ಮುಸ್ಲಿಮ್ ಮಹಿಳೆಯರ ಹಿಜಾಬ್, ಸ್ತ್ರೀವಾದ ಮತ್ತು ವಸಾಹತುಶಾಹಿತ್ವ

ತಮ್ಮ ಸ್ವಂತ ಬದುಕಿನ ಬಗ್ಗೆ ನಿರ್ಧಾರ ಮಾಡುವ ಆಯ್ಕೆ ಹೊಂದಿರುವ ಮುಸ್ಲಿಂ ಮಹಿಳೆಯರನ್ನು ಸಾಮಾನ್ಯವಾಗಿ ಪಿತೃಪ್ರಭುತ್ವದ ಸಂತ್ರಸ್ತರು ಎಂದು ಒತ್ತು ಕೊಟ್ಟು ನೋಡುವ ದೃಷ್ಟಿಕೋನದಿಂದ ಅಪಾಯಕಾರಿ ದುಷ್ಪರಿಣಾಮಗಳಿವೆ. ಇಂಗ್ಲಿಷ್ ಆಂಡ್ ಫಾರಿನ್ ಲ್ಯಾಂಗ್ವೇಜ್ ವಿವಿಯ ಪ್ರಾಧ್ಯಾಪಕಿ ಕೂಡಾ ಆಗಿರುವ ಲೇಖಕಿ ಡಾ ಬಿ ಎಸ್ ಶೆರಿನ್ ಅವರ ಇತ್ತೀಚಿನ ‘Gendering Minorities: Muslim Women And Politics of Modernity’ ಎಂಬ ಕೃತಿ ಮಹಿಳೆಯೋರ್ವಳು ನಂಬಿಕೆ ಮತ್ತು ಸ್ತ್ರೀವಾದಿ ಅಸ್ಮಿತೆಯ ಪೈಕಿ ಯಾವುದಾದರೊಂದನ್ನು ಆಯ್ಕೆ ಮಾಡಿಯೇ ತೀರಬೇಕೆಂದು ಹೇರುವ ಉದಾರವಾದಿಗಳ ನಿಲುವನ್ನು ತರಾಟೆಗೆ ತೆಗೆದುಕೊಂಡಿದೆ. ಆಧುನಿಕತಾವಾದ ಮತ್ತು ರಿಲಿಜನ್ ನಡುವೆ ಇದೆ ಎನ್ನಲಾಗುವ ಬೈನರಿಯನ್ನು ಆಧರಿಸಿಕೊಂಡು ಹೇಗೆ ಇಂತಹ ಹುಸಿ ದ್ವಂದ್ವವನ್ನು ಸೃಷ್ಟಿಸುತ್ತಿದ್ದಾರೆ ಎಂಬುದನ್ನು ವಿವರಿಸಿದೆ. ಮುಸ್ಲಿಂ ಮಹಿಳೆಯನ್ನು ʼಪರದೆಯಿಂದ ಹೊರಕ್ಕೆ ತರುವುದುʼ ಮೂಲತಃ ಪಾಶ್ಚಿಮಾತ್ಯ / ವಸಾಹತುಶಾಹಿಯ ಒಂದು ಫ್ಯಾಂಟಸಿಯಾಗಿತ್ತು. ವಿಪರ್ಯಾಸವೆಂದರೆ, ಇವತ್ತು ಎಲ್ಲಾ ತರಹದ ಸ್ತ್ರೀವಾದಿಗಳು ಕೂಡಾ ಮುಸ್ಲಿಂ ಮಹಿಳೆಯರ ರಕ್ಷಣೆಯ ನೆಪದಲ್ಲಿ ಈ ಫ್ಯಾಂಟಸಿಯನ್ನು ಅಪ್ರಜ್ಞಾಪೂರ್ವಕವಾಗಿ ಮುಂದುವರಿಸುತ್ತಿದ್ದಾರೆ ಎಂದು ಶೆರಿನ್ ವಾದಿಸುತ್ತಾರೆ. ಮುಸ್ಲಿಂ ಮಹಿಳೆಯರ ಸಂರಕ್ಷಣಾ ಕಾರ್ಯದಲ್ಲಿ ಕಂಡು ಬರುವ ಈ ‘ಅತಿ ತವಕʼ ಯಾತಕ್ಕಾಗಿ ಎಂದು ಶೆರಿನ್ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಶೆರಿನ್‌ ಬಿ.ಎಸ್

ನಮ್ಮಲ್ಲಿರುವ “ಪ್ರಗತಿಪರ ಸ್ತ್ರೀವಾದಿಗಳ’ ದೊಡ್ಡ ಬಿಂದಿಗಳನ್ನು ಅವರ ಸಾಂಸ್ಕೃತಿಕ ಅಭಿವ್ಯಕ್ತಿಯ ಭಾಗವಾಗಿ ಪರಿಗಣಿಸಲಾಗುತ್ತದೆ, ಆದರೆ ಓರ್ವ ಮುಸ್ಲಿಂ ಮಹಿಳೆಗೆ ಇದಕ್ಕೆ ಅವಕಾಶವಿಲ್ಲ. ಒಬ್ಬಳು‌ ಬಿಂದಿಯನ್ನು ಧರಿಸುವುದನ್ನು ಅವಳ ಆಯ್ಕೆ ಎಂದು ಪರಿಗಣಿಸಲ್ಪಡುತ್ತದೆಯಾದರೂ, ಹಿಜಾಬ್ ಅಥವಾ ಬುರ್ಖಾವನ್ನು ಹೇರಿಕೆಯಂತೆ ಪರಿಗಣಿಸಲಾಗುತ್ತದೆ. ಶೆರಿನ್ ಲಿಂಗ ರಾಜಕೀಯ, ಬಲಪಂಥೀಯ ಅಜೆಂಡಾಗಳು ಮತ್ತು ವಸಾಹತುಶಾಹಿ ಹ್ಯಾಂಗೊವರ್ಗಳ ಕುರಿತು Times Of India ದ ಸುಧಾ ನಂಬೂದಿರಿ ಜೊತೆಗೆ ಸುದೀರ್ಘವಾಗಿ ಸಂವಾದ ನಡೆಸಿದ್ದಾರೆ. ‘ತಿಜೋರಿ’ ಓದುಗರಿಗಾಗಿ ನಾವದನ್ನು ಕನ್ನಡಕ್ಕೆ ತಂದಿದ್ದೇವೆ.

ಪ್ರಶ್ನೆ: ಮುಸ್ಲಿಂ ಮಹಿಳೆಯರನ್ನು ಸುತ್ತುವರೆದಿರುವ ಸಾಮಾಜಿಕ-ರಾಜಕೀಯ ಚರ್ಚೆಗಳು ಮುಸ್ಲಿಂ ಮಹಿಳೆಯರು ʼಬಲಿಪಶುʼಗಳಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಪಿತೃಪ್ರಧಾನ ಸಂಸ್ಕೃತಿಯಿಂದ ಅವರನ್ನು ರಕ್ಷಿಸಬೇಕಾಗಿದೆ ಎಂಬ ಚಿಂತನೆಯ ಮೇಲೆಯೇ ಕೇಂದ್ರೀಕೃತವಾಗಿದೆ. ಎಡ ಆಧಾರಿತ ಸ್ತ್ರೀವಾದಿ ಸಿದ್ಧಾಂತ, ಹಿಂದುತ್ವ-ಪರ ಪಕ್ಷಗಳ ಬಲಪಂಥೀಯ ರಾಜಕೀಯ ನಿಲುವು ಮತ್ತು ಜಾತ್ಯತೀತ-ನಡುಪಂಥೀಯ ಶಕ್ತಿಗಳು ಸೇರಿದಂತೆ ವಿವಿಧ ಅಂಶಗಳೆಲ್ಲಾ ಒಟ್ಟು ಸೇರಿ ಹೆಣೆಯಲಾಗಿರುವ ‘ನಿರೂಪಣೆ’ ಇದು ಎಂದು ನೀವು ಆ ಚರ್ಚೆಯನ್ನು ಅರ್ಥೈಸಲು ಆರಿಸಿದ್ದೀರಿ.

ಶೆರಿನ್: ಮುಸ್ಲಿಂ ಮಹಿಳೆಯರನ್ನು ಸಂರಕ್ಷಿಸುವ ರಾಜಕೀಯ ಕಾರ್ಯಸೂಚಿಯು ಬೇರೆ ಬೇರೆ ಚೌಕಟ್ಟುಗಳಿಂದ ಹೊರಹೊಮ್ಮುತ್ತಿರುತ್ತದೆ. ಮುಸ್ಲಿಂ ಮಹಿಳೆಯರನ್ನು ಸಂರಕ್ಷಿಸುವ ವಿಷಯಕ್ಕೆ ಬರುವಾಗ ಬಲಪಂಥೀಯ ರಾಷ್ಟ್ರೀಯತೆ, ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿತ್ವ ಮತ್ತು ಸ್ತ್ರೀವಾದಿ ರಾಜಕೀಯದ ನಡುವೆ ವಿಚಿತ್ರವಾದ ಸಂಯೋಜನೆಯನ್ನು ನಮಗೆ ಕಾಣಲು ಸಾಧ್ಯವಿದೆ.

“ಕಂದು ಬಣ್ಣದ ಪುರುಷರಿಂದ ಕಂದು ಬಣ್ಣದ ಮಹಿಳೆಯರನ್ನು ಉಳಿಸುವ” ಹೊರೆಯನ್ನು ಸ್ವಯಂ ತಲೆಗೇರಿಸಿಕೊಳ್ಳುವ ಮೂಲಕ ವಸಾಹತುಶಾಹಿ ತನ್ನನ್ನು ತಾನೇ ಸಮರ್ಥಿಸುವ ಕೆಲಸ ಮಾಡಿದೆ ಎಂದು ಗಾಯತ್ರಿ ಚಕ್ರವರ್ತಿ ಸ್ಪಿವಾಕ್ (Gayatri Spivak) ಸೂಚಿಸಿರುವುದು ಸರಿಯಾಗಿಯೇ ಇದೆ. ಅಫ್ಘಾನಿಸ್ತಾನದಲ್ಲಿ ಯುಎಸ್ ನಡೆಸಿದ ʼಭಯೋತ್ಪಾದನಾ ವಿರೋಧಿʼ ಯುದ್ಧದ ಸಂದರ್ಭದಲ್ಲಿ ಬಿಳಿ ಉದಾರವಾದಿ ಸ್ತ್ರೀವಾದಿಗಳ ನೇತೃತ್ವದಲ್ಲಿ ನಡೆದ “ಅಫ್ಘಾನ್ ಮಹಿಳೆಯರನ್ನು ಸಂರಕ್ಷಿಸಿ” ಅಭಿಯಾನವು ಆ ಪ್ರದೇಶದಲ್ಲಿ ಅಮೆರಿಕದ ರಾಜಕೀಯ ಹಿತಾಸಕ್ತಿಗಳನ್ನು ಸಮರ್ಥಿಸುವ ಉದ್ದೇಶವನ್ನೇ ಹೊಂದಿತ್ತು. ರಾಷ್ಟ್ರವನ್ನು ಹೊಡೆದುರುಳಿಸುವಾಗ ಮತ್ತು ಬಾಂಬ್ ಗಳ ಸುರಿಮಳೆಗೈಯುತ್ತಿರುವಾಗ “ಮಹಿಳೆಯರನ್ನು ಸಂರಕ್ಷಿಸುವ” ಮಾತಾಡುವುದರಲ್ಲಿರುವ ಕ್ರೂರ ವ್ಯಂಗ್ಯದತ್ತ ಲೈಲಾ ಅಬು ಲುಗೋದ್ (Leila Abu Lughod) ಬೊಟ್ಟು ಮಾಡಿದ್ದಾರೆ. ಆದ್ದರಿಂದಲೇ, ಮುಸ್ಲಿಂ ಮಹಿಳೆಯರ ಸುರಕ್ಷೆಯ ಬಗೆಗಿನ ಈ ತೀವ್ರ ತವಕ ಮತ್ತು ಅವರ ಹಕ್ಕುಗಳ ಕುರಿತಾದ ಕಾಳಜಿ ಗೋಜಲು ಗೋಜಲಾದ ರಾಜಕೀಯ ಶ್ರೇಣಿಗಳ ಹಾಗೂ ಬಡ ರಾಷ್ಟ್ರಗಳ ಮೇಲೆ ಪ್ರಾಬಲ್ಯ ಪಡೆಯಲು ದಾಹಿಸುವ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಯ ಕಾರ್ಯಸೂಚಿಗೆ ಅನುಗುಣವಾಗಿ ಕೆಲಸ ಮಾಡುತ್ತಾ ಬಂದಿದೆ. ಸ್ತ್ರೀವಾದಿಗಳು ಮತ್ತು ಬಲಪಂಥೀಯ ರಾಷ್ಟ್ರೀಯವಾದಿಗಳು ಒಂದೇ ಅಜೆಂಡಾವನ್ನು ಹೊಂದಿದ್ದಾರೆಂದು ನಾನು ಹೇಳುತ್ತಿಲ್ಲ. ಆದರೆ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸಲು ಆಗ್ರಹಿಸುವ ಉದಾರ ಸ್ತ್ರೀವಾದಿ ಕೂಗು ಮುಸ್ಲಿಂ ಸಮುದಾಯವನ್ನು ಸಾಮಾನ್ಯವಾಗಿ ಮತ್ತು ಮುಸ್ಲಿಂ ಪುರುಷರನ್ನು ವಿಶೇಷವಾಗಿ ಆಧುನಿಕತೆಯ ಹೊರಗಿನವರೆಂದು ಬಿಂಬಿಸಲು ಇಸ್ಲಾಮೋಫೋಬಿಕ್ ವಾತಾವರಣವೊಂದರಲ್ಲಿ ಸಹಾಯ ಮಾಡುತ್ತದೆ. ಆ ಮೂಲಕ ಒಂದು ವಿಚಿತ್ರವಾದ ಒಳ ಒಪ್ಪಂದ ಇವುಗಳ ನಡುವೆ ಇರುವಂತೆ ಅಂತಿಮವಾಗಿ ಕಂಡುಬರುತ್ತದೆ.

ಭಾರತದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಸ್ತ್ರೀವಾದ ಮತ್ತು ಮುಸ್ಲಿಂ ಮಹಿಳೆಯರನ್ನು ಜೋಡಿಸುವಾಗ ಬಹಳ ಜಾಗ್ರತೆ ವಹಿಸಬೇಕಿದೆ. ಸ್ತ್ರೀವಾದಿ ಪ್ರತಿಕ್ರಿಯೆಗಳು ಮಾಹಿತಿಪೂರ್ಣ ಮತ್ತು ಜವಾಬ್ದಾರಿಯುತ ಆಗಬೇಕಾದ ಅಗತ್ಯವಿದೆ. ಭಾರತದಲ್ಲಿನ ಅನೇಕ ಸ್ತ್ರೀವಾದಿಗಳಿಗೆ ಮುಸ್ಲಿಂ ಸಮುದಾಯದಲ್ಲಿನ ಆಂತರಿಕ ಧಾರ್ಮಿಕ ಪಿತೃಪ್ರಭುತ್ವದ ಬಗ್ಗೆ ಮಾತನಾಡಲು ಇರುವಷ್ಟು ಉತ್ಸಾಹ, ಮುಸ್ಲಿಂ ಮಹಿಳೆಯರು ದೇಶದಲ್ಲಿ ಎದುರಿಸುತ್ತಿರುವ ವಾಸ್ತವಗಳ ಬಗ್ಗೆ ಮಾತನಾಡುವಲ್ಲಿ ಕಾಣುತ್ತಿಲ್ಲ. ಉದ್ಯೋಗದ ಕೊರತೆ, ಆರೋಗ್ಯ ರಕ್ಷಣೆ, ಶೈಕ್ಷಣಿಕ ಮುಂತಾದ ಸೌಲಭ್ಯಗಳ ನಿರಾಕರಣೆ, ರಾಜಕೀಯ ಕಲಹಗಳ ಸಮಯದಲ್ಲಿ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ಬೆದರಿಕೆಗಳ್ಯಾವುದೂ ಅವರಿಗೆ ಮಾತನಾಡಬೇಕೆಂಬ ವಿಷಯವಾಗಿ ತೋರುತ್ತಿಲ್ಲ. ಇತ್ತೀಚೆಗೆ ಸರ್ಕಾರವು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುತ್ತಿದ್ದ ಮೌಲಾನಾ ಆಜಾದ್ ವಿದ್ಯಾರ್ಥಿವೇತನವನ್ನು ನಿಲ್ಲಿಸಿರುವುದ ಕೂಡಾ ನೆನಪಿಸಬಹುದು. ಮುಸ್ಲಿಂ ಮಹಿಳೆಯರ ಹಿಜಾಬ್ ಮತ್ತು ತಥಾಕಥಿತ ಪಿತೃಪ್ರಭುತ್ವದ ವ್ಯವಸ್ಥೆಯಲ್ಲಿನ ಸ್ಥಾನದ ಬಗ್ಗೆ ಮಾತನಾಡುವಂತೆ ಇದ್ಯಾವುದರ ಬಗ್ಗೆಯೂ ಅವರು ಮಾತಾಡುತ್ತಿಲ್ಲ.

ಇಸ್ಲಾಮಿನಲ್ಲಿ ಮುಸ್ಲಿಂ ಮಹಿಳೆಯರು ಬಲಿಪಶುಗಳಾಗುವ ಪರಿಯ ಬಗ್ಗೆ ಮತ್ತು ವೈಯಕ್ತಿಕ ಕಾನೂನಿನಲ್ಲಿ ಅವರಿಗಿರುವ ಸ್ಥಾನದ ಬಗ್ಗೆ ಇರುವ ಈ ಆಸ್ಥೆ ಒಂದು ಹುಸಿ ಊಹೆ. ವಸಾಹತುಶಾಹಿ ಹಾಗೂ ಬಹುಸಂಖ್ಯಾತ ರಾಷ್ಟ್ರೀಯತೆಯಿಂದ ಪೋಷಿಸಲ್ಪಟ್ಟ ಮುಖ್ಯವಾಹಿನಿಯ ರಾಜಕೀಯ ಕಾರ್ಯಸೂಚಿಗಳಿಗೆ ಇದನ್ನು ನಿರ್ಮಿಸುವಲ್ಲಿ ಸಮಾನ ಪಾತ್ರವಿದೆ. ಇಸ್ಲಾಂ ಆಧುನಿಕತೆಯ ಹೊರಗಿನದ್ದು ಎನ್ನುವ ಪಾಶ್ಚಿಮಾತ್ಯ ಕಲ್ಪನೆಯಿಂದ ವಸಾಹತುಶಾಹಿ ಈ ನಿಲುವಿಗೆ ಬಂದಿದೆ. ವಿಭಜನೆಯ ಅನಂತರ ಗಣನೀಯ ಪ್ರಮಾಣದಲ್ಲಿ ರಾಜಕೀಯ ಅಧಿಕಾರ ನಷ್ಟವನ್ನು ಅನುಭವಿಸಿರುವ ಸಮುದಾಯವೊಂದನ್ನು ಮೂಲೆಗುಂಪು ಮಾಡಲು ಬಲಪಂಥೀಯ ರಾಷ್ಟ್ರೀಯತೆ ವಸಾಹತುಶಾಹಿಯ ಈ ಪೂರ್ವಾಗ್ರಹಗಳಿಗೆ ಅಡಿಗೆರೆ ಎಳೆಯುವ ಕೆಲಸ ಮಾಡುತ್ತಾ ಬಂದಿದೆ. ಸ್ತ್ರೀವಾದ ಇಂತಹ ವಾಸ್ತವಗಳನ್ನು ನಿರ್ಲಕ್ಷಿಸಬಾರದು.

ಪ್ರಶ್ನೆ: ಹಣೆಗೆ ಸಿಂಧೂರ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗುವ ಮತ್ತು ಹಿಜಾಬ್ ಧರಿಸುವ ಮಹಿಳೆಯರನ್ನು ಯಾಕಾಗಿ ಕೇವಲ ಧರ್ಮ ಬೀರುಗಳು ಅಥವಾ ಸಂಪ್ರದಾಯವಾದಿಗಳು ಎಂಬ ನೆಲೆಯಲ್ಲಿ ನೋಡಲಾಗುತ್ತಿದೆ? ಆಧುನಿಕ ಸಮಾಜದೊಂದಿಗೆ ಹೊಂದಾಣಿಕೆ ಮಾಡಿಕೊಂಡೇ ವಿಶ್ವಾಸವನ್ನು ಉಳಿಸಿಕೊಳ್ಳುವ ಆಯ್ಕೆ ಮಾಡಿದ ಮಹಿಳೆಯರು ಎಂಬ ನೆಲೆಯಲ್ಲಿ ಅವರನ್ನು ನೋಡಬಾರದೇ?

ಶೆರಿನ್: ಧರ್ಮ ಮತ್ತು ಆಧುನಿಕತೆಯನ್ನು ಯಾವಾಗಲೂ ಎರಡು ದ್ವಂದ್ವವಾಗಿ ಪರಿಗಣಿಸಲಾಗುತ್ತದೆ. ಆಧುನಿಕ ಎನಿಸಿಕೊಳ್ಳಬೇಕಾದರೆ ಸಾರ್ವಜನಿಕ ಜೀವನದಲ್ಲಿ ಧರ್ಮದ ಕುರುಹುಗಳು ಪ್ರತ್ಯಕ್ಷಗೊಳ್ಳಬಾರದು. ಸ್ತ್ರೀವಾದ ಅದರ ಮೂಲ ಪರಿಕಲ್ಪನೆಯನುಸಾರ ಒಂದು ರೀತಿಯ ಧರ್ಮವಿರೋಧಿ ರಾಜಕಾರಣ. ಏಕೆಂದರೆ ಅದು ಪಾಲಿಸುವ ಆಧುನಿಕ ತರ್ಕದ ಪ್ರಕಾರ ಎಲ್ಲಾ ಧರ್ಮಗಳು ಪಿತೃಪ್ರಧಾನವೇ ಆಗಿದೆ.

ಸಬಾ ಮಹ್ಮೂದ್

ಸರಿಯಾಗಿ ಗಮನಿಸಿದರೆ ಇದು ಜನರ ಸಾರ್ವಜನಿಕ ಜೀವನದಲ್ಲಿ ತತ್ಸಮಾನ ನೆಲೆಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಪೋಸ್ಟ್ ಸೆಕ್ಯುಲರ್ ಚಿಂತನೆಗಳು ಆಧುನಿಕತೆ ಮತ್ತು ಸೆಕ್ಯುಲರಿಸಂ ಯಾವುದೆಲ್ಲಾ ರೀತಿಯಲ್ಲಿ ವಿಭಾಗೀಯ ಸ್ವಭಾವವನ್ನು ಹೊಂದಿದೆ ಎನ್ನುವುದನ್ನು ನಮಗೆ ಪರಿಚಯಿಸಿದೆ. ಧಾರ್ಮಿಕ ಚಿಹ್ನೆಗಳ ಅರ್ಥಗಳು ಹೆಚ್ಚಿನ ವೇಳೆ ಸಂದರ್ಭಗಳಿಗೆ ಅನುಗುಣವಾಗಿ ಬದಲಾಗುವ ಸ್ವಭಾವ ತೋರಿಸಿದೆ. ಬಿಂದಿ ಯನ್ನು ಹಿಜಾಬಿನ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ. ನಮ್ಮಲ್ಲಿರುವ‘ಪ್ರಗತಿಪರ ಸ್ತ್ರೀವಾದಿಗಳ’ ದೊಡ್ಡ ಬಿಂದಿಗಳನ್ನು ಅವರ ಸಾಂಸ್ಕೃತಿಕ ಅಭಿವ್ಯಕ್ತಿಯ ಭಾಗವಾಗಿ ಪರಿಗಣಿಸಲಾಗುತ್ತದೆ. ಆದರೆ, ಮುಸ್ಲಿಂ ಮಹಿಳೆಗೆ ಈ ಅನುಕೂಲತೆ ಇಲ್ಲ. ಹಿಜಾಬ್ ಅಥವಾ ಬುರ್ಖಾ ಅವಳನ್ನು ಸ್ತ್ರೀವಾದಿ ಮುಖ್ಯ ವಾಹಿನಿಯಿಂದ ದೂರವಿಡುತ್ತದೆ. ಬಿಂದಿಯನ್ನು ಧರಿಸುವುದನ್ನು ಆಯ್ಕೆ ಎಂದು ಪರಿಗಣಿಸುವ ಅವಕಾಶವಿದೆ. ಆದರೆ ಹಿಜಾಬ್ ಅಥವಾ ಬುರ್ಖಾವನ್ನು ಹೇರಿಕೆಯಾಗಿ ಪರಿಗಣಿಸಲಾಗುತ್ತದೆ. ಆದರೆ ಆಧುನಿಕ ಸಂದರ್ಭದಲ್ಲಿ ನಾವು ವಿವಿಧ ವಗೈರೆಯ ಡ್ರೆಸ್ ಕೋಡ್ಗಳನ್ನು ಹೊಂದಿದ್ದರೂ ಸಹ, ಮುಸ್ಲಿಂ ಮಹಿಳೆಯರ ಡ್ರೆಸ್ ಕೋಡ್ ಮಾತ್ರ ಪರಿಶೋಧನೆಗೆ ಗುರಿಯಾಗುತ್ತದೆ. ಔಪಚಾರಿಕ ಕಾರ್ಯಕ್ರಮಗಳಲ್ಲಿ ಏನು ಧರಿಸಬೇಕು? ಅನೌಪಚಾರಿಕ ಕಾರ್ಯಕ್ರಮಗಳಲ್ಲಿ ಏನು ಧರಿಸಬಾರದೆಂದು ಡ್ರೆಸ್‌ ಕೋಡ್‌ಗಳನ್ನು ಗುರುತುಪಡಿಸಲಾಗಿದೆ. ಆದರೆ ಮುಸ್ಲಿಮ್ ಮಹಿಳೆಯರ ವೇಷಭೂಷಣದ ಬಗ್ಗೆ ಕಾಳಜಿ ವಹಿಸಲು ತೋರಿಸುವ ಉಮೇದು ಇಂತಹ ಹೇರಿಕೆಗಳ ಬಗ್ಗೆ ತೋರಿಸಲು ಯಾರೂ ತಲೆಕೆಡಿಸಿಕೊಂಡಿಲ್ಲ. ಮಾನವಶಾಸ್ತ್ರಜ್ಞ ಸಬಾ ಮಹಮೂದ್ (Saba Mahmoud) ಹೇಳುವಂತೆ ಮಿನಿ ಸ್ಕರ್ಟ್ ಧರಿಸುವುದು ಅಥವಾ ಬಣ್ಣದ ಕೂದಲನ್ನು ಹೈಲೈಟ್ ಮಾಡುವುದು ವಿಮೋಚನೆ ಎಂದು ನೋಡಲಾಗುತ್ತದೆ. ಆದರೆ ಧಾರ್ಮಿಕ ನೀತಿಗೆ ಅಂಟಿಕೊಳ್ಳುವುದು ಮತ್ತು ಒಬ್ಬರ ನಂಬಿಕೆಯ ಭಾಗವಾಗಿ ನಿರ್ದಿಷ್ಟ ಬಟ್ಟೆಯನ್ನು ಧರಿಸುವುದು ಪಿತೃಪ್ರಭುತ್ವದ ಪರಿಣಾಮ ಎಂದು ಹೇಳುತ್ತಾರೆ. ಅಂತಹದ್ದರಲ್ಲಿ ಒಂದು ಸಂತುಲಿತವಾದ ಗ್ರಹಿಕೆ ಸಾಧ್ಯವಾಗುವುದಾದರೂ ಹೇಗೆ?

ಪ್ರಶ್ನೆ: ಮಲಯಾಳಂ ನಟಿ ನಿಖಿಲಾ ವಿಮಲ್ ಮುಸ್ಲಿಂ ಮಹಿಳೆಯರಿಗೆ ಅಡುಗೆಮನೆಯಲ್ಲಿ ಊಟ ಬಡಿಸಲಾಗುತ್ತದೆ ಹಾಗೂ ಪುರುಷರೊಂದಿಗೆ ಅವರಿಗೆ ಊಟ ಬಡಿಸಲಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದರು. ಬಹಳ ಹಿಂದೆಯೇ ಲಿಬರಲ್ ಮಹಿಳೆಯರ ಪರವಾದ ಸಂವಾದವನ್ನು ಸ್ಥಾಪಿಸಿದ್ದ ಐತಿಹಾಸಿಕ ಆಡಳಿತಗಾರ್ತಿ ಅರಕ್ಕಲ್ ಬೀವಿಯ ಪ್ರದೇಶ ಎಂಬ ಹಿನ್ನೆಲೆಯಲ್ಲಿ ಕಣ್ಣೂರಿನ ಕುರಿತಾದ ನಟಿಯ ಈ ಅಭಿಪ್ರಾಯವನ್ನು ನೀವು ಹೇಗೆ ನೋಡುತ್ತೀರಿ?

ಶೆರಿನ್: ನಾನು ಉಲ್ಲೇಖಿಸುತ್ತಾ ಬಂದದ್ದು ಒಂದು ರೀತಿಯ ಇದೇ ಅಜಾಗರೂಕತೆಯ ಕುರಿತಾಗಿತ್ತು. ಮುಸ್ಲಿಂ ಮಹಿಳೆಯರ ಬಗೆಗಿನ ಈ ವಿಪರೀತ ಆತಂಕ ಮತ್ತು ಮುಸ್ಲಿಂ ಮಹಿಳೆಯರನ್ನು ಪ್ರಾಚೀನತೆಯ ಸೂಚಕವಾಗಿ ಬಳಸುವ ನಿರ್ದಿಷ್ಟ “ಸ್ತ್ರೀವಾದಿ-ಹೊರೆ” ಹೊರ ಹೊಮ್ಮಿದ್ದು ಎಲ್ಲಾ ಮಹಿಳೆಯರು ಪುರುಷರೊಂದಿಗೆ ಆಹಾರವನ್ನು ತಿನ್ನಲು ಬಯಸುತ್ತಾರೆ ಎಂಬ ಸಾರ್ವತ್ರಿಕ ಊಹೆಯಿಂದ. ಪ್ರತಿಯೊಂದು ಸಂಸ್ಕೃತಿಯ ವಿವಿಧ ಆಚಾರಗಳು ವಿಭಿನ್ನ ಸನ್ನಿವೇಶಗಳು ಮತ್ತು ವಾಸ್ತವಗಳ ಕಾರಣದಿಂದ ಜನ್ಮ ತಾಳಿದೆ. ಈ ಸಂದರ್ಭಗಳ ಬಗ್ಗೆ ಅರಿವಿಲ್ಲದಿದ್ದಲ್ಲಿ ಇಂತಹ ಸಾರ್ವತ್ರಿಕ ಹೇಳಿಕೆಗಳನ್ನು ನೀಡದಿರುವುದು ಉತ್ತಮ. ಸರ್ಕಾರ ಹಾಗೂ ಬಲಪಂಥೀಯ ಶಕ್ತಿಗಳ ಪ್ರಾಯೋಜಕತ್ವದಲ್ಲಿ ಮುಸಲ್ಮಾನರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಇದೇ ವ್ಯಕ್ತಿಗಳು ಕನಿಷ್ಟ ಖೇದವನ್ನು ಸಹ ತೋರ್ಪಡಿಸುವುದಿಲ್ಲ. ಇದರಿಂದಾಗಿ ಈ ನಿಲುವುಗಳಲ್ಲಿ ಕಂಡುಬರುವ ಅಸಮತೋಲನ ನಿರ್ದಿಷ್ಟವಾಗಿ ಗೋಚರಿಸುತ್ತದೆ.

ಪ್ರಶ್ನೆ: ಹಿಜಾಬ್ ಮುಸ್ಲಿಮ್ ಮಹಿಳೆಯರನ್ನು ಅಸ್ಮಿತೆಯ ಬದಲಾವಣೆಗಾಗಿ ‘ಬಲವಂತ’ ಮಾಡುತ್ತಿದೆಯೇ? ಹಿಜಾಬ್ ಧರಿಸುವುದು ಆಯ್ಕೆಯ ವಿಷಯವೇ ಅಥವಾ ರಾಜಕೀಯ ಮತ್ತು ಸಾಮಾಜಿಕ ಅಭದ್ರತೆಯ ಸಂದೇಶವೇ?

ಶೆರಿನ್: ಹಿಜಾಬಿನ ಬಗೆಗಿನ ಪ್ರತಿಕ್ರಿಯೆಗಳನ್ನು ಇತಿಹಾಸದ ದೃಷ್ಟಿಕೋನದಿಂದ ವಿಶ್ಲೇಷಿಸಬೇಕಾಗಿದೆ. ಮಾಲೆಕ್ ಅಲ್ಲೌಲಾ (Malek Alloula) ಅಲ್ಜೀರಿಯಾದ ಮಹಿಳೆಯರನ್ನು ಬೆತ್ತಲೆಯಾಗಿ ಚಿತ್ರಿಸುವ ಫ್ರೆಂಚ್ ಪೋಸ್ಟ್ಕಾರ್ಡ್ ಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಮುಸ್ಲಿಂ ಮಹಿಳೆಯರನ್ನು ಪರದೆಯಿಂದ ಹೊರತರುವುದು ಒಂದು ವಸಾಹತುಶಾಹಿ ಫ್ಯಾಂಟಸಿಯಾಗಿದೆ ಎನ್ನುವುದು ಈ ಅಧ್ಯಯನದ ವಾದ.

ಮಾಲೆಕ್ ಅಲ್ಲೌಲಾ

ಕ್ಯಾಥರೀನ್ ಬುಲಕ್ (Katherine Bullock) ಹಿಜಾಬ್ ಬಗೆಗಿನ ಸ್ತ್ರೀವಾದಿ ಆತಂಕವನ್ನು ದಬ್ಬಾಳಿಕೆ ಎಂಬ ನೆಲೆಯಲ್ಲಿ ವೀಕ್ಷಿಸಿದ್ದಾರೆ. ಬಂಡವಾಳಶಾಹಿ ಗ್ರಾಹಕಸಂಸ್ಕೃತಿಯ ಸಂದರ್ಭದಲ್ಲಿ ಹಿಜಾಬ್ ಸೌಂದರ್ಯ ಎಂಬ ಭ್ರಮೆಯ ದಬ್ಬಾಳಿಕೆ ಹಾಗೂ ತೆಳ್ಳಗಿನ ದೇಹ ಹೊಂದಿರುವ ಮಹಿಳೆ ಆದರ್ಶ ಮಹಿಳೆ ಎಂಬುವುದರಿಂದ ಮೋಚನೆಯನ್ನು ನೀಡುತ್ತದೆ. ಧರ್ಮ ಆಚರಿಸುವ ಮುಸ್ಲಿಂ ಮಹಿಳೆಯರನ್ನು ಹಿಜಾಬ್ ಅನೇಕ ವಿಧಗಳಲ್ಲಿ ಸಾರ್ವಜನಿಕರೊಂದಿಗೆ ಸಂಪರ್ಕಿಸುತ್ತದೆ. ಇದನ್ನು ಅಂಗೀಕರಿಸದಿರುವುದೇ ಮುಸ್ಲಿಂ ಮಹಿಳೆಯರ ಮೇಲಿನ ಸ್ತ್ರೀವಾದಿ ಆತಂಕದಲ್ಲಿ ಒಳಗೊಂಡಿರುವ ನಿಖರವಾದ ಹಿಂಸೆ. ತನ್ನ ನಂಬಿಕೆ ಯಾ ಉದಾರವಾದಿ ಅಂಗೀಕಾರ ಎಂಬೀ ಅಂಶಗಳ ನಡುವೆ ಆಯ್ಕೆ ಮಾಡಲು ಒತ್ತಾಯಿಸುವ ಮೂಲಕ ಸ್ತ್ರೀವಾದವು ತನ್ನದು ಕೂಡಾ ಶಕ್ತಿ ಮತ್ತು ದಬ್ಬಾಳಿಕೆಯ ತಂತ್ರವಾಗಿದೆ ಎನ್ನುವುದನ್ನು ನಿರ್ಲಕ್ಷಿಸುತ್ತದೆ. ಅನೇಕ ಬಾರಿ, ಬಟ್ಟೆಯಲ್ಲಿ ನಮ್ಮ ಆಯ್ಕೆಯ ಬಗ್ಗೆ ನಾವು ಯೋಚಿಸುವುದು ಆಯ್ಕೆಯೇ ಅಲ್ಲ. ಬಂಡಾಳ ಶಾಹಿ ವ್ಯವಸ್ಥೆ ನಮ್ಮ ಆಯ್ಕೆಯನ್ನು ಮಾಡುತ್ತದೆ, ಫ್ಯಾಷನ್ ಉದ್ಯಮ ನಮ್ಮ ಆಯ್ಕೆಯನ್ನು ಮಾಡುತ್ತದೆ, ಸಂಸ್ಥೆಗಳು ನಮಗಾಗಿ ಆಯ್ಕೆಗಳನ್ನು ಮಾಡುತ್ತಿವೆ.

ಕೇರಳೀಯ ಉದಾರವಾದಿಗಳು ಆಗಾಗ್ಗೆ ಪ್ರಕಟಿಸುತ್ತಿರುವ ದುಃಖವೆಂದರೆ “ಹಿಂದಿನ ಕಾಲದ ಮುಸ್ಲಿಂ ಮಹಿಳೆಯರು ಎಂದಿಗೂ ಬುರ್ಖಾವನ್ನು ಧರಿಸುತ್ತಿರಲಿಲ್ಲ. ಅವರು ನಮ್ಮದೇ ಆದ ಸಂಸ್ಕೃತಿಯ ನಿರ್ದಿಷ್ಟ ಉಡುಪುಗಳನ್ನು ಹೊಂದಿದ್ದರು” ಎನ್ನುವುದು. ಆದರೆ ಹಿಂದೂ – ಕ್ರಿಶ್ಚಿಯನ್ ಮಹಿಳೆಯರು ಕೂಡಾ ಹಿಂದೆ ಧರಿಸಿದ್ದನ್ನು ಈಗ ಧರಿಸುತ್ತಿಲ್ಲ ಎನ್ನುವುದನ್ನು ನಾವೇಕೆ ಯೋಚಿಸುತ್ತಿಲ್ಲ? ಅವರು ಕೂಡಾ ತಮ್ಮ ಸಂಸ್ಕೃತಿ-ನಿರ್ದಿಷ್ಟ ಉಡುಪುಗಳನ್ನು ತಿರಸ್ಕರಿಸಿದ್ದಾರೆ. ಸಮಕಾಲೀನ ಫ್ಯಾಷನ್ ಕೈಗೆ ಉಡುಪನ್ನು ನಿರ್ಧರಿಸುವ ಅವಕಾಶ ಕೊಟ್ಟಿದ್ದಾರೆ. ಮುಸ್ಲಿಂ ಮಹಿಳೆ ತನ್ನ ನಂಬಿಕೆ, ಕೈಗೆಟುಕುವ ಬೆಲೆ ಮತ್ತು ಅನುಕೂಲತೆಯ ಆಧಾರದ ಮೇಲೆ ಲಭ್ಯವಿರುವ ಆಯ್ಕೆಗಳಿಂದ ತನ್ನ ಬಟ್ಟೆಗಳನ್ನು ಆರಿಸಿಕೊಳ್ಳುತ್ತಾಳೆ. ಧರ್ಮದ ಸಾರ್ವಜನಿಕ ಗೋಚರತೆ ಬಾಬರಿ ಧ್ವಂಸಾನಂತರದ ಭಾರತದ ವಾಸ್ತವ. ಇದು ಕೇವಲ ಮುಸ್ಲಿಮರಿಗೆ ಸೀಮಿತವಾದ ವಿದ್ಯಮಾನವಲ್ಲ. ಬಹುಸಂಖ್ಯಾತರ ಅಸ್ಮಿತಾ ಪ್ರದರ್ಶನದ ಬಗ್ಗೆ ಹೆಚ್ಚಿನ ಚರ್ಚೆಗಳು ಉಂಟಾಗುತ್ತಿಲ್ಲ.

ಪ್ರಶ್ನೆ: ನಿಮ್ಮ ಪುಸ್ತಕವು 20 ನೇ ಶತಮಾನದ ಆರಂಭದಲ್ಲಿ ಮಹಿಳೆಯರು ಬರೆದ ಹಲವಾರು ಕೃತಿಗಳನ್ನು ಸಂಶೋಧಿಸಿದೆ. ಅವರ ಕೃತಿಗಳ ಪ್ರಭಾವವನ್ನು ವಿವರಿಸಬಹುದೇ?

ಶೆರಿನ್: ಸುಧಾರಣಾವಾದ ಮತ್ತು ಆಧುನಿಕತೆಯೊಂದಿಗಿನ ಮುಸ್ಲಿಮರ ಅನುಸಂಧಾನ ಕೇರಳದ ಸುಧಾರಣಾ ಇತಿಹಾಸದಲ್ಲಿ ಸ್ವಲ್ಪಮಟ್ಟಿಗೆ ಮಾತ್ರವೇ ದಾಖಲಾಗಿರುವಂತದ್ದು. ಸುಧಾರಣಾ ಚಳುವಳಿಗಳಲ್ಲಿ ಮುಸ್ಲಿಂ ಮಹಿಳೆಯರ ಭಾಗವಹಿಸುವಿಕೆಯ ಬಗೆಗಿನ ಪರಾಮರ್ಶೆಗಳು ಲಭ್ಯವಿರುವ ಯಾವುದೇ ರಾಜಕೀಯ ಅಥವಾ ಸ್ತ್ರೀವಾದಿ ಇತಿಹಾಸಗಳಲ್ಲಿ ಕಂಡುಬರುವುದಿಲ್ಲ. ನಾನು 2006 ರಲ್ಲಿ ನನ್ನ ಸಂಶೋಧನೆಯನ್ನು ಪ್ರಾರಂಭಿಸಿದಾಗ ಆ ಕಾಲದ ಲೇಖಕಿ, ಸಂಪಾದಕಿ ಮತ್ತು ರಾಜಕೀಯ ಕಾರ್ಯಕರ್ತೆಯಾಗಿದ್ದ ಹಲೀಮಾ ಬೀವಿಯ ಬಗ್ಗೆ ಉಲ್ಲೇಖ ಇದ್ದದ್ದು ಜೆ ದೇವಿಕಾ ಅವರ ಸಂಗ್ರಹದಲ್ಲಿ ಮಾತ್ರ. ಹಲೀಮಾ ಬೀವಿಯವರ ಒಂದು ಭಾಷಣವಾಗಿತ್ತದು. ಮುಸ್ಲಿಂ ಮಹಿಳೆಯರ ಕುರಿತಾದ ಶಂಶಾದ್ ಹುಸೇನ್ ಅವರ ಕೃತಿಯು ಹಲೀಮಾ ಬೀವಿಯವರ ಕೃತಿಗಳ ಬಗ್ಗೆ ಅಧ್ಯಯನ ಕೈಗೊಂಡಿದೆ. ಆದರೆ ಇದು ನಡೆದದ್ದು 21 ನೇ ಶತಮಾನದ ಮೊದಲ ದಶಕದಲ್ಲಿ. ಅಲ್ಲಿಯವರೆಗೆ ‘ಚಂದ್ರಿಕಾ’ ಅಥವಾ ಮಾಧ್ಯಮಮ್ ನಂತಹ ಮುಸ್ಲಿಂ ಮ್ಯಾನೇಜ್ಮೆಂಟ್ಗಳು ಪ್ರಕಟಿಸುವ ಕೆಲವು ನಿಯತಕಾಲಿಕಗಳನ್ನು ಹೊರತುಪಡಿಸಿದರೆ ಯಾವುದೇ ಜಾತ್ಯತೀತ ಇತಿಹಾಸಕಾರರು ಅಥವಾ ಪ್ರಕಾಶಕರು ಕೇರಳದ ಸಾಂಸ್ಕೃತಿಕ ಪುನರುಜ್ಜೀವನದಲ್ಲಿ ಮುಸ್ಲಿಂ ಮಹಿಳೆಯರ ಅನುಸಂಧಾನ ಏನು ಎಂದು ನೋಡೇ ಇಲ್ಲ.

ಹಲೀಮಾ ಬೀವಿ ತಮ್ಮದೇ ಆದ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದರು ಮತ್ತು ಪುರಸಭೆಯ ಕೌನ್ಸಿಲರ್ ಕೂಡ ಆಗಿದ್ದರು. ಕೇರಳೀಯ ಪತ್ರಿಕೋದ್ಯಮಕ್ಕೆ ಆಕೆಯ ಕೊಡುಗೆಯು ವಿಭಿನ್ನವಾಗಿದೆ. ಆಕೆಯ ಮುದ್ರಣಾಲಯವು ಸರ್ ಸಿಪಿ ಆಡಳಿತದ ವಿರುದ್ಧ ಕರಪತ್ರಗಳನ್ನು ಮುದ್ರಿಸುತ್ತಿತ್ತು. ಚಂಗಂಪುಝ, ಒಎನ್ವಿ, ಬಾಲಾಮಣಿ ಮತ್ತು ತಕಳಿ ಸೇರಿದಂತೆ ಅನೇಕ ಲೇಖಕರು ಅವರ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ವೈಕಮ್ ಮುಹಮ್ಮದ್ ಬಶೀರ್ ಅವರ ಪತ್ರಿಕೆಯೊಂದರಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ್ದರು. ಮುಸ್ಲಿಂ ವನಿತಾ, ಭಾರತ ಚಂದ್ರಿಕಾ, ವನಿತಾ, ಆಧುನಿಕ ವನಿತಾ ಇವೆಲ್ಲವೂ ಈ ಮುಸ್ಲಿಂ ಮಹಿಳೆ ಪ್ರಾರಂಭಿಸಿದ ಮತ್ತು ಪ್ರಕಟಿಸುತ್ತಿದ್ದ ನಿಯತಕಾಲಿಕೆಗಳು. 2022 ರಲ್ಲಿ ಇಬ್ಬರು ಮುಸ್ಲಿಂ ಯುವತಿಯರಾದ ನೂರಾ ಮತ್ತು ನೂರ್ಜಹಾನ್ ಅವರು ಬರೆದ ‘ಪತ್ರಾಧಿಪ’ ಎಂಬ ಜೀವನಚರಿತ್ರೆ ಈ ಮಹಾನ್ ಮಹಿಳೆಯ ಕೊಡುಗೆಗಳಿಗೆ ಗೌರವ ಸಲ್ಲಿಸುತ್ತದೆ. ಹಲೀಮಾ ಬೀವಿಯವರೊಂದಿಗೆ ಆ ಕಾಲದಲ್ಲಿ ಪ್ರಸಾರವಾಗುತ್ತಿದ್ದ ಚಿಕ್ಕ-ಚಿಕ್ಕ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅನೇಕ ಮಹಿಳೆಯರೂ ಇದ್ದರು. ಈ ಲೇಖನಗಳು ಅಸ್ಮಿತೆ, ಆಧುನಿಕತೆ ಮತ್ತು ಧರ್ಮದ ನಡುವಿನ ಉದ್ವಿಗ್ನತೆ, ಶಿಕ್ಷಣದ ಅವಶ್ಯಕತೆ, ಉದ್ಯೋಗ ಇತ್ಯಾದಿಗಳಿಗೆ ಸಂಬಂಧಿಸಿದ ಕಳವಳಗಳನ್ನು ವ್ಯಕ್ತಪಡಿಸಿವೆ. ಆದರೆ ಮುಸ್ಲಿಂ ಮಹಿಳೆಯರನ್ನು ಬಲಿಪಶುಗಳಾಗಿ ಚಿತ್ರಿಸಲು ಬಯಸುವ ಕೇರಳೀಯ ಆಧುನಿಕತೆಯ ಇತಿಹಾಸಗಳು ಈ ಪ್ರಯತ್ನಗಳನ್ನು ದಾಖಲಿಸುವುದಿಲ್ಲ. ಸಮುದಾಯದ ಬಗ್ಗೆ ದಬ್ಬಾಳಿಕೆಯ ಹಾಗೂ ಮಹಿಳೆಯರನ್ನು ಹಿಂಸಿಸುವ ಕಠಿಣ ರಚನೆಗಳನ್ನು ಹೊಂದಿರುವ ಆಧುನಿಕ ವಿರೋಧಿ ವ್ಯವಸ್ಥೆ ಎಂದು ಬರೆಯುವ ಮುಸ್ಲಿಂ ಮಹಿಳಾ ಬರಹಗಾರರನ್ನು ಮಾತ್ರವೇ ಮುಖ್ಯವಾಹಿನಿ ಒಳಗೊಳ್ಳುತ್ತದೆ.

ಪ್ರಶ್ನೆ: ನೈಜ ಲಿಬರಲ್ ಗಳು ಎನಿಸಿಕೊಂಡಿರುವ ಇಸ್ಲಾಮ್ ಪಾಲಿಸದ ಸ್ತ್ರೀವಾದಿ ಮುಸ್ಲಿಮರ ನಡುವೆ ಆಧುನಿಕ ದೃಷ್ಟಿಕೋನವನ್ನು ಹೊಂದಿರುವ ಭಕ್ತ ಮುಸಲ್ಮಾನರನ್ನು ಗುರುತಿಸುವ ಕೆಲಸ ನೀವು ಮಾಡಿದ್ದೀರಿ. ಇಸ್ಲಾಮ್ ಧರ್ಮವನ್ನು ಪಾಲಿಸುವವರಿಗೆ ಧರ್ಮವನ್ನು ವಿಮರ್ಶಿಸುವ ಅವಕಾಶವಿದೆಯೇ? ವಿಮರ್ಶಿಸಿದಲ್ಲಿ ಸಮುದಾಯದಿಂದ ಅನ್ಯರೆನಿಸಿಕೊಳ್ಳುವ ಅಪಾಯವಿಲ್ಲವೇ?

ಶೆರಿನ್: ಪ್ರತಿಯೊಂದು ಧರ್ಮದಂತೆ ಇಸ್ಲಾಂನೊಳಗೆ ಕೂಡ ಕ್ರಿಯಾತ್ಮಕವಾದ ಆಂತರಿಕ ಪ್ಲಾಟ್ ಫಾರಂಗಳು ಇವೆ. ವಿಶ್ವಾಸ ಮತ್ತು ಅಲ್ಪಸಂಖ್ಯಾತ ರಾಜಕಾರಣದ ವೃತ್ತದೊಳಗೆ ಕಾರ್ಯನಿರ್ವಹಿಸುವ ಸಂಘಟನೆಗಳು, ಧಾರ್ಮಿಕ ಗುಂಪುಗಳು, ವಿದ್ಯಾರ್ಥಿ ಚಳುವಳಿಗಳು, ಸಾಂಸ್ಕೃತಿಕ ಸಂಘಟನೆಗಳು, ಸೃಜನಶೀಲ ಗುಂಪುಗಳು ಇತ್ಯಾದಿ. ಇಸ್ಲಾಂ ಧರ್ಮವನ್ನು ದೂಷಿಸುವ ಮುಸ್ಲಿಂ ಮಹಿಳೆಯರಿಗೆ ಸಿಗುವ (Visibility) ಗೋಚರತೆ ಬಹಳ ಅದ್ಭುತಕರ. ಆದರೆ ಭಕ್ತ ಮುಸ್ಲಿಂ ಮಹಿಳೆಯರಿಗೆ ಎಂದಿಗೂ ಇಂತಹ ಸ್ವೀಕಾರ ಸಾರ್ವಜನಿಕರಿಂದ ಸಿಗದು. ಉದಾರವಾದಿ ರಾಜಕೀಯ ವಲಯಗಳಿಗೆ ಎಂಟ್ರಿ ಪಡೆಯಲು ಧರ್ಮವನ್ನು ಟೀಕಿಸಬೇಕಾದ ಜರೂರು ಮುಸ್ಲಿಂ ಮಹಿಳೆಯರಿಗೆ ಇದೆ. ಆದಾಗ್ಯೂ ಹಿಂದೂ ಮಹಿಳೆಯರಿಗೆ ಇದರ ಅಗತ್ಯವಿಲ್ಲ. ಧಾರ್ಮಿಕ ಆಚರಣೆಗಳಿಗೆ (ಶಬರಿಮಲೆ ಪ್ರವೇಶದಂತಹ) ಸಂಬಂಧಿಸಿದ ಕೆಲವು ನಿರ್ದಿಷ್ಟ ಸನ್ನಿವೇಶಗಳನ್ನು ಹೊರತುಪಡಿಸಿದರೆ ಧರ್ಮದೊಂದಿಗಿನ ಸಂಬಂಧದ ಬಗ್ಗೆ ಯಾರೂ ಹಿಂದೂ ಸ್ತ್ರೀವಾದಿಯನ್ನು ಕೇಳುವುದಿಲ್ಲ. ಅವರು ತಮ್ಮ ಧಾರ್ಮಿಕ ಆಚರಣೆಗಳ ವಿಷಯವಾಗಿ ತಮ್ಮನ್ನು ಹೇಗೆ ಇರಿಸಿಕೊಂಡಿದ್ದಾರೆ ಎಂಬುದನ್ನು ವಿವರಿಸಬೇಕಾಗಿ ಬರುವುದಿಲ್ಲ.

ಆಧುನಿಕತೆಯಂತೆ ಧರ್ಮವೂ ಸ್ಥಿರವಲ್ಲ. ಆದರೆ ಧಾರ್ಮಿಕ ಗ್ರಂಥಗಳು ಸ್ಥಿರ ಸ್ವಭಾವ ಇರುವಂತಹದ್ದು. ಮುಸ್ಲಿಮರಲ್ಲಿ ಅದರಲ್ಲೂ ಕೇರಳದ ಮುಸ್ಲಿಮರಲ್ಲಿ ಉನ್ನತ ಶಿಕ್ಷಣದ ವಿಷಯದಲ್ಲಿ ಎದ್ದು ಕಾಣುವ ಬದಲಾವಣೆಗಳಾಗಿವೆ. ಮಂಡಲ್ ವರದಿಯ ಅನಂತರ ಭಾರತದ ಕೇಂದ್ರೀಯ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಕೇರಳದ ಮುಸ್ಲಿಂ ವಿದ್ಯಾರ್ಥಿಗಳ ಉಪಸ್ಥಿತಿ ಢಾಳಾಗಿ ಕಂಡು ಬರುತ್ತಿದೆ. ಅವರಲ್ಲಿ ಅನೇಕರು ಪ್ರಾಕ್ಟಿಸಿಂಗ್ ಮುಸ್ಲಿಮರೆ. ಅವರನ್ನು ಆಧುನಿಕ-ಪೂರ್ವ ಧರ್ಮದ ರಚನೆಗಳಿಂದ ತುಳಿತಕ್ಕೊಳಗಾದ ಜನರಾಗಿ ನೋಡಲು ನನಗೆ ಸಾಧ್ಯವಿಲ್ಲ. ಅವರ ನಡುವೆ ಅನೇಕ ಸುಧಾರಣಾ ಚರ್ಚೆಗಳು ಆಂತರಿಕವಾಗಿ ನಡೆಯುತ್ತಿವೆ. ಅವರು ಕೇರಳದ ಸಂಪೂರ್ಣ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಹಾಗೂ ಮನರಂಜನಾ ಉದ್ಯಮ, ಸಾಮಾಜಿಕ ಮಾಧ್ಯಮಗಳು ಮುಂತಾದೆಡೆ ಇರುವ ಅವರ ಉಪಸ್ಥಿತಿಯ ಬಗ್ಗೆ ಚಿಂತಿಸಿ ನೋಡಿ. ಈ ಧ್ವನಿಗಳನ್ನು ಆಲಿಸುವುದು ಸಹ ಮುಖ್ಯವೇ. ಬಲಿಪಶು ಎಂಬ ನೆಲೆಯಲ್ಲಿನ ಮುಸ್ಲಿಂ ಮಹಿಳೆಯ ಬಗೆಗಿನ ಸಾರ್ವಜನಿಕ ಗ್ರಹಿಕೆಗಿಂತ ಭಿನ್ನವಾಗಿ ಹಲಾಲ್ ಲವ್ ಸ್ಟೋರಿ, ತಳ್ಳುಮಾಲಾ ಮುಂತಾದ ಚಲನಚಿತ್ರಗಳಲ್ಲಿ ಮುಸ್ಲಿಮರ ಜೆಂಡರ್‌ಗಳನ್ನು ಕಟ್ಟಿಕೊಡಲಾಗಿದೆ. ಈ ಧ್ವನಿಗಳನ್ನು ನಾವು ಕೇಳಬೇಕಾದ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ.

ಕನ್ನಡಕ್ಕೆ: ನಝೀರ್‌ ಅಬ್ಬಾಸ್

ಕೃಪೆ : ಟೈಮ್ಸ್ ಆಫ್ ಇಂಡಿಯಾ

1 Comment

  1. ಸಮಸ್ಯೆಯೊಂದನ್ನ ಹಲವು ಆಯಾಮಗಳಲ್ಲಿ ವಿಶ್ಲೇಷಿಸುವ, ಹಲವಾರು ಪೂರ್ವಾಗ್ರಹ ಪೀಡಿತ ಮನಸ್ಥಿತಿಗಳನ್ನು ಮುಸ್ಲಿಂ ಸಮುದಾಯದ ಮಹಿಳೆಯರ ನೈಜ ಅಗತ್ಯತೆ ಕುರಿತು ವಾಸ್ತವಿಕವಾಗಿ ನಿರೂಪಿಸುವ ಬರಹ. ಇಷ್ಟವಾಯ್ತು. ಮುಸ್ಲಿಂ ಸಮುದಾಯದ ಸೋದರಿಯರಿಗೆ ಅವಕಾಶಗಳ ಮುಕ್ತ ಬಾಗಿಲು ವಿಶಾಲವಾಗಿ ತೆರೆಯಲಿ.

Leave a Reply to ಚಂದ್ರಪ್ರಭಾ Cancel reply

*