ಆಧುನಿಕತೆಯ ಅರ್ಥ
ಒಂದು ಸಮಾಜದ ರಾಜಕೀಯ ವ್ಯವಸ್ಥೆಯಲ್ಲಿನ ತೀವ್ರ ಬಿಕ್ಕಟ್ಟು, ಸಾಮಾಜಿಕ ಸಂಘರ್ಷದಿಂದ ಹೊಮ್ಮುವ ಹತಾಶೆ; ಶ್ರದ್ಧೆ, ನಂಬಿಕೆ, ಆಚರಣೆ, ನೈತಿಕತೆ ಮತ್ತು ಅಭಿವ್ಯಕ್ತಿಗಳ ಕಣಜವಾದ ಸಾಂಸ್ಕೃತಿಕ ಲೋಕದಲ್ಲಿ ಕಾಣಿಸಿಕೊಳ್ಳುವ ಅಸಹನೀಯ ಒಳಕುದಿಗಳು ಹೊಸ ಸಿದ್ಧಾಂತಗಳನ್ನು ಮಂಡಿಸುತ್ತವೆ. ಸಂಪ್ರದಾಯವನ್ನು ಸಂದೇಹಿಸುತ್ತ, ರೂಢಿಗಳನ್ನು ಪ್ರಶ್ನಿಸುತ್ತ ಬೇರೊಂದು ಬಗೆಯ ಅಭಿವ್ಯಕ್ತಿ ರೂಪ ಪಡೆಯುತ್ತದೆ. ಹೀಗೆ, ಹಳೆಯ ಹಾದಿಗಳಿಗೆ ವಿದಾಯ ಹೇಳುವ ವಿಧಾನವನ್ನೇ ‘ಆಧುನಿಕತೆ’ ಎಂದು ಗುರುತಿಸಲಾಗುತ್ತದೆ. ಬೇರೆಬೇರೆ ಕಾಲದಲ್ಲಿ ಆ ಯುಗದ ಎಲ್ಲ ಬಗೆಯ ಬೌದ್ಧಿಕ ಹಾಗೂ ಭೌತಿಕ ಅಗತ್ಯ ಮತ್ತು ಬೇಡಿಕೆಗಳಿಗೆ ತಕ್ಕಂತೆ ಬಯಸುವ ಬದಲಾವಣೆಯೇ ಆಧುನಿಕತೆಯಾಗಿದೆ. ತನ್ನ ಕಾಲಮಾನದ ಅಪೇಕ್ಷೆಗೆ ಸೂಕ್ತವಾಗಿ ವಿವಿಧ ಮಾಧ್ಯಮಗಳ ಮೂಲಕ ಪ್ರಕಟವಾಗುವ ಆಧುನಿಕತೆಯನ್ನು ಇಂಗ್ಲಿಶ್ನಲ್ಲಿ ‘ಮಾಡರ್ನ್’ (ಮಾಡರ್ನಿಸಂ/ಮಾಡರ್ನಿಟಿ) ಎಂದು ಕರೆಯಲಾಗಿದೆ. ಇಂಗ್ಲಿಶ್ಗೆ ಈ ಪದ ಫ್ರೆಂಚ್ನ ಎರವಲಾದರೂ ಮೂಲ ಮಾತ್ರ ಲ್ಯಾಟಿನ್. ಮೂಲದಲ್ಲಿ ಈ ಪದದ ಅಕ್ಷರಶಃ ಅರ್ಥ ‘ಈ ಕ್ಷಣ’. ಇಂಗ್ಲಿಶ್ನಲ್ಲಿ ಈ ಪದವನ್ನು ಟಂಕಿಸಿದ ಕಾಲದಲ್ಲಿ ಸಮಕಾಲೀನ, ಸದ್ಯ ಮತ್ತು ಈಗ ಎಂದಿದ್ದರೂ ಇಂದಿನ ಬಳಕೆ ವಿಶಾಲ ನೆಲೆಯನ್ನು ಪಡೆದಿದೆ. ಕಾಲ ಯಾವುದೇ ಆದರೂ ಚಲನಶೀಲತೆ, ನಿರ್ಗಮನ ಮತ್ತು ಸ್ಥಾನಪಲ್ಲಟ ಎಂಬ ತ್ರಿಸೂತ್ರ ‘ಆಧುನಿಕತೆ’ ಪ್ರಕ್ರಿಯೆಯ ಹಿಂದಿನ ಬಹುಮುಖ್ಯ ಲಕ್ಷಣವಾಗಿವೆ.
ಪರಿಕಲ್ಪನೆ ಹುಟ್ಟಿದ ಸಂದರ್ಭ
ಮೊದಲನೆಯ ಜಾಗತಿಕ ಯುದ್ಧದ ಬಳಿಕ ಸಮಾಜದಲ್ಲಿ ಕಾಣಿಸಿಕೊಂಡ ಹೊಸ ರಾಜಕೀಯ ಹೊಂದಾಣಿಕೆ, ಬದಲಾದ ಸಾಮಾಜಿಕ ಸಂರಚನೆ, ಕಲೆ-ಸಾಹಿತ್ಯ ಕ್ಷೇತ್ರಗಳಲ್ಲಿ ಕೈಗೆತ್ತಿಕೊಂಡ ಪ್ರಯೋಗಶೀಲತೆಗಳು ಇಪ್ಪತ್ತನೆಯ ಶತಮಾನದ ‘ಆಧುನಿಕತೆ’ಯನ್ನು ರೂಪಿಸಿದವು. ಆದಾಗ್ಯೂ, ಆಧುನಿಕತೆಯ ಸೈದ್ಧಾಂತಿಕ ಬೇರುಗಳು ಹತ್ತೊಂಬತ್ತನೆ ಶತಮಾನದ ಕೊನೆಯ ಭಾಗದಲ್ಲಿಯೇ ಚಿಗುರತೊಡಗಿದ್ದವು ಎಂದು ಸಾಹಿತ್ಯ ಇತಿಹಾಸ ದಾಖಲಿಸುತ್ತದೆ. ಯುರೋಪ್ ಮತ್ತು ಉತ್ತರ ಅಮೆರಿಕಗಳಲ್ಲಿ, ಪ್ರಮುಖವಾಗಿ ಸಾಂಸ್ಕೃತಿಕ ಸಂಕಥನಗಳಲ್ಲಿ ಪ್ರಕಟಗೊಂಡ ಆಧುನಿಕತೆಯನ್ನು ವಾಲ್ಟರ್ ಬೆಂಜಮಿನ್ರ (೧೮೯೨-೧೯೪೦) ಸೈದ್ಧಾಂತಿಕ ಪ್ರಮೇಯಗಳಲ್ಲಿ ಬೀಜರೂಪದಲ್ಲಿ ಕಾಣಬಹುದು, ಎಂದು ಸಾಹಿತ್ಯ ವಿಮರ್ಶಕ ಮತ್ತು ತತ್ತ್ವಶಾಸ್ತ್ರಜ್ಞ ಜಾರ್ಜ್ ಲುಕಾಚ್ಸ್ (೧೮೮೫-೧೯೭೧) ಹೇಳುತ್ತಾರೆ. ಲುಕಾಚ್ಸ್ರ ಗ್ರಹಿಕೆ ಹಾಗಿದ್ದರೂ, ಆಧುನಿಕ ಸಮಾಜ ಮತ್ತು ನಾಗರಿಕತೆಯ ವಿಕಾಸವನ್ನು ಸಂಪೂರ್ಣ ಹೊಸ ರೀತಿಯಲ್ಲಿ ಗ್ರಹಿಸಿದ ತತ್ತ್ವಶಾಸ್ತ್ರಜ್ಞರಾದ ಫ್ರೆಡರಿಕ್ ನೀಶೆ (೧೮೪೪-೧೯೦೦), ಕಾರ್ಲ್ ಮಾರ್ಕ್ಸ್ (೧೮೧೮-೧೮೮೩), ಸಿಗ್ಮಂಡ್ ಫ್ರಾಯ್ಡ್ (೧೮೫೬-೧೯೩೯), ಫರ್ಡಿನಾಂಡ್ ಸಾಸೂರ್ (೧೮೫೭-೧೯೧೩), ಕ್ಲಾದ್ ಲೆವಿ-ಸ್ಟ್ರಾಸ್ (೧೯೦೮-೨೦೦೯), ಯುರೋಪ್ ಮತ್ತು ಅಮೆರಿಕಗಳಲ್ಲಿ ಆಧುನಿಕತೆ ಎನ್ನುವ ಪರಿಕಲ್ಪನೆಯನ್ನು ಪ್ರಭಾವಿಸಿದವರಲ್ಲಿ ಪ್ರಮುಖರಾಗಿದ್ದಾರೆ. ಈ ಸಿದ್ಧಾಂತಿಗಳಿಂದ ಪ್ರೇರಣೆಗೊಂಡವರು ಅಲ್ಲಿಯವರೆಗೆ ಬಳಕೆಯಲ್ಲಿದ್ದ ವಸ್ತುವಿಷಯ, ಸ್ವರೂಪ, ಶೈಲಿ, ನುಡಿಗಟ್ಟು, ಪರಿಕಲ್ಪನೆ, ಆಲೋಚನಾ ಕ್ರಮಗಳನ್ನು ಬಿಟ್ಟುಕೊಟ್ಟರು. ‘ಸಾಕ್ಷಿಪ್ರಜ್ಞೆ’ ಅಥವ ‘ಪ್ರಜ್ಞಾಪ್ರವಾಹ’ ಹೊಸ ಯುಗಧರ್ಮದ ಮುಖ್ಯ ಗುಣಲಕ್ಷಣವಾಯಿತು. ಪ್ರಜ್ಞಾಪ್ರವಾಹ ಎಂಬ ನುಡಿಗಟ್ಟು ಆಧುನಿಕತೆಗೆ ಸಂವಾದಿಯಾಗಿ ಆ ಕಾಲದಲ್ಲಿ ಬಳಕೆಗೆ ಬಂದಿತು. ಆತ್ಮಾವಲೋಕನ, ವಿಶ್ಲೇಷಣೆ, ವಿಮರ್ಶೆ, ಸಂದೇಹ, ಅಮೂರ್ತತೆ, ಪ್ರಬಲವಾಗಿ ಪ್ರಶ್ನಿಸುವಿಕೆ, ಅತಿವಾಸ್ತವಿಕವಾದ, ಸ್ವಂತಿಕೆ, ಸ್ವೋಪಜ್ಞತೆಗಳು ಹೊಸ ಅಭಿವ್ಯಕ್ತಿಯಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಳ್ಳತೊಡಗಿದವು.
ಆಧುನಿಕತೆ ಎಂಬ ಪದದ ಅರ್ಥ ನಿರ್ವಚನದಲ್ಲಿ ವಿವಾದಾತ್ಮಕ ಚಿಂತಕ ಎಂದೇ ಕರೆಯಲಾಗುವ ಹಂಗೇರಿಯ ಜಾರ್ಜ್ ಲುಕಾಚ್ಸ್ರ ಮಾತುಗಳಿಗೆ ವಿಶೇಷ ಮೌಲಿಕತೆಯನ್ನು ನೀಡಲಾಗಿದೆ. ಲುಕಾಚ್ಸ್ರ ಗ್ರಹಿಕೆಯಂತೆ, ಪ್ರಜ್ಞಾಪ್ರವಾಹ ವಿಧಾನವು ಕೇವಲ ತಾಂತ್ರಿಕ ಕಸರತ್ತಲ್ಲ. ಬದಲಿಗೆ, ನಿರೂಪಣೆಯ ವಿನ್ಯಾಸವನ್ನು ನಿರ್ಮಿಸುವ ಮತ್ತು ಪಾತ್ರವನ್ನು ಶಕ್ತಿಯುತವಾಗಿ ಪ್ರಸ್ತುತಪಡಿಸುವ ಪರಿಕರವಾಗಿದೆ. ಈ ಕಾರಣದಿಂದಾಗಿಯೇ, ಆಧುನಿಕತೆ ಎಂದರೆ ಕಲಾಕೃತಿಯೊಂದರ ಶೈಲಿಯನ್ನು ಯಾವುದು ನಿರ್ಧರಿಸುತ್ತದೆ; ಕೃತಿಯ ಆಶಯವು ಕೃತಿಯ ಸ್ವರೂಪದೊಂದಿಗೆ ಹೇಗೆ ಒಟ್ಟಂದವನ್ನು ಸಾಧಿಸುತ್ತದೆ? ಎಂದು ಕೇಳಿಕೊಳ್ಳುವುದೇ ಆಗಿದೆ. ಅಂದರೆ, ಕಲಾವಿದನಿಗೆ ಲೋಕವನ್ನು ಗ್ರಹಿಸುವ ದೃಷ್ಟಿಕೋನ ಮತ್ತು ತಾತ್ತ್ವಿಕತೆಗಳು ಮುಖ್ಯವೇ ಹೊರತು ತಾಂತ್ರಿಕತೆ ಮೇಲುಗೈ ಸಾಧಿಸುವ ಶೈಲಿಯಲ್ಲ. ಹೀಗಾಗಿ, ಆಧುನಿಕತೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವಾಗ ‘ದೃಷ್ಟಿಕೋನ’ಕ್ಕೇ ಘನವಾದ ಮಹತ್ವವನ್ನು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಲೇಖಕನೊಬ್ಬ ಮಾನವಜೀವಿಯ ಯಾತನೆ, ಏಕಾಕಿತನವನ್ನು ಪರಿಭಾವಿಸುವಾಗ ಅದು ಸಮಷ್ಟಿಯಿಂದ ಹುಟ್ಟುತ್ತಿರುವ, ಸಮಷ್ಟಿಯ ಭಾಗ, ಘಟ್ಟ, ಹಂತವೇ ಆಗಿರುವ ಅವಸ್ಥೆಯಾಗಿದೆ, ಎಂದೇ ತಿಳಿಯಬೇಕು. ಆಧುನಿಕತೆಯು ವಾಸ್ತವಿಕ ಬದುಕಿನ ಸಂಕೀರ್ಣತೆಯನ್ನು, ಸ್ಮರಣೆ, ಸಮ್ಮೋಹಕತೆಗಳ ನಡುವಿನ ಅನಿಶ್ಚಯದೊಂದಿಗೆ ಅರಿಯುತ್ತದೆ, ಎನ್ನುವುದು ಲುಕಾಚ್ಸ್ರ ಅಭಿಮತ.
ಜೇಮ್ಸ್ ಜಾಯ್ಸ್ರ ‘ಯೂಲಿಸೆಸ್’, ಟಿ. ಎಸ್. ಎಲಿಯಟ್ರ ‘ವೇಸ್ಟ್ ಲ್ಯಾಂಡ್’, ವರ್ಜೀನಿಯಾ ವೂಲ್ಫ್ರ ‘ಜೇಕಬ್ಸ್ ರೂಮ್’, ಆಲ್ಬರ್ಟ್ ಕಮೂರ ‘ದ ಔಟ್ಸೈಡರ್’, ಜಾನ್-ಪಾಲ್ ಸಾರ್ತ್ರ್ರ ‘ಲ ನಾಸೇ’, ಸ್ಯಾಮುಯಲ್ ಬೆಕೆಟ್ರ ‘ವೇಟಿಂಗ್ ಫಾರ್ ಗಾಡೊ’, ಎಜ್ರಾ ಪೌಂಡ್ರ ಖಂಡಕಾವ್ಯಗಳನ್ನು ಮಹಾಯುದ್ಧದ ಅನಂತರ ಅರ್ಥೈಸಲಾದ ‘ಆಧುನಿಕತೆ’ಯನ್ನು ಸಮರ್ಥವಾಗಿ ಪ್ರತಿನಿಧಿಸುವ ಕೃತಿಗಳೆಂದು ಗುರುತಿಸಲಾಯಿತು.
ಚಲನಶೀಲ ಫ್ರೆಂಚ್ ಸಮಾಜ
ವಿಶ್ವದ ಎಲ್ಲ ಶ್ರೇಷ್ಠ ಚಿಂತನೆಗಳೂ ಮೊದಲಿಗೆ ಹುಟ್ಟುವುದು ಫ್ರೆಂಚರಲ್ಲಿ, ಎಂಬುದು ವಾಡಿಕೆಯ ಮಾತು. ಅಂತೆಯೇ, ವಿಶ್ವದ ಎಲ್ಲ ಆಧುನಿಕ ವಿಚಾರಗಳ ಮೂಲಸೆಲೆ ಇರುವುದು ಫ್ರೆಂಚ್ ಕ್ರಾಂತಿಯಲ್ಲಿ ಎಂಬುದು ಕೂಡ. ಇದನ್ನು ಅರಿತವನಂತೆ, ಫ್ರೆಂಚ್ ಇತಿಹಾಸಕಾರ ಆಂದ್ರೆ ಸೀಗ್ಫ್ರೈಡ್ “ವಿಶ್ವ ನಾಗರಿಕತೆಗಳ ಏರುಗತಿಯ ಹಿಂದೆ ಫ್ರೆಂಚ್ ಚಿಂತನೆಯ ಪ್ರೇರಣೆಯಿದೆ. ಎಲ್ಲ ಕಾಲಕ್ಕೂ ಆವಶ್ಯಕವಾದ ಸ್ಪಷ್ಟತೆ, ಬೌದ್ಧಿಕ ನಿರಾಳತೆ, ಕುತೂಹಲ ಮತ್ತು ಜರೂರಿಯಾಗಿ ಬೇಕಾಗುವ ಕೊಂಚ ಮಾತ್ರ ವಿವೇಚನೆಗಳನ್ನು ಫ್ರೆಂಚ್ ವಿಚಾರಗಳು ಯಾವತ್ತೂ ನೀಡಬಲ್ಲವು”, ಎಂದು ಒಂದೆಡೆ ದಾಖಲಿಸಿದ್ದಾನೆ. ಅದೇನೇ ಇದ್ದರೂ, ಹದಿನೆಂಟನೆ ಶತಮಾನದ ಲೇಖಕ, ತತ್ತ್ವಶಾಸ್ತ್ರಜ್ಞ ಜಾನ್ ಜಾಕ್ ರುಸೋ (೧೭೧೨-೭೮) ಮಂಡಿಸಿದ ರಾಜಕೀಯ ಚಿಂತನೆಗಳಿಂದ ಪ್ರೇರಣೆ ಪಡೆದ ಫ್ರಾನ್ಸ್, ವೈಚಾರಿಕ ಚಲನಶೀಲತೆಯನ್ನು ನಿರಂತರವಾಗಿ ಪ್ರವಹಿಸುತ್ತಲೇ ಇರುವ ನಾಗರಿಕತೆಯಾಗಿದೆ. ನೆಪೋಲಿಯನ್ ಬೋನಪಾರ್ಟ್ನ ನಾಯಕತ್ವದಲ್ಲಿ ಸಾಧಿಸಿದ ಫ್ರೆಂಚ್ ಕ್ರಾಂತಿ (೧೭೮೯-೯೯) ಅಲ್ಲಿನ ಚಕ್ರಾಧಿಪತ್ಯವನ್ನು ಕೊನೆಗೊಳಿಸಿ, ಸಮಾಜದ ಎಲ್ಲ ಸ್ತರಗಳಲ್ಲಿಯೂ ಬದಲಾವಣೆಯನ್ನು ತಂದಿತು. ಹೊಸ ಕಾಲಮಾನಕ್ಕೆ ಅಗತ್ಯವಾಗಿದ್ದ ಸೋದರತೆ, ಸಮಾನತೆ, ಸ್ವಾತಂತ್ರ್ಯಗಳನ್ನು ಲೋಕಕ್ಕೆ ಪರಿಚಯಿಸಿದ ಗರಿಮೆ ಈ ಕಾಲದ ಫ್ರೆಂಚ್ ಸಮಾಜಕ್ಕೆ. ಆಗಿನ ಫ್ರೆಂಚ್ ಸಮುದಾಯಗಳು ತೋರಿದ ಧೈರ್ಯ, ಮಾಡಿದ ತ್ಯಾಗಗಳು ಮುಂದಿನ ವಿಶ್ವವನ್ನು ಎಲ್ಲ ಕಾಲದಲ್ಲಿಯೂ ಪ್ರಭಾವಿಸುವಷ್ಟು ಶಕ್ತಿಶಾಲಿಯಾಗಿದ್ದವು. ಫ್ರೆಂಚರ ಈ ಬಗೆಯ ನಿರಂತರ ಚಿಂತನಶೀಲತೆಯೇ ಅವರ ಮುಂದಿನ ಎಲ್ಲ ಬಗೆಯ ಬೌದ್ಧಿಕ ಮತ್ತು ಭೌತಿಕ ಪ್ರಗತಿಗೆ ದಾರಿಗಳನ್ನು ಸೃಷ್ಟಿಸಿತು.
ಸಾಹಿತ್ಯದಲ್ಲಿ ರೊಮ್ಯಾಂಟಿಸಂ ಆರಂಭವಾದುದು ಈ ಕಾಲದಲ್ಲಿಯೇ. ವಿಕಾಂತೆ ದ ಶಾತೊಬ್ರಿಯಾನ್, ವಿಕ್ಟರ್ ಹ್ಯುಗೋರಂತಹ ಪ್ರತಿಭಾವಂತ ಲೇಖಕರು ರೂಪುಗೊಂಡಿದ್ದು ಫ್ರೆಂಚ್ ಕ್ರಾಂತಿಯ ಕಾವಿನಿಂದ. ಮುಂದೆ ರೊಮ್ಯಾಂಟಿಸಂನಿಂದ ಹೋಳಾಗಿ ಸಾಹಿತ್ಯಕ್ಕೆ ವಾಸ್ತವತೆಯ ಸ್ಪರ್ಶವನ್ನು ನೀಡಿದವರು ಮದಾಂ ಬುವಾ ಕಾದಂಬರಿ ಖ್ಯಾತಿಯ ಗುಸ್ತಾವ್ ಫ್ಲೊಬೇರ್. ಫ್ಲೊಬೇರ್ಯಿಂದ ಸ್ಫೂರ್ತಿ ಪಡೆದು ತಮ್ಮದೇ ಮಾರ್ಗ ಸೃಷ್ಟಿಸಿಕೊಂಡ ಹತ್ತೊಂಬತ್ತನೆಯ ಶತಮಾನದ ಗಮನಾರ್ಹ ಫ್ರೆಂಚ್ ಲೇಖಕರ ಪಟ್ಟಿಯೂ ದೊಡ್ಡದಿದೆ: ಸ್ಟೆಂಧಾಲ್, ಆನರೆ ದ ಬಾಲ್ಜಾಕ್, ಎಮಿಲ್ ಜೋಲಾ, ಅಲ್ಫಾನ್ಸ್ ದೊದ್, ಗೀ ದ ಮೊಪಾಸಾಂ, ಪ್ರಾಸ್ಪರ್ ಮೇರಿಮೇ, ರೇನೆ ವಿವಿಯನ್, ಆಗಸ್ಟಿನ್ ಥೇರಿ, ಅನಾತೋಲ್ ಫ್ರಾನ್ಸ್, ಚಾರ್ಲ್ಸ್ ಬೋದಿಲೇರ್, ಸ್ಟೀಫನ್ ಮಲಾರ್ಮೆ, ಆರ್ಥರ್ ರಿಂಬೊ, ಪಾಲ್ ವರ್ಲೇನ್, ಪಾಲ್ ವಲೇರಿ. ಇಲ್ಲಿನ ಕೆಲವು ಲೇಖಕರು ಕಾಲದೇಶಗಳನ್ನು ಮೀರಿ ಇಂದಿಗೂ ವಿಶ್ವಸಾಹಿತ್ಯವನ್ನು ಪ್ರಭಾವಿಸುತ್ತಿರುವುದು ಅವರ ಕೃತಿಗಳಲ್ಲಿ ಹುದುಗಿರುವ ಆಧುನಿಕತೆ, ಕ್ರಿಯಾಶೀಲತೆ ಮತ್ತು ಒರಿಜಿನಾಲಿಟಿಯನ್ನು ಎತ್ತಿ ತೋರಿಸುತ್ತವೆ.
ಯುದ್ಧಗಳು ಸೃಷ್ಟಿಸಿದ ಸೃಜನಶೀಲತೆ
ಪ್ರಯೋಗಶೀಲತೆ, ಸ್ವೋಪಜ್ಞತೆ ಹಾಗೂ ಆವರೆಗೆ ಕೇಳರಿಯದಿದ್ದ ಸಂವೇದನೆಗಳು ಸಮ್ಮಿಲನಗೊಂಡ ಇಪ್ಪತ್ತನೆಯ ಶತಮಾನದ ಫ್ರೆಂಚ್ ಸಾಹಿತ್ಯವನ್ನು ಲೋಕೋತ್ತರ ಸೃಷ್ಟಿಯೆಂದು ಕರೆಯಲಾಗುತ್ತದೆ. ಎರಡು ಮಹಾಯುದ್ಧಗಳು ಉಂಟುಮಾಡಿದ ಹಾನಿ, ಸೃಷ್ಟಿಸಿದ ಗೊಂದಲ, ಸಾಮಾಜಿಕ ವಿಘಟನೆ, ಸಾವುನೋವು, ಭೀಕರತೆ, ತಲ್ಲಣಗಳು ಯುರೋಪಿಯನ್ ಸಮಾಜವನ್ನು ಬಹುಕಾಲ ಕಾಡಿದವು. ನಾಜಿಪಡೆಗಳ ಫ್ರಾನ್ಸ್ ಆಕ್ರಮಣ ಅದರಲ್ಲೂ ಪ್ಯಾರೀಸ್ ನಗರದ ದಿಗ್ಬಂಧನ ಫ್ರೆಂಚ್ ಕಲಾವಿದರನ್ನು ತಲ್ಲಣಗೊಳಿಸಿತು. ಈ ಸಮಯದಲ್ಲಿ ರೂಪುಗೊಂಡ ಚಿತ್ರಕಲೆ, ಚಲನಚಿತ್ರ, ಸೃಷ್ಟಿಯಾದ ಸಾಹಿತ್ಯ (ವೈಚಾರಿಕ ಸಾಹಿತ್ಯ, ಕಾವ್ಯ, ಕಾದಂಬರಿ, ಪ್ರಬಂಧ, ನಾಟಕ, ಸಾಹಿತ್ಯ ಮೀಮಾಂಸೆ, ಮಾನವಶಾಸ್ತ್ರ, ಸಂಜ್ಞಾಶಾಸ್ತ್ರ ಇತ್ಯಾದಿ) ಗಳಲ್ಲಿ ಫ್ರೆಂಚರು ಎಷ್ಟು ವಿಭಿನ್ನವಾಗಿ, ಸೂಕ್ಷ್ಮವಾಗಿ, ಸಂವೇದನಾಶೀಲರಾಗಿ ಅಭಿವ್ಯಕ್ತಿಸಬಲ್ಲರು ಎಂಬುದನ್ನು ಕಾಣಬಹುದು. ವಿವಿಧ ಪ್ರಕಾರಗಳಲ್ಲಿ ಆಗ ಫ್ರೆಂಚರು ಮಂಡಿಸಿದ ಪ್ರಮೇಯಗಳು ಸೃಜನಶೀಲ ಮಾತ್ರವಲ್ಲದೆ, ಆದ್ಯವೂ ಆಗಿದ್ದವು. ಸಿಂಬಲಿಸಂ, ಅತಿವಾಸ್ತವವಾದ, ಅಸ್ತಿತ್ವವಾದ, ರಾಚನಿಕವಾದ, ನಿರಚನಾವಾದ, ಅಸಂಗತವಾದ, ಪರಿಕಲ್ಪನೆಗಳ ಅಧ್ಯಯನ, ಸ್ತ್ರೀವಾದ ಎಲ್ಲವೂ ಫ್ರೆಂಚ್ ಲೇಖಕರೇ ಮುಂಚೂಣಿಗೆ ತಂದ ಚಿಂತನಾ-ವಿಧಾನಗಳಾಗಿವೆ. ಕಾರ್ಲ್ ಮಾರ್ಕ್ಸ್ ಮತ್ತು ಸಿಗ್ಮಂಡ್ ಫ್ರಾಯ್ಡ್ ಈ ಕಾಲದ ಕಲಾವಿದರನ್ನು ಅತಿ ಹೆಚ್ಚು ಪ್ರಭಾವಿಸಿದ ತತ್ತ್ವಶಾಸ್ತ್ರಜ್ಞರು ಎಂದು ಗುರುತಿಸಲಾಗುತ್ತದೆ. ಎರಡೂ ಮಹಾಯುದ್ಧಗಳು ಫ್ರಾನ್ಸ್ ದೇಶವನ್ನು ನುಚ್ಚುನೂರಾಗಿಸಿ ಘಾಸಿಗೊಳಿಸಿ, ನೋವು-ಯಾತನೆಗಳನ್ನು ತಂದಿತ್ತರೆ, ಆನಂತರ ಕಾಲದಲ್ಲಿ ಸೃಷ್ಟಿಯಾದ ಅಲ್ಲಿನ ಕಲೆ (ಸಾಹಿತ್ಯ, ಚಿತ್ರಕಲೆ, ಚಲನಚಿತ್ರ, ರಂಗಕೃತಿಗಳು), ಯುದ್ಧದ ಗಾಯಗಳನ್ನು ಶಮನಗೊಳಿಸಬಲ್ಲ ಮಲಾಮಿನಂತಿದ್ದವು.
ಕಾವ್ಯವನ್ನು ಹೊರತುಪಡಿಸಿದರೆ ಯುರೋಪಿಯನ್ ಸಾಹಿತ್ಯವನ್ನು ಅತಿಯಾಗಿ ಪ್ರಭಾವಿಸಿರುವ ಪ್ರಕಾರವೆಂದರೆ ಕಾದಂಬರಿ. ಮಹಾ ಕಾದಂಬರಿಗಳನ್ನು ಬರೆಯುವುದು ಈ ಖಂಡದ ಪರಂಪರೆ ಎಂಬಷ್ಟು ಕಾದಂಬರಿಗಳು ಇಲ್ಲಿ ಕಿಕ್ಕಿರಿದಿವೆ. ಈ ಮಾತು ಫ್ರೆಂಚ್ ಸಾಹಿತ್ಯದ ಮಟ್ಟಿಗೂ ನಿಜವೇ. ಫ್ಲೊಬೇರ್, ಎಮಿಲ್ ಜೋಲಾ, ಮೊಪಾಸಾಂ, ಬಾಲ್ಜಾಕ್, ಆಂದ್ರೆ ಜಿದ್, ಅನಾತೊಲೆ ಫ್ರಾನ್ಸ್ ಹೀಗೆ ಅಭಿಜಾತ ಕಾದಂಬರಿಕಾರರ ಪರಂಪರೆಯಿಂದ ಪ್ರೇರಣೆ ಪಡೆದ ಆಧುನಿಕ ಲೇಖಕರು ತಮ್ಮ ಕಾಲಮಾನದಲ್ಲೂ ಹೊಸ ಪೋಷಾಕಿನೊಂದಿಗೆ ಕಾದಂಬರಿ ಪ್ರಕಾರವನ್ನು ತಬ್ಬಿಕೊಂಡರು. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಕಾದಂಬರಿಗಳನ್ನು ರಚಿಸಿದ ಪಾಲ್ ನಿಜಾಮ್, ಜಾನ್ ಪ್ರೆವೊಸ್ಟ್, ಆಂಟನಿ ದ ಸೇಂಟ್ ಎಕ್ಸುಪರಿ ಕಾದಂಬರಿಕಾರರಾಗಿ ಜನಾನುರಾಗಿಗಳಾಗಿದ್ದ ಕಾಲದಲ್ಲಿಯೇ ಯುದ್ಧದಲ್ಲಿ ಸಾವನ್ನಪ್ಪಬೇಕಾಯಿತು. ಆಂಟನಿ ದ ಸೇಂಟ್ ಎಕ್ಸುಪರಿ ಅವರ ಲಿಟಲ್ ಪ್ರಿನ್ಸ್ ಎಂಬ ಕಾದಂಬರಿಯ ಪುಟ್ಟ ರಾಜಕುಮಾರ ಹೆಸರಿನಲ್ಲಿ ಕನ್ನಡದಲ್ಲಿ ಎರಡು ಬಾರಿ ಅನುವಾದಗೊಂಡಿದೆ.
ಈ ಅವಧಿಯಲ್ಲಿಯೇ ಕಾದಂಬರಿಗಳನ್ನು ರಚಿಸಿದ ಪಾಲ್ ಬಾರ್ಜೆಟ್, ಮೌರೀಸ್ ಬೆರಿ ಹಾಗೂ ಪಿಯರೆ ಲೊಟಿ ಮನುಷ್ಯ ಸ್ವಭಾವವನ್ನು ಮನಃಶಾಸ್ತ್ರದ ಹಿನ್ನೆಲೆಯಲ್ಲಿ ಅರಿತುಕೊಳ್ಳಲು ಯತ್ನಿಸಿದರು. ಕೊಲೆಟ್ ಥರದ ಲೇಖಕರು ಬದುಕಿನ ಸಣ್ಣಪುಟ್ಟ ವಿವರಗಳು ಹೇಗೆ ಜೀವನವನ್ನು ಸಾರ್ಥಕಗೊಳಿಸಬಲ್ಲವು ಎಂಬುದನ್ನು ತೆರೆದಿಟ್ಟರು. ಮಾರ್ಸೆಲ್ ಪ್ರೌಸ್ಟ್ ಸುಪ್ತಾವಸ್ಥೆಯ ನೆನಪುಗಳ ಮೂಲಕ ಕಾದಂಬರಿಯನ್ನು ಕಟ್ಟಿದ. ರೋಜರ್ ಮಾರ್ತೀನ್ ದುಗಾರ್ ಮತ್ತು ಜೂಲ್ಸ್ ರೋಮಾ ಕೃತಿಗಳು ನೈತಿಕತೆಯನ್ನು ಶೋಧಿಸುತ್ತಲೇ ಸಮಾಜವನ್ನು ವಿಮರ್ಶೆಗೆ ಒಳಪಡಿಸಿದವು. ಜಾನ್-ಪಾಲ್ ಸಾರ್ತ್ರ್ ಮತ್ತು ಸಿಮೊನ್ ದ ಬುವಾರ ಕೃತಿಗಳು ಸಿದ್ಧಾಂತವನ್ನು ಪ್ರತಿಪಾದಿಸುತ್ತಲೇ ನೈತಿಕತೆ, ಶ್ರದ್ಧೆ, ಮನುಷ್ಯನ ಅಸ್ತಿತ್ವಕ್ಕೆ ಇರುವ ಅರ್ಥಗಳನ್ನು ಶೋಧಿಸಿದವು. ಅಸ್ತಿತ್ವವಾದ, ಬಂಡಾಯ ಮತ್ತು ಹೊಸ ರಾಜಕೀಯ ಪ್ರಸ್ತಾವನೆಗಳನ್ನು ಮಂಡಿಸುವ ಆಲ್ಬರ್ಟ್ ಕಮೂರ ಕಾದಂಬರಿ ಮತ್ತು ಒಟ್ಟಾರೆ ಸಾಹಿತ್ಯವು ಸಿದ್ಧಾಂತಗಳ ಭಾರದಿಂದ ನಲುಗದ ಶುದ್ಧ ನೈತಿಕ ಮಾರ್ಗಗಳನ್ನು ಹುಡುಕುವಂತೆ ಕಾಣುತ್ತವೆ. ಕಮೂ ಅವರ ವಿದ್ಯಾಗುರುಗಳಾಗಿದ್ದ ಜಾನ್ ಗ್ರೇನಿಯರ್ರಂಥ ಲೇಖಕರು ಅಬ್ಬರದ ಆಧುನಿಕ ಪರಿಕಲ್ಪನೆಯ ಕುರಿತು ತಲೆ ಕೆಡಿಸಿಕೊಳ್ಳದೆ ಭಾವಗೀತಾತ್ಮಕ ಗದ್ಯವನ್ನು ಬರೆದರು. ಸ್ಯಾಮುಯಲ್ ಬೆಕೆಟ್ರಂಥ ಲೇಖಕರು ಸಂಕೇತಗಳ ಮೂಲಕ ಬದುಕಿನ ಅಸಂಗತತೆಯನ್ನು ಹಿಡಿದಿಡುವ ಚುಂಬಕ ಶಕ್ತಿಯ ಗದ್ಯಪದ್ಯ ಬರಹಗಳ ಮೂಲಕ ಆಧುನಿಕತೆಯನ್ನು ಪ್ರತಿಪಾದಿಸಿದರು.
ರಂಗಭೂಮಿ: ಆಗಂತುಕರನ್ನು ಕಾಯುತ್ತ
ಹತ್ತೊಂಬತ್ತನೆಯ ಶತಮಾನದ ಕೊನೆಯ ವೇಳೆಗೆ ಚಾಲನೆ ಪಡೆದ ಥಿಯೇಟರ್ ಲಿಬ್ರ್ ಆರಂಭಿಕ ರಂಗಭೂಮಿ ತಂಡವಾಗಿತ್ತು. ಆ ತಂಡದ ಉಬು ರೋಯ್ ನಾಟಕ ಇಂದಿಗೂ ರಂಗಭೂಮಿಯ ಆದ್ಯ ನಾಟಕವೆಂದು ಗುರುತಿಸಲಾಗುತ್ತದೆ. ಆನಂತರದ ನಾಟಕಕಾರರಾದ ಜಾರ್ಜ್ ದ ಪೊರ್ಟೋರಿಕೊ, ಜೂಲಿಯಸ್ ರೇನಾ, ಯೂಜಿನ್ ಬ್ರೂಯಿ ರಂಗಭೂಮಿಗೆ ಸಾಮಾಜಿಕ ವಾಸ್ತವತೆಯ ಮೆರುಗು ನೀಡಿದರು. ಮೌರೀಸ್ ಮೆಟರ್ಲಿಂಕ್ ಮತ್ತು ಪಾಲ್ ಕ್ಲೋದೆಲ್ ಸಿಂಬಲಿಸಂ ಆಶಯಗಳನ್ನು ನಾಟಕಗಳಲ್ಲಿ ಪ್ರತಿಫಲಿಸಲು ನೋಡಿದರು. ಪ್ರಯೋಗಶೀಲ ನಾಟಕ ಮತ್ತು ಚಲನಚಿತ್ರಗಳಿಂದ ಪರಿಚಿತರಾದ ಜಾನ್ ಕಾಕ್ಟೊ ಅಚ್ಚರಿಯೆನ್ನಿಸುವ ವೈವಿಧ್ಯತೆ ತಂದರು. ಅದೇರೀತಿ, ರಂಗಭೂಮಿಯ ಅಪಾರ ಸಾಧ್ಯತೆಗಳಿಗೆ ಮನಸೋತ ಲೇಖಕರೆಂದರೆ ಆಲ್ಬರ್ಟ್ ಕಮೂ ಹಾಗೂ ಜಾನ್-ಪಾಲ್ ಸಾರ್ತ್ರ್. ಕಮೂ ಅವರ ಕಲಿಗುಲ ಮತ್ತು ಕ್ರಾಸ್ ಪರ್ಪಸ್ ನಾಟಕಗಳು ಅವುಗಳ ಹೊಸತನ, ಅನಿಶ್ಚಯತೆ, ಬದುಕಿನ ಭಯಾನಕತೆಯನ್ನು ಬಿಚ್ಚಿಡುವ ರೀತಿಗಳಿಂದಾಗಿ ರಂಗಸಜ್ಜಿಕೆಯಲ್ಲಿ ಸಂಚಲನವನ್ನೇ ಉಂಟುಮಾಡಿದವು. ಸಾರ್ತ್ರ್, ಮನುಷ್ಯನ ಸಂದಿಗ್ಧತೆಯ ಕಾರಣಗಳನ್ನು ಶೋಧಿಸುವ ರಂಗಪ್ರಯೋಗಗಳನ್ನು ಮಾಡಿದರು. ಮಾನವನ ದಯನೀಯ ಅಸಂಗತತೆಯನ್ನು ತಮ್ಮ ನಾಟಕಗಳಲ್ಲಿ ತರುವ ಮೂಲಕ ವಿಶ್ವಕ್ಕೆ ಹೊಸಬಗೆಯ ರಂಗ ಸಾಧ್ಯತೆಯನ್ನು ತೋರಿಸಿಕೊಟ್ಟವರು ಜಾನ್ ಅನೌ, ಸ್ಯಾಮುಯಲ್ ಬೆಕೆಟ್ (ವೇಟಿಂಗ್ ಫಾರ್ ಗಾಡೊ ನಾಟಕ ಮತ್ತು ಅಸಂಖ್ಯ ಅಸಂಗತ ಸಣ್ಣ ಸಣ್ಣ ಕಥೆಗಳು). ಅಸ್ತಿತ್ವದ ಅರ್ಥವೇನು? ಲೋಕದ ಆಗುಹೋಗುಗಳಿಗೆ ಏನಾದರೂ ಕಾರ್ಯಕಾರಣವಿದೆಯೇ ಅಥವ ಯಾವೊಂದರ ಅರ್ಥವನ್ನೂ ಹುಡುಕದೆ ಆಗಂತುಕರಿಗಾಗಿ ಕಾಯುವುದೇ ಮಾನವಜೀವಿಯ ಪಾಡೆ? ಎಂಬ ಪ್ರಶ್ನೆಗಳನ್ನು ಎತ್ತುವ ಬೆಕೆಟ್ನ ವೇಟಿಂಗ್ ಫಾರ್ ಗಾಡೋ ನಾಟಕ ಪ್ರಭಾವಿಸದ ದೇಶ-ಭಾಷೆಗಳಿರಲಾರವು. ಈ ನಾಟಕವು ಮನುಷ್ಯನ ಅಸಂಗತತೆಯ ಕುರಿತು ಎಲ್ಲ ಕಾಲಕ್ಕೂ ಹೊಸ ಹೊಸ ಅರ್ಥಗಳನ್ನು ಹುಟ್ಟು ಹಾಕುತ್ತಲೇ ಇರುತ್ತದೆ. ಜಾನ್ ಜಿನೆಟ್ ಮತ್ತು ಯೂಜಿನ್ ಅಯನೆಸ್ಕೊರ ಅಸಂಗತತೆ ಇನ್ನೊಂದು ರೀತಿಯದು (ದ ಬಾಲ್ಡ್ ಸಪ್ರಾನೊ, ದ ಲೆಸನ್, ಮತ್ತು ದ ಚೇರ್ಸ್, ನಾಟಕಗಳು). ಅಸಂಗತತೆಯಲ್ಲಿಯೇ ಹುಟ್ಟುವ ತರ್ಕವನ್ನು ಶೋಧಿಸುವ ಅಯನೆಸ್ಕೊ ನಾಟಕಗಳು ಸರ್ರಿಯಲಿಸಂ ಸಿದ್ಧಾಂತವನ್ನು ಚೆನ್ನಾಗಿ ಪ್ರತಿಪಾದಿಸುತ್ತವೆ. ಅವರ ರೈನೊಸೆರಸ್ ಎಂಬ ರಾಜಕೀಯ ಪ್ರಹಸನದಲ್ಲಿ ಆರಂಭಕ್ಕೆ ಭಾರೀ ಬಂಡಾಯಗಾರರಂತೆ ಕಂಡುಬರುವ ಸಮುದಾಯಗಳು ಕೊನೆಗೆ ಪ್ರಾಣಿಗಳಾಗಿ ರೂಪಾಂತರಗೊಳ್ಳುವುದನ್ನು ಕಾಣಬಹುದು. ಅದೇರೀತಿ, ಯುದ್ಧದ ಭಯಾನಕತೆಯಿಂದ ಹುಟ್ಟುವ ದುರಂತ ಪ್ರಜ್ಞೆಯ ರಂಗಕೃತಿಗಳನ್ನು ರಚಿಸಿದವರು ಮಿಖೆಲ್ ದ ಘೆಲ್ದಾರೊ.
ಕಾವ್ಯ
ಇಪ್ಪತ್ತನೆಯ ಶತಮಾನದ ಮೊದಲ ದಶಕಗಳ ಕಾವ್ಯ ವೈವಿಧ್ಯತೆಗೆ ಗಮನ ನೀಡಿತು. ಅತ್ಯಂತ ಶಕ್ತಿಶಾಲಿ ಕವಿ ಎಂದು ಗುರುತಿಸುವ ಪಾಲ್ ಕ್ಲೋದೆಲ್, ಪ್ರಾಯೋಗಿಕ ಕವಿತೆಗಳನ್ನು ಬರೆದ ಗುಯಿಲೋಮ್ ಅಪೊಲಿನೇರ್, ಪ್ರತಿಮೆ, ಸಂಕೇತಗಳನ್ನು ಸೃಷ್ಟಿಸಿ, ಅಪೂರ್ವ ಚೆಲುವಿನ ಸಿಂಬಲಿಸಂ ಕಾವ್ಯ-ಗದ್ಯ ಕಟ್ಟಿದ ಪಾಲ್ ವಲೇರಿ ಕ್ರಿಯಾಶೀಲರಾಗಿದ್ದ ಕಾಲವಿದು. ೧೯೨೦ರ ಸುಮಾರಿಗೆ ಆಂದ್ರೆ ಬ್ರೆತೊನ್ ಸರ್ರಿಯಲಿಸಂ ಪ್ರಣಾಳಿಕೆಯನ್ನು ಪ್ರಚುರಪಡಿಸಿದರು. ಈ ಕಾವ್ಯ ಸಂಭ್ರಮದಲ್ಲಿ ಬ್ರೆತೊನ್ ಜತೆಗೂಡಿದವರೆಂದರೆ- ಪಾಲ್ ಎಲುಆರ್, ಫಿಲಿಪ್ ಸೂಪೋ, ರೇನೆ ಷಾರ್, ತ್ರಿಸ್ತಾನ್ ತ್ಸಾರಾ, ಲೂಯಿ ಅರಗೊ ಮತ್ತು ಎಲ್ಸಾ ಟ್ರಿಯೊಲೆ. ಎರಡನೆಯ ಮಹಾಯುದ್ಧದ ಬಳಿಕ ಪ್ರವರ್ಧಮಾನಕ್ಕೆ ಬಂದ ಕವಿಗಳಲ್ಲಿ ಜಾಕ್ ಪ್ರೇವೆ, ಫ್ರಾನ್ಸಿಸ್ ಪಾಂಜ್, ಜೂಲ್ಸ್ ಸೂಪರ್ವಿಯೆಲ್, ರೇಮಂಡ್ ಕ್ವೀನೂ, ಪಿಯರೆ ಇಮಾನುಯೆಲ್, ಜಾನ್ ಫಾಲನ್, ಆಂದ್ರೆ ಶದಿ ಮತ್ತು ಕತೆಬ್ ಯಾಸಿನ್.
ಫ್ರೆಂಚ್ ವಸಾಹತುಗಳಲ್ಲಿ ಆಧುನಿಕ ಸಾಹಿತ್ಯ
ಎರಡು ಮಹಾಯುದ್ಧಗಳ ಕಾಲದಲ್ಲಿ ಫ್ರೆಂಚ್ ವಸಾಹತುಗಳಾಗಿದ್ದ ಅಲ್ಜೀರಿಯಾ, ಟ್ಯುನಿಸಿಯ, ಮೊರೊಕ್ಕೊ, ಸೆನೆಗಲ್, ಐವರಿಕೋಸ್ಟ್, ನಿಗರ್, ಛಾದ್ ಮತ್ತಿತರ ಚಿಕ್ಕ ಆಫ್ರಿಕನ್ ದೇಶಗಳಲ್ಲಿ ಆಯಾ ಸ್ಥಳೀಯ ಭಾಷೆಗಳಲ್ಲಿ ಬರೆದ ಅನೇಕ ಲೇಖಕರಿದ್ದರೂ ಯುರೋಪಿಯನ್ ಮತ್ತು ಅಮೆರಿಕನ್ ವಿಮರ್ಶೆ ಅಂಥ ಲೇಖಕರನ್ನು ಕಡೆಗಣಿಸಿತು ಎಂಬ ಕಟುವಾದ ವಿಮರ್ಶೆ ಆಫ್ರಿಕನ್ ದೇಶಗಳಿಂದ ಇತ್ತೀಚಿನ ವರ್ಷಗಳಲ್ಲಿ ಬರುತ್ತಿದೆ. ಪಾಶ್ಚಾತ್ಯ ವಿಮರ್ಶೆ ಈವರೆಗೆ ಫ್ರೆಂಚ್ ಸಂಜಾತರಾದ, ಆದರೆ, ಅಲ್ಜೀರಿಯದಲ್ಲಿ ಹುಟ್ಟಿ ಬೆಳೆದ ಆಲ್ಬರ್ಟ್ ಕಮೂ, ಪಿಯರೆ ಬೋರ್ದಿಯೆ, ಲೂಯಿ ಅಲ್ತೂಸ್ಸರ್, ಆಸ್ಸಿಯ ಜೇಬರ್, ಜಾಕ್ ಡೆರಿಡ ಅಂಥವರಿಗೆ, ಕೆಲವೊಮ್ಮೆ ಆಂದ್ರೆ ಶದಿಯಂಥವರಿಗೆ ವಿಮರ್ಶಕ ಮಾನ್ಯತೆ, ಶ್ಲಾಘನೆ ನೀಡಿರುವುದನ್ನು ಬಿಟ್ಟರೆ ವಸಾಹತುಗಳ ಲೇಖಕರನ್ನು ಪ್ರಜ್ಞಾಪೂರ್ವಕವಾಗಿ ಹತ್ತಿಕ್ಕಲಾಯಿತು ಎಂಬ ವಾದ ಕೂಡ ಸಾಹಿತ್ಯದಲ್ಲಿ ಪ್ರಬಲವಾಗಿದೆ. ಇಂಥ ಲೇಖಕರಲ್ಲಿ ಅನೇಕರು ಫ್ರೆಂಚ್ನಲ್ಲಿ ಬರೆದರೆ ಕೆಲವರು ಗಿಕಿಯು, ಒಲಾಫ್, ಸ್ವಾಹಿಲಿ, ಅರೆಬಿಕ್ ಮತ್ತಿತ್ತರ ಸ್ಥಳೀಯ ಭಾಷೆಗಳಲ್ಲಿ ಸಾಹಿತ್ಯ ರಚಿಸಿದವರು ಮತ್ತು ರಚಿಸುತ್ತಿರುವವರು. ಹಾಗೆ ನೋಡಿದರೆ, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಫ್ರೆಂಚ್ ಸಾಹಿತ್ಯಕ್ಕೆ ಮಾನ್ಯತೆ ದೊರಕುತ್ತಿರುವುದು ಈ ಬಗೆಯ ಲೇಖಕರಿಂದಲೇ. ಆಂದ್ರೆ ಶದಿ, ಆಸ್ಸಿಯ ಜೇಬರ್, ಸೆಂಬೆನ್ ಉಸ್ಮಾನ್, ಮೊಹಮ್ಮದ್ ಮೌಲೀಸ್ ಹಾಲ್, ಆಮಾ ಆತಾ ಆಯಿದು, ಮರಿಯಮ್ ಬಾ, ನಫೀಸ ದಿಯಾ ಅಂಥ ಫ್ರೆಂಚ್ ವಸಾಹತುವಾಗಿದ್ದ ಆಫ್ರಿಕನ್ ರಾಷ್ಟ್ರಗಳ ಲೇಖಕರು ಹಾಗೂ ಫ್ರೆಂಚ್ನಲ್ಲಿ ಬರೆದ ಕೆನಡದ ಮೊನಿಕ ಬಾಸ್ಕೊ, ಗೇಬ್ರಿಯೆಲ ರಾಯ್ರಂಥ ಲೇಖಕರು ಫ್ರೆಂಚ್ನಲ್ಲಿ ಬರೆಯುವ, ಫ್ರಾನ್ಸ್ವಾಸಿ ಲೇಖಕರಿಗಿಂತ ಜನಪ್ರಿಯರಾಗಿದ್ದಾರೆ.
ಯುರೊಪಿಯನ್ ವಿಮರ್ಶೆ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಫ್ರೆಂಚ್ ವಸಾಹತುಗಳಲ್ಲಿ ಬರೆಯುತ್ತಿದ್ದ ಲೇಖಕರು ಎಂದು ಗುರುತಿಸುವ ಪಟ್ಟಿಯಲ್ಲಿ ಏಮ್ ಸೆಝೇರ್, ಲಿಯೊಪೋಲ್ಡ್ ಸೇದರ್ ಸೆಂಘೊರ್, ಲಿಯೊನ್ ದಮಾಸ್ ಹಾಗೂ ಮಾರ್ಗರೀತಾ ತಾವೊಸ್ ಅಮ್ರೋಷ್ರ ಹೆಸರುಗಳಿರುತ್ತವೆ.
ಆಧುನಿಕ ಫ್ರೆಂಚ್ ಕೃತಿಗಳು ಹುಟ್ಟಿದ ಐತಿಹಾಸಿಕ ಸನ್ನಿವೇಶ ಮತ್ತು ಅವು ಪರಂಪರೆಯೊಂದಿಗೆ ವಾಗ್ವಾದ-ಸಂವಾದ ಮಾಡುತ್ತಲೇ ಹೊಸ ದಾರಿಗಳನ್ನು ಸೃಷ್ಟಿಸಿಕೊಳ್ಳುತ್ತ ಸಾಗಿರುವುದು ಗಮನಿಸಬೇಕಾದ ಅಂಶವಾಗಿದೆ. ಈ ಸಂಬಂಧವನ್ನು ವಿಮರ್ಶಕರೊಬ್ಬರು ಒಂದು ಸುಂದರ ಪ್ರತಿಮೆಯ ಮೂಲಕ ವಿವರಿಸುತ್ತಾರೆ. ಫ್ರೆಂಚ್ ಸಾಹಿತ್ಯ ಪರಂಪರೆಯು ತನ್ನ ಬೇರುಗಳನ್ನು ಯಾವತ್ತೂ ಇತಿಹಾಸದ ಕ್ಷಣಗಳಲ್ಲಿ ಇಳಿಯಬಿಟ್ಟಿರುತ್ತದೆ. ಜತೆಜತೆಗೆ, ಶತಮಾನಗಳುದ್ದಕ್ಕೂ ಆ ಬೇರುಗಳು ಒಂದರೊಡನೆ ಇನ್ನೊಂದು ಮುಖಾಮುಖಿಯಾಗುತ್ತಲೇ ಇರುತ್ತವೆ. ಈ ಬೆಸುಗೆಯು ಸರೋವರದ ಆಳದ ಮಣ್ಣಿನಲ್ಲಿ ಬೇರು ಬಿಟ್ಟಿರುವ ಜಲತಾವರೆ ಹೂಬಳ್ಳಿಗಳ ಹಾಗೆ. ಬೇರುಗಳು ಮಣ್ಣಿನಲ್ಲಿದ್ದರೂ ಬಳ್ಳಿಯ ಟಿಸಿಲು, ಎಲೆ, ಮೊಗ್ಗು, ಹೂಗಳು ಸೂರ್ಯನ ಬಿಸಿಲನ್ನು ಸದಾ ಪಡೆಯಲೋ ಎಂಬಂತೆ ಸರೋವರದ ನೀರಿನ ಮೇಲ್ಮೈ ಮೇಲೆ ತೇಲುತ್ತಿರುತ್ತವೆ. ಮಣ್ಣು, ನೀರು ಮತ್ತು ಬೆಳಕಿನ ಸಹವಾಸ ನಿರಂತರವಾಗಿ ಪಡೆಯುವುದೇ ಅವುಗಳ ಉದ್ದೇಶ. ಗತ-ವರ್ತಮಾನ ಮತ್ತು ಭವಿಷ್ಯಗಳ ಕಾಲದ ತಿರುಗಣಿಯಲ್ಲಿ ಫ್ರೆಂಚ್ ಪ್ರಜ್ಞೆ ಯಾವತ್ತೂ ಇತಿಹಾಸದ ಕುರಿತು ಹಳಹಳಿಕೆ ತೋರದು. ಭವಿಷ್ಯದ ಬಗೆಗೂ ಚಿಂತಿತವಾಗದು. ಅದರ ಕಳಕಳಿ ಏನಿದ್ದರೂ ಈ ಕ್ಷಣದ್ದು. ವರ್ತಮಾನ ಸೃಷ್ಟಿಸುತ್ತಿರುವ ತಲ್ಲಣ, ತಳಮಳ, ರೂಕ್ಷತೆ ಮತ್ತು ಅಸಂಗತತೆ ಅರ್ಥವೇನು ಹಾಗೂ ಇಂಥ ಸನ್ನಿವೇಶದಲ್ಲಿ ಮಾನವಜೀವಿಯ ಪಾತ್ರವೇನು ಎಂದು ಶೋಧಿಸುವುದೇ ಆಗಿದೆ. ಆ ಅರ್ಥದಲ್ಲಿ ಫ್ರೆಂಚ್ ಸಾಹಿತ್ಯದಲ್ಲಿನ ‘ಆಧುನಿಕತೆ’ ಯಾವಾಗಲೂ ‘ಈ ಕ್ಷಣದ್ದು’.
ಬರಹದಲ್ಲಿ ಉಲ್ಲೇಖಿಸಲಾದ, ಮಹಾಯುದ್ಧಗಳ ಬಳಿಕ ಪ್ರಸಿದ್ಧರಾದ ಕೆಲವು ಆಧುನಿಕ ಫ್ರೆಂಚ್ ಲೇಖಕರು:

ಆಲ್ಬರ್ಟ್ ಕಮೂ: ವಿಶ್ವದ ಬಂಡುಕೋರ ತರುಣರ ಸಾಹಿತ್ಯ ಪ್ರತಿನಿಧಿ ಎಂದೇ ಗುರುತಿಸಲಾಗುವ ಆಲ್ಬರ್ಟ್ ಕಮೂ (೧೯೧೩-೧೯೬೦) ಅತಿ ಚಿಕ್ಕ ವಯಸ್ಸಿನಲ್ಲಿಯೇ ವಿಶ್ವಮಾನ್ಯ ನೊಬೆಲ್ ಪುರಸ್ಕಾರ ಪಡೆದು, ತನ್ನ ಕಥೆಗಳ ಅಸಂಗತ ನಾಯಕರಂತೆ, ಸಿದ್ಧಾಂತಗಳ ಅಮೂರ್ತ ವಿಚಾರಗಳಂತೆ ಕಾರ್ ಅಪಘಾತದಲ್ಲಿ ಮರೆಯಾದ ಲೇಖಕ. ಕಮೂ ಬರಹಗಳು ಇಂದಿಗೂ ತರುಣ ಜನಾಂಗವನ್ನು ಅಯಸ್ಕಾಂತದಂತೆ ಸೆಳೆಯಲು ಅವರ ಭಾವಗೀತಾತ್ಮಕ ಶೈಲಿ, ವ್ಯವಸ್ಥೆಯ ವಿರುದ್ಧದ ಬಂಡಾಯದ ನಿಲುವು; ಆ ಕ್ಷಣಕ್ಕೆ ಸ್ಪಂದಿಸುತ್ತಿದ್ದರೂ ಬದುಕಿನ ಸಮಗ್ರತೆಯಲ್ಲಿ ಬೇರುಬಿಟ್ಟ ದೃಷ್ಟಿಕೋನ, ಅಪ್ಪಟ ಪ್ರಾಮಾಣಿಕತೆ ಕಾರಣವಾಗಿವೆ. ಫ್ರೆಂಚರ ವಸಾಹತಾಗಿದ್ದ, ಅರಬರ ನಾಡಾದ ಅಲ್ಜೀರಿಯಾದಲ್ಲಿ ಹುಟ್ಟಿ, ಅಲ್ಲಿಯೇ ಶಿಕ್ಷಣ ಪಡೆದು, ಯುರೋಪಿನ ಬೌದ್ಧಿಕ ಬಲಾಢ್ಯ ದೇಶವಾದ ಫ್ರಾನ್ಸ್ ಬುದ್ಧಿಜೀವಿಗಳಿಂದ ಹಲವಾರು ಬಾರಿ ಅವಹೇಳನಕ್ಕೆ ಒಳಗಾದ ಕಮೂ, ತಮ್ಮ ಅಸ್ಮಿತೆಯನ್ನು ಹುಡುಕುತ್ತಿರುವ ದೇಶದ ದಿಕ್ಕೇಡಿ ಯುವಕರ ಪ್ರತಿನಿಧಿಯಾಗಿದ್ದಾರೆ.
ಮಿಥ್ ಆಫ್ ಸಿಸಿಫಸ್, ದಿ ರೆಬೆಲ್ ಅವರ ಪ್ರಸಿದ್ಧ ವೈಚಾರಿಕ ಕೃತಿಗಳಾದರೆ, ಸ್ಟ್ರೇಂಜರ್, ಪ್ಲೇಗ್, ಹ್ಯಾಪಿ ಡೆತ್, ಫಸ್ಟ್ ಮ್ಯಾನ್ ಕಾದಂಬರಿಗಳು. ಮನುಷ್ಯನ ಅಸಂಗತ ಸ್ಥಿತಿಯನ್ನು ಶೋಧಿಸುವ ಮಿಥ್ ಆಫ್ ಸಿಸಿಫಸ್ ಮತ್ತು ಮನುಷ್ಯನ ಆದಿಮ ಬಯಕೆಯಾದ ಬಂಡಾಯದ ಇತಿಹಾಸವನ್ನು ಸೋಸುವ ದಿ ರೆಬೆಲ್ ಬಹಳ ಚರ್ಚಿತ ವೈಚಾರಿಕ ಕೃತಿಗಳು. “ಸಿಸಿಫಸ್ ಮತ್ತೆ ಮತ್ತೆ ಬೆಟ್ಟದ ಎತ್ತರಕ್ಕೆ ಏರುವ ಹೋರಾಟವೇ ಮನುಷ್ಯನೊಬ್ಬನ ಎದೆ ತುಂಬಿಬರಲು ಸಾಕು. ಅಂಥಲ್ಲಿ ಸಿಸಿಫಸ್ ಖುಷಿಯಾಗಿದ್ದಾನೆಂದೇ ನಾವೆಲ್ಲ ಕಲ್ಪಿಸಿಕೊಳ್ಳಬೇಕು”, ಎಂದು ಸಿಸಿಫಸ್ನ ವೈಫಲ್ಯತೆಗೆ ಆಧ್ಯಾತ್ಮಿಕ ವ್ಯಾಖ್ಯಾನ ನೀಡಿದ ಕಮೂ ಅಂತಹ ಒಳನೋಟಗಳಿಗಾಗಿಯೇ ಅತ್ಯಂತ ಮಹತ್ವದ ಲೇಖಕರಾಗುತ್ತಾರೆ.

ಜಾನ್-ಪಾಲ್ ಸಾರ್ತ್ರ್: ಅಸ್ತಿತ್ವವಾದ ಸಿದ್ಧಾಂತದ ಆದ್ಯಪುರುಷ, ತತ್ತ್ವಶಾಸ್ತ್ರಜ್ಞ, ಕಾದಂಬರಿ, ನಾಟಕಕಾರ, ವಿಮರ್ಶಕ, ರಾಜಕೀಯ ವಿಶ್ಲೇಷಕ ಮತ್ತು ಅಪಾರ ಸಂಖ್ಯೆಯ ಶಿಷ್ಯವೃಂದವನ್ನು ಹೊಂದಿ ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವಶಾಲಿ ಸಾಹಿತಿ ಎಂದು ಗುರುತಿಸಲಾಗುತ್ತಿದ್ದ ಜಾನ್-ಪಾಲ್ ಸಾರ್ತ್ರ್ (೧೯೦೫-೧೯೮೦) ಹುಟ್ಟಿ, ಬೆಳೆದಿದ್ದು, ಬದುಕಿದ್ದು ಯುರೋಪಿನ ಕನಸಿನ ನಗರ ಪ್ಯಾರಿಸ್ನಲ್ಲಿ. ೧೯೩೮ರಲ್ಲಿ ಮೊದಲ ಕಾದಂಬರಿ ಲ ನಾಸೇ (ನಾಸಿಯಾ) ಪ್ರಕಟವಾದಾಗ ಅಷ್ಟೇನೂ ಗಮನ ಸೆಳೆಯಲಿಲ್ಲವಾದರೂ ಬಳಿಕ ಆ ಕೃತಿ ಆಧುನಿಕ ಕಾಲದ ಕ್ಲಾಸಿಕ್ ಎಂದು ಮಾನ್ಯತೆ ಪಡೆಯಿತು. ರೆಸಿಸ್ಟೆನ್ಸ್ ಗುಂಪಿನ ಸದಸ್ಯರಾಗಿದ್ದ ಸಾರ್ತ್ರ್ ಮುಂಚೂಣಿಗೆ ಬಂದಿದ್ದು ಎರಡನೆಯ ಮಹಾಯುದ್ಧದಲ್ಲಿ ನಾಜಿಗಳು ಪ್ಯಾರಿಸ್ ನಗರವನ್ನು ಆಕ್ರಮಿಸಿದಾಗ. ಅವರನ್ನು ವಿಶ್ವಮಾನ್ಯ ಮಾಡಿದ್ದು ೧೯೪೩ರಲ್ಲಿ ಪ್ರಕಟಗೊಂಡ ಬಿಯಿಂಗ್ ಆಂಡ್ ನಥಿಂಗ್ನೆಸ್ ಕೃತಿ. ಅಸ್ತಿತ್ವವಾದಿ ಸಿದ್ಧಾಂತದ ವಿಚಾರಗಳನ್ನು ಸಮರ್ಥವಾಗಿ ಪ್ರತಿಪಾದಿಸುವ ಈ ಕೃತಿ ವ್ಯಕ್ತಿ, ಅಸ್ತಿತ್ವ, ಇರುವಿಕೆ ಮತ್ತು ಆಗುವಿಕೆ, ಸ್ವತಂತ್ರವಾಗಿರುತ್ತಲೇ ಹೊಣೆಗಾರನಾಗಿರಬೇಕಾದ ಅನಿವಾರ್ಯತೆ, ಲೇಖಕನ ನೈತಿಕತೆ ಇತ್ಯಾದಿ ಅಂಶಗಳನ್ನು ಚರ್ಚಾ ವೇದಿಕೆಗೆ ತಂದಿತು.
ವಾಲ್ ಆಂಡ್ ಅದರ್ ಸ್ಟೋರೀಸ್ (೧೯೩೮), ದಿ ಏಜ್ ಆಫ್ ರೀಸನ್, ದಿ ರಿಪ್ರೀವ್ (೧೯೪೭) ಸೈದ್ಧಾಂತಿಕ ಕೃತಿಗಳಾದರೆ, ದಿ ಫ್ಲೈಸ್, ಇನ್ ಕೆಮರಾ (೧೯೪೬), ನೊ ಎಕ್ಸಿಟ್ (೧೯೪೭), ಕ್ರೀಮ್ ಪ್ಯಾಶನಲ್ (೧೯೪೯), ಲೂಸಿಫರ್ ಆಂಡ್ ಲಾರ್ಡ್ (೧೯೫೩), ಕೀನ್ (೧೯೫೪), ಲೂಸರ್ ವಿನ್ಸ್ (೧೯೬೦), ಕ್ರಿಯಾಶೀಲ ಕೃತಿಗಳು. ಚಾರ್ಲ್ಸ್ ಬೋದಿಲೇರ್, ಜಾನ್ ಜಿನೆ, ಗುಸ್ತಾವ್ ಫ್ಲೊಬೇರ್ರ ಕುರಿತು ಹೊತ್ತಿಗೆಗಳನ್ನು ಕೂಡ ಸಾರ್ತ್ರ್ ಬರೆದಿದ್ದಾರೆ. ೧೯೬೪ರಲ್ಲಿ ಪ್ರಕಟವಾದ ಅಪೂರ್ಣ ಆತ್ಮಕಥೆ ವರ್ಡ್ಸ್ ಅದೇ ವರ್ಷ ನೊಬೆಲ್ ಪುರಸ್ಕಾರ ತಂದಿತ್ತಿತು.

ಸಿಮೊನ್ ದ ಬುವಾ: ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಭಾವಿ ಯುರೋಪಿಯನ್ ಸಾಹಿತಿಗಳ ಪಟ್ಟಿಯಲ್ಲಿ ತೆಗೆದು ಹಾಕಲಾರದ ಹೆಸರು ಸಿಮೊನ್ ದ ಬುವಾ (೧೯೦೮-೧೯೮೬). ಪ್ಯಾರಿಸಿಗ ಜಾನ್-ಪಾಲ್ ಸಾರ್ತ್ರ್ರನ್ನು ಕಾಲೇಜು ದಿನಗಳಿಂದ ಬಲ್ಲವರಾಗಿದ್ದ, ಸುಮಾರು ಐದು ದಶಕಗಳ ಕಾಲ ಅವರ ಸಂಗಾತಿಯಾಗಿ ಬದುಕಿದ ಸಿಮೊನ್ ಸಾರ್ತ್ರ್ರಂತೆಯೇ ಪ್ಯಾರಿಸ್ ನಗರದವರು. ಇಬ್ಬರ ಸಾಪುರುಷ ಪ್ರಧಾನ ವ್ಯವಸ್ಥೆಯಲ್ಲಿ ವೈಚಾರಿಕವಾಗಿ ಪುರುಷರಿಗೆ ಸಮಸಮವಾಗಿ ನಿಂತು ಹೊಸ ವಿಚಾರಗಳನ್ನು ಹುಟ್ಟುಹಾಕಿದ್ದು ಬುವಾರ ಬಹುದೊಡ್ಡ ಹಿರಿಮೆಯಾಗಿದೆ. ಮಹಿಳಾ ಅಸ್ಮಿತೆ, ಸವಾಲು, ಸಮಸ್ಯೆಗಳಿಗೆ ತಾತ್ವಿಕ ನೆಲೆಗಟ್ಟನ್ನು ಒದಗಿಸಿ ಅತ್ಯಂತ ಉತ್ಸಾಹದಿಂದ ಮಾತ್ರವಲ್ಲ, ಬೌದ್ಧಿಕ ಪ್ರಖರತೆಯೊಂದಿಗೆ ಅವುಗಳನ್ನು ಚರ್ಚಿಸುತ್ತ ವಿಶ್ವಮಾನ್ಯತೆ ಒದಗಿಸಿದ್ದು ಕಡಿಮೆ ಸಾಧನೆಯೇನಲ್ಲ.
ಪ್ಯಾರಿಸ್ ವಿಶ್ವವಿದ್ಯಾಲಯದಿಂದ ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದ ಬುವಾ ವಿಶ್ವಾದ್ಯಂತ ಉಪನ್ಯಾಸ ನೀಡುತ್ತ, ರಾಜಕೀಯ ವಿಚಾರಗಳ ಹಿನ್ನೆಲೆಯಲ್ಲಿ ಸಮಾನ ಮನಸ್ಕರನ್ನು ಸಂಘಟಿಸುತ್ತ ಪ್ರಭಾವಿ ಲೇಖಕಿ ಮತ್ತು ರಾಜಕೀಯ ಸಂಘಟಕಿ ಎನ್ನಿಸಿದ್ದರು. ಮಸ್ಟ್ ವಿ ಬರ್ನ್ ಸೇದ್ (೧೯೫೩), ಆಲ್ ಮೆನ್ ಆರ್ ಮಾರ್ಟಲ್ (೧೯೫೫), ದಿ ಲಾಂಗ್ ಮಾರ್ಚ್ (೧೯೫೮), ಎ ವೇರಿ ಈಸಿ ಡೆತ್ (೧೯೬೬), ದಿ ವುಮನ್ ಡೆಸ್ಟ್ರಾಯ್ಡ್ (೧೯೬೯), ಆಲ್ ಸೇಡ್ ಆಂಡ್ ಡನ್ (೧೯೭೪), ಎಥಿಕ್ಸ್ ಆಫ್ ಆಂಬಿಗ್ಯುಟಿ (೧೯೭೬), ವೆನ್ ಥಿಂಗ್ಸ್ ಆಫ್ ಸ್ಪಿರಿಟ್ ಕಮ್ ಫಸ್ಟ್ (೧೯೮೨), ಎ ಫೇರ್ವೆಲ್ ಟು ಸಾರ್ತ್ರ್, ದಿ ಸೆಕೆಂಡ್ ಸೆಕ್ಸ್ (೧೯೮೪), ಮೆಮೋರೀಸ್ ಆಫ್ ಎ ಡ್ಯೂಟಿಫುಲ್ ಡಾಟರ್ (೧೯೮೬) ಅವರ ಪ್ರಸಿದ್ಧ ಪ್ರಕಟಣೆಯಲ್ಲಿ ಕೆಲವು.

ಪಾಲ್ ವಲೇರಿ: ಫ್ರೆಂಚ್ ಸಿಂಬಲಿಸಂ ಕಾವ್ಯದ ಕೊನೆಯ ಕವಿ ಎಂದೇ ಬಣ್ಣಿಸಲಾಗುವ ಪಾಲ್ ವಲೇರಿ, ಕಾವ್ಯ, ವಿಮರ್ಶೆ, ಸಂಗೀತ, ಶಿಲ್ಪಕಲೆ, ರಾಜಕೀಯ, ತತ್ತ್ವಶಾಸ್ತ್ರ, ಪ್ರಚಲಿತ ವಿದ್ಯಮಾನ ಹೀಗೆ ವಿವಿಧ ವಿಷಯ, ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದ, ಆ ಕುರಿತು ವಿಫುಲವಾಗಿ ಬರೆದ ಬಹುಮುಖಿ. ಅಂಬ್ರೋಸ್-ಪಾಲ್-ಟುಸ್ಸಿ-ಜೂಲ್ಸ್ ವಲೇರಿ ಹುಟ್ಟಿದ್ದು ಮೆಡಿಟರೇನಿಯನ್ ಕರಾವಳಿಯ ಪುಟ್ಟ ರೇವು ಪಟ್ಟಣ ಸೇಟ್ನಲ್ಲಿ (ಅಕ್ಟೋಬರ್ ೩೦, ೧೮೭೧-ಜುಲೈ ೨೦, ೧೯೪೫). ಕಾನೂನು ಪದವಿ ಅಭ್ಯಾಸ ಮಾಡಿದ್ದರೂ ಕವಿಯಾಗುವ ಕನಸಿನಲ್ಲಿ, ಪ್ಯಾರಿಸ್ ನಗರಕ್ಕೆ ಬಂದಾಗ ಸಹಜವಾಗಿಯೇ ಆ ಕಾಲದ ದಿಗ್ಗಜ ಸ್ಟೀಫನ್ ಮಲಾರ್ಮೆಯ ತೆಕ್ಕೆ ಈ ತರುಣನಿಗಾಗಿ ತೆರೆದಿತ್ತು. ಸಿಂಬಲಿಸಂನ ಪ್ರಾತಿನಿಧಿಕ ಪತ್ರಿಕೆಯಾಗಿದ್ದ ಲ ಕಾನ್ಕ್ನಲ್ಲಿ ಪಾಲ್ರ ಆರಂಭಿಕ ಕವಿತೆಗಳನ್ನು ಪ್ರಕಟಿಸಿ, ಮಲಾರ್ಮೆಗೆ ಪರಿಚಯಿಸಿದ್ದು ಇನ್ನೊಬ್ಬ ಸಾಹಿತಿ ಆಂದ್ರೆ ಜಿದ್. ಕ್ರಮೇಣ, ಸಿಂಬಲಿಸಂ ಕಾವ್ಯದ ಕುರಿತು ಸೈದ್ಧಾಂತಿಕ ಬರಹ ಮತ್ತು ಕಾವ್ಯವನ್ನು ರಚಿಸುತ್ತ ಆ ಪಂಥದ ಅತ್ಯಂತ ಪ್ರಭಾವಿ ಲೇಖಕನೆಂದು ಪಾಲ್ ಗುರುತಿಸಿಕೊಂಡರು. ಅವರ ಸಾಹಿತ್ಯ ಪ್ರತಿಫಲಿಸುವ ಸ್ವೋಪಜ್ಞತೆ ಮತ್ತು ವಿದ್ವತ್ತಿಗೆ ಮನ ಸೋತು ಸ್ನೇಹ ಸಂಪಾದಿಸಿದ್ದವರಲ್ಲಿ ರೇಮಂಡ್ ಪೊಯಿಂಕರೆ, ಲೂಯಿ ದ ಬ್ರೋಗ್ಲಿ, ಆಂದ್ರೆ ಜಿದ್, ಆಲ್ಬರ್ಟ್ ಐನ್ಸ್ಟೈನ್, ಹೆನ್ರಿ ಬರ್ಗ್ಸನ್ ಕೆಲವರು. ಟಿ. ಎಸ್. ಎಲಿಯಟ್, ‘ಕಾವ್ಯ ರಚಿಸುವುದು ಹೇಗೆ? ಎಂಬ ಬಿಡಿಸಲಾರದ ಒಡಪನ್ನು ಒಡೆಯುವುದರಲ್ಲಿ ವಲೇರಿ ತಲ್ಲೀನರಾಗಿದ್ದಾರೆ. ಅಷ್ಟೇ ಅಲ್ಲ, ಅದನ್ನು ತಮ್ಮ ಕಾವ್ಯದಲ್ಲಿ ಒಡಮೂಡಿಸುವುದರಲ್ಲಿಯೂ ತೊಡಗಿದ್ದಾರೆ’ ಎಂದು ಅವರ ಕಾವ್ಯ ಪ್ರಯೋಗಗಳನ್ನು ಶ್ಲಾಘಿಸಿದರು.

ಕ್ಲಾದ್ ಲೆವಿ ಸ್ಟ್ರಾಸ್: ಆಧುನಿಕ ಮಾನವಶಾಸ್ತ್ರ, ಜನಾಂಗ ಅಧ್ಯಯನ ಹಾಗೂ ರಾಚನಿಕ ಸಿದ್ಧಾಂತಗಳನ್ನು ಆಧುನಿಕ ಕಾಲಮಾನಕ್ಕೆ ತಕ್ಕಂತೆ ಟಂಕಿಸಿದ ಆದ್ಯಪುರುಷ ಎಂದೇ ಗುರುತಿಸಲಾಗುವ ಅತ್ಯಂತ ಮೇಧಾವಿ ಚಿಂತಕ. ಹೊಸ ನುಡಿಗಟ್ಟು ಮತ್ತು ವಿಚಾರಗಳ ಮೂಲಕ ಮಾನವಶಾಸ್ತ್ರ ಮತ್ತು ಭಾಷಾಶಾಸ್ತ್ರಗಳ ಚಿಂತನಾಕ್ರಮವನ್ನೇ ಬದಲಿಸಿದ ಕ್ಲಾದ್ ತಮ್ಮ ಸೈದ್ಧಾಂತಿಕ ನಂಬಿಕೆಗಳನ್ನು ತಮ್ಮ ಬರವಣಿಗೆಯಲ್ಲಿ ವ್ಯಕ್ತಪಡಿಸುವ ಮೂಲಕ ಮಾದರಿಯಾದವರು. ಭಾಷಾಶಾಸ್ತ್ರವನ್ನು ಅಸ್ತ್ರ ಮಾಡಿಕೊಂಡು ಅವರು ಚರ್ಚೆಯ ಮುಂಚೂಣಿಗೆ ತಂದ ರಾಚನಿಕ ಸಿದ್ಧಾಂತವು ಇಡೀ ಪಾಶ್ಚಿಮಾತ್ಯ ದೇಶಗಳನ್ನು ನಿನ್ನೆ-ಮೊನ್ನೆಯವರೆಗೂ ಪ್ರಭಾವಿಸಿತ್ತು. ಜಾಕ್ ಡೆರಿಡ ಅವರು ನಿರಚನಾವಾದವನ್ನು ಮಂಡಿಸುವವರೆಗೆ ಕ್ಲಾದ್ರ ಪ್ರಸ್ತಾವನೆಗಳು ಬಹುದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದವು.
ಸರಿಸುಮಾರು ನೂರು ವರ್ಷ ಬದುಕಿ (೨೮ ನವೆಂಬರ್ ೧೯೦೮-೩೦ ಅಕ್ಟೋಬರ್ ೨೦೦೯) ಮಾನವಶಾಸ್ತ್ರ, ಜನಾಂಗ ಅಧ್ಯಯನ, ಭಾಷಾಶಾಸ್ತ್ರದಲ್ಲಿ ತಮ್ಮ ಕೊಡುಗೆಗಾಗಿ ವಿಶ್ವದ ಅಸಂಖ್ಯ ಗೌರವ ಡಾಕ್ಟರೇಟ್ ಪಡೆದಿದ್ದ ಲೆವಿ ಅವರು ಬುಡಕಟ್ಟುಗಳೊಡನೆ ಜೀವಿಸುತ್ತ ಹೊರಜಗತ್ತಿಗೆ ನೀಡಿದ ಕಾಣ್ಕೆಗಳು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇಂದು ಆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬಹುಪಾಲು ಸಂಶೋಧನೆಗಳ ಮೂಲ ಕ್ಲಾದ್ ಅವರ ಪ್ರಯತ್ನಗಳಲ್ಲಿ ಬೇರುಬಿಟ್ಟಿರುವಂಥವಾಗಿವೆ.
ಅವರ ಕೆಲವು ಕೃತಿಗಳು: ವರ್ಲ್ಡ್ ಆನ್ ದಿ ವೇನ್ (೧೯೬೧); ಸ್ಟ್ರಕ್ಚುರಲ್ ಆಂಥ್ರಪಾಲಜಿ (೧೯೬೩); ದ ಸಾವೇಜ್ ಮೈಂಡ್ (೧೯೬೬).

ಲೂಯಿ ಪಿಯರೆ ಅಲ್ತೂಸರ್: ಇಪ್ಪತ್ತನೆಯ ಶತಮಾನದ ಬಹುಮುಖ್ಯ ಹಾಗೂ ಪ್ರಭಾವಶಾಲಿ ಮಾರ್ಕ್ಸ್ವಾದಿ ಚಿಂತಕ ಎಂದು ಖ್ಯಾತವಾಗಿದ್ದ ಲೂಯಿ ಪಿಯರೆ ಅಲ್ತೂಸರ್ (೧೯೧೮-೧೯೯೦) ಹುಟ್ಟಿದ್ದು ಫ್ರೆಂಚ್ ವಸಾಹತು ಆಗಿದ್ದ ಆಲ್ಜೀರ್ಸ್ನ ಉಪನಗರ ಬಿರ್ಮಂಡ್ರೀಸ್ನಲ್ಲಿ. ವಿದ್ಯಾರ್ಥಿಯಾಗಿದ್ದಾಗ ಅತ್ಯಂತ ನಿಶಿತಮತಿ ಎಂದು ಹೆಸರುಪಡೆದಿದ್ದ ಲೂಯಿ ಬಹುಬೇಗ ಮಾರ್ಕ್ಸ್ವಾದದ ಸೆಳೆತಕ್ಕೆ ಸಿಕ್ಕು ಅರವತ್ತರ ದಶಕದ ವೇಳೆಗೆ ವಿಶ್ವಮಾನ್ಯ ಚಿಂತಕರಾಗಿ ಹೊರಹೊಮ್ಮಿದ್ದರು. ಸಾಂಪ್ರದಾಯಿಕ ಮಾರ್ಕ್ಸ್ವಾದದ ಕೆಲವು ಚಿಂತನೆಗಳನ್ನು ತಳ್ಳಿಹಾಕಿದ ಲೂಯಿ ತಮ್ಮ ಹೊಸ ರೀತಿಯ ವ್ಯಾಖ್ಯಾನಕ್ಕಾಗಿ ಅಪಾರ ಶಿಷ್ಯವರ್ಗ ಪಡೆದರು.
ಫೂಯರ್ಬಾಕ್’ಸ್ ಫಿಲಾಸಫಿಕಲ್ ಮ್ಯಾನಿಫೆಸ್ಟೇಶನ್ಸ್ (೧೯೬೦), ಆನ್ ಯಂಗ್ ಮಾರ್ಕ್ಸ್ (೧೯೬೧), ಕಾಂಟ್ರಡಿಕ್ಷನ್ ಆಂಡ್ ಓವರ್ಡಿಟರ್ಮಿನೇಶನ್ (೧೯೬೨), ಮ್ಯಾನುಸ್ಕ್ರಿಪ್ಟ್ಸ್ ಆಫ್ ಮಾರ್ಕ್ಸ್ (೧೯೬೩), ಮಾರ್ಕ್ಸಿಸಂ ಆಂಡ್ ಹ್ಯುಮನಿಸಂ (೧೯೬೩), ರೀಡಿಂಗ್ ಕ್ಯಾಪಿಟಲ್ (೧೯೬೮), ಲೆನಿನ್ ಬಿಫೋರ್ ಹೆಗೆಲ್ (೧೯೬೯), ಐಡಿಯಾಲಜಿ ಆಂಡ್ ಐಡಿಯಾಲಾಜಿಕಲ್ ಸ್ಟೇಟ್ ಅಪ್ಪರಟಸಸ್ (೧೯೭೦) ಮಹತ್ವದ ಕೃತಿ ಲೇಖನಗಳು.

ಪಿಯರೆ ಬೋರ್ದಿಯೆ: ಇಪ್ಪತ್ತನೆಯ ಶತಮಾನದ ಅತ್ಯಂತ ಮೇಧಾವಿ ಮಾರ್ಕ್ಸ್ವಾದಿ ಚಿಂತಕ, ರಾಜಕೀಯ ತಜ್ಞ, ಮಾನವ ಮತ್ತು ಸಮಾಜಶಾಸ್ತ್ರಜ್ಞ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪಿಯರೆ ಫೆಲಿಕ್ಸ್ ಬೋರ್ದಿಯೆ (೧೯೩೦-೨೦೦೨) ಮಂಡಿಸಿದ ಹೊಸ ಚಿಂತನೆಗಳು ವೈಚಾರಿಕ ಲೋಕದ ದಿಕ್ಕನ್ನೇ ಬದಲಿಸುವಷ್ಟು ಪ್ರಭಾವಶಾಲಿಯಾಗಿವೆ. ಅವರ ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಾಂಕೇತಿಕ ಬಂಡವಾಳಗಳ ಪರಿಕಲ್ಪನೆಗಳು ವಿಶ್ವದ ಬಹುತೇಕ ರಾಷ್ಟ್ರಗಳ ಸಾಮಾಜಿಕ ಯೋಜನೆ ಮತ್ತು ಅನುಷ್ಠಾನಗಳ ವಿಧಾನವನ್ನೇ ಬದಲಿಸಿದವು. ಜಾಗತೀಕರಣ, ನವ-ಉದಾರವಾದ ಮತ್ತು ಮುಕ್ತ ಮಾರುಕಟ್ಟೆಗಳು ಉಂಟುಮಾಡುವ ಪರಿಣಾಮ ಹಾಗೂ ಅದರಿಂದ ಉದ್ಭವವಾಗುವ ಸಾಮಾಜಿಕ ಬಿಕ್ಕಟ್ಟುಗಳ ಕುರಿತ ಅವರ ಲೇಖನಗಳು ಹೊಸ ಜಾಗ್ರತಿಯನ್ನು ಮೂಡಿಸಿದವು. ಸ್ವತಃ ಬೋರ್ದಿಯೆಯವರೇ ಆ ಬಗೆಯ ಚಳವಳಿಗಳನ್ನು ಮುನ್ನಡೆಸಿದ್ದಿದೆ.
ದಕ್ಷಿಣ ಫ್ರಾನ್ಸ್ನಲ್ಲಿ ಹುಟ್ಟಿ, ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಓದುವಾಗ ಲೂಯಿ ಅಲ್ತೂಸರ್ ಅವರನ್ನು ಸಹಪಾಠಿಯಾಗಿ ಪಡೆದು ಓದು ಮುಗಿಸಿದ ಬಳಿಕ ತುಸು ಕಾಲ ಆಲ್ಜೀರ್ಸ್ನಲ್ಲಿ ಬೋಧಕರಾಗಿದ್ದ ಬೋರ್ದಿಯೆ ೧೯೬೦ರ ವೇಳೆಗೆ ಮತ್ತೆ ಪ್ಯಾರಿಸ್ಗೆ ವಾಪಸಾದರು. ದಿ ಅಲ್ಜೀರಿಯನ್ಸ್, ವರ್ಕ್ ಆಂಡ್ ವರ್ಕರ್ಸ್ ಇನ್ ಆಲ್ಜೀರಿಯಾ (೧೯೫೮/೧೯೬೨), ದಿ ಇನ್ಹೆರಿಟರ್ಸ್ ಆಂಡ್ ರಿಪ್ರೊಡಕ್ಷನ್ ಇನ್ ಎಜುಕೇಶನ್, ಕಲ್ಚರ್ ಆಂಡ್ ಸೊಸೈಟಿ (೧೯೬೪/೭೯), ಡಿಸ್ಟಿಂಕ್ಷನ್, ಲಾಜಿಕ್ ಆಫ್ ಪ್ರಾಕ್ಟಿಸ್ (೧೯೮೪/೧೯೯೦), ರೂಲ್ಸ್ ಆಫ್ ಆರ್ಟ್ (೧೯೯೭) ಅವರ ಮಹತ್ವದ ಕೃತಿಗಳಲ್ಲಿ ಕೆಲವು.

ಸ್ಯಾಮುಯಲ್ ಬೆಕೆಟ್: ಐರಿಷ್ ಲೇಖಕ ಸ್ಯಾಮುಯಲ್ ಬೆಕೆಟ್ (೧೯೦೬-೮೯) ಹುಟ್ಟಿದ್ದು ಐರ್ಲೆಂಡ್ನ ಡಬ್ಲಿನ್ ನಗರದಲ್ಲಿ, ತನ್ನ ಬದುಕಿನ ಬಹುಪಾಲು ಕಳೆದದ್ದು ಫ್ರಾನ್ಸ್ನಲ್ಲಿ. ಮಧ್ಯಮ ವರ್ಗದ ಕುಟುಂಬದ ಬೆಕೆಟ್ ತನ್ನ ೨೩ನೆಯ ವಯಸ್ಸಿಗೆ ಪ್ಯಾರಿಸಿಗೆ ಭೇಟಿ ನೀಡಿದ. ಅಂದಿನಿಂದ ಆರಂಭವಾದ ಫ್ರೆಂಚ್ ಭಾಷೆ ಮತ್ತು ಫ್ರಾನ್ಸ್ನ ಸೆಳೆತ ಕೊನೆಗೆ ೧೯೩೩ರಲ್ಲಿ ಪ್ಯಾರಿಸಿಗೆ ತೆರಳುವಂತೆ ಮಾಡಿತು. ಅಲ್ಲಿ ತರುಣ ಬೆಕೆಟ್ ಜೇಮ್ಸ್ ಜಾಯ್ಸ್ನ ಗೆಳೆಯ ಮತ್ತು ಕಾರ್ಯದರ್ಶಿಯಾದ. ಮುಂದೆ ಬೆಕೆಟ್ನ ಬಹುಪಾಲು ಬರಹವನ್ನು ಜಾಯ್ಸ್ ಪ್ರಭಾವಿಸಿದ. ೧೯೪೦ರಲ್ಲಿ ರೆಸಿಸ್ಟೆನ್ಸ್ ಗುಂಪನ್ನು ಸೇರಿದ ಬೆಕೆಟ್, ನಾಜಿ ಗುಪ್ತದಳ ಗೆಸ್ತಪೊದಿಂದ ತಪ್ಪಿಸಿಕೊಳ್ಳಲು ೧೯೪೨ರಲ್ಲಿ ಫ್ರಾನ್ಸ್ ಬಿಡಬೇಕಾಯಿತು. ೧೯೪೬ರಲ್ಲಿ ಫ್ರೆಂಚ್ನಲ್ಲಿ ಬರೆಯಲಾರಂಭಿಸಿದ ಬೆಕೆಟ್ ಅತ್ಯಂತ ಮಹತ್ವದ ಲೇಖಕನಾಗಿ ಹೊರಹೊಮ್ಮತೊಡಗಿದ.
ಮೊಲಾಯ್ (೧೯೫೬), ಮೆಲೊನ್ ಡೈಸ್ (೧೯೫೬), ದಿ ಅನ್ನೇಮಬಲ್ (೧೯೬೦) ಪ್ರಸಿದ್ಧ ತ್ರಿವಳಿ ಕಾದಂಬರಿಗಳು. ವೇಟಿಂಗ್ ಫಾರ್ ಗಾಡೋ ಇಂಗ್ಲಿಶ್ ಆವೃತ್ತಿ ಪ್ರಕಟಗೊಂಡಿದ್ದು ೧೯೫೪ರಲ್ಲಿ. ಅಸಂಗತ ನಾಟಕಗಳ ಯುಗದ ಆದ್ಯಕೃತಿಯಾಗಿ ಪರಿಗಣಿತವಾದ ಗಾಡೋ ವಿಶ್ವದ ಬಹುತೇಕ ಭಾಷೆಗಳ ಆಧುನಿಕ ಲೇಖಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಯೂಜೀನ್ ಅಯನೆಸ್ಕೋ: (೧೯೧೨-೧೯೯೪) ರೊಮಾನಿಯಾ ಸಂಜಾತ ಫ್ರೆಂಚ್ ನಾಟಕಕಾರ ಅಸಂಗತ ನಾಟಕಗಳ ಪರಿಕಲ್ಪನೆಯನ್ನು ಮುಂಚೂಣಿಗೆ ತಂದ ಪ್ರಮುಖರಲ್ಲಿ ಒಬ್ಬರು. ಅಸಂಗತ ನಾಟಕಗಳು ಎಂದಾಕ್ಷಣ ಇವರೊಂದಿಗೆ ಸೇರಿಕೊಳ್ಳುವ ಇನ್ನೊಂದು ಹೆಸರು ಸ್ಯಾಮುಯಲ್ ಬೆಕೆಟ್. ಬುಖಾರೆಸ್ಟ್ ಮತ್ತು ಪ್ಯಾರೀಸ್ಗಳಲ್ಲಿ ಶಿಕ್ಷಣ ಪೂರೈಸಿದ ಯೂಜೀನ್ ಎರಡನೆಯ ಮಹಾಯುದ್ಧದ ಬಳಿಕ ಫ್ರಾನ್ಸ್ನಲ್ಲಿಯೇ ನೆಲೆಸಿದರು. ಲೇಖನದಲ್ಲಿ ಹೆಸರಿಸಿದ ಕೃತಿಗಳನ್ನು ಹೊರತುಪಡಿಸಿ ಯೂಜೀನ್ರ ಅಸಂಗತ ನಾಟಕಗಳು: ದ ಕಿಲ್ಲರ್, ಎಕ್ಸಿಟ್ ದ ಕಿಂಗ್, ಎ ಸ್ಟ್ರೋಲ್ ಇನ್ ದಿ ಏರ್, ಅಮಂಗ್ ದ ಡೆಡ್. ಜರ್ನಲ್ ಎನ್ ಮಿಯೆತ್ದಲ್ಲಿ ಅವರ ಪ್ರಬಲ ಬಲಪಂಥೀಯ ನಿಲುವುಗಳು ಪ್ರಕಟಗೊಳ್ಳುತ್ತವೆ ಎಂದು ಗುರುತಿಸಲಾಗುತ್ತದೆ.

ಸಿದೊನಿ-ಗಾಬ್ರಿಯೇಲ ಕೊಲೆಟ್: ನಟಿ, ವಿದೂಷಕಿ, ಪತ್ರಕರ್ತೆ, ವಿಮರ್ಶಕಿ ಎಂದೆಲ್ಲ ಪ್ರಸಿದ್ಧಳಾಗಿದ್ದ ಕೊಲೆಟ್ (೧೮೭೩-೧೯೫೪) ಇಪ್ಪತ್ತರ ಹರೆಯದಲ್ಲಿ ಹೆನ್ರಿ ಗೊತಿಯೆಯನ್ನು ಮದುವೆಯಾಗಿ ಪ್ಯಾರಿಸಿಗೆ ಬಂದವಳು. ಆದಾಯ ಮೂಲಕ್ಕಾಗಿ ಪತ್ನಿಯನ್ನು ಬರವಣಿಗೆಗೆ ಪ್ರೇರೇಪಿಸಿದ ಹೆನ್ರಿ, ಕ್ಲಾದೀನ್ ಹಾಗೂ ಮಿನ್ ಕೃತಿ ಸರಣಿಯನ್ನು (೧೯೦೦-೦೫) ತನ್ನ ಹೆಸರಿನಲ್ಲಿ ಪ್ರಕಟಿಸಿಕೊಂಡ. ೧೯೦೬ರಲ್ಲಿ ಹೆನ್ರಿಯನ್ನು ತೊರೆದ ಕೊಲೆಟ್ ವಿದೂಷಿ-ನರ್ತಕಿಯಾಗಿ ಜೀವನ ರೂಪಿಸಿಕೊಳ್ಳತೊಡಗಿದಳು.
ಕೊಲೆಟ್ ಬರೆದ ನೂರಾರು ಕಥೆಗಳು, ಲೇಖನ, ವಿಮರ್ಶೆ, ಕಾದಂಬರಿಗಳು ಆಕೆಯನ್ನು ಲೋಕಮಾನ್ಯ ಲೇಖಕಿಯನ್ನಾಗಿಸಿದವು. ಆಕೆಯನ್ನು ಸಮಕಾಲೀನ ಪ್ರಸಿದ್ಧ ಲೇಖಕರಾದ ಪ್ರೌಸ್ಟ್, ಆಂದ್ರೆ ಜಿದ್ರೊಂದಿಗೆ ಹೋಲಿಸಲಾಗುತ್ತಿತ್ತು. ಲೇಖಕ ಅಲೇನ್ ಮಾರ್ಕ್ಸ್ ಉದ್ಗರಿಸಿದಂತೆ ಕೊಲೆಟ್ ತನ್ನದೇ ಕಥೆಗಳ ಅತ್ಯುತ್ತಮ ಪಾತ್ರಗಳಂತೆ ಕಾಣುತ್ತಿದ್ದಳು. ವ್ಯಕ್ತಿಗತ ವಿಕಾಸ, ಮದುವೆ, ವೃತ್ತಿಯಶಸ್ಸುಗಳ ನಡುವೆ ತಾಕಲಾಟಗಳನ್ನು ಅನುಭವಿಸಿದ ಕೊಲೆಟ್, ಆ ಮಾನಸಿಕ ಸಂಘರ್ಷಗಳನ್ನು ಸಮರ್ಥವಾಗಿ ತನ್ನ ಕ್ರಿಯಾಶೀಲ ಕೃತಿಗಳಲ್ಲಿ ಪ್ರತಿಫಲಿಸಿದಳು. ತೀವ್ರಗತಿಯಲ್ಲಿ ಬದಲಾಗುತ್ತಿದ್ದ ಯುರೋಪಿಯನ್ ಸಮಾಜ, ಸಾಮಾಜಿಕ ಕಟ್ಟಳೆಗಳು, ಯುದ್ಧದ ಪರಿಣಾಮಗಳು ಕೂಡ ಆಕೆಯ ಕೃತಿಗಳಲ್ಲಿ ಪ್ರತಿಬಿಂಬಿತಗೊಂಡಿವೆ.

ಆನೀಸ್ ನಿನ್: ತನ್ನ ಶೃಂಗಾರ ಸಾಹಿತ್ಯ ಮತ್ತು ದಿನಚರಿಗಳಿಗಾಗಿ ಖ್ಯಾತಳಾದ ಆನೀಸ್ ನಿನ್ (೧೯೦೩-೧೯೭೭) ಹುಟ್ಟಿದ್ದು ಫ್ರಾನ್ಸ್ನ ನ್ಯೂಇಲ್ಲಿಯಲ್ಲಿ. ಸ್ಪ್ಯಾನಿಷ್ ಮೂಲದ ಪಿಯಾನೋ ವಾದಕ ಮತ್ತು ಸಂಯೋಜಕ ಜಾಕಿನ್ ನಿನ್ ತಂದೆ, ಫ್ರೆಂಚ್ ಮತ್ತು ಡ್ಯಾನಿಶ್ ಮೂಲದ ಶಾಸ್ತ್ರೀಯ ಗಾನ ವಿದುಷಿ ರೋಸ ಕಲ್ಮೆಲ್ ತಾಯಿ. ತನ್ನ ಆರಂಭಿಕ ವರ್ಷಗಳನ್ನು ಸ್ಪೇನ್ನಲ್ಲಿ ಕಳೆದ ನಿನ್, ತಂದೆತಾಯಿ ಬೇರೆಯಾದ ಮೇಲೆ ತಾಯಿಯೊಂದಿಗೆ ನ್ಯೂಯಾರ್ಕ್ ನಗರಕ್ಕೆ ಬಂದಳು. ತನ್ನ ಹನ್ನೊಂದನೆಯ ವಯಸ್ಸಿನಿಂದ ಕೊನೆಗಾಲದವರೆಗೆ ಆನೀಸ್ ಬರೆದ ದಿನಚರಿಗಳು ಆಧುನಿಕ ದೃಷ್ಟಿಕೋನದ ಮಹಿಳೆಯೊಬ್ಬಳ ತಲ್ಲಣ, ಗೊಂದಲ, ಸಂತಸ, ದುಃಖ, ಅನುಮಾನ ಹೀಗೆ ಏನೆಲ್ಲವನ್ನು ಒಳಗೊಂಡಿವೆ. ಹದಿನಾರನೆಯ ವಯಸ್ಸಿಗೆ ಶಾಲೆಗೆ ಶರಣು ಹೊಡೆದ ಆನೀಸ್ ರೂಪದರ್ಶಿ, ನೃತ್ಯಗಾತಿಯಾಗಿ ಬದುಕಿನ ರುಚಿ ಸವಿಯಲಾರಂಭಿಸಿದಳು. ಆಕೆಯ ಮುಕ್ತತೆ, ಮನಃಶಾಸ್ತ್ರದ ಹಿನ್ನೆಲೆಯಲ್ಲಿ ಶೃಂಗಾರ ಸಾಹಿತ್ಯದ ವ್ಯಾಖ್ಯಾನ ಮತ್ತು ದಿನಚರಿಗಳು ಆಕೆಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. ಆಕೆಯ ಅನೇಕ ಕೃತಿಗಳನ್ನು ಆಧರಿಸಿ ಚಲನಚಿತ್ರಗಳನ್ನು ಕೂಡ ನಿರ್ಮಿಸಲಾಗಿದೆ. ಮರಣೋತ್ತರವಾಗಿ ಪ್ರಕಟಿಸಿದ ಡೆಲ್ಟ ಆಫ್ ವೀನಸ್, ಲಿಟಲ್ ಬರ್ಡ್ಸ್, ಜನಪ್ರಿಯ ಕೃತಿಗಳು.

ಲಿಯೊಪೋಲ್ಡ್ ಸೇದರ್ ಸೆಂಘೊರ್: ಫ್ರೆಂಚ್ ವಸಾಹತು ದೇಶಗಳಲ್ಲಿ ಬರವಣಿಗೆ ಆರಂಭಿಸಿದ ಮೊದಲ ಲೇಖಕರ ಸಾಲಿನಲ್ಲಿ ಸೇರುವ ಬರಹಗಾರ ಮತ್ತು ರಾಜಕಾರಣಿ. ೧೯೦೬ರಲ್ಲಿ ಸೆನೆಗಲ್ನ ಜೋಲ್ ಎಂಬ ಹಳ್ಳಿಯಲ್ಲಿ ರೈತಾಪಿ ಕುಟುಂಬದಲ್ಲಿ ಜನನ. ಮಿಶನರಿ ಶಾಲೆಗಳಲ್ಲಿ ಆರಂಭಿಕ ಶಿಕ್ಷಣ ಪಡೆದು ಶಿಷ್ಯವೇತನ ದೊರಕಿದ್ದರಿಂದ ಉನ್ನತ ವ್ಯಾಸಂಗಕ್ಕೆಂದು ಫ್ರಾನ್ಸ್ಗೆ ತೆರಳಿದ ಲಿಯೊಪೋಲ್ಡ್ ಪೂರ್ಣಾವಧಿ ರಾಜಕಾರಣಿಯಾಗಿ ಹೊರಹೊಮ್ಮಿದರು. ಚಾಂಟ್ಸ್ ದ ಉಂಬ್ರ (೧೯೪೫), ಹೋಸ್ಟಿ ನೋಯ್ರ (೧೯೪೮) ಫ್ರೆಂಚ್ ಭಾಷೆಯಲ್ಲಿ ಪ್ರಕಟಗೊಂಡು ಮಾನ್ಯತೆ ಪಡೆದ ಕಾವ್ಯ ಸಂಗ್ರಹಗಳು. ಸೆಂಘೋರ್ ೧೯೬೦ ರಿಂದ ೧೯೮೦ರ ವರೆಗೆ ಸೆನೆಗಲ್ ಗಣರಾಜ್ಯದ ಅಧ್ಯಕ್ಷರಾಗಿದ್ದರು.

ಮಾರ್ಗರೀತ ತಾವೊಸ್ ಅಮ್ರೋಷ್: ಮಾರ್ಗರೀತ (೧೯೧೩-೧೯೭೬) ಹುಟ್ಟಿದ್ದು ಕ್ರಿಶ್ಚಿಯನ್ ಆಗಿ ಮತಾಂತರಗೊಂಡ ಕುಟುಂಬದಲ್ಲಿ, ಟುನಿಸ್ನಲ್ಲಿ. ತಾಯಿ ಫದ್ಮಾ ಅಯಿತ್ ಮನ್ಸೂರ್ ಅಮ್ರೋಷ್ ಹಾಗೂ ಸೋದರ ಜಾನ್ ಕೂಡ ಮಾರ್ಗರೀತಳಂತೆ ಸಾಹಿತಿಗಳೇ. ಟುನೇಷಿಯನ್ ಮತ್ತು ಬರ್ಬರ್ ಪರಂಪರೆಯ ಕುರಿತು ಅಪಾರ ಒಲವಿರುವ, ಆಳವಾದ ಧಾರ್ಮಿಕ ಶ್ರದ್ಧೆಯನ್ನು ಪ್ರತಿಫಲಿಸುವ ಸಾಹಿತ್ಯವನ್ನು ಬರೆದ ಅಮ್ರೋಷ್ ಕುಟುಂಬದ ಸಾಹಿತಿಗಳು ಪ್ರಸಿದ್ಧರು. ಅವರ ಕುಟುಂಬ ಪ್ಯಾರೀಸ್ಗೆ ವಲಸೆ ಬಂದಿತು. ೧೯೩೬ರ ಹೊತ್ತಿಗೆ ಮಾರ್ಗರೀತ ಈಜಿಪ್ತಿನ ಪೂರ್ವಭಾಗಕ್ಕೆ ವಾಸಿಸುವ, ಉತ್ತರ ಆಫ್ರಿಕಾದ ಬುಡಕಟ್ಟು ಜನಾಂಗವಾದ ಬರ್ಬೇರಿಯನ್ ಹಾಡು, ಸ್ತುತಿಗಳನ್ನು ಸಂಗ್ರಹಿಸತೊಡಗಿದಳು. ೧೯೩೯ರಲ್ಲಿ ಸ್ಪೇನ್ ದೇಶದ ಸ್ಕಾಲರ್ಶಿಪ್ ದೊರಕಿ ಈ ಬುಡಕಟ್ಟು ಜನಾಂಗದ ಹಾಡುಹಸೆ, ಜನಪದ ಕಥೆಗಳು, ಐತಿಹ್ಯ ಮತ್ತು ಒಡಪುಗಳನ್ನು ಸಂಗ್ರಹಿಸಿ ದಿ ಮ್ಯಾಜಿಕ್ ಗ್ರೇನ್ ಕೃತಿ ಪ್ರಕಟಿಸಿದಳು. ೧೯೪೭ರಲ್ಲಿ ಪ್ರಕಟಗೊಂಡ ಆಕೆಯ ಮೊದಲ ಕಾದಂಬರಿ ಬ್ಲ್ಯಾಕ್ ಹಯಸಿಂತ್ ವಾಯುವ್ಯ ಆಫ್ರಿಕನ್ ಜನಾಂಗದ ಲೇಖಕಿ ಮೊದಲ ಬಾರಿಗೆ ಫ್ರೆಂಚ್ ಭಾಷೆಯಲ್ಲಿ ಬರೆದ ಕೃತಿಯಾಗಿದೆ. ಇಲ್ಲಿ ಆ ಕಾದಂಬರಿಯ ಒಂದೆರಡು ಪುಟಗಳ ಅನುವಾದ ನೀಡಲಾಗಿದೆ. ಅಮೂರ್ತತೆ, ಭಾವಗೀತಾತ್ಮಕತೆ, ಆರ್ದ್ರಗೊಳಿಸುವ ಶೈಲಿಯಿಂದ ಈ ಪುಟಗಳು ಗಮನ ಸೆಳೆಯುತ್ತವೆ. ಆಕೆಯ ಇನ್ನೊಂದು ಕಾದಂಬರಿ ದಿ ಸ್ಟ್ರೀಟ್ಸ್ ಆಫ್ ಡ್ರಮ್ (೧೯೬೦), ಟುನಿಸ್ನ ಆಕೆಯ ಬಾಲ್ಯದ ಬದುಕನ್ನು ತೆರೆದಿಡುತ್ತದೆ.

ಗೇಬ್ರಿಯೇಲ ರಾಯ್: ಸಣ್ಣಕಥೆ, ಕಾದಂಬರಿ ಮತ್ತು ಪ್ರಬಂಧಗಳನ್ನು ಬರೆದ ಗೇಬ್ರಿಯೇಲ (೧೯೦೯-೧೯೮೩) ಕೆನಡ ದೇಶದ ಅತ್ಯಂತ ಪ್ರಸಿದ್ಧ ಸಾಹಿತಿ. ಆ ದೇಶ ಅತಿ ದೊಡ್ಡ ಸಾಹಿತ್ಯ ಪ್ರಶಸ್ತಿಯಾದ ಪ್ರಿಕ್ಸ್ ಡೇವಿಡ್ ಪುರಸ್ಕಾರವನ್ನೂ ಒಳಗೊಂಡಂತೆ ಅನೇಕ ಪುರಸ್ಕಾರವನ್ನು ಪಡೆದ ಲೇಖಕಿ. ಸಾಹಿತ್ಯಕ್ಕೆ ನಗರ ಬದುಕಿನ ಹೊಸ ಸಮಸ್ಯೆಗಳು, ಸಂಕೀರ್ಣತೆಗಳನ್ನು; ಕೆನಡದಲ್ಲಿ ಅಲ್ಪಸಂಖ್ಯಾತರಾದವರ ಒಳತೋಟಿಗಳನ್ನು ಅತ್ಯಂತ ಸಮರ್ಥವಾಗಿ ಬಿಂಬಿಸಿರುವುದು ಮಾತ್ರವಲ್ಲ, ಆ ವಿಷಯಗಳನ್ನು ಮೊದಲಬಾರಿಗೆ ಸಾಹಿತ್ಯದ ಮುನ್ನೆಲೆಗೆ ತಂದವರು ಕೂಡ ರಾಯ್ ಅವರೇ ಎಂದು ಗುರುತಿಸಲಾಗುತ್ತದೆ.
೩೬ನೆಯ ವಯಸ್ಸಿನಲ್ಲಿ ತಮ್ಮ ಮೊದಲ ಫ್ರೆಂಚ್ ಕಾದಂಬರಿ ಪ್ರಕಟಿಸಿದ ರಾಯ್ ಅದರ ಇಂಗ್ಲಿಶ್ ಆವೃತ್ತಿ ದಿ ಟಿನ್ ಫ್ಲೂಟ್ ಇಂಗ್ಲಿಶ್ ಓದುಗರಿಗೆ ಲಭ್ಯವಾದದ್ದೇ ಹೊರದೇಶದ ಓದುಗರಿಗೂ ಪರಿಚಿತರಾದರು. ಸ್ಟ್ರೀಟ್ಸ್ ಆಫ್ ರಿಚಸ್ (೧೯೫೫), ವಿಂಡ್ಫ್ಲವರ್ಸ್ (೧೯೭೦), ಗಾರ್ಡನ್ ಇನ್ ದಿ ವಿಂಡ್ (೧೯೭೫), ಚಿಲ್ಡ್ರನ್ ಆಫ್ ಮೈ ಹಾರ್ಟ್ (೧೯೭೭) ಅವರ ಇತರ ಕೃತಿಗಳು. ಎರಡು ಲೋಕಗಳ ನಡುವೆ ಸಿಲುಕಿ ಅನುಭವಿಸುವ ಸಂಕಷ್ಟಗಳನ್ನು ಈ ಕೃತಿಗಳು ತೆರೆದಿಡುತ್ತವೆ.
ಎನ್ಚಾಂಟ್ಮೆಂಟ್ ಆಂಡ್ ಸರೋ ಅವರ ಆತ್ಮಕಥೆ, ಮರಣಾನಂತರ ೧೯೮೪ರಲ್ಲಿ ಪ್ರಕಟಿಸಲಾಯಿತು. ದಿ ರೋಡ್ ಪಾಸ್ಟ್ ಅಲ್ಟಮೊಂಟ್ (ಲ ರೂಟ್ ಡಿ ಅಲ್ಟಮೊಂಟ್) ಕಾದಂಬರಿಯಲ್ಲಿ ಕೂಡ ಬೇರುಗಳನ್ನು ಹುಡುಕಿ ಹೋಗುವ ಎರಡು ತಲೆಮಾರುಗಳ ಹೆಣ್ಣುಗಳನ್ನು ಕಾಣುತ್ತೇವೆ.
ಲೇ: ಕೇಶವ ಮಳಗಿ

ಕೇಶವ ಮಳಗಿ ಕನ್ನಡದ ಪ್ರಮುಖ ಕಥೆಗಾರ, ಕವಿ, ಅನುವಾದಕ ಮತ್ತು ವಿಮರ್ಶಕರಲ್ಲಿ ಒಬ್ಬರು. ಅವರ ಪ್ರಮುಖ ಕೃತಿಗಳಲ್ಲಿ ಕಡಲ ತೆರೆಗೆ ದಂಡೆ, ಮಾಗಿ ಮೂವತ್ತೈದು, ವೆನ್ನೆಲ ದೊರೆಸಾನಿ, ಹೊಳೆ ಬದಿಯ ಬೆಳಗು, ಅಕಥಾ ಕಥಾ, ಕುಂಕುಮ ಭೂಮಿ, ಅಂಗದ ಧರೆ ಮತ್ತು ನೇರಳೆ ಮರ ಮೊದಲಾದವು ಸೇರಿವೆ. ಕಥೆ, ಕಾವ್ಯ ಮತ್ತು ಲಲಿತ ಪ್ರಬಂಧದ ಅಂಶಗಳನ್ನು ಒಳಗೊಂಡಿರುವ ನೇರಳೆ ಮರ ಅವರ ವಿಶಿಷ್ಟ ಕಥನಪ್ರಯೋಗಕ್ಕೆ ಗಮನಾರ್ಹ ಉದಾಹರಣೆಯಾಗಿದೆ. ವಿಶ್ವಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸುವ ಅವರ ಅನುವಾದ ಮತ್ತು ಸಾಂಸ್ಕೃತಿಕ ಬರಹಗಳ ಪೈಕಿ ಕಮೂ: ತರುಣ ವಾಚಿಕೆ, ಬೋರಿಸ್ ಪಾಸ್ತರ್ನಾಕ್: ವಾಚಿಕೆ, ಸಂಕಥನ (ಫ್ರೆಂಚ್ ಸಾಹಿತ್ಯ, ಸಮಾಜ, ಸಂಸ್ಕೃತಿ ಮತ್ತು ಸಾಹಿತ್ಯ ವಿಮರ್ಶೆ), ಕಡಲಾಚೆಯ ಚೆಲುವೆ (ಫ್ರೆಂಚ್ ಕಥೆಗಳು), ಗುಂಡಿಗೆಯ ಬಿಸಿರಕ್ತ (ಆಫ್ರಿಕನ್ ಸಮಾಜ–ಸಾಹಿತ್ಯ–ಸಂಸ್ಕೃತಿ ಸಂಕಥನ) ಮೊದಲಾದವು ಪ್ರಮುಖವಾಗಿವೆ. ಈ ಕೃತಿಗಳ ಮೂಲಕ ಫ್ರೆಂಚ್, ಆಫ್ರಿಕನ್ ಸೇರಿದಂತೆ ವಿವಿಧ ಜಾಗತಿಕ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಕನ್ನಡ ಓದುಗರಿಗೆ ಪರಿಚಯಿಸುವ ಮಹತ್ವದ ಕೆಲಸವನ್ನು ಅವರು ಮಾಡಿದ್ದಾರೆ.