ಭಾರತದ ಮೇಲೆ ಪೋರ್ಚುಗೀಸ್ ಆಕ್ರಮಣದ ಪೂರ್ವೋತ್ತರ ಕಾಲಗಳಲ್ಲಿ ಹಿಂದೂ ಮಹಾಸಾಗರದಾದ್ಯಂತ ವ್ಯಾಪಾರ, ಜ್ಞಾನ ಪ್ರಸರಣೆಯಂತಹ ವಿವಿಧ ರೀತಿಯ ಸಂಬಂಧಗಳಿಗೆ ನಿಮಿತ್ತವಾಗಿ ಕಾರ್ಯಾಚರಿಸಿದವುಗಳಲ್ಲಿ ಪ್ರಮುಖವಾಗಿತ್ತು ‘ಮುಸ್ಲಿಂ ಪೆಪ್ಪರ್ ಜಾಲ’ (Muslim pepper network) ಗಳು. ಮುಖ್ಯವಾಗಿ ವ್ಯಾಪಾರದ ಮೂಲಕ ಧಾರ್ಮಿಕ ವಿಚಾರ ವಿನಿಮಯಗಳು (ವಿಶೇಷವಾಗಿ ಅರಿವು ಮತ್ತು ಸಾಂಸ್ಕೃತಿಕ) ಒಳ ಹೊಕ್ಕಲಾರಂಭಿಸಿದವು. ಧರ್ಮ ಸಂದೇಶಗಳೊಂದಿಗೆ ಭಾರತಕ್ಕೆ ಬಂದ ವಿದ್ವಾಂಸರು ಮತ್ತು ಸೂಫಿ ಸಂತರು ವ್ಯಾಪಾರಿ ಹಡಗುಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದ ಕಾರಣ ವಾಣಿಜ್ಯೋದ್ಯಮದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುವುದರ ಜೊತೆಗೆ ಅವರಲ್ಲಿ ಹಲವರು ವ್ಯಾಪಾರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ನಿಟ್ಟಿನಲ್ಲಿ ವ್ಯಾಪಾರ ಜಾಲವನ್ನು ಸಂಘಟಿಸುವಲ್ಲಿ ಇಸ್ಲಾಂ ಪಾತ್ರ ವಹಿಸಿದಂತೆ ಧರ್ಮ ಬೋಧನೆಯ ಹಾದಿಯಲ್ಲಿ ಇಸ್ಲಾಂ ಶರವೇಗದಿಂದ ಬೆಳೆಯಲು ವಾಣಿಜ್ಯೋದ್ಯಮವೂ ಸಹಾಯ ಮಾಡಿತು. ಮುಸ್ಲಿಂ ಧಾರ್ಮಿಕ ನಾಯಕತ್ವವು ವ್ಯಾಪಾರ ಸಮುದಾಯಗಳಿಗೆ ಅವಶ್ಯ ಸೇವೆಗಳು ಮತ್ತು ಮಾರ್ಗದರ್ಶನವನ್ನು ಒದಗಿಸುವುದರೊಂದಿಗೆ ದೀರ್ಘಕಾಲದವರೆಗೆ ಧಾರ್ಮಿಕ ಚಟುವಟಿಕೆಗಳು ಮತ್ತು ಅದರ ಇತರ ಜಾಲಗಳನ್ನು ಬೆಂಬಲಿಸಿತು. ಈ ಸಂದರ್ಭದಲ್ಲಿ ಪ್ರಮುಖವಾದುದು ಧರ್ಮ ಪಂಡಿತರುಗಳ ಪ್ರಯಾಣಗಳು ಹಾಗೂ ಕಾಲಕ್ಕೆ ತಕ್ಕಂತೆ ಪಕ್ವಗೊಳ್ಳುವ ಅವರ ಗ್ರಂಥಗಳ ಚಲನೆ ಮತ್ತು ಪ್ರಸಾರಗಳಾಗಿದ್ದವು.
ಮಧ್ಯಕಾಲೀನ ಇಸ್ಲಾಮಿಕ್ ಪ್ರಪಂಚದಾದ್ಯಂತ ಜ್ಞಾನಾರ್ಜನೆಯು ಹೆಚ್ಚು ವ್ಯಕ್ತಿಗತವಾಗಿತ್ತು. ವಿದ್ವಾಂಸರ ಅರ್ಹತೆ ಮತ್ತು ಪ್ರತಿಷ್ಠೆ ಅವರು ಎಲ್ಲಿ ಅಧ್ಯಯನ ಮಾಡಿದರು ಎಂಬುದಕ್ಕಿಂತಲೂ ಯಾರ ಉಪಸ್ಥಿತಿಯಲ್ಲಿ ಅಧ್ಯಯನ ಮಾಡಿದರು ಎಂಬುದರ ಮೇಲೆ ಅವಲಂಬಿತವಾಗಿರುತ್ತಿತ್ತು. ಆ ದಿನಗಳಲ್ಲಿ ಜ್ಞಾನವು ಲಿಖಿತ ಪಠ್ಯಗಳಿಗಿಂತ ಹೆಚ್ಚು ಮೌಖಿಕವಾಗಿ ಹರಡಿತ್ತು. ಹಲವಾರು ಗ್ರಂಥಗಳ ಭಾಷಾಂತರ ಪ್ರಕ್ರಿಯೆಗಳು ನಿರಂತರವಾಗಿ ನಡೆದರೂ ಸಹ ಮೌಖಿಕತೆಗೆ ಹೆಚ್ಚು ಒತ್ತು ನೀಡಿದರು. ಕೇವಲ ಪುಸ್ತಕಗಳ ಆಧಾರದ ಮೇಲೆ ಮಾಡುವ ವೈಯಕ್ತಿಕ ಅಧ್ಯಯನಕ್ಕಿಂತ ಹೆಚ್ಚಾಗಿ ಗುರು ಶಿಷ್ಯರನ್ನೊಳಗೊಂಡ ಪ್ರಕ್ರಿಯೆಯಾಗಿತ್ತು ಇಸ್ಲಾಮಿಕ್ ಜ್ಞಾನ ವರ್ಗಾವಣೆಯ ಪ್ರಮುಖ ರೀತಿ.
ಈ ರೀತಿಯ ಜ್ಞಾನ ಪ್ರಸರಣೆಯ ಪರಿಣಾಮವಾಗಿ ವಿದ್ವಾಂಸರು ಹಲವು ಯಾತ್ರೆಗಳನ್ನು ಕೈಗೊಳ್ಳಬೇಕಾಗಿ ಬಂತು. ಅದೇ ಸಂದರ್ಭ ವಿವಿಧ ವಿದ್ವಾಂಸರೊಂದಿಗಿನ ನಿರಂತರ ಮುಖಾಮುಖಿಗಳು ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಅನುಭವಗಳು ಮತ್ತು ಅಭಿಪ್ರಾಯಗಳ ಚಲಿಸುವ ಮೂಲಗಳಾಗಲು (peripatetic) ಸಹಾಯ ಮಾಡಿದವು.
“ವಿದ್ಯೆ ಅರಸಿ ಹೊರಡುವವರು ಹಿಂದಿರುಗುವವರೆಗೂ ಅಲ್ಲಾಹನ ರಕ್ಷಣೆಯಲ್ಲಿರುತ್ತಾರೆ.” ಎಂಬ ಪ್ರವಾದಿ ವಚನವು ಯಾತ್ರಿಕರ ಪಾಲಿಗೆ ಪ್ರಯಾಣವನ್ನು ವಿಶೇಷವಾಗಿಸಿದವು. ಹಿಂದೂ ಮಹಾಸಾಗರದಾದ್ಯಂತ ವಿದ್ವಾಂಸರ ಸಂಚಾರದ ಮೂಲಕವಾಗಿತ್ತು ‘ಮಾನ್ಸೂನ್ ಇಸ್ಲಾಮಿ’ನ ನೈತಿಕ ಮತ್ತು ಸಾಂಸ್ಥಿಕ ಬೆಳವಣಿಗೆಯು ಮುಂದುವರೆಯುವುದು. ಧರ್ಮಗ್ರಂಥಗಳಿಗನುಸಾರವಾಗಿ ಮುನ್ನಡೆಯುವ ಯಾವುದೇ ಇತರ ಧರ್ಮಗಳಂತೆಯೇ ಪವಿತ್ರ ಇಸ್ಲಾಮನ್ನು ನಿರ್ವಹಿಸಲು ಮತ್ತು ಪ್ರಚಾರ ಮಾಡಲು ಬಲವಾದ ಕೇಂದ್ರಗಳ ಅಗತ್ಯವಿದೆ ಎಂಬುದಾಗಿ ಹಿಂದೂ ಮಹಾಸಾಗರದ ಕರಾವಳಿ ಪ್ರದೇಶದಲ್ಲಿ ಇಸ್ಲಾಮೀಕರಣದ ಕುರಿತಾದ ತಮ್ಮ ಸಮೀಕ್ಷೆಯಲ್ಲಿ ‘ಜಾನ್ ಈಸ್ಟರ್ ಮ್ಯಾನ್’ ಪ್ರತಿಪಾದಿಸುವುದಾಗಿ ಕಾಣಬಹುದು.
ಇದರ ಹೊರತು ಇಸ್ಲಾಮಿಕ್ ಕಲಿಕೆಯ ಪರಂಪರಾಗತ ಅಧ್ಯಯನ ಕೇಂದ್ರಗಳಾದ ಮಕ್ಕಾ , ಕೈರೊ, ಸಮರಕಂದ್, ದೆಹಲಿ ಮುಂತಾದ ಕಡೆಗಳಿಗೆ ನಾವು ಚಿತ್ತ ಹಾಯಿಸಿದರೆ ಹಿಂದೂ ಮಹಾಸಾಗರದಾದ್ಯಂತ ಜ್ಞಾನ ಪಯಣ ಬೆಳೆಸಿದ ವಿದ್ವಾಂಸರು ಮತ್ತು ಸೂಫಿ ಸಂತರ ಇತಿಹಾಸವು ಹೆಚ್ಚು ದಾಖಲಾಗಿರುವುದಾಗಿ ಕಂಡುಬರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ವಿದ್ವಾಂಸರ ಈ ಪಾಂಡಿತ್ಯ ಪೂರ್ಣ ಪಥಗಳು ಜ್ಞಾನ ಮತ್ತು ಅಧಿಕಾರದ ಸಾಂಪ್ರದಾಯಿಕ ಮಟ್ಟಗಳನ್ನು ಪೂರೈಸುತ್ತದೆ. ಆದರೆ, ಅವರ ಅಧ್ಯಯನಗಳು ಮತ್ತು ಬೋಧನೆಗಳೆಲ್ಲವನ್ನು ನಿರ್ವಹಿಸಿದ್ದು ಈ ವಿಶಾಲ ಪ್ರಪಂಚ, ಅದರೊಳಗಿನ ಅವಕಾಗಳು ಮತ್ತು ಸವಾಲುಗಳಾಗಿದ್ದವು. ಈ ಕಾರಣಕ್ಕೆ ಏಶ್ಯದಲ್ಲಿ ಇಸ್ಲಾಮಿನ ಅಸ್ತಿತ್ವ , ವಿಕಾಸ , ಪ್ರಸರಣೆಯ ಕುರಿತಾದ ಪರ್ಯಾಯ ಇತಿಹಾಸವನ್ನು ಹೆಣೆಯಲೂ ಸಾಧ್ಯವಿದೆ.
16ನೇ ಶತಮಾನದವರೆಗೆ ಮಲಬಾರಿ ವಿದ್ವಾಂಸರು ಇಲ್ಲಿ ಒಂದು ವಿಶಿಷ್ಟವಾದ ಅರಬ್ ಗುರುತನ್ನು ಉಳಿಸಿಕೊಂಡಿದ್ದರು ಎಂಬುದನ್ನು ಈ ಚರಿತ್ರೆಯ ಆಧಾರದ ಮೇಲೆ ಊಹಿಸಬಹುದು. ಈ ರೀತಿಯ ಅವರ ಅಂತರ್- ಸಾಗರ ಸಂಪರ್ಕಗಳು ವಂಶಾವಳಿಯನ್ನು ಮೀರಿ ಬೆಳೆದು ತಲೆಮಾರುಗಳವರೆಗೆ ನಿರ್ವಹಿಸಲ್ಪಟ್ಟವು. ಹಜ್ಜಿಗಾಗಿ ಹೊರಟ ಮಕ್ಕಾದೆಡೆಗಿನ ತೀರ್ಥಯಾತ್ರೆಗಳು ಅಂತಹ ಪಂಡಿತರುಗಳೊಂದಿಗಿನ ವಿದ್ವತ್ಪೂರ್ಣ ಸಂಪರ್ಕಗಳನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಚೇರುಮಾನ್ ಪೆರುಮಾಳ್ ಅವರು ಹಜ್ ಯಾತ್ರಿಕರ ಗುಂಪಿನಿಂದ ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಂಡರೆಂದೂ ನಂತರ ಮದೀನಾಕ್ಕೆ ತೆರಳಿ ಪ್ರವಾದಿ (ಸ) ರನ್ನು ಭೇಟಿಯಾಗಲು ತಮ್ಮದೇ ಆದ ಗುಂಪೊಂದನ್ನು ಆಯೋಜಿಸಿದರೆಂದೂ ಇತಿಹಾಸದಲ್ಲಿ ಕಾಣಬಹುದು.
ಸಮರ್ಥ ಮುಸಲ್ಮಾನನ ಮೇಲೆ ಕಡ್ಡಾಯವಾದ ಮತ್ತು ಇಸ್ಲಾಂ ಧರ್ಮದ ಪಂಚಸ್ತಂಭಗಳ ಪೈಕಿ ಒಂದಾದ ಆರಾಧನಾ ಕರ್ಮವಾಗಿದೆ ಹಜ್. ಇಸ್ಲಾಂ ಧರ್ಮದ ಆದಿಕಾಲದಿಂದಲೂ ಹಜ್ ಯಾತ್ರೆಯು ವಾಣಿಜ್ಯ ಮತ್ತು ವ್ಯಾಪಾರದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ‘ಹಜ್ ವ ಹಾಜ್ಜ’ (ಹಜ್ ಮತ್ತು ವ್ಯಾಪಾರ) ಎಂಬ ಅರಬಿ ಗಾದೆಯು ಇದಕ್ಕಿರುವ ಪುರಾವೆಯಾಗಿದೆ. ಪ್ರತಿ ವರ್ಷ ಹಜ್ ಸಮಯದಲ್ಲಿ ಮಕ್ಕಾ ನಗರವು ಒಂದು ಅಂತಾರಾಷ್ಟ್ರೀಯ ವಾಣಿಜ್ಯ ಕೇಂದ್ರವಾಗಿ ಬದಲಾಗುತ್ತದೆ. ಗಣನೀಯ ಸುಂಕವನ್ನು ಪಾವತಿಸಿ ಬೃಹತ್ ಪ್ರಮಾಣದ ಸರಕುಗಳನ್ನು ಕಟ್ಟಿಕೊಂಡು ದಕ್ಷಿಣ ಏಶ್ಯದಿಂದ ಸಮುದ್ರದ ಮೂಲಕ ಹಡಗುಗಳಲ್ಲಿ ಬಂದು ಸೇರುವ ಯಾತ್ರಾರ್ಥಿಗಳು ಅವರಲ್ಲಿ ಪ್ರಮುಖರು. ಅನೇಕರಿಗೆ ಹಜ್ ಒಂದು ಆಧ್ಯಾತ್ಮಿಕ ಕರೆಯಾಗುವುದರ ಜೊತೆಗೆ ವ್ಯಾಪಾರದ ಅವಕಾಶವೂ ಆಗಿ ಪರಿಣಮಿಸಿತು. ಸಮುದ್ರದ ಮೂಲಕ ಮಾಡುವ ಪ್ರಯಾಣಗಳು ಹೆಚ್ಚಾಗಿ ಮುಸ್ಲಿಂ ಒಡೆತನದ ಹಡಗುಗಳಲ್ಲಿ ವಿಶೇಷವಾಗಿ ಸಿಧ್ಧಪಡಿಸಲಾದ ವ್ಯಾಪಾರ ಮಾರ್ಗಗಳಲ್ಲಾಗಿತ್ತು. ‘ಮಲಬಾರ್’ ಸಮುದ್ರ ವ್ಯಾಪಾರ ಜಾಲಗಳಲ್ಲಿ ಕೇಂದ್ರ ಬಿಂದುವಾಗಿದ್ದ ಕಾರಣ ಬಂಗಾಳ ಕೊಲ್ಲಿ, ಆಗ್ನೇಯ ಏಶ್ಯ, ಚೀನದಂತಹ ಪ್ರದೇಶಗಳ ಮುಸ್ಲಿಮರು ಸೇರಿದಂತೆ ಇತರ ಯಾತ್ರಿಕರ ಸಂಚಾರಕ್ಕೆ ಕರೆ ನೀಡುವ ಪ್ರಮುಖ ಬಂದರಾಗಿತ್ತು. ಆದ್ದರಿಂದಲೇ ಸಮುದ್ರದ ಮೂಲಕ ಹಜ್ಜಿಗೆ ತೆರಳಿದ್ದ ಧರ್ಮಪಂಡಿತರು, ಸಮಕಾಲೀನರು ಮತ್ತು ಇತರ ವಿದ್ವಾಂಸರೊಂದಿಗೆ ಮಲಬಾರ್ ಕರಾವಳಿಯ ಮುಸ್ಲಿಂ ವಿದ್ವಾಂಸರು ಸಂಪರ್ಕವನ್ನು ಇಟ್ಟುಕೊಂಡಿದ್ದರು. ನೇರ ಸಂವಹನಗಳ ಮೂಲಕ ಅಥವಾ ಯಾತ್ರಿಕರ ಮೂಲಕ ಜ್ಞಾನ ಪ್ರಸಾರ ಮತ್ತು ಗ್ರಂಥ ವಿನಿಮಯಗಳನ್ನು ಮಾಡತೊಡಗಿದರು.
ವಿದ್ವಾಂಸರ ಮಟ್ಟಿಗೆ ಹಜ್ ಒಂದು ದೈವೀಸ್ಮರಣೆಯೆಡೆಗಿನ ಓಟವಾಗುವುದರೊಂದಿಗೆ ಹಿಜಾಝ್, ಈಜಿಪ್ಟ್ ಮೊದಲಾದ ಇಸ್ಲಾಮಿಕ್ ಜ್ಞಾನ ಕೇಂದ್ರಗಳಲ್ಲಿ ವಿದ್ಯಾರ್ಜಿಸಲು ಅವಕಾಶವೂ ಆಗಿತ್ತು. ಶೈಖ್ ಝೈನುದ್ದೀನ್ ಮಖ್ದೂಮರ ಮುತ್ತಾತ ಝೈನುಲ್ ಆಬಿದೀನ್ ಅಲಿ ಎಂಬವರು ಈಜಿಪ್ಟ್ ಮತ್ತು ಅರೇಬಿಯಕ್ಕೆ ಉನ್ನತ ಧಾರ್ಮಿಕ ಅಧ್ಯಯನಕ್ಕಾಗಿ ಹೋಗಿದ್ದರು. ಅದೇ ರೀತಿ ಮೊಮ್ಮಗ ಮಕ್ಕಾದಲ್ಲಿ ಪ್ರಸಿದ್ಧ ಶಾಫಿಈ ವಿದ್ವಾಂಸ ಇಬ್ನ್ ಹಜರ್ ಅಲ್- ಹೈತಮಿಯವರ ಬಳಿ ಅಧ್ಯಯನ ಮಾಡಿದ್ದರೆಂದು ಚರಿತ್ರೆಯ ಪುಟಗಳು ಸೂಚಿಸುತ್ತದೆ. ಶಾಫಿಈ ಮದ್ಹಬಿನ ಅಗ್ರಗಣ್ಯ ವಿದ್ವಾಂಸ ಮತ್ತು ಕರ್ಮಶಾಸ್ತ್ರ ಅಧ್ಯಯನಗಳಲ್ಲಿಯೇ ಅತ್ಯಂತ ಪ್ರಮುಖ ಗ್ರಂಥವಾದ ‘ತುಹ್ಫಾ’ದ ಕರ್ತೃ ಇಬ್ನ್ ಹಜರ್ 1567 ರಲ್ಲಿ ತಾವು ಮರಣ ಹೊಂದುವವರೆಗೂ ಮಕ್ಕಾದಲ್ಲಿ ವಾಸಿಸುತ್ತಿದ್ದರು. ಶೈಖ್ ಝೈನುದ್ದೀನರು ತಮ್ಮ ಹಜ್ ವೇಳೆಯಲ್ಲಿ ಇಬ್ನ್ ಹಜರರನ್ನು ಭೇಟಿಯಾಗಿ ಅವರ ಅಧ್ಯಯನ ತರಗತಿಗಳಲ್ಲಿ ಹಾಜರಾಗಿದ್ದರು ಎಂದು ಮುಸ್ಲಿಂ ವಿದ್ವಾಂಸರು ದಾಖಲಿಸಿದ್ದಾರೆ.
ಕೇವಲ ಕೆಲವೇ ವರ್ಷಗಳೊಳಗೆ ಇಬ್ನ್ ಹಜರರ ಅಸಂಖ್ಯಾತ ಗ್ರಂಥಗಳ ಪ್ರತಿಗಳು ದೂರದೆಲ್ಲೆಡೆ ಹರಡಿತು. 1604ರ ವೇಳೆ ಗುಜರಾತಿನಲ್ಲಿ ರಚಿತವಾದ ಅರೇಬಿಕ್ ಗ್ರಂಥವು ಭಾರತದಲ್ಲಿ ಅವರ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಹೇತುವಾಗುತ್ತದೆ. ಅದರಲ್ಲಿ ಪ್ರಪಂಚದ ವಿವಿಧ ಭಾಗಗಳಿಂದ ಸಹಸ್ರಾರು ವಿದ್ವಾಂಸರು ಅಧ್ಯಯನ ನಿಮಿತ್ತ ಅವರ ಬಳಿ ತೆರಳಿದ್ದರೆಂದು ಉಲ್ಲೇಖಿತವಾಗಿದೆ. ಯೆಮೆನಿನ ಸಮುದ್ರ ವ್ಯಾಪಾರಗಳ ಮೂಲಕವಾಗಿತ್ತು ಅವರ ಬರಹಗಳು ಮಲಬಾರ್ ತಲುಪುವುದು. ಯೆಮೆನಿನ ಧರ್ಮ ಸಂಬಂಧಿತ ವಿಚಾರಗಳಲ್ಲಿ ಬಹಳ ಜನಪ್ರಿಯತೆಯನ್ನು ಪಡೆದ ಗ್ರಂಥವಾಗಿದೆ ಇಬ್ನ್ ಹಜರರ ‘ತುಹ್ಫಾ’. ಶೈಖ್ ಮಖ್ದೂಮರ ‘ಫತ್ಹುಲ್ ಮುಈನ್’ ಗ್ರಂಥದ ರಚನೆಯಲ್ಲೂ ತುಹ್ಫಾ ಆಳವಾದ ಪ್ರಭಾವವನ್ನು ಬೀರಿದೆ ಎಂಬುದು ಸ್ಪಷ್ಟವಾಗಿದೆ.
ಇಬ್ನ್ ಹಜರರ ಫತ್ವಾ (ಕರ್ಮಶಾಸ್ತ್ರ ಸಂಬಂಧಿತ ಪ್ರಶ್ನೆಗಳಿಗೆ ಬರವಣಿಗೆ ಅಥವಾ ಮಾತಿನ ಮೂಲಕ ಉತ್ತರಿಸುವ ಪ್ರಕ್ರಿಯೆ.) ಸಂಗ್ರಹದಲ್ಲಿ ಮಲಬಾರಿನಿಂದ ಕಳುಹಿಸಲಾದ ಪ್ರಶ್ನೆ ಇದೆಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಅರೇಬಿಕ್ ಭಾಷೆಯ ಅಸಮರ್ಪಕತೆಯ ಕಾರಣದಿಂದ ವಿಚ್ಛೇದನ (ತಲಾಖ್) ವಾಕ್ಯವನ್ನು ಅವ್ಯಕ್ತವಾಗಿ ಉಚ್ಛರಿಸಿದರೆ ಅದು ಸ್ವೀಕಾರಾರ್ಹವೇ ಎಂಬುದು ಆ ಗಮನಾರ್ಹವಾದ ಪ್ರಶ್ನೆ. ಅರೇಬಿಯೇತರ ಗ್ರಂಥಗಳಲ್ಲಿ ಎಲ್ಲಿಯೂ ಈ ರೀತಿಯ ವಿಷಯಗಳು ಚರ್ಚೆಗೊಳಪಟ್ಟು ಲಭ್ಯವಿಲ್ಲದ ಕಾರಣ ಮಲಬಾರಿ ಪಂಡಿತರನ್ನು ಇದು ಸೈದ್ಧಾಂತಿಕವಾಗಿ ಸಂಕಷ್ಟಕ್ಕೀಡು ಮಾಡಿತ್ತು ಎಂಬುದು ಸ್ಪಷ್ಟವಾಗುತ್ತದೆ.
ತನ್ನ ಈ ಹಿಂದಿನ ಗುರುಗಳಿಂದ ಈ ವಿಚಾರದ ಬಗ್ಗೆ ಅಧಿಕೃತ ತೀರ್ಪು ಪಡೆಯಲು ಶೈಖ್ ಝೈನುದ್ದೀನ್ ಮಖ್ದೂಮರು ಈ ಪ್ರಶ್ನೆಯನ್ನು ಅಲ್ಲಿಗೆ ಕಳುಹಿಸಿದರು ಎಂದು ಊಹಿಸಲಾಗಿದೆ. ಆದರೆ ದುರದೃಷ್ಟವೆಂದರೆ ಈ ಊಹೆಯಲ್ಲಿ ನಮಗೆ ಯಾವುದೇ ಐತಿಹಾಸಿಕ ಪುರಾವೆಗಳು ಲಭ್ಯವಿಲ್ಲ.
ಇಸ್ಲಾಮಿಕ್ ಜ್ಞಾನ ಕೇಂದ್ರಗಳ ಅಧ್ಯಯನ ಸರಣಿಗಳು ಹಜ್ಜ್ ಹೊರತುಪಡಿಸಿ ಮಕ್ಕಾದ ಸುತ್ತಲಿನ ವಿದ್ವತ್ಪೂರ್ಣ ವಿನಿಮಯಗಳಿಗೆ , ಮುಸ್ಲಿಂ ವಿದ್ವಾಂಸರ ಪ್ರವಾಸಗಳಿಗೆ ಮತ್ತು ಸೈದ್ಧಾಂತಿಕ ಸಂವಹನಗಳಿಗೆ ಹೆಚ್ಚು ಒತ್ತು ನೀಡಿಲ್ಲ. ದಾರುಲ್ ಇಸ್ಲಾಮಿನ ಹೊರಗಿನ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ‘ಶರೀಅತ್’ ಬಗ್ಗೆ ತಿಳಿಯಲು ಮತ್ತು ಆ ಮೂಲಕ ಸ್ಥಳೀಯವಾಗಿ ಇಸ್ಲಾಂ ಅನುಕರಿಸಿ ಜೀವಿಸಲು ಶೈಖ್ ಮಖ್ದೂಮರ ಫತ್ಹುಲ್ ಮುಈನ್ ಗ್ರಂಥವು ಸಾಫಲ್ಯತೆಯೆಡೆಗಿನ ಹಾದಿ ಹಿಡಿಯಿತು. ತುಲನಾತ್ಮಕ ಕಾನೂನು ಸಮಸ್ಯೆಗಳು ಅಥವಾ ಸಾಮಾಜಿಕ ದ್ವಂದ್ವತೆಯನ್ನು ಎದುರಿಸುತ್ತಿರುವ ಹಿಂದೂ ಮಹಾಸಾಗರದ ತೀರ ಪ್ರದೇಶಗಳೊಂದಿಗೆ ಸಂಪರ್ಕವನ್ನು ಹೊಂದಿರುವ ಇತರ ದೇಶಗಳಲ್ಲಿನ ಮುಸ್ಲಿಮರು ಸಹ ಫತ್ಹುಲ್ ಮುಈನ್ ಮೂಲಕ ಪರಿಹಾರಗಳನ್ನು ಹುಡುಕಲು ಪ್ರಾರಂಭಿಸಿದರು. ಆಗ್ನೇಯ ಏಶ್ಯದ ಮುಸ್ಲಿಂ ಸಮುದಾಯಗಳೆಡೆಯಲ್ಲಿ ಈ ಗ್ರಂಥವು ಹೆಚ್ಚು ಪ್ರಭಾವಶಾಲಿಯಾದಷ್ಟು ಮಲಬಾರ್ ಮತ್ತು ಆ ಪ್ರದೇಶಗಳ ನಡುವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ತುಲನಾತ್ಮಕ ಪರಿಸ್ಥಿತಿಗಳು ಹಾಗೂ ವ್ಯಾಪಾರ ಸಂಬಂಧಗಳಿಗಿರುವ ಸಾಕ್ಷಿಯಾಗುವುದಕ್ಕಿಂತಲೂ ಹೆಚ್ಚಾಗಿ ಮಖ್ದೂಮರನ್ನು ಓರ್ವ ಸಮರ್ಥ ವಿದ್ವಾಂಸರು ಎಂದು ಪರಿಗಣಿಸಲು ಕಾರಣವಾಯಿತು.
ತಲಾಖ್, ಪರಸ್ಪರ ಹೇಳುವ ಸಲಾಮ್ ಮೊದಲಾದ ಕರ್ಮಶಾಸ್ತ್ರ ಸಂಬಂಧಿತ ಪ್ರಶ್ನೆಗಳು ಮಾತ್ರವಾಗಿರಲಿಲ್ಲ ಧಾರ್ಮಿಕ ಅಸ್ತಿತ್ವದ ಪ್ರಶ್ನೆಗಳೂ ಸಮುದ್ರ ದಾಟಿ ಪ್ರಯಾಣ ಬೆಳೆಸಿದ್ದವು. ಮಲಬಾರ್ ಕರಾವಳಿಯಲ್ಲಿ ಕ್ರಿಯಾಶೀಲರಾಗಿದ್ದ ಧಾರ್ಮಿಕ ವಿದ್ವಾಂಸರನ್ನು ಗಮನಿಸಿದರೆ ಅವರ ವಿದ್ವತ್ ಮೂಲಗಳು ಎಷ್ಟು ವೈವಿಧ್ಯಮಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅಂತಹ ವಿವರಗಳನ್ನು ದಾಖಲಿಸುವಲ್ಲಿ ಆಸ್ಥೆ ಮತ್ತು ಸೂಕ್ಷ್ಮತೆಯನ್ನು ಪಾಲಿಸುವ ಇಬ್ನು ಬತೂತ ಮಲಬಾರಿ ವಿದ್ವಾಂಸರ ಹಿನ್ನೆಲೆಯನ್ನು ಅವರ ಬರಹಗಳಲ್ಲಿ ವ್ಯಾಪಕವಾಗಿ ದಾಖಲಿಸಿದ್ದಾರೆ. ಉದಾಹರಣೆಗೆ , ‘ಮಾಡಾ’ ಎಂಬ ಸ್ಥಳದಲ್ಲಿ ತಾನು ಈ ಹಿಂದೆ ಭೇಟಿ ನೀಡಿದ್ದ ಮೊಗಾದಿಪುವಿನ ಒಬ್ಬರು ಧಾರ್ಮಿಕ ವಿದ್ವಾಂಸರನ್ನು ಅವರು ಭೇಟಿಯಾದರು. ಪೂರ್ವ ಆಫ್ರಿಕಾದ ಕರಾವಳಿಯ ಪ್ರಮುಖ ಸುಲ್ತಾನರ ರಾಜಧಾನಿ ಮತ್ತು ಹಿಂದೂ ಮಹಾಸಾಗರದ ಶ್ರೀಮಂತ ವ್ಯಾಪಾರಿ ಬಂದರುಗಳಲ್ಲೊಂದಾಗಿತ್ತು ಮೊಗಾದಿಪು. ತನ್ನ ಜನ್ಮಭೂಮಿಯನ್ನು ತೊರೆದ ನಂತರ ಈ ಧರ್ಮನಿಷ್ಠ ಕರ್ಮಶಾಸ್ತ್ರ ವಿದ್ವಾಂಸರು ಸುಮಾರು ದಶಕಗಳ ಕಾಲ ಮಕ್ಕಾ ಮತ್ತು ಮದೀನಾದಲ್ಲಿ ಅಧ್ಯಯನ ಮಾಡಿ ಮಲಬಾರಿನಲ್ಲಿ ನೆಲೆಸುವುದಕ್ಕಿಂತ ಮೊದಲು ಚೀನದವರೆಗೆ ಪ್ರಯಾಣಿಸಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ. ಮಲಬಾರ್ ಕರಾವಳಿಯಲ್ಲಿ ನೆಲೆಸಿದ ಇನ್ನೊಬ್ಬ ಮುಸ್ಲಿಂ ವಿದ್ವಾಂಸರ ದಾಖಲೆಗಳು ಮಾನ್ಸೂನ್ ಇಸ್ಲಾಮಿನ ಇನ್ನೊಂದು ಭಾಗವನ್ನು ಪ್ರತಿನಿಧಿಸುತ್ತದೆ.
ಕೇರಳದ ಕಲ್ಲಿಕೋಟೆಯ ದಕ್ಷಿಣಕ್ಕಿರುವ ಚಾಲಿಯಂ ಎಂಬಲ್ಲಿನ ಒಂದು ಮಸೀದಿಯ ವಕ್ಫ್ ಪತ್ರವು ಸ್ಥಳೀಯ ಮಸೀದಿಯ ಭೂ ಮಾಲೀಕತ್ವವನ್ನು ಈ ಕೆಳಗಿನಂತೆ ವ್ಯಾಖ್ಯಾನಿಸುತ್ತದೆ: ” ಫಖೀಹ್ ಅಹ್ಮದ್ ಬಿನ್ ಉಮರ್ ಅಲ್- ಸೈತೂನಿಯವರ ಮನೆಯವರೆಗೆ.” ಇಸ್ಲಾಮಿಕ್ ಕರ್ಮಶಾಸ್ತ್ರದಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ವಿದ್ವಾಂಸನನ್ನು ‘ಫಖೀಹ್’ ಎಂದು ಸಂಬೋಧಿಸುವುದಿದೆ. ಅದೇ ರೀತಿ ಈ ಮನೆಯ ಯಜಮಾನನ ‘ನಿಸಬಾ’ (ವ್ಯಕ್ತಿಯ ಹೆಸರಿಗೆ ಸೇರಿಸಿ ಕರೆಯುವುದು) ಆಗಿರುವ ಸೈತೂನೀ ಎಂಬ ಪದವು ಚೈನೀಸ್ ಬಂದರು ನಗರವಾದ ‘ಗ್ಯಾಂಗಷ್ಠಾ’ (ಅರೇಬಿಯಲ್ಲಿ ಇದು ಸೈತೂನ್ ಎಂದು ಹೆಸರುವಾಸಿಯಾಗಿದೆ) ಎಂಬ ಪ್ರದೇಶದೊಂದಿಗಿನ ಅವರ ಜನ್ಮ ಅಥವಾ ಇನ್ನಾವುದೇ ರೀತಿಯಲ್ಲಿನ ಸಂಬಂಧವನ್ನು ಸೂಚಿಸುತ್ತದೆ. ಈ ನಗರವು ಆ ಕಾಲದ ಮುಸ್ಲಿಂ ಕಾಳು ಮೆಣಸು ವ್ಯಾಪಾರ ಜಾಲದ ಪೂರ್ವದ ತುದಿಯೂ ಆಗಿತ್ತು. ಮಸೀದಿಯ ಪಕ್ಕದಲ್ಲಿರುವ ಈ ಮನೆಯು ಅಕ್ಷರಶಃ ಮಾನ್ಸೂನ್ ಇಸ್ಲಾಮಿನ ಹೆಗ್ಗುರುತಾಗಿದೆ ಮತ್ತು ಅಲ್ಲಿ ವಾಸಿಸುತ್ತಿದ್ದ ಆ ಫಖೀಹ್ ಮುಸ್ಲಿಂ ಸಮುದಾಯದ ನ್ಯಾಯಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದರು ಎಂಬುದನ್ನು ಇದು ತಿಳಿಸುತ್ತದೆ.
ಈ ರೀತಿ ‘ನಿಸಬಾ’ಗಳನ್ನೂ ಎಚ್ಚರಿಕೆಯಿಂದ ಸಾಕ್ಷಿಗಳಾಗಿ ಬಳಸುವ ಅನಿವಾರ್ಯತೆಯಿದೆ. ಮುಂದೆ ಇಂತಹ ಪದ ಸೂಚಿಗಳು ಮಲಬಾರ್ ವಿದ್ವಾಂಸರ ಸಾರ್ವತ್ರಿಕ ವ್ಯವಸ್ಥೆ ಮತ್ತು ಸಾಗರ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಇರುವ ಸೂಚಕಗಳಾಗಿ ಉಪಯುಕ್ತವಾಗಲೂಬಹುದು.
ಸೆಬಾಸ್ಟಿಯನ್ ಆರ್. ಪ್ರಾಂಗ್
ಕನ್ನಡಕ್ಕೆ: ಅಬ್ದುಸ್ಸಲಾಂ ಮಿತ್ತರಾಜೆ ಸಾಲೆತ್ತೂರು
ಸೆಬಾಸ್ಟಿಯನ್ ಆರ್. ಪ್ರಾಂಗ್ ಬರೆದ Monsoon Islam: Trade and Faith on the Medieval Malabar Coast (Cambridge University press- 2018) ಎಂಬ ಪುಸ್ತಕದ ಒಂದು ಅಧ್ಯಾಯದ ಸಂಗ್ರಹಾನುವಾದ.
ಸೆಬಾಸ್ಟಿಯನ್ ಆರ್. ಪ್ರಾಂಗ್
Historian and academic, known for his studies on the medieval Indian Ocean world. He is best known as the author of Monsoon Islam: Trade and Faith on the Medieval Malabar Coast. Prange studied at Goldsmiths and London School of Economics, University of London.