ಮಿಥ್ಯೆಗಳಿಂದ ತುಂಬಿದ ಲಕ್ಷದ್ವೀಪ ಇತಿಹಾಸ ಮತ್ತು ಸಾಹಿತ್ಯ

ಇತ್ತೀಚೆಗೆ ಲಕ್ಷದೀಪ ಚರಿತ್ರೆಯಾಧಾರಿತ ಕಾದಂಬರಿಯೊಂದನ್ನು ಓದಿದೆನು. ಲಕ್ಷದ್ವೀಪ ಇತಿಹಾಸದ ಭಾಗವಾದ ಬೀ ಕುಂಞೆ ಬೀಯವರ ಜೀವನಾಧಾರಿತ ಆ ಕಾದಂಬರಿಯು ಇನ್ನೇನು ಹೊರತರಬೇಕಿತ್ತಷ್ಟೆ. ಕಣ್ಣೂರು ಅರಕ್ಕಲ್ ರಾಜ್ಯಭಾರದ ಕ್ರೂರತೆಯನ್ನು ಕಟ್ಟಿಕೊಡುವ ಘಟನೆಯೊಂದನ್ನು ಕಾದಂಬರಿಯಲ್ಲಿ ವಿವರಿಸಲಾಗಿದೆ. ಅರಕ್ಕಲ್ ರಾಜನು ದ್ವೀಪ ನಿವಾಸಿಗಳಿಗೆ ಮಿತಿಮೀರಿದ ತೆರಿಗೆಯನ್ನು ಹೊರಿಸಿದ್ದನು. ಅಗತ್ತಿ ದ್ವೀಪದ ಮುಖ್ಯಸ್ಥ ಕುಂಞಹ್ಮದ್ ಇದನ್ನು ವಿರೋಧಿಸಿದರು. ತರುವಾಯ ಆದಾಯ ತೆರಿಗೆ ಸಂಗ್ರಹಕ್ಕಾಗಿ ಅರಕ್ಕಲ್ ಸೇನೆಯು ದ್ವೀಪಿಗೆ ಬಂದಿಳಿಯಿತು. ಮುಖ್ಯಸ್ಥನ ತೀರ್ಮಾಣವನ್ನು ಬದಲಾಯಿಸಲು ಪ್ರಯತ್ನಿಸಿದ ಸೇನೆಯು ವಿಫಲವಾಯಿತು. ಖಾಝಿಯಾಗಿದ್ದ ಕುಂಞಹ್ಮದ್ ಮುಸ್ಲಿಯಾರರು ತನ್ನ ನಿಲುವಿನಲ್ಲಿ ಅಚಲವಾಗಿ ನಿಂತರು. ದ್ವೀಪದ ಜನರ ಬವಣೆಗಳು ಅವರ ಮನದಾಳದಲ್ಲಿ ಆಳವಾಗಿ ಬೇರೂರಿದ್ದವು. ಇದನ್ನು ಸಹಿಸದ ಸೇನೆಯು ರಕ್ತದೋಕುಳಿಯನ್ನು ಹರಿಸಿತು. ಕುಂಞಹ್ಮದ್ ಅಮೀನ್ ಹಾಗೂ ಅವರ ಬಲಿಯ ಇಲ್ಲಮ್ ಮನೆ ಮಂದಿಯನ್ನು ವಧಿಸಲಾಯಿತು. ಇವೆಲ್ಲವನ್ನೂ ಕಂಡ ಬೀಕುಂಞೆ ಬೀ ಅಲ್ಲಿಂದ ಪಾರಾಗಿ ಪೂವತ್ತಿಯೋಡ್ ಎಂಬಲ್ಲಿ ಆಶ್ರಯ ಪಡೆದರು. ಪೂವತ್ತಿಯೋಡಿನ ಆಳು ಬೀಕುಂಞೆ ಬೀ ಇಲ್ಲಿರುವುದು ಸುರಕ್ಷಿತವಲ್ಲ ಎಂದರಿತು ಅವರನ್ನು ತೆಕ್ಕುಂತಾಲಿಯ ಗುಹೆಯನ್ನು ಹೋಲುವ ಕಂದಕವೊಂದರಲ್ಲಿ ಅಡಗಿಸಿದರು. ರಾತ್ರಿ ದೋಣಿಯೊಂದರಲ್ಲಿ ಅಮಿನಿ ದ್ವೀಪಿಗೆ ಕರೆತಂದು ಕಡ್ಕಯಂ ಎಂಬ ಮನೆಯಲ್ಲಿ ವಸತಿ ಸೌಕರ್ಯ ಒದಗಿಸಿದರು ಮತ್ತು ಅಲ್ಲಿನ ಒಬ್ಬರನ್ನು ಲಗ್ನವಾದರು ಎಂದಾಗಿದೆ ಚರಿತ್ರೆ. ಬರಹಗಾರನು ತನ್ನ ಭಾವನೆಗೆ ಅನುಸಾರವಾಗಿ ಕಾದಂಬರಿಯನ್ನು ಮುಂದುವರಿಸಿದ್ದಾರೆ. ಕಾದಂಬರಿಯು ಭಾವನೆ, ಚರಿತ್ರೆ, ಬರಹಗಾರನ ಆಶಯಗಳು ಜೊತೆಗೂಡಿ ಒಂದು ಆಸ್ವಾದ್ಯಕರ ಪುಸ್ತಕವಾಗಿ ಬಿಡುಗಡೆಯಾಗುತ್ತದೆ.

ಅಮಿನಿ ದ್ವೀಪಿನ ಪುರಕೋಟ್ ಓಮನಪೂವರ ಇದೇ ರೀತಿಯ ಮತ್ತೊಂದು ಚರಿತ್ರೆಯಿದೆ. ಓಮನಪೂವ್ ಊರಿನ ಹಿರಿಯ ಮುಖ್ಯಸ್ಥನಾದ ತನ್ನ ಪತಿ ಕುಟ್ಟಿತ್ತರವಾಡರೊಂದಿಗೆ ಸಂತುಷ್ಟ ಜೀವನ ನಡೆಸುತ್ತಿದ್ದರು. ಆ ವೇಳೆಗೆ ಅರಕ್ಕಲ್ ಆಲಿ ರಾಜರ ಪತ್ನಿಯು ತೀರಿಕೊಳ್ಳುತ್ತಾರೆ. ಪತ್ನಿಯೊಬ್ಬಳಿಗಾಗಿ ಹುಡುಕಾಟದಲ್ಲಿದ್ದ ಆಲಿ ರಾಜರಿಗೆ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಅತಿ ಸುಂದರಿಯಾದ ಹೆಣ್ಣೋರ್ವಳು ಇರುವುದಾಗಿ ತಿಳಿದುಬರುತ್ತದೆ. ರಾಜರ ಇಂಗಿತಕ್ಕೆ ಓಮನಪೂವ್ ವಿಸಮ್ಮತಿ ಸೂಚಿಸುತ್ತಾರೆ. ಕೊನೆಗೆ ಅರಕ್ಕಲ್ ಸೇನೆಯು ಧಾವಿಸಿ ಓಮನ ಪೂವನ್ನು ಕಣ್ಣೂರಿನ ಅರಮನೆಗೆ ಕೊಂಡೊಯ್ಯುತ್ತದೆ. ಓಮನಪೂವಿನೊಂದಿಗೆ ಅರಮನೆಗೆ ತೆರಳಿದ್ದ ಪತಿ ಕುಟ್ಟಿತ್ತರವಾಡ ಅರಮನೆಯಲ್ಲಿ ವಿವಾಹವನ್ನು ವಿಚ್ಚೇದಿಸಿದ ಬಳಿಕ ರಾಜನು ಓಮನಪೂವನ್ನು ವಿವಾಹವಾಗುತ್ತಾನೆ. ಈ ಘಟನೆಗೆ ಯಾವುದೇ ಪುರಾವೆಗಳೂ ಇಲ್ಲ ಎಂದು ಅರಕ್ಕಲ್ ಮನೆತನವು ಇದನ್ನು ಅಲ್ಲಗಳೆದಿದೆ.

ಕಲ್ಪೇನಿ ದ್ವೀಪಿನ ಸಾಣಂಕದಿಯಾ ಎಂಬ ಸುಂದರಿಯನ್ನು ಕಡಲ್ಗಳ್ಳನು ಅಪಹರಿಸಿದನು ಎಂಬ ಕಥೆಯು ಪ್ರಚಾರದಲ್ಲಿದ್ದರೂ ದಾಖಲೆಗಳಿಲ್ಲ. ಅಮಿನಿಯಲ್ಲಿ ಕ್ರೂರತೆಯನ್ನು ಮೆರೆದ ಬ್ರಿಟೀಷ್ ಸೇನೆಗೆ ತಂತ್ರಪೂರ್ವಕವಾಗಿ ವಿಷವುಣಿಸಿದ ಘಟನೆ, ಚೆತ್ತ್ಲಾತ್ತ್ ದ್ವೀಪಿನ ಆಶಿ ಆಲಿ ಅಹ್ಮದ್ ಶುಹದಾ ಹೋರಾಟಗಳು, ಆಕ್ರಮಿಸಲು ಬಂದ ಅರಕ್ಕಲ್ ಸೇನೆಯನ್ನು ಕಟ್ಟಿಹಾಕಿ ಶ್ರೀರಂಗಪಟ್ಟಣದ ಟಿಪ್ಪುವಿಗೆ ಒಪ್ಪಿಸಿ ಅರಕ್ಕಲ್ ರಾಜರಿಂದ ಮುಕ್ತಿಯನ್ನು ದೊರಕಿಸಬೇಕೆಂದು ಬೇಡಿದ ಅಮಿನಿಯ ಯೋಧರ ಸಾಹಸ ಇತ್ಯಾದಿ ಹೋರಾಟಗಳು ಮತ್ತು ಚಳುವಳಿಗಳು ಸ್ಪಷ್ಟವಾದ ದಾಖಲೆಗಳಿಲ್ಲದ ಕಾರಣ ಹೊಸ ತಲೆಮಾರಿಗೆ ಚರಿತ್ರೆಗಳು ಐತಿಹ್ಯವೆಂಬಂತಾಗಿದೆ.

ದ್ವೀಪಿನ ಜನಜೀವನ ಮತ್ತು ಚರಿತ್ರೆಗಳೆಲ್ಲವೂ ಜಾನಪದ ಸಾಹಿತ್ಯಗಳಲ್ಲಿ ಬಹಳ ಅಚ್ಚುಕಟ್ಟಾಗಿ ದಾಖಲಿಸಲಾಗಿವೆ. ಬಾಯಿ ಮಾತು ಮುಖಾಂತರ ಪ್ರಚಾರದಲ್ಲಿರುವ ಚರಿತ್ರೆ ಹಾಡುಗಳು ಶೇಖರಿಸಲ್ಪಟ್ಟಿದ್ದರೂ ಇನ್ನೂ ಹಲವಾರು ಜಾನಪದ ಹಾಡುಗಳು ಮತ್ತು ಸಾಹಿತ್ಯ ರಚನೆಗಳು ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವೈಯುಕ್ತಿಕವಾದ ಪ್ರಯತ್ನಗಳು ನಡೆದಿದೆಯಷ್ಟೆ. ಸರ್ಕಾರಗಳು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಗೇಕಿದೆ.

ಇಸ್ಲಾಮ್ ಧರ್ಮ ಸ್ವೀಕಾರದ ಕುರಿತಾದ ಚರಿತ್ರೆಯೂ ಇದಕ್ಕೆ ಹೊರತಾಗಿಲ್ಲ. ದ್ವೀಪಿನಲ್ಲಿ ಇಸ್ಲಾಮ್ ಧರ್ಮ ಪ್ರಚಾರಪಡಿಸಿದ್ದು ಪ್ರಥಮ ಖಲೀಫಾ ಅಬೂಬಕರ್ ಸಿದ್ದೀಖರ ಪೌತ್ರ ಉಬೈದುಲ್ಲಾರಾಗಿದ್ದಾರೆ ಎಂದಾಗಿದೆ ಅಲ್ಲಿನ ಬಹುತೇಕರ ನಂಬಿಕೆ.ಆಂದ್ರೋತ್ ಮಸೀದಿಯಲ್ಲಿ ಅವರ ಹೆಸರಿನಲ್ಲಿರುವ ಗೋರಿ ಮತ್ತು ಅವರು ಕಟ್ಟಿಸಿದ ಮಸೀದಿ ಹಾಗೂ ಮನೆಯಿದೆ. ಇಲ್ಲಿನ ಶೇಕಡಾ ನೂರರಷ್ಟು ಜನರು ಮುಸ್ಲಿಮರೆಂಬುವುದು ಗಮನಾರ್ಹ ಸಂಗತಿ. ಈ ವಿಷಯಗಳಲ್ಲಿ ಅಧ್ಯಯನ ನಡೆಸಬೇಕಾದ ಅನಿವಾರ್ಯತೆಯಿದೆ.

ದಮನಿತರು ಸಾಹಿತ್ಯದ ಮುಖಾಂತರ ಪ್ರತಿರೋಧ ಒಡ್ದುವುದನ್ನು ಕೂಡಾ ನಮಗೆ ಕಾಣಬಹುದು. ಓಮನಪೂವರ ಜಾನಪದ ಹಾಡಿನಲ್ಲಿ ಆಲಿ ರಾಜನು ಓಮನ ಪೂವಿನೊಂದಿಗೆ ಕೇಳುತ್ತಾನೆ “ಞಾನ್ ನನ್ನೋ ಕುಟ್ಟಿತ್ತನವಾ ನನ್ನೋ ಪೂವೇ? ಪೊನ್ನುಂ ಫಂಡುಂ ಎಲ್ಲಾಂ ಉಳ್ಳೋನಾನೆಂಗಿಲುಂ ಕುಟ್ಟಿತ್ತರವಾ ಅಝಗಿನು ಪೋರಾ” ಎಂದು ಓಮನ ಪೂವ್ ಜವಾಬಿತ್ತರು. ಹೀಗೆ ರಾಜನ ಪ್ರಶ್ನೆಗಳಿಗೆ ಓಮನ ಪೂವರ ಪ್ರತಿಕ್ರಿಯೆ ಒಂದು ರೀತಿಯ ಪ್ರತಿರೋಧವಾಗಿತ್ತು. “ನಾಂ ನನ್ನೋ ಕುಟ್ಟಿತ್ತರವಾ ನನ್ನೋ ಪೂವೇ? ಆದಿಲಾಯವಿನ ಕೆಟ್ಟುಂ ಮಾಳಿಗಯುಂ ಕುಟ್ಟಿತ್ತರವಾ ಚೆಟ್ಟಕ್ಕುಂ ಪೋರಾ. ನಾಂ ನನ್ನೋ ಕುಟ್ಟಿತ್ತರವಾ ನನ್ನೋ ಪೂವೇ? ಆದಿಲಾಯಾವಿನೆ ಆನಯ ಕೂಟಂ ಕುಟ್ಟಿತ್ತರವಾ ಕೋಳಿಕ್ಕುಂ ಪೋರಾ. ನಾಂ ನನ್ನೋ ಕುಟ್ಟಿತ್ತರವಾ ನನ್ನೋ ಪೂವೇ? ಆದಿಲಾಯವಿನ ಕುತ್ತಿಚ್ಚೇರ್ ಕುಟ್ಟಿತ್ತರವಾ ಚಾಯಕ್ಕುಂ ಪೋರಾ.”

ಅಂದು ಓಮನಪೂವ್ ಏಕಾಧಿಪತ್ಯಕ್ಕೆ ವಿರುದ್ಧವಾಗಿ ನೀಡಿದ ಹೇಳಿಕೆಗಳು ಇಂದಿಗೂ ಅಧಿಕಾರಿಗಳ ವಿರುದ್ಧ ದ್ವೀಪ ನಿವಾಸಿಗಳು ಪುನರುಚ್ಚಿಸುತ್ತಿರು ವರು. ಬೀಕುಂಞೆ ಬೀಯನ್ನು ಬಚ್ಚಿಟ್ಟು ಕಾಪಾಡಿದ ಬೀಕುಂಞೆ ಪಾರ ಮತ್ತು ಅವರ ಕುಟುಂಬದ ಹತ್ಯೆಗೈದು ಬಲಿಯ ಇಲ್ಲಿತ್ತಿಲಾವಳಿ ಕಡಲಿಗೆ ಹರಿಸಿದ ರಕ್ತವು ಇಂದಿಗೂ ದ್ವೀಪಿನ ಚರಿತ್ರೆ ಸ್ಮರಣೆಯಾಗಿ ಉಳಿದಿದೆ.

ಅರಕ್ಕಲ್ ಸೇನೆಯನ್ನು ಕಟ್ಟಿಹಾಕಿ ಟಿಪ್ಪುವಿನ ಮುಂದೆ ಹಾಜರುಪಡಿಸಿದ ಧೀರ ಯೋಧರ ಚರಿತ್ರೆಯ ಕುರುಹೆಂಬಂತೆ ದ್ವೀಪಿನ ಉತ್ತರ ಭಾಗದ ಉತ್ತರಾಧಿಕಾರ ಮತ್ತು ಆಡಳಿತ ವಿಷಯಗಳಲ್ಲಿ ಮೈಸೂರು ಆಡಳಿತದ ಅವಶೇಷಗಳನ್ನು ಕಾಣಬಹುದಾಗಿದೆ. ದ್ವೀಪಿನ ಜಾನಪದ ಸಾಹಿತ್ಯದಲ್ಲಿ ಉತ್ತರದ ಹಾಡುಗಳ ಸ್ವಾಧೀನವು ಕಂಡುಬರುತ್ತಿದೆ. ಆದರೆ ಭೌಗೋಳಿಕವಾದ ಒಂಟಿತನ ಮತ್ತು ದ್ವೀಪಿನ ಪ್ರಾದೇಶಿಕ ಭಾಷೆಯ ಪ್ರಭಾವದಿಂದಾಗಿ ಅಲ್ಲಿನ ಸಾಹಿತ್ಯ ವಿನ್ಯಾಸಗಳು ವ್ಯತಿರಿಕ್ತವಾದ ಅನುಭವವನ್ನು ನೀಡುತ್ತದೆ.

“ಅನ್ನಬಿಡ್ ಇನ್ನಬಿಡ್ ಏಗುಣಿಸಾ
ಕರೈ ನಿನ್ನವನೋಡ್ ಪರೈಗುಣಿಸಾ”
ಎಂದು ಪ್ರಾರಂಭವಾಗುವ ಹಾಡು ದ್ವೀಪಿನ ಬಹಳ ಸ್ವಾರಸ್ಯಕರವಾದ ಹಾಡುಗಳಲ್ಲೊಂದಾಗಿದೆ. ಮೀನು ಮತ್ತು ಮೀನಿನ ಗಾಳದ ನಡುವಿನ ಸಂಭಾಷಣೆಯಾಗಿದೆ ಈ ಹಾಡಿನ ಹೂರಣ.

ಮೀನು ನನ್ನನ್ನು ಬಿಟ್ಟು ಬಿಡಬೇಕೆಂದು ಗಾಳದೊಂದಿಗೆ ಭಿನ್ನವಿಸುತ್ತದೆ. ಪ್ರತ್ಯುತ್ತರವಾಗಿ ಗಾಳವು ” ನನ್ನೊಂದಿಗೆ ಕೇಳಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲ, ದಡದಲ್ಲಿರುವ ವ್ಯಕ್ತಿಯೊಂದಿಗೆ ಕೇಳಿಕೋ” ಎಂದಿತು. ಮೀನು ಮತ್ತು ಮೀನುಗಾರರ ನಡುವಿನ ಮಾತುಕತೆಗಳು, ಕಡಲಿನೊಂದಿಗಿರುವ ಸಂಬಂಧ ಇವೆಲ್ಲವೂ ಇನ್ನಿತರ ಪ್ರದೇಶಗಳ ಮೀನುಗಾರರಿಗಿಂತಲೂ ಬಹಳ ಗಾಢವಾಗಿದೆ. ದ್ವೀಪಿನ ಮೀನುಗಾರರು ತಮ್ಮ ಸ್ನೇಹಿತರನ್ನು ಏಕ ವಚನದಲ್ಲಿ ಸಂಭೋಧಿಸುವಂತೆ ಕಡಲು ಹಾಗೂ ಮೀನುಗಳೊಂದಿಗೆ ಮಾತಿಗಿಳಿಯುತ್ತಾರೆ. ಅಷ್ಟಪಾದಿ (octopus) ನೀರಾ ಕುಡಿಯಲು ಬರುವುದನ್ನು ವಾಸ್ತವಿಕತೆಗೆ ಸಮೀಕರಿಸಿ ವಿವರಿಸಲಾಗಿದೆ. ಜಾನಪದ ಹಾಡುಗಳಲ್ಲಿ ಚರಿತ್ರೆಯಾಧಾರಿತ ವಿಷಯಗಳನ್ನೂ ಕಾಣಬಹುದು. ಕಿಲ್ತಾನ್ ದ್ವೀಪಿನ ವಲಸೆಯ ಕುರಿತಾದ ವಿವರಣೆಗಳು ಈ ರೀತಿಯಾಗಿ ಜಾನಪದ ಹಾಡಿನಿಂದ ಲಭಿಸಿದ್ದಾಗಿದೆ. “ಎಲ್ಲಾವರುಂ ಕಾಟ್ಟಿಂಡಿಂಡಿಡುಂ ತೋಟಿಂಡಿಂ ಬನ್ನ ಪೋಕರ್ಕದಿಯಾ ಮುರಟ್ಟಿಂಡುಂ ಬನ್ನ” ಎಂದಾಗಿದೆ ಆ ಗೆರೆಗಳು. ಪೋಕರ್ ಕದಿಯಾ ಎಂಬ ಮಹಿಳೆ ಕಿಲ್ತಾನ್ ದ್ವೀಪಿನ ಮೂಲ ನಿವಾಸಿಯೂ, ಉಳಿದೆಲ್ಲರೂ ವಲಸಿಗರಾಗಿ ಬಂದವರು ಎಂದಾಗಿದೆ ಸಾರಾಂಶ.

ದ್ವೀಪ ನಿವಾಸಿಗಳ ಜೀವನದಲ್ಲೆಂಬಂತೆ ಸಾಹಿತ್ಯದಲ್ಲೂ ಸೂಫಿಗಳ ಪ್ರಭಾವವಿದೆ. ಸಾಹಿತ್ಯ ಕೃತಿಗಳು ‘ಕಲ್ವೈರ ಮಾಲೆ’ ಮತ್ತು ‘ಕೋಲ ಸಿರಿಮಾಲೆ ‘ ಯಾಗಿದೆ ಲಭ್ಯವಿರುವ ಅತೀ ಪುರಾತನವಾದ ಎರಡು ಸಾಹಿತ್ಯ ಕೃತಿಗಳು. ಸುಮಾರು 300 ವರ್ಷಗಳ ಇತಿಹಾಸವಿರುವ ಈ ಎರಡು ಕೃತಿಗಳು ಆಧ್ಯಾತ್ಮಿಕತೆಯ ವಿಷಯಗಳನ್ನೊಳಗೊಂಡಿವೆ. ಈ ಎರಡು ಕೃತಿಗಳ ಕರ್ತೃಗಳಾದ ಬಲಿಯ ಇಲ್ಲಂ ಪಳ್ಳಿಕೋ ಎಂಬ ಅಹ್ಮದ್ ಮುಸ್ಲಿಯಾರ್ ಹಾಗೂ ಅಹ್ಮದ್ ನಖ್ಶಬಂದಿ ಎಂದು ಖ್ಯಾತರಾದ ಕಿಳುತ್ತನ್ ತಂಗಳ್ ಇಬ್ಬರೂ ಕೂಡಾ ಸೂಫಿಗಳಾಗಿದ್ದರು. ಪಳ್ಳಿಕೋ ಮಕ್ಕಾಗೆ ತೆರಳಿ ಚೀರ್ವನಿ ತ್ವರೀಖತಿಗೆ ಸೇರಿ ಅಲ್ಲಿಯೇ ಮರಣಹೊಂದಿದರು. ಅಹ್ಮದ್ ನಖ್ಶಬಂದಿ ನಖ್ಶಬಂದಿ ತ್ವರೀಖತ್ ಸ್ವೀಕರಿಸಿ ಅಮಿನಿ ದ್ವೀಪಿನಲ್ಲಿ ಇಹಲೋಕ ತ್ಯಜಿಸಿದರು.

ಒಬ್ಬನಿಗೆ ಪ್ರೀತಿಸಲು ಇಬ್ಬರು ಸುಂದರಿಗಳಿರುವರು. ಬೇಲತ್ತಿ ಹಾಗೂ ಬಾಲತ್ತಿ. ಬೇಲತ್ತಿ ಎಂದರೆ ಕೆಲಸದಾಳು. ಬಾಲತ್ತಿ ಸುಂದರಿಯಾದ ತರುಣಿ. ಆತ್ಮವನ್ನು ಸುಂದರಿಯಾದ ಪ್ರೇಯಸಿಗೆ ಮತ್ತು ಶರೀರ ವಾಂಛೆಗಳನ್ನು ಬಡ್ಕತಿ ಕಸರ್ಮಂಡಕದಲ್ಲಿರುವ ಸುಂದರಿಯ ಕೆಲಸದಾಳಾಗಿಯೂ ಕೋಲಸಿರಿಮಾಲೆಯಲ್ಲಿ ಹೋಲಿಸಲಾಗಿದೆ. ” ಹೈರಾಯ ಬೀವಿನೆ ಪಿಡಿಚೋರೆಲ್ಲಾಮ್ ಖೇದಿಚ್ಚ್ ಕೈ ಕಡಿಚ್ಚಾನ್ಡ್ ಪೋವುಮ್ ” ಎಂಬ ಗೆರೆಗಳ ಮೂಲಕ ಕೆಲಸದಾಳುವಿನ ಹಿಂದೆ ಹೋದವರೆಲ್ಲರೂ ಅಪಾಯಕ್ಕೆ ಸಿಲುಕಿ ಮೃತರಾಗುವರು ಎಂದು ತಿಳಿಸಲಾಗಿದೆ. ಕೋಲ ಸಿರಿಮಾಲೆಯ ವಿಶೇಷತೆ ಬಾಯಿಮಾತಿನಿಂದ ಪ್ರಚಲಿತದಲ್ಲಿರುವ ವಿಷಯಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಬಹಳ ಸೊಗಸಾಗಿ ವಿವರಿಸಲಾಗಿದೆ. ದ್ವೀಪಿನ ಜಾನಪದ ಹಾಡುಗಳಲ್ಲಿ ಕೂಡಾ ಈ ರೀತಿಯ ಪ್ರಾದೇಶಿಕ ಭಾಷೆಯ ಬಳಕೆ ಕಾಣಲಸಾಧ್ಯ.

ನಾನು ನನ್ನ ಊರಿನ ಸಾಹಿತ್ಯ ಪರಂಪರೆಯ ಕುರಿತು ಅಧ್ಯಯನ ನಡೆಸಿದಾಗ ದೊರಕಿದ ಸಾಕ್ಷ್ಯಾಧಾರಗಳ ಪ್ರಕಾರ ಬಲಿಯ ಇಲ್ಲಂ ಪಳ್ಳಿಕೋಯ ಮತ್ತು ಅಹ್ಮದ್ ನಖ್ಶಬಂದಿಯವರ ಕಾಲದ ಬಳಿಕ ಎಲ್ಲಾ ತಲೆಮಾರುಗಳಲ್ಲಿಯೂ ಸುಮಾರು 10ರಷ್ಟು ಬರಹಗಾರರಿದ್ದರು. ಕೇವಲ ಎರಡು ಕಿ. ಮೀ ವಿಸ್ತೀರ್ಣವಿರುವ ಪ್ರದೇಶದಲ್ಲಿ ಇದೊಂದು ಆಶ್ಚರ್ಯಕರ ಸಂಗತಿಯಾಗಿದೆ. ಇವರೆಲ್ಲರೂ ತನ್ನದೇ ಆದ ಕ್ಷೇತ್ರಗಳಲ್ಲಿ ಗ್ರಂಥ ರಚನೆ ನಡೆಸಿದವರಾಗಿದ್ದಾರೆ. ಬಹುತೇಕ ಕೃತಿಗಳು ಮೂಲ ಕೃತಿಯ ಕೈ ಬರಹಗಳಲ್ಲಿಯೇ ಇಂದಿಗೂ ಲಭ್ಯವಿದೆ.
ಕಪ್ಪಲ್ ಪಾಟ್ ಎಂಬ ಗ್ರಂಥವೊಂದಿದೆ.ಅಮೇರಿಕಾದಿಂದ ಹಡಗು ನಿರ್ಮಿಸಿ ಕಿಲ್ತಾನ್ ದ್ವೀಪದ ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ನುಚ್ಚು ನೂರಾಗುವ ಘಟನೆಯನ್ನು ವಿವರಿಸುವ ಒಂದು ಸುದೀರ್ಘ ಕಾವ್ಯವಾಗಿದೆ. ಪೋಕರ್ಚಿಯೋಡ್ ಕಾಕ ಎಂದು ಖ್ಯಾತರಾದ ಕುಂಞಿ ಅಹ್ಮದ್ ಮುಸ್ಲಿಯಾರರು ಇದರ ಕರ್ತೃ. ಪರವಮಾಲ ಎಂದು ಪ್ರಚಾರದಲ್ಲಿರುವುದು ಇದರ ಒಂದು ಭಾಗ ಮಾತ್ರವಾಗಿದೆ.” ಕೊತ್ತಲ್ಲಿ ಕೊತ್ತಲ್ಲಿ ಪುಳ್ಳಿ ಪರವೇ ಕೊತ್ತಿ ಕೂಡಿಯನ್ನಾಂಡಾಮಾಲ್ ಪರವೇ” ಎಂದು ಕೇಳುವಾಗ ಮಲಯಾಳಿಗಳು ಆಕಾಶದಲ್ಲಿ ಹಾರಾಡುವ ಪಕ್ಷಿಗಳ ಕುರಿತು ಚಿಂತಿಸುವುದು ಸಹಜ. ಆದರೆ ಕಡಲ ಮೇಲೆ ರೆಕ್ಕೆ ಬಿಡಿಸಿ ಹಾರಾಡುವ ಪರವ ಎಂಬ ಮೀನಾಗಿದೆ ಇಲ್ಲಿನ ಕಥಾಪಾತ್ರ . ಹಡಗು ಧ್ವಂಸವಾದ ಘಟನೆಯ ಮೂಲಕ ದ್ವೀಪದ ಜೀವನವನ್ನು ಕಾಕ ಬಹಳ ಮನೋಹರವಾಗಿ ವಿವರಿಸುತ್ತಾರೆ.

ಮಹರಂಗೀಸ್ ರಾಣಿಯ ಜೀವನವನ್ನು ಕಟ್ಟಿಕೊಡುವ ಒಂದು ಕಾದಂಬರಿಯಾಗಿದೆ ಮಹರಟೀಸ್ ಮಾಲೆ. ಬಿಯ್ಯಾಪುರ ಅಬ್ದುರ್ರಹ್ಮಾನ್ ಎಂಬ ಕವಿ ಇದನ್ನು ರಚಿಸಿರುವರು. ರಾಣಿಯು, ತನ್ನನ್ನು ವರಿಸಲು ಬರುವ ರಾಜಕುಮಾರರೊಂದಿಗೆ ಕುಲ್ ಸನೋವನೊಂದಿಗೆ ಏನು ತಪ್ಪು ಮಾಡಿದೆ? ಎಂದು ಪ್ರಶ್ನಿಸುತ್ತಾಳೆ. ಉತ್ತರವಿಲ್ಲದಿದ್ದರೆ ವಧಿಸಲಾಗುತ್ತಿತ್ತು. ಅರಬಿ ಕಥೆ ಪ್ರೇರಿತ ಈ ಕಥಾಗಾನವು ಕಾವ್ಯ ಭಂಗಿಯಲ್ಲಿ ಬಹಳ ಮುಂಚೂಣಿಯಲ್ಲಿದೆ. ಪ್ರವಾದಿವರ್ಯರು ಮೊಲೆ ಹಾಲು ಕುಡಿಯುವುದನ್ನು ಪ್ರಮೇಯವಾಗಿಟ್ಟುಕೊಂಡು ಬಿರಿಯಂ ತೆತ್ತಿಯೋಡ್ ಮೂಸಾನ್ ಕುಟ್ಟಿ ಮುಸ್ಲಿಯಾರರು ರಚಿಸಿರುವ ಮುಲಕುಡಿ ಮಾಲೆ ಬಹಳ ಪ್ರಸಿದ್ಧವಾಗಿದೆ. ಪ್ರವಾದಿವರ್ಯರ ಜೀವನ, ಪರಿಸರ ಮತ್ತು ಅಂದಿನ ಆಚಾರಗಳಿಗೆ ಈ ಗ್ರಂಥವು ಬೆಳಕು ಚೆಲ್ಲುತ್ತದೆ.
ಯೂಸುಫ್ ಖಿಸ್ಸಾವನ್ನು ಐಶ್ವರ್ಯೋಡ ಮುತ್ತುಕೋಯ ತಂಗಳ್ ಆಂದ್ರೋತ್, ಪುರಾಡಂ ಕುಂಞಿಕೋಯ ತಂಗಳ್ ಆಂದ್ರೋತ್, ಅಹ್ಮದ್ ನಖಶಬಂದಿ ತಂಗಳ್ ಕಿಲ್ತಾನ್ ಎಂಬೀ ಮೂವರು ರಚಿಸಿದ್ದಾರೆ. ಇವುಗಳ ಪೈಕಿ ಪ್ರಥಮವಾಗಿ ರಚಿಸಲ್ಪಟ್ಟದ್ದು ಕಿಲ್ತಾನ್ ತಂಗಳರ ಕೃತಿಯಾಗಿದ್ದರೆ, ಪ್ರಸಿದ್ಧಿ ಪಡೆದಿರುವುದು ಐಶ್ವರ್ಯೋಡ ಮುತ್ತುಕೋಯ ತಂಗಳರ ರಚನೆಯಾಗಿದೆ.

ದ್ವೀಪ ಸಾಹಿತ್ಯವು ಇಂದು ಸಣ್ಣಕತೆ, ಕವನ, ಕಾದಂಬರಿ ಎಂಬಿತ್ಯಾದಿ ಸಾಹಿತ್ಯ ರಚನೆಗಳಿಗೂ ವಿಸ್ತರಿಸಿವೆ. ಇವುಗಳ ಪೈಕಿ ಯುಸಿಕೆ ತಂಗಳ್ ಹಾಗೂ ಅಬೂ ಸಾಲಾ ಕೋಯಾ ಮಂಡಲಿಯವರ ಕಥೆಗಳು ಬಹಳ ಮುಖ್ಯವಾಗಿದೆ. ಹಳೆ ತಲೆಮಾರಿನ ಜನ ಜೀವನಕ್ಕೆ ಬೆಳಕು ಚೆಲ್ಲುವ ಯುಸಿಕೆ ಕೃತಿಯಲ್ಲಿ ವಿಡಂಬನೆ ಮತ್ತು ಕಥಾ ಸೌಂದರ್ಯವನ್ನು ರರ್ಶಿಸಬಹುದು. ತಂಗಳರ ಕಡಲಿನ ಕಥೆಗಳಲ್ಲಿ ಪ್ರಣಯ ಹಾಗೂ ಕಡಲು ಜೊತೆಯಾಗುವ ಅಪೂರ್ವವಾದ ಭಂಗಿಯಿದೆ.ಅಬೂ ಸಾಲಾ ಕೋಯಾ ಮಂಡಲಿ ಕಥೆಗಳಲ್ಲಿರುವ ಹಾಸ್ಯಭಂಗಿಯು ಓದುಗರ ಮನ ಮುಟ್ಟುವಂತಿದೆ. ಇದುವರೆಗೂ ನಾಲ್ಕು ಕಾದಂಬರಿಗಳು ಪ್ರಕಟಗೊಂಡಿವೆ. ಅವುಗಳಲ್ಲಿ ‘ಎಂಡೆ ಕೋಲೋಡ’, ತಖಿಯುದ್ದೀನ್ ಅಲಿ ಸಿ.ಎಚ್ ಬರೆದಿರುವ ‘ಪಡಪುರಪ್ಪಾಡ್’ ಮತ್ತು ಅಸದ್ ಮುತ್ತೂಸರ ‘ಚೆಗುತ್ತಾನ್ ಕ್ವಾಟೇರ್ಸ್’ ಎಂಬೀ ಮೂರು ಕಾದಂಬರಿಗಳು ಕಿಲ್ತಾನ್ ನಿವಾಸಿಗಳದ್ದಾಗಿದ್ದರೆ, ಉಳಿದೊಂದು ಕಾದಂಬರಿಯು ಹಂಸು ಶಾ ಅಗತ್ತಿಯವರ ‘ಸ್ನೇಹ ಬಂಧ’ ಆಗಿದೆ. ಇಲ್ಲಿನ ಪೂರ್ವಜರು ತಮ್ಮ ಐತಿಹ್ಯ ಕಥೆಗಳಲ್ಲಿ ದ್ವೀಪಿನ ಉತ್ಪತ್ತಿ, ವಲಸೆ, ಮತಾಂತರ ಹಾಗೂ ಇನ್ನಿತರ ಚಾರಿತ್ರಿಕ ಘಟನಾವಳಿಗಳನ್ನು ಪ್ರತಿಪಾದಿಸಿದ್ದಾರೆ.ಇಲ್ಲಿನ ಜಾನಪದ ಹಾಡುಗಳು, ಮಾಲೆ ಹಾಡುಗಳು, ಬಾಯಿಮಾತಿನ ಮೂಲಕ ಚಾಲ್ತಿಯಲ್ಲಿರುವ ಹಾಡುಗಳೆಲ್ಲವೂ ಇಲ್ಲಿನ ಭಾಷೆ ಮತ್ತು ಜನಜೀವನವನ್ನು ವಿವರಿಸಿದೆ. ಪ್ರಕೃತಿ ವಿಕೋಪಗಳಿಂದ ನಷ್ಟವಾಗಿರುವ ಲಿಖಿತ ಪರಂಪರೆಗಳನ್ನು ಲಭ್ಯವಿರುವ ಗ್ರಂಥಗಳಿಂದಲೂ ಹಾಡುಗಳಿಂದಲೂ ನಾವು ಸಂಶೋಧನೆ ನಡೆಸಬೇಕಾಗಿದೆ. ಮುಹ್ಯಿದ್ದೀನ್ ಮಾಲೆಗಿಂತಲೂ ಪುರಾತನವಾದ ಬರಹಗಳು ಇರುವುದಾಗಿ ಅರಬಿ ಲಿಪಿಯಲ್ಲಿ ದ್ವೀಪಿನ ಪ್ರಾದೇಶಿಕ ಭಾಷೆಯಲ್ಲಿ ಗುರುತಿಸಲಾಗಿದೆ. ಆಳವಾದ ಸಾಹಿತ್ಯ ಸಂಶೋಧನೆಗಳು ದ್ವೀಪದ ಭಾಷಾ ಪರಂಪರೆ, ವಲಸೆ, ಕುರಿತಾದ ಇನ್ನಷ್ಟು ಮಾಹಿತಿಗಳನ್ನು ನಮಗೆ ನೀಡಬಹುದೆಂದಾಗಿದೆ ನನ್ನ ನಂಬಿಕೆ.

ಮೂಲ : ಇಸ್ಮತ್ ಹುಸೈನ್
ಕನ್ನಡಕ್ಕೆ : ಆಶಿಕ್ ಅಲಿ ಕೈಕಂಬ

Leave a Reply

*