ದಕ್ಷಿಣೇಷ್ಯಾ ಇತಿಹಾಸದ ಒಳಸುಳಿಗಳು: ನೈಲ್‌ ಗ್ರೀನ್‌ ಸಂದರ್ಶನ

ವಿಖ್ಯಾತ ಇತಿಹಾಸಜ್ಞರಾದ ನೈಲ್‌ ಗ್ರೀನ್‌ ಸದ್ಯ ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ, ಲಾಸ್‌ ಏಂಜಲಿಸ್‌ನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇಸ್ಲಾಮ್‌, ಸೂಫಿಸಂ ಹಾಗೂ ವ್ಯಾಪಾರ ಇವರ ವಿಷಯಗಳಾಗಿದ್ದು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಸೂಫಿಸಂ: ಎ ಗ್ಲೋಬಲ್‌ ಹಿಸ್ಟರಿ, ಬಾಂಬೆ ಇಸ್ಲಾಂ, ಇಂಡಿಯನ್‌ ಸೂಫಿಸಂ: ಸಿನ್ಸ್‌ ಸೆವೆಂಟೀಂತ್‌ ಸೆಂಚುರಿ ಅವರ ಪ್ರಮುಖ ಕೃತಿಗಳು. ಝಿಯಾದ್ ಅಬೂ ರೀಶ್‌ರಿಗೆ ಇವರು ನೀಡಿರುವ ಸಂದರ್ಶನವನ್ನು “ತಿಜೋರಿ” ಓದುಗರಿಗಾಗಿ ಕನ್ನಡಕ್ಕೆ ತಂದಿದ್ದೇವೆ.

ಉ: ದಕ್ಷಿಣೇಷ್ಯಾದ ಮುಸಲ್ಮಾನರ ಮತ್ತು ವಿಶಾಲವಾದ ಪರ್ಶಿಯನ್‌ ಪ್ರಭಾವಿತ ಜಗತ್ತಿನ ಇತಿಹಾಸಜ್ಞನಾಗಿ ನನ್ನನ್ನು ನಾನು ಗುರುತಿಸಲು ಇಷ್ಟಪಡುತ್ತೇನೆ. ಸಾಮಾಜಿಕ ಮತ್ತು ರಾಜಕೀಯ ಇತಿಹಾಸದ ಜತೆಜತೆಗೆ ಧಾರ್ಮಿಕ ಇತಿಹಾಸದಲ್ಲೂ ನನಗೆ ಆಸಕ್ತಿ ಇದೆ. ನನ್ನ ಬಹುತೇಕ ಅಧ್ಯಯನಗಳು ಒಂದು ಇತಿಹಾಸಜ್ಞ ಎಂಬ ನೆಲೆಯಲ್ಲಿ ಆಧುನಿಕ ಪೂರ್ವ ಜಗತ್ತಿನ ಧರ್ಮಗಳೊಂದಿಗೆ ನಾವು ಹೇಗೆ ಅನುಸಂಧಾನ ನಡೆಸುತ್ತಿದ್ದೇವೆ ಎನ್ನುವುದರ ಕುರಿತಾಗಿ ಮೂಡಿ ಬಂದಿದೆ.

ಉ: ಅಧ್ಯಯನದ ಪ್ರಶ್ನೆಗಳನ್ನು ರೂಪಿಸುವಲ್ಲಿ ಮತ್ತು ಇತಿಹಾಸದ ಮೂಲಗಳ ಆಯ್ಕೆಯ ವಿಚಾರದಲ್ಲಿ ಭಾರತೀಯ ರಾಷ್ಟ್ರ-ರಾಜ್ಯ ಕಲ್ಪನೆಗೆ ಸಿಗುತ್ತಿರುವ ಪ್ರಾಬಲ್ಯ ದಕ್ಷಿಣೇಷ್ಯಾ ಇತಿಹಾಸದ ಕ್ಷೇತ್ರ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳಲ್ಲೊಂದು. ಭಾರತೀಯ ರಾಷ್ಟ್ರ-ರಾಜ್ಯ ಸ್ವರೂಪದ ಪ್ರಬಲ ಸಂಕಥನದೊಂದಿಗೆ ತಾಳೆಯಾಗುತ್ತಿಲ್ಲ ಎನ್ನುವ  ಏಕೈಕ ಕಾರಣಕ್ಕೋಸ್ಕರ ಹಲವಾರು ಭಾಷಿಕ ಮತ್ತು ಸಾಮಾಜಿಕ ಗುಂಪುಗಳು ಇಲ್ಲಿ ಮೂಲೆಗುಂಪಾಗುತ್ತಿವೆ. ಸಾಮಾನ್ಯವಾಗಿ, ಮಧ್ಯ ಪ್ರಾಚ್ಯಕ್ಕೆ ಸಂಬಂಧಿಸಿದ ಅಧ್ಯಯನ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನರೊಂದಿಗೆ ನಾನು ಮಾತನಾಡುವುದಿದೆ. ಭಾರತದ ಬಗ್ಗೆ ಅಧ್ಯಯನ ಮಾಡುತ್ತಿರುವ ಹಲವಾರು ವಿದ್ವಾಂಸರು ಇಸ್ಲಾಮಿನ ಬಗ್ಗೆ ಬಹಳ ಸಣ್ಣ ಪ್ರಮಾಣದ ಅಧ್ಯಯನವನ್ನು ಮಾತ್ರವೇ ಮಾಡಿದ್ದು, ಅರೇಬಿಕ್‌ ಮತ್ತು ಪರ್ಶಿಯನ್‌ ಬಗ್ಗೆ ಯಾವುದೇ ಅಧ್ಯಯನ ನಡೆಯುತ್ತಿಲ್ಲ. “ಭಾರತೀಯ ಧರ್ಮಗಳು” ಎಂದು ಕೆಲವರು ಕರೆಯುವ ಪದ ಇಸ್ಲಾಮ್‌ ಮತ್ತು ಮುಸ್ಲಿಮರ ಬಗ್ಗೆ ಚರ್ಚಿಸಲು ಯಾವುದೇ ಅವಕಾಶ ನೀಡುತ್ತಿಲ್ಲ ಎನ್ನುವುದು ಈ ಸಮಸ್ಯೆಯ ಒಂದು ಪರಿಣಾಮ. ದಕ್ಷಿಣೇಷ್ಯಾ  ಇತಿಹಾಸದ ಕಲಿಕೆಗೆ ಒತ್ತು ಕೊಡುವ ಹಲವು ವಿವಿ ವಿಭಾಗಗಳು ಹಿಂದೂ ಮತ್ತು ಬೌದ್ಧ ಧರ್ಮಗಳೇ ದಕ್ಷಿಣೇಷ್ಯಾದ ಸಂಸ್ಕೃತಿಗೆ ರೂಪುಕೊಟ್ಟಿರುವ  ʼಭಾರತೀಯ ಧರ್ಮಗಳುʼ ಎಂಬ ಪೂರ್ವಗ್ರಹವನ್ನು ಹೊಂದಿವೆ. ಇಸ್ಲಾಮಿನ ಪ್ರಭಾವ, ಮುಸ್ಲಿಮರ ಉಪಸ್ಥಿತಿ, ಮತ್ತು ಮುಘಲರ ಐತಿಹಾಸಿಕ ಬಳುವಳಿಗಳನ್ನು ಮುಂದಿಟ್ಟು ನೋಡುವಾಗ ಈ ಗ್ರಹಿಕೆಯಲ್ಲಿ ಹಲವಾರು ಸಮಸ್ಯೆಗಳಿರುವುದನ್ನು ಕಾಣಬಹುದು.  ಇಪ್ಪತ್ತನೆಯ ಶತಮಾನದ ಭಾರತೀಯ ಇತಿಹಾಸ ಶಾಸ್ತ್ರದಲ್ಲಿ ಇದು ಸಹಜವಾಗಿ ಮೂಡಿ ಬಂದಿದೆ. ಈಸ್ಟ್‌ ಇಂಡಿಯಾ ಕಾಲೇಜಿನ ಪತ್ರಾಗಾರದಲ್ಲಿ ಕಳೆದಿದ್ದ ವೇಳೆ ಇದರ ಉತ್ತಮ ನಿದರ್ಶನ ನನ್ನ ಮುಂದೆ ಪ್ರತ್ಯಕ್ಷವಾಯಿತು. 1830 ಮತ್ತು 1840 ರ ಇತಿಹಾಸದ ಪ್ರಶ್ನೆ ಪತ್ರಿಕೆಗಳನ್ನು ತಿರುವಿ ಹಾಕಿದಾಗ ಭಾರತದ ಇತಿಹಾಸವನ್ನು ಆಗಿನ ಬ್ರಿಟಿಷರು ಗ್ರಹಿಸಿರುವ ಶೈಲಿ ನೋಡಿ ಆಶ್ಚರ್ಯವಾಯಿತು. ಪ್ರಶ್ನೆ ಪತ್ರಿಕೆಗಳೆಲ್ಲವೂ ಇಸ್ಲಾಮಿನ ಹಾಗೂ ಮುಘಲರ ಕುರಿತಾಗಿತ್ತು. ಇಸ್ಲಾಮ್ ಆನುಷಂಗಿಕ ಎನಿಸಿರುವ ಯಾ ಪೂರ್ಣವಾಗಿ ನೆನೆಗುದಿಗೆ ಬಿದ್ದಿರುವ ಭಾರತೀಯ ಇತಿಹಾಸದ ಇಂದಿನ ಪ್ರಬಲ ಗ್ರಹಿಕೆಗಿಂತ ಇದು ಸಂಪೂರ್ಣವಾಗಿ ಭಿನ್ನವಾಗಿದೆ. ಸದ್ಯ ಚಾಲ್ತಿಯಲ್ಲಿರುವ ಭೌಗೋಳಿಕ ವರ್ಗೀಕರಣಗಳನ್ನು ಆಧರಿಸಿದ ಅಧ್ಯಯನ ಕ್ಷೇತ್ರವನ್ನು ಮೀರುವ ಕೆಲಸಗಳನ್ನು ಪ್ರೋತ್ಸಾಹಿಸಲು ನಾನು ಬಯಸುತ್ತೇನೆ.  ಯಾರೂ ಮುಟ್ಟಿ ನೋಡಿಲ್ಲದ ಇಂಡೋ-ಅರೇಬಿಕ್‌ ಹಾಗೂ ಇಂಡೋ-ಪರ್ಶಿಯನ್‌ ಇತಿಹಾಸದ ಮೂಲಗಳು ಸಾಕಷ್ಟು ಇದ್ದು ನಮ್ಮ ಅಧ್ಯಯನ ಅತ್ತ ಕಡೆ ಸಾಗಿ ರಾಷ್ಟ್ರ-ರಾಜ್ಯ ಕೇಂದ್ರಿತವಾಗಿ ಮೂಡಿಬಂದಿರುವ ಕ್ಷೇತ್ರಗಳು ಹಾಕಿರುವ ಸೀಮೆಗಳನ್ನು ಮೀರಬೇಕು.

ನೈಲ್‌ ಗ್ರೀನ್‌

ಉ: ದಕ್ಷಿಣೇಷ್ಯಾದ ಇತಿಹಾಸಜ್ಞರು ಇಸ್ಲಾಮನ್ನು ಮಧ್ಯಪ್ರಾಚ್ಯದ ಇತಿಹಾಸಜ್ಞರ ವಿಷಯವಾಗಿ ಮಾತ್ರ ಕಾಣುವುದನ್ನು ನಿಲ್ಲಿಸಬೇಕು. ಬ್ರಿಟಿಷರು ಗ್ರಹಿಸಿರುವಂತೆ ವಸಾಹತುಪೂರ್ವದ ಭಾರತವನ್ನಾದರೂ ಇಸ್ಲಾಮಿಕ್‌ ವಿಭಾಗದ  ಒಂದು ಭಾಗವನ್ನಾಗಿ ಕಾಣುವ ಅಧ್ಯಯನಗಳನ್ನು ಪ್ರೋತ್ಸಾಹಿಸಬೇಕು. ರಾಷ್ಟ್ರ ಮತ್ತು ವಸಾಹತಿನ ಇತಿಹಾಸಗಳ ಆಚೆಗೆ ಸಾಗಿ ಆಧುನಿಕ ಪೂರ್ವದ ಇಸ್ಲಾಮಿಕ್‌ ಜಾಗತಿಕ ವ್ಯವಸ್ಥೆಯ ನಡುವಿನ ದಕ್ಷಿಣೇಷ್ಯಾವನ್ನು ಕಾಣಲು ಸಾಧ್ಯವಾಗಬೇಕು. ಸಮಕಾಲೀನ ಇರಾನ್‌ ಮತ್ತು ಭಾರತದ ಗಡಿಗಳನ್ನು ಮೀರುವ ಕೆಲವು ವಿಶಿಷ್ಟ ಚರಿತ್ರೆಯ ಕೊಂಡಿಗಳನ್ನು ಪರೀಕ್ಷಿಸಿರುವ ನಾನು ಇಂತಹ ಕೆಲಸಗಳನ್ನೇ ಮಾಡುತ್ತಿದ್ದೇನೆ. ಭಾಷಿಕ ವಲಯಗಳ ಆಧಾರದಲ್ಲಿ ರೂಪಿಸಲಾದ ಅಧ್ಯಯನ ಕ್ಷೇತ್ರಗಳು ಇಂತಹ ಗುರಿಗಳ ಕಡೆಗೆ ತಲುಪಲು ಒಂದು ದಾರಿ ಎನ್ನಬಹುದು. ಭೌಗೋಳಿಕ ವಲಯಗಳ ಆಧಾರದಲ್ಲಿ ರೂಪಿಸಲಾದ ಇತಿಹಾಸದ ವಿಭಾಗಗಳಲ್ಲಿ ಕಂಡುಬರುವಷ್ಟು ಬಲೆಗಳು ಇದರಲ್ಲಿಲ್ಲ. ವಿದ್ವಾಂಸರು ಅವರಿಗೆ ಓದಲು ಸಾಧ್ಯವಾಗುವ ಭಾಷಿಕ ವಲಯಗಳನ್ನು ಹಿಂಬಾಲಿಸಬೇಕು. ಉದಾಹರಣೆಗೆ, ಅರೇಬಿಕ್‌ ಗೊತ್ತಿರುವ ವಿದ್ವಾಂಸರು ಆ ಭಾಷೆಯನ್ನು ಹಿಂಬಾಲಿಸುತ್ತಾ, ಗುಜರಾತ್‌ ಯಾ ಹೈದರಾಬಾದ್ ಇರಲಿ, ಅದು ಎಲ್ಲೆಲ್ಲಿಗೆ ತಲುಪುತ್ತದೆಯೋ ಅಲ್ಲಿಗೆ ಹೋಗಬೇಕು.  ಭಾಷಿಕ ವಲಯಗಳು ನಿಜಕ್ಕೂ ಬಹುತ್ವದ ವಲಯಗಳಾಗಿವೆ. ನಾವು ಕೆಲಸ ಮಾಡಬೇಕಿರುವ ಸ್ಥಳಗಳನ್ನು ಗುರುತಿಸಿ ಸುಮ್ಮನಾಗುವಂತೆಯೂ ಇಲ್ಲ, ಆಧುನಿಕ ರಾಷ್ಟ್ರ-ರಾಜ್ಯಗಳ ಸರಹದ್ದುಗಳನ್ನು ಮೀರಿ ಅವುಗಳ ಕಾಲಕ್ಕಿಂತಲೂ ಹಿಂದಕ್ಕೆ ತೆರಳಿ ಹೊಸ ಹೊಸ ವಲಯಗಳನ್ನು ಗುರುತಿಸುವ ಕೆಲಸ ನಡೆಯಬೇಕು.

ಉ: ಕೆಲವು ವಿದ್ವಾಂಸರು ಸೂಫಿಸಂ ಅಥವಾ ಸಂಪ್ರದಾಯ ಆಧಾರಿತ ಇಸ್ಲಾಂ (customary Islam) ಎಂದು ವರ್ಗೀಕರಿಸುತ್ತಿರುವ ಸಂಗತಿಗಳು ಆಧುನಿಕ ಪೂರ್ವದಲ್ಲಿ ಪ್ರಮಾಣಾಧಾರಿತ ಇಸ್ಲಾಮಿನ (normative Islam)  ಭಾಗವೇ ಆಗಿತ್ತು ಎನ್ನುವುದನ್ನು ಮೊದಲು ಗ್ರಹಿಸಬೇಕಿದೆ. ಆ ವರ್ಗೀಕರಣವನ್ನು ನಿರ್ಮೂಲನೆ ಮಾಡುವುದು ಒಬ್ಬ ಅಧ್ಯಾಪಕ ಮತ್ತು ವಿದ್ವಾಂಸ ಎಂಬ ನೆಲೆಯಲ್ಲಿ ನನಗಿರುವ ವಿಸ್ತೃತವಾದ ಗುರಿಗಳಲ್ಲೊಂದು.   ಆಧುನಿಕ ಪೂರ್ವದಲ್ಲಿ ಅಥವಾ ಸುಧಾರಣಾವಾದ ಬರುವ ಮುನ್ನ ಮುಸ್ಲಿಂ ಎಂದೆನಿಸಿಕೊಳ್ಳಲು ಏನು ಬೇಕಿತ್ತು ಎನ್ನುವುದನ್ನು ಇದು ತಿಳಿಸಿಕೊಡುತ್ತದೆ. ಸಂತರು, ಸಮಾಧಿಗಳು ಮತ್ತು ಪವಾಡಗಳ ಸಮೇತ ಪವಿತ್ರ ಪುರುಷರು ಮತ್ತು ಮೂರ್ತರೂಪದ ಧಾರ್ಮಿಕ ಪ್ರಾಧಿಕಾರಗಳು ಅಂದಿನ ಪ್ರಮಾಣಾಧಾರಿತ ಇಸ್ಲಾಮಿನಲ್ಲಿ ಮಿಳಿತವಾಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಆರಂಭವಾಗಿ ಈಗಲೂ ಮುಂದುವರಿಯುತ್ತಿರುವ ಇಸ್ಲಾಮಿಕ್‌ ಸುಧಾರಣಾವಾದದ ತರುವಾಯ ಹುಟ್ಟಿಕೊಂಡ ವರ್ಗೀಕರಣಗಳ ಪ್ರಾಬಲ್ಯವನ್ನು ನಾವು ಪ್ರಶ್ನಿಸಬೇಕಿದೆ. ತಡವಾಗಿ ಬಂದ ಇಂತಹ ವರ್ಗೀಕರಣಗಳ ಮೂಲಕ ಇಸ್ಲಾಮಿನ ಇತಿಹಾಸವನ್ನು ವೀಕ್ಷಿಸುವ ಪರಿಪಾಠ ನಾವು ಬೆಳೆಸಿಕೊಂಡಿದ್ದು ಸೂಫಿಸಮನ್ನು ಇಸ್ಲಾಮಿನಿಂದ ಬೇರ್ಪಡಿಸಲು ಸಾಧ್ಯ ಎಂದು ಅಸೂಕ್ಷ್ಮವಾಗಿ ನಂಬಿದ್ದೇವೆ. ಆದರೆ, ಆಧುನಿಕ ಪೂರ್ವದ ಇಸ್ಲಾಮ್‌ ಸಂಪೂರ್ಣವಾಗಿ ಸಂತ‌ ಪುರುಷರು, ಸಮಾಧಿಗಳು ಮತ್ತು ಪವಾಡಗಳಿಂದ ತುಂಬಿದ್ದು ಮೇಲಿನ ಗ್ರಹಿಕೆ ತಪ್ಪು. ನನ್ನ ವಿದ್ಯಾರ್ಥಿಗಳಿಗೆ ನಾನು ಸಾಗಿಸಲು ಬಯಸುತ್ತಿರುವುದು ಇದೇ ಆಶಯವನ್ನು. ಆ ಕಾಲದ ಒಳಸುಳಿಗಳನ್ನು ಮನಗಾಣುವಲ್ಲಿ ವಿಫಲವಾದ ಸೂಫಿ-ಉಲಮಾ ದ್ವಂದ್ವವನ್ನು ಮುಂದಿಡುವ ಒಂದು ಪರ್ಯಾಯ ಮಾತ್ರ ಇದಕ್ಕಿದ್ದು ದುರದೃಷ್ಟವಶಾತ್‌ ಸಮಕಾಲೀನ ಇಸ್ಲಾಂ ಮತ್ತು ದಕ್ಷಿಣೇಷ್ಯಾ ಇತಿಹಾಸದ ಕ್ಷೇತ್ರವನ್ನು ಈ ಸಿದ್ಧಾಂತ ಆಳುತ್ತಿದೆ.

ಉ: ಧರ್ಮ ಎನ್ನುವ ವರ್ಗೀಕರಣದ ಸಮಸ್ಯೆಯನ್ನು ಇತಿಹಾಸಜ್ಞರು ಸರಿಯಾಗಿ ಇದಿರುಗೊಳ್ಳಬೇಕಿದೆ. ಇತಿಹಾಸಜ್ಞರು ಧರ್ಮದೊಂದಿಗೆ ಸರಿಯಾಗಿ ಅನುಸಂಧಾನ ನಡೆಸುತ್ತಿಲ್ಲ. ಒಂದು ಅಧ್ಯಯನ ಕ್ಷೇತ್ರ ಎಂಬ ನೆಲೆಯಲ್ಲಿ ಇತಿಹಾಸ ವಿಭಾಗದಲ್ಲಿ ಉಂಟಾಗಿರುವ ಬೆಳವಣಿಗೆಗಳೇ ಇದಕ್ಕೆ ಕಾರಣ. ಸಾಮಾಜಿಕ ಇತಿಹಾಸಜ್ಞರು ಭೌತಿಕ ಉತ್ಪಾದಕತೆಗೆ ಒತ್ತು ಕೊಟ್ಟು ಧರ್ಮವನ್ನು ಅವಗಣಿಸುತ್ತಾರೆ. ಸಾಂಸ್ಕೃತಿಕ ಇತಿಹಾಸಜ್ಞರು ಒಂದೋ ಧರ್ಮವನ್ನು ಪರಿಗಣಿಸುವುದೇ ಇಲ್ಲ, ಇಲ್ಲವೇ ಸಂಸ್ಕೃತಿಯ ಒಳಗಡೆಗೆ ಸೇರಿಸಿಬಿಡುತ್ತಾರೆ. ಇಸ್ಲಾಮಿನ ವಿಷಯಕ್ಕೆ ಬರುವುದಾದರೆ ಇಸ್ಲಾಮಿನ ಇತಿಹಾಸವನ್ನು ಇಸ್ಲಾಮಿಕ್‌ ಅಧ್ಯಯನದ ವಿಧಾನಗಳಿಗೆ ಬಿಟ್ಟು ಕೊಡಲಾಗಿದೆ. ಆದರೆ, ಇತಿಹಾಸಜ್ಞರಿಗೂ ಇದರಲ್ಲಿ ಕೆಲಸ ಇದೆ ಎನ್ನುವುದು ನನ್ನ ಗ್ರಹಿಕೆ. ಇಸ್ಲಾಮ್‌ ಅಥವಾ ಧರ್ಮವನ್ನು ಒಂದು ಇತಿಹಾಸದ ವರ್ಗೀಕರಣವಾಗಿ ಕಾಣುವಲ್ಲಿ ವಿಫಲವಾಗಿರುವುದರಿಂದ ಇಸ್ಲಾಮ್‌ ಅಧ್ಯಯನದಲ್ಲಿ ಇತಿಹಾಜ್ಞರು ವಹಿಸಬಹುದಾಗಿದ್ದ ಯಾ ವಹಿಸಬೇಕಿದ್ದ ಪಾತ್ರಗಳು ಸಿಗದಾಗಿವೆ.  ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳ ವ್ಯಾಪ್ತಿಯೊಳಗೆ ಧರ್ಮದ ಬಗೆಗಿನ ಅಧ್ಯಯನವನ್ನು ತರಬೇಕಾದ ಅಗತ್ಯವಿದೆ ಎನ್ನುವುದು ನನ್ನ ನಂಬಿಕೆ. ಸೂಫಿಸಂ ಬಗೆಗಿನ ಚರ್ಚೆಗಳನ್ನು (ಉದಾಹರಣೆಗೆ) ಇಸ್ಲಾಮಿಕ್‌ ವಿಧಾನಗಳಿಂದ ಹೊರತಂದು ಇತಿಹಾಸದ ವಿಧಾನಗಳ ಮಧ್ಯಕ್ಕೆ ತರುವುದು ಇದಕ್ಕೊಂದು ದಾರಿ ಎನ್ನಬಹುದು. ಆಧುನಿಕ ಪೂರ್ವ ಯುಗದಲ್ಲಿ ಸದರಿ ಸೂಫಿಗಳು ಅಧಿಕಾರದ ಮಧ್ಯವರ್ತಿಗಳು ಕೂಡಾ ಆಗಿದ್ದರು ಎನ್ನುವುದನ್ನು ನಾವು ಗಮನಿಸಬೇಕಿದೆ.

ಉ: ಈ ಪ್ರಶ್ನೆ ಸ್ಕಾಲರ್ಶಿಪ್ಪುಗಳ ನಿರ್ವಹಣೆಗೆ ಸಂಬಂಧಿಸಿದೆ. ಈ ಹಂತದಲ್ಲಿ ಭೌಗೋಳಿಕ ವಲಯಗಳ ಮೇಲಿನ ಒತ್ತನ್ನು ಪರಿಗಣಿಸಬೇಕಾಗಿ ಬರುತ್ತದೆ. ಹೀಗೆ ಪದವಿ ಅಧ್ಯಯನ ಆರಂಭಿಸುವುದರೊಂದಿಗೆ ಈ ಕ್ಷೇತ್ರದ ಸಾಹಿತ್ಯಗಳ ಅರಿವು ದೊರಕುತ್ತದೆ. ಮತ್ತೊಂದು ಆಯಾಮದಲ್ಲಿ ನೋಡಿದರೆ ಅಲ್ಲಿನ ವ್ಯಾಖ್ಯಾನಗಳ ವರ್ತುಲದಲ್ಲಿ ತನ್ನನ್ನು ತಾನೆ ಕೂಡಿ ಹಾಕಿಕೊಳ್ಳುವ ಅಪಾಯವೂ ಇದೆ. ಪ್ರಯಾಣ, ಪತ್ರಾಗಾರಗಳ ಅಧ್ಯಯನ, ಮತ್ತು ವಿಶೇಷವಾಗಿ ಖಾಸಗಿ ಆರ್ಕೈವ್‌ಗಳ ಸಂದರ್ಶನದ ಮೂಲಕ ಈ ವ್ಯಾಖ್ಯಾನಗಳ ವರ್ತುಲದಿಂದ ಹೊರಬರಬೇಕಾದುದು ಅತ್ಯಗತ್ಯ. ನನ್ನ ಅನುಭವಗಳ ಆಧಾರದಲ್ಲಿ ಇದನ್ನು ವಿವರಿಸಿದರೆ ಮತ್ತಷ್ಟು ಸ್ಪಷ್ಟತೆ ಸಿಗಬಹುದು. ನನ್ನ ಪ್ರಯಾಣಗಳ ಮಧ್ಯೆ ಒಂದು ಸಾಮ್ರಾಜ್ಯದ ರಾಜಧಾನಿಯಾಗಿದ್ದ ಭಾರತದ ನಗರವೊಂದರಲ್ಲಿ ಕೆಲವು ಖಾಸಗಿ ಆರ್ಕೈವ್‌ಗಳನ್ನು ಕಂಡಿದ್ದೆ. ಈ ನಗರದ ಬಗ್ಗೆ ಇತಿಹಾಸದ ಸಾಹಿತ್ಯಗಳಲ್ಲಿ ಬಹಳ ಸ್ವಲ್ಪ ಉಲ್ಲೇಖಗಳು ಮಾತ್ರವೇ ಇರುವುದರಿಂದ ಇದರ ಪ್ರಾಧಾನ್ಯತೆ ನನಗೆ ಅಷ್ಟು ಬೇಗ ಹೊಳೆದಿರಲಿಲ್ಲ. ಪದವಿ ವಿದ್ಯಾರ್ಥಿಗಳು ಮುಕ್ತ ಚಿಂತನೆಯನ್ನು ಮತ್ತು ಧೈರ್ಯವಂತಿಕೆಯನ್ನು ಬೆಳೆಸಿಕೊಳ್ಳಬೇಕಿದೆ.  “ಪವಾಡಮಯ ಸಾಹಿತ್ಯ” ಎಂದು ನಾನು  ಕರೆಯುವ ಸಾಹಿತ್ಯವನ್ನು ಹಿಂಬಾಲಿಸುವುದು ನನಗೆ ಆಸಕ್ತಿದಾಯಕ ಎನಿಸಿದೆ. ಇದು ಕನಸಿನ ಬಗೆಗಿನ ಸಾಹಿತ್ಯದೊಂದಿಗೆ ಸಂಬಂಧವನ್ನು ಹೊಂದಿದೆ. ಇತಿಹಾಸ ಸಾಂಪ್ರದಾಯಿಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ವಿಭಿನ್ನ ಜ್ಞಾನಶಾಸ್ತ್ರಗಳೊಂದಿಗೆ ಈ ಸಮಸ್ಯೆಗೆ ಸಂಬಂಧ ಇದೆ. ಹ್ಯೂಮ್‌ ನಂತರದ ಇತಿಹಾಸದ ಜಗತ್ತಿನಲ್ಲಿ ನಾವು ಬಿದ್ದಿರುವ ಪರಿಣಾಮವಿದು. ಈ ಜಗತ್ತಿನಲ್ಲಿ ವಾಸ್ತವಿಕ ಜಗತ್ತಿನ ಬಗ್ಗೆ ಅಧ್ಯಯನ ಮಾಡುವವರು ಕನಸಿನ ಸಾಹಿತ್ಯದ ಬಗ್ಗೆ ಮಾತಾಡುವಂತಿಲ್ಲ. ಜ್ಞಾನಶಾಸ್ತ್ರದ ಮತ್ತು ವ್ಯಾಖ್ಯಾನ ವಿಜ್ಞಾನದ ಈ ತಡೆಗೋಡೆಗಳನ್ನು ಮೀರಲು ನಮ್ಮನ್ನು ಪಕ್ವಗೊಳಿಸುವ ಧೈರ್ಯ ಮತ್ತು ಮುಕ್ತ ಚಿಂತನೆ ಬಹಳ ಮುಖ್ಯ.

ಕೃಪೆ: ಜದಲಿಯ್ಯಾ ಜಾಲತಾಣ
ಕನ್ನಡಕ್ಕೆ: ನಝೀರ್‌ ಅಬ್ಬಾಸ್

Leave a Reply

*