ಮಲಾಯ್ ದ್ವೀಪಗಳಲ್ಲಿ ಹರಡಿದ ಮಲಬಾರಿ ಬೇರು

ಆಧುನಿಕ ಮಲೇಷ್ಯಾದ ರಾಜಧಾನಿ ನಗರ ಕೌಲಾಲಂಪುರ್‌ನಿಂದ ಸ್ವಲ್ಪ ದೂರದಲ್ಲಿ ‘ದಾರು ತರೀಂ’ ಸಂಸ್ಥೆ ಇದೆ. ವಿಶ್ವಪ್ರಸಿದ್ಧ ಸುನ್ನಿ ವಿದ್ವಾಂಸ ಯೆಮನಿನ ಹಬೀಬ್ ಉಮರ್ ಬಿನ್ ಹಾಫಿಝ್‌ ರ ಪ್ರಮುಖ ಶಿಷ್ಯರಾದ ಹಬೀಬ್ ಮಹದಿ ಅಬೂಬಕರ್ ಹಮ್ದಿಯವರ ಈ ಸಂಸ್ಥೆಯಲ್ಲಿ ಪವಿತ್ರ ಕುರ್ಆನ್ ಕಲಿಯುವ ವಿದ್ಯಾರ್ಥಿಗಳಿದ್ದಾರೆ. ಅಂದು ಸಂಸ್ಥೆಯ ಮಕ್ಕಳನ್ನು ಭೇಟಿ ಮಾಡಲು ಕೇರಳದ ಸೈಯದ್ ಇಬ್ರಾಹಿಂ ಖಲೀಲುಲ್ ಬುಖಾರಿ ಆಗಮಿಸುತ್ತಿರುವುದರಿಂದ ಅದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತಿತ್ತು. ಸಂಸ್ಥೆಯ ಆಡಳಿತಾಧಿಕಾರಿಗಳಲ್ಲಿ ಕೇರಳದ ಅಧ್ಯಾಪಕರೂ ಇದ್ದರು. ಅರೇಬಿಕ್ ಭಾಷೆಯಲ್ಲಿ ಮಾತನಾಡುವ ಅತಿಥಿಗಳ ಉಪನ್ಯಾಸಗಳನ್ನು ಮಲಾಯಿ ಭಾಷೆಗೆ ತರ್ಜುಮೆ ಮಾಡಲಾಗುತಿತ್ತು. ಸ್ವತಃ ಮಲೇಷಿಯ ಸ್ವದೇಶಿಯಾಗಿರುವ, ಪ್ರಮುಖ ಸುನ್ನಿ ವಿದ್ವಾಂಸ ಬಶೀರ್ ಅಝ್‌ಹರಿ ಅರೇಬಿಕ್ ಭಾಷೆಯಿಂದ ಮಲಾಯಿ ಭಾಷೆಗೆ ತರ್ಜುಮೆ ಮಾಡುತಿದ್ದರು.

ಮುಸ್ಲಿಮರ ವಿಶೇಷ ದಿನಗಳಲ್ಲಿ, ಅಲ್ಲಿನ ಮಾಧ್ಯಮಗಳಲ್ಲಿ ಬಶೀರ್ ಅಝ್‌ಹರಿ ಅವರ ಮಲಾಯಿ ಭಾಷೆಯಲ್ಲಿನ ಭಾಷಣವಿರುತ್ತದೆ. ಕಾರ್ಯಕ್ರಮದ ನಂತರ ಒಂದು ಸಂದರ್ಭದಲ್ಲಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ತಂದೆ ತಾಯಿಯರು ಮಲಪ್ಪುರಂ ಜಿಲ್ಲೆಯವರು. ಅವರಲ್ಲಿ ಕೆಲವರು ಮಲೇಷ್ಯಾಕ್ಕೆ ಬಂದು ಇಲ್ಲಿ ನೆಲೆಸಿದರು. ಬಶೀರ್ ಅಝ್ಅರಿ ಮಲಾಯ್ ಭಾಷೆ ಮಿಶ್ರಿತ ಆಗುತ್ತಿದ್ದರೂ ಮಲಯಾಳಂ ಭಾಷೆಯೇ ಆಗಿತ್ತು ಅವರು ಮಾತನಾಡುತ್ತಿದ್ದದ್ದು. ಅವರು ಮಲೇಷಿಯಾ ಮತ್ತು ಸಿಂಗಾಪುರದಾದ್ಯಂತ ಹರಡಿರುವ ‘ಮಲಬಾರಿ’ ಸಮುದಾಯದ ಇವರೂ ಕೂಡಾ ಓರ್ವ ಸದಸ್ಯ. ಕೇರಳದಿಂದ ಮಲಾಯ್ ದ್ವೀಪಗಳಲ್ಲಿ ಶಾಶ್ವತವಾಗಿ ವಾಸಿಸುವ ನಿವಾಸಿ ಮತ್ತು ಮಲಾಯ್ ಪೌರತ್ವವಿರುವ ಮಲಯಾಳಿ ಪ್ರಜೆಗಳನ್ನು ಹಾಗೂ ವಿಶೇಷವಾಗಿ ಮಧ್ಯ ಕೇರಳದಿಂದ ವಲಸೆ ಹೋದವರನ್ನು ‘ಮಲಬಾರಿಗಳು’ ಎಂದೇ ಇಲ್ಲಿ ಕರೆಯಲಾಗುತ್ತದೆ.

1920 ರ ದಶಕದಲ್ಲಿಯೇ ಕೇರಳದಿಂದ ಮಲಾಯ್ ದ್ವೀಪಗಳಿಗಿರುವ ವಲಸೆ ಪ್ರಾರಂಭವಾಗಿತ್ತು.

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ವ್ಯವಹಾರಗಳಿಂದ ಹಿಡಿದು ತಾಳೆಕೃಷಿ ಕೆಲಸ ಮಾಡುವ ಜನರು ಕೂಡ ಕೇರಳದಿಂದ ಇಲ್ಲಿಗೆ ಬರುತ್ತಿದ್ದರು. ನಂತರದ ಮಲಬಾರಿಗಳು ಉನ್ನತ ಸರ್ಕಾರಿ ಉದ್ಯೋಗಗಳು ಮತ್ತು ಇತರ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಗಳನ್ನು ಹುಡುಕಿಕೊಂಡು ಮಲಾಯ್ ದ್ವೀಪಗಳಿಗೆ ಪ್ರಯಾಣ ಬೆಳಸುತಿದ್ದರು. ಈ ಪ್ರದೇಶದ ಜನರು ಇಂದಿನ ಮ್ಯಾನ್ಮಾರ್‌ನ (ಹಳೆಯ ಬರ್ಮಾ ರಾಜಧಾನಿ) ರಂಗೂನಿಗೆ ಕೂಡ ಹೋಗುತಿದ್ದರು. ಒಟ್ಟಿನಲ್ಲಿ ಮಲೇಷ್ಯಾ ಒಳಗೊಂಡ ಮಲಾಯ್ ದ್ವೀಪಗಳಲ್ಲಿನ ಪ್ರಮುಖ ಜನಸಮೂಹವಾಗಿ ಮಲಬಾರಿಗಳು ಬದಲಾದರು. ವ್ಯವಸಾಯ, ಕೃಷಿ, ಉದ್ಯೋಗ, ರಾಜಕೀಯ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಮಲಬಾರಿಗಳು ಸಕ್ರಿಯರಾಗಿದ್ದಾರೆ.

ಹಾಜಿ ಪಿ.ಕೆ. ಕೋಯ ಅವರು ಏಳು ದಶಕಗಳ ಹಿಂದೆ ಸಿಂಗಾಪುರಕ್ಕೆ ಬಂದವರು. ಅವರು ಮೂಲತಃ ಕಣ್ಣೂರಿನವರು. ವಯಸ್ಸು ತೊಂಬತ್ತು ದಾಟಿದೆ. ಪ್ರಸ್ತುತ ಕೌಲಾಲಂಪುರದಿಂದ ಸ್ವಲ್ಪ ದೂರದಲ್ಲಿರುವ ಪೆತಿಲಿಂಗ್ಜಯಾ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ಸಿಂಗಾಪುರದಲ್ಲಿ ಕೆಲಕಾಲ ಕೆಲಸ ಮಾಡಿದ ನಂತರ ಮಲೇಷ್ಯಾಕ್ಕೆ ಬಂದರು. ಅಲ್ಲಿನ ಪೌರತ್ವ ಪಡೆದರು. ಅವರು ಸ್ವದೇಶದಿಂದ ಮದುವೆಯಾಗಿ ಇಲ್ಲಿಗೆ ಬಂದವರು. ಅವರು ತನ್ನ ಮಕ್ಕಳು ಮತ್ತು ಕುಟುಂಬದೊಂದಿಗೆ ಇಲ್ಲಿಯೇ ನೆಲೆಸಿದ್ದಾರೆ. ಈ ಮಧ್ಯೆ, ಅವರು ಇಂಗ್ಲಿಷ್ ಮತ್ತು ಇತರ ಭಾಷೆಗಳನ್ನು ಕಲಿತರು. ಮಾತ್ರವಲ್ಲ, ನ್ಯಾಷನಲ್ ಬ್ಯಾಂಕ್ ಆಫ್ ಮಲೇಷ್ಯಾದಲ್ಲಿ ಕೆಲಸ ಪಡೆದರು. ಮುಖ್ಯ ಲೆಕ್ಕಾಧಿಕಾರಿಯಾಗಿ ನಿವೃತ್ತಿಯಾದ ನಂತರ, ಇಸ್ಲಾಮಿಕ್ ಬುಕ್ ಟ್ರಸ್ಟನ್ನು ಪ್ರಾರಂಭಿಸಿದರು. ಈಗ ಅದಕ್ಕೆ ನಲವತ್ತು ವರ್ಷಗಳು ಕಳೆದಿವೆ. ಇಸ್ಲಾಮಿಕ್ ಇತಿಹಾಸ, ವಿಜ್ಞಾನ ಮತ್ತು ತತ್ತ್ವಶಾಸ್ತ್ರದ ಕ್ಷೇತ್ರಗಳಲ್ಲಿ ಇಂಗ್ಲಿಷ್‌ನಲ್ಲಿ 400 ಕ್ಕೂ ಹೆಚ್ಚು ಗಮನಾರ್ಹ ಪುಸ್ತಕಗಳನ್ನು ಇವರ ʼಇಸ್ಲಾಮಿಕ್ ಬುಕ್ ಟ್ರಸ್ಟ್ʼ ಪ್ರಕಟಿಸಿದೆ.

ಅಧ್ಯಯನದ ಅವಧಿಯಲ್ಲಿ, ಇಸ್ಲಾಮಿಕ್ ಬುಕ್ ಟ್ರಸ್ಟ್ ಪ್ರಕಟಿಸಿದ ಪುಸ್ತಕಗಳು ಅನೇಕ ಜನರ ಕೈಯಿಂದ ಮತ್ತು ಗ್ರಂಥಾಲಯದಿಂದ ನನ್ನ ಕೈ ಸೇರಿತ್ತು, ಅದನ್ನು ಬರೆದದ್ದು ಮಲಯಾಳಿ ಎಂಬುದು ಊಹಿಸಲೂ ಕೂಡ ಸಾಧ್ಯವಾಗಿಲ್ಲ. ಅಷ್ಟು ಸ್ಪಷ್ಟ ಇಂಗ್ಲಿಷ್ ಮತ್ತು ಗಂಭೀರ ವಿಷಯವಾಗಿತ್ತು ಅದು.

ಇಸ್ಲಾಮಿಕ್ ಬುಕ್ ಟ್ರಸ್ಟ್ ಮಲೇಷ್ಯಾದ ಮುಸ್ಲಿಂ ಧಾರ್ಮಿಕ ವ್ಯವಹಾರಗಳ ಮೇಲೆ ಪ್ರಮುಖ ಪ್ರಭಾವ ಬೀರಿದೆ. ಜೀವನ, ಭಾಷೆ ಮತ್ತು ಸಂಸ್ಕೃತಿಯನ್ನು ಹೊಸದೊಂದು ಊರಿಗೆ ಸ್ಥಳಾಂತರಿಸಿದ ದಶಕಗಳ ನಂತರವೂ, ಹಳೆಯ ಮಲಬಾರಿ ಸಂಪ್ರದಾಯಗಳು ಈಗಲೂ ಕೂಡ ಅನೇಕ ಮಲಬಾರಿ ಕುಟುಂಬಗಳಲ್ಲಿ ಉಳಿದಿವೆ. ಕೋಯ ಸಾಹಿಬ್ ಅವರ ಮನೆಯಲ್ಲಿ ಏರ್ಪಡಿಸಿದ ಚಹಾಕೂಟದ ಸಮಯದಲ್ಲಿ, ಅವರು ಮಲಯಾಳಂ ಮಾತಿನಲ್ಲಿ, ಮಲಬಾರಿನ ಪ್ರಸಿದ್ಧ ತಿಂಡಿ ತಿನಿಸುಗಳನ್ನು ತಿನ್ನುವಾಗ ಕಣ್ಣೂರಿನ ಭಾಷೆ ಇನ್ನೂ ಉಳಿದುಕೊಂಡಿರುವುದನ್ನು ಗಮನಿಸಿದೆ. ಕೋಯಾ ಸಾಹಿಬ್ ಅವರ ಮಗಳು ಸಕಿಯಾ ಕೋಯ ಮಲೇಷ್ಯಾದ ಭ್ರಷ್ಟಾಚಾರ ನಿಗ್ರಹ ದಳದ ಮಾಜಿ ಕಮಿಷನರ್. ವಲಸೆಗಳು ಎಲ್ಲ ರೀತಿಯಲ್ಲೂ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದರೆ, ಜನರು ತಾವು ವಲಸೆ ಬಂದ ಸ್ಥಳಗಳೊಂದಿಗೆ ತಮ್ಮ ಸಂಬಂಧವನ್ನು ಅನೇಕ ರೀತಿಯಲ್ಲಿ ಉಳಿಸಿಕೊಳ್ಳುತ್ತಾರೆ. ಕೆಲವರು ಹಿಂತಿರುಗಲು ಬಯಸಿದರೂ, ಅದು ಸಾಮಾನ್ಯವಾಗಿ ಅಸಾಧ್ಯವಾಗುತ್ತದೆ. ಹಿಂತಿರುಗಿ ಹೋಗದಿದ್ದರೂ, ಹಿಂತಿರುಗುವ ಬಯಕೆಯಿಲ್ಲದಿದ್ದರೂ, ಅವರು ಆಗಾಗ ತಮ್ಮ ತಂದೆ ಮತ್ತು ತಾಯಿಯ ಭೂಮಿಯೊಂದಿಗೆ ಸಂಪ್ರದಾಯದ ಮೂಲಕ ತಮ್ಮ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ. ಮಲಬಾರಿಯ ಮಲೇಷ್ಯಾ ಆರ್ಥೋ ವಿಭಾಗದ ವೈದ್ಯ ಡಾ.ಹಿಶಾಮಿನ ಕುರಿತು ತಿಳಿಯಿತು. ಅವರು ರಚಿಸಿದ ಇ-ಮಲಬಾರಿ ಎಂಬ ವೆಬ್ ಪೋರ್ಟಲ್ ಮಲೇಷ್ಯಾದ ಮಲಬಾರಿಗಳ ಇತಿಹಾಸಕ್ಕೆ ಪ್ರಮುಖ ಮೂಲವಾಗಿದೆ.

ಹಿಶಾಮ್ ಅವರು ಅರೇಬಿಕ್-ಮಲಯಾಳಂ ಭಾಷೆಗೆ ಡಿಜಿಟಲ್ ಫಾಂಟ್ ಅನ್ನು ರಚಿಸಿದ್ದಾರೆಂದು ತಿಳಿಯಿತು. ಕೇರಳದ ಮಲಬಾರಿಗಳು ತಮ್ಮ ಬೇರುಗಳ ಬಗ್ಗೆ ಸಕ್ರಿಯವಾಗಿ ಕಲಿಯದಿರುವ ಸಂದರ್ಭದಲ್ಲಿ, ಅರೇಬಿಕ್ ಮಲಯಾಳಂನ ಮಾಪಿಲ ಸಂಪ್ರದಾಯವನ್ನು ಅಷ್ಟಾಗಿ ಯಾರು ಪರಿಗಣಿಸದ ಸಮಯದಲ್ಲಿ, ತಮ್ಮದೇ ಆದ ಪರಂಪರೆಯನ್ನು ಮತ್ತು ಅದರ ಭಾಷೆಯನ್ನು ವಿಭಿನ್ನ ನೆಲ, ಸಮಾಜ ಮತ್ತು ಸಂಸ್ಕೃತಿಯ ಜನರೆಡೆಯಲ್ಲಿ ಮಲಬಾರಿಗಳು ಪರಿಗಣಿಸುವ ರೀತಿ ಶ್ಲಾಘನೀಯವಾಗಿದೆ. ಮಲೇಷ್ಯಾದಲ್ಲಿರುವ ಮಲಬಾರಿಗಳು ನಮ್ಮಲ್ಲಿನ ಮನೆಯಲ್ಲಿನಂತೆಯೇ ವಿಶೇಷ ಸಂದರ್ಭಗಳಲ್ಲಿ ಶೇಖ್ ಝೈನುದ್ದೀನ್ ಮಖ್ದೂಮ್ ಅವರಿಂದ ಮಂಖುಸ್ ಮೌಲಿದ್ ಪಠಿಸುತ್ತಾರೆ. ಸೀರಣಿ ಸಹ ವಿತರಿಸಲಾಗುತ್ತದೆ.

ಸುರೌ ಮಲಬಾರ್ ಎಂಬುದು ಮಲಬಾರಿಗಳು ನಿರ್ಮಿಸಿದ ಪ್ರಾರ್ಥನಾ ಮಸೀದಿ. ಸಿಂಗಾಪುರದ ಮಲಬಾರ್ ಮಸೀದಿಯಂತೆ ಈ ಮಸೀದಿಯೂ ಮಲೇಷ್ಯಾದ ಮಲಬಾರಿಗಳ ಕೇಂದ್ರವಾಗಿದೆ. ಅದು ಮಾತ್ರವಲ್ಲದೆ ವಿವಿಧ ಪ್ರದೇಶಗಳಲ್ಲಿನ ಮಲಬಾರಿಗಳಿಗೆ ವಿಭಿನ್ನ ಸಂಘಟನೆಗಳಿವೆ.

ಶಿಕ್ಷಣ, ವಸತಿ, ಆರೋಗ್ಯ ಇತ್ಯಾದಿಗಳಿಗೆ ಸಾಮೂಹಿಕ ನೆರವು ನೀಡುವಲ್ಲಿ ಅವರೆಲ್ಲರೂ ಮುಂಚೂಣಿಯಲ್ಲಿದ್ದಾರೆ.

ಮಲಬಾರಿಗಳಂತೆ, ತಮಿಳು ಮಲಾಯ್ ವಂಶಜರು ಮಲೇಷ್ಯಾದಲ್ಲಿನ ಪ್ರಮುಖ ದಕ್ಷಿಣ ಏಷ್ಯಾದ ವಲಸಿಗರು.

ಅವರು ಸಂಖ್ಯೆಯಲ್ಲಿ ಮತ್ತು ಪ್ರಭಾವದಲ್ಲಿ ಮಲಬಾರಿಗಳನ್ನು ಮೀರಿಸಬಹುದು. 20 ನೇ ಶತಮಾನದ ಆರಂಭದಲ್ಲಿ, ಅವರು ಹಿಂದೂ ಮಹಾಸಾಗರವನ್ನು ದಾಟಿ ಮಲಾಯ್ ದ್ವೀಪಗಳಿಗೆ ಲಗ್ಗೆಯಿತ್ತರು. ದಿ ಹಿಂದೂ ಪತ್ರಿಕೆಯ ವರದಿಗಾರ ಮತ್ತು ತಮಿಳು ಮುಸ್ಲಿಂ ಸಂಶೋಧಕ ಕೊಂಬಾಯಿ ಅನ್ವರ್ ಒಮ್ಮೆ ಸೌಹಾರ್ದ ಭಾಷಣದಲ್ಲಿ ʼತಮಿಳುʼ ಮತ್ತು ʼಮಲಯಾಳಂ ಹಳೆಯ ತಮಿಳುʼ ಎಂಬ ದೊಡ್ಡ ವ್ಯವಸ್ಥೆಯ ಎರಡು ಮುಖಗಳು ಎಂದು ಹೇಳಿದ್ದರು. ಮಲಬಾರಿ ಜನರಂತೆ ಅಥವಾ ಅದಕ್ಕಿಂತ ಹೆಚ್ಚು ವಲಸೆ ಬಂದ ನೆಲ ಮತ್ತು ಜನರೊಂದಿಗೆ ತಮಿಳಿಗೆ ಸಂಬಂಧವಿದೆ. ಕೌಲಾಲಂಪುರದ ಹೆಚ್ಚಿನ ಬೀದಿಗಳಲ್ಲಿ ಮಲಬಾರಿಯ ಹೋಟೆಲನ್ನು ಕಾಣಬಹುದು.

ಆದರೆ ಆಹಾರವು ಒಂದು ರಾಷ್ಟ್ರ ಮತ್ತು ಸಂಸ್ಕೃತಿಯೊಂದಿಗೆ ಬೇರೆಯಾಗಿ ನಿಲ್ಲುವುದಕ್ಕೆ ತಮಿಳು ತಿನಿಸುಗಳು ಸಾಕ್ಷಿಯಾಗಿವೆ. ಒಂದು ನೆಲವನ್ನು ಸಂಸ್ಕೃತಿಯಾಗಿ ಪರಿವರ್ತಿಸುವಲ್ಲಿ ಮಲಬಾರ್ ಮತ್ತು ಮಲಬಾರಿ ಜನರು ಪ್ರಮುಖ ಉದಾಹರಣೆಗಳಾಗಿದ್ದಾರೆ. ಜಗತ್ತಿನ ಎಲ್ಲೆಲ್ಲಾ, ಮಲಬಾರಿಗಳು ಹೋಗಿದ್ದಾರೋ ಅಲ್ಲೆಲ್ಲಾ ಇಂತಹ ಮಲಬಾರಿನ ಗ್ರಾಮಗಳು ಕಾಣಸಿಗುತ್ತವೆ. ಮಲೇಷ್ಯಾದ ಮಲಬಾರಿಗಳು ಅವುಗಳಲ್ಲಿ ಅತ್ಯಂತ ಗಮನಾರ್ಹವಾದದ್ದು.

ಮೂಲ : ನೂರುದ್ದೀನ್ ಮುಸ್ತಫಾ
ಅನು : ಎಂ. ನೌಶಾದ್ ಹಸನ್ ನಗರ
ಕೃಪೆ : ರಿಸಾಲ ಅಪ್ಡೇಟ್

Leave a Reply

*