ಸವಾನಿಹ್ ಮತ್ತು ಇಂಡೋ ಪರ್ಷಿಯನ್‌ ಸೂಫಿಸಂ

ಸೂಫಿಸಂ ಕುರಿತ ಅತ್ಯಂತ ಹಳೆಯ ಪರ್ಷಿಯನ್‌ ರಚನೆಗಳಲ್ಲಿ ಅಹ್ಮದ್ ಅಲ್ ಗಝ್ಝಾಲಿಯವರ ‘ಸವಾನಿಹ್’ ಗ್ರಂಥವೂ ಒಂದು. ಇಸ್ಮಾಯೀಲ್ ಬಿನ್ ಮುಹಮ್ಮದ್ ಅಲ್ ಮುಸ್ತಂಲಿಯವರ ‘ಶರಹು ತಅರ್ರುಫ್ ಲಿ ಮದ್ಸ್ಹಬಿ ತಸವ್ವುಫ್’, ಅಲಿಯ್ಯ್ ಬಿನ್ ಉಸ್ಮಾನ್ ಅಲ್ ಹುಜ್‌ವೀರಿ ಯವರ ‘ಕಶ್ಫುಲ್ ಮಹ್ಜೂಬ್’ ನಂತಹ ಕೆಲವೇ ಕೆಲವು ಗ್ರಂಥಗಳಷ್ಟೇ ಆ ವಿಷಯದಲ್ಲಿ ಸವಾನಿಹ್ ಗೂ ಮುನ್ನ ವಿರಚಿತವಾದ ಗ್ರಂಥಗಳು. ಆದರೆ, ಈ ಗ್ರಂಥಗಳಿಗೂ ಮೊದಲೇ ಪರ್ಷಿಯನ್‌ ಭಾಷೆಯಲ್ಲಿ ಸೂಫಿಸಂ ವ್ಯಾಪಕವಾಗಿ ಚರ್ಚೆಗೊಳಪಟ್ಟಿತ್ತು ಎನ್ನುವುದಕ್ಕೆ ದಾಖಲೆಗಳಿವೆ. ಅಬೂ ಅಬ್ದುರ್ರಹ್ಮಾನ್ ಅಸ್ಸುಲಮೀ, ಅಬೂ ಸಈದ್ ಬಿನ್ ಅಬಿಲ್ ಖೈರ್, ಅಬುಲ್ ಖಾಸಿಂ ಅಲ್ ಖುಶೈರಿ ಮೊದಲಾದವರು ಅಹ್ಮದ್ ಅಲ್ ಗಝ್ಝಾಲಿಯವರಿಗೂ ಮೊದಲೇ ಅಪಾರ ಪ್ರಭಾವ ಬೀರಿದ್ದ ಪರ್ಷಿಯನ್ ಸೂಫೀ ವಿದ್ವಾಂಸರಾಗಿದ್ದರು. ಇಸ್ಲಾಮಿಕ್ ಕಾನೂನು, ದೇವತಾಶಾಸ್ತ್ರಗಳಂತೆಯೇ ಪ್ರಾರಂಭ ಕಾಲದಲ್ಲಿ ಸೂಫಿಸಂ ಕುರಿತ ರಚನೆಗಳೂ ಮುಖ್ಯವಾಗಿ ಅರಬಿ ಭಾಷೆಯಲ್ಲೇ ರಚಿತವಾಗುತ್ತಿದ್ದವು. ನಂತರದ ದಿನಗಳಲ್ಲಿ ಇಸ್ಲಾಮಿನ ಸೂಫೀ ಚಿಂತನೆಗಳ ನೈಸರ್ಗಿಕವಾದ ಕಾವ್ಯಶೈಲಿ ಮೂಲಕ ಬಳಿಕ ಪರ್ಷಿಯನ್‌ ಭಾಷೆಯಲ್ಲಿ ಇಂತಹ ಸಾಹಿತ್ಯ ಪ್ರಕಾರಗಳು ಅಧಿಕಾರ ಹಿಡಿದವು.

ಹಿಜರಿ ಆರನೇ ಶತಮಾನದ ಮೊದಲ ದಶಕದಲ್ಲಿ ರಚನೆಗೊಂಡ ಸವಾನಿಹ್ ಗ್ರಂಥವು ಪ್ರೇಮದ ಅತೀಂದ್ರಿಯ ಮಗ್ಗುಲುಗಳನ್ನು ಬಹು ವಿಸ್ತೃತವಾಗಿ ಚರ್ಚೆ ಮಾಡುವ; ಒಂದರ್ಥದಲ್ಲಿ ಇಸ್ಲಾಮಿಕ್ ಇತಿಹಾಸದಲ್ಲೇ ಪ್ರಥಮ ದಾಖಲೆಯೆನ್ನಬಹುದು. ಪ್ರೇಮವನ್ನು ಸರ್ವಸ್ವವೂ ಉದ್ಭವಿಸುವ ಆತ್ಯಂತಿಕ ಸತ್ಯ ಎಂದು ಸವಾನಿಹ್ ಬಣ್ಣಿಸುತ್ತದೆ. ಎಲ್ಲವೂ ಅಸ್ತಿತ್ವ ಸಿದ್ಧಿಸುವುದು ಪ್ರೇಮದಲ್ಲಿ ಬಂಧಿತರಾದವರೊಳಗಿನ ಸಂಕೀರ್ಣವಾದ ಸಂಬಂಧದ ಮೂಲಕವೆಂದೂ, ಪ್ರೇಮಿಗಳ ಆತ್ಮಗಳು ಪರಸ್ಪರ ಭೇಟಿಯಾಗುತ್ತವೆ ಎಂದೂ ಸವಾನಿಹ್ ಸ್ಪಷ್ಟಪಡಿಸುತ್ತದೆ.

ಈ ಕಾರಣದಿಂದಲೇ ಲಿಯೊನಾರ್ಡ್ ಲೆವಿಸನ್ ಸವಾನಿಹ್ ಅನ್ನು ‘ಸ್ಕೂಲ್ ಆಫ್ ಲವ್’ ನ ಪ್ರಥಮ ಗ್ರಂಥವಾಗಿ ಮತ್ತು ಪರ್ಷಿಯನ್ ಪ್ರೇಮಕಾವ್ಯ ಪರಂಪರೆಯ ಮೂಲವೆಂದೂ ಗುರುತಿಸುತ್ತಾರೆ. ಆದ್ದರಿಂದಲೇ, ಲಭ್ಯವಾದ ದಾಖಲೆಗಳ ಪ್ರಕಾರ ಅಹ್ಮದ್ ಅಲ್ ಗಝಾಲಿಯವರೇ ಪರ್ಷಿಯನ್ ಸೂಫಿ ಸಾಹಿತ್ಯದ ಮೂಲಪುರುಷ ಎನ್ನಬಹುದು.
ಸಾಹಿತ್ಯ ಕ್ಷೇತ್ರದ ಅಗಾಧ ಪಾಂಡಿತ್ಯದ ಜೊತೆಗೆ ಅಹ್ಮದ್ ಗಝ್ಝಾಲಿಯವರಿಗೆ ಅನೇಕ ಪ್ರಸಿದ್ಧ ಶಿಷ್ಯಂದಿರಿದ್ದರು. ಇರಾಕ್ ಮತ್ತು ಪಶ್ಚಿಮ ಪರ್ಷಿಯಾವನ್ನು ಆಳಿದ ಸಲ್ಜೂಖ್ ಚಕ್ರವರ್ತಿ ಮುಗೀಸುದ್ದೀನ್ ಮಹ್ಮೂದ್ ಮತ್ತು ಖುರಾಸಾನ್, ಉತ್ತರ ಪರ್ಷಿಯಾದ ಆಡಳಿತಗಾರ ಅವರ ಸಹೋದರ ಅಹ್ಮದ್ ಸಂಜರ್ ಮೊದಲಾದ ಪ್ರಮುಖ ವ್ಯಕ್ತಿತ್ವಗಳೂ ಸಹ ಅಹ್ಮದ್ ಗಝ್ಝಾಲಿಯವರ ಶಿಷ್ಯಂದಿರೇ ಆಗಿದ್ದಾರೆ. ಸೂಫೀ ಪರಂಪರೆಯಲ್ಲಿ ಬರುವ ‘ಶೈಖ್’ ಎಂಬ ಅವರ ಪದವಿಯೂ ಪ್ರಮುಖವಾದುದು. ಸೂಫೀ ಪರಂಪರೆಯ ಶ್ರೇಣಿಯಾಧಾರಿತ ಅಧ್ಯಯನದ ಪ್ರಕಾರ ಅಹ್ಮದ್ ಗಝ್ಝಾಲಿಯವರ ಪ್ರಮುಖ ಶಿಷ್ಯರಾಗಿದ್ದಾರೆ ಶೈಖ್ ದಿಯಾವುದ್ಧೀನ್ ಅಬೂ ನಜೀಬ್ ಅಸ್ಸುಹ್ರವರ್ದಿ. ಅವರೊಳಗಿನ ಒಡನಾಟವು ಎಷ್ಟರಮಟ್ಟಿಗೆ ಇತ್ತೆಂಬುದು ಸ್ಪಷ್ಟವಾಗಿಲ್ಲವಾದರೂ ಗಝಾಲಿ ಯವರು ಅವರನ್ನು ಪ್ರಶಂಸಿಸಿ ಇಸ್ಫಹಾನಿನಲ್ಲಿ ಜೊತೆಯಾಗಿ ಇದ್ದ ಸಮಯದಲ್ಲಿ ಅವರನ್ನು ಖಲೀಫರಾಗಿ ನೇಮಕ ಮಾಡಿದ್ದಕ್ಕೆ ಸಾಕ್ಷ್ಯಗಳಿವೆ

ಅಬೂ ನಜೀಬ್ ಸುಹ್ರವರ್ದಿಯವರ ಪ್ರಸಿದ್ಧ ಶಿಷ್ಯರೂ ಸುಹ್ರವರ್ದಿ ಸೂಫೀ ಪಂಥದ ಸ್ಥಾಪಕರೂ ‘ಅವಾರಿಫುಲ್ ಮಾರಿಫ್’ ಎಂಬ ಪ್ರಸಿದ್ಧ ಕೃತಿಯ ಗ್ರಂಥಕರ್ತರೂ ಆದ ಅಬೂ ಹಫ್ಸ್ ಉಮರ್ ಸುಹ್ರವರ್ದಿ ಯವರಿಂದ ಸ್ಥಾಪಿತಗೊಂಡು ಒಟ್ಟೋಮನ್ ಸಾಮ್ರಾಜ್ಯದಲ್ಲಿ ಹಬ್ಬಿ ಇಂದಿಗೂ ತುರ್ಕಿಯಲ್ಲಿ ಚಾಲ್ತಿಯಲ್ಲಿರುವ ಸೂಫಿ ಪಂಥವೇ ಝೈನಿಯ್ಯಾ ತ್ವರೀಕತ್. ಚಿಶ್ತಿಯ್ಯಾ, ನಕ್ಷ್ ಬಂದಿಯ್ಯಾ , ಖಾದಿರಿಯ್ಯಾ ಮುಂತಾದ ಸೂಫೀ ಪಂಥಗಳಂತೆಯೇ ಭಾರತ ಮತ್ತು ಪಾಕಿಸ್ತಾನದ ಚರಿತ್ರೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪಂಥವಾಗಿದೆ ಸುಹ್ರವರ್ದೀ ಪಂಥ. ಅರಬ್ ರಾಷ್ರ್ಟಗಳಲ್ಲಿ ಈ ಪಂಥವು ಸ್ವಾಭಾವಿಕವೆಂಬಂತೆ ನೇಪಥ್ಯಕ್ಕೆ ಸರಿದಿದೆಯಾದರೂ ಇರಾಕ್, ಸಿರಿಯಾ ದೇಶಗಳಲ್ಲಿ ಇಂದಿಗೂ ಜೀವಂತವಾಗಿದೆ. ಸೂಫೀ ಪರಂಪರೆಗಳ ಇತಿಹಾಸದಲ್ಲಿ ಪ್ರಸಿದ್ಧವಾದ ಮತ್ತೊಂದು ಹೆಸರೇ ಅಹ್ಮದ್ ಅಲ್ ಗಝ್ಝಾಲಿಯವರ ಮತ್ತೋರ್ವ ಶಿಷ್ಯರಾದ ಅಬುಲ್ ಫಳ್ ಲ್ ಅಲ್ ಬಗ್ದಾದಿ. ಶಾಹ್ ನಿ ಅಮತುಲ್ಲಾಹ್ ವಲಿ ಸ್ಥಾಪಿಸಿದ ನಿಅಮತುಲ್ಲಾಹಿ ಪಂಥದ ಒಂದು ವಿಭಾಗವು ಏಳು ಶಾಖೆಗಳಾಗಿ ಅಲ್ ಬಗ್ದಾದಿಯವರ ಮೂಲಕ ಹಾದು ಬರುತ್ತದೆ. ಆ ಶಾಖೆಯು ತುರ್ಕಿಯಲ್ಲಿ ಪ್ರಚಾರ ಪಡೆದು ಹತ್ತೊಂಬತ್ತನೆಯ ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ ಅಮೇರಿಕಾ, ಯುರೋಪ್ ಗಳಲ್ಲಿ ವ್ಯಾಪಿಸಿದ ಮುಸ್ಲಿಂ ಸಮೂಹದಲ್ಲಿ ವಿಶೇಷ ಮನ್ನಣೆ ಗಳಿಸಿದೆ. ಪರ್ಷಿಯನ್‌ ಸೂಫೀ ಗುರು ಜಲಾಲುದ್ದೀನ್ ರೂಮಿ ಅವರ ಮೌಲವಿ ಪಂಥಕ್ಕೆ ಶಂಸುದ್ದೀನ್ ಅಫ್ ಲಾಕ್ ತಮ್ಮ ‘ಮನಾಖಿಬುಲ್ ಆರಿಫೀನ್’ ಗ್ರಂಥದಲ್ಲಿ ಕೊಟ್ಟಿರುವ ಪರಂಪರೆಯಲ್ಲಿ ಅಹ್ಮದ್ ಅಲ್ ಗಝ್ಝಾಲಿಯವರನ್ನು ಅಹ್ಮದ್ ಖಾತಿಬಿ ಅಲ್ ಬಲ್ಕಿಯವರ ಗುರು ಎಂದು ಪ್ರಸ್ತಾಪಿಸಲಾಗಿದೆ. ತದನಂತರ ಮೌಲವಿ ಪಂಥದಲ್ಲಿ ಬಂದ ಅನುಯಾಯಿ ಸಮೂಹವು ಮೌಲಾನಾ ಜಲಾಲುದ್ದೀನ್ ರೂಮಿಯದ್ದೆಂದು ಹೇಳಲಾಗುವ ಉಕ್ತಿಯೊಂದರಿಂದ ಅಹ್ಮದ್ ಅಲ್ ಗಝಾಲಿಯವರ ಆಧ್ಯಾತ್ಮಿಕ ಲೋಕದ ಅಧಿಕೃತತೆಯನ್ನು ನಿರೂಪಿಸುತ್ತಾರೆ.

ಅಬ್ದುಲ್ಲಾ ಅನ್ಸಾರಿ, ಅಹ್ಮದ್ ಅಲ್ ಗಝಾಲಿ, ಅಹ್ಮದ್ ಸಮ್ಆನೀ, ಹಕೀಮ್ ಸನಾಈ, ಮಯ್ಬುದೀ, ಮೊದಲಾದವರು ಆ ಚಳುವಳಿಯ ವಕ್ತಾರರಲ್ಲಿ ಮೊದಲಿಗರು. ಇಂದಿಗೂ ಲಭ್ಯವಿರುವ ಸವಾನಿಹ್ ನ ಹಸ್ತಪ್ರತಿಗಳು ಭಾರತದಲ್ಲಿ ಸವಾನಿಹ್ ನ ಪರ್ಷಿಯನ್‌ ಭಾಷೆಯಲ್ಲಿರುವ ವ್ಯಾಖ್ಯಾನಗಳು ಅಹ್ಮದ್ ಅಲ್ ಗಝಾಲಿಯವರ ಸಾಹಿತ್ಯಿಕ ಪ್ರಭಾವವನ್ನು ಸ್ಪಷ್ಟಪಡಿಸುತ್ತದೆ. ‘ಪ್ರೇಮ ಮತ್ತು ಪ್ರೇಮಿಗಳ ನಡುವಿನ ಮಿಲನವೇ ಆಧ್ಯಾತ್ಮಿಕ ಯಾತ್ರೆಯ ಎಲ್ಲಾ ಹಂತಗಳೂ’ ಎಂಬ ಅವರ ಸಿದ್ಧಾಂತವು ನಂತರದ ಪರ್ಷಿಯನ್‌ ಸೂಫಿಸಂನ ಕೇಂದ್ರಬಿಂದುವಾಯಿತು. ಜೊತೆಗೆ, ಗದ್ಯ-ಪದ್ಯ ಸಮ್ಮಿಶ್ರ ಸುಂದರವಾಗಿ ಸಮನ್ವಯಗೊಳಿಸುವ ಆಖ್ಯಾನ ಶೈಲಿಯು ಮುಂದೆ ಬರೆಯಲ್ಪಟ್ಟ ಅನೇಕ ಸೂಫಿ ರಚನೆಗಳಲ್ಲಿ ಅನುಕರಣೀಯವಾಯಿತು. ನಂತರದ ಸೂಫಿ ರಚನೆಗಳಲ್ಲಿ ಅಲ್ ಗಝಾಲಿಯವರ ಶೈಲಿ ಮತ್ತು ಬೋಧನೆಗಳು ಬೀರಿದ ಪ್ರಭಾವಗಳನ್ನು ಲೆಕ್ಕಹಾಕುವಾಗ ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂಬುದು ಮನದಟ್ಟಾಗುತ್ತದೆ. ಪರ್ಷಿಯನ್‌ ಸೂಫಿ ಪರಂಪರೆಯ ಅಷ್ಟೂ ರಚನೆಗಳನ್ನು ಒಟ್ಟು ಮಾಡಿ ವಿಶ್ಲೇಷಣೆಗೊಳಪಡಿಸಿದರೆ ಮಾತ್ರವೇ ಅಂತಹ ಒಂದು ಅಧ್ಯಯನವು ಪೂರ್ಣಾರ್ಥದಲ್ಲಿ ಸಾಧ್ಯವಾಗಬಹುದಷ್ಟೆ.

ಅಹ್ಮದ್ ಅಲ್ ಗಝಾಲಿಯವರ ‘ರಿಸಾಲತುತ್ವೈರ್’ ಎಂಬ ರಚನೆಯೇ ಫರೀದುದ್ದೀನ್ ಅತ್ತಾರರ ಪ್ರಸಿದ್ಧ ಕೃತಿ ‘ಮಂತಿಖು ತ್ವೈರ್’ (ಪಕ್ಷಿ ಸಂಭಾಷಣೆ) ಗೆ ನೀಲನಕ್ಷೆ ಒದಗಿಸಿರುವುದು. ಪಕ್ಷಿಗಳ ಸಂಗಮದಿಂದ ಎರಡೂ ರಚನೆಗಳೂ ಶುರುವಾಗುತ್ತವೆ. ಅವರ ನಡುವೆ ಭಿನ್ನಾಭಿಪ್ರಾಯಗಳು ಇರುವಾಗಲೇ ಒಬ್ಬ ನಾಯಕನ ಅನಿವಾರ್ಯತೆಗೆ ಬಿದ್ದ ಅವರು ಒಗ್ಗಟ್ಟಾಗಿ ಅಂತಹ ಓರ್ವ ನೇತಾರನನನ್ನು ಹುಡುಕಿ ಹೊರಟುಬಿಡುತ್ತಾರೆ. ಕಾರಣ, ‘ರಿಸಾಲತುತ್ತೈರ್’ ನ ಪಕ್ಷಿಗಳ ಅಭಿಪ್ರಾಯದ ಪ್ರಕಾರ, ‘ಪರಾಕ್ರಮಿಯಾದ ಒಬ್ಬ ರಾಜನ ನೆರಳು ನಮ್ಮ ಮೇಲೆ ಇಲ್ಲದಿದ್ದರೆ ಶತ್ರುಗಳಿಂದ ನಾವು ಸುರಕ್ಷಿತರಾಗಿರಲಾರೆವು”. ಅನೇಕ ಸಮಸ್ಯೆಗಳನ್ನು ಎದುರಿಸಿದ ಆ ಪಯಣದ ಕೊನೆಯಲ್ಲಿ ಪಕ್ಷಿಗಳು ತಮ್ಮ ದೊರೆ ಸೀಮುರ್ಗ್ ನ್ನು ಭೇಟಿಯಾಗುವುದನ್ನೇ ಎರಡೂ ಕೃತಿಗಳೂ ವಿವರಿಸುತ್ತವೆಯಾದರೂ ಆಧ್ಯಾತ್ಮಿಕ ಪಯಣವೆನ್ನುವ ಹೊಳಹನ್ನು ಅತ್ತಾರರ ‘ಮಂತಿಖುತ್ತುಯೂರ್’ ಹೆಚ್ಚು ವಿಶದವಾಗಿ ಪ್ರಸ್ತುತಪಡಿಸುತ್ತದೆ.

ಸಯ್ಯಿದ್ ಹುಸೈನ್ ನಸ್ರ್ ಬರೆಯುತ್ತಾರೆ: “ಹಕ್ಕಿಗಳು ಕೊನೆಗೆ ರಾಜಸನ್ನಿಧಿಯಲ್ಲಿ ಪ್ರವೇಶಿಸಲು ಅರ್ಹತೆ ಗಿಟ್ಟಿಸುವ ಕ್ಲೇಶಗಳು ಎಂಬ ಗಝಾಲಿಯನ್ ಕಥಾವಸ್ತುವನ್ನೇ ಅವರು (ಅತ್ತಾರ್) ಉಪಯೋಗಿಸಿರುತ್ತಾರೆ. ಆದರೆ, ಅವರು ಉನ್ನತವಾದ ಹಂತಗಳ ಮೂಲಕ ಆ ಹಂತವನ್ನೂ ದಾಟಿ ಹೋಗುತ್ತಾರೆ. ಅಲ್ಲಿ ಅಹಂ ಶೂನ್ಯವಾಗಿ ಪರಮ ಅಸ್ತಿತ್ವವು ಎದ್ದೇಳುವ ಮೂಲಕ ಪ್ರತಿಯೊಂದು ಪಕ್ಷಿಗಳೂ ಸ್ವಯಂ ಗುರುತಿಸುವ ಹಂತಕ್ಕೆ ತಲುಪುತ್ತವೆ. ಇದನ್ನೇ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮಾತುಗಳಲ್ಲಿ ಹೇಳುವುದಾದರೆ, “ಸ್ವಂತವನ್ನು ಗುರುತಿಸಿದವನು ಅವನ ಪರಿಪಾಲಕನಾದ ದೇವನನ್ನೂ ಅರಿತನು”. ಸೀಮುರ್ಗ್ ನ್ನು ಹುಡುಕಿ ಹೊರಟ ಪ್ರಯಾಣದಲ್ಲಿ ಪಕ್ಷಿಗಳು ಅವಳ ಉಪಸ್ಥಿತಿಯ ಸೌಂದರ್ಯವನ್ನು ಮಾತ್ರವಲ್ಲ ಗುರುತಿಸಿರುವುದು. ಹೊರತು, ಸರ್ವ ಅಸ್ತಿತ್ವಗಳ ಸರ್ವಸ್ವವಾದ ಪರಮಸತ್ತೆಯಲ್ಲಿ ಸಂಪೂರ್ಣವಾಗಿ ಲೀನವಾಗಿ ಸ್ವಯಂ ಪ್ರತಿಬಿಂಬವನ್ನೇ ಅವರು ಕಂಡುಕೊಂಡರು.

ಜೋಸೆಫ್ ಲಂಬಾಡ್೯

ವಸಾಹತುಶಾಹಿ ಕಾಲದಲ್ಲೂ ಭಾರತದ ಅನಕ್ಷರಸ್ಥರಾದ ಮುಸ್ಲಿಮರ ವ್ಯವಹಾರ ಭಾಷೆಯು ಪರ್ಷಿಯನ್‌ ಆಗಿದ್ದ ಕಾರಣ ಪ್ರೇಮದ ಪರ್ಷಿಯನ್‌ ಪ್ರಭಾವಗಳ ವರ್ಚಸ್ಸನ್ನು ಭಾರತೀಯ ಉಪಖಂಡದಲ್ಲಿ ಆಳದಲ್ಲಿ ದರ್ಶಿಸಬಹುದು.
ಶೈಖ್ ನಿಝಾಮುದ್ದೀನ್ ಔಲಿಯಾ, ನಾಸಿರುದ್ದೀನ್ ಚಿರಾಗಿ ದೆಹಲಿ, ಬುರ್‌ಹಾನುದ್ದೀನ್ ಗರೀಬ್, ರುಕ್ನುದ್ದೀನ್ ಕಾಶಾನಿ, ಗೇಸೂದರಾಝ್ ಎಂಬವರು ಅಹ್ಮದ್ ಅಲ್ ಗಝಾಲಿಯವರೊಡನೆ ಮತ್ತು ಐನುಲ್ ಖುಳಾತ್ ರೊಡನೆ ಋಣಿಯಾಗಿದ್ದಾರೆ. ಗೇಸೂದರಾಝ್ ಅವರು ‘ಸವಾನಿಹ್’ ನ ಅಧ್ಯಾಪನೆ ನಡೆಸಿದ್ದಾಗಿ ಮತ್ತು ಅವರ ಕೃತಿ ‘ಹಾಸಾಇರುಲ್ ಖುದ್‌ಸ್’ ನಲ್ಲಿ ಸವಾನಿಹ್ ಜೊತೆಗಿನ ತುಲನಾತ್ಮಕ ಅಧ್ಯಯನ ನಡೆಸಿದ್ದಾಗಿಯೂ ದಾಖಲಾಗಿದೆ. ವಿದ್ವಾಂಸ, ಅನುಭಾವಿ ಕವಿ ಹಾಗೂ ಸಂಗೀತಜ್ಞರಾಗಿದ್ದ ಅಮೀರ್ ಖುಸ್ರೋರವರು ತಮ್ಮ ಕಾಲದ ಒಂಭತ್ತು ಸಾಹಿತ್ಯ ಶೈಲಿಗಳನ್ನು ಕ್ಯಾಟಲಾಗ್ ಮಾಡಿದಾಗ ಪ್ರಥಮ ಸ್ಥಾನ ನೀಡಿರುವುದು ಸೂಫಿ ಶೈಲಿಗಾಗಿತ್ತು. ಸೂಫಿ ಶೈಲಿಯನ್ನು ಅವರು ಎರಡು ವಿಭಿನ್ನ ರೀತಿಗಳೆಂದು ವಿಭಾಗಿಸಿದ್ದಾರೆ. ಒಂದನೆಯದು, ಬೇರೆಬೇರೆ ಸ್ಥಾನಗಳಲ್ಲಿರುವ ಸೂಫಿಗಳದ್ದು. ಎರಡನೆಯದು, ವಿಭಿನ್ನ ಅವಸ್ಥೆಯಲ್ಲಿರುವವರದ್ದು. ಉದಾಹರಣೆಯಾಗಿ ಅವರು ಮುಂದಿರಿಸುವುದು, ಅಲ್ ಗಝಾಲಿಯವರ ಮತ್ತು ಐನುಲ್ ಖುಳಾತ್ ಹಮದಾನಿ ಯವರ ರಚನೆಗಳನ್ನು. ಇವುಗಳಲ್ಲದೆ, ಮೊಘಲ್ ರಾಜನಾಗಿದ್ದ ದಾರಾಶಿಕೋ ತನ್ನ ಕೃತಿಯಾದ ‘ಹಖ್ ನುಮಾ’ ದ ಹೂರಣವು ‘ಸವಾನಿಹ್’, ಇಬ್ನ್ ಅರಬಿಯವರ ‘ಫುಸೂಸುಲ್ ಹಿಕಂ’, ‘ಫುತೂಹಾತುಲ್ ಮಕ್ಕಿಯ್ಯ’, ಇರಾಖಿಯವರ ‘ಲಮ‌ಆತ್’, ಜಾಮಿಯವರ ‘ಲವಾಮಿಅ್’, ‘ಲವಾಇಹ್’ ಎಂಬೀ ಗ್ರಂಥಗಳಿಂದ ಎಂದು ಪ್ರಸ್ತಾಪಿಸುತ್ತಾರೆ. ಅಂತಹ ರೆಫರೆನ್ಸ್ ಗಳು ಭಾರತೀಯ ಉಪಖಂಡದಲ್ಲಿ ಸವಾನಿಹ್ ನ ಉಪಸ್ಥಿತಿ ಮತ್ತು ಪ್ರಭಾವವನ್ನು ತೆರೆದು ತೋರಿಸುತ್ತದೆ. ಇನ್ನು ‘ಸವಾನಿಹ್’ ಗ್ರಂಥವು ಪರಿಗಣಿತವಾಗಿರುವಾಗಲೇ, ಭಾರತೀಯ ಸೂಫಿಸಂನ ವಿಚಾರಧಾರೆಗಳಲ್ಲಿ ಐನುಲ್ ಖುಳಾತ್ ರ ‘ತಂಹೀದಾತ್’ ಕೃತಿಯು ಹೆಚ್ಚು ಪ್ರಭಾವ ಬೀರಿದ್ದನ್ನೂ ಕಾಣಬಹುದಾಗಿದೆ.

ಮೂಲ : ಜೋಸೆಫ್ ಲಂಬಾಡ್೯
ಅನುವಾದ: ಅಬ್ದುರ್ರಹ್ಮಾನ್ ಮುಈನಿ ಕಕ್ಯಪದವು

2 Comments

  1. ಚಂದದ ಅನುವಾದ. ಸೂಫಿ ಸಾಹಿತ್ಯ ಪರಂಪರೆಯ ಮೇಲೆ ಸವಾನಿಹ್ ಮಹತ್ತರ ಪ್ರಭಾವ ಬೀರಿರುವುದನ್ನು ಬರಹ ಹೃದ್ಯವಾಗಿ ಹೇಳುತ್ತದೆ.

Leave a Reply

*