ಪುಸ್ತಕ ವಿಮರ್ಶೆ: ರೂಮಿ ಕತೆಗಳು

ಕೆಲವು ಕೃತಿಗಳು ಕಾಲ, ದೇಶ, ಭಾಷೆ, ಸಂಸ್ಕೃತಿ, ಧರ್ಮ ಇವುಗಳನ್ನು ಮೀರಿ ಜನ ಮನ್ನಣೆ  ಪಡೆದಿರುತ್ತವೆ. ಅದಕ್ಕೆ ಕಾರಣ ಆ ಕೃತಿಯ ಸಾರ್ವಕಾಲಿಕ ಪ್ರಸ್ತುತತೆ. ಅದು ಒಂದು ವಿಭಿನ್ನ ಕಾಲ ಘಟ್ಟದಲ್ಲಿ  ರಚಿತವಾದರೂ, ಕಾಲಾಂತರದಲ್ಲಿ ಅದು ಹೊಸ ಹೊಸ ರೂಪ ಪಡೆದು ನವನವೀನವಾಗುತ್ತದೆ. ಕಾಲ ಎಷ್ಟೇ ಬದಲಾದರೂ ಕೆಲವು ಜೀವನ ಮೌಲ್ಯಗಳು, ಪರಿಸ್ಥಿತಿಗಳು, ಕಾಲಾತೀತವಾಗಿ ಪ್ರಸ್ತುತವಾಗಿರುತ್ತದೆ. ಯಾಕೆಂದರೆ ಅಂತಹ ಕೃತಿ ವರ್ತಮಾನದ ಜೊತೆ  ಸಂವಹಿಸುತ್ತಾ,ಭೂತಕಾಲದ ಒಪ್ಪು ತಪ್ಪುಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಭವಿಷ್ಯತ್ತಿನ ದೀವಿಗೆಯಾಗುತ್ತದೆ. ಇದರಲ್ಲಿ ಇಡೀ ಮಾನವ ಸಮುದಾಯ ತನ್ನ ಅಸ್ತಿತ್ವದ ತಾರ್ಕಿಕ ಗುರಿಯನ್ನು ಅನ್ವೇಷಿಸಲು ಪ್ರಯತ್ನಿಸುತ್ತದೆ.

ಮಸ್ನವಿ ಮೂಲತಃ ಫಾರ್ಸಿ ಹಾಗೂ ತದನಂತರ ಉರ್ದುವಿನ ಒಂದು ನಿರ್ದಿಷ್ಟ ಛಂದಸ್ಸಿನ ಕಾವ್ಯ ಪ್ರಕಾರ. ಮೌಲಾನ ಜಲಾಲುದ್ದೀನ್ ರೂಮಿಯವರ ತಮ್ಮ ಕೃತಿಗೆ ಸಾಹಿತ್ಯ ಪ್ರಕಾರದ ಶೀರ್ಷಿಕೆಯನ್ನೆ  ನೀಡಿರುತ್ತಾರೆ.

ಮೌಲಾನಾ ರೂಮಿಯವರು ಕವಿ, ಸೂಫಿ,ತತ್ವ ಜ್ಞಾನಿ,ದಾರ್ಶನಿಕ, ಚಿಂತಕರು. ತಸವ್ವುಫ್ ಗೆ ಸಂಬಂಧಿಸಿದಂತೆ ಹಲವಾರು ಉತ್ಕೃಷ್ಟ ಕೃತಿಗಳು ರಚನೆಯಾಗಿವೆ . ಆದರೆ ‘ಮಸ್ನವಿ’ಯನ್ನು

  ‘ಹಸ್ತೆ ಕುರಾನ್ ದರ್ ಜಬಾನ್ ಪಹೆಲ್ವಿ’
ಎಂದು ಕರೆಯಲಾಗುತ್ತದೆ. ಕಾಲಾಂತರದಲ್ಲಿ ರೂಮಿಯವರ ಮಸ್ನವಿಯ ಜನಪ್ರಿಯತೆ ವೃದ್ಧಿಯಾಯಿತೆ ವಿನಾ ಕುಗ್ಗಲಿಲ್ಲ, ಮಸ್ನವಿ ಹಲವು ಸಾಹಿತ್ಯಿಕ ಹಾಗೂ ಅನುಭಾವಿಕ ಅದ್ಭುತಗಳ ಕೌತುಕಮಯ ಸಂಗ್ರಹಾಲಯ. ಈ ಕೌತುಕಗಳಿಂದ ಒಬ್ಬ ಸಾಹಿತ್ಯ ಪ್ರೇಮಿಗೆ ಓದಿನ ಆನಂದ ಪ್ರಾಪ್ತಿಯಾಗುತ್ತಿದ್ದರೆ, ಇಕ್ಬಾಲ್ ನಂತಹ ದಾರ್ಶನಿಕ ಕವಿಗೆ ಪ್ರಾಪ್ತಿಯಾದ ವೈಚಾರಿಕ ಧಾರೆಯಿಂದ “ಫಲ್ ಸಫ -ಎ -ಖುದಿ “

ಎಂಬ ತಾತ್ವಿಕ ಸಿದ್ಧಾಂತವನ್ನು ಪ್ರತಿಪಾದಿಸಲು ಪ್ರೇರಣೆಯಾಯಿತು. ಸರ್ಮದ್ ನಂತಹ ಖಲಂದರ್ ಗೆ ದೈವಿ ಸತ್ಯದ ಪ್ರಕಾಶ ಪ್ರಾಪ್ತವಾಗುತ್ತದೆ. ಈ ಜ್ಞಾನಾಮೃತದಿಂದ ಪ್ರಯೋಜನ ಪಡೆದ ಜ್ಞಾನ ಪ್ರೇಮಿಗಳು ಲೌಕಿಕ ಪ್ರಜ್ಞೆಯಿಂದ ಬಿಡುಗಡೆ ಹೊಂದಿ, ತನ್ಮಯತೆಯ ಸ್ಥಿತಿಗೆ ತಲುಪಿ, ತನ್ಮಯ ನೃತ್ಯ [ರಖ್ಸ್] ದಲ್ಲಿ ಮಗ್ನರಾಗುತ್ತಾರೆ.

ಮೌಲಾನಾರ ‘ಮಸ್ನವಿ’ಯು ಸುಮಾರು 300 ಕಥೆಗಳನ್ನು ಒಳಗೊಂಡಿದೆ. ಇಂಗ್ಲಿಷ್, ಮಲಯಾಳಂನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಆಯ್ದ ಕಥೆಗಳನ್ನು ಕನ್ನಡಕ್ಕೆ ರೂಪಾಂತರಿಸಿ, ಅನುವಾದಿಸಿ ಸ್ವಾಲಿಹ್ ತೋಡಾರ್ ಅವರು ‘ ರೂಮಿ ಕಥೆಗಳು ‘ ಎಂಬ ಕೃತಿಯನ್ನು ಬರೆದಿರುತ್ತಾರೆ. ತನ್ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮೌಲಾನ ರೂಮಿಯವರ ಮಾಂತ್ರಿಕ ಸಾಹಿತ್ಯದ ಕಿರು ಭಾಗವನ್ನು ಓದುವ ಸದವಕಾಶ ಕಲ್ಪಿಸಿದ್ದಕ್ಕೆ ಅಭಿನಂದನೆಗಳು.

‘ರೂಮಿ ಕಥೆಗಳು’ ಕೃತಿಯಲ್ಲಿರುವ ಕಥೆಗಳು ಮೂಲತಃ ಸೂಫಿ ಕಾವ್ಯ ಶೈಲಿಯಲ್ಲಿ ಜನಪ್ರಿಯವಾಗಿರುವ ‘ಹಿಕಾಯತ್’ ಎಂದರೆ ನೀತಿ ಕಥೆಗಳಾಗಿವೆ.

ಇವುಗಳನ್ನು ದೃಷ್ಟಾಂತಗಳೂ ಎನ್ನಬಹುದು. ನೈತಿಕತೆಯ ಉದ್ದೇಶ ಹೊಂದಿರುವ ಈ ಕತೆಗಳಲ್ಲಿ ಪ್ರಾಣಿ -ಪಕ್ಷಿಗಳು ಮನುಷ್ಯರಂತೆ ಮಾತನಾಡುವ ಸ್ವಭಾವವನ್ನು ಹೊಂದಿರುತ್ತವೆ. ಇಂತಹ ‘ಹಿಕಾಯತ್’ಗಳನ್ನು ಬೈಬಲ್ ನಲ್ಲೂ ಕಾಣಬಹುದಾಗಿದೆ. ಕ್ಲಿಷ್ಟ ಆಧ್ಯಾತ್ಮಿಕ ಸಂಗತಿಗಳನ್ನು ಸರಳ ಮನಮೋಹಕ ಕಥೆಯ ಮೂಲಕ ಹೇಳುವುದರಿಂದ, ಅದನ್ನು ಸಾಮಾನ್ಯರೂ ಓದಿ ಅರ್ಥೈಸಿಕೊಳ್ಳಬಹುದಾಗಿದೆ. ಹೀಗಾಗಿ ಸೂಫೀ ಸಾಹಿತ್ಯದಲ್ಲಿ ‘ಹಿಕಾಯತ್’ಗಳಿಗೆ ಅತ್ಯಂತ ಮಹತ್ವವಿದೆ,

ಈ ಹಿಕಾಯತ್ ಗಳ ಉದ್ದೇಶ ಮೂಲತಃ ಕಥೆ ಹೇಳುವುದಲ್ಲ.  ಬದಲಾಗಿ ಒಂದು ಮೌಲಿಕ ಸಂದೇಶ ಹಾಗೂ ಜ್ಞಾನವನ್ನು ಕಥನದ ಮೂಲಕ ತಿಳಿಸುವುದಾಗಿದೆ. ಮೇಲ್ನೋಟಕ್ಕೆ ಇವು ಸಾಮಾನ್ಯ ಕಥೆಗಳು ಅನಿಸಿದರೂ, ಈ ಎಲ್ಲಾ ಕಥನಗಳಲ್ಲಿ ಒಂದೊಂದು ಪಾರಮಾರ್ಥಿಕ ಗೂಢ ಅಡಗಿದೆ.

ಈ ಕಥೆಗಳ ಬಗ್ಗೆ ಸ್ವಯಂ ರೂಮಿಯವರೆ ಹೀಗೆ ಹೇಳುತ್ತಾರೆ.

“ಆಯ್ ಬ್ರಾದರ್ ಖಿಸ್ಸಾ ಚೂಂ ಪೈಮಾನಾ ಅಸ್ತ್ರ ,
ಮಾಯಿನಿ ಅಂದರೂಯೇ ಬಸಾನೆ ದಾನಾ ಅಸ್ತ್”.
( ಹೇ ಸಹೋದರನೆ ! ಈ ಕಥೆಗಳು ಮಾಪನಕ್ಕಿಂತ ,
ಇದರ ಅರ್ಥದ ಬೀಜದಲಿ ಗೂಢ ಅಡಗಿದೆ )

ಮಸ್ನವಿಯು ಮೂಲತಃ ಮೌಲಾನಾರವರು ತಮ್ಮ ಮುರ್ಷಿದ್ ಶಮ್ಸ್ ತಬ್ರೇಜಿಯವರಿಂದ ಪಡೆದ ಜ್ಞಾನದ ತಿರುಳಾಗಿದೆ.

ಈ ಮಸ್ನವಿಯ ರಚನೆಯ ಹಿನ್ನೆಲೆ ಏನೆಂದರೆ ಮೌಲಾನಾರವರ ಆಪ್ತ ಸ್ನೇಹಿತ ಹಾಗೂ ಶಿಷ್ಯ ಹಿಸಾಮುದ್ದೀನ್ ಚಲಪಿಯವರು ಒಮ್ಮೆ ಮೌಲಾನಾರವರ ಜೊತೆ ಮಾತನಾಡುತ್ತ ‘ಮುರ್ಷಿದರೇ, ತಮ್ಮ ಸೂಫಿಯಾನಾ ಹಾಗೂ ಆಧ್ಯಾತ್ಮಿಕ ಗಜಲ್ ಗಳು ಈಗಾಗಲೇ ಸಾಕಷ್ಟು ಸಮೃದ್ಧವಾಗಿವೆ , ತಾವು ಫರೀದುದ್ದೀನ್ ಅತ್ತಾರರ ‘ಪಂದ್ ನಾಮಾ’ ಮತ್ತು  ‘ಮಂತಿಖುತ್ ತೈರ್ ‘ ಅಥವಾ ಹಕೀಮ್ ಸನಾಯಿಯವರ ‘ಇಲಾಹಿ ನಾಮಾ’ ಮಾದರಿಯಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವ ಮಹಾಕಾವ್ಯ ಏಕೆ ಬರೆಯಬಾರದು ಎಂದು ಕೋರಿಕೊಂಡಾಗ ‘ ನಾನೂ ಅದನ್ನೇ ಯೋಚಿಸುತ್ತಿದ್ದೆ’ ಎಂದು ಹೇಳಿ ತಮ್ಮ ಮುಂಡಾಸಿನಿಂದ ಕಾಗದವನ್ನು ತೆಗೆದು, ಪ್ರಥಮ ಶೇರ್ ರಚಿಸಿ, ಹಿಸಾಮುದ್ದೀನ್ ಚಲಸಿ ಅವರಿಗೆ ನೀಡಿದರು. ಅದು ಹಿಸಾಮುದ್ದೀನ್ ಅವರಿಗೆ ಅತೀವ ಹಿಡಿಸಿತು. ತದನಂತರ ಮೌಲಾನಾ ಅವರು ಹಗಲು ರಾತ್ರಿ ಎನ್ನದೇ ನಿರಂತರ ವಾಗಿ ಕಾವ್ಯ ರಚನೆಯಲ್ಲಿ ತೊಡಗಿದರು. ಮೌಲಾನಾ ಒಂದೇ ಸಮನೆ ಹೇಳುತ್ತಿದ್ದರು.

ಹಿಸಾಮುದ್ದೀನ್ ಅವರು ಬರೆದುಕೊಳ್ಳುತ್ತಿದ್ದರು. ಈ ರೀತಿ ಮಸ್ನವಿಯ ಆರು ಸಂಪುಟಗಳ ರಚನೆಯಾಯಿತು. ಈ ಮಹಾಕಾವ್ಯ ಮಸ್ನವಿಯ ಗದ್ಯ ರೂಪದ ಆಯ್ದ ಪ್ರಸಂಗಗಳೆ ಈ ಕೃತಿಯ ಕಥೆಗಳು.

ಸ್ವಾಲಿಹ್ ತೋಡಾರ್ ಅವರ ಸಂಗ್ರಹಿತ ‘ರೂಮಿ ಕಥೆಗಳು’  ಕೃತಿ 106 ಕಥೆ ಗಳನ್ನು ಹೊಂದಿದೆ. ಪ್ರತಿ ಕಥೆಯು ನೈತಿಕ ಬೋಧನೆಯನ್ನು ಒಳಗೊಂಡಿದೆ.ಈ ಕಥೆಗಳು  ದೇವರ ಪ್ರೇಮ, ದೈವ ಭಯ,ಸತ್ಯದ ಅನ್ವೇಷಣೆ, ಹಿರಿತನಕ್ಕೆ ಗೌರವ, ಬುದ್ಧಿ ಮತ್ತು ವಿವೇಕದ ಮಹತ್ವ,ಅಜ್ಞಾನ ಹಾಗೂ ತಿಳಿಗೇಡಿತನದಿಂದ ಆಗುವ ಅನಾಹುತಗಳು ,ಒಳಿತು ಮತ್ತು ಕೆಡುಕಿನ ಪರಿಣಾಮಗಳು ,ಸನ್ನಡತೆಯ ಮಹತ್ವ,ಸಮಯದ ಮಹತ್ವ, ದುಷ್ಟ ಸಹವಾಸದ ದುಷ್ಪರಿಣಾಮಗಳು ,ಲೋಭದ ಪರಿಣಾಮಗಳು ಮುಂತಾದ ಆಶಯವನ್ನು ಹೊಂದಿವೆ.

ನಾವಿಕನಾದ ನೊಣ , ಹಜರತ್ ಮೂಸಾ ಮತ್ತು ಕುರಿಗಾಹಿ, ಸೊಳ್ಳೆ ಮತ್ತು ಗಾಳಿ ದೇವರ ಪ್ರೇಮದ ಮಹತ್ವವನ್ನು ಸಾರಿದರೆ, ವಿದೂಷಕ ಮತ್ತು ಚದುರಂಗದಾಟ,ಮಜ್ನೂನ್ ಸತ್ಯದ ಅನ್ವೇಷಣೆಯನ್ನು ಸಾರುತ್ತವೆ. ನಾಲ್ಕು ಊರಿನ ನಾಲ್ವರು ಮತ್ತು ದ್ರಾಕ್ಷಿ,, ನಾಲ್ಕು ಮೂರ್ಖ ಭಕ್ತರು ಬುದ್ಧಿ ಮತ್ತು ಚಾತುರ್ಯದ ಕುರಿತಾಗಿವೆ. ಗಂಭೀರ, ನೀತಿ ಪ್ರಬಂಧಕ ಕಥೆಗಳ ಜೊತೆ ಚಮ್ಮಾರ, ಕತ್ತೆಯನ್ನು ಕಳೆದುಕೊಂಡ ಸೂಫಿ ಮುಂತಾದ ಹೊಟ್ಟೆ ಹುಣ್ಣಾಗಿಸುವ ಹಾಸ್ಯ – ಮೋಜಿನ ಕಥೆಗಳಾಗಿವೆ. ಹೀಗಾಗಿ ಮಕ್ಕಳಿಂದ ವೃದ್ಧರವರೆಗೂ ಆಸಕ್ತಿಯ ಹೊತ್ತಿಗೆ ಯಾಗಿರುವುದು ಈ ಕೃತಿಯ ವಿಶೇಷತೆಯಾಗಿದೆ . ಸರಳ ಸುಂದರ ಅನುವಾದ ಹಾಗೂ ಚಿತ್ತಾಕರ್ಷಕ ಬರವಣಿಗೆಗೆ ಸ್ವಾಲಿಹ್ ತೋಡಾರ್ ಅಭಿನಂದನಾರ್ಹರು.

ಲೇ: ಬೋಡೆ ರಿಯಾಜ್ ಅಹ್ಮದ್
ಕೃಪೆ: ಬಹುವಚನ


Leave a Reply

*