ಇಸ್ಲಾಮಿಕ್ ನಾಗರಿಕತೆ ಮತ್ತು ಕ್ಯಾಲಿಗ್ರಾಫಿ; ಒಂದು ಇಣುಕು ನೋಟ

ಕ್ಯಾಲಿಗ್ರಾಫಿಯನ್ನು ಕಲಾ ಪ್ರಕಾರವಾಗಿ ಅಭಿವೃದ್ಧಿಪಡಿಸುವುದು ಕೇವಲ ಇಸ್ಲಾಮಿಕ್ ಸಂಸ್ಕೃತಿಗೆ ಸೀಮಿತವಾಗಿರದೆ ಜಗತ್ತಿನಾದ್ಯಂತ ತನ್ನ ಕಬಂಧ ಬಾಹುಗಳನ್ನು ವ್ಯಾಪಿಸಿಕೊಂಡಿದೆ. ಚೈನೀಸ್, ಜಪಾನೀಸ್ ಕ್ಯಾಲಿಗ್ರಾಫಿ ಹಾಗೂ ವಾಯುವ್ಯ ಯುರೋಪಿನ ಕೆಲ್ಸ್‌ ಪುಸ್ತಕಗಳನ್ನು ಒಳಗೊಂಡಿರುವ ಬೈಬಲ್ ಕೂಡ ಕ್ಯಾಲಿಗ್ರಾಫಿ ಶೈಲಿಯಲ್ಲಿ ವಿರಚಿತವಾಗಿದೆ. ಆದಾಗ್ಯೂ, ಇಸ್ಲಾಮಿಕ್ ಜಗತ್ತಿನಲ್ಲಿ ಕ್ಯಾಲಿಗ್ರಾಫಿಯನ್ನು ದೊಡ್ಡ ಪ್ರಮಾಣದಲ್ಲಿ, ಆಶ್ಚರ್ಯಕರವಾಗಿ ವೈವಿಧ್ಯಮಯ ಮತ್ತು ಕಾಲ್ಪನಿಕ ರೀತಿಯಲ್ಲಿ ಬಳಸಲಾಗುತ್ತದೆ. ಇದು ಲಿಖಿತ ಪದವನ್ನು ಲೇಖನಿ ಮತ್ತು ಕಾಗದದ ಮಾಧ್ಯಮದ ಮೂಲಕ ಆಕರ್ಷಕವಾಗಿ ಚಿತ್ರಿಸಿ ಜನರ ಬೆರಗಿಗೆ ನಿಮಿತ್ತವಾಗುತ್ತದೆ. ಆದ್ದರಿಂದ ಕ್ಯಾಲಿಗ್ರಾಫಿ, ಇಸ್ಲಾಮಿಕ್ ಕಲೆಯ ನೈಜ ಮಾದರಿಯಾಗಿದೆ.

ಇಸ್ಲಾಮಿಕ್ ಕ್ಯಾಲಿಗ್ರಾಫಿಯ ಪ್ರತಿಭೆ ಅನಂತ ಸೃಜನಶೀಲತೆ ಮತ್ತು ಕೌಶಲ್ಯದಲ್ಲಿ ಮಾತ್ರವಲ್ಲ, ಪಠ್ಯವನ್ನು ತಲುಪಿಸುವ ಮತ್ತು ಔಪಚಾರಿಕ ಸೌಂದರ್ಯದ ಸಂಕೇತಗಳ ಮೂಲಕ ಅದರ ಅರ್ಥವನ್ನು ವ್ಯಕ್ತಪಡಿಸುವ ಕ್ಯಾಲಿಗ್ರಾಫರ್‍ಗಳ ಪ್ರತಿಭೆಯನ್ನು ಊಹಿಸಲು ಸಾಧ್ಯವಾಗುತ್ತದೆ.

ಅರೇಬಿಕ್ ಭಾಷೆ ಮತ್ತು ಕ್ಯಾಲಿಗ್ರಾಫಿಯ ಕಲೆ ಮುಸ್ಲಿಮರಿಂದ ಹೆಚ್ಚು ಗೌರವಿಸಲ್ಪಟ್ಟಿದೆ. ಏಕೆಂದರೆ ಏಳನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ ﷺ ರಿಗೆ ಬಹಿರಂಗಪಡಿಸಿದ ಖುರ್‍ಆನ್‍ನ ಭಾಷೆ ಅರೆಬಿಕ್ ಆಗಿತ್ತು. ಖುರ್‍ಆನ್‍ನಿನ ವಚನಗಳು ಮುಸ್ಲಿಮರಿಗೆ ಪವಿತ್ರವಾಗಿವೆ. ಇದಲ್ಲದೆ, ಸಾಮಾನ್ಯವಾಗಿ ಪುಸ್ತಕಗಳಿಗಿಂತ ಖುರ್‍ಆನ್‍ನ ಉನ್ನತ ಸ್ಥಾನಮಾನವು ಅದರ ಗೌರವಕ್ಕೆ ಕಾರಣವಾಗಿದೆ. ಆದಾಗ್ಯೂ, ಖುರ್‍ಆನ್‍ನ ಪಾವಿತ್ರ್ಯವು ಕ್ಯಾಲಿಗ್ರಾಫಿಯ ಮಹತ್ವವನ್ನು ಒತ್ತಿ ಹೇಳುತ್ತದೆ. ಆದರೆ ಆಂತರಿಕವಾಗಿ ಪರೀಕ್ಷಿಸಿದಾಗ ಯಾವುದೇ ಅರೇಬಿಕ್ ಕ್ಯಾಲಿಗ್ರಾಫಿ ಧಾರ್ಮಿಕವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ, ಕಲಾಕೃತಿಗಳ ಕ್ಯಾಲಿಗ್ರಾಫಿ ಶಾಸನಗಳು ಈ ಕೆಳಗಿನ ಪಠ್ಯಗಳನ್ನು ಒಳಗೊಂಡಿರುತ್ತವೆ:

  • ಖುರ್‍ಆನ್‍ನ ಮಾತುಗಳು
  • ಧಾರ್ಮಿಕ ವಾಕ್ಯಗಳು
  • ಕವಿತೆಗಳು
  • ಆಡಳಿತಾಧಿಗಾರ ಸ್ತುತಿಗಳು
  • ನಾಣ್ಣುಡಿಗಳು
    ಈ ಅಂಶಗಳನ್ನು ಎಲ್ಲಾ ರೀತಿಯ ಕ್ಯಾಲಿಗ್ರಾಫಿಯಲ್ಲಿ ಕಾಣಬಹುದು.

ಪ್ರವಾದಿ ಮುಹಮ್ಮದ್ ﷺ ರ ಕಾಲದಿಂದಲೂ ಅರೇಬಿಕ್ ಅತ್ಯುತ್ತಮ ವಿಶ್ವ ಭಾಷೆಯಾಗಿ ಮಾರ್ಪಟ್ಟಿದೆ. ಅರೇಬಿಕನ್ನು ಧರ್ಮ, ಸರ್ಕಾರ, ವಾಣಿಜ್ಯ, ಸಾಹಿತ್ಯ ಮತ್ತು ವಿಜ್ಞಾನದ ಭಾಷೆಯಾಗಿ ಬಳಸಲಾಗುತ್ತಿತ್ತು. ಕಾಲಾಂತರದಲ್ಲಿ ಅರೇಬಿಕ್ ಲಿಪಿಯನ್ನು ಕೆಲವು ಹೊಸ ಫಾಂಟ್‍ಗಳಿಗೆ ಸೇರಿಸಲಾಯಿತು ಜೊತೆಗೆ ಪರ್ಷಿಯನ್ ಮತ್ತು ಟರ್ಕಿಶ್‍ನಂತಹ ಇತರ ಭಾಷೆಗಳಲ್ಲಿ ಬರೆಯಲು ಬಳಸಲಾಗುತ್ತಿತ್ತು.

ಲಿಪಿಗಳನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆ:

ಅರೇಬಿಕ್‍ನ ಅನೇಕ ಸ್ಥಳೀಯ ಭಾಷೆಗಳು ಇಸ್ಲಾಮಿಕ್ ಪೂರ್ವದಲ್ಲಿ ಮಾತನಾಡುತ್ತಿದ್ದರೂ, ಕೆಲವೇ ಕೆಲವು ಬರೆಯಲ್ಪಟ್ಟವು. ಹೆಚ್ಚಿನ ಸಾಹಿತ್ಯ ಮೌಖಿಕವಾಗಿ ಪ್ರಸಾರವಾಯಿತು. ಪ್ರವಾದಿಯ ಮರಣದ ನಂತರ, ಖುರ್‍ಆನ್ ಬರೆಯುವವರೆಗೂ ಮೌಖಿಕವಾಗಿ ಉಳಿಯಿತು. ಇದಕ್ಕಾಗಿ ಅರೇಬಿಕ್ ಲಿಪಿಯನ್ನು ಆಧುನೀಕರಿಸಬೇಕಾಗಿತ್ತು. ಏಳನೇ ಶತಮಾನದ ಅಂತ್ಯದ ವೇಳೆಗೆ ಅರೇಬಿಕ್ ಲಿಪಿಯ ಮೂಲ ರೂಪವನ್ನು ಬಳಸಲಾಗುತ್ತಿತ್ತು. ಉದಾಹರಣೆಗೆ, ಕ್ರಿ.ಶ 691 ರಲ್ಲಿ ನಿರ್ಮಿಸಲಾದ ‘ಜೆರುಸಲೆಮ್ ಡೋಮ್ ಆಫ್ ದಿ ರಾಕ್’ ಅನ್ನು ತೆಗೆದುಕೊಳ್ಳಿ, ಇದು ಇಸ್ಲಾಮಿಕ್ ವಾಸ್ತುಶಿಲ್ಪದ ಉಳಿದಿರುವ ಮೊದಲ ಸ್ಮಾರಕವಾಗಿದೆ. ಪ್ರವಾದಿಯ ಉತ್ತರಾಧಿಕಾರಿಗಳಾದ ಖಲೀಫರು ಮುದ್ರಿಸಿದ ನಾಣ್ಯಗಳ ಮೇಲೆ ಹೊಸ ಬರವಣಿಗೆ ಕಾಣಿಸಿಕೊಂಡಿತು. ಇಸ್ಲಾಂ ಧರ್ಮದ ಏಕ ದೇವೋಪಾಸನೆಯನ್ನು ಘೋಷಿಸಲು ಖುರ್‍ಆನ್ ಪದ್ಯಗಳನ್ನು ಡೋಮ್ ಆಫ್ ದಿ ರಾಕ್ ಮತ್ತು ಆರಂಭಿಕ ಇಸ್ಲಾಮಿಕ್ ನಾಣ್ಯಗಳಲ್ಲಿ ಬಳಸಲಾಗಿದೆ.

ಮೊದಲ ಅಧಿಕೃತ ಕ್ಯಾಲಿಗ್ರಾಫಿ ಶೈಲಿಯನ್ನು ಇರಾಕ್‍ನ ಕೂಫಾ ನಗರದ ಗೌರವಾರ್ಥವಾಗಿ ‘ಕೂಫಿ ಶೈಲಿ’ ಎಂದು ಕರೆಯಲಾಗುತ್ತದೆ. ಇದನ್ನು ಆರಂಭಿಕ ಖುರ್‍ಆನ್ ಹಸ್ತಪ್ರತಿಗಳು ಮತ್ತು ಡೋಮ್ ಆಫ್ ರಾಕ್ ಸೇರಿದಂತೆ ಕೆತ್ತನೆಗಳಲ್ಲಿ ಬಳಸಲಾಗುತ್ತಿತ್ತು. ಈ ಹೊಸ ಕ್ಯಾಲಿಗ್ರಫಿ ಶೈಲಿಯು ಅನೇಕ ಸುಂದರವಾದ ರೂಪಾಂತರಗಳನ್ನು ಒಳಗೊಂಡಿದೆ, ಉದಾಹರಣೆಗೆ ಎಲೆಗಳಿರುವ ಕೂಫಿಕ್ (ಸುರುಳಿಯಾಕಾರದ ಎಲೆಯ ಆಕಾರದಲ್ಲಿ) ಮತ್ತು ಫ್ಲೋರೈಡೇಟೆಡ್ ಕೂಫಿಕ್ (ಹೂವುಗಳ ಆಕಾರದಲ್ಲಿ). ಈ ಎರಡನೆಯ ಕೂಫಿ ಕ್ಯಾಲಿಗ್ರಫಿ ಶೈಲಿಯನ್ನು ಖುರ್‍ಆನ್ ಹಸ್ತಪ್ರತಿಗಳು, ನಾಣ್ಯಗಳು, ವಾಸ್ತುಶಿಲ್ಪದ ಶಾಸನಗಳು ಮತ್ತು ಕುಂಬಾರಿಕೆಗಳು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
ಎರಡನೇ ವಿಧದ ಕೂಫಿ ಕ್ಯಾಲಿಗ್ರಾಫಿ ಮಧ್ಯಪ್ರಾಚ್ಯದಲ್ಲಿ ಅಂದರೆ ಬಾಗ್ದಾದ್‍ನಲ್ಲಿ ಅಭಿವೃದ್ಧಿ ಹೊಂದುತ್ತಿರುವಾಗ, ಮುಸ್ಲಿಂ ಸ್ಪೇನ್ ಅಥವಾ ಮೊರಾಕೊದಲ್ಲಿ ಹೊಸ ಶೈಲಿಯು ಹೊರಹೊಮ್ಮುತ್ತದೆ. ಈ ಪಶ್ಚಿಮ ಪ್ರದೇಶದ ಅರೇಬಿಕ್ ಹೆಸರು ಅಲ್ ಮಗ್ರಿಬ್. ಆದ್ದರಿಂದ ಈ ಹೊಸ ಶೈಲಿಯ ಕ್ಯಾಲಿಗ್ರಫಿಯನ್ನು ‘ಮಗ್ರಿಬಿ’ ಎಂದು ಕರೆಯಲಾಯಿತು. ಈ ಕ್ಯಾಲಿಗ್ರಫಿ ಶೈಲಿಯನ್ನು ಇಂದಿಗೂ ಕೆಲವು ಕ್ಯಾಲಿಗ್ರಾಫಿ ಕಲಾವಿದರು ಬಳಸುತ್ತಾರೆ. ಪೂರ್ವ ಇಸ್ಲಾಮಿಕ್ ಜಗತ್ತಿನಲ್ಲಿ ಹದಿಮೂರನೆಯ ಶತಮಾನದ ಹೊತ್ತಿಗೆ ಕೂಫಿ ಶೈಲಿಗಳು ಹೆಚ್ಚಾಗಿ ಅಳಿದುಹೋಗಿದ್ದವು ಮತ್ತು ಅವುಗಳನ್ನು ಬಳಕೆಯಲ್ಲಿರುವ ಹೆಚ್ಚು ವೃತ್ತಾಕಾರದ ಶೈಲಿಗಳಿಂದ ಬದಲಾಯಿಸಲಾಯಿತು.

ಬಹುಶಃ ಹೊಸ ಶೈಲಿಗಳ ಬೆಳವಣಿಗೆಯಿಂದಾಗಿ ಪೂರ್ವದಲ್ಲಿ ಪ್ರಾಣಿಗಳ ಚರ್ಮಕ್ಕೆ ಬದಲಾಗಿ ಕಾಗದವನ್ನು ಬಳಸಲಾಗುತ್ತಿತ್ತು. ಆದ್ದರಿಂದ ಹಸ್ತಪ್ರತಿಗಳು ಮತ್ತು ದಾಖಲೆಗಳಿಗೆ ಪ್ಯಾಪಿರಸ್ ಮುಖ್ಯ ಮಾಧ್ಯಮವಾಯಿತು. ಕಾಗದದ ಮೇಲ್ಮೈಯನ್ನು (ಪಿಷ್ಟದಿಂದ ಮುಚ್ಚಲಾಗುತ್ತದೆ) ಅದು ತುಂಬಾ ನಯವಾದ ಮತ್ತು ಹೊಳೆಯುವವರೆಗೆ ಕಲ್ಲಿನಿಂದ ಲೇಪಿಸಲಾಗುತ್ತಿತ್ತು. ಇದು ಪೆನ್ನಿನ ಬಳಕೆಯನ್ನು ಹೆಚ್ಚು ಸುಲಭಗೊಳಿಸಿತು. (ಪೂರ್ವದ ಭಾಗಗಳಲ್ಲಿ (ಮಗ್ರಿಬ್) ಪ್ರಾಣಿಗಳ ಚರ್ಮಗಳ ಬಳಕೆ ದೀರ್ಘಕಾಲದವರೆಗೆ ಮುಂದುವರೆಯಿತು).

ಮತ್ತೊಂದು ಗಮನಾರ್ಹ ಅಂಶವೆಂದರೆ ಲೇಖನಿ. ಇದು ಬಿದಿರಿನಿಂದ ಮಾಡಲ್ಪಟ್ಟಿದೆ. ಬಿದಿರಿನ ತುದಿಯನ್ನು ಚಾಕುವಿನಿಂದ ಕತ್ತರಿಸುವ ಮೂಲಕ ಲೇಖನಿಯ ಮೊಳೆಯನ್ನು ತಯಾರಿಸಲಾಗುತ್ತದೆ. ಮೊಳೆ, ವಿಭಿನ್ನ ರೀತಿಯಲ್ಲಿ ಕತ್ತರಿಸುವುದು ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ. ಮೊಳೆಯನ್ನು ಓರೆಯಾದ ಕೋನದಲ್ಲಿ ಕತ್ತರಿಸಿದರೆ ವೃತ್ತದಲ್ಲಿ ಕ್ಯಾಲಿಗ್ರಾಫಿಯನ್ನು ಹೆಣೆಯಬಹುದು. ಈ ರಚನೆ ದಪ್ಪ ಹಾಗೂ ತೆಳ್ಳನೆಯ ಪಟ್ಟೆಗಳನ್ನು ರಚಿಸಲು ಸಹಾಯಕಾರಿ. ಕ್ಯಾಲಿಗ್ರಾಫಿ ಕಲೆಗೆ ವಿಶೇಷ ಸೊಬಗು ಮತ್ತು ವೈವಿಧ್ಯತೆಗೆ ಇದು ಅನುವು ಮಾಡಿಕೊಡುತ್ತದೆ. ಲೇಖನಿಯ ಅಗಲವೂ ಮುಖ್ಯವಾಗಿದೆ. ದೊಡ್ಡ ಅಕ್ಷರಗಳಿಗೆ ವಿಶಾಲವಾದ ಮೊಳೆಗಳು ಬೇಕಾಗುತ್ತವೆ. ಆದ್ದರಿಂದ ಉದ್ದೇಶಿಸಿದ ಸಾಲಿನ ಅಗಲಕ್ಕೆ ಮೊಳೆಯ ಅಗಲವು ಅತ್ಯಗತ್ಯ. ಒಟ್ಟಾರೆ ಒಂದು ನಿರ್ದಿಷ್ಟ ಅನುಪಾತದಲ್ಲಿ ಮುಂದುವರಿಯುತ್ತದೆ.

ಮೊಳೆಯ ಅಗಲವನ್ನು ಆಧರಿಸಿದ ಅನುಪಾತ ವ್ಯವಸ್ಥೆಯು ಪ್ರತ್ಯೇಕ ಅಕ್ಷರಗಳ ಆಕಾರಗಳನ್ನು ಮತ್ತು ಸತತವಾಗಿ ಅಕ್ಷರಗಳ ಸಾಪೇಕ್ಷ ಗಾತ್ರಗಳನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಅಕ್ಷರ ಅಲಿಫ್ ಒಂದೇ ಲಂಬ ರೇಖೆಯನ್ನು ಹೊಂದಿರುತ್ತದೆ. ಒಂದು ಶೈಲಿಯಲ್ಲಿ, ಇದು ಕೇವಲ ಮೂರು ಪಟ್ಟು ಅಗಲವಾಗಿರುತ್ತದೆ. ಮತ್ತೊಂದು ಶೈಲಿಯಲ್ಲಿ ಇದು ಏಳು ಪಟ್ಟು ಹೆಚ್ಚಾಗಿರುತ್ತದೆ. ಆದ್ದರಿಂದ ಎರಡನೇ ಶೈಲಿಯಲ್ಲಿ ಅಲಿಫ್ ಅಕ್ಷರ ಬಹಳ ಮುಖ್ಯವಾಗಿದೆ. ಈ ವ್ಯತ್ಯಾಸಗಳು ಅಕ್ಷರ ಸಂಭವಿಸಬಹುದಾದ ವಿಭಿನ್ನ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎರಡು ಅಕ್ಷರಗಳ ನಡುವಿನ ಉದ್ದದಲ್ಲಿ ಸಾಮರಸ್ಯ ಇದೆ. ಇದು ಗಮನಾರ್ಹ. ಏಕೆಂದರೆ ಅರೇಬಿಕ್ ಲಿಪಿ ಯಾವಾಗಲೂ ಪರಸ್ಪರ ಸಂಬಂಧ ಹೊಂದಿದೆ. ಅಲ್ಲದೆ, ಅರೆಬಿಕ್ ಲಿಪಿ ಮುದ್ರಿತ ಇಂಗ್ಲಿಷ್‍‌ನಂತೆ ವಿಶೇಷವಲ್ಲ.

ಕ್ಯಾಲಿಗ್ರಫಿ ಶೈಲಿಯ ರಚನೆಯ ಮತ್ತೊಂದು ಮೂಲಭೂತ ಅಂಶವೆಂದರೆ ಬೇಸ್‍ಲೈನ್‍ನ ಸ್ವರೂಪ. ಅನೇಕ ಲಿಪಿಗಳಲ್ಲಿ ಅಕ್ಷರಗಳನ್ನು ಬರೆದ ಕಾಲ್ಪನಿಕ ರೇಖೆಯು ಸಮತಲವಾಗಿತ್ತು. ಪ್ರತಿಯೊಂದು ಹೊಸ ಅಕ್ಷರಗಳು ಬೇಸ್‍ಲೈನ್‍ಗಿಂತ ಮೇಲಕ್ಕೆ ಪ್ರಾರಂಭವಾಗುತ್ತವೆ ಮತ್ತು ನಂತರ ಅದನ್ನು ಪೂರೈಸಲು ಎಡಕ್ಕೆ ಇಳಿಯುತ್ತವೆ. ಅರೇಬಿಕ್ ಲಿಪಿ ಇಂಗ್ಲಿಷ್‍ಗೆ ವಿರುದ್ಧವಾಗಿ ಬಲದಿಂದ ಎಡಕ್ಕೆ ವಿಭಿನ್ನವಾಗಿ ಓದಲಾಗುತ್ತದೆ. ಈ ಸಾಲುಗಳನ್ನು ಮೂಲತಃ ಅಧಿಕೃತ ದಾಖಲೆಗಳಲ್ಲಿ ಭದ್ರತಾ ವೈಶಿಷ್ಟ್ಯವಾಗಿ ಪರಿಚಯಿಸಲಾಯಿತು. ಏಕೆಂದರೆ ಅನಧಿಕೃತ ಸೇರ್ಪಡೆಗಳನ್ನು ತಡೆಗಟ್ಟಲು ಸಾಲುಗಳನ್ನು ಒಟ್ಟಿಗೆ ಜೋಡಿಸಬಹುದು. ಈ ವಿಧಾನವನ್ನು ಪರಿಣಾಮಕಾರಿ ಎಂದು ಪರಿಗಣಿಸಲಾಗಿರುವುದರಿಂದ ಈ ವೈಶಿಷ್ಟ್ಯವನ್ನು ಇತರ ಸಂದರ್ಭಗಳಲ್ಲಿ ಬಳಸಲಾಗುತ್ತದೆ.

ಪರಿಕರಗಳು ಮತ್ತು ಬರೆಯುವ ವಿಧಾನಗಳು:
ವಿವಿಧ ಉಪಕರಣಗಳಿಂದ ಕ್ಯಾಲಿಗ್ರಾಫಿಯನ್ನು ಬಳಸಿ ಡಿಸೈನ್‍ಗಳನ್ನು ತಯಾರಿಸಲಾಗುತ್ತದೆ. ಕಾಗದದ ಮೇಲೆ ಪೆನ್ನಿನೊಂದಿಗೆ ಬರೆಯುವ ತಾಂತ್ರಿಕ ಪರಿಣಾಮಗಳು ಇತರ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಕ್ಯಾಲಿಗ್ರಫಿಯನ್ನು ಹೆಚ್ಚಾಗಿ ಬಳಸ ತೊಡಗುತ್ತಾರೆ.
ಉದಾಹರಣೆಗೆ, ದಪ್ಪದಿಂದ ತೆಳುವಾದ ರೇಖೆಯವರೆಗಿನ ಸುಂದರವಾದ ಶ್ರೇಣಿಯನ್ನು ಮತ್ತು ಚೌಕಾಕೃತಿಯಲ್ಲಿ ಮೊಳೆಯೊಂದಿಗೆ ಬರೆಯಲಾದ ಉತ್ತಮ ಹಸ್ತಾಕ್ಷರ ನೀವು ನೋಡಬಹುದು. ಕ್ಯಾಲಿಗ್ರಾಫಿ ಕಲಾವಿದರು ಪ್ರಮಾಣ ಫಲಕ ಅಥವಾ ಮಾದರಿ ತೂತು ತಗಡುಗಳಲ್ಲಿ ಬರೆಯುವ ಮೂಲಕ ಸಾಮಾನ್ಯವಾಗಿ ತಮ್ಮ ವಿನ್ಯಾಸಗಳನ್ನು ರಚಿಸುತ್ತಾರೆ.

ಪ್ರಾಣಿಗಳ ಚರ್ಮದ ಮೇಲೆ ಬರೆಯುವಿಕೆ:
ಕಾಗದದ ಆವಿಷ್ಕಾರದ ಮೊದಲು ಪ್ರಾಣಿಗಳ ಚರ್ಮದಲ್ಲಿ ಅತ್ಯುತ್ತಮ ಬರವಣಿಗೆಯನ್ನು ಲಿಖಿತಗೊಳಿಸಲಾಗುತ್ತಿತ್ತು. ಇದನ್ನು ಬರೆಯಲು ತಯಾರಿಸಿದ ಹಾಗೂ ಶುಚಿಗೊಳಿಸಿದ ಪ್ರಾಣಿಗಳ ಚರ್ಮದಿಂದ ನಿರ್ಮಿಸಲಾಗುತ್ತಿತ್ತು. ಶಾಯಿಯಿಂದ ತುಂಬಿದ ಬಿದಿರಿನ ಮೊಳೆಯನ್ನು ಲೇಖನಿಯಾಗಿ ಬಳಸಿ, ಸ್ವಲ್ಪ ಕೋನದಲ್ಲಿ ಕತ್ತರಿಸಿ ಬರವಣಿಗೆಯಲ್ಲಿ ಬಳಸುತ್ತಿದ್ದರು. ಪ್ರಾಣಿಗಳ ಚರ್ಮದಲ್ಲಿನ ಬರವಣಿಗೆಯಲ್ಲಿ ಅಳಿಸಬಹುದು ಅಥವಾ ಅದನ್ನು ಬದಲಾಯಿಸಬಹುದು ಎಂಬ ವಿಶಿಷ್ಟತೆಯನ್ನು ಮೇಳೈಸಿದೆ.

ಕಾಗದದ ಮೇಲೆ ಬರೆಯುವುದು:
ಕ್ಯಾಲಿಗ್ರಾಫಿಯನ್ನು ಲೇಖನಿ ಮತ್ತು ಶಾಯಿಯಿಂದ ಹೊಳಪು ಕಾಗದದ ಮೇಲೆ ಪಿಷ್ಟ ಮತ್ತು ಪಾಲಿಶ್‍ನೊಂದಿಗೆ ಬರೆಯಬಹುದು. ಇದು ಪಠ್ಯಕ್ಕೆ ಉತ್ತಮವಾದ ಹಾಗೂ ನಯವಾದ ಮೇಲ್ಮೈಯನ್ನು ನೀಡುತ್ತದೆ.

ಪಾತ್ರೆಗಳು:
ಕೆಳಗಿನ ಕ್ಯಾಲಿಗ್ರಾಫಿ ಶಾಸನವನ್ನು (ಸಸ್ಯ ವಿನ್ಯಾಸಗಳು) ಆಳವಾಗಿ ಕೆತ್ತಲಾಗಿದೆ. ಈ ವಿಧಾನವನ್ನು ಮಧ್ಯಪ್ರಾಚ್ಯದಲ್ಲಿ ಕ್ರಿ.ಶ 1350 ರಿಂದ 1600 ರ ಆರಂಭದವರೆಗೆ ಹೃಸ್ವ ಅವಧಿಗೆ ಮಾತ್ರ ಬಳಸಲಾಗುತ್ತಿತ್ತು.

ಮರದ ತುಂಡು:
ಮರದ ತುಂಡಿನ ಮೇಲೆ ಅಕ್ಷರಗಳನ್ನು ಕೆತ್ತಿ ನಂತರ ಬಣ್ಣ ಲೇಪಿಸುತ್ತಾರೆ. ಕೆಳಗಿನ ಚಿತ್ರದಲ್ಲಿ ಈಗ ಅಧಿಕ ಬಣ್ಣಗಳು ಕಾಣೆಯಾಗಿವೆ.
ಆದಾಗ್ಯೂ, ಕೆಲವು ಕುರುಹುಗಳು ಉಳಿದಿವೆ.

ಗ್ಲಾಸ್:
ಕೆಳಗೆ ಚಿತ್ರಿಸಿದ ಕಿಟಕಿಯನ್ನು ವಿವಿಧ ಬಣ್ಣಗಳ ಸಣ್ಣ ತುಂಡು ಗಾಜಿನಿಂದ ನಿರ್ಮಿಸಲಾಗಿದೆ. ಅವುಗಳನ್ನು ಪ್ಲ್ಯಾಸ್ಟರ್ ಮುಂತಾದ ಚೌಕಟ್ಟಿನೊಳಗಿನ ಮಾದರಿಗಳಲ್ಲಿ ಜೋಡಿಸಲಾಗುತ್ತದೆ.

ಬಟ್ಟೆಗಳು:
ಮುಸ್ಲಿಂ ಸ್ಪೇನ್‍ನ ರೇಷ್ಮೆ ನೇಕಾರರು ಅರೇಬಿಕ್ ಭಾಷೆಯಲ್ಲಿ ಬರೆದ ಬರವಣಿಗೆಗಳನ್ನು ನಿಖರವಾಗಿ ಬಟ್ಟೆಗಳಲ್ಲಿ ಲಿಖಿತಗೊಳಿಸುತ್ತಿದ್ದರು. ಈ ವಿನ್ಯಾಸಕ್ಕೆ ಹೆಚ್ಚಿನ ಗಮನ ನೀಡಬೇಕು. ‘ನಮ್ಮ ಸುಲ್ತಾನರ ವೈಭವ’ ಎಂಬ ನುಡಿಗಟ್ಟು ವಿನ್ಯಾಸದ ವಿಶಾಲ ಮುದ್ರೆಯೊಳಗೆ ಇದು ಪುನರಾವರ್ತನೆಯಾಗುತ್ತದೆ.

ಲೇಪಿತ ಗಾಜು:
ಬಿಸಿ ಗಾಜನ್ನು ಆಕಾರಕ್ಕೆ ರೂಪಾಂತರಗೊಳಿಸಿದ ತರುವಾಯ ತಣ್ಣಗಾಗಿಸುವ ಮೂಲಕ ದೀಪವನ್ನು ತಯಾರಿಸಲಾಗುತ್ತದೆ. ನಂತರ ದಂತಕವಚ ಬಣ್ಣಗಳು ಮತ್ತು ಚಿನ್ನದ ಲೇಪನವನ್ನು ಸೇರಿಸಲಾಗುತ್ತದೆ. ದಂತಕವಚವು ಬಣ್ಣ ಮತ್ತು ಗಾಜಿನ ಮಿಶ್ರಣವಾಗಿದೆ. ಅದನ್ನು ಕುಲುಮೆಯಲ್ಲಿ ಬಿಸಿ ಮಾಡಿದಾಗ, ದೀಪ ಕರಗಿ ಹೊಂದಿಕೊಳ್ಳುತ್ತದೆ. ಅಲಂಕೃತ ಗಾಜು ದಂತಕವಚದಿಂದ ಅಲಂಕರಿಸಲ್ಪಟ್ಟಿದೆ ಮತ್ತು ಕುಂಚಗಳಿಂದ ಗಿಲ್ಟ್ ಕೂಡ.

ಲೋಹದ ಕೆಲಸ:
ಲೋಹದ ಕೆಲಸಗಾರರು ಹಿತ್ತಾಳೆಯ ಮೇಲ್ಮೈಯ ಸಣ್ಣ ಭಾಗಗಳನ್ನು ತುಂಡರಿಸಿದ ನಂತರ ಅಲ್ಲಿ ಬೆಳ್ಳಿ ಹಾಗೂ ಚಿನ್ನವನ್ನು ತುಂಬಿಸುತ್ತಾರೆ. ಮೃದುವಾಗಿ ಕೆತ್ತಿದ ಲೋಹದ ಮೇಲ್ಮೈಯನ್ನು ತುಂಬಿಸಲು ಅವರು ಕಪ್ಪು ಫಿಲ್ಲರ್‌ ಅನ್ನು ಜೋಡಿಸುವ ಜೊತೆ ಇತರೆ ಉಪಕರಣಗಳಿಂದ ಸೌಂದರ್ಯವನ್ನು ವೃದ್ಧಿಸುತ್ತಾರೆ.

ಕ್ಯಾಲಿಗ್ರಾಫಿ ಅಲಂಕಾರಗಳು:
ಬಹಳ ಸೊಗಸಾಗಿ ಬರೆಯುವುದರೊಂದಿಗೆ ಕ್ಯಾಲಿಗ್ರಾಫಿಯ ಸೌಂದರ್ಯವನ್ನು ಹೆಚ್ಚಿಸಲು ವಿವಿಧ ಮಾರ್ಗಗಳಿವೆ. ಪ್ರಮುಖ ವಾಕ್ಯಗಳನ್ನು ಹಳದಿ ಬಣ್ಣದಲ್ಲೊ ಅಥವಾ ಕಪ್ಪು ಬಣ್ಣವನ್ನು ಹೊರತುಪಡಿಸಿ ಯಾವುದೇ ಬಣ್ಣದಲ್ಲಿ ಸೌಂದರ್ಯ ಪೂರ್ಣವಾಗಿ ಮಾಡಬಹುದು. ಅಕ್ಷರಗಳು ಹಾಗೂ ಪದಗಳನ್ನು ಬಿಡಿ ಬಿಡಿಯಾಗಿ ನಕಲಿಸಬಹುದು ಅಥವಾ ಜೋಡಿಸಿ ವಿನ್ಯಾಸಗೊಳಿಸಬಹುದು. ಕ್ಯಾಲಿಗ್ರಾಫರ್‍ಗಳು ವಿಭಿನ್ನ ಶೈಲಿಗಳು ಅಥವಾ ಪಠ್ಯದ ವರ್ಗಗಳಿಗೆ ವಿಭಿನ್ನ ಗಾತ್ರಗಳು, ಬಣ್ಣಗಳು ಮತ್ತು ಪಠ್ಯ ಶೈಲಿಗಳನ್ನು ಸಂಯೋಜಿಸುತ್ತಾರೆ. (ಆದರೆ ಅವರು ಯಾವಾಗಲೂ ಕ್ಯಾಲಿಗ್ರಾಫಿ ನಿಯಮಗಳನ್ನು ಅನುಸರಿಸುತ್ತಾರೆ)

ಅಲಂಕರಿಸಿದ ಫ್ರೇಮ್‌‌ಗಳು ಹಾಗೂ ಇನ್ನಿತರ ರೇಖೆಗಳ ಸ್ಪಷ್ಟತೆಗೆ ಅಡ್ಡಿಯಾಗುವುದಿಲ್ಲ. ಪಠ್ಯದ ವಿಷಯದಿಂದ ವಿಮುಖವಾಗುವುದಿಲ್ಲ. ಖುರ್‌ಆನ್ ದೈವೀ ವಾಕ್ಯವಾದ್ದರಿಂದ ಇದನ್ನು ಗಮನಿಸುವುದು ಬಹಳ ಮುಖ್ಯ.

ಕ್ಯಾಲಿಗ್ರಫಿ ಕಲಾವಿದರು:
ಇಸ್ಲಾಮಿಕ್ ಸಮಾಜದಲ್ಲಿ ವ್ಯಾಪಕವಾಗಿ ಗುರುತಿಸಿದ ಕಲಾವಿದರಲ್ಲಿ ಒಂದು ಗುಂಪು ಕ್ಯಾಲಿಗ್ರಾಫರ್‌ಗಳು. ಇಂದಿಗೂ ಇದು ಅನೇಕ ಸ್ಥಳಗಳಲ್ಲಿ ಮುಂದುವರಿದು ಪ್ರಖ್ಯಾತವಾಗಿದೆ. ಇದು ಅವರ ಸ್ಥಾನಮಾನ, ಭೋಧನೆಯ ಉತ್ಕೃಷ್ಟತೆ ಮತ್ತು ಕೆಲಸದ ಶ್ರೇಷ್ಠತೆಯನ್ನು ಆಧರಿಸಿದೆ. ಇದರ ಪರಿಣಾಮವಾಗಿ ಒಂದು ಸಾಹಿತ್ಯಿಕ ಸಂಪ್ರದಾಯವು ಅಭಿವೃದ್ಧಿಗೊಂಡಿತು. ಮಾತ್ರವಲ್ಲದೆ ಕ್ಯಾಲಿಗ್ರಫಿಯ ಇತಿಹಾಸ, ಅಧ್ಯಾಪನೆ, ಹಾಗೂ ಗುರು-ಶಿಷ್ಯರ ನಡುವಿನ ಪ್ರಸರಣ ಜಾಲವಾಗಿ ಕಲ್ಪಿಸಲಾಯಿತು. ಒಬ್ಬ ವಿದ್ಯಾರ್ಥಿಯು ತನ್ನ ಶಿಕ್ಷಕ ಒದಗಿಸಿದ ಮಾದರಿಗಳನ್ನು ನಕಲಿಸಲು, ಅಭ್ಯಾಸ ಮಾಡಲು ವರ್ಷಗಳೇ ತೆಗೆದುಕೊಳ್ಳಬಹುದು. ಅವನು/ಅವಳು ಈ ರೀತಿಯಾಗಿ ತತ್ವಗಳು ಮತ್ತು ನಿಯಮಗಳನ್ನು ಕಲಿತಾಗ ಮಾತ್ರ ಕ್ಯಾಲಿಗ್ರಾಫರ್ ಆಗಬಹುದು. ತರಬೇತಿ ಪಡೆದು ಕ್ಯಾಲಿಗ್ರಾಫಿಯಲ್ಲಿ ನಿಪುಣರಾದ ವ್ಯಕ್ತಿಗಳು ನವನವೀನ ರಚನೆಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ಕ್ಯಾಲಿಗ್ರಾಫಿ ಕಲಿಯುವುದು ಇತರ ಉದ್ಯೋಗಗಳಲ್ಲಿ ಕೌಶಲ್ಯ ಗಳಿಸುವಂತೆಯೇ ಇದೆ..

ಕ್ಯಾಲಿಗ್ರಫಿಯನ್ನು ಅಧ್ಯಯನ ಮಾಡಿದ ಅನೇಕರು ಹಸ್ತಪ್ರತಿಗಳ ಮೂಲಕ ಸಂಪಾದಿಸುವಷ್ಟು ವಯಸ್ಸಾದಾಗ ತಮ್ಮ ತರಬೇತಿಯನ್ನು ನಿಲ್ಲಿಸುತ್ತಾರೆ. ಹದಿನೆಂಟನೇ ಮತ್ತು ಇಪ್ಪತ್ತನೇ ಶತಮಾನಗಳ ನಡುವೆ ಇಸ್ಲಾಮಿಕ್ ಜಗತ್ತಿನಲ್ಲಿ ಮುದ್ರಣಾಲಯ ಕ್ರಮೇಣವಾಗಿ ಪ್ರಾರಂಭವಾದರೂ, ಹೆಚ್ಚಿನ ಪುಸ್ತಕಗಳು ಇಸ್ಲಾಮಿಕ್ ಅವಧಿಯಲ್ಲಿ ಕೈಯಿಂದಲೇ ತಯಾರಿಸಲ್ಪಟ್ಟವು. ಎಲ್ಲಾ ಬರಹಗಾರರು ಕ್ಯಾಲಿಗ್ರಾಫರ್‍ಗಳಾಗಿರಲಿಲ್ಲ. ಇದಲ್ಲದೆ, ಕೆಲವು ಜನರು ನಿಯಮಗಳನ್ನು ಪಾಲಿಸದೆ ಅನೇಕ ಪುಸ್ತಕಗಳನ್ನು ವೈಯಕ್ತಿಕ ಶೈಲಿಯಲ್ಲಿ ನಕಲಿಸಿ ಕ್ಯಾಲಿಗ್ರಾಫಿಗೆ ಕುಂದು ತಂದಿದ್ದಾರೆ. ಇನ್ನೂ ಕೆಲವರು ನಿಯಮ ಪಾಲಿಸಿ, ಉತ್ತಮ ಹಾಗೂ ಸ್ಪಷ್ಟವಾದ ಕೈ ಬರಹದಲ್ಲಿ ನಕಲಿಸಿದ ಪುಸ್ತಕವು ಅಮೂಲ್ಯ ಕೊಡುಗೆಯಾಗಿಸಿದ ಮಹಾತ್ಮರೂ ಇದ್ದಾರೆ. ಇತರರು ಸರ್ಕಾರಿ ಕಚೇರಿಯಲ್ಲಿ ಗುಮಾಸ್ತ ಹುದ್ದೆಯಂತಹ ನಿರ್ದಿಷ್ಟ ಉದ್ಯೋಗಗಳು ಪ್ರಾಪ್ತಿಯಾಗಲು ಕ್ಯಾಲಿಗ್ರಾಫಿಯನ್ನು ಅಧ್ಯಯನ ಮಾಡಿದರು ಹಾಗೂ ಆಡಳಿತಗಾರರ ಅಧಿಕೃತ ದಾಖಲೆಗಳನ್ನು ಕ್ಯಾಲಿಗ್ರಾಫಿಯ ವಿಭಿನ್ನ ಶೈಲಿಗಳನ್ನು ಬಳಸಿ ಅವರ ಮೆಚ್ಚುಗೆಗೆ ಪಾತ್ರರಾದರು. ಅಂತಹ ಕೆಲವು ಉದಾಹರಣೆಗಳು ಬಹಳ ಗಮನಾರ್ಹ. ಬರವಣೆಗೆಯ ಶ್ರೀಮಂತಿಕೆ ಹಾಗೂ ಸಂಕೀರ್ಣತೆ ಕ್ಯಾಲಿಗ್ರಾಫಿಯ ವೈಭವಕ್ಕೆ ಬೆಳಕು ಚೆಲ್ಲುತ್ತದೆ.

ಹೆಚ್ಚು ಪ್ರಾವೀಣ್ಯತೆ ಪಡೆದ ಕ್ಯಾಲಿಗ್ರಾಫರ್‍ಗಳು ಅತ್ಯಂತ ಸುಂದರವಾದ ಹಸ್ತಪ್ರತಿಗಳನ್ನು ತಯಾರಿಸಿದರು. ಅವರ ಬರಹಗಳು ಅಮೂಲ್ಯವಾದವು. ಅವರು ಸಾಮಾನ್ಯವಾಗಿ ಸಮಾಜದ ಶ್ರೀಮಂತ ಜನರಿಗೆ, ವಿಶೇಷವಾಗಿ ಸುಲ್ತಾನರು ಮತ್ತು ಇತರ ಆಡಳಿತಗಾರರಿಗಾಗಿ ಕೆಲಸ ಮಾಡಿದರು. ಆಡಳಿತಗಾರರ ಅರಮನೆಯ ಇಲಾಖೆಯಲ್ಲಿ ಪುಸ್ತಕ ತಯಾರಿಕೆ ಮತ್ತು ಸಂಬಂಧಿತ ಕೆಲಸಗಳಿಗಾಗಿ ಅತ್ಯುತ್ತಮ ಚಿತ್ರವನ್ನು ಹೆಚ್ಚಾಗಿ ಮೀಸಲಿಡಲಾಗಿತ್ತು. ಚಿತ್ರಕಲೆ ಪೂರ್ಣಗೊಂಡ ನಂತರ, ಅಲ್ಲಿ ಕೆಲಸ ಮಾಡಿದ ಇತರ ಕಲಾವಿದರು ಮತ್ತು ಕುಶಲಕರ್ಮಿಗಳು ತಮ್ಮ ಚಿತ್ರಿಸಿದ ಆಭರಣಗಳು ಮತ್ತು ಅತ್ಯುತ್ತಮ ಬೈಂಡಿಂಗ್ ಉಪಯೋಗಿಸಿ ಪುಸ್ತಕವನ್ನು ಸಂಪೂರ್ಣಗೊಳಿಸುತ್ತಿದ್ದರು.

ಇತರ ಮಾಧ್ಯಮಗಳಲ್ಲಿಯೂ ಕೃತಿಗಳನ್ನು ರಚಿಸಲು ತಜ್ಞ ಕ್ಯಾಲಿಗ್ರಾಫರ್‍ಗಳನ್ನು ನೇಮಿಸಲಾಯಿತು. ಹಸ್ತಪ್ರತಿಯಲ್ಲಿ ನಿರಂತರ ಪಠ್ಯವನ್ನು ನಕಲಿಸುವುದರಿಂದ ಇದೊಂದು ವಿಭಿನ್ನ ಕೆಲಸವಾಗಿತ್ತು. ಕ್ಯಾಲಿಗ್ರಾಫರ್‍ಗೆ ಲಭ್ಯವಿರುವ ಸ್ಥಳವು ಮನಸ್ಸಿನಲ್ಲಿ ತೃಪ್ತಿಕರವಾಗಿರಬೇಕು ಮತ್ತು ಆ ಜಾಗವನ್ನು ಸಮತೋಲಿತ ರೀತಿಯಲ್ಲಿ ತುಂಬಲು ವಿವಿಧ ಶೈಲಿಯ ಲಿಪಿ ನಿಯಮಗಳ ಪ್ರಕಾರ ಕೆಲಸ ಮಾಡಲು ಅಕ್ಷರಗಳನ್ನು ವಿನ್ಯಾಸಗೊಳಿಸಬೇಕಾಗಿತ್ತು. ನುರಿತ ಕ್ಯಾಲಿಗ್ರಾಫರ್‍ಗಳು ತಯಾರಿಸಿದ ಈ ವಿನ್ಯಾಸಗಳು ಮತ್ತು ಇತರ ಏಕ ಹಾಳೆಗಳನ್ನು ಸಂರಕ್ಷಿಸಲಾಗಿತ್ತು. ಅವುಗಳು ನಂತರದ ಪೀಳಿಗೆಗೆ ಉಪಯುಕ್ತವಾಯಿತು. ನಂತರದ ಕಾಲದಲ್ಲಿ, ಅವುಗಳನ್ನು ಆಲ್ಬಮ್‍ಗಳಾಗಿ ಸಂಗ್ರಹಿಸಲಾಯಿತು. ಪರಿಣಾಮವಾಗಿ, ಕ್ಯಾಲಿಗ್ರಾಫರ್‍ಗಳು ಆಲ್ಬಮ್‍ಗಳಲ್ಲಿ ಸೇರಿಸಲು ವಿಶೇಷ ಹಾಳೆಗಳನ್ನು ತಯಾರಿಸಲು ಪ್ರಾರಂಭಿಸಿದರು. ಚಿತ್ರಗಳ ಶೈಲಿಯಲ್ಲಿ ಕ್ಯಾಲಿಗ್ರಾಫಿಯನ್ನು ಹೆಚ್ಚಾಗಿ ಮನೆಗಳ ಗೋಡೆಗಳ ಮೇಲೆ ತೂಗಿಸಲಾಗುತ್ತಿತ್ತು. ಬೋಧನಾ ಶುಲ್ಕಗಳು ಮತ್ತು ಬರವಣಿಗೆಯ ಆಯೋಗಗಳು ಕೆಲವು ನುರಿತ ಕ್ಯಾಲಿಗ್ರಾಫರ್‍ಗಳು ಸ್ವತಂತ್ರವಾಗಿರಲು ಎಡೆ ಮಾಡಿಕೊಟ್ಟವು. ಆದ್ದರಿಂದ ಇಂದು, ಕೆಲವು ಕ್ಯಾಲಿಗ್ರಾಫರ್‍ಗಳು ಸಾಮಾನ್ಯವಾಗಿ ಸ್ವತಂತ್ರವಾಗಿ ಇರಲು ಬಯಸುತ್ತಾರೆ.

ಮೂಲ: ಜೋರ್ಡಾನ್ ಸುದರ್ಮನ್
ಅನುವಾದ: ಅಶ್ರಫ್ ನಾವೂರು

Leave a Reply

*