ಅರಬಿ, ಪರ್ಷಿಯನ್, ಅರ್ಮಾಯಿಕ್, ಗ್ರೀಕ್ ಭಾಷೆಗಳಲ್ಲಿ ಅತೀವ ಪಾಂಡಿತ್ಯವುಳ್ಳ ರೋಸೆಂಟಲ್ ರವರ ‘Knowledge Triumphant: The Concept of Knowledge in Medieval Islam’ ಎಂಬ ಕೃತಿಯ ಕುರಿತು ಕಿರು ಅವಲೋಕನ.
ಆಧುನಿಕ ಕಾಲದ ಪ್ರಸಿದ್ಧ ಇತಿಹಾಸಕಾರ ‘ಅರ್ನಾಲ್ಡ್ ಟಾಯ್ನ್ ಬಿ’ (1889-1975) ನಾಗರಿಕತೆಗಳ ಬೆಳವಣಿಗೆ ಮತ್ತು ಅಳಿವು ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿದವರಲ್ಲಿ ಪ್ರಮುಖರು. ಅವರ ಹನ್ನೆರಡು ಸಂಪುಟಗಳಿರುವ ‘ಎ ಸ್ಟಡಿ ಆಫ್ ಹಿಸ್ಟರಿ’ ಎಂಬ ಕೃತಿಯು ಗಮನಾರ್ಹವಾದುದು. ಮುಖ್ಯವಾಗಿ ಸರಿಸುಮಾರು ಹದಿನೇಳು ನಾಗರಿಕತೆಗಳ ಬಗ್ಗೆ ಅವರು ಸ್ಥೂಲ ಅಧ್ಯಯನ ನಡೆಸಿದ್ದಾರೆ. ಸಾಮಾನ್ಯವಾಗಿ ಇತಿಹಾಸದ ಅಧ್ಯಯನವು ತನ್ನದೇ ಆದ ವಿಧಾನವನ್ನು ಹೊಂದಿದೆ. ಪ್ರಾದೇಶಿಕ ಇತಿಹಾಸದಿಂದ ಹಿಡಿದು ಜಾಗತಿಕ ಇತಿಹಾಸದವರೆಗೆ ಈ ವ್ಯಾಪ್ತಿಯಲ್ಲಿ ಸೇರುತ್ತದೆ. ‘ಜಾಗತಿಕ ಇತಿಹಾಸ’ ವು (universal history) ಪ್ರಮುಖವಾಗಿ ಜಾಗತಿಕ ಪ್ರಸಕ್ತತೆಯನ್ನು ಹೊಂದಿರುವ ಇತಿಹಾಸಗಳು ಹಾಗೂ ಅದರ ನಿಯಮಾವಳಿಗಳನ್ನು ಹೊಂದಿದೆ.
ಟಾಯ್ನ್ ಬಿ ತನ್ನ ಅಧ್ಯಯನದಲ್ಲಿ ಕಾಲವಾಗಿ ಹೋದ ಇತಿಹಾಸಕಾರರನ್ನು ಸ್ಮರಿಸುವ ವೇಳೆ ಟ್ಯುನೀಷಿಯನ್ ತತ್ವಚಿಂತಕ ಹಾಗೂ ಇತಿಹಾಸಕಾರ ‘ಇಬ್ನ್ ಖಲ್ದೂನ್’ ರನ್ನು ಗೌರವಯುತವಾಗಿ ಉಲ್ಲೇಖಿಸುತ್ತಾ ‘ಅವರು ಅಪೂರ್ವ ಇತಿಹಾಸಕಾರರಲ್ಲೊಬ್ಬರು’ ಎಂದು ಬಣ್ಣಿಸುತ್ತಾರೆ. ಇತಿಹಾಸದ ಕ್ಷೇತ್ರದಲ್ಲಿ ಇಬ್ನ್ ಖಲ್ದೂನರು ನೀಡಿರುವ ಕೊಡುಗೆಗಳನ್ನು ಸ್ಮರಿಸುತ್ತಾರೆ.
ಐನೂರರಷ್ಟು ಪುಟಗಳಿರುವ ಪ್ರಸಿದ್ಧ ಇತಿಹಾಸ ಕೃತಿ ‘ಕಿತಾಬುಲ್ ಇಬರ್’ ಗೆ ಮುನ್ನುಡಿಯಾಗಿ ಬರೆದ ಇಬ್ನ್ ಖಲ್ದೂನರ ಜಗತ್ಪ್ರಸಿದ್ಧ ‘ಮುಖದ್ದಿಮ’ ರಚನೆ 1377ರಲ್ಲಿ ಪೂರ್ಣಗೊಂಡಿತ್ತು. ಇತಿಹಾಸದಾಚೆಗೆ ಇತರ ವಲಯಗಳಿಗೂ ವ್ಯಾಪಿಸಿರುವ ‘ಮುಖದ್ದಿಮ’, ಐರೋಪ್ಯ ಭಾಷೆಗಳಿಗೆ ತರ್ಜುಮೆಗೊಂಡದ್ದು ಹದಿನೆಂಟನೆಯ ಶತಮಾನದಲ್ಲಿ. ಬಂದ ಹಲವು ಅನುವಾದಗಳು ಭಾಗಶಃ ಮಾತ್ರವಾಗಿತ್ತು. ಕೆಲ ಭಾಗಗಳನ್ನು ನಿಕಲ್ಸನ್ ಅನುವಾದಗೊಳಿಸಿದ್ದರು. ಅವುಗಳ ಪೈಕಿ ಫ್ರಾನ್ಸ್ ರೋಸೆಂಟಲ್ (1914-2003) ರವರ ಇಂಗ್ಲಿಷ್ ಅನುವಾದವು ಗಮನಾರ್ಹವಾದದ್ದು. ಮೊತ್ತ ಮೊದಲ ಸಂಪೂರ್ಣ ಅನುವಾದ ಕೃತಿಯಿದು. ಪ್ರಿಂಸ್ಟನ್ ಯುನಿವರ್ಸಿಟಿ ಪ್ರೆಸ್ ಇದನ್ನು 1958ರಲ್ಲಿ ಮೂರು ಸಂಪುಟಗಳಲ್ಲಿ ಪ್ರಕಟಿಸಿತು. ಅಮೆರಿಕಾದ ಯೇಲ್ ವಿಶ್ವವಿದ್ಯಾಲಯದಲ್ಲಿ ಸೆಮಿಟಿಕ್ ಭಾಷಾಶಾಸ್ತ್ರಜ್ಞರಾಗಿದ್ದರು ರೋಸೆಂಟಲ್. ಜರ್ಮನ್ ಯಹೂದಿಯಾಗಿದ್ದ ರೋಸೆಂಟಲ್, ಹಿಟ್ಲರನ ಕಾಲದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹಲವು ದೇಶಗಳಲ್ಲಿ ಬದುಕು ಸವೆಸಿ ಕೊನೆಗೆ ಅಮೇರಿಕಾದಲ್ಲಿ ವಾಸ್ತವ್ಯ ಹೂಡಿದರು. ಅರೇಬಿಕ್, ಪರ್ಷಿಯನ್, ಅರ್ಮಾಯಿಕ್, ಗ್ರೀಕ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯವುಳ್ಳ ರೋಸೆಂಟಲ್ರವರ ಪ್ರಸಿದ್ಧ ಕೃತಿಯಾಗಿದೆ ‘ನಾಲೆಜ್ ಟ್ರಯಂಫಂಟ್: ದಿ ಕಾನ್ಸೆಪ್ಟ್ ಆಫ್ ನಾಲೆಜ್ ಇನ್ ಮಿಡೀವಲ್ ಇಸ್ಲಾಂ’.
ಈ ಕೃತಿಯ ಮುನ್ನುಡಿಯಲ್ಲಿ ರೋಸೆಂಟಲ್ ರವರು ಬರೆಯುತ್ತಾರೆ: ‘Arabic ilm is fairly well rendered by our ‘Knowledge’. However, knowledge falls short of expressing all the Factual and Emotional contents of Ilm. For ilm is one of those concepts that have dominated Islam and given Muslim Civilization its distinctive shape and complexion’. ನಾಲ್ಕು ನೂರು ಪುಟಗಳಿರುವ ಈ ಕೃತಿಯಲ್ಲಿ ಅವರು ‘ಜ್ಞಾನಕ್ಕೆ ಇಸ್ಲಾಮಿಕ್ ನಾಗರಿಕತೆಗಳಲ್ಲಿ ಲಭಿಸಿದ ಮನ್ನಣೆಯ ಹಾಗೆ ಉಳಿದ ಯಾವ ನಾಗರಿಕತೆಯಲ್ಲೂ ದೊರಕಿಲ್ಲ’ ಎಂದು ಅಭಿಪ್ರಾಯಪಡುತ್ತಾರೆ.
ಫೆಲಸ್ತೀನ್, ಈಜಿಪ್ಟ್, ಉತ್ತರ ಆಫ್ರಿಕಾಗಳಲ್ಲಿ ದೊರಕಿದ ಪ್ರಾಚೀನ ಟಿಪ್ಪಣಿಗಳನ್ನು ಆಧರಿಸಿದ ಅಧ್ಯಯನಕ್ಕೆ 1935ರಲ್ಲಿ ರೋಸೆಂಟಲ್ ಅವರು ಡಾಕ್ಟರೇಟ್ ಪದವಿ ಪಡೆದುಕೊಂಡರು. ಹಳೆಯ ಹಸ್ತಪ್ರತಿಗಳನ್ನು ಅವರು ಪರಿಶೀಲಿಸಿದಷ್ಟು ಬಹುಶಃ ಬೇರೆ ಯಾವ ಇತಿಹಾಸಕಾರನೂ ಪರಿಶೀಲಿಸಿರಲಾರ.
ರೋಸೆಂಟಲ್ ಅವರ ಮತ್ತೊಂದು ಆಕರ್ಷಣೀಯ ಕೃತಿ ‘ಹ್ಯೂಮರ್ ಇನ್ ಅರ್ಲೀ ಇಸ್ಲಾಂ’. ಇಸ್ಲಾಮ್ ಇತರ ವಿಷಯದಲ್ಲಿರುವಂತೆ ಹಾಸ್ಯದಲ್ಲೂ ಮಧ್ಯಮ ಮಾರ್ಗವನ್ನು ಅನುಸರಿಸುತ್ತದೆ. ಅಟ್ಟಹಾಸ ಹಾಗೂ ಗಹಗಹಿಸಿ ನಗುವುದಕ್ಕಿಂತ ಮುಗುಳುನಗೆಯೇ ಉತ್ತಮ ಎನ್ನುವುದು ಇಸ್ಲಾಮಿನ ನಿಲುವು. ಈ ಕೃತಿ ಇವೆಲ್ಲದರ ದಾಖಲೆಗಳನ್ನು ಉಲ್ಲೇಖಿಸುವ ಚಿಂತನೀಯ ವಿಶ್ಲೇಷಣೆ.
‘ವ್ಯಕ್ತಿಗೋ ಅಥವಾ ಸಮೂಹಕ್ಕೋ ಹೆಚ್ಚಿನ ಪ್ರಾಧಾನ್ಯತೆ’ ಎನ್ನುವುದು ಸಮಾಜಶಾಸ್ತ್ರದ ಮುಖ್ಯ ತಾರ್ಕಿಕ ಪ್ರಶ್ನೆಗಳಲ್ಲೊಂದು. ಸಿಗ್ಮಂಡ್ ಫ್ರಾಯ್ಡ್ ವ್ಯಕ್ತಿಗೆ ಹೆಚ್ಚಿನ ಮಹತ್ವ ಕಲ್ಪಿಸಿದರೆ ಕಾರ್ಲ್ ಮಾರ್ಕ್ಸ್ ಸಮೂಹಕ್ಕೆ ಮಹತ್ವ ಕಲ್ಪಿಸಿದರು. ಈ ಚರ್ಚೆಗೆ ಇತ್ಯರ್ಥ ನೀಡಲು ಬಯಸಿದವರು ಎರಿಕ್ ಫಾರ್ಮ್. ಅವರ Beyond Marx and Freud ಎಂಬ ಕೃತಿ ಗಮನಾರ್ಹ. ಇಲ್ಲಿಯೂ ಖುರ್ಆನಿನ ನಿಲುವು ಕಾಲೋಚಿತ. ವ್ಯಕ್ತಿಯ ಮಹತ್ವವನ್ನು ಕಡೆಗಣಿಸದೆ ಸಮೂಹದ ಪ್ರಾಧಾನ್ಯತೆಯನ್ನು ಇಸ್ಲಾಮ್ ಎತ್ತಿಹಿಡಿಯುತ್ತದೆ. ಈ ವಿಷಯಗಳನ್ನು ಚರ್ಚಿಸುವ ಪ್ರೊ. ರೋಸೆಂಟಲ್ ಅವರ ಮಹಾಗ್ರಂಥವಾಗಿದೆ ‘ಮ್ಯಾನ್ ವರ್ಸಸ್ ಸೊಸೈಟಿ ಇನ್ ಮಿಡಿವೆಲ್ ಇಸ್ಲಾಂ’. ಹಾಗೆಯೇ ‘ದಿ ಕ್ಲಾಸಿಕಲ್ ಹೆರಿಟೇಜ್ ಇನ್ ಇಸ್ಲಾಂ’ ಮತ್ತು ‘ಎ ಹಿಸ್ಟರಿ ಆಫ್ ಮುಸ್ಲಿಂ ಹಿಸ್ಟೋರಿಗ್ರಫಿ’ ಎಂಬ ಎರಡು ಕೃತಿಗಳೂ ಗಮನಾರ್ಹವಾದುದು.
ಮೂಲ: ಪಿ.ಎ. ನಸೀಮುದ್ದೀನ್
ಅನುವಾದ: ಅನ್ಸೀಫ್ ಮಂಚಿ