ಮದ್‌ಹಬೇ ಇಷ್ಕ್: ಗಾಢ ಪ್ರೇಮದ ಸೂಫೀ ಹಾದಿ..

ಮಹಾನ್ ಸೂಫಿ ತತ್ವಜ್ಞಾನಿ ಫರೀದುದ್ದೀನ್ ಅತ್ತಾರ್ ರವರು ಪರಿತ್ಯಾಗಿಯೋರ್ವನ ಕನಸನ್ನು ಹೀಗೆ ವಿವರಿಸುತ್ತಾರೆ. ಇದುವರೆಗೆ ಹುಟ್ಟಿರುವ ಮತ್ತು ಇನ್ನೂ ಹುಟ್ಟಲಿರುವ ಎಲ್ಲಾ ಮಾನವರು ಸೃಷ್ಟಿಕರ್ತನ ಮುಂದೆ ಒಟ್ಟುಗೂಡುತ್ತಾರೆ. ಸೃಷ್ಟಿಕರ್ತನು ಅನೇಕ ವಾಗ್ದಾನಗಳನ್ನು ಮಾಡುತ್ತಾನೆ, ಜನರು ತಮಗೆ ಬೇಕಾದುದನ್ನು ಆರಿಸಿಕೊಳ್ಳುವ ಅವಕಾಶವನ್ನೂ ನೀಡುತ್ತಾನೆ.

ಸೃಷ್ಟಿಕರ್ತನು ಕೇಳುತ್ತಾನೆ: “ನಿಮ್ಮಲ್ಲಿ ಯಾರಿಗೆ ಎಲ್ಲಾ ಲೌಕಿಕ ಆಸೆಗಳನ್ನು ಪೂರೈಸಬೇಕು..?” ಹಾಜರಿದ್ದವರಲ್ಲಿ ಶೇಕಡ ತೊಂಬತ್ತು ಮಂದಿ ಅದನ್ನು ಆರಿಸಿಕೊಂಡರು. ಅವರನ್ನು ಹಿಂದಿರುಗಲು ಹೇಳಿದ ನಂತರ, ದೇವನು ಎರಡನೇ ಬಾರಿಗೆ ಕೇಳಿದನು: “ನರಕದ ಶಿಕ್ಷೆಯಿಂದ ಯಾರಿಗೆ ಮೋಕ್ಷ ಬೇಕು..?” ಉಳಿದವರಲ್ಲಿ ತೊಂಬತ್ತರಷ್ಟು ಜನ ಅದನ್ನೇ ಆರಿಸಿಕೊಂಡರು. ಉಳಿದವರೊಂದಿಗೆ ಯಾರಿಗೆಲ್ಲ ಸ್ವರ್ಗ ಬೇಕೆಂದು ಕೇಳಿ, ಮುಂದೆ ಬಂದವರಿಗೆ ದೇವನು ಸ್ವರ್ಗವನ್ನೂ ಕೊಟ್ಟನು.

ಎಲ್ಲವೂ ಮುಗಿದು, ಅಲ್ಲಿ ಕೆಲವೇ ಮಂದಿ ಉಳಿದರು. ಅವರು ಭೌತಿಕ ಆಸೆಗಳು, ನರಕಾಗ್ನಿ ಅಥವಾ ಸ್ವರ್ಗೀಯ ಸಂತೋಷಗಳಿಂದ ಪ್ರಲೋಭನೆಗೆ ಒಳಗಾಗಲಿಲ್ಲ. ಈ ಬಾರಿ ಗುಡುಗಿನಂತೆ ಪ್ರಶ್ನೆ ಬಂದಿತು: “ನಾನು ನಿಮಗೆ ನರಕದಿಂದ ಮೋಕ್ಷವನ್ನು ವಾಗ್ದಾನ ಮಾಡಿದೆ, ನಿಮಗೆ ಅದು ಬೇಡ. ನಾನು ಆನಂದಮಯವಾದ ಸ್ವರ್ಗವನ್ನು ನಿಮ್ಮೆದುರು ಇಟ್ಟೆ. ನೀವು ಅದನ್ನೂ ತಿರಸ್ಕರಿಸಿದ್ದೀರಿ. ಮತ್ತು ನಿಮಗೇನು ಬೇಕು..?

ಅವರು ನಮ್ರತೆಯಿಂದ ತಲೆಬಾಗಿ ಹೇಳಿದರು: “ನೀನು. ನಾವು ಯಾರನ್ನು ಬಯಸುತ್ತೇವೆಂದು ನಿನಗೆ ಮಾತ್ರ ತಿಳಿದಿದೆ”.

ಸೂಫಿಗಳು ಎಲ್ಲಕ್ಕಿಂತಲೂ ಮಿಗಿಲಾಗಿ, ನರಕ ಮತ್ತು ಎಲ್ಲಾ ಸ್ವರ್ಗೀಯ ಸಂತೋಷಗಳಿಗಿಂತ ಹೆಚ್ಚಾಗಿ ದೇವನನ್ನು ಹುಡುಕುತ್ತಾರೆ. ಉತ್ಕಟ ಪ್ರೀತಿಯಿಂದ ಭಕ್ತಿಪೂರ್ವಕ ಪ್ರಾರ್ಥನೆ ನಡೆಸಿ, ಮುನಾಜಾತ್ ಎಂಬ ಖಾಸಗಿ ಸಂಭಾಷಣೆಗಳ ಮೂಲಕ ಅವನೊಂದಿಗೆ ಸಂಭಾಷಿಸಿದರು. ಮದ್ಹಬೇ ಇಷ್ಕ್‌ನ ವಿಷಯಗಳು ಎಲ್ಲಕ್ಕಿಂತ ಹೆಚ್ಚಾಗಿ ದೇವನನ್ನು ಹುಡುಕುವ ಮತ್ತು ದೇವನಿಂದ ಸೃಷ್ಟಿಗೆ ಹರಿಯುವ ಪ್ರೀತಿಯ ಹಾದಿಯಲ್ಲಿ ನಡೆಯುವ ಕೆಲವರ ಪ್ರೀತಿಯ ಮಂತ್ರಗಳಾಗಿವೆ.

ಪರಲೋಕದಲ್ಲಿ ನಾವು ದೇವನನ್ನು ಮುಖಾಮುಖಿ ಕಾಣುತ್ತೇವೆ ಎಂದು ಹೇಳುತ್ತೇವೆ. ಆದರೆ ಈ ಸೂಫಿಗಳಿಗೆ ಅಷ್ಟೆಲ್ಲಾ ಕಾಯುವ ಸಹನೆಯಿಲ್ಲ. ಇಹಲೋಕದಲ್ಲಿಯೇ ದೇವನನ್ನು ಕಾಣಬೇಕೆಂದು ತೀವ್ರವಾಗಿ ಬಯಸುವರು.

ಈ ಉತ್ಕಟ ಪ್ರೇಮದ, ಇಷ್ಕ್‌ನ ಹಾದಿಯಲ್ಲಿ ಪಯಣಿಸಿದ ಸೂಫಿಗಳ, ಕವಿಗಳ, ಪ್ರೇಮಿಗಳ ಕವಿತೆಗಳು ಮತ್ತು ಬೋಧನೆಗಳು ಅಥವಾ ಈ ಜಗತ್ತಿನಲ್ಲಿ ಸೃಷ್ಟಿಕರ್ತನನ್ನು ನೋಡುವ ಅತಿಯಾದ ಬಯಕೆಗಳ ಆಧ್ಯಾತ್ಮಿಕ ಉನ್ನತಿಯ ತಿರುಳನ್ನು ಮದ್ಹಬೇ ಇಷ್ಖಿನಲ್ಲಿ ಕಾಣಬಹುದು. ಮುಸ್ಲಿಂ ಚಿಂತನೆಯ ಅಡಿಪಾಯದಿಂದ ರೂಪುಗೊಂಡ ಮತ್ತು ಕಾವ್ಯಾತ್ಮಕ ಭಾಷೆಯ ಮೂಲಕ ದೇವರನ್ನು ಕಾಣಲಿರುವ ಆಧ್ಯಾತ್ಮಿಕ ಹಾದಿಯನ್ನು ಮದ್ಹಬೇ ಇಷ್ಖ್ (ಅರೇಬಿಕ್: ಮದ್ಹಬ್ ಅಲ್-ಇಷ್ಕ್) ಎಂದು ಕರೆಯಲಾಗುತ್ತದೆ. ನಾವದನ್ನು ಪ್ರೀತಿಯ ಮಾರ್ಗವೆಂದು ವ್ಯಾಖ್ಯಾನಿಸಬಹುದು. ಆದರೆ ವಾಸ್ತವದಲ್ಲಿ ಈ ಅನುವಾದ ಅಸಮರ್ಪಕವಾಗಿದೆ. ಏಕೆಂದರೆ ಪ್ರೀತಿ ಎಂಬ ಪದವು ತುಂಬಾ ನೀರಸ ಮತ್ತು ಸಾರ್ವತ್ರಿಕವಾಗಿದ್ದು, ಅದು ಪ್ರೀತಿಯ ದೈವಿಕ ಗುಣಗಳಿಗೆ ನ್ಯಾಯವನ್ನು ನೀಡುವುದಿಲ್ಲ. ಹಾಗಾಗಿ ಸೂಫಿಗಳು ಪ್ರೀತಿಯ ಬಗ್ಗೆ ಹೇಳುವುದೇ ಇಷ್ಕ್.

ಇದು ಸ್ವಲ್ಪ ಪ್ರಕಾಶಮಾನವಾಗಿದೆ. ಅವರಿಂದಲೇ ಹುಟ್ಟಿ ಹಲವೆಡೆ ಹರಿಯುವ ಪ್ರೇಮದ ಚಿರಂತನ. ಯಾವ ಪಾತ್ರೆಯಲ್ಲಿ ಅಳೆದರೂ ಆ ಪ್ರೀತಿ ಉಕ್ಕಿ ಹರಿಯುತ್ತದೆ. ಅದಕ್ಕಾಗಿಯೇ ‘ನಾನು ಈ ಚಳುವಳಿಯನ್ನು ರಾಡಿಕಲ್ ಲವ್ ಎಂದು ಕರೆಯುತ್ತೇನೆ. ಇದು ಅತ್ಯುನ್ನತ ಪ್ರೀತಿಯ ಮಾರ್ಗ’ ಎಂದು ಪ್ರಸಿದ್ಧ ಜಾಝ್ ಸಂಗೀತಗಾರ ಜಾನ್ ಕಾರ್ಟ್ರೇನ್ ಹೇಳಿದ್ದಾರೆ. ಅನೇಕ ಜಾಝ್ ಸಂಗೀತಗಾರರಂತೆ, ಕೋಲ್ ಟ್ರೈನ್ ಇಸ್ಲಾಂನಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದರು. ಅವರ ಪ್ರಸಿದ್ಧ ಹಾಡು ಎ ಲವ್ ಸುಪ್ರೀಮ್ (A love Supreme) ಅನ್ನು ಅಲ್ಲಾ ಸರ್ವೋಚ್ಚ (Allah Supreme) ಎಂದು ನಾನು ಆಗಾಗ್ಗೆ ಭಾವಿಸುತ್ತೇನೆ.

ಸೂಫಿಗಳು ಹೇಳುವ ಈ ಪ್ರಖರ ಪ್ರೀತಿಯ ಮಾರ್ಗವು ‘ಮದ್ಹಬೇ ಖುದಾ’ ಅಥವಾ ದೇವನ ಮಾರ್ಗವಾಗಿದೆ. ಮನ್ಸೂರ್ ಅಲ್ ಹಲ್ಲಾಜ್ ಮತ್ತು ಐನುಲ್ ಖುಲಾತ್ ಇದನ್ನು ಸ್ಪಷ್ಟಪಡಿಸಿದ್ದಾರೆ. ಅಥವಾ ಈ ತೀವ್ರವಾದ ಪ್ರೀತಿಯ ಹಾದಿಯು ದೇವನೆಡೆಗೆ, ದೇವನ ಸಾಮೀಪ್ಯಕ್ಕೆ ಕಾರಣವಾಗುತ್ತದೆ. ಇಮಾಮ್ ಶಾಫಿಯವರ ಶಾಫಿ ಮದ್ಹಬ್ ಮತ್ತು ಇಮಾಮ್ ಅಬು ಹನೀಫಾ ರವರ ಹನಫಿ ಮದ್ಹಬ್ ಎಂದು ಕರೆಯುವಂತೆ, ಇಸ್ಲಾಮಿಕ್ ಕಾನೂನಿನ ಎಲ್ಲಾ ನಿಯಮಗಳು (ಶರೀಅ) ಅವುಗಳ ವಿಧಾನವನ್ನು ರೂಪಿಸಿದ ಮಹಾನ್ ವಿದ್ವಾಂಸರ ನಾಮಗಳಡಿಯಲ್ಲಿ ನೆಲೆಗೊಳ್ಳುತ್ತದೆ. ಆದರೆ, ಮದ್ಹಬೇ ಇಷ್ಕ್ ಎಂಬ ಪ್ರೀತಿಯ ಮಾರ್ಗವು ಯಾವುದೇ ಸೂಫಿ ಅಥವಾ ವಿದ್ವಾಂಸರ ಹೆಸರಿನಲ್ಲಿಲ್ಲ. ಅದರಾಚೆಗೆ ಇದನ್ನು ಸೃಷ್ಟಿಕರ್ತನ ಮಾರ್ಗ ಎಂದು ಕರೆಯಲಾಗುತ್ತದೆ. ಇಲ್ಲಿ ಮಾತ್ರ ಕೇವಲ ಸೂಚನೆಗಳಿಂದಲೇ ಪ್ರೇಮವು ವಿಕಸನಗೊಂಡು ದೈವತ್ವದ ಸಾರವಾಗಿ ರೂಪಾಂತರಗೊಳ್ಳುತ್ತದೆ.

ಒಂದು ವಸ್ತುವು ಎಷ್ಟರವರೆಗೆ ಅಮೂಲ್ಯವಾಗಿರುತ್ತದೋ, ಅಷ್ಟರ ತನಕ ಆ ವಸ್ತುವು ಅಪಮೌಲ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಪ್ರಾಪಂಚಿಕ ಪ್ರೇಮವು ದೈವಿಕ ಪ್ರೇಮದ ಶಕ್ತಿಯನ್ನು ಬಹಳ ಚಿಕ್ಕ ಜಾಗಕ್ಕೆ ಪರಿಮಿತಗೊಳಿಸಿದೆ. ಇಂದು ನಾವು ಪ್ರೀತಿಯ ಬಗ್ಗೆ ಮಾತನಾಡುವಾಗೆಲ್ಲಾ ಅದೊಂದು ರೀತಿಯ ರೊಮ್ಯಾಂಟಿಕ್‌ ಪ್ರೀತಿಯನ್ನು ನೆನಪಿಸುತ್ತದೆ. ಸೂಫಿಗಳಿಗೆ ಪ್ರೀತಿ ಎಂದರೆ ಪ್ರಕಾಶ. ಅದು ಸಾವಿರಾರು ಬಣ್ಣಗಳು ಮತ್ತು ಆಕಾರಗಳಲ್ಲಿ ಉಕ್ಕಿ ಹರಿದು, ಒಂದಾಗಿ ವಿಲೀನಗೊಳ್ಳುತ್ತದೆ.

ಸಾವಿರಾರು ಆಕಾರಗಳಲ್ಲಿ, ಬಣ್ಣಗಳಲ್ಲಿ ಹರಿದು ಏಕತ್ವಕ್ಕೆ ಸೇರಲು ಹರಿಯುವುದೇ ಅವರ ಪ್ರೇಮ. ಪ್ರೀತಿಯಲ್ಲಿ ಹಲವಾರು ವಿಧಗಳಿವೆ. ಗೆಳೆಯರೊಂದಿಗೆ, ಜೊತೆಗಾರರೊಂದಿಗೆ, ಮಕ್ಕಳು, ಪೋಷಕರು, ಪ್ರೇಯಸಿ, ಸ್ವಪ್ರೀತಿ, ಪ್ರಕೃತಿ, ಕಾಣುವುದರೊಂದಿಗ ಮತ್ತು ಕಾಣದೆ ಇರುವುದರೊಂದಿಗಿನ ಪ್ರೀತಿ ಇತ್ಯಾದಿ. ಆದರೆ ಸೂಫಿಗಳಿಗೆ ಪ್ರೀತಿ ಎಂದರೆ ಬೆಂಕಿ. ಕೋಪ, ಅಹಂಕಾರ, ಸ್ವಾರ್ಥ ಮೊದಲಾದವುಗಳನ್ನೆಲ್ಲಾ ಸುಟ್ಟು ಹಾಕಿ ಮತ್ತು ಆತ್ಮವನ್ನು ಶುದ್ಧೀಕರಿಸಿ ನಮ್ಮಲ್ಲಿ ದೇವನನ್ನು ಹೊರತುಪಡಿಸಿ ಇನ್ನೇನನ್ನೂ ಉಳಿಸದ ಬೆಂಕಿ.

ಈ ಸೂಫಿಗಳಿಗೆ, ತನ್ನನ್ನು ತಾನು ಅರಿಯಬೇಕಾದರೆ ಸೃಷ್ಟಿಕರ್ತನನ್ನು ಅರಿಯಬೇಕು. ಸೃಷ್ಟಿಕರ್ತನನ್ನು ತಿಳಿದುಕೊಳ್ಳಲು ನಾವು ನಮ್ಮ ಅಸ್ತಿತ್ವದ ರಹಸ್ಯಗಳನ್ನು ತಿಳಿದುಕೊಳ್ಳಬೇಕು. ಈ ರಹಸ್ಯವನ್ನು ಪ್ರವಾದಿ ಪೈಗಂಬರರು ಹದೀಸ್ ಖುದ್ಸಿ ಮೂಲಕ ವಿವರಿಸಿದ್ದಾರೆ. ಸೃಷ್ಟಿಕರ್ತ ಗುಪ್ತ ನಿಧಿ ಎಂದು ವಿವರಿಸುವ ಈ ಹದೀಸ್ ಸೂಫಿ ಸಂಪ್ರದಾಯದ ಮೂಲ ಸಿದ್ಧಾಂತ.

“ಅಜ್ಞಾತ ನಿಧಿಯಾಗಿದ್ದ ನಾನು
ಅರಿಯಲ್ಪಡಲು ಬಯಸಿದೆ.
ಹಾಗಾಗಿ, ಸೃಷ್ಟಿಕಾರ್ಯ ನಡೆಸಿದೆ
ಅವರಿಗೆ ನನ್ನ ಕುರಿತ ಜ್ಞಾನ ನೀಡಿದೆ,
ಆ ಮೂಲಕ ನನ್ನನ್ನು ಆಳವಾಗಿ ಅರಿಯುವ ತಿಳಿವು ನೀಡಿದೆ”‌.

ಇಲ್ಲಿ ಪ್ರೀತಿಯನ್ನು ಕಾಮವೋ ಅಥವಾ ಕಲ್ಪನೆಯೋ ಎಂಬಂತೆ ಪರಿಚಯಿಸಲಾಗಿಲ್ಲ. (ಇಂತಹ ಎಲ್ಲಾ ಅಂಶಗಳು ಅದರಲ್ಲಿ ಹೇರಳವಾಗಿದ್ದರೂ). ಬದಲಾಗಿ, ಪ್ರೀತಿಯು ಸುಪ್ತಾವಸ್ಥೆಯ ಸ್ಥಿತಿಯಲ್ಲಿ ದೇವರನ್ನು ತಲುಪುವ ಮುಕ್ತತೆಯಾಗಿದೆ. ಅವನು ಪ್ರೀತಿಯ ಮೂಲಕ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾನೆ. ಈ ಪ್ರೀತಿಯ ಮೂಲಕವೇ ನಾವು ಅಸ್ತಿತ್ವದಲ್ಲಿದ್ದೇವೆ. ನಾವು ವಿಶ್ವದಲ್ಲಿ ಪ್ರೀತಿಯ ಹರಿವಿನೊಂದಿಗೆ ವಿಲೀನಗೊಂಡಾಗ, ನಾವು ಮತ್ತೆ ಸೃಷ್ಟಿಕರ್ತನನ್ನು ಸೇರುತ್ತೇವೆ.

ಈ ಹದೀಸ್‌ನಲ್ಲಿ ಸೃಷ್ಟಿಕರ್ತನು ಅತ್ಯಂತ ಸ್ನೇಹಪರ ಧ್ವನಿಯಲ್ಲಿ ಮಾತನಾಡುತ್ತಾನೆ. ಶ್ರೇಷ್ಠತೆಯ ಸರ್ವನಾಮವನ್ನು ಧ್ವನಿಸುವ ಹುವಾ (ಅಂದರೆ ಅವನು) ಗಾಂಭೀರ್ಯವನ್ನು ಧ್ವನಿಸುವ ನಹ್ನು (ಅಂದರೆ ನಾವು) ಮೊದಲಾದವುಗಳನ್ನು ಬಳಸದೆ ಬದಲಿಗೆ ಇಲ್ಲಿ ಆಪ್ತವಾಗಿ ತಾಕುವಂತೆ ಅನಾ (ನಾನು) ಎಂದು ಬಳಸಿದ್ದಾನೆ.
“ನಾನು ಅಜ್ಞಾತ ನಿಧಿಯಾಗಿದ್ದೆ”
“ನಾನು ಅಗಾಧವಾಗಿ ಪ್ರೇಮಿಸಲ್ಪಡಲು, ಅರಿಯಲ್ಪಡಲು ಉತ್ಕಟವಾಗಿ ಬಯಸಿದೆ”

ಕೆಲವು ಸೂಫಿಗಳ ಅಭಿಪ್ರಾಯದಲ್ಲಿ ʼನಾನು ಅರಿಯಲ್ಪಡಲು, ಪ್ರೇಮಿಸಲ್ಪಡಲು ದೇವನಿಗೆ ಇರುವ ಅಭಿಲಾಷೆಯನ್ನು ಸೂಚಿಸುವ ʼಅಹ್ಬಬ್ತುʼ ಎಂಬ ಪದವು ʼಗುಳ್ಳೆʼ ಎಂಬ ಅರ್ಥ ಬರುವ ಹುಬಾಬು ಎಂಬ ಪದದಿಂದ ಉದ್ಭವಿಸಿದೆ. ಅಥವಾ ಪ್ರೇಮಿಸಲ್ಪಡಬೇಕು ಎನ್ನುವ ದೇವನ ಆಗ್ರಹವು ಅವನಲ್ಲಿ ತುಂಬಿ ಉಕ್ಕಿತು ಅನ್ನುವ ಹಾಗೆ. ಹೀಗೆ ಪ್ರೇಮದಿಂದ ಉಬ್ಬಿದ ಗುಳ್ಳೆಯು ಒಡೆಯುವುದರೊಂದಿಗೆ ಸೃಷ್ಟಿ ಕಾರ್ಯವು ಆರಂಭವಾಗುತ್ತದೆ. ಅರಿಯಲ್ಪಡಬೇಕು ಎಂಬ ಆಗ್ರಹದ ಒಂದು ಮಹತ್ತರ ಪ್ರಣಯದ ವಿಸ್ಪೋಟ ಎನ್ನಬಹುದು.

ಅರೇಬಿಕ್ ಭಾಷೆಯಲ್ಲಿ ‘ತಿಳಿದುಕೊಳ್ಳು’ ಎಂಬುವುದಕ್ಕೆ ಹಲವು ಪದಗಳಿವೆ. ಆದರೆ ಈ ಹದೀಸ್ ನಲ್ಲಿ ‘ಉಅರಿಫಾ’ ಎಂಬ ಪದವನ್ನು ಬಳಸಲಾಗಿದೆ. ಈ ಪದದ ಅರ್ಥ ಆಳವಾಗಿ ತಿಳಿಯುವುದು ಎಂದಾಗಿದೆ. ನಮ್ಮ ಅಸ್ಥಿಗೆ ಅಂಟಿಕೊಂಡಿರುವ ಅನಂತ ಪ್ರೀತಿಯನ್ನಲ್ಲದೆ, ವ್ಯವಹಾರಿಕ ಅಥವಾ ಬೌದ್ಧಿಕವಾದ ಮೇಲ್ಮಟ್ಟದ ಅರಿವನ್ನು ಅವನು ಎಂದಿಗೂ ಬಯಸುವುದಿಲ್ಲ.

ಸೃಷ್ಟಿಕರ್ತನು ಮನುಷ್ಯನಲ್ಲಿ ಪಿಸುಗುಟ್ಟುತ್ತಾನೆ:
“ನಾನು ರುಚಿಸಲ್ಪಡಬೇಕೆಂದು ಬಯಸುತ್ತೇನೆ”

ಇಲ್ಲಿ ಹೇಳುವ ಜ್ಞಾನವು ಸ್ವಲ್ಪ ಆಳವಾಗಿದೆ ಮತ್ತು ಗಾಢವಾಗಿದೆ. ಈ ಜ್ಞಾನವು ನಮ್ಮನ್ನು ಹೃದಯಾಂತರಾಳದಲ್ಲಿ ಮನುಷ್ಯರನ್ನಾಗಿ ಮಾಡುವ ಎಲ್ಲವನ್ನೂ ಪೂರ್ಣಗೊಳಿಸುತ್ತದೆ.

ಇಸ್ಲಾಮಿನ ಆರಂಭಿಕ ಶತಮಾನಗಳಲ್ಲಿ, ಸೂಫಿಗಳು ಪ್ರೇಮವನ್ನು ಎರಡು ವರ್ಗಗಳಾಗಿ ವಿಂಗಡಿಸಿದ್ದರು. ‘ಇಷ್ಕೆ ಹಖೀಖೀ’ (ನೈಜ ಪ್ರೀತಿ) ಅಥವಾ ದೇವರಿಗೆ ಮಾತ್ರ ಸಮರ್ಪಿತವಾದ ಪ್ರೇಮ ಮತ್ತು ‘ಇಷ್ಕೆ ಮಜಾಝೀ’ (ರೂಪಕ ಪ್ರೀತಿ) ಅಥವಾ ಮಾನವರ ನಡುವಿನ ಪ್ರೇಮ ಎಂದು ಕರೆದರು. ಸೃಷ್ಟಿಕರ್ತನೊಂದಿಗಿನ ಪ್ರೇಮದ ಜತೆಗೆ ಹೋಲಿಸಿದರೆ ಮನುಷ್ಯರೊಂದಿಗಿನ ಪ್ರೇಮವು (ಮಾನುಷಿಕ ಪ್ರೇಮ) ಕೇವಲ ಪ್ರೇಮದ ರೂಪಕ (metaphorical) ಮಾತ್ರ. ದೈವಿಕ ಪ್ರೇಮದ ಕಾವ್ಯವನ್ನು ಅನುಭವಿಸುವ ಮುನ್ನ ಮಾನುಷಿಕ ಪ್ರೇಮದ ಮೂಲಕ ದೈವಿಕ ಪ್ರೇಮದ ವ್ಯಾಕರಣವನ್ನು ಪರಿಚಯಿಸಿಕೊಳ್ಳಬೇಕು. ಆದರೆ ಗಾಢ ಪ್ರೇಮದ ವಕ್ತಾರರಾದ ಸೂಫಿಗಳ ಹಾದಿಯ ಪ್ರತ್ಯಕ್ಷವಾದ ಬಳಿಕ ಇದೆಲ್ಲವೂ ಬದಲಾಯಿತು. ಆತ್ಯಂತಿಕವಾಗಿ ಒಂದೇ ಒಂದು ಪ್ರೀತಿ ಇದೆ ಅನ್ನುವುದು.
ಸೃಷ್ಟಿಕರ್ತ ಮತ್ತು ಮನುಷ್ಯರ ನಡುವೆ, ಮನುಷ್ಯ ಮತ್ತು ಮನುಷ್ಯರ ನಡುವೆ ಅಂದು, ಇಂದು, ಎಂದೆಂದಿಗೂ ಉಕ್ಕಿ ಹರಿಯುವ ಪ್ರೇಮವನ್ನು ಮೌಲಾನ ರೂಮಿ ಸುಂದರವಾದ ಕವಿತೆಯ ಮೂಲಕ ಚಿತ್ರಿಸಿದ್ದಾರೆ.

“ನೋಡು…
ಪ್ರೀತಿ ಪ್ರೇಮಿಗಳನ್ನು ಹೇಗೆ ಒಟ್ಟುಗೂಡಿಸುತ್ತೆ
ನೋಡು..
ಆತ್ಮವು ದೇಹವನ್ನು ಸೇರಿಕೊಳ್ಳುತ್ತದೆ
ಎಷ್ಟು ಕಾಲ
ನೀನು ಈ ಜೀವನವನ್ನು
‘ಅದು’ ‘ಇದು’
‘ಒಳ್ಳೆಯದು’ ಮತ್ತು ‘ಕೆಟ್ಟದು’
ಎಂದು
ವಿಭಜಿಸಿ ನೋಡುವೆ
‘ಅದು’,’ಇದು’ ಎಲ್ಲವೂ
ಹೇಗೆ ಒಂದಾಗಿ ನಿಲ್ಲುವುದು ಎಂಬುದನ್ನು ನೋಡು.”

ಮೂಲ: ಒಮೀದ್ ಸಾಫಿ
ಅನುವಾದ : ಸ್ವಾದಿಖ್ ಮುಈನಿ, ಬೆಳಾಲು

Leave a Reply

*