ಮುಹಮ್ಮದ್ ಅಬ್ದುರ್ರಹ್ಮಾನ್ ಖಾನ್ ಎಂಬ ‘ಉಲ್ಕಾಮನುಷ್ಯ’

ಆಕಾಶ ವಿಸ್ಮಯಗಳ ಅತ್ಯಂತ ಹಳೆಯ ಮೂಲಗಳಲ್ಲೊಂದಾಗಿದ್ದು ಪುರುಷರು ಮತ್ತು ಮಹಿಳೆಯರು ಯುಗಯುಗಗಳಿಂದಲೂ ನಕ್ಷತ್ರಗಳನ್ನು ನೋಡಿಕೊಂಡು ಕುತೂಹಲ ಹಾಗೂ ಆಶ್ಚರ್ಯದ ನಗೆ ಬೀರುತ್ತಾ ಬಂದಿದ್ದಾರೆ. ವಜ್ರ-ಖಚಿತ ಕಮಾನುಗಳಿಂದ ಪ್ರೇರಿತವಾದ ಈ ವಿಚಿತ್ರ ವಿಸ್ಮಯವು ಹಲವಾರು ವಿಭಿನ್ನ ಜ್ಞಾನಶಿಸ್ತುಗಳಿಗೆ ಮತ್ತು ಅಧ್ಯಯನಗಳಿಗೆ ಸ್ಫೂರ್ತಿ ನೀಡಿದೆ. ನಕ್ಷತ್ರ ವೀಕ್ಷಣೆಯಂತಹ ಹವ್ಯಾಸಗಳಿಂದ ಹಿಡಿದು ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದಂತಹ ಹೆಚ್ಚು ವ್ಯವಸ್ಥಿತ ಜ್ಞಾನಗಳಿಗೆ ಹುಟ್ಟು ನೀಡಿದೆ. ವಿಶ್ವದ ಪ್ರತಿಯೊಂದು ಧರ್ಮಗಳಲ್ಲಿರುವ ಹಲವಾರು ವಿಶ್ವಾತ್ಮಕ ಪುರಾಣಗಳು ಕೂಡಾ ‘ಆಕಾಶಗಳು’ ಕಾಣಿಸುವ ಈ ವಿಸ್ಮಯಗಳಿಂದ ಪ್ರೇರಿತವಾಗಿವೆ. ಆದರೂ, ರಾತ್ರಿಯ ಆಕಾಶದ ಬಗೆಗಿನ ಮಾನವನ ಒಟ್ಟು ಆಸಕ್ತಿಯ ಇತಿಹಾಸ ಬರೆಯುವಾಗ ನಾವು ಈ ವಿವಿಧ ಅಧ್ಯಯನಗಳನ್ನು ಮತ್ತು ಜ್ಞಾನಗಳನ್ನು ಅಚ್ಚುಕಟ್ಟಾಗಿ ವಿಭಜಿಸುತ್ತೇವೆ. 

ನಕ್ಷತ್ರ ವೀಕ್ಷಣೆ ಎನ್ನುವುದು ಮಕ್ಕಳು ಮತ್ತು ಹವ್ಯಾಸಿಗಳಿಗೆ ಮಾತ್ರ ಸೂಕ್ತ ಎಂದು ಭಾವಿಸಲಾಗಿದೆ. ಧಾರ್ಮಿಕ ವಿಶ್ವವಿಜ್ಞಾನ (ಕಾಸ್ಮಾಲಜಿ)ವನ್ನು ಹೆಚ್ಚಿನ ಸಂದರ್ಭಗಳಲ್ಲಿ ದೇವತಾಶಾಸ್ತ್ರಜ್ಞರಿಗೆ ಅಥವಾ ಧರ್ಮದ ಇತಿಹಾಸ ಬರೆಯುವವರಿಗೆ ಸೀಮಿತಗೊಳಿಸಲಾಗುತ್ತದೆ. ಖಗೋಳವಿಜ್ಞಾನವನ್ನು ಅದರ ತಜ್ಞರಿಗೆ ಸೀಮಿತಗೊಳಿಸಲಾಗಿದೆ. ಈ ವಿಭಿನ್ನ ಗುಂಪುಗಳು ಮತ್ತು ಅವರ ಆಚರಣೆಗಳ ನಡುವೆ ಹಿಂದಿನ ಕಾಲದಲ್ಲಿ ತುಸು ಕೊಡುಕೊಳೆಗಳು ನಡೆಯುತ್ತಿದ್ದವು. ಆದರೆ, ಇಪ್ಪತ್ತನೆಯ ಶತಮಾನದ ವೇಳೆಗೆ ವಿಭಜನೆಗಳು ಬಹಳ ಕಟ್ಟುನಿಟ್ಟಾಗಿವೆ. ಮುಹಮ್ಮದ್ ಅಬ್ದುರ್‍ರಹ್ಮಾನ್ ಖಾನರನ್ನು ಇವತ್ತು ಯಾರೂ ನೆನೆಯದಿರಲು ಇದುವೆ ಕಾರಣವೇನೋ.

ಉಲ್ಕೆಗಳನ್ನು ವೀಕ್ಷಿಸುವ ಉತ್ಸಾಹ:

ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆಯ ಕೊನೆಯ ದಶಕದಲ್ಲಿ ಖಾನ್ ಆ ಕಾಲದ ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್ ಎನಿಸಿದ್ದ ʼನೇಚರ್‌ʼನಲ್ಲಿ ಹತ್ತು ಪ್ರಬಂಧಗಳು ಮತ್ತು ವರದಿಗಳನ್ನು ಪ್ರಕಟಿಸಿದ್ದರು. ಖಾನ್‌ ಕಲಿತದ್ದು ಪದವಿವರೆಗೆ ಮಾತ್ರ. ಆದ್ದರಿಂದಲೇ, ಜೀವನಪೂರ್ತಿ ಅವರು ಶಿಕ್ಷಕ ವೃತ್ತಿ ನಡೆಸಿದ್ದು ಕೂಡ ಉಸ್ಮಾನಿಯಾ ಕಾಲೇಜಿನಲ್ಲಿ. ಐಐಎಸ್‌ಸಿಯಂತಹ ಹೊಸ ಸಂಶೋಧನಾ ಸಂಸ್ಥೆಗಳು ಮತ್ತು ಕಲ್ಕತ್ತಾ, ಬಾಂಬೆ ಅಥವಾ ಮದ್ರಾಸ್‌ನಂತಹ ಹಳೆಯ ವಿಶ್ವವಿದ್ಯಾಲಯಗಳಿಂದ ಅವರು ದೂರವೇ ಇದ್ದರು. ಅದರೆ 1940ರ ದಶಕದ ಅಂತ್ಯದ ವೇಳೆಗೆ, ಖಾನ್ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮುದಾಯಕ್ಕೆ ಚಿರಪರಿಚಿತರಾಗಿದ್ದರು. ನೇಚರ್ ಮತ್ತು ಇತರ ವೈಜ್ಞಾನಿಕ ಪ್ರಕಟಣೆಗಳಿಗೆ ಅವರ ನಿಯಮಿತ ಕೊಡುಗೆಗಳ ಜೊತೆಗೆ, ಅವರು ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು ಮತ್ತು ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮೆಟಿಯೋರಿಟಿಕ್ಸ್‌ನಲ್ಲಿ ಸಂಶೋಧನಾ ಸಹಾಯಕರಾಗಿ ನೇಮಕಗೊಂಡರು. 1936 ರಲ್ಲಿ ಮತ್ತು ಮತ್ತೆ 1948ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೊಸೈಟಿ ಫಾರ್ ರಿಸರ್ಚ್ ಆನ್ ಮಿಟಿಯೊರೈಟ್ಸ್‌ನ ವಾರ್ಷಿಕ ಸಭೆಗಳಲ್ಲಿ ಪ್ರಬಂಧಗಳನ್ನು ಮಂಡಿಸಲು ಖಾನ್‌ ಅವರಿಗೆ ಆಹ್ವಾನ ದೊರಕಿತ್ತು.

ಖಾನ್ ಅವರ ಆಸಕ್ತಿ ಇದ್ದದ್ದು ಉಲ್ಕೆಗಳ ಬಗ್ಗೆ. 1880ರ ದಶಕದ ಉತ್ತರಾರ್ಧದಲ್ಲಿ ಹೈದರಾಬಾದ್‌ನ ಮದರಸಾ-ಇ-ಅಲಿಯಾದಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಖಾನ್‌ ಅವುಗಳ ಬಗ್ಗೆ ಆಸಕ್ತಿ ಹೊಂದಿದ್ದರು. 1910ರಲ್ಲಿನ ಹ್ಯಾಲಿ ಧೂಮಕೇತುವಿನ ಆಗಮನ ನಭೋಮಂಡಲದ ವಿದ್ಯಮಾನಗಳ ಬಗೆಗಿನ ಅವರ ಆಸಕ್ತಿಯನ್ನು ಇಮ್ಮಡಿಗೊಳಿಸಿತು. ಸರ್ ಜಾನ್ ಹರ್ಷಲ್ ಅವರ  ́Outlines of Astronomý’ ಕೃತಿಯನ್ನು ಉರ್ದು ಭಾಷೆಗೆ ತರ್ಜುಮೆ ಮಾಡಲು ಪ್ರಾರಂಭಿಸಿದರು ಖಾನ್. ರಾತ್ರಿಯ ಆಕಾಶವನ್ನು ವ್ಯವಸ್ಥಿತವಾಗಿ ವೀಕ್ಷಿಸಲು ಅವರು ಪ್ರಾರಂಭಿಸಿದ್ದು ಕೂಡಾ ಅದೇ ವೇಳೆಗೆ. ತನಗೆ 60ನೇ ಪ್ರಾಯ ತುಂಬಿದ 1940ರ ಇಸವಿಯಲ್ಲಿ 152 ರಾತ್ರಿಗಳಲ್ಲಾಗಿ ಒಟ್ಟು 103.25 ಗಂಟೆಗಳ ಕಾಲ ಆಕಾಶವನ್ನು ತಾನು ವೀಕ್ಷಿಸಿದ್ದೇನೆಂದು ಅವರು ನೇಚರ್‌ಗೆ ವರದಿ ಮಾಡಿದ್ದರು. ಆ ಮೂಲಕ ಆ ಒಂದೇ ವರ್ಷದಲ್ಲಿ 1390 ಉಲ್ಕೆಗಳ ಮಾರ್ಗಗಳನ್ನು ಗಮನಿಸಿ ನಕ್ಷೆ ಮಾಡಲು ಅವರಿಗೆ ಸಾಧ್ಯವಾಗಿತ್ತು!

ಸ್ವಯಂ ವೀಕ್ಷಿಸುವುದರ ಜತೆಜತೆಗೆ ಇತರ ಹವ್ಯಾಸಿ ವೀಕ್ಷಕರ ತಂಡವನ್ನು ಕಟ್ಟುವಲ್ಲಿ ಕೂಡಾ ಖಾನ್ ಯಶಸ್ವಿಯಾಗಿದ್ದರು. ಸದರಿ ವೀಕ್ಷಕರು ಕೂಡಾ ನಿಯಮಿತವಾಗಿ ತಮ್ಮ ವೀಕ್ಷಣ ವಿವರಣೆಗಳನ್ನು ಕಾಲಕಾಲಕ್ಕೆ ಕಳುಹಿಸಿಕೊಡುತ್ತಿದ್ದರು. 1945ರಲ್ಲಿ ಅವರು ಪ್ರಕಟಿಸಿದ ಬರಹ ಶಾಲಾ ಮುಖ್ಯೋಪಾಧ್ಯಾಯರಾದ ಎಂ.ಎಂ. ಅಲಿ ಬೇಗ್, ವಕೀಲರಾದ ಎಂ.ಎ. ಲತೀಫ್ ಖಾನ್ ಮತ್ತು ಹೈದರಾಬಾದ್‌ನ ಹಣಕಾಸು ಇಲಾಖೆಯ ಅಧಿಕಾರಿಯಾಗಿದ್ದ ಎಂ.ಟಿ. ಅಲಿಯವರ ವೀಕ್ಷಣೆಗಳನ್ನು ಕೂಡಾ ಒಳಗೊಂಡಿತ್ತು. ಈ ಮೂಲಕ ಹಲವಾರು ಹವ್ಯಾಸಿ ಆಕಾಶ ವೀಕ್ಷಕರ ಮಧ್ಯೆ ಸಂಪರ್ಕ ಸಾಧಿಸಲು ಹಾಗೂ ಅವರನ್ನು ದತ್ತಾಂಶ ಸಂಗ್ರಹಕಾರರಾಗಿ ಪರಿವರ್ತಿಸಲು ಖಾನ್‌ ಯಶಸ್ವಿಯಾಗಿದ್ದರು. ನಂತರ ಕೆಲವು ಸಂದರ್ಭಗಳಲ್ಲಿ ‘ನಾಗರಿಕ ವಿಜ್ಞಾನ’ ಎಂದು ಸಾಂದರ್ಭಿಕವಾಗಿ ಕರೆಯಲ್ಪಟ್ಟ ವಿದ್ಯಮಾನದ ಆರಂಭಿಕ ಉದಾಹರಣೆ ಇದು ಎನ್ನಬಹುದು. ವೈಜ್ಞಾನಿಕ ಜ್ಞಾನೋತ್ಪಾದನಾ ಕಾರ್ಯದಲ್ಲಿ  ಸಾಮಾನ್ಯ ನಾಗರಿಕರನ್ನು ಕೂಡಾ ಸೇರಿಸಿಕೊಳ್ಳುವ ಪದ್ಧತಿಗೆ ʼನಾಗರಿಕ ವಿಜ್ಞಾನʼ ಎಂದು ಹೆಸರಿಸಲಾಗಿದೆ. 

ಉಲ್ಕೆಗಳ ಬಗೆಗಿನ ಅಂದಿನ ಅಧ್ಯಯನ ಅವುಗಳ ಆಕಾಶ  ಮಾರ್ಗಗಳು ಮತ್ತು ಆವರ್ತನಗಳ ಜತೆಜತೆಗೆ ಉಲ್ಕೆಗಳ ಅಧ್ಯಯನವನ್ನೂ ಅವಲಂಬಿಸಿತ್ತು. ತಮ್ಮ ಸಾಮಾಜಿಕ ಸಂಪರ್ಕಗಳನ್ನು ಇಲ್ಲಿ ಕೂಡಾ  ಖಾನ್‌ ಬಹಳ ಪ್ರಯೋಜನ ಸಿಗುವ ಹಾಗೆ ಬಳಸಿಕೊಂಡಿರುವುದು ನೋಡಬಹುದು. 1936ರ ಆಗಸ್ಟ್ ನಲ್ಲಿ ಮೌಲ್ವಿ ಅಬ್ದುಲ್ ಹಗ್ ಸಾಹೇಬರಿಂದ ಒಂದೆರಡು ವರ್ಷಗಳ ಹಿಂದೆ ಔರಂಗಾಬಾದ್ ಜಿಲ್ಲೆಯ ಫುಲ್ಮರಿ ಗ್ರಾಮದ ಬಳಿಯ ಜಮೀನಿನಲ್ಲಿ ಬಿದ್ದ ಏರೋಲೈಟನ್ನು ಪಡೆದದ್ದು ಇದಕ್ಕೊಂದು ಉದಾಹರಣೆ. ಜತೆಗೆ ಯಾವುದೋ ಒಂದು ಪ್ರದೇಶದಲ್ಲಿ ಉಲ್ಕಾಪಾತವಾದ ಹಳೆಯ ವಿಷಯ ಕೇಳಿಬಂದಾಗ ಉಲ್ಕಾಶಿಲೆಗಳನ್ನು ಹುಡುಕಲು ನೇರವಾಗಿ ಅಲ್ಲಿಗೇ ಹೊರಟು ಬಿಟ್ಟಿದ್ದರು ಖಾನ್.‌ ದುರದೃಷ್ಟವಶಾತ್‌ ಉಲ್ಕಾಪಾತದ ನಂತರದ ವರ್ಷಗಳಲ್ಲಿ ಆ ಭೂಮಿ ಸಮತಟ್ಟಾಗಿ ಹೋಗಿದ್ದರಿಂದ ಉಲ್ಕೆಗಳು ಸಿಗಲಿಲ್ಲ. ಅದರೂ ಯಾರಾದರೂ ತಮ್ಮ ಬಳಿ ಈ ʼಜ್ವಾಲಾಮುಖಿ ನಕ್ಷತ್ರ’ವನ್ನು ಇಟ್ಟುಕೊಂಡಿದ್ದಲ್ಲಿ ಕೊಟ್ಟುಬಿಡಲಿ ಎಂದುಕೊಂಡು ಬಹುಮಾನ ನೀಡಲು ಖಾನ್‌ ಮುಂದಾಗಿದ್ದರು. 

ಖಾನ್ ಸ್ಥಳೀಯವಾಗಿ ಪತ್ತೆಯಾದ ಉಲ್ಕಾಶಿಲೆಗಳಿಂದ ತೃಪ್ತರಾಗುತ್ತಿರಲಿಲ್ಲ.‌ ಅಂತಾರಾಷ್ಟ್ರೀಯ ವ್ಯಾಪಾರಿಗಳ ಬಳಿ ವ್ಯವಹಾರ ಕುದುರಿಸಿಕೊಂಡು ಅಪರೂಪದ ಉಲ್ಕಾಶಿಲೆಗಳನ್ನು ಖರೀದಿಸಲು ಪ್ರಾರಂಭಿಸಿದ್ದರು. ರೋಚೆಸ್ಟರ್‌ನಲ್ಲಿರುವ ಅಪರೂಪದ ವೈಜ್ಞಾನಿಕ ಮಾದರಿಗಳ ಡೀಲರ್‌ ʼವಾರ್ಡ್ಸ್ ನ್ಯಾಚುರಲ್ ಸೈನ್ಸ್ ಎಸ್ಟಾಬ್ಲಿಷ್‌ಮೆಂಟ್‌’ನಿಂದ ಹಲವಾರು ಉಲ್ಕಾ ತುಣುಕುಗಳನ್ನು ಖರೀದಿಸಿದ್ದರು. ಕೆಲವು ಅಪರೂಪದ ಉಲ್ಕಾಶಿಲೆಗಳನ್ನು ಖರೀದಿಸಲು ಡೆನ್ವರ್‌ನ ವ್ಯಾಪಾರಿಯೊಬ್ಬರಿಗೆ ಅಂದಿನ ಬರೋಬ್ಬರಿ 24 ಡಾಲರ್‌ ಮೊತ್ತವನ್ನು ಸುಮಾರು 1920ರ ದಶಕದಲ್ಲಿ ಪಾವತಿಸಿದ್ದನ್ನು ಕೂಡಾ ಕಾಣಬಹುದು. ಕ್ರಮೇಣ ಅವರ ಸಂಗ್ರಹ ವೈಜ್ಞಾನಿಕ ಸಂಪನ್ಮೂಲವಾಗಿ ಗಮನ ಸೆಳೆಯಿತು. ‘ಬೋಸಾನ್’ ಕಣದ ಆವಿಷ್ಕಾರಕ್ಕಾಗಿ ಹೆಸರುವಾಸಿಯಾಗಿರುವ ಪ್ರಖ್ಯಾತ ಭೌತವಿಜ್ಞಾನಿ ಸತ್ಯೇಂದ್ರನಾಥ್ ಬೋಸರು ಢಾಕಾ ವಿಶ್ವವಿದ್ಯಾಲಯದ ತಮ್ಮ ಪ್ರಯೋಗಾಲಯದಲ್ಲಿ ಎಕ್ಸ್-ರೇ ವಿಶ್ಲೇಷಣೆ ನಡೆಸಲು ಖಾನರ ಸಂಗ್ರಹದಿಂದ ಕೆಲವು ಉಲ್ಕಾಶಿಲೆಗಳನ್ನು ಎರವಲು ಪಡೆದಿದ್ದರು. ಕಾಲೇಜು ಶಿಕ್ಷಕರಾಗಿ ತಮಗೆ ಸಿಗುವ ಸಂಬಳದಿಂದಲೇ ಖಾನ್‌ ಈ ಸಂಗ್ರಹವನ್ನು ಮಾಡಿದ್ದರೆನ್ನುವುದು ಗಮನಾರ್ಹ. ವಿದೇಶಿ ವ್ಯಾಪಾರಿಗಳು ಹಾಕುವ ಬೆಲೆ, ಸ್ಥಳೀಯರಿಗೆ ನೀಡಲಾಗುವ ಹಣರೂಪದ ಸಂಭಾವನೆ ಇತ್ಯಾದಿಗಳೆಲ್ಲವೂ ಬರುತ್ತಿದ್ದದ್ದು ಅವರ ವೈಯುಕ್ತಿಕ ಸಂಪಾದನೆಯಿಂದ!

ಉಲ್ಕಾ ಶಿಲೆ

ಖಾನ್ ಶ್ರೀಮಂತರೇನಲ್ಲ. ಮೂಲತಃ ಘಜ್ನಿ ಮೂಲದ ವಿದ್ವಾಂಸರ ಕುಟುಂಬದಿಂದ ಬಂದವರು. ಅವರ ಪೂರ್ವಜರು ಆರ್ಕಾಟ್‌ನ ನವಾಬರಿಗೆ ಸೇವೆ ಸಲ್ಲಿಸಿದ್ದರು. ಆರ್ಕಾಟ್‌ ಪತನದ ನಂತರ ಬ್ರಿಟಿಷರ ಅಡಿಯಲ್ಲಿ ಉದ್ಯೋಗಕ್ಕೆ ಸೇರಿದರು. ಬ್ರಿಟಿಷರ ಮಿಲಿಟರಿ ಮತ್ತು ನಾಗರಿಕ ಸೇವೆಯಲ್ಲಿ ಇದ್ದುದರಿಂದ ಕುಟುಂಬ ಆರಾಮವಾಗಿತ್ತು. ಕಾಲೇಜಿನಲ್ಲಿದ್ದಾಗಲೇ ಖಾನರ ತಂದೆ ಆಕಸ್ಮಿಕವಾಗಿ ನಿಧನರಾದ್ದರಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಸರ್ಕಾರ ನೀಡುತ್ತಿದ್ದ ಸಣ್ಣ ಮೊತ್ತದ ವಿದ್ಯಾರ್ಥಿವೇತನ ಆರ್ಥಿಕ ಸಂಕಷ್ಟದ ಈ ಅವಧಿಯನ್ನು ನಿಭಾಯಿಸಲು ಅವರಿಗೆ ದಾರಿ ಮಾಡಿಕೊಟ್ಟಿತು. ಯಾವಾಗಲೂ ಉತ್ತಮ ವಿದ್ಯಾರ್ಥಿಯಾಗಿದ್ದ ಅವರಿಗೆ ಪದವಿ ಮುಗಿಸಿದ ಕೂಡಲೇ ಉದ್ಯೋಗ ದೊರಕಿತು. ಅಂತಿಮವಾಗಿ ಆರ್ಥಿಕ ಪರಿಸ್ಥಿತಿ ಕೂಡಾ ಅನುಕೂಲವಾಯಿತು. ಈ ಅನಿಶ್ಚಿತತೆ, ಕಾಲೇಜು ಶಿಕ್ಷಕರ ಸಣ್ಣ ಸಂಬಳದಿಂದಾಗಿ ಉಲ್ಕಾಶಿಲೆಗಳ ಸಂಗ್ರಹಕ್ಕಾಗಿ ಅವರು ಮಾಡುತ್ತಿದ್ದ ಉದಾರವಾದ ಖರ್ಚಿಗೆ ಕಡಿವಾಣ ಹಾಕಿರಲಿಲ್ಲ. ಇದು ಅವರ ಅಧ್ಯಯನಾಸಕ್ತಿಯ ಆಳವನ್ನು ಸೂಚಿಸುತ್ತದೆ.

ರಾತ್ರಿಯ ಆಕಾಶವನ್ನು ದಿಟ್ಟಿಸಿ ನೋಡುತ್ತಾ ಗಂಟೆಗಟ್ಟಲೆ ಕಳೆಯುವುದಾಗಲಿ ಉಲ್ಕೆಗಳನ್ನು ಖರೀದಿಸಲು ಉದಾರವಾಗಿ ಖರ್ಚು ಮಾಡುವುದಾಗಲಿ ಖಾನರ ಉತ್ಸಾಹವನ್ನು ಕುಂದಿಸಲಿಲ್ಲ. ಉಲ್ಕೆಗಳ ಧಾರ್ಮಿಕ ಇತಿಹಾಸದ ಅನ್ವೇಷಣೆಯು ಅವರು ಆಸಕ್ತಿ ವಹಿಸಿದ ಮೂರನೇ ಕ್ಷೇತ್ರ. ಮೂಲತಃ ವಿದ್ವಾಂಸರ ಕುಟುಂಬದವರಾದ ಖಾನರು ಶಾಸ್ತ್ರೀಯ ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಶಿಕ್ಷಣ ಪಡೆದಿದ್ದರು. ಆದ್ದರಿಂದಲೇ, ಧಾರ್ಮಿಕ ಪಠ್ಯಗಳಲ್ಲಿ ಬಂದಿರುವ ಉಲ್ಕೆಗಳ ಬಗೆಗಿನ ವರದಿಗಳನ್ನು ದಾಖಲಿಸಲು ಮತ್ತು ವಿಶ್ಲೇಷಿಸಲು ಖಾನ್‌ ಬಯಸಿದ್ದರು. ಮಕ್ಕಾದ ಕಾಬಾದಲ್ಲಿರುವ ಪವಿತ್ರ ಕಪ್ಪು ಕಲ್ಲಿನ ಉಲ್ಕಾ ಮೂಲವನ್ನು ಸಾಬೀತು ಮಾಡಲು ಅವರು ಮಾಡಿದ ಪ್ರಯತ್ನ ಅವರ ಆಸಕ್ತಿದಾಯಕ ಅಧ್ಯಯನಗಳಲ್ಲೊಂದು. ಈ ಸಿದ್ಧಾಂತವನ್ನು ಪ್ರಸ್ತಾಪಿಸಿದವರಲ್ಲಿ ಅವರು ಮೊದಲಿಗರೇನಲ್ಲ. ಆದರೂ, ಉಲ್ಕೆಗಳ ಬಗ್ಗೆ ವೈಜ್ಞಾನಿಕ ಜ್ಞಾನ ಮತ್ತು ಶಾಸ್ತ್ರೀಯ ಪಠ್ಯಗಳ ಉಲ್ಲೇಖಗಳನ್ನು ಒಟ್ಟಿಗೆ ತಂದು ವಿಶ್ಲೇಷಿಸಿದರವರಲ್ಲಿ ಅವರೇ ಮೊದಲಿಗರು ಎನ್ನಬಹುದು.

ಕ‌ಅ್‌ಬಾದ ಕಪ್ಪುಕಲ್ಲಿನ ಪಕ್ಕದ‌ ಮತ್ತು ಮುಂಭಾಗದ ನೋಟಗಳು

ವಿಭಿನ್ನ ಪ್ರಪಂಚಗಳ ಸಂಗಮ: 

20ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ ವಿಜ್ಞಾನದ ಆಸಕ್ತರಾಗಿದ್ದ ಖಾನರ ವೃತ್ತಿಜೀವನ ಹಲವು ಪ್ರಪಂಚಗಳನ್ನು ಒಗ್ಗೂಡಿಸಿದೆ. ಒಂದೆಡೆ ಅವರೊಬ್ಬ ಬಾಲ್ಯದಲ್ಲಿ ಹಚ್ಚಿಕೊಂಡ ನಕ್ಷತ್ರ ವೀಕ್ಷಣೆಯ ಆಸಕ್ತಿಯನ್ನು ಜೀವಂತವಾಗಿಟ್ಟ ಹವ್ಯಾಸಿ. ಮತ್ತೊಂದೆಡೆ, ಹಳೆಯ ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಬೆಳೆದು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಶಾಸ್ತ್ರೀಯ ಕೃತಿಗಳಲ್ಲಿ ಮುಳುಗಿದ ಪ್ರಾಚೀನಾಸಕ್ತ. ಇನ್ನೊಂದೆಡೆ ವೈಜ್ಞಾನಿಕ ಸಮಾಜಗಳು, ಸಂಶೋಧನಾ ಸಂಸ್ಥೆಗಳು ಮತ್ತು ವಿದ್ವತ್ಪೂರ್ಣ ನಿಯತಕಾಲಿಕಗಳ ರೂಪದಲ್ಲಿ ಸಂಘಟಿತವಾಗಿರುವ ವೈಜ್ಞಾನಿಕ ಜಗತ್ತಿನಲ್ಲಿ ಗುರುತಿಸಿಕೊಂಡ ವ್ಯಕ್ತಿ ಕೂಡಾ ಹೌದು. ಒಟ್ಟಾರೆ, ಹಲವಾರು ವಿಭಿನ್ನ ಪ್ರಪಂಚಗಳು ಅವರಲ್ಲಿ ಸಮಾಗಮವಾಗಿವೆ ಎನ್ನಬಹುದು. ಹವ್ಯಾಸಿಗಳ ಮತ್ತು ವಿಜ್ಞಾನಿಗಳ ಪ್ರಪಂಚಗಳು, ಪ್ರಾಚೀನಾಸಕ್ತರ ಹಾಗೂ ಖಗೋಳಶಾಸ್ತ್ರಜ್ಞರ ಪ್ರಪಂಚಗಳು, ಹಳೆಯ ಹೈದರಾಬಾದ್ ಮತ್ತು ಆಧುನಿಕ ಅಮೆರಿಕದ ಪ್ರಪಂಚಗಳು ಅವರಲ್ಲಿ ಹುದುಗಿರುವ ಕೆಲವು ಪ್ರಪಂಚಗಳ ಉದಾಹರಣೆಗಳಷ್ಟೇ.

ಈ ವೈವಿಧ್ಯಮಯ ಪ್ರಪಂಚಗಳ ನಡುವಿನ ಕೊಂಡಿಯಾಗಿ ಮೂಡಿ ಬಂದಿರುವ ಅವರು ನೈಸರ್ಗಿಕ ಇತಿಹಾಸದ ಬಗ್ಗೆ ಅಧ್ಯಯನ ಕೈಗೊಂಡ ಆರಂಭಿಕ ಆಧುನಿಕ ಕಾಲದ ಸಾಧಕ. ಆಧುನಿಕ ವಿಜ್ಞಾನದ ಜನನಕ್ಕೂ ಮುಂಚೆ ಅಸ್ತಿತ್ವದಲ್ಲಿದ್ದ ನೈಸರ್ಗಿಕ ಇತಿಹಾಸ ಎನ್ನುವ ಈ ಶಿಸ್ತು ಹಲವಾರು ಶಿಸ್ತುಗಳನ್ನು ಒಂದುಗೂಡಿಸಿದ ಸರ್ವಸ್ಪರ್ಶಿ ಶಿಸ್ತು (ಮೆಟ ಶಿಸ್ತು) ಎನ್ನಬಹುದು. ಇದು ವಿಲಕ್ಷಣ ಮತ್ತು ಅಪರೂಪದ ವಸ್ತುಗಳ ಮಾದರಿಗಳ ಸಂಗ್ರಹವನ್ನು ಶಾಸ್ತ್ರೀಯ ಪಠ್ಯಗಳ ಅಧ್ಯಯನದೊಂದಿಗೆ ಸಂಯೋಜಿಸಿತ್ತು. ಆಧುನಿಕ, ಸಂಘಟಿತ ಮತ್ತು ಹೆಚ್ಚು ವೃತ್ತಿಪರ ವಿಜ್ಞಾನದ ರಂಗ ಪ್ರವೇಶದೊಂದಿಗೆ ನೈಸರ್ಗಿಕ ಇತಿಹಾಸ ನೇಪಥ್ಯಕ್ಕೆ ಸರಿಯಿತು. ಅಧ್ಯಯನ ಶಿಸ್ತುಗಳು ಕ್ರಮೇಣ ಹೆಚ್ಚು ವಿಶಿಷ್ಟ ಕ್ಷೇತ್ರಗಳಾದವು. ಸಂಗ್ರಹಗಳು ಸಾಂಸ್ಥಿಕವಾದವು. ವಿದ್ವತ್ಪೂರ್ಣ ಅನ್ವೇಷಣೆಗಳು ಅವುಗಳ ವಿಷಯಗಳಿಗೆ ಸಂಬಂಧಿಸಿದ ಶಾಸ್ತ್ರೀಯ ಪೂರ್ವನಿದರ್ಶನಗಳ ಬಗ್ಗೆ ವಹಿಸುತ್ತಿದ್ದ ಆಸಕ್ತಿ ಕಡಿಮೆಯಾಯಿತು. ಎಸ್.ಎನ್. ಬೋಸರಂತಹ ಸಂದರ್ಶಕರಿಗೆ ವೈಭವೋಪೇತ ಹೈದರಾಬಾದ್ ಭೋಜನ ಉಣಬಡಿಸಿದ ನಂತರ ಖಾನರು ತನ್ನ ವೈಯಕ್ತಿಕ ಉಲ್ಕಾ ಸಂಗ್ರಹಗಳನ್ನು ಪ್ರದರ್ಶಿಸುತ್ತಿದ್ದರು. ಅದೇ ಸಮಾರಂಭದಲ್ಲಿ ಅವರು ಸ‍ಅದಿಯವರ ಕಾವ್ಯ ಮತ್ತು ಉಲ್ಕೆಗಳ ಬಗ್ಗೆ ಕೂಡಾ ಮಾತಾಡುತ್ತಿದ್ದರು. ಈ ಆಸ್ವಾದನೆ ಆಧುನಿಕ ವೈಜ್ಞಾನಿಕ ಖವಿಜ್ಞಾನಗಳಿಗಿಂತ ಭಿನ್ನವಾಗಿರುವ ಆಧುನಿಕ ಕಾಲದ ಆರಂಭದ ನೈಸರ್ಗಿಕ ಇತಿಹಾಸ ಶಿಸ್ತಿನ ಜಗತ್ತನ್ನು ನೆನಪಿಸುತ್ತದೆ.

ಖಾನರ ವೈಜ್ಞಾನಿಕ ಪ್ರಯಾಣ ನೈಸರ್ಗಿಕ ಇತಿಹಾಸದಿಂದ ವಿಜ್ಞಾನದ ಕಡೆಗೆ ಉಂಟಾಗಿರುವ ಸಂಕ್ರಮಣಾವಸ್ಥೆಯ ಅಪೂರ್ಣತೆಯ ದ್ಯೋತಕ ಎನ್ನಬಹುದು. ನೈಸರ್ಗಿಕ ಇತಿಹಾಸಕ್ಕೆ ಆಧುನಿಕ ವೈಜ್ಞಾನಿಕ ಅಭ್ಯಾಸಗಳೊಂದಿಗೆ ಸಹಬಾಳ್ವೆಯಿಂದ ಮುಂದುವರಿಯಲು ಸಾಧ್ಯವಿದೆ ಎಂದು ತೋರುತ್ತದೆ. ಜತಗೆ ನಾಗರಿಕ ಸಹಭಾಗಿತ್ವ ಇರುವ ನಾಗರಿಕ ವಿಜ್ಞಾನದ ಹೊಸ ವಿಧಾನಗಳ ಉದಯಕ್ಕೆ ಇದು ಪ್ರೇರೇಪಿಸಲೂಬಹುದು. ಈ ಮೂಲಕ ಅಲಕ್ಷ್ಯವಾಗಿ ನಡೆಯುವ ಅನ್ವೇಷಣೆಗಳನ್ನು ಕೂಡಾ ಸೂಕ್ಷ್ಮವಾದ ವೈಜ್ಞಾನಿಕ ಅಧ್ಯಯನಕ್ಕೊಂದು ಸಂಪನ್ಮೂಲವಾಗಿ ಬಳಸಲು ಸಾಧ್ಯವಿದೆ.

ಖವಿಜ್ಞಾನವನ್ನು ಒಂದೊಮ್ಮೆ ವಿಜ್ಞಾನಗಳ ರಾಣಿ ಎಂದು ಕರೆಯಲಾಗುತ್ತಿತ್ತು. ಆದರೆ ರಾಣಿಗೆ ಯಾವಾಗಲೂ ನಕ್ಷತ್ರ ವೀಕ್ಷಣೆಯಂತಹ ಬಡ ಸಹೋದರ ಸಹೋದರಿಯರು ಕೂಡಾ ಇದ್ದರು. ಆದರೆ, ಅವರು ವಿಜ್ಞಾನದ ಗರ್ಭ ಗುಡಿಯ ಹೊರಗಿದ್ದರು. ಖಾನರಂತಹ ಮೇಧಾವಿಗಳನ್ನು ನೆನಪಿಸಿಕೊಳ್ಳುವಾಗ ರಾಣಿ ಕೂಡಾ ತನ್ನ ಬಡ ಸಹೋದರರನ್ನು ಭೇಟಿಯಾಗಿ ಕಲಿಯುತ್ತಿದ್ದ ಸನ್ನಿವೇಶ ಗಮನಕ್ಕೆ ಬರುತ್ತದೆ.

ಲೇ: ಪ್ರೊಜಿತ್ ಬಿಹಾರಿ ಮುಖರ್ಜಿ
ಕನ್ನಡಕ್ಕೆ: ನಝೀರ್ ಅಬ್ಬಾಸ್



Projit Bihari Mukharji earned his PhD from SOAS, University of London and has held faculty positions at the University of Pennsylvania, as well as universities in Canada and the UK, before joining Ashoka University . He has authored three influential books: Nationalizing the Body: The Medical Market, Print, and Daktari Medicine (2009), Doctoring Traditions: Ayurveda, Small Technologies, and Braided Sciences (2016), and Brown Skins, White Coats: Race Science in India, 1920–66 (2022), the latter winning the prestigious 2024 Pfizer Award for its groundbreaking analysis of race science in India .

Leave a Reply

*