ವಿಜ್ಞಾನದ ಮೂಲಕ ಸತ್ಯವನ್ನರಿಯಲು ಸಾಧ್ಯವೆ?

ಆಶಯ, ಸಿದ್ಧಾಂತ, ವಿಚಾರ, ವಿಧಾನಗಳನ್ನು ಅಳೆಯುವ ಮೀಟುಗೋಲಾಗಿ ಇಂದು ‘ವೈಜ್ಞಾನಿಕತೆ’ ಮಾರ್ಪಟ್ಟಿದೆ. ವೈಜ್ಞಾನಿಕ ಎಂಬ ವಿಶೇಷಣ ಇಂದು ಯಥೇಚ್ಛವಾಗಿ ಈ ನಿಟ್ಟಿನಲ್ಲಿ ಚಾಲ್ತಿಯಲ್ಲಿದೆ. ಅವೈಜ್ಞಾನಿಕವೆಂಬ ಹಣೆಪಟ್ಟಿಯಿಂದ ಹೊರಬರಲು ವಿಜ್ಞಾನದ ವಿಷಯಗಳಿಗೆ ಕಿಂಚಿತ್ ಸಂಬಂಧವಿಲ್ಲದ ಸಂಗತಿಗಳನ್ನೂ‘ವೈಜ್ಞಾನಿಕ’ಗೊಳಿಸಲು ತಿಪ್ಪರಲಾಗ ಹಾಕುತ್ತಿದ್ದಾರೆ. ಒಂದು ಆಶಯವನ್ನು ಗೇಲಿ ಮಾಡಲು ಸುಲಭವಾಗಿ ಪ್ರಯೋಗಿಸಬಹುದಾದ ನುಡಿಗಟ್ಟಾಗಿ ಇಂದು ಈ ಅರಿಮೆಪದ ಬಳಕೆಯಲ್ಲಿದೆ. ವಿಜ್ಞಾನದ ವೃತ್ತದಿಂದ ಹೊರಗಿರುವ, ವಿಜ್ಞಾನದ ಬೌಂಡರಿ ಕೊನೆಗೊಳ್ಳುವಲ್ಲಿ ಆರಂಭವಾಗುವ ಧಾರ್ಮಿಕ ವಿಚಾರಗಳು ಹಾಗೂ ಅತಿಭೌತಶಾಸ್ತ್ರೀಯ (metaphysical) ಸಂಗತಿಗಳಲ್ಲಿ ಕೂಡಾ ವೈಜ್ಞಾನಿಕ-ಅವೈಜ್ಞಾನಿಕ ವಿಂಗಡನೆ ತಂದು ಹಂಸ ಕ್ಷೀರ ನ್ಯಾಯ ಜಾರಿ ಮಾಡುತ್ತಿರುವುದಂತೂ ಸೋಜಿಗವೇ. ಖುರ್‌ಆನಿನಲ್ಲಿ ʼಬಿಗ್‌ ಬ್ಯಾಂಗ್‌ ಥಿಯರಿʼ ಯನ್ನು ತೋರಿಸಿಕೊಡಲು ಕೆಲವು ಪ್ರಬುದ್ಧರು ಈಗಲೂ ಕೂಡಾ ಮುಂದೆ ಬರುತ್ತಿರುವುದು ಈ ‘ವೈಜ್ಞಾನಿಕ ಪ್ರಜ್ಞೆ’ಯೊಳಗೆ ಬಂಧಿಯಾದುದರಿಂದಲೇ. ಹಿಂದೂ, ಕ್ರಿಶ್ಚಿಯನ್‌ ವೇದಗ್ರಂಥಗಳಲ್ಲಿ ಕೂಡಾ ಈ ರೀತಿಯ ಹುಡುಕಾಟ ನಡೆದಿದೆ. ವೈಜ್ಞಾನಿಕ ವಿಧಾನದಿಂದ ಎಲ್ಲಾ ತರದ ಅರಿವುಗಳನ್ನು ಪಡೆಯಲು ಸಾಧ್ಯ ಎಂದು ಎಲ್ಲರೂ ನಂಬಿದ್ದಾರೆ. ನಾವು ಧರ್ಮಭೀರು ಆದರೆ ವೈಜ್ಞಾನಿಕ ನಿಕಷಕ್ಕೊಡ್ಡಿ ಮಾತ್ರವೇ ಅದರ ನಂಬಿಕೆ ಆಚಾರಗಳನ್ನು ಸ್ವೀಕರಿಸಬಲ್ಲೆವು ಅನ್ನುವುದು ಒಂಥರಾ ಕೀಳರಿಮೆ, ಹಿಪಾಕ್ರಸಿಯ ದ್ಯೋತಕ. ಮಿಕ್ಕ ಜನರೂ ಬಹಳ ಕ್ಯಾಷ್ಯುವಲ್ ಆಗಿ ಇಂತಹ ವಿಚಿತ್ರ ವಿಂಗಡನೆಗಳನ್ನು ಮಾಡುತ್ತಿರುವುದು, ತೀರ್ಪುಗಳನ್ನು ನೀಡುತ್ತಿರುವುದು ಯುಗದ ಟ್ರೆಂಡ್‍ಗಳಿಗೆ ಜೋತುಬಿದ್ದೆ ಹೊರತು ಸುಚಿಂತಿತವಾದ ಆಲೋಚನೆಗಳ, ಸಮಗ್ರವಾದ ಅಧ್ಯಯನಗಳ ಫಲಶೃತಿಯಲ್ಲ.

ಧರ್ಮದ ವಿಚಾರಧಾರೆಗಳು ವಿಜ್ಞಾನದ ಆವಿಷ್ಕಾರ, ಕಂಡುಹಿಡಿತಗಳಿಗೆ ಅನುಗುಣವಾಗಿ ಮೂಡಿಬರಬೇಕು, ವೈಜ್ಞಾನಿಕ ತಥ್ಯಗಳಿಗೆ ‘ವಿರುದ್ಧ’ವಾಗಿ ಧರ್ಮದಲ್ಲಿ ಏನಾದರೂ ಇದ್ದರೆ ಅದನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಕೆಲವರು ವಾದಿಸುತ್ತಾರೆ. ಅಂತಹ ಸಾಧ್ಯತೆಗಳು ಇಲ್ಲದ ಧಾರ್ಮಿಕ ನಿಲುವುಗಳನ್ನು ತಳ್ಳಿ ಹಾಕಬೇಕು ಎಂಬುದು ಅವರ ಅಂಬೋಣ. ಹೀಗೆ ವಾದಿಸುವವರು ತಮ್ಮ ವಾದಕ್ಕೆ ತಳಹದಿಯಾಗಿ ‘ಸತ್ಯ ಅಸತ್ಯಗಳನ್ನು ಪ್ರತ್ಯೇಕಿಸಲು ವಿಜ್ಞಾನವೊಂದೆ ಮಾರ್ಗ’ ಎಂಬ ತಪ್ಪಾದ ಪ್ರಿಮೈಸನ್ನು ಅರಿತೋ ಅರಿಯದೆಯೋ ಇಟ್ಟು ಕೊಂಡಿರುತ್ತಾರೆ. ವಿಜ್ಞಾನಿಗಳ ಮಾತ್ರವಲ್ಲ ಧರ್ಮ ವಿಶ್ವಾಸಿಗಳ ಕಡೆಯಿಂದ ಕೂಡಾ ಈ ಪ್ರಮಾದ ಉಂಟಾಗುತ್ತಿದ್ದು ಸದ್ರಿ ಸುಪ್ತ ಪ್ರಿಮೈಸ್ ವಿಜ್ಞಾನದ ತಳಹದಿಯಾದ ‘ವೈಜ್ಞಾನಿಕ ವಿಧಾನ’ದ ಸ್ವೀಕಾರಾರ್ಹತೆಗೂ ಸವಾಲೊಡ್ಡುತ್ತದೆ ಎಂಬುದನ್ನು ಅವರು ಅರ್ಥ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಜ್ಞಾನ, ವೈಜ್ಞಾನಿಕತೆ ಮುಂತಾದ ಅರಿಮೆಪದಗಳ ವ್ಯಾಖ್ಯೆ, ಅದರ ತಾತ್ವಿಕ ಆಯಾಮಗಳು ಹಾಗೂ ಇತಿಮಿತಿಗಳು ಮುಂತಾದ ವಿಷಯಗಳ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ.

ಅಕಾಡೆಮಿಕ್ ಪ್ರೆಸ್ ಪ್ರಕಟಿಸಿದ Science and Technology Dictionary ಯ ಪ್ರಕಾರ ವಿಜ್ಞಾನಕ್ಕೆ ಎರಡು ಅರ್ಥವಿದೆ. ಒಂದನೆಯ ಅರ್ಥದ ಪ್ರಕಾರ ವಿಜ್ಞಾನ ಭೌತಿಕ ವಿದ್ಯಮಾನಗಳನ್ನು ವ್ಯವಸ್ಥಿತವಾದ ವೀಕ್ಷಣೆ ಪರೀಕ್ಷಣೆಗಳಿಗೆ ಒಳಪಡಿಸಿ ಅದರ ವಾಸ್ತವಗಳನ್ನು ಹೊರಗೆಡಹಿ ಅವುಗಳ ತಳಹದಿಯಲ್ಲಿ ನೈಸರ್ಗಿಕ ನಿಯಮಗಳನ್ನು ಮತ್ತು ತತ್ವಗಳನ್ನು ರೂಪಿಸುವ ಪ್ರಕ್ರಿಯೆಯಾದರೆ ಮತ್ತೊಂದು ವಿವರಣೆಯ ಪ್ರಕಾರ ಈ ಪ್ರಕ್ರಿಯೆಯ ಫಲಶೃತಿಯಾದ ತಿಳಿವುಗಳ ಸಮಾಹಾರ. ಎರಡು ನಿರ್ವಚನದ ಪ್ರಕಾರವೂ ವಿಜ್ಞಾನದ ಚರ್ಚಾವಸ್ತು ವಾಸ್ತವ ಜಗತ್ತಿನ ಗೋಚರ ಆಯಾಮಗಳು ಮಾತ್ರವೆಂಬುದು ಸ್ಪಷ್ಟ. ಗೋಚರ ಜಗತ್ತಿನ ಚಮತ್ಕಾರಗಳು ಹುಲು ಮಾನವನ ಬೆರಗಿಗೆ ಹಬ್ಬ ನೀಡಿ ಅವನ ಜಿಜ್ಞಾಸೆಯನ್ನು ಬಡಿದೆಬ್ಬಿಸಿದೆ. ಜಗತ್ತಿನ ರಹಸ್ಯಗಳನ್ನು ಬೇಧಿಸಿ ಅದನ್ನು ತನ್ನ ಅಭೀಪ್ಸೆಯಂತೆ ಪುನರ್ರಚಿಸಲು ಮಾನವ ಶತಾಯಗತಾಯ ಪ್ರಯತ್ನ ಮಾಡಿದ್ದಾನೆ. ಈ ಪ್ರಯತ್ನದಲ್ಲಿ ಹಲವಾರು ಕಡೆ ವಿಜಯದ ನಗೆ ಬೀರಿದ್ದರೂ ಕೆಲವೆಡೆ ಎಲ್ಲೆ ಮೀರಿ ಎಡವಿ ಬಿದ್ದಿದ್ದಾನೆ. ಅದಾಗ್ಯೂ, ವಿಜ್ಞಾನ ನಮ್ಮ ಜೀವನದಲ್ಲಿ ಹಲವಾರು ಸೌಕರ್ಯ ಸವಲತ್ತನ್ನು ಒದಗಿಸಿತ್ತಿರುವ ಮಹತ್ವಪೂರ್ಣ ಅನುಗ್ರಹವೇ ಎಂಬುದನ್ನು ಅಲ್ಲಗೆಳೆಯುವುದಿಲ್ಲ.

ಆಧುನಿಕ ವಿಜ್ಞಾನ ಎನ್ನುವುದು ಇತ್ತೀಚೆಗಿನ ವಿದ್ಯಮಾನ. ಪ್ರಪಂಚದ ಕುರಿತು ಹಿಂದಿನಿಂದಲೇ ಅಧ್ಯಯನಗಳು ನಡೆಯುತ್ತಿತ್ತು. ಆದರೆ ಅದನ್ನು ಇಂದಿನ ವಿಜ್ಞಾನದ ನೆಲೆಯಲ್ಲಿ ಗ್ರಹಿಸಲು ಸಾಧ್ಯವಲ್ಲ. ಇಂದಿನ ಪರಿಭಾಷೆಯಲ್ಲಿ ಫಿಝಿಕ್ಸ್‌ ಅಥವಾ ಭೌತವಿಜ್ಞಾನ ಎನ್ನುವುದು ಭೌತಿಕ ಯಾ ನಿರ್ಜೀವ ವಸ್ತುಗಳ ಕುರಿತ ಅಧ್ಯಯನವನ್ನು. ಜೀವವಿರುವ ವಸ್ತುಗಳ ಕುರಿತ ಶಿಸ್ತನ್ನು ಬಯೋಲಜಿ ಎಂದು ಕರೆಯಲಾಗುತ್ತದೆ. ಈ ವಿಂಗಡನೆಯನ್ನು ಸಾರ್ವತ್ರಿಕ ಮತ್ತು ಸ್ವೀಕಾರಯೋಗ್ಯ ಎನ್ನಲು ಬರದು. ಇಸ್ಲಾಮಿನಲ್ಲಂತೂ ಈ ವಿಭಜನೆ ಅಪೂರ್ಣ. ಒಂಟೆಗಳನ್ನು ಮತ್ತು ಆಕಾಶ ಭೂಮಿಗಳನ್ನು ಒಂದೇ ವಿವರಣೆಯೊಳಗೆ ತಂದಿರುವುದನ್ನು ನಮಗೆ ಖುರ್‌ಆನಿನಲ್ಲಿ ಕಾಣಲು ಸಾಧ್ಯ. ಅಲ್ಲಾಹನು ಹಯ್ಯುಲ್‌ ಖಯ್ಯೂಮ್‌ ಅಥವಾ ಎಂದೆಂದಿಗೂ ಜೀವಿಸುವವನಾಗಿದ್ದಾನೆ ಎಂದಿದೆ ಖುರ್‌ಆನ್.‌ ಆದರೆ ಅವನನ್ನು ಬಯೋಲಜಿಕಲ್‌ ಎಂದೆನ್ನಲು ಸಾಧ್ಯವೇ? ಜೀವದ ಬಯೋಲಜಿಕಲ್‌ ವ್ಯಾಖ್ಯೆ ಹೊಸತು ಆಗಿದ್ದು ಅದು ಆಧುನಿಕ ವಿಜ್ಞಾನದ ತಳಹದಿ ಕೂಡಾ ಹೌದು. ನಮಗೆ ಅದರಾಚೆಗೆ ಚಿಂತಿಸಬೇಕಾದ ಅಗತ್ಯ ಬರುತ್ತದೆ. ಅದೇ ವೇಳೆ, ಫಿಝಿಕ್ಸಿನ(ಇಲ್ಮ್ ಅಲ್ ತ್ವಬೀಇಯ್ಯ್) ಸಾಂಪ್ರದಾಯಿಕ ವ್ಯಾಖ್ಯೆಯಲ್ಲಿ ಬಯೋಲಜಿ, ಕೆಮಿಸ್ಟ್ರಿ, ಫಿಝಿಕ್ಸ್‌ ಎಲ್ಲವೂ ಒಳಪಡುತ್ತದೆ. ಸೃಷ್ಟಿಗಳ ಲಕ್ಷಣಗಳ ಬಗ್ಗೆ ಕಲಿಯುವ ವಿಜ್ಞಾನ ಎಂಬ ಮನಗಾಣಿಕೆ ಅದರ ಹಿಂದಿದೆ. ಒಟ್ಟಾರೆಯಾಗಿ ಸಮಕಾಲೀನ ವಿಜ್ಞಾನದ ಪಂಚಾಂಗ ಆಗಿರುವ ಹೊಸ ವಿಂಗಡನೆ ಈಗ್ಗೆ ಚಾಲ್ತಿಗೆ ಬಂದದ್ದು ಎಂದು ತಿಳಿಯಬಹುದು.

ವಿಜ್ಞಾನ ಅರಿವುಗಳನ್ನು ಉತ್ಪಾದಿಸುವುದು ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು. ಒಂದು ನಿಶ್ಚಿತ ಗುಂಪಿನ ಕೆಲವು ಸದಸ್ಯರನ್ನು ಸ್ಯಾಂಪ್ಲಿಂಗ್ ನಿಯಮಗಳ ಪ್ರಕಾರ ಆಯ್ದು ಅವುಗಳ ವರ್ತನೆಗಳನ್ನು ಅವಲೋಕಿಸಿ, ಕಾರಣಗಳನ್ನು ಹುಡುಕಿ, ತಾಳೆ ಮಾಡಿ ಒಂದು ನಿಗಮನಕ್ಕೆ ಬರಲಾಗುತ್ತದೆ. ಹೀಗೆ ಕೆಲವೇ ಕೆಲವು ಸದಸ್ಯರಲ್ಲಿ ಪ್ರಯೋಗ ಮಾಡಿದಾಗ ದೊರೆಯುವ ನಿಗಮನವನ್ನು ಇಡೀ ಗುಂಪಿಗೇ ಅನ್ವಯಿಸಲಾಗುತ್ತದೆ. ಇದಾಗಿದೆ ವೈಜ್ಞಾನಿಕ ವಿಧಾನದ ಯಕಃಶ್ಚಿತ್ ಚಿತ್ರಣ. ಕುದಿಯಲು ಇಟ್ಟ ಅಕ್ಕಿಯಿಂದ ಅಲ್ಪವನ್ನು ತೆಗೆದು ಪರಿಶೋಧಿಸಿ ಪಾತ್ರೆಯಲ್ಲಿನ ಎಲ್ಲ ಅಕ್ಕಿ ಅನ್ನವಾಗಿದೆಯೆಂದು ಸಾಧಾರಣ ನಾವು ನಿರ್ಣಯಿಸುತ್ತೇವಲ್ಲಾ, ವೈಜ್ಞಾನಿಕ ವಿಧಾನವೂ ಹಾಗೇನೆ. ಇಂತಹ ತೀರ್ಪುಗಳು ಬಹ್ವಂಶ ಸರಿಯಾಗಬಹುದಾದರೂ ತಪ್ಪಾಗುವ ಸಾಧ್ಯತೆಗಳು ಇಲ್ಲದಿಲ್ಲ.

ವೈಜ್ಞಾನಿಕ ವಿಧಾನಕ್ಕೆ ಆತ್ಯಂತಿಕವಾಗಿ ನಾಲ್ಕು ವಿಶೇಷತೆಗಳಿವೆ. ಒಂದನೆಯದಾಗಿ ಅದು ಗೋಚರ ಪ್ರಾಕೃತಿಕ ವಿಷಯಗಳಲ್ಲಿ ಮಾತ್ರ ಗಮನ ಕೇಂದ್ರೀಕರಿಸುತ್ತದೆ. ಆದುದರಿಂದಲೇ ಈ ಜೀವನದ ಉದ್ದೇಶವೇನು ಅದರ ಅರ್ಥವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಅದಕ್ಕೆ ಉತ್ತರಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ಭೌತಿಕ ಜಗತ್ತನ್ನು ವಿವರಿಸುವುದು ಮಾತ್ರವೆ ಅದರ ಗುರಿ. ಮೂರನೆಯದಾಗಿ, ಪರೀಕ್ಷಣಾಯೋಗ್ಯವಾದ ಆಶಯಗಳನ್ನು ಮಾತ್ರವೇ ಅದು ಸ್ವೀಕರಿಸುವುದು. ನಾಲ್ಕನೆಯದಾಗಿ, ಪರೀಕ್ಷಣಾಯೋಗ್ಯವಾದವುಗಳನ್ನು ಪರೀಕ್ಷಿಸಿ ದೊರೆಯುವ ಆಶಯಗಳೆ ಅದರ ಪುರಾವೆಗಳು.

ಜ್ಞಾನಶಾಸ್ತ್ರಜ್ಞರು (epistemologists) ಇಂತಹ ಸಂಶೋಧನೆಗಳನ್ನು ಅನುಗಮನ (induction)ವಿಭಾಗದಲ್ಲಿ ಒಳಪಡಿಸಿದ್ದಾರೆ. ಗುಂಪಿನ ಸರ್ವರಿಗೂ ಅನ್ವಯವಾಗುವ ಸಾರ್ವತ್ರಿಕ ನಿಯಮಗಳನ್ನು ಅದರ ಸದಸ್ಯರಿಗೂ ಅನ್ವಯಗೊಳಿಸುವ ನಿಗಮನ (deduction) ವಿಧಾನಕ್ಕೆ ವಿಭಿನ್ನವಾಗಿ ವೈಜ್ಞಾನಿಕ ವಿಧಾನ ಅಥವಾ ಸೈಂಟಿಫಿಕ್ ಮೆಥಡ್ ಕೇವಲ ಅನುಮಾನವನ್ನಷ್ಟೇ(inference) ಉತ್ಪಾದಿಸಬಲ್ಲುದು, ಖಚಿತತೆಯನ್ನಲ್ಲ(certainty). ಆದುದರಿಂದಲೇ 18 ನೆಯ ಶತಮಾನದ ಪ್ರಮುಖ ತತ್ವಜ್ಞಾನಿ ಡೇವಿಡ್ ಹ್ಯೂಂ ತನ್ನ ಸುಪ್ರಸಿದ್ಧ ಗ್ರಂಥ “An Enquiry concerning Human Understanding”” ನಲ್ಲಿ “ಒಂದು ವರ್ಗದ ನಿಗದಿತ ಸದಸ್ಯರನ್ನು ವೀಕ್ಷಿಸಿ ನಾವು ವೀಕ್ಷಿಸದೆ ಇರುವ ಅಸಂಖ್ಯ ಇತರ ಸದಸ್ಯರ ಕುರಿತು ತೀರ್ಪು ಹೊರಡಿಸುವುದು ನಮ್ಮ ಜ್ಞಾನೇಂದ್ರಿಯಗಳ ಅನುಭವದಿಂದ ಮತ್ತು ಜ್ಞಾಪಕಶಕ್ತಿಯ ದಾಖಲೆಗಳಿಂದ ಸರಿ ಎನ್ನಲು ಬರದು ಎಂದಿದ್ದಾರೆ”.

ಸರ್ವ ಜ್ಞಾನಗಳ ಅಳತೆಗೋಲಾಗಿ ಅನರ್ಹ ಪ್ರಚಾರ ಪಡೆದಿರುವ ವೈಜ್ಞಾನಿಕ ಅರಿವುಗಳ ಉತ್ಪತ್ತಿ ಎಲ್ಲಿಂದ ಎಂದು ಈ ಕಿರು ವಿವರಣೆಯಿಂದ ಅರ್ಥೈಸಿರಬಹುದು. ವೈಜ್ಞಾನಿಕ ವಿಧಾನದಿಂದ ವರ್ತಮಾನದ ಅವಸ್ಥೆಯನ್ನು ಅವಲೋಕಿಸಿ ಭವಿಷ್ಯದ ಬಗ್ಗೆ ಅನುಮಾನಿಸಲು ಸಾಧ್ಯವಿದ್ದು ಚರಿತ್ರೆಯ ಕುರಿತು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ವಿಕಾಸವಾದವನ್ನೆ ಅಂತಿಮಗೊಳಿಸಿ ಇತರ ಗ್ರಹಿಕೆಗಳನ್ನೆಲ್ಲಾ ಸಾರಸಗಟಾಗಿ ತಿರಸ್ಕರಿಸುವವರು ಇಂತಹ ಜ್ಞಾನಶಾಸ್ತ್ರೀಯ ಸೂಕ್ಷ್ಮಗಳ ಕುರಿತು ಆಲೋಚಿಸುವುದೇ ಇಲ್ಲ. ಎಲ್ಲವೂ ವೈಜ್ಞಾನಿಕವಾಗಿರಬೇಕೆಂಬ ವಾದ ವಿಜ್ಞಾನಕ್ಕಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಆ ವಾದ ಸಯನ್ಸ್ ಅಲ್ಲ, ಅಬೌದ್ಧಿಕ ಮತ್ತು ಅವೈಜ್ಞಾನಿಕ ತಳಹದಿಯಲ್ಲಿ ಮೊಳೆತ ಸಯಂಟಿಸಂ. ಗೋಚರ ಜಗತ್ತಿನಾಚೆಗೆ ಏನೂ ಇಲ್ಲ ಸಾರಿ ಬಿಡುವ ಭಂಡ ಧೈರ್ಯವದು. ಸೃಷ್ಟಿಕರ್ತನ ಇರುವಿಕೆಯನ್ನು ಜಾಣ್ಮೆಯಿಂದ ಅಲ್ಲಗೆಳೆಯಲು ಬಳಸಲಾಗುತ್ತಿರುವ ಅಸ್ತ್ರ. ಇದರಲ್ಲಿ ವೈಚಾರಿಕತೆಯ ಒಂದಂಶವೂ ಇಲ್ಲ. ಅದರದ್ದು ಒಂಥರಾ ಸ್ವಯಂ ಸೋಲಿಸುವ ಪ್ರಕ್ರಿಯೆ. ಸತ್ಯ ಶೋಧನೆಗೆ ವಿಜ್ಞಾನವೊಂದೆ ದಾರಿ ಎಂಬ ಸಯಂಟಿಸಂನ ಮೂಲಭೂತ ತತ್ವ ತಿರುಗಿ ಅದರ ಸತ್ಯತೆಯನ್ನೇ ಪ್ರಶ್ನಿಸುತ್ತದೆ. ಯಾಕೆಂದರೆ, ‘ವೈಜ್ಞಾನಿಕ ವಿಧಾನದಿಂದ ಮಾತ್ರ ಸತ್ಯ ದೊರೆಯುತ್ತದೆ’ ಎಂಬ ಸಯಂಟಿಸಂನ ಮೂಲಭೂತ ವಾದವನ್ನು ಕೂಡಾ ವೈಜ್ಞಾನಿಕವಾಗಿ ಸಾಬೀತು ಮಾಡಬೇಡವೇ? ಆದರೆ ಅದು ಸಾಧ್ಯವಿಲ್ಲ ಎಂಬುದು ಸರ್ವಾಂಗೀಕೃತ. ಆದುದರಿಂದಲೇ, ವಿಜ್ಞಾನ ಕೂಡಾ ಒಂದರ್ಥದಲ್ಲಿ ‘ಅವೈಜ್ಞಾನಿಕ’ ಎನ್ನಬೇಕಾಗುತ್ತದೆ. ಸಯಂಟಿಸಂ ಒಂಥರಾ ‘ವೈಜ್ಞಾನಿಕ ಮೂಲಭೂತವಾದ’ದ ಇಲ್ಲವೇ ‘ವಿಜ್ಞಾನಾಂಧತೆ’ಯ ರೀತಿ ವರ್ತಿಸುತ್ತದೆ ಎಂಬುದು ಅನುಭವವೇದ್ಯ. ಜ್ಞಾನದ ಇತರ ಮಜಲುಗಳನ್ನೆಲ್ಲಾ ಅದು ಅಲ್ಲಗೆಳೆಯುತ್ತದೆ. ಅದರ ಪ್ರಕಾರ ಗಣಿತದ ಸತ್ಯಗಳು, ತರ್ಕಗಳು, ಸೌಂದರ್ಯ ಮೀಮಾಂಸೆ ಇದ್ಯಾವುದರಲ್ಲಿಯೂ ಹುರುಳಿಲ್ಲ.

ವೈಜ್ಞಾನಿಕ ವಿಧಾನದ ಸಿಂಧುತ್ವದ ನಿರ್ಣಯ ಮಾಡಲು ವಿಜ್ಞಾನಕ್ಕೆ ಸಾಧ್ಯವಲ್ಲ; ಅದು ವಿಜ್ಞಾನಕ್ಕಿಂತಲೂ ಆಚೆಗಿನ ತತ್ವಜ್ಞಾನದ ಚರ್ಚಾವಸ್ತು. ಹಲವಾರು ವಿಜ್ಞಾನದ ತತ್ವಜ್ಞಾನಿಗಳು ಈ ಕುರಿತು ಚರ್ಚೆ ಮಾಡಿದ್ದಾರೆ. ವೈಜ್ಞಾನಿಕ ವಿಧಾನದ ಪರಿಮಿತಿಗಳತ್ತ ಬೆಳಕು ಚೆಲ್ಲಿದ್ದಾರೆ. ಕಾರ್ಲ್ ಪಾಪರ್, ಥೋಮಸ್ ಕುನ್, ಫೆಯರಾಬಾಂಡ್ ಈ ನಿಟ್ಟಿನಲ್ಲಿ ಪ್ರಮುಖರು. ಒಂದೇ ರೇಖೆಯಲ್ಲಿ ನಿರಂತರವಾಗಿ ಪ್ರಗತಿ ಹೊಂದುತ್ತಿರುವ ಜ್ಞಾನದ ಶಿಸ್ತು ಎಂಬ ಪರಿಪ್ರೇಕ್ಷ್ಯದಲ್ಲಿ ವಿಜ್ಞಾನವನ್ನು ನೋಡಲಾಗದು ಎಂದಿದ್ದಾರೆ ಥೋಮಸ್‌ ಕುನ್.‌ ಪ್ರಾಚೀನ ಈಜಿಪ್ತ್‌, ಗ್ರೀಕ್‌ ವಿಜ್ಞಾನದಿಂದ ಆರಂಭವಾಗಿ ರೇಖಾತ್ಮಕವಾಗಿ ಮುಂದುವರಿದು ಇಂದಿನ ಉಚ್ಪ್ರಾಯಕ್ಕೆ ತಲುಪಿತು ಎಂಬ ವಾದವನ್ನು ಅವರು ಪ್ರಶ್ನೆಗೊಳಪಡಿಸಿದ್ದಾರೆ. ವಿಜ್ಞಾನ ಎಂಬುದು ಇತಿಹಾಸ, ಭೌಗೋಳಿಕತೆ ಮತ್ತು ದಾರ್ಶನಿಕತೆಗೆ ಅತೀತವಾದ ಪೂರ್ಣ ಸ್ವತಂತ್ರ ಶಿಸ್ತು ಎಂದು ಹಲವರು ಭಾವಿಸಿರುವುದು ಸರಿಯಲ್ಲ. ವಿಜ್ಞಾನದ ಚಾರಿತ್ರಿಕ ಹರಿವನ್ನು ಪ್ಯಾರಡೈಮ್‌ಗಳ (paradigm) ನೆಲೆಗಟ್ಟಿನಲ್ಲಿ ಅವರು ಅರ್ಥೈಸಿದ್ದಾರೆ. ವಿಜ್ಞಾನದ ಮೂಲಭೂತ ನಿಲುವುಗಳಲ್ಲೆ ಪಲ್ಲಟ ಉಂಟಾದದ್ದು ನಮಗೆ ಕಾಣಬಹುದು. ಟಾಲೆಮಿ ಮತ್ತು ಅರಿಸ್ಟೋಟಲ್‌ರಂಥ ಪುರಾತನ ವಿಜ್ಞಾನಿಗಳ ಪ್ರಕಾರ ಈ ಪ್ರಪಂಚ ಭೂಕೇಂದ್ರಿತವಾಗಿತ್ತು. ಇದರ ಅನುರಣನೆಗಳನ್ನು ಅಂದಿನ ಕಲೆ ಮತ್ತು ತತ್ವಜ್ಞಾನದಲ್ಲಿ ಕಾಣಬಹುದಿತ್ತು. ನಂತರ ಬಂದ ಕೋಪರ್ನಿಕಸ್‌ ಮತ್ತು ಕೆಪ್ಲರ್‌ ಪ್ರಪಂಚವನ್ನು ಸೂರ್ಯಕೇಂದ್ರಿತ ಎಂದು ಸಾರಿ ಒಂದು ಪ್ಯಾರಡೈಮ್‌ ಪಲ್ಲಟವನ್ನು (paradigm shift) ತಂದರು. ಈಗ್ಗೆ ಎರಡು ಶತಮಾನಗಳ ಮುಂಚಿನವರೆಗೂ ether ಅಥವಾ ಈಥರನ್ನು ಒಂದು ವೈಜ್ಞಾನಿಕ ಪರಿಕಲ್ಪನೆಯಾಗಿ ಗಣಿಸಲಾಗಿತ್ತು. ಅದರ ತಳಹದಿಯಲ್ಲಿ ತಂತ್ರಜ್ಞಾನಗಳನ್ನು,ಸಿದ್ಧಾಂತಗಳನ್ನು ರೂಪಿಸಲಾಗುತ್ತಿತ್ತು. ಆದರೆ ಈವತ್ತು ಅದನ್ನು ವೈಜ್ಞಾನಿಕ ಎನ್ನಲು ಯಾರೂ ಮುಂದೆ ಬರಲಾರರು. ಕುನ್‌ ಈ ವಿಮರ್ಶೆಗಳನ್ನೆಲ್ಲಾ ನಡೆಸಿದ್ದು ಯೂರೋಕೇಂದ್ರಿತ ಲೋಕನೋಟದ ಒಳಗಡೆ ನಿಂತುಕೊಂಡೆ ಆಗಿತ್ತು ಎಂಬುದನ್ನು ಗಮನಿಸಲೇಬೇಕು. ಆಧುನಿಕ ವಿಜ್ಞಾನವನ್ನು ಸಂಪೂರ್ಣವಾಗಿ ಸ್ವೀಕರಿಸಿಕೊಂಡು ಕೂನ್ ಮಾಡಿದ ಅವಲೋಕನದ ಪ್ರಕಾರ ಕೂಡಾ ವಿಜ್ಞಾನ ಸಾರ್ವಲೌಕಿಕ ಮತ್ತು ಸಾರ್ವಕಾಲಿಕವಾಗಿದೆ ಎಂಬ ದೃಷಿಕೋನ ಹೊರಹೊಮ್ಮುತ್ತಿಲ್ಲ . ಮಾತ್ರವಲ್ಲ, ಅದರೊಳಗೆ ನಡೆಯುತ್ತಿರುವ ಮೂಲಭೂತ ಪಲ್ಲಟಗಳ ಕಡೆಗೆ ಕೂಡಾ ಅವು ಬೊಟ್ಟು ಮಾಡಿದೆ. ವಿಜ್ಞಾನದ ಎಲ್ಲಾ ಪ್ರಯೋಗಗಳು ಮತ್ತು ವೀಕ್ಷಣೆಗಳು ಪ್ರಚಲಿತವಾದ ಒಂದು ಥಿಯರಿಗೆ ಅನುಗುಣವಾಗಿ ಬೆಳೆಸಲಾಗುತ್ತಿದ್ದು ವಸ್ತುನಿಷ್ಠ ನೋಟ ಅವುಗಳಿಗೆ ಇರುವುದಿಲ್ಲ. ವಿಜ್ಞಾನಿಯ ಪೂರ್ವಗ್ರಹ, ಪೂರ್ವಾನುಭವ ಎಲ್ಲವೂ ವೀಕ್ಷಣೆಯ ರಿಸಲ್ಟ್ ನಲ್ಲಿ ಅದರದ್ದೇ ಆದ ಪ್ರಭಾವ ಬೀರುತ್ತದೆ. ಹೊಸ ಥಿಯರಿಯ ನಿರ್ಮಾಣ ಪ್ರಕ್ರಿಯೆಯಲ್ಲೂ ಈ ಕಪ್ಪು ರಂಧ್ರಗಳನ್ನು ಕಾಣಬಹುದು. ಆದುದರಿಂದಲೇ ವಿಜ್ಞಾನ ವ್ಯಕ್ತಿನಿಷ್ಠ ಎನ್ನುವುದೇ ಸೂಕ್ತ ಎಂದು ಕೂನ್ ರೊಂದಿಗೆ ದನಿಗೂಡಿಸಿದ್ದಾರೆ ಫೆಯರಾಬಾಂಡ್.

ಟ್ರೂತ್ ಹೇಗೆ ಕಂಡುಹಿಡಿಯಬಹುದು ಎಂಬುದಾಗಿದೆ ಮೂಲಭೂತ ಪ್ರಶ್ನೆ. ಆದರೆ, ವಿಜ್ಞಾನಕ್ಕೆ ಸತ್ಯ ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಸಾಕ್ಷಾತ್‌ ವಿಜ್ಞಾನಿಗಳೆ ಹೇಳುತ್ತಿದ್ದಾರೆ. ವಿಜ್ಞಾನಕ್ಕೆ ಟ್ರೂತ್‌ ವ್ಯಾಲ್ಯೂ ಇಲ್ಲ ಎಂದು ಅವರು ವಿವರಿಸುತ್ತಾರೆ. ಒಂದು ಪರಿಕಲ್ಪನೆ ವೈಜ್ಞಾನಿಕ ಎನಿಸಿಕೊಳ್ಳಬೇಕಾದರೆ ಅದಕ್ಕೆ ಫಾಲ್ಸಿಫಯೆಬಿಲಿಟಿ (falsifiability) ಇರಬೇಕು ಎಂದು ಹೇಳಿದ್ದಾರೆ ಕಾರ್ಲ್‌ ಪಾಪರ್‌. ಅಂದರೆ ಆ ಥಿಯರಿ ತಪ್ಪೆಂದು ಸಾಬೀತು ಮಾಡುವ ಸಂಭಾವ್ಯತೆ ಇರಬೇಕು. ಇದೇ ನೆಲೆಗಟ್ಟಿನಲ್ಲಿ ಮಾರ್ಕ್ಸಿಸಂ ಮತ್ತು ಫ್ರಾಯ್ಡಿನ ಸೈಕೋ ಅನಾಲಿಸಿಸ್‌ ವೈಜ್ಞಾನಿಕವಲ್ಲ ಎಂದು ತೀರ್ಪಿತ್ತಿದ್ದಾರೆ ಪಾಪರ್. ಆದರೆ ಒಂದು ಪರಿಕಲ್ಪನೆ ಫಾಲ್ಸಿಫಯೇಬಲ್‌ ಎನಿಸಿಕೊಂಡ ಕಾರಣ ಅದು ಸತ್ಯ ಆಗಲಾರದು ಎನ್ನುವುದು ಇಲ್ಲಿ ಗಮನಾರ್ಹ. ಆದುದರಿಂದಲೇ ವಿಜ್ಞಾನಕ್ಕೆ ಯಾವುದೇ ಥಿಯರಿಗಳನ್ನು ಸಾಬೀತು ಮಾಡಲು ಸಾಧ್ಯವಿಲ್ಲ, ಫಾಲ್ಸಿಫಯೇಬಲ್ ಥಿಯರಿಗಳನ್ನು ಪ್ರಶ್ನಿಸಲು ಮಾತ್ರವೇ ಅದರಿಂದ ಸಾಧ್ಯ. ಪ್ರಾಬ್ಲಂ ಆಫ್ ಇಂಡಕ್ಷನ್ ಒಮ್ಮೆಯೂ ಇತ್ಯರ್ಥಪಡಿಸಲು ಸಾಧ್ಯವಿಲ್ಲವೆಂದೂ ಅದು ಯಾವತ್ತೂ ವೈಜ್ಞಾನಿಕ ವಿಧಾನಕ್ಕೆ ಸವಾಲಾಗಿ ನಿಲ್ಲಲಿದೆಯೆಂದು ಪಾಪರ್ ಸಮರ್ಥಿಸಿದ್ದಾರೆ.

ಅಮೇರಿಕದ ಜೀವವಿಜ್ಞಾನಿ ರಾಬರ್ಟ್ ಶೆಲ್ಡ್ರೇಕ್ ಈ ಅಭಿಪ್ರಾಯಗಳನ್ನು ತನ್ನ ಅನುಭವದ ಆಧಾರದಲ್ಲಿ ಅನುಮೋದಿಸಿರುವುದು ನೋಡಿ,
“ವೈಜ್ಞಾನಿಕ ಅನ್ವೇಷಣೆ ನಡೆಸಿದ ಪ್ರತಿಯೊಬ್ಬನೂ ದೊರೆತ ದತ್ತಾಂಶಗಳು ಖಚಿತವಲ್ಲವೆಂದು ತಿಳಿದಿರುತ್ತಾನೆ. ವ್ಯಕ್ತಿಯ ವ್ಯಾಖ್ಯಾನಗಳು ಅದರ ಫಲಿತಾಂಶಗಳಲ್ಲಿ ಎಷ್ಟು ಪ್ರಭಾವ ಬೀರಿದೆ ಎಂಬುದನ್ನೂ, ರೀತಿವಿಜ್ಞಾನದ ಪರಿಮಿತಿಯನ್ನೂ ಅವನು ಅರಿತು ಬಿಟ್ಟಿರುತ್ತಾನೆ.”

ಒಟ್ಟಾರೆಯಾಗಿ ವಿಜ್ಞಾನ ಉತ್ಪಾದಿಸುವ ಎಲ್ಲಾ ಜ್ಞಾನಗಳು ನೂರು ಶೇಖಡಾ ಖಚಿತವೆಂದು ಕಣ್ಣುಮುಚ್ಚಿ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಮನಗಾಣಬಹುದು. ಅದಾಗ್ಯೂ, ಹಲವಾರು ಸಂಶೋಧನೆಗಳು, ವಿವಿಧ ಆಯಾಮಗಳಿಂದ ನಡೆಸಿ ದಿಟವಾದ ಕೆಲವು ಕಂಡುಹಿಡಿತಗಳು ಖಚಿತತೆಯನ್ನು ನೀಡಬಹುದಾದ ಸಾಧ್ಯತೆಯನ್ನು ಇದ್ಯಾವುದೂ ಅಲ್ಲಗೆಳೆಯುವುದಿಲ್ಲ.

ಆದರೆ, ಧರ್ಮದ ನಂಬಿಕೆ, ಆಚಾರ ವಿಚಾರಗಳು ತ್ರಿಕಾಲಜ್ಞಾನಿಯಿಂದ ದತ್ತವಾದದ್ದು/ಆಗಬೇಕಾದದ್ದು. ಅದು ತಪ್ಪಾಗಲು ಒಂದಿನಿತೂ ಸಾಧ್ಯತೆಗಳಿಲ್ಲ. ಧರ್ಮ ದೇವದತ್ತವಾದದ್ದು ಎಂದು ನಂಬುವವರಿಗೆ ಅದು ನೀಡುವ ಖಚಿತತೆಯನ್ನು ಅಲ್ಲಾಡಿಸಲು ಕೇವಲ ಅನುಮಾನಗಳ ಸಮಾಹಾರವಾದ ವಿಜ್ಞಾನದ ಆವಿಷ್ಕಾರಗಳಿಗೆ ಸಾಧ್ಯ ಆಗುವುದು ಹೇಗೆ?. ವಿಜ್ಞಾನ ಯಾವತ್ತೂ ಒಂದು ತೀರ್ಮಾನವನ್ನು ಕೊಡದು. ಅದರ ಬೆಳವಣಿಗೆಯ ರಹಸ್ಯ ಅಡಗಿರುವುದು ಹಳೆಯ ವಿಜ್ಞಾನವನ್ನು ಪ್ರಶ್ನಿಸುವುದರಲ್ಲಿಯೇ. ಅದು ನಿಂತ ನೀರಲ್ಲ, ಪರಿವರ್ತನೆಗೊಳ್ಳುತ್ತಲೆ ಇರುತ್ತದೆ. ಆದರೆ ದೇವವಚನಗಳು ಬದಲಾಗದು, ಅದು ಯಾವತ್ತೂ ಹಾಗೆಯೇ ಉಳಿಯುತ್ತದೆ. ಆಯಾ ಕಾಲದ ಜನರು ತಮಗೆ ದೊರಕಿದ ಜ್ಞಾನದಂತೆ ದೇವವಚನಗಳಲ್ಲಿನ ಭೌತಿಕ ಸತ್ಯಗಳನ್ನು ಅರ್ಥೈಸಲು/ವ್ಯಾಖ್ಯಾನಿಸಲು ಪ್ರಯತ್ನಿಸಬಹುದು. ಆದರೆ ಅದುವೆ ಅಂತಿಮವಲ್ಲ.

ವೈಜ್ಞಾನಿಕ ಅನ್ವೇಷಣೆಗಳನ್ನು ಮಾಡಲು ಖುರ್ಆನ್ ವಿವಿಧೆಡೆ ಆಹ್ವಾನ ನೀಡಿದೆ. ಪ್ರಪಂಚದ ಕಾರ್ಯನಿರ್ವಹಣೆಯ ರಹಸ್ಯಗಳನ್ನು ಬೇಧಿಸಲು ಬೋಧಿಸಿದೆ. ಆದುದರಿಂದಲೇ ಮುಸಲ್ಮಾನರು ವಿಜ್ಞಾನಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಪ್ರಯತ್ನಿಸಿದ್ದಾರೆ. ವಿಜ್ಞಾನದ ಬೆಳವಣಿಗೆಯಲ್ಲಿ ಮುಸ್ಲಿಮರ ಪಾತ್ರ ಅಭೂತಪೂರ್ವವಾದದ್ದು. ಪೂರ್ವ-ಪಶ್ಚಿಮಗಳ ಸಕಲ ವಿದ್ವಾಂಸರೂ ಅದನ್ನು ಅಂಗೀಕರಿಸಿದ್ದಾರೆ. ವಿಜ್ಞಾನದ ಇತಿಹಾಸಕಾರರ ಪ್ರಕಾರ ಮುಸ್ಲಿಮರಾಗಿದ್ದಾರೆ ವೈಜ್ಞಾನಿಕ ವಿಧಾನವನ್ನು ಬಳಸಿದ ಮೊದಲಿಗರು. ಇಬ್ನುಲ್ ಹೈತಂ ತಮ್ಮ ಬುಕ್ ಆಫ್ ಆಪ್ಟಿಕ್ಸ್ ನಲ್ಲಿ ದಾಖಲಿಸಿದ ಅರಿವುಗಳನ್ನು ಉತ್ಪಾದಿಸಿದ್ದು ಪ್ರಯೋಗಗಳನ್ನು ಮಾಡುವ ಮೂಲಕವಾಗಿತ್ತು. ವೈಜ್ಞಾನಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡವರಲ್ಲಿ ಧಾರ್ಮಿಕ ವಿದ್ವಾಂಸರು ಕೂಡಾ ಯಥೇಚ್ಛವಾಗಿದ್ದರು. ಲ್ಯಾಟಿನ್ ಭಾಷೆಯಲ್ಲಿ ‘ಅವೆರೋಸ್’ ಎಂದು ಕರೆಯಲ್ಪಡುವ ಇಬ್ನು ರುಶ್ದ್ ಎಂಬ ವಿಜ್ಞಾನಿ ಮಾಲಿಕಿ ಕರ್ಮಶಾಸ್ತ್ರಜ್ಞ ಕೂಡಾ ಆಗಿದ್ದರು. ಯುರೋಪಿಯನ್ ನವೋತ್ಥಾನಕ್ಕೆ ನಾಂದಿ ಹಾಡಿದ್ದು ಮುಸ್ಲಿಂ ಸ್ಪೈನ್ ಮಾಡಿದ ಸಾಧನೆಗಳಾಗಿವೆ ಎಂದು ಸಮರ್ಥಿಸಿದ್ದಾರೆ ಥೋಮಸ್ ಅರ್ನಾಲ್ಡ್ ತಮ್ಮ ‘ದ ಪ್ರೀಚಿಂಗ್ ಆಫ್ ಇಸ್ಲಾಂ’ ಕೃತಿಯಲ್ಲಿ:

“ಮುಸ್ಲಿಮ್ ಸ್ಪೈನ್ ಮಧ್ಯಕಾಲದ ಯುರೋಪಿನ ಚರಿತ್ರೆಯಲ್ಲಿ ಸುವರ್ಣ ಪುಟಗಳನ್ನು ಬರೆದಿದೆ. ಸ್ಪೈನಿನ ಪ್ರಾಂತ್ಯಗಳ ಮೂಲಕ ಹಾದು ಹೋಗಿ ಅದು ಇತರ ಯುರೋಪಿಯನ್ ರಾಷ್ಟ್ರಗಳಿಗೂ ಹರಿದಿದೆ. ಅಲ್ಲೆಲ್ಲಾ ನವ ಕಾವ್ಯಾತ್ಮಕತೆ ಮತ್ತು ಹೊಸ ಸಂಸ್ಕೃತಿಗಳು ಜನ್ಮ ತಾಳಿವೆ. ಕ್ರೈಸ್ತ ವಿದ್ವಾಂಸರಿಗೆ ಗ್ರೀಕ್ ತತ್ವಚಿಂತನೆ ದೊರಕಿದ್ದು ಇವರ ಮೂಲಕವಾಗಿತ್ತು. ಸ್ಪೈನಿನ ಪ್ರಚೋದನೆಯಾಗಿದೆ ‘ರಿನೈಸೆನ್ಸ್’ ಗೆ ಕಾರಣೀಭೂತವಾದದ್ದು.”

ಇಪ್ಪತ್ತೊಂದನೆಯ ಶತಮಾನದ ಕೆಲವು ವೈಜ್ಞಾನಿಕ ಆವಿಷ್ಕಾರಗಳು ಇಷ್ಟರವರೆಗೆ ಜತನದಿಂದ ಪಾಲಿಸಿಕೊಂಡು ಬಂದ ವೈಜ್ಞಾನಿಕ ಶಿಸ್ತನ್ನು ಮರು ನಿರ್ಮಾಣ ಮಾಡುವತ್ತ ವಿಜ್ಞಾನಿಗಳನ್ನು ಸಾಗಿಸುತ್ತಿದೆ. ಶತಮಾನಗಳಿಂದೀಚೆಗೆ ವಿಜ್ಞಾನ ಉತ್ತರ ಕಂಡುಕೊಳ್ಳಲು ಶ್ರಮಿಸುತ್ತಿರುವ ‘ಬಿಗ್ ಕ್ವಶ್ಚನ್’ಗಳು ಈಗಲೂ ಸವಾಲಾಗಿಯೇ ಉಳಿದಿದ್ದು ಕೆಲವರನ್ನಾದರೂ ಮರುಚಿಂತನೆಗೆ ಪ್ರೇರೇಪಿಸಿದೆ. ವಿಜ್ಞಾನವನ್ನು ಅರಿವಿನ ದೊಡ್ಡ ಪ್ರಾಧಿಕಾರವಾಗಿ ಉಳಿಸಲು ಬಯಸುವವರು ಮುಖ್ಯವಾಹಿನಿಯನ್ನು ಆಳುತ್ತಿರುವುದರಿಂದ ಇಂತಹ ಬ್ಲೈಂಡ್ ಸ್ಪಾಟ್‍ಗಳು ಚರ್ಚೆಯಾಗುತ್ತಿಲ್ಲ. ಅದಾಗ್ಯೂ ಕೆಲವು ನಿರಂಕುಶಮತಿ ವಿಜ್ಞಾನಿಗಳು ಇದರತ್ತ ಬೊಟ್ಟು ಮಾಡಿದ್ದಾರೆ. ರಾಬರ್ಟ್ ಶೆಲ್ಡ್ರಾಕ್ ಹೇಳುವುದು ನೋಡಿ:

“ವಿಜ್ಞಾನ ಮತ್ತು ತಂತ್ರಜ್ಞಾನ ಅಧಿಕಾರದ ತುತ್ತತುದಿಯಲ್ಲಿ ಕೂತಿರುವ, ಅದರ ದಿಗ್ವಿಜಯ ಪ್ರಶ್ನಾತೀತವಾಗಿ ಮುಂದುವರಿಯುತ್ತಿರುವ ಇಪ್ಪತ್ತೊಂದನೆಯ ಶತಮಾನದ ಎರಡನೆಯ ದಶಕದಲ್ಲಿ ಕೆಲವು ಅನಿರೀಕ್ಷಿತ ಸಮಸ್ಯೆಗಳು ವಿಜ್ಞಾನವನ್ನು ಒಳಗಿನಿಂದ ಕಾಡುತ್ತಿದೆ. ಹಲವಾರು ವಿಜ್ಞಾನಿಗಳು ಈ ಸಮಸ್ಯೆಗಳನ್ನು ಸಾಂಪ್ರದಾಯಿಕ ರೀತಿಯಲ್ಲೆ ಸಂಶೋಧಿಸಿ ಕೊನೆಗೊಂದು ದಿನ ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ, ನನ್ನಂತಹ ಕೆಲವು ಮಂದಿಯ ಪ್ರಕಾರ ಇದು ದೊಡ್ಡದೊಂದು ಬಿಕ್ಕಟ್ಟಿನ ಲಕ್ಷಣಗಳಾಗಿವೆ……….. ವಿಜ್ಞಾನವನ್ನು ಶತಮಾನಗಳಷ್ಟು ಹಳೆಯದಾದ ಪೂರ್ವಗ್ರಹಗಳು ಆಳುತ್ತಿದ್ದು ಅವು ಅದರ ಒಣಸಿದ್ಧಾಂತಗಳನ್ನು ಕಠಿಣಗೊಳಿಸಿದೆ”. (ದ ಸಯನ್ಸ್ ಡಿಲ್ಯೂಷನ್)

ಒಟ್ಟಾರೆಯಾಗಿ ಹೇಳುವುದಾದರೆ ಧರ್ಮ ಮತ್ತು ತತ್ವಗಳ ಕ್ಷೇತ್ರ ಯಾವುದು ವಿಜ್ಞಾನದ ಕ್ಷೇತ್ರ ಯಾವುದು ಎಂಬುದನ್ನು ಸರಿಯಾಗಿ ಅರ್ಥೈಸಿದರೆ ವೈಜ್ಞಾನಿಕ-ಧಾರ್ಮಿಕ ದ್ವಂದ್ವಗಳನ್ನು ಬಗೆಹರಿಸಿಕೊಳ್ಳಬಹುದು. ಅಲ್ಲದಿದ್ದರೆ ಸಮಕಾಲೀನ ಸಾರಸ್ವತ ಲೋಕದಲ್ಲಿ ನಾವಿಂದು ಅನುಭವಿಸುತ್ತಿರುವ ತಲ್ಲಣಗಳು ಹಾಗೆಯೇ ಮುಂದುವರಿಯಬಹುದು. ವೈಜ್ಞಾನಿಕ ಎನಿಸಿಕೊಳ್ಳಲು ವಿಶ್ವಾಸಿಗಳು ತಮ್ಮ ಖಚಿತವಾದ ಅತಿಭೌತಶಾಸ್ತ್ರೀಯ (metaphysical) ನಂಬಿಕೆಗಳನ್ನು ಹೊರಗೆಸೆಯುವ ಮುನ್ನ ಎರಡು ಬಾರಿ ಆಲೋಚಿಸುವುದು ಒಳಿತು.

ಪ್ರೊ: ತಫಸುಲ್‌ ಇಜಾಝ್‌, ನಝೀರ್‌ ಅಬ್ಬಾಸ್

2 Comments

  1. Raising questions against science itself is a smart move. We should let science go on it’s way and Faith, on it’s way.

Leave a Reply to Faiz Cancel reply

*