವಾಗಿತ್ತು . ಈ ಮೇಳದ ಪ್ರಾರಂಭದಿಂದಲೇ ನಾನು ಅದರ ಭಾಗವಾಗಿದ್ದೆ. ಈ ಕ್ರೆಡಿಟ್ ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ. ಶಾರ್ಜಾ ಸುಲ್ತಾನ್ ಮತ್ತು ನಾನು ಇದರ ಪ್ರಾರಂಭದಿಂದಲೇ ಇರುವವರು. ಅಲ್ಲದೆ ಈ ಪ್ರಾಧಿಕಾರ ಸಂಘಟನೆಯಲ್ಲಿ ಅರಬೇತರ ಏಕೈಕ ವ್ಯಕ್ತಿ ನಾನಾಗಿರುವೆನು.

ಈ ಎಲ್ಲ ಯಾತ್ರೆ ಕೆಲಸಗಳ ಮಧ್ಯೆ ನಿಮ್ಮ ಜೀವನ ಹೇಗೆ ಕ್ರಮಪಡಿಸುವಿರಿ ?

ಅನಿವಾಸಿ ಜೀವನವನ್ನು ಪ್ರಾರಂಭಿಸಿ ಈಗ ೩೭ ವರ್ಷಗಳು ಕಳೆದಿದೆ. ಜೀವನದಲ್ಲಿ ದೊಡ್ಡಬದಲಾವಣೆಗಳೇನು ಆಗಲಿಲ್ಲ. ಊರಲ್ಲಿ ಜಮೀನು ಆಸ್ತಿ ಇರುವುದರಿಂದ ಹಣಮಾಡುವ ದುರಾಸೆ ಏನೂ ಇರಲಿಲ್ಲ. ಈ ಉದ್ಯೋಗ ಉತ್ತಮ ಜೀವನ ಪರಿಸ್ಥಿಯನ್ನು ಸೃಷ್ಠಿಸಿದೆ. ಒಬ್ಬಳೇ ಮಗಳು ಅಶ್ವತಿ, ಅವಳ ಮದುವೆಯಾಗಿದೆ. ಅಳಿಯ ವಾಯುಸೇನೆಯಲ್ಲಿ ಕಮಾಂಡರ್ ಆಗಿ ಕೆಲಸಮಾಡುತ್ತಿದ್ದಾರೆ. ಅವರಿಬ್ಬರೂ ಬೆಂಗಳೂರಲ್ಲಿ ನೆಲೆಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಉಪಾಸನ ಮತ್ತು ಉಜ್ವಲ್. ಮಗಳು ಆಟವಾಡಿ ಬೆಳೆದ ಈ ಫ್ಲ್ಯಾಟನ್ನು ತೊರೆಯಲು ಸಾಧ್ಯವಾಗದ ಕಾರಣ ಕಳೆದ ೧೭ ವರ್ಷದಿಂದ ನಾನು ಹೆಂಡತಿ ಇಲ್ಲೇ ವಾಸವಿದ್ದೇವೆ.
ನಾನು ಬೆಳಿಗಿನ ಜಾವಾ ೪.೩೦ಕ್ಕೆ ಎದ್ದೇಳುವೆ. ಯೋಗ ಮತ್ತು ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತೇನೆ. ನಂತರ ಪುಸ್ತಕ ಓದುವೆ. ೧ ಗಂಟೆಗಳ ಕಾಲ ನಡೆಯಲು(walking ) ಹೋಗುವೆನು. ಪ್ರತಿದಿನ ದೀಪವನ್ನು ಹಚ್ಚಿ ೧೦ ನಿಮಿಷಗಳ ಕಾಲ ಪ್ರಾರ್ಥಿಸುವೆ. ಅದು ನನ್ನ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಹಿಂದಿನಿಂದಲೂ ಟಿ ಶರ್ಟ್ ಮತ್ತು ಕ್ರೀಡಾಬೂಟುಗಳನ್ನು ಧರಿಸುವುದು ರೂಡಿ. ದುಬಾರಿ ಕಾರು,ವಾಚುಗಳ ಅಗತ್ಯ ನನಗಿಲ್ಲ. ಸರಳ ಜೀವನವನ್ನು ಇಷ್ಟಪಡುತ್ತೇನೆ. ಮಿತವಾದ ಆಹಾರ. ಉಪ್ಪಿನಕಾಯಿ,ಸಕ್ಕರೆ ಮತ್ತು ಹಪ್ಪಳವನ್ನು ಸೇವಿಸುವುದಿಲ್ಲ. ಕೆಲಸದ ನಂತರ ಹೆಂಡತಿಯೊಂದಿಗೆ ಶಾಂತವಾದ ರಸ್ತೆಯಲ್ಲಿ ಹಾಡು ಕೇಳುತ್ತಾ ಕೆಲವೊಮ್ಮೆ ನಾವೇ ಹಾಡುತ್ತಾ, ಮಗಳ ಮೊಮ್ಮಕ್ಕಳ ಅಥವಾ ಕುಟುಂಬದವರ ಕಾರ್ಯಗಳನ್ನು ಹೇಳಿ ನಗರವನ್ನು ಸುತ್ತಿ ಕಾರನ್ನು ಚಲಾಯಿಸುತ್ತಾ ಮನೆಗೆ ಹಿಂತಿರುಗುತ್ತೇವೆ.


ಮೋಹನ್ ಕುಮಾರ್


ಶಾರ್ಜಾ ಸರಕಾರದ ಸಾಂಸ್ಕೃತಿಕ ಪ್ರತಿನಿಧಿ. ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳದ ರೂವಾರಿ. ಶಾರ್ಜಾ ಪುಸ್ತಕ ಪ್ರಾಧಿಕಾರ ಸಮಿತಿಯ ಅರಬ್ಬೇತರ ಏಕೈಕ ಮಲಯಾಳಿ ಸದಸ್ಯ. ಕಣ್ಣಾನೂರಿನ ಪೆರಿಂಗೋಮ್ ನಿವಾಸಿ.

ಅನು: ಎಂ.ಜೆ ಯಾಸೀನ್ ಸಿದ್ದಾಪುರ

Leave a Reply

*