ಧರ್ಮ ಮತ್ತು ಪರಿಸರ ಸಂರಕ್ಷಣೆ: ಹುಸೈನ್ ನಸ್ರ್ ರವರ ಒಳನೋಟಗಳು

Bulletin of Atomic Scientist ಸಂಸ್ಥೆಯ ಪ್ರತಿನಿಧಿ ಎಲಿಜಬೆತ್ ಈವ್ಸ್ ಪ್ರಸಿದ್ಧ ಚಿಂತಕ ಮತ್ತು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ಅಧ್ಯಯನ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಸೈಯದ್ ಹುಸೈನ್ ನಸ್ರ್ ಅವರೊಂದಿಗೆ ಪರಿಸರದ ಬಗೆಗಿನ ಇಸ್ಲಾಮಿನ ದೃಷ್ಟಿಕೋನ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು…

ಹುಸೈನ್ ನಸ್ರ್ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ನಂತರ ತತ್ವಶಾಸ್ತ್ರದ ಕಡೆಗೆ ಹೊರಳಿದರು. 1960 ರಲ್ಲಿ ಪರಿಸರ ಸಮಸ್ಯೆಗಳ ಕುರಿತು ಬರೆಯಲು ಪ್ರಾರಂಭಿಸಿದರು. ಇಸ್ಲಾಮಿನ ಪವಿತ್ರ ಗ್ರಂಥ ಕುರ್ಆನ್, ಹದೀಸ್, ಪ್ರವಾದಿ ಮಹಮ್ಮದರ ವಚನಗಳ ಆಧಾರದ ಮೇಲೆ ಪ್ರಕೃತಿಯ ಸಂರಕ್ಷಣೆಯ ಅವಶ್ಯಕತೆಗಳ ಕುರಿತು ಅವರು ವಾದಿಸುತ್ತಾರೆ. ‘ಅಲ್ಲಾಹನು ಮನುಷ್ಯರನ್ನು ತನ್ನ ಪ್ರತಿನಿಧಿಗಳನ್ನಾಗಿ ನಿಯೋಗಿಸಿರುವನು. ಅಲ್ಲಾಹನು ಸರ್ವಸೃಷ್ಟಿಗಳ ರಕ್ಷಕನಾಗಿರುವನು’ ಇದು ಪರಿಸರದ ಬಗ್ಗೆ ಕುರ್ಆನಿನಲ್ಲಿರುವ ಹಲವು ಸೂಕ್ತಗಳಲ್ಲೊಂದು. ಮುಸ್ಲಿಂ ರಾಷ್ಟ್ರಗಳಲ್ಲಿ ಧಾರ್ಮಿಕ ಹಾಗೂ ರಾಜಕೀಯ ನಾಯಕರ ಬದಲು ಪರಿಸರ ಸಮಸ್ಯೆಗಳ ಕುರಿತು ಮಾತಾಡುತ್ತಿರುವುದು ಸಾಮಾನ್ಯ ಪ್ರಜೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಮಾತ್ರ ಎಂದು ನಸ್ರ್ ವಿಷಾದಿಸುತ್ತಾರೆ. ಸೌದಿ ಅರೇಬಿಯಾ ಯಾ ಕ್ಯಾಲಿಫೋರ್ನಿಯಾ ಎಲ್ಲೇ ಆದರೂ ಅಲ್ಲಿನ ಬರಡು ಹವೆಯೇ ಅಲ್ಲಿನ ಜನರ ಜಲ ಬಳಕೆಯ ಮನೋಭಾವವನ್ನು ನಿರ್ಧರಿಸುತ್ತದೆ ಎಂದು ಅವರು ಅಭಿಪ್ರಾಯಿಸುತ್ತಾರೆ. ಅವರ ಇತ್ತೀಚಿನ ವ್ಯಾಟಿಕನ್ ಪ್ರಯಾಣದ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಸರಿಸುಮಾರು 50 ವರ್ಷಗಳ ಹಿಂದೆ ಮುಸ್ಲಿಂ ತತ್ವಜ್ಞಾನಿ ಸೈಯ್ಯದ್ ಹುಸೈನ್ ನಸ್ರ್ The Encounter Of Man And Nature, The Spiritual Crisis Of Modern Man ಬರಹಗಳನ್ನು ಪ್ರಕಟಿಸಿದರು. ರೇಚಲ್ ಕಾರ್ಸನ್ ಹಾಗೂ ಇತಿಹಾಸಕಾರ ಲಿನ್ ವೈಟ್ ರಂತೆ ನಸ್ರ್ ಕೂಡ ಪ್ರಪಂಚದ ಮೇಲೆ ದುಷ್ಟ ಪರಿಣಾಮ ಬೀರಲಿರುವ ಪರಿಸರ ಬಿಕ್ಕಟ್ಟನ್ನು ಗುರುತಿಸಿದ್ದರು. ಅದರ ನಂತರ ಹತ್ತು ವರ್ಷಗಳ ಕಾಲ ಧರ್ಮ ವಿಜ್ಞಾನ, ಪರಿಸರ ಎಂಬೀ ವಿಷಯಗಳ ಬಗ್ಗೆ ಅಂದಾಜು 50 ರಷ್ಟು ಕೃತಿಗಳನ್ನು ಬರೆದಿದ್ದಾರೆ.

ತತ್ವಜ್ಞಾನದತ್ತ ಗಮನಹರಿಸುವ ಮೊದಲು ನಸ್ರ್ Massachusetts Institute Of Technology ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದಾರೆ. ಆ ಮೂಲಕ ಅಲ್ಲಿ ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆದ ಇರಾನಿನ ಪ್ರಥಮ ವಿದ್ಯಾರ್ಥಿಯೆಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಭೂವಿಜ್ಞಾನ ಮತ್ತು ಭೌತವಿಜ್ಞಾನದಲ್ಲಿ ಅವರು ಅಲ್ಲಿಂದಲೇ ಸ್ನಾತಕೋತ್ತರ ಪದವಿ ಪಡೆದರು ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಇತಿಹಾಸದಲ್ಲಿ ಡಾಕ್ಟರೇಟ್ ಪದವಿ ಪಡೆದು ತಮ್ಮ ತವರೂರು ಇರಾನಿಗೆ ಮರಳಿದರು. ಅಲ್ಲಿ ಅವರು ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಆರಂಭಿಸಿದರು. 1979 ರಲ್ಲಿ ನಡೆದ ಇಸ್ಲಾಂ ಕ್ರಾಂತಿಯ ಸಮಯದಲ್ಲಿ ನಸ್ರ್ ಇರಾಕಿನಿಂದ ಅಮೇರಿಕಾಗೆ ಹೋಗಬೇಕಾಗಿ ಬಂತು. ಪ್ರಸಕ್ತ ಮುಸ್ಲಿಂ – ಕ್ರಿಶ್ಚಿಯನ್ ಮಾತುಕತೆಗಳಿಗೆ ಆಧಾರವಾಗಿ ನಿಂತಿರುವ 2007 ರ ‘ನಾವು ಮತ್ತು ನೀವು ಹಂಚಿಕೊಳ್ಳುತ್ತಿರುವ ಸಮಾನ ವಚನಗಳು’ ಎಂಬ ಹೆಸರಿನಲ್ಲಿ ಕ್ರಿಶ್ಚಿಯನ್ ನಾಯಕರನ್ನು ಉದ್ದೇಶಿಸಿ ಬರೆದ ಪತ್ರಕ್ಕೆ ಸಹಿ ಮಾಡಿದ 138 ಮುಸ್ಲಿಂ ಚಿಂತಕರಲ್ಲಿ ಒಬ್ಬರಾಗಿದ್ದಾರೆ ನಸ್ರ್.

ಪ್ರಕೃತಿಯೊಂದಿಗೆ ಕಾಳಜಿಯಿಂದ ವರ್ತಿಸುವುದು ಮತ್ತು ಪ್ರಕೃತಿಯ ಬಗೆಗಿನ ಪವಿತ್ರ ಆತಂಕಗಳನ್ನು ಜೀವಂತವಾಗಿಡುವುದು ಜಾಗತಿಕ ಪರಿಸರ ನಾಶವನ್ನು ತಡೆಯುವುದಕ್ಕಿರುವ ಪರಿಹಾರವೆಂದು ನಸ್ರ್ ಬಲವಾಗಿ ನಂಬಿದ್ದಾರೆ. 2014 ರಲ್ಲಿ ನೀಡಿದ ಉಪನ್ಯಾಸದಲ್ಲಿ ನಸ್ರ್ ಅವರ ಮಾತಿನ ಸಾರ ಹೀಗಿತ್ತು : ‘ಇಸ್ಲಾಂ ಧರ್ಮ ಕೇವಲ ಮನುಷ್ಯರಿಗೆ ಮಾತ್ರವಲ್ಲ, ಇದು ಸಾರ್ವತ್ರಿಕ ವಾಸ್ತವ. ಎಲ್ಲಾ ಸೃಷ್ಟಿಗಳು ಇಸ್ಲಾಮಿನಲ್ಲಿ ಭಾಗವಹಿಸುತ್ತದೆ’.

ಈ ಸಂದರ್ಶನದಲ್ಲಿ ಪರಿಸರದ ಬಗ್ಗೆ ಕುರ್ಆನ್ ಏನು ಹೇಳುತ್ತದೆ ಮತ್ತು ಮುಸ್ಲಿಂ ದೇಶಗಳು ಹವಾಮಾನ ವೈಪರೀತ್ಯವನ್ನು ಯಾವ ಮನೋಭಾವದಿಂದ ಕಾಣುತ್ತಿದ್ದಾರೆ ಎಂಬ ವಿವರಗಳನ್ನು ನಸ್ರ್ ತೆರೆದಿಡುತ್ತಾರೆ.

ಎಲಿಜಬೆತ್ ಈವ್ಸ್ : ಪರಿಸರ ಮೇಲ್ವಿಚಾರಣೆಯ ಕುರಿತು ಇಸ್ಲಾಮಿನ ಪವಿತ್ರ ಗ್ರಂಥ ಕುರ್ಆನ್ ಏನು ಹೇಳುತ್ತದೆ ?

ನಸ್ರ್ : ಪ್ರಕೃತಿಯ ಕುರಿತಾಗಿರುವ ಅನೇಕ ಸೂಕ್ತಗಳು ಕುರ್ಆನಿನಲ್ಲಿವೆ. ಸೂರ್ಯ ಹಾಗೂ ಚಂದ್ರ ಸೃಷ್ಟಿಕರ್ತನ ಮುಂದೆ ಸಾಷ್ಟಾಂಗವೆರಗುತ್ತವೆ ಎನ್ನುತ್ತದೆ ಕುರ್ಆನ್. ಅಂದರೆ, ಪ್ರಪಂಚದಾದ್ಯಂತ ಧಾರ್ಮಿಕ ಪ್ರಜ್ಞೆ ಇದೆ ಎಂದರ್ಥ. ಕೆಲವು ಸಂದರ್ಭಗಳಲ್ಲಿ ಸೃಷ್ಟಿಕರ್ತನು ಆಲಿವ್, ಖರ್ಜೂರ ಹಣ್ಣುಗಳ ಮೇಲೆ ಆಣೆ ಮಾಡುತ್ತಾನೆ. ಪರ್ವತ, ನದಿ, ನಕ್ಷತ್ರಗಳೊಂದಿಗೂ ಸೃಷ್ಟಿಕರ್ತನು ಮಾತನಾಡುತ್ತಾನೆ.

ಜಗತ್ತಿನ ಸಮಕಾಲೀನ ಮುಸ್ಲಿಂ ಚಿಂತಕರು ಪರಿಸರಕ್ಕೆ ಸಂಬಂಧಿಸಿ ಉಲ್ಲೇಖಿಸುವ ‘ಸೃಷ್ಟಿಕರ್ತನು ಮನುಷ್ಯರನ್ನು ಭೂಮಿಯಲ್ಲಿ ತನ್ನ ಖಲೀಫನನ್ನಾಗಿ ನೇಮಿಸಿದ್ದಾನೆ’ ಎಂಬ ಕುರ್ಆನಿನ ಒಂದು ಸೂಕ್ತವನ್ನು ಗಹನವಾಗಿ ಪರಿಶೀಲಿಸೋಣ. ಖಲೀಫ ಎಂಬ ಪದದ ಅತ್ಯಂತ ಬಾಹ್ಯ ರಾಜಕೀಯ ಅರ್ಥ ‘ಇಸ್ಲಾಮಿಕ್ ದೇಶಗಳ ಆಡಳಿತಗಾರ ಎಂದಾಗಿದೆ. ಇದು ವಿವಿಧ ಅರ್ಥಗಳಲ್ಲೊಂದು. ‘ಇನ್ನೊಬ್ಬರ ಚಟುವಟಿಕೆಗಳನ್ನು ಕೈಗೊಳ್ಳುವವನು’ ಎಂದೂ ಈ ಪದಕ್ಕೆ ಮುಖ್ಯ ಅರ್ಥವಿದೆ. ಸೃಷ್ಟಿಕರ್ತನು ತನ್ನ ಸೃಷ್ಟಿಗಳ ರಕ್ಷಕನಾಗಿರುವನು. ಆದ್ದರಿಂದ ಮನುಷ್ಯನು ಸೃಷ್ಟಿಕರ್ತನ ಖಲೀಫ ಎಂಬ ನಿಟ್ಟಿನಲ್ಲಿ ಭೂಮಿಯ ಮೇಲೆ ಕೆಲಸ ನಿರ್ವಹಿಸಬೇಕಾಗಿದೆ. ಅದು ಮನುಷ್ಯನ ಜವಾಬ್ದಾರಿಯುತ ಕೆಲಸವಾದ್ದರಿಂದ ಅವನು ಸೃಷ್ಟಿಗಳ ರಕ್ಷಕನಾಗುತ್ತಾನೆ. ಪ್ರಾಣಿಗಳನ್ನು ಸಾಕುವ ವಿಧಾನ, ಮರಗಳನ್ನು ಕಡಿಯುವುದರ ಬಗ್ಗೆ, ನೀರನ್ನು ಉಪಯೋಗಿಸುವ ವಿಷಯಗಳನ್ನು ಚರ್ಚಿಸುವ ಹಲವಾರು ಪ್ರವಾದಿ ವಚನಗಳಿವೆ. ಹಣ್ಣು ನೀಡುವ ಮರಗಳನ್ನು ಕಡಿಯುವುದು ಇಸ್ಲಾಮಿನಲ್ಲಿ ನಿಷಿದ್ಧ. ವಿಶೇಷವಾಗಿ ಪರಿಸರಕ್ಕೆ ಸಂಬಂಧಿಸಿದ ಬಹಳಷ್ಟು ಪ್ರವಾದಿ ವಚನಗಳಿವೆ.

ಎಲಿಜಬೆತ್ ಈವ್ಸ್ : ಇತರ ಧರ್ಮಗಳಿಗೆ ಹೋಲಿಸಿದರೆ ಪರಿಸರದ ಬಗೆಗಿನ ಇಸ್ಲಾಮಿನ ದೃಷ್ಟಿಕೋನ ವಿಶಿಷ್ಟವಾಗಿದೆಯೇ? ಅಥವಾ ಇತರ ಏಕದೇವ ನಂಬಿಕೆಗಳೊಂದಿಗೆ ಸಾಮ್ಯತೆಯಿದೆಯೇ?

ನಸ್ರ್ : ಏಕದೇವ ವಿಶ್ವಾಸಿಗಳ ಇತರ ಗ್ರಂಥಗಳಿಗಿಂತ ಹೆಚ್ಚಾಗಿ ಪವಿತ್ರ ಕುರ್ಆನ್ ನೈಸರ್ಗಿಕ ಜಗತ್ತಿನ ಕುರಿತು ವಿವರಿಸಿದೆ. ಖಂಡಿತವಾಗಿಯೂ ಧರ್ಮಶಾಸ್ತ್ರೀಯವಾಗಿ ಈ ವಿಷಯದಲ್ಲಿ ಇಸ್ಲಾಂ ಹಾಗೂ ಇತರ ಧರ್ಮಗಳ ನಡುವೆ ಹಲವು ಸಾಮ್ಯತೆಗಳಿವೆ. ಎಲ್ಲಾ ಸೃಷ್ಟಿಗಳಿಗೆ ವಹ್ಯ್‌ ಅಥವಾ ದಿವ್ಯಬೋಧನೆಯನ್ನು ತಲುಪಿಸುವ ಕಾರ್ಯಗಳಲ್ಲಿ ಅಬ್ರಹಾಂ ಸಂಪ್ರದಾಯಗಳ ಪೈಕಿ ಇಸ್ಲಾಮಿಗೆ ವಿಶೇಷ ಸ್ಥಾನವಿದೆ. ‘ಬರಕತ್’ ಎಂಬ ಪರಿಕಲ್ಪನೆಯು ಪ್ರಧಾನವಾದದ್ದೂ ಅಲ್ಲಾಹನು ಅವನ ಸೃಷ್ಟಿಗಳಿಗೆ ನೀಡುವ ಅನುಗ್ರಹವೂ ಆಗಿದೆ. ಪ್ರಪಂಚದಾದ್ಯಂತ ಬರಕತ್ ಇದೆಯೆಂದು ಇಸ್ಲಾಮ್ ಶ್ರುತಪಡಿಸುತ್ತದೆ. ಕ್ರಿಶ್ಚಿಯನ್, ಹಿಂದೂ, ಯಹೂದಿ, ತಾವೋ ತತ್ವಗಳ ನೈಸರ್ಗಿಕ ಸಮೀಕರಣಗಳಲ್ಲಿ ಕಂಡು ಬರುವ ಸಮಾನತೆ ಇಸ್ಲಾಂ ಧರ್ಮದಲ್ಲೂ ಇದೆ.

ಎಲಿಜಬೆತ್ ಈವ್ಸ್ : ಪರಿಸರವಾದ ಸಮಕಾಲೀನ ಮುಸ್ಲಿಮರಿಗೆ ಒಂದು ಸಮಸ್ಯೆಯಾಗಿ ಪರಿಣಮಿಸಿದೆಯೆಂದು ಸಾಮಾನ್ಯೀಕರಿಸಲು ಹೇಗೆ ಸಾಧ್ಯ?

ನಸ್ರ್ : ಪಾಶ್ಚಾತ್ಯೇತರ ದೇಶಗಳು ದೀರ್ಘಕಾಲದವರೆಗೆ ಪರಿಸರವಾದವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕಾರಣ ಪಾಶ್ಚಾತ್ಯರು ತಮ್ಮನ್ನು ವಸಾಹತೀಕರಣಕ್ಕೆ ಗುರಿಯಾಗಿಸಿ ತಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಿ ಬಹಳ ಶ್ರೀಮಂತರಾಗಿದ್ದಾರೆಂದೂ, ಆದುದರಿಂದಲೇ ತಾವು ಪರಿಸರದ ಬಗ್ಗೆ ಗಮನಹರಿಸಬೇಕಾದ ಅಗತ್ಯ ಇಲ್ಲವೆಂಬುದು ಪಾಶ್ಚಾತ್ಯೇತರ ರಾಷ್ಟ್ರಗಳ ಅಂಬೋಣ. ಕೈಗಾರಿಕೀಕರಣದ ಮೂಲಕ ಶ್ರೀಮಂತರಾಗಲು ನಮಗಿರುವ ಅವಕಾಶವಾಗಿದೆ ಇದೆಂದು ಈಗ ಪಾಶ್ಚಾತ್ಯೇತರ ರಾಷ್ಟ್ರಗಳು ಹೇಳುತ್ತಿವೆ. ಪರಿಸರ ಸಂರಕ್ಷಣೆ ಎನ್ನುವುದು ಒಂದು ಪಾಶ್ಚಾತ್ಯ ಸಮಸ್ಯೆ ಎಂದು ಅವರು ವಾದಿಸುತ್ತಾರೆ. ಪರಿಸರ ನಾಶ ಮಾಡಿದ್ದು ಪಾಶ್ಚಾತ್ಯರು. ಅದನ್ನು ಸಂರಕ್ಷಿಸುವ ಕರ್ತವ್ಯ ಅವರದ್ದೇ, ಹೀಗೆ ಸಾಗುತ್ತದೆ ಅವರ ತರ್ಕ.

ಇದು ಕೆಲವು ದಶಕಗಳ ಹಿಂದಿನ ಮಾತು. ಮುಸ್ಲಿಮರಲ್ಲಿ ಮಾತ್ರವಲ್ಲ ಹಿಂದೂ, ಬೌದ್ಧ ಹಾಗೂ ಇತರ ಧರ್ಮಗಳವರಲ್ಲಿ ಕೂಡಾ ಇದೇ ರೀತಿಯ ಮನೋಭಾವವಿತ್ತು. ಕಮ್ಯುನಿಸಂನ ನೆಲೆಯಲ್ಲಿಯೂ ಪರಿಸರ ಬಿಕ್ಕಟ್ಟಿನ ಆಶಯವನ್ನು ಯಾರು ಕೂಡ ಒಪ್ಪಲಿಲ್ಲ. ಇದು ಬಂಡವಾಳ ಶಾಹಿಗಳ ಸಮಸ್ಯೆಯೆಂಬುದು ಕಮ್ಯೂನಿಸ್ಟ್ ದೇಶಗಳ ಊಹೆಯಾಗಿತ್ತು. ಸೋವಿಯಟ್ ಒಕ್ಕೂಟದ ಪತನದೊಂದಿಗೆ ಉಂಟಾದ ಭೀಕರ ಪರಿಸರ ವಿಪತ್ತುಗಳನ್ನು ನೋಡಿ ಅವರು ಸತ್ಯ ಮನಗಂಡರು. ಆ ವಿಷಯದ ಬಗ್ಗೆ ಹೆಚ್ಚಾಗಿ ಮಾತನಾಡಲು ಬಯಸುವುದಿಲ್ಲ.

ಹೆಚ್ಚಿನ ಇಸ್ಲಾಂ ದೇಶಗಳ ಸರ್ಕಾರದ ನೀತಿಗಳಲ್ಲಿ ಪರಿಸರದ ಕುರಿತಾದ ಕಾಳಜಿ ಕಾಣಲಾರಂಭಿಸಿದ್ದು ಇತ್ತೀಚಿನ ವಿದ್ಯಮಾನ. ಸರ್ಕಾರೇತರ ಸಂಸ್ಥೆಗಳು ಮತ್ತು ಖಾಸಗಿ ಗುಂಪುಗಳಾಗಿವೆ ಹಲವಾರು ರಾಷ್ಟ್ರಗಳಲ್ಲಿ ಪರಿಸರ ಸಂರಕ್ಷಣಾ ತಂಡಗಳನ್ನು ರಚಿಸುತ್ತಿರುವುದು. ಏಷ್ಯಾದಲ್ಲಿ ಪ್ರಥಮವಾಗಿ ರಾಷ್ಟ್ರೀಯೋದ್ಯಾನ ಸ್ಥಾಪನೆ ಮಾಡಿದ ದೇಶಗಳಲ್ಲಿ ಇರಾನ್ ಕೂಡ ಒಂದು. ಕ್ರಾಂತಿಗೂ ಮುನ್ನ ಇದು ಸ್ಥಾಪಿತವಾಗಿತ್ತು. ಅಲ್ಲಿ ವ್ಯಾಪಕವಾದ ಸರ್ಕಾರಿ ಭಾಗೀದಾರಿಕೆ ಇರದಿದ್ದರೂ ಅಪರೂಪದ ಸಂದರ್ಭಗಳಲ್ಲಿ ಸರ್ಕಾರ ಸಹಭಾಗಿತ್ವ ವಹಿಸುತ್ತಿತ್ತು.

ಹೆಚ್ಚಿನ ರಾಷ್ಟ್ರಗಳಲ್ಲಿ, ವಿಶೇಷವಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಸಾರ್ವಜನಿಕರಿಗೆ ಪರಿಸರ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಇಲ್ಲ. ರಸ್ತೆಯಲ್ಲಿ ತ್ಯಾಜ್ಯ ಎಸೆಯುವುದು, ಮರಗಳನ್ನು ಕಡಿಯುವುದು; ಇದುವೆ ಅವರ ಪ್ರಕಾರ ಗಂಭೀರ ಪರಿಸರ ಸಮಸ್ಯೆಗಳು. ಗುರುತರವಾದ ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಪರಿಜ್ಞಾನವಿಲ್ಲ.

ಎಲಿಜಬೆತ್ ಈವ್ಸ್ : ಹವಾಮಾನ ಬದಲಾವಣೆ ಹಾಗೂ ಇತರ ಪರಿಸರ ಸಮಸ್ಯೆಗಳ ಕುರಿತು ಜಾಗತಿಕವಾಗಿ ಮಾತನಾಡುವ ಕೆಲವು ಮುಸ್ಲಿಂ ನಾಯಕರುಗಳ ಬಗ್ಗೆ ಏನೆನ್ನುತ್ತೀರಿ?

ನಸ್ರ್ : ಈ ಕಾಲದಲ್ಲಿ ಪರಿಸರ ಸಮಸ್ಯೆಗಳ ಸಂಬಂಧಿಸಿ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆಯೆಂಬುದರಲ್ಲಿ ಸಂದೇಹವಿಲ್ಲ. ಸಿರಿಯಾದ ಗ್ರಾಂಡ್ ಮುಫ್ತಿ ಆಗಿದ್ದ ಶೈಖ್ ಅಹ್ಮದ್ ಕುಫ್ತಾರೊ, ಅವರ ದೇಶದಲ್ಲಿ ದುರಂತ ಸಂಭವಿಸುವ ಮುನ್ನವೇ ಅವರು ಇಹಲೋಕ ತ್ಯಜಿಸಿದರು, ಅವರು ಪರಿಸರ ಸಂಬಂಧಿ ವಿಷಯಗಳಲ್ಲಿ ಬಹಳ ಗಮನ ಸೆಳೆದ ವ್ಯಕ್ತಿ. ಕ್ರಿಶ್ಚಿಯನ್ ಹಾಗೂ ಯಹೂದಿಗಳೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದರು. ಆರ್ಥಡಾಕ್ಸ್ ಚರ್ಚಿನ ಪರಮೋನ್ನತ ಧರ್ಮಗುರು ಬಾರ್ತೋಲೇಮರಂತೆ (ಹಸಿರು ಕುಲಸಚಿವರೆಂದು ಪ್ರಸಿದ್ಧರಾದವರು) ಪ್ರಕೃತಿ ಹಾಗೂ ಪರಿಸರದೊಂದಿಗೆ ಅವರಿಗೆ ಬಹಳ ಆಸಕ್ತಿಯಿತ್ತು. ಇರಾನಿನ ಉಪಾಧ್ಯಕ್ಷೆ ಮಸೂಮೆ ಹೆಬ್ಟೆಕ್ಕರ್ ಪರಿಸರ ಸಂರಕ್ಷಣೆಗೆ ಶ್ರಮ ವಹಿಸುತ್ತಿದ್ದಾಳೆ. ಮಾತ್ರವಲ್ಲ ಫಝ್ಲುನ್ ಖಾಲಿದರ ( UK ಯಲ್ಲಿರುವ Islamic Foundation For Ecology And Environmental Sciences ನ ಸ್ಥಾಪಕ) ರೀತಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಪೈಕಿ ಹಲವು ವಿದ್ವಾಂಸರಿದ್ದಾರೆ. ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದ ನಾಯಕರು ಸದ್ಯ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ನಿರತರಾಗಿಲ್ಲ. ಮುಸ್ಲಿಂ ರಾಷ್ಟ್ರಗಳಲ್ಲಿ ಪರಿಸರ ಸಂಘಟನೆಗಳ ಕಾರ್ಯಕರ್ತರಾದ ವ್ಯಕ್ತಿಗಳು, ಪ್ರಾಚಾರ್ಯರು, ವಿದ್ವಾಂಸರು, ಕೆಲವು ಇಂಜಿನಿಯರ್‌ಗಳು ಮುಂತಾದವರಾಗಿದ್ದಾರೆ ಪರಿಸರ ಆಂದೋಲನಗಳನ್ನು ನಡೆಸಲು ಮುಂದೆ ಬರುತ್ತಿರುವುದು

ಎಲಿಜಬೆತ್ ಈವ್ಸ್ : ಕಥೋಲಿಕ್ ಪಂಥದವರ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಬಲ್ಲ ಹವಾಮಾನ ವೈಪರೀತ್ಯವನ್ನು ಎದುರಿಸಲು ಪೋಪ್ ಮಾರ್ಗದರ್ಶನ ನೀಡುತ್ತಾರೆ. ಮುಸ್ಲಿಂ ನಾಯಕರು ಒಂದುಗೂಡಿ ಇಂತಹ ಪರಿಣಾಮ ಬೀರುವ ನಿರೀಕ್ಷೆ ಇದೆಯೇ?

ನಸ್ರ್ : ಮುಸ್ಲಿಂ ರಾಷ್ಟ್ರಗಳಲ್ಲಿ ಕಥೋಲಿಕ್ ಚರ್ಚ್‌ನಲ್ಲಿರುವಂತೆ ಯಾವುದೇ ಕೇಂದ್ರೀಕೃತ ಶ್ರೇಣಿಗಳಿಲ್ಲ. ಇಸ್ಲಾಮಿನಲ್ಲಿ ಕೆಲವು ವ್ಯಕ್ತಿಗಳ ಬರಹಗಳ ಮೂಲಕವಾಗಿದೆ ಎಲ್ಲವೂ ಘಟಿಸಿರುವುದು ಮತ್ತು ಘಟಿಸುತ್ತಿರುವುದು. ಈ ಕಾಲದಲ್ಲಿ ಇದರ ಕುರಿತು ಬರೆಯುತ್ತಿರುವ ಯುವ ಪೀಳಿಗೆಯಿದೆ. ಆದರೆ ಅವರು ರಾಜಕೀಯವಾಗಿ ಅಥವಾ ಇತರ ರೀತಿಯಲ್ಲಿ ಸಂಘಟಿತರಲ್ಲ.

ಎಲಿಜಬೆತ್ ಈವ್ಸ್ : ಮರುಭೂಮಿಯಂತಹ ಶುಷ್ಕವಾಗಿರುವ ವಾತಾವರಣದಲ್ಲಿ ಸ್ಥಾಪಿತವಾದ ಇಸ್ಲಾಂ ಧರ್ಮ ಪರಿಸರ ಮತ್ತು ಜಲ ಸಂರಕ್ಷಣೆಯ ವಿಚಾರದಲ್ಲಿ ಮುಸ್ಲಿಮರ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ?

ನಸ್ರ್ : ನೀರಿನ ಕುರಿತು ಪವಿತ್ರ ಕುರ್‌ಆನಿನಲ್ಲಿ ಕೆಲವು ಸೂಕ್ತಗಳಿವೆ. ನೀರಿನಿಂದಾಗಿದೆ ಸರ್ವ ಜೀವಜಾಲಗಳು ಬಂದಿರುವುದು. ಎಂದೆಂದಿಗೂ ಬಹಳ ಅಮೂಲ್ಯವಾದ ವಸ್ತುವಾಗಿದೆ ನೀರು. ನೀರಿನ ಸಂರಕ್ಷಣೆ ಇಸ್ಲಾಂ ನಾಗರಿಕತೆಯ ಅಪ್ರತಿಮ ಸಾಧನೆಗಳಲ್ಲೊಂದಾಗಿದೆ. ಖನಾತ್ ಸಂಪ್ರದಾಯದಲ್ಲಿ (ಪ್ರಾಚೀನ ನೀರು ಸರಬರಾಜು ವ್ಯವಸ್ಥೆ) ಮಣ್ಣಿನಡಿಯಲ್ಲಿ ನೀರು ಹರಿದು ಹೋಗುತ್ತಿತ್ತು. ಆದ್ದರಿಂದ ಕಣಿವೆಯಲ್ಲಿರುವ ಪಟ್ಟಣ ತಲುಪುವವರೆಗೂ ನೀರು ಆವಿಯಾಗುತ್ತಿರಲಿಲ್ಲ. ಇಸ್ಲಾಮಿಕ್ ನಾಗರಿಕತೆ ಈ ವಿಷಯದಲ್ಲಿ ಕೆಲವು ವಿಸ್ಮಯಕರ ತಂತ್ರಜ್ಞಾನಗಳ ಆವಿಷ್ಕಾರ ಮಾಡಿದೆ. ಕೊರತೆ ಇದ್ದುದರಿಂದ ಅವರಿಗೆ ನೀರು ಒಂದು ಪ್ರಮುಖ ಸರಕಾಗಿ ಮಾರ್ಪಟ್ಟಿತ್ತು.

ಪ್ರಪಂಚದಾದ್ಯಂತ ಮನೆಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಶೌಚಾಲಯಗಳಿದ್ದರೆ ವಿಶ್ವದ ನೀರಿನ ವ್ಯವಸ್ಥೆ ಕುಸಿಯುತ್ತದೆಯೆಂದು ದಿವಂಗತ ತತ್ವಜ್ಞಾನಿ ಇವಾನ್ ಇಲ್ಲಿಚ್ ಹೇಳಿದ್ದಾರೆ. ಆ ವ್ಯವಸ್ಥೆಯಲ್ಲಿ ನೀರು ಬಳಸುವಾಗ ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೀರಿ ಎಂಬ ಗೊಡವೆಯೇ ಇರುವುದಿಲ್ಲ. ಈ ರೀತಿಯ ಮನೋಭಾವ ಹಾಗೂ ಬಳಕೆಯ ಪದ್ಧತಿ ಸಾಂಪ್ರದಾಯಿಕ ಇಸ್ಲಾಂ ಸಂಸ್ಕೃತಿಯ ಮನಸ್ಥಿತಿಗೆ ಒಗ್ಗುವಂತದ್ದಲ್ಲ.
ದೀರ್ಘಕಾಲ ಬರಗಾಲವುಂಟಾದರೆ ನೀರು ಹಾಗೂ ಹುಲ್ಲಿನ ಬಗೆಗಿನ ಜನರ ಮನೋಭಾವವೇ ಬದಲಾವಣೆಯಾಗುತ್ತದೆ. ಮಾತ್ರವಲ್ಲ ನಮ್ಮಿಂದ ನೀರು ಪೋಲಾಗುವುದು ಕೂಡಾ ಕಡಿಮೆಯಾಗುತ್ತದೆ.

ಎಲಿಜಬೆತ್ ಈವ್ಸ್ : ಆಧುನಿಕ ಮುಸ್ಲಿಂ ರಾಷ್ಟ್ರಗಳು ಹವಾಮಾನ ವೈಪರೀತ್ಯವನ್ನು ನೋಡುವ ದೃಷ್ಟಿಕೋನದಲ್ಲಿ ಬಲವಾದ ವ್ಯತ್ಯಾಸಗಳು ಕಂಡು ಬರುತ್ತಿದೆ ಎಂದು ನಿಮಗನಿಸುತ್ತಿದೆಯೇ?

ನಸ್ರ್ : ಸ್ವಲ್ಪ ಮಟ್ಟಿಗೆ. ಉದಾಹರಣೆಗೆ ಪ್ರವಾಹ ಬರುವಾಗ ಬಾಂಗ್ಲಾದೇಶದವರು ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎಂದು ಹೇಳುತ್ತಾರೆ. ಅದೇವೇಳೆ, ಪಶ್ಚಿಮದ ದೇಶಗಳಲ್ಲಿ ವಿಜ್ಞಾನಿಗಳು ಸಮೇತ ಹಲವಾರು ಮಂದಿ ಹವಾಮಾನ ವೈಪರೀತ್ಯವನ್ನೆ ನಿರಾಕರಿಸುತ್ತಾರೆ.

ಇಸ್ಲಾಂ ರಾಷ್ಟ್ರಗಳ ಸರ್ಕಾರಗಳು ವೈಪರೀತ್ಯ ನಿರಾಕರಿಸುವವರನ್ನು ಬೆಂಬಲಿಸುವುದರೊಂದಿಗೆ ಅವರ ಸಹಾಯವನ್ನೂ ಪಡೆದುಕೊಳ್ಳುತ್ತಿದೆ. ತಮ್ಮ ತಮ್ಮ ದೇಶಗಳ ಆರ್ಥಿಕ ಯೋಜನೆಗೆ ಧಕ್ಕೆ ತರುವಂತಹ ಯಾವುದೇ ಕ್ರಮವನ್ನು ಕೈಗೊಳ್ಳದಿರಲು ಕಾರಣವೆಂಬಂತೆ ಈ ಸಂದೇಹವನ್ನು ಅವರು ಬಳಸುತ್ತಿದ್ದಾರೆ.

ಸೌದಿ ಅರೇಬಿಯಾದಂತಹ ತೈಲೋತ್ಪಾದಕ ದೇಶಗಳು ಖಂಡಿತ ಪರಿಸರ ವಿಷಯಗಳ ಕುರಿತು ಚಿಂತಿಸಲು ಕೂಡ ಬಯಸಲಾರರು. ವಿಪರ್ಯಾಸವೆಂದರೆ ಸೌದಿ ಅರೇಬಿಯಾದಲ್ಲೂ ಮಹಿಳೆಯರು ಮುನ್ನಡೆಸುವ ಆಸಕ್ತಿದಾಯಕ ಪರಿಸರ ಚಳುವಳಿ ಒಂದು ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲೇಖನಗಳನ್ನು ಬರೆಯುವ, ಕೃತಿಗಳನ್ನು ರಚಿಸುವ ಹಾಗೂ ಪರಿಸರ, ಮರ, ನೀರಿನ ಸಂರಕ್ಷಣೆ ಕುರಿತು ಪ್ರಶ್ನೆಗಳನ್ನು ಕೇಳುವ, ಮಾತನಾಡುವ ಅದರ ಬಗ್ಗೆ ಪುಸ್ತಕಗಳನ್ನು ಬರೆಯುವ ಅನೇಕ ಮಹಿಳೆಯರು ಸೌದಿ ಅರೇಬಿಯಾದಲ್ಲಿದ್ದಾರೆ. ಇದು ಹೆಚ್ಚಿನ ಪ್ರಭಾವ ಬೀರುತ್ತದೆ ಎಂದೆನ್ನಲು ಬರದಿದ್ದರೂ ಸ್ವಲ್ಪ ಮಟ್ಟಿನ ಪ್ರಭಾವ ಬೀರಿದೆ.

ಎಲಿಜಬೆತ್ ಈವ್ಸ್ : ಪರಿಸರ ಸಮಸ್ಯೆಗಳ ಕುರಿತು ಇಸ್ಲಾಮಿಕ್ ಸಮಾಜ ಹಾಗೂ ಇತರ ವಿಶ್ವಾಸಿಗಳ ನಡುವೆ ಪರಸ್ಪರ ಸಹಕಾರ ಸಾಧ್ಯವಾಗಿದೆಯೇ?

ನಸ್ರ್ : ಎಲ್ಲರನ್ನು ಬಾಧಿಸುವ ಪರಿಸರ ಸಂಬಂಧಿ ಚಟುವಟಿಕೆಗಳಲ್ಲಿ ಕ್ರಿಶ್ಚಿಯನ್ ಹಾಗೂ ಯಹೂದಿಗಳೊಂದಿಗೆ ಅನೇಕ ಮುಸ್ಲಿಮರು ಸಾಥ್‌ ನೀಡಿದ್ದಾರೆ. ಇಸ್ಲಾಮಿನ ಪ್ರತಿನಿಧಿಯಾಗಿ ಒಂದು ಗುಂಪಿನ ಮುಂದಾಳತ್ವ ವಹಿಸಿಕೊಂಡು ನಾನು ನವೆಂಬರ್ ನಲ್ಲಿ ವ್ಯಾಟಿಕನ್‌ಗೆ ಹೋಗಿದ್ದೆ. ಧಾರ್ಮಿಕ ಸಾಮರಸ್ಯದ ಬಗ್ಗೆ ಕಾರ್ಡಿನಾಲ್ (ಜಿನ್ ಲೂಯಿಸ್)ರೊಂದಿಗೆ ನಾವು ಸಭೆ ನಡೆಸಿದೆವು. ಸಾಮಾಜಿಕ ಪ್ರಾಧಾನ್ಯತೆ ಇರುವ ಪರಿಸರ ಸಂಬಂಧಿ ವಿಷಯಗಳಲ್ಲಿ ಮುಸ್ಲಿಂ ಹಾಗೂ ಕಥೋಲಿಕರ ನಡುವೆ ಪರಸ್ಪರ ಸಹಕಾರ ಸಾಧ್ಯಗೊಳಿಸುವ ವಿಚಾರ ನಾವು ಸಭೆಯಲ್ಲಿ ಚರ್ಚಿಸಿದ ವಿಷಯಗಳಲ್ಲೊಂದು. ಸೈಬೀರಿಯಾದ ನದಿಯೊಂದರ ದಿಕ್ಕನ್ನೆ ಬದಲಿಸಬೇಕು ಎನ್ನುವಂಥಾ ಬದಲಾವಣೆಗಳಲ್ಲಾ ನನ್ನ ಮಾತಿನ ತಾತ್ಪರ್ಯ. ಎರಡು ಧರ್ಮಗಳಿರುವ ದೇಶಗಳಲ್ಲಿ ಪ್ರಚಲಿತ ಅಸ್ತಿತ್ವದಲ್ಲಿರುವ ಪರಿಸರ ಸಮಸ್ಯೆಗಳ ವಿಷಯದಲ್ಲಿ ಉತ್ತಮ ತೀರ್ಮಾನ ಬರಬೇಕು ಎಂಬುದಾಗಿದೆ ನನ್ನ ಉದ್ದೇಶ.

ಎಲಿಜಬೆತ್ ಈವ್ಸ್: ‘A Common Word’ಎಂಬ ಪ್ರಮಾಣದ ಬಗ್ಗೆ ಹೆಚ್ಚಿನ ವಿವರ ನೀಡಬಹುದೇ?

ನಸ್ರ್ : ಬೆನಡಿಕ್ಟ್ ಹದಿನಾರನೆಯವ ಪೋಪ್ ಆಗಿ ನಿಯೋಜಿತರಾದಾಗ ಜರ್ಮನಿಯಲ್ಲಿ ಅವರೊಂದು ಭಾಷಣ ಮಾಡಿದರು. ಬೈಝಾಂತಿಯನ್ ಚಕ್ರವರ್ತಿ ಇಸ್ಲಾಮನ್ನು ಕೀಳು ಮಟ್ಟದಲ್ಲಿ ಟೀಕಿಸಿದನ್ನು ಉಲ್ಲೇಖಿಸಿ‌ ಅವರು ಮಾತನಾಡಿದರು. ಈ ವಿಚಾರ ಮುಸ್ಲಿಂ ರಾಷ್ಟ್ರಗಳಲ್ಲಿ ಕೋಲಾಹಲ ಸೃಷ್ಟಿಸಿತು. ನಂತರ ನಡೆದ ಗಲಭೆಗಳಲ್ಲಿ ಕೆಲವರು ಕೊಲ್ಲಲ್ಪಟ್ಟರು. ಆದರೆ ಕಥೋಲಿಕರ ಯಾ ಇತರರ ಮೇಲೆ ಆಕ್ರಮಣ ಮಾಡುವ ಬದಲು ಬಹಳಷ್ಟು ಜನರು ನನ್ನನ್ನು ಸಂಪರ್ಕಿಸಿದರು. ಕ್ರಿಶ್ಚಿಯನ್ ಹಾಗೂ ಮುಸ್ಲಿಮರು ಹಂಚಿಕೊಳ್ಳುವ ಸಮಾನ ನಿಲುವುಗಳನ್ನು ವಿವರಿಸಲೋಸುಗ 138 ಮುಸ್ಲಿಂ ನಾಯಕರು ‘A Common Word’ ಎಂಬ ಹೆಸರಿನಲ್ಲಿ ಒಂದು ದಾಖಲೆ ಪತ್ರ ರಚಿಸಲು ನಿರ್ಧರಿಸಿದರು. ಕಥೋಲಿಕ್, ಪ್ರೊಟಸ್ಟಂಟ್, ಆರ್ಥಡಾಕ್ಸ್ ಹಾಗೂ ಇತರ ಎಲ್ಲಾ ಕ್ರಿಶ್ಚಿಯನ್ ಸಮುದಾಯಗಳಿಗೆ ಈ ದಾಖಲೆ ಪತ್ರಗಳನ್ನು ಕಳುಹಿಸಲಾಯಿತು.

ಆದರೆ ಕಥೋಲಿಕರನ್ನು ಹೊರತು ಪಡಿಸಿ ಉಳಿದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೊನೆಗೆ ಕಥೋಲಿಕರ ಪ್ರತಿಕ್ರಿಯೆಯೂ ಬಂತು. ಸಂಭಾಷಣೆ ಆರಂಭಿಸಿದ್ದು ನಾವೆ. ಬಳಿಕ ಪ್ರಖ್ಯಾತ ಮುಸ್ಲಿಂ ವಿದ್ವಾಂಸರು ಹಾಗೂ ಕಾರ್ಡಿನಲ್ ಗಳು, ಮೋನ್‌ಸೈನರ್‌ ಗಳು ಮತ್ತು ಬೆನಡಿಕ್ಟ್ ಪೋಪ್ ರವರ ನಾಯಕತ್ವದಲ್ಲಿ ವ್ಯಾಟಿಕನಿನಲ್ಲಿ ಹಲವಾರು ಸಭೆಗಳು ನಡೆಯಿತು. ನಾನು ಮುಸ್ಲಿಮರ ಪರವಾಗಿ ಮಾತನಾಡಿದೆ.
ಬಳಿಕ ಪೋಪ್ ಫ್ರಾನ್ಸಿಸ್ ಪೋಪ್ ಆಗಿ ನಿಯೋಜಿತರಾದಾಗ ಈ ಪ್ರಕ್ರಿಯೆಗಳಿಗೆ ಮತ್ತೆ ಚಾಲನೆ ನೀಡಿದರು. ಕಳೆದ ನವೆಂಬರಿನಲ್ಲಿ ನಾವು ಮತ್ತೆ ರೋಮಿಗೆ ಹೋದೆವು. ಮುಸ್ಲಿಮರ ನಿಯೋಗವನ್ನು ಎರಡನೇ ಬಾರಿ ನಾನು ಮುನ್ನಡೆಸಿದೆನು. ಕಥೋಲಿಕ್ ನಿಯೋಗವನ್ನು ಕಾರ್ಡಿನಾಲ್‌ ತೌರಾನ್ ಮುನ್ನಡೆಸಿದರು. ನಾವು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದೆವು. ಪರಿಸರಕ್ಕೆ ಸಂಬಂಧಿಸಿದ ವಿಷಯವಾಗಿತ್ತು ಈ ಬಾರಿಯ ಪ್ರಮುಖ ಚರ್ಚೆಗಳಲ್ಲೊಂದು.

ಎಲಿಜಬೆತ್ ಈವ್ಸ್ : ಚಿಕ್ಕ ವಯಸ್ಸಿನಲ್ಲ್ಲಿ ವಿಜ್ಞಾನದ ಅಧ್ಯಯನ ಮಾಡಿದ ನೀವು ಬಳಿಕ ಧಾರ್ಮಿಕ ಹಾಗೂ ತತ್ವವಿಜ್ಞಾನದತ್ತ ಶ್ರದ್ಧೆ ಹೊರಳಿಸಿದ್ದೀರಿ. ಈ ರೀತಿಯ ಬದಲಾವಣೆಗೆ ಪ್ರೇರಣೆ ?

ನಸ್ರ್ : ನಾನು ಅಮೇರಿಕದ ಖಾಸಗಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವಾಗ ಗಣಿತ ಹಾಗೂ ಭೌತಶಾಸ್ತ್ರದಲ್ಲಿ ತುಂಬಾ ಮುಂದಿದ್ದೆ. ಆದ್ದರಿಂದ ನಾನು ಎಂಐಟಿಗೆ ಹೋದೆ. ಎಲ್ಲರೂ ಭೌತಶಾಸ್ತ್ರವನ್ನು ಅಧ್ಯಯನ ಮಾಡಲು ಹೇಳಿದರು. ಭೌತಶಾಸ್ತ್ರ ಅಧ್ಯಯನ ಮಾಡುವಾಗ ವಾಸ್ತವದ ಸ್ವಭಾವವನ್ನು (ಕನಿಷ್ಠ ದೈಹಿಕ ವಾಸ್ತವವನ್ನಾದರೂ) ಕಂಡುಕೊಳ್ಳಲು ಸಾಧ್ಯ ಎಂದು ಭಾವಿಸಿದ್ದೆ. ಆದರೆ ಆಧುನಿಕ ಭೌತಶಾಸ್ತ್ರ ವಸ್ತುವಿನ ಸ್ವರೂಪದೊಂದಿಗೆ ವ್ಯವಹರಿಸುವುದಿಲ್ಲ. ಮಾತ್ರವಲ್ಲ ಅದು ಗಣಿತದ ರಚನೆಯೊಂದಿಗೆ ಮಾತ್ರ ಸಂಬಂಧಿಸಿದ್ದೆಂದು ನಾನು ಶೀಘ್ರವೆ ಅರಿತುಕೊಂಡೆ. ಸತ್ಯ ತಿಳಿದ ತಕ್ಷಣ ಅದನ್ನು ಅಲ್ಲಿಗೆ ಕೊನೆಗೊಳಿಸಿ ವಿಜ್ಞಾನದಿಂದ ಹಿಂದೆ ಸರಿದೆ. ನಂತರ ಈ ಪ್ರಶ್ನೆಯ ಕುರಿತು ನಾನು ಅನ್ವೇಷಣೆ ನಡೆಸಲಾರಂಭಿಸಿದೆ. ವಿಜ್ಞಾನದ ಆಧುನಿಕ ತತ್ವಶಾಸ್ತ್ರದಲ್ಲಿ ಸತ್ಯಕ್ಕೆ ಯಾವುದೇ ಅರ್ಥವಿಲ್ಲ. ಇದು ಈಗ ಚಲಾವಣೆ ಇಲ್ಲದ ವಿಭಾಗ. ಇದು ನನ್ನಲ್ಲಿ ಆಳವಾದ ಆಧ್ಯಾತ್ಮಿಕ ಹಾಗೂ ತಾತ್ವಿಕ ಬಿಕ್ಕಟ್ಟನ್ನು ಸೃಷ್ಟಿಸಿತು. ಎಂಐಟಿ ಯಲ್ಲಿ ಅಧ್ಯಯನ ಮಾಡುವುದರ ನಡುವೆ ನಾನು ಪಾಶ್ಚಾತ್ಯ ತತ್ವಶಾಸ್ತ್ರ, ಪೌರಾತ್ಯ ತತ್ವಶಾಸ್ತ್ರ ಹಾಗೂ ಆಧ್ಯಾತ್ಮಿಕತೆಯ ಕುರಿತು ಓದುತ್ತಿದ್ದೆ. ಅಂತಿಮವಾಗಿ ನಾನು ಭೌತಶಾಸ್ತ್ರಜ್ಞನಾಗುವುದಿಲ್ಲವೆಂದು ತೀರ್ಮಾನಿಸಿದೆ. ತತ್ವಶಾಸ್ತ್ರ ಹಾಗೂ ವಿಜ್ಞಾನ, ಇತಿಹಾಸ ಅಧ್ಯಯನದೆಡೆಗೆ ಹೊರಳಿದೆ. ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನ ಯಾಕೆ ಅಭಿವೃದ್ಧಿ ಹೊಂದಿದೆಯೆಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ.

ಅನುವಾದ : ಮುಹಮ್ಮದ್ ಅಸ್ಲಂ ಅಲ್ ಮುಈನಿ

Leave a Reply

*