ಮನುಷ್ಯರ ನಡುವಿನ ಪ್ರೇಮ ಹಾಗೂ ಇಬ್ನ್ ಹಸ್ಮ್ ರ ಚಿಂತನೆಗಳು


ಪ್ರಾಚೀನ ಕಾಲದ ವಿದ್ವಾಂಸರು ಧರ್ಮಶಾಸ್ತ್ರದ ಜತೆಗೆ ದೈವ ಶಾಸ್ತ್ರ, ವೈದ್ಯಶಾಸ್ತ್ರ, ಮನೋವೈಜ್ಞಾನಿಕ ಶಾಸ್ತ್ರ ಹಾಗೂ ಇತರ ಶಾಸ್ತ್ರಗಳ ವಿವಿಧ ಮಜಲುಗಳನ್ನು ಆಳವಾದ ಅಧ್ಯಯನ ನಡೆಸಿ ಹಾಗೂ ಚಿಂತಿಸಿ ಬರಹ ರೂಪಕ್ಕೆ ತಂದಿದ್ದಾರೆ. ಅದರಲ್ಲಿ ಪ್ರೇಮದ ಕುರಿತೂ ಸೈದ್ಧಾಂತಿಕವಾಗಿಯೂ, ವೈದ್ಯಕೀಯವಾಗಿಯೂ ಬರೆಯಲಾಗಿದೆ. ಪ್ರೇಮದ ಬಗ್ಗೆ ಲೈಂಗಿಕ ದೃಷ್ಟಿಕೋನದಿಂದಲೂ ಬರೆದಿದ್ದಾರೆಯೆಂಬುದೇ ಆಶ್ಚರ್ಯಕರವಾದ ಸಂಗತಿ. 15 ನೇ ಶತಮಾನದಲ್ಲಿ ಜೀವಿಸಿದ್ದ ಶೈಖ್ ಮುಹಮ್ಮದ್ ಅಲ್ ನಫ್ಸವಿ ಬರೆದ ಅರಬ್ ಲೈಂಗಿಕ ಕೈಪಿಡಿ ಎಂದೇ ಪ್ರಸಿದ್ಧವಾದ ‘ಅರ್ರೌಳುಲ್ ಆತ್ವಿರ್ ಫೀ ನುಸ್ಹತುಲ್ ಖಾತ್ವಿರ್’ (ಆಂಗ್ಲಾನುವಾದ: The perfumed garden of sensual delight) ಎಂಬ ಗ್ರಂಥ ಇದಕ್ಕೆ ಉದಾಹರಣೆ. ಈ ಗ್ರಂಥದಲ್ಲಿ ಪ್ರೇಮದ ಕುರಿತು ಬರೆದಿದ್ದಾರೆ. ಪ್ರಸಿದ್ಧ ವಿದ್ವಾಂಸರಾದ ಇಬ್ನ್ ಹಸ್ಮ್ ಪ್ರೀತಿಯ ಬಗ್ಗೆ ಗಣನೀಯವಾದ ಬರಹಗಳನ್ನು ಬರೆದಿದ್ದಾರೆ. ಇವರ ಬರಹಗಳನ್ನು ಸಂಗ್ರಹಿಸಿ ‘ತೌಖುಲ್ ಹಮಾಮ’ ಎಂಬ ಕೃತಿಯನ್ನು ರಚಿಸಲಾಗಿದೆ.

ಇಸ್ಲಾಂ ಆಡಳಿತ ಸ್ಥಾಪಿಸಿ 3 ಶತಮಾನಗಳ ಬಳಿಕ ದಕ್ಷಿಣ ಸ್ಪೇನಿನ ಕೊರಡೋವ ಎಂಬಲ್ಲಿ ಇಬ್ನ್ ಹಸ್ಮ್ (994-1064) ಜನಿಸಿದರು. ಅವರು ವಿದ್ವಾಂಸರು, ಕವಿ, ಸರ್ವಜ್ಞ ಹಾಗೂ ಕರ್ಮಶಾಸ್ತ್ರ ಪಂಡಿತರು ಮಾತ್ರವಲ್ಲ ‘ಝಾಹಿರಿ’ ಚಿಂತನೆಯ ಅಗ್ರಗಣ್ಯ ದಾರ್ಶನಿಕರಾಗಿದ್ದರು. (ಇದು ಒಂಬತ್ತನೆಯ ಶತಮಾನದಲ್ಲಿ ದಾವೂದ್ ಅಲ್ ಝಾಹಿರಿ ಎಂಬವರು ಸ್ಥಾಪಿಸಿದ ಮದ್ಸ್ಹಬ್ ಆಗಿದೆ. ಸುನ್ನಿ ಆಶಯವಾದ ಝಾಹಿರಿಸಂಗೆ ಮಧ್ಯಯುಗದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ.) ಉಮವೀ ಆಡಳಿತದ ಪತನ ಹಾಗೂ ಐಬೀರಿಯನ್ ಆಡಳಿತ ಪತನಗೊಂಡು ಸಣ್ಣ ಪುಟ್ಟ ರಾಜ್ಯಗಳಾದ ನಂತರ ಬಾರ್ಬೇರಿಯನ್ನರು ಪ್ರಾಬಲ್ಯ ಹೊಂದಿದ್ದ ಸಂಕೀರ್ಣ ರಾಜಕೀಯ ಸನ್ನಿವೇಶದಲ್ಲಿ ಇಬ್ನ್ ಹಸ್ಮ್ ಬದುಕು ಸವೆದರು. ಇಂತಹ ಪ್ರಕ್ಷುಬ್ಧ ಸಂದರ್ಭದಲ್ಲೇ ಸಾಹಿತ್ಯದ ಬೆಳವಣಿಗೆ ಹಾಗೂ ವಿಕಾಸಕ್ಕೂ ಜಗತ್ತು ಸಾಕ್ಷಿಯಾಯಿತು. ‘ಮಹಿಳೆಯರಿಂದ ತುಂಬಿದ ಮನೆಯಲ್ಲಿ ನಾನು ಬೆಳೆದೆ’ ಎಂದು ಇಬ್ನ್ ಹಸ್ಮ್ ಹೇಳುತ್ತಾರೆ. “ಅವರ ಮಡಿಲಲ್ಲೇ ನಾನು ಬೆಳೆದೆ ಹಾಗೂ ಬದುಕಿದೆ. ಇತರ ಸಮಾಜದ ಬಗ್ಗೆ ನನಗೆ ತಿಳಿವಳಿಕೆಯಿರಲಿಲ್ಲ. ಯುವಕನಾಗಿ ಗಡ್ಡ ಮೀಸೆ ಬರುವವರೆಗೂ ನಾನು ಯಾವುದೇ ಪುರುಷರ ಕೂಟದಲ್ಲಿ ಕುಳಿತುಕೊಂಡಿರಲಿಲ್ಲ” ಎಂದು ಇಬ್ನ್ ಹಸ್ಮ್ ಹೇಳುತ್ತಾರೆ.
ಅವರು ಸಣ್ಣ ಪ್ರಾಯದಲ್ಲೇ ನಾಮಾನ್ ಎಂಬ ಯುವತಿಯನ್ನು ಮದುವೆಯಾದರು. ಅವಳನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದರು. ದಾಂಪತ್ಯದ ಮಾಧುರ್ಯ ಅನುಭವಿಸುವ ಮೊದಲೇ ಅವಳು ಮರಣ ಹೊಂದಿದಳು. ದುಃಖತಪ್ತರಾದ ಇಬ್ನ್ ಹಸ್ಮ್ ತಿಂಗಳುಗಟ್ಟಲೆ ಮನೆಯಿಂದ ಹೊರಗೆ ಬರಲೇ ಇಲ್ಲ. ಇನ್ನೊಂದು ಮದುವೆ ಆಗುವುದಿಲ್ಲವೆಂಬ ನಿರ್ಧಾರಕ್ಕೆ ಬಂದರು.

ಪ್ರೀತಿ ತುಂಬಿ ತುಳುಕುವ ಗದ್ಯ

ಇಬ್ನ್ ಹಸ್ಮ್ ಅವರ ಕೃತಿಗಳ ಇಂಗ್ಲಿಷ್ ಭಾವಾನುವಾದದಲ್ಲಿ The Necklace Of The Dove, The Ring Of the Dove ಎಂದು ಹೆಸರಿನ ಪ್ರೇಮಕ್ಕೆ ಸಂಬಂಧಿಸಿದ ಪ್ರಬಂಧಗಳನ್ನು ಮಧ್ಯಕಾಲೀನ ಅರೇಬಿಕ್ ಗದ್ಯಗಳಲ್ಲಿಯೇ ಅತ್ಯುತ್ತಮವಾದದ್ದು ಎಂದು ಪರಿಗಣಿಸಲ್ಪಟ್ಟಿದೆ. ಈ ಪ್ರಬಂಧವು ಇತರರ ಪ್ರಬಂಧಕ್ಕಿಂತ ಭಿನ್ನವಾದದ್ದು. ಕಾರಣ ಈ ಪ್ರಬಂಧದ ಮೂಲಭೂತ ಶೈಲಿ, ರೂಪ ಮತ್ತು ಅಂದಲೂಸಿಯಾದಲ್ಲಿನ ಪರಿಸ್ಥಿತಿಯಾಗಿದೆ.

ಇನ್ನು ಇದರ ವಿವಿಧ ಹಂತಗಳನ್ನು ನೋಡೋಣ.
ಮೊದಲ ನೋಟದಲ್ಲಿ ಅಕ್ಷರಶಃ ನೋಡಿದಾಗ ಇಬ್ನ್ ಹಸ್ಮ್ ಗದ್ಯ ಮತ್ತು ಕಾವ್ಯದ ಸಮೃದ್ಧ ಬರಹಗಾರರಾಗಿದ್ದರು ಎಂದು ಮನದಟ್ಟಾಗುತ್ತದೆ. ಅವರ ಪ್ರಬಂಧಗಳು ಹಾಗೂ ಬರಹಗಳು ಮೂಲತಃ ಅರಬಿ ಭಾಷೆಯಲ್ಲಿ ಓದಲು ಸರಳವಾಗಿ ಮನೋಹರವಾಗಿರುತ್ತದೆ. ಅವರ ಪ್ರಬಂಧಗಳನ್ನು ಆಳವಾಗಿ ನೋಡಿದಾಗ ಅವರ ಪ್ರೀತಿ ನಿಜ ಜೀವನದಲ್ಲಿ ಅನುಭವಿಸಿದ ಅನುಭವಗಳ ಹಿನ್ನೆಲೆಯಲ್ಲಿ ಪ್ರೀತಿಯನ್ನು ಒಂದು ಸಾಮಾಜಿಕ ವಿದ್ಯಮಾನವಾಗಿ ನೋಡುತ್ತಾರೆ. ಇಬ್ನ್ ಹಸ್ಮ್ ರ ಪ್ರಕಾರ ‘ಪ್ರೀತಿಯು ಮಾನವ ಜೀವನದ ನೈಸರ್ಗಿಕ ಪ್ರಕ್ರಿಯೆಗಳ ಒಂದು ಭಾಗವಾಗಿದೆ’. ಪ್ರೀತಿಯ ವಿವಿಧ ಮಜಲುಗಳನ್ನು ಇಬ್ನ್ ಹಸ್ಮ್ ರವರು ಶೋಧಿಸಿ ವಿಶ್ಲೇಷಣೆ ಮಾಡಿದ್ದಾರೆ. ಇಲ್ಲಿ ಪ್ರಧಾನವಾಗಿ ಇಬ್ನ್ ಹಸ್ಮ್ ರವರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಏನೆಂದರೆ, ಮನುಷ್ಯನು ಪ್ರೀತಿಯ ಬಲೆಗೆ ಬೀಳುವುದು ಹೇಗೆ? ಅದು ಹೇಗೆ ಘಟಿಸುತ್ತದೆ? ಅದಕ್ಕೆ ಪ್ರೇರಣೆ ಏನು (ಉದಾಹರಣೆಗೆ, ಪ್ರೇಮಿಗಳ ನಡುವೆ ಸಂದೇಶಗಳನ್ನು ರವಾನಿಸಲು ಸಹಾಯ ಮಾಡುವ ಆಪ್ತ ಸ್ನೇಹಿತ) ಅದಕ್ಕೆ ಅಡ್ಡಿ ಉಂಟು ಮಾಡುವ ವಸ್ತು ಯಾವುದು? (ಮೂರನೇ ವ್ಯಕ್ತಿಯ ಹಸ್ತಕ್ಷೇಪ. ಇದು ಅಸೂಯೆ ಅಥವಾ ಇನ್ಯಾವುದೇ ಕಾರಣದಿಂದಾಗಿರಬಹುದು. ಹಾಗೆಯೇ ಪ್ರೇಮಿಗಳಲ್ಲಿ ಒಬ್ಬರ ಸಾವು). ತನ್ನ ಪ್ರಬಂಧಗಳಲ್ಲಿ ಇಂತಹ ಪ್ರಶ್ನೆಗಳನ್ನು ಇಬ್ನ್ ಹಸ್ಮ್ ಮುಖಾಮುಖಿಯಾಗಿಸುತ್ತಾರೆ.

ಪ್ರೀತಿಯನ್ನು ಸಾರ್ವತ್ರಿಕವಾಗಿ ಅಥವಾ ವಸ್ತು ನಿಷ್ಠವಾಗಿ ಗಮನಿಸಿದ ಆ ಕಾಲದ ವಿದ್ವಾಂಸರಿಗಿಂತ ಭಿನ್ನವಾಗಿ ಇಬ್ನ್ ಹಸ್ಮ್ ಪ್ರೀತಿಯ ಮಜಲುಗಳ ಸೂಕ್ಷ್ಮತೆಗಳನ್ನು ಪರಿಶೀಲಿಸಿದ್ದಾರೆ. ಒಬ್ಬ ಪ್ರೇಮಿಯ ಜೀವನದಲ್ಲಿ ಏನು ಸಂಭವಿಸುತ್ತದೆ ಹಾಗೂ ಸಮಕಾಲೀನರ ಜೀವನಾನುಭವಗಳನ್ನು ಇಬ್ನ್ ಹಸ್ಮ್ ರವರು ವಿವರಿಸಿದ್ದಾರೆ. ಇಲ್ಲಿ ಒಂದೇ ಸಮಯದಲ್ಲಿ ಮಹಿಳಾ ಅಭಿಮಾನಿ ಹಾಗೂ ಮಹಿಳೆಯರ ಮೇಲೆ ಸಂದೇಹವಿರುವ ಲೇಖಕರ ಅನಿರ್ದಿಷ್ಟ ವ್ಯಕ್ತಿತ್ವವನ್ನು ಕಾಣಬಹುದು. ಏನೇ ಆದರೂ ಅವರು ಒಬ್ಬ ಮನುಷ್ಯರಲ್ಲವೆ.

ಎಲ್ಲಾ ಕಾಲದ ಸಾರ್ವತ್ರಿಕ ಓದುಗರನ್ನು ಪ್ರಭಾವಿಸುವ ಈ ಪ್ರೇಮ ಪ್ರತಿಪಾದನೆಯ ಮೂಲಕ ಹಾಗೂ ಲೌಕಿಕ ಸನ್ನಿವೇಶಗಳ ಮೂಲಕ ಮಧ್ಯಕಾಲೀನ ಸ್ಪೇನ್ ನಿವಾಸಿಗಳ ಜೀವನದ ಕೆಲವು ಅಂಶಗಳನ್ನು ಹಾಗೂ ಸಂಸ್ಕೃತಿಯನ್ನು ಸಣ್ಣ ಪ್ರಮಾಣದಲ್ಲಾದರೂ ಅರಿತುಕೊಳ್ಳಲು ನಮಗೆ ಸಾಧ್ಯವಾಗುತ್ತದೆ. ಮನೆಯೊಳಗೆ ಪರದೆಯ ಹಿಂದೆ ನಿಂತುಕೊಂಡು ಮನೆಯ ಆಡಳಿತದ ಚುಕ್ಕಾಣಿ ಹಿಡಿದುಕೊಂಡ ಮಹಿಳೆಯರ ವಿಶೇಷ ಸ್ಥಾನಮಾನವನ್ನು ಇದರಿಂದ ತಿಳಿದುಕೊಳ್ಳಬಹುದು. ಬಹುಶಃ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇತರ ಕಾಲಗಳಲ್ಲಿ ಕಾಣಲು ಸಾಧ್ಯವಾಗುವುದಕ್ಕಿಂತಲೂ ಹೆಚ್ಚು ಆ ಕಾಲದ ಮಹಿಳೆಯರು  ಅಧಿಕಾರವನ್ನು ಹೊಂದಿದ್ದರು.

ಇಬ್ನ್ ಹಸ್ಮ್ ತನ್ನ ಹೃದಯದ ನೋವನ್ನು ಪತ್ರದ ಮೂಲಕ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ರೂಪದಲ್ಲಿ ಪ್ರಬಂಧಗಳನ್ನು ಬರೆಯುತ್ತಿದ್ದರು. A Falling in love at first sight (ಮೊದಲ ನೋಟದಲ್ಲಿ ಪ್ರೀತಿಯಲ್ಲಿ ಬೀಳುವುದು), Of Hitting With Eyes (ಕಣ್ಣು ಹೊಡೆಯುವುದು), Of concealing the secret (ಪ್ರೇಮ ರಹಸ್ಯ ಮರೆಮಾಚುವುದು) ಇತ್ಯಾದಿ ಪ್ರೇಮ ಪ್ರಗತಿ ಪ್ರಸಂಗಗಳಾದರೆ, of the slanderer (ಅಪಪ್ರಚಾರ ಮಾಡುವುದು), Of The betrayal (ವಂಚಿಸುವುದು/ ಪ್ರೇಮಭಗ್ನತೆ) ಇಂತಹ ಶೀರ್ಷಿಕೆಗಳನ್ನು ಒಳಗೊಂಡಿರುವ ಇಪ್ಪತ್ತೊಂಭತ್ತು ಅಧ್ಯಾಯಗಳಿವೆ ಅವರ ಕೃತಿಯಲ್ಲಿ. ಒಂದೊಂದು ಅಧ್ಯಾಯಗಳಲ್ಲೂ ಪವಿತ್ರ ಕುರ್ಆನಿನ ಸೂಕ್ತಗಳು, ಪೈಗಂಬರ್ ಮಹಮ್ಮದರ ವಚನಗಳು ಹಾಗೂ ಇಬ್ನ್ ಹಸ್ಮ್ ಸ್ವತಃ ತಾವೇ ಬರೆದ ಕವಿತೆಗಳು, ಪ್ರೀತಿಯ ಸಾಕ್ಷಾತ್ಕಾರದ ದೈನಂದಿನ ಉದಾಹರಣೆಗಳನ್ನು ಸೇರಿಸಿ ಅವರು ತಮ್ಮ ಅಭಿಪ್ರಾಯಗಳನ್ನು ಹಾಗೂ ಆಲೋಚನೆಗಳನ್ನು ಉಪಯೋಗಿಸಿ ವಾದವನ್ನು ಸಮರ್ಥಿಸಿಕೊಳ್ಳುತ್ತಾರೆ.

ಆ ಕಾಲದ ವಿದ್ವಾಂಸರ ನಡುವೆ ವ್ಯಾಪಕವಾಗಿ ಅಂಗೀಕೃತವಾದ ತತ್ವಶಾಸ್ತ್ರದ ಭಾಗ ‘ನಿಯೋ ಪ್ಲಾಟೋನಿಸ್ಟ್’ ಪ್ರವೃತ್ತಿಗಳ ಕುರಿತು ತನ್ನ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಸಿದ್ಧಾಂತದ ಪ್ರಕಾರ, ಈ ಜಗತ್ತನ್ನು ಆತ್ಮಗಳ ಕಾಲ್ಪನಿಕ ಕ್ಷೇತ್ರದಿಂದ ನಿರ್ಮಾಣ ಮಾಡಲಾಗಿದೆ ಎಂದಾಗುತ್ತದೆ. ಪರಿಪೂರ್ಣತೆಯೇ ಅಸ್ಥಿತ್ವದಲ್ಲಿರುವುದು ಹಾಗೂ ಅದನ್ನೇ ಆತ್ಮವೂ ಬಯಸುವುದು. ಅದೇ ಸಮಯದಲ್ಲಿ ಭೌತಿಕ ಲೋಕವು ಅಪೂರ್ಣ ಅಸ್ತಿತ್ವದಲ್ಲಿರುತ್ತದೆ ಎಂದು ಚಿಂತನಾಧಾರೆ ವಾದಿಸುತ್ತದೆ. ಇದೇ ಕಾರಣಕ್ಕೆ ಇಬ್ನ್ ಹಸ್ಮ್ ಈ ರೀತಿ ಹೇಳಿಕೆ ನೀಡಿದ್ದಾರೆ, ”ನನ್ನ ಅಭಿಪ್ರಾಯದಲ್ಲಿ ಪ್ರೀತಿಯು ಲೌಕಿಕ ಜಗತ್ತಿನ ಚದುರಿದ ಆತ್ಮಗಳ ನಡುವಿನ ಒಕ್ಕೂಟವಾಗಿದೆ. ಅದು ಭೌತಿಕ ಜಗತ್ತಿನಲ್ಲಿ ವಿಂಗಡಣೆ ಮಾಡಲಾಗದ ಆತ್ಮಗಳಾಗಿವೆ ಅಥವಾ ಒಂದು ವಸ್ತುವಿನ ವಿಶಿಷ್ಟವಾದ ಕಣಗಳ ಸಂಯೋಜನೆಯಾಗಿದೆ.”

ಇಬ್ನ್ ಹಸ್ಮ್ ಅವರ ಪ್ರಕಾರ, ಪ್ರೇಮಿಗಳು ನಿಯಂತ್ರಣವನ್ನು ಮೀರಿ ತನ್ನ ಉಳಿದ ಅರ್ಧದೊಂದಿಗೆ ಮತ್ತೆ ಒಂದಾಗಬೇಕೆಂದು ಆಗ್ರಹಿಸುತ್ತಾರೆ. ಅವರ ಆತ್ಮ ಮುಕ್ತವಾಗಿ ಇರುತ್ತದೆ ಎಂಬುದು ವಾಸ್ತವ. ಅವಳು ಅಥವಾ ಅವನು ತನ್ನ ಅಂತರಂಗದಲ್ಲಿ ನೆಲೆಸಿದ್ದಾರೆ ಎಂದು ಅವರು ತಿಳಿದಿರುತ್ತಾರೆ. ಅವನು ತನ್ನ ಅರ್ಧವನ್ನು ಪಡೆದುಕೊಳ್ಳುವುದಕ್ಕೆ ಅವಳ ಹಿಂದೆ ಅಲೆದಾಡುತ್ತಾನೆ ಮತ್ತು ಪ್ರಯತ್ನ ನಡೆಸುತ್ತಿರುತ್ತಾನೆ. ಎಲ್ಲಾ ಸಮಯದಲ್ಲೂ ನೋಡುತ್ತಿರಲು ಆತ್ಯಂತಿಕವಾಗಿ ಬಯಸುತ್ತಾನೆ. ಅಯಸ್ಕಾಂತವು ಕಬ್ಬಿಣವನ್ನು ಆಕರ್ಷಿಸುವಂತೆ ಅವನು ಅವಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾನೆ.

ಮಧ್ಯಕಾಲೀನ ಸ್ಪಾನಿಷ್ ಮುಸ್ಲಿಂ ಜನಜೀವನವು ಎಷ್ಟು ರಸವತ್ತಾದುದು ಎಂದು ಕುತೂಹಲಕಾರಿಯಾಗಿ ಚಿತ್ರಿಸುವ The Sign of Love ಎಂಬ ಮೊದಲ ಅಧ್ಯಾಯದ ಪ್ರಿಯಕರ-ಪ್ರೇಯಸಿಯರ ವರ್ಣನೆಯೊಂದಿಗೆ ಶೃಂಗಾರಾತ್ಮಕವಾದ ಪ್ರಸ್ತುತ ಕೃತಿಯ ಕುರಿತಾದ ಈ ಟಿಪ್ಪಣಿಯನ್ನು ಕೊನೆಗೊಳಿಸಬಹುದು.
“ಅವರು ಪರಸ್ಪರ ಅತಿಯಾಗಿ ಪ್ರೀತಿಸಿ ಅವರ ಅನ್ಯೋನ್ಯ ಸಂಬಂಧವು ಅತ್ಯಂತ ನಾಜೂಕಾಗಿ ಬದಲಾದಾಗ ಇಬ್ಬರೂ ಕೂಡ ನ್ಯಾಯಯುತವಾದ ಯಾವುದೇ ಕಾರಣವಿಲ್ಲದೆ ಇನ್ನೊಬ್ಬರ ವಿರುದ್ಧ ತಿರುಗಿ ಬೀಳುತ್ತಾರೆ. ಒಬ್ಬರು ಹೇಳುವುದನ್ನು ಮನಃಪೂರ್ವಕವಾಗಿ ಇನ್ನೊಬ್ಬ ವಿರೋಧಿಸುತ್ತಾನೆ. ಇಬ್ಬರೂ ಪರಸ್ಪರ ಇಷ್ಟವಿಲ್ಲದ ವಿಷಯಗಳನ್ನೇ ಮಾತಾಡುತ್ತಿರಬಹುದು. ಕ್ಷುಲ್ಲಕ ವಿಷಯಗಳನ್ನು ಮುಂದಿಟ್ಟು ಅವರು ಆಕ್ರಮಣಕಾರಿಯಾಗಿ ಜಗಳಾಡಬಹುದು. ಅವರಲ್ಲೊಬ್ಬ ಹೇಳುವ ಪ್ರತಿ ವಾಕ್ಯವನ್ನೂ ಇನ್ನೋರ್ವ ಬೇಕುಬೇಕೆಂದೇ ದುರ್ವ್ಯಾಖ್ಯಾನ ಮಾಡಬಹುದು. ಈ ಎಲ್ಲಾ ಉಪಾಯಗಳು ಪ್ರತಿಯೊಬ್ಬ ಪ್ರೇಮಿಯೂ ತನ್ನ ಅರ್ಧದಿಂದ ಏನನ್ನು ಬಯಸುತ್ತಾನೆ ಎಂದು ಸೂಕ್ಷ್ಮವಾಗಿ ಅವಲೋಕಿಸಲು ಮತ್ತು ಸಾಬೀತುಪಡಿಸಲು ಸಾಧ್ಯವಾಗುತ್ತದೆ.”

ಕನ್ನಡಕ್ಕೆ : ಅಸ್ಲಂ ಮುಈನಿ, ಬೆಳಾಲು

Leave a Reply

*