ಅಲ್‌ ಬಿರೂನಿ ಕಂಡ ಭಾರತ

ಭಾರತದ ಇತಿಹಾಸ, ಸಂಸ್ಕೃತಿ, ಸಂಪ್ರದಾಯ ವಿವಿಧ ಜ್ಞಾನ ಶಾಖೆಗಳಾಗಿ ವಿಕಸನಗೊಳ್ಳುವುದಕ್ಕಿಂತ 1,000 ವರ್ಷಗಳ ಮೊದಲು, ವೈಜ್ಞಾನಿಕ ಕ್ಷೇತ್ರದಲ್ಲಿ ನಿರತರಾಗಿದ್ದ ಅಲ್ ಬಿರೂನಿಯ ವಿದ್ವತ್ ಕೊಡುಗೆ ಮತ್ತು ಅವರ ಕಿತಾಬುಲ್ ಹಿಂದ್ (ಹಿಂದುಸ್ಥಾನದ ಪುಸ್ತಕ) ಎಂಬ ಗ್ರಂಥದ ಅನುಸಂಧಾನವನ್ನು ಈ ಬರಹ ನಡೆಸುತ್ತದೆ. 19ನೇ ಶತಮಾನದಲ್ಲಿ ಜೀವಿಸಿದ್ದ ಮ್ಯಾಕ್ಸ್ ಮುಲ್ಲರ್, ಅಲ್ಬರ್ಟ್ ವೆಬರ್ ಮೊದಲಾದ ಒರಿಯಂಟಲಿಸ್ಟ್‌ಗಳು ಇಂಡೋಲಜಿ ಸಂಬಂಧಿಸಿ ಅಧ್ಯಯನ ನಡೆಸುವುದಕ್ಕಿಂತ ಮೊದಲು ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ, 11ನೇ ಶತಮಾನದಲ್ಲಿ ಜೀವಿಸಿದ್ದ ಅಲ್ ಬಿರೂನಿಯ ಅಗಾಧ ಪಾಂಡಿತ್ಯವನ್ನು ಈ ಬರಹ ಶ್ರುತಪಡಿಸುತ್ತದೆ.

ಅಲ್ ಬಿರೂನಿ ಎಂದು ಪ್ರಸಿದ್ಧರಾದ ಅಬೂ ರೈಹಾನ್ ಇಬ್ನು ಅಹ್ಮದ್ ಅಲ್ ಬಿರೂನಿ ಜಗತ್ತಿಗೆ ಮಹತ್ತರ ವಿದ್ವತ್ ಕಾಣ್ಕೆಗಳನ್ನು ಕೊಟ್ಟ ವಿಶ್ವ ಶ್ರೇಷ್ಟ ವಿದ್ವಾಂಸರಲ್ಲಿ ಒಬ್ಬರು. ಭೌಗೋಳಿಕ ವಿಜ್ಞಾನ, ಭೌತವಿಜ್ಞಾನ, ಖಗೋಳ ಶಾಸ್ತ್ರ, ಪರಿಸರ ಅಧ್ಯಯನ, ಗಣಿತ, ರಸಾಯನಶಾಸ್ತ್ರ, ಕರ್ಮಶಾಸ್ತ್ರ ಮೊದಲಾದ ಶಿಸ್ತುಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅಲ್ ಬಿರೂನಿ ಜ್ಞಾನ ಸಂಪಾದನೆಗಾಗಿ ವಿಶ್ವದುದ್ದಕ್ಕೂ ಸಂಚರಿಸಿದ ಸಾಹಸಿ ಯಾತ್ರಿಕ. ಬದುಕಿನ ಬಹುಪಾಲು ಕಾಲವನ್ನು ಅಧ್ಯಯನ ಮತ್ತು ವಿದ್ವತ್ ಸೇವೆಯಲ್ಲಿ ಕಳೆದ ಮಹಾನ್ ಚೇತನ. ಅವರ ಅನೂಹ್ಯ ಪ್ರತಿಭೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿದ್ದಿರಲಿಲ್ಲ. ಮನುಷ್ಯನ ಬೌದ್ಧಿಕ ಪ್ರಜ್ಞೆಯನ್ನು ವಿವೇಕಪೂರ್ಣವಾಗಿ ಅಭ್ಯಸಿಸುವ ಅಪೂರ್ವ ಸಾಮರ್ಥ್ಯವನ್ನು ಅವರು ಹೊಂದಿದ್ದರು. ತತ್ವಜ್ಞಾನಿ, ವೈದ್ಯ, ಇತಿಹಾಸಜ್ಞ, ಸಾಹಿತಿ, ಹೀಗೆ ಬಹುಮುಖ ಪ್ರತಿಭೆಯಾಗಿದ್ದರು ಅಲ್ ಬಿರೂನಿ.

ಸಾವಿರ ವರ್ಷಗಳ ಹಿಂದೆ ಇಂದಿನ ಉಜ್ಬೇಕಿಸ್ತಾನದ ಕೀವಾ ನಗರದ ಸಮೀಪವಿರುವ ಖವಾರಜ್ಮ್‌ನಲ್ಲಿ ಜನಿಸಿ ಅಲ್ಲೇ ಬೆಳೆದರು. ಅಲ್ಲಿಂದ ವಿಶ್ವ ಸಂಚಾರವನ್ನು ಕೈಗೊಂಡರು. ಅವರ ವಿಶ್ವ ಯಾತ್ರೆಗಳು ಆರ್ಥಿಕ ಅಥವಾ ವಾಣಿಜ್ಯ ಉದ್ದೇಶದ್ದಾಗಿರಲಿಲ್ಲ. ವಿವಿಧ ಪ್ರದೇಶಗಳ ಜನ, ಸಂಸ್ಕೃತಿ, ಭಾಷೆ, ವೇಷ, ಅಲ್ಲಿನ ಜ್ಞಾನವನ್ನು ಕರಗತ ಮಾಡಿಕೊಳ್ಳುವುದಕ್ಕಾಗಿ ಅಲೆದಾಡಿದರು. ಕ್ರಿ.ಶ 973 ರಿಂದ 1050 ರ ವರೆಗೆ 77 ವರ್ಷಗಳ ಕಾಲ ಅಲ್ ಬಿರೂನಿ ಬದುಕಿದರು.

ಜ್ಞಾನದ ಹಲವು ಶಾಖೆಗಳ ಪಿತಾಮಹನೆಂದು ಎನಿಸಲ್ಪಟ್ಟ ಅಲ್ ಬಿರೂನಿ ಇಸ್ಲಾಮಿನ ಸುವರ್ಣ ಯುಗದಲ್ಲಿ ಬದುಕಿದ್ದ ವಿದ್ವಾಂಸ. ಇಂಡೋಲಜಿ, ತೌಲನಿಕ ಧಾರ್ಮಿಕಾಧ್ಯಯನ, ಜಿಯೊಡಸಿ, ಮಾನವ ಶಾಸ್ತ್ರ ಮೊದಲಾದ ಶಾಖೆಗಳ ಪಿತಾಮಹನೆಂದು ಅವರನ್ನು ಪರಿಗಣಿಸಲಾಗಿದೆ. ಕ್ರಿ.ಶ 11 ನೇ ಶತಮಾನದಲ್ಲಿ ಕೀವಾ ನಗರದಲ್ಲಿ ನಡೆದ ರಾಜಕೀಯ ಕ್ರಾಂತಿಯ ಸಂದರ್ಭದಲ್ಲಾಗಿತ್ತು ಅವರು ತಮ್ಮ ತಾಯಿ ನೆಲವನ್ನು ತೊರೆದು ವಿಶ್ವ ಸಂಚಾರ ಆರಂಭಿಸಿದ್ದು. ಸಂಶೋಧನೆ, ಅಧ್ಯಯನದ ಅದಮ್ಯ ಉದ್ದೇಶವನ್ನು ಅವರು ಹೊಂದಿದ್ದರು. ವಿವಿಧ ಸಂಸ್ಕೃತಿಗಳ ಜನರ ಸಂಪರ್ಕದಿಂದಾಗಿ ಅವರ ಜ್ಞಾನ ವಿಸ್ತರಿಸಿತು. ಹಲವು ಭಾಷೆಗಳನ್ನು ಕಲಿತುಕೊಂಡರು. ಕಾಶ್ಮೀರದಿಂದ ಕೇರಳದವರೆಗೆ, ದಕ್ಷಿಣ ಭಾರತದ ಹಲವೆಡೆಗಳಲ್ಲಿ ಸಂಚರಿಸಿ ಭಾರತೀಯ ಜ್ಞಾನ ಪರಂಪರೆ, ಸಂಸ್ಕೃತಿಗಳ ಬಗ್ಗೆ ಕರಾರುವಾಕ್ಕಾಗಿ ತನ್ನ ಅರಬಿ ಗ್ರಂಥದಲ್ಲಿ ಅವರು ಬರೆದರು. ‘ಅಲ್ ಬಿರೂನಿ ಕಂಡ ಇಂಡಿಯಾ’ ಅಥವಾ ʼಕಿತಾಬುಲ್ ಹಿಂದ್ʼ ಸಾವಿರ ವರ್ಷಗಳ ಹಿಂದಿನ ಗ್ರಂಥವಾದರೂ ವಿಶಿಷ್ಟ ರಚನಾತ್ಮಕ ವಿನ್ಯಾಸವನ್ನು ಹೊಂದಿದೆ‌. ವಿಧಾನಶಾಸ್ತ್ರದ ನೆಲೆಗಟ್ಟಿನಲ್ಲಿ ನೋಡಿದರೆ ಆಧುನಿಕ ಮಾದರಿಯ ಅಕಾಡಮಿಕ್ ಗ್ರಂಥಗಳ ಜೊತೆ ಹೋಲಿಸಬಹುದಾದ ಈ ಗ್ರಂಥ, ಆ ಕಾಲದ ವಿದ್ವಾಂಸರ ವಿಶ್ಲೇಷಣಾ ಕೌಶಲ ಮತ್ತು ಪಾಂಡಿತ್ಯಪೂರ್ಣ ಸಂಶೋಧನೆಯ ಹೊಳಹುಗಳನ್ನು ತೆರೆದಿಡುತ್ತದೆ.

ಭೌಗೋಳಿಕತೆ ಮತ್ತು ಸಂಸ್ಕೃತಿಯೊಂದಿಗಿನ ಇತಿಹಾಸದ ಸಂಬಂಧವನ್ನು ಅಲ್ ಬಿರೂನಿ ಖಚಿತವಾಗಿ ಗುರುತಿಸಿದ್ದರು. ಅವರ ವಿಶ್ವ ಸಂಚಾರದಲ್ಲಿ ಆ ಕಾಲದ ಪ್ರಮುಖ ಜ್ಞಾನ ಸಂಗ್ರಹಗಳನ್ನು ಹೊಂದಿದ್ದ ಗ್ರೀಕ್ ಜ್ಞಾನ ಪರಂಪರೆ ಮತ್ತು ಸಂಸ್ಕೃತಿಯನ್ನು ಅಭ್ಯಸಿಸಲು ಗ್ರೀಕ್ ಭಾಷೆಯನ್ನು ಕಲಿತು, ವಿವಿಧ ಜ್ಞಾನ ಶಾಖೆಗಳ ಆಳ- ಅಗಲವನ್ನು ಕಂಡುಕೊಂಡರು. ಗಣಿತ, ರಾಜ್ಯಶಾಸ್ತ್ರ, ಕಾಲ ಗಣನೆ, ರಸಾಯನಶಾಸ್ತ್ರ, ಪರಿಸರ ಶಾಸ್ತ್ರ, ಇತಿಹಾಸ ಮೊದಲಾದ ಶಿಸ್ತುಗಳಲ್ಲಿ ಅಸಾಮಾನ್ಯ ಬೌದ್ಧಿಕ ಉತ್ಕೃಷ್ಟತೆಯನ್ನು ಸಾಧಿಸಿದರು. ಗ್ರೀಕ್‌ನಿಂದ ಅನೇಕ ಗ್ರಂಥಗಳನ್ನು ಅರಬಿಗೆ ಅನುವಾದಿಸಿದರು. ವೈಜ್ಞಾನಿಕ ಪುನರುತ್ಥಾನಕ್ಕೆ ನೇತೃತ್ವ ವಹಿಸಿದ್ದ ಅಬ್ಬಾಸಿದ್ ಖಿಲಾಫತ್‌ನ ಸುವರ್ಣ ಯುಗದಲ್ಲಿ, ಇಸ್ಲಾಮಿಕ್ ಆಡಳಿತ ಅಧ್ಯಯನ, ಸಂಶೋಧನೆಗಳಿಗೆ ವಿಪುಲ ಅವಕಾಶಗಳನ್ನು ಒದಗಿಸುತ್ತಿದ್ದ ಕಾಲದಲ್ಲಿ ಅಲ್ ಬಿರೂನಿಗೆ ಅನುಕೂಲಕರ ವಾತಾವರಣವಿತ್ತು. ಪೂರ್ವಿಕ ಮತ್ತು ಸಮಕಾಲೀನ ವಿದ್ವಾಂಸರ ಅಧ್ಯಯನ, ಸಂಶೋಧನೆಗಳು ಅಲ್ ಬಿರೂನಿಯನ್ನು ಆಮೂಲಾಗ್ರವಾಗಿ ಪ್ರಭಾವಿಸಿತ್ತು.

ಭಾರತೀಯ ಸಂಸ್ಕೃತಿ, ಇತಿಹಾಸ, ವಿದ್ವತ್ ಪರಂಪರೆ, ಮಾನವಶಾಸ್ತ್ರ ಅಧ್ಯಯನದ ಉದ್ದೇಶದಿಂದ ಅವರು ಭಾರತ ಪ್ರವಾಸ ಕೈಗೊಂಡಿದ್ದರು. ಭಾರತದ ಹಲವೆಡೆ ಸಂಚರಿಸಿ ಘಜ್ನಾದಲ್ಲಿ ತಂಗಿದ್ದ ಸಂದರ್ಭದಲ್ಲಿ ಅಲ್ಲಿನ ಸಂಸ್ಕೃತ ವಿದ್ವಾಂಸರಿಂದ ಸಂಸ್ಕೃತ ಭಾಷೆ ಕಲಿತು ಭಾರತದ ವಿದ್ವತ್ ಲೋಕವನ್ನು ಪ್ರವೇಶಿಸಿದ್ದರಿಂದ ವೇದ, ಪುರಾಣ ತತ್ವಚಿಂತನೆಗಳಲ್ಲಿ ಅಗಾಧ ತಿಳುವಳಿಕೆ ಪಡೆಯಲು ಸಾಧ್ಯವಾಯಿತು. ಘಜ್ನಾದಲ್ಲಿ ವಾಸವಾಗಿದ್ದಾಗ ಇಡೀ‌ ಭಾರತವನ್ನು ಸುತ್ತುವ ಸಾಹಸಿಕ ಯೋಚನೆಯೊಂದು ಅವರಿಗೆ ಹೊಳೆಯಿತು.

ಇದಕ್ಕಾಗಿ ಅವರು ಅನೇಕ ದುರಿತಗಳನ್ನು ಎದುರಿಸಬೇಕಾಗಿ ಬಂದರೂ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವ ಶಾಸ್ತ್ರ, ವಿದ್ವತ್ ಸಂಪತ್ತನ್ನು ಸಂಪಾದಿಸುವ ತನ್ನ ಯೋಜನೆಗಳೊಂದಿಗೆ ಮುಂದುವರಿದರು. 1017 ಮತ್ತು 1037 ರ ನಡುವಿನ ಕಾಲಾವಧಿಯಲ್ಲಿ ಅಲ್ ಬಿರೂನಿಯ ಭಾರತ ಸಂಚಾರ ನಡೆದಿದೆ ಎಂದು ಅನೇಕ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯವನ್ನು ಒಪ್ಪುವುದಾದರೆ, ಇದು ಇಪ್ಪತ್ತು ವರ್ಷಗಳ ತ್ಯಾಗಪೂರ್ಣವಾದ ವಿದ್ವತ್ ತಪಸ್ಸು ಎನ್ನುವುದನ್ನು ನಾವು ಕಂಡುಕೊಳ್ಳಬಹುದು. ಭಾರತದ ಇತಿಹಾಸ, ಸಂಸ್ಕೃತಿ, ವಿದ್ವತ್ ಪರಂಪರೆಯನ್ನು ಅಭ್ಯಸಿಸಲು 13 ವರ್ಷಗಳ ಅನ್ವೇಷಣಾ ಯಾತ್ರೆಯನ್ನು ವಿನಿಯೋಗಿಸಿದರು ಎಂದು ಕಿತಾಬುಲ್ ಹಿಂದ್ ಅನುವಾದಕರು ಪ್ರಸ್ತಾಪಿಸುತ್ತಾರೆ. ಅಬ್ಬಾಸಿದ್ ಆಡಳಿತದ ಪ್ರೋತ್ಸಾಹದೊಂದಿಗೆ ಆರಂಭಿಸಿದ ಜಗತ್ತಿನ ವಿವಿಧೆಡೆಯ ಸಾಂಸ್ಕೃತಿಕ ಅಧ್ಯಯನ, ವಿದ್ವತ್ ಪೂರ್ಣ ಸಂಶೋಧನೆಗಳಿಗೆ ಅಲ್ ಬಿರೂನಿ ವಹಿಸಿದ್ದ ವಿದ್ವತ್ ದೌತ್ಯ ಮಹತ್ವದ್ದಾಗಿತ್ತು. ಪೌರಸ್ತ್ಯ ಅಧ್ಯಯನ ಶಾಖೆ ಒರಿಯಂಟಲಿಸಂ ಎಂಬ ಜ್ಞಾನ ಕ್ಷೇತ್ರ ವಸಾಹತುಶಾಹಿಯ ಅಂಗವಾಗಿ ಹುಟ್ಟುವ ಶತಮಾನಗಳ ಮೊದಲೇ ಅಲ್ ಬಿರೂನಿ ತತ್ವಶಾಸ್ತ್ರ, ಸಂಸ್ಕೃತಿ, ವಿದ್ವತ್ ಪರಂಪರೆಯನ್ನು ಹುಡುಕುತ್ತಾ ಭಾರತದುದ್ದಕ್ಕೂ ಅಲೆದಾಡಿದರು. ಅಲ್ ಬಿರೂನಿಯಂಥವರ ವಿದ್ವತ್ ಸೇವೆ ಒಂದು ವರ್ಗಾವಣಾ ಪಕ್ರಿಯೆಯಾಗಬಲ್ಲದು ಎನ್ನುವುದು ಮುಖ್ಯವಾಗುತ್ತದೆ. ಆ ಕಾಲವು, ಇಸ್ಲಾಮಿಕ್ ನಾಗರಿಕತೆ ಮತ್ತು ಸಂಸ್ಕೃತಿ, ವಿಶ್ವ ಸಂಸ್ಕೃತಿಗಳೊಂದಿಗೆ ಸಂಗ್ರಹವಾಗಿದ್ದ ವಿದ್ವತ್ ಸಂಪತ್ತನ್ನು ಸಂಯೋಜಿಸಿ, ಪರಿಷ್ಕರಿಸಿ ಮನಷ್ಯ ಕುಲಕ್ಕೆ ವರ್ಗಾಯಿಸುತ್ತಿದ್ದ ವಿಶಿಷ್ಟ ಸಂದರ್ಭವಾಗಿತ್ತು. ನಿಶ್ಚಯವಾಗಿಯೂ ಪೌರಸ್ತ್ಯ ಅಧ್ಯಯನ ಶಾಖೆಗಳನ್ನು ರೂಪಿಸುವುದರಲ್ಲಿ ಮತ್ತು ಪ್ರೇರೇಪಿಸುವುದರಲ್ಲಿ ಇಂತಹ ವಿದ್ವತ್‌ಪೂರ್ಣ ಕಾರ್ಯಗಳು ಸಮೃದ್ಧವಾದ ಪಾತ್ರ ವಹಿಸಿವೆ ಎನ್ನುವುದು ಸ್ಪಷ್ಟವಾಗುತ್ತದೆ. ಉತ್ತರ ಭಾರತದ ಪ್ರಮುಖ ಸ್ಥಳಗಳನ್ನು ಸಂದರ್ಶಿಸಿ, ಕಾಶ್ಮೀರಕ್ಕೆ ಭೇಟಿ ಮಾಡಿದಾಗ ಅಲ್ಲಿ‌ನ ಟಿಬೆಟಿಯನ್ನರ ಸಂಪ್ರದಾಯ, ಸಂಸ್ಕೃತಿ ಕಂಡು ಆಕರ್ಷಿತರಾಗಿ ಸೂಕ್ಷ್ಮವಾಗಿ ಅಭ್ಯಸಿಸಿದ ನಂತರ ಟಿಬೆಟಿಯನ್ ಸಂಸ್ಕೃತಿಯ ಕುರಿತಾಗಿ ಗ್ರಂಥವನ್ನು ಬರೆದರು. ಕಾಶ್ಮೀರದ ಕುರಿತಾಗಿಯೂ ಇಂತಹದ್ದೇ ಗ್ರಂಥವೊಂದನ್ನು ಬರೆದಿದ್ದಾರೆ. ಭಾರತೀಯ ಪುರಾಣ ಮತ್ತು ವೈದ್ಯಶಾಸ್ತ್ರದ ಗ್ರಂಥಗಳನ್ನು ಅರಬಿಗೆ ಅನುವಾದಿಸಿದ್ದಾರೆ.

ಅಲ್ ಬಿರೂನಿ ಕ್ರಿ.ಶ 1025 ರಲ್ಲಿ ತಮಿಳುನಾಡಿನ ನಾಗಪಟ್ಟಣದಿಂದ ಕೇರಳಕ್ಕೆ ಬಂದದ್ದಾಗಿ ಇತಿಹಾಸದಲ್ಲಿ ದಾಖಲಾಗಿದೆ. ಒಂದು ವರ್ಷ ಏಳು ತಿಂಗಳು ಕೇರಳದಲ್ಲಿ ಇದ್ದು ಅಲ್ಲಿಂದ ಸಿಂಧ್‌ಗೆ ತೆರಳಿದ್ದಾಗಿ ಸ್ವತಃ ಅಲ್ ಬಿರೂನಿಯೇ ಉಲ್ಲೇಖಿಸಿದ್ದಾರೆ. ಚೀನಾಗೆ ಹೊರಡುವ ದಾರಿಯ ಮಧ್ಯೆ ಕ್ಯಾಲಿಕಟ್‌ನಲ್ಲಿ ಇಳಿದು ಕೆಲ ದಿನಗಳ ಕಾಲ ತಂಗಿದ್ದರೆಂದು ದಾಖಲೆಗಳು ಸ್ಪಷ್ಟಪಡಿಸುತ್ತವೆ. ಅವರ ಮೊದಲ ಭೇಟಿ, ಕ್ರಿ.ಶ 1025 ರಿಂದ 1027 ವರೆಗಿನ ಅವಧಿಯಲ್ಲಿ ಎಂದು ಬಹುತೇಕ ಖಚಿತವಾಗಿದೆ. ಈ ಅವಧಿಯಲ್ಲಿ ಕೇರಳದಲ್ಲಿ ಕಂಡ ದೃಶ್ಯಗಳನ್ನು ಅವರು ತನ್ನ ಗ್ರಂಥದಲ್ಲಿ ದಾಖಲಿಸಿದ್ದಾರೆ. ಕೇರಳಕ್ಕೆ ಬಂದಿದ್ದ ಅರಬಿಗಳ ಕುರಿತು ಮತ್ತು ಇಸ್ಲಾಮ್ ಧರ್ಮ ಪ್ರಚಾರದ ಕುರಿತೂ ತಪ್ಪು ಧೋರಣೆಗಳನ್ನು ಸೃಷ್ಟಿಸಿ, ಚೆರುಮಾನ್ ಪೆರುಮಾಲ್‌ರ ಮಕ್ಕಾ ಯಾತ್ರೆ ಮತ್ತು ಮುಸ್ಲಿಮರ ವಾಸವನ್ನು 12 ನೇ ಶತಮಾನಕ್ಕೆ ಮುಂದೂಡುತ್ತಿರುವ ಇಂದಿನ ಪ್ರಮುಖ ಇತಿಹಾಸಕಾರರನ್ನು ಕಣ್ಣು ತೆರೆಸಲು ಅಲ್ ಬಿರೂನಿಯ ಸಾಕ್ಷ್ಯಗಳಿಗೆ ಸಾಧ್ಯವಾಗುತ್ತವೆ. ಪ್ರಸ್ತುತ ವಿವರಗಳಲ್ಲಿನ ಕೇರಳ ಇತಿಹಾಸಕ್ಕೆ ಸಂಬಂಧಿಸಿದ ನಿರ್ಣಾಯಕ ಅಂಶಗಳನ್ನು ಅನುವಾದಕರು ಪ್ರಸ್ತಾವನೆಯಲ್ಲಿ ಹೀಗೆ ಚರ್ಚಿಸುತ್ತಾರೆ:

ಮಲಬಾರ್‌ನ ವ್ಯಾಪಾರದ ಖ್ಯಾತಿ ವಿದೇಶದಲ್ಲಿ ಅಲೆಯೆಬ್ಬಿಸಿದ 11 ನೇ ಶತಮಾನದಲ್ಲಾಗಿತ್ತು ಅಲ್ ಬಿರೂನಿಯ ಕೇರಳ ಭೇಟಿ. ಅವರು ಕೇರಳದ ಐದು ಪ್ರಮುಖ ಪಟ್ಟಣಗಳಲ್ಲಿ ತಂಗಿದ್ದರು ಮತ್ತು ಏಳು ರಾಜರೊಂದಿಗೆ ಸಂಭಾಷಣೆ ನಡೆಸಿದ್ದರು. ಕೊಲ್ಲಂ ಮತ್ತು ಕೋಝಿಕೋಡ್‌ನ ರಾಜರುಗಳು ಅವರಿಗೆ ಅತ್ಯಮೂಲ್ಯ ಉಡುಗೊರೆಗಳನ್ನು ನೀಡಿದ್ದರು. ಕೇರಳದ ಕೃಷಿ ಪದ್ಧತಿ, ವ್ಯವಸಾಯ ಸಂಪ್ರದಾಯದ ಕುರಿತು ಸೂಕ್ಷ್ಮವಾಗಿ ಅಧ್ಯಯನ ಮಾಡಿ ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ.

ಕೊಲ್ಲಂ ಮತ್ತು ಚಾಲಿಯಮ್‌ನಲ್ಲಿ ಅರೆಬಿಕ್ ವೈದ್ಯಕೀಯ ತಜ್ಞರು ಚಿಕಿತ್ಸಾ ಕೇಂದ್ರಗಳನ್ನು ತೆರೆದು ಕೇರಳೀಯರಿಗೆ ಅರೆಬಿಕ್ ವೈದ್ಯಶಾಸ್ತ್ರ ಕಲಿಸಿದ್ದರು ಮತ್ತು ಕೇರಳದಲ್ಲಿ ಜನಜನಿತವಾಗಿದ್ದ ವೈದ್ಯಕೀಯ ಪದ್ಧತಿಯನ್ನು ಅವರು ಕಲಿತರೆಂದು ಅಲ್ ಬಿರೂನಿ ಹೇಳುತ್ತಾರೆ. ಕೇರಳದ ಪ್ರಮುಖ ಉದ್ಯಮಿಗಳಿಗೆ ಮೂರು‌, ನಾಲ್ಕು ಭಾಷೆಗಳು ತಿಳಿದಿದ್ದವು. ಅವರು ವಿದೇಶಿ ಭಾಷಾ ಪ್ರಯೋಗಗಳನ್ನು ತಮ್ಮ ಭಾಷೆಗಳಲ್ಲಿ ಬಳಸುತ್ತಿದ್ದರು ಎಂದು ಅಲ್ ಬಿರೂನಿ ದಾಖಸಿದ್ದಾರೆ. ವಿವಿಧ ಧರ್ಮಗಳ, ಸಂಸ್ಕೃತಿಯ ಜನರು ಸಹಬಾಳ್ವೆಯಿಂದ ಬದುಕುವುದನ್ನು ಕೇರಳದಲ್ಲಿ ಕಂಡಿದ್ದೇನೆ ಎಂದು ವಿವರಿಸಿದ್ದಾರೆ. ಮಲಬಾರ್‌ನ ಕೆಲವು‌ ಭಾಗಗಳಲ್ಲಿ ಅರಬ್ ಕಾಲನಿಗಳಿದ್ದವು. ಸ್ಥಳೀಯ ಆಡಳಿತಗಾರರು ಅರಬಿ ವ್ಯಾಪಾರಿಗಳಿಗೆ ಸಹಾಯ ಮಾಡುತ್ತಿದ್ದರು ಎಂದು ವಿವರಿಸಿದ್ದಾರೆ.

ಕೇರಳದ ಐತಿಹಾಸಿಕ ಅಧ್ಯಯನಕ್ಕೆ ನೆರವಾಗುವ ಮಾಹಿತಿಗಳನ್ನು ಅಲ್ ಬಿರೂನಿಯ ಅಧ್ಯಯನ ನೀಡುತ್ತದೆ. ಅರಬಿಗಳಿಗೆ ಇತರ ಏಶ್ಯನ್ ಸಮೂಹದೊಂದಿಗೆ ಇದ್ದ ಸಾಗರೋತ್ತರ ವ್ಯಾಪಾರ ಸಂಬಂಧಗಳ ಬಗ್ಗೆ ಹೊಸ ಮಾದರಿಯ ಅಧ್ಯಯನಗಳಿಗೆ ಅನೂಹ್ಯ ಒಳನೋಟಗಳನ್ನು ಅಲ್ ಬಿರೂನಿಯ ಗ್ರಂಥಗಳು ನೀಡುತ್ತವೆ. ವಿವಿಧ ವಿಷಯಗಳ 180 ಗ್ರಂಥಗಳನ್ನು ಅಲ್ ಬಿರೂನಿ ರಚಿಸಿದ್ದಾರೆ. ಇವುಗಳಲ್ಲಿ ಅನೇಕ ಗ್ರಂಥಗಳು ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಅನುವಾದ ಕಂಡಿದೆ.

ಅಲ್ ಬಿರೂನಿಯ ಸಂಶೋಧನಾ ವಿಧಾನ ವಸ್ತುನಿಷ್ಠವಾಗಿತ್ತೆಂದು ಈ ಗ್ರಂಥವನ್ನು ಓದುವವರಿಗೆ ವೇದ್ಯವಾಗುತ್ತದೆ. ಇಂದಿನ ಅಧಿಕೃತ ಸಂಶೋಧನೆಗಳಲ್ಲಿ ಕಾಣಸಿಗುವ ಬದ್ಧತೆ, ಪ್ರಾಮಾಣಿಕತೆ, ನಿರಪೇಕ್ಷತೆ ಸಾವಿರ ವರ್ಷಗಳಿಗಿಂತ ಮೊದಲು ರಚಿಸಲ್ಪಟ್ಟ ಗ್ರಂಥದುದ್ದಕ್ಕೂ ನಮ್ಮ ಅನುಭವಕ್ಕೆ ದಕ್ಕುತ್ತದೆ. ಭಾರತೀಯ ಸಂಸ್ಕೃತಿ ಮತ್ತು ಜ್ಞಾನದ ಅಧ್ಯಯನ ಕೈಗೊಂಡು ಅದನ್ನು ವಸ್ತುನಿಷ್ಠವಾಗಿ ದಾಖಲಿಸಲು ಮತ್ತು ತನ್ನ ಧಾರ್ಮಿಕ ವಿಶ್ವಾಸ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡೇ ಅದರ ಪ್ರತಿನಿಧಿಯಾಗಲು ಅಲ್ ಬಿರೂನಿಗೆ ಸಾಧ್ಯವಾಯಿತು. ಆದ್ದರಿಂದಲೇ ಅಲ್ ಬಿರೂನಿಯ ಜೀವನ ಚರಿತ್ರೆಕಾರ ಜಾರ್ಜ್ ಸಾಲ್ಟರ್ ʼಭಾರತೀಯ ಸಂಸ್ಕೃತಿಯ ಶ್ರೇಷ್ಠ ಸಂದೇಶವಾಹಕರಾಗಿ ಅಲ್ ಬಿರೂನಿ ಸ್ವದೇಶಕ್ಕೆ ಹಿಂದಿರುಗಿದ್ದರುʼ ಎಂದು ಉಲ್ಲೇಖಿಸಿರುವುದು.

ಅಲ್ ಬಿರೂನಿ ಕಂಡ ಭಾರತ ಎಂಬ ಕೃತಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ 30 ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಭಾರತೀಯ ಜ್ಞಾನ ಪರಂಪರೆಯ ಅಧ್ಯಯನಕ್ಕೆ ಒಬ್ಬ ಸಂಶೋಧಕ ಎದುರಿಸಬೇಕಾದ ಸವಾಲುಗಳ ಅವಲೋಕನ ನಡೆಸಲಾಗಿದೆ. ನಂತರ ದೇವ ವಿಶ್ವಾಸ ಇಂದ್ರೀಯ ಗೋಚರ ಮತ್ತು ಅಗೋಚರವಾದದ್ದರ ಮೇಲೆ ಭಾರತೀಯರ ನಂಬಿಕೆ, ಆತ್ಮ ಮತ್ತು ಜಡ ದೇಹದ ನಡುವಿನ ಸಂಬಂಧ, ಅವತಾರ ಸಿದ್ಧಾಂತ, ಲೌಕಿಕ ಬಂಧನದಿಂದ ಮೋಕ್ಷ, ವರ್ಗ ಮತ್ತು ಜಾತಿಗಳು, ವೇದ, ಪುರಾಣಗಳು ಮೊದಲಾಗಿ ವೃತ್ತ, ವ್ಯಾಕರಣಗಳಿಗೆ ಸಂಬಂಧಿಸಿದ ವಿಶ್ಲೇಷಣೆಗಳು, ಇತರ ಶಾಸ್ತ್ರಗಳ ಗ್ರಂಥ ಪರಿಚಯ, ಹಲವು ಜ್ಞಾನ ಶಾಖೆಗಳ ಕುರಿತಾಗಿ ಚರ್ಚಿಸುತ್ತದೆ.

ಎರಡನೇ ಭಾಗದಲ್ಲಿ 50 ಅಧ್ಯಾಯಗಳಿವೆ. ದೇಶಗಳ ನಡುವಿನ ಅಂತರ, ಜಗತ್ತಿನ ಮುಂದುವರಿಯುವಿಕೆ, ಕಾಲ, ಅದರ ಉದ್ಭವ ಹಾಗೂ ಅಂತ್ಯ ಮತ್ತು ಆ ಬಗೆಗಿನ ಇತರ ಭಾರತೀಯ ಸಿದ್ಧಾಂತಗಳು,ಭಾರತೀಯ ಐತಿಹಾಸಿಕ ಕಾಲಘಟ್ಟ, ಖಗೋಳಶಾಸ್ತ್ರ ಸಂಬಂಧಿಸಿದ ಕೆಲವು ವಿವರಗಳು, ಬ್ರಾಹ್ಮಣರ ವಿಶೇಷತೆಗಳು, ಅವರ ಕರ್ತವ್ಯಗಳು, ಬ್ರಾಹ್ಮಣೇತರ ಜಾತಿಗಳು, ಅವರ ಆಚರಣೆಗಳು, ತ್ಯಾಗ-ಬಲಿದಾನ, ತೀರ್ಥಯಾತ್ರೆಗಳು, ಧರ್ಮ, ಆಸ್ತಿ ಪಾಲುಗಾರಿಕಾ ವಿಧಾನ, ಸಮ್ಮತ ಮತ್ತು ನಿಷೇಧಿತ ಆಹಾರ ಪದ್ಧತಿ, ವ್ಯವಹಾರಿಕ ಪದ್ಧತಿ, ವಾರಸುದಾರಿಕೆ, ವ್ರತ ಮತ್ತು ಅದರ ವಿಧಗಳು, ಯೋಗ ವಿವರಣೆ, ಖಗೋಳಶಾಸ್ತ್ರ ಲೆಕ್ಕಾಚಾರ ವಿಧಾನಗಳು, ಅದರ ಕೆಲವು ಮೂಲಭೂತ ತತ್ವಗಳು, ಮೊದಲಾದ ಶೀರ್ಷಿಕೆಗಳಲ್ಲಿ ಭಾರತೀಯ ಸಂಸ್ಕೃತಿ, ವಿಶ್ವಾಸ-ಆಚಾರಗಳು, ಚಿಂತನಾಕ್ರಮ ಅಲ್ ಬಿರೂನಿ‌ ಈ ಕೃತಿಯಲ್ಲಿ ವಿಷದಪಡಿಸುತ್ತಾರೆ. ಕ್ರಮಬದ್ಧವಾಗಿರದೇ ಇದ್ದ ವಿದ್ವತ್ ಸ್ವರೂಪ, ಆಚರಣಾ ಕ್ರಮ, ವಿಶ್ವಾಸ, ಸಾಂಸ್ಕೃತಿಕ ಮೌಲ್ಯಗಳನ್ನು ವಿವಿಧ ಶೀರ್ಷಿಕೆಗಳಲ್ಲಿ ವಿಶ್ಲೇಷಿಸಲು ಪ್ರಯತ್ನಿಸುವ ಈ ಕೃತಿಯು ಆ ಕಾಲಕ್ಕೆ ಭಾರತೀಯ ಸಂಸ್ಕೃತಿಯ ಬಗ್ಗೆ ನಿಖರವಾದ ಕೆಲವು ಸಾಮಾನ್ಯ ತಿಳುವಳಿಕೆಗಳನ್ನು ಮನದಟ್ಟು ಮಾಡಿಸಲು ಶಕ್ಯವಾಗುತ್ತದೆ.

ಮಲಯಾಳಂ ಮೂಲ: ಝೈನುದ್ದೀನ್ ಮಂಡಲಂಕುನ್ನು
ಅನುವಾದ: ಝೈನ್ ಮುಈನಿ‌ ಇನೋಳಿ

1 Comment

Leave a Reply

*