ರಾಷ್ಟ್ರೀಯತೆಯ ಹುಸಿ ದುರಭಿಮಾನದ ಪೊಳ್ಳು ಕಥೆಗಳು: ಎರಿಕ್ ಹಾಬ್ಸ್ ಬಾಮ್ ಕೃತಿ ವಿಮರ್ಶೆ

“ಎರಿಕ್ ಹಾಬ್ಸ್ ಬಾಮ್ ರಾಷ್ಟ್ರೀಯತೆಯನ್ನು ಇಷ್ಟಪಟ್ಟಿರಲಿಲ್ಲ” ಎಂದು ವಿವರಿಸುತ್ತಾರೆ ಡೊನಾಲ್ಡ್ ಸಾಸೂನ್. ರಾಷ್ಟ್ರೀಯತೆಯ ಬಗ್ಗೆ ಇತ್ತೀಚೆಗೆ ಪ್ರಕಟವಾದ ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರರಾದ ಹಾಬ್ಸ್ ಬಾಮ್ ಬರೆದ ಪ್ರಬಂಧಗಳ ಸಮಾಹಾರಕ್ಕೆ ಮುನ್ನುಡಿ ಬರೆಯುತ್ತಾ ಅವರು ಹೀಗೆ ನುಡಿದಿದ್ದಾರೆ.

ರಾಷ್ಟ್ರವಾದ ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲು ಮತ್ತು ವಿಶ್ಲೇಷಿಸಲು ಸಾಕಷ್ಟು ಸಮಯವನ್ನು ಹಾಬ್ಸ್ ಬಾಮ್ ವ್ಯಯಿಸಿದ್ದರು. ಹಿಂದಿನ ಮತ್ತು ಸದ್ಯದ ಸಮಾಜಗಳಲ್ಲಿ ಅದರ ಅರ್ಥ ಮತ್ತು ಪ್ರಭಾವ ಹೇಗಿತ್ತೆಂಬ ವಿವರಗಳನ್ನು ಅನ್ವೇಷಿಸಲು ಅವರು ಪ್ರಯತ್ನಿಸಿದರು. ಅಂತಿಮವಾಗಿ, “ರಾಷ್ಟ್ರಗಳು ಮತ್ತು ರಾಷ್ಟ್ರೀಯತೆಯ ಇತಿಹಾಸವನ್ನು ಕಲಿಯುವ ಯಾವುದೇ ಗಂಭೀರ ಇತಿಹಾಸಕಾರರು ರಾಜಕೀಯ ರಾಷ್ಟ್ರೀಯವಾದದ ವಕ್ತಾರರಾಗಲು ಸಾಧ್ಯವಿಲ್ಲ” ಎಂಬ ತೀರ್ಮಾನಕ್ಕೆ ಅವರು ಬಂದರು.

1990 ರಲ್ಲಿ ಪ್ರಥಮವಾಗಿ ಪ್ರಕಟವಾದ ಸಣ್ಣ ಆದರೆ ಆಳ ಒಳನೋಟವುಳ್ಳ “1780 ರ ನಂತರದ ರಾಷ್ಟ್ರ ಮತ್ತು ರಾಷ್ಟ್ರೀಯವಾದ” ಎಂಬ ಕೃತಿಯಲ್ಲಿ ಹಾಬ್ಸ್ ಬಾಮ್ ರವರ ಈ ಒಳನೋಟ ಪ್ರಕಟವಾಗಿದೆ. ಸಾಸೂನ್ ಹೇಳಿರುವುದು ಅರ್ಥ ಆಗದವರು ಇದನ್ನೆಲ್ಲಾ ಗಮನಿಸಬೇಕಿದೆ. “ರಾಷ್ಟ್ರೀಯತೆಯ ಕುರಿತು” ಎಂಬ ಸರಳ ಶೀರ್ಷಿಕೆಯನ್ನು ಹೊಂದಿರುವ ಈ ಹೊಸ ಪ್ರಬಂಧಗಳ ಸಂಗ್ರಹ ಹಲವಾರು ಬರಹಗಳು, ಉಪನ್ಯಾಸಗಳು, ಪುಸ್ತಕ ವಿಮರ್ಶೆಗಳು ಮತ್ತು ಇತರ ಪುಸ್ತಕಗಳಿಂದ ಆಯ್ದ ಉಲ್ಲೇಖಗಳನ್ನು ಒಳಗೊಂಡ ಸಮಗ್ರ ಸಂಪುಟ ಎಂದು ಹೇಳಬಹುದು. “ರಾಷ್ಟ್ರಗಳು ಮತ್ತು ರಾಷ್ಟ್ರೀಯತೆ” ಕೃತಿ ಹತ್ತೊಂಬತ್ತನೇ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿದ್ದ ರಾಷ್ಟ್ರೀಯವಾದದ ಕಲ್ಪನೆ ಮತ್ತು ಅದರ ರಾಜಕೀಯ ಅಭಿವ್ಯಕ್ತಿಗಳ ವ್ಯವಸ್ಥಿತ ಅಧ್ಯಯನವಾಗಿದ್ದರೆ, ʼಆನ್ ನ್ಯಾಶನಲಿಸಂʼ ಕೃತಿಯು ವೈವಿಧ್ಯಮಯ ಮತ್ತು ಪ್ರಾಯಶಃ ಹೆಚ್ಚು ವೈಯಕ್ತಿಕ ಹಾಗೂ ಊಹಾತ್ಮಕ ವಿಷಯಗಳನ್ನು ಚರ್ಚಿಸುತ್ತದೆ. ಆದಾಗ್ಯೂ, ಅತೀಂದ್ರಿಯ ರಾಜಕೀಯದ ಒಂದು ವಿಧಾನ ಎಂಬ ನೆಲೆಯಲ್ಲಿನ ಅದರ ಸಾಮರ್ಥ್ಯದ ಬಗ್ಗೆ ಅವರ ಬಲವಾದ ಪೂರ್ವ ನಿಶ್ಚಯಗಳು ಸ್ಥಿರವಾಗಿ ನಿಂತಿರುವುದು ಕಂಡುಬರುತ್ತದೆ.

ಎರಿಕ್ ಹಾಬ್ಸ್ ಬಾಮ್

ಈ ಪೂರ್ವ ನಿಶ್ಚಯಗಳನ್ನು ಅರ್ಥಮಾಡಿಕೊಳ್ಳಲು ಇತಿಹಾಸಕಾರ ಹಾಗೂ ರಾಜಕೀಯ ಚಿಂತಕ ಎಂಬ ನೆಲೆಯಲ್ಲಿನ ಹಾಬ್ಸ್ ಬಾಮ್ ವೃತ್ತಿಜೀವನದ ಕಡೆಗೆ ಕಣ್ಣು ಹಾಯಿಸಿದರೆ ಸಾಕು. 1917 ರಲ್ಲಿ ಪೋಲಿಷ್ ಮತ್ತು ಆಸ್ಟ್ರಿಯನ್ ಮೂಲದ ಯಹೂದಿ ಪೋಷಕರಿಗೆ ಜನಿಸಿದ ಅವರು 1933 ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದಾಗ ರಾಷ್ಟ್ರೀಯತೆಯ ದಬ್ಬಾಳಿಕೆಯನ್ನು ನೇರವಾಗಿ ಅನುಭವಿಸಿದರು ಮತ್ತು ಅವರ ಕುಟುಂಬ ಬರ್ಲಿನ್ ನಿಂದ ಲಂಡನಿಗೆ ತೆರಳಬೇಕಾಯಿತು. ಅವರ ಎಡಪಂಥೀಯ ಒಲವು ವೃತ್ತಿಜೀವನದ ಬೆಳವಣಿಗೆಯ ಮೇಲೆ ಪರಿಣಾಮ ಬೀರಿತು. ಅವರ ಶೈಕ್ಷಣಿಕ ಮತ್ತು ರಾಜಕೀಯ ಚಟುವಟಿಕೆಗಳ ಮೇಲೆ ನಿಗಾ ಇಡಲು MI5 ಅವರ ಹೆಸರಿನಲ್ಲಿ ಒಂದು ವೈಯಕ್ತಿಕ ಫೈಲನ್ನೇ ತೆರೆದಿತ್ತು. ಇಪ್ಪತ್ತನೇ ಶತಮಾನದ ಅಗ್ರಗಣ್ಯ ಇತಿಹಾಸಕಾರರಲ್ಲಿ ಒಬ್ಬರೆಂಬ ಖ್ಯಾತಿ ಅವರಿಗೆ ಸಿಕ್ಕಿದ್ದರೂ ಕೇಂಬ್ರಿಡ್ಜ್ ಅಲ್ಲಿ ಉಪನ್ಯಾಸ ನೀಡದಂತೆ ತಡೆದು ಅವಕಾಶ ನಿರಾಕರಿಸಲಾಯಿತು. ಆದರೆ ಫ್ರೆಂಚ್ ಕ್ರಾಂತಿ ಮತ್ತು ಮೊದಲನೆಯ ಮಹಾಯುದ್ಧದ ನಡುವಿನ ಅವಧಿಯ ಇತಿಹಾಸದ ಬಗ್ಗೆ ಪಟ್ಟುಬಿಡದೆ ನಡೆಸಿದ ಅನ್ವೇಷಣೆಗಳು ಅವರನ್ನು ರಾಷ್ಟ್ರ ಕಲ್ಪನೆಯ ಸಮಯಾತೀತತೆಯನ್ನು ತೀವ್ರವಾಗಿ ಅನುಮಾನಿಸುವಂತೆ ಮಾಡಿತು ಮತ್ತು ರಾಷ್ಟ್ರವಾದದ ಆವಿಷ್ಕಾರ ಹತ್ತೊಂಬತ್ತನೆಯ ಶತಮಾನದ ನಂತರದ ಅತ್ಯಂತ ಜನಪ್ರಿಯ ರಾಜಕೀಯ ಸಂಪ್ರದಾಯ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿತು. ಭಾಷೆ ಅಥವಾ ಜನಾಂಗೀಯತೆ ಮುಂತಾದ ಯಾವುದೇ ನಿಯತಾಂಕಗಳನ್ನು ರಾಷ್ಟ್ರೀಯತೆಯ ಸ್ಥಿರ, ನಿರ್ವಿವಾದ ಮತ್ತು ಪೌರಾಣಿಕವಲ್ಲದ ತಾರ್ಕಿಕತೆಯಾಗಿ ಮತ್ತು ಪವಿತ್ರತೆಯನ್ನು ಪ್ರಕಟಿಸುವ ‘-ism’ ಗಳಾಗಿ ಸ್ವೀಕರಿಸಲು ಅವರು ಸಿದ್ಧರಿರಲಿಲ್ಲ.
ಪ್ರಸ್ತುತ ಸಂಪುಟದಿಂದ ಸ್ಪಷ್ಟವಾಗುವಂತೆ, ತಮ್ಮ ಸಹ ನಾಗರಿಕರ ರಕ್ತವನ್ನು ತನ್ನ ಹೆಸರಿನಲ್ಲಿ ಬೇಟೆಯಾಡಲು ಅನುವಾಗುವ ರೀತಿಯಲ್ಲಿ ಲಕ್ಷಾಂತರ ಜನರ ಮೇಲೆ ರಾಷ್ಟ್ರೀಯವಾದ ಹೊಂದಿರುವ ಅಪಾಯಕಾರಿ ಪ್ರಭಾವವನ್ನು ಗುರುತಿಸಲು ಕೂಡಾ ಅವರಿಗೆ ಸಾಧ್ಯವಾಗಿತ್ತು. ಹತ್ತೊಂಬತ್ತನೇ ಶತಮಾನದಲ್ಲಿ ರಾಷ್ಟ್ರವಾದ ಗಳಿಸಲು ಪ್ರಾರಂಭಿಸಿದ ಅತೀಂದ್ರಿಯ, ಶಾಶ್ವತ ಹಾಗೂ ವಾಸ್ತವಿಕವಲ್ಲದ ಸ್ವರೂಪವೇ ವಿರೋಧಿಗಳಿಗೆ ದಿಗಿಲು ಹುಟ್ಟಲು ಮತ್ತು ಅದು ಎಲ್ಲಾ ತರದ ವೈಚಾರಿಕ ಸೆಳೆತಗಳಿಗೂ ಹೊಂದುವಂತಾಗಲು ಕಾರಣವಾಗಿದೆ ಎಂದು ಅವರು ಮನಗಾಣಿಸುತ್ತಾರೆ. ಫಾಲ್ಸಿಫಿಕೇಶನ್ ತತ್ವ ಹಾಗೂ ಪುರಾವೆಗಳಲ್ಲಿ ಮಾತ್ರ ನಂಬಿ ವಾಸ್ತವೀಕರಿಸಲು ಸಾಧ್ಯವಿಲ್ಲದ್ದನ್ನು ತಳ್ಳಿ ಹಾಕುವ ಜಾಯಮಾನದ ಇತಿಹಾಸಕಾರರಾಗಿಯೂ ಅವರು ಸದ್ರಿ ವಿಶ್ಲೇಷಣೆ ನಡೆಸುತ್ತಿದ್ದಾರೆನ್ನುವುದು ಗಮನಾರ್ಹ.

ಪ್ರಸ್ತುತ ಸಂಪುಟದಲ್ಲಿನ ಪ್ರಬಂಧಗಳನ್ನು ಎರಡು ವಿಭಾಗಗಳಲ್ಲಾಗಿ ಸಂಕಲಿಸಲಾಗಿದೆ. ಒಂದನೆಯದ್ದು “ಇತಿಹಾಸದಲ್ಲಿ ರಾಷ್ಟ್ರೀಯತೆ” ಮತ್ತು ಎರಡನೆಯದ್ದು”ರಾಷ್ಟ್ರೀಯತೆಯ ಅಪಾಯಗಳು.” ಮೊದಲ ವಿಭಾಗದಲ್ಲಿ, ಹಾಬ್ಸ್‌ ಬಾಮ್ ರವರ ಅತ್ಯಂತ ಪ್ರಸಿದ್ಧ ಕೃತಿಗಳಾದ‌ ʼದಿ ಏಜ್ ಆಫ್ ರೆವಲ್ಯೂಷನ್ʼ, ʼದಿ ಏಜ್ ಆಫ್ ಕ್ಯಾಪಿಟಲ್ʼ ಮತ್ತು ʼದಿ ಏಜ್ ಆಫ್ ಎಂಪೈರಿʼನ ಸಂಪಾದಿತ ಸಂಪುಟ ಹಾಗೂ ʼದಿ ಇನ್ವೆನ್ಶನ್ ಆಫ್ ಟ್ರೆಡಿಶನ್ʼನ ಬಹುತೇಕ ಆಯ್ದ ಭಾಗಗಳಿವೆ. ಸಾಮ್ರಾಜ್ಯದ ಭೌಗೋಳಿಕ ವಿಸ್ತರಣೆಯ ತರ್ಕದ ಜಾಗದಲ್ಲಿ ಜನಾಂಗೀಯ-ಭಾಷಾ ವ್ಯತ್ಯಾಸಗಳನ್ನು ರಾಜಕೀಯ ಅಸ್ಮಿತೆಯ ರಚನೆ ಮತ್ತು ಸಾಕ್ಷಾತ್ಕಾರದ ಆಧಾರವಾಗಿ ತೆಗೆದುಕೊಳ್ಳುವ ನೇಷನ್-ಸ್ಟೇಟುಗಳು ಬಂದ “ದೀರ್ಘ ಹತ್ತೊಂಬತ್ತನೇ ಶತಮಾನದ” ಯುಗಗಳ ಬಗೆಗಿನ ಮೊದಲ ಭಾಗ ವಿವರಿಸುತ್ತದೆ. ʼದ ಇನ್ವೆನ್ಶನ್ ಆಫ್ ಟ್ರಡೀಶನ್ʼ ಕೃತಿಯ ಆಯ್ದ ಭಾಗಗಳು ಕೆಲವು ಸಾಂಕೇತಿಕ ಕ್ರಿಯೆಗಳ ಆಚರಣೆಗಳು ಸೈದ್ಧಾಂತಿಕ ಕಾಲ್ಪನಿಕತೆಯ ಶಕ್ತಿಯನ್ನು ಹೇಗೆ ಬಲಪಡಿಸುತ್ತದೆ ಎಂದು ವಿವರಿಸುತ್ತದೆ. ಜತೆಜತೆಗೆ, ಅದು ಹೇಗೆ ಸಮಾನವಾದ ಮೌಲ್ಯಗಳು, ಆಚರಣೆಗಳು ಮತ್ತು ದ್ವೇಷಗಳು ಇರುವ ಮಿಥ್ಯಾಜಗತ್ತನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಮಹತ್ವಪೂರ್ಣವಾಗಿ ಸಾಬೀತುಪಡಿಸುತ್ತಿದೆ. ಎರಡನೆಯ ವಿಭಾಗವು ರಾಷ್ಟ್ರೀಯತೆಯೊಂದಿಗೆ ವ್ಯವಹರಿಸುವ ಪುಸ್ತಕಗಳ ಕೆಲವು ವಿಮರ್ಶೆಗಳನ್ನು ಹೊಂದಿದೆ ಮತ್ತು ಎಂಭತ್ತರ ಫಾಕ್ಲ್ಯಾಂಡ್ ಯುದ್ಧದಂತಹ ಸ್ಥಳೀಯ ವಿಷಯಗಳ ಕುರಿತ ವ್ಯಾಖ್ಯಾನಗಳನ್ನು ಹೊಂದಿದೆ. ಸೋವಿಯತ್ ಒಕ್ಕೂಟದ ಪತನದ ನಂತರ ಯುರೋಪಿನಲ್ಲಿ ಉಂಟಾಗಲಿರುವ ಉಗ್ರಗಾಮಿ ರಾಷ್ಟ್ರೀಯತೆಯ ಉಗಮದ ಕುರಿತ ಭಯ ಹುಟ್ಟಿಸುವ ಹಾಗೂ ಬೇಸರದಿಂದ ತುಂಬಿದ ಎಚ್ಚರಿಕೆಯ ಮಾತು ಈ ಬರಹಗಳಲ್ಲಿ (ಮೊದಲ ವಿಭಾಗದಲ್ಲಿಯೂ ಸಹ) ಪುನರಾವರ್ತಿತವಾದ ಆಶಯ. ಹಾಬ್ಸ್ ಬಾಮ್ ತನ್ನ ಭವಿಷ್ಯವಾಣಿಗಳು ನಿಜವಾಗುತ್ತಿರುವುದನ್ನು ಮತ್ತು ಜನಪ್ರಿಯ ರಾಷ್ಟ್ರೀಯತೆಯ ಹೊಸ ಅಲೆಯು ಇಡೀ ಜಗತ್ತನ್ನು ಆವರಿಸುವುದನ್ನು ನೋಡುತ್ತಾ 2012 ರವರೆಗೆ ಬದುಕಿದ್ದರು.

ಯುಗಗಳ ಬಗೆಗಿನ ಸರಣಿಯ ಕೊನೆಯ ಪುಸ್ತಕವಾದ “ ದಿ ಏಜ್ ಆಫ್ ಎಕ್ಸ್ಟ್ರೀಮ್ಸ್”ನಲ್ಲಿ ಅವರು ಪ್ರತಿಪಾದಿಸಿದ ಹಾಗೆ, ಎರಡು ಮಹಾಯುದ್ಧಗಳ ನಡುವಿನ ಭಯಾನಕ ಸಮಯವನ್ನು ಹೋಲುವ ರೀತಿಯಲ್ಲಿ ರಾಷ್ಟ್ರೀಯತೆಯ ಹೆಸರಿನಲ್ಲಿ ಉಗ್ರತೆ ಮೆರೆಯುವ ರಾಜಕೀಯ ಇಚ್ಛಾಶಕ್ತಿಯ ಬಲವರ್ಧನೆ ನಡೆಯುತ್ತಿರುವ ಈ ಕಾಲದಲ್ಲಿ ಹಾಬ್ಸ್ ಬಾಮ್‌ ರವರ ರಾಷ್ಟ್ರೀಯತೆಯ ಕುರಿತಾದ ಆಶಯಗಳು ದಿನದಿಂದ ದಿನಕ್ಕೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ ಎಂದು ಬೇರೆ ಹೇಳಬೇಕಾಗಿಲ್ಲ. ಮುದ್ರಣ, ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪ್ರದಾಯಗಳ ಆವಿಷ್ಕಾರ ಮತ್ತು ವಿಮರ್ಶೆಯ ನಿರಾಕರಣೆ ನಮ್ಮ ಮೇಲೆ ಬಲವಂತವಾಗಿ ಹೇರಲಾಗುತ್ತಿರುವ, ಜನಾದೇಶಗಳ ಹೆಸರಿನಲ್ಲಿ ಸಾಮೂಹಿಕ ಭೂತಕಾಲವನ್ನು ಪೌರಾಣಿಕಗೊಳಿಸುವ ಪ್ರಯತ್ನಗಳು ಪ್ರಶ್ನೆಗೆ ಒಳಪಡದಿರುವ, ರಾಷ್ಟ್ರಾಭಿಮಾನದ ಸಂಕೇತಗಳು ಐತಿಹಾಸಿಕ ಸತ್ಯಾಸತ್ಯತೆ ಪರೀಕ್ಷಣೆಯ ಹಂಗಿಲ್ಲದೆ ವಿರಾಜಮಾನವಾಗುತ್ತಿರುವ ಈ ಅತಿರೇಕದ ಯುಗದಲ್ಲಿ, “ರಾಷ್ಟ್ರೀಯತೆಯು ಒಂದು ಐತಿಹಾಸಿಕ ವಿದ್ಯಮಾನವಾಗಿದ್ದು ನಿಕಟಪೂರ್ವ ಭೂತಕಾಲದ ಉತ್ಪನ್ನವಷ್ಟೆ. ಸ್ವತಃ ಬದಲಾವಣೆಗೆ ಒಳಪಡುತ್ತಿರುವ ಇದು ಅನಿರ್ದಿಷ್ಟವಾಗಿ ಮುಂದುವರಿಯುವ ಸಾಧ್ಯತೆಯಿಲ್ಲ” ಎಂದು ನಮ್ಮನ್ನು ನಾವೇ ನೆನಪಿಸಿಕೊಳ್ಳಬೇಕಾಗಿದೆ. ಸುಳ್ಳು ದುರಭಿಮಾನ ಮತ್ತು ಕಠಿಣ ನೀತಿಕಥೆಗಳಿಂದ ಪ್ರಯೋಜನ ಪಡೆಯುವ ಶಕ್ತಿಗಳನ್ನು ನಿಷ್ಠುರವಾಗಿ ಬಹಿರಂಗಪಡಿಸುವ ಈ ಸಮಯೋಚಿತ ಸಂಪುಟವನ್ನು ಸಂಪಾದಿಸಿದ ಡೊನಾಲ್ಡ್ ಸಾಸೂನ್ ರವರಿಗೆ ಖಂಡಿತಾ ಕೃತಜ್ಞತೆಗಳು ಸಲ್ಲಬೇಕು. ಅದೇ ವೇಳೆ, ದ್ವೇಷಪೂರಿತ ಪ್ರಚಾರಗಳಿಗೆ ಒಳಗಾಗುವ ಜನಸಾಮಾನ್ಯರ ದುರದೃಷ್ಟಕರ ಪರಿಸ್ಥಿತಿಗಳನ್ನು ಕೂಡಾ ಗಮನದಲ್ಲಿಟ್ಟುಕೊಳ್ಳಬೇಕು.

-ಇಮಾನ್ ಮಿತ್ರ
ಕನ್ನಡಕ್ಕೆ: ನಝೀರ್ ಅಬ್ಬಾಸ್

(ಲೇಖಕರು ದೆಹಲಿಯ ಪ್ರತಿಷ್ಠಿತ ಶಿವನಾಡಾರ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.)

Dr. Iman Mitra
Assistant Professor
Department of History and Archaeology
School of Humanities and Social Sciences (SHSS)
Shiv Nadar University

Leave a Reply

*