ಭಾಗ 01
2023ರ ಮಾರ್ಚ್ ತಿಂಗಳ ಒಂದು ಸಂಜೆ. ಅಮೇರಿಕಾದ ಮನ್ಹಾಟನ್ ನಗರದ ಒಂದು ಅಪಾರ್ಟ್‌ಮೆಂಟಿನ ಕಿಟಕಿಯ ಬಳಿ ಕುಳಿತು ಚಿಂತಾಮಗ್ನನಾಗಿದ್ದೆ. ಕಿಟಕಿಯ ಹೊರಗೆ ಕಣ್ಣು ಹಾಯಿಸಿ ಬರೆಯಬೇಕಾದ ಪ್ರಬಂಧದ ಕುರಿತು ಚಿಂತಿಸುತ್ತಿದ್ದೆ. ಹೊರಗೆ ಮಳೆಹನಿಯಂತೆ ಮಂಜು ಸಣ್ಣದಾಗಿ ಉದುರುತ್ತಿದ್ದರೂ ನ್ಯೂಯಾರ್ಕ್‌ನಲ್ಲಿ ಚಳಿಯ ತೀವ್ರತೆ ಹೆಚ್ಚಿತ್ತು. ಹಾಗಾಗಿ ಜಾಕೆಟಿನ ಮೇಲೆ ಕಂಬಳಿ ಹೊದ್ದು ಮುದುಡಿ ಕುಳಿತಿದ್ದೆ. ಒಳಗೆ ಹೀಟರ್ ಚಲಿಸುತ್ತಿದ್ದರೂ ಹೊರಗಿನ ಚಳಿ ನನ್ನನ್ನು ಅಸ್ವಸ್ಥಗೊಳಿಸಿತ್ತು.
ಮೇಜಿನ ಮೇಲಿದ್ದ ಲಿಪ್‌ಬಾಮ್ ಹಚ್ಚಿ ಮತ್ತೆ ಆಲೋಚನೆಯಲ್ಲಿ ಮಗ್ನನಾದೆ. ಆದರೂ ಪ್ರಬಂಧಕ್ಕೆ ಬೇಕಾದ ಯಾವೊಂದು ಸಂಗತಿಗಳೂ ಹೊಳೆಯುತ್ತಲೇ ಇಲ್ಲ. ತಕ್ಷಣವೇ ಎರಡು ದಿನಗಳಲ್ಲಿ ಬರಲಿರುವ ರಮಝಾನನ್ನು ನೆನಪಿಸಿದೆ. ನನ್ನ ರೂಮ್ ಅಲ್ಲೋಲ ಕಲ್ಲೋಲವಾಗಿತ್ತು. ರಮಝಾನನ್ನು ಸ್ವಾಗತಿಸಲು ಯಾವುದೇ ಸಿದ್ಧತೆ ನಡೆಸಿರಲಿಲ್ಲ. ಆಚೀಚೆ ನೋಡದೆ ತಕ್ಷಣ ಮನೆಯನ್ನು ಒಪ್ಪ ಮಾಡಲು ತೊಡಗಿದೆ. ಹೆಚ್ಚೆಂದರೆ ಒಂದೂವರೆ ಗಂಟೆ. ರೂಮ್, ಅಡುಗೆಮನೆ, ಡೈನಿಂಗ್ ಹಾಲ್ ಸೇರಿ ಪೂರ್ತಿ ಮನೆಯನ್ನು ಸ್ವಚ್ಛಗೊಳಿಸಿದೆ. ಮತ್ತೆ ರೂಮಿಗೆ ಮರಳಿ ಪ್ರಬಂಧ ಬರೆಯಲು ಕುಳಿತುಕೊಳ್ಳುತ್ತಿದ್ದಂತೆಯೇ ಬೇಕಾದ ಎಲ್ಲಾ ಸಂಗತಿಗಳು ತಲೆಯಲ್ಲಿ ಸಾಲಾಗಿ ಬಂದು ಸಹಕರಿಸತೊಡಗಿತು. ಚಿಂತನೆಗೆ ಪೂರಕವಾದ ವಾತಾವರಣವೂ ಮುಖ್ಯ ತಾನೆ.
ಕೊಲಂಬಿಯಾ ಯುನಿವರ್ಸಿಟಿಯ ಈ ಬಾರಿಯ ಸೆಮಿಸ್ಟರ್ ತುಸು ಕಷ್ಟಕರವಾಗಿತ್ತು. ಕ್ಲಾಸ್ ಬಳಿಕ ಒಂದಷ್ಟು ಓದು, ಒಂದು ವಾರದ ಮಧ್ಯೆಯೇ ಮೂರು, ನಾಲ್ಕು ಪ್ರಬಂಧ ಬರೆದು ಒಪ್ಪಿಸಬೇಕಾಗಿತ್ತು. ತರಗತಿ, ಉಪವಾಸ, ಇಫ್ತಾರ್, ತರಾವೀಹ್ ಜೊತೆಯಾಗಿ ನಿರ್ವಹಿಸುವುದೇ ಒಂದು ಸಮಸ್ಯೆಯಾಗಿ ಬಿಟ್ಟಿತ್ತು. ಅದಕ್ಕಾಗಿ ಒಂದು ಸರಿಯಾದ ಪ್ಲಾನಿಂಗ್ ಮಾಡಿಟ್ಟಿದ್ದೆ. ಕಾಲೇಜಿಗೆ ತೆರಳುವ ದಾರಿ ಮಧ್ಯೆ ಖುರ್‌ಆನ್ ಪಾರಾಯಣ, ಸಹರಿಯ ವೇಳೆ ಬರಹ, ಇನ್ನಿತರ ಬಿಡುವು ಸಮಯವನ್ನು ಓದಿಗಾಗಿ ಮೀಸಲಿಟ್ಟೆ. ಇಫ್ತಾರ್, ತರಾವೀಹ್ ಗೆ ವಿವಿಧ ಮಸೀದಿಗಳನ್ನು ಸಂದರ್ಶಿಸಬೇಕು. ಅದಕ್ಕಾಗಿ ಮಸೀದಿಗಳ ಲಿಸ್ಟ್ ಸಿದ್ಧಪಡಿಸಿದೆ. ಯುನಿವರ್ಸಿಟಿ ಮಸೀದಿ, ಚಾರಿತ್ರಿಕ ಮಸೀದಿಗಳು ಲಿಸ್ಟಿನಲ್ಲಿ ಮುಖ್ಯವಾದವು. ಅಮೇರಿಕಾದಲ್ಲಿರುವ ಹೆಚ್ಚಿನ ಮಸೀದಿಗಳು ವಿವಿಧ ಪ್ರದೇಶಗಳಿಂದ ವಲಸೆ ಬಂದು ಇಲ್ಲಿ ನೆಲೆಸಿದ ಜನರಿಂದ ನಿರ್ಮಾಣಗೊಂಡಿವೆ. ಆದ್ದರಿಂದಲೇ ಅವು ಈಜಿಪ್ಟನ್ ಮಸೀದಿ, ಕುವೈತಿ ಮಸೀದಿ ಎಂದೆಲ್ಲಾ ಗುರುತಿಸಿಕೊಂಡಿವೆ. ಇವೆಲ್ಲವನ್ನೂ ಸಂದರ್ಶಿಸಬೇಕು; ಜಗತ್ತಿನ ವಿವಿಧ ಶ್ರೀಮಂತ ಸಂಸ್ಕೃತಿಗಳನ್ನು ಅನುಭವಿಸಬೇಕು. ನ್ಯೂಯಾರ್ಕ್ ನಗರದ ಒಂದು ವೈಶಿಷ್ಟ್ಯತೆ ಇಲ್ಲಿನ ವಿಭಿನ್ನ ಸಂಸ್ಕೃತಿಗಳು. ಸಂಸ್ಕೃತಿಗಳ ಪೋಷಣೆಯು ಇಲ್ಲಿನ ಆಡಳಿತದ ಮುಖ್ಯ ಅಜೆಂಡಾಗಳಲ್ಲಿ ಇರುವುದರಿಂದ ಸಾಂಸ್ಕೃತಿಕ ವೈಭವಗಳು ಇಲ್ಲಿ ಕಂಗೊಳಿಸುತ್ತಿವೆ.
ಇಲ್ಲಿನ ಮುಸ್ಲಿಮರ ಸವಿವರ ಅಧ್ಯಯನಕ್ಕೆ ಸೂಕ್ತ ಸಮಯ ರಮಝಾನ್ ತಿಂಗಳು. ನಾನು ಲಿಸ್ಟ್ ಮಾಡಿದ ಮಸೀದಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಶುರುಮಾಡಿದೆ. ಅಮೇರಿಕಾದ ಮುಸ್ಲಿಮರ ನಡುವೆ ಸಾಮಾನ್ಯವಾಗಿರುವ ಬಂಡವಾಳಶಾಹಿತ್ವದ ಪ್ರಭಾವವನ್ನು ಇಲ್ಲಿನ ಮಸೀದಿಗಳಲ್ಲಿ ನಮಗೆ ಒಂದೇ ನೋಟದಲ್ಲಿ ಗಮನಿಸಬಹುದು. ಮನ್ಹಾಟನ್ ನ ಹೆಚ್ಚಿನ ಮಸೀದಿಗಳಲ್ಲಿ ಇಫ್ತಾರಿಗೆ ಆನ್ಲೈನ್ ರಿಜಿಸ್ಟ್ರೇಷನ್ ಮಾಡಬೇಕು. ಇಫ್ತಾರಿಗೆ ತೆರಳಲು ಬಯಸುವ ಮಸೀದಿಯ ವೆಬ್‌ಸೈಟಿನಲ್ಲಿ ಇಮೈಲ್ ರಿಜಿಸ್ಟರ್ ಗೆ ಅವಕಾಶ ನೀಡಲಾಗುತ್ತದೆ. ಆಯಾ ಮಸೀದಿಯ ಇಫ್ತಾರಿನ ಕುರಿತ ಎಲ್ಲಾ ಮಾಹಿತಿಗಳನ್ನು ನಮಗೆ ಈ ಸೈಟಿನಲ್ಲೇ ಪಡೆಯಬಹುದು. ಇನ್ನು ವಿವಿಧ ಹೊಟೇಲು, ರೆಸ್ಟೋರೆಂಟ್‌ಗಳಲ್ಲಿ ನಡೆಯುವ ಇಫ್ತಾರ್ ಸಂಗಮಗಳಿವೆ. ಕೆಲವು ಸಕ್ರಿಯ ಸಂಘಟನೆಗಳು ನಡೆಸುವ ಈ ಇಫ್ತಾರ್ ಗಳು ‘ಚಾರಿಟಿ ಇಫ್ತಾರ್ ಕೂಟ’ ವೆಂದೇ ಕರೆಯಲ್ಪಡುತ್ತವೆ. ಇಂತಹ ಇಫ್ತಾರ್ ಗಳಲ್ಲಿ ಭಾಗಿಯಾಗಲು ಬಯಸುವವರು ಸಣ್ಣ ಮೊತ್ತ ಪಾವತಿಸಿ ಆನ್ಲೈನ್ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ. ಇಫ್ತಾರ್ ನ ಖರ್ಚು ಕಳೆದು ಉಳಿಯುವ ಹಣವನ್ನು ಫ್ಯಾಲಸ್ತೀನ್, ಸುಡಾನ್, ಲೆಬನಾನ್ ನಂತಹ ರಾಷ್ಟ್ರಗಳ ಕಲ್ಯಾಣಕ್ಕಾಗಿ ತೆಗೆದಿಡುತ್ತಾರೆ. ಅಧಿಕವೂ ಇಂತಹ ಇಫ್ತಾರ್ ಸಂಗಮಗಳಲ್ಲಿ ಚಾರಿಟಿಗಾಗಿಯೇ ಪ್ರತ್ಯೇಕ ಹಣ ಸಂಗ್ರಹಗಳು ನಡೆಯುತ್ತವೆ.
ಇದು ಬಿಟ್ಟರೆ ಗೆಳೆಯರು ಸೇರಿ ನಡೆಸುವ ಇಫ್ತಾರ್ ಸಂಗಮಗಳಿವೆ. ಇವು ‘ಪೋಟ್ ಲಕ್’ ಮಾದರಿಯಲ್ಲಿ ನಡೆಯುತ್ತವೆ. ಆದ್ದರಿಂದ ಇದನ್ನು ‘ಪೋಟ್ ಲಕ್ ಇಫ್ತಾರ್’ ಎಂದೇ ಕರೆಯುತ್ತಾರೆ. ಭಾಗವಹಿಸುವ ಪ್ರತಿಯೊಬ್ಬ ವಿವಿಧ ರುಚಿಕರ ತಿನಿಸುಗಳನ್ನು ಪಾಕ ಮಾಡಿ ಅಥವಾ ಖರೀದಿಸಿ ತರುತ್ತಾರೆ. ಎಲ್ಲರೂ ಪರಸ್ಪರ ಹಂಚಿಕೊಂಡು ತಿನ್ನುವುದರಿಂದ ಇಲ್ಲೊಂದು ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಇದರ ಸಿದ್ಧತೆ ಕೂಡಾ ಇಮೇಲ್ ಮೂಲಕವೇ ನಡೆಸುತ್ತಾರೆ. ‘ಪೋಟ್ ಲಕ್’ ನಲ್ಲಿ ಭಾಗವಹಿಸುವವರ ಮಾಹಿತಿ, ಅವರು ತರಲು ಬಯಸುವ ತಿನಿಸುಗಳು, ಅಲರ್ಜಿ ಉಂಟು ಮಾಡುವ ಪದಾರ್ಥಗಳು, ಹಲಾಲ್ ಸರ್ಟಿಫಿಕೇಶನ್ (ಖರೀದಿಸಿ ತರುವುದಿದ್ದರೆ ಪ್ಯಾಕೆಟ್ ನ ಮೇಲೆ ಹಲಾಲ್ ಮುದ್ರೆ ಇರಬೇಕು, ಸಿದ್ಧಗೊಳಿಸುವವರು ಅಡುಗೆಗೆ ಬಳಸುವ ಮಾಂಸದ ದ್ಸಬಹ್ ಕೈಯಿಂದಲೋ, ಮೆಷಿನ್ ಮೂಲಕವೋ ಎಂದು ನೋಂದಾಯಿಸಬೇಕು) ತುಂಬಲು ಎಲ್ಲರಿಗೂ ಅನುಕೂಲವಾಗುವ ಗೂಗಲ್ ಶೀಟ್ ನ್ನು ವಿತರಿಸಲಾಗುತ್ತದೆ. ಸಂಘಟಕರು ಇಫ್ತಾರನ್ನು ಅವರ ಪರ್ಸನಲ್ ವಿಲ್ಲಾಗಳಲ್ಲಿ ಅಥವಾ ಪಾರ್ಕ್ ಗಳಲ್ಲಿ ನಡೆಸುತ್ತಾರೆ.
ತಿಂಗಳ ಪ್ರಾರಂಭದ ನಿರ್ಣಯ ನಮಗೆಲ್ಲಾ ಇಲ್ಲಿ ಒಂದು ತೊಡಕಾಗಿ ಬಿಟ್ಟಿದೆ. ಸೌದಿ ಅರೇಬಿಯಾದಲ್ಲಿ ಚಂದ್ರ ದರ್ಶನವಾದರೆ ಇವರು ಇಲ್ಲಿ ರಮಳಾನಿನ ಘೋಷಣೆ ಮಾಡುತ್ತಾರೆ. ಕೆಲ ಹಿಲಾಲ್ ಸಂಸ್ಥೆಗಳು, ಧಾರ್ಮಿಕ ಸಂಘಟನೆಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಅವರು ತಮ್ಮದೇ ರೀತಿಶಾಸ್ತ್ರ ಬಳಸಿ ಚಂದ್ರದರ್ಶನಗೈಯ್ಯುತ್ತಾರೆ. ಮೊದಲ ದಿನ ಪ್ಲಾನ್ ಮಾಡಿದಂತೆಯೇ ಮುಂದೆ ಸಾಗಿದೆ. ಸ್ವಲ್ಪ ಬೇಗನೆ ರೆಡಿಯಾಗಿ ಇಫ್ತಾರ್ ಗೆ ಕೊಲಂಬಿಯಾ ಯುನಿವರ್ಸಿಟಿಯ ಮಸೀದಿಗೆ ತಲುಪಿದೆ. ಯುನಿವರ್ಸಿಟಿಯ ಒಳಗೆಯೇ ಮಸೀದಿ. ವಿಭಿನ್ನ ಧರ್ಮಗಳ ಜನರಿಗೆ ತಮ್ಮ ಧಾರ್ಮಿಕ ಆಚರಣೆಗಳ ನಿರ್ವಹಣೆಗಾಗಿ ನಿರ್ಮಿಸಿದ ಕಟ್ಟಡದ ಎರಡನೇ ಅಂತಸ್ತನ್ನು ಮಸೀದಿಗಾಗಿ ಮೀಸಲಿಡಲಾಗಿದೆ.
7 ಗಂಟೆಗೆ ಮಗ್ರಿಬ್ ಆಝಾನ್ ಮೊಳಗುತ್ತದೆ. ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ಮಸೀದಿ ಇಮಾಮರ ಭೋದನೆ ಇರುತ್ತದೆ. ಆ ಬಳಿಕ ಇಫ್ತಾರ್ ಸಿದ್ಧತೆಗಳು. ನಾವು ತಲುಪಿದಾಗ ಡಾ. ಇಬಾದುರ್ರಹ್ಮಾನ್ ಮಾತನಾಡುತ್ತಿದ್ದಾರೆ. ಇವರು ಬಾಂಗ್ಲಾದೇಶಿ ವಂಶಜ. ಆತ್ಮೀಯ ಮಾತುಗಾರಿಕೆ ಮತ್ತು ಹಸನ್ಮುಖಿ ವ್ಯಕ್ತಿತ್ವ ಅವರದ್ದು. ಅವರು ಯುನಿವರ್ಸಿಟಿ ನೇಮಿಸಿದ ಚಾಪ್ಲನ್ (ಮತ ಪಂಡಿತ) ಕೂಡಾ ಹೌದು. ವಿದ್ಯಾರ್ಥಿಗಳಿಗೆ ಧಾರ್ಮಿಕ ಬೋಧನೆ ನೀಡುವುದು, ಧಾರ್ಮಿಕ ಆಚರಣೆಗಳಿಗೆ ಸಂಬಂಧಿತ ಯುನಿವರ್ಸಿಟಿಯ ನಿಯಮಗಳಿಗೆ ನಿರ್ದೇಶನ ನೀಡುವುದು ಚಾಪ್ಲನ್ ನ ಕೆಲಸ. ನೋಂದಾಯಿತ ಎಲ್ಲಾ ಧರ್ಮಗಳಿಗೂ ಚಾಪ್ಲನ್ ಗಳನ್ನು ನೇಮಿಸಲಾಗುತ್ತದೆ. ಮುಸ್ಲಿಮರ ಚಾಪ್ಲನ್ ಆಗಿ ಇವರಿದ್ದರು. ಶಾಫಿ ಮದ್ಹಬ್ ಅನುಸರಿಸುವ ಇವರು ಮಸೀದಿ ತಲುಪುವ ಇತರ ಎಲ್ಲಾ ಮದ್ಹಬಿನ, ನವೀನ ಚಿಂತನಾಧಾರೆಯ ವ್ಯಕ್ತಿಗಳೊಂದಿಗೆ ಸಮಾನವಾಗಿ ವ್ಯವಹರಿಸಬೇಕಾಗುತ್ತದೆ.
“ಇಫ್ತಾರಿಗೆ ಎಂಟು ಮಂದಿಯ ಗುಂಪಾಗಿ ಕುಳಿತುಕೊಳ್ಳಬೇಕು.” ಭಾಷಣದ ಬಳಿಕ ಇಮಾಮರು ತಿಳಿಸಿದರು. “ಸಹೋದರ ಧರ್ಮದ ಗೆಳೆಯರನ್ನು ಜೊತೆಗೆ ತಂದಿದ್ದರೆ ಅವರನ್ನು ವಿಶೇಷವಾಗಿ ಸತ್ಕರಿಸಿ. ನೀವು ಗೆಳೆತನ ಬಯಸಿದರೆ ಇದು ಅದಕ್ಕಿರುವ ಸುವರ್ಣಾವಕಾಶ. ಬಯಸುವವರು ಅಪರಿಚಿತರ ಜೊತೆಯಾಗಿ. ಇಫ್ತಾರ್ ಮುಗಿಯುವ ವೇಳೆ ಗುಂಪಿನಲ್ಲಿರುವ ಅಪರಿಚಿತರೆಲ್ಲರೂ ಪರಸ್ಪರ ಗೆಳೆಯರಾದರೆ ಈ ಸಂಗಮ ಸಾರ್ಥಕಗೊಳ್ಳುತ್ತದೆ” ಎಂದೆಲ್ಲಾ ಇಮಾಮ್ ಮೈಕಿನಲ್ಲಿ ಗುಂಪಿನ ಮಧ್ಯೆ ನಡೆಯುತ್ತಾ ಹೇಳುತ್ತಿದ್ದರು.
ನಾನು ಕುಳಿತ ಗುಂಪಿನಲ್ಲಿ ಅಮುಸ್ಲಿಮರು ಸೇರಿ ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳಿದ್ದರು. ಅವರೆಲ್ಲರೂ ಪರಸ್ಪರ ಬ್ರದರ್ ಎಂದೇ ಸಂಬೋಧಿಸುತ್ತಿದ್ದರು. ಸಂಬೋಧನೆಯ ಆಚೆಗೆ ಅವರ ಆತ್ಮೀಯತೆ ನನ್ನನ್ನು ಅಚ್ಚರಿಗೊಳಿಸಿತು. ಇಫ್ತಾರಿಗೆ ಸೆನೆಗಲ್ ರಾಷ್ಟ್ರದ ವಿಶಿಷ್ಟ ಆಹಾರಗಳನ್ನು ಸಜ್ಜುಗೊಳಿಸಿದ್ದರು. ‘ಡಿಬಿ ಲಾಂಬ್’, ‘ಕುಸ್-ಕುಸ್’, ‘ಸಾಲಡ್’ ಗಳು ವಿಶೇಷವಾಗಿ ಅಲ್ಲಿತ್ತು. ‘ಡಿಬಿ ಲಾಂಬ್’ ಎಂಬುದು ಆಡಿನ ಮಾಂಸದ ಮೇಲೆ ಸ್ಪೆಷಲ್ ಮಸಾಲ ಸೇರಿಸಿದ ಆಫ್ರಿಕನ್ ಆಹಾರ. ‘ಕುಸ್-ಕುಸ್’ ತರಕಾರಿಗಳನ್ನು ಸೇರಿಸಿ ಮಾಡುವ ಒಂದು ತರಹದ ಆಫ್ರಿಕನ್ ಪಾಸ್ತಾ. ಜರ್ಜಿರ್ ಎಲೆ, ಟೊಮೊಟೋ, ಲೆಟಸ್ ಎಲೆಗಳನ್ನು ಸೇರಿಸಿ ಮಾಡಿದ ರುಚಿಯಾದ ಸಲಾಡ್ ಜೊತೆಗಿತ್ತು.
ಮೂಲ: ಎನ್ ಖಲೀಲ್ ನೂರಾನಿ
ಅನು: ಅನ್ಸೀಫ್ ಮುಈನಿ ಮಂಚಿ

ಎನ್ ಖಲೀಲ್ ನೂರಾನಿ
Student, Columbia University