‘ಮೆಶಾಹಿರುನ್ನಿಸಾ’ – ಮುಸ್ಲಿಂ ಜಗತ್ತಿನ ವಿಖ್ಯಾತ ಮಹಿಳೆಯರು

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಮಾಜವಾದಿ ಚಳವಳಿಯ ಫಲವಾಗಿ ಮಾರ್ಚ್ 8 ಅನ್ನು ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಲಾಯಿತು. ಅಂತರಾಷ್ಟ್ರೀಯ ವರ್ಕಿಂಗ್ ವಿಮೆನ್ಸ್ ದಿನವೆಂದು ಅಂಗೀಕರಿಸಲ್ಪಟ್ಟಿದ್ದ ಈ ದಿನವನ್ನು 1967ರಲ್ಲಿ ಸೋವಿಯತ್ ರಷ್ಯಾದ ನೆರವಿನಿಂದ ಸ್ತ್ರೀವಾದಿ ಆಂದೋಲನವು ಮಹಿಳಾ ದಿನವಾಗಿ ಹಮ್ಮಿಕೊಂಡು 1975 ರಲ್ಲಿ ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಮಾರ್ಚ್ 8 ಅನ್ನು ಅಂತರಾಷ್ಟ್ರೀಯ ಮಹಿಳಾ ದಿನವಾಗಿ ಅಧಿಕೃತವಾಗಿ ಆಚರಿಸಿತು.

ಮಹಿಳಾ ಚಳವಳಿಯ ಇತಿಹಾಸವು ರಾಜಕೀಯದಿಂದ ಹಿಡಿದು ಕಲೆಗಳವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಸುಸ್ಪಷ್ಟಗೊಂಡ ಪರಿಣಾಮ ಇಸ್ಲಾಂ ಮತ್ತು ಮಹಿಳೆಯರು ಎಂಬ ಚರ್ಚೆಗಳೂ ಮುನ್ನೆಲೆಗೆ ಬರತೊಡಗಿದವು. ಕಲಾ ಸಾಂಸ್ಕೃತಿಕ ವಲಯದಲ್ಲಿ ಹೆಚ್ಚು ಅಧ್ಯಯನಕ್ಕೀಡಾದ ವಿಷಯಗಳಲ್ಲೊಂದಾಗಿದೆ ಇದು. ಇಸ್ಲಾಮಿಕ್ ಇತಿಹಾಸದ ವಿಶೇಷವಾಗಿ ಒಟ್ಟೋಮನ್ ಯುಗದ ಪ್ರಸಿದ್ಧ ಮಹಿಳೆಯರ ಕುರಿತಾದ ಕಾದಂಬರಿಗಳು, ಚಲನಚಿತ್ರಗಳು ಮತ್ತು ಸರಣಿಗಳು ಗಮನಾರ್ಹವಾಗಿ ಹೊರಹೊಮ್ಮತೊಡಗಿದವು. ಪ್ರವಾದಿಯವರ ಅನುಯಾಯಿಗಳಲ್ಲಿ ಗೌರವಾನ್ವಿತ ಅನೇಕ ಮಹಿಳಾ ಮಾದರಿಗಳನ್ನು ನಮಗೆ ದರ್ಶಿಸಬಹುದು. ಪ್ರವಾದಿಯವರನ್ನು ಜೀವಿತಾವಧಿಯಲ್ಲಿ ನೋಡಿ, ಪ್ರವಾದಿಯವರು ಬೋಧಿಸಿದ ತತ್ವಗಳನ್ನು ಅನುಸರಿಸಿದ ಮುಸ್ಲಿಂ ವಿಶ್ವಾಸಿಗಳನ್ನು ಸ್ವಹಾಬಿಗಳು ಅಥವಾ ಅನುಯಾಯಿಗಳು ಎಂದು ಕರೆಯಲಾಗುತ್ತದೆ. ಕೆಲ ಅರಬ್ ಚಲನಚಿತ್ರಗಳು ಈ ಮಹಿಳೆಯರ ಜೀವನ ಮತ್ತು ಇತಿಹಾಸಗಳ ಮೇಲೆ ಬೆಳಕು ಚೆಲ್ಲುತ್ತವೆ.

ಒಟ್ಟೋಮನ್ ಸಾಹಿತ್ಯ ರಚನೆಗಳನ್ನು ಪರಿಶೀಲಿಸಿದರೆ ‘ಮೆಶಾಹಿರುನ್ನಿಸಾ’ (Meshahirun-nisa) ಎಂಬ ಜೀವನದರ್ಶನ ಗ್ರಂಥವು ವಿಭಿನ್ನವಾಗಿ ನಿಲ್ಲುವ ಒಂದು ಮೇರು ಅಧ್ಯಾಯ. ಪ್ರಖ್ಯಾತ ಮಹಿಳೆಯರು ಎಂದು ಅರ್ಥವಿರುವ ಮೆಶಾಹಿರುನ್ನಿಸಾ ಎಂಬ ಕೃತಿಯು ಇಸ್ಲಾಮಿಕ್ ವಿದ್ವಾಂಸರು ವಿಶ್ಲೇಷಿಸಿದ ಮಹಿಳಾ ಪ್ರಮುಖರ ಜೀವನ ಚರಿತ್ರೆಗಳನ್ನು ಒಳಗೊಂಡಿದೆ. ಪ್ರಸ್ತುತ ಮಹತ್ ಕೃತಿ ಹಾಗೂ ಒಟ್ಟೋಮನ್ ಸಾಹಿತ್ಯದ ಪ್ರಸಿದ್ಧ ಮಹಿಳೆಯರ ಕುರಿತ ಅವಲೋಕನವೇ ಈ ಲೇಖನದ ವಸ್ತು.

ಮಹಿಳೆಯರು ಪ್ರಧಾನ ಕಥಾಪಾತ್ರಗಳಾಗುವ ಪ್ರಾರಂಭಿಕ ರಚನೆಗಳು

ಇಸ್ಲಾಮಿಕ್ ಇತಿಹಾಸ ರಚನೆಯಲ್ಲಿ ಒಂದೇ ಜ್ಞಾನ ಶಾಖೆಯನ್ನು ನಿರ್ವಹಿಸಿ, ಒಂದೇ ಕೆಲಸದಲ್ಲಿದ್ದು, ಒಂದು ಪ್ರದೇಶ ಅಥವಾ ಒಂದೇ ಕಾಲಘಟ್ಟದಲ್ಲಿ ಬದುಕಿದವರ ಜೀವನ ಚರಿತ್ರೆಗಳ ಕುರಿತಾದ ಗ್ರಂಥಗಳು ‘ತ್ವಬಖಾತ್’ ಎಂಬ ವಿಭಾಗದಲ್ಲಿ ಗುರುತಿಸಲ್ಪಡುತ್ತದೆ. ಈ ಗ್ರಂಥಗಳು ಸರಣಿ ತಲೆಮಾರುಗಳಿಂದ ಕಾಲಕ್ರಮಗಳಿಗೆ ಅನುಸಾರವಾಗಿ ವಿಶೇಷವಾಗಿ ವಿದ್ವಾಂಸರು, ಕಲಾವಿದೆಯರು, ಕವಯಿತ್ರಿಯರು ಸಹಿತ ಪ್ರಸಕ್ತವಾದ ಸಾವಿರಾರು ಮಹನೀಯರ ಜೀವನ ಚರಿತ್ರೆಗಳನ್ನು ನಮಗೆ ಪರಿಚಯಿಸುತ್ತದೆ. ಈ ಗ್ರಂಥದ ಮೂಲಕವೇ ನಾವು ಪ್ರಖ್ಯಾತ ಮಹಿಳೆಯರ ಕುರಿತು ಮೊದಲ ಬಾರಿಗೆ ಓದಿ ತಿಳಿಯಬಹುದು.

ಇಸ್ಲಾಮಿಕ್ ಜಗತ್ತಿಗೆ ವಿಶಿಷ್ಟವಾದ ಈ ರಚನೆಗಳು ಆರಂಭ ಕಾಲದ ಮುಸಲ್ಮಾನರ ಬಗ್ಗೆ ಬರೆಯತೊಡಗಿದಾಗ ಒಂದನೇ ಶತಮಾನದ ಇಸ್ಲಾಮಿನ ಬೆಳವಣಿಗೆಯ ಜೊತೆಗೆ ಇದೂ ಕೂಡ ವಿಕಸನಗೊಂಡಿತು. ಆಳವಾಗಿ ಬೇರೂರಿದ್ದ ರಚನಾ ಪರಂಪರೆಯಾಗಿದ್ದರೂ ಇದರಲ್ಲಿ ಮಹಿಳೆಯರಿಗೆ ಮಾತ್ರವಾಗಿ ಪ್ರತ್ಯೇಕ ಪುಸ್ತಕಗಳು ಬರೆಯಲ್ಪಡಲೇ ಇಲ್ಲ. ಸೆಕ್ಸಿಸ್ಟ್ ದೃಷ್ಟಿಕೋನದಿಂದಾಗಿ ಇಂತಹ ಪರಿಸ್ಥಿತಿ ಉದ್ಭವಿಸಿತೆಂದು ಟೀಕಿಸಲ್ಪಟ್ಟಿದ್ದರೂ ವಸ್ತುಸ್ಥಿತಿ ಬೇರೆಯೇ ಇದೆ. ಇಸ್ಲಾಮಿನ ಸುನ್ನೀ ಚಿಂತನಾಧಾರೆಯಲ್ಲಿ ಪ್ರವಾದಿಯವರ ಅನುಯಾಯಿಗಳನ್ನು ಯಾವುದೇ ಬೇಧವಿಲ್ಲದೆ ಶ್ರೇಷ್ಟರೆಂದು ಕೊಂಡಾಡಲಾಗುತ್ತಿದೆ. ಕೆಲವು ಪುಸ್ತಕಗಳಲ್ಲಿ ಮಹಿಳೆಯರ ಜೀವನ ಚರಿತ್ರೆಗಳು ಒಂದು ಪ್ರತ್ಯೇಕ ಸಂಪುಟವಾಗಿ ಹಾಗೂ ಕೆಲವೆಡೆಗಳಲ್ಲಿ ಮಹಿಳೆಯರ ಕುರಿತಾದ ಮಾಹಿತಿಗಳು ಪ್ರತ್ಯೇಕ ವಿಭಾಗವಾಗಿ ಸಂಗ್ರಹಿಸಿರುವುದನ್ನು ಕಾಣಬಹುದು.

ಬಹುಮುಖ ವಿದ್ವಾಂಸ

ಹತ್ತೊಂಬತ್ತನೇ ಶತಮಾನದ ಹೊತ್ತಿಗೆ ಬರಹ ಪ್ರಕಾರಗಳು ಬದಲಾಗಲಾರಂಭಿಸಿದವು. ಹಾಜೆ ಮುಹಮ್ಮದ್ ಝಿಹ್ನಿ ಎಫಂದಿ ತನ್ನ ‘ಮೆಶಾಹಿರುನ್ನಿಸಾ’ ಎಂಬ ಹೆಸರಿನಲ್ಲಿ ಮಹಿಳಾ ಜೀವನ ಚರಿತ್ರೆಗಳ ಮೇಲೆ ಪ್ರಥಮವಾಗಿ ಘನವೆತ್ತ ಹಾಗೂ ಸಮಗ್ರವಾದ ಗ್ರಂಥವನ್ನು ಬರೆದರು. ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಹೊಂದಿದ್ದರಿಂದ ಅವರು ಈಜಿಪ್ಟಿನ ಅಲೆಕ್ಸಾಂಡ್ರಿಯಾ ಹಾಗೂ ಇಸ್ತಾಂಬುಲ್‌ನ ನುರಿತ ಅಧ್ಯಾಪಕರಿಂದ ಶಿಕ್ಷಣವನ್ನು ಪಡೆದಿದ್ದರು. ಒಟ್ಟೋಮನ್ ಸಾಮ್ರಾಜ್ಯದ ಮೊದಲ ಅಧಿಕೃತ ಮುದ್ರಣಾಲಯವಾದ ‘ಮತ್ಬ- ಇ- ಅಮೀರ್’ ನಲ್ಲಿ ಕ್ಲರ್ಕ್ ಮತ್ತು ಪ್ರೂಫ್ ರೀಡರ್ ಆಗಿ ಹತ್ತು ವರ್ಷಗಳ ಕಾಲ ಕೆಲಸ ನಿರ್ವಹಿಸಿದ ಬಳಿಕ ಅವರು ಪ್ರಾಧ್ಯಾಪಕ ಹುದ್ದೆಗೆ ನಿಯೋಜಿತರಾದರು.

ಅಂದು ಫ್ರೆಂಚ್ ಭಾಷೆಯಲ್ಲಿ ‘ಗಲಟ್ಟಸಾರೆ ಮಕ್ತಬೀ ಸುಲ್ತಾನಿ (ಗಲಟ್ಟಸಾರೆ ಇಂಪೀರಿಯಲ್ ಹೈಸ್ಕೂಲ್), ಲೈಸೀ ಇಂಪೀರಿಯಲ್ ಒಟ್ಟೋಮನ್ ಡಿ ಗಲಟ್ಟ-ಸೆರ’ ಎಂಬಿತ್ಯಾದಿ ಹೆಸರುಗಳಲ್ಲಿ ಗುರುತಿಸಲ್ಪಟ್ಟಿದ್ದ ಗಲಟ್ಟಸಾರೆ ಹೈಸ್ಕೂಲ್‌ಗಳಲ್ಲಿ ಝಿಹ್ನಿ ಎಫಂದಿ ಅರಬಿ ಭಾಷೆ ಹಾಗೂ ಧಾರ್ಮಿಕ ವಿಷಯಗಳ ಬೋಧಕರಾಗಿದ್ದರು. ಆ ಕಾಲದಲ್ಲಿಯೇ ಅವರು ಶಿಕ್ಷಣ ಸಚಿವಾಲಯಕ್ಕೆ ಸಂಬಂಧಿಸಿದ ಹಲವು ಆಯೋಗಗಳ ಅಧ್ಯಕ್ಷರಾಗಿಯೂ ಹಾಗೂ ಪಠ್ಯಪುಸ್ತಕಗಳ ರಚನಾ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ವ್ಯಾಕರಣ, ಧಾರ್ಮಿಕ ಜ್ಞಾನ, ಇತಿಹಾಸ, ಸಾಹಿತ್ಯ ಹೀಗೆ ಜ್ಞಾನದ ವಿವಿಧ ವಿಭಾಗಗಳಲ್ಲಿ ಹಲವು ಕೃತಿಗಳನ್ನು ರಚಿಸಿದ ಝಿಹ್ನಿ ಎಫಂದಿ ಓರ್ವ ಬಹುಮುಖ ವಿದ್ವಾಂಸ.

ಸರ್ಕಾರದಿಂದ ಗಮನಾರ್ಹವಾದ ಪದಕಗಳನ್ನು ಪಡೆದು ಪುರಸ್ಕ್ರತಗೊಂಡ ಅವರು ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಗಳಿಸಿದರು. ಕೆಲವು ಗ್ರಂಥಗಳನ್ನು 1889 ರ ಸೆಪ್ಟೆಂಬರ್ ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ಸಭೆ ಸೇರಿದ ಇಂಟರ್ ನ್ಯಾಷನಲ್ ಕಾಂಗ್ರೆಸ್ ಆಫ್ ಓರಿಯಂಟಲಿಸ್ಟ್‌ಗೆ ಕಳುಹಿಸಲಾಯಿತು. ಅವರ ಕೃತಿಗಳ ವೈಜ್ಞಾನಿಕತೆ ಹಾಗೂ ಬೋಧನಾ ಶೈಲಿ, ಅರೇಬಿಕ್ ಭಾಷೆಯಲ್ಲಿನ ಅವರ ಸೇವಾ ಮನೋಭಾವಗಳೆಲ್ಲ ಜಗತ್ತಿನ ಗಮನ ಸೆಳೆದವು. ಕಾಂಗ್ರೆಸ್‌ನ ಶಿಫಾರಸ್ಸಿನ ಮೇರೆಗೆ ಅಂದಿನ ಅಧಿಕೃತ ವಿಶ್ವಸಂಸ್ಥೆಯಾಗಿದ್ದ ಸ್ವೀಡನ್- ನಾರ್ವೆ ಒಕ್ಕೂಟವು ಅವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿತು. ಈ ಪದಕವನ್ನು ಗಲಟ್ಟಸಾರೆ ಹೈಸ್ಕೂಲ್ ಮ್ಯೂಸಿಯಂನಲ್ಲಿ ಇಂದಿಗೂ ಸಂರಕ್ಷಿಸಿಡಲಾಗಿದೆ.

ಹೆಣ್ಣು ಮಕ್ಕಳ ಗುರು

ಓರಿಯಂಟಲ್ ಸಾಹಿತ್ಯದಲ್ಲಿ ‘ಇಲ್ಮಿಹಾಲ್’ (ಇಸ್ಲಾಮಿಕ್ ನಂಬಿಕೆ, ಆರಾಧನೆ, ನೈತಿಕತೆ ಎಂಬಿತ್ಯಾದಿಗಳ ಸಂಕ್ಷಿಪ್ತ ಕೈಪಿಡಿ) ಎಂದು ಕರೆಯಲ್ಪಡುವ ಧರ್ಮ ಗ್ರಂಥಗಳನ್ನು ಮಹಿಳೆಯರಿಗೆ ಸೀಮಿತವಾದ ಅವತರಣಿಕೆಯನ್ನೂ ಅವರು ಸಿದ್ಧಗೊಳಿಸಿದರು. ಅದಕ್ಕಿಂತ ಮೊದಲು ತಥಾಕಥಿತ ಕೃತಿಗಳು ಲಭ್ಯವಿದ್ದರೂ ‘ಹನಿಂಲಾಲ್ ಇಲ್ಮಿಹಾಲ್’ (ಮಹಿಳೆಯರ ಇಲ್ಮಿಹಾಲ್) ‘ಕಿಸ್ ಲಾರ್ ಹೊಚಾಸಿ’ (ಹೆಣ್ಣು ಮಕ್ಕಳ ಗುರು) ಎಂಬ ಹೆಸರಿನಲ್ಲಿ ಅವರು ಪ್ರಕಟಿಸಿದ ಪುಸ್ತಕಗಳು ಎಲ್ಲರಿಂದಲೂ ಪ್ರಶಂಸಿತಗೊಂಡಿತಲ್ಲದೆ ಪಠ್ಯ ಪುಸ್ತಕವಾಗಿಯೂ ಬಳಸಲ್ಪಟ್ಟಿತು. ಪ್ರಾಯಮಿತಿಯನ್ನು ಪರಿಗಣಿಸಿ ಅದರ ವಿವಿಧ ಆವೃತ್ತಿಗಳನ್ನು ಹೊರತರಲಾಯಿತು. ಆದ್ದರಿಂದಲೇ ಝಿಹ್ನಿ ಎಫಂದಿಯವರನ್ನು ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿರುವ ಪ್ರಮುಖ ವ್ಯಕ್ತಿಯೆಂದು ಗುರುತಿಸಲಾಗಿದೆ. ಈ ಹಿಂದೆ ಉಲ್ಲೇಖಿಸಿದ 1878 ರಲ್ಲಿ ಪ್ರಕಟವಾದ ‘ಮೆಶಾಹಿರುನ್ನಿಸಾ’ ಎಂಬ ಕೃತಿಯು ಮಹಿಳೆಯರಿಗೆ ಸಂಬಂಧಿಸಿದ ಅವರ ಮೇರು ಕೃತಿಯಾಗಿದೆ.

ಎರಡು ಸಂಪುಟಗಳಿರುವ ಪ್ರಸ್ತುತ ಕೃತಿಯು ಇಸ್ಲಾಮಿಕ್ ಇತಿಹಾಸದ ವಿಜ್ಞಾನ, ಕಲೆ, ಸಾಹಿತ್ಯ, ರಾಜಕೀಯ ವಲಯಗಳಲ್ಲಿ ವಿಖ್ಯಾತರಾದ ಸುಮಾರು 1165 ಮಹಿಳೆಯರ ಜೀವನ ಚರಿತ್ರೆಗಳನ್ನು ಸಂಗ್ರಹಿಸುತ್ತದೆ. ಅನೇಕ ಮಹಿಳೆಯರ, ವಿಶೇಷತಃ ಸೂಫಿಗಳು, ಶಿಕ್ಷಕರು, ಕವಿಗಳು, ಗಾಯಕರ ವಿಭಿನ್ನ ಗುಣಗಳು ಮತ್ತು ನೈಸರ್ಗಿಕ ಸ್ವಭಾವ ಸವಿಶೇಷತೆಗಳನ್ನು ಅದು ವರ್ಣಿಸುತ್ತದೆ. ‘ಚಾರಿತ್ರಿಕ ಮಹಿಳೆಯರು’, ‘ತಖ್ವಾದಿಂದ (ಸೃಷ್ಟಿಕರ್ತನ ಕುರಿತು ಅರಿವು, ಪ್ರಜ್ಞೆ ಹೊಂದುವಿಕೆ) ಹೆಸರುವಾಸಿಯಾದ ಮಹಿಳಾ ವಕೀಲರು’, ‘ಭಾಷಣ ಕಲೆ ಹಾಗೂ ಪ್ರಬೋಧನಾ ಕ್ಷೇತ್ರದಲ್ಲಿ ಪ್ರಸಿದ್ಧರಾದ ಮಹಿಳೆಯರು’, ‘ಸಾಹಿತ್ಯ ಹಾಗೂ ಕ್ಯಾಲಿಗ್ರಫಿಯಲ್ಲಿ ಸಾಮರ್ಥ್ಯವನ್ನು ಸಾಬೀತುಪಡಿಸಿದ ಮಹಿಳೆಯರು’ ಹೀಗೇ ಹಲವು ಅಧ್ಯಾಯಗಳಿವೆ. ಪ್ರಸಿದ್ಧ ವಚನಗಳ ಮೂಲ ಎಂದು ತಿಳಿದಿದ್ದವರನ್ನೂ ಒಂದು ಪ್ರತ್ಯೇಕ ಅಧ್ಯಾಯದಲ್ಲಿ ಸೇರಿಸಲಾಗಿದೆ. ಮಹಿಳಾ ಆಡಳಿತಗಾರರು, ವೈದ್ಯರುಗಳ ಜೀವನ ಚರಿತ್ರೆಗಳನ್ನೂ ವಿಶೇಷವಾಗಿ ದಾಖಲಿಸಲಾಗಿದೆ.

ಮೂರು ಗುರಿಗಳನ್ನು ಆಧರಿಸಿ ಎಫಂದಿಯವರು ಈ ಕೃತಿಯನ್ನು ರಚಿಸಿದ್ದಾರೆ. ಅದರಲ್ಲಿ ಮೊದಲನೆಯದ್ದು; ಸಾಹಿತ್ಯ, ಸಾಮಾಜಿಕ, ವೈಜ್ಞಾನಿಕ ವೃತ್ತಿ ವಲಯಗಳಲ್ಲಿ ಶ್ರೇಷ್ಟ ಕೊಡುಗೆಗಳನ್ನು ನೀಡಿದ ಮಹಿಳೆಯರನ್ನು ಅವರ ಸಾಧನೆಗೆ ಅನುಗುಣವಾಗಿ ಪರಿಚಯಿಸುವುದು. ತನ್ಮೂಲಕ ವಿದ್ಯಾರ್ಥಿಗಳಾದ ಹೆಣ್ಣು ಮಕ್ಕಳಿಗೆ ತಮ್ಮ ಪ್ರತಿಭೆ, ಸಾಮರ್ಥ್ಯದ ಮೇಲೆ ಭರವಸೆ ಮೂಡಿಸಿ ಹುರಿದುಂಬಿಸುವುದು.

ಎರಡನೆಯ ಗುರಿ ಉನ್ನತ ಧಾರ್ಮಿಕ ಪ್ರಜ್ಞೆಯುಳ್ಳ ಮಹಿಳೆಯರ ಮಹಿಮೆಗಳನ್ನು ಪರಿಚಯಿಸುವುದು. ಧಾರ್ಮಿಕತೆಯಲ್ಲಿ ಉತ್ತುಂಗದಲ್ಲಿರುವ ಮಹಿಳೆಯರನ್ನು ಮಾದರಿಗಳಾಗಿ ಸ್ವೀಕರಿಸಲು ಸಾಧಿಸುವುದು. ಕೃತಿ ರಚನೆಯ ಮೂರನೆಯ ಗುರಿಯು ಇತಿಹಾಸ, ಧರ್ಮ ಮತ್ತು ಕಲಾ ಕ್ಷೇತ್ರಗಳ ಕುರಿತು ಓದುಗರಿಗೆ ಜಾಗೃತಿ ಮೂಡಿಸುವುದು.

ಯಾರಿಗೆ ಅನುಗುಣವಾಗಿ? ಯಾವುದನ್ನು ಆಧರಿಸಿ?

ಝಿಹ್ನಿ ಎಫಂದಿಯವರ ಪ್ರಕಾರ ಇಸ್ಲಾಂ ಅನ್ನು ಖುರ್‌ಆನ್ ಮಾತ್ರ ಮಾನದಂಡಗೊಳಿಸಿ ಮನದಟ್ಟು ಮಾಡುವುದು ನಮ್ಮನ್ನು ತಪ್ಪುಕಲ್ಪನೆಗಳಿಗೆ ತಳ್ಳಬಹುದು. ಪ್ರವಾದಿ ಮುಹಮ್ಮದರ ಬದುಕು ಪವಿತ್ರ ಖುರ್‌ಆನಿನ ಸಾಕ್ಷಾತ್ಕಾರವಾಗಿತ್ತು. ಇಸ್ಲಾಮನ್ನು ಸಂಪೂರ್ಣವಾಗಿ ಅರಿಯಬೇಕಾದರೆ ಪ್ರವಾದಿಯವರ ಜೀವನ ಹಾಗೂ ಖುರ್‌ಆನನ್ನು ಸ್ಪಷ್ಟವಾಗಿ ಕಲಿಯುವುದು ಮಾತ್ರವಲ್ಲದೆ ಆಯಾ ಕಾಲದ ಪರಿಸ್ಥಿತಿಗೆ ತಕ್ಕಂತೆ ಜನರು ಮತ್ತು ಘಟನೆಗಳನ್ನು ವಿಶ್ಲೇಷಿಸುವುದು ಅಗತ್ಯ.

ಇಸ್ಲಾಂನಲ್ಲಿ ತಖ್ವಾದ ಆಧಾರದಲ್ಲಿ ಶ್ರೇಷ್ಠತೆಯನ್ನು ನಿರ್ಧರಿಸಲಾಗುತ್ತದೆಯೇ ಹೊರತು ಲಿಂಗದ ಆಧಾರದಲ್ಲಿ ಅಲ್ಲ. ‘ವಖಾ’ ಎಂಬ ಪದದಿಂದ ತಖ್ವಾ ಎಂಬ ಪದವು ಉದ್ಭವಿಸಿದೆ. ಪಾಪ ಕೃತ್ಯಗಳಿಂದ ಸ್ವಶರೀರವನ್ನು ಸಂರಕ್ಷಿಸಿ ಕೆಟ್ಟ ನಡವಳಿಕೆಗಳನ್ನು ತ್ಯಜಿಸಿ ಪೂರ್ಣ ಧಾರ್ಮಿಕ ಪ್ರಜ್ಞೆಯೊಂದಿಗೆ ಬದುಕುವುದೇ ‘ತಖ್ವಾ’. ಆದುದರಿಂದಲೇ ವಿಶ್ವಾಸಿಗಳ ಆಚರಣೆಗಳ ಆರಾಧನಾ ಕರ್ಮಗಳಿಗೆ ಅನುಸಾರವಾಗಿ ಮೇಲು-ಕೀಳು ಎಂಬುದನ್ನು ನಿರ್ಧರಿಸಲಾಗುತ್ತದೆ. ಮಹಿಳೆ ಮತ್ತು ಪುರುಷ ಪರಸ್ಪರ ನ್ಯೂನತೆಗಳನ್ನು ನೀಗಿಸಬೇಕಾದವರು ಹಾಗೂ ಬೇರ್ಪಡಿಸಲು ಸಾಧ್ಯವಿಲ್ಲದ ಒಂದು ವಸ್ತುವಿನ ಎರಡು ಮುಖಗಳಂತೆ ಬದುಕಬೇಕಾದವರು. ಈ ದೃಷ್ಟಿಕೋನವನ್ನಾಧರಿಸಿ ಮೆಶಾಹಿರುನ್ನಿಸಾ ರಚಿತವಾಗಿದೆ.

ಲಕ್ಷಾಂತರ ಪುರುಷರಿಗಿಂತ ಉತ್ತಮರು

ಈ ಪುಸ್ತಕದಲ್ಲಿನ ಮಹಿಳೆಯರ ಪಟ್ಟಿಯನ್ನು ಗಮನಿಸಿದರೆ ಪ್ರಾರಂಭದಲ್ಲಿ ಪ್ರವಾದಿ ಪತ್ನಿಯರು ಎಂಬ ನೆಲೆಯಲ್ಲಿ ಪ್ರಸಿದ್ಧರಾದ ಮಹಿಳೆಯರ ಕುರಿತು ಕಾಣಬಹುದು. ನಂತರ ಪ್ರವಾದಿ ಪುತ್ರಿಯರು ಹಾಗೂ ಸಂಬಂಧಿಗಳಾದ ಇತರ ಮಹಿಳೆಯರ ಜೀವನ ಚರಿತ್ರೆಗಳನ್ನು ಬರೆಯಲಾಗಿದೆ. ಮುಂದಿನ ಅಧ್ಯಾಯವು ಪ್ರವಾದಿಯವರ ಕಾಲದಲ್ಲಿ ಬದುಕಿದ್ದ ಹಾಗೂ ಅದಕ್ಕಿಂತ ಮುಂಚೆಯೇ ತೀರಿ ಹೋಗಿದ್ದರೂ ಪ್ರವಾದಿಯವರಿಂದ ಪ್ರಶಂಸಿಸಲ್ಪಟ್ಟಿದ್ದ ಪ್ರಖ್ಯಾತರನ್ನು ಪರಿಚಯಿಸುತ್ತದೆ. ಅವರ ಕುರಿತು ವಿವಿಧ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ‘ಮುಸ್ಲಿಂ ಆದ ಕಾರಣದಿಂದ ದೌರ್ಜನ್ಯಕ್ಕೀಡಾದ ಮಹಿಳೆಯರು, ಖುರ್‌ಆನಿನಲ್ಲಿ ಹೆಸರಿಸಲ್ಪಟ್ಟ ಮಹಿಳೆಯರು’ ಎಂಬ ಅಧ್ಯಾಯಗಳು ಅವುಗಳಲ್ಲಿ ಕೆಲವು ಉದಾಹರಣೆಗಳು. ಇಂದಿನ ಇಸ್ಲಾಮೋಫೋಬಿಯ ಟೀಕೆಗಳ ಮುಂದೆ ಇಂತಹ ಜೀವನ ಚರಿತ್ರೆಗಳ ಉದಾಹರಣೆಗಳು ಅತ್ಯಂತ ಆಸಕ್ತಿದಾಯಕವಾಗಿದೆ.

ಮುಹಮ್ಮದ್ ಝಿಹ್ನಿ ಎಫಂದಿ ಅದರ ಪ್ರಥಮ ಅಧ್ಯಾಯದ ತಲೆಬರಹದಲ್ಲಿ ಪ್ರತಿಪಾದಿಸಿದಂತೆ ‘ಉಮ್ಮಹಾತುಲ್ ಮುಅ‍್‌ಮಿನೀನ್’ (ಸತ್ಯವಿಶ್ವಾಸಿಗಳ ಮಹಾಮಾತೆಯರು) ಎಂಬ ಹೆಸರಿನಲ್ಲಿ ಪ್ರಸಿದ್ಧರಾದ ಪ್ರವಾದಿ ಪತ್ನಿಯರು ಲಕ್ಷಾಂತರ ಪುರುಷರಿಗಿಂತ ಉತ್ತಮರಾಗಿದ್ದಾರೆ. ಪುಸ್ತಕದ ವಿಖ್ಯಾತ ಮಹಿಳೆಯರ ಹೆಸರುಗಳನ್ನು ಪರಿಶೀಲಿಸಿದರೆ ಅದರಲ್ಲಿ ಅನೇಕರಿಗೂ ಪ್ರವಾದಿ ಪತ್ನಿಯರ ಹಾಗೂ ಪುತ್ರಿಯರ ಹೆಸರುಗಳಿರುವುದನ್ನು ಗಮನಿಸಬಹುದು.

ವಿಶೇಷ ತಲೆಬರಹವೊಂದರ ಕೆಳಗೆ ವಿವರಿಸಲಾದ ಹನ್ನೆರಡನೇ ಶತಮಾನದ ಫಾತಿಮಾ ಅಲ್‌-ಫಖೀಹ ಎಂಬ ವಿದ್ವಾಂಸೆ ವನಿತೆಯ ಬದುಕು ಬಹಳ ಕೌತುಕಭರಿತವಾಗಿದೆ. ಪ್ರಸಿದ್ಧ ಮುಸ್ಲಿಂ ನ್ಯಾಯವಾದಿ ಅಲಾವುದ್ದೀನ್ ಸಮರ್ಖಂದಿಯವರ ಮಗಳಾದ ಫಾತಿಮಾ ತಂದೆಯಂತೆಯೇ ಕಾನೂನು ವಿಭಾಗದಲ್ಲಿ ತನ್ನ ಪ್ರತಿಭೆಯನ್ನು ಸಾಬೀತು ಪಡಿಸಿದ್ದರು. ಅಲಾವುದ್ದೀನ್ ಸಮರ್ಖಂದಿ ಪ್ರತಿಯೊಂದು ವಿಷಯದಲ್ಲೂ ಮಗಳ ನಿಲುವನ್ನು ಕೇಳಿದ ನಂತರವೇ ತೀರ್ಮಾನಕ್ಕೆ ಬರುತ್ತಿದ್ದರು. ಧಾರ್ಮಿಕ ನೀತಿ ನಿಯಮಗಳಲ್ಲಿ ಅತೀವ ಜಾಗರೂಕಳಾಗಿದ್ದ ಫಾತಿಮಾಳಿಗೆ ಮದುವೆ ಪ್ರಾಯ ತಲುಪಿದಾಗ ಹಲವು ವಿವಾಹ ಪ್ರಸ್ತಾಪಗಳು ಬಂದರೂ ಫಾತಿಮಾ ಅವರ ಮುಂದೆ ನಿಬಂಧನೆಯಿಟ್ಟದ್ದು ತನ್ನ ತಂದೆಯ ಗ್ರಂಥಕ್ಕೆ ಅತ್ಯುತ್ತಮ Scholia (ಶರಹ್, ವಿವರಣೆ) ರಚಿಸಬೇಕೆಂದಾಗಿತ್ತು.

ಒಂದು ಪುಸ್ತಕ ಪ್ರತಿಪಾದಿಸುವ ವಿಷಯದ ಮೇಲೆ ಆ ಪುಸ್ತಕ ಬರೆದವನ ತಿಳುವಳಿಕೆಯನ್ನೂ ಪಾಂಡಿತ್ಯದ ಆಳವನ್ನೂ ವಿವರಿಸುವ ವ್ಯಾಖ್ಯಾನವನ್ನು ಸ್ಕೋಲಿಯಾ ಎಂದು ಹೇಳುತ್ತಾರೆ. ಆಸ್ತಿ ಅಂತಸ್ತನ್ನು ಪರಿಗಣಿಸದೆ, ಅಜ್ಞಾನಿಗಳನ್ನು ಅವಗಣಿಸಿಯೂ ಸೂಕ್ತ ವರನನ್ನು ಆಯ್ಕೆ ಮಾಡುವಲ್ಲಿ ಈ ಮೂಲಕ ಫಾತಿಮಾ ಯಶಸ್ವಿಯಾದರು. ಫಾತಿಮಾರ ನಿಬಂಧನೆಯನ್ನು ಸವಾಲಾಗಿ ಸ್ವೀಕರಿಸಿದ ಅನೇಕ ಯುವ ವಿದ್ವಾಂಸರು ಸ್ಪರ್ಧೆಗಿಳಿದವರಂತೆ ಹಲವು ವ್ಯಾಖ್ಯಾನಗಳನ್ನು ಬರೆದು ಕಳುಹಿಸಿದರು. ಆದರೆ ಅದ್ಯಾವುದೂ ಫಾತಿಮಾ ಹಾಗೂ ಅವರ ತಂದೆಗೆ ಮೆಚ್ಚುಗೆಯಾಗಲಿಲ್ಲ. ಕೆಲವು ದಿನಗಳ ನಂತರ ಅಲಾವುದ್ದೀನ್ ಸಮರ್ಖಂದಿಯ ಶಿಷ್ಯನೇ ಆದ ಅಲಾವುದ್ದೀನ್ ಅಲ್ ಕಾಸಾನಿ ಬರೆದ ವ್ಯಾಖ್ಯಾನ ಗ್ರಂಥವು ಇಬ್ಬರಿಂದಲೂ ಮೆಚ್ಚುಗೆ ಪಡೆಯಿತು. ಫಾತಿಮಾ ಹಾಗೂ ಅಲ್ ಕಾಸಾನೀ ವಿವಾಹಿತರಾದರು. ಮಾವನಂತೆಯೇ ಅಲ್ ಕಾಸಾನಿಯೂ ತನ್ನ ಪ್ರತಿ ನಿರ್ಧಾರಗಳಲ್ಲಿ ಪತ್ನಿ ಫಾತಿಮಾರ ನಿಲುವನ್ನು ಕೇಳಿ ಪಡೆಯುತ್ತಿದ್ದರು. ಅವರ ಅನುಮೋದನೆಯಿಲ್ಲದೆ ಯಾವುದನ್ನೂ ಪ್ರಕಟಿಸುತ್ತಿರಲಿಲ್ಲ.

ಫಾತಿಮಾ ಹಾಗೂ ಅವರಂತಹ ಅನೇಕ ಮಹಿಳೆಯರ ವಿಸ್ಮಯ ಬದುಕಿನ ಮೇಲೆ ಬೆಳಕು ಚೆಲ್ಲಿದ ಮೆಶಾಹಿರುನ್ನಿಸಾ ಕೃತಿಯು ಇಸ್ಲಾಮಿಕ್ ಜಗತ್ತಿನಲ್ಲಿ ಬಹಳ ಪ್ರಭಾವವನ್ನು ಬೀರಿತು. ಲೇಖಕ ಮುಹಮ್ಮದ್ ಹಸನ್ ಹಾನ್ ಇದನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿ ಟೆಹ್ರಾನಿನಲ್ಲಿ ಪ್ರಕಟಿಸಿದ್ದಾರೆ.

ಮೂಲ~ ಡಾ: ಅಲೀ ತುಫೆಕ್ಚಿ
ಅನುವಾದ~ ಶಂಸ್ ಗಡಿಯಾರ್

Leave a Reply

*