ಪರ್ಷಿಯನ್ ಕಾವ್ಯ ಸಾಹಿತ್ಯ

ವಿಶ್ವ ಸಂಸ್ಕೃತಿಗೆ ಪರ್ಷಿಯನ್ ಭಾಷೆಯು ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಆಧುನಿಕ ಇರಾನಿನ ಬೆಳವಣಿಗೆಯ ಹಿಂದೆ ಪರ್ಷಿಯನ್ ಭಾಷೆಯ ಪಾತ್ರ ಹಿರಿದು. ಪರ್ಷಿಯನ್ ಮಹಾ ಕವಿಗಳಿಂದ ಪ್ರಭಾವಿತರಾಗದ ಸಾಹಿತಿಗಳು ಬಹಳ ಕಡಿಮೆ. ಪೂರ್ವದ ಹಾಗೂ ಪಶ್ಚಿಮದ ಅನೇಕ ವಿದ್ವಾಂಸರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಫಿರ್ದೌಸಿ, ಅನ್ವರಿ, ಖಾಖಾನಿ, ಹಕೀಂ ಸನಾಈ, ಉಮರ್ ಖಯ್ಯಾಂ, ಶೈಖ್ ಫೈಝಿ, ನಿಝಾಮಿ, ಅಮೀರ್ ಖುಸ್ರು, ಫರೀದುದ್ದೀನ್ ಅತ್ವಾರ್, ಮೌಲಾನ ಜಲಾಲುದ್ದೀನ್ ರೂಮಿ, ಇಮಾಮ್ ಸಅದಿ, ಖಾಜಾ ಹಾಫಿಝ್, ಮೌಲಾನಾ ಜಾಮಿ, ಅಲ್ಲಾಮಾ ಇಕ್ಬಾಲ್ ಮೊದಲಾದವರು ಶ್ರೇಷ್ಠ ಪರ್ಷಿಯನ್ ಕವಿಗಳು. ಈ ಕವಿಗಳು ಕ್ರಿ.ಶ.೯೩೫ರಿಂದ ಹಿಡಿದು ೧೯೩೫ವರೆಗಿನ ವಿವಿಧ ಕಾಲಘಟ್ಟಗಳಲ್ಲಿ ಜೀವಿಸಿದ್ದವರು.
ಪುರಾತನ ಪರ್ಷಿಯದಲ್ಲಿ ಝೊರಾಸ್ಟ್ರೀಯನ್ ಪವಿತ್ರ ಗ್ರಂಥವಾದ ಜೆಂಡ್ ಅವೆಸ್ತ ಬಿಟ್ಟರೆ ಬೇರೆ ಗಮನಾರ್ಹ ಸಾಹಿತ್ಯ ಕೃತಿ ಕಂಡು ಬಂದಿಲ್ಲ. ಪರ್ಷಿಯಾದ ವಿವಿಧ ಭಾಗಗಳಲ್ಲಿ ಅಲೆಮಾರಿ ಕವಿಗಳು ಜೀವಿಸಿದ್ದರೂ ಹೇಳತಕ್ಕ ಸಾಹಿತ್ಯ ಕೃಷಿ ನಡೆದಿಲ್ಲ. ಕ್ರಿ.ಶ.೪೨೦-೪೩೬ರಲ್ಲಿ ಜೀವಿಸಿದ್ದ ನುರಿತ ಬೇಟೆಗಾರನೆಂದು ಹೆಸರು ಪಡೆದಿದ್ದ ರಾಜ ಬಹ್ರಾಮ್ ಗೋರ್ ಪರ್ಷಿಯನ್ ಛಂದಸ್ಸನ್ನು ಪರಿಚಯಿಸಿರುವುದಾಗಿ ಪರ್ಷಿಯನ್ ಸಂಶೋಧಕನೊಬ್ಬ ಹೇಳಿದ್ದಾನೆ. ಮೊತ್ತ ಮೊದಲು ಪರ್ಷಿಯನ್ ಭಾಷೆಯಲ್ಲಿ ಹಾಡು ರಚಿಸಿದವನು ಸಮರ್ ಕಂದ್ ನ ಸೋಕ್ತ್ ಎಂಬ ಪ್ರದೇಶದ ಅಬೂಹಫ್ಸ್ ಎಂಬ ವೈದ್ಯ ಎಂದು ಹೇಳಲಾಗುತ್ತದೆ. ಕ್ರಿ.ಶ. ೫೯೦-೬೨೮ರಲ್ಲಿ ಜೀವಿಸಿದ್ದ ಷೀರೀನ್ ನ ಅರಮನೆಯ ಗೋಡೆಯಲ್ಲಿ ಬರೆದಿದ್ದ ಪದ್ಯ ಮೊತ್ತಮೊದಲ ಪರ್ಷಿಯನ್ ಪದ್ಯ ಎಂದು ಹೇಳುವವರೂ ಇದ್ದಾರೆ. ಅದೇನಿದ್ದರೂ ಮುಸ್ಲಿಮ್ ಪೂರ್ವ ಪರ್ಷಿಯದಲ್ಲಿ ಗಮನಾರ್ಹ ಸಾಹಿತ್ಯ ಸೃಷ್ಟಿಯಾಗಿರಲಿಲ್ಲ ಎಂಬುದು ಚರ್ಚಾರ್ಹವಾಗಿದೆ.
“ಪರ್ಷಿಯನ್ ಭಾಷೆಗೆ ಸಂಬಂಧಿಸಿದಂತೆ ಮುಸ್ಲಿಮ್ ಆಕ್ರಮಣವು ಒಂದು ಅನುಗ್ರಹವಾಗಿತ್ತು” ಎಂದು ಪ್ರೊ. ವೈಸ್ಲಾಲ್ ಹೇಳುತ್ತಾರೆ. ಆ ಯುದ್ಧವೀರರು ಜ್ಞಾನದಾಹಿಗಳಾಗಿದ್ದರು. ಪ್ರವಾದಿಯ ಕಾಲದಿಂದಲೇ ಅರಬಿ ಭಾಷೆ ಪ್ರೋತ್ಸಾಹವನ್ನು ಪಡೆಯುತ್ತಾ ಬಂದಿತು. ಪರಿಣಾಮ ಹಲವು ವಿಧದ ಜ್ಞಾನ ಶಾಖೆಗಳು ಆ ಭಾಷೆಯಲ್ಲಿ ರೂಪು ತಾಳಿದವು. ತನ್ಮೂಲಕ ಆ ಭಾಷೆಯ ಜ್ಞಾನ ಸಂಪತ್ತು ಆ ಭಾಷೆಯೊಂದಿಗೆ ಸಂಪರ್ಕ ಸಾಧಿಸಿದ ಇತರ ಭಾಷೆಗಳ ಮೇಲೂ ಪ್ರಭಾವ ಬೀರಿತು. ಸಾಂಸ್ಕೃತಿಕ ಶ್ರೀಮಂತಿಕೆಯ ಉತ್ಕೃಷ್ಟ ಭಾಷೆಯೊಂದು ಇನ್ನೊಂದು ಭಾಷೆಯೊಂದಿಗೆ ಸಂಗಮ ಸಾಧಿಸುವಾಗ ಕ್ರಾಂತಿಕಾರಕವಾದ ಅನೇಕ ಪರಿವರ್ತನೆಗಳು ಸಂಭವಿಸುತ್ತವೆ. ಅದು ಸಹಜವಾದುದೂ ಕೂಡ. ಹದಿನಾರನೇ ಶತಮಾನದಲ್ಲಿ ಗ್ರೀಕ್ ಭಾಷೆ ಆಂಗ್ಲ ಭಾಷೆಯ ಜೊತೆಗೆ ಬೆರೆತುಕೊಂಡಾಗ ಅಲ್ಲಿ ಅದ್ಭುತಗಳು ಸೃಷ್ಟಿಯಾದವು. ಶೇಕ್ಸ್ಪಿಯರ್, ಮಿಲ್ಟನ್ ಮೊದಲಾದ ಮಹಾನ್ ಸಾಹಿತಿಗಳು ಹುಟ್ಟಿಕೊಂಡರು. ಇದೇ ರೀತಿ ಅರೇಬಿಕ್ ಭಾಷೆಯು ಪರ್ಷಿಯನ್ ಭಾಷೆಯೊಂದಿಗೆ ಸಂಗಮ ಸಾಧಿಸಿದಾಗ ಪರ್ಷಿಯನ್ ಭಾಷೆಯಲ್ಲಿ ಶ್ರೀಮಂತ ಸಾಹಿತ್ಯ ಸೃಷ್ಟಿಯಾಯಿತು. ಹೀಗೆ ವಿಶ್ವ ಸಾಹಿತ್ಯದಲ್ಲಿ ಪರ್ಷಿಯನ್ ಭಾಷೆ ಉನ್ನತ ಸ್ಥಾನಕ್ಕೇರಲು ಅರೇಬಿಕ್ ಭಾಷೆ ಸಹಾಯಕವಾಯಿತು. ನಂತರದ ಕಾಲಘಟ್ಟಗಳಲ್ಲಿ ಅರಬಿ ಹಾಗೂ ಪರ್ಷಿಯನ್ ಭಾಷೆಗಳು ಅವಳಿ ಸಹೋದರಿಯರಂತೆ ವಿಶ್ವ ಸಾಹಿತ್ಯದಲ್ಲಿ ವಿಜೃಂಭಿಸಿದವು.


ಪರ್ಷಿಯಾದ ಮೇಲೆ ಅರಬಿಗಳು ದಿಗ್ವಿಜಯ ಸಾಧಿಸುವುದರೊಂದಿಗೆ ಪರ್ಷಿಯನ್ನರಲ್ಲಿ ಬಹುತೇಕ ಮಂದಿ ಇಸ್ಲಾಮ್ ಸ್ವೀಕರಿಸಿದರು. ಅವರ ಹೃದಯಗಳಲ್ಲಿ ಪವಿತ್ರ ಕುರ್‌ಆನ್ ಬಹಳಷ್ಟು ಪರಿಣಾಮ ಬೀರಿತು. ಕುರ್‌ಆನ್ ಅವರ ಖಾಸಗಿ ಹಾಗೂ ಸಾಮಾಜಿಕ ಜೀವನದಲ್ಲಿ ಪ್ರತಿಬಿಂಬಿಸತೊಡಗಿತು. ಪ್ರತಿಯೊಂದಕ್ಕೂ ಅವರು ಪವಿತ್ರ ಕುರ್‌ಆನಿನ ಆಧಾರದಲ್ಲಿ ತೀರ್ಪು ನೀಡತೊಡಗಿದರು. ಈ ಮೂಲಕ ಅವರು ಉನ್ನತ ಸಂಸ್ಕೃತಿಯೊಂದರ ಭಾಗವಾದರು. ಈ ನಡುವೆ ಪರ್ಷಿಯನ್ ಸಾಹಿತ್ಯ ವೃಕ್ಷವು ಫಲವತ್ತಾಗಿ ಬೆಳೆಯುವುದರೊಂದಿಗೆ ವ್ಯಾಪಕ ಜನಮನ್ನಣೆ ಪಡೆಯಿತು.
ಕೇವಲ ಒಂದು ಶತಮಾನದಲ್ಲಿ ಪಾರ್ಸಿ ವಿಶ್ವದ ಉತ್ಕೃಷ್ಟ ಸಂಸ್ಕೃತಿಯಾಗಿ ಬೆಳೆಯಿತು. ಅಲ್ಲಿ ಉತ್ಕೃಷ್ಟ ಸಾಹಿತ್ಯಗಳು ಒಂದರ ಹಿಂದೆ ಒಂದರಂತೆ ಬೆಳಕು ಕಂಡವು. ಇದರ ಹಿಂದಿರುವ ಪರ್ಷಿಯನ್ ಮಹಾಜ್ಞಾನಿಗಳ ಶ್ರಮ ಪ್ರಶಂಸನೀಯ. ಪರ್ಷಿಯನ್ ಮಹಾಕವಿಗಳು ವಿಶ್ವ ಕಾವ್ಯ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಪರ್ಷಿಯನ್ ಭಾಷೆಯನ್ನು ಜೀವಂತ ಭಾಷೆಯಾಗಿ ರೂಪಿಸಿದ ಕೀರ್ತಿ ಅರೇಬಿಕ್ ಭಾಷೆಗೆ ಸಲ್ಲುತ್ತದೆ. ಸೆಮೆಟಿಕ್ ಭಾಷೆ ಹಾಗೂ ಆರ್ಯನ್ ಭಾಷೆ ಪರಸ್ಪರ ಸಂಧಿಸಿದ ಬಳಿಕ ನಡೆದ ಕ್ರಾಂತಿಯಿದು. ಹಂತಹಂತವಾಗಿ ಹಲವು ಶತಮಾನಗಳ ಕಾಲ ಈ ಕ್ರಾಂತಿ ಮುಂದುವರಿಯಿತು.
ಅಬ್ಬಾಸಿಯ ಕಾಲಘಟ್ಟದಲ್ಲಿ ಪರ್ಷಿಯನ್ನರು ಹಲವು ಪ್ರಮುಖ ಸ್ಥಾನಗಳಲ್ಲಿ ಕಾಣಿಸಿಕೊಂಡರು. ಅವರ ಪರಾಕ್ರಮ ವಿವಿಧ ಕಡೆಗಳಲ್ಲಿ ಕಾಣಿಸಿಕೊಂಡಿತು. ಕೇವಲ ಯುದ್ಧರಂಗದಲ್ಲಿ ಮಾತ್ರವಲ್ಲ; ಸಾಹಿತ್ಯ, ಆಡಳಿತ ಮೊದಲಾದ ಕ್ಷೇತ್ರಗಳಲ್ಲೂ ಅವರು ಮೇಲುಗೈ ಸಾಧಿಸಿದರು. ಈ ಕ್ಷೇತ್ರಗಳಲ್ಲಿ ಅವರು ಅರಬಿಗಳನ್ನೂ ಹಿಂದಿಕ್ಕುವ ಅದ್ಭುತ ಬೆಳವಣಿಗೆಯನ್ನು ಸಾಧಿಸಿರುವುದನ್ನು ಆನಂತರದ ಕಾಲಘಟ್ಟದಲ್ಲಿ ಕಾಣಬಹುದು.
ಅಬ್ಬಾಸೀ ಖಲೀಫರ ಆಡಳಿತ ಶಿಥಿಲಗೊಳ್ಳುತ್ತಿದ್ದಂತೆಯೇ ಅವರ ಜೊತೆಗಿದ್ದ ತುರ್ಕಿ ಯೋಧರು ಬಂಡಾಯ ಎದ್ದರಲ್ಲದೆ, ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತ್ಯೇಕ ರಾಜ್ಯಗಳನ್ನು ಸೃಷ್ಟಿಸಿದರು. ಆದರೂ, ಪರ್ಷಿಯಾದ ಪೂರ್ವ ಭಾಗಗಳು ಬಹಳಷ್ಟು ವರ್ಷ ಖಲೀಫರ ಅಧೀನದಲ್ಲೇ ಇದ್ದವು.
ನಾಡ ದೊರೆಗಳು, ಖಲೀಫರು ಪರ್ಷಿಯನ್ ಭಾಷೆಯ ಬೆಳವಣಿಗೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಪರ್ಷಿಯಾವನ್ನು ಆಳಿರುವ ಮುಸ್ಲಿಮ್ ರಾಜರು ತಮ್ಮ ಸಮಕಾಲೀನರಾದ ಮಹಾಕವಿಗಳನ್ನು ಗೌರವಿಸಿ, ಅವರ ಕೃತಿಗಳಿಗೆ ಸಾಕಷ್ಟು ಪ್ರಚಾರ ನೀಡಿದ್ದಾರೆ. ಈ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಖಲೀಫಾ ಹಾರೂನ್ ರಶೀದ್.

ಮುಸ್ಲಿಮ್ ಪರ್ಷಿಯದ ಮೊದಲ ಕವಿ ಯಾರು? ಎಂಬ ವಿಷಯದಲ್ಲಿ ವಿದ್ವಾಂಸರ ನಡುವೆ ಒಮ್ಮತವಿಲ್ಲ. ಪರ್ಷಿಯನ್ ಕವಿಗಳ ಚರಿತ್ರೆ ಬರೆದಿರುವ ೧೩ನೇ ಶತಮಾನದ ಇತಿಹಾಸ ತಜ್ಞ ಮುಹಮ್ಮದ್ ಔಫಿ ತಮ್ಮ ಲುಬಾಬುಲ್ ಅಲ್ ಬಾಬ್’ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ, ಖಲೀಫಾ ಮಹ್ಮೂರ್‌ರ ದಿಗ್ವಿಜಯವನ್ನು ಘೋಷಿಸಲು ಕವಿ ಅಬ್ಬಾಸ್ ಎಂಬವರು ರಚಿಸಿದ ಕವಿತೆಯೇ ಮುಸ್ಲಿಮ್ ಪರ್ಷಿಯಾದ ಮೊದಲ ಕವಿತೆ. ಆದರೆ, ಇದನ್ನು ಇತರ ಚರಿತ್ರೆಕಾರರು ವಿರೋಧಿಸುತ್ತಾರೆ. ಈ ಕವಿತೆ ನಕಲಿ ಎಂಬುದು ಅವರ ವಾದ. ನಿಝಾಮಿ ಅರುಜಿ ಎಂಬ ವಿದ್ವಾಂಸರು ಚಹರ್ ಮಾಘಲೆಹ್’ ಎಂಬ ತಮ್ಮ ಕೃತಿಯಲ್ಲಿ ಹೇಳುವ ವಿಚಾರ ಗಮನಾರ್ಹವಾಗಿದೆ. ಹಿಜ್‌ರ ೨೬೨(ಕ್ರಿ.ಶ.೮೭೫-೭೬)ರಲ್ಲಿ ಸಫವಿ ವಂಶದ ವಿರುದ್ಧ ಬಂಡಾಯ ಎಬ್ಬಿಸಲು ಅಹ್ಮದ್ ಎಂಬ ಕವಿ ಕವಿತೆ ಬರೆದನು. ಇದುವೇ ಮುಸ್ಲಿಮ್ ಪರ್ಷಿಯಾದ ಮೊದಲ ಕವಿತೆ ಎಂದು ನಿಝಾಮಿ ಅರುಜಿ ಪ್ರತಿಪಾದಿಸುತ್ತಾರೆ. ಸಫವಿ ರಾಜ ವಂಶಸ್ಥರ ಕಾಲಘಟ್ಟ ಕ್ರಿಸ್ತ ಶಕ ೮೬೭-೯೦೩ರವರೆಗೆ. ಇವರ ಕಾಲಘಟ್ಟದಲ್ಲಿ ಪರ್ಷಿಯಾದ ಇತರ ಭಾಗಗಳನ್ನು ಸಮನ್ ವಂಶದ ರಾಜರು, ಝಿಯಾರಿಗಳು, ಬುವೈಹಿಗಳು ಆಳುತ್ತಿದ್ದರು. ಈ ವಂಶದ ರಾಜರುಗಳಲ್ಲಿ ಅನೇಕರು ಕವಿಗಳಾಗಿದ್ದರು. ಇವರು ತಮ್ಮ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳಲ್ಲಿ ಪರ್ಷಿಯನ್ ಸಾಹಿತ್ಯದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಪರ್ಷಿಯಾದ ಮುಸ್ಲಿಮ್ ಸಾಹಿತ್ಯದ ಬೆಳವಣಿಗೆಯು ಸಾವಿರದ ನೂರು ವರ್ಷ ಹಳೆಯದು. ಕಾಲ ಪ್ರವಾಹವು ಇಷ್ಟು ವರ್ಷಗಳನ್ನು ದಾಟಿ ಬಂದಿದ್ದರೂ ಪರ್ಷಿಯನ್ ಭಾಷೆಯ ಆದಿಮ ಸಾಂಸ್ಕೃತಿಕ ಗುಣಲಕ್ಷಣಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪರ್ಷಿಯನ್ ಭಾಷೆಯ ಗಾಂಭೀರ್ಯ ಹಾಗೂ ಮೂಲಭೂತ ಸ್ವಭಾವಗಳು ಈಗಲೂ ಬದಲಾಗದೆ ಉಳಿದಿವೆ. ಹಳೆಯ ಕೃತಿಗಳನ್ನು ಓದುವಾಗಲೂ ಹೊಸತನ' ದ ಅನುಭವವಾಗುತ್ತದೆ. ಇದು ಪರ್ಷಿಯನ್ ಭಾಷೆಯ ವಿಶಿಷ್ಟ ಗುಣ. ಪರ್ಷಿಯನ್ ಭಾಷೆಯ ಮೊದಲ ಕಾವ್ಯಗಳು ಹಾಡು ಹಾಗೂ ರುಬಾಈ(ಚತುಷ್ಪದಿ) ಶೈಲಿಯಲ್ಲಿದೆ. ಆ ನಂತರ ಮಸ್ನವಿ(ದ್ವಿಪದಿ) ಕಾಣಿಸಿಕೊಂಡಿತು. ಇದು ಪ್ರಾಸಬದ್ಧವಾದ ಶೈಲಿ. ಚರಿತ್ರೆ ಹಾಗೂ ಕಥೆಗಳನ್ನು ಹೇಳಲು ಈ ಶೈಲಿ ಅನುಕೂಲಕರವಾಗಿದೆ. ಇದರ ಕರ್ತೃ ದಖೀಖ್. ಮಸ್ನವಿಯ ಬಳಿಕ ಖಸ್ವೀದ, ಗಝಲ್, ಗೀತೆ ಮೊದಲಾದ ಕಾವ್ಯ ಶೈಲಿಗಳು ರೂಪು ಪಡೆದವು. ಇವುಗಳು ಪರ್ಷಿಯನ್ ಕಾವ್ಯ ಸಾಹಿತ್ಯದ ಮುಖ್ಯ ಛಂದಸ್ಸುಗಳು. ಕೆಲವು ವಿದ್ವಾಂಸರ ಪ್ರಕಾರ, ಪರ್ಷಿಯನ್ ಭಾಷೆಯಲ್ಲಿ ಮೊದಲು ಕಾವ್ಯ ರಚನೆ ಮಾಡಿದವರು ತ್ವಾಹಿರಿ ವಂಶದ ಆಳ್ವಿಕೆ(ಕ್ರಿ.ಶ.೮೪೧ಕ್ಕೂ ಮೊದಲು)ಯ ಕಾಲದಲ್ಲಿ ಜೀವಿಸಿದ್ದ ಹನ್ಸಾ ಎಂಬ ಕವಿ. ಹನ್ಸಾರ ಬಳಿಕ ವರ್ರಾಖ್, ಫಿರೋಝ್ ಮಶ್‌ರಿಖಿ ಎಂಬೀ ಇಬ್ಬರು ಕವಿಗಳು ಕಾವ್ಯ ರಚನೆಯಲ್ಲಿ ತೊಡಗಿದ್ದರು. ಸಮಾನ್ ವಂಶದ ರಾಜರು ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ಆಶ್ರಯದಲ್ಲಿ ಅನೇಕ ಕವಿಗಳಿದ್ದರು. ಅಬೂಅಬ್ದುಲ್ಲಾ ಫರಲಾಹಿ, ಶಹೀದ್ ಬಲ್ಖಿ, ಅಬೂಶುಕೂರ್ ಬಲ್ಖಿ, ಅಬುಲ್ ಅಬ್ಬಾಸ್ ಬುಖಾರಿ, ಅಬುಲ್ ಮುಸ್ತಫಾ ನಿಷಾಪೂರಿ, ಅಬೂ ಶುಹೈಬ್ ಷಾ ಅಲಿಫ್, ರುದಾಖಿ, ದಖೀಖಿ, ಅಬ್ದುಲ್ ಫತಹ್‌ಬುಸ್ತಿ, ಉಮರಾಹ್ ಮರ್ವಾಸಿ, ಅಬುಲ್ ಹಸನ್ ಕಿಸೈ ಮೊದಲಾದವರು. ರುದಾಖಿ ಅಂಧರಾಗಿದ್ದರು. ಜೀವಿಸಿರುವಾಗಲೇ ಪ್ರಸಿದ್ಧಿಯ ತುತ್ತತುದಿಯೇರಿದ್ದ ಭಾಗ್ಯವಂತ ಕವಿ. ಇವರು ಕಥನ ಕವಿತೆ ಬರೆಯುವುದರಲ್ಲಿ ನಿಸ್ಸೀಮರು. ಪಂಚತಂತ್ರ ಕಥೆಗಳನ್ನು ಪರ್ಷಿಯನ್ ಭಾಷೆಯ ಕಾವ್ಯಕ್ಕೆ ಒಗ್ಗಿಸಿ ಕಥನ ಕಾವ್ಯ ಬರೆಯುತ್ತಿದ್ದರು.ಕಲೀಲಾವದಿಂನಾ’ ಎಂಬ ಹೆಸರಿನಲ್ಲಿ ಪಂಚತಂತ್ರ ಕಥೆಗಳ ಪರ್ಷಿಯನ್ ಕವಿತೆಗಳನ್ನು ರಚಿಸಿ, ಸೈ ಎನಿಸಿಕೊಂಡಿದ್ದರು. ಒಂದು ರೀತಿಯ ವೇಗದ ಹಾಗೂ ರಮ್ಯ ಶೈಲಿ ಇವರದ್ದಾಗಿತ್ತು. ಉಚಿತವೆನಿಸಿದ ಕಡೆಗಳಲ್ಲಿ ಅರಬಿ ಪದಗಳನ್ನು ಬಳಸಲು ರುದಾಖಿ ಹಿಂಜರಿಯಲಿಲ್ಲ. ಇವರು ಶೋಕ, ಹಾಸ್ಯ, ಸ್ತುತಿಗೀತೆಗಳನ್ನು ಬರೆದು ಪ್ರಸಿದ್ಧರಾಗಿದ್ದರು.
ರುದಾಖಿಯಂತೆಯೇ ದಾಖಿಖಿ ಕೂಡ ಪ್ರಸಿದ್ಧ ಕವಿಯೇ. ಸಾಮಾನೀ ರಾಜ ನೂಹ್ ಇಬ್ನ್ ಮನ್ಸೂರ್ ಇವರನ್ನು ಗೌರವಿಸಿ, ಅರಮನೆಯಲ್ಲಿ ಹುದ್ದೆಯನ್ನು ನೀಡಿದ್ದರು. ಪ್ರೇಮ, ಮದ್ಯ ಮೊದಲಾದ ವಿಷಯಗಳಲ್ಲಿ ಇವರು ಹಾಡು, ರುಬಾಇಗಳನ್ನು ರಚಿಸಿದ್ದಾರೆ. ಪ್ರಕೃತಿ ವರ್ಣನೆಯಲ್ಲಿ ಇವರದ್ದು ಅಸಾಧಾರಣ ಪ್ರತಿಭೆ. ಕ್ರಿ.ಶ. ೯೭೭ರಲ್ಲಿ ಮರಣ ಹೊಂದಿದರು.
ಒಂಬತ್ತನೇ ಶತಮಾನದ ಕೊನೆಯಲ್ಲಿ ಜೀವಿಸಿದ್ದ ರಾಬಿಅಃ ಪರ್ವಾರಿ ಎಂಬ ಕವಯತ್ರಿ ಪರ್ಷಿಯನ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ರಾಬಿಅಃ ಆ ಕಾಲದ ಪರಮ ಸುಂದರಿಯಾಗಿದ್ದರು. ಜೊತೆಗೆ ಪಾಂಡಿತ್ಯದಲ್ಲೂ ಮೇಲುಗೈ ಸಾಧಿಸಿದ್ದರು. ತನ್ನ ಸೇವಕ ಯಖ್‌ದಾಸ್‌ನೊಂದಿಗೆ ಅವರಿಗೆ ಪ್ರೇಮಾಂಕುರವಾಯಿತು. ಯಖ್‌ದಾಸ್ ತುರ್ಕಿಯ ಸುಂದರ ಯುವಕ. ಆದರೆ, ರಾಬಿಅಃರ ಬಂಧುಗಳಿಗೆ ಈ ಪ್ರೇಮ ಸಂಬಂಧ ಇಷ್ಟವಾಗಲಿಲ್ಲ. ಇಬ್ಬರನ್ನೂ ಬೇರ್ಪಡಿಸಿದರು. ರಾಬಿಅಃ ತಮ್ಮ ವಿರಹ ದುಃಖವನ್ನು ಅಕ್ಷರ ರೂಪಕ್ಕಿಳಿಸಿದರು. ಆ ಅಕ್ಷರಗಳು ಅತಿ ಸುಂದರ ಕವಿತೆಗಳಾಗಿ ರೂಪು ತಾಳಿದವು. ರಮ್ಯ ಶೈಲಿಯ ರಾಬಿಅಃರ ಕವಿತೆಗಳು ಭಾವ ತೀವ್ರತೆಯ ಕಾರಣದಿಂದ ಗಮನ ಸೆಳೆಯುತ್ತವೆ. ಈ ಕವಿತೆಗಳು ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿ ಅಂದಿನ ಸಮಾಜವು ಅವರಿಗೆ ಗಲ್ಲು ಶಿಕ್ಷೆ ನೀಡಿತು. ಆದರೆ, ಅವರ ಕವಿತೆಗಳಲ್ಲಿನ ದಿವ್ಯ ಪ್ರೇಮದ ಅನನ್ಯ ಭಾವಗಳನ್ನು ಆ ಜನರು ಗಮನಿಸಲಿಲ್ಲ. ಕಣ್ಣೋಟಕ್ಕೆ ತೃಪ್ತಿಗೊಳ್ಳದ ಆತ್ಮ, ದಿವ್ಯ ಪ್ರೇಮಕ್ಕೆ ತುಡಿಯುವ ಅನುಭೂತಿ ರಾಬಿಅಃರ ಕವಿತೆಗಳಿಗೆ ಜೀವ ನೀಡಿತು. ದೈವಿಕ ಪ್ರೇಮದ ತಹತಹವೇ ಸೂಫಿ ಕವಿತೆಗಳ ಮೂಲ ಎಂಬುದರಲ್ಲಿ ಸಂಶಯವಿಲ್ಲ. ಪರ್ಷಿಯನ್ ಸೂಫಿ ಕವಿತೆಗಳ ಆರಂಭವೇ ರಾಬಿಅಃ ಪರ್ವಾರಿಯ ದಿವ್ಯ ಪ್ರೇಮದ ಸಾಲುಗಳ ಮೂಲಕ ಆಯಿತು ಎಂದರೆ ಉತ್ಪ್ರೇಕ್ಷೆ ಎನಿಸದು.

ರಾಬಿಅಃರ ಕಾಲಘಟ್ಟದಲ್ಲಿ ತಬರಿಸ್ತಾನ್ ಆಳಿದ ಬುವೈಹಿ, ಝಿಯಾರಿ ವಂಶದ ರಾಜರ ಆಶ್ರಯದಲ್ಲಿ ಅನೇಕ ಕವಿಗಳಿದ್ದರು. ಮನ್ಸೂರ್ ಮಂತಿಖಿ, ರಾಝಿ ಸರಕ್ಷಿ, ಅಬುಲ್ ಖಾಸಿಂ ಝಿಯಾದ್ ಖುರ್‌ಕಾನಿ ಮೊದಲಾದವರು. ಕ್ರಿಸ್ತ ಶಕ ೯೬೧-೯೭೫ರಲ್ಲಿ ಜೀವಿಸಿದ್ದ ಬಲಾಮಿ ಎಂಬ ಕವಿ ಸಾಮಾನಿ ರಾಜವಂಶದ ಮೊದಲ ರಾಜನಾದ ಮನ್ಸೂರ್‌ರ ಮಂತ್ರಿಯಾಗಿದ್ದರು. ಇವರನ್ನು ಪರ್ಷಿಯನ್ ಗದ್ಯ ಸಾಹಿತ್ಯದ ಪಿತಾಮಹರೆಂದು ಗುರುತಿಸಲಾಗುತ್ತದೆ. ತ್ವಬರಿ ಎಂಬ ಅರಬಿ ವಿದ್ವಾಂಸನ ಕೃತಿಗಳನ್ನು ಇವರು ಪರ್ಷಿಯನ್ ಭಾಷೆಗೆ ಭಾಷಾಂತರಿಸಿದ್ದರು.

ಗಝ್‌ನವಿಯ ಕೊಡುಗೆ:
ಕ್ರಿ.ಶ.೯೯೮ರಲ್ಲಿ ಸುಲ್ತಾನ್ ಮಹ್ಮೂದ್ ಗಝ್‌ನವಿಯ ಆಡಳಿತ ಆರಂಭಗೊಂಡಿತು. ತ್ವಬರಿಸ್ತಾನ್, ಶೀಸ್ತಾನ್, ಟ್ರಾನ್‌ಸ್ಸೋಕ್‌ಸಿಯಾನಾ, ಖುರಾಸಾನ್, ಅಫ್ಘಾನಿಸ್ತಾನ್, ಕಾಶ್ಮೀರ್, ಪಂಜಾಬ್, ಉತ್ತರ ಭಾರತದ ಹಲವು ಭಾಗಗಳು ಮೊದಲಾದವು ಮಹ್ಮೂದ್ ಗಝ್‌ನವಿಯ ಸಾಮ್ರಾಜ್ಯಕ್ಕೊಳಪಟ್ಟಿತ್ತು. ಪರ್ಷಿಯನ್ ಭಾಷೆಯ ಬೆಳವಣಿಗೆಗೆ ಮಹ್ಮೂದ್ ಗಝ್‌ನವಿ ನೀಡಿದ ಕೊಡುಗೆ, ಪ್ರೋತ್ಸಾಹ ಅಪಾರವಾದುದು. ಅನ್ಸಾರಿ, ಫಾರೂಖಿ, ಆಝಾದಿ, ಅಸ್‌ಜಾದಿ, ಗಾಝಾನಿ, ಮನುಷಹ್‌ರಿ ಮೊದಲಾದ ಮಹಾಕವಿಗಳು ಮಹ್ಮೂದ್ ಗಝ್‌ನವಿಯ ಸಹಾಯ ಪಡೆದಿದ್ದರು. ಪರ್ಷಿಯನ್ ಸಾಹಿತ್ಯದ ಪ್ರಥಮ ಮಹಾಕಾವ್ಯ ರಚಿಸಿರುವ ಫಿರ್ದೌಸಿ ಮಹ್ಮೂದ್ ಗಝ್‌ನವಿಯ ಸಮಕಾಲೀನರು.
ಕ್ರಿ.ಶ. ೯೬೭-೧೦೪೯ರಲ್ಲಿ ಜೀವಿಸಿದ್ದ ಅಬೂ ಸೈಯದ್ ಇಬ್‌ನು ಅಬುಲ್ ಖೈರ್ ಪರ್ಷಿಯನ್ ಭಾಷೆಯಲ್ಲಿ ಆಧ್ಯಾತ್ಮಿಕ ಕವಿತೆ ಬರೆದ ಮೊದಲ ಕವಿ. ಪರ್ಷಿಯನ್ ಸಾಹಿತ್ಯದಲ್ಲಿ ಸೂಫಿ ಸಿದ್ಧಾಂತವನ್ನು ಆಮೂಲಾಗ್ರವಾಗಿ ಮಂಡಿಸಿದ ಪ್ರಥಮ ಕವಿಯೆಂದು ಇವರನ್ನು ಗೌರವಿಸಲಾಗುತ್ತದೆ. ಆದರೆ, ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು; ಈ ಮೊದಲು ಸೂಚಿಸಿದ ರಾಬಿಅಃ ಪರ್ವಾರಿಯ ನಂತರ ಇವರು ಸೂಫಿ ಕವಿತೆಗಳನ್ನು ಬರೆದರು. ಅಬೂ ಸಯ್ಯಿದ್, ತತ್ವಚಿಂತಕ, ವೈದ್ಯ ವಿಜ್ಞಾನದ ಪಿತಾಮಹರಾದ ಇಬ್ನ್ ಸೀನರ ಸಮಕಾಲೀನರು. ಇವರು ವೈಜ್ಞಾನಿಕ ಸಂಗತಿಗಳನ್ನು ಹಾಗೂ ತತ್ವ ಚಿಂತನೆಗಳನ್ನು ತಮ್ಮ ರುಬಾಇ’ಯಲ್ಲಿ ಪ್ರಸ್ತಾಪಿಸಿದ್ದಾರೆ. ಇಬ್ನ್ ಸೀನಾ ಪರ್ಷಿಯನ್ನರಾದರೂ, ಅವರು ಸಂಶೋಧನೆ ನಡೆಸಿರುವುದು ಅರೇಬಿಕ್ ಭಾಷೆಯಲ್ಲಿ. ಮಹ್ಮೂದ್ ಗಝ್‌ನವಿಯ ಮರಣಾನಂತರ ಅವರು ಕಟ್ಟಿ ಬೆಳೆಸಿದ ಸಾಮ್ರಾಜ್ಯ ಛಿದ್ರಗೊಂಡಿತು. ಅವರ ಮೊಮ್ಮಗ ನಿಷಾಪೂರ್‌ನಲ್ಲಿ ಆಡಳಿತ ನಡೆಸುತ್ತಿದ್ದನು. ೧೦೩೮ರಲ್ಲಿ ಸಲ್ಜೂಖ್ ರಾಜ 'ತುಗ್‌ರುಲ್ ಬೈಕ್' ಆಡಳಿತವನ್ನು ವಶಪಡಿಸಿಕೊಂಡನು. ಆ ನಂತರ ಮಹ್ಮೂದ್ ಗಝ್‌ನವಿಯ ಪುತ್ರ ಮೌದೂದಿಯನ್ನು ಸೋಲಿಸಿ ತುಗ್‌ರಲ್ ಬೈಕ್ ಇಡೀ ಪರ್ಷಿಯಾದ ಅಧಿಪತಿಯಾದನು. ತುಗ್‌ರಲ್ ಬೈಕ್‌ನ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಅಲ್ ಅರ್ಸಲಾನ್, ಮಾಲಿಕ್ ಷಾ, ಸಂಜರ್ ಸಾಹಿತ್ಯದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದರು. ಮಹಾಕವಿ ಉಮರ್ ಖಯ್ಯಾಂ ಮಾಲಿಕ್ ಷಾರ ಕಾಲದವರು. ಮಾಲಿಕ್ ಷಾರಿಂದ ಅವರು ಸಾಕಷ್ಟು ಸಹಾಯ ಪಡೆದಿದ್ದಾರೆ. ಇದೇ ಕಾಲದಲ್ಲಿ ಜೀವಿಸಿದ್ದ ಅಬ್ದುಲ್ಲಾ ಅನ್ಸಾರ್(೧೦೦೬-೧೦೮೮) ಅನೇಕ ಕೃತಿಗಳನ್ನು ರಚಿಸಿದರು. ಈ ಕಾಲದಲ್ಲಿಯೇ ಅಬೂ ಮುಹ್‌ಯದ್ದೀನ್ ನಸೀರ್ ಖುಸ್ರೂ ಎಂಬ ಶಿಯಾ ಕವಿ ಜೀವಿಸಿದ್ದರು. ಖುಸ್ರೂ ಕಾವ್ಯ ರಚನೆ ಹಾಗೂ ಸಂಭಾಷಣೆ ಬರೆಯುವುದರಲ್ಲಿ ನಿಪುಣರಾಗಿದ್ದರು. ಅಲಿ(ರ)ರವರ ಕುರಿತು ಇವರು ರಚಿಸಿದ ಕವಿತೆಗಳು ಬಹಳ ಪ್ರಸಿದ್ಧವಾಗಿವೆ. ರೋಷನಿನಾಮ, ಸಅ್‌ದಾದ್ ನಾಮ ಎಂಬೀ ಮಸ್‌ನವಿಗಳು ಹಾಗೂ ಕಾವ್ಯ ಸಂಗ್ರಹವಾದದಿವಾನ್’ ಇವರಿಗೆ ಪ್ರಸಿದ್ಧಿ ತಂದುಕೊಟ್ಟಿತು. ಸಫರ್‌ನಾಮ ಎಂಬ ಇವರದೇ ಪ್ರವಾಸ ಕಥನ ಗದ್ಯ ಸಾಹಿತ್ಯಕ್ಕೆ ನೀಡಿದ ಕೊಡುಗೆ ಬಹುದೊಡ್ಡದು. `ನಿಝಾಮುಲ್ ಮುಲ್ಕ್’ ಎಂಬ ಹೆಸರಿನಲ್ಲಿ ಪ್ರಸಿದ್ಧರಾದ ಪ್ರಧಾನಮಂತ್ರಿಯು ಅನೇಕ ಗದ್ಯ ಕೃತಿಗಳನ್ನು ಪರ್ಷಿಯನ್ ಭಾಷೆಯಲ್ಲಿ ರಚಿಸಿದ್ದಾರೆ.
ಒಂಬತ್ತನೇ ಶತಮಾನದ ಕೊನೆಗೆ ಷಾ ಮರ್ದಂಬಿನ್ ಅಬುಲ್ ಖೈರ್ ಎಂಬ ಶ್ರೇಷ್ಟ ವ್ಯಕ್ತಿಯೊಬ್ಬರು ಪಾರ್ಸಿ ಭಾಷೆಯಲ್ಲಿ ಕ್ರಾಂತಿಯ ಅಲೆಯೆಬ್ಬಿಸಿದರು. ವಿವಿಧ ವೈಜ್ಞಾನಿಕ ಶಾಖೆಗಳನ್ನು ಪರ್ಷಿಯನ್ ಸಾಹಿತ್ಯಕ್ಕೆ ಪರಿಚಯಿಸಿದ್ದು ಇವರು.

ಸುಲ್ತಾನ್ ಸಂಜರ್
ಮಹಾಕವಿ ನಿಝಾಮಿ ಅರೂಸಿ ಸಮರ್‌ಖಂದಿ ಸುಲ್ತಾನ್ ಸಂಜರ್‌ರ ಅರಮನೆಯಲ್ಲಿದ್ದುಕೊಂಡು ಕಾವ್ಯ ಕೃಷಿ ಮಾಡುತ್ತಿದ್ದರು. ಇವರು ಅಮೀರ್ ಮುಇಸ್ಸಿಯ ಶಿಷ್ಯರು. ಪರ್ಷಿಯಾದ ಹಲವು ಕಡೆಗಳಿಗೆ ಪ್ರವಾಸ ಮಾಡಿದ ಇವರು ಅಪೂರ್ವ ದಾಖಲೆಗಳನ್ನು ಸಂಗ್ರಹಿಸಿ, ದಾಖಲಿಸಿದರು. ಈ ಇತಿಹಾಸ ಗ್ರಂಥದ ಹೆಸರು ಚಹರ್‌ ಮಘಾಲೆ’. ಈ ಅಮೂಲ್ಯ ಗ್ರಂಥದಲ್ಲಿ ತತ್ವಜ್ಞಾನಿಗಳು, ವಿಜ್ಞಾನಿಗಳು ಹಾಗೂ ಕವಿಗಳು ಮೊದಲಾದವರ ಚರಿತ್ರೆಗಳಿವೆ. ಪರ್ಷಿಯನ್ ಸಾಹಿತ್ಯ ಭಂಡಾರವಾದಚಹರ್ ‌ಮಘಾಲೆ’ ವಸ್ತುನಿಷ್ಠ ವಿವರಗಳನ್ನೊಳಗೊಂಡ ಬೃಹತ್ ಗ್ರಂಥವಾಗಿದೆ.
ಚಹರ್‌ಮಘಾಲೆಯ ಕಾಲಘಟ್ಟದಲ್ಲಿಯೇ ಮಹಾಜ್ಞಾನಿ ಇಮಾಮ್ ಗಝ್ಝಾಲಿ(ರ) ಪರ್ಷಿಯದಲ್ಲಿ ಜೀವಿಸಿದ್ದರು. ಆದರೆ, ಇಮಾಮ್ ಗಝ್ಝಾಲಿ(ರ) ತಮ್ಮ ನೂರಾರು ಗ್ರಂಥಗಳನ್ನು ಅರಬಿ ಭಾಷೆಯಲ್ಲಿ ರಚಿಸಿದ್ದಾರೆ. ಹುಜ್ಜತುಲ್ ಇಸ್ಲಾಮ್ ಅಬೂಹಾಮಿದುಲ್ ಗಝ್ಝಾಲಿ(ರ) ಪರ್ಷಿಯಾ ಭಾಷೆಯಲ್ಲಿ ರಚಿಸಿರುವ ಕೀಮಿಯಾ ಸಆದಃ, ಮಿನ್‌ಹಾಜುಲ್ ಇಬಾದ್ ಮೊದಲಾದ ಕೃತಿಗಳು ಪ್ರಸಿದ್ಧವಾಗಿವೆ. ಸೂಫಿ ಕವಿ ಅಬ್ದುಲ್ ಮಜ್‌ದೂದ್ ಸನಾಈ ಇದೇ ಕಾಲದಲ್ಲಿ ಕಾವ್ಯ ರಚನೆಯಲ್ಲಿ ನಿರತರಾಗಿದ್ದರು. ಫಖ್‌ರುದ್ದೀನ್ ಆಝಾದ್ ಕುರ್ಗಾನಿ ಆನಂತರದ ಕವಿ. ವಿಸ್-ವ-ರಮೀನ್ ಎಂಬ ಪ್ರೇಮಕಾವ್ಯ ಇವರ ಸುಪ್ರಸಿದ್ಧ ಕೃತಿ. ಪ್ರೇಮ ಕಾವ್ಯ ರಚನೆಯಲ್ಲಿ ಇವರು ಮಹಾಕವಿ ನಿಝಾಮಿಯವರಿಗೆ ಪ್ರೇರಣೆ. ವಿಸ್-ವ-ರಮೀನ್ ಕಾವ್ಯವು ನಿಝಾಮಿಯವರ ವಿಶ್ವ ಪ್ರಸಿದ್ಧ ಕೃತಿ ಲೈಲಾವಮಜ್‌ನೂನ್’ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಅಮೀರ್ ಮುಇಸ್ಸಿ ಹಾಗೂ ಅಲಿ ಔಹಾದುದ್ದೀನ್ ಅನ್‌ವರಿ ಸುಲ್ತಾನ್ ಸಂಜರಿಯ ಆಸ್ಥಾನ ಕವಿಗಳಾಗಿದ್ದರು. ಅಮೀರ್ ಮುಇಸ್ಸಿಯವರ ಮೇಲೆ ಸುಲ್ತಾನ್‌ಗೆ ಅಗಾಧ ಸ್ನೇಹವಿತ್ತು. ಒಮ್ಮೆ ಸಂಜರ್ ಬಿಟ್ಟ ಬಾಣವೊಂದು ಗುರಿ ತಪ್ಪಿ ಆ ದಾರಿಯಲ್ಲಿ ಬರುತ್ತಿದ್ದ ಮುಇಸ್ಸಿಯನ್ನು ಇರಿಯಿತು. ಇದರಿಂದ ತೀವ್ರ ರೀತಿಯಲ್ಲಿ ಗಾಯಗೊಂಡ ಮುಇಸ್ಸಿ ೧೧೪೮ರಲ್ಲಿ ಮರಣ ಹೊಂದಿದರು. ಇವರ ದಿವಾನ್(ಕಾವ್ಯ ಸಂಕಲನ) ಹತ್ತು ಸಾವಿರದಷ್ಟು ಹಾಡುಗಳನ್ನು ಒಳಗೊಂಡಿದೆ. ಸಂಜರ್‌ರ ಕಾಲಘಟ್ಟದಲ್ಲಿ ಮಿಹಸ್ತಿ ಎಂಬ ಹೆಸರಿನ ಪ್ರಸಿದ್ಧ ಕವಯತ್ರಿಯೂ ಜೀವಿಸಿದ್ದರು. ಮಿಹಸ್ತಿಯ ಕಾವ್ಯಗಳು ಆಮೋದ ಪ್ರಮೋದ, ನೈತಿಕ ಪ್ರಜ್ಞೆ, ವಾಚಾಳಿತನ ಹೀಗೆ ಅನೇಕ ಭಾವಗಳನ್ನು ಒಳಗೊಂಡಿದೆ. ಇವರು ಸುಲ್ತಾನ್ ಸಂಜರ್‌ ನ ಪ್ರೇಯಸಿ ಎಂದು ದೌಲತ್ ಷಾ ದಾಖಲಿಸಿದ್ದಾರೆ. ಮಿಹಸ್ತಿಯ ಪ್ರಸಿದ್ಧರುಬಾಇಯ್ಯಾತ್’ ಕಾವ್ಯ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ತಮ್ಮ ಕಾಲಘಟ್ಟದಲ್ಲಿ ಆಳ್ವಿಕೆ ನಡೆಸುತ್ತಿದ್ದ ಚಕ್ರವರ್ತಿಗಳನ್ನು ಸ್ತುತಿಸಿ ಬರೆಯುವ ಕಾವ್ಯ ಸಂಪ್ರದಾಯವೊಂದು ಪರ್ಷಿಯನ್ ಭಾಷೆಯಲ್ಲೂ ಇತ್ತು. ಈ ಕಾರಣದಿಂದ ಅನೇಕ ಸ್ತ್ರೀಯರು ಕಾವ್ಯ ರಚನೆಯಲ್ಲಿ ತೊಡಗಿಕೊಂಡಿದ್ದರು. ಇವರು ತಮ್ಮ ಇಷ್ಟದ ಚಕ್ರವರ್ತಿಗಳನ್ನು, ವ್ಯಕ್ತಿಗಳನ್ನು ಹಾಡಿಹೊಗಳಿ ಕವನಗಳನ್ನು ಬರೆದರು. ಕೆಲವು ಕವಯತ್ರಿಯರು ಪುರುಷ ಕವಿಗಳಿಗೆ ಪ್ರಬಲ ಪ್ರತಿಸ್ಪರ್ಧೆಯೊಡ್ಡುವಷ್ಟು ಭಾವ ತೀವ್ರತೆಯಿಂದ ಬರೆಯುತ್ತಿದ್ದರು. ಮಿಹಸ್ತಿ ಇವರಲ್ಲೊಬ್ಬರು. ಇವರಂತೆಯೇ ಇನ್ನೂ ಅನೇಕ ಕವಯತ್ರಿಯರು ಪರ್ಷಿಯನ್ ಸಾಹಿತ್ಯ ದಿಗಂತದಲ್ಲಿ ಮಿಂಚಿ ಮರೆಯಾಗಿದ್ದಾರೆ.
ಶಿಹಾಬುದ್ದೀನ್ ಆದಿಬಿ ಸಫೀರ್ ಎಂಬ ಕವಿಯನ್ನು ಖವಾರಿ ಸಾಂಷವಂಶದ ರಾಜನಾದ ಅದ್‌ಸೀಸ್‌ನ ಆಜ್ಞೆಯ ಪ್ರಕಾರ ೧೧೪೫ರಲ್ಲಿ ಆಕ್ಸಸ್ ನದಿಯಲ್ಲಿ ಮುಳುಗಿಸಿ ಕೊಲ್ಲಲಾಯಿತು. ಬುಖಾರದ ಅಮಾಲ್ ರಚಿಸಿದ `ಯುಸೂಫ್ ವ ಝುಲೈಖಾ’ ಎಂಬ ಪ್ರೇಮಕಾವ್ಯ ಜನಪ್ರಿಯವಾಗಿದೆ. ೧೧೪೯ರಲ್ಲಿ ಅವರು ಇಹಲೋಕ ತ್ಯಜಿಸಿದರು. ಅಮೀರ್ ಖುದ್‌ರಾನ್, ಜೌಹರಿ ಸರ್ಕಾರ್, ಅಬ್ದುಲ್‌ವಾಸಿ ಜಬಲಿ, ಹಸನ್ ಗಝ್‌ನವಿ, ಅಬೂಬಕರ್ ಅಶ್‌ರಖಿ, ಸೌಸಾನಿ, ಅಬುಲ್‌ಮುಫಕ್ಕಿರ್ ರಾಝಿ, ಸೋಸಾನಿ, ಮಲಾಮಿ ಮೊದಲಾದ ಕವಿಗಳು ಈ ಕಾಲದಲ್ಲಿ ಕಾವ್ಯೋಪಾಸನೆಯಲ್ಲಿ ತೊಡಗಿಕೊಂಡಿದ್ದರು. ಅಲ್ಲದೆ, ಷತ್ವ್ರಂಜಿ ಎಂಬ ಕವಿ ಹಾಸ್ಯ ಕವನಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು.

ಚಂಗೀಸ್‌ಖಾನನ ದಿಗ್ವಿಜಯ
೧೦೭೭ರಲ್ಲಿ ನಡೆದ ಚೆಂಗೀಸ್‌ಖಾನನ ದಿಗ್ವಿಜಯದೊಂದಿಗೆ ಖವಾರಿಝ್ ಷಾಹಿಗಳ ಅಧಿಪತ್ಯವು ಕೊನೆಗೊಂಡಿತು. ತಾರ್‌ತ್ತಾರಿಗಳ ಆಕ್ರಮಣವು ಪರ್ಷಿಯಾವನ್ನು ನಾಶ ಮಾಡಿತು. ಚೆಂಗೀಸ್‌ಖಾನನ ಮೊಮ್ಮಗ ಹುಲಾಕುಖಾನ್ ೧೨೫೮ರಲ್ಲಿ ಬಾಗ್ದಾದನ್ನು ವಶಪಡಿಸಿಕೊಂಡನು. ಖಲೀಫ ಮುಸ್‌ತ‌ಅ‌್‌ಸಿ‌ಮ್ ಸೇರಿದಂತೆ ಬಾಗ್ದಾದ್ ನಗರದ ಎಂಟು ಲಕ್ಷ ಜನರನ್ನು ಆತ ವಧಿಸಿದನು. ಖಲೀಫಾ ಮುಸ್ತ‌ಅ್‌ಸಿಮ್ ಹತ್ಯೆಯೊಂದಿಗೆ ಅಬ್ಬಾಸಿಯ್ಯಾ ಆಡಳಿತವು ಕೊನೆಗೊಂಡಿತು. ಹೆಸರಿಗೆ ಮಾತ್ರ ಅಲ್ಲಲ್ಲಿ ಕೆಲವು ರಾಜರುಗಳಿದ್ದರು. ಅವರನ್ನು ತಾರ್‌ತ್ತಾರಿಗಳು ಬಹಳ ಬೇಗನೇ ಮುಗಿಸಿಬಿಟ್ಟರು.
ಶ್ರೀಮಂತ ಸಾಹಿತ್ಯ ಸಂಸ್ಕೃತಿಯನ್ನು ಹೊಂದಿದ್ದ ಬಾಗ್ದಾದ್ ನಗರದಲ್ಲಿ ಅತ್ಯದ್ಭುತ ಗ್ರಂಥಾಲಯಗಳಿದ್ದವು. ತಾರ್‌ತ್ತಾರಿಗಳು ಈ ಎಲ್ಲಾ ಗ್ರಂಥಾಲಯಗಳನ್ನು ನಾಶ ಮಾಡಿದರು. ಇದರಿಂದ ಲಕ್ಷಕ್ಕೂ ಮಿಕ್ಕ ಗ್ರಂಥಗಳು, ಹಸ್ತಪ್ರತಿಗಳು ನಾಶವಾದವು.
ಸರಿಸುಮಾರು ಇದೇ ಕಾಲದಲ್ಲಿ ಮಹಾಕವಿ ಖಾಖಾನಿ ಜೀವಿಸಿದ್ದರು. ಅವರ ನಂತರ ನಿಝಾಮೀ ಕಾವ್ಯ ರಚನೆಯಲ್ಲಿ ತೊಡಿಕೊಂಡಿದ್ದರು. ಇದೇ ಕಾಲದಲ್ಲಿ ಪ್ರಸಿದ್ಧಿ ಪಡೆದ ಇನ್ನೋರ್ವ ಕವಿ ಸಾಹಿರುದ್ದೀನ್ ತಾಹಿರ್ ಬಿನ್ ಮುಹಮ್ಮದ್ ಫರ್ಯಾಬಿಯಾರ್(೧೧೫೫-೧೨೦೨) ಕವಿತೆ ರಚನೆ ಮಾಡುತ್ತಿದ್ದರು. ಇವರಿಗೆ ಅತಾಬೆಕ್ ನಸ್‌ರುದ್ದೀನ್ ಅಬೂಬಕರ್ ರಾಜ ಆಶ್ರಯ ನೀಡಿದ್ದನು.
ಮುಜ್‌ರುದ್ದೀನ್ ಫೈಲಖಾನಿ, ಷಾಫರ್, ಖಿರ್‌ಮಾಜ್ ಇಸ್‌ಫಹಾನಿ ಮೊದಲಾದವರು ಮಹಾಕವಿಗಳಾದ ಖಾಖಾನಿ, ಅನ್ವರಿ, ನಿಝಾಮಿಯಂತಹವರ ಸಮಕಾಲೀನರಾಗಿದ್ದರು. ಇವರ ಬಳಿಕ ಫರೀದುದ್ದೀನ್ ಅತ್ತಾರ್, ಇಮಾಮ್ ಸಾ‌ಅದ್, ಮೌಲಾನ ರೂಮಿ ಕಾವ್ಯೋಪಾಸನೆಯಲ್ಲಿ ತೊಡಗಿಕೊಂಡರು. ಈ ಕಾಲದಲ್ಲಿ ಗಝಲ್‌ಗಳಿಗೆ ಪ್ರಸಿದ್ಧರಾದ ಜಮಾಲುದ್ದೀನ್ ಅಬ್ದರ‍್ರಝಾಕ್, ಷರಫುದ್ದೀನ್, ಷಾಫರ್‌ವಿ ಎಂಬಿವರು, ಹಾಗೆಯೇ ಹಾಸ್ಯಕವಿತೆಗಳಿಗೆ ಪ್ರಸಿದ್ಧರಾದ ಕಮಾಲುದ್ದೀನ್, ಇಸ್ಮಾಈಲ್ ಷಾಫುರ್ ನಿಷಾಪುರಿ, ಝುಲ್ಫಿಕಾರ್ ಷಿರ್‌ವಾನಿ ಎಂಬಿವರು, ಅಸೀರುದ್ದೀನ್ ಅಕ್‌ಸಿಕಿ, ಫಲಖಿ, ಸೈಫುದ್ದೀನ್ ಅಸ್‌ಫರಂಕಿ ಮೊದಲಾದ ದಿವಾನ್ ಕವಿಗಳು, ಮೌಲಾನ ಇಮಾಮಿ ಹಿರತಿ ಮೊದಲಾದ ತತ್ವಚಿಂತಕರಾದ ಕವಿಗಳು ಜೀವಿಸಿದ್ದರು. ನೀತಿ ಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಕೃತಿಗಳು ಈ ಕಾಲದಲ್ಲಿ ರಚಿಸಲ್ಪಟ್ಟವು. ಖಸ್ವೀದ, ಗಝಲ್‌ಗಳನ್ನು ರಚಿಸಿ ಹೆಸರುವಾಸಿಯಾದ ಅನೇಕ ಕವಿಗಳು ಆ ಕಾಲದ ಕೊಡುಗೆಯಾಗಿದ್ದರು. ಪರ್ಷಿಯನ್ ಕವಿಗಳಿಗೆ ಸಂಬಂಧಿಸಿದ ವಿವರಗಳಿರುವ ‘ಲುಬಾಬುಲ್ ಅಲ್‌ಬಾಬ್’ ಈ ಕಾಲದಲ್ಲೇ ಪ್ರಕಟಗೊಂಡಿತ್ತು.

ಮಂಗೋಲಿಯನ್ನರ ಪ್ರಭಾವ
ನಂತರ ಮಂಗೋಲಿಯನ್ನರು ದಾಳಿ ನಡೆಸಿದರು. ಮಂಗೋಲಿಯನ್ನರ ಪ್ರಥಮ ಚಕ್ರವರ್ತಿ ಹುಲಾಕುಖಾನ್ ಆಝರ್‌ಬೈಜಾನ್‌ನ ಮರಗವನ್ನು ತನ್ನ ರಾಜಧಾನಿಯಾಗಿ ಘೋಷಿಸಿದನು. ಹುಲಾಕುಖಾನ್‌ನ ನಂತರ ಅವನ ಪುತ್ರ ಅಬಾಕಾಖಾನ್ ೧೨೬೫ರಲ್ಲಿ ಅಧಿಕಾರ ವಹಿಸಿಕೊಂಡನು. ಅಬಾಕಾಖಾನ್‌ನ ತಮ್ಮ ನಿಕೋತಾರ್ ಅಹ್ಮದ್ ಇಸ್ಲಾಮ್ ಧರ್ಮ ಸ್ವೀಕರಿಸಿದನು. ಅಬಾಕಾಖಾನ್ ನ ನಂತರ ಅಧಿಕಾರ ಹಿಡಿದ ನಿಕೋತಾರ್ ಅಹ್ಮದ್ ಇಸ್ಲಾಮಿನ ಆದರ್ಶಗಳಿಗೆ ತಕ್ಕಂತೆ ಆಡಳಿತದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದನು. ೧೨೮೪ರಲ್ಲಿ ನಿಕೋತಾರ್ ಕೊಲೆಯಾದನು. ಆ ನಂತರ ಅವನ ಪುತ್ರ ಅರ್ಕುನ್ ಖಾನ್ ಹಾಗೂ ಕೈಕಾತುಖಾನ್ ಪರ್ಷಿಯವನ್ನು ಆಳಿದರು. ಅರ್ಕುನ್‌ಖಾನ್‌ನ ನಂತರ ಅವನ ಪುತ್ರ ಖಾಸಾನ್ ಮುಹಮ್ಮದ್ ಅಧಿಕಾರಕ್ಕೇರಿದನು. ಖಾಸಾನ್ ಮುಹಮ್ಮದ್ ಇಸ್ಲಾಮ್ ಧರ್ಮವನ್ನು ತನ್ನ ಸಾಮ್ರಾಜ್ಯದ ಅಧಿಕೃತ ಧರ್ಮವಾಗಿ ಅಂಗೀಕರಿಸಿದ ಮೊದಲ ಮಂಗೋಲಿಯನ್ ಅರಸ. ಈತನ ಕಾರಣದಿಂದ ಸಾವಿರಾರು ಮಂಗೋಲಿಯನ್ನರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ೧೩೦೪ರಲ್ಲಿ ಈತ ಮರಣ ಹೊಂದಿದನು. ಅದರೊಂದಿಗೆ ಹುಲಾಕುಖಾನ್ ವಂಶದ ಅಧಿಪತ್ಯವೂ ಕೊನೆಗೊಂಡಿತು.
ಮಂಗೋಲಿಯನ್ನರು ಪರ್ಷಿಯವನ್ನು ಆಳುತ್ತಿದ್ದ ಸಂದರ್ಭದಲ್ಲಿ ಮಹಾಕವಿಗಳಾದ ಹಕೀಂ ನಸಾಈ, ಫರೀದುದ್ದೀನ್ ಅತ್ತಾರ್, ಸುಹ್‌ರವರ್ದಿ, ರೂಮಿ, ನಝೀರ್, ಖುಸ್ರೂ ಮೊದಲಾದ ವರ `ಆತ್ಮಜ್ಞಾನ’ಕ್ಕೆ ಸಂಬಂಧಿಸಿದ ಕೃತಿಗಳು ಪರ್ಷಿಯದಾದ್ಯಂತ ವ್ಯಾಪಕ ಪ್ರಚಾರ ಪಡೆದವು. ಸೂಫಿ ಚಿಂತನೆಗಳು ಹಾಗೂ ಇನ್ನಿತರ ಜ್ಞಾನಗಳನ್ನೊಳಗೊಂಡ ಗದ್ಯ ಕೃತಿಗಳು ಈ ಕಾಲದಲ್ಲಿ ಬೆಳಕು ಕಂಡವು.
ಅಮೀರ್ ಖುಸ್ರೂ ಈ ಕಾಲದಲ್ಲಿ ಭಾರತದಲ್ಲಿ ಜೀವಿಸಿದ್ದರು. ಅಲ್ಲಾಮಾ ಕುತುಬುದ್ದೀನ್ ತಬ್‌ರೀಸಿ, ಅವ್‌ಹದಿ, ಸಲ್ಮಾನ್ ಸಾವಾಜಿ, ಮೌಲಾನಾ ನಸೀರಿ ಬುಖಾರಿ, ಉಬೈದ್ ಸಖಾನಿ ಮೊದಲಾದವರು ಈ ಕಾಲದ ಪ್ರಮುಖ ಕವಿಗಳಾಗಿದ್ದರು. ಆ ನಂತರ ಮಹಾಕವಿ ಹಾಫಿಝ್ ರಂಗಪ್ರವೇಶಿಸಿದರು. ಕಮಾಲುದ್ದೀನ್ ಖುಸಾಂತಿ, ರಫಿಉದ್ದೀನ್ ಲುಬ್‌ನಾನಿ, ಫರೀದಿ ಅಹ್‌ವಾಲ್, ಅಸೂರುದ್ದೀನ್ ಅಯ್‌ದಾನಿ, ಬುರ್‌ಬಹಾವ್ ಜಾಮಿ, ಅವ್‌ಹಾರುದ್ದೀನ್ ಕಿರ್ಮಾನಿ, ಅಬೂಸೈಯದ್ ಫೈಝಾಲಿ, ಕುತುಬುದ್ದೀನ್ ಶೀರಾಸಿ, ಹಸನ್ ಸಂಜರಿ, ಮರ್ಗಾ ಔಹಾದುದ್ದೀನ್, ಅಮೀರ್ ಮಹ್‌ಮೂದ್ ಇಬ್‌ನುಯಾಮೀನ್, ಇಮಾದ್ ಬಾಖಿಹ್, ಬುರಂತಾಖ್ ಅಸ್ಮತುಲ್ಲಾ ಬುಖಾರಿ, ನಿಝಾರಿ, ಮಹ್‌ಮೂದ್ ಷಬಿಸ್ತಾರಿ, ಅಝ್ಝಾರ್, ಹಕೀಂ ಜಲಾಲ್ ಷಿರ್‌ವಾನಿ, ಕಾಷಿಮುಲ್ಲಾ, ಮಹ್‌ದಿಖಾನ್ ಮಿರ್ಝಾ ಎಂಬೀ ಕವಿಗಳು ಸಹ ಪರ್ಷಿಯನ್ ಕಾವ್ಯ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ತಿಮೂರ್‌ನ ಆಗಮನ:
ಕ್ರಿ.ಶ.೧೩೯೫ರಲ್ಲಿ ಪರ್ಷಿಯ ತಿಮೂರ್‌ನ ಅಧಿಪತ್ಯಕ್ಕೊಳಪಟ್ಟಿತು. ತಿಮೂರ್‌ನ ಪುತ್ರ ಷಾರುಖ್(೧೪೦೮) ಶೈಕ್ಷಣಿಕ ಅಭಿವೃದ್ಧಿಗೆ ಗಮನಹರಿಸಿದ್ದನು. ಷಾರುಖ್‌ನ ನಂತರ ಆತನ ಪುತ್ರ ಉಲೂಗ್‌ಬೇಕ್, ನಂತರ ಮೊಮ್ಮಗ ಅಬ್ದುಲ್ ಲತ್ವೀಫ್ ನಂತರ ಬಾಬರ್(೧೪೫೦-೧೪೫೭) ಅಧಿಕಾರ ನಡೆಸಿದ ನಂತರ ಅಧಿಪತ್ಯವು ಉಮರ್ ಶೈಖ್ ಕೈವಶವಾಯಿತು. ಈತನ ಹನ್ನೊಂದನೇ ಪುತ್ರನೇ ಭಾರತದ ಮೇಲೆ ಆಕ್ರಮಣ ನಡೆಸಿ ವಶಪಡಿಸಿಕೊಂಡ ಬಾಬರನ ತಂದೆ.
ಬಾಬರ್‌ನ ತಂದೆಯ ಸಮಕಾಲೀನರಾದ ಕವಿಗಳಲ್ಲಿ ಅಮೀರ್ ಅಲಿ ಷಾ ನಿಝಾಮುದ್ದೀನ್ ಪ್ರಸಿದ್ಧರು. ಪರ್ಷಿಯನ್ ಭಾಷೆಯಲ್ಲಿ ಇಪ್ಪತ್ತು ಕೃತಿಗಳನ್ನು ರಚಿಸಿರುವ ನಿಝಾಮುದ್ದೀನ್ ತುರ್ಕಿ ಭಾಷೆಯಲ್ಲೂ ಕಾವ್ಯ ರಚನೆ ಮಾಡಿದ್ದಾರೆ. ಆನಂತರ ಬಂದ ಮುಹಮ್ಮದ್ ಬಿನ್ ಕವಂದ್‌ಷಾ(೧೪೩೩-೧೪೫೭) ಪ್ರಮುಖ ಬರಹಗಾರರಾಗಿದ್ದರು. ಇವರ ಉತ್ಕೃಷ್ಟ ಕೃತಿಯಾದ ‘ರೌಝತ್ತುಸ್ಸಫಾ’ ಲೋಕ ಚರಿತ್ರೆ ಗ್ರಂಥವಾಗಿದೆ. ಏಳು ಭಾಗಗಳನ್ನು ಹೊಂದಿರುವ ಈ ಕೃತಿಯು ವಸ್ತುನಿಷ್ಠವೂ, ಅಧಿಕೃತವೂ ಆಗಿದೆ. ಈ ಕಾಲದಲ್ಲೇ ಪ್ರಸಿದ್ಧ ಪರ್ಷಿಯನ್ ಸಾಹಿತ್ಯ ಸಂಶೋಧಕ ದೌಲತ್ತ್ ಷಾ ಜೀವಿಸಿದ್ದರು. ಇವರು ಬರೆದಿರುವ ‘ತದ್ಸ್ಕಿರಾಯೇ ದೌಲತ್ ಷಾ’ ಕೃತಿಯಲ್ಲಿ ಹತ್ತು ಅರಬಿ ಕವಿಗಳ ಹಾಗೂ ನೂರ ಮೂವತ್ತು ಪರ್ಷಿಯನ್ ಕವಿಗಳ ಚರಿತ್ರೆ ಇದೆ. ೧೪೮೫ರಲ್ಲಿ ದೌಲತ್ ಷಾ ನಿಧನ ಹೊಂದಿದರು.
೧೪೧೪ರಲ್ಲಿ ಪರ್ಷಿಯನ್ ಕಾವ್ಯ ಸಾಹಿತ್ಯ ಅತ್ಯುನ್ನತ ಮಟ್ಟಕ್ಕೆ ಬೆಳೆಯಿತು. ಸಾಹಿತ್ಯ ರಂಗಕ್ಕೆ ಮಹಾಕವಿ ಜಾಮಿಯ ಪ್ರವೇಶದೊಂದಿಗೆ ಅದು ಇನ್ನಷ್ಟು ಸ್ಪಷ್ಟವಾಯಿತು. ಅಮೀರ್ ಅತಾಉಲ್ಲಾ(ಜಮಾಲ್ ಹುಸೈನಿ), ಸುಲ್ತಾನ್ ಮೀರ್‌ಸಾ(ಅಬ್ದುಲ್ ಖಾಝಿ), ಮೌಲಾನ ಹುಸೈನ್‌ವೈಸ್ ಕಾಶಿಫಿ, ಷರಫುದ್ದೀನ್ ಅಲಿಯಸ್‌ದಿ, ಮುಲ್ಲಾ ಜಲಾಲುದ್ದೀನ್ ತವ್ವಾನಿ, ಅಬ್ದರ‍್ರಝಾಕ್, ಸೈಫುದ್ದೀನ್‌ಹಾಜಿ ಬಿನ್ ನಿಝಾಮುಲ್ ಫಝ್‌ಲಿ, ಶಂಸುದ್ದೀನ್ ಕಾತ್ತಿಬಿ, ಖಾಸಿಂ ಅನ್‌ವರ್, ಅಮೀನ್ ಯಾಮಿನುದ್ದೀನ್ ಯಹ್ಯಾ ನೈಷಾಪೂರಿ, ರಿಯಾಸಿ, ಹಿರತಿ, ಖಾಜಾಮಸ್‌ಊದ್, ಮೌಲಾನ ಹೈರಾನಾ ಮೊದಲಾದ ಪ್ರಬುದ್ಧ ಕವಿಗಳು ಹಾಗೂ ಗ್ರಂಥ ರಚನೆಕಾರರು ಪರ್ಷಿಯನ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.
ಭಾರತದಲ್ಲಿ ಮುಸ್ಲಿಮ್ ಅರಸರ ಆಡಳಿತ ಕಾಲದಲ್ಲಿ ಪರ್ಷಿಯನ್ ಭಾಷೆ ಪ್ರಮುಖ ಪಟ್ಟ ಅಲಂಕರಿಸಿತ್ತು. ಭಾಷೆಗಳಲ್ಲೇ ರಾಜನಾಗಿ ಮೆರೆಯಿತು. ತಕ್ಕ ಗೌರವಾದರಗಳನ್ನು ಪಡೆಯಿತು. ಅತ್ಯಂತ ಸುಂದರವಾದ ಈ ಭಾಷೆ ಭಾರತದ ಅಧಿಕೃತ ಭಾಷೆಯಾಗಿ ಮಾರ್ಪಟ್ಟಿತು. ಮುಸ್ಲಿಮ್ ರಾಜರುಗಳ ಆಸ್ಥಾನಗಳಲ್ಲಿ ಅನೇಕ ಕವಿಗಳಿರುತ್ತಿದ್ದರು. ಆ ಕಾಲದಲ್ಲಿ ಬಳಕೆಯಲ್ಲಿದ್ದ ಉರ್ದು ಭಾಷೆಯನ್ನು ರೆಕ್ತಾ’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಪಾರ್ಸಿ ಹಾಗೂ ರೆಕ್ತಾ ಭಾಷೆಯನ್ನು ಮಿಶ್ರಣಗೊಳಿಸಿ ಗ್ರಂಥಗಳನ್ನು ರಚಿಸಿದ ಅನೇಕ ಸಾಹಿತಿಗಳು ಭಾರತದಲ್ಲಿದ್ದಾರೆ. ಪರ್ಷಿಯನ್ ಭಾಷೆಯ ಬೆಳವಣಿಗೆಗೆ ದೆಹಲಿ ಸುಲ್ತಾನರಂತೆಯೇ ಇತರ ಪ್ರಾಂತೀಯ ರಾಜರುಗಳು ಸಹ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬದಾಯೂನಿ, ಮುಲ್ಲಾಸಾಹೂರಿ, ದರ್ಷಿಸಿ, ಅಬುಲ್ ಫರಜ್‌ರೂನಿ, ಮಾಸೂದ್ ಸಅದ್, ಅಮೀರ್ ರುಹಾನಿ, ಶಿಹಾಬೇ ಮುದ್‌ಮಿರಾ, ಅಮೀರ್ ಅರ್ಸಲಾನ್ ಕಾತಿಬ್, ಶಂಸುದ್ದೀನ್ ತಬೀರ್, ಅಮೀರ್ ಹಸನ್ ಮುಅಯ್ಯದ್ ಜಾಮಿ, ಹಾಜಿ ಮುಖೀತ್ತ್ ಹಾನ್‌ಸವಿ, ಬಾಖಿಕಾತಿಬ್, ಸಅದ್‌ಮಂತಿಖಿ, ಜಮಾಲುದ್ದೀನ್ ಉರ್‌ಫಿ ಮೊದಲಾದವರು ಭಾರತದಲ್ಲಿದ್ದ ಪರ್ಷಿಯನ್ ಕವಿಗಳಲ್ಲಿ ಪ್ರಮುಖರು. ಅಮೀರ್ ಖುಸ್ರೂ, ಶೈಖ್ ಫೈಝಿ- ಮೊದಲಾದ ಭಾರತೀಯರಾದ ಪರ್ಷಿಯನ್ ಮಹಾಕವಿಗಳ ಬಗ್ಗೆ ಈ ಕೃತಿಯಲ್ಲಿ ಅಧ್ಯಾಯಗಳಿವೆ. ಭಾರತದ ಪರ್ಷಿಯನ್ ಸಾಹಿತಿಗಳು ಆ ಭಾಷೆಗೆ ನೀಡಿದ ಕೊಡುಗೆಗಳು ಪ್ರಶಂಸಾರ್ಹವಾಗಿದೆ. ಬದಾಯೂನಿಯಮುಂತಖಬುತ್ತವಾರೀಖ್ ಲುಥ್‌ಫ್’, ಅಲಿಬೋಗ್‌ನ ಅದಿಸ್ಕತ್ತಾಯೇ ಅಸರ್’, ಅಮೀನೇರಾಝಿಯಪಫ್‌ತೇ ಇಕ್‌ಲಂ’, ಹಾಲಿಯ ತದ್‌ಕೀರತುಲ್ ಮುಆಸಿರೀನ್’, ಷೇರ್‌ಖಾನ್ ಲೋದಿಯಮಿರಾದುಲ್‌ಖಯಾಲ್’ ಮೊದಲಾದ ಕೃತಿಗಳು ಭಾರತದ ಪರ್ಷಿಯನ್ ಮಹಾಕವಿಗಳು ಲೋಕಕ್ಕೆ ನೀಡಿದ ಕೊಡುಗೆಗಳಾಗಿವೆ.
ಮಹಾಕವಿ ಜಾಮಿಯ ಕಾಲದ ನಂತರ ಪರ್ಷಿಯನ್ ಸಾಹಿತ್ಯದ ಬೆಳವಣಿಗೆ ಕುಂಠಿತಗೊಂಡಿತು ಎನ್ನಬಹುದು. ಆನಂತರ ಪರ್ಷಿಯನ್ ಸಾಹಿತ್ಯವೆಂಬ ಮಹಾನದಿಯಲ್ಲಿ ಹೊಸ ನೀರು ಹರಿಯಲಿಲ್ಲ. ಸಾವಿರ ವರ್ಷಗಳ ಕಾಲ ಅತ್ಯುದ್ಭುತ ಸಾಹಿತ್ಯ ಕೃತಿಗಳಿಂದ ಶ್ರೀಮಂತಗೊಂಡಿದ್ದ ಪರ್ಷಿಯನ್ ಭಾಷೆಯ ಬೆಳವಣಿಗೆ ನಿಂತ ನೀರಿನಂತಾಯಿತು. ಆದರೆ, ನಮ್ಮ ಕಾಲದಲ್ಲಿ ಒಂದು ಅಪವಾದವಿತ್ತು. ಈ ಕಾಲದಲ್ಲಿ ಪರ್ಷಿಯನ್ ಸಾಹಿತ್ಯವನ್ನು ವಿಶ್ವ ಸಾಹಿತ್ಯದೆಡೆಗೆ ಕೈಹಿಡಿದು ನಡೆಸಿದ ಮಹಾಕವಿ ಅಲ್ಲಾಮ ಇಕ್ಬಾಲ್ ಇದ್ದರು. ಇಕ್ಬಾಲ್‌ರ ಶ್ರೇಷ್ಠ ಕೃತಿಗಳು ಪರ್ಷಿಯನ್ ಸಾಹಿತ್ಯಕ್ಕೆ ಗತವೈಭವವನ್ನು ಮರಳಿ ತಂದುಕೊಟ್ಟಿತು. ಇಕ್ಬಾಲ್‌ರ ನಂತರ ಅಂತಹ ಇನ್ನೋರ್ವ ಕವಿ ಪರ್ಷಿಯನ್ ಭಾಷೆಯಲ್ಲಿ ಹುಟ್ಟಿಲ್ಲ.
ಪರ್ಷಿಯನ್ ಸಾಹಿತ್ಯದ ಬೆಳವಣಿಗೆ ಕುಂಠಿತಗೊಂಡರೂ, ಅದರ ಗತವೈಭವ ಇನ್ನೂ ಹಾಗೆಯೇ ಇದೆ. ಆ ಭಾಷೆಯ ಶ್ರೇಷ್ಠ ಸಾಹಿತ್ಯದೆಡೆಗೆ ಆಕರ್ಷಿತರಾಗಿ, ಆಮೂಲಾಗ್ರ ಅಧ್ಯಯನ ಮಾಡಿ, ವಿಶ್ವದಾದ್ಯಂತ ಆ ಭಾಷೆಗೆ ತಕ್ಕ ಮನ್ನಣೆ ದೊರಕಿಸಿಕೊಟ್ಟ ಅನೇಕ ಪಾಶ್ಚಾತ್ಯ ಸಾಹಿತಿಗಳಿದ್ದಾರೆ. ಪ್ರೊಫೆಸರ್ ನಿಕಲ್‌ಸನ್, ಇ.ಜಿ.ಬ್ರೌನ್, ಆರ್ಬರಿ ಮೊದಲಾದವರು ಪರ್ಷಿಯನ್ ಭಾಷೆಯನ್ನು ಕಲಿತು, ಅದರ ಸಾಹಿತ್ಯಿಕ ಸಾರ್ವಭೌಮತೆಯನ್ನು ಪಾಶ್ಚಾತ್ಯರಿಗೆ ಪರಿಚಯಿಸಿದರು. ಅಲ್ಲಿಯ ಶ್ರೇಷ್ಠ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದರು. ಇತ್ತೀಚಿನ ದಿನಗಳಲ್ಲಿ ಅನೇಕ ಪೌರಸ್ತ್ಯ ಸಾಹಿತಿಗಳು ಸಹ ಪರ್ಷಿಯನ್ ಸಾಹಿತ್ಯದೆಡೆಗೆ ಆಕರ್ಷಿತರಾಗಿ, ಉರ್ದು ಹಾಗೂ ಇಂಗ್ಲೀಷಿನ ಸಹಾಯದೊಂದಿಗೆ ಅಲ್ಲಿಯ ಶ್ರೇಷ್ಠ ಕೃತಿಗಳನ್ನು ತಮ್ಮ ಭಾಷೆಗೆ ಅನುವಾದಿಸುತ್ತಿದ್ದಾರೆ.
ಪರ್ಷಿಯಾದ ಹೆಚ್ಚಿನ ಮಹಾಕವಿಗಳು ರಾಜಾಶ್ರಯದಲ್ಲಿ ಬೆಳೆದವರು. ಆದರೆ, ಇಸ್ಲಾಮಿಕ್ ಕ್ರಾಂತಿಯ ಬಳಿಕ ಇರಾನ್‌ನಲ್ಲಿ ಹೊಸ ಸಾಹಿತ್ಯ ಕ್ರಾಂತಿ ಆಯಿತು. ಧಾರ್ಮಿಕ ಸಾಹಿತ್ಯಗಳ ಪ್ರಕಟನೆಯಲ್ಲಿ ಮುಂಚೂಣಿಯಲ್ಲಿದ್ದ ಇರಾನ್‌ನಲ್ಲಿ ಖುಮೈನಿಯ ಇಸ್ಲಾಮಿಕ್ ಕ್ರಾಂತಿಯು ಇತರ ಎಲ್ಲಾ ಕ್ಷೇತ್ರಗಳಂತೆಯೇ ಸಾಹಿತ್ಯದಲ್ಲೂ ಶುದ್ಧೀಕರಣ ಚಳವಳಿಯನ್ನು ಆರಂಭಿಸಿತು.
ಅರೇಬಿಕ್ ಸಾಹಿತ್ಯದೊಂದಿಗೆ ಸ್ಪರ್ಧೆಗೆ ಇಳಿಯುವಷ್ಟು ಅನೇಕ ಶ್ರೇಷ್ಠ ಇಸ್ಲಾಮಿಕ್ ಸಾಹಿತ್ಯವನ್ನು ಲೋಕಕ್ಕೆ ಅರ್ಪಿಸಿದ ಕೀರ್ತಿ ಪರ್ಷಿಯನ್ ಭಾಷೆಯದ್ದಾಗಿದೆ. ಇಸ್ಲಾಮಿನ ಬೆಳವಣಿಗೆಯೊಂದಿಗೆ ಪರ್ಷಿಯನ್ ಭಾಷಾ ಸಾಹಿತ್ಯದಲ್ಲಿ ಆದ ಅಪೂರ್ವ ಬದಲಾವಣೆಯನ್ನು ಮೊದಲೇ ಸೂಚಿಸಿದ್ದೇನೆ. ಇಸ್ಲಾಮಿನ ಮಾರ್ಗದಲ್ಲಿಯೇ ಅಲ್ಲಿ ಅನೇಕ ಅತಿರಥ ಮಹಾರಥ ಸಾಹಿತಿಗಳು ಭಾಷೆಯ ಬೀಜವನ್ನು ಬಿತ್ತಿದರು. ಅದು ಬೆಳೆದು ಹೆಮ್ಮರವಾಯಿತು. ಆದ್ದರಿಂದ ಪರ್ಷಿಯದಾದ್ಯಂತ ಹರಡಿದ್ದ ಇಸ್ಲಾಮಿನ ತಿರುಳನ್ನು ಆ ನಾಡನ್ನು ಆಳಿದ ಯಾವುದೇ ರಾಜನಿಗೂ ನಾಶ ಮಾಡಲು ಸಾಧ್ಯವಾಗಲಿಲ್ಲ. ಆ ವಾಸ್ತವವನ್ನು ಇರಾನ್‌ನಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿ ಸ್ಪಷ್ಟಪಡಿಸಿತು.

ಮಲಯಾಳಂ ಮೂಲ: ಪೋಕರ್ ಕಡಲುಂಡಿ
ಕನ್ನಡಕ್ಕೆ: ಸ್ವಾಲಿಹ್ ತೋಡಾರು

1 Comment

  1. ಬಹಳ ಉಪಯುಕ್ತ ಲೇಖನ. ಪರ್ಷಿಯಾದ ಮೊದಲ ಕವಿತೆಯೇ ಬಂಡಾಯ ಕಾವ್ಯ ಎಂಬ ಅಂಶ ಮಹೋನ್ನತವಾದುದು

Leave a Reply to ಪುರುಷೋತ್ತಮ ಬಿಳಿಮಲೆ Cancel reply

*