ಕೋಮುವಾದಕ್ಕೆ ಸಾತ್ವಿಕ ಧರ್ಮ ಅಸ್ತ್ರವಾಗಲಿ: ಅನಂತಮೂರ್ತಿ


ಡಾ. ಯು. ಆರ್ ಅನಂತಮೂರ್ತಿ ಅವರು 2003 ರಲ್ಲಿ ಮಲಯಾಳಂನ ಪಾಠಭೇದಂ ಎಂಬ ಪತ್ರಿಕೆಗೆ ನೀಡಿದ ಸಂದರ್ಶನ


ಧರ್ಮವನ್ನು ನಾವು ಕೋಮುವಾದವನ್ನು ಸೋಲಿಸಲು ಬಳಸಿಕೊಳ್ಳಬೇಕು. ಯಾಕೆಂದರೆ, ಎಲ್ಲಾ ಧರ್ಮಗಳಲ್ಲೂ ಮನುಷ್ಯನನ್ನು ಪ್ರೀತಿಸುವ ಮಂತ್ರಗಳಿವೆ‌. ದೇವರನ್ನು ಪ್ರೀತಿಸುವ‌ ಮೂಲಕ ಮನುಷ್ಯರಿಗೆ ಪ್ರೀತಿಯ ಪ್ರಾಯೋಗಿಕ ತರಬೇತಿ ಸಿಗುತ್ತದೆ. ಈ ತರಬೇತಿಯನ್ನು ತನ್ನದಲ್ಲದ ಧರ್ಮದ ಅನುಯಾಯಿಯನ್ನು‌ ಪ್ರೀತಿಸಲು ಬಳಸಿಕೊಳ್ಳಲು ಸಾಧ್ಯವಾಗಬೇಕು. ಆದರೆ, ಸೆಕ್ಯೂಲರಿಸಂ ಧರ್ಮದ ಈ ಸಾಧ್ಯತೆಯನ್ನು ಪರಿಗಣಿಸಿದಂತೆ ಕಾಣುವುದಿಲ್ಲ. ಧರ್ಮವನ್ನು ನಿರಾಕರಿಸದೆಯೇ ಸ್ನೇಹವನ್ನು ಹಂಚುವ ಸಾಧ್ಯತೆಯನ್ನು ಜಾತ್ಯತೀತತೆಯು‌ ನಿರಾಕರಿಸುತ್ತದೆ.
ವಿವಿಧ ಧರ್ಮಗಳ‌ ಆಚಾರ ವಿಚಾರಗಳ ಕೊಡುಕೊಳೆಯ ಮೂಲಕ ಆರೋಗ್ಯಕರವಾದ ಧರ್ಮ ಚಿಂತನೆ ಹಾಗೂ ವಿಶ್ವ ಚಿಂತನೆ ನಡೆದಿರುವುದನ್ನು ಎಲ್ಲಾ ಪ್ರದೇಶಗಳಲ್ಲೂ ಕಾಣಬಹುದು. ಕರ್ನಾಟಕದಲ್ಲಿ‌ ಶಿಶುನಾಳ ಷರೀಫ ಎಂಬ ಒಬ್ಬ ಸಂತ ಕವಿಯಿದ್ದಾರೆ. ಷರೀಫ್ ಗೋವಿಂಧ ಭಟ್ಟ ಎಂಬ ಹಿಂದೂ ಗುರುವಿನ ಶಿಷ್ಯರಾಗಿದ್ದರು. ಕನ್ನಡ ಸಾಹಿತ್ಯದಲ್ಲಿ ಧರ್ಮ ಸಮನ್ವಯತೆಯ ಧಾರೆ ಹರಿಯಲು ಷರೀಫರ ಕವಿತೆಗಳು ಬಹಳ ದೊಡ್ಡ ಪಾತ್ರ ವಹಿಸಿದೆ. ಹಾಗೆಯೇ, ಬಿಜಾಪುರ/ ಬೀದರ್ ಗಳಲ್ಲಿ ಹಿಂದೂ ಮುಸ್ಲಿಮರ ನಡುವಿನ ಸಾಮರಸ್ಯ ಪ್ರಜ್ಞೆ ಹತ್ತೊಂಬತ್ತನೇ ಶತಮಾನದ ಕನ್ನಡ ಕವಿತೆಗಳ ನವೋದಯಕ್ಕೆ ಸಹಾಯಕವಾಯಿತು. ಅಲ್ಲಿ ಇಸ್ಲಾಮ್ ಹಾಗೂ ಶೈವ ಚಿಂತನಾ ಧಾರೆಗಳ ಸಂಕರದಿಂದ ಖಾದರ್ ಲಿಂಗ ಎಂಬ ಹೊಸ ಧಾರ್ಮಿಕ ಪಂಥವೇ ಹುಟ್ಟಿಕೊಂಡಿತು. ಹಿಂದೂ ಮುಸ್ಲಿಮ್ ಇಬ್ಬರಿಗೂ ಈ ಎರಡು ಧರ್ಮಗಳ ಸಂಕರ ಸ್ಥಿತಿಯನ್ನು ಒಳಗೊಳ್ಳಲು ಸಾಧ್ಯವಾಗಿತ್ತೆಂಬುದು ಬಹಳ ವಿಶೇಷವಾದ ಸಂಗತಿ.

ಆದರೆ, ಇನ್ನೊಂದು ದೇವರು ಎಂಬ ಚಿಂತನೆಯನ್ನು ಇಸ್ಲಾಮ್, ಕ್ರೈಸ್ತ ಹಾಗೂ ಯಹೂದಿಯರ ಸೆಮೆಟಿಕ್ ಧರ್ಮಗಳಿಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಧರ್ಮಗಳು ಏಕದೇವಾ ಸಿದ್ಧಾಂತವನ್ನು ನಂಬಿಕೊಂಡಂತಹವುಗಳು. ವೈಷ್ಣವರ ದೇವರು ಸಾಕಾರ, ಸಗುಣನಾದರೆ, ಇಸ್ಲಾಮ್, ಕ್ರೈಸ್ತರ ದೇವರು ನಿರಾಕಾರ ಹಾಗೂ ಸಗುಣ. ಭಾರತೀಯ ತತ್ವಶಾಸ್ತ್ರದಲ್ಲಿ‌ ನಿರಾಕಾರವೂ ನಿರ್ಗುಣವೂ ಆದ ದೇವರಿಗೆ ಸ್ಥಾನವಿದೆ. ಅದ್ವೈತ ಬಹುಮಟ್ಟಿಗೆ ಇದನ್ನೇ ಹೇಳುತ್ತದೆ. ಅಬುಲ್ ಕಲಾಂ ಆಝಾದರ ದೇವರ ಮೇಲಿನ ಚಿಂತನೆಯು ಅದ್ವೈತ ಕ್ಕೆ ಸಮೀಪದಲ್ಲಿದೆ. ಭಾರತೀಯ ಮನಸ್ಥಿತಿಯ ಜೊತೆಗೆ ಅರಬ್ ಮನಸ್ಥಿತಿಯನ್ನು ಜೋಡಿಸುವ ಕೆಲಸವನ್ನು ಆಝಾದ್ ಮಾಡಲು ಪ್ರಯತ್ನಿಸಿದರು. ಈ ಎರಡು ಸಾಮಾಜಿಕ‌ ವ್ಯವಸ್ಥೆಯಲ್ಲೂ ದೈವಿಕ ಪ್ರೇಮವೆಂಬುದು‌ ಬಹಳ‌ ಮುಖ್ಯ.
ಧರ್ಮದಿಂದ ಮಾತ್ರ ಮತೀಯತೆಯನ್ನು ಎದುರಿಸಬಹುದು ಎನ್ನಲು ಕಾರಣ ಅದರ ಸ್ನೇಹದ ಶಕ್ತಿ(potential)ಯ ಬಗೆಗಿನ ಅರಿವು. ಒಬ್ಬರ ದೈವಿಕ ಪ್ರೇಮ ಪ್ರಕಟಗೊಳ್ಳುವುದು ಇತರರ ಹಕ್ಕುಗಳನ್ನು ನಿರಾಕರಿಸುವ ಮೂಲಕವೇ? ಎಂಬ ಪ್ರಶ್ನೆ ಏಳಬಹುದು. ನನ್ನ ದೇವರು ನನ್ನ ಶತ್ರುಗಳ ರಕ್ತದಿಂದ‌ಲೇ ಸಂತೃಪ್ತನಾಗುವವನೇ? ಸೀರಿಯಲ್ ಕಿಲ್ಲರ್ ರಾಮನ್‌ ರಾಘವನ್ ದೇವರ ಹೆಸರಿನಲ್ಲಿ ಸರಣಿ‌ ಕೊಲೆಗಳನ್ನು‌ ನಡೆಸಿದನು. ಇಲ್ಲಿ ದೈವ ತೃಪ್ತಿ‌ ಅನ್ನೋದು‌ ವಿಕೃತವಾದ ಪರಿವೇಷವನ್ನು ಪಡೆದುಕೊಂಡಿದೆ. ಶಾಂತಿ ಸೌಹಾರ್ಧತೆಗೆ ಅವಕಾಶ ನೀಡದ ದೇವರ ಪ್ರೀತಿಯು ಮನುಷ್ಯರ ನಡುವಿನ ಸ್ನೇಹವನ್ನು‌ ನಿರಾಕರಿಸುತ್ತದೆ. ಆದ್ದರಿಂದ ಧರ್ಮ ಯುದ್ಧಗಳು‌ ಧರ್ಮದ‌ ರಾಜಕೀಯವನ್ನು ಬಹಳ ಬೇಗನೇ ಬಯಲು ಮಾಡಿಬಿಡುತ್ತದೆ. ಮುಹಮ್ಮದ್ ಪೈಗಂಬರರು ಜಿಹಾದ್‌ ಎಂಬ ಪರಿಕಲ್ಪನೆಯನ್ನು ಅನೇಕ‌ ಸತ್ವಶಾಲಿ ನಿಯಮಗಳ ಜೊತೆಗೆ ರೂಪಿಸಿಕೊಟ್ಟಿದ್ದಾರೆ. ಅದು‌ ವಿವಿಧ ಧರ್ಮಗಳ ನಡುವಿನ ಶಾಂತಿ‌ ಸೌಹಾರ್ಧತೆಗೆ ಸಂಬಂಧಿಸಿದಂತೆ ಈಗಲೂ ಪ್ರಸ್ತುತವಾದ ರಾಜಕೀಯ ಸಿದ್ಧಾಂತ. ಆದರೆ, ನಂತರದ ಕಾಲಘಟ್ಟದಲ್ಲಿ‌ ಬಂದ ಮುಸ್ಲಿಮ್ ರಾಜರುಗಳಿಗೆ ಪೈಗಂಬರರ ಒಳನೋಟ ಇರಲಿಲ್ಲ. ಇದು ತಾತ್ವಿಕತೆ ಮತ್ತು ಪ್ರಾಯೋಗಿಕತೆಯ ನಡುವಿನ‌ ವೈರುಧ್ಯ. ಆದ್ದರಿಂದ ಮುಸ್ಲಿಮರ ಪ್ರಮಾದಗಳನ್ನು ಪವಿತ್ರ ಕುರ್ ಆನಿನ ಮೂಲಕ ವಿಮರ್ಶೆಗೆ ಒಳಪಡಿಸಬಹುದು. ಬೈಬಲ್ ಮೂಲಕ ಕ್ರೈಸ್ತರನ್ನೂ, ಭಗವದ್ಗೀತೆ ಯ ಮೂಲಕ ಹಿಂದೂಗಳನ್ನೂ ವಿಮರ್ಶಿಸಬಹುದು. ಧರ್ಮಗ್ರಂಥಗಳು ಆಧ್ಯಾತ್ಮಿಕ ಉಪಾಸನೆಯ ಮಾರ್ಗವಷ್ಟೇ. ಅರವಿಂದ, ಜಿ.ಕೃಷ್ಣ, ಪರಮಹಂಸ, ರಮಣ ಮಹರ್ಷಿ ಮೊದಲಾದ ಗುರುಗಳು ಈ ಮಾರ್ಗದಲ್ಲಿ ಸಂಚರಿಸಿ ಆಧ್ಯಾತ್ಮಿಕ ಸಾಧನೆ ಮಾಡಿದವರು.

ಧರ್ಮದ ಆಧ್ಯಾತ್ಮಿಕ ಶೋಧನೆಯು ರಾಜಕೀಯ ಶೋಧನೆಯಾದಾಗ ಅದು ಶಿಥಿಲಗೊಳ್ಳುತ್ತದೆ. ತೊಗಾಡಿಯಗಳು ಸೃಷ್ಟಿಯಾಗೋದು ಹೀಗೆ. ಬಕೀಂ ಚಂದ್ರ ಚಟರ್ಜಿ ಕೃಷ್ಣನ ದ್ವಿ ವ್ಯಕ್ತಿತ್ವದ ಕುರಿತು ಮಾತನಾಡುತ್ತಾರೆ. ಒಂದು ಪ್ರೇಮದ ಉಪಾಸನೆಯಲ್ಲಿ ನಿರತನಾಗಿರುವ ಕೃಷ್ಣ, ಇನ್ನೊಂದು ಅಪ್ಪಟ ರಾಜಕಾರಣಿ ಕೃಷ್ಣ. ಎರಡನೇ ಕೃಷ್ಣ ಯುದ್ಧವನ್ನು ಗೆಲ್ಲಲು ಸರ್ವ ತಂತ್ರಗಳನ್ನು ಮಾಡುತ್ತಾನೆ. ಅಧರ್ಮ ಅವನಿಗೆ ತಪ್ಪೆನಿಸುವುದಿಲ್ಲ. ಕ್ಷತ್ರಿಯನ ಪರಮ ಧರ್ಮ ಯುದ್ಧವೆಂಬ ಮೌಲ್ಯದ ಹಿಂದೆ ಅಡಗಿ ಆತ ಇದೆಲ್ಲವನ್ನು ಮಾಡುತ್ತಾನೆ. ಆ ಮೂಲಕ ಕೃಷ್ಣ ತನ್ನ ದೈವಿಕ ಪ್ರತೀಕವನ್ನು ಕಳೆದುಕೊಂಡು ರಾಜಕಾರಣಿ ಕೃಷ್ಣನಾಗುತ್ತಾನೆ. ಬಾಲಗಂಗಾಧರ್ ತಿಲಕ್, ಮದನ್ ಮೋಹನ್ ಮೊದಲಾದವರು ಕೃಷ್ಣನಿಂದ ಈ ರಾಜಕೀಯ ಮೌಲ್ಯವನ್ನು ಕಲಿತವರು. ತೊಗಾಡಿಯ ಈ ರಾಜಕೀಯ ಮೌಲ್ಯದ ಅತ್ಯಂತ ಶಿಥಿಲಾವಸ್ಥೆ.
ಬಹುಶಃ ಮಹಾತ್ಮ ಗಾಂಧೀಜಿಯವರು ಈ ರಾಜಕೀಯದ ಅಪಾಯವನ್ನು ಅರಿತರೆಂದು ತೋರುತ್ತದೆ. ಆದ್ದರಿಂದ ತಿಲಕರ ಪ್ರಭಾವಕ್ಕೆ ಒಳಗಾಗುವುದನ್ನು ಗಾಂಧಿ ತಪ್ಪಿಸಿಕೊಂಡರು. ಅದರ ಜೊತೆಗೆ ಏಗುವ ಶಕ್ತಿ ತನಗಿಲ್ಲ ಎಂದು ಗಾಂಧೀಜಿಯವರು ನಂಬಿಕೊಂಡಿದ್ದರು. ಅವರು ಉದ್ದೇಶಪೂರ್ವಕವಾಗಿಯೇ ತಿಲಕರ ಅಂತರ ಕಾಯ್ದುಕೊಂಡಿದ್ದರು. ಮಾತ್ರವಲ್ಲದೆ, ಕೃಷ್ಣನನ್ನು ಒಳಗೊಳ್ಳಲು ಅವರು ಅವನ ಇನ್ನಿತರ ಸಾಧ್ಯತೆಗಳನ್ನು ಹುಡುಕಿಕೊಂಡರು. ಹಿಂದೂ ಧರ್ಮದ ವಿಶೇಷತೆ ಇದು. ಅಲ್ಲಿ ಒಂದಲ್ಲದಿದ್ದರೆ ಇನ್ನೊಂದು ದಾರಿ(option) ಯಿರುತ್ತದೆ. ಗಾಂಧಿ ಇದನ್ನು ತೋರಿಸಿಕೊಟ್ಟರು.


ಜಾಗತಿಕ ಸಂದರ್ಭದಲ್ಲಿ ಮುಸ್ಲಿಮರು ಅಮೆರಿಕದ ಸಾಮ್ರಾಜ್ಯಶಾಹಿತ್ವದ ವಿರುದ್ಧ ಹೋರಾಡುತ್ತಿದ್ದಾರೆ. ಈ ಹೋರಾಟಕ್ಕೆ ಧಾರ್ಮಿಕ ಆಯಾಮವೂ ಇದೆ. ಆದ್ದರಿಂದಲೇ ಅದು ಧರ್ಮ ಯುದ್ಧಗಳಾಗಿ‌ ಬಿಂಬಿಸಲ್ಪಡುತ್ತಿದೆ. ಒಂದು ಹಂತದವರೆಗೆ ಮುಸ್ಲಿಮರ ಈ ಹೋರಾಟ ನ್ಯಾಯಯುತವಾದುದೇ. ಮುಸ್ಲಿಮ್ ಉಮ್ಮತ್ ಎಂಬ ಸಾಮುದಾಯಿಕ ಪ್ರಜ್ಞೆಯು ಅವರಲ್ಲಿ ಒಗ್ಗಟ್ಟು ಮೂಡಿಸುತ್ತಿದೆ ಎನ್ನಬಹುದು. ಆದರೆ, ಭಾರತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರು. ಆದ್ದರಿಂದ ಮುಸ್ಲಿಮ್ ಕೋಮುವಾದವನ್ನು ಹಿಂದೂ ಕೋಮುವಾದದಂತೆಯೇ ಅಪಾಯಕಾರಿ ಎಂಬ ರೀತಿಯಲ್ಲಿ ನೋಡಬೇಕಿಲ್ಲ. ಬಹುಸಂಖ್ಯಾತ ವರ್ಗಗಳು ಅವರೊಂದಿಗೆ ಸಹೃದಯತೆಯಿಂದ ವರ್ತಿಸಬೇಕು. ಮೀಸಲಾತಿ ಮೊದಲಾದ ಅವಕಾಶಗಳನ್ನು ಅವರಿಗೆ ನೀಡಿ, ಅವರನ್ನು ಮುಖ್ಯವಾಹಿನಿಗೆ ಕರೆ ತರಬೇಕು. ದೌರ್ಭಾಗ್ಯವಶಾತ್, ಹಲವು ಹಿಂದೂಗಳಿಗೆ ಈ ಯೋಚನೆಯಿಲ್ಲ. ನನ್ನ ಮಿತ್ರನೊಬ್ಬ ಹೇಳುತ್ತಿದ್ದ; ಬಾಬರೀ ಮಸೀದಿ ಧ್ವಂಸದ ಬಳಿಕ ಮುಸ್ಲಿಮರು ಶರಣಾಗತ ಮನಸ್ಥಿತಿಯಲ್ಲಿದ್ದಾರೆ. ಹಿಂದೂಗಳ ನಿರ್ದೇಶನಗಳನ್ನು ಪಾಲಿಸಿ ಜೀವನ ನಡೆಸಲು ಅವರು ಸಿದ್ಧರಿದ್ದಾರೆ. ಆದರೆ, ನೀವು ಜಾತ್ಯತೀತರು ಅವರಿಗೆ ಅತಿಯಾದ ಸಲುಗೆ ನೀಡಿ ಬೆಳೆಸುತ್ತಿದ್ದೀರಿ. ಆದರೆ, ನನ್ನ ಉತ್ತರ, ಹಿಂದುಗಳು ಮುಸ್ಲಿಮರಿಗೆ ಮುಖ್ಯವಾಹಿನಿಯಲ್ಲಿ ಹೆಚ್ಚಿನ ಸ್ಥಳಾವಕಾಶ ನೀಡಬೇಕು. ಮುಸ್ಲಿಮರು ಕೂಡ ಈ ಮನಸ್ಥಿತಿಯನ್ನು ಒಳಗೊಳ್ಳಬೇಕು. ಹಿಂದೂ ಕೋಮುವಾದಿಗಳು ತಮ್ಮ ವಿರುದ್ಧ ಧ್ವನಿಯೆತ್ತಲಾಗದ ರೀತಿಯಲ್ಲಿ ದೇಶಪ್ರೇಮವನ್ನು ಪ್ರಕಟಿಸಬೇಕು.


ದೇಶಪ್ರೇಮ ಮತ್ತು ರಾಷ್ಟ್ರೀಯತೆ ಎರಡು ಒಂದೇ ಅಲ್ಲ. ಅವೆರಡು ಬೇರೆ ಬೇರೆ. ದೌರ್ಭಾಗ್ಯವಶಾತ್, ಮುಸ್ಲಿಮರು ಕೇವಲ ದೇಶ ಪ್ರೇಮಿಗಳಾದರೆ ಸಾಲದು, ಅವರು ಹಿಂದೂ ರಾಷ್ಟ್ರೀಯತೆಯ ಭಾಗವಾಗಬೇಕು ಎಂದು ಹಿಂದುತ್ವವಾದಿಗಳು ಒತ್ತಾಯಿಸುತ್ತಿದ್ದಾರೆ. ಇನ್ನೊಂದು ಕಡೆ, ಸೆಕ್ಯೂಲಿಸ್ಟರು ಧರ್ಮದ ವಿವಿಧ ಸಾಧ್ಯತೆಗಳನ್ನು ಕಂಡುಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ರಾಜಕೀಯ ಹಿಂದುತ್ವ ಹಾಗೂ ರಾಜಕೀಯ ಇಸ್ಲಾಮ್ ಕೂಡ ಧರ್ಮದ ಈ ಸಾಧ್ಯತೆಗಳನ್ನು ನಿರಾಕರಿಸುತ್ತವೆ. ಪಾಶ್ಚಾತ್ಯ ಪರಿಕಲ್ಪನೆಯ ಜಾತ್ಯತೀತೆಯೂ ಸಹ ಇದನ್ನೇ ಮಾಡುತ್ತಿದೆ. ಧಾರ್ಮಿಕ ಸೌಹಾರ್ಧತೆ ಸ್ಥಾಪಿಸುವ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಹಿಂದೂ ಧರ್ಮದ ವಿವಿಧ ಸಾಧ್ಯತೆಗಳನ್ನು ಅನ್ವೇಷಿಸಿದರು.
ಗಾಂಧಿ ಒಂದು ನಿಯಮವಲ್ಲ; ಅಪವಾದ. ಪ್ರತಿಯೊಬ್ಬ ಹಿಂದುವು ಕೂಡ ಈ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹಿಂದೂ ಕೋಮುವಾದಿಗಳಿಗೆ ಆಧುನಿಕತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಅವರು ಆಧುನಿಕತೆಯ ಆಯುಧಗಳೊಂದಿಗೆ ಮುಸ್ಲಿಮ್ ಮೂಲಭೂತವಾದಿಗಳನ್ನು ಎದುರಿಸುತ್ತಿದ್ದಾರೆ. ಕ್ರೈಸ್ತ ಪ್ಯಾಸಿಷ್ಟರೂ ಕೂಡ ಇದನ್ನೇ ಮಾಡುತ್ತಿದ್ದಾರೆ. ಹಣ, ತಂತ್ರಜ್ಞಾನ ಎಲ್ಲವನ್ನೂ ಈ ಇಬ್ಬರೂ ಸಾದ್ಯಂತ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಬಡಪಾಯಿ ಮುಸ್ಲಿಮರ ಬಳಿ ಏನೂ ಇಲ್ಲ. ಮಧ್ಯಕಾಲದ ಮೌಲ್ಯಗಳು ಬಿಟ್ಟರೆ ಅವರ ಜೊತೆಗೆ‌‌ ಇನ್ನೇನೂ ಇಲ್ಲ. ಈ ಆಯುಧಗಳೊಂದಿಗೆ ಹೋರಾಡುತ್ತಿರುವ ಮುಸ್ಲಿಮ್ ಮೂಲಭೂತವಾದದ ದಯನೀಯ ಸ್ಥಿತಿಯನ್ನು ಇಂದು ನಾವು ಕಾಣುತ್ತಿದ್ದೇವೆ. ಈ ಮೂಲಭೂತವಾದವನ್ನು ಎದುರಿಸಲು ಹಿಂದೂ ಹೆಚ್ಚು ಆಧುನಿಕವೂ, ಪಾಶ್ಚಾತ್ಯವೂ ಆಗುತ್ತಿದ್ದಾನೆ.
ವಾಸ್ತವದಲ್ಲಿ ಜಾತ್ಯತೀತರು ಧರ್ಮದ ಶಕ್ತಿ ಮತ್ತು ಸಾಧ್ಯತೆಗಳನ್ನು ಅರಿಯುತ್ತಿಲ್ಲ. ಕರ್ನಾಟಕದಲ್ಲಿ ಕೋಮುಗಲಭೆಯಲ್ಲಿ‌ ಹಿಂದೂ‌ ಕೊಲೆಯಾದರೆ ಮುಂದಿನ ಚುನಾವಣೆಯಲ್ಲಿ‌ ಬಿಜೆಪಿಗೆ ಲಾಭವಾಗುತ್ತದೆ. ಮುಸ್ಲಿಮ್‌ ಕೊಲೆಯಾದರೆ ಕಾಂಗ್ರೆಸ್ ಗೆ ಲಾಭವಾಗುತ್ತದೆ. ಆದ್ದರಿಂದ ಹಿಂದೂಗಳ ಪಾರ್ಟಿಯಾದ ಬಿಜೆಪಿಗೆ ಬೇಕಿರುವುದು‌ ಹಿಂದೂಗಳ ಕೊಲೆ. ಜಾತ್ಯತೀತ ಪಕ್ಷಗಳಿಗೆ ಅಲ್ಪಸಂಖ್ಯಾತರ ಕೊಲೆ ಬೇಕಾಗಿದೆ. ಆ ಮೂಲಕ ತಮ್ಮದೇ ಆದ ವೋಟ್ ಬ್ಯಾಂಕ್ ಅನ್ನು ಅವರು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇದನ್ನು ನಿಲ್ಲಿಸಬೇಕಾದರೆ ಧರ್ಮದ ತಾತ್ವಿಕತೆಯನ್ನು ಬಳಸಿಕೊಂಡು, ಕೋಮುವಾದವನ್ನು‌ ಎದುರಿಸಬೇಕು. ಮುಸ್ಲಿಮರ ನಿರಾಕರಣೆಗೆ ಒಳಗಾದ‌ ಜಾತ್ಯತೀತ‌ ಮುಸ್ಲಿಮ್ ಮುಖಂಡನಿಗೆ ಮುಸ್ಲಿಮರ ನಡುವೆ ಸೌಹಾರ್ಧತೆಯ ಸಂದೇಶವನ್ನು‌ ಬಿತ್ತಲು ಸಾಧ್ಯವಾಗುವುದಿಲ್ಲ. ಕರ್ನಾಟಕದಲ್ಲಿ ಇಬ್ಬರು ಜಾತ್ಯತೀತ ಮುಸ್ಲಿಮ್ ಮುಖಂಡರಿದ್ದರು. ಒಬ್ಬರು ಅಝೀಝ್ ಸೇಠ್, ಇನ್ನೊಬ್ಬರು ಅಬ್ದುಲ್ ನಝೀರ್ ಸಾಬ್. ಎರಡನೇಯವರು ಧರ್ಮದ‌ ಆಚಾರ‌ ವಿಚಾರಗಳಿಂದ ಅಂತರ ಕಾಯ್ದುಕೊಂಡಿದ್ದರು. ಪರಿಣಾಮ ಪ್ರಾಮಾಣಿಕ‌ ಜನ ಸೇವಕರಾದ‌ ನಝೀರ್ ಸಾಬ್ ರನ್ನು ಮುಸ್ಲಿಮರು‌ ಒಪ್ಪಿಕೊಳ್ಳಲಿಲ್ಲ. ಪಾಕಿಸ್ತಾನದ ಪರವಾಗಿದ್ದರೆಂಬ ಆರೋಪ ಹೊತ್ತು ಜೈಲಿಗೆ ಹೋಗಿ‌ ಬಂದಿದ್ದ ಅಝೀಝ್ ಸೇಠ್ ಮುಸ್ಲಿಮರ ಸಹಾನುಭೂತಿಗೆ ಪಾತ್ರರಾದರು. ಮುಸ್ಲಿಮರನ್ನು ಮುಖ್ಯವಾಹಿನಿಯ ಸಮೀಪಕ್ಕೆ ಕರೆ ತರಲು‌ ಇದು ಸಹಾಯಕವಾಯಿತು.
ಆದರೆ, ದೌರ್ಭಾಗ್ಯವಶಾತ್ ಮಾಧ್ಯಮಗಳು ಇದನ್ನೆಲ್ಲಾ ಗಮನಿಸುವುದಿಲ್ಲ. ಸಮಾಜದ ಶಾಂತಿ, ಒಳಿತುಗಳು ವರದಿಯಾಗುವುದಿಲ್ಲ. ಧರ್ಮದ ಪಾಸಿಟಿವ್ ಗುಣವನ್ನು ಬುದ್ಧಿಜೀವಿಗಳು ಹಾಗೂ ಮಾಧ್ಯಮ ಕಾಣುವುದಿಲ್ಲ ಎಂಬುದು ದುಃಖದ ಸಂಗತಿ. ಈ ವಿಚಾರಗಳನ್ನು ಅರಿತು ಹಿಂದೂ ಹಾಗೂ ಮುಸ್ಲಿಮರು ಪರಸ್ಪರ ಸಂವಾದಿಸಬೇಕು.‌ ಹಿಂದೂ ಮುಸ್ಲಿಮರು ಪರಸ್ಪರ ವೈಚಾರಿಕ ಸಂಘರ್ಷವಿಟ್ಟುಕೊಂಡೇ ಸ್ನೇಹಭಾವಗಳನ್ನು ಪ್ರಕಟಿಸಲು ಸಾಧ್ಯವಾಗಬೇಕು. ಈ ರೀತಿಯ ಒಗ್ಗಟ್ಟಿನ ಮೂಲಕ ಕೋಮುವಾದದ ವಿರುದ್ಧ ಹೋರಾಟ ಮಾಡಬೇಕೆಂಬುದು ನನ್ನ ಕನಸು.


ಸಂದರ್ಶನ ನಡೆಸಿದವರು: ಎಂ. ಗಂಗಾಧರನ್, ಸೆಬಾಸ್ಟಿಯನ್ ವಟ್ಟಮಟ್ಟಂ, ಕೆ.ಎಂ ನರೇಂದ್ರನ್, ಎಪಿ ಕುಂಞಾಮು. ಸ್ವಾಲಿಹ್ ತೋಡಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ.


ಎಂ. ಗಂಗಾಧರನ್

ಕೇರಳದ ಪ್ರಮುಖ ಇತಿಹಾಸ ತಜ್ಞರೂ ಸಾಂಸ್ಕೃತಿಕ ವಿಮರ್ಶಕರೂ ಗ್ರಂಥಕರ್ತರೂ ಆಗಿದ್ದಾರೆ. ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಮಲಬಾರ್ ದಂಗೆಯ ಬಗ್ಗೆ ಗಮನಾರ್ಹವಾದ ಅಧ್ಯಯನಗಳನ್ನು ನಡೆಸಿದ್ದಾರೆ.


ಸೆಬಾಸ್ಟಿಯನ್ ವಟ್ಟಮಟ್ಟಂ

ಕ್ಯಾಲಿಕಟ್ ವಿವಿಯ ಚಂಙನಾಶ್ಶೇರಿಯ ಎಸ್.ಬಿ ಕಾಲೇಜಿನಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸೆಬಾಸ್ಟಿಯನ್ ಅವರು
ವಿಮೋಚನಾ ದೇವತಾಶಾಸ್ತ್ರದ ಚಿಂತಕರೂ ಕವಿಯೂ ಆಗಿದ್ದಾರೆ. ಸಾಂಸ್ಕೃತಿಕ ಚರಿತ್ರೆ, ಭಾಷಾಶಾಸ್ತ್ರ, ಗಣಿತಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ಹಲವಾರು ಪುಸ್ತಕಗಳನ್ನು ರಚಿಸಿ, ಸಂಪಾದಿಸಿದ್ದಾರೆ. ಎಟ್ಟುಮಾನೂರು ಕಾವ್ಯ ವೇದಿಯ ಸಂಚಾಲಕರೂ, ಋತಂ ಮಾಸಿಕದ ಸಂಪಾದಕರೂ ಆಗಿದ್ದಾರೆ.


ಕೆ.ಎಂ. ನರೇಂದ್ರನ್

ಕೆ.ಎಂ. ನರೇಂದ್ರನ್ ನಿರೂಪಕರಾಗಿಯೂ ಕ್ರೀಡಾ ಬರಹಗಾರರಾಗಿಯೂ ಕೇರಳದಲ್ಲಿ ಪ್ರಸಿದ್ಧರು. ಆಲ್ ಇಂಡಿಯಾ ರೇಡಿಯೋದ ಪ್ರಸಾರ ಭಾರತಿಯ ಮುಖ್ಯಸ್ಥ ರು. ಸಾಹಿತ್ಯ ನಿರೂಪಣೆ, ಮಾಧ್ಯಮ ವಿಮರ್ಶೆ, ಸ್ಪೋರ್ಟ್ಸ್ ಜರ್ನಲಿಸಂ ಮೊದಲಾದ ಕ್ಷೇತ್ರಗಳಲ್ಲಿ ಖ್ಯಾತರು. ಹಲವು ಪುಸ್ತಕಗಳನ್ನು ರಚಿಸಿದ್ದಾರೆ.


ಎಪಿ ಕುಂಞಾಮು


ಬರಹಗಾರರು ಮತ್ತು ಅನುವಾದಕರು. ಕೆನರಾ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಭಗವಾನ್ ಗಿದ್ವಾನಿಯವರ The sword of Tippu Sulthan, ಕರೆನ್ ಆರ್ಮ್ ಸ್ಟ್ರಾಂಗ್ ಅವರ Muhammad: biography of prophet, ಅಸ್ಗರ್ ಅಲಿ ಇಂಜಿನಿಯರ್ ಅವರ Islam in contemporary world ಕೃತಿಗಳ ಮಲಯಾಳಂ ಅನುವಾದವು ಇವರ ಪ್ರಮುಖ ಕೊಡುಗೆ. ಮೂಲತಃ ಕೋಯಿಕ್ಕೋಡ್ ಜಿಲ್ಲೆಯವರು.

Leave a Reply

*