ಕಚ್ಚಾದ: ಕೆಚ್ಚೆದೆಯ ಮಹಿಳೆಯ ಬದುಕಿನ ಹೋರಾಟ ಕಥನ

ಕನ್ನಡದ ಹಿರಿಯ ಕಥೆಗಾರ, ಕಾದಂಬರಿಕಾರರಾದ ಫಕೀರ್ ಮುಹಮ್ಮದ್ ಕಟ್ಪಾಡಿಯವರ ಕಚ್ಚಾದ ಕಾದಂಬರಿ ಸುಧಾ ವಾರಪತ್ರಿಕೆಯಲ್ಲಿ ಮೊದಲು ಧಾರಾವಾಹಿಯಾಗಿ ಕನ್ನಡ ಓದುಗರ ಮನೆಮನ ತಲುಪಿ,  ನಂತರ ಪುಸ್ತಕದಲ್ಲಿ ಪ್ರಕಟವಾಗಿ 28 ವರ್ಷಗಳು ಕಳೆದಿವೆ. ಬಂಡಾಯ ಚಳವಳಿ‌ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬರೆದಿರಬಹುದಾದ  ಈ ಕಾದಂಬರಿಯ ಕಥೆ ಉಡುಪಿ ಜಿಲ್ಲೆಯ ಒಂದು ಕುಗ್ರಾಮದಲ್ಲಿ ನಡೆಯುವಂತದ್ದು. ಈ ಕಾದಂಬರಿ ಬ್ಯಾರಿ ಸಮುದಾಯದ ಸ್ವಾಭಿಮಾನಿ ವ್ಯಕ್ತಿತ್ವದ, ಕಷ್ಟಕೋಟಲೆಗಳ ನಡುವೆಯೂ ಕೆಚ್ಚೆದೆಯ ಮನೋಭಾವದಿಂದ ಬದುಕನ್ನು ಸ್ವೀಕರಿಸುವ ಕಚ್ಚಾದ ಎಂಬ ದಿಟ್ಟ ಮಹಿಳೆಯ ಬದುಕನ್ನು ಸೃಜನಶೀಲ ವಿವರಗಳೊಂದಿಗೆ ಕಲಾತ್ಮಕ ಚೌಕಟ್ಟಿನೊಳಗೆ ಹಿಡಿದಿಡಲು ಪ್ರಯತ್ನಿಸುತ್ತದೆ. ಅದೇ ಬ್ಯಾರಿ ಸಮುದಾಯಕ್ಕೆ ಸೇರಿದ ನಾನು ಮಹಾನಗರ ಬೆಂಗಳೂರಿನಲ್ಲಿ ಕುಳಿತು ಕಾದಂಬರಿ ಪ್ರಕಟವಾದ ಇಪ್ಪತ್ತೆಂಟು ವರ್ಷಗಳ ನಂತರ ಓದಿದೆ.‌ ಎರಡೂವರೆ ದಶಕದ ನಂತರವೂ ಈ ಕಾದಂಬರಿ ನನ್ನ ಮನಸಿನಾಳಕ್ಕೆ ಇಳಿದು, ಕಾಡುತ್ತಿರುವ ಅಚ್ಚರಿಯ ಕುರಿತು ಈಗಲೂ ಆಲೋಚಿಸುತ್ತಿರುವೆ.

ಹಾಗೆ ನೋಡಿದರೆ ಈ ಕಾದಂಬರಿಯಲ್ಲಿ ಚಿತ್ರಿತವಾಗಿರುವ ಪರಿಸರ ಈಗ ಬದಲಾಗಿದೆ. ಗಲ್ಫ್ ವಲಸೆ ಮತ್ತು ಇಂಗ್ಲಿಷಿನ ಪ್ರಭಾವದಿಂದ ಭಾಷೆಯೂ ಬದಲಾಗಿದೆ. ಈ ಪರಿಸರ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹುಟ್ಟಿದವನು ನಾನು.‌ ಬಹುಶಃ ಕಚ್ಚಾದಳ ಮೊಮ್ಮಗನೋ ಮರಿಮೊಮ್ಮಗನೋ ಆಗಬೇಕಾದವನು. ಆದ್ದರಿಂದ ನನ್ನ ಸೀಮಿತ ದೃಷ್ಟಿಯಲ್ಲಿ ಕಚ್ಚಾದ ಕಾದಂಬರಿ ಯಾಕೆ ಮುಖ್ಯ ಅನ್ನುವುದನ್ನು ಹೇಳುವ ಪ್ರಯತ್ನ ಮಾಡುವೆ. 

ಕಚ್ಚಾದ ಇತಿಹಾಸವೂ ಹೌದು, ಬದುಕಿನ ಮೌಲ್ಯಗಳ ಹುಡುಕಾಟವೂ ಹೌದು. ನನ್ನ ಬಾಲ್ಯದಲ್ಲಿ ನಾನು ಕಂಡು ಮರೆತ ಹಲವು ಸಂಗತಿ, ವ್ಯಕ್ತಿತ್ವಗಳನ್ನು ಕಚ್ಚಾದ ಮತ್ತೆ ನೆನಪಿಸಿದಳು. ನೆನಪಿನ ಕೋಶದಲ್ಲೆಲ್ಲೋ ನಿದ್ರಿಸುತ್ತಿದ್ದ ಹಲವು ಸಂಗತಿಗಳನ್ನು ಎಬ್ಬಿಸಿ, ಅವುಗಳ ಪುನರ್ ಭೇಟಿ ಮಾಡಲು ಒಂದು ನಿಮಿತ್ತವಾದಳು ಎನ್ನಬಹುದು. ನಾನು ಹುಟ್ಟಿ ಬೆಳೆಯುವಷ್ಟಕ್ಕೆ ನಮ್ಮ‌ ಪರಿಸರದ ಗದ್ದೆಗಳೆಲ್ಲಾ ಮಾಯವಾಗಲು ಆರಂಭಿಸಿದ್ದವು. ಅಲ್ಲಿ ಇಲ್ಲಿ ಕೆಲವೊಂದು ಗದ್ದೆಗಳು ನೋಡಿಕೊಳ್ಳುವವರಿಲ್ಲದೆ ನಶಿಸುತ್ತಿರುವ ಕೃಷಿ ಸಂಸ್ಕೃತಿಯ ಪ್ರೇತವೆಂಬಂತೆ ಇದ್ದವು ಬಿಟ್ಟರೆ ಅವುಗಳಲ್ಲಿ ಯಾವ ಜೀವಂತಿಕೆಯೂ ಇರಲಿಲ್ಲ. ಕೆಲವೊಂದು ಗದ್ದೆಗಳು ಕ್ರಿಕೆಟ್ ಮೈದಾನ, ಮಳೆಗಾಲದಲ್ಲಿ ಮಕ್ಕಳಿಗೆ ಈಜು ಕಲಿಯುವ ಕೊಳ, ತೆಂಗು, ಕಂಗುಗಳ ತೋಟ ಮೊದಲಾಗಿ ಕಾಲಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿತ್ತು.‌ ಭತ್ತ ಬೆಳೆದವರಿಗೆ ಕೂಲಿಯಾಗಿ ಭತ್ತ ಕೊಡುವ ಸಿಸ್ಟಮ್ ಹೋಗಿ ಹಣದ ವ್ಯವಸ್ಥೆ ಮೇಲುಗೈ ಪಡೆದಿತ್ತು.  ಏನು ಕೆಲಸ‌ ಮಾಡಿದರೂ ಕೂಲಿ ರೂಪದಲ್ಲಿ ಹಣ ಕೊಡುವ ಮನಿ ಸಿಸ್ಟಮ್ ವ್ಯಾಪಕವಾಗಿತ್ತು. ಆದ್ದರಿಂದ ಕಚ್ಚಾದ ನನ್ನ ಮಟ್ಟಿಗೆ ನಾನು ಅರೆಬರೆಯಾಗಿ ಕಂಡ ಅಥವಾ ನಾನು ಹುಟ್ಟುವಾಗ ಅವಸಾನದ ಅಂಚಿಗೆ ಸರಿಯುತ್ತಿದ್ದ(ಕನಿಷ್ಟಪಕ್ಷ ನನ್ನ ಪರಿಸರದಲ್ಲಿ) ಸಂಸ್ಕೃತಿಯ ಜೀವಂತಿಕೆಯೆಡೆಗಿನ ರಿವಿಸಿಟ್. ಅಂತಹ ವಿಶೇಷವಾದ ಅವಕಾಶವನ್ನು ಈ ಕಾದಂಬರಿ ನನಗೆ ನೀಡುವುದರಲ್ಲಿ ಯಶಸ್ವಿಯಾಗಿದೆ. 

ಕಚ್ಚಾದಳಂತಹ ರೆಬೆಲ್ ವ್ಯಕ್ತಿತ್ವದ ಲೇಡಿಗಳು ಈಗಲೂ ಇದ್ದಾರೆ. ಅಂತಹ ವ್ಯಕ್ತಿತ್ವಗಳ ಕುರಿತು ಬರೆಯುವವರು ಕಡಿಮೆಯಾಗಿದ್ದಾರೆ ವಿನಾ ಕಚ್ಚಾದ ಯಾವತ್ತೂ ಸಮಾಜದಲ್ಲಿ ಮತ್ತೆ ಮತ್ತೆ ಹುಟ್ಟಿ ಬರುವ ವ್ಯಕ್ತಿತ್ವ.‌ ಕಾದಂಬರಿಯ ಮೊ‌ದಲ ಅಧ್ಯಾಯದಲ್ಲೇ ಕಚ್ಚಾದಳ ವ್ಯಕ್ತಿತ್ವದ ಅನಾವರಣವಾಗುತ್ತದೆ. ಈ ಕಚ್ಚಾದ ಅನ್ಯಾಯವನ್ನು ಸಹಿಸುವವಳಲ್ಲ. ದಡ್ಡು ಭತ್ತ ಕೊಟ್ಟು ತನ್ನನ್ನು ವಂಚಿಸಿದ ಸಾವುಕಾರ ಹಾಜಿಯ ನೀರಿಳಿಸಿ ಬಿಡುತ್ತಾಳೆ. ಧನಬಲ, ತೋಳ್ಬಲ, ರಾಜಕೀಯ ಪ್ರಭಾವ ಇದ್ದೂ ಸಾಹುಕಾರ್ ಹಾಜಿ ಯಕಃಶ್ಚಿತ್ ಹಳ್ಳಿ ಮಹಿಳೆ ಕಚ್ಚಾದಳ ಮುಂದೆ ಸೋತು ಬೆಪ್ಪಾಗುತ್ತಾನೆ. ಕಚ್ಚಾದಳಂತಹವರ ಆಯುಧವೇ ಅವರ ಬಾಯಿ. ಆ ಬಾಯಿಂದ ಉದುರುವ ಆಣಿಮುತ್ತುಗಳನ್ನು ಎದುರಿಸಲಾಗದೆ ಸಾಹುಕಾರ್ ಹಾಜಿ ಪತರಗುಟ್ಟುವ ಸಂದರ್ಭ ರೋಚಕವಾಗಿ ಚಿತ್ರತವಾಗಿದೆ. 

ಇಂತಹ ರೆಬೆಲ್ ಕ್ಯಾರೆಕ್ಟರಿನ ಕಚ್ಚಾದಳ ಬದುಕು ಮುಂದಿನ ಅಧ್ಯಾಯಗಳಲ್ಲಿ ತಣ್ಣಗೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಆರಂಭದ ಅಧ್ಯಾಯ ಓದುವಾಗ ಆಗುವ ರೋಮಾಂಚನ ಎರಡನೇ ಅಧ್ಯಾಯದಲ್ಲಿ ಕೊಂಚ ಇಳಿದರೂ ಮುಂದಿನ ಅಧ್ಯಾಯಗಳು ಕುತೂಹಲ ಹುಟ್ಟಿಸಿ ಕಚ್ಚಾದಳ ಸಮಸ್ಯಾತ್ಮಕ ಬದುಕಿನೊಳಗೆ ನಮ್ಮನ್ನು ಇಳಿಸಿಕೊಳ್ಳುತ್ತಾ ಹೋಗುತ್ತವೆ. ನಡುಮಧ್ಯಕ್ಕೆ ಬರುವ ಹೊತ್ತಿಗೆ ಸಂಪೂರ್ಣವಾಗಿ ಕಚ್ಚಾದ ನಮ್ಮನ್ನು ಆವರಿಸಿಕೊಂಡುಬಿಟ್ಟಿರುತ್ತಾಳೆ.‌ ನಮ್ಮ ಕಣ್ಣ ಮುಂದೆಯೇ ಓಡಾಡುತ್ತಿದ್ದಾಳೇನೋ ಎಂದು ಭಾಸವಾಗುವಂತೆ ವಿವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಕಟ್ಪಾಡಿಯವರ ಸಂಯಮದ ಬರವಣಿಗೆಯ ಶಕ್ತಿ ಇದು. 

ಮೊದಲ ಅಧ್ಯಾಯದಲ್ಲಿ ಕಚ್ಚಾದ ಲಂಕೇಶರ ಮುಸ್ಸಂಜೆಯ ಕಥಾಪ್ರಸಂಗದಲ್ಲಿನ ರಂಗವ್ವಳನ್ನು ನೆನಪಿಸಿದರೆ, ಶ್ರಮಕ್ಕೆ‌ ತಕ್ಕಂತೆ ಕೂಲಿ ಕೊಡಲು ನಿರಾಕರಿಸುವ ಧಣಿಗಳ‌ ವಿರುದ್ಧ ಇಸ್ಟ್ರೈಕ್ ಮಾಡುವವರಿಗೆ ಬೆಂಬಲವಾಗಿ ನಿಲ್ಲುವ ಸಂದರ್ಭದಲ್ಲಿ ಮ್ಯಾಕ್ಸಿಂ ಗಾರ್ಕಿಯ ‘ತಾಯಿ’ ಆಗಿಯೂ, ಕುಟುಂಬಕ್ಕಾಗಿ ಏದುವಾಗ ಲಂಕೇಶರ ‘ಅವ್ವ’ ಹಾಗೂ ದೇವನೂರು ಮಹಾದೇವರ ಒಡಲಾಳದ  ಸಾಕವ್ವನನ್ನು ಕಚ್ಚಾದ ನೆನಪಿಸುತ್ತಾಳೆ.‌ ಈ ಎಲ್ಲರನ್ನು ನೆನಪಿಸುತ್ತಲೇ ಅವೆಲ್ಲವನ್ನು ಮೀರಿ ಕಚ್ಚಾದ ಕಾದಂಬರಿಯುದ್ದಕ್ಕೂ ತನ್ನದೇ ಆದ ‘ಬ್ಯಾರ್ದಿ’ಯ ವ್ಯಕ್ತಿತ್ವವನ್ನು ಪಡೆದು ಅರಳಿ ನಿಲ್ಲುತ್ತಾಳೆ. 

ಲಂಕೇಶ್ ಅವರ ಅವ್ವ ಕವನದ ಒಂದು ಸಾಲು ಇಲ್ಲಿ ನೆನಪಾಗುತ್ತದೆ. 

“ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.
ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ.”

ಕಚ್ಚಾದಳೂ ಹೀಗೆಯೇ; ಎಂದೂ ತನಗಾಗಿ ಬದುಕದೆ ಬನದ ಕರಡಿಯಂತೆ ಮಗನನ್ನು ಪ್ರೀತಿಸಿದವಳು. ಹಳೆಯ ಟ್ರಂಕಿನ ಡಬ್ಬಿಯಲಿ ಕಾಸು ಗಂಟಿಕ್ಕಿದಳು.‌ ಊರೂರು ಸುತ್ತಿ, ಒಬ್ಬ ಮಗನ ಸಾವಿಗೆ ಕಾರಣನಾಗಿ, ವೇಶ್ಯೆಯರ ಸಹವಾಸ ಮಾಡಿ,  ಕೊನೆಗಾಲದಲ್ಲಿ ರೋಗ ಹತ್ತಿಸಿಕೊಂಡು ಮನೆಗೆ ಬಂದ ಗಂಡನ್ನ ಪಿರಿಪಿರಿ ಮಾಡುತ್ತಲೇ ಸಾಕಿದಳು. ಬೈದಳು, ಗುದ್ದಾಡಿದಳು, ಪ್ರೀತಿಸಿದಳು; ಆದರೆ ಈ ಎಲ್ಲವನ್ನು ಮಗನಿಗೋಸ್ಕರ ಮಾಡಿದಳು ಎಂಬುದು ಕಚ್ಚಾದಳ ತಾಯ್ತನದ ಬದ್ಧತೆಗೆ ದ್ಯೋತಕವಾಗಿದೆ.‌ ಬಹುಶಃ ಬೇಜವಾಬ್ದಾರಿ ಗಂಡನ ದೆಸೆಯಿಂದ ಪ್ರತಿನಿತ್ಯವೂ ದುಡಿದರೆ ಮಾತ್ರ ಗಂಜಿ ಎನ್ನುವ ಅನಿವಾರ್ಯತೆಯಲ್ಲಿ ಕುಟುಂಬದ ನೊಗ ಹೊತ್ತು ಏಗುವ ಎಲ್ಲಾ ಗ್ರಾಮೀಣ ತಾಯಂದಿರೂ ಹೀಗೆಯೇ ಇರುತ್ತಾರೆ. ಬಿಡಿ ಬಿಡಿಯಾಗಿ ನೋಡಿದಾಗ ಪಿರಿಪಿರಿಯ ಜಗಳಗಂಟಿಯರಂತೆ ಕಾಣುವ ಅವರು ಇಡಿಯಾಗಿ ನೋಡಿದಾಗ ಕುಟುಂಬಕ್ಕಾಗಿ ತಮ್ಮ‌ ಬದುಕು, ಆಸೆ- ಆಕಾಂಕ್ಷೆಗಳನ್ನು, ಕನಸುಗಳನ್ನು ಪಣಕ್ಕಿಡುವ ಮಹಾತಾಯಿಯರಂತೆ ಕಾಣಿಸುತ್ತಾರೆ.‌

ಆದರೆ, ಕಚ್ಚಾದಳಂತಹ ಅನ್ಯಾಯದ ವಿರುದ್ಧ ವೀರೋಚಿತವಾಗಿ ಹೋರಾಡುವ ವ್ಯಕ್ತಿತ್ವವೂ ಸಹ ಸಮಾಜದ ಕೆಲವೊಂದು ಅನಿಷ್ಠಗಳನ್ನು ಮೀರುವುದು ಸಾಧ್ಯವಾಗುವುದಿಲ್ಲ ಎಂಬುದು ನಮ್ಮ ಸಮಾಜದ ಕುಚೋದ್ಯವೂ ಹೌದು.‌ ಉದಾಹರಣೆಗೆ ಆ ಕಾಲದಲ್ಲಿ ವ್ಯಾಪಕವಾಗಿದ್ದ ‘ಕಾಶಿ- ಬಂಗಾರ್’ ಎಂಬ ವರದಕ್ಷಿಣೆ ಪಿಡುಗಿನ ವಿಷಯದಲ್ಲಿ ಕಚ್ಚಾದ ವ್ಯವಸ್ಥೆಯ ಪರವಿರುವಂತೆ ತೋರುತ್ತಾಳೆ. ಇದು ಒಂದು ರೀತಿಯಲ್ಲಿ ಒಂದು ಕಡೆ ವ್ಯವಸ್ಥೆಯ ಅನಿಷ್ಠಗಳ ವಿರುದ್ಧ ಹೋರಾಡುವವರೇ ಇನ್ನೊಂದು ಕಡೆ ಆ ವ್ಯವಸ್ಥೆಯ ಇನ್ನೊಂದು ಬಗೆಯ ಅನಿಷ್ಠದ ಪೋಷಕರಾಗುವ ವೈರುಧ್ಯದ ಚಿತ್ರಣ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಕಟ್ಪಾಡಿಯವರು ಎಲ್ಲೂ ಕಚ್ಚಾದಳನ್ನು ವೈಭವೀಕರಿಸದೆ, ಸಮಾಜದಿಂದ ಬೇರ್ಪಡಿಸಿ ಅವಳನ್ನೊಂದು ಕೇವಲ ಆದರ್ಶವಾಗಿಸದೆ ಎಲ್ಲಾ ಓರೆಕೋರೆಗಳೊಂದಿಗೆ ಜೀವಂತ ಪಾತ್ರವಾಗಿ ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಚ್ಚಾದಳಂತಹ ಕಚ್ಚಾದಳೂ ಸಹ ಬದಲಾಗುತ್ತಾಳೆ. ಗರ್ಭಿಣಿ ಸೊಸೆಯನ್ನು ಅವಳು ಸ್ವೀಕರಿಸುವ ರೀತಿ ಅದ್ಭುತವಾಗಿದೆ. ಜೀವನಪರ್ಯಂತ ದುಡಿದು ಗಂಟಿಕ್ಕಿದ ಹಣವನ್ನು ಅವಳು ತನಗಾಗಿ ಖರ್ಚು ಮಾಡದೆ ಆಗಷ್ಟೇ ಹುಟ್ಟಿದ ಹೆಣ್ಣು ಮಗುವಿಗೆ ಚಿನ್ನದ ಸರ ಮಾಡಿಕೊಡುವ ಅವಳ ನಿರ್ಧಾರದಲ್ಲಿ ಮುಂದಿನ ಪೀಳಿಗೆ‌ ನೆಮ್ಮದಿಯ, ಸಮೃದ್ಧಿಯ ಬದುಕನ್ನು ಪಡೆಯಲಿ ಎಂಬ ಹಾರೈಕೆ ಢಾಳಾಗಿ ಗೋಚರಿಸುತ್ತದೆ.‌ ತನ್ನವರಿಗೆ ಯಾರಿಗೂ ಅರ್ಥವಾಗದ ಕಚ್ಚಾದ ಕೊರಗಪ್ಪ ಮತ್ತು ಪದ್ಮಳಿಗೆ ಅರ್ಥವಾಗುತ್ತಾರೆ.‌ ಕಚ್ಚಾದ ಮಗುವಿಗೆ ಚಿನ್ನ ಕೊಡುವ ಸಂದರ್ಭದಲ್ಲಿ ಪದ್ಮಳ‌ ಪ್ರತಿಕ್ರಿಯೆ ಕಚ್ಚಾದ ಮತ್ತು ಆಕೆಯ ನಡುವಿನ ಆತ್ಮೀಯತೆಗೆ ಹಿಡಿದ ಕೈಗನ್ನಡಿ.‌ ನಿಮಗಾರಿಗೂ ಅರ್ಥವಾಗದ ಕಚ್ಚಾದ ನನಗೆ ಅರ್ಥವಾಗಿದ್ದಾಳೆ ಎಂಬ ಭಾವವೂ ಅವಳ‌ ನಗೆಯಲ್ಲಿದೆ.

ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಕಚ್ಚಾದ ಕಾದಂಬರಿ ಬ್ಯಾರಿ ಪರಿಸರ ಮತ್ತು ಸಂಸ್ಕೃತಿಯ ಸಂಕ್ಷಿಪ್ತ ದಾಖಲೀಕರಣವೂ ಹೌದು. ಬ್ಯಾರಿ ಸಂಸ್ಕೃತಿ ನಿಂತ ನೀರಲ್ಲ, ಅನ್ಯಾಯದ ವಿರುದ್ಧ ಅದು ಕೈಕಟ್ಟಿ ಕೂರುವ ಜನಾಂಗವೂ ಅಲ್ಲ. ಇತರ ಎಲ್ಲರಿಗೂ ಇರುವಂತೆ ಆ ಜನಾಂಗಕ್ಕೆ ಅದರದ್ದೇ ಆದ ಇತಿ ಮಿತಿಗಳಿವೆ. ಬ್ಯಾರಿ ಜನಾಂಗದ ನಿಜವಾದ ಶಕ್ತಿ ಅವರ ದುಡಿತದಲ್ಲಿದೆ. ಬದುಕಿನ ದುರಂತಗಳನ್ನು ಕೆಚ್ಚೆದೆಯಲ್ಲಿ ಸ್ವೀಕರಿಸುವುದರಲ್ಲಿದೆ. ನೋವು ನಲಿವುಗಳನ್ನು ದರ್ಗಾದ ವಲಿಯ್ಯ್ ಅವರ ಮುಂದೆ ಹೇಳಿಕೊಂಡು ಬರ್ಕತ್ ಪಡೆಯುವ ಸೂಫಿ ಸಂಸ್ಕೃತಿಯ ಬೇರು ಬ್ಯಾರಿ ಸಮುದಾಯದಲ್ಲಿ ಆಳವಾಗಿ ಬೇರು ಬಿಟ್ಟಿದೆ. ಸೂಫಿಗಳು ಶ್ರಮ ಸಂಸ್ಕೃತಿಯ ಪೋಷಕರಾಗಿದ್ದರು. ಆದ್ದರಿಂದಲೇ ಬ್ಯಾರಿ ಸಂಸ್ಕೃತಿ ಸೂಫಿಗಳಿಂದ ಹೆಚ್ಚು ಪ್ರಭಾವಿತಗೊಂಡಿದೆ. ಬ್ಯಾರಿ ಎಂಬ ಪದವೇ ಬ್ಯಾರೆ ಎಂಬ ವ್ಯಾಪಾರವನ್ನು ಸೂಚಿಸುವ ತುಳು ಪದದಿಂದ ಹುಟ್ಟಿಕೊಂಡಿದೆ ಎಂಬ ವಾದವೂ ಈ ಹಿನ್ನೆಲೆಯಲ್ಲಿ ಮುಖ್ಯವಾಗಿದೆ.

ಇದು ಕೇವಲ ಬ್ಯಾರಿ ಸಮಾಜಕ್ಕೆ ಮಾತ್ರ ಸೀಮಿತವಾದ ವಿಶೇಷತೆಯಲ್ಲ, ಎಲ್ಲಾ ಸಮಾಜವೂ ಈ ರೀತಿಯ ಗುಣಗಳನ್ನು ಸಹಜವಾಗಿಯೇ ಹೊಂದಿರುತ್ತದೆ. ಮೇಲ್ವರ್ಗದ ಜನಗಳಿಗೆ ಹೋಲಿಸಿದರೆ ಕೆಳವರ್ಗದ ಜನರಲ್ಲಿ ಶ್ರಮ ಸಂಸ್ಕೃತಿ ಆಳವಾಗಿ ಬೇರೂರಿರುವುದು ಕಾಣಬಹುದು. ಕಚ್ಚಾದ ಕಾದಂಬರಿ ಬ್ಯಾರಿಗಳು ತಮ್ಮಂತೆಯೇ ಕೆಳವರ್ಗಕ್ಕೆ ಸೇರಿದ ಇತರ ಸಮುದಾಯಗಳ ಜನರೊಂದಿಗೆ ಎಷ್ಟು ಸಹಜವಾಗಿ, ತಮ್ಮದೇ ಒಡಹುಟ್ಟಿದವರು ಎಂಬಂತೆ ಬೆರೆಯುತ್ತಿದ್ದರು ಎಂಬುದರ ದಾಖಲೆಯೂ ಹೌದು.‌ ವರ್ಗ ಸಂಘರ್ಷದ ಹಿನ್ನೆಲೆಯಲ್ಲೂ ಕಚ್ಚಾದವನ್ನು ನೋಡಬಹುದು. ತಮ್ಮ ಬುಡಕ್ಕೆ ಬಂದಾಗ ಧಣಿಗಳು ಜಾತಿ, ಧರ್ಮ ಮರೆತು ಒಂದಾಗುತ್ತಾರೆ ಎಂಬುದು ಐತಿಹಾಸಿಕ ಸತ್ಯ.‌ ಅಲ್ಲಿ ಅವರಿಗೆ ಜಾತಿ, ಧರ್ಮಕ್ಕಿಂತ ತಮ್ಮ‌ ಹಿತಾಸಕ್ತಿಯ ರಕ್ಷಣೆಯೇ ಮುಖ್ಯವಾಗಿರುತ್ತದೆ.‌ ಆದರೆ, ಅದೇ ಧಣಿಗಳು ಅಗತ್ಯವಿದ್ದಾಗಲೆಲ್ಲಾ ಜಾತಿ, ಧರ್ಮ ಎಂದು ತಮ್ಮ ಕೂಲಿಯಾಳುಗಳ ನಡುವೆ ಬಿರುಕು ಉಂಟು ಮಾಡುವ ಕೆಲಸವನ್ನೂ ಮಾಡುತ್ತಿರುತ್ತಾರೆ.‌ ಕಚ್ಚಾದ ಕಾದಂಬರಿಯಲ್ಲಿ ಇದು ಅಸ್ಪಷ್ಟವಾಗಿ ಬಂದು ಹೋಗುತ್ತದೆ. ಧಣಿಗಳಲ್ಲಿರುವ ಅಸ್ಪೃಶ್ಯ ಮನೋಭಾವ ಕೂಲಿಯಾಳುಗಳಲ್ಲಿರುವುದಿಲ್ಲ. ಕಚ್ಚಾದಳಂತಹ ಸ್ವಾಭಿಮಾನಿಗಳಿಗೆ ಈ ಧಣಿಗಳು, ಅವರ ಆಡಂಬರ ಕಾಲಕಸಕ್ಕಿಂತ ಕಡಿಮೆ. ಅನಿವಾರ್ಯ ಸಂದರ್ಭದಲ್ಲಿ ಹಾಜಿಯಾರರ ಅಳಿಯನಿಗೆ ಬಿರಿಯಾನಿ ಮಾಡಿಕೊಡಲು ಹೋಗಬೇಕಾಗಿ ಬಂದರೂ ಕಚ್ಚಾದ ತನ್ನ ಸ್ವಾಭಿಮಾನವನ್ನು ಬಿಟ್ಟುಕೊಡುವುದಿಲ್ಲ. ಹಾಜಿಯಾರರ ಅಡುಗೆಮನೆಯನ್ನು ತನ್ನ ಸುಪರ್ದಿಗೆ ಪಡೆಯುವ ಅವಳ ಗತ್ತು ನಿಜಕ್ಕೂ ಬೆರಗುಗೊಳಿಸುವಂತದ್ದು. ಆ ಒಂದು ದಿನ ಹಾಜಿಯಾರರ ಮನೆಯಲ್ಲಿ ಅವಳು ಮನೆಗೆಲಸದವಳಂತಿರುವುದಿಲ್ಲ. ಮನೆಯೊಡತಿಯಂತಿರುತ್ತಾಳೆ. ಪರಿಸ್ಥಿತಿಯನ್ನು ತನ್ನ ಪರವಾಗಿ ಬಳಸಿಕೊಳ್ಳುವ ಕಚ್ಚಾದಳ ಜಾಣ್ಮೆ ಹಾಜಿಯಾರರು, ಅವರ ಪತ್ನಿ ಸೇರಿದಂತೆ ಆ ಮನೆಯ ಎಲ್ಲರನ್ನು ತನ್ನ ಆಣತಿಯಂತೆ ನಡೆಸಿಕೊಳ್ಳುವುದರಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಅವಳು ಬ್ಯಾಂಕ್ ಮ್ಯಾನೇಜರ್ ಮುಂದೆ ಚೇರ್ ಎಳೆದು ಕುಳಿತುಕೊಂಡು ಮಾತನಾಡುವಾಗಲೂ ಅವಳ ದಿಟ್ಟತನ, ಸ್ವಾಭಿಮಾನದ ನಡವಳಿಕೆ ಎದ್ದು ಕಾಣಿಸುತ್ತದೆ. ಕಚ್ಚಾದ ನಿಜಕ್ಕೂ ಇಷ್ಟವಾಗುವುದು ಇಂತಹ ಸಂದರ್ಭಗಳಲ್ಲಿ. 

ಕೂಡಿ ಬಾಳುವ ಸಂಸ್ಕೃತಿ ಗ್ರಾಮ ವಿಶಿಷ್ಟವಾದುದು. ಮನುಷ್ಯರು ಸುಖಕ್ಕಿಂತ ದುಃಖಗಳಲ್ಲಿ ಜಾತಿ, ಧರ್ಮಗಳ ಬೇಧ ಮರೆತು ಒಂದಾಗುತ್ತಾರೆ, ಬೆರೆಯುತ್ತಾರೆ ಎಂಬುದಕ್ಕೆ ಕಚ್ಚಾದ ಜೀವಂತ ಸಾಕ್ಷಿ.‌  ಕಚ್ಚಾದ ತನ್ನೆಲ್ಲಾ ನೋವು ನಲಿವುಗಳನ್ನು ನೆರೆಮನೆಯ ಕೊರಗಪ್ಪ ಮತ್ತು ಪದ್ಮಳ ಜೊತೆಗೆ ಹಂಚಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಳು. ಕೊರಗಪ್ಪ ಮತ್ತು ಪದ್ಮ ಒಂದು ದಿನ ಕಾಣಿಸದಿದ್ದರೆ ಅವಳು ಚಡಪಡಿಸುತ್ತಿದ್ದಳು.‌ ಇದು ಬ್ಯಾರಿ ಸಂಸ್ಕೃತಿಯ ಸಹಜ ಮೌಲ್ಯವೂ ಹೌದು. ಕಚ್ಚಾದಳ ಕಾಲದ ಎಲ್ಲಾ ಬ್ಯಾರಿ, ಬ್ಯಾರ್ದಿಯವರ ಬದುಕಿನಲ್ಲಿ ಒಬ್ಬ ಕೊರಗಪ್ಪ, ಪದ್ಮ ಇರುವುದು ಕಾಣಬಹುದು.‌ ಸೂರ್ಯ ಮೂಡುತ್ತಿದ್ದಂತೆ ನನ್ನಮ್ಮನನ್ನು ಹುಡುಕಿಕೊಂಡು ಬರುತ್ತುದ್ದ ಹೊನ್ನಮಕ್ಕ, ರಾಧಕ್ಕ ನೆನಪಾಗುತ್ತಾರೆ. ಅವರ ತಂದುಕೊಡುತ್ತಿದ್ದ ಹಲಸಿನ ಹಣ್ಣು, ಮಾವಿನ ಹಣ್ಣಿನ ಸಿಹಿ ಈಗಲೂ ಈ ನಾಲಗೆಯಿಂದ ಬಿಟ್ಟು ಹೋಗಿಲ್ಲ.  ಇವತ್ತು ಈ ಜನರ ನಡುವೆಯೂ ಬಿರುಕುಗಳುಂಟು ಮಾಡುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿರುವುದರಿಂದ ಮತ್ತು ಅಂತಹ ಪ್ರಯತ್ನಗಳ‌ ಹಿಂದೆ ಎಲ್ಲಾ ಸಮುದಾಯಗಳ ಮೇಲ್ವರ್ಗದ ಕುಳಗಳ ಪಾಲು ಹೆಚ್ಚಿರುವುದರಿಂದ ಕಚ್ಚಾದ ಕಾದಂಬರಿ ಚಿತ್ರಿಸುವ ಶ್ರಮಿಕ ವರ್ಗದ ಈ ಸಹಜ ಬೆರೆಯುವಿಕೆ ನನಗೆ ಮುಖ್ಯವಾಗಿ ಕಾಣಿಸುತ್ತದೆ.

– ಸ್ವಾಲಿಹ್‌ ತೋಡಾರ್


Leave a Reply

*