ಮದೀನಾ ಮತ್ತು ಏಥೆನ್ಸ್: ಕಳೆದು ಹೋದ ಭವ್ಯ ಪರಂಪರೆಯ ಪುನಶ್ಚೇತನ-2

ಭಾಗ – 2

ಇಸ್ಲಾಮಿಕ್ ಮತ್ತು ಪಾಶ್ಚಾತ್ಯ ಪರಂಪರೆ ಗಳೆರಡೂ ಕೂಡಾ ಉದಾರ ಕಲೆಗಳೊಂದಿಗೆ ಸಮಾನ ಬದ್ಧತೆಯನ್ನು ಹೊಂದಿತ್ತು. ಆದರೆ ಮುಸಲ್ಮಾನರು ಧಾರ್ಮಿಕ ವಿಷಯಗಳಿಗೆ ಹೆಚ್ಚು ಒತ್ತು ಕೊಡಲು ಆರಂಭಿಸುವುದರೊಂದಿಗೆ ಒಂದು ವ್ಯಕ್ತಿಯ ಪೂರ್ಣ ಪ್ರಮಾಣದ ಬೆಳವಣಿಗೆಗೆ ಅಗತ್ಯವಿರುವ ಉದಾರ ಕಲೆಗಳ ಅಧ್ಯಯನ ನೇಪಥ್ಯಕ್ಕೆ ಸರಿಯಿತು. ವ್ಯಾಕರಣದ ಕಲಿಕೆ ಸಾಹಿತ್ಯ ಮತ್ತು ಕಾವ್ಯ ಅಧ್ಯಯನವನ್ನು ಆಶ್ರಯಿಸಿತ್ತು. ಆದಾಗ್ಯೂ, ತರ್ಕವಿಜ್ಞಾನ ತನ್ನ ಕಳೆಯನ್ನು ಕಳೆದುಕೊಂಡಿತು . ತತ್ವವಿಜ್ಞಾನ, ದೇವವಿಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನೆಯಲ್ಲಿ ಪಳಗಲು ಅತ್ಯಗತ್ಯ ಎಂದು ಸಾಂಪ್ರದಾಯಿಕವಾಗಿ ತಿಳಿಯಲಾಗಿದ್ದ ತರ್ಕ ವಿಜ್ಞಾನ ವನ್ನು ಕೈ ಬಿಟ್ಟದ್ದೇ ಇದಕ್ಕೆ ಕಾರಣ. ರೆಟರಿಕ್ ಕಲಿಕೆ ಉನ್ನತ ಹಂತಗಳ ಪಠ್ಯ ಕ್ರಮಗಳಲ್ಲಿ ಮುಂದುವರಿಯಿತು. ಆದರೆ ಕ್ವಾಡ್ರಿವಿಯಂ ಎಂಬ ದೈಶಿಕ ಕಲೆಗಳು ಮಾತ್ರ ಮೆಲ್ಲನೆ ಹಿಂಜರಿದು ಕೊನೆಗೆ ಧಾರ್ಮಿಕ ಶಿಕ್ಷಣ ವ್ಯವಸ್ಥೆಯಿಂದ ಮಾಯವಾಯಿತು.

ಇಬ್ನು ಖಲ್ದೂನ್ ಗುರುತಿಸಿರುವ ಈ ಶಿಥಿಲೀಕರಣ ಉಂಟಾದದ್ದು ಹೇಗೆ ಎನ್ನುವುದು ಮಾತ್ರ ವ್ಯಕ್ತವಲ್ಲ. ಆದರೆ ಜಾರ್ಜ್ ಮಕ್ದಿಸಿ ತಮ್ಮ Rise of Colleges: Institutions of Learning in Islam and the West ಎಂಬ ಗ್ರಂಥದಲ್ಲಿ ಈ ಕುರಿತು ಆಸಕ್ತಿಕರ ಸಿದ್ಧಾಂತವೊಂದನ್ನು ಮಂಡಿಸಿದ್ದಾರೆ. ಕ್ರೈಸ್ತ ತತ್ವ ಚಿಂತಕರ (christian scholastics) ಬಹುತೇಕ ಜ್ಞಾನ ಅನ್ವೇಷಣ ವಿಧಾನಗಳು ಹೊರಹೊಮ್ಮಿದ್ದು ಆ ಕಾಲದ ಚಲನಶೀಲ ಮುಸ್ಲಿಂ ತತ್ವ ಚಿಂತಕ ರೊಂದಿಗೆ ಅವರಿಗೆ ಉಂಟಾದ ನೇರ ಸಂಪರ್ಕದ ಫಲಶೃತಿಯಾಗಿದೆ ಎಂದು ಮಕ್ದಿಸಿ ಮೊದಲು ಧ್ವನಿಪೂರ್ಣವಾಗಿ ಸಮರ್ಥಿಸುತ್ತಾರೆ. ತರುವಾಯ “ಮಧ್ಯ ಯುಗಾನಂತರ ಮುಸ್ಲಿಮರು ಹಿಂದುಳಿದು ಕ್ರೈಸ್ತರು ಬೆಳೆಯಲು ಕಾರಣವೇನು” ಎಂಬ ಪ್ರಶ್ನೆಯನ್ನು ಎತ್ತುತ್ತಾರೆ.

” ಇದರ ಹಿಂದಿನ ಕಾರಣಗಳು ತುಂಬಾ ಇದೆ ಮತ್ತು ಸಂಕೀರ್ಣ ಕೂಡಾ ಆಗಿದೆ. ನನ್ನ ಅರಿವಿನ ಪ್ರಕಾರ ಇವುಗಳ ಪೈಕಿ ಅತ್ಯಂತ ಪ್ರಮುಖವಾದ ಅಂಶ ಈಯೆರಡು ನಾಗರಿಕತೆಗಳು ಆಸ್ತಿಗಳ ಶಾಶ್ವತತೆಗೆ ಕಂಡುಕೊಂಡ ಕಾನೂನಾತ್ಮಕ ವ್ಯವಸ್ಥೆಗಳಾಗಿವೆ. ವಕ್ಫ್ ಅಥವಾ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥೆ ಮಾತ್ರವಾಗಿತ್ತು ಇಸ್ಲಾಮಿನಲ್ಲಿದ್ದದ್ದು. ಆದರೆ ಕ್ರೈಸ್ತ ನಾಗರಿಕತೆ ಹದಿನಾಲ್ಕನೆಯ ಶತಮಾನಕ್ಕೆ ಕಾಲಿಡುವಾಗ ಎರಡು ರೀತಿಯ ಶಾಶ್ವತತೆಯ ಮಾರ್ಗಗಳನ್ನು ರೂಪಿಸಿತ್ತು. ಚಾರಿಟೇಬಲ್ ಟ್ರಸ್ಟ್ ವ್ಯವಸ್ಥೆಯೊಂದಿಗೆ ಲಾಭ ದ್ವಿಗುಣಗೊಳಿಸುವ ಕಾರ್ಪೋರೇಶನ್ ಅಥವಾ ನಿಗಮ ವ್ಯವಸ್ಥೆ ಕೂಡಾ ಇತ್ತು. ಚಾರಿಟೇಬಲ್ ಟ್ರಸ್ಟ್ ಕೂಡಾ ಹೆಚ್ಚು ಕಡಿಮೆ ಕಾರ್ಪೊರೇಟ್ ಸ್ವಭಾವವನ್ನು ಹರಳುಗೊಳಿಸಿತ್ತು. ಶಾಶ್ವತತೆಯ ಇಸ್ಲಾಮಿಕ್ ವ್ಯವಸ್ಥೆ ನಿಶ್ಚಲವಾಗಿತ್ತು. ಅದೇ ವೇಳೆ ಕ್ರೈಸ್ತ ವ್ಯವಸ್ಥೆ ಚಲನಶೀಲವಾಗಿತ್ತು. ಅನಾಧೀನ ಸೊತ್ತುಗಳ ನಿರ್ಜೀವ ಕರಗಳ ಬಿಗಿಹಿಡಿತದಲ್ಲಿ ಇಸ್ಲಾಂ ನರಳಬೇಕಾಯಿತು. ಅತ್ತ ಕ್ರೈಸ್ತ ಜಗತ್ತು ವಕ್ಫ್ ವ್ಯವಸ್ಥೆಯ ಪೂರ್ಣ ಪ್ರಯೋಜನ ಪಡೆದಿದ್ದಲ್ಲದೆ ಇಂಥ ಶಾಶ್ವತ ಸೊತ್ತುಗಳನ್ನು ನಿಗಮಿತಗೊಳಿಸಿ ಅದನ್ನು ಮತ್ತಷ್ಟು ಚುರುಕುಗೊಳಿಸಿತು.
ಈಯೆರಡು ನಾಗರಿಕತೆಗಳ ಸಮಾನಾಂತರ ಹಾದಿಯಲ್ಲಿ ಮಾರ್ಗಬೇಧ ಉಂಟಾದದ್ದು ಹದಿಮೂರನೆಯ ಶತಮಾನದಲ್ಲಾಗಿತ್ತು. ಕ್ರೈಸ್ತ ಪಶ್ಚಿಮದಲ್ಲಿ ಕಾರ್ಪೋರೇಶನ್ ಗಳ ಬೃಹತ್ ಬೆಳವಣಿಗೆ ನಡೆದ ವರ್ಷವದು.”

ಮುಫ್ತಿ ಕಚೇರಿಯನ್ನು ವಶಪಡಿಸಿ ತನ್ನ ಸುಪರ್ದಿಗೆ ತಂದ ಸರ್ಕಾರದ ನಡೆ ಕೂಡಾ ಮತ್ತೊಂದು ಪ್ರಧಾನ ಕಾರಣ ಎನ್ನುತ್ತಾರೆ ಮಕ್ದಿಸಿ. ಮುಫ್ತಿಗಳು ಕಾನೂನು ಸಲಹೆ ಕೊಡುವ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದರು. ಪಶ್ಚಿಮದಲ್ಲಿ ಕಾರ್ಯಾಚರಿಸುತ್ತಿದ್ದ ಸಲಹೆಗಾರರ (jurisconsult) ಹಾಗೆ. ಹದಿಮೂರನೆಯ ಶತಮಾನದಲ್ಲಿ ಮುಸ್ಲಿಂ ಆಡಳಿತದ ಧೋರಣೆ ಬದಲಾಗುವ ಮೊದಲು ವಕೀಲರು ಸ್ವತಂತ್ರರಾಗಿದ್ದರು. ಕಕ್ಷಿದಾರರಿಂದ ಯಾ ಉಸ್ತುವಾರಿಗಳಿಂದ ಅವರು ಸಂಬಳ ಪಡೆಯುತ್ತಿದ್ದರು.

ಕೊನೆಯದಾಗಿ ಮಕ್ದಿಸಿ ಕೆಳಗಿನ ನಿಗಮನಕ್ಕೆ ಬರುತ್ತಾರೆ:

“ಧರ್ಮದಲ್ಲಿನ ತತ್ವಚಿಂತನಾಧಾರಿತ ವಿಧಾನ (scholastic method) ಬಲಹೀನವಾಯಿತು ಮತ್ತು ಕಡತದ ಅಭ್ಯಾಸವಾಗಿ ಸೀಮಿತಗೊಂಡಿತು. ಕ್ರಮೇಣ, ಶಿಕ್ಷಣ ಮತ್ತು ಸಾಂಪ್ರದಾಯಿಕತೆಯನ್ನು ನಿರ್ಣಯಿಸುವ ಪ್ರಕ್ರಿಯೆಯಲ್ಲಿನ ಚಲನಶೀಲ ಅಂಶವಾಗಿದ್ದ ಸದ್ರಿ ವಿಧಾನ ಕಣ್ಮರೆಯಾಯಿತು.

ಈ ವಿಧಾನ ತನ್ನ ನೈಜ ತವರೂರಲ್ಲಿ ಕಣ್ಮರೆಯಾಗಿ ಹಲವು ವರ್ಷ ಕಳೆದ ನಂತರವೂ ಪಶ್ಚಿಮದಲ್ಲಿ ಜೀವಂತಿಕೆಯೊಂದಿಗೆ ಚಲಾವಣೆಯಲ್ಲಿತ್ತು. ಹದಿನೈದನೆಯ ಶತಮಾನದ ಪುನರುದಯ ಕೂಡಾ ಪಶ್ಚಿಮದ ಶೈಕ್ಷಣಿಕ ಸಂಸ್ಥೆಗಳಲ್ಲಿ ರೂಢಿಯಲ್ಲಿದ್ದ ಈ ವಾಗ್ವಾದದ ವಿಧಾನವನ್ನು ಕೊನೆಗೊಳಿಸಲಿಲ್ಲ. ಅಮೇರಿಕನ್ ಕ್ರಾಂತಿ ನಡೆದು ವರುಷಗಳು ದಾಟಿದ ನಂತರವೂ ಈ ವಿಧಾನ ಅಲ್ಲಿನ ಕಾಲೇಜು-ವಿಶ್ವವಿದ್ಯಾನಿಲಯ ಗಳಲ್ಲಿ ಮುಂದುವರಿಯಿತು. ಮಧ್ಯಯುಗದಲ್ಲಿ ‘ಕೊಳ್ಳು’ವವರಾಗಿದ್ದ ಪಾಶ್ಚಾತ್ಯರು ಆಧುನಿಕ ಯುಗದಲ್ಲಿ ‘ಕೊಡು’ವವರಾಗಿ ಬೆಳೆದರು. ಇಸ್ಲಾಮಿಕ್ ಅಂಶಗಳು ತುಂಬಿ ನಿಂತಿದ್ದ ಯೂನಿವರ್ಸಿಟಿ ವ್ಯವಸ್ಥೆಯನ್ನು ಪಾಶ್ಚಾತ್ಯರು ಪಡೆದದ್ದು ಇಸ್ಲಾಮಿನಿಂದ ಎನ್ನುವುದನ್ನು ಮರೆತೇ ಬಿಟ್ಟಿರುವ ಮುಸ್ಲಿಂ ಜಗತ್ತಿಗೆ ಪಾಶ್ಚಾತ್ಯರು ‘ಕೊಡು’ವವರಾಗಿ ಮಾರ್ಪಟ್ಟಿದ್ದಾರೆ. ಆದುದರಿಂದಲೇ ಭೂತ ಮತ್ತು ವರ್ತಮಾನದಲ್ಲಿ ಪೂರ್ವ ಮತ್ತು ಪಶ್ಚಿಮ ಭೇಟಿ ಮಾಡಿರುವುದು ಮಾತ್ರವಲ್ಲ, ಪರಸ್ಪರ ವರ್ತಿಸಿದೆ, ಪ್ರತಿಕ್ರಿಯಿಸಿದೆ ಮತ್ತು ಸಂವಹನ ಕೂಡಾ ನಡೆಸಿದೆ. ಪರಸ್ಪರ ಅರ್ಥಮಾಡಿಕೊಂಡು ಮತ್ತು ಸದ್ಭಾವನೆ ಇಟ್ಟುಕೊಂಡು ಇದು ನಡೆದಿದ್ದು ಇದೇ ಹಾದಿಯಲ್ಲಿ ಭವಿಷ್ಯದ ಹಾದಿಯಲ್ಲಿ ಎರಡು ಕಡೆಗೂ ಪ್ರಯೋಜನಕಾರಿ ಆಗುವಂತೆ ಮುಂದುವರಿಯುವುದು ಉತ್ತಮ.”

ಏಥೆನ್ಸ್ ಮತ್ತು ಜೆರುಸಲೇಮ್ ನಡುವಿನ ಆಸಾಧಾರಣವಾದ ಸಮಾಗಮ ಎಂಬಂತೆ ಪಾಶ್ಚಾತ್ಯರು ಹೊಸತರಲ್ಲಿ ದಿವ್ಯಬೋಧನೆ ಮತ್ತು ಬುದ್ಧಿಯ ನಡುವೆ ಬೆಸುಗೆ ಸಾಧಿಸಿದರು. ಉತ್ಕ್ರಷ್ಟವಾದ ಕಲೆ, ಸಾಹಿತ್ಯ, ತತ್ವಚಿಂತನೆ ಮತ್ತು ಸಂಸ್ಥೆಗಳನ್ನು ಉತ್ಪಾದಿಸಿರುವ ಶ್ರೀಮಂತ ಕ್ಯಾಥಲಿಕ್ ಬೌದ್ಧಿಕ ಪರಂಪರೆಯಲ್ಲಿ ನಮಗಿದನ್ನು ನಿಚ್ಚಳವಾಗಿ ಕಾಣಬಹುದು. ಆಗಸ್ಟೈನ್ ರಚಿಸಿದ On Christian Doctrine ದಿವ್ಯವಚನಗಳನ್ನು ಚಲನಶೀಲಗೊಳಿಸುವ ಆಳವಾದ ಭಾಷಾಧ್ಯಯನಕ್ಕೆ ನಾಂದಿ ಹಾಡಿತು. ಅಭಿಜ್ಞ ಅಲಂಕಾರ ಶಾಸ್ತ್ರ ಪ್ರವೀಣರಾದ ಆಗಸ್ಟೈನ್ ಬರೆಹದ ಭಾಷೆ ಮತ್ತು ಮಾತಿನ ಭಾಷೆಯಲ್ಲಿನ ದ್ವಂದ್ವಾರ್ಥತೆ ಮತ್ತು ವಿಚಿತ್ರತೆ ಗಳನ್ನು ಚೆನ್ನಾಗಿ ಅರಿತಿದ್ದರು. ಪ್ಲೇಟೊರ ದೃಷ್ಟಿಕೋನದ ಮಹತ್ವ ಅವರು ಮನಗಂಡಿದ್ದರು. ಮುಕ್ತ ಇಚ್ಛೆ (free will), ನೀತಿ ಮತ್ತು ನಿಸರ್ಗ ಸಂಬಂಧಿಯಾದ ಕೆಡುಕುಗಳು, ಸರ್ಕಾರಗಳ ದಬ್ಬಾಳಿಕೆ ಮುಂತಾದ ಚಿರಕಾಲದ ತಾತ್ವಿಕ ಒಗಟುಗಳನ್ನು ಬಿಡಿಸುವಲ್ಲಿ ಅಸ್ತಿತ್ವದ ಅತಿಭೌತಶಾಸ್ತ್ರೀಯ(metaphysical) ಅನ್ವೇಷಣೆಯ ಅಗತ್ಯತೆಯನ್ನು ಆಗಸ್ಟೈನ್ ಅರ್ಥ ಮಾಡಿಕೊಂಡಿದ್ದರು. ಅರಿಸ್ಟಾಟಲರ ಚಿಂತನೆಯ ಮತ್ತು ವರ್ಗೀಕರಣದ ವಿಧಾನಗಳ ಆಳ ಅಧ್ಯಯನದಿಂದ ಸಹಜವಾಗಿ ಹೊರಹೊಮ್ಮವ ವ್ಯವಸ್ಥಿತ ತತ್ವಚಿಂತನೆ ಬಹಳ ಮೌಲ್ಯಯುತ ಎನ್ನುವ ವಿಚಾರವನ್ನು ತನ್ನ ಪೂರ್ವಿಕ ಗಝ್ಝಾಲಿಯವರ ಹಾಗೆ ಅಕ್ವಿನಾಸ್ ಕೂಡಾ ಗುರುತಿಸಿದ್ದರು. ಆದುದರಿಂದಲೇ, ವ್ಯತ್ಯಾಸ ತಿಳಿಯುವುದನ್ನು ಇಷ್ಟಪಡುವ ದೇವಶಾಸ್ತ್ರೀಯ ತತ್ವಚಿಂತಕರ (scholastic philosophers) ಒಲವಿಗೆ ತಕ್ಕಂತೆ ಗ್ರೀಕ್ ವ್ಯವಸ್ಥೆಯು ದೇವರು ಮತ್ತು ಸೃಷ್ಟಿಗಳ ನಡುವಿನ ನಿಖರವಾದ ಭಿನ್ನತೆಯ ವಿವರಣೆಯನ್ನು ಸಾಧ್ಯಗೊಳಿಸಿತು. ಇಂತಹಾ ಗುಣಾತ್ಮಕ ವಿಚಾರಗಳಲ್ಲಿ ಗಣಿತದ ಮೂಲಕ ನಿಷ್ಕೃಷ್ಟತೆ ಪಡೆಯುವುದು ಅಸಾಧ್ಯ ಎಂಬುದನ್ನು ಇಲ್ಲಿ ಗಮನಿಸಬೇಕು.

ಮುಸ್ಲಿಂ ಜಗತ್ತಿನಲ್ಲಿ ಏಥೆನ್ಸ್ ಗೆ ಹಿನ್ನಡೆ ಉಂಟಾಯಿತು. ಕಟ್ಟ ಕಡೆಯ ಗ್ರೀಕ್ ಅನುಯಾಯಿ ಎಂದು ಕರೆಯಲಾಗುವ ಇಬ್ನ್ ರುಶ್ದ್ ರವರ ಗ್ರಂಥಗಳು ಆಕ್ರಮಣಕ್ಕೆ ಈಡಾಯಿತು. ಅತ್ತ ಯುರೋಪಿಯನ್ನರು ತಮ್ಮ ಸೆಮಿಟಿಕ್ ಧರ್ಮದಲ್ಲಿ ಬೃಹತ್ ಗ್ರೀಕ್ ಸಚೇತನೀಕರಣವನ್ನು ತಂದರು. ಅದು ಕೂಡಾ ಅವರ ಎಡೆಯಲ್ಲಿ ಪಸರಿಸುತ್ತಿದ್ದ ಇಸ್ಲಾಮಿನ ಬೌದ್ಧಿಕ ಪರಂಪರೆಯ ಚುಂಗು ಹಿಡಿದು. ಹಾಗೆ, ಇಸ್ಲಾಮಿನ ಮೂಲಕ ಯುರೋಪ್ ಮತ್ತು ಏಥೆನ್ಸಿನ ಸಮಾಗಮ ನಡೆಯಿತು ಮತ್ತು ಪುನರ್ಜನ್ಮ ಪಡೆಯಿತು. ಹೌದು, ಅದುವೆ ಸುಪ್ರಸಿದ್ಧವಾದ ಯುರೋಪಿಯನ್ ರಿನೈಸೆನ್ಸ್. ಅದೇ ವೇಳೆ, ಮುಸ್ಲಿಂ ಜಗತ್ತಿನಲ್ಲಿ ಇಮಾಮ್ ಗಝ್ಝಾಲಿಯವರು ಗ್ರೀಕ್ ವಿಧಾನಗಳನ್ನು ಇಸ್ಲಾಮಿಕ್ ವಿದ್ವತ್ ಪರಂಪರೆಯಲ್ಲಿ ಅಳವಡಿಸಲು ಪ್ರಯತ್ನಿಸಿದ್ದಾಗಿಯೂ ಏಥೆನ್ಸ್ ಹೆಚ್ಚೆಚ್ಚು ತಿರಸ್ಕಾರಕ್ಕೆ ಒಳಗಾಯಿತು. ಶಿಯಾ ಪರಂಪರೆ ಮತ್ತು ಅತಿಭೌತಶಾಸ್ತ್ರೀಯ ಕಲಿಕೆ ನಡೆಯುತ್ತಿದ್ದ (ಮೆಟಫಿಸಿಕಲ್ ಸ್ಟಡೀಸ್) ಕೆಲವು ಸ್ಥಳಗಳನ್ನು ಹೊರತುಪಡಿಸಿದರೆ ಮುಸ್ಲಿಂ ಜಗತ್ತಿನಲ್ಲಿ ಗ್ರೀಕ್ ಚಿಂತನೆ ಸತ್ತೇ ಹೋದಂತಿತ್ತು.

ಮದೀನಾ ಮತ್ತು ಏಥೆನ್ಸ್ ನಡುವಿನ ವಿಚ್ಛೇದನ ಮುಸ್ಲಿಂ ನಾಗರಿಕತೆಯಲ್ಲಿ ಸಮಸ್ಯೆ ಉಂಟಾದದ್ದೆಲ್ಲಿ ಎಂಬುದನ್ನು ವಿವರಿಸುತ್ತದೆ. ಯುರೋಪಿಯನ್ನರು ಏಥೆನ್ಸನ್ನು ಮರುಶೋಧಿಸಿ ಅದನ್ನು ಜೆರುಸಲೇಮ್ ನೊಂದಿಗೆ ಸಂಶ್ಲೇಷಣೆಗೊಳಿಸುವ ಪ್ರಯತ್ನದಲ್ಲಿ ಮಾನವೇತಿಹಾಸದಲ್ಲೇ ಉತ್ಕೃಷ್ಟವಾದ ನಾಗರಿಕತೆಗೆ ಜನ್ಮ ನೀಡಿದರು. ಜ್ಞಾನಾನ್ವೇಷಣೆಯ ವಿಷಯದಲ್ಲಿ ಈ ನಾಗರಿಕತೆಯ ಪ್ರಯತ್ನ ಪ್ರಶಂಸನೀಯ. ಅದಾಗ್ಯೂ, ಜ್ಞಾನವನ್ನು ಅಧಿಕಾರದೊಂದಿಗೆ ಸಮೀಕರಿಸುವ ವಿಚಾರದಲ್ಲಿ ಅದು ಎಡವಿತು. ತನ್ನ ವಿಶ್ವಾಸದಲ್ಲಿ ಹುದುಗಿರುವ ಯುಕ್ತಿಬಾಹಿರ ಆಯಾಮಗಳ ಕಾರಣದಿಂದಾಗಿ ಯುರೋಪ್ ನಿಧಾನವಾಗಿ ದಿವ್ಯಬೋಧನೆಯನ್ನು ಕೈ ಬಿಟ್ಟಿತು,ಅದು ಕೂಡಾ ಸತ್ಯವನ್ನು ಇಂದ್ರಿಯಗೋಚರ ಆಯಾಮಗಳಿಗೆ ಪರಿಮಿತಗೊಳಿಸುವ ಸೀಮಿತ ಬುದ್ಧಿಯ ಪರವಾಗಿ. ಅಧಿಕಾರಕ್ಕಾಗಿ ಹಾಹಾಕಾರ ಮತ್ತು ನೈಸರ್ಗಿಕ ವಿನಾಶ ಯುರೋಪಿನ ನಾಗರಿಕ ಕಿಚ್ಚಾಗಿ ಮಾರ್ಪಟ್ಟಿತು. ಇದು ಅಣುಬಾಂಬ್, ಜಾಗತಿಕ ಮಲಿನೀಕರಣ ಮತ್ತು ಗ್ರಾಹಕಸಂಸ್ಕೃತಿಗೆ ಕಾರಣವಾಯಿತು. ಭ್ರಮೆಗಳನ್ನು ಅರಸುತ್ತಾ ಒಂದರಿಂದ ಮತ್ತೊಂದಕ್ಕೆ ಜಿಗಿಯುವ ಚಂಚಲ ತೀಟೆಯ ಬುದ್ಧಿಭ್ರಮಣೆಯಲ್ಲಿ ಬಂಧಿಯಾಗಿಸುವ ತಂತ್ರಜ್ಞಾನದ ಬಿಗಿ ಮುಷ್ಠಿಯಿಂದ ತಪ್ಪಿಸಿಕೊಳ್ಳಲಾಗದ ಕರಗಿದ ಜೀವನಶೈಲಿ ಕೂಡಾ ಇದರ ದುಷ್ಪರಿಣಾಮ. ಆದರೆ, ಮುಸ್ಲಿಮರು ಒಮ್ಮೆಯೂ ಮದೀನವನ್ನು ಕೈಬಿಡದೆ ಭೂಮಿ ಮೇಲಿನ ಕೊನೆಯ ದೇವಕೇಂದ್ರಿತ ನಾಗರಿಕತೆಯಾಗಿ ಉಳಿದರು. ಎಲ್ಲರ ಅಸೂಯೆಗೆ ಗುರಿಯಾಗಿದ್ದ ಭವ್ಯ ಮದೀನಾ – ಏಥೆನ್ಸ್ ಸಮಾಗಮ ಮಾತ್ರ ಕಳೆಗುಂದಿದ ನೆನಪಾಗಿ ಉಳಿದಿದೆ.

ಆದಿಕಾಲದಲ್ಲಿ ಕ್ರಿಯಾಶೀಲವಾಗಿದ್ದ ಮತ್ತು ಯುರೋಪನ್ನು ಬೌದ್ಧಿಕ ಆಲಸ್ಯದಿಂದ ಬಡಿದೆಬ್ಬಿಸಿ ಪೋಷಣೆ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಈ ಮದೀನಾ-ಏಥೆನ್ಸ್ ಸಂಬಂಧವನ್ನು ಮರುಸ್ಥಾಪನೆ ಮಾಡಬೇಕು. ಇಸ್ಲಾಮಿನ ಬೌದ್ಧಿಕ ಪರಂಪರೆಗೆ ಪುನಶ್ಚೇತನ ನೀಡಲು ಇದು ಅನಿವಾರ್ಯ. ಮಾನವಕುಲ ಎದುರಿಸುತ್ತಿರುವ ನಾಗರಿಕ ಬಿಕ್ಕಟ್ಟಿನ ಸವಾಲುಗಳಿಗೆ ಬಹಳ ಬುದ್ಧಿವಂತಿಕೆಯಿಂದ ಸ್ಪಂದಿಸಲು ಮುಸಲ್ಮಾನರನ್ನು ಇದು ಸಿದ್ಧಗೊಳಿಸಲಿದೆ. ಅಂದ ಹಾಗೆ ಈ ವಿಚ್ಛೇದಿತರ ಮರುಮದುವೆ ನಡೆಸುವುದಾದರೂ ಹೇಗೆ?

ಉದಾರ ಕಲೆಗಳು ಎಂದು ಪಶ್ಚಿಮದಲ್ಲಿ ಮತ್ತು ಸಮಗ್ರ ಅಧ್ಯಯನ (ಅಲ್-ದಿರಾಸಾತ್ ಅಲ್ ಜಾಮಿಅ) ಎಂದು ಇಸ್ಲಾಮಿಕ್ ಜಗತ್ತಿನಲ್ಲಿ ಕರೆಸಿಕೊಳ್ಳುವ ವಿಶಾಲತೆ ಆಧಾರಿತ ಸಮಗ್ರತಾ ದೃಷ್ಟಿಯ ಈ ಪರಂಪರೆಯನ್ನು ಮರುಸ್ಥಾಪಿಸುವ ಉದ್ದೇಶದೊಂದಿಗೆ ನಮ್ಮ ಝೈತೂನ ಕಾಲೇಜು ಮುಂದಡಿಯಿಡುತ್ತಿದೆ. ಉದಾರ ಕಲೆಗಳಲ್ಲಿ ಪಳಗಿದಾಗ ಅದೀಬ್ ಅಥವಾ ಅದರ ಇಂಗ್ಲಿಷ್ ಸಂವಾದಿಯಾದ erudite gentleman ಅಂದರೆ ವಿದ್ಯಾಸಂಪನ್ನ ಸಂಭಾವಿತ ಹುಟ್ಟುತ್ತಾನೆ.

ಪ್ರಾಚೀನ ಕಾಲದ ವಿದ್ವಾಂಸರು ಈ ಪ್ರಪಂಚವನ್ನು ಅರ್ಥೈಸಿದ್ದು ಗುರಿ ಇಲ್ಲದ ಕೇವಲ ಪದಾರ್ಥ ಎಂಬ ರೀತಿಯಲ್ಲಲ್ಲ. ಅವರು ಜಗತ್ತನ್ನು ಕಂಡದ್ದು ನಾಲ್ಕು ಕಾರಣಗಳ ಮೂಸೆಯಲ್ಲಿ; ಪದಾರ್ಥಿಕ ಅಥವಾ ಸಮವಾಯಿ ಕಾರಣ, ಸ್ವರೂಪ ಅಥವಾ ಅಸಮವಾಯಿ ಕಾರಣ, ನಿಮಿತ್ತ ಕಾರಣ ಮತ್ತು ಆತ್ಯಂತಿಕ ಕಾರಣ. ಇವುಗಳ ಪೈಕಿ ಕೊನೆಗೆ ಹೇಳಲಾದ ಲಕ್ಷ್ಯದ ಕಡೆಗೆ ಬೊಟ್ಟು ಮಾಡುವ ಕಾರಣವನ್ನು ಅನ್ವೇಷಣದ ಉನ್ನತ ಮಟ್ಟದಲ್ಲಿ ಇರಿಸಲಾಗಿತ್ತು. ಕೈಬಿಟ್ಟು ಹೋಗಿರುವ ಪರಂಪರೆಯನ್ನು ಮರುಸ್ಥಾಪಿಸುವ ನಮ್ಮ ಯತ್ನಗಳನ್ನು ನಾವು ಈ ದೃಷ್ಟಿಯಿಂದ ಪರಿಶೀಲಿಸಬೇಕಿದೆ. “ಶಿಕ್ಷಣದ ಗುರಿಯೇನು” ಎಂಬ ಪ್ರಶ್ನೆಗೆ ಉತ್ತರಿಸುವ ಆತ್ಯಂತಿಕ ಕಾರಣದಿಂದಲೇ ಆರಂಭಿಸೋಣ. ಗುರಿಸಾಧಿಸಲು ಮತ್ತು ಸತ್ಯವನ್ನು ಕಂಡುಹಿಡಿಯಲುವಿದ್ಯಾರ್ಥಿಗಳಿಗೆ ಸಹಾಯ ಮಾಡುವುದೆ ಇಸ್ಲಾಮಿನಲ್ಲಿ (ಅಂದ ಹಾಗೆ ಝೈತೂನದ್ದು ಕೂಡಾ) ಶಿಕ್ಷಣದ ಗುರಿ. ಇಸ್ಲಾಮಿನ ಜ್ಞಾನಮೀಮಾಂಸೆ ಚಿಂತನೆಯ ಮೂರು ನಿಯಾಮಗಳ ಮೇಲೆ ಬೇರೂರಿದೆ: law of identity (ಗುರುತಿನ ನಿಯಮ ಅಥವಾ ಒಂದು ವಸ್ತು ಅದೇ ವಸ್ತುವಿಗೆ ಅಭಿನ್ನವಲ್ಲ ಎನ್ನುವ ನಿಯಮ), law of excluded middle (ಪ್ರಸ್ತಾವನೆ ಮತ್ತು ಅದರ ನಿರಾಕರಣೆಯ ಪೈಕಿ ಒಂದು ಸತ್ಯವಾಗಿರಬೇಕು ಎನ್ನುವ ನಿಯಮ), law of non-contradiction (ವೈರುಧ್ಯಾತ್ಮಕ ಪ್ರಸ್ತಾವನೆಗಳು ಒಂದೇ ವೇಳೆ ಎರಡೂ ಕೂಡಾ ಸತ್ಯವಾಗದು ಎನ್ನುವ ನಿಯಮ). ಧಾರ್ಮಿಕ ವಿದ್ಯಾರ್ಥಿಗಳು ಇದನ್ನು ಕಲಿತಿರುತ್ತಾರೆ. ಮಧ್ಯ ಏಷ್ಯಾದಲ್ಲಿ ಹನ್ನೆರಡನೆಯ ಶತಮಾನದಲ್ಲಿ ರಚಿತವಾದ, ಇಸ್ಲಾಮಿನ ಇತಿಹಾಸದ ಸುಪ್ರಧಾನವಾದ ಶಿಸ್ತು ಆಗಿರುವ ವಿಶ್ವಾಸವಿಜ್ಞಾನವನ್ನು ಪ್ರತಿಪಾದಿಸುವ ಗ್ರಂಥವಾದ ʼನಸಫಿಯ್ಯʼದಲ್ಲಿ ಕರ್ತೃ ಇಮಾಂ ನಸಫಿ ಮತ್ತು ಗ್ರಂಥದ ವಿವರಣೆಗಾರ ಇಮಾಂ ತಫ್ತಾಝಾನಿ ಬರೆಯುವುದು ನೋಡಿ:

“ವಾಸ್ತವ (ಹಕ್ಕ್‌ ಅಥವಾ reality) ಎಂದರೆ ನಿಜಸ್ಥಿತಿಯೊಂದಿಗೆ ಹೊಂದಾಣಿಕೆ ಇರುವ ತೀರ್ಪು ಎಂದು ಸತ್ಯದ ವಕ್ತಾರರು ಪ್ರತಿಪಾದಿಸಿದ್ದಾರೆ. ಈ ಪದವನ್ನು ಸಾಮಾನ್ಯವಾಗಿ ಪ್ರಸ್ತಾವನೆಗಳಿಗೆ, ವಿಶ್ವಾಸಗಳಿಗೆ, ಧರ್ಮಗಳಿಗೆ ಮತ್ತು ಕರ್ಮದ ವಿವಿಧ ವಿಭಾಗಗಳಿಗೆ ಅವುಗಳು ಎಷ್ಟು ಪ್ರಮಾಣದಲ್ಲಿ ವಾಸ್ತವವನ್ನು ಒಳಗೊಂಡಿದೆ ಎಂಬುದನ್ನು ನೋಡಿಕೊಂಡು ಬಳಸಲಾಗುತ್ತದೆ. ಇದರ ವಿರುದ್ಧ ಪದ ಅವಾಸ್ತವ ಎನ್ನುವುದು. ಆದರೆ ಸತ್ಯ‌ (ಸಿದ್ಕ್ ಅಥವಾ truth) ಎಂಬ ಪದವನ್ನು ವ್ಯಾಪಕವಾಗಿ ಪ್ರಸ್ತಾವನೆಗಳ ಕುರಿತು ಉಪಯೋಗಿಸಲಾಗುತ್ತದೆ. ಅದರ ವಿರುದ್ಧ ಪದ ಸುಳ್ಳು (false) ಎಂದು. ಈ ಎರಡು ವ್ಯತ್ಯಾಸಗಳ ಜೋಡಿಗಳ ನಡುವಿನ ವ್ಯತ್ಯಾಸವನ್ನು ಕೆಳಕಾಣಿಸಿದ ಹಾಗೆ ತಿಳಿಯಬಹುದು. ವಾಸ್ತವದ ವಿಷಯದಲ್ಲಿ ನಿಜಸ್ಥಿತಿಯನ್ನು ಅವಲೋಕಿಸಿ ಮತ್ತು ಸತ್ಯದ ವಿಷಯದಲ್ಲಿ ತೀರ್ಪನ್ನು ಅವಲೋಕಿಸಿ ಹೊಂದಾಣಿಕೆಯನ್ನು ತೀರ್ಮಾನಿಸಲಾಗುತ್ತದೆ. “ತೀರ್ಪಿನ ಸತ್ಯತೆ” ಎಂದರೆ ತೀರ್ಪಿಗೆ ನಿಜಸ್ಥಿತಿಯೊಂದಿಗೆ ಇರುವ ಹೊಂದಿಕೆ ಎಂದೂ “ತೀರ್ಪಿನ ವಾಸ್ತವಿಕತೆ” ಎಂದರೆ ನಿಜಸ್ಥಿತಿಯೊಂದಿಗೆ ತೀರ್ಪಿಗೆ ಇರುವ ಹೊಂದಿಕೆ ಎಂದೂ ಅರ್ಥ ಮಾಡಲಾಗುತ್ತದೆ. ಒಂದು ವಸ್ತುವಿನ ನೈಜ ಸತ್ವ (essence) ಮತ್ತು ವಿಶೇಷ ಗುಣ (quiddity) ಸೇರಿದರೆ ಅದರ ಅಸ್ಮಿತೆ ಸಿಗುತ್ತದೆ. ಉದಾಹರಣೆಗೆ ಮನುಷ್ಯನ ಅಸ್ಮಿತೆ “ವಿಚಾರಶಕ್ತಿಯುಳ್ಳ ಮೃಗ” ಎಂದು(rational animal ಇಲ್ಲಿ ಮೃಗ essence ಮತ್ತು ವಿಚಾರಶಕ್ತಿ quiddity).”

ಮುಸಲ್ಮಾನರು ತಮ್ಮ ಪ್ರಮಾಣಕ ಪರಂಪರೆಯನುಸಾರ (normative tradition) ಕ್ಯಾಥಲಿಕರಿಗಿಂತ ಭಿನ್ನವಲ್ಲದ ಮಿತ ವಾಸ್ತವವಾದಕ್ಕೆ (moderate idealism) ಬದ್ಧರಾಗಿದ್ದಾರೆ ಎಂದು ಗೊತ್ತಾಯಿತು ಈ ನಿಲುವಿಗೆ ಸಾಥಿಯಾಗಿ ಅನಿಷೇಧ್ಯವಾದ ಅತೀಂದ್ರಿಯ ಆಯಾಮ ಕೂಡಾ ಇದ್ದು ಅದು ಪರಂಪರೆಯ ಮೇಲೆ ಗಾಢ ಪ್ರಭಾವ ಬೀರಿದೆ ಮತ್ತು ನ್ಯೂಟೋನಿಯನ್‌ ಮತ್ತು ಕ್ವಾಂಟಮ್‌ ಭೌತವಿಜ್ಞಾನಕ್ಕೆ ಸಂವಾದಿಯಾಗಿದೆ. ಅವು ಪರಸ್ಪರ ವಿಭಿನ್ನ ಎಂದು ಹೊರನೋಟಕ್ಕೆ ತೋರುತ್ತದೆಯಾದರೂ ಅವುಗಳು ಕಾರ್ಯನಿರ್ವಹಿಸುತ್ತಿರುವುದು ಬೇರೆಬೇರೆ ಸಮತಲಗಳಲ್ಲಿ. ಇದನ್ನೇ ಇಸ್ಲಾಮಿನ ಪರಂಪರೆಯಲ್ಲಿ “ಇರುವಿಕೆಯ ವಿವಿಧ ಹಂತಗಳು ಅಥವಾ ಮರಾತಿಬುಲ್‌ ವುಜೂದ್‌” ಎನ್ನಲಾಗುತ್ತದೆ. ಸತ್ಯವನ್ನು ಹುಡುಕಿ ಕಂಡುಹಿಡಿಯಬಹುದು, ಬೌದ್ಧಿಕವಾಗಿ ಸಮರ್ಥಿಸಬಹುದು ಮತ್ತು ಪವಿತ್ರಗೊಳಿಸಲಾದ ಆತ್ಮಗಳಲ್ಲಿ ಅದನ್ನು ವಾಸ್ತವಿಕವಾಗಿ ಸಾಕ್ಷಾತ್ಕರಿಸಿಕೊಳ್ಳಬಹುದು ಎಂದು ಮುಸಲ್ಮಾನರು ನಂಬುತ್ತಾರೆ. ಖಚಿತ ಜ್ಞಾನ (ಇಲ್ಮ್ ಅಲ್‌ ಯಖೀನ್)‌, ವಾಸ್ತವಿಕ ಖಾತರಿ (ಹಕ್ಕ್‌ ಅಲ್‌ ಯಖೀನ್)‌ ಮತ್ತು ಕೊನೆಯದಾಗಿ ಸಾಕ್ಷಾತ್‌ ಖಚಿತತೆ (ಅಯ್ನ್‌ ಅಲ್‌ ಯಖೀನ್) ಎಂದು ಅಸ್ತಿತ್ವದ ಈ ಮೂರು ಹಂತಗಳನ್ನು ಕರೆಯಲಾಗಿದೆ. ಬೆಂಕಿಯ ಬಗ್ಗೆ ಕೇಳುವುದು, ಬೆಂಕಿಯನ್ನು ನೋಡುವುದು ಮತ್ತು ಬೆಂಕಿಯಲ್ಲಿ ಬೇಯುವುದು; ಇಮಾಂ ಗಝ್ಝಾಲಿ ಆ ಹಂತಗಳಿಗೆ ಹೀಗೆ ಉದಾಹರಿಸಿದ್ದಾರೆ. ಸತ್ಯವನ್ನು ಕಂಡುಹಿಡಿಯಬಹುದು ಎಂದು ಕಲಿಸುವುದರೊಂದಿಗೆ ನನ್ನ ಅಭಿಪ್ರಾಯ ಸರಿಯೆಂದು ನಾನು ನಂಬುತ್ತೇನೆ, ಆದರೆ ತಪ್ಪಾಗಲು ಸಾಧ್ಯತೆ ಇದೆ ಎನ್ನುವ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಶಿಕ್ಷಣ ವ್ಯವಸ್ಥೆಗೆ ಸಾಧ್ಯವಾಗಲೇಬೇಕು. ಯಾಕೆಂದರೆ, ಬೌದ್ಧಿಕ ವಿನಯ ಎನ್ನುವುದು ಒಳಿತುಗಳ ಪೈಕಿ ಕೇಂದ್ರಸ್ಥಾನ ಪಡೆದಿದೆ. ಇದು ಮಾನವನ ಪ್ರಥಮ ಬಾಧ್ಯತೆಯಾಗಿದ್ದು ಇದರ ಹೊರತಾಗಿ ಜ್ಞಾನ ಅಗಮ್ಯ ಎಂದು ವಾದಿಸಿದ್ದಾರೆ ಇಮಾಂ ಅಲ್‌ ಜುನೈದ್.

ನೈತಿಕ ಮೌಲ್ಯಗಳಿಗೆ ಒಡ್ಡಿಕೊಳ್ಳುವುದು ಮತ್ತು ಒಗ್ಗಿಕೊಳ್ಳುವುದು ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಪ್ರಧಾನ ಅಂಶ. ಕ್ಯಾಥಲಿಕರು ಮತ್ತು ಆರ್ಥಡಾಕ್ಸ್‌ ಕ್ರಿಶ್ಚಿಯನ್ನರು ಎರವಲು ಪಡೆದುಕೊಂಡ ಹಾಗೆ ಮುಸಲ್ಮಾನರು ಕೂಡಾ ಅರಿಸ್ಟಾಟಲರ ಪ್ರಮುಖ ನೈತಿಕ ಶೀಲಗಳನ್ನು ಮತ್ತು ಬೌದ್ಧಿಕ ಮೌಲ್ಯಗಳನ್ನು ಸ್ವೀಕರಿಸಿದ್ದರು. ಸ್ಪಾನಿಷ್‌ ಮುಸ್ಲಿಂ ವಿದ್ವಾಂಸರಾದ ಖಾಝಿ ಅಬೂಬಕರ್‌ ತಮ್ಮ ʼರಿಹ್ಲʼ ಎನ್ನುವ ಗ್ರಂಥದಲ್ಲಿ ಬರೆಯುತ್ತಾರೆ,”ಧೈರ್ಯ, ಆತ್ಮಸಂಯಮ, ವಿವೇಕ ಮತ್ತು ನ್ಯಾಯ, ಈ ನಾಲ್ಕು ಸದ್ಗುಣಗಳು ನೈತಿಕ ಶೀಲಗಳ ಮೂಲ ಎನ್ನುವ ಸಂಗತಿಯನ್ನು ಬುದ್ಧಿಯ ವಕ್ತಾರರೆಲ್ಲಾ(ಧರ್ಮಗಳು ಬೇರೆ ಬೇರೆಯಾದರೂ) ಒಕ್ಕೊರಲಿನಿಂದ ಒಪ್ಪಿಕೊಳ್ಳುತ್ತಾರೆ.” ಕಲೆ, ಪ್ರಾಯೋಗಿಕ ಬುದ್ಧಿ, ಅಂತರ್ಬೋಧೆ, ವಿಜ್ಞಾನ ಮತ್ತು ತಾತ್ವಿಕ ಬುದ್ಧಿಯಂಥಾ ಬೌದ್ಧಿಕ ಸದ್ಗುಣಗಳನ್ನು ಕೂಡಾ ಬೆಳೆಸಲಾಗುತ್ತದೆ. ಅತ್ಯಂತ ಆಕರ್ಷಕ ರೀತಿಯಲ್ಲಿ ಕೃತಿರಚನೆ ಮಾಡುವ ಕಲೆಯನ್ನು ಅಲಂಕಾರಶಾಸ್ತ್ರದ ಅಧ್ಯಯನ ತೊಟ್ಟಿಕ್ಕಿಸುತ್ತದೆ. ಅತಿಭೌತಶಾಸ್ತ್ರ ಮತ್ತು ತರ್ಕವಿಜ್ಞಾನದ ಅಧ್ಯಯನ ಪ್ರಾಥಮಿಕ ಕಲಿಕಾ ಮೂಲ ತತ್ವಗಳನ್ನು ಹೃದಯಕ್ಕಿಳಿಸುತ್ತದೆ. ಗಣಿತ, ಖಗೋಳವಿಜ್ಞಾನ ಮತ್ತು ಇತರ ಶಿಸ್ತುಗಳ ಅಧ್ಯಯನದ ಮೂಲಕ ವಿಜ್ಞಾನವನ್ನು ಕಲಿಯಲಾಗುತ್ತದೆ. ಮೊದಲ ಮತ್ತು ಕೊನೆಯ ಕಾರಣಗಳನ್ನು ಚಿಂತನೆಯಿಂದ ಕಂಡುಕೊಳ್ಳುವ ಮೂಲಕ ವಿಶೇಷವಾಗಿ ತಾತ್ವಿಕ ಬುದ್ಧಿಯನ್ನು ಬೆಳೆಸಿಕೊಳ್ಳಲಾಗುತ್ತದೆ. ಕೊನೆಯದಾಗಿ ಇಸ್ಲಾಂ ಮುಂದಿಡುವ ಸತ್ಶೀಲಗಳು ಇಂತಿವೆ: ಭಯ, ಭರವಸೆ, ಕೃತಜ್ಞತಾಭಾವ, ತಾಳ್ಮೆ, ಪಶ್ಚಾತಾಪ, ಪರಿತ್ಯಾಗ, ನಂಬಿಕೆ, ಸಂತೃಪ್ತಿ ಮತ್ತು ಪ್ರೀತಿ ಸೇರಿ ಒಟ್ಟು ಒಂಭತ್ತು ಗುಣಗಳು.

ಉದ್ದೇಶಪೂರ್ವಕ ಇತರರನ್ನು ನೋಯಿಸದ ವ್ಯಕ್ತಿಯ ಸೃಷ್ಟಿಯಾಗಿರಬೇಕು ಭಕ್ತಿಯಲ್ಲಿ ಬೇರೂರಿದ ಉದಾರ ಶಿಕ್ಷಣದ ಫಲಶೃತಿ. “ಒಬ್ಬಾತನ ಕೈ ಮತ್ತು ನಾಲಗೆಯಿಂದ ಇತರರಿಗೆ ನೋವು ಉಂಟಾಗುತ್ತಿಲ್ಲ ಎಂದಾದರೆ ಅವನೆ ವಿಶ್ವಾಸಿ” ಎಂಬುವುದು ಪ್ರವಾದಿ ಉವಾಚ. ಇತರರಿಗೆ ಅವನೊಂದಿಗೆ ಸರಾಗವಾಗಿ ವ್ಯವಹರಿಸಲು ಸಾಧ್ಯ. ಆತ ವಿವಾದ ಮಾಡಲಾರ, ಅದೇ ವೇಳೆ ಸಾರ್ವಜನಿಕ ಹಿತಾಸಕ್ತಿಗೋಸ್ಕರ ವಿವಾದಿತ ನಿಲುವು ತಳೆಯಬೇಕಾಗಿ ಬಂದರೆ ಅದಕ್ಕೆ ಹೇಸಲಾರ. ಒಂದು ಕೊಠಡಿಯಲ್ಲಿರುವಾಗ ಎಲ್ಲರಂತೆ ತನ್ನನ್ನು ಕಾಣುವನು ಮತ್ತು ಅಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಲು ಬಯಸಲಾರನು. ಮಾತುಕತೆ ನಡೆಸುವಾಗ ಏಕಪಕ್ಷೀಯವಾಗಿ ವರ್ತಿಸಲಾರ. ಇತರರನ್ನು ಬೇಸ್ತು ಬೀಳಿಸುವಂತೆ ಮಾತನಾಡಲಾರ. ಚಾಡಿ ಮತ್ತು ಪರದೂಷಣೆಗಳನ್ನು ಕೇಳಲಾರ. ಇತರರ ಮಾತು ಕೃತಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಲು ಒಲವು ತೋರಿಸುವನು. ಇತರರ ಟೀಕೆ-ಟಿಪ್ಪಣಿಗಳಿಂದ ಒಳ್ಳೆಯ ಅರ್ಥಗಳನ್ನು ಪಡೆಯಲು ಶ್ರಮಿಸುವನು. ಆತ ಅಲ್ಪತನ ಮತ್ತು ಮುಂಗೋಪದಿಂದ ಮುಕ್ತನಾಗಿರುವನು. ಯಾರಾದರೂ ಹೀಯಾಳಿಸಿದರೆ ಅದರಿಂದ ಅವಮಾನಿತನಾಗಲಾರ. ಕುಹಕಗಳನ್ನು ಸಹಿಷ್ಣುತೆಯಿಂದ ಸ್ವೀಕರಿಸಬಲ್ಲ. ಇಹವನ್ನು ಒಂದು ಪರೀಕ್ಷೆಯಾಗಿ ಕಂಡು ಕಾಲದ ಬದಲಾವಣೆಗಳೊಂದಿಗೆ ಘನತೆ ಮತ್ತು ತ್ಯಾಗಮನಸ್ಥಿತಿಯೊಂದಿಗೆ ಅನುಸಂಧಾನ ನಡೆಸುವನು. ವಾಗ್ವಾದದ ವೇಳೆ ಅವನ ವಾದಗಳು ಚೂಪಾಗಿರುತ್ತದೆ ಮತ್ತು ಚರ್ಚೆಯಲ್ಲಿ ಭಾಗವಹಿಸುವ ಕಡಿಮೆ ವಿದ್ಯಾರ್ಹತೆ ಇರುವವರೊಂದಿಗೆ ಅತಿಯಾಗಿ ವರ್ತಿಸಲಾರ. ವಾದಗಳು ಸುಸ್ಪಷ್ಟವಾಗಿರುತ್ತವೆ ಮತ್ತು ಭಾವನಾತ್ಮಕತೆಗೆ ಬಲಿ ಬೀಳದೆ ವಿಚಾರಪೂರ್ಣವಾಗಿರುತ್ತದೆ. ಅಧ್ಯಾಪನೆಯ ವೇಳೆಯಲ್ಲಿ ಅಲ್ಲದೆ ಇತರರ ಭಾಷೆಯಲ್ಲಿ ಬರುವ ಪ್ರಮಾದಗಳನ್ನು ತಿದ್ದಲು ಹೋಗಲಾರ. ಕಾರ್ಯಾಚರಿಸುವ ಮುನ್ನ ಆಲೋಚಿಸುವನು ಮತ್ತು ಒಮ್ಮೆ ಕಾರ್ಯಾಚರಿಸಿದರೆ ನಿರ್ದಮವಾಗಿ ನಿಲ್ಲುವನು. ಇತರರ ಅಭಿಪ್ರಾಯ ಎಷ್ಟೇ ಅಸಂಬದ್ಧವಾಗಿದ್ದರೂ ಅವರನ್ನು ಆತ ಲೇವಡಿ ಮಾಡಲಾರ. ಅರಿವು ಮತ್ತು ಅರಿವಿನ ಪ್ರತಿನಿಧಿಗಳನ್ನು ಗೌರವಿಸುವನು. ಸೃಷ್ಟಿಯ ಸೌಂದರ್ಯ ಮತ್ತು ಗಾಂಭೀರ್ಯವನ್ನು ಸವಿಯುವನು. ಆನಂದದಾಯಕ ಜೀವನವನ್ನು ಒಂದು ಕರ್ತವ್ಯ ಮತ್ತು ಮನೋಭಾವವಾಗಿ ಕಾಣುವನು. ಧಾರ್ಮಿಕ ಸ್ವಾತಂತ್ರ್ಯವನ್ನು ತಾತ್ವಿಕವಾಗಿ ನಂಬುವನು. ಗೆಳೆಯರು ಮತ್ತು ಸಂಬಂಧಿಕರೊಂದಿಗೆ ಕರುಣೆ, ರಮ್ಯತೆ ಮತ್ತು ಕ್ಷಮಾಶೀಲತೆಯಿಂದ ವರ್ತಿಸುತ್ತಾನೆ. ಅಪರಿಚಿತರೊಂದಿಗೆ ಘನತೆ ಮತ್ತು ಗೌರವದಿಂದ ವರ್ತಿಸುತ್ತಾನೆ. ಶತ್ರುಗಳೊಂದಿಗೆ ಅವರು ಒಂದು ದಿನ ಗೆಳೆಯರಾಗುವ ಸಾಧ್ಯತೆ ಇದೆ ಎನ್ನುವ ಭಾವನೆಯೊಂದಿಗೆ ವರ್ತಿಸುತ್ತಾನೆ.

ಕಲಿಕಾ ವಿಷಯಗಳು ಮತ್ತು ಪರಿಕರಗಳನ್ನು ವಿವರಿಸುವ ಶಿಕ್ಷಣಕ್ರಮದ ಬೌದ್ಧಿಕ ಪದಾರ್ಥವಾದ ಪಠ್ಯಕ್ರಮವಾಗಿದೆ ಉದಾರ ಶಿಕ್ಷಣದ ಪದಾರ್ಥ ಕಾರಣ. ಉದಾಹರಣೆಗೆ ನಮ್ಮ ಝೈತೂನ ಕಾಲೇಜಿನಲ್ಲಿ ಪರಿಕರಗಳ ಕಲಿಕೆಗೆ ವಿಶೇಷ ಒತ್ತು ಕೊಡುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಮುಸ್ಲಿಂ ಶಿಕ್ಷಣ ವ್ಯವಸ್ಥೆಯ ಪಂಚಾಂಗವಾಗಿದ್ದ ವ್ಯಾಕರಣ ಕಲಿಕೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿದ್ದೇವೆ. ಅರಬಿಕ್‌ ಭಾಷೆಯ ಪ್ರಖರತೆ ಮತ್ತು ಕ್ಲಿಷ್ಟತೆಯಿಂದಾಗಿ ಗುರುತರ ಪ್ರಮಾದಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಉನ್ನತ ಮಟ್ಟದ ವ್ಯಾಕರಣ ಜ್ಞಾನ ಅನಿವಾರ್ಯ. ಅರಬಿ ಭಾಷೆಯ ಸ್ವಭಾವ, ಅದರ ವಾಕ್ಯ ರಚನೆಯಲ್ಲಿನ ದ್ರವತೆ, ಶಬ್ದವ್ಯುತ್ಪತ್ತಿಯಲ್ಲಿನ ಕ್ಲಿಷ್ಟತೆ ಮತ್ತು ಪ್ರವಿಶಾಲವಾದ ಪದ ಸಂಪದ ಇವೆಲ್ಲಾ ಇದಕ್ಕೆ ಕಾರಣವಾಗಿದೆ. ಆಧುನಿಕಪೂರ್ವ ವಿದ್ವಾಂಸರ ಪದಸಂಪತ್ತು ಅಪಾರವಾಗಿತ್ತು. ಅವರು ತಮ್ಮ ಸಂಪನ್ನವಾದ ಭಾಷೆಯನ್ನು ಬಹಳ ರಸಾಸ್ವಾದದೊಂದಿಗೆ ಬಳಸುತ್ತಿದ್ದರು. ಒಂದು ಅರಬಿಕ್‌ ಪದಕೋಶದಲ್ಲಿ ಸರಿಸುಮಾರು ಇಪ್ಪತ್ತು ಸಾವಿರ ಧಾತುಪದಗಳು ಇರುತ್ತವೆ. ಒಂದು ಧಾತುವಿನಿಂದ ಹಲವಾರು ಪದಗಳನ್ನು ಮತ್ತೆ ರೂಪಿಸಬಹುದು. ಧಾತುಗಳನ್ನು ಕಲಿಯುವುದು ಮತ್ತು ಅರ್ಥದ ವಿನ್ಯಾಸಗಳನ್ನು ಅರ್ಥ ಮಾಡುವುದು ಪ್ರಧಾನವಾಗಿತ್ತು. ಷೇಕ್ಸ್‌ಪಿಯರ್‌ ಇಪ್ಪತ್ತೆಂಟು ಸಾವಿರ ಪದಗಳನ್ನು ಬಳಸಿದ್ದಾರೆ. ಅದರಲ್ಲಿ ನಲವತ್ತು ಶೇಖಡಾ ಪದಗಳನ್ನು ಬಳಸಿದ್ದು ಒಮ್ಮೆ ಮಾತ್ರ. ಆದುದರಿಂದಲೇ, ಪದ ಸಂಪತ್ತನ್ನು ಕೈವಶಪಡಿಸುವುದು ಇಂಗ್ಲಿಷ್‌ ಮತ್ತು ಅರಬಿ ಭಾಷಾ ಕಲಿಕೆಯಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ.

ಉದಾರ ಕಲಾ ಕಲಿಕೆಯ ನಿಮಿತ್ತ ಕಾರಣ ಶಿಕ್ಷಣಶಾಸ್ತ್ರದ (pedagogy) ಕುರಿತಾದ ಕೆಲವು ಪ್ರಶ್ನೆಗಳನ್ನು ಒಳಗೊಂಡಿದೆ. ಜ್ಞಾನ ಬೋಧನೆ ಮಾಡುವುದು ಹೇಗೆ? ಬೋಧನೆಯ ಕಲೆ ಮತ್ತು ವಿಜ್ಞಾನಗಳು ಇದಕ್ಕೆ ಉತ್ತರ ನೀಡುತ್ತದೆ. ಬೋಧನೆ ಒಂದೋ ಅಗಮನಾತ್ಮಕ (inductive ನಿರ್ದಿಷ್ಟ ಅಂಗಗಳ ವಿವರಗಳಿಂದ ಸಾರ್ವತ್ರಿಕವಾದ ಜ್ಞಾನಕ್ಕೆ ಹೋಗುವ ಪ್ರಕ್ರಿಯೆ) ಇಲ್ಲವೇ ನಿಗಮನಾತ್ಮಕವಾಗಿರುತ್ತದೆ (deductive ಸಾರ್ವತ್ರಿಕ ನಿಯಮಗಳಿಂದ ನಿರ್ದಿಷ್ಟ ಅಂಗಗಳ ವಿವರವನ್ನು ಪಡೆಯುವ ಪ್ರಕ್ರಿಯೆ). ಬೋಧನೆ ಉಪದೇಶಾತ್ಮಕ(didactic) ಯಾ ಸಂವಾದಾತ್ಮಕ(dialectic) ಆಗಿರಬಹುದು. ಸಂವಾದಾತ್ಮಕ ವಿಧಾನವೆ ಉತ್ತಮ. ಝೈತೂನ ಕಾಲೇಜಿನಲ್ಲಿ ನಾವು ಬೋಧನೆಯಲ್ಲಿನ ಉಪದೇಶಾತ್ಮಕ ಅಂಶಗಳನ್ನು ಪುನರುಜ್ಜೀವಿಸಲು ಪ್ರಯತ್ನಿಸುತ್ತಿದ್ದೇವೆ. ಅದಾಗಿತ್ತು ಅರಬಿಕ್‌ ಮತ್ತು ಲ್ಯಾಟಿನ್‌ ಪರಂಪರೆಯ ದೇವಶಾಸ್ತ್ರೀಯ ತತ್ವಜ್ಞಾನಿಗಳ ಬೋಧನಾ ವಿಧಾನದ ವಿಶೇಷತೆ. ಅವರ ಪ್ರಕಾರ ಈ ವಿಧಾನ ಸಂವಾದಾತ್ಮಕ ವಿಧಾನಕ್ಕೆ ಪೂರ್ವಾಪೇಕ್ಷಿತವೆನಿಸಿತ್ತು. ಉಪದೇಶಾತ್ಮಕ ವಿಧಾನ ಚರ್ಚೆಗಳನ್ನು ಸಂಪನ್ನಗೊಳಿಸುತ್ತದೆಯಲ್ಲವೇ. ಕೆಲವು ಉದಾರ ಕಲಾ ಕಾಲೇಜುಗಳು ಈಗ ಉಪದೇಶಾತ್ಮಕ ವಿಧಾನದ ಬಳಕೆ ನಿಲ್ಲಿಸಿದ್ದು ಉತ್ಸಾಹ ಭರಿತ ಚರ್ಚೆಯಷ್ಟೇ ಪ್ರಾಧಾನ್ಯತೆ ಉಪನ್ಯಾಸಗಳಿಗೆ ನೀಡಬೇಕಿದೆ. ಉಪನ್ಯಾಸದಿಂದ ಮಾತ್ರ ಆಳವಾದ ಮತ್ತು ಪಕ್ವವಾದ ವೈಚಾರಿಕ ಪ್ರಕ್ರಿಯೆಗಳನ್ನು ಸೋದಾಹರಣವಾಗಿ ಮತ್ತು ನೇರವಾಗಿ ವಿದ್ಯಾರ್ಥಿಗಳ ಮನಸ್ಸಿಗಿಳಿಸಲು ಸಾಧ್ಯ. ಇದು ಘಟಿಸಬೇಕಾದರೆ ವಿದ್ಯಾರ್ಥಿಗಳು ಉಪನ್ಯಾಸಕರು ಹೇಳಿದ್ದನ್ನು ಮಾತ್ರ ಗಮನಿಸಿದರೆ ಸಾಲದು, ಅವರು ಅರ್ಥಗಳನ್ನು ಸನ್ನಿವೇಶಗಳಿಗನುಸಾರ ಯಾವ ರೀತಿ ಪೋಣಿಸಿದ್ದಾರೆ ಎಂಬುದನ್ನು ಕೂಡಾ ಗಮನಿಸಬೇಕಾದುದು ಬಹಳ ಅವಶ್ಯಕ.

ಪದಗಳನ್ನು ಕಲಾತ್ಮಕವಾಗಿ ಬಳಸಿ, ಬೌದ್ಧಿಕ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ಪೋಣಿಸಿ, ಪ್ರವಚನದಲ್ಲಿನ ಸ್ಪಷ್ಟತೆ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಂಡು ಉಪನ್ಯಾಸಕ ಆಶಯಗಳನ್ನು ಇತರರಿಗೆ ಅಭಿವ್ಯಕ್ತಿಸುತ್ತಾನೆ. ಆ ಮೂಲಕ ಪಠ್ಯದ ಹೂರಣ ಮತ್ತು ಚೇತನದಿಂದ ಉದ್ಭವಿಸುವ ಚಿಂತನಾ ವಿಧಾನವನ್ನು ಹಿಂಬಾಲಿಸಲು ಸ್ಫೂರ್ತಿಯಾಗುತ್ತಾನೆ. ಅದಕ್ಕೂ ಮಿಗಿಲಾಗಿ ಪಠ್ಯಗಳನ್ನು ಅದರ ಮೂಲಭಾಷೆಯಲ್ಲಿ ಓದುವಾಗ ಉಪನ್ಯಾಸಕರು ಅನಿವಾರ್ಯವಾಗಿ ಪಠ್ಯದ ಗಟ್ಟಿಯಾದ ಅಸ್ಥಿವಾರಕ್ಕೆ ಹತ್ತಿರಗೊಳಿಸುವ ಬೌದ್ಧಿಕ ಗುರುತ್ವಾಕರ್ಷಣೆಗೆ ಮರುಳಾಗುತ್ತಾರೆ. ಅರಬಿ ಶಬ್ದವ್ಯುತ್ಪತ್ತಿ ವಿಜ್ಞಾನದ ಶ್ರೀಮಂತಿಕೆ ಒಡಮೂಡಿಸಿದ ವ್ಯಾಕರಣ ಸಾಧ್ಯತೆಗಳು ಮತ್ತು ಅರ್ಥ ವೈವಿಧ್ಯತೆಗಳು ಇಲ್ಲಿ ಗಮನಾರ್ಹ. ಒಂದು ಅಧ್ಯಾಯ ಯಾ ಹಲವು ಅಧ್ಯಾಯಗಳ ನಡುವಿನ ಏಕತೆಯನ್ನು ಸಾಧಿಸಲು ಅತಿ ಅಗತ್ಯವಾದ ವಿವರಣಾ ಕೌಶಲ್ಯಗಳನ್ನು ಪ್ರಯೋಗಿಸಲು ಉಪನ್ಯಾಸಕ ಶುರು ಹಚ್ಚುತ್ತಾನೆ. ಈ ನಿಟ್ಟಿನಲ್ಲಿ ಆಲೋಚಿಸುವಾಗ ಉಪನ್ಯಾಸಕರನ್ನು ಜೀವಿಸುವ ವಿವರಣಾ ಗ್ರಂಥಗಳಾಗಿ ನೋಡಬೇಕಾಗುತ್ತದೆ. ಅವರನ್ನು ಹಿಂಬಾಲಿಸುವ ವಿದ್ಯಾರ್ಥಿಗಳನ್ನು ಸನಾತನವಾದ ವಿದ್ವತ್‌ ಕಲೆಯಲ್ಲಿನ ಸಹಯೋಗಿಗಳಾಗಿಯೂ.

ನಿಮಿತ್ತ ಕಾರಣದೊಂದಿಗೆ ಗಾಢವಾದ ನಂಟಿರುವ ಮತ್ತು ಆದರ್ಶಪ್ರಾಯ ಕಾರಣ ಎನ್ನಬಹುದಾದ ಸ್ವರೂಪ ಕಾರಣ ಶಿಕ್ಷಣ ವ್ಯವಸ್ಥೆಯ ಸತ್ವದ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಆದುದರಿಂದಲೇ, ಸ್ವರೂಪ ಕಾರಣ ಶಿಕ್ಷಣಶಾಸ್ತ್ರ ಮತ್ತು ಪಠ್ಯಕ್ರಮವನ್ನು ಒಳಗೊಳ್ಳುವುದನ್ನು ಕಾಣಬಹುದು. ವ್ಯಾಕರಣ, ತರ್ಕ ವಿಜ್ಞಾನ, ಮತ್ತು ಅಲಂಕಾರ ವಿಜ್ಞಾನದಂಥಾ ಭಾಷಾ ಕಲೆಗಳಿಂದ ಮಿಳಿತವಾಗಿರಬೇಕು ಪಠ್ಯಕ್ರಮ. ಭಾಷೆ ಬಹುಮುಖ ಅರ್ಥಗಳನ್ನು ಸ್ಫುರಿಸಬಲ್ಲದು ಎನ್ನುವ ಗ್ರಹಿಕೆಯೊಂದಿಗೆ ಪುಸ್ತಕಗಳೊಂದಿಗೆ ಅನುಸಂಧಾನ ನಡೆಸಬೇಕು. ಗ್ರಂಥಕರ್ತ ಉದ್ದೇಶಿಸಿದ ತಾತ್ಪರ್ಯವನ್ನು ಹುಡುಕಲು ವಿವರಣಾತ್ಮಕ ಪುಸ್ತಕಗಳಲ್ಲಿ ಪ್ರಯತ್ನಿಸಬೇಕು. ಅದೇ ವೇಳೆ ಸಾಹಿತ್ಯ ಮತ್ತು ಕಾವ್ಯಗಳು ಹೆಚ್ಚಿನ ಸ್ವಾತಂತ್ರ್ಯ ಓದುಗನಿಗೆ ನೀಡುತ್ತದೆ. ತರ್ಕ ವಿಜ್ಞಾನದಿಂದ ಪುಸ್ತಕದ ತಾರ್ಕಿಕ ಸಮರ್ಪಕತೆಯನ್ನು ಮತ್ತು ಅಲಂಕಾರ ವಿಜ್ಞಾನದಿಂದ ಕಲಾಕೃತಿಯ ಅರ್ಹತೆಯನ್ನು ನಿರ್ಧರಿಸಬಹುದು.

ಮನುಷ್ಯನಲ್ಲಿ ಸೌಂದರ್ಯ, ಸತ್ಯ ಮತ್ತು ಒಳಿತಿನೊಂದಿಗಿನ ಪ್ರೀತಿಯನ್ನು ಅಂಕುರಿಸುವಂತೆ ಮಾಡುವುದೆ ಶಿಕ್ಷಣದ ಗುರಿ. ಅಲ್ಲಾಹನ ಅಸ್ತಿತ್ವ ಮತ್ತು ಪೂರ್ವ ತೀರ್ಮಾನಗಳನ್ನು ಅಂಗೀಕರಿಸುವ ಗಾಢನಿಶ್ಚಯಗಳಾದ ಈಮಾನನ್ನು ಮುಸ್ಲಿಮರು ಹಿರಿಯ ಸತ್ಯವೆಂದು ಕರೆಯುತ್ತಾರೆ. ಇಸ್ಲಾಂ ಅಥವಾ ಭೂಮ್ಯಾಕಾಶಗಳಲ್ಲಿನ ದೇವೇಚ್ಛೆ ಮತ್ತು ಕ್ರಿಯೆಗಳಿಗಾಗಿನ ಸಮರ್ಪಣೆ ಮತ್ತು ತ್ಯಾಗವನ್ನು ಅವರು ಒಳಿತು ಎಂದು ಗ್ರಹಿಸುತ್ತಾರೆ. ಸೌಂದರ್ಯವನ್ನು ನಾವು ಇಹ್ಸಾನ್‌ ಎಂದು ಕರೆಯುತ್ತೇವೆ. ಸುಂದರಗೊಳಿಸು, ಸೌಂದರ್ಯವನ್ನು ಪ್ರತಿಫಲಿಸು ಮತ್ತು ಸೌಂದರ್ಯವನ್ನು ಗ್ರಹಿಸು ಎಂಬೀ ಅರ್ಥಗಳು ಭಾಷಾತ್ಮಕವಾಗಿ ಅದು ನೀಡುತ್ತದೆ. ಈ ಮೂರು ಗುರಿಗಳ ಪೈಕಿ ಪ್ರತಿಯೊಂದೂ ಸ್ವತಂತ್ರವಾದ ಕಲೆಗಳಲ್ಲಿ ಪ್ರತಿಫಲಿಸಿದೆ ನೋಡಿ. ವ್ಯಾಕರಣ ಎನ್ನುವುದು ಮನುಜನ ಉತ್ಕೃಷ್ಟವಾದ ಒಳಿತು ಆಗಿದೆ, ತರ್ಕ ವಿಜ್ಞಾನದಿಂದ ಸತ್ಯವನ್ನು ಕಂಡುಹಿಡಿಯಲು ಮತ್ತು ಅದರ ಅಭಾವದಲ್ಲಿ ಅಸತ್ಯವನ್ನು ಕಾಣಲು ಸಾಧ್ಯ ಮತ್ತು ತಾನು ಮಾಡುವ ಕೆಲಸಗಳಿಗೆಲ್ಲಾ ಸೌಂದರ್ಯ ಸ್ಪರ್ಶ ನೀಡಲು ಅಲಂಕಾರ ವಿಜ್ಞಾನ ಅನುವು ಮಾಡಿಕೊಡುತ್ತದೆ. ಈ ಕಲೆಗಳಲ್ಲಿ ಪ್ರಾವೀಣ್ಯತೆ ಪಡೆದುಕೊಂಡರೆ ಇಂದ್ರಿಯ ಜ್ಞಾನದ ಸಿಕ್ಕುಗಳಲ್ಲಿ ಸಿಕ್ಕಿಹಾಕಿಕೊಳ್ಳದೆ ಬುದ್ಧಿಯ ಬೆಳಕಿನಲ್ಲೆ ನಿರಂಕುಶ ವಾಸ್ತವವನ್ನು ಅರಗಿಸಿಕೊಳ್ಳಲು ಸಾಧ್ಯವಿದೆ. ಆ ಮೂಲಕ ನೈಜತೆಯ ಅನುಭವ ಉಂಟಾಗುತ್ತದೆ ಮತ್ತು ಶಾಂತಿ ಮತ್ತು ಗ್ರಹಿಕೆ ಪ್ರಾಪ್ತವಾಗುತ್ತದೆ.

ಶೈಖ್ ಹಂಝ ಯೂಸುಫ್
ಕನ್ನಡಕ್ಕೆ: ನಝೀರ್ ಅಬ್ಬಾಸ್

1 Comment

  1. ನಿಜಕ್ಕೂ ಇದೊಂದು ಉತ್ತಮ ಬೆಳವಣಿಗೆ…
    ಕನ್ನಡ ಭಾಷೆಯಲ್ಲಿ ಇಸ್ಲಾಮಿಕ್ ವಿಷಯಗಳ ಅದ್ಯಯನಾತ್ಮಕ ಗ್ರಂಥಗಳ ಅಲಭ್ಯತೆ ಕೊನೆಗಾಣಬೇಕಾಗಿದೆ..

    ಇಸ್ಲಾಮಿಕ್ ವಿಶ್ವಾಸ, ಕರ್ಮಶಾಸ್ತ್ರಕ್ಕೆ ಸಂಬಂಧಿಸಿದ ಚುಟುಕಾದ ಒಂದು ಸೈಕ್ಲೋಪೀಡಿಯಾವೊಂದು ಜನುಮ ಕಾಣಬೇಕಿತುವುದು ಕಾಲಘಟ್ಟದ ಬೇಡಿಕೆಯಾಗಿದೆ…

Leave a Reply

*