ಗಂಜ್ ಎ ಸವಾಯಿ ಎನ್ನುವ ಮೊಘಲ್ ಹಡಗಿನ ಕತೆ ಹಿಂದೂ ಮಹಾಸಾಗರ ಮಾರ್ಗದ ಹಜ್ಜ್ ಪವಿತ್ರಯಾತ್ರೆಯ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ ಎನ್ನಬಹುದು. ಕ್ರಿ.ಶ. 1695ರಲ್ಲಿ ಹಜ್ಜ್ ಕರ್ಮಗಳ ಬಳಿಕ ಯಾತ್ರಿಕರು ಹಾಗೂ ಸರಕು-ಸರಂಜಾಮುಗಳನ್ನು ಹೊತ್ತುಕೊಂಡು ಸೂರತ್‌ಗೆ ಹೊರಟ ಗಂಜ್ ಎ ಸವಾಯಿ ಎಂಬ ಹೆಸರಿನ ಹಡಗನ್ನು ಹೆನ್ರಿ ಎವೆರಿ ನೇತೃತ್ವದ ಕಡಲ್ಗಳ್ಳರ ತಂಡ ಹಿಂದೂ ಮಹಾಸಾಗರದಲ್ಲಿ ಅಡ್ಡಗಟ್ಟಿ ಲೂಟಿ ಮಾಡಿತು. ಗಂಜ್ ಎ ಸವಾಯಿ ದುರಂತ ಇತಿಹಾಸದ ಅಧ್ಯಯನಗಳಲ್ಲಿ ಕಡೆಗಣಿಸಲ್ಪಟ್ಟಿರುವ ಕೆಂಪು ಸಮುದ್ರ ಕೇಂದ್ರಿತ ಕಡಲ್ಗಳ್ಳತನದ ಅತ್ಯಂತ ದುರದೃಷ್ಟಕರ ಅಧ್ಯಾಯ ಎನಿಸಿದೆ. ಜತೆಗೆ ದರೋಡೆಕೋರರಿಗೆ ಕೈತುಂಬಾ ಲಾಭ ಸಿಕ್ಕಿದ ದರೋಡೆಯೂ ಹೌದು. ಈ ವಿಷಯದ ಬಗ್ಗೆ ಲಭ್ಯವಿರುವ ಎಲ್ಲಾ ಅಧ್ಯಯನಗಳು ಕಡಲ್ಗಳ್ಳತನದ ಬಗೆಗಿನ ಯುರೋಪಿಯನ್ ಆಕರಗಳ ಮೇಲೆ ಅವಲಂಬಿತವಾಗಿವೆ. ಈ ಬಗ್ಗೆ ಮೊಘಲ್ ಕಪ್ತಾನ ಮುಹಮ್ಮದ್ ಇಬ್ರಾಹಿಂ ತನ್ನ ಹಡಗುಗಳ ದುಸ್ಥಿತಿಯನ್ನು ವಿವರಿಸಿ 1695ರಲ್ಲಿ ಒಂದು ಪತ್ರ ಬರೆದಿದ್ದರು. ಈ ಪತ್ರ ಮೊಘಲ್ ಸಾಮ್ರಾಜ್ಯ ಮತ್ತು ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ಹೊರಹೊಮ್ಮಿದ ಯುರೋಪಿಯನ್ ಕಡಲ್ಗಳ್ಳತನದ ಎರಡನೇ ಅಲೆಯ ನಡುವಿನ ಸಂಘರ್ಷಗಳ ದಾಖಲೆಯಾಗಿ ಪರಿಗಣಿಸಲಾಗಿದೆ. ಮುಹಮ್ಮದ್ ಇಬ್ರಾಹಿಂ ಅವರ ಪತ್ರ ಮತ್ತು ಇತರ ಆಕರಗಳು ಮೊಘಲ್ ಸಾಮ್ರಾಜ್ಯ ಹಾಗೂ ಇಸ್ಲಾಮಿನ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾ ನಡುವಿನ ಸಂಬಂಧವನ್ನು ಬೆಳಕಿಗೆ ತರುತ್ತವೆ. ಜೊತೆಗೆ ಪವಿತ್ರಯಾತ್ರೆ ಮತ್ತು ವ್ಯಾಪಾರಕ್ಕೆ ಅಡಚಣೆ ಒಡ್ಡುತ್ತಿದ್ದ ಯುರೋಪಿಯನ್ ಕಡಲ್ಗಳ್ಳತನವನ್ನು ಬಯಲಿಗೆ ತರುತ್ತವೆ.
ಮೊಘಲ್ ಕಾಲದ ಬಂದರು ನಗರವಾದ ಸೂರತನ್ನು ಕೆಂಪು ಸಮುದ್ರದೊಂದಿಗೆ ಜೋಡಿಸುತ್ತಿದ್ದ ಸಮುದ್ರಮಾರ್ಗ ವ್ಯಾಪಾರಕ್ಕಾಗಿ ಮಾತ್ರವಲ್ಲದೆ ಆ ಹಾದಿಯಲ್ಲಿ ಸಾಗುವ ಜಾಗತಿಕ ಪವಿತ್ರಯಾತ್ರೆಗಾಗಿಯೂ ಪ್ರಾಮುಖ್ಯತೆ ಗಳಿಸಿತ್ತು. ವರ್ಷಕ್ಕೊಮ್ಮೆ ಬರುವ ಹಜ್ಜ್ ಕರ್ಮ ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಮಾಡಲೇಬೇಕಾದ ಪವಿತ್ರಯಾತ್ರೆ. ಈ ಧಾರ್ಮಿಕ ಹಿನ್ನೆಲೆ ಆಧುನಿಕ ಯುಗಾರಂಭ ಕಾಲದ ಮಾನವನ ಈ ಬೃಹತ್ ವಲಸೆಯ ಹಿಂದಿನ ಪ್ರೇರಕ ಶಕ್ತಿ ಕೂಡಾ ಹೌದು.
ಯಾತ್ರಿಕರು ಉತ್ತರ ಆಫ್ರಿಕಾದ ಅಟ್ಲಾಂಟಿಕ್ ಕರಾವಳಿಯಿಂದ ಹಿಂದೂ ಮಹಾಸಾಗರದ ಕರಾವಳಿಯ ಉಷ್ಣವಲಯಕ್ಕೆ ಪ್ರಯಾಣಿಸುತ್ತಿದ್ದರು. ಒಟ್ಟೋಮನ್ ಆಡಳಿತದಲ್ಲಿದ್ದ ಮಕ್ಕಾ ಮತ್ತು ಮದೀನಾಗೆ ಭೇಟಿ ಕೊಡುವುದೆ ಅವರೆಲ್ಲರ ಯಾತ್ರೆಯ ಗುರಿ. ಅತ್ಯಂತ ಅಪಾಯಕಾರಿಯೆನಿಸಿದ ಈ ದಾರಿಯಲ್ಲಿನ ಪವಿತ್ರಯಾತ್ರೆಗಳ ಬಹುತೇಕ ದಾಖಲೆಗಳಲ್ಲಿ ಒಟ್ಟೋಮನ್ ಯಾತ್ರೆಗಳ ಸಮಾಚಾರ ಮಾತ್ರ ಕಂಡು ಬರುತ್ತಿದ್ದು ಮಕ್ಕಾದ ಕಡೆಗೆ ಮೊಘಲರು ನಡೆಸುತ್ತಿದ್ದ ಪ್ರಯಾಣದ ಸಮಾಚಾರ ಬಹಳ ವಿರಳ. ಹಿಂದೂ ಮಹಾಸಾಗರದಲ್ಲಿ ಘಟಿಸಿದ ಗಂಜ್ ಎ ಸವಾಯಿ ದರೋಡೆ ಪ್ರಕರಣ ಇದಕ್ಕೊಂದು ಉದಾಹರಣೆ.
ಗಂಜ್ ಎ ಸವಾಯಿ ದರೋಡೆ
ಕ್ರಿ.ಶ. ಆಗಸ್ಟ್ 1695ರಲ್ಲಿ ಹಜ್ಜ್ ಮುಗಿಸಿ ಸೂರತ್‌ಗೆ ಮರಳುತ್ತಿದ್ದ ಮೊಘಲರ ನೌಕೆ ಗಂಜ್ ಎ ಸವಾಯಿಗಾಗಿ ಕಡಲುಗಳ್ಳರ ಕನಿಷ್ಠ ಮೂರು ಹಡಗುಗಳು ಪಶ್ಚಿಮ ಹಿಂದೂ ಮಹಾಸಾಗರದ ಸೊಕೊಟ್ರಾ ದ್ವೀಪ ಮತ್ತು ಸೂರತ್ ನಡುವೆ ಹೊಂಚು ಹಾಕುತ್ತಿದ್ದವು. ಅವುಗಳ ಪೈಕಿ ಭಾರೀ ಫಿರಂಗಿಗಳನ್ನು ಹೊತ್ತ ಫ್ಯಾನ್ಸಿ ಎಂಬ ಬೃಹತ್ ಹಡಗನ್ನು ಇಂಗ್ಲಿಷ್ ನಾವಿಕ ಹೆನ್ರಿ ಮುನ್ನಡೆಸಿದ್ದ. ಮೊಘಲ್ ನೌಕಾಪಡೆಯ ಎರಡು ದೊಡ್ಡ ಹಡಗುಗಳಾದ ಫತೇಹ್ ಮುಹಮ್ಮದ್ ಮತ್ತು 80-ಫಿರಂಗಿಗಳಿರುವ ಗಂಜ್ ಎ ಸವಾಯಿಗಳನ್ನು ನೋಡಿದ ತಕ್ಷಣ ಹೆನ್ರಿ ಎರಡೂ ಹಡಗುಗಳ ಮೇಲೆ ಗುಂಡು ಹಾರಿಸಿದ. ಹಡಗುಗಳಿಂದ ಲೂಟಿಗೈದ ಎಲ್ಲಾ ಸರಕುಗಳನ್ನು ತನ್ನ ಹಡಗಿಗೆ ವರ್ಗಾಯಿಸಿದ ನಂತರ, ಹೆನ್ರಿ ಎವೆರಿ ದಾಳಿಯ ವಿವರವನ್ನು ತಿಳಿಸಲು ಧ್ವಜವನ್ನು ಹೊತ್ತುಕೊಂಡ ಗಂಜ್ ಎ ಸವಾಯಿಯನ್ನು ಸೂರತ್‌ನತ್ತ ಕಳುಹಿಸಿದ. ಈ ಎರಡು ಹಡಗುಗಳಿಂದ ಹೇರಳ ಸಂಪತ್ತನ್ನು ಆತ ಕೊಳ್ಳೆ ಹೊಡೆದಿದ್ದ.
ಹೆನ್ರಿ ಎವೆರಿಯ ಈ ನೌಕಾ ದಂಡಯಾತ್ರೆಯು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಹಜ್ ಹಡಗುಗಳನ್ನು ಕೇಂದ್ರೀಕರಿಸಿದ ಮೊದಲ ಅಥವಾ ಕೊನೆಯ ದಾಳಿಯಾಗಿರಲಿಲ್ಲ. ಸ್ಥಳೀಯ ಮತ್ತು ವಿದೇಶಿ ಕಡಲ್ಗಳ್ಳತನದ ಸುದೀರ್ಘ ಇತಿಹಾಸವೆ ಹಿಂದೂ ಮಹಾಸಾಗರಕ್ಕಿದೆ. ಈ ಪ್ರದೇಶದಲ್ಲಿ ನಡೆದ ಲೂಟಿಯ ಇತಿಹಾಸವು ಪೋರ್ಚುಗೀಸರ ಹಿಂದೂ ಮಹಾಸಾಗರ ಪ್ರವೇಶ ಹಾಗೂ ಒಟ್ಟೋಮನ್, ಮೊಘಲ್ ಮತ್ತು ಮಮ್ಲೂಕ್ ಪ್ರತಿದಾಳಿಗಳೊಂದಿಗೆ ನಿರಂತರವಾಗಿ ಹೆಣೆದುಕೊಂಡಿದೆ.
ಹಿಂದೂ ಮಹಾಸಾಗರ ಮಾರ್ಗದ ವಾಣಿಜ್ಯ ಇತಿಹಾಸವನ್ನು ಶೋಧಿಸುವಾಗ ಕಡಲ್ಗಳ್ಳತನದ ಕುರುಹುಗಳನ್ನು ಸಾಮಾನ್ಯ ಎಂಬಂತೆ ಕಾಣಬಹುದು. ಹಿಂದೂ ಮಹಾಸಾಗರದಲ್ಲಿ ತಮ್ಮ ಅದೃಷ್ಟವನ್ನು ಹುಡುಕುತ್ತಿದ್ದ ಕಡಲ್ಗಳ್ಳರ ಪಾಲಿಗೆ ಹದಿನೇಳನೇ ಶತಮಾನ ಸುವರ್ಣಯುಗ ಎನಿಸಿತ್ತು. ಅಂದಿನ ಹೆಚ್ಚಿನ ಕಡಲ್ಗಳ್ಳತನದ ಘಟನೆಗಳು ಮಡಗಾಸ್ಕರ್‌ನ ಈಶಾನ್ಯದಲ್ಲಿರುವ ಸೈಂಟ್ ಮೇರೀಸ್ ದ್ವೀಪಗಳನ್ನು ಕೇಂದ್ರೀಕರಿಸಿ ನಡೆಯುತ್ತಿದ್ದವು.
ಹಿಂದೂ ಮಹಾಸಾಗರದ ಮಾನ್ಸೂನ್ ಹವಾಮಾನವು ದೂರದ ವ್ಯಾಪಾರಗಳಿಗೆ ಅನುಕೂಲಕರವಾಗಿತ್ತು. ಆದ್ದರಿಂದ, ಪೋರ್ಚುಗೀಸ್, ಇಂಗ್ಲಿಷ್, ಡಚ್ ಮತ್ತು ಫ್ರೆಂಚ್ ಕಂಪೆನಿಗಳು ಈ ಪ್ರದೇಶಗಳಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದವು. ಈ ಮೂಲಕ ಹಿಂದೂ ಮಹಾಸಾಗರದಲ್ಲಿ ಸರಕು ಮತ್ತು ಸಂಪತ್ತಿನ ಹರಿವು ವೇಗ ಪಡೆಯಿತು. ಅದರ ಜತೆಗೆ ಕಡಲ್ಗಳ್ಳತವೂ ದಿನದಿಂದ ದಿನಕ್ಕೆ ಬೆಳೆಯತೊಡಗಿತು. ಇಂಗ್ಲಿಷ್ ವ್ಯಾಪಾರಿಗಳು ಮತ್ತು ಮೊಘಲ್ ಕಾಲದ ಹಜ್ ಯಾತ್ರಿಕರು ಇದರ ಬಲಿಪಶುಗಳಾಗಿದ್ದರು.
ಕ್ರಿ.ಶ. 1570ರಲ್ಲಿ ಸೂರತ್ ನಗರವನ್ನು ಅಕ್ಬರ್ ವಶಪಡಿಸಿಕೊಂಡರು. ತದನಂತರ ಒಂದೂವರೆ ಶತಮಾನಗಳ ಕಾಲ ಬೃಹತ್ ಮೊಘಲ್ ಸಾಮ್ರಾಜ್ಯದ ಯಾತ್ರಾರ್ಥಿ ಗುಂಪುಗಳು ಹೇರಳವಾಗಿ ಮಕ್ಕಾ ಪ್ರಯಾಣ ಬೆಳೆಸುತ್ತಿದ್ದದ್ದು ಇಲ್ಲಿಂದ. ಸೂರತ್ ವಶಪಡಿಸಿಕೊಂಡಿದ್ದರೂ ಕೆಂಪು ಸಮುದ್ರ ಮತ್ತು ಕ್ಯಾಂಬೆ ಜಲಸಂಧಿಗಳ ನಡುವಿನ ಪೋರ್ಚುಗೀಸ್ ಆಕ್ರಮಿತ ಪ್ರದೇಶಗಳಲ್ಲಿ ಮೊಘಲ್ ಆಡಳಿತವು ದಂಗೆ ಎದುರಿಸಬೇಕಿತ್ತು. ಯಾತ್ರಾರ್ಥಿಗಳ ಮತ್ತು ವ್ಯಾಪಾರಿಗಳ ರಕ್ಷಣೆಗಾಗಿ ಹೆಚ್ಚು ತಡಮಾಡದೆ ಚಕ್ರವರ್ತಿ ಅಕ್ಬರ್ ರಾಜಿಗೆ ಒಪ್ಪಿಕೊಂಡಿದ್ದರು.
ಒಟ್ಟಾರೆ, ಮೊಘಲರ ಹಜ್ಜ್ ಪವಿತ್ರಯಾತ್ರೆಗಳು ಹಿಂದೂ ಮಹಾಸಾಗರದ ಯುರೋಪಿಯನ್ ವ್ಯಾಪಾರ ಶಕ್ತಿಗಳೊಂದಿಗಿನ ಪ್ರೀತಿ- ದ್ವೇಷದ ಸಂಬಂಧಗಳ ಕಥಾನಕಗಳಾಗಿದ್ದವು. ಅಕ್ಬರನ ಜೀವನಚರಿತ್ರೆಕಾರ ಅಬುಲ್ ಫಝಲ್ ತಮ್ಮ ಐನೆ ಅಕ್ಬರಿಯಲ್ಲಿ ಹೀಗೆ ಬರೆಯುತ್ತಾರೆ: ‘ಹಜ್ಜಾಜ್‌ಗಳ ಪ್ರಯಾಣದ ಹಾದಿಯಲ್ಲಿ ಪೋರ್ಚುಗೀಸರು ಅಡಚಣೆಗಳಾಗಿ ಮಾರ್ಪಟ್ಟರು.’ ಮೊಘಲ್ ಸಾಮ್ರಾಜ್ಯ ಹಜ್ಜ್‌ಗಾಗಿ ಎರಡು ಹಡಗುಗಳನ್ನು ನಿರ್ಮಿಸಿತ್ತು. ಅವುಗಳಿಗೆ ಇಲಾಹಿ ಮತ್ತು ಸಲೀಮಿ ಎಂದು ನಾಮಕರಣ ಮಾಡಲಾಗಿತ್ತು ಎಂದು ಖ್ಯಾತ ಇತಿಹಾಸಕಾರ್ತಿ ಶೀರಿನ್ ಮುಸ್ವಿ ವಿವರಿಸುತ್ತಾರೆ.
ಮುಂಗಾರು ಮಾರುತಗಳ ದೆಸೆಯಿಂದ ಹಿಂದೂ ಮಹಾಸಾಗರದಲ್ಲಿ ನಡೆಯುತ್ತಿದ್ದ ಈ ಪವಿತ್ರಯಾತ್ರೆ ಮತ್ತು ವ್ಯಾಪಾರದ ಕಾಲಗಳು ಎಲ್ಲರ ಊಹೆಗೆ ನಿಲುಕುವಂತಿತ್ತು. ಈ ಎಲ್ಲಾ ಸಂದರ್ಭಗಳಲ್ಲಿ ಮಕ್ಕಾದಿಂದ ಹಿಂತಿರುಗುವ ಯಾತ್ರಿಕರ ಜೊತೆಯಲ್ಲಿ ಚಿನ್ನ ಮತ್ತು ಇತರ ಸರಕುಗಳು ಸಹಜವಾಗಿದ್ದವು.
ಈ ಕಾರಣಕ್ಕಾಗಿಯೇ ಹಜ್ ಯಾತ್ರೆಯನ್ನು ವ್ಯಾಪಾರಿಗಳು ಮತ್ತು ಯಾತ್ರಿಕರು ವ್ಯಾಪಾರಕ್ಕೆ ಒಂದು ಅವಕಾಶವಾಗಿ ಕಂಡರು. ಈ ಅವಕಾಶ ಕೆಂಪು ಸಮುದ್ರ ಕೇಂದ್ರಿತವಾಗಿ ನಡೆಯುತ್ತಿದ್ದ ಕಡಲ್ಗಳ್ಳತನದ ಸಾಧ್ಯತೆಯನ್ನು ಸುಲಭಗೊಳಿಸಿತು. ಗಂಜ್ ಎ ಸವಾಯಿಯ ಬಗೆಗಿನ ಅಧ್ಯಯನಗಳು ದಕ್ಷಿಣ ಏಷ್ಯಾ ಮತ್ತು ಇಸ್ಲಾಮಿಕ್ ಪ್ರಪಂಚದ ನಡುವೆ ಹಜ್ಜ್ ನಿಂದ ರೂಪುಗೊಂಡ ವ್ಯಾಪಾರ ಜಾಲಗಳ ಬಗೆಗಿನ ತಿಳುವಳಿಕೆಯ ಕ್ಷಿತಿಜವನ್ನು ವಿಸ್ತರಿಸಲಿದೆ.
ಮೊಘಲರ ಗಂಜ್ ಎ ಸವಾಯಿ ಕಥನ
ಕಫಿ ಖಾನನ ಮುಂತಕಬುಲ್ ಲುಬಾಬ್ ಗ್ರಂಥವು 1722ರ ಗಂಜ್ ಎ ಸವಾಯಿ ಆಕ್ರಮಣದ ಬಗ್ಗೆ ಬೆಳಕು ಚೆಲ್ಲಿದೆ. ಕಫಿ ಖಾನ್ ಔರಂಗಜೇಬನ ಅನಧಿಕೃತ ಇತಿಹಾಸಕಾರ. ಮುಂತಕಬುಲ್ ಲುಬಾಬ್‌ನಲ್ಲಿ ಗಂಜ್ ಎ ಸವಾಯಿ ಇತಿಹಾಸವನ್ನು ವಿವರಿಸಲು ಹಲವು ಪುಟಗಳನ್ನು ಮೀಸಲಿಟ್ಟಿದ್ದಾರೆ ಕಫಿ ಖಾನ್. ಮೊಘಲ್ ಸಾಮ್ರಾಜ್ಯ ಹಜ್ಜ್‌ಗೆ ನೀಡಿದ ಪ್ರಾಮುಖ್ಯತೆಯನ್ನು ಅವರ ಬರಹ ಸಾರಿ ಹೇಳುತ್ತದೆ.
ಕಫಿ ಖಾನರ ಪ್ರಕಾರ ಗಂಜ್ ಎ ಸವಾಯಿ ಸೂರತ್‌ನಿಂದ ಪ್ರಯಾಣಿಸಿದ ಅತಿದೊಡ್ಡ ಹಡಗು. ಪ್ರತೀ ವರ್ಷ ಯಾತ್ರಿಕರೊಂದಿಗೆ ಇದು ಮಕ್ಕಾಗೆ ಹೊರಡುತ್ತಿತ್ತು. ಅರೇಬಿಯಾದ ಮಕ್ಕಾ ಮತ್ತು ಜಿದ್ದಾ ಬಂದರುಗಳಲ್ಲಿ ವ್ಯಾಪಾರ ಮುಗಿಸಿ ಐವತ್ತೆರಡು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯೊಂದಿಗೆ ಗಂಜ್ ಎ ಸವಾಯಿ ಹಿಂದಿರುಗುತ್ತಿತ್ತು.
ಗಂಜ್ ಎ ಸವಾಯಿ ಲೂಟಿಯ ಬಗೆಗಿನ ಮೊಘಲರ ಕಥನವನ್ನು ಮುಂತಕಬುಲ್ ಲುಬಾಬ್ ಹೀಗೆ ವಿವರಿಸಿದೆ: ‘ಸೂರತ್‌ನಿಂದ ಹೊರಟು ಎಂಟು ಅಥವಾ ಒಂಬತ್ತು ದಿನಗಳ ಯಾತ್ರೆಯ ತರುವಾಯ ಒಂದು ಇಂಗ್ಲಿಷ್ ಹಡಗು ಕಾಣಿಸಿಕೊಂಡಿತು. ಕಡಲುಗಳ್ಳರ ಹಡಗು ಎಂದು ಗುರುತಿಸಿದ ತಕ್ಷಣ, ಅದರ ಮೇಲೆ ಗುಂಡಿನ ದಾಳಿ ಪ್ರಾರಂಭಿಸಿದೆವು. ಆದರೆ ದುರದೃಷ್ಟವಶಾತ್ ಹಡಗಿನ ಒಂದು ಫಿರಂಗಿ ಸ್ಫೋಟಗೊಂಡಿತು ಮತ್ತು ಅನೇಕ ಪ್ರಯಾಣಿಕರು ಪ್ರಾಣ ಕಳೆದುಕೊಂಡರು.
ತಕ್ಷಣವೇ ಕಡಲುಗಳ್ಳರ ಹಡಗು ಫ್ಯಾನ್ಸಿ ಪ್ರತಿದಾಳಿಯನ್ನು ಮುಂದುವರೆಸಿತು ಮತ್ತು ಗಂಜ್ ಎ ಸವಾಯಿಯ ಮುಖ್ಯ ಮಾಸ್ಟ್(ಹಡಗಿನ ಕಂಬ) ಅನ್ನು ನಾಶಪಡಿಸಿತು. ಸರಕು ಮತ್ತು ಸಂಪತ್ತನ್ನು ಫ್ಯಾನ್ಸಿ ಹಡಗಿಗೆ ವರ್ಗಾಯಿಸಿದರು. ಒಡವೆಗಳ ಜೊತೆಗೆ ಹಡಗಿನಲ್ಲಿದ್ದ ಪ್ರಯಾಣಿಕರನ್ನು ಕೈದಿಗಳಾಗಿ ಬಂಧಿಸಲಾಯಿತು. ಎಲ್ಲಾ ಮಹಿಳೆಯರನ್ನು ಅತ್ಯಾಚಾರಗೈದರು ಮತ್ತು ಪುರುಷರನ್ನು ತೀವ್ರ ಚಿತ್ರಹಿಂಸೆಗೆ ಒಳಪಡಿಸಿದರು. ಅನೇಕ ಮಹಿಳೆಯರು ತಮ್ಮ ಚಾರಿತ್ರ್ಯ ಕಾಪಾಡಿಕೊಳ್ಳಲು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.
ಸದರಿ ದಾಖಲೆಗಳಲ್ಲಿ ಮುಖ್ಯವಾಗಿ ಗಂಜ್ ಎ ಸವಾಯಿಗೆ ಸಂಬಂಧಿಸಿದ ಘಟನೆಗಳು ಮಾತ್ರ ಲಭ್ಯವಿದ್ದು ಕೆಲವು ದಕ್ಷಿಣ ಏಷ್ಯನ್ ಮೂಲಗಳು ಆಗಿನ ಕಾಲದ ಹಜ್ಜ್ ಹಾಗೂ ಹಡಗು ನಿರ್ಮಾಣದ ಮಾಹಿತಿಯನ್ನು ಕೂಡಾ ಒದಗಿಸುತ್ತವೆ. ಈ ದಾಖಲೆಗಳು ಈ ಘಟನೆಯ ನಂತರ ಹಳಸಿದ ಮೊಘಲ್-ಈಸ್ಟ್ ಇಂಡಿಯಾ ಕಂಪೆನಿ ಸಂಬಂಧಗಳು ಮತ್ತು ಹಜ್ಜ್ ಋತುವಿನಲ್ಲಿ ಪ್ರವರ್ಧಮಾನಕ್ಕೆ ಬಂದ ವ್ಯಾಪಾರ ಸಂಬಂಧಗಳ ಬಗ್ಗೆ ಮಾಹಿತಿ ಒದಗಿಸುತ್ತವೆ. ಕಫಿ ಖಾನನ ದಾಖಲೆಗಳ ಹೊರತಾಗಿ, ಘಟನೆಗೆ ಸಾಕ್ಷಿಯಾದ ಇಂಗ್ಲಿಷ್ ಕಡಲ್ಗಳ್ಳರ ಹೇಳಿಕೆಗಳು ಕೂಡಾ ಚಾರಿತ್ರಿಕ ಆಧಾರಗಳಾಗಿವೆ.
ದರೋಡೆಕೋರರ ತಪ್ಪೊಪ್ಪಿಗೆಗಳು:
ವರ್ಷಗಳ ನಂತರ ಸೆರೆ ಹಿಡಿಯಲ್ಪಟ್ಟಾಗ ಈ ಹಡಗಿನ ಯಾತ್ರಿಕರು ಓಲ್ಡ್ ಬೈಲಿಯಲ್ಲಿ ನೀಡಿದ ಸಾಕ್ಷ್ಯಗಳ ಪ್ರಕಾರ ಈ ಎಲ್ಲಾ ಘಟನೆಗಳು 1694ರ ಮೇ 30ರಂದು ಸ್ಪೇನ್ ಕರಾವಳಿಯಲ್ಲಿ ಆರಂಭವಾಯಿತು. ಚಾರ್ಲ್ಸ್ ದಿ ಸೆಕೆಂಡ್ ಹಡಗಿನಲ್ಲಿದ್ದ ವೇತನರಹಿತ ಕೆಲಸಗಾರರು ಹೆನ್ರಿ ಎವೆರಿ ನೇತೃತ್ವದಲ್ಲಿ ಸಂಘಟಿಸಿ ಬಂಡಾಯದ ಬಾವುಟ ಹಾರಿಸಿದರು. ವಶಪಡಿಸಿಕೊಂಡ ಹಡಗಿಗೆ ಫ್ಯಾನ್ಸಿ ಎಂದು ಮರುನಾಮಕರಣ ಮಾಡಿದರು. ಎವೆರಿಯ ನೇತೃತ್ವದಲ್ಲಿ ನಲ್ವತ್ತು ಫಿರಂಗಿಗಳೊಂದಿಗೆ ಹಡಗು ಯಾತ್ರೆ ಹೊರಟಿತು. ದಕ್ಷಿಣ ಆಫ್ರಿಕಾದ ಕರಾವಳಿಯಲ್ಲಿ ಸಣ್ಣ ಪುಟ್ಟ ಹಡಗುಗಳನ್ನು ಲೂಟಿ ಮಾಡಿದ ನಂತರ, ಅದು ಮಡಗಾಸ್ಕರ್ ಬಳಿಯ ಜೊಹಾನ್ನಾ ದ್ವೀಪ ತಲುಪಿತು. ಈ ದ್ವೀಪ ದಕ್ಷಿಣ ಏಷ್ಯಾ ವ್ಯಾಪಾರ ಮಾರ್ಗದ ಗೋದಾಮು ಎಂದು ಕರೆಯಲಾಗುವ ಸೂರತ್ ಗೆ ಹೋಗುವ ದಾರಿಯಲ್ಲಿದೆ. ಹೆನ್ರಿ ಎವೆರಿ ತನ್ನ ಸ್ವಗತಗಳನ್ನು ಜಗತ್ತಿಗೆ ಘೋಷಿಸಿಕೊಂಡದ್ದು ಇಲ್ಲಿಂದಲೇ.
ಫೆಬ್ರವರಿ 29, 1695ರಂದು, ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಹಸ್ತಾಂತರಿಸಲು ಒಂದು ಪತ್ರವನ್ನು ಅಲ್ಲಿನ ಆಡಳಿತಾಧಿಕಾರಿಗೆ ಬರೆದು ಕೊಟ್ಟು ಎವೆರಿ ತನ್ನ ಸಮುದ್ರಯಾನವನ್ನು ಮುಂದುವರಿಸಿದನು. ಅವನ ಹಡಗಿನಲ್ಲಿ 46 ಬಂದೂಕುಗಳು ಮತ್ತು 150 ಕೆಲಸಗಾರರು ಇದ್ದಾರೆಂದು ಹೇಳಿಕೊಂಡಿದ್ದ ಹೆನ್ರಿ ಇಂಗ್ಲಿಷ್ ಮತ್ತು ಡಚ್ ಹಡಗುಗಳ ಮೇಲೆ ತಾನು ದಾಳಿ ಮಾಡಲಾರೆ, ಅದು ತನ್ನ ಗುರಿಯೂ ಅಲ್ಲ ಎಂದು ವಿವರಿಸಿದ್ದ. ಐರೋಪ್ಯರ ಪ್ರಯಾಣಿಕ ಹಡಗುಗಳನ್ನು ಗುರಿ ಮಾಡಿದರೆ ತನ್ನ ಕಡಲ್ಗಳ್ಳತನಕ್ಕೆ ತೊಂದರೆ ಉಂಟಾಗುತ್ತದೆ ಎಂದು ಆತ ಭಾವಿಸಿದ್ದ. ಹೀಗೆ, ಹೆನ್ರಿ ಎವೆರಿ ಇಂಗ್ಲಿಷ್ ಹಡಗುಗಳನ್ನು ತಾನು ದಾಳಿ ಮಾಡಿದ್ದನ್ನು ಮುಚ್ಚಿಡಲು ಪ್ರಯತ್ನಿಸಿದ್ದ.
ಎವರಿಯ ಪತ್ರವು ಸೂಚಿಸುವಂತೆ, ಅವನ ಮತ್ತು ಇತರ ಕೆಲವರ ದೃಷ್ಟಿಯಲ್ಲಿ ಮುಸ್ಲಿಮ್ ಹಡಗುಗಳ ಮೇಲೆ ದಾಳಿ ಮಾಡುವುದು ಕ್ಷಮಾರ್ಹ ಅಪರಾಧವಾಗಿದೆ ಎಂದು ತಿಳಿಯಬಹುದು. ಸ್ಪೇನ್ ಕರಾವಳಿಯಿಂದ ಕೆಂಪು ಸಮುದ್ರದ ಕಡೆಗೆ ಕಡಲ್ಗಳ್ಳತನ ಉದ್ದೇಶಿಸಿ ತೆರಳಿದ ಹೆನ್ರಿಯ ಪ್ರಯಾಣದ ಹಿಂದೆ ಈ ಅಸಡ್ಡೆಯ ನಿಲುವಿಗೆ ಪಾತ್ರವಿದೆ. ಬ್ರಿಟಿಷ್ ಮತ್ತು ಡಚ್ ಹಡಗುಗಳನ್ನು ಮುಟ್ಟದೆ ಮುಸ್ಲಿಮ್ ಹಡಗುಗಳ ಮೇಲೆ ಮಾತ್ರ ಗಮನ ಹರಿಸಿದರೆ ಯಾವತ್ತಾದರೊಮ್ಮೆ ಕಳ್ಳತನ ನಿಲ್ಲಿಸಿ ಇಂಗ್ಲೆಂಡಿಗೆ ಮರಳುವಾಗ ಶಿಕ್ಷೆಯಲ್ಲಿ ವಿನಾಯಿತಿ ಪಡೆಯಬಹುದು ಎಂದು ಬಗೆದಿದ್ದರು ಹೆನ್ರಿ ಮತ್ತು ಅವನ ಸಂಗಡಿಗರು.
ಜೋಹಾನ್ನಾ ದ್ವೀಪದ ಆಡಳಿತಗಾರನ ಕೈಗೆ ಪತ್ರವನ್ನು ಒಪ್ಪಿಸಿ ಮಡಗಾಸ್ಕರ್‌ನ ಸೇಂಟ್ ಮೇರಿಸ್ ದ್ವೀಪಲ್ಲಿರುವ ತನ್ನ ನೆಲೆಯಿಂದ ಎವೆರಿ ನಿರ್ಗಮಿಸಿದ. ಇಂದಿನ ಸೋಮಾಲಿಲ್ಯಾಂಡ್‌ನಲ್ಲಿರುವ ಮೈಡ್ ನಗರವನ್ನು ಲೂಟಿಮಾಡಿದ ನಂತರ ಕೆಂಪು ಸಮುದ್ರ ತೀರದ ಮೂಲಕ ಹಾದು ಹೋಗುವ ಹಜ್ಜ್ ಯಾತ್ರಿಕ ಹಡಗುಗಳಿಗಾಗಿ ಕಾಯತೊಡಗಿದ. ಫ್ಯಾನ್ಸಿ ಜೊತೆಗೆ ಇತರ ಐದು ಹಡಗುಗಳೊಂದಿಗೆ ಅವರು ಐದು ವಾರಗಳ ಕಾಲ ಹಜ್ಜ್ ಯಾತ್ರಿಕರ ಹಡಗುಗಳಿಗಾಗಿ ಕಾದು ಕುಳಿತಿದ್ದರು. ಸಾಕ್ಷ್ಯಾಧಾರಗಳ ಪ್ರಕಾರ ಅವರು ಮೊದಲು ಗುರುತಿಸಿದ್ದು ಗನ್ಸ್ ವೇ (ಗಂಜ್ ಎ ಸವಾಯಿ)ಯನ್ನು. ಎರಡು ಗಂಟೆಗಳ ಕಾಲ ಮುಂದುವರಿದ ಕದನದ ನಂತರ ಅವರು ಅದನ್ನು ವಶಪಡಿಸಿಕೊಂಡು ಲೂಟಿ ಮಾಡಿ, ಸೂರತ್‌ಗೆ ವಾಪಸ್ ಕಳುಹಿಸಿದ್ದರು. ಎವೆರಿಯ ಸಿಬ್ಬಂದಿ ಮತ್ತು ಸಾಕ್ಷಿಯಾಗಿರುವ ಫಿಲಿಪ್ ಮಿಡಲ್ಟನ್ ಹಲವಾರು ವರ್ಷಗಳ ನಂತರ ಬರೆದ ಪತ್ರವು ಈ ಘಟನೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.
ಗಂಜ್ ಎ ಸವಾಯಿ ಮೇಲಿನ ದಾಳಿ ನಡೆದು ಒಂದು ವರ್ಷ ಕಳೆದ ನಂತರ ವಿಚಾರಣೆಗೂ ಮೊದಲು, ಆಗಸ್ಟ್ 1696ರಲ್ಲಿ ಬರೆದ ಹೇಳಿಕೆಯಲ್ಲಿ ಫಿಲಿಪ್ ಬರೆಯುತ್ತಾರೆ: ‘ಮಕ್ಕಾದಿಂದ ಸೂರತ್‌ಗೆ ಹೊರಟಿದ್ದ ಎರಡು ಶ್ರೀಮಂತ ಹಡಗುಗಳ ಮಾಹಿತಿಯನ್ನು ಪಡೆದ ನಂತರ ನಾವು ಕೆಂಪು ಸಮುದ್ರದಲ್ಲಿ ಆ ಹಡಗಿಗಾಗಿ ಕಾದುಕುಳಿತೆವು. ಹಡಗುಗಳು ಕಾಣಿಸಿಕೊಂಡ ತಕ್ಷಣ ಪ್ರಾರಂಭಿಸಿದ ದಾಳಿ ಎರಡು ಗಂಟೆಗಳ ಕಾಲ ನಡೆಯಿತು. ಹಡಗುಗಳಲ್ಲಿ 1300 ಮತ್ತು 700 ಪ್ರಯಾಣಿಕರಿದ್ದರು.’
ಮುಂದುವರಿದು, ‘ದರೋಡೆಕೋರರು ಪ್ರಯಾಣಿಕರನ್ನು ಮತ್ತು ಹಡಗನ್ನು ಎರಡು ದಿನಗಳ ಕಾಲ ಸಮುದ್ರದಲ್ಲಿ ತಮ್ಮ ಸುಪರ್ದಿಯಲ್ಲಿರಿಸಿಕೊಂಡರು. ಸಂಪತ್ತನ್ನೆಲ್ಲಾ ಲೂಟಿ ಮಾಡಿದರು. ಅವರ ಜತೆ ಮೊಘಲ್ ರಾಜ ಔರಂಗಜೇಬನಿಗೆ ಸೇರಿದ ಅನೇಕ ಅಮೂಲ್ಯವಾದ ಸಂಪತ್ತುಗಳಿದ್ದವು. ಹಡಗಿನಲ್ಲಿದ್ದ ಹಲವು ಮಂದಿ ಪ್ರಾಣ ಕಳೆದುಕೊಂಡರು. ಮಹಿಳೆಯರನ್ನು ಹಡಗಿನಲ್ಲೇ ಅತ್ಯಾಚಾರ ಮಾಡಲಾಯಿತು. ಮುಸ್ಲಿಮ್ ಮಹಿಳೆಯರು ಆಭರಣಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದರು’ ಎಂದು ಫಿಲಿಪ್ ಉಲ್ಲೇಖಿಸುತ್ತಾರೆ. ಈ ಉಲ್ಲೇಖವು ಹಡಗಿನಲ್ಲಿ ಪ್ರಯಾಣಿಸಿದ ಮಹಿಳೆಯರ ಉನ್ನತ ಜಾತಿಯ ಬಗೆಗೂ ಬೆಳಕು ಚೆಲ್ಲುತ್ತದೆ.
ಫಿಲಿಪ್ ಮಿಡಲ್ಟನ್ ಅವರ ಸಾಕ್ಷ್ಯದಿಂದ, ಹಜ್ಜ್ ನಂತರ ಬರುವ ಮೊಘಲ್ ಹಡಗುಗಳಲ್ಲಿನ ಸಂಪತ್ತಿನ ಬಗ್ಗೆ ಕಡಲ್ಗಳ್ಳರು ಮೊದಲೇ ತಿಳಿದಿದ್ದರು ಎಂದು ತಿಳಿಯಬಹುದು. ಏಕೆಂದರೆ, ಹಜ್ಜ್ ಯಾತ್ರೆಯ ನಂತರ ಯಾತ್ರಿಕರು ಮಿನಾದಲ್ಲಿನ ದೊಡ್ಡ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಹಿಂತಿರುಗುತ್ತಾರೆ ಎಂದು ಅವರಿಗೆ ತಿಳಿದಿತ್ತು. ಹಡಗುಗಳಲ್ಲಿನ ಮಾಹಿತಿಗಳನ್ನು ಗುಪ್ತಚರರ ಮೂಲಕವೂ ಕಡಲ್ಗಳ್ಳರಿಗೆ ತಿಳಿಯಬಹುದಾಗಿತ್ತು.
ಔರಂಗಜೇಬರ ಪ್ರತಿಕ್ರಿಯೆ:
ಕ್ರಿ.ಶ. 1695ರಲ್ಲಿ ಮೊಘಲ್ ಸಾಮ್ರಾಟ ಔರಂಗಜೇಬ್ ಸೂರತ್ ಬಂದರನ್ನು ಬ್ರಿಟಿಷರಿಗೆ ನಿಷೇಧಿಸಿ ಆದೇಶ ಹೊರಡಿಸಿದರು. ಆ ಆದೇಶದಲ್ಲಿ ಔರಂಗಜೇಬ್ ಹೀಗೆ ಹೇಳುತ್ತಾರೆ: ‘ಅವರು (ಬ್ರಿಟಿಷರು) ಹಡಗುಗಳನ್ನು ಮತ್ತು ಹೇರಳ ಸಂಪತ್ತನ್ನು ಲೂಟಿ ಮಾಡಿದ್ದರಿಂದ ಅವರ ಮೇಲೆ ವ್ಯಾಪಾರ ನಿಷೇಧ ಹೇರಲಾಗಿದೆ.’ ಹೀಗೆ, ಕಡಲ್ಗಳ್ಳತನವನ್ನು ನಿವಾರಿಸಿ ಹಜ್ಜ್ ಯಾತ್ರಿಕರನ್ನು ರಕ್ಷಿಸುವುದಕ್ಕಾಗಿ ಯುರೋಪಿಯನ್ ರಾಷ್ಟ್ರಗಳ ವಿರುದ್ಧ ಕ್ರಮ ಕೈಗೊಳ್ಳಲು ಔರಂಗಜೇಬ್ ಮೂಲಕ ಮೊಘಲ್ ಆಡಳಿತ ಮುಂದಾಯಿತು.
ಗಂಜ್ ಎ ಸವಾಯಿ ಮೇಲಿನ ದಾಳಿಯೇ ಔರಂಗಜೇಬರ ಕೋಪಕ್ಕೆ ಕಾರಣ ಎಂದು ನಂಬಲಾಗಿದೆ. ಫ್ಯಾನ್ಸಿಯ ಮತ್ತೊಂದು ಸಿಬ್ಬಂದಿ ಜಾನ್ ಡನ್ ಹೇಳಿದಂತೆ ಎರಡು ಗಂಟೆಗಳೊಳಗೆ ಹಡಗನ್ನು ವಶಪಡಿಸಿಕೊಂಡು ಲೂಟಿ ಮಾಡಲಾಗಿತ್ತು. ಅದರ ನಂತರ, ಉಳಿದ ಪ್ರಯಾಣಿಕರನ್ನು ಹಡಗಿನಲ್ಲೇರಿಸಿ ಹಡಗನ್ನು ಸೂರತ್‌ಗೆ ಕಳುಹಿಸಲಾಯಿತು. ಸೂರತ್‌ಗೆ ತಲುಪಿದ ಸಂತ್ರಸ್ತರಿಂದ ಪಡೆದ ಮಾಹಿತಿಗಳು ಮೊಘಲ್ ಆಡಳಿತದ ಉನ್ನತಾಧಿಕಾರ ಕೇಂದ್ರಗಳಿಗೆ ತ್ವರಿತವಾಗಿ ತಲುಪಿದವು. ಹಡಗನ್ನು ಧ್ವಂಸಗೊಳಿಸಿರುವುದು ಮಾತ್ರವಲ್ಲದೆ ಪ್ರಯಾಣಿಕರ ಮೇಲೆ ಕ್ರೂರವಾಗಿ ಅತ್ಯಾಚಾರವೆಸಗಿರುವುದು ವಿಷಯದ ಗಂಭೀರತೆಯನ್ನು ಹೆಚ್ಚಿಸಿತು. ಔರಂಗಜೇಬರು ಹಡಗುಗಳ ಲೂಟಿಯ ಹೊಣೆಗಾರಿಕೆಯನ್ನು ಹೆನ್ರಿ ಎವೆರಿ ನೇತೃತ್ವದ ಇಂಗ್ಲಿಷರ ಮೇಲೆ ಹೊರಿಸಿದರು. ಈ ಕಾರಣಕ್ಕಾಗಿಯೇ ಸೂರತ್ ಬಂದರಿನಲ್ಲಿ ಆಂಗ್ಲರಿಗೆ ನಿಷೇಧ ಹೇರಲಾಯಿತು. ಆದಾಗ್ಯೂ, ಲಭ್ಯವಿರುವ ಯಾವುದೇ ಹೇಳಿಕೆಗಳಲ್ಲಿ ಗಂಜ್ ಎ ಸವಾಯಿ ಮೇಲೆ ದಾಳಿ ಮಾಡಿದ ಹಡಗು ಇಂಗ್ಲಿಷ್ ಧ್ವಜವನ್ನು ಹಾರಿಸಿರುವುದನ್ನು ಉಲ್ಲೇಖಿಸಲಾಗಿಲ್ಲ. ಆಗ ಇಂಗ್ಲಿಷ್ ಪ್ಯೂರಿಟನ್ ಪಾದ್ರಿಯ ಮಗನಾದ ಸ್ಯಾಮ್ಯುಯೆಲ್ ಸೂರತ್‌ನಲ್ಲಿ ಭಾರತೀಯ ಈಸ್ಟ್ ಇಂಡಿಯಾ ಕಂಪೆನಿ ಅಧಿಕಾರಿಯಾಗಿದ್ದರು. ಈ ಘಟನೆಯ ನಂತರ ಆಗಾಗ್ಗೆ ಬಂಧನಗಳು ನಡೆದಿದ್ದು ಇದು ಕಡಲ್ಗಳ್ಳತನ ವಿರೋಧಿ ಮೊಘಲ್ ಪ್ರತಿಕ್ರಿಯೆಯ ಭಾಗವಾಗಿತ್ತು.
ಆನೆಸ್ಲಿಯವರ ದಾಖಲೆಗಳ ಪ್ರಕಾರ: ‘ಹಡಗು ಗಾಯಾಳುಗಳೊಂದಿಗೆ ಸೂರತ್‌ಗೆ ಮರಳಿತು. ಹಡಗಿನಲ್ಲಿದ್ದ ಎಲ್ಲಾ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗಿತ್ತು. ಲೂಟಿಯ ಆರೋಪ ಬ್ರಿಟಿಷ್ ಪ್ರತಿನಿಧಿಗಳ ಮೇಲೆ ಬಿತ್ತು.’ ಈಸ್ಟ್ ಇಂಡಿಯಾ ಕಂಪೆನಿ ಮತ್ತು ಆಂಗ್ಲರ ಮೇಲೆ ದಾಳಿಯ ಹೊಣೆಗಾರಿಕೆಯನ್ನು ಮೊಘಲ್ ಆಡಳಿತ ಹೊರಿಸಿತ್ತು ಎನ್ನುವುದನ್ನು ಆನ್ನೆಸ್ಲಿ ದಾಖಲೆಗಳು ಕೂಡಾ ಹೇಳುತ್ತವೆ. ತಮ್ಮ ದೇಶದ ನಿವಾಸಿಯಾದ ಎವೆರಿಯ ಕಡಲ್ಗಳ್ಳತನವನ್ನು ನಿಯಂತ್ರಿಸುವಲ್ಲಿ ಅವರು ವಿಫಲರಾಗಿದ್ದರು. ಹೀಗೆ ಗಂಜ್ ಎ ಸವಾಯಿ ದರೋಡೆ ಮೊಘಲ್ ಆಡಳಿತದ ಗಮನವನ್ನು ಸೆಳೆದಿತ್ತು. ಈಸ್ಟ್ ಇಂಡಿಯಾ ಕಂಪೆನಿಯ ಮೇಲೆ ಮೊಘಲರ ಹೆಚ್ಚು ಒತ್ತಡ ಇದ್ದುದರಿಂದ ಈಸ್ಟ್ ಇಂಡಿಯಾ ಕಂಪೆನಿ ಫ್ಯಾನ್ಸಿಯ ಕಾರ್ಮಿಕರನ್ನು ಬಲೆ ಹಾಕಿ ಹಿಡಿಯಿತು. ಆದರೆ ಡಕಾಯಿತರ ನಾಯಕ ಎವರಿ ಅದಾಗಲೇ ಅಮೆರಿಕಕ್ಕೆ ಪರಾರಿಯಾಗಿದ್ದ. ಅದಾಗ್ಯೂ, ಮೊಘಲರು ಮತ್ತು ಆಂಗ್ಲರ ನಡುವೆ ಭುಗಿಲೆದ್ದಿದ್ದ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಕಡಲ್ಗಳ್ಳತನದಲ್ಲಿ ಶಾಮೀಲಾಗಿದ್ದ ಆರು ನಾವಿಕರನ್ನು ಆಂಗ್ಲರು ಸೆರೆಹಿಡಿದರು. ಸೆರೆಹಿಡಿಯಲ್ಪಟ್ಟ ಆರು ಮಂದಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಆದರೆ, ಗಂಜ್ ಎ ಸವಾಯಿ ದರೋಡೆ ಬ್ರಿಟಿಷ್ ಕಾನೂನು ಪ್ರಕಾರ ಅಪರಾಧವಾಗಿರಲಿಲ್ಲ; ಚಾರ್ಲ್ಸ್ ದಿ ಸೆಕೆಂಡ್‌ನಲ್ಲಿ ದಂಗೆಯನ್ನು ಪ್ರಚೋದಿಸಿದ್ದಕ್ಕಾಗಿ ಮತ್ತು ಎವರಿಯ ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡಿದ್ದಕಾಗಿ ತಪ್ಪಿತಸ್ಥರೆಂದು ಘೋಷಿಸಲಾಯಿತು.
ಕಪ್ತಾನನ ಟಿಪ್ಪಣಿಗಳು:
ಗಂಜ್ ಎ ಸವಾಯಿ ಹಡಗಿನ ಕ್ಯಾಪ್ಟನ್ ಪರ್ಷಿಯನ್ ಭಾಷೆಯಲ್ಲಿ ಬರೆದ ಪತ್ರ ಬ್ರಿಟಿಷ್ ಲೈಬ್ರರಿಯಲ್ಲಿದೆ. ಆದರೆ ಈ ದಾಖಲೆಯನ್ನು ಇತಿಹಾಸಕಾರರು ನಿರ್ಲಕ್ಷಿಸಿದ್ದಾರೆ. ಈ ಪತ್ರ ಮೊಘಲ್ ಚಕ್ರವರ್ತಿ ಔರಂಗಜೇಬರು ಘಟನೆಗೆ ಹೇಗೆ ಪ್ರತಿಕ್ರಿಯೆ ನೀಡಿದ್ದರೆನ್ನುವುದನ್ನು ಸ್ಪಷ್ಟಪಡಿಸುತ್ತದೆ. ಮೊಘಲ್ ಇತಿಹಾಸಕಾರ ಕಫಿ ಖಾನ್ ಕೂಡಾ ಕಪ್ತಾನನ ಹೆಸರು ಇಬ್ರಾಹಿಂ ಖಾನ್ ಎಂದು ದೃಢಪಡಿಸಿದ್ದಾರೆ. ಹಸ್ತಪ್ರತಿಯಲ್ಲಿ ಹಡಗಿನ ಹೆಸರನ್ನು ಗಂಜ್ ಎ ಸವಾಯಿ ಹಾಗೂ ಜಹಾಝ್ ಎ ಮುಬಾರಕ್ (ಪವಿತ್ರ ಹಡಗು) ಎಂದು ಉಲ್ಲೇಖಿಸಲಾಗಿದೆ. ಮಕ್ಕಾದಿಂದ ಗಂಜ್ ಎ ಸವಾಯಿಯ ನಿರ್ಗಮನವನ್ನು ಉಲ್ಲೇಖಿಸುತ್ತಾ ತನ್ನ ಪತ್ರವನ್ನು ಪ್ರಾರಂಭಿಸುತ್ತಾರೆ ಕ್ಯಾಪ್ಟನ್ ಇಬ್ರಾಹಿಂ. ಸೋಕಾಟ್ರ ದ್ವೀಪದಿಂದ ಇಂಗ್ಲಿಷ್ ಹಡಗುಗಳ ಬಗೆಗಿನ ಮಾಹಿತಿ ಸಿಕ್ಕಿದಾಗ ಬೇರೆ ಮಾರ್ಗದಲ್ಲಿ ಯಾತ್ರೆ ಮುಂದುವರಿಸಿದ್ದೆವೆಂದು ಹೇಳಿದ್ದಾರೆ. ಅವರ ಪ್ರಕಾರ, ಗಂಜ್ ಎ ಸವಾಯಿಯ ಭದ್ರತೆಗಾಗಿ ಇನ್ನೊಂದು ಹಡಗು ಸೂರತ್‌ನ ಮೊಘಲ್ ಬಂದರಿನಿಂದ ಯೆಮೆನ್‌ನ ಮೊಕ್ಕಾ ಬಂದರಿನವರೆಗೆ ಹಿಂಬಾಲಿಸುತ್ತಿತ್ತು. ಮೊಕ್ಕಾದ ಈ ಬಂದರು ಕೆಂಪು ಸಮುದ್ರದ ಮುಖಭಾಗದಲ್ಲಿತ್ತು. ಇದನ್ನು ಇಂದು ಬಾಬುಲ್ ಮಂದಾಬ್ ಎಂದು ಕರೆಯಲಾಗುತ್ತದೆ.
ಹಡಗಿನ ಕ್ಯಾಪ್ಟನ್ ಇಬ್ರಾಹಿಂ ಅವರ ಪ್ರಕಾರ ಈ ಸ್ಥಳ ಸಂಪತ್ತಿನ ಹೆಬ್ಬಾಗಿಲು, ಆದರೆ ಹಡಗುಗಳಿಗೆ ಸ್ಮಶಾನಭೂಮಿ. ಗಂಜ್ ಎ ಸವಾಯಿ ಮತ್ತು ಜೊತೆಗಿದ್ದ ಹಡಗು (ಫತೇಹ್ ಮುಹಮ್ಮದ್) ಪರಸ್ಪರ ಭದ್ರತೆ ನೀಡುತ್ತಾ ಮುಂದುವರಿಯಲು ನಿರ್ಧರಿಸಿದವು. ಅಪಾಯಕಾರಿ ಬಾಬುಲ್ ಮಂದಾಬನ್ನು ಬಹುತೇಕ ದಾಟಿದ ನಂತರ ದರೋಡೆಕೋರ ಹಡಗುಗಳು ಗಂಜ್ ಎ ಸವಾಯಿ ಮತ್ತು ಅದರೊಂದಿಗೆ ಬಂದ ಹಡಗನ್ನು ಸುತ್ತುವರೆದು ದಾಳಿಯನ್ನು ಪ್ರಾರಂಭಿಸಿದವು. ಕ್ಯಾಪ್ಟನ್ ಮುಹಮ್ಮದ್ ಇಬ್ರಾಹಿಂ ಬರೆಯುತ್ತಾರೆ: ‘ ‘ಹಡಗಿನಲ್ಲಿದ್ದ ಹಲವು ಪ್ರಮುಖರು ಸಾವನ್ನಪ್ಪಿದರು. ನೂರ್ ಮುಹಮ್ಮದ್ ಮತ್ತವರ ಅಂಗರಕ್ಷಕರು ಹಾಗೂ ಸೈಯದ್ ಯೂಸುಫ್ ಮತ್ತು ಅವರ ಧರ್ಮಪತ್ನಿ ಮುಹಮ್ಮದ್ ಯೂಸುಫ್ ತುರಾಬಿ ಸೇರಿದಂತೆ 20 ಜನರು ಸಾವನ್ನಪ್ಪಿದರು; ಇಪ್ಪತ್ತು ಜನರು ಗಾಯಗೊಂಡರು. ಈ ಹಿಂಸಾಚಾರಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು, ನಾನೆ ಅವರನ್ನು ಬಗ್ಗುಬಡಿಯುತ್ತೇನೆಂದು ಆಗ್ರಹಿಸುತ್ತಾ ಕ್ಯಾಪ್ಟನ್ ಇಬ್ರಾಹೀಂ ತನ್ನ ಪತ್ರಕ್ಕೆ ವಿರಾಮ ಹಾಕುತ್ತಾರೆ.
ಮುಹಮ್ಮದ್ ಇಬ್ರಾಹಿಂ ನೀಡಿರುವ ದಾಖಲೆಗಳು ಆ ಸಮಯದಲ್ಲಿ ಹಿಂದೂ ಮಹಾಸಾಗರದಲ್ಲಿದ್ದ ಅತಿದೊಡ್ಡ ಹಜ್ಜ್ ಹಡಗಿನ ಸರಕು ಮತ್ತು ಪ್ರಯಾಣಿಕರ ಬಗ್ಗೆ ಮಾಹಿತಿ ನೀಡುತ್ತವೆ. ಹಡಗಿನ ಸಿಬ್ಬಂದಿಗಳ ಹೇಳಿಕೆಗಳ ಪ್ರಕಾರ, ಅಪಾರ ಆಸ್ತಿಯೊಂದಿಗೆ ಹಜ್ಜ್ ಮುಗಿಸಿ ಸೂರತ್‌ಗೆ ಹಿಂತಿರುಗಿದ ಗಂಜ್ ಎ ಸವಾಯಿಯ ಮೇಲೆ ದಾಳಿ ಮಾಡಲು ಅದು ಸೂಕ್ತ ಸಮಯವಾಗಿತ್ತು.
ಹಿಂದೂ ಮಹಾಸಾಗರದ ವಿದ್ವಾಂಸ ಮೈಕೆಲ್ ಪಿಯರ್ಸನ್ ಪ್ರಕಾರ, ಹಜ್ಜ್ ಯಾತ್ರಿಕರಲ್ಲಿ ಹೆಚ್ಚಿನವರು ಬಡವರಾಗಿದ್ದರು. ಬೃಹತ್ ಮೊತ್ತದ ಧನ ಖರ್ಚು ಮಾಡಿ ಹಜ್ಜ್ ಮುಗಿಸಿದ ನಂತರ ವ್ಯಾಪಾರ ಮಾಡಲು ಏನೇನೂ ಉಳಿಯುತ್ತಿರಲಿಲ್ಲ. ಆದ್ದರಿಂದಲೇ, ಅಂತರ್ ರಾಷ್ಟ್ರೀಯ ವ್ಯಾಪಾರ ಸಂಬಂಧಗಳಲ್ಲಿ ಮಕ್ಕಾ ನಗರಕ್ಕೆ ದೊಡ್ಡ ಪಾತ್ರವೇನಿಲ್ಲ. ಸಾಫಿ ಇಬ್ನ್ ವಾಲಿ ಅಲ್-ಕಝ್ವೀನಿಯ ಪ್ರಯಾಣ ಕಥನವನ್ನು ವಿಶ್ಲೇಷಿಸುತ್ತಾ ಪಿಯರ್ಸನ್ ಇದನ್ನು ಉಲ್ಲೇಖಿಸಿದ್ದಾರೆ. ಸಾಫಿ ಅವರ ವ್ಯಾಪಾರದಲ್ಲಿ ಔರಂಗಜೇಬ್ ಪುತ್ರಿ ಝೈಬುನ್ನಿಸ ಹೂಡಿಕೆ ಮಾಡಿದ್ದರು. ಸಾಫಿ ಮೊಘಲ್ ಪವಿತ್ರಯಾತ್ರಿಕರ ಮಾರ್ಗದರ್ಶಿ(guide) ಕೂಡಾ ಆಗಿದ್ದರು. ಸಾಫಿಯವರ ಗ್ರಂಥ 17ನೇ ಶತಮಾನದ ಕೊನೆಯಲ್ಲಿ ರಚಿತವಾದ ಅತ್ಯಂತ ಸುಂದರವಾದ ಕೃತಿಗಳಲ್ಲೊಂದು. ಹಜ್ಜ್ ಯಾತ್ರೆಗೆ ಬಂದು ವ್ಯಾಪಾರ ಮಾಡುವ ಪ್ರಯಾಣಿಕರ ಬಗ್ಗೆ ಅದರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸಾಫಿ.
ಸಾರಾಂಶ:
ಗಂಜ್ ಎ ಸವಾಯಿ ದಾಳಿಯ ಘಟನೆಗಳ ಸರಣಿಯ ತರುವಾಯ ಮೊಘಲ್ ಆಡಳಿತದ ಅತೀವ ಒತ್ತಡ ಇದ್ದುದರಿಂದ ಹಿಂದೂ ಮಹಾಸಾಗರದಲ್ಲಿ ಸಾಗುವ ಹಜ್ಜ್ ಹಡಗುಗಳನ್ನು ರಕ್ಷಿಸಲು ಯುರೋಪಿಯನ್ ಹಡಗುಗಳು ಮುಂದೆ ಬಂದವು. ಕ್ರಿ.ಶ. 1699ರಲ್ಲಿ, ಈಸ್ಟ್ ಇಂಡಿಯಾ ಕಂಪೆನಿಯು ಹಿಂದೂ ಮಹಾಸಾಗರದಲ್ಲಿನ ಕಡಲ್ಗಳ್ಳತನದ ವಿರುದ್ಧ ಸರ್ಕಾರದ ಬೆಂಬಲವನ್ನು ಕೋರಿ ಪತ್ರವನ್ನು ಬರೆಯಿತು. ಸಮುದ್ರದಲ್ಲಿ ದೌರ್ಜನ್ಯ ನಡೆದರೆ ಅದರ ಹೊಣೆ ನಾವು ಹೊತ್ತುಕೊಳ್ಳಬೇಕಿದ್ದು ಕಡಲ್ಗಳ್ಳತನವನ್ನು ಮಟ್ಟ ಹಾಕಬೇಕಾದ ಅಗತ್ಯ ಇದೆಯೆಂದು ಪತ್ರ ವಿವರಿಸಿತ್ತು.
ರೂಬಿ ಮಲೋನಿ ಅವರು ಹದಿನೇಳನೇ ಶತಮಾನದ ಸೂರತ್‌ನಲ್ಲಿನ ಕಾರ್ಖಾನೆಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಸ್ಥಳೀಯ ಸರಕುಗಳನ್ನು ಬ್ರಿಟಿಷ್ ಹಡಗುಗಳ ವ್ಯೂಹದೊಂದಿಗೆ ಸೇರಿಸಲು ಬೇಡಿದ್ದು ಕಾಣಬಹುದು. ಇದು ಕಡಲ್ಗಳ್ಳತನದಿಂದ ಅವರಿಗೆ ನೀಡಲಾಗಿದ್ದ ರಕ್ಷಣೆಯ ಭಾಗವಾಗಿತ್ತು. ಕ್ರಿ.ಶ 1698ರಲ್ಲಿ ಹೆನ್ರಿ ಎವೆರಿ ಹಡಗಿನಲ್ಲಿದ್ದ ಜಾನ್ ಎಲ್ಸ್ಟನ್ ಎಂಬ ವ್ಯಕ್ತಿಯನ್ನು ಬಂದರು ನಗರವಾದ ನ್ಯೂಜೆರ್ಸಿಯ ಪರ್ತ್‌ನಲ್ಲಿ ಸೆರೆಹಿಡಿಯಲಾಯಿತು. ಅವರ ಹೇಳಿಕೆಗಳು ಫಿಲಿಪ್ ಮಿಡಲ್ಟನ್ ಅವರ ಹೇಳಿಕೆಗಳೊಂದಿಗೆ ತಾಳೆಯಾಗುತ್ತಿವೆ.
ಮೊಘಲ್ ಯುಗದ ಆರಂಭಿಕ ಪವಿತ್ರಯಾತ್ರೆಗಳ ಇತಿಹಾಸದಲ್ಲಿ ಗಂಜ್ ಎ ಸವಾಯಿಯ ಕಥಾನಕ ಗಮನಾರ್ಹವಾಗಿದೆ. ಈ ದಾಖಲೆಗಳು ಹಜ್ಜ್ ಅವಧಿಯಲ್ಲಿ ಪ್ರತಿ ವರ್ಷವೂ ನಡೆಯುತಿದ್ದ ಹಿಂದೂ ಮಹಾಸಾಗರದ ವ್ಯಾಪಾರ ಮತ್ತು ಸರಕು ಸಾಗಣೆಯ ಸ್ಪಷ್ಟ ಚಿತ್ರವನ್ನು ನಮಗೆ ನೀಡುತ್ತದೆ. ಈ ಘಟನೆಗಳ ನಂತರ, ನಿಧಿಯನ್ನು ಹುಡುಕಾಡುವ ಯಾತ್ರೆಗಳು ಮತ್ತು ದರೋಡೆಗಳು ಇಂಗ್ಲಿಷ್ ಸಾಹಿತ್ಯ ಮತ್ತು ನಾಟಕಗಳಲ್ಲೂ ಕಾಣಿಸಿಕೊಂಡವು.
ಮೂಲ: ಟೇಲರ್ ಜೋಸೆಫ್ ಕ್ವಿನ್
ಕನ್ನಡಕ್ಕೆ: ಮುಹಮ್ಮದ್ ಯಾಸೀನ್ ಮಟ್ಟಂ