ಹಿಂದೂ ಮಹಾಸಾಗರದ ನಾವಿಕರು ಮತ್ತು ಸಮುದ್ರದ ಸಂತರು

ಬರಲಿರುವ ಚಂಡಮಾರುತವನ್ನು ಎದುರಿಸಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಕ್ಯಾಪ್ಟನ್ ಇರ್ಫಾನ್ ಅವರು ಮಾಡಿದ್ದರು. ಕಳೆದ ಒಂದು ವಾರದಿಂದ ಒಮಾನಿನ ಸಲಾಲಾದಲ್ಲಿರುವ ಜೆಟ್ಟಿಯಲ್ಲಿ ಹವಾಮಾನ ವರದಿಗಳ ಆಧಾರದ ಮೇಲೆ ಮರದ ಹಡಗು ಒಂದನ್ನು ಲಂಗರು ಹಾಕಿದ್ದರು. ಕಾರ್ಮಿಕರೆಲ್ಲರೂ ಹಡಗಿನಲ್ಲಿದ್ದಾರೆ. ಸರಕುಗಳನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಗಾಳಿಯನ್ನು ಎದುರಿಸಲು ಸರ್ವಸನ್ನದ್ಧರಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ, ಅಂದರೆ ಮೇ 23,‌ 2018 ರಂದು ಯಮನ್‌ನ ತೀರ ಪ್ರದೇಶ ಸೊಕಾಟ್ರದಲ್ಲಿ (socotra) ಮೆಕುನು ಚಂಡಮಾರುತ ಸೃಷ್ಟಿಸಿದ ಅವಾಂತರದ ಬಗ್ಗೆ ಅವರು ತಿಳಿದಿದ್ದರು. 120ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಮತ್ತು 5 ಭಾರತೀಯ ಸಣ್ಣ ಹಡಗುಗಳು ಮುಳುಗಿದ್ದವು. ಚಂಡಮಾರುತವು ಭಾರಿ ವೇಗದಲ್ಲಿ ಮುನ್ನುಗ್ಗುತ್ತಿತ್ತು. ಮುಳುಗುವಿಕೆಯಿಂದ ಕಾಪಾಡಲು ಸರಕುಗಳನ್ನೆಲ್ಲ ಲೋಡ್ ಮಾಡಲಾಗಿತ್ತು. ಹಡಗನ್ನು ಸುರಕ್ಷಿತವಾಗಿ ಲಂಗರು ಹಾಕಿದ್ದರು. ಎಲ್ಲಾ ಸಿಬ್ಬಂದಿಗಳು ಹಡಗಿನಲ್ಲಿದ್ದರು. ಗಾಳಿಯು ಗಂಟೆಗೆ 185 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿತ್ತು. ಅಂತೂ ಚಂಡಮಾರುತ ಬಂದೇಬಿಟ್ಟಿತು!.

ಭಾರತದ ಮಾಂಡವಿಯಲ್ಲಿ ತಯಾರಿಸಲ್ಪಡುವ ವಾಹನ

ಸುರಕ್ಷಿತವಾಗಿ ನಿಲ್ಲಿಸಲಾಗಿದ್ದ ಹಡಗಿನಲ್ಲಿ ಕ್ಯಾ. ಇರ್ಫಾನ್ ಅವರು ಸಣ್ಣ ಹಸಿರು ಧ್ವಜವನ್ನು ಕ್ಯಾಬಿನ್ ಬಳಿಯ ಬಾನಿಸ್ಟರ್‌ಗೆ ಕಟ್ಟುತ್ತಾ ತಮ್ಮ ಇಡೀ ಸಿಬ್ಬಂದಿಯೊಂದಿಗೆ ‘ಯಾ ಗೌಸ್’ ಎಂದು ಕೂಗಿದರು. ಅವರು ಖಾದಿರಿ ತರೀಖತ್‌ನ ಸಂಸ್ಥಾಪಕ, ಸೂಫಿ ಸಂತ ಅಬ್ದುಲ್ ಖಾದರ್ ಜೀಲಾನಿ ಅವರ ಹೆಸರನ್ನು ರಕ್ಷಣೆ ಗೋಸ್ಕರ ಕರೆಯುತ್ತಿದ್ದರು. ಕಟ್ಟಲಾಗಿದ್ದ ಆ ಧ್ವಜವು ಇನ್ನೋರ್ವ ಸೂಫಿ ಸಂತ ಪಶ್ಚಿಮ ಭಾರತದ ಮುಂಡ್ರಾದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಶಾಹ್ ಮುರಾದ್‌ ಬುಖಾರಿ ಅವರಿಗೆ ಸಂಬಂಧಿಸಿದಾಗಿತ್ತು. ನಾವಿಕರ ರಕ್ಷಕನೆಂದೇ ಖ್ಯಾತಿವೆತ್ತ ಶಾಹ್ ಮುರಾದ್ ಬುಖಾರಿ ಅವರ ಸಮಾಧಿ ಮೇಲೆ ಹಾಸಲಾದ ಹಸಿರು ಚಾದರದಿಂದ ಕತ್ತರಿಸಿ ತೆಗೆಯಲಾಗಿತ್ತು. ಅವರ ಅನುಗ್ರಹ ಆ ಬಟ್ಟೆಯಲ್ಲಿ ಇದೆ ಎಂದು ಅವರು ನಂಬಿದ್ದರು.

ಚಂಡಮಾರುತವು ಇನ್ನೇನು ಬೀಸುವ ಹಂತದಲ್ಲಿ ನಾವಿಕರ ಕುಟುಂಬದವರು, ಪ್ರೀತಿ ಪಾತ್ರರು ಅವರ ಸುರಕ್ಷತೆಗಾಗಿ ಪ್ರಾರ್ಥಿಸಲು ಸೂಫಿ ಕೇಂದ್ರಗಳಿಗೆ ಧಾವಿಸಿದರು. ಅರೇಬಿಯನ್ ಕೊಲ್ಲಿಯಲ್ಲಿ ಅಪಾರ ನಾಶ ನಷ್ಟ ಉಂಟು ಮಾಡಿದ ಮೆಕುನು ಚಂಡಮಾರುತವು ಯಮನ್ ಮತ್ತು ಒಮಾನ್ ನಿಂದ ಭಾರತದ ಕಡೆ ನುಗ್ಗುತ್ತಿತ್ತು. ಸಲಾಲಾ ಬಂದರಿನ ಬಳಿ ಚಂಡಮಾರುತದ ಹೊಡೆತಕ್ಕೆ ಏಳು ಅರಬ್ ದೋಣಿಗಳು ಮುಳುಗಿದ್ದರೂ ಇರ್ಫಾನ್ ಮತ್ತು ಅವರ ಸಿಬ್ಬಂದಿಗಳು ಸುರಕ್ಷಿತರಾಗಿದ್ದರು.

ಕಡಲು ಶಾಂತವಾದಾಗ ಇರ್ಫಾನ್ ಮತ್ತು ಅವರ ಸಿಬ್ಬಂದಿಗಳು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಶಾರ್ಜಾದಿಂದ ಯಮನಿನ ನಿಶ್ಟೂನ್‌ಗೆ ಸಾಗಿಸಲು ಸಮುದ್ರಯಾನ ಪುನರಾರಂಭಿಸಿದರು. ಯಾನ ಮುಗಿದ ಮೇಲೆ ಕ್ಯಾಪ್ಟನ್ ಇರ್ಫಾನ್ ಅವರು ಜಾಮ್ ಸಲಾಯದಲ್ಲಿರುವ ಶಾಹ್ ಮುರಾದ್ ಬುಖಾರಿ ಅವರ ದರ್ಗಾಕ್ಕೆ ಭೇಟಿ ನೀಡುತ್ತಾರೆ.

ಹಸಿರು ಧ್ವಜ ಕಟ್ಟಿದ ಭಾರತೀಯ ವಾಹನ

ಯುರೋಪಿಯನ್ನರ ಆಗಮನ ಮುನ್ನವೇ ಅರಬ್ ಹಡಗು (Dhow) ಹಿಂದೂ ಮಹಾಸಾಗರದಾದ್ಯಂತ ಕ್ರಮಿಸಿತ್ತು. ಲ್ಯಾಟಿನ್ ದೋಣಿಗಳ ಮೂಲಕ ಮಾನ್ಸೂನ್‌ನ ವಿರುದ್ಧ ದಿಕ್ಕುಗಳಿಗೆ ಸರಕು ಸರಂಜಾಮುಗಳನ್ನು, ಜನರನ್ನು ಸಾಗಿಸಲಾಗುತ್ತಿತ್ತು .ಇಂದು ಪಶ್ಚಿಮ ಭಾರತದ ಕಛ್‌ನಿಂದ ಅರಬ್ ದೋಣಿಗಳು ಸಮುದ್ರ ಮಾರ್ಗದ ಮೂಲಕ ಸಾಗುತ್ತಿದೆ. ಕಚ್ಚಿ ವಾಹನ್ ಎಂದು ಕರೆಯಲ್ಪಡುವ ಈ ದೋಣಿಗಳು ಗಾಳಿಯ ಸಹಾಯದಿಂದ ಚಲಿಸುವುದಿಲ್ಲ. ಬದಲಾಗಿ ಡೀಸಲ್ ಇಂಜಿನ್ ಗಳನ್ನು ಹೊಂದಿದೆ. ಕಂಟೇನರ್ ಹಡಗುಗಳು ಹೋಗಲು ಸಾಧ್ಯವಾಗದ ಪ್ರದೇಶಗಳಿಗೆ ಈ ಯಾಂತ್ರಿಕೃತ ಮರದ ಹಡಗುಗಳು ಹೋಗುತ್ತವೆ. ಆಹಾರ ಪದಾರ್ಥಗಳು, ಡೀಸೆಲ್, ಇದ್ದಿಲು, ಒಣ ಮೀನುಗಳು, ಜಾನುವಾರುಗಳು ಹಾಗೂ ಕಾರುಗಳನ್ನು ಇವುಗಳ ಮೂಲಕ ಸಾಗಿಸಲಾಗುತ್ತದೆ. ಬದಲಾಗುವ ಸರಕಾರದ ನೀತಿಗಳು ಹಾಗೂ ಜಾಗತಿಕ ಮಾರುಕಟ್ಟೆ ವ್ಯವಸ್ಥೆಗೆ ಅನುಗುಣವಾಗಿ ಉಂಟಾಗುವ ಬದಲಾವಣೆಗೆ ಈ ಅರಬ್ ಹಡಗುಗಳು ಹೊಂದಿಕೊಳ್ಳುತ್ತವೆ.

ಯುದ್ದ-ಕಲಹದ ಸಂದರ್ಭದಲ್ಲಿ ಕಂಟೇನರ್ ಹಡಗುಗಳು ಸಾಗದಂತಹ ಪ್ರದೇಶಗಳಿಗೆ ಸಣ್ಣ ಬಂದರುಗಳ ಮೂಲಕ ಸೇವೆ ಸಲ್ಲಿಸಲು ಇವುಗಳನ್ನು ಬಳಸಲಾಗುತ್ತದೆ. ೧೯೯೧ರಲ್ಲಿ ಸೊಮಾಲಿಯ ಸರಕಾರ ಪತನವಾದಾಗ ಕಿಸ್ಮಯೊ ಎಂಬ ಸಣ್ಣ ಬಂದರಿಗೂ ಅವು ತಲುಪಿದವು. ಈಗ ಸೊಮಾಲಿಯಾದ ಹೆಚ್ಚಿನ ಭಾಗಗಳಿಗೂ ಕಂಟೇನರ್ ಹಡಗುಗಳ ಸೇವೆ ಲಭ್ಯ. ಇತ್ತೀಚೆಗೆ ಯಮನ್ ಆಂತರಿಕ ಸಂಘರ್ಷದ ಸಂದರ್ಭದಲ್ಲಿ ಶಿಹರ್ ಮತ್ತು ನಿಶ್ಟೂನ್ ಸಣ್ಣ ಬಂದರು ಗಳಿಗೂ ಈ ಅರಬ್ ಹಡಗುಗಳ ಸೇವೆ ಒದಗಿಸಲಾಗಿತ್ತು. ಹಡಗುಗಳು ಸಾಗದ ಕಡೆ ಸಂಚರಿಸುವುದು ಮಾತ್ರವಲ್ಲದೆ ಸಮಯ, ಸಂದರ್ಭ , ಪರಿಸ್ಥಿತಿ ಅಪಾಯ ಮತ್ತು ರಕ್ಷಣೆಯ ಬಗ್ಗೆ ತಿಳಿದು ಹಿಂದೂ ಮಹಾಸಾಗರದಾದ್ಯಂತ ಸಂಚರಿಸುತ್ತವೆ. ಶಿಪ್ಪಿಂಗ್ ಜಗತ್ತಿನಲ್ಲಿ ಧರ್ಮ, ಸಮಾಜ , ಆರ್ಥಿಕತೆ, ಜೀವ -ನಿರ್ಜೀವ ವಸ್ತುಗಳ ನಡುವಿನ ಕೊಂಡಿಯಾಗಿ ಈ ಅರಬ್ ಹಡಗುಗಳು ರೂಪಗೊಂಡಿವೆ. ತೋರಿಕೆಯಲ್ಲಿ ಪ್ರಾಚೀನ ಯುಗದ ವಸ್ತುವಂತೆ ಕಂಡರು ಬಂಡವಾಳ ಶಾಹಿ ಯುಗದಲ್ಲೂ ಇವುಗಳ ಪ್ರಭಾವ ವ್ಯಾಪಿಸಿದೆ.

ಈ ವಾಹನ ಎಂಬುದು ಒಂದು ವಿಭಿನ್ನ ಪರಿಸರ (Heterotopic space). ಇದು ನಿರಂತರ ಚಲನೆಯಲ್ಲಿರುತ್ತದೆ, ವಿಭಿನ್ನ ಸ್ಥಳಗಳು ಬಂದರುಗಳ ನಡುವಿನ ಸಂಪರ್ಕ ಸಾಧನ ಮಾತ್ರವಲ್ಲದೆ ಅದುವೇ ಒಂದು ಪ್ರಪಂಚವಾಗಿದೆ. ಅವುಗಳಲ್ಲಿ ದುಡಿಯುವ ನಾವಿಕರು ವರ್ಷದ ಒಂಭತ್ತು ತಿಂಗಳುಗಳು ಅದರಲ್ಲೇ ಇರುತ್ತಾರೆ. ದಿನವನ್ನು ಆರು ಗಂಟೆಗಳ ಪಾಳಿಗಳಾಗಿ ವಿಂಗಡಿಸಿ ಕೆಲಸ ಮಾಡುವ ನಾವಿಕರ ಪಾಲಿಗೆ ಇದೊಂದು ಸ್ಥಳೀಯ ಮನೆ (Domestic space) ಕೂಡ ಆಗಿದೆ. ಲಂಗರು ಹಾಕಿದ್ದರೂ ನಾವಿಕರು ಅದರಲ್ಲಿ ಉಳಿಯುತ್ತಾರೆ. ಹಡಗು ಎಂಬುದು ಭೂತ- ವರ್ತಮಾನ- ಭವಿಷ್ಯವನ್ನು ಒಡಲಲ್ಲಿಟ್ಟುಕೊಂಡಿರುವ ಒಂದು ಹೆಟರೊಕ್ರೊನಿ (Heterochrony) ಆಗಿದೆ. ನಾವಿಕರು ಯಾತ್ರೆ ಆರಂಭಿಸುವಾಗ ಆ ಪ್ರದೇಶದಲ್ಲಿ ಸಂಚರಿಸಿದ್ದ ತಮ್ಮ ಪೂರ್ವಜರು ಹಾಗೂ ಸೂಫಿ ಸಂತರನ್ನು ಸ್ಮರಿಸುತ್ತಾರೆ.

ಘೋಸ್ (Ghos) ಎಂಬ ಸಾಧನವನ್ನು ಬಳಸಿ ಈ ಸಣ್ಣ ಹಡಗಿನ ನಾವಿಕರು ತಮ್ಮ ಪ್ರಯಾಣ ಸಮಯ ಗಮ್ಯಸ್ಥಳವನ್ನು ಲೆಕ್ಕ ಹಾಕುತ್ತಾರೆ. ಘೋಸ್ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಚಲನೆಯನ್ನು ಸೂಚಿಸುತ್ತದೆ. ಸೈಟ್ ಗಳ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ . ಭಾರತದಿಂದ ಮಧ್ಯ ಪ್ರಾಚ್ಯ ಮತ್ತು ಪೂರ್ವ ಆಫ್ರಿಕಾದ ಕಡೆ ಪ್ರಯಾಣಿಸುವಾಗ ನಾವಿಕರು ಬಂದರು ನಗರಗಳಾದ ಭಾರತದ ಮುಂದ್ರಾ, ಎಮಿರೇಟ್‌ನ ದುಬಾಯಿ ಮತ್ತು ಶಾರ್ಜಾ , ಸೋಮಾಲಿಯಾದ ಕಿಸ್ಮಯೊ ಮತ್ತ ಬರ್ಬೆರ, ಕೆನ್ಯಾದ ಮೊಂಬಸ ನಡುವೆ ಸಂಪರ್ಕ ಕಲ್ಪಿಸುತ್ತಾರೆ. ಅವರು ಈ ಸೈಟುಗಳನ್ನು ಪರಸ್ಪರ ಲಿಂಕ್ ಮಾಡುತ್ತಾರೆ. ಭೂಪಟದ ಮೇಲಿರುವ ರಾಷ್ಟ್ರೀಯ ಗಡಿಗಳನ್ನು ನಿರಾಕರಿಸಿ ತಮ್ಮದೇ ಒಂದು ಪ್ರಾದೇಶಿಕತೆಯನ್ನು ಸೃಷ್ಟಿಸುತ್ತಾರೆ.

ಆದರೂ ಅರಬ್ ಹಡಗಿನ ವಹಿವಾಟು ಈ ರಾಷ್ಟ್ರೀಯ ಗಡಿಗಳಿಂದ ಉಂಟಾಗುವ ಅಸಮತೋಲನವನ್ನು ಅವಲಂಬಿಸಿರುತ್ತದೆ. ಇವುಗಳು ಆರ್ಥಿಕತೆಯ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಒಂದು ಪ್ರದೇಶದಲ್ಲಿ ಹೇರಳವಾಗಿ ಕಂಡುಬರುವ ಸರಕುಗಳನ್ನು ಅವುಗಳು ಕಡಿಮೆ ಇರುವ ಪ್ರದೇಶಕ್ಕೆ ತಲುಪಿಸುತ್ತವೆ‌. ದೂರದ ಮಾರುಕಟ್ಟೆಗಳಲ್ಲಿ ಸರಕುಗಳ ನಡುವಿನ ಬೆಲೆ ವ್ಯತ್ಯಾಸದ ಕಾರಣ ವ್ಯಾಪಾರಕ್ಕೆ ಒಂದು ಮೌಲ್ಯ ಸಿಗುತ್ತದೆ. ಬೆಲೆ ವ್ಯತ್ಯಾಸಗಳಿರುವ ಸಂದರ್ಭಗಳಲ್ಲಿ ಒಂದು ಮಧ್ಯಸ್ಥಿಕೆಯನ್ನು ತರುತ್ತದೆ.‌ ಇದು ಲಾಭವನ್ನು ಗಳಿಸುವ ಒಂದು ಸಾಧನ ಮತ್ತು ಚಲನೆಯಾಗಿದೆ.

ಘೋಸ್‌ನಲ್ಲಿ ಚಿತ್ರಿಸಲಾದ ಭೂಪಟ ಮತ್ತು ನಾಟಿಕಲ್ ಚಾರ್ಟನ್ನು ಅವಲಂಬಿಸಿ ನಾವಿಕರು ಬದುಕುತ್ತಾರೆ. ಇತಿಹಾಸಕಾರ ಜೋಹಾನ್ ಮ್ಯಾಥ್ಯೂ ಹೇಳುವ ಪ್ರಕಾರ ನಕ್ಷೆಗಳಲ್ಲಿ ಭೂಮಿ ಮತ್ತು ಸಮುದ್ರಗಳನ್ನು ಗ್ರಿಡ್ (grid) ರೂಪದಲ್ಲಿ ಬಿಡಿಸಲಾಗಿಲ್ಲ. ಬದಲಾಗಿ ಹಡಗಿನ ಮೇಲಂತಸ್ತಿನಿಂದ (Deck) ಕಾಣುವ ರೂಪದಲ್ಲಿ ಬಿಡಿಸಲಾಗಿದೆ. ಅನಿರೀಕ್ಷಿತ ಬಂಡೆ ಕಲ್ಲು, ಆಳವಿಲ್ಲದ ಮರಳಿನ ದಂಡೆಗಳು ಮತ್ತು ಅಪಾಯಕಾರಿ ಸುಂಟರಗಾಳಿಗಳ ಬಗ್ಗೆ ನಿಖರ ಲಭಿಸುವ ಹಾಗೆ ಕರಾವಳಿ ತೀರವನ್ನು ವಿವರವಾಗಿ ಚಿತ್ರಿಸಲಾಗಿದೆ.

ಯುರೋಪಿಯನ್ ನಕ್ಷೆಗಳಂತೆ ದೂರಗಳನ್ನು ನಿಖರವಾಗಿ ಅಳೆಯಲಾಗುವುದಿಲ್ಲ ಮತ್ತು ಚಿತ್ರಿಸಲಾಗಿಲ್ಲ. ಆದರೂ ಘೋಸ್ ಅನ್ನು ಜಲೀಯ ಸ್ಥಳಾಕೃತಿಗೆ ತಕ್ಕಂತೆ ಕತ್ತರಿಸಲಾಗಿದೆ. ಎಷ್ಟೇ ನಿಪುಣ ಕ್ಯಾಪ್ಟನ್ ಆದರೂ ಜಿಪಿಎಸ್ ಅನ್ನು ನ್ಯಾವಿಗೇಶನ್ ಗೆ ಬಳಸುತ್ತಾರೆ. ಸ್ಥಳಗಳ ಹೆಸರುಗಳು ಪರದೆಯ ಮೇಲೆ ಚುಕ್ಕೆಗಳಾಗಿ ಕಾಣುತ್ತದೆ. ಮತ್ತು ಗಮ್ಯಸ್ಥಳಕ್ಕೆ ಮಾರ್ಗದರ್ಶನ ನೀಡುತ್ತದೆ.

ನಾವಿಕರು ಲಾಗ್‌ಬುಕ್‌ಗಳಲ್ಲಿ ಪ್ರಯಾಣದ ಬಗ್ಗೆ ಬರೆದಿಡುತ್ತಾರೆ. ಮಾನ್ವಿಯ ಅರಬ್ ಹಡಗಿನ ಕ್ಯಾಪ್ಟನ್ ಆಗಿರುವ ಅಬ್ದುಲ್ ಇತ್ತೀಚೆಗೆ ಒಂದು ಲಾಗ್ ಬುಕ್ ಒಂದನ್ನು ನನ್ನೊಂದಿಗೆ ಹಂಚಿದ್ದರು. ಆ ಪುಸ್ತಕದಲ್ಲಿ ಅಬ್ದುಲ್ ಪ್ರಯಾಣಿಸಿದ ಸ್ಥಳ ಮತ್ತು ಸಮಯವನ್ನು ಸ್ಪಷ್ಟವಾಗಿ ಗುಜರಾತಿ ಭಾಷೆಯಲ್ಲಿ ಬರೆದಿಟ್ಟಿದ್ದರು. ಉದಾಹರಣೆಗೆ 1998 ಮಾರ್ಚ್ 26ರಂದು ಅವರು ಇರಾನ್ ಗೆ ತೆರಳಿದ್ದನ್ನು ನಮೂದಿಸಿದ್ದಾರೆ. ಲಾಗ್‌ಬುಕ್‌ನಲ್ಲಿ ಅನೇಕ ಕಡೆ ಕೂಡ ಭಾಷೆಗಳಲ್ಲಿ ಬರೆಯಲಾಗಿದೆ. ನಾನು ಅವುಗಳನ್ನು ಓದುವಾಗ ಅಬ್ದುಲ್ ನನ್ನನ್ನು ನೋಡಿ ಮುಗುಳ್ನಕ್ಕು “ನಾನು ಪ್ರತಿ ಘೋಸ್ಅನ್ನು ರೆಕಾರ್ಡ್ ಮಾಡಿದ್ದರು ಅದರಲ್ಲಿರುವ ಸ್ಥಳಗಳ ಹೆಸರು ಅಷ್ಟು ನಿಖರವಾಗಿಲ್ಲ. ಇರಾನ್ ಬದಲಾಗಿ ಇರಾಕ್ ಎಂದು ನಮೂದಿಸಿದ್ದೂ ಇದೆ”.

ಗಲ್ಪ್ ಯುದ್ದದ ಸಂದರ್ಭದಲ್ಲಿ ವ್ಯಾಪಾರದ ವಿರುದ್ಧ ಅಂತರಾಷ್ಟ್ರೀಯ ನಿರ್ಬಂಧ ವಿತ್ತು. ಅಂದು ಸರಕುಗಳ ಕಳ್ಳ ಸಾಗಣೆ ಮೂಲಕ ಅಬ್ದುಲ್ ಅವರು ತಮ್ಮ ಮಾಲೀಕನಿಗೆ ಲಾಭಗಳಿಸಿ ಕೊಟ್ಟಿದ್ದರು. ನನ್ನಂತಹ ನಾವಿಕನಿಗೆ ಸ್ಥಳದ ಹೆಸರು ಮುಖ್ಯವಲ್ಲ. ಒಂದು ಋತುವಿನಲ್ಲಿ ನಾನು ಬಿಡಿಸಿದ ಘೋಸ್ ಗಳ ಲೆಕ್ಕ ಮಾತ್ರ ಮುಖ್ಯ ಎಂದು ಅಬ್ದುಲ್ ಹೇಳುತ್ತಾರೆ. ಕಳ್ಳ ಸಾಗಾಣಿಕೆಗಾರರು ತಮ್ಮ ನಡುವಿನ ಸಂಬಂಧವನ್ನು ಮರೆಮಾಚಲು ಸ್ಥಳಗಳ ಹೆಸರುಗಳನ್ನು ಬದಲಿಸುವುದುಂಟು.

ಘೋಸ್‌ಗಳ ಚಲನೆ ನೌಕಾಯಾನದ ಅವಧಿಯಾಗಿದೆ.
ಒಬ್ಬ ನಾವಿಕನು ತನ್ನ ಜೀವನೋಪಾಯವು ಅದರ ಮೇಲೆ ಅವಲಂಬಿತವಾಗಿರುವುದರಿಂದ ಒಂದು ಋತುವಿನಲ್ಲಿ ಗರಿಷ್ಠ ಸಂಖ್ಯೆಯ ಘೋಸ್ ಗಳನ್ನು ಮಾಡಲು ಬಯಸುತ್ತಾನೆ. ಮಾಲಿಕ ಆದಾಯ ಮತ್ತು ನಾವಿಕನ ವೇತನವನ್ನು ಕೂಡಾ ಘೋಸ್‌ಗಳ ಮೇಲೆ ಆಧಾರಿತವಾಗಿತ್ತದೆ. ವರ್ಷಕ್ಕೆ ಕನಿಷ್ಠ ಏಳು ಘೋಸ್ ಗಳನ್ನು ನಾವಿಕ ನಿರೀಕ್ಷಿಸುತ್ತಾನೆ.

ಒಂದು ಕಾಲದಲ್ಲಿ ಘೋಸ್ ಎಂಬುದು ಹವಾಮಾನಕ್ಕೆ ತಕ್ಕಂತೆ ಮಾನ್ಸೂನ್ ಗೆ ತಕ್ಕಂತೆ ನಡೆಯುತ್ತಿತ್ತು. ಲ್ಯಾಟಿನ್ ಹಾಯ್ ದೋಣಿಗಳು ಗಾಳಿಯ ದಿಕ್ಕಿಗೆ ಸಂಚರಿಸುತ್ತಿದ್ದವು. ಮಳೆಗಾಲದಲ್ಲಿ ನೈರುತ್ಯ, ಅಕ್ಟೋಬರ್ ನಲ್ಲಿ ಈಶಾನ್ಯಕ್ಕೆ ಚಲಿಸುತ್ತವೆ. ಕಚ್ಚಿ ಸಮುದ್ರಯಾನ ಮಾಡುವವರಿಗೆ ನೈರುತ್ಯ ಮಾನ್ಸೂನ್ ಪ್ರಾರಂಭವಾದಾಗ ‘ಆಖರ್’ ಹಾಗೂ ಗಾಳಿ ಬದಲಾದಾಗ ‘ಮೌಸಂ’ ಎಂದು ವಿಂಗಡಿಸಲಾಗಿದೆ. ಆಖರ್ ಮಳೆಯ ಅವಧಿಯಾಗಿದ್ದು, ಈ ಸಮಯದಲ್ಲಿ ಹೆಚ್ಚಿನ ನಾವಿಕರು ಮನೆಗೆ ಮರಳುತ್ತಾರೆ. 9 ತಿಂಗಳುಗಳು ನಾವಿಕರು ಸಮುದ್ರದಲ್ಲೇ ಕಳೆಯುತ್ತಾರೆ. ಈ ದಿನಗಳಲ್ಲಿ ಹಡಗುಗಳು ಡೀಸೆಲ್ ಇಂಜಿನ್ ನಲ್ಲಿ ಚಲಿಸುತ್ತವೆ. ಆದರೆ ನಾವಿಕರು ಕಾಲೋಚಿತವಾಗಿ ಬದುಕುವುದನ್ನು ಮುಂದುವರಿಸುತ್ತಾರೆ.

ಪ್ರತಿ ಘೋಸ್‌ಗಳನ್ನು ಅನಿರೀಕ್ಷಿತ ಹವಾಮಾನ ಮತ್ತು ಸಮುದ್ರದ ಪ್ರತಿಕೂಲತೆಗೆ ತಕ್ಕಂತೆ ಹಣೆಯಲಾಗುತ್ತದೆ. ಅಲೆಗಳು, ಗಾಳಿ ಮತ್ತು ಪ್ರವಾಹಗಳು ಎದುರಾಗುತ್ತದೆ. ವಿಶೇಷವಾಗಿ ಹಿಂದೂ ಮಹಾಸಾಗರ ಹವಾಮಾನ ವೈಪರೀತ್ಯ ವನ್ನು ಎದುರಿಸುತ್ತದೆ. ಗಾಳಿಗಳು , ಉಷ್ಣ ಬಿರುಗಾಳಿಗಳು ಚಂಡಮಾರುತಗಳು ಅಪಾರ ಹಾನಿಯನ್ನು ಉಂಟುಮಾಡುತ್ತವೆ. ಈ ಅಪಾಯವು ಘೋಸ್ ಅನ್ನು ಲಾಭದಾಯಕ ಘಟಕವನ್ನಾಗಿ ಮಾಡುತ್ತದೆ.

ಅದಾಗಿಯೂ ಘೋಸ್ ಕೇವಲ ಆರ್ಥಿಕ ಘಟಕವಲ್ಲ. ಧಾರ್ಮಿಕ ವಿಶ್ವಾಸ ಮತ್ತು ಸಮಯ ಪ್ರಜ್ಞೆಯೊಂದಿಗೆ ಸಂಬಂಧಿಸಿದೆ. ಕೇವಲ ಸವಲತ್ತು, ಸಿಬ್ಬಂದಿ, ಒಳ್ಳೆಯ ಹವಾಮಾನ, ಲಾಭದಾಯಕ ಕಾರ್ಗೋಗಳ ಮೂಲಕ ಯಶಸ್ವಿ ಘೋಸ್ ಎನಿಸಲು ಸಾಧ್ಯವಿಲ್ಲ. ಕಡಲಿನ ಸಂತರ ಅನುಗ್ರಹವು ಇರಬೇಕು‌. ಅನಿರೀಕ್ಷಿತ ಹವಾಮಾನ ವ್ಯತ್ಯಾಸದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂತರ ಮಧ್ಯಸ್ಥಿಕೆಯು ಆ ಪ್ರದೇಶದ ವಿಮೆಯಾಗಿ ಕಾರ್ಯಚರಿಸುತ್ತದೆ. ಅವು ಸಮುದ್ರದ ಅಪಾಯಗಳಿಂದ ಅವರನ್ನು ರಕ್ಷಿಸುವ ಸಾಧನವಾಗಿವೆ. ಚಂಡಮಾರುತದ ಸಂದರ್ಭ ಮನುಷ್ಯ ಕೇವಲ ನಿಮಿತ್ತ ಮಾತ್ರ. ಅಂತಹ ಸಂದರ್ಭಗಳಲ್ಲಿ ಪವಾಡಗಳ ಮೂಲಕ ಕಡಲಿನ ಸಂತರು ಆ ಪ್ರದೇಶಗಳ ರಕ್ಷಕರಾಗುತ್ತಾರೆ.

ಕಡಲಿನಲ್ಲಿ ಇಂದಿಗೂ ಆತ್ಮಗಳ ಸಂಚಾರವಿದೆ. ಕಚ್ಚಿ ನಾವಿಕರ ಪಾಲಿಗೆ ಓರ್ವ ಝಿಂದಾ ಪೀರ್ (ಜೀವಂತ ಸಂತ), ದರಿಯ ಪೀರ್ (ಕಡಲಿನ ಸಂತ) ಅಂತ ಇರುತ್ತಾರೆ. ಆ ಸಂತರುಗಳೇ ನಾವಿಕರ ಸರ್ವಸ್ವ. ಪ್ರತಿ ಸಮುದ್ರಯಾನದ ಮುನ್ನ ದರಿಯಾಪೀರ್ ಅವರನ್ನು ಆದರಿಸಲಾಗುತ್ತದೆ. ಹೊಸ ಋತು ಪ್ರಾರಂಭದಲ್ಲಿ ಹಡಗಿನಲ್ಲಿ ಇರಿಸುವ ಹಸಿರು ಧ್ವಜವು ಆ ಯಾನವನ್ನು ಮುನ್ನಡೆಸುತ್ತದೆ. ತೀರದಲ್ಲಿರುವ ನಾವಿಕರ ಸಂಬಂಧಿಕರಿಗೂ ಅದೊಂದು ಭರವಸೆ. ಪ್ರತಿ ಸಂಚಾರದ ಮುನ್ನ ನಾವಿಕರು ಮತ್ತು ಕುಟುಂಬಿಕರು ಯಾನವು ಕಡಲಿನ ಸಂತರ ಸ್ವಾಧೀನದಲ್ಲಿ ಸಿಗಲು ಅವರ ಖಬರ್ ಸಂದರ್ಶನ ಮಾಡುತ್ತಾರೆ. ಭಾರತದಲ್ಲಿ ಸೂಫಿ ಸಂತರು ಹಡಗುಗಳ ರಕ್ಷಕರಾಗಿ ಗುರುತಿಸಲ್ಪಡುತ್ತಾರೆ. ಹಸಿರು ಧ್ವಜವು ಸಂತರ ಆಶೀರ್ವಾದದ ಪ್ರತೀಕ. ಪ್ರತಿ ಘೋಸ್ ತಯಾರಿಸುವ ಮುನ್ನ ನಾವಿಕರು ಸೂಫಿಗಳ ಸಮಾಧಿಗೆ ಭೇಟಿ ನೀಡುತ್ತಾರೆ. ಅವರ ಕುಟುಂಬಿಕರು ಕೂಡ ಭೇಟಿ ನೀಡಿ ಹಡಗು ಅವರ ಸ್ವಾಧೀನದಲ್ಲಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.

ಕ್ಯಾಪ್ಟನ್ ಇರ್ಫಾನ್ ಅವರು ಸಂದರ್ಶಿಸಿದ ಶಾಹ್ ಮುರಾದ್ ಬುಖಾರಿ ಅವರು ಸಮುದ್ರದ ಎರಡನೇ ಸಂತ ಎಂದು ಕರೆಯಲ್ಪಡುತ್ತಾರೆ. ಕ್ರಿ.ಶ. 1060ರಲ್ಲಿ ಬುಖಾರದಿಂದ ಮುಂದ್ರಾಗೆ ಬಂದಿಳಿದ ಅವರು ಸಮುದ್ರಯಾನದುದ್ದಕ್ಕೂ ನಾವಿಕರ ಒಡನಾಡಿಯಾಗಿದ್ದಾರೆ. ಅವರ ವಫಾತ್ ಬಳಿಕ ಮಹಿಳೆಯರು ಪುರುಷರು ಮಕ್ಕಳನ್ನದೆ ಪ್ರತಿಯೊಬ್ಬರೂ ಅವರ ಸಮಾಧಿ ಬಳಿ ಬರಲು ಪ್ರಾರಂಭಿಸುತ್ತಾರೆ. ಅವರ ಸಮಾಧಿಯ ಬಳಿ ಸಣ್ಣ ರೂಮ್ ಇದೆ. ಆ ರೂಮಿನ ಒಂದು ಕಿಟಕಿ ಮೂಲಕ ಕಡಲಿಗೆ ಸಣ್ಣ ದಾರಿ ಇದೆ. ಸಮುದ್ರಯಾನದಲ್ಲಿರುವ ನಾವಿಕರ ಸುದ್ದಿಗಳನ್ನು ಸಂಬಂಧಿಕರಿಗೆ ಅಲ್ಲಿ ಶೇಖ್‌ರವರು ಸೂಚನೆ ಕೊಡುತ್ತಾರೆ.

ಈಗ ಆ ಕಿಟಕಿಯನ್ನು ಮುಚ್ಚಲಾಗಿದೆ. ಸಂತರು ಮೌನಿಯಾಗಿದ್ದಾರೆ. ವಾಟ್ಸಪ್ ಮೂಲಕ ಕುಟುಂಬಿಕರು ಮಾಹಿತಿ ಪಡೆದುಕೊಳ್ಳುತ್ತಾರೆ. ಈ ದಿನಗಳಲ್ಲಿ ಸೋಮಾಲಿಯ, ಒಮಾನ್,ಯಮನ್ ಮತ್ತು ಯುಎಇ ಹೋಗುವ ಹಡಗುಗಳನ್ನು ರಕ್ಷಿಸಲು ಹರಕೆಯಾಗಿ ವಾಹನಗಳ ಮಾದರಿಗಳನ್ನೇ ಸಂತರ ಸಮಾಧಿ ಮುಂದೆ ಇಡಲಾಗುತ್ತದೆ. ನೌಕಾಯಾನ ಮಾಡುವಾಗ ಅವರು ಸಂತರ ಆಶೀರ್ವಾದವನ್ನು ತಮ್ಮೊಂದಿಗೆ ಒಯ್ಯುತ್ತಾರೆ. ಪ್ರತಿ ಘೋಸ್‌ನಲ್ಲಿ ಈ ಸಂತರು ಚಲನಶೀಲತೆಯನ್ನು ಚುರುಕುಗೊಳಿಸುತ್ತಾರೆ. ಕಡಲಿಗೆ ಒಂದು ಇತಿಹಾಸ ಇದ್ದರೆ, ಅದು ಭೂತವನ್ನು ವರ್ತಮಾನ ಮಾಡುವ, ಪ್ರಕ್ಷುಬ್ಧ ಸಮುದ್ರದ ಮಧ್ಯೆ ಅದೃಶ್ಯ ಶಕ್ತಿಗಳ ಸಹಾಯ ಸಿಗುವ ಘೋಸ್‌ಗಳ ಇತಿಹಾಸ ಮಾತ್ರ ಎಂದು Derrek Walcott ಹೇಳುತ್ತಾರೆ.

ಮೂಲ: ನಿಧಿ ಮಹಾಜನ್
ಅನು: ಮುಹಮ್ಮದ್ ಶಮೀರ್ ಪೆರುವಾಜೆ

Leave a Reply

*